ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಯಿಂದ ಹೊರಬಿದ್ದ ಕಾರು: ಸ್ಥಳದಲ್ಲೇ ಇಬ್ಬರು ಸಾವು

ನೆಲಮಂಗಲ: ಬೆಳ್ಳಂ ಬೆಳಗ್ಗೆ ಜವರಾಯನ ಹಟ್ಟಹಾಸಕ್ಕೆ ಇಬ್ಬರು ಬಲಿಯಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದ ಕಾರು ಸರ್ವಿಸ್ ರಸ್ತೆಯಿಂದ ಹೊರಹೋಗಿ ಪಲ್ಟಿಯಾದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ.

ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಈ ಘಟನೆ ಸಂಭವಿಸಿದ್ದು, ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ. ಕ್ಯಾಬ್ ಚಾಲಕ ಶ್ರೀಧರ್ ಮತ್ತು ಪುನೀತ್ ಮೃತ ದುರ್ದೈವಿಗಳಾಗಿದ್ದು, ಮೃತರು ಹಾಸನ ಹೊಳೆನರಸಿಪುರ ತಾಲೂಕಿನ ಗೊಂದಮಲೇನಹಳ್ಳಿಯವರು ಎಂದು ತಿಳಿದು ಬಂದಿದೆ.

ಇನ್ನು ಅಪಘಾತದ ತೀವ್ರತೆಗೆ ಮೃತರ ಇಬ್ಬರ ಮೆದಳು ಛಿದ್ರವಾಗಿದೆ, ಅಪಘಾತದಲ್ಲಿ ಮತ್ತೊಬ್ಬ ಪ್ರಯಾಣಿಕ ಸುಮನ್ ಗೆ ಗಂಭೀರ ಗಾಯವಾಗಿದ್ದು ಅಸ್ಪತ್ರೆಗೆ ದಾಖಲಿಸಲಾಗಿದೆ. ಈ ಭೀಕರ ಅಪಘಾತಕ್ಕೆ ಕಾರಿನ ಅತೀಯಾದ ವೇಗ ಹಾಗೂ ಚಾಲಕನ ನಿಯಂತ್ರಣ ತಪ್ಪಿದ್ದೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂದ ನೆಲಮಂಗಲ ಸಂಚಾರಿ‌ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಹೆಚ್ಡಿಕೆ ಬಜೆಟ್ ಮಂಡನೆಗೆ ಮುಹೂರ್ತ ಫಿಕ್ಸ್

ಬೆಂಗಳೂರು: ಜೆಡಿಎಸ್,ಕಾಂಗ್ರೆಸ್ ಮೈತ್ರಿ ಸರ್ಕಾರದ ಮೊದಲ ಬಜೆಟ್ ಅಧಿವೇಶನಕ್ಕೆ ಮುಹೂರ್ತ ಫಿಕ್ಸ್ ಆಯ್ತು.ರೇವಣ್ಣ ಫಿಕ್ಸ್ ಮಾಡಿದ್ ಟೈಮ್ ನಲ್ಲಿ ಬಜೆಟ್ ಮಂಡಿಸೋಕೆ ಕುಮಾರಸ್ವಾಮಿ ಓಕೆ ಅಂದ್ರು.

ಜುಲೈ 2 ರಂದು ವಿಧಾನಸಭೆ ಜಂಟಿ ಅಧಿವೇಶನ ನಡೆಸಲು ಮುಖ್ಯಮಂತ್ರಿ ಹೆಚ್ಡಿಕೆ ನೇತೃತ್ವದ ಸಚಿವ ಸಂಪುಟ ಸಭೆ ಗ್ರೀನ್ ಸಿಗ್ನಲ್ ನೀಡ್ತು. ಮೊದಲ‌ ದಿನ ರಾಜ್ಯಪಾಲ‌ ವಜುಭಾಯ್ ವಾಲಾ ಜಂಟಿ ಸದನವನ್ನುದ್ದೇಶಿಸಿ ಮಾತನಾಡಿದ್ರೆ ಜುಲೈ5 ಕ್ಕೆ ಹೆಚ್ಡಿಕೆ ತಮ್ಮ ಮೊದಲ ಬಜೆಟ್ ಮಂಡನೆ ಮಾಡಲಿದ್ದು, ಜುಲೈ12 ರವರೆಗೂ ಅಧಿವೇಶನ ನಡೆಯುತ್ತೆ.

ಅಧಿವೇಶನಕ್ಕೂ ಸಚಿವ ರೇವಣ್ಣ ಸಮಯ ನಿಗದಿಪಡಿಸಿದ್ರು.
ಜುಲೈ 2 ರಂದು ಮಧ್ಯಾಹ್ನ 12:30ಕ್ಕೆ ಸರಿಯಾಗಿಯೇ ರಾಜ್ಯಪಾಲರು ಭಾಷಣ ಆರಂಭಿಸಬೇಕು. ಜುಲೈ 5 ರಂದು ಬೆಳಗ್ಗೆ 11:30ಕ್ಕೆ ಸರಿಯಾಗಿ ಬಜೆಟ್ ಮಂಡನೆ ಮಾಡಬೇಕು ಎಂದು ಸಂಪುಟ ಸಭೆಯಲ್ಲಿ ರೇವಣ್ಣ ಹೇಳಿದ್ರು,ಇದಕ್ಕೆ ಸಿಎಂ‌ ಹೆಚ್ಡಿಕೆ ಓಕೆ ಅಂದ್ರು.

ಸಂಪುಟ ಸಭೆ ಹೈಲೈಟ್ಸ್:

  • ಬಸವರಾಜ ಹೊರಟ್ಟಿ ಹಂಗಾಮಿ ಸಭಾಪತಿಯಾಗಿ ನೇಮಕಕ್ಕೆ ಅನುಮೋದನೆ.
  • ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ವಿಮಾ ಕಂತುಗಳ ಪಾವತಿಗೆ ರಾಜ್ಯ ಸರ್ಕಾರದ ಪಾಲು 655 ಕೋಟಿ ಬಿಡುಗಡೆಗೆ ಸಮ್ಮತಿ.
  • ವರ್ಗಾವಣೆ ನೀತಿ ಜಾರಿಗೆ ಒಪ್ಪಿಗೆ.
    ಜುಲೈ ಅಂತ್ಯದೊಳಗಾಗಿ ಒಟ್ಟು ನೌಕರರ ಶೇ.4ರಷ್ಟನ್ನು ಮೀರದಂತೆ ಸಾರ್ವತ್ರಿಕ ವರ್ಗಾವಣೆ.
  • ಉನ್ನತ ಶಿಕ್ಷಣ ಗುಣಮಟ್ಟ ಸುಧಾರಣಾ ಅಭಿಯಾನಕ್ಕೆ ರಾಜ್ಯದ ಪಾಲು 460 ಕೋಟಿ ರೂ.ಬಿಡುಗಡೆ.
  • ವಿಮಾನ ನಿಲ್ದಾಣ ಪ್ರಾಧಿಕಾರದ 333 ಕೋಟಿ ರೂ.ಸಾಲ ಮರುಪಾವತಿ ಅವಧಿ 10 ವರ್ಷ ಮುಂದೂಡಿಕೆ.
  • ಚನ್ನರಾಯಪಟ್ಟಣ ತಾಲೂಕಿನ 27 ಕೆರೆ ತುಂಬಿಸುವ ಯೋಜನೆಗೆ ಒಪ್ಪಿಗೆ.
  • ಭಾರತ ರತ್ನ ಮತ್ತು ಪದ್ಮ ಪ್ರಶಸ್ತಿಗಳಿಗೆ ಹೆಸರು ಶಿಫಾರಸ್ಸು ಮಾಡಲು ಸಿಎಂ ಗೆ ಅಧಿಕಾರ.

ನೇರಳೆ ಮಾರ್ಗದಲ್ಲಿ  ಆರು ಬೋಗಿ ರೈಲು ಸಂಚಾರ: ಸಿಎಂ ಚಾಲನೆ

ಬೆಂಗಳೂರು: ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಆರು ಬೋಗಿಗಳ ರೈಲು ಸಂಚಾರಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ವಿಧಾನಸೌಧದಿಂದ ಮೆಟ್ರೋದಲ್ಲಿಯೇ ಬೈಯಪ್ಪನಹಳ್ಳಿ ನಿಲ್ದಾಣಕ್ಕೆ ಬಂದ ಮುಖ್ಯಮಂತ್ರಿಗಳು ಅಲ್ಲಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ್ದು ವಿಶೇಷವಾಗಿತ್ತು. ನಂತರ ತಾವೇ ಟಿಕೆಟ್ ಖರೀದಿಸಿ ಜನಸಾಮಾನ್ಯರೊಂದಿಗೆ ಬೈಯಪ್ಪನಹಳ್ಳಿಯಿಂದ ಮೆಜೆಸ್ಟಿಕ್ ವರೆಗೆ ಪ್ರಯಾಣ ಬೆಳೆಸಿದರು. ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಚಿವರಾದ ಕೆ.ಜೆ. ಜಾರ್ಜ್, ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಮುಖ್ಯಮಂತ್ರಿಗಳಿಗೆ ಸಾಥ್ ನೀಡಿದರು.

ಮೂರು ಬೋಗಿಗಳ ರೈಲು ಆರು ಬೋಗಿಗಳಾಗಿ ಬದಲಾಗಿದ್ದು, 900 ಮಂದಿ ಪ್ರಯಾಣ ಮಾಡುತ್ತಿದ್ದ ರೈಲಿನಲ್ಲಿ ಇನ್ನೂ ಮುಂದೆ 1800 ಮಂದಿ ಒಮ್ಮೆಲೆ ಪ್ರಯಾಣ ಮಾಡಬಹುದಾಗಿದೆ. ಈ ಮೂಲಕ ನಮ್ಮ ಮೆಟ್ರೋ  ಪ್ರಯಾಣಿಕರ ಬಹುದಿನಗಳ ಕನಸು ನನಸಾಗುತ್ತಿದೆ.‌

ಹೊಸ ಕಾರು ಖರೀದಿಗೆ ಸಲ್ಲಿಸಿದ್ದ ಅರ್ಜಿಗಳು ವಾಪಸ್!

ಬೆಂಗಳೂರು: ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕುವಂತೆ ಮುಖ್ಯಮಂತ್ರಿಗಳು ಸೂಚಿಸಿದ ಹಿನ್ನೆಲೆಯಲ್ಲಿ ಹೊಸ ಕಾರು ಖರೀದಿಗೆ ಬಂದಿದ್ದ 6 ಸಚಿವರು ಮತ್ತು 5 ಅಧಿಕಾರಿಗಳ ಅರ್ಜಿಗಳನ್ನು ವಾಪಸ್ ಕಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಚುವರಾದ ಕೆ.ಜೆ ಜಾರ್ಜ್, ಡಿ.ಕೆ.ಶಿವಕುಮಾರ್, ಜಯಮಾಲಾ, ಪ್ರಿಯಾಂಕ್ ಖರ್ಗೆ, ಶಿವಾನಂದ ಪಾಟೀಲ್, ಯು.ಟಿ ಖಾದರ್ ಹೊಸ ಕಾರಿಗಾಗಿ ಅರ್ಜಿ ಸಲ್ಲಿಸಿದ್ದರು. ಅಲ್ಲದೆ, 5 ಮಂದಿ ಅಧಿಕಾರಿಗಳು ಕೂಡ ಕಾರು ಖರೀದಿಗೆ ಅರ್ಜಿಗಳನ್ನು ಸಲ್ಲಿಸಿದ್ದರು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿಗೆ ಬಂದಿದ್ದ 11 ಅರ್ಜಿಗಳನ್ನು ವಾಪಸ್ ಕಳಿಸಲಾಗಿದೆ. ಈ ವರ್ಷ ಅನಗತ್ಯ ವೆಚ್ಚಕ್ಕೆ ಹಣ ನೀಡದಂತೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಣಕಾಸು ಇಲಾಖೆಗೆ ಖಡಕ್ ಸೂಚನೆ ನೀಡಿರುವ ಹಿನ್ನಲೆಯಲ್ಲಿ ಅನುಮತಿ ನಿರಾಕರಿಸಿ ಅರ್ಜಿಗಳನ್ನು ವಾಪಸ್ ಕಳಿಸಲಾಗಿದೆ.

ಪ್ರತಿದಿನ ಬೆಳ್ಳುಳ್ಳಿ ಸೇವನೆಯಿಂದ ಆಗುವ ಪ್ರಯೋಜನಗಳನ್ನು ತಿಳಿಯಿರಿ

ಭಾರತೀಯ ಆಹಾರ ಪದ್ಧತಿಯಲ್ಲಿ ಬೆಳ್ಳುಳ್ಳಿಗೆ ತನ್ನದೇ ಆದಾ ಸ್ಥಾನವಿದೆ. ಬೆಳ್ಳುಳ್ಳಿ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ ಎಂಬುದನ್ನು ಆಯುರ್ವೇದ ವೈದ್ಯವೂ ಹೇಳುತ್ತದೆ. ಹಾಗಾದ್ರೆ ಬೆಳ್ಳುಳ್ಳಿ ಸೇವನೆಯಿಂದ ಆಗುವ ಪ್ರಯೋಜನಗಳೇನು ಎಂಬುದನ್ನು ಯೋಚಿಸುತ್ತಿದ್ದೀರಾ ಹಾಗಾದ್ರೆ ಇದನ್ನ ಓದಿ.

ಬೆಳ್ಳುಳ್ಳಿ ಸೇವನೆಯಿಂದ ಆಗುವ ಪ್ರಯೋಜನಗಳು

* ಬೆಳ್ಳುಳ್ಳಿ ಸದಾ ನಿಮ್ಮನ್ನು ಸದಾ ಯುವಕರಾಗಿರುವಂತೆ ನೋಡಿಕೊಳ್ಳುತ್ತದೆ.

* ಬೆಳ್ಳುಳ್ಳಿ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಅಂಶಗಳನ್ನು ಒಳಗೊಂಡಿದ್ದು, ಇದು ಅನೇಕ ಸಣ್ಣ ಖಾಯಿಲೆಗಳೊಂದಿಗೆ ಹೋರಾಡುತ್ತದೆ ಮತ್ತು ನಿಮ್ಮ ದೇಹವನ್ನು ಆರೋಗ್ಯಕರವಾಗಿರಿಸುತ್ತದೆ.

* ನಿಮ್ಮ ದೇಹದಲ್ಲಿ ನೀವು ದೌರ್ಬಲ್ಯ ಹೊಂದಿದ್ದರೆ, ನೀವು ದಿನಕ್ಕೆ 1 ಬೆಳ್ಳುಳ್ಳಿ ತಿನ್ನುತ್ತಿದ್ದರೆ, ದೌರ್ಬಲ್ಯವನ್ನು ತೆಗೆದುಹಾಕಲಾಗುತ್ತದೆ.

* ಪ್ರತಿ ದಿನವೂ ಬೆಳ್ಳುಳ್ಳಿ ತಿನ್ನುತ್ತಿದ್ದರೆ, ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಪ್ರಬಲವಾಗಿರುತ್ತದೆ.

* ದೇಹದ ತೂಕವನ್ನು ಹೆಚ್ಚಿಸಲು ನೀವು ಪ್ರತಿ ದಿನ ಒಂದು ಬೆಳ್ಳುಳ್ಳಿ ತಿನ್ನಬೇಕು.

ಪೊಲೀಸರ ವರ್ಗಾವಣೆಗೆ ಸರ್ಕಾರದ ಸಹಕಾರ: ಸಿಎಂ

ಬೆಂಗಳೂರು : ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದ ವರ್ಗಾವಣೆ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ನೃಪತುಂಗಾ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಿದ್ರು.ಸಭೆಯಲ್ಲಿ ಗೃಹ ಖಾತೆ ನಿರ್ವಹಿಸುತ್ತಿರುವ ಡಿಸಿಎಂ ಪರಮೇಶ್ವರ್, ಡಿಜಿಪಿ ನೀಲಮಣಿ ರಾಜು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ರು.ಪೊಲೀಸ್ ಇಲಾಖೆಯ ಸ್ಥಿತಿಗತಿ,ಕಾನೂನು ಸುವ್ಯವಸ್ಥೆ, ಇಲಾಖೆಯಲ್ಲಿನ ಮೂಲಸೌಕರ್ಯ ಸೇರಿದಂತೆ ಹಲವು ವಿಷಯಗಳ ಕುರಿತು ಸಿಎಂ ಸುದೀರ್ಘ ಚರ್ಚೆ ನಡೆಸಿದ್ರು.

ಸಭೆ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ರಾಜ್ಯ ಪೊಲೀಸ್ ಇಲಾಖೆಯ ಒಂದು ಆ್ಯಪ್ ಕೂಡ ಬಿಡುಗಡೆ ಮಾಡಿದ್ದೇವೆ.ಎಲ್ಲಾದರೂ ಘಟನೆಗಳು ನಡೆದರೆ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಇದರಿಂದ ಮಾಹಿತಿ ಸಿಗಲಿದೆ. ಇದನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದ್ರು.

ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಜನರ ರಕ್ಷಣೆ ಮೂಲಕ ಸರ್ಕಾರಕ್ಕೆ ಗೌರವ ತಂದುಕೊಡುವುದು ಮುಖ್ಯ.ಹೀಗಾಗಿ ಇಲಾಖೆಗೆ ಅಗತ್ಯ ಸಲಹೆಗಳನ್ನು ಕೊಟ್ಟಿದ್ದೇನೆ. ಪೋಲೀಸ್ ಇಲಾಖೆ ರಾಜ್ಯದ ಮುಖವಾಣಿಯಂತೆ. ಪೊಲಿಸ್ ಇಲಾಖೆ ಚೆನ್ನಾಗಿದ್ರೆ ಎಲ್ಲವೂ ಚೆನ್ನಾಗಿರುತ್ತೆ ಹಾಗಾಗಿ ನಾವು ಕೂಡ ಇಲಾಖೆಗೆ ಬೇಕಾದ ಸಹಕಾರ ಕೊಡುತ್ತೇವೆ ಎಂದು ಸಿಎಂ ಅಭಯ ನೀಡಿದ್ರು.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಯಾವುದೇ ಅಮಾಯಕರನ್ನು ಎಸ್ಐಟಿ ತಂಡ ಟಾರ್ಚರ್ ಮಾಡಿಲ್ಲ. ಬಂಧನವಾಗಿ ಬಿಡುಗಡೆಯಾದವರು ಪೊಲೀಸರ ಸೌಮ್ಯತೆಯ ಬಗ್ಗೆ ಈಗಾಗಲೇ ಹೇಳಿದ್ದಾರೆ,ಈ ಕೇಸ್ ನಲ್ಲಿ ಪೊಲೀಸರು ಬಹಳಷ್ಟು ಮಾಹಿತಿ ಕಲೆ ಹಾಕಿದ್ದಾರೆ ಎಂದ್ರು.

ವಿಜಯಪುರದಲ್ಲಿ ನಡೆದಿದ್ದ ನಕಲಿ ಎನ್ ಕೌಂಟರ್ ಪ್ರಕರಣಕ್ಕೆ 25 ವರ್ಷಗಳ ಇತಿಹಾಸವಿದೆ,ಆದರೆ ಕೇಸನ್ನು ಈಗ ಬಯಲಿಗೆ ಎಳೆಯಲಾಗಿದೆ. ಅಧಿಕಾರಿಗಳು ಈ ಸಂಬಂಧ ತನಿಖೆ ಮಾಡುತ್ತಿದ್ದಾರೆ.ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ, ಕಟ್ಟು ನಿಟ್ಟಿನ ತನಿಖೆಗೆ ಆದೇಶ ನೀಡಲಾಗಿದೆ ಎಂದ್ರು.