ದೇಶದಲ್ಲಿ ಕೆಲವರಿಂದ ಸುಳ್ಳು, ಗೊಂದಲ, ನಿರಾಶಾವಾದ ಸೃಷ್ಟಿ: ಪಿಎಂ ಮೋದಿ

ರಾಜಗಢ: ಜನರು ಬಿಜೆಪಿ ಸರ್ಕಾರವನ್ನು ನಂಬುತ್ತಾರೆ. ಆದ್ರೆ, ಕೆಲವರು ಜನರಲ್ಲಿ ಸುಳ್ಳು ಹರಡುತ್ತಿದ್ದು, ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಮತ್ತು ನಿರಾಶಾವಾದವನ್ನು ಬಿತ್ತುತ್ತಿದ್ದಾರೆ ಎಂದು ಮಧ್ಯಪ್ರದೇಶದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಮಧ್ಯಪ್ರದೇಶದ ರಾಜ್ಗಢ ಜಿಲ್ಲೆಯ ಮೋಹನ್ಪುರ ನೀರಾವರಿ ಯೋಜನೆಯನ್ನು ಉದ್ಘಾಟಿಸಿ ನಂತರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ನರೇಂದ್ರ ಮೋದಿ, ಜನರು ಬಿಜೆಪಿ ಸರ್ಕಾರವನ್ನು ನಂಬುತ್ತಾರೆ. ಸುಳ್ಳು ಹರಡುವವರು, ಗೊಂದಲ ಮತ್ತು ನಿರಾಶಾವಾದವನ್ನು ಬಿತ್ತುತ್ತಿರುವವರು ವಾಸ್ತವತೆಯಿಂದ ದೂರವಿದ್ದಾರೆ ಎಂದು ಹೇಳಿದರು.

ಜನಸಂಘದ ಸ್ಥಾಪಕ ಶ್ಯಾಮ ಪ್ರಸಾದ ಮುಖರ್ಜಿ ಅವರ ಗುಣಗಾನ ಮಾಡಿದ ಮೋದಿ, ದೇಶದಲ್ಲಿ ಒಂದು ಕುಟುಂಬವನ್ನು ವೈಭವೀಕರಿಸುವ ಮೂಲಕ ದೇಶಕ್ಕೆ ಕೊಡುಗೆ ನೀಡಿದ ಹಲವು ವ್ಯಕ್ತಿಗಳ ವ್ಯಕ್ತಿತ್ವ ವನ್ನು ಉದ್ದೇಶಪೂರ್ವಕ ಕಿರಿದಾಗಿಸುವ ಪ್ರಯತ್ನಗಳನ್ನು ಮಾಡಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದರು.

ದಶಕಗಳಿಂದ ದೇಶವನ್ನು ಆಳಿದ ಪಕ್ಷವು ಜನರ ಕಷ್ಟ ಮತ್ತು ಶ್ರಮವನ್ನು ಅರಿಯಲಿಲ್ಲ. ದೇಶದ ಬಲದ ಬಗ್ಗೆ ಅವರಿಗೆ ನಂಬಿಕೆ ಇರಲಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ನಾವು ಎಂದಿಗೂ ಹತಾಶೆ, ನಿರಾಶೆಯಿಂದ ಮಾತನಾಡಿಲ್ಲ. ನಾವು ಆತ್ಮವಿಶ್ವಾಸದಿಂದ ಮುಂದಕ್ಕೆ ಸಾಗುತ್ತೇವೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.

ಹಜ್ ಭವನಕ್ಕೆ ಟಿಪ್ಪು ಹೆಸರಿಟ್ಟರೆ ಕೊಡಗಿನಲ್ಲಿ ಹೋರಾಟ: ಕೆ.ಜಿ ಬೋಪಯ್ಯ

ಬೆಂಗಳೂರು: ಟಿಪ್ಪು ಸುಲ್ತಾನ್ ಒಬ್ಬ ಮತಾಂಧ, ಕೊಲೆಗಡುಕ ಎಂದು ನಾನು ನೇರವಾಗಿ ಅಪಾದನೆ ಮಾಡುತ್ತೇನೆ. ಹಜ್ ಭವನಕ್ಕೆ ಟಿಪ್ಪು ಹೆಸರಿಟ್ಟರೆ ರಾಜ್ಯ ಮತ್ತೊಮ್ಮೆ ಹೊತ್ತಿ‌ ಉರಿಯಲು ಕಾರಣವಾಗುತ್ತದೆ ಯಾವುದೇ ಕಾರಣಕ್ಕೂ ಹಜ್ ಭವನಕ್ಕೆ ಟಿಪ್ಪು ಹೆಸರಿಡ‌ ಬಾರದು ಎಂದು ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ ಎಚ್ಚರಿಕೆ ನೀಡಿದ್ದಾರೆ.

ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಕೆ.ಜಿ.ಬೋಪಯ್ಯ, ಬಿಜೆಪಿ ಸರ್ಕಾರ ಇದ್ದಾಗ ಹಜ್ ಯಾತ್ರಿಕರಿಗೆ ಅನುಕೂಲ‌ವಾಗಲಿ ಎಂದು  ಹಜ್ ಭವನಕ್ಕೆ ಹಣ ಕೊಟ್ಟಿದ್ದೇ ಹೊರತು ಟಿಪ್ಪು ಹೆಸರು ಇಡಲು ಅಲ್ಲ ಎಂದು ತಿರುಗೇಟು ನೀಡಿದರು.

ಕೊಡಗು ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ದೇವಸ್ಥಾನ ಹಾಳು ಮಾಡಿ, 80 ಸಾವಿರಕ್ಕೂ ಹೆಚ್ಚು ಜನರನ್ನು ಕೊಲೆ ಮಾಡಿದ್ದಾನೆ ಕೊಡಗು ಜಿಲ್ಲೆಯ ಜನ ಇವತ್ತಿಗೂ ಟಿಪ್ಪು ಕೊಲೆಗಡುಕ ಅಂತಾ ಹೇಳುತ್ತಾರೆ ಸರ್ಕಾರ ಇದನ್ನು ಮೀರಿ ಟಿಪ್ಪು ಹೆಸರಿಡುವ ನಿರ್ಧಾರ ಮಾಡಿದರೆ ಕೊಡಗು ಜಿಲ್ಲೆಯಲ್ಲಿ ತೀವ್ರ ಹೋರಾಟ ಮಾಡುತ್ತೇವೆ ರಾಜ್ಯ ಮತ್ತೊಮ್ಮೆ ಹೊತ್ತಿ‌ ಉರಿಯಲು ಇದು ಕಾರಣವಾಗುತ್ತದೆ ಎಂದರು.

ಮಧ್ಯಪ್ರದೇಶದ ಬೃಹತ್ ನೀರಾವರಿ ಯೋಜನೆಗೆ ಚಾಲನೆ ನೀಡಿದ ಮೋದಿ!

ಭೋಪಾಲ್: ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಮಧ್ಯಪ್ರದೇಶದಲ್ಲಿ 3,866 ಕೋಟಿ ರೂ. ಮೌಲ್ಯದ ಮೋಹನ್ಪುರಾ ನೀರಾವರಿ ಯೋಜನೆಯನ್ನು ರಾಜ್ಯದ ಜನರಿಗೆ ಅರ್ಪಿಸಿದ್ದಾರೆ.

ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆ ಹತ್ತಿರವಿರುವ ಈ ಅವಧಿಯಲ್ಲಿ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಈ ಯೋಜನೆ ಪ್ರಮುಖ ಪಾತ್ರ ವಹಿಸಲಿದೆ ಎಂದು ವಿಶ್ಲೇಷಿಸಲಾಗಿದೆ.

ಒಂದು ಅಣೆಕಟ್ಟು ಮತ್ತು ಕಾಲುವೆ ವ್ಯವಸ್ಥೆಯನ್ನು ಒಳಗೊಂಡ ಮೋಹನ್ಪುರ ನೀರಾವರಿ ಯೋಜನೆಯು ಮಧ್ಯಪ್ರದೇಶದ 727 ಗ್ರಾಮಗಳಿಗೆ ಪ್ರಯೋಜನವಾಗಲಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ಪುರಾ ನೀರಾವರಿ ಯೋಜನೆಯಿಂದ ಜಿಲ್ಲೆಯ ಜನರಿಗೆ ಸಾಕಷ್ಟು ನೆರವಾಗಲಿದ್ದು ಇಂತಹ ಮಹಾತ್ವಾಕಾಂಕ್ಷೆಯ ಯೋಜನೆಯನ್ನು ರಾಜ್ಯದ ಜನತೆಗೆ ಅರ್ಪಿಸಲು ಹೆಮ್ಮೆ ಪಡುತ್ತೇನೆ ಎಂದು ಮೋದಿಯವರು ತಿಳಿಸಿದ್ದಾರೆ.

ನೀರಾವರಿ ಯೋಜನೆ ಮಾತ್ರವಲ್ಲದೆ ‘ಸೂತ್ರ ಸೇವಾ’ ಎಂಬ ನಗರ ಸಾರಿಗೆ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಇಂದು ಮೋದಿಯವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಮತ್ತು ರಾಜ್ಯಪಾಲೆ ಆನಂದಿಬೆನ್‌ ಪಟೇಲ್‌ ಭಾಗಿಯಾಗಿದ್ದರು.

ಕೆಎಸ್ಆರ್‌ಟಿಸಿ ಗೆ ಸ್ಟೇಟ್ ಆಫ್ ಗವರ್ನೆನ್ಸ್-ಆರ್ಡರ್ ಆಫ್ ಮೆರಿಟ್ ಅವಾರ್ಡ್

ಬೆಂಗಳೂರು:ಸಾಲು ಸಾಲು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಕೆಎಸ್ಆರ್‌ಟಿಸಿಗೆ ಇದೀಗ ಪ್ರತಿಷ್ಠಿತ ರಾಷ್ಟ್ರೀಯ ಸ್ಟೇಟ್ ಆಫ್ ಗವರ್ನೆನ್ಸ್-ಆರ್ಡರ್ ಆಫ್ ಮೆರಿಟ್ ಪ್ರಶಸ್ತಿ ಲಭಿಸಿದೆ. ಸಂಸ್ಥೆ ಅಳವಡಿಸಿಕೊಂಡಿರುವ ಉಪಕ್ರಮಗಳಿಗೆ ನಾಲ್ಕು ಪ್ರಶಸ್ತಿ ಬಂದಿದೆ.

ನವದೆಹಲಿಯ ಕಾನ್ಸ್ಟಿಟ್ಯೂಷನಲ್ ಕ್ಲಬ್ ರಲ್ಲಿ ನಡೆದ 52 ನೇ ರಾಷ್ಟ್ರೀಯ ಶೃಂಗಸಭೆಯಲ್ಲಿ ಕೆಎಸ್ಆರ್‌ಟಿಸಿ ಗೆ ನಾಲ್ಕು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಕಾರ್ಯಸ್ಥಳದಲ್ಲಿ ಅನುಷ್ಠಾನಗೊಳಿಸಿರುವ ಆರೋಗ್ಯಕರ ಉಪಕ್ರಮಗಳು, ಅವತಾರ್ ಸೇವೆ,ಸಾರಿಗೆ ಕ್ಷೇತ್ರದಲ್ಲಿ ಮಾಹಿತಿ ತಂತ್ರಜ್ಞಾನ ಅನುಷ್ಠಾನ ಮತ್ತು ವಹಿಕಲ್ ಟ್ರ್ಯಾಕಿಂಗ್ ಅಂಡ್ ಮಾನಿಟರಿಂಗ್ ಸಿಸ್ಟಮ್ ಗೆ ಪ್ರಶಸ್ತಿ ಬಂದಿದೆ.

ಸದರಿ ಪ್ರಶಸ್ತಿ ಸಮಾರಂಭವು ಸಾರ್ವಜನಿಕ ಆಡಳಿತದಲ್ಲಿನ ಉತ್ತಮ ಪ್ರಯತ್ನಗಳನ್ನು ಗುರುತಿಸುವ ಮತ್ತು
ಪರಿಣಾಮಕಾರಿಯಾಗಿ ಆಡಳಿತದ ಮಾದರಿ ಯೋಜನೆಗಳನ್ನು ಪುರಸ್ಕರಿಸುವ ವೇದಿಕೆಯಾಗಿದೆ. ಉತ್ತುಮ
ಆಡಳಿತವನ್ನು ನೀಡುವ ಸರ್ಕಾರಿ ಸಂಸ್ಥೆಗಳು ಮತ್ತು ಸರ್ಕಾರದ ಸಹಭಾಗಿತ್ವದಲ್ಲಿ ಕರ್ತವ್ಯ ನಿರ್ವಹಿಸುವ
ಸಂಸ್ಥೆಗಳು, ಸ್ಥಳೀಯವಾಗಿ ಕರ್ತವ್ಯ ನಿರ್ವಹಿಸುವ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕಾರ್ಯ ಕ್ಷೇತ್ರಗಳಾದ
ಆರೋಗ್ಯ, ಶಿಕ್ಷಣ, ಗ್ರಾಮೀಣಾಭಿವೃದ್ದಿ/ಪಂಚಾಯತ್‍ರಾಜ್, ನಗರಾಭಿವೃದ್ದಿ, ಸಾರಿಗೆ, ಹಣಕಾಸು ಮತ್ತು
ಭದ್ರತೆ ಕಾರ್ಯಕ್ಷೇತ್ರವನ್ನು ಒಳಗೊಂಡಿದ್ದು ಕೆಎಸ್ಆರ್‌ಟಿಸಿ ಅಳವಡಿಸಿಕೊಂಡ ಪರಿಣಾಮಕಾರಿ ಕ್ರಮಗಳಿಗೆ ಈ ಪ್ರಶಸ್ತಿಗಳು ಬಂದಿವೆ ಎಂದು ಕೆಎಸ್ಆರ್‌ಟಿಸಿ ತಿಳಿಸಿದೆ.

ಕಾವೇರಿ ವಿಚಾರದಲ್ಲಿ ಮತ್ತೆ ಅನ್ಯಾಯ: ರಾಜ್ಯ ಬಿಟ್ಟು ಕಾವೇರಿ ಪ್ರಾಧಿಕಾರ ಸಮಿತಿ ರಚನೆ

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆಯಲ್ಲಿ ಪ್ರತಿ ಬಾರಿಯೂ ರಾಜ್ಯಕ್ಕೆ‌ ಆಗುತ್ತಿದ್ದ ಹಿನ್ನಡೆ ಇದೀಗ ನೀರು ನಿರ್ವಹಣಾ ಮಂಡಳಿ ರಚನೆಯಲ್ಲಿಯೂ ಆಗಿದೆ.ಸಿಎಂ ಹೆಚ್ಡಿಕೆ ಮನವಿಗೆ ಸ್ಪಂಧಿಸದ ಕೇಂದ್ರ ರಾಜ್ಯವನ್ನು ಬಿಟ್ಟೇ ಸಮಿತಿ ರಚಿಸಿದೆ.

ಕಾವೇರಿ ನಿರ್ವಹಣಾ ಪ್ರಾಧಿಕಾರ ರಚನೆಯಲ್ಲಿ‌ ಕರ್ನಾಟಕಕ್ಕೆ ಭಾರೀ ಹಿನ್ನಡೆಯಾಗಿದ್ದು,ರಾಜ್ಯದ ಮನವಿಯನ್ನು ಕಡೆಗಣಿಸಿ ಸಮಿತಿ‌ ರಚಿಸುವ ಮೂಲಕ ಕೇಂದ್ರ ಜಲ ಸಂಪನ್ಮೂಲ ಇಲಾಖೆ ರಾಜ್ಯದ ಹಿತಾಸಕ್ತಿಗೆ ಮಾರಕವಾಗುವಂತೆ ಮಾಡಿದೆ.

ರಾತ್ರೋ ರಾತ್ರಿ ಕಾವೇರಿ ಕೊಳ್ಳದ ರಾಜ್ಯಗಳ ಸದಸ್ಯರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.ಕೇಂದ್ರ ಜಲ ಆಯೋಗದ ಅಧ್ಯಕ್ಷ ಎಸ್‌. ಮಸೂದ್‌ ಹುಸೇನ್ ಸಮಿತಿಯ ನೇತೃತ್ವ ವಹಿಸಿರುತ್ತಾರೆ. ಮುಖ್ಯ ಎಂಜಿನಿ­ಯರ್‌ ನವೀನ್‌ ಕುಮಾರ್‌ ಕೇಂದ್ರದ ಪ್ರತಿನಿಧಿಯಾಗಿರಲಿದ್ದಾರೆ. ತಮಿಳುನಾಡಿನ ಆರ್‌.ಸೆಂಥಿಲ್‌ಕುಮಾರ್‌, ಭಾರತೀಯ ಹವಾಮಾನ ಇಲಾ­ಖೆಯ ವಿಜ್ಞಾನಿ ಡಾ.ಎಂ.ಮೊಹಾ­ಪಾತ್ರ, ಕೇಂದ್ರ ಜಲ ಆಯೋಗ ಕೊಯಮತ್ತೂರು ವಿಭಾಗದ ಮುಖ್ಯ ಎಂಜಿನಿಯರ್‌ ಎನ್‌.ಎಂ.ಕೃಷ್ಣಮುನ್ನಿ,ಕೇರಳದ ಕೆ.ಎ.ಜೋಶಿ, ಪುದುಚೇರಿಯ ವಿ.ಶಣ್ಮುಗಸುಂದರಂ ಅವರನ್ನು ಸದಸ್ಯರನ್ನಾಗಿ ಕೇಂದ್ರ ಸರ್ಕಾರ ನೇಮಿಸಿದೆ.ಕೇಂದ್ರ ಕೃಷಿ ಸಚಿವಾಲಯದ (ರೈತ ಕಲ್ಯಾಣ) ತೋಟಗಾರಿಕಾ ಆಯುಕ್ತರು ಇತರೆ ಸದಸ್ಯರಾಗಿದ್ದು, ರಾಷ್ಟ್ರೀಯ ಜಲ ಆಯೋಗದ ಮತ್ತೂಬ್ಬ ಮುಖ್ಯ ಎಂಜಿನಿಯರ್‌ ಎ.ಎಸ್‌.ಗೋಯೆಲ್‌ ಸಮಿತಿಯ ಸದಸ್ಯ ಕಾರ್ಯದರ್ಶಿ (ಹೆಚ್ಚುವರಿ ಜವಾಬ್ದಾರಿ) ಆಗಿರುತ್ತಾರೆ.

ಆದರೆ ರಾಜ್ಯ ಸರ್ಕಾರ ತನ್ನ ಪ್ರತಿನಿಧಿಯ ಹೆಸರನ್ನು ಶಿಫಾರಸು ಮಾಡದ ಕಾರಣ ಜಲ ಸಂಪನ್ಮೂಲ ಇಲಾಖೆಯ ಮುಖ್ಯ ಎಂಜಿನಿಯರ್‌ ಅವರನ್ನು ಸಮಿತಿಯ ಸದಸ್ಯ­ರೆಂದು ಪರಿಗಣಿಸಿದೆ.

ದಹಲಿ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ‌ ಮೋದಿ ಅವರನ್ನು ಭೇಟಿ ಮಾಡಿದ್ದ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಸಮಿತಿ­ಯಲ್ಲಿನ ಕೆಲವು ಲೋಪ­ದೋಷ­­ಗಳನ್ನು ಸರಿಪಡಿಸಿ ನಂತರ ಪ್ರಾಧಿಕಾರ ರಚಿಸಿ ಅಧಿಸೂಚನೆ ಹೊರಡಿಸಿ, ಅಲ್ಲಿಯ­ವರೆಗೆ ರಾಜ್ಯದಿಂದ ಸಮಿತಿಗೆ ಸದಸ್ಯರನ್ನೂ ನೇಮಕ ಮಾಡುವುದಿಲ್ಲ ಎಂದಿದ್ದರು.

ಕಾವೇರಿ ವಿಚಾರದಲ್ಲಿ ನಮ್ಮ ಸಹನೆಯೇ ದೌರ್ಬಲ್ಯವಲ್ಲ: ಸಿಎಂ

ಬೆಂಗಳೂರು: ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ರಾಜ್ಯದ ಪ್ರತಿನಿಧಿ ನೇಮಕ ವಿಷಯದಲ್ಲಿ ಏಕ ಪಕ್ಷೀಯ ನಿರ್ಧಾರ ಕೈಗೊಂಡಿರುವುದರಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಈ ಮೊದಲೇ ಲೋಕಸಭೆಯಲ್ಲಿ ಚರ್ಚೆಯಾಗಬೇಕೆಂದು ಮನವಿ ಮಾಡಿದ್ದೆ. ಆದರೆ, ಅದನ್ನು ಪರಿಗಣಿಸಿಲ್ಲ ನಮ್ಮ ಸಹನೆಯನ್ನು ದೌರ್ಬಲ್ಯವೆಂದು ಪರಿಗಣಿಸಬೇಡಿ ಎಂದು ಸಿಎಂ ಕುಮಾರಸ್ವಾಮಿ ಖಡಕ್ ಎಚ್ಚರಿಕೆ ನೀಡಿದರು.

ಬೆಂಗಳೂರಿನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ಕಾವೇರಿ ನದಿ ನೀರು ಪ್ರಾಧಿಕಾರ ರಚನೆ ವಿಚಾರದಲ್ಲಿ ಕೆಲವು ಲೋಪದೋಷಗಳಿದ್ದು ಅದನ್ನು ಸರಿಪಡಿಸಿದ ನಂತರ ರಾಜ್ಯದ ಪ್ರತಿನಿಧಿ ನೇಮಕ ಮಾಡುತ್ತೇವೆ. ಈ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಸುವಂತೆ ಪ್ರಧಾನಮಂತ್ರಿಗಳಿಗೆ ಮನವಿ ಮಾಡಿದ್ದೆ. ಆದರೆ, ಏಕಾಏಕಿ ಈ ರೀತಿ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈಗ ಕೈಗೊಂಡಿರುವ ನಿರ್ಧಾರವನ್ನು ಮರು ಪರಿಶೀಲನೆ ಮಾಡುವಂತೆ ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಕೇಂದ್ರ ಜಲಸಂಪನ್ಮೂಲ ಸಚವರನ್ನು ಭೇಟಿ ಮಾಡಿ ನಮ್ಮ ರಾಜ್ಯದ ಅಹವಾಲು ತಲುಪಿಸುತ್ತೇನೆ. ಈ ಸಂಬಂಧ ಅಡ್ವೊಕೇಟ್ ಜನರಲ್ ಅವರ ಸಲಹೆ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ಕಾವೇರಿ ನದಿ ನೀರು ವಿಚಾರದಲ್ಲಿ ನಮ್ಮ ಸಹನೆಯೇ ನಮ್ಮ ದೌರ್ಬಲ್ಯ ಅಲ್ಲ. ಪ್ರಾಧಿಕಾರ ರಚನೆಯಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ರಾಜ್ಯ ಬಿಟ್ಟು ಪ್ರಾಧಿಕಾರ ರಚನೆ ಆದ ಕೂಡಲೇ ನೀರಾಚರಿ ತಜ್ಞರಿಂದ ಸಲಹೆ ಪಡೆದಿದ್ದೇನೆ. ಕಾನೂನಿಗೆ ನಾವು ತಲೆ ಬಾಗಲೇಬೇಕು.
ಕೇಂದ್ರ ನೀರಾವರಿ ಸಚಿವರನ್ನೂ ಸಂಪರ್ಕ‌ ಮಾಡಿದ್ದೇನೆ. 15 ದಿನಗಳ ಒಳಗೆ ಭೇಟಿಗೆ ಅವಕಾಶ ಮಾಡಿಕೊಡ್ತೇವೆ ಎಂದಿದ್ದಾರೆ. ಲೋಕಸಭೆಯಲ್ಲಿ ಚರ್ಚೆ ಆಗಬೇಕಿತ್ತು, ಆದ್ರೆ ಆಗಿಲ್ಲ. ಅಡ್ವೋಕೇಟ್ ಜನರಲ್ ಸಲಹೆ ಪಡೆದು‌ ಮುಂದುವರಿತ್ತೇವೆ ಕೇಂದ್ರ ಸರ್ಕಾರಕ್ಕೂ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.