ಮಂಡ್ಯ ರೈತರಿಗೆ ಸಿಹಿ ಸುದ್ದಿ ನೀಡಿದ ಸರ್ಕಾರ!

ಮಂಡ್ಯ:ಸಕ್ಕರೆ ನಾಡಿನ ಅನ್ನದಾತರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ.ಬಿತ್ತನೆ ಕಾರ್ಯ ಮುಗಿಸಿ ಬೆಳೆ ರಕ್ಷಣೆಗೆ ಕೆ ಆರ್ ಎಸ್ ಜಲಾಶಯದ ಕಡೆ ಮುಖ ಮಾಡಿದ್ದ ರೈತರ ಮೊಗದಲ್ಲಿ ಸರ್ಕಾರದ ಆದೇಶ ಸಂತಸ ತಂದಿದೆ.

ಹೌದು, ವಿಶ್ವೇಶ್ವರಯ್ಯ ನಾಲೆಗೆ ಕೆ.ಆರ್.ಎಸ್ ಡ್ಯಾಂನಿಂದ ನೀರು ಬಿಡುಗಡೆ ಮಾಡಲಾಗಿದೆ. 3ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಜಲಸಂಪನ್ಮೂಲ ಇಲಾಖೆ ನೀಡಿದ್ದ ಸೂಚನೆಯನ್ವಯ ಸದ್ಯ 1500 ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು ರಾತ್ರಿ 10ಗಂಟೆ ಬಳಿಕ ಮತ್ತೆ 1500ಕ್ಯೂಸೆಕ್ ಬಿಡುಗಡೆ ಮಾಡಲಿದೆ.

ಮಂಡ್ಯ ರೈತರ ಮನವಿ ಮೇರೆಗೆ ನಾಲೆಗಳಿಗೆ ನೀರು ಹರಿಸುವಂತೆ ಮಧ್ಯಾಹ್ನವಷ್ಟೇ ಸಿಎಂ ಸೂಚಿಸಿದ್ದರು.ಈ ಹಿನ್ನಲೆಯಲ್ಲಿ ನೀರಾವತಿ ಇಲಾಖೆ ನೀರು ಬಿಟ್ಟಿದ್ದು,
ರೈತರ ಬೆಳೆ ರಕ್ಷಣೆಗೆ ಮುಂದಾದ ಸರ್ಕಾರ ನಿಲುವಿಗೆ ಮಂಡ್ಯ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.

ಹುಟ್ಟಿದ ಮೂರು ಗಂಟೆಯಲ್ಲೇ ತಾಯಿಗೆ ಬೇಡವಾದ ಹೆಣ್ಣು ಶಿಶು!

ಬೆಂಗಳೂರು: ಹುಟ್ಟಿದ ಮೂರ್ನಾಲ್ಕು ಗಂಟೆಯಲ್ಲಿ ನವಜಾತ ಹೆಣ್ಣು ಶಿಶುವನ್ನು ನಿರ್ದಯಿ ತಾಯಿಯೊಬ್ಬಳು ಮನೆಯೊಂದರ ಕಾಂಪೌಂಡ್‌ನಲ್ಲಿ ಬಿಸಾಡಿ ಹೋಗಿರುವ ಘಟನೆ ಬಾಣಸವಾಡಿಯಲ್ಲಿ ನಡೆದಿದೆ.

ಬಾಣಸವಾಡಿಯ ಸುಧಾ ಎಂಬುವವರ ಮನೆಯ ಕಾಪೌಂಡ್ ನಲ್ಲಿ ಶಿಶುವನ್ನು ಬಿಟ್ಟು ಹೋಗಿದ್ದು, ಸುಧಾ ಶಿಶುವನ್ನು ನೋಡಿದ ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ.
ಸ್ಥಳೀಯರ ಸಹಾಯದಿಂದ ಶಿಶುವನ್ನು ರಕ್ಷಣೆ ಮಾಡಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು‌, ನವಜಾತ ಹೆಣ್ಣು ಶಿಶುವನ್ನು ಬಿಟ್ಟು ಹೋಗಿರುವ ಪಾಪಿಗಳ ಬಗ್ಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಸುತ್ತಮುತ್ತ ಏರಿಯಾಗಳ ಸಿಸಿಟಿವಿ ಪರಿಶೀಲನೆ ಮಾಡಲಾಗುತ್ತಿದೆ.

ಬೆಂಗಳೂರು ಸಮಸ್ಯೆ ನಿವಾರಣೆಗೆ ಕೈಗಾರಿಕೆಗಳು ಸಲಹೆ ನೀಡಲಿ- ಡಿಸಿಎಂ ಪರಮೇಶ್ವರ್

ಬೆಂಗಳೂರು: ಕಸ, ಟ್ರಾಫಿಕ್, ಕೆರೆ ಹಾಗೂ ರಸ್ತೆ ಗುಂಡಿಗಳ ಸಮಸ್ಯೆಗಳನ್ನು ನಿವಾರಿಸಲು ಕೈಗಾರಿಕೆಗಳು ಸಲಹೆ ನೀಡುವ ಮೂಲಕ ತಮ್ಮ ಕೊಡುಗೆ ನೀಡಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಕರೆ ನೀಡಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಗುರುವಾರ ಎಫ್‌ಕೆಸಿಸಿಐ ಎಂ.ವಿ. ಸಭಾಂಗಣದಲ್ಲಿ ಆಯೋಜಿಸಿದ್ದ ಸಿಎಸ್‌ಆರ್ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ನ್ಯೂಯಾರ್ಕ್, ಯುಎಸ್‌ಗಳಲ್ಲಿಯೂ ಟ್ರಾಫಿಕ್ ಸಮಸ್ಯೆ ಇದೆ. ಆದರೆ ಎಲ್ಲರೂ ಬೆಂಗಳೂರು ಟ್ರಾಫಿಕ್ ಬಗ್ಗೆ ಮಾತನಾಡುತ್ತಾರೆ. ನಗರದ ಟ್ರಾಫಿಕ್ ಸಮಸ್ಯೆ ಜೊತೆಗೆ ಕಸ, ರಸ್ತೆ ಗುಂಡಿಯೂ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಕೈಗಾರಿಕೆಗಳ ಸಲಹೆ, ಸೂಚನೆ ಅಗತ್ಯವಿದೆ. ಹೀಗಾಗಿ ಎಲ್ಲ ಕೈಗಾರಿಕೆಗಳು ತಮ್ಮ ಸಲಹೆ ನೀಡುವಂತೆ ಹೇಳಿದರು. ನಗರದ ಈ ಮೂಲ ಸಮಸ್ಯೆ ಪರಿಹರಿಸದಿದ್ದರೆ ಮುಂದಿನ‌ ದಿನಗಳಲ್ಲಿ ಇನ್ನಷ್ಟು ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು ೭೧ ವರ್ಷಗಳು ಸಂದಿದ್ದು, ಕಡಿಮೆ ಅವಧಿಯಲ್ಲೇ ನಮ್ಮ ದೇಶ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ.

ಆದರೂ ಶೇ. ೩೮ ರಷ್ಟು ಬಡತನ ಈಗಲೂ ಇದೆ. ನಿರುದ್ಯೋಗ ಸಮಸ್ಯೆಯೂ ಹೆಚ್ಚುತ್ತಿದ್ದು,. ಇದಕ್ಕೆ ಕಾರಣ ಶಿಕ್ಷಣ ವ್ಯವಸ್ಥೆ. ಅಕಾಡೆಮಿ ಹಾಗೂ ಕೈಗಾರಿಕೆ ನಡುವೆ ಉತ್ತಮ ಹೊಂದಾಣಿಕೆ ಇಲ್ಲದ ಕಾರಣ ಶಿಕ್ಷಣ ಪಡೆದ ಎಷ್ಟೋ ಯುವಕರು ನಿರುದ್ಯೋಗಿಗಳಾಗಿದ್ದಾರೆ‌. ಹೀಗಾಗಿ, ಅಕಾಡೆಮಿ ಹಾಗೂ ಕೈಗಾರಿಕೆ ನಡುವೆ ಸೇತುವೆ ನಿರ್ಮಿಸಿ, ಯಾವ ರೀತಿಯ ಶಿಕ್ಷಣ ಬೇಕಿದೆ ಎಂಬುದನ್ನು ಕೈಗಾರಿಕೆಗಳು ಸಲಹೆ ನೀಡಿದರೆ ನಿರುದ್ಯೋಗ ಸಮಸ್ಯೆ ಕೂಡ ನಿವಾರಣೆಯಾಗಲಿದೆ. ಅಲ್ಲದೆ, ಶಿಕ್ಷಣ ವ್ಯವಸ್ಥೆಯ ಪಾಲಿಸಿ ಬದಲಾವಣೆ ಮಾಡಬೇಕಿದೆ ಎಂದು ಹೇಳಿದರು.

ಉನ್ನತ ಶಿಕ್ಷಣವಿಲ್ಲದ ನನಗೇಕೆ ಉನ್ನತ ಶಿಕ್ಷಣ ಖಾತೆ ಎಂದ ಜಿಟಿಡಿ ಹೆಗಲೇರಿದ ಖಾತೆ

ಬೆಂಗಳೂರು:ಕಡೆಗೂ ಉನ್ನತ ಶಿಕ್ಷಣ ಖಾತೆಯೇ ಸಚಿವ ಜಿ.ಟಿ ದೇವೇಗೌಡಗೆ ಪಕ್ಕಾ ಆಯಿತು.ವಿದ್ಯಾರ್ಹತೆ ನೆಪವೊಡ್ಡಿ ಉನ್ನತ ಶಿಕ್ಷಣ ಖಾತೆ ನಿರಾಕರಿಸಿದ್ದ ದೇವೇಗೌಡ ಅವರ ಮನವೊಲಿಸುವಲ್ಲಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ.

ಕುಮಾರಸ್ವಾಮಿ ನಿವಾಸಕ್ಕೆ ಇಂದು ಸಚಿವ ಜಿ.ಟಿ ದೇವೇಗೌಡ ಭೇಟಿ ನೀಡಿದ್ರು.ಖಾತೆ ಸಂಬಂಧ ಮಹತ್ವದ ಮಾತುಕತೆ ನಡೆಸಿದ್ರು,ಈ ವೇಳೆ ದೇವೇಗೌಡರ ಮನವೊಲಿಸಿದ ಸಿಎಂ ಯಾವುದೇ ಸಂದರ್ಭದಲ್ಲಿ ಬೇಕಾದ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿ ಉನ್ನತ ಶಿಕ್ಷಣ ಇಲಾಖೆ ಖಾತೆಯಲ್ಲೇ ಮುಂದುವರೆಯಿರಿ ಅಂತಾ ಸಲಹೆ ನೀಡಿದ್ರು.

ಇಲಾಖೆ ಬಗ್ಗೆ ಗೊಂದಲ ಬೇಡ ಇಲಾಖೆಯಲ್ಲಿ ಯಾವುದೇ ಸಮಸ್ಯೆ ಎದುರಾದ್ರೂ ಖುದ್ದಾಗಿ ಬಗೆಹರಿಸ್ತೀನಿ ಅಂತಾ ಭರವಸೆ ನೀಡುತ್ತಿದ್ದೇನೆ. ಹೀಗಾಗಿ ಶಿಕ್ಷಣ ಕಡಿಮೆ ಇದ್ದರೂ ಪರವಾಗಿಲ್ಲ, ಅನುಭವದ ಆಧಾರದಲ್ಲಿ ಜವಾಬ್ದಾರಿ ನಿರ್ವಹಿಸಬಹುದು ಎಂದು ಸಿಎಂ ಮನವೊಲಿಸಿದ್ರು.

ಖಾತೆ ಬದಲಾಯಿಸಿದರೆ ಮತ್ತೆ ಗೊಂದಲ ಉಂಟಾಗಲಿದೆ.ಬೇರೆ ಸಚಿವರ ಖಾತೆಯನ್ನೂ ಬದಲಿಸಬೇಕಾದ ಅನಿವಾರ್ಯತೆ ಎದುರಾಗತ್ತೆ ಹಾಗಾಗಿ ಈಗ ಇರುವ ಖಾತೆ ಜವಾಬ್ದಾರಿ ವಹಿಸಿಕೊಳ್ಳಿ ಎಂದು ಅವ್ರನ್ನ ಒಪ್ಪಿಸಿದ್ರು.

ಖಾತೆ ಹಂಚಿಕೆ ಮಾಡಿದರೂ ಉನ್ನತ ಶಿಕ್ಷಣ ಖಾತೆ ಜವಾಬ್ದಾರಿ ತೆಗೆದುಕೊಳ್ಳದೇ ಬೇರೆ ಖಾತೆಗೆ ಪಟ್ಟು ಹಿಡಿದಿದ್ದ ಸಚಿವ ಜಿ.ಟಿ ದೇವೇಗೌಡ ಸಿಎಂ ಸಲಹೆ ಪರಿಗಣಿಸಿ ಈ ಕ್ಷಣದಿಂದಲೇ ಇಲಾಖೆ ಜವಾಬ್ದಾರಿ ತೆಗೆದುಕೊಳ್ಳೋದಾಗಿ ಹೇಳಿದ್ರು.ಆ ಮೂಲಕ ಉನ್ನತ ಶಿಕ್ಷಣ ಖಾತೆ ಹಂಚಿಕೆ ಗೊಂದಲಕ್ಕೆ ತೆರೆ ಎಳೆದ್ರು.

ನಾಳೆ ಅಧಿಕೃತವಾಗಿ ಖಾತೆ ಜವಾಬ್ದಾರಿನ ಜಿಡಿಟಿ ವಹಿಸಿಕೊಳ್ತಾರೆ ಅಂತಾ ಸಿಎಂ ಕಚೇರಿ ಅಧಿಕೃತ ಪ್ರಕಟಣೆ ಹೊರಡಿಸಿದೆ.ಹಾಗಾಗಿ ಉನ್ನತ ಶಿಕ್ಷಣ ಸಚಿವ ಜಿಟಿಡಿ ಅವರೇ ಆಗಿ ಮುಂದುವರೀತಾರೆ.

ಬಿಜಿಎಸ್ ಆಸ್ಪತ್ರೆಗೆ ಸಿದ್ದಗಂಗಾ ಶ್ರೀಗಳು

ಬೆಂಗಳೂರು: ಪಿತ್ತನಾಳದಲ್ಲಿ ಸ್ಟಂಟ್ ಅಳವಡಿಸಿ ಆರು ತಿಂಗಳಾದ ಹಿನ್ನಲೆಯಲ್ಲಿ ಶತಾಯುಷಿ ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ಜನರಲ್ ಚೆಕ್ ಅಪ್ ಗಾಗಿ ಬಿಜಿಎಸ್ ಆಸ್ಪತ್ರೆಗೆ ಆಗಮಿಸಿದ್ದಾರೆ.

ಕೆಂಗೇರಿ ಬಳಿಯ ಬಿಜಿಎಸ್ ಆಸ್ಪತ್ರೆಗೆ ಮುಂಜಾನೆ ಆಗಮಿಸಿದ ಶ್ರೀಗಳು‌ ಕಾರಿನಿಂದ ಇಳಿದು ವ್ಹೀಲ್ ಚೇರ್ ನಿರಾಕರಿಸಿ ನಡೆದುಕೊಂಡೇ ಆಸ್ಪತ್ರೆ ಒಳಗೆ ಹೋದರು. ಜನವರಿ 27 ರಂದು ಬಿಜಿಎಸ್ ಗೆ ದಾಖಲಾಗಿದ್ದ ಶ್ರೀಗಳಿಗೆ ಮೂರು ಸ್ಟಂಟ್ ಅಳವಡಿಸಲಾಗಿತ್ತು. ಅದಕ್ಕೂ ಮುನ್ನ 5 ಸ್ಟಂಟ್ ಸೇರಿ ಒಟ್ಟು 8 ಸ್ಟಂಟ್ ಅಳವಡಿಸಲಾಗಿದೆ. ಸ್ಟಂಟ್ ಅಳವಡಿಸಿ ಆರು ತಿಂಗಳಾದ ಕಾರಣ ಜನರಲ್ ಚೆಕ್ ಅಪ್ ಗಾಗಿ ಶ್ರೀಗಳು ಆಸ್ಪತ್ರೆಗೆ ಆಗಮಿಸಿದ್ದಾರೆ.

ಹಿರಿಯ ಶ್ರೀಗಳ ಜೊತೆ ಕಿರಿಯ ಶ್ರೀಗಳು ಕೂಡ ಆಸ್ಪತ್ರೆಗೆ ಆಗಮಿಸಿದ್ದು ಮಠದಿಂದಲೇ ಶ್ರೀಗಳಿಗೆ ಉಪಹಾರ ವ್ಯವಸ್ಥೆ ಮಾಡಲಾಗಿದೆ.

ಭೀಕರ ಅಪಘಾತ: ಒಂದೇ ಕುಟುಂಬದ 15 ಮಂದಿ ದುರ್ಮರಣ

ಮಧ್ಯಪ್ರದೇಶ : ಟ್ರ್ಯಾಕ್ಟರ್‌ ಟ್ರಾಲಿಯೊಂದು ಜೀಪಿಗೆ ಡಿಕ್ಕಿ ಹೊಡೆದ ಪರಿಣಾಮ 5 ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ 15 ಮಂದಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಮೊರೆನಾ ಬಳಿ ಗ್ರಾಮವೊಂದರಲ್ಲಿ ನಡೆದಿದೆ.

ಇತ್ತೀಚೆಗೆ ಅಗಲಿದ ತಮ್ಮ ಕುಟುಂಬದ ಸದಸ್ಯರೊಬ್ಬರ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಒಂದೇ ಜೀಪಿನಲ್ಲಿ ಸುಮಾರು ಇಪ್ಪತ್ತು ಮಂದಿ ಪ್ರಯಾಣಿಸುತ್ತಿದ್ದರು. ಈ ಜೀಪಿಗೆ ಬೆಳಗ್ಗೆ 5.30ರ ಸುಮಾರಿಗೆ ಗಂಜ್ರಾಮ್‌ಪುರ ಗ್ರಾಮ ಸಮೀಪದಲ್ಲಿ ಎದುರಿನಿಂದ ಬರುತ್ತಿದ್ದ ಟ್ರ್ಯಾಕ್ಟರ್‌ ಟ್ರಾಲಿ ತಿರುವುನಲ್ಲಿ ಡಿಕ್ಕಿ ಹೊಡೆದ ಪರಿಣಾಮ 15 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 8 ಮಂದಿ ಗಾಯಗೊಂಡವರನ್ನು ಕೂಡಲೇ ಜಿಲ್ಲಾ ಅಸ್ಪತ್ರೆಗೆ ಸೇರಿಸಲಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.