ಕೋಮು‌ ಪ್ರಚೋದನೆ ಮಾಡುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ: ಪರಂ

ಬೆಂಗಳೂರು: ಕೋಮುಗಲಭೆಗೆ ಪ್ರಚೋದನೆ ನೀಡುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.

ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಮೇಶ್ಬರ್, ಕೋಮು ಗಲಭೆ ಎಬ್ಬಿಸುವವರು ಯಾವುದೇ ಜಾತಿ, ಧರ್ಮ, ಸಮುದಾಯಕ್ಕೆ ಸೇರಿದ್ದರೂ ಸರಿಯೇ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದೇವೆ. ಅಲ್ಲದೆ, ಪ್ರಚೋದನಾತ್ಮಕ ಹೇಳಿಕೆ ನೀಡಿದರೆ, ಅಂಥವರ ಮೇಲೆ ಕಣ್ಣಿಡಲಾಗುತ್ತದೆ. ಈ ಪ್ರವೃತ್ತಿ ಹೆಚ್ಚಿದರೆ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇವೆ ಎಂದರು.

ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ತನಿಖೆ ಮುಂದುವರೆದಿದೆ. ಈ ಪ್ರಕರಣ ಭೇದಿಸಿದ ತಂಡವನ್ನು ಸಿಎಂ ಕುಮಾರಸ್ವಾಮಿ ಅವರು ಅಭಿನಂದಿಸಿದ್ದು, ತಾರ್ಕಿಕ ಅಂತ್ಯ ಕಾಣಿಸುವಂತೆ ಸೂಚನೆ ನೀಡಿದ್ದಾರೆ. ಅಪರಾಧ ಸಂಖ್ಯೆಯಲ್ಲಿ ರಾಜ್ಯ ಹತ್ತನೇ ಸ್ಥಾನ ಪಡೆದುಕೊಂಡಿದೆ. ಈ ಸಂಖ್ಯೆ ಇನ್ನಷ್ಟು ಕಡಿಮೆಯಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಪೊಲೀಸರೆಂದರೆ ಜನರಲ್ಲಿ ಭಯ, ಆತಂಕವಿದೆ. ಈ ಮನೋಭಾವ ಅಳಿಸಿ, ಜನಸ್ನೇಹಿ ಪೊಲೀಸರಂತೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದೇವೆ ಎಂದು ಹೇಳಿದರು.

ನೇಮಕಾತಿ ವಿಚಾರದಲ್ಲಿ ಕಳೆದ ಐದು ವರ್ಷದಲ್ಲಿ ಮೂವತ್ತು ಸಾವಿರ ಕಾನ್ಸ್‌ಟೇಬಲ್ ಹಾಗೂ ಇನ್ಸ್‌ಪೆಕ್ಟರ್‌ಗಳ ನೇಮಕಾತಿ ಆಗಿದೆ. ಇನ್ನೂ ೧೪ ಸಾವಿರ ಕಾನ್ಸ್‌ಟೇಬಲ್ ಹುದ್ದೆ ಖಾಲಿ ಇದ್ದು, ಹಂತ ಹಂತವಾಗಿ ತುಂಬಲಾಗುತ್ತದೆ. ಅಲ್ಲದೆ, ನಿವೃತ್ತಿ ಹೊಂದುವ ಸ್ಥಾನಗಳಿಗೆ ಆಗಾಗ್ಗೆ ನೇಮಕಾತಿ ನಡೆಯಲಿದೆ ಎಂದು ತಿಳಿಸಿದರು.

೨೦೧೩ರಲ್ಲಿ ಪ್ರಾರಂಭಗೊಂಡ ಪೊಲೀಸ್ ಗೃಹ ನಿರ್ಮಾಣಕ್ಕೆ ೧೮೧೮ ಕೋಟಿ ರೂ.‌ಮೀಸಲಿಟ್ಟಿದ್ದು, ೨೦೨೦ ರೊಳಗೆ ಕೆಲಸ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ರಾಜ್ಯದ ಮಾದರಿ
ಕಾನ್ಸ್‌ಟೇಬಲ್‌ಗಳು ಸಬ್‌ಬೀಟ್ ಸಿಸ್ಟಮ್‌ನಡಿ ಪ್ರತಿ ಹಳ್ಳಿ ಹಳ್ಳಿಗೂ ತೆರಳಿ, ಗ್ರಾಮಸ್ಥರೊಂದಿಗೆ ಸಭೆ ನಡೆಸಿ, ಅಲ್ಲಿನ‌ ಆಗು ಹೋಗುಗಳನ್ನು ತಿಳಿದುಕೊಳ್ಳುತ್ತಿದ್ದರು. ಇದರಿಂದ ಅಪರಾಧ ಸಂಖ್ಯೆ ಕಡಿಮೆಯಾಗುತ್ತಿದೆ.
ಈ ಕಾರ್ಯಕ್ರಮ ಯಶಸ್ವಿಯಾಗಿರುವುದರಿಂದ ಈ ಮಾದರಿಯನ್ನು ಎಲ್ಲ ರಾಜ್ಯಗಳು ಅನುಸರಿಸುವಂತೆ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಈ ಮೂಲಕ ರಾಜ್ಯದ ಕೀರ್ತಿ ಮತ್ತಷ್ಟು ಹೆಚ್ಚಿದೆ. ಗೃಹ ಇಲಾಖೆ ರಾಜ್ಯದ ಮುಖವಾಣಿ ಇದ್ದಂತೆ. ಈ ಇಲಾಖೆ ಸೂಕ್ತ ರೀತಿಯಲ್ಲಿ ಕೆಲಸ ಮಾಡಿದರೆ ರಾಜ್ಯ ಸುಭದ್ರವಾಗಿರಲು ಸಾಧ್ಯ ಎಂದರು.

ಹಜ್ ಭವನಕ್ಕೆ ಟಿಪ್ಪು ಹೆಸರಿಡಲು ಚಿಂತನೆ: ಜಮೀರ್

ಬೆಂಗಳೂರು: ಹಜ್‌ ಭವನಕ್ಕೆ ಟಿಪ್ಪು ಸುಲ್ತಾನ್‌ ಹೆಸರಿಡಲು ಮನವಿಗಳು ಬಂದಿವೆ. ಆಗಸ್ಟ್ 1 ರಿಂದ ಹಜ್ ಯಾತ್ರೆ ಶುರುವಾಗಲಿದ್ದು, ಒಂದು ತಿಂಗಳ ಬಳಿಕ ಹೆಸರು ಬದಲಾವಣೆ ಬಗ್ಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ವಕ್ಫ್, ಅಲ್ಪಸಂಖ್ಯಾತ ಕಲ್ಯಾಣ ಸಚಿವ ಬಿ.ಝಡ್‌.ಜಮೀರ್‌ ಅಹಮದ್‌ ಖಾನ್‌ ತಿಳಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಅಹಮದ್ ಖಾನ್, ಹಜ್‌ ಭವನಕ್ಕೆ ಟಿಪ್ಪು ಹೆಸರಿಡುವಂತೆ ಮುಸ್ಲಿಂ ಧರ್ಮಗುರುಗಳು ಮನವಿ ಮಾಡಿದ್ದಾರೆ. ಕಳೆದ ವರ್ಷ ಹಜ್‌ ಯಾತ್ರೆಯ ವೇಳೆಯಲ್ಲೇ ಈ ಬಗ್ಗೆ ಚರ್ಚಿಸಲಾಗಿತ್ತು. ”ಟಿಪ್ಪು ಸುಲ್ತಾನ್‌ ಹಜ್‌ ಘರ್‌” ಎಂಬ ಹೆಸರಿಡಲು ತಿರ್ಮಾನಿಸಲಾಗಿತ್ತು ಎಂದರು.

ಟಿಪ್ಪು ಸುಲ್ತಾನ್ ಜಯಂತಿ ಬೇರೆ, ಹಜ್ ಭವನಕ್ಕೆ ಟಿಪ್ಪು ಹೆಸರಿಡುವುದೇ ಬೇರೆ. ಹಜ್‌ ಭವನ ಸ್ವತಂತ್ರ ಸಂಸ್ಥೆಯಾಗಿದ್ದು, ಟಿಪ್ಪು ಸುಲ್ತಾನ್‌ ಹೆಸರಿಟ್ಟರೆ ತಪ್ಪಿಲ್ಲ. ಬಿಜೆಪಿಯವರು ವಿರೋಧಿಸುವ ಸಾಧ್ಯತೆ ಇಲ್ಲ ಎಂದುಕೊಳ್ಳುತ್ತೇನೆ ಎಂದು ಹೇಳಿದರು.

ಕಿರಾತಕ-2ನಲ್ಲಿ ಯಶ್ ನಟಿಸಲ್ಲ: ನಿರ್ದೇಶಕ ಪ್ರದೀಪ್ ರಾಜ್ ಸ್ಪಷ್ಟನೆ!

ಬೆಂಗಳೂರು: ಕಿರಾತಕ-2 ಚಿತ್ರದಲ್ಲಿ ಬಾಲಿವುಡ್‌ನ ಪ್ರತಿಭಾವಂತ ಯುವ ನಟರೊಬ್ಬರು ಅಭಿನಯಿಸುತ್ತಿದ್ದು, ಚಿತ್ರವನ್ನು ನಾನೇ ನಿರ್ದೇಶನ ಮಾಡುತ್ತಿದ್ದೇನೆ ಎಂದು ನಿರ್ದೇಶಕ ಪ್ರದೀಪ್ ರಾಜ್ ಸ್ಪಷ್ಟನೆ ನೀಡಿದ್ದಾರೆ.

ಕಿರಾತಕ-2 ಚಿತ್ರ ಯಶ್ ನಟನೆಯಲ್ಲಿ ಮೂಡಿಬರಲಿದ್ದು, ಚಿತ್ರವನ್ನು ಬೇರೊಬ್ಬ ನಿರ್ದೇಶಕರು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ದುಬೈನಲ್ಲಿ ನಡೆಯುತ್ತಿದೆ ಎಂದು ಕೆಲವು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶ ರವಾನೆಯಾಗಿದೆ.

ಬೈಂದೂರು ಕನ್ಸಸ್ಟ್ರಕ್ಷನ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ಮೂಡುಬರುತ್ತಿದೆ. ಚಿತ್ರವನ್ನು ನಾನೇ ನಿರ್ದೇಶನ ಮಾಡುತ್ತಿದ್ದು, ಬಾಲಿವುಡ್ ಪ್ರತಿಭಾವಂತ ನಟ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎನ್ನುವ ಮೂಲಕ ಯಶ್ ಕಿರಾತಕ-2 ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಸಾಲದ ಸಮಸ್ಯೆಯಿಂದ ಹೊರಬರಲು ಪತ್ನಿಗೆ ಗುಂಡಿಕ್ಕಿ ಕೊಂದೆ: ಉದ್ಯಮಿ ಗಣೇಶ್

ಬೆಂಗಳೂರು: ಪತ್ನಿಗೆ ಗುಂಡಿಕ್ಕಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಉದ್ಯಮಿ ಗಣೇಶ್ ತನ್ನ ಇಬ್ಬರು ಮಕ್ಕಳ ಮೇಲೂ ಗುಂಡು ಹಾರಿಸಿ ಕೊಲೆ ಮಾಡಲು ಯತ್ನಿಸಿದ್ದು, ಪೊಲೀಸರು ಬಿಡದಿ ಬಳಿ ಗಣೇಶ್‌ನನ್ನು ಬಂಧಿಸಿದ್ದಾರೆ.

ನಿನ್ನೆ ರಾತ್ರಿ ತನ್ನ ಪತ್ನಿ ಸಹನಾ (42) ಳನ್ನು ಗುಂಡಿಕ್ಕಿ ಕೊಲೆ ಮಾಡಿ, ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಉದ್ಯಮಿ ಗಣೇಶ್ ಪರಾರಿಯಾಗಿದ್ದ. ಬಿಡದಿ ಬಳಿಯ ಬನಗಿರಿ ಯಲ್ಲಿ ತಲೆ ಮರಿಸಿಕೊಂಡಿದ್ದ ಉದ್ಯಮಿ ಗಣೇಶ್ ಮತ್ತು ಮಕ್ಕಳನ್ನು ಬಂಧಿಸಲು ಪೊಲೀಸರು ಹೋದಾಗ ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ಳುವ ಪ್ಲಾನ್ ಮಾಡಿ ಮಕ್ಕಳ ಮೇಲೆ ಗಣೇಶ್ ಗುಂಡು ಹಾರಿಸಿದ್ದಾನೆ.

ಮಗಳ ಹೊಟ್ಟೆಗೆ ಹಾಗೂ ಮಗನ ಕೈ ಮತ್ತು ತೊಡೆ ಭಾಗಕ್ಕೆ ಗುಂಡು ತಗುಲಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಕ್ಕಳಿಬ್ಬರನ್ನ ಆಸ್ಪತ್ರೆ ಗೆ ಸೇರಿಸಲಾಗಿದೆ. ಅದೃಷ್ಟ ವಶಾತ್ ಮಕ್ಕಳಿಬ್ಬರು ಪ್ರಣಾಪಾಯದಿಂದ ಪಾರಾಗಿದ್ದಾರೆ.

ನನಗೆ ಸಾಲದ ಸಮಸ್ಯೆ ಇತ್ತು ಅದಕ್ಕಾಗಿ ಆಸ್ತಿ ಮಾರಾಟ ಮಾಡಲು ಪ್ರಯತ್ನ ಮಾಡ್ತಿದ್ದೆ. ಆದ್ರೆ, ಆಸ್ತಿ ಮಾರಾಟ ಮಾಡಲು ಪತ್ನಿ ಒಪ್ಪಿರಲಿಲ್ಲ. ಆಸ್ತಿ ಮಾರಾಟ ಮಾಡಿದರೆ ಮಕ್ಕಳು ಬೀದಿಗೆ ಬೀಳ್ತಾರೆ ಅಂತ ಹಠ ಹಿಡಿದಿದ್ದಳು.
ಮಕ್ಕಳಿಗಾಗಿ ನಾನು ಜೀವ ಕಳೆದುಕೊಳ್ಳುವ ರೀತಿ ಇರ್ಲಿಲ್ಲ. ಅದಕ್ಕಾಗಿ ನಾನು ಈ ಕೃತ್ಯ ಮಾಡಿದೆ ಎಂದು ಗಣೇಶ್ ತಪ್ಪೊಪ್ಪಿಕೊಂಡಿದ್ದಾನೆ.

ಗೌರಿ ಹತ್ಯೆ ಪ್ರಕರಣ: ಎಸ್‌ಐಟಿ ವಿರುದ್ಧ ಸಿಡಿದೆದ್ದ ಸನಾತನ ಸಂಸ್ಥೆ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ಅಧಿಕಾರಿಗಳು ಆರೋಪಿಗಳಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾರೆ. ಅಲ್ಲದೆ, ಹಿಂದೂ ಸಂಘಟನೆಗಳನ್ನ ಟಾರ್ಗೆಟ್ ಮಾಡಿ ಕೆಲ ಅಮಾಯಕರನ್ನ ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ ಎಂದು ಎಸ್ ಐಟಿ ವಿರುದ್ಧ ಸನಾತನ ಸಂಸ್ಥೆ ಆರೋಪಿಸಿದೆ.

ಎಸ್ ಐಟಿ ಅಧಿಕಾರಿಗಳ ವಿರುದ್ಧ ಪತ್ರಿಕಾ ಪ್ರಕಟಣೆಯಲ್ಲಿ ವಿರುದ್ಧ ಹರಿಹಾಯ್ದಿರೋ ಸನಾತನ ಸಂಸ್ಥೆ, ರಾಜಕೀಯ ಒತ್ತಡದಿಂದ ಎಸ್ ಐಟಿ ಅಧಿಕಾರಿಗಳು ಕಾನೂನು ವಿರುದ್ಧವಾಗಿ ಹಿಂದೂ ಸಂಘಟನೆಗಳ ಕೆಲ ಅಮಾಯಕರನ್ನ ಬಂಧಿಸಿದ್ದಾರೆ. ಮತ್ತು ಅವರಿಗೆ ಕಿರುಕುಳ ನೀಡಿ ಪ್ರಕರಣದಲ್ಲಿ ಸಿಲುಕಿಸುವ ಯತ್ನ ಮಾಡುತ್ತಿದ್ದಾರೆ. ನಾವು ಇದನ್ನು ಇಲ್ಲಿಗೆ ಬಿಡಿವುದಿಲ್ಲ, ಎಸ್ ಐಟಿ ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಉನ್ನತ ಶಿಕ್ಷಣ ಇಲಾಖೆ ಜವಬ್ದಾರಿ ವಹಿಸಿಕೊಂಡ ಜಿಟಿಡಿ!

ಬೆಂಗಳೂರು‬: ನಾನು ಉನ್ನತ ಶಿಕ್ಷಣ ಮಾಡಿಲ್ಲ, ನನಗೆ ಉನ್ನತ ಶಿಕ್ಷಣ ಇಲಾಖೆ ಬೇಡ ಎಂದು ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದ ಉನ್ನತ ಶಿಕ್ಷಣ ಖಾತೆ ಸಚಿವ ಜಿ.ಟಿ. ದೇವೇಗೌಡ ಇಂದು ಕೊನೆಗೂ ಖಾತೆ ಜವಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 344 ರಲ್ಲಿ ಕುಟುಂಬ ಸಮೇತ ಬಂದು ಪೂಜೆ ನೆರವೇರಿಸಿ ಅಧಿಕೃತವಾಗಿ ಉನ್ನತ ಶಿಕ್ಷಣ ಇಲಾಖೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಪೂಜೆ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಜಿ.ಟಿ.ದೇವೇಗೌಡ, ನಾನು ಗ್ರಾಮೀಣ ಭಾಗದಿಂದ ಬಂದವನು. ಹಾಗಾಗಿ, ಗ್ರಾಮೀಣ ಪ್ರದೇಶದ ಜೊತೆ ಇರುವ ಖಾತೆ ಬೇಕು ಎಂದು ಬಯಸಿದ್ದು ನಿಜ. ಅಲ್ಲದೆ, 8 ನೇ ತರಗತಿ ವ್ಯಾಸಂಗ ಮಾಡಿರುವ ಜಿ.ಟಿ. ದೇವೆಗೌಡರು ಉನ್ನತ ಶಿಕ್ಷಣ ಇಲಾಖೆ ನಿರ್ವಹಿಸುತ್ತಾರಾ? ಎಂದು ಮಾಧ್ಯಮಗಳು ವರದಿ ಮಾಡಿದ್ವು. ಆದರೆ, ನಮ್ಮ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸಿದ್ದೇನೆ. ರಾಜ್ಯದ ವಿದ್ಯಾರ್ಥಿಗಳ ಉನ್ನತ ವಿಧ್ಯಾಭ್ಯಾಸಕ್ಕೂ ಹೆಚ್ಚಿನ ಗಮನ ನೀಡುತ್ತೇನೆ ಎಂದರು.

ಇಲಾಖೆ ಯಲ್ಲಿ ಸಾಕಷ್ಟು ಬದಲಾವಣೆ ಮಾಡಬೇಕಿದೆ.
ವಿಶ್ವವಿದ್ಯಾಲಯಗಳನ್ನು ನಗರ ಪ್ರದೇಶ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಬೇಕಿದೆ. ವೃತ್ತಿಪರ ಶಿಕ್ಷಣ ನೀಡಿ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಬೇಕು.
ಇನ್ಪೋಸಿಸ್ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವಂತಹ ವ್ಯವಸ್ಥೆ ತರಬೇಕಿದೆ ಎಂದು ಹೇಳಿದರು.