ಸಮ್ಮಿಶ್ರ ಸರ್ಕಾರದ ಭವಿಷ್ಯ ಸಿದ್ದು‌ ಹೇಳಿಕೆಯನ್ನು ಹೈಕಮಾಂಡ್ ಗಮನಿಸುತ್ತಿದೆ:ಖರ್ಗೆ

ದೆಹಲಿ: ರಾಜ್ಯದ ಸಮ್ಮಿಶ್ರ ಸರ್ಕಾರದ ಭವಿಷ್ಯದ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರ ಸಂಬಂಧ ಕಾಂಗ್ರೆಸ್ ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಖರ್ಗೆ,ನಾಳೆ ಅಥವಾ ನಾಡಿದ್ದು ಸಿದ್ದರಾಮಯ್ಯರನ್ನು ಭೇಟಿಯಾಗಲಿದ್ದೇನ. ಅವರ ಜತೆ ಮಾತಕತೆ ನಡೆಸುತ್ತೇನೆ ವಿಡಿಯೋ ಬಗ್ಗೆ ವಿಶೇಷ ಮಾಹಿತಿ ಇಲ್ಲ ನಾನೂ ಟಿವಿಯಲ್ಲಿ ನೋಡಿದ್ದೇನೆ ಅಷ್ಟೇ ಯಾವ ಸಂದರ್ಭದಲ್ಲಿ ಹೇಳಿದ್ದಾರೆ ಅನ್ನೋದು ಗೊತ್ತಿಲ್ಲ ವಿಡಿಯೋವನ್ನು ತಿರುಚಿರುವ ಸಾಧ್ಯತೆ ಇದೆ ನಿಜವಾಗಿಯೂ ಸಿದ್ದರಾಮಯ್ಯ ಹೇಳಿದ್ದಾರೋ ಎಂದು ಅವರನ್ನೇ ಕೇಳಬೇಕಿದೆ ಕಾಂಗ್ರೆಸ್ ಹೈಕಮಾಂಡ್ ಕೂಡ ಇದನ್ನು ಗಮನಿಸುತ್ತಿದೆ ಎಂದರು.

ಸಿದ್ದು ಹೇಳಿಕೆ ಸಂಬಂಧ ವಿಭಿನ್ನ ಹೇಳಿಕೆಗಳು ಮಾಧ್ಯಮಗಳಲ್ಲಿ ವರದಿಯಾಗಿವೆ,ಇವು ವಾಸ್ತವ ಹೇಳಿಕೆಯೋ ಅಥಾವ ಮಾಧ್ಯಮಗಳಲ್ಲಿ ತಿರುಚಲಾಗಿದೆಯೋ ಎನ್ನುವುದನ್ನು ಪರಿಶೀಲಿಸಲಾಗುವುದು, ಭಿನ್ನ ಹೇಳಿಕೆ ನೀಡ್ತಿರುವ ನಾಯಕರ ಅಭಿಪ್ರಾಯ ಕೇಳಲಿದ್ದೇವೆ ಎಂದರು.

ಮೈತ್ರಿ ಸರ್ಕಾರಕ್ಕೆ ಎಲ್ಲರೂ ಶಕ್ತಿ ತುಂಬುವ ಕೆಲಸ ಮಾಡಬೇಕು
ಮೈತ್ರಿ ಸರ್ಕಾರ ಒಗ್ಗಟ್ಟಾಗಿ ಇದೆ.ಎಷ್ಟು ತೊಂದರೆಗಳು ಬಂದರು ಮೈತ್ರಿ ಸರ್ಕಾರ ಮುನ್ನೆಡಸಬೇಕಿದೆ ಕೊಮುವಾದಿ ಬಿಜೆಪಿಯನ್ನು ದೂರ ಇಡುವುದು ನಮ್ಮ ಗುರಿ ಅದಕ್ಕಾಗಿಯೇ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ ಎಂದರು.

ಸೈಬರ್ ಕ್ರೈ‌ಂ ತಡೆಯುವಲ್ಲಿ ಶ್ರಮವಹಿಸಿ:ಡಿಸಿಎಂ ಡಾ.ಜಿ. ಪರಮೇಶ್ವರ್

ಕೊಪ್ಪಳ:ದೇಶದಲ್ಲೇ ಕರ್ನಾಟಕ ಪೊಲೀಸ್ ಇಲಾಖೆ ಮಾದರಿ ಇಲಾಖೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಈ ಗೌರವವನ್ನು ಹೀಗೆ ಕಾಪಾಡಿಕೊಂಡು ಹೋಗುವ ಜವಾಬ್ಧಾರಿ ನಿಮ್ಮ ಮೇಲಿದ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದ್ದಾರೆ.

ಬುಧವಾರ ಕೊಪ್ಪಳದ ಮುನಿರಾಬಾದ್ ಕೆಎಸ್ಆರ್‌ಪಿ ತರಬೇತಿ ಶಾಲೆಯಲ್ಲಿ ನಡೆದ ನಿರ್ಗಮನ ಪಥಸಂಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ತರಬೇತಿ ಪಡೆದ ಪ್ರಶಿಕ್ಷಣಾಧಿಗಳನ್ನು ಉದ್ದೇಶಿಸಿ ಮಾತನಾಡಿದರು.

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಶಿಸ್ತಿನಿಂದ, ಜವಾಬ್ದಾರಿಯುತವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ಅಧಿಕಾರಿಗಳು ನಮ್ಮಲ್ಲಿದ್ದಾರೆ. ಕಳೆದ ಒಂಬತ್ತು ತಿಂಗಳಿನಿಂದ ತರಬೇತಿ ಪಡೆದುಕೊಂಡು ಕಾನ್ಸ್‌ಟೇಬಲ್‌ಗಳಾಗಿ ಸೇವೆ ಸಲ್ಲಿಸಲು ಬರುತ್ತಿರುವ 305 ಪ್ರಶಿಕ್ಷಣಾರ್ಥಿಗಳು ಸಹ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಬೇಕು ಎಂದು ಕಿವಿಮಾತು ಹೇಳಿದರು.

ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ಕೊಟ್ಟಾಗ ಇಡೀ ವಿಶ್ವದಲ್ಲೇ ಶ್ರೇಷ್ಠ ಸಂವಿಧಾನವಾಗಲಿದೆ ಎಂದು ಯಾರೂ ಊಹಿಸಿರಲಿಲ್ಲ. ಇದರಡಿ ಎಲ್ಲರಿಗೂ ಸಮಾನ ಹಕ್ಕು ನೀಡುವ ಕಾನೂನನ್ನು ನೀಡಿದ್ದಾರೆ.

ನಮ್ಮ ದೇಶದಲ್ಲಿ ಸಣ್ಣಸಣ್ಣ ಭಿನ್ನಾಭಿಪ್ರಾಯ, ಮೇಲುಕೀಳು ಎಂಬ ಭಾವನೆ ಇರಬಹುದು. ಆದರೆ, ದೇಶ ಎಂದು ಬಂದಾಗ ಎಲ್ಲರೂ ಒಟ್ಟಾಗಿ ನಿಲ್ಲುವುದರಿಂದಲೇ ನಮ್ಮ ಪ್ರಜಾಪ್ರಭುತ್ವ ವಿಶ್ವದಲ್ಲೇ ಯಶಸ್ವಿಯಾಗಿದೆ. ಇತರೆ ರಾಷ್ಟ್ರಗಳಲ್ಲಿ ಸರಕಾರ ಬದಲಾಗುವ ಸಂದರ್ಭದಲ್ಲಿ ರಕ್ತಪಾತವೇ ಆಗುತ್ತದೆ. ಆದರೆ, ಭಾರತದಲ್ಲಿ ಚುನಾವಣೆ ನಡೆಯುವ ಮೂಲಕ ಶಾಂತಿಯುತವಾಗಿ ಹೊಸ ಸರಕಾರ ರಚನೆಯಾಗುತ್ತದೆ. ಹೀಗಾಗಿ ನಮ್ಮದು ಯಶಸ್ವಿ ಪ್ರಶಜಾಪ್ರಭುತ್ವ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಹೆಚ್ಚಿದಂತೆ ಸೈಬರ್ ಕ್ರೈಂನಂಥ ಅಪರಾಧಗಳು ಏರಿಕೆಯಾಗುತ್ತಿವೆ. ಈ ಅನಾಹುತ ತಡೆಯಲು ನಿಮಗೆ ಅಡಿಪಾಯ ಹಾಕಿಕೊಟ್ಟಿದ್ದು, ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಪೊಲೀಸರೆಂದರೆ ಜನರಲ್ಲಿ ಭಯದ ವಾತಾವರಣವಿದೆ. ಇದನ್ನು ಜನರ ಮನಸ್ಸಿನಿಂದ ಹೋಗುವ ರೀತಿಯಲ್ಲಿ ಪೊಲೀಸರು ಜನಸ್ನೇಹಿಗಳಂತೆ ಕೆಲಸ ಮಾಡಬೇಕು ಎಂದರು.
ಮುನಿರಾಬಾದ್ ಕೆಎಸ್ಆರ್‌ಪಿ ತರಬೇತಿ ಶಾಲೆಯಲ್ಲಿ ಮೂಲಸೌಕರ್ಯದ ಕೊರತೆ ಇರುವುದು ನನ್ನ ಗಮನಕ್ಕೆ ಬಂದಿದೆ. ಇಲ್ಲಿ ಕ್ವಾಟ್ರಸ್ ನಿರ್ಮಾಣ ಕೆಲಸ ನಡೆಯುತ್ತಿದೆ. ಹೆಚ್ಚಿನ ಕಟ್ಟಡಗಳ ಅವಶ್ಯಕತೆ ಕೂಡ ಇದೆ. ಈ ಎಲ್ಲ ಬೇಡಿಕೆಯನ್ನು ಈಡೇರಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ನಿದೇರ್ಶಕ ಭಾಸ್ಕರ್ ರಾವ್, ಶಾಸಕ ರಾಘವೇಂದ್ರ ಹಿತ್ನಾಳ್, ತರಬೇತಿ ಶಾಲೆ ಮುಖ್ಯಸ್ಥ ರಾಮಕೃಷ್ಣ ಹಾಗು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

ಶಾಂತಿವನದಲ್ಲಿ ಸ್ಲಿಮ್‌ ಅಂಡ್‌ ಫಿಟ್ ಆದ ಸಿದ್ದು: ನಾಳೆ ಬ್ಯಾಕ್ ಟು ಪೆವಿಲಿಯನ್!

ಮಂಗಳೂರು: ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಯೋಗ ಮತ್ತು ಧ್ಯಾನದ ಮೊರೆ ಹೋಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ನಾಳೆ ಮತ್ತೆ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಕಳೆದ 10 ದಿನದಿಂದ ಶಾಂತಿವನದಲ್ಲಿ ಯೋಗ,ಧ್ಯಾನ,‌ಪ್ರಾಣಾಯಾಮ ಮಾಡಿ ಫಿಟ್ ಆಗಿರುವ ಸಿದ್ದು 12 ದಿನಗಳ ಪ್ಯಾಕೇಜ್ ಟ್ರೀಟ್ ಮೆಂಟ್ ಮುಗಿಸಿ ನಾಳೆ ಬೆಂಗಳೂರಿಗೆ‌ ಹಿಂದಿರುಗುತ್ತಿದ್ದಾರೆ.

ಚುನಾವಣಾ ಪ್ರಚಾರ ಕಾರ್ಯದಿಂದ ಬಸವಳಿದಿದ್ದ ಮನಸ್ಸಿಗೆ ಬೇಕಾದ ಯೋಗಾಸನ, ಪ್ರಾಣಾಯಾಮ ಹಾಗೂ ಧ್ಯಾನವನ್ನೊಳಗೊಂಡ ಯೋಗ‌ಚಿಕಿತ್ಸೆ, ಜಲಚಿಕಿತ್ಸೆ, ಮಸಾಜ್ ಒಳಗೊಂಡ ಶರೀರಕ್ಕೆ ಶುದ್ಧೀಕರಣ‌ ಚಿಕಿತ್ಸೆ ಹಾಗು ದೇಹದಲ್ಲಿ ಸೇರಿರುವ ಕಲ್ಮಶ ತೆಗೆಯಲು ಆಹಾರ ಚಿಕಿತ್ಸೆ ನೀಡಲಾಗಿದೆ.ಇದರೊಂದಿಗೆ‌ ನಿಗದಿತ ಪ್ರಮಾಣದ ವ್ಯಾಯಾಮ,ವಾಕಿಂಗ್ ಸಿದ್ದು ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆ ತಂದಿದೆ.

ಶಾಂತಿವನ ಸೇರಿದ್ದ ಸಿದ್ದರಾಮಯ್ಯ ಇದೀಗ ಸ್ಲಿಮ್‌ ಅಂಡ್ ಫಿಟ್ ಆಗಿ ಹೊರಬರುತ್ತಿದ್ದಾರೆ.ನಾಳೆ ಸಂಜೆ ವೇಳೆಗೆ ಬೆಂಗಳೂರು ತಲುಪಲಿದ್ದು ಮತ್ತೆ ಸಕ್ರೀಯ ರಾಜಕಾರಣದಲ್ಲಿ ತೊಡಗಲಿದ್ದಾರೆ.ಸಿದ್ದು ಅನುಪಸ್ಥಿತಿಯಲ್ಲಿ ನಡೆದ ಗೊಂದಲಗಳ ಪರಿಹಾರಕ್ಕೆ ಸೂತ್ರ ರಚಿಸಲಿದ್ದಾರೆ ಎಂದು ಸಿದ್ದರಾಮಯ್ಯ ಆಪ್ತರು ಮಾಹಿತಿ ನೀಡಿದ್ದಾರೆ.

ಸೈನ್ಯಾಧಿಕಾರಿ ಪತ್ನಿ ಕೊಲೆ ಕೇಸ್ ಗೆ ಟ್ವಿಸ್ಟ್: ಪತಿಗೆ ವಿಚ್ಚೇದನ ನೀಡಲು ಒಪ್ಪದ್ದಕ್ಕೆ ಕೊಲೆ

ನವದಹಲಿ: ಕಂಟೋನ್ಮೆಟ್‌ನಲ್ಲಿ ನಡೆದ ಸೈನ್ಯಾಧಿಕಾರಿ ಹೆಂಡತಿ ಕೊಲೆ ಪೂರ್ವ ನಿಯೋಜಿತ ಎಂದು ತಿಳಿದು ಬಂದಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ನಿಖಿಲ್ ರಾಯ್ ಹಾಂಡಾ ಎಂಬ ಸೈನ್ಯಾಧಿಕಾರಿಯನ್ನು ಬಂಧಿಸಲಾಗಿದೆ.

ಆರೋಪಿಯ ಹೊಂಡಾ ಸಿಟಿ ಕಾರಿನಲ್ಲಿ ಚಾಕುಗಳು ದೊರೆತಿದ್ದು, ಇದು ಅಚಾನಕ್ ಆಗಿ ಸಂಭವಿಸಿದ ಘಟನೆಯಲ್ಲ ಉದ್ದೇಶ ಪೂರ್ವಕವಾಗಿ ನಡೆದ ಘಟನೆ ಎಂಬುದನ್ನು ಸೂಚಿಸುತ್ತದೆ. ಕಾರಿನಲ್ಲಿ ದೊರೆತ ಪಾಕೆಟ್ ಚಾಕುವಿನಲ್ಲಿ ರಕ್ತದ ಕಲೆಗಳಿವೆ ಎಂದು ತಿಳಿದುಬಂದಿದೆ.

ದೆಹಲಿ ಕಂಟೋನ್ಮೆಂಟ್ ಮೆಟ್ರೋ ನಿಲ್ದಾಣದ ಸಮೀಪ ಶೈಲೇಜಾ ದ್ವಿವೇದಿ(35)ಅವರನ್ನು ಕೊಲೆ ಮಾಡಲಾಗಿತ್ತು. ಕೊಲೆ ಸಂಬಂಧ ಆರೋಪಿಯನ್ನು ಪ್ರಶ್ನಿಸಿದಾಗ ಆರೋಪಿ ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸಲಿಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಕೊಲೆಯಾದ ಶೈಲಜಾ ಪತಿ ಮತ್ತು ಆರೋಪಿ ಇಬ್ಬರು 2015 ರಿಂದಲೂ ಇಬ್ಬರು ಅಧಿಕಾರಿಗಳು  ನಾಗಾಲ್ಯಾಂಡ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಆಗಿನಿಂದ ಇಬ್ಬರು ಪರಿಚಯಸ್ಥರಾಗಿದ್ದರು ಎಂದು ತಿಳಿದಿ ಬಂದಿದೆ.

ಇಬ್ಬರ ನಡುವೆ ಜನವರಿ ನಂತರ 3,300 ಫೋನ್ ಕರೆಗಳು ಮತ್ತು 1,500 ಸಂದೇಶಗಳು ವಿನಿಮಯವಾಗಿದ್ದು, ಅದರಲ್ಲಿ  ಹೆಚ್ಚಿನ ಕರೆಗಳನ್ನು ಹಾಂಡಾ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ಶೈಲೇಜಾ ತಮ್ಮ ಪತಿಯೊಂದಿಗೆ ಇರಲು ದೆಹಲಿಗೆ ಬಂದಿದ್ದರು. ಅಲ್ಲದೆ ಬೇಸ್ ಆಸ್ಪತ್ರೆಯಲ್ಲಿ ಫಿಸಿಯೋ ಥೆರಫಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಇದೇ ಆಸ್ಪತ್ರೆಯಲ್ಲಿ ಹಾಂಡಾ ಅವರ ಮಗನನ್ನು ದಾಖಲಿಸಲಾಗಿತ್ತು. ಈ ಸಂದರ್ಭದಲ್ಲಿ ಶೈಲಜಾ ಅವರೊಂದಿಗೆ ಮಾತನಾಡಲು ಬಯಸಿದ್ದರಂತೆ.
ಶನಿವಾರ ತನ್ನ ಕಾರಿನಲ್ಲಿ ಕುಳಿತುಕೊಳ್ಳುವಂತೆ ಹಾಂಡಾ ಶೈಲಜಾರಿಗೆ ಹೇಳಿದ್ದತೆ. ಶೈಲಜಾ ಕಾರಿನಲ್ಲಿ ಕುಳಿತ ನಂತರ ತಮ್ಮ ಹಳೆಯ ಸಂಬಂಧದ ಬಗ್ಗೆ ಹಾಂಡಾ ಪ್ರಸ್ತಾಪಿಸಿ ಆದಷ್ಟು ಬೇಗ ತಮ್ಮ ತಮ್ಮ ಸಾಂಗಾತಿಗಳಿಗೆ ವಿಚ್ಚೇದನ ನೀಡಿ ಇಬ್ಬರೂ ಮದುವೆಯಾಗೋಣ ಎಂದು ಕೇಳಿದ್ದಾನೆ. ಆದರೆ, ಇದನ್ನು ಶೈಲಜಾ ನಿರಾಕರಿಸಿದ್ದಾರೆ.

ಹಾಂಡಾ, ಶೈಲಜಾಳನ್ನು ಪಡೆಯಲು ಕೊನೆಯ ಪ್ರಯತ್ನವಾಗಿ ತನ್ನ ಪತ್ನಿಗೆ ಕರೆ ಮಾಡಿ ಲೌಡ್ ಸ್ಪೀಕರ್ ಆನ್ ಮಾಡಿ ವಿಚ್ಚೇದನದ ಬಗ್ಗೆ ಶೈಲಜಾಗೆ ತಿಳಿಸುವಂತೆ ಹೇಳುತ್ತಾನೆ. ಆಗಲೂ ಶೈಲಜಾ ಒಪ್ಪದಿದ್ದಾಗ ತನ್ನ ಬಳಿಯಿದ್ದ ಚಾಕುವಿನಿಂದ ಅವಳಿಗೆ ಇರಿಯುತ್ತಾನೆ‌. ಶೈಲಜಾ ಹಾಂಡಾ ತಪ್ಪಿಸಿಕೊಳ್ಳು ಪ್ರಯತ್ನ ಪಟ್ಟರು ಅದು ಸಾಧ್ಯವಾಗಿಲ್ಲ ಎಂದು ತನಿಖೆ ವೇಳೆ ತಿಳಿದು ಬಂದಿದೆ.

ಮಾದಕ‌ ಸೇವನೆ ತ್ಯಜಿಸಿ, ಆರೋಗ್ಯಕರ ಜೀವನ ನಡೆಸಿ:ಡಿಸಿಎಂ ಡಾ.ಜಿ. ಪರಮೇಶ್ವರ್

ಬೆಂಗಳೂರು:ಮಾದಕ‌ ವಸ್ತುಗಳ ಬಳಕೆಯನ್ನು ನಿಯಂತ್ರಣಕ್ಕೆ ತರುವುದಲ್ಲದೆ, ಈ ಬಗ್ಗೆ ಶಾಲಾ, ಕಾಲೇಜು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.‌

ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನವನ್ನು ಜನರಲ್ಲಿ ಅರಿವು ಮೂಡಿಸುವ ಮೂಲಕ ಅರ್ಥ ಪೂರ್ಣವಾಗಿ ಆಚರಿಸ ಬೇಕಿದೆ. ಇಡೀ ವಿಶ್ವದಲ್ಲಿ ಮಾದಕ‌ವಸ್ತುಗಳ ಬಳಕೆ ಕಾನೂನು ಬಾಹಿರವಾಗಿ ಬಳಸುತ್ತಿದ್ದಾರೆ. ಇದು ಅಪರಾಧವಾಗಿದ್ದು, ಕಾನೂನು ರೀತ್ಯ ಶಿಕ್ಷೆ ಕೂಡ ಆಗಲಿದೆ.
ಇಂದಿನ ಕೆಲ ಯುವಜನ, ಮಕ್ಕಳು ಮಾದಕ ವ್ಯಸನಿಗಳಾಗುತ್ತಿದ್ದು, ತಮ್ಮ ಸುಂದರ ಜೀವನವನ್ನೇ ಬಲಿಕೊಡುತ್ತಿದ್ದಾರೆ.ಇದರಿಂದ ಅವರ ಇಡೀ ಕುಟುಂಬ ಕೂಡ ನೋವಿನಲ್ಲಿ ನರಳುವಂತೆ ಮಾಡುತ್ತಿದ್ದಾರೆ. ಕೆಲವೇ ನಿಮಿಷದ ಸುಖಕ್ಕಾಗಿ ಇಡೀ ಜೀವನವನ್ನು ಹಾಳು ಮಾಡಿಕೊಳ್ಳುವ ಕೆಲಸಕ್ಕೆ ಯುವಕರು ಮುಂದಾಗಬಾರದು ಎಂದು ಕಿವಿಮಾತು ಹೇಳಿದ್ದಾರೆ.

ಶಾಲಾ ಕಾಲೇಜುಗಳಲ್ಲಿ ಕಾನೂನು ಬಾಹಿರವಾಗಿ ಯಾರಾದರೂ ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದರೆ ಅಂಥವರ ಬಗ್ಗೆ ಸಾರ್ವಜನಿಕರು ದೂರು ನೀಡಲಿ. ಇದರಿಂದ ಯುವಕರ ಭವಿಷ್ಯ ಹಾಳಾಗುವುದನ್ನು ತಡೆಯುವುದರ ಜತೆಗೆ , ಆರೋಪಿಗಳಿಗೆ ಶಿಕ್ಷೆಯಾಗಲಿದೆ. ನೇರ ಬಂದು ದೂರು ನೀಡಲು ಸಾಧ್ಯವಾಗದಿದ್ದರೆ ನಗರ ಸಂಚಾರ ಪೊಲೀಸರು ತೆರೆದಿರುವ 1908 ಟೋಲ್‌ ಫ್ರೀ ಸಂಖ್ಯೆಗೆ ಕರೆ ಮಾಡಿ, ಮಾಹಿತಿ ನೀಡಬಹುದು ಎಂದರು.

ಪ್ರತಿ ವರ್ಷ ಮಾದಕ ವಸ್ತು ವಿರೋಧಿ ದಿನವನ್ನು ಕೇವಲ ಆಚರಿಸಿ ಸುಮ್ಮನಾದರೆ ಯಾವುದೇ ಪ್ರಯೋಜನವಾಗುವುದಿಲ್ಲ. ಈ ಬಗ್ಗೆ ದೊಡ್ಡ ಮಟ್ಟದಲ್ಲಿ ಜಾಗೃತಿ ಮೂಡಿಸುವ ಆಂದೋಲನವಾಗಬೇಕು. ಯಾರೂ ಕೂಡ ಮಾದಕ ವ್ಯಸನಿಗಳಾಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದು ಸಲಹೆ ನೀಡಿದರು.

ಇಂಗ್ಲೀಷ್ ನಲ್ಲೇ ಮಾತಾಡೋಕೆ ನಾವೇನು ಆಂಗ್ಲರ ಗುಲಾಮರಾ: ಜಿಟಿ ದೇವೇಗೌಡ ಪರ ರಾಯರೆಡ್ಡಿ ಬ್ಯಾಟಿಂಗ್

ಕೊಪ್ಪಳ: ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೆಗೌಡರು ಇಂಗ್ಲೀಷ್ ಮಾತನಾಡುವ ಅವಶ್ಯಕತೆ ಇಲ್ಲ. ಕನ್ನಡದಲ್ಲೇ ಮಾತನಾಡಬೇಕು. ಅವರಿಗೆ ಇಂಗ್ಲೀಷ್ ಬರಲ್ಲಾ ಎಂಬ ಕೆಲವರ ವಾದದಿಂದ ನನಗೆ ಬೇಜಾರಾಗಿದೆ.
ನಾವೇನು ಇಂಗ್ಲೀಷರ ಗುಲಾಮರಾ ಎಂದು ಮಾಜಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿ.ಟಿ‌. ದೇವೆಗೌಡ ಅವರು ಬಟ್ಲರ್ ಇಂಗ್ಲೀಷ್ ಮಾತನಾಡಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಜಿ.ಟಿ. ದೇವೇಗೌಡರು ಇಂಗ್ಲೀಷ್​ನಲ್ಲಿ ಮಾತನಾಡಕೂಡದು.
ಕನ್ನಡ ಮಾತನಾಡಿದರೆ ಕೀಳಿರಿಮೆ, ಇಂಗ್ಲೀಷ್ ಮಾತನಾಡಿದ್ರೆ ದೊಡ್ಡಸ್ತಿಕೆ ಎಂಬ ಭಾವ ತಪ್ಪು ಎಂದು ಹೇಳಿದರು.

ಕೊಟ್ಟಿರುವ ಖಾತೆ ಸಂವಿಧಾನತ್ಮಕವಾಗಿ ಸರಿ ಇದೆ
ನಾನು ಜಿ‌.ಟಿ.ದೇವೆಗೌಡರಿಗೆ ಫುಲ್ ಸಪೋರ್ಟ್ ಮಾಡ್ತೀನಿ.
ಖಾತೆ ಹೇಗೆ ನಿರ್ವಹಿಸುತ್ತಾರೆ ಅನ್ನೋದು ಮುಖ್ಯವೇ ಹೊರತು ಭಾಷೆ ಮುಖ್ಯವಲ್ಲ. ಅವರಿಗೆ ಕೊಟ್ಟಿರುವ ಖಾತೆ ಸಂವಿಧಾನತ್ಮಕವಾಗಿ ಸರಿ ಇದೆ. ನಮ್ಮ ಸಂವಿಧಾನದಲ್ಲಿ ಅನಕ್ಷರಸ್ಥರು ಕೂಡಾ ರಾಷ್ಟ್ರಪತಿ, ಪ್ರಧಾನಿ ಮುಖ್ಯಮಂತ್ರಿ ಆಗಲು ಅವಕಾಶವಿದೆ ಎಂದು ತಿಳಿಸಿದರು.