ಮತ್ತೆ ಹಾಸನ ಜಿಲ್ಲಾಧಿಕಾರಿಯಾದ ರೋಹಿಣಿ ಸಿಂಧೂರಿ!

ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಹಾಸನ ಜಿಲ್ಲಾಧಿಕಾರಿಯಾಗಿ ನೇಮಿಸಿ ಸರ್ಕಾರ ಇಂದು ಆದೇಶ ಹೊರಡಿಸಿದ್ದು, ಈ ಆದೇಶವು ತಕ್ಷಣದಿಂದಲೇ ಜಾರಿಯಾಗಲಿದೆ ಎಂದು ನ್ಯಾಯಾಲಯಕ್ಕೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ಮಾಹಿತಿ ನೀಡಿದರು.

ಹಾಸನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಅವಧಿ ಪೂರ್ವವಾಗಿ ವರ್ಗಾವಣೆ ಮಾಡಲಾಗಿದೆ ಎಂದು ಸರ್ಕಾರದ ಆದೇಶ ಪ್ರಶ್ನಿಸಿ ರೋಹಿಣಿ ಸಿಂಧೂರಿ ನ್ಯಾಯಾಲಯದ ಮೆಟ್ಟಿಲೇರಿದ್ದು ಸರ್ಕಾರದ ಆದೇಶವನ್ನು ರದ್ದುಗೊಳಿಸುವಂತೆ ಕೋರಿದ್ದರು.

ರೋಹಿಣಿ ಸಿಂಧೂರಿ ಅವರನ್ನು ಹಾಸನ ಜಿಲ್ಲಾಧಿಕಾರಿಯಾಗಿ ಮುಂದುವರೆಸಲು ಒಪ್ಪಿ ಸಮ್ಮಿಶ್ರ ಸರ್ಕಾರ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ರೋಹಿಣಿ ಸಿಂಧೂರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ.

ಜನರಿಗೆ ತೊಂದರೆ ಕೊಡುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಜೈಲಿಗೆ: ರೇವಣ್ಣ ಎಚ್ಚರಿಕೆ

ಹಾಸನ:ಆರ್ ಟಿ ಓ ಅಧಿಕಾರಿಗಳು ಜನರಿಗೆ ತೊಂದರೆ ನೀಡಿದರೆ ಜೈಲಿಗೆ ಕಳುಸುವೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಎಚ್ಚರಿಕೆ ನೀಡಿದ್ದಾರೆ.

ಹಾಸನ ಜಿಲ್ಲಾಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿಗೆ ಸಚಿವ ರೇವಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಅನಗತ್ಯವಾಗಿ ಜನರಿಗೆ ತೊಂದರೆ ಕೊಡುವುದನ್ನು ಸಹಿಸುವುದಿಲ್ಲ,ಒಂದು ವೇಳೆ ಜನರಿಗೆ ತೊಂದರೆ ಕೊಡುತ್ತಿದ್ದರೆ ಅಧಿಕಾರಿಗಳನ್ನು ಜೈಲಿಗೆ ಕಳಿಸುತ್ತೇನೆ,ಈಗಾಗಲೇ ಅಂತಹ ಅಧಿಕಾರಿಗಳ ಮಾಹಿತಿ ಇದೆ ಎಂದು ಎಚ್ಚರಿಕೆ ನೀಡಿದರು.

ಬಡ ರೋಗಿಗಳಿಗೆ ಗುಣ ಮಟ್ಟದ ಚಿಕಿತ್ಸೆ ನೀಡಬೇಕು, ಕರ್ತವ್ಯ ಲೋಪ ಎಸಗುವ ವೈದ್ಯರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.

135 ಕೋಟಿ ರೂ ವೆಚ್ಚದಲ್ಲಿ ತಲಾ 600 ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸೌಲಭ್ಯ, ಪಿಜಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಫ್ಯಾಮಿಲಿ ಬ್ಲಾಕ್ ನಿರ್ಮಿಸಲು‌ ಚಿಂತನೆ ಇದೆ.ಹೆರಿಗೆ ಬಂದ‌ ಮಹಿಳೆಯರ ಖಾಸಗಿ ಆಸ್ಪತ್ರೆಗೆ ಕಳಿಸದಂತೆ ತಾಕೀತು ಮಾಡಿದ್ದೇನೆ, ಸೂಪರ್ ಸ್ಪೆಷಾಲಿಟಿ ಅಥವಾ ಖಾಸಗಿ ಆಸ್ಪತ್ರೆಗೆ ರೋಗಿ ಕಳುಹಿಸಿದರೆ ಯಾವ ಕಾರಣಕ್ಕೆ ಎಂದು ನಮೂದಿಸಬೇಕು.ಬಜೆಟ್ ನಲ್ಲಿ ಎಷ್ಟು ಹಣ ಮೀಸಲಿಡುತ್ತಾರೆ ಎಂಬುದನ್ನು ಗಮನಿಸಿ ಪ್ರತ್ಯೇಕ ಹೆರಿಗೆ ಹಾಗೂ ಮಕ್ಕಳ‌ ಆಸ್ಪತ್ರೆ ನಿರ್ಮಾಣ ಮಾಡುವ ಭರವಸೆ ನೀಡಿದರು.

ಮುಂಬೈನಲ್ಲಿ ಭಾರೀ ಮಳೆ: ರಸ್ತೆಗಳು ಜಲಾವೃತ ಸಂಚಾರಕ್ಕೆ ಅಡ್ಡಿ

ಮುಂಬೈ: ಮಹಾನಗರಿ ಮುಂಬೈನಲ್ಲಿ ಭಾನುವಾರ ತಡರಾತ್ರಿ ಧಾರಾಕಾರ ಮಳೆಯಾಗಿದೆ. ಭೂಕುಸಿತವೂ ಸಂಭವಿಸಿದ್ದು ಪ್ರತ್ಯೇಕ ಕಡೆಗಳಲ್ಲಿ ಮೂರು ಸಾವು ಸಂಭವಿಸಿವೆ.

ಮೆಟ್ರೋ ಸಿನಿಮಾ ಸಮೀಪ ಮರವೊಂದು ಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ಬಾಂದ್ರಾ, ವಿಲೇ ಪಾರ್ಲೆ, ಧರವಿ ಹಾಗೂ ಸಿಯಾನ್ ಪ್ರದೇಶಗಳು ಸೇರಿದಂತೆ ಹಲವೆಡೆ ಮಳೆಯಾಗಿದೆ. ಭಾರೀ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿದ್ದು,  ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ.

ಮುಂಬೈನ ವಾಡಾಲಾ ಪೂರ್ವದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಕೆಳಗಿನ ನೆಲ ಕುಸಿದು ರಸ್ತೆಯಲ್ಲಿ ಸಂಚರಿಸುತ್ತಿದ್ದ ಹಲವಾರು ಕಾರುಗಳು ಅದರಡಿ ಹೂತು ಹೋಗಿವೆ. ಅವಶೇಷಗಳಡಿ ಸಿಲುಕಿದ್ದ ಜನರನ್ನು ಪಾರು ಮಾಡಲಾಗಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಮುಂಬೈ ಮಹಾನಗರದಲ್ಲಿ  ಮುಂದಿನ 48 ಗಂಟೆಗಳ ಕಾಲ ಭಾರೀ ಮಳೆಯಾಗಲಿದ್ದು. ಸಮದ್ರದಲ್ಲಿ ಸುಮಾರು 4 ಮೀಟರ್‌ ಎತ್ತರದ ಅಲೆಗಳು ಏಳಲಿವೆ ಎಂದು ಮುನ್ನೆಚ್ಚರಿಕೆ ನೀಡಿದೆ.

ರೈತರ ಸಾಲ ಮನ್ನಾದಿಂದ ರೈತರಿಗೆ ಅನುಕೂಲವಾಗ ಬೇಕು ಮಧ್ಯವರ್ತಿಗಳು ದುಡ್ಡು ತಿನ್ನುವಂತಾಗಬಾರದು: ಸಿಎಂ

ಬೆಂಗಳೂರು: ವಿಧಾನಸೌಧದಲ್ಲಿ ಕಮೀಷನ್ ವ್ಯವಹಾರ ನಡೆಯುತ್ತಿರುವುದು ನನಗೆ ಗೊತ್ತಿದೆ. ರೈತರ ಸಾಲ ಮನ್ನಾ ಮಾಡುವುದರಿಂದ ರೈತರಿಗೆ ಅನುಕೂಲವಾಗಬೇಕೇ ಹೊರತು ಯಾರೋ ಮಧ್ಯ ವರ್ತಿಗಳು ದುಡ್ಡು ತಿಂದು ಹೋಗುವಂತಾಗಬಾರದು ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ರೈತರ ಸಾಲ ಮನ್ನಾ ಕುರಿತಂತೆ ಸಹಕಾರಿ ಬ್ಯಾಂಕ್ ಗಳ ಅಧ್ಯಕ್ಷರು ಮತ್ತು ನಿರ್ದೇಶಕರೊಂದಿಗೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಸುತ್ತಿದ್ದಾರೆ. ಸಭೆಗೂ ಮುನ್ನ ಸುದ್ಧಿಗಾರರೊಂದಿಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ಈಗಾಗಲೇ ಸಹಕಾರಿ ಬ್ಯಾಂಕ್ ಗಳಲ್ಲಿನ 8 ಸಾವಿರ ಕೋಟಿ ರೂ ಸಾಲವನ್ನು ಮನ್ನಾ ಮಾಡಲಾಗಿದೆ. ಇನ್ನೂ 10 ಸಾವಿರ ಕೋಟಿ ರೂ.ಸಾಲ ಮನ್ನಾ ಮಾಡಬೇಕು. ಮುಂದಿನ ಮಾರ್ಚ್ ಅಂತ್ಯದವರಗಿನ ಸಾಲ ಮನ್ನಾ ಮಾಡಬೇಕು ಎಂಬ ಒತ್ತಾಯವಿದೆ. ಅದೇ ವೇಳೆ ಸರ್ಕಾರಿ ನೌಕರರ ವೇತನ ಹೆಚ್ಚಳ ಮಾಡಿರೋದ್ರಿಂದ 16,000 ಕೋಟಿ ರೂ.ಹೆಚ್ಚಿನ ಹೊರೆಯಾಗಿದೆ. ಮತ್ತೊಂದು ಕಡೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಮ್ಮ ಬಜೆಟ್ ನ್ನು‌ ಮುಂದುವರಿಸಿ ಎಂದು ಹೇಳುತ್ತಿದ್ದಾರೆ.

ನಾನು ಯಾರ ಹಂಗಿನಲ್ಲೂ ಇಲ್ಲ. ನನಗೆ ಯಾರು ಭಿಕ್ಷೆ ಕೊಟ್ಟಿಲ್ಲ. ಈ ಸರ್ಕಾರ ಎಷ್ಟು ದಿನ‌ ಇರುತ್ತೋ ಇಲ್ಲವೋ ಗೊತ್ತಿಲ್ಲ ಅದಕ್ಕೆ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಸಾಲ ಮನ್ನಾ ಮಾಡಬೇಡಿ ಅಂತಾ ಹಣಕಾಸು ಇಲಾಖೆ ಅಧಿಕಾರಿಗಳೇ ಹೇಳುತ್ತಿರುವುದು ನನ್ನ ಗಮನಕ್ಕೂ ಬಂದಿದೆ. ನಾನು ಹಣಕಾಸು ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತೇನೆ. ವಿಧಾನಸೌಧದಲ್ಲಿ ಕಮೀಷನ್ ವ್ಯವಹಾರ ನಡೆಯುತ್ತಿರುವುದು ನಮಗೆ ಗೊತ್ತಿದೆ. ರೈತರ ಸಾಲ ಮನ್ನಾ ಮಾಡುವುದರಿಂದ ರೈತರಿಗೆ ಅನುಕೂಲವಾಗಬೇಕು. ಯಾರೋ ಮಧ್ಯ ವರ್ತಿಗಳು ದುಡ್ಡು ತಿಂದು ಹೋಗುವಂತಾಗಬಾರದು ಎಂದರು.

WhatsApp ನಿಂದ paytm, BHIM ಮಾದರಿಯ ಪಾವತಿ ಸೇವೆ ಆರಂಭ!

ವಾಟ್ಸಾಪ್ ಭಾರತದಲ್ಲಿ ತನ್ನ ಪಾವತಿ ಸೇವೆಗಳ ಪರೀಕ್ಷೆಯನ್ನು ಆರಂಭಿಸಿದೆ. ಸೇವೆಯ ಪೂರ್ಣ ಪ್ರಮಾಣದ ಬಿಡುಗಡೆಗೆ ಮುಂಚಿತವಾಗಿ ಅದರ ಪಾವತಿ ಮತ್ತು ಗೌಪ್ಯತೆಗೆ ಯಾವುದೇ ತೊಂದರೆಯಾಗದಂತೆ ಅಪ್ಡೇಟ್ ಮಾಡುತ್ತಿದೆ‌.

ಪ್ರಪಂಚದಾದ್ಯಂತ 1.5 ಬಿಲಿಯನ್ ಬಳಕೆದಾರರಿರುವ ಫೇಸ್ ಬುಕ್ ಮಾಲೀಕತ್ವದ ವಾಟ್ಸಾಪ್ ಸಂಸ್ಥೆಗೆ
ಭಾರತದಲ್ಲಿ 200 ದಶಲಕ್ಷಕ್ಕೂ ಹೆಚ್ಚಿನ ಬಳಕೆದಾರರಿದ್ದು, ಒಂದು ದಶಲಕ್ಷ ಜನರಿಂದ WhatsApp ಪಾವತಿ ಸೇವೆಗಳನ್ನು ಪರೀಕ್ಷಿಸಲಾಗುತ್ತಿದೆ.

ವಾಟ್ಸಾಪ್ payments features ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಬಳಕೆದಾರರಿಗೆ ಸರಳವಾದ ಭಾಷೆಯನ್ನು ಒದಗಿಸಲು ಸಾಕಷ್ಟು ಪ್ರಯತ್ನ ಮಾಡಲಾಗಿದ್ದು, WhatsApp ಪಾವತಿಯ ಸೇವಾ ನಿಯಮಗಳು ಮತ್ತು ಗೌಪ್ಯತೆ ನೀತಿಯನ್ನು ನವೀಕರಿಸಲಾಗಿದೆ. ಅಲ್ಲದೆ, ಬೀಟಾ ಪ್ರಾರಂಭವಾದಾಗಿನಿಂದ ನಾವು ಸೇರಿಸಿದ ಪಾವತಿ ವಹಿವಾಟಿನ ವೈಶಿಷ್ಟ್ಯಗಳನ್ನು ಕೂಡ ಇದು ಪ್ರತಿಬಿಂಬಿಸುತ್ತದೆ ಎಂದು ವ್ಯಾಟ್ಸಾಪ್ ಸಂಸ್ಥೆ ತಿಳಿಸಿದೆ.

ವಾಟ್ಸಾಪ್ ಪಾವತಿ ಸೇವೆ ಎಂದಿನಿಂದ ಆರಂಭವಾಗುತ್ತದೆ ಎಂದು ಸಂಸ್ಥೆ ಇನ್ನೂ ದಿನಾಂಕ ನಿಗಧಿ ಮಾಡಿಲ್ಲ. ಆದರೆ, ಈಗಾಗಲೇ ಭಾರತೀಯ ಪಾವತಿ ನಿಗಮ, ಬ್ಯಾಂಕ್ ಪಾಲುದಾರರು ಮತ್ತು ಕೇಂದ್ರ ಸರ್ಕಾರದೊಂದಿಗೆ ನಿಕಟವಾಗಿ ಸಂಪರ್ಕದಲ್ಲಿರುವುದಾಗಿ ಸಂಸ್ಥೆ ಹೇಳಿದ್ದು, ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಮೂಲಕ ಹಣಕಾಸಿನ ವಹಿವಾಟುಗಳಿಗೆ ಅನುಕೂಲವಾಗುವಂತೆ ಬ್ಯಾಂಕುಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಎನ್‌ಸಿಪಿಐ ನಿಂದ WhatsApp ಅನುಮತಿಯನ್ನು ಪಡೆದಿದೆ ಎಂದು ತಿಳಿಸಿದೆ.

ಸಿಲಿಕಾನ್ ಸಿಟಿಯಲ್ಲಿ ಪಿಎನ್‍ಬಿ ಮೆಟ್‍ಲೈಫ್ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‍ಷಿಪ್‍

ಬೆಂಗಳೂರು:ದೇಶದ ಪ್ರಮುಖ ಜೀವವಿಮಾ ಕಂಪನಿಯಾಗಿ ಪಿಎನ್‍ಬಿ ಮೆಟ್‍ಲೈಫ್, ಇಂದು ಬೆಂಗಳೂರಿನಲ್ಲಿ ನಾಲ್ಕನೇ ಆವೃತ್ತಿಯ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‍ಷಿಪ್‍ಗೆ ಬೆಂಗಳೂರಿನಲ್ಲಿ ಚಾಲನೆ ನೀಡಿತು.

ಈ ಟೂರ್ನಿಯು ರಾಷ್ಟ್ರೀಯ ಮಟ್ಟದ ಮುಕ್ತ ಟೂರ್ನಿಗಳಲ್ಲಿ ದೊಡ್ಡ ವೇದಿಕೆಯಾಗಿದ್ದು, ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಸಹಯೋಗದಲ್ಲಿ ನಡೆಯುತ್ತಿದೆ. ನಾಲ್ಕು ದಿನಗಳ ಟೂನಿರ್ಯಲ್ಲಿ ಮೊದಲ ದಿನ 900ಕ್ಕೂ ಅಧಿಕ ಯುವ ಆಟಗಾರರು ಈ ಸ್ಪರ್ಧೆಯಲ್ಲಿ ಭಾಗಿಯಾಗುವರು. ನಾಲ್ಕನೇ ಆವೃತ್ತಿಯ ಪಂದ್ಯಾವಳಿಯು ಹೆಚ್ಚು ಆಕರ್ಷಕವಾದ ಬ್ಯಾಡ್ಮಿಂಟನ್ ಸ್ಪರ್ಧೆ, ಹೋರಾಟಗಳಿಗೆ ಸಾಕ್ಷಿಯಾಗಲಿದೆ.

ಈ ವರ್ಷ ಜೆಬಿಸಿಯು ಇನ್ನಷ್ಟು ದೊಡ್ಡ ಸ್ವರೂಪದ್ದಾಗಿದ್ದು, ಚಂಡೀಗಡ, ಬೆಂಗಳೂರು, ಕೊಚ್ಚಿ, ಲಖನೌ, ಪುಣೆ, ಮುಂಬೈ, ಕೋಲ್ಕೊತ್ತಾ, ಹೈದರಾಬಾದ್, ಗುವಾಹಟಿ, ನವದೆಹಲಿಯಲ್ಲಿ ನಡೆಯಲಿದೆ. ಪಂದ್ಯಗಳನ್ನು 9, 11, 13 ಮತ್ತು 15 ವರ್ಷ ವಯಸ್ಸಿನೊಳಗಿನ ಬಾಲಕರು ಮತ್ತು ಬಾಲಕಿಯರ ವಿಭಾಗದಲ್ಲಿ ಅಯೋಜಿಸಲಾಗುತ್ತದೆ. ಪ್ರತಿ ಗುಂಪಿನಿಂದ ಇಬ್ಬರು ನವದೆಹಲಿಯಲ್ಲಿ ಆಗಸ್ಟ್ 9, 10ರದು ನಡೆಯುವ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಅರ್ಹತೆ ಪಡೆಯುವರು.

ರಾಷ್ಟ್ರೀಯ ಮಟ್ಟದ ಟೂರ್ನಿಗೆ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ) ಮಾನ್ಯತೆ ನಿಡಿದ್ದು, ಕಳೆದ ನಾಲ್ಕು ವರ್ಷಗಲ್ಲಿ ಈ ಟೂರ್ನಿಯು ಹೆಚ್ಚಿನ ಬಲ ಪಡೆದುಕೊಂಡಿದೆ.

ಪಡುಕರೆ ಸ್ಪೋರ್ಟ್ಸ್ ಮ್ಯಾನೇಜ್ ಮೆಂಟ್ ಪ್ರೈವೇಟ್ ಲಿಮಿಟೆಡ್ ಸಿಇಒ ವಿಜಯ್ ಲ್ಯಾನ್ಸಿ ಮಾತನಾಡಿ, ಯುವ ಸ್ಪರ್ಧಿಗಳಲ್ಲಿ ಇರುವ ಉತ್ಸಾಹ, ಆಸಕ್ತಿಯನ್ನು ಗಮನಿಸಿದಾಗ ನನಗೆ ಭಾರತದಲ್ಲಿ ಬ್ಯಾಡ್ಮಿಂಟನ್ ಟೂರ್ನಿಗೆ ಭವಿಷ್ಯ ಇರುವ ಕುರಿತು ಭರವಸೆ ಮೂಡಿದೆ. ಪಿಎನ್‍ಬಿ ಮೆಟ್‍ಲೈಫ್ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‍ಷಿಪ್ ಪ್ರತಿಭಾನ್ವಿತ ಮಕ್ಕಳಿಗೆ ವೇದಿಕೆ ಒದಗಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಇದು, ಭಾರತೀಯ ಆಟಗಾರರು ಜಾಗತಿಕವಾಗಿ ವಿವಿಧ ವೇದಿಕೆಗಳಲ್ಲಿ ಪರಿಣಾಮಕಾರಿ ಸ್ಪರ್ಧೆ ನೀಡಲು ಸನ್ನದ್ಧರಾಗಿಸಲಿದೆ’ ಎಂದು ಹೇಳಿದರು.

ಬಿಎಐ ಅಧ್ಯಕ್ಷ ಹಿಮಾಂತಾ ಬಿಸ್ವಾ ಶರ್ಮಾ ಮಾತನಾಡಿ, ನಾವು ಪಿಎನ್‍ಬಿ ಮಟ್‍ಲೈಫ್ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‍ಷಿಪ್ (ಜೆಬಿಸಿ) ಜೊತೆಗೆ ಸಹಯೋಗ ಹೊಂದಿದೆ. ಈ ಕಾರ್ಯಕ್ರಮದ ಮೂಲಕ ಯುವ ಮಕ್ಕಳು ಈಗ ತಮ್ಮ ಕೌಶಲವನ್ನು ಬ್ಯಾಡ್ಮಿಂಟನ್ ಕನಸುಗಳನ್ನು ಈಡೇರಿಸಿಕೊಳ್ಳಬಹುದು. ಈಂಥ ವೇದಿಕೆಗಳು ದೇಶದ ವಿವಿಧೆಡೆ ಪ್ರತಿಭಾನ್ವಿತರಿಗೆ ಉತ್ತೇಜನ ನಿಡಲಿದೆ’ ಎಂದು ಹೇಳಿದರು. ಬೆಂಗಳೂರು ನಂತರ ಜೆಬಿಸಿ 4 ಕೊಚ್ಚಿ, ಲಖನೌದಲ್ಲಿ ನಡೆಯಲಿದೆ ಎಂದರು.

ಪಂದ್ಯಾವಳಿಯ ವೇಳಾಪಟ್ಟಿ ಇಲ್ಲಿದೆ:

01 ಚಂಡೀಗಡ ಮೇ 24- 26
02 ಬೆಂಗಳೂರು ಜೂನ್ 24-28
03 ಕೊಚ್ಚಿ ಜೂನ್ 30-ಜುಲೈ 2
04 ಲಖನೌ ಜೂನ್ 30 –ಜುಲೈ 2
05 ಪುಣೆ ಜುಲೈ 3-6
06 ಮುಂಬೈ ಜುಲೈ 6-10
07 ಕೋಲ್ಕೊತ್ತಾ ಜುಲೈ 8-10
08 ಹೈದರಾಬಾದ್ ಜುಲೈ 12-15
09 ಗುವಾಹಟಿ ಜುಲೈ 14-16
10 ದೆಹಲಿ ಜುಲೈ 17-21
11 ದೆಹಲಿ ಫೈನಲ್ ಆಗಸ್ಟ್ 9-10