ಚಲನಚಿತ್ರ ವಾಣಿಜ್ಯ ಮಂಡಳಿಗೆ ಇಂದು ಚುನಾವಣೆ

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದ್ ಅಧಿಕಾರದ ಅವಧಿ ಪೂರ್ಣ ಗೊಂಡ ಹಿನ್ನೆಲೆಯಲ್ಲಿ ಇಂದು ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನ ಸೇರಿದಂತೆ ಹಲವು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.

3 ವರ್ಷಗಳಿಗೊಮ್ಮೆ ನಡೆಯುವ ಚುನಾವಣೆಯಲ್ಲಿ ಈ ಬಾರಿ ಅಧ್ಯಕ್ಷ ಸ್ಥಾನವನ್ನು ವಿತರಕರ ವಲಯಕ್ಕೆ ಮೀಸಲಿಡಲಾಗಿದ್ದು, ವಿತರಕರ ವಲಯದಲ್ಲಿ ಚಿನ್ನೆಗೌಡ್ರು ಮತ್ತು ಮಾರ್ಸ್ ಸುರೇಶ್ ನಡುವೆ ಪೈಪೊಟಿ ಪೈಪೋಟಿ ಇದೆ.

ಉಪಾಧ್ಯಕ್ಷ ಸ್ಥಾನಕ್ಕೆ ವಿತರಕರ ವಲಯದಿಂದ ಜಿ.ಕೆ. ಕುಟ್ಟಿ, ಕುಪ್ಪುಸ್ವಾಮಿ, ಬಿ.ಆರ್.ಕೇಶವ, ಬಿ.ಎಲ್.ಮಾಗರಾಜ್, ಕೆ.ಮಂಜು ಸ್ಪರ್ಧೆಯಲ್ಲಿದ್ದು, ನಿರ್ಮಾಪಕರ ವಲಯದಿಂದ ಉಪಾಧ್ಯಕ್ಷ ಸ್ಥಾನಕ್ಕೆ
ದಿನೇಶ್ ಗಾಂಧಿ, ಪ್ರಮೀಳಾ ಜೋಷಾಯ್ , ವಿ.ಸುಬ್ರಮಣಿ ಸ್ಪರ್ಧಿಸುತ್ತಿದ್ದಾರೆ.

ವಿವಿಧ ವಲಯದಿಂದ ೧೫೦೦ ಮತದಾರರು ಮತ ಚಲಾಯಿಸಲಿದ್ದಾರೆ.

ಕರಾವಳಿಯಲ್ಲಿ ಮಳೆಯ ಅಬ್ಬರ: ಕೊಚ್ಚಿಹೋದ ಫಲ್ಗುಣಿ ನದಿ ಸೇತುವೆ

ಮಂಗಳೂರು:ಮುಂಗಾರು ಮಳೆಗೆ ಕರಾವಳಿ ನಲುಗುತ್ತಿದೆ ಕಳೆದ ಮೂರುನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮೂಲರಪಟ್ಣದ ಸೇತುವೆ ಕುಸಿದಿದ್ದು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ.

ಬಿ.ಸಿ. ರೋಡ್ ಮತ್ತು ಕುಪ್ಪೆಪದವು ಸಂಪರ್ಕಿಸುವ ರಸ್ತೆಯ ನಡುವೆ ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಇದೀಗ ಕುಸಿದಿದೆ. ಮಳೆಯಿಂದ ಮೊದಲೇ ಶಿಥಿಲಗೊಂಡಿದ್ದ ಸೇತುವೆ ಇದೀಗ ಕೊಚ್ಚಿಹೋಗಿದೆ.

ಕುಪ್ಪೆಪದವು-ಬಿ.ಸಿ.ರೋಡ್ ಸಂಪರ್ಕಿಸುವ ಈ ಸೇತುವೆಯ ಮೂಲಕ ದಿನನಿತ್ಯ ಹಲವು ವಾಹನಗಳು ಸಂಚರಿಸುತ್ತಿದ್ದವು.ಆದರ ಇದೀಗ ಸೇತುವೆ ಕುಸಿದ ಪರಿಣಾಮ ಸಂಪರ್ಕ ಕಡಿತಗೊಂಡಿದೆ. ಸೇತುವೆ ಶಿಥಿಲಗೊಂಡಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು. ಆದರೆ ಅಧಿಕಾರಿಗಳು ಈ ಬಗ್ಗೆ ದಿವ್ಯ ನಿರ್ಲಕ್ಷ್ಯ ತಾಳಿದ್ದರು ಎನ್ನುವ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ಕಮೀಷನ್ ಪಡೆದು ಆನ್ ಲೈನ್ ವಂಚನೆ ಮಾಡಿಸುವ ಗ್ಯಾಂಗ್: ಬೆಸ್ತು ಬಿದ್ದ ಪೊಲೀಸರು

ಬೆಂಗಳೂರು:ಆನ್ ಲೈನ್ ವಹಿವಾಟು ನಡೆಸುವವರ ಖಾತೆಯಿಂದ ಹಣ ಲಪಟಾಯಿಸುವ ದೊಡ್ಡ ಗ್ಯಾಂಗ್ ಸಿಲಿಕಾನ್ ಸಿಟಿಯಲ್ಲಿ ಹುಟ್ಟಿಕೊಂಡಿದೆ ಎನ್ನುವ ಆತಂಕಕಾರಿ ಮಾಹಿತಿ ಬಹಿರಂಗಗೊಂಡಿದೆ.ಕಮೀಷನ್ ಆಧಾರದಲ್ಲಿ ಇಂತಹ ವಂಚನೆ ಕೃತ್ಯ ನಡೆಯುತ್ತಿದೆ ಎನ್ನುವುದು ಬೆಚ್ಚಿ ಬೀಳಿಸುವ ವಿಷಯವಾಗಿದೆ.

ಇವತ್ತು ಬಹುತೇಕ ವಹಿವಾಟಿಗೆ ಆನ್ ಲೈನ್ ಸ್ಪರ್ಶ ಸಿಕ್ಕಿದೆ,ಖರೀದಿ,ಮಾರಾಟ ಎಲ್ಲವೂ ಆನ್ ಲೈನ್ ನಲ್ಲೇ ನಡೆಯುತ್ತೆ ಇದರಲ್ಲಿ ಕೊಂಚ ಯಾಮಾರಿದ್ರೂ ನಿಮ್ಮ ಖಾತೆ ಖಾಲಿಯಾಗೋದಂತೂ ಗ್ಯಾರಂಟಿ.

ಐಟಿ ಹೆಸರಲ್ಲಿ ಮೆಸೆಜ್ ಕಳುಹಿಸಿ, ಆನ್‌ಲೈನ್‌ನಲ್ಲೇ ಬ್ಯಾಂಕ್ ಖಾತೆಗೆ 40 ಸಾವಿರ ರೂ.ಕನ್ನ ಹಾಕಿದ ಘಟನೆ ಬೆಂಗಳೂರಿನ ಅಮೃತಹಳ್ಳಿಯಲ್ಲಿ‌ ನಡೆದಿದೆ.ಅಮೃತಹಳ್ಳಿಯ ಶಂಕರ್ ವಂಚನೆಗೆ ಒಳಗಾದ ವ್ಯಕಿ. ಮಣಿಪುರ ಮೂಲದ ಲಂಗ್ ಮುನ್ ಪಾನ್‌ ಎಂಬ ವಂಚಕನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೆಡಿಕಲ್ ಶಾಪ್ ಇಟ್ಟುಕೊಂಡಿದ್ದ ಶಂಕರ್ ,ಆದಾಯ ತೆರಿಗೆ ಹಾಗೂ ಜಿಎಸ್ ಟಿ‌ ಪಾವತಿಸಲು ಜೂ.11 ರಂದು ಆನ್ ಲೈನ್ ನಲ್ಲಿ‌ ಅರ್ಜಿ ಹಾಕಿದ್ದರು.‌ ಮಾರನೇ ದಿನ ಶಂಕರ್ ಮೊಬೈಲ್ ಗೆ ನಿಮಗೆ ಐಟಿ ರಿಫಂಡ್ ಆಗಿದೆ. ಮಾಹಿತಿ ಪಡೆಯಲು ಲಿಂಕ್ ಸಮೇತ ಆರೋಪಿ‌ ಸಂದೇಶ ಕಳುಹಿಸಿದ್ದ. ಇದನ್ನು‌ ನಂಬಿದ ಶಂಕರ್ ವಂಚಕನ ಸೂಚನೆ ಮೇರೆಗೆ ಲಿಂಕ್ ತೆರೆದು ಬ್ಯಾಂಕ್‌ ನಂಬರ್ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ದಾಖಲಿಸಿದ್ದರು. ಬಳಿಕ ಜೂ.13ರಂದು ಆರೋಪಿಯು ಶಂಕರ್ ನ ಖಾತೆಯಿಂದ ಸುಮಾರು 40 ಸಾವಿರ ರೂ.‌ ಕೊತ್ತನೂರಿನ ಕರ್ನಾಟಕ ಬ್ಯಾಂಕ್‌ನಿಂದ ಹಣ ಡ್ರಾ ಆಗಿದೆ ಎಂಬ ಸಂದೇಶ ಬಂದಿದೆ. ಇದನ್ನು‌‌ ಕಂಡು ಆತಂಕಕ್ಕೆ ಒಳಗಾದ ಶಂಕರ್, ಕರ್ನಾಟಕ ಬ್ಯಾಂಕ್ ಆಧಿಕಾರಿಯನ್ನು ಸಂಪರ್ಕಿಸಿ ಡ್ರಾ ಮಾಡಿಕೊಂಡಿರುವ ಆರೋಪಿಯ ಬ್ಯಾಂಕ್ ಖಾತೆ ಸ್ಥಗಿತಕ್ಕೆ‌‌‌ ಮುಂದಾಗಿದ್ದಾರೆ. ಅಷ್ಟೊತ್ತಿಗಾಲೇ ಆರೋಪಿಯು ಎಟಿಎಂ ಮೂಲಕ ಹಣ ಡ್ರಾ ಮಾಡಿಕೊಂಡು ಎಸ್ಕೇಪ್ ಆಗಿರುವುದಾಗಿ ಖುದ್ದು ಶಂಕರ್ ತಿಳಿಸಿದ್ದಾರೆ.

ಮಣಿಪುರದ ಮೂಲದ ಆರೋಪಿ ಕಳೆದ ನಾಲ್ಕು ವರ್ಷಗಳ ಹಿಂದೆ ನಗರಕ್ಕೆ‌ ಬಂದಿದ್ದ. ಎಂಪೇರ್ ಹೊಟೇಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ. ತಿಂಗಳಿಗೆ 6 ಸಾವಿರ ರೂ. ದುಡಿಯುತ್ತಿದ್ದ. ಹಣಕಾಸು ವರ್ಗಾವಣೆಗಾಗಿ ಕರ್ನಾಟಕ ಬ್ಯಾಂಕ್ ನಲ್ಲಿ ಖಾತೆ ಸಹ ತೆರೆದಿದ್ದ.ವಂಚನೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸೆರೆ ಹಿಡಿದು ವಿಚಾರಣೆಗೆ ಒಳಪಡಿಸಿದಾಗ ಕಳೆದ ಮಾರ್ಚ್ ನಿಂದ ಈವರೆಗೂ 8 ಲಕ್ಷ ರೂ.ಬ್ಯಾಂಕ್‌ ನಲ್ಲಿ ವಹಿವಾಟು‌ ನಡೆಸಿರುವುದು ಕಂಡು ಬಂದಿದೆ.

ಈತನನ್ನು ತ್ರೀವ ವಿಚಾರಣೆ‌ ನಡೆಸಿದಾಗ ಈತನ ಹಿಂದೆ ಹಲವರ ಕೈವಾಡವಿದೆ‌ ಪೊಲೀಸರು‌ ಕಂಡುಕೊಂಡಿದ್ದಾರೆ. ದೊಡ್ಡ‌ಮಟ್ಟದಲ್ಲಿ ವಂಚನೆ‌‌ ಮಾಡಿದರೆ‌ ಈತನಿಗೆ 4ರಿಂದ 5 ಸಾವಿರ ಕಮೀಷನ್‌‌‌ ಕೊಡುತ್ತಿದ್ದರು ಎಂಬ ಸತ್ಯ ಬಾಯ್ಬಿಟಿದ್ದಾನೆ. ಇದನ್ನು ಕೇಳಿದ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ,ಇದೊಂದು ದೊಡ್ಡ ಜಾಲ ಎನ್ನುವ ಮಾಹಿತಿ ಹಿನ್ನಲೆಯಲ್ಲಿ ಪೊಲೀಸರು ದೊಡ್ಡಮಟ್ಟದ ವ್ಯೂಹ ರಚಿಸಿದ್ದಾರೆ.

ಗುಜರಿ ಅಂಗಡಿಯಲ್ಲಿ ಸ್ಪೋಟ ನಾಲ್ವರ ಸಾವು!

ಉತ್ತರ ಪ್ರದೇಶ : ಗುಜರಿ ಅಂಗಡಿಯೊಂದರಲ್ಲಿ ಸಂಭವಿಸಿದ ಭೀಕರ ಸ್ಪೋಟಕ್ಕೆ ನಾಲ್ವರು ಬಲಿಯಾಗಿದ್ದು ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಶರ್ವತ್‌ ರೋಡ್‌ ಪ್ರದೇಶದಲ್ಲಿನ ಗುಜರಿ ಅಂಗಡಿಯಲ್ಲಿ ಸ್ಫೋಟ ಸಂಭವಿಸಿದ್ದು ಗುಜರಿ ಅಂಗಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ತಜೀಮ್‌ (50) ಮತ್ತು ಶಝಾದ್‌ (55) ಹಾಗೂ ದಾರಿಯಲ್ಲಿ ಹೋಗುತ್ತಿದ್ದು ಇಬ್ಬರು ಸೇರಿ ನಾಲ್ವರು ಮೃತಪಟ್ಟಿದ್ದಾರೆ.

ಗಾಯಗೊಂಡಿರುವ ಮೂವರು ಪಾದಚಾರಿಗಳನ್ನು ಆಸ್ಪತ್ರೆಗೆ ಸೇರಿದ್ದಾರೆ. ಅಂಗಡಿಯಲ್ಲಿ  ಗುಜರಿ ವಸ್ತುಗಳನ್ನು ಒಡೆಯುತ್ತಿದ್ದ ಸಂದರ್ಭದಲ್ಲಿ ಸ್ಫೋಟ ಸಂಭವಿಸಿರುವುದಾಗಿ ತಿಳಿದು ಬಂದಿದೆ. ಮಾಹಿತಿ ದೊರೆತ ತಕ್ಷಣ ಪೊಲೀಸರು ಮತ್ತು ಅಗ್ನಿ ಶಾಮಕದಳದವರು ಸ್ಥಳಕ್ಕೆ ಬಂದು ರಕ್ಷಣಾ ಕಾರ್ಯ ಕೈಗೊಂಡರು.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು ಸ್ಪೋಟಕ್ಕೆ ಕಾರಣವಾದ ವಸ್ತುವನ್ನು ಪತ್ತೆ ಹಚ್ಚುತ್ತಿದ್ದಾರೆ.

ಕಾವೇರಿ ಪ್ರಾಧಿಕಾರಕ್ಕೆ ರಾಕೇಶ್ ಸಿಂಗ್, ಹೆಚ್.ಎಲ್.ಪ್ರಸನ್ನ  ರಾಜ್ಯದ ಪ್ರತಿನಿಧಿಗಳಾಗಿ ನೇಮಕ: ಡಿಕೆಶಿ

ಬೆಂಗಳೂರು: ಕಾವೇರಿ ನದಿ ನೀರು ವಿಚಾರವಾಗಿ ನಾವು ಕೇಂದ್ರ ಸರ್ಕಾರದ ಜೊತೆಗಾಗಲೀ ಅಥವಾ ನ್ಯಾಯಾಲಯದ  ಜೊತೆಗಾಗಲೀ ಸಂಘರ್ಷಕ್ಕಿಳಿದಿಲ್ಲ. ನಮಗೆ ನ್ಯಾಯಬೇಕು ಎಂದು ಪ್ರಧಾನಿಗೆ ಮತ್ತು ನ್ಯಾಯಾಲಯಕ್ಕೆ ವಿನಯಪೂರ್ವಕ ಮನವಿ ಮಾಡುತ್ತೇವೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿದರು.

ಕಾವೇರಿ ನಿರ್ವಹಣಾ ಸಮಿತಿಗೆ ಸದಸ್ಯರ ನೇಮಕ ಕುರಿತಂತೆ ನಡೆದ ಸಭೆ ಬಳಿಕ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್, ಕಾವೇರಿ ನಿರ್ವಹಣಾ ಸಮಿತಿ ರಚನೆ ವಿಷಯದ ಬಗ್ಗೆ ಜೂನ್ 18 ರಂದೇ ಸಿಎಂ ಅವರು ಪ್ರಧಾನಿ ಮತ್ತು ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಿ ವೈಯಕ್ತಿಕ ಮನವಿಯನ್ನೂ ಸಲ್ಲಿಸಿದ್ದರು‌. ಸಭೆ ಕರೆಯುವ ಭರವಸೆ ನೀಡಿದ್ದ ಪ್ರಧಾನ ಮಂತ್ರಿಗಳು ರಾತ್ರೋ ರಾತ್ರಿ ಕಾವೇರಿ ನಿರ್ವಹಣಾ ಸಮಿತಿ ರಚನೆ ಮಾಡಿದ್ದಾರೆ. ಅವರು ನಮ್ಮ ಅಹವಾಲು ಕೇಳಿಲ್ಲ. ಪ್ರಾಧಿಕಾರದಲ್ಲಿ ಆರು ಜನ ಇದ್ದರೂ ಕೋರಂ ಎಂದು ಪರಿಗಣಿಸಿ ನಿರ್ಧಾರ ಕೈಗೊಳ್ಳಬಹುದು‌. ಇದಕ್ಕೆ ರಾಜ್ಯ ಸರ್ಕಾರ ತನ್ನ  ವಿರೋಧ ವ್ಯಕ್ತಪಡಿಸಿದೆ. ಈ ಸಂಬಂಧ ಅಡ್ವೋಕೇಟ್ ಜನರಲ್ ಮತ್ತು ಕಾನೂನು ತಜ್ಞರ ಸಲಹೆ ಪಡೆದಿದೆ. ಜೊತೆಗೆ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂಬುದನ್ನು ಸುಪ್ರಿಂ ಕೋರ್ಟ್‌ ಗಮನಕ್ಕೂ ತರಬೇಕಿದೆ‌ ಎಂದರು.

ಜುಲೈ 2 ರಂದು ಕಾವೇರಿ ನಿರ್ವಹಣಾ ಸಮಿತಿ ಸಭೆ ಕರೆದಿದೆ. ರಾಜ್ಯದ ಗೈರು ಹಾಜರಿಯಲ್ಲಿ ಮತ್ತಷ್ಡು ವಿರೋಧದ ನಿರ್ಧಾರ ಕೈಗೊಳ್ಳುವ ಆತಂಕದಿಂದ ಜಲಸಂಪನ್ಮೂಲ ಕಾರ್ಯದರ್ಶಿ ರಾಕೇಶ್ ಸಿಂಗ್ ಹಾಗೂ ಕಾವೇರಿ ನೀರಾವರಿ ನಿಗಮದ ಎಂಡಿ ಹೆಚ್.ಎಲ್.ಪ್ರಸನ್ನ ಅವರನ್ನು ರಾಜ್ಯದ ಪ್ರತಿನಿದಿಗಳಾಗಿ ಕಳುಹಿಸಲು ನಿರ್ಧರಿಸಲಾಗಿದೆ. ಜತೆಗೆ ಮುಂಬರುವ ಲೋಕಸಭಾ ಅಧಿವೇಶನಕ್ಕೆ ಮುಂಚೆ ಸರ್ವಪಕ್ಷ ಸಭೆ ಕರೆದು ಮುಂದಿನ ಕ್ರಮದ ಬಗ್ಗೆ ಸಲಹೆ ಪಡೆಯಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಆರೋಪ ಮಾಡಿದಂತೆ ಸರ್ಕಾರ ಎಲ್ಲೂ ವಿಳಂಬ ಮಾಡಿಲ್ಲ. ದೂಷಿಸೋದು ಬಿಜೆಪಿಯವರ ಕೆಲಸ. ಕಾವೇರಿ ವಿಚಾರದಲ್ಲಿ ರಾಜ್ಯದ ಹಿತ ಕಾಯಲು ಪ್ರತಿಪಕ್ಷದ ಪ್ರಮುಖರಿಗೂ ಮನವಿ ಮಾಡುತ್ತೇವೆ ಎಂದರು.

ಕೆಲಸ ಕೊಡಿಸ್ತೀವಿ ಹಣ ಕೊಡಿ: ಪೊಲೀಸರಿಂದಲೇ ವಂಚನೆ!

ಬೆಂಗಳೂರು: ಕೆಲಸ ಕೊಡಿಸುತ್ತೇವೆ ದುಡ್ಡು ಕೊಡಿ ಅಂತಾ ಅಮಾಯಕರಿಂದ ದುಡ್ಡು ವಸೂಲಿ ಮಾಡಿ ಮೋಸ ಮಾಡೋ ದಳ್ಳಾಳಿಗಳನ್ನ ನಾವು ನೋಡೀದೀವಿ. ಆದ್ರೆ, ಇಂತಹ ದಳ್ಳಾಳಿಗಳಿಂದ ಅಮಾರಕರನ್ನು ರಕ್ಷಿಸ ಬೇಕಾಗಿರೋ ಪೊಲೀಸರೇ ಈ ರೀತಿ ವಂಚನೆ ಮಾಡಿದ್ರೆ ಹೇಗಿರುತ್ತೆ? ಅಂತದೊಂದು ಘಟನೆ ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪೊಲೀಸ್ ಇಲಾಖೆಯ ಪ್ರಮುಖ ಹುದ್ದೆಗಳು ಸೇರಿದಂತೆ FDC, SDC ಕೆಲಸ ಕೊಡಿಸುವುದಾಗಿ ಅಮಾಯಕರನ್ನು ನಂಬಿಸಿ ೧೮ ಕೋಟಿ ರೂ ಹಣವನ್ನು ಪೊಲೀಸ್ ಪೇದೆಗಳೆ ವಸೂಲಿ ಮಾಡಿದ್ದಾರೆ. ಇತ್ತ ಕೆಲಸ ಸಿಗುತ್ತದೆ ಎಂದು ನಂಬಿ ದುಡ್ಡು ಕೊಟ್ಟವರಿಗೆ ದುಡ್ಡು ಇಲ್ಲ. ಕೆಲಸನೂ ಇಲ್ಲ.

ಸಿಎಆರ್ ಪೇದೆಗಳಾದ ಲೋಕೇಶ್ ಮತ್ತು ಲಕ್ಷ್ಮೀಕಾಂತ್ ರಿಂದ ವಂಚನೆಗೊಳಗಾಗಿದ್ದವರು ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ವಂಚನೆ ಸಂಬಂಧ ದೂರು ದಾಖಲಿಸಿದ್ದು, ಸದ್ಯ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.