ಡೆಹ್ರಾಡೂನ್ ನಲ್ಲಿ ಪ್ರಧಾನಿ ಮೋದಿಯಿಂದ ಯೋಗಪಾಠ

ಡೆಹ್ರಾಡೂನ್: ಇಂದು ವಿಶ್ವ ಯೋಗ ದಿನ.ನಾಲ್ಕನೇ ವರ್ಷದ ವಿಶ್ವ ಯೋಗ ದಿನಾಚರಣೆಯನ್ನು ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ಎಲ್ಲಾ ರಾಜ್ಯಗಳಲ್ಲಿಯೂ ಆಚರಿಸಲಾಯಿತು.ಡೆಹ್ರಾಡೂನ್ ನಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ದಾಮೋದರ್ ದಾದ್ ಮೋದಿ ಪಾಲ್ಗೊಂಡು‌ ಯೋಗದ ಮಹತ್ವ ಸಾರಿದರು.

ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ನಲ್ಲಿ ಅರಣ್ಯ ಸಂಶೋಧನಾ ಸಂಸ್ಥೆ ಆಯೋಜಿಸಿದ್ದ ಅಂತಾರಾಷ್ಟ್ರೀಯ‌ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ
ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡರು.50 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಸೇರಿದ್ದ ಜನರ ಜೊತೆಗೂಡಿ ಯೋಗಾಸನ ಮಾಡಿದರು. ವಿವಿಧ ಪಟ್ಟುಗಳ ಪ್ರದರ್ಶನದ ಮೂಲಕ ಗಮನ ಸೆಳೆದರು.

ನಂತರ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಮೋದಿ,
ಯೋಗದ ಮಹತ್ವ ತಿಳಿಸಿದರು. ಜಗತ್ತನ್ನು ಒಂದುಗೂಡಿಸುವ ಅತ್ಯುತ್ತಮ ಸಾಧನವಾಗಿ ಯೋಗ ಮಹತ್ವ ಪಡೆದುಕೊಂಡಿದೆ.
ಯೋಗದಿಂದ ಮಾನವನ ದೇಹ,ಮೆದುಳು ಮತ್ತು ಆತ್ಮ ಒಟ್ಟಿಗೆ ಬಂಧಿಯಾಗಲಿದೆ,ಯೋಗಾಸನ ಮಾಡುವುದರಿಂದ ಆರೋಗ್ಯವೂ ವೃದ್ಧಿಯಾಗಲಿದೆ ಹಾಗಾಗಿ ಎಲ್ಲರೂ ಯೋಗಾಭ್ಯಾಸ ರೂಢಿಸಿಕೊಳ್ಳಿ ಎಂದು ಕರೆ ನೀಡಿದರು.

ನಾನೇನು ಹವಾಲಾ ದಂಧೆ ನಡೆಸ್ತಿಲ್ಲ: ಡಿಕೆಶಿ

ಬೆಂಗಳೂರು: ನ್ಯಾಯಾಲಯದಿಂದ ನನಗೆ ಯಾವುದೇ ನೋಟೀಸ್ ಬಂದಿಲ್ಲ, ದೆಹಲಿಯಲ್ಲಿ ಪಿ.ಎ. ಆಂಜನೇಯ‌ ಮನೆಯಲ್ಲಿ‌ ಸಿಕ್ಕ ಹಣಕ್ಕೂ ನನಗೂ ಯಾವ ಸಂಬಂಧವೂ ಇಲ್ಲ. ನೀವೇ ಮಾದ್ಯಮಗಳಲ್ಲಿ ಜನರಿಗೆ ಬೇಕಾದ ರಂಜನೆ ಕೊಡ್ತಾ ಇದ್ದೀರ‌ ಕೊಡಿ ಎಂದು ಸಚಿವ ಡಿ.ಕೆ.ಶಿವಕುಮಾರ್ ಮಾಧ್ಯಮಗಳ ವಿರುದ್ಧ ಕಿಡಿ ಕಾರಿದರು.

ಬೆಂಗಳೂರಿನ ಸದಾಶಿವ ನಗರದ ಬಳಿ ಸುದ್ಧಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ನಿಜಕ್ಕೂ ನನಗೆ ಶಾಕ್ ಆಗಿದೆ. ನಾನು ಇದ್ಯಾವುದರ ಬಗ್ಗೆಯೂ ಮಾತನಾಡೊಲ್ಲ. ದೆಹಲಿಯಲ್ಲಿ ಎರಡು ಬೆಡ್ ರೂಂ ಫ್ಲಾಟ್ ಇದೆ, ಶೀಘ್ರದಲ್ಲೇ ಇನ್ನೊಂದು ಮನೆ ಉದ್ಘಾಟನೆ ಇದೆ. ಅದು ನಾನು ಆಗಾಗ ದೆಹಲಿಗೆ ಹೋದಾಗ ರೆಸ್ಟ್ ಮಾಡೋಕೆ ಇಟ್ಕೊಂಡಿರೋದು. ಅಲ್ಲಿ ಯಾವುದೇ ಹವಾಲಾ ದಂಧೆ ನಡೆಸ್ತಿಲ್ಲ. ನ್ಯಾಯಾಲಯದ ಮೇಲೆ ವಿಶ್ವಾಸವಿದೆ ತೀಕ್ಷವಾಗಿ ಪ್ರತಿಕ್ರಿಯೆ ನೀಡಿದರು.

ಬಿಜೆಪಿ ನಾಯಕರ ಬಗ್ಗೆ ಮಾತಾಡೋಕೆ ಸಾಕಷ್ಟು ವಿಷಯ ಇದೆ. ಶೋಭಾ ಕರಂದ್ಲಾಜೆ ಹೇಳಿಕೆಯ ಬಗ್ಗೆಯೂ ಪ್ರತಿಕ್ರಿಯೆ ನೀಡೊಲ್ಲ, ಅವರಿಗೆ ಆಲ್ ದಿ ಬೆಸ್ಟ್ ಹೇಳ್ತೀನಿ. ಬಿಜೆಪಿಯಲ್ಲಿ ಸಾಕಷ್ಟು ಉದ್ಯಮಿಗಳು, ಹೋಟೆಲ್ ಮಾಲಿಕರಿದ್ದಾರೆ. ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು ಇದ್ದಾರೆ. ಆದ್ರೆ ಎಲ್ಲದಕ್ಕೂ ಕಾಲ, ಶುಭಕಾಲ, ಶುಭ ಮಹೂರ್ತ ಬರಬೇಕು. ಈಗ ನಾನು ಇದ್ಯಾವುದರ ಬಗ್ಗೆಯೂ ಮಾತನಾಡೊಲ್ಲ. ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತೆ ಎಂದು ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.

ಡಿಸಿಎಂರಿಂದ ಬಹುಮಹಡಿ ವಾಹನ ನಿಲ್ದಾಣ ವೀಕ್ಷಣೆ!

ಬೆಂಗಳೂರು: ಸ್ವಾತಂತ್ರ್ಯ ಉದ್ಯಾನವನ ಬಹುಮಹಡಿ ವಾಹನ ನಿಲ್ದಾಣ ಕಾಮಗಾರಿ ಹಾಗೂ ಮಹಾರಾಜ ಕಾರು ನಿಲ್ದಾಣ ಕಾಮಗಾರಿ ಪ್ರಗತಿಯನ್ನು ಉಪಮುಖ್ಯಮಂತ್ರಿ ಹಾಗೂ‌ ನಗರಾಭಿದ್ಧಿ ಸಚಿವ ಡಾ.ಜಿ. ಪರಮೇಶ್ವರ ಅವರು ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಪರಮೇಶ್ವರ್, ನಗರದಲ್ಲಿನ ಪಾರ್ಕಿಂಗ್ ಸಮಸ್ಯೆ ನಿವಾರಣೆಗೆ ಫ್ರೀಡಂ ಪಾರ್ಕ್‌ನಲ್ಲಿ ಬಹುಮಹಡಿ ವಾಹನ ನಿಲ್ದಾಣ ನಿರ್ಮಿಸಲಾಗುತ್ತಿದ್ದು, ಮಾರ್ಚ್ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ. ೮೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಈ ನಿಲ್ದಾಣದಲ್ಲಿ ೫೦೦ ಕಾರು ಹಾಗೂ ೫೦೦ ಬೈಕ್ ನಿಲುಗಡೆಗೆ ಸಾಧ್ಯವಾಗುವ ರೀತಿ‌ ನಿರ್ಮಿಸಲಾಗುತ್ತಿದೆ.

ಕಾಮಗಾರಿ ಪ್ರಾರಂಭಗೊಂಡ ೨೪ ತಿಂಗಳಲ್ಲಿ ಮುಗಿಯಬೇಕಿತ್ತು. ಕಾಮಗಾರಿ ವೇಳೆ ಕಲ್ಲು ಸಿಕ್ಕಿರುವ ಕಾರಣ ನಿಧಾನವಾಗಿದೆ. ಮಾರ್ಚ್ ಕೊನೆಯ ವಾರದೊಳಗೆ ಕೆಲಸ ಮುಗಿಸುವಂತೆ ಅಧಿಕಾರಿಗಳು ಬರವಣಿಗೆ ಮೂಲಕ ಭರವಸೆ ನೀಡಿರುವುದರಿಂದ ತಡವಾಗುವ ಪ್ರಶ್ನೆ ಇಲ್ಲ ಎಂದಿದ್ದಾರೆ.

ಜೆಸಿ ರಸ್ತೆಯಲ್ಲೂ ಬಹುಮಹಡಿ ಪಾರ್ಕಿಂಗ್ ಕಾಮಗಾರಿ ನಡೆಯುತ್ತಿದ್ದು, ಅಲ್ಲಿಗೂ ಭೇಟಿ ನೀಡಲಿದ್ದೇನೆ. ತ್ವರಿತವಾಗಿ ಎಲ್ಲ ಪಾರ್ಕಿಂಗ್ ನಿಲ್ದಾಣಗಳ ಕಾಮಗಾರಿಗಳೂ ಶೀರ್ಘವೇ ಮುಗಿಯಲಿದೆ ಎಂದು ಭರವಸೆ ನೀಡಿದರು.

ವಿಶ್ವ ಯೋಗದಿನದಿಂದ ದೂರ ಉಳಿದ ಸಿಎಂ ಕುಮಾರಸ್ವಾಮಿ

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಗೈರುಹಾಜರಿಯಲ್ಲಿ ರಾಜ್ಯ ಸರ್ಕಾರದ ವತಿಯಿಂದ ಆರೋಗ್ಯ ಇಲಾಖೆ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಮಾಜಿ ಪ್ರಧಾನಿ ದೇವೇಗೌಡರು ಮನೆಯಲ್ಲಿ ಯೋಗಾಸನ ಮಾಡದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಕಚೇರಿ ಮುಂಭಾಗದಲ್ಲಿ‌ ಯೋಗಾಸನ ಮಾಡಿದರು.ಮಾಜಿ ಸಿಎಂ ಸಿದ್ದರಾಮಯ್ಯ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ‌ ಯೋಗ ಮಾಡಿದರು.ಆದರೆ ಸಿಎಂ ಕುಮಾರಸ್ವಾಮಿ ಮಾತ್ರ ಏಕೋ ಯೋಗಾಸನದಿಂದ ದೂರ ಉಳಿದರು.ಆರೋಗ್ಯ ಸಮಸ್ಯೆ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಆದರೂ ಸಿಎಂ ಅನುಪಸ್ಥಿತಿಯಲ್ಲಿಯೇ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ‌ ನಡೆದ ಯೋಗ ದಿನಾಚರಣೆಯಲ್ಲಿ ಮೇಯರ್ ಸಂಪತ್ ರಾಜ್, ಸಭಾಪತಿ ಡಿ.ಹೆಚ್.ಶಂಕಮೂರ್ತಿ,ಸಚಿವರಾದ ಯುಟಿ ಖಾದರ್, ಶಿವಾನಂದ ಪಾಟೀಲ್ ಸೇರಿದಂತೆ ಹಲವರು ಯೋಗಭ್ಯಾಸ ಮಾಡಿದರು.ಶ್ವಾಸಗುರು ವನಚಾನಂದ ಸ್ವಾಮೀಜಿ ಪ್ರಾಣಾಯಾಮ, ಧ್ಯಾನದ ಅಭ್ಯಾಸ ಮಾಡಿಸಿದರು. ಸಾವಿರಾರು ಸಂಖ್ಯೆಯ ಯೋಗಾಸಾಕ್ತರು ಭಾಗಿಯಾಗಿ ಯೋಗ ದಿನಕ್ಕೆ ಮೆರುಗು ನೀಡಿದರು.

ಪ್ರಧಾನಿ ಫಿಟ್ನೆಸ್ ಚಾಲೆಂಜ್‌ಗೆ ಯೋಗದ ಮೂಲಕ ಉತ್ತರ ನೀಡಿದ ದೊಡ್ಡಗೌಡರು!

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಫಿಟ್ನೆಸ್ ಚಾಲೆಂಜ್ ಹಾಕಿದ್ದೆ ಹಾಕಿದ್ದು ಎಲ್ಲಿ ನೋಡಿದರೂ ಯೋಗ ದಿನದ್ದೆ ಮಾತು.‌ಇದೀಗ ಪ್ರಧಾನ ಮಂತ್ರಿಗಳ ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿರುವ ಮಾಜಿ ಪ್ರಾಧಾನ ಮಂತ್ರಿ ಎಚ್.ಡಿ.ದೇವೇಗೌಡ ಅವರು ಮೊದಲ ಬಾರಿಗೆ ಬಹಿರಂಗವಾಗಿ ಯೋಗ ಮಾಡುವ ಮೂಲಕ ಪ್ರಧಾನಿ ಮೋದಿಯವರಿಗೆ ಉತ್ತರ ನೀಡಿದ್ದಾರೆ.

ಯೋಗ ದಿನದ ಅಂಗವಾಗಿ ಪದ್ಮನಾಭ ನಗರದ ತಮ್ಮ ನಿವಾಸದಲ್ಲಿ ದೇವೇಗೌಡರು ಬಹಿರಂಗವಾಗಿ ಯೋಗ ಪ್ರದರ್ಶಿಸಿದರು. ಇವರಿಗೆ ಯೋಗ ಗುರು ಕಾರ್ತಿಕ್ ಸಾಥ್ ನೀಡಿದರು. ಸರ್ವಾಂಗಾಸನ, ಹಲಾಸನ, ವೀರಾಸನ ಮುಂತಾದ ಕ್ಲಿಷ್ಟಕರ ಆಸನಗಳನ್ನು ಮಾಡುವ ಮೂಲಕ ಯುವ ಸಮೂದಾಯಕ್ಕೆ ಯೋಗದ ಮಹತ್ವ ಸಾರಿದರು.

ಯೋಗಾಸನದ ನಂತರ ಮಾತನಾಡಿದ ದೇವೇಗೌಡರು,
ಮೂರು ವರ್ಷದಿಂದ ಪ್ರಧಾನಿ ಮೋದಿ ಯೋಗ ದಿನಾಚರಣೆಯನ್ನು ಆಚರಣೆಗೆ ತಂದಿದ್ದಾರೆ. ಮೋದಿಯವರು ಈಗ ಯೋಗಕ್ಕೆ ಒಂದು ಸ್ವರೂಪ ನೀಡಿದ್ದಾರೆ. ಹಿಂದೆ ಋಷಿ, ಮುನಿಗಳು ತಮ್ಮ ಆರೋಗ್ಯವನ್ನು ಯೋಗಾ ದಿಂದ ಕಾಪಾಡಿಕೊಳ್ಳುತ್ತಿದ್ದರು. ಹೀಗಾಗಿಯೇ ಅವರು ೧೦೦-೨೦೦ ವರ್ಷ ಬದುಕುತ್ತಿದ್ದರು. ಈಗಲೂ ಇಂಥ ಸಾಧಕರು ಹಿಮಾಲಯ ಬದುಕಿದ್ದಾರೆ ಎಂದರು.

೨೩ನೇ ವಯಸ್ಸಿನಲ್ಲಿ ನಾನು ಕಾಂಟ್ರಾಕ್ಟ್ ಶುರು ಮಾಡಿದೆ. ಆಗ ಒಂದು ಸೈಕಲ್ ಇತ್ತು. ಬೆಳಗ್ಗೆ ೫ರಿಂದ ಕೆಲಸ ಶುರು ಮಾಡುತ್ತಿದ್ದೆ. ೭೦-೮೦ ಕಿ.ಮೀ ಸೈಕಲ್ ತುಳಿಯುತ್ತಿದ್ದೆ. ಇದಕ್ಕಿಂತ ವ್ಯಾಯಾಮ ಬೇಕೆ? ಮೊದಲಿನಿಂದಲೂ ನಾನು ಶ್ರಮ ಜೀವಿ, ಮಿತ ಆಹಾರಿ ಎಂದು ತಮ್ಮ ಆರೋಗ್ಯದ ಗುಟ್ಟು ಬಿಚ್ಚಿಟ್ಟರು.

ವಿದ್ಯಾರ್ಥಿಗಳ ವಿಕಾಸಕ್ಕೆ ವ್ಯಾಯಾಮ, ಯೋಗ ಅಗತ್ಯ. ಇದನ್ನು ಎಲ್ಲ ಶಾಲೆಗಳಲ್ಲಿ ಅನುಷ್ಠಾನಕ್ಕೆ ತರುವ ದಿಸೆಯಲ್ಲಿ ರಾಜ್ಯ ಸರಕಾರಕ್ಕೆ ಮನವಿ ಮಾಡುತ್ತೇನೆ. ಆದ್ರೆ, ಬೆಂಗಳೂರಿನಲ್ಲಿ ವ್ಯಾಯಾಮ ಮಾಡಕ್ಕೆ ಕೆಲವು ಶಾಲೆಗಳಲ್ಲಿ ಆಟದ ಮೈದಾನಗಳೇ ಇಲ್ಲ. ಆದ್ರೆ ನೂತನ ನೂತನ ಶಾಲೆ ಆರಂಭಿಸುವಾಗ ಕಡ್ಡಾಯವಾಗಿ ಆಟದ ಮೈದಾನ ಇರಲೇಬೇಕು ಈ ನಿಯಮವನ್ನು ಸರಕಾರ ಪಾಲಿಸಬೇಕು ಎಂದು ಸರ್ಕಾರಕ್ಕೆ ಕಿವಿ ಮಾತು ಹೇಳಿದರು.

ಜಿಜೆಪಿ ರಾಜ್ಯಾಧ್ಯಕ್ಷ ಬಿಎಸ್ವೈ ರಿಂದ ಭರ್ಜರಿ ಯೋಗ

ಬೆಂಗಳೂರು: ಇಂದು ವಿಶ್ವ ಯೋಗ ದಿನ. ನಾಲ್ಕನೇ ವಿಶ್ವ ಯೋಗ ದಿನಾಚರಣೆಯನ್ನ ಬಿಜೆಪಿ ಪಕ್ಷದ ವತಿಯಿಂದಲೂ ಯೋಗ ದಿನಾಚರಣೆ ಆಯೋಜಿಸಲಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ‌ ಸೇರಿದಂತೆ ಪಕ್ಷದ ಹಲವು ಮುಖಂಡರು ಯೋಗಾಸನ ಮಾಡಿ ಗಮನ ಸೆಳೆದರು.

ಬಿಜೆಪಿ ಕಛೇರಿಯಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ಮಹಿಳಾ‌ ಘಟಕದ ಅಧ್ಯಕ್ಷೆ ಭಾರತಿ ಶೆಟ್ಟಿ, ಮಂಜುಳಾ‌ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಯುವ ಪಡೆಯೊಂದಿಗೆ ಬಿಜೆಪಿ ಮುಖಂಡರು ಸೂರ್ಯ ನಮಸ್ಕಾರ, ಪ್ರಾಣಯಾಮ ಸೇರಿದಂತೆ ಯೋಗದ ವಿವಿಧ ಆಸನಗಳನ್ನು ಮಾಡುವ ಮೂಲಕ ಯೋಗ ದಿನಾಚರಣೆಯನ್ನು ಆಚರಿಸಿದರು. ಅದ್ರಲ್ಲೂ ಬಿಎಸ್ವೈ ಇಳಿ ವಯಸ್ಸಿನಲ್ಲೂ ಯುವ ಸಮೂಹದೊಂದಿಗೆ ಯೋಗದಲ್ಲಿ ತೊಡಗಿಕೊಂಡು ಗಮನ ಸೆಳೆದರು.

ಯೋಗ ಪ್ರದರ್ಶನದ ನಂತರ ವೇದಿಕೆಯಲ್ಲಿ ಮಾತನಾಡಿದ ಯಡಿಯೂರಪ್ಪ, ದೇಹ ದೇವಾಲಯವಿದ್ದಂತೆ ಅದನ್ನು ಶುದ್ದಿಯಾಗಿಟ್ಟುಕೊಳ್ಳಯವುದೇ ಯೋಗ. ಯೋಗ ಇಂದು ಜಾಗತಿಕ ಮನ್ನಣೆ ಪಡೆದಿದೆ, ಅಂತಾರಾಷ್ಟ್ರೀಯ ಯೋಗ ದಿನ ಎಂದು ವಿಶ್ವಸಂಸ್ಥೆ ಘೊಷಿಸಿದೆ. ಇದರ ಯಶಸ್ಸು ಮೋದಿಗೆ ಸಲ್ಲಬೇಕು. ಯೋಗ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನು ಆರೋಗ್ಯವಂತರನ್ನಾಗಿ ಮಾಡುವ ಅಗತ್ಯವಿದೆ. ದೈಹಿಕ ಮಾನಸಿಕ ಸದೃಡೆತೆ ಬೆಳೆಸಿಕೊಳ್ಳಬೇಕು. ಆರೋಗ್ಯ ಪೂರ್ಣ ಸಮಾಜ ನಿರ್ಮಾಣವಾಗಬೇಕು‌ ಯೋಗ ದಿನಕ್ಕೆ ಯೋಗಾಸನ ಮಾಡುವುದು ಸೀಮಿತವಾಗದು. ಯೋಗ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಬೇಕು ಎಂದು ಕರೆ ನೀಡಿದರು.