ಹೋರಾಟ ಬಿಟ್ಟು ಯೋಗಾಸನ ಮಾಡಿದ ವಾಟಾಳ್

ಬೆಂಗಳೂರು: ಕತ್ತೆಗಳ ಮೆರವಣಿಗೆ,ತಮಟೆ ಚಳವಳಿ,ರಸ್ತೆ ತಡೆ ಎಂದು ಸದಾ ಒಂದಿಲ್ಲೊಂದು ಹೋರಾಟದಲ್ಲೇ ಮುಳುಗಿರುತ್ತಿದ್ದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಇಂದು ಸ್ವಲ್ಪ ಡಿಫರೆಂಟ್ ಆಗಿ ಕಂಡು ಬಂದರು, ಯೋಗಾಸನ ಮಾಡಿ ಗಮನ ಸೆಳೆದರು.

ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಯೋಗ ಪ್ರದರ್ಶನ ಮಾಡಿದರು. ಸೂರ್ಯ ನಮಸ್ಕಾರ,ಪದ್ಮಾಸನ ಸೇರಿದಂತೆ ಯೋಗಾಸನದ ವಿವಿಧ ಭಂಗಿಗಳನ್ನು ಪ್ರದರ್ಶಿಸಿದರು. ಅರ್ಧ ಗಂಟೆ ಕಾಲ ಆಯಾಸವಿಲ್ಲದೇ ಯುವಕರು ನಾಚುವಂತೆ ಯೋಗ ಪಟುವಿನಂತೆ ಯೋಗಾಸನ ಮಾಡಿದರು.

ಪ್ರಧಾನು ನರೇಂದ್ರ ಮೋದಿ ಅವರ ಕನಸಿನ ಯೋಗ ದಿನಾಚರಣೆಗೆ ಮೆಚ್ಚುಗೆ ಸೂಚಿಸಿದ ವಾಟಾಳ್, ಮೋದಿ‌ ಉತ್ತಮ ಕೆಲಸ ಮಾಡಿದ್ದಾರೆ.ಆದರೆ ಯೋಗ ಸರ್ಕಾರಿ ಕಾರ್ಯಕ್ರಮ ಆಗಬಾರದು,ಎಲ್ಲರೂ ಅವರವರ ಆರೋಗ್ಯದ ದೃಷ್ಠಿಯಿಂದ ಯೋಗಾಭ್ಯಾದ ಮಾಡಬೇಕು,ವಯೋಮಾನದ ಬೇಧವಿಲ್ಲದೇ ಎಲ್ಲರೂ ಯೋಗಾಸನ ಮಾಡುವುದನ್ನು ಕಲಿಯಿರಿ ಎಂದು ವಾಟಾಳ್ ಕರೆ ನೀಡಿದರು.

ನಮ್ಮ ಕುಟುಂಬ ಯೋಗಪ್ರಿಯ ಕುಟುಂಬ: ಕುಮಾರಸ್ವಾಮಿ

ಬೆಂಗಳೂರು:ಯೋಗ ಎನ್ನುವುದು ನನಗೆ ಪ್ರಿಯಯಾದ ಸಂಗತಿಗಳಲ್ಲೊಂದು,ನನ್ನ ಕುಟುಂಬ ಮೊದಲಿನಿಂದಲೂ ಯೋಗಾಭ್ಯಾಸ ನಡೆಸುತ್ತಾ ಬಂದಿದೆ. ನನ್ನ ತಂದೆ ಹಾಗೂ ನನ್ನ ಪತ್ನಿ ಸಹಾ ಯೋಗಪ್ರಿಯರು ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ನಾಲ್ಕನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಶುಭಾಷಯಗಳೊಂದಿಗೆ ಜನತೆಗೆ ಯೋಗದ ಮಹತ್ವವನ್ನೊಳಗೊಂಡ ಸಂದೇಶವನ್ನು ಸಾರಿದ್ದಾರೆ.ಸ್ವಾಮಿ ವಿವೇಕಾನಂದರು ‘ಅಭ್ಯಾಸದಿಂದ ಯೋಗ ಸಾಧ್ಯ. ಯೋಗದಿಂದ ಜ್ಞಾನ, ಜ್ಞಾನದಿಂದ ಪ್ರೀತಿ, ಪ್ರೀತಿಯಿಂದ ಸಂತೋಷ ಪ್ರಾಪ್ತವಾಗುತ್ತದೆ’ ಎಂದಿದ್ದರು. ಅಂತಹ ಸಂತೋಷವನ್ನು ಪಡೆಯಲು ಯೋಗ ಅಗತ್ಯವಾಗಿದೆ ಎಂದು ಸಂದೇಶ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಯೋಗ ಎನ್ನುವುದು ದೇಹ ಹಾಗೂ ಮನಸ್ಸನು ಸದಾ ಕ್ರಿಯಾಶೀಲವಾಗಿಡುವ ಮಾರ್ಗ. ಯೋಗ ನಮ್ಮಲ್ಲಿರುವ ತಾಮಸವನ್ನು ಕಡಿಮೆ ಮಾಡಿ ಬೆಳಕಿನ ಭಾವವನ್ನು ಹೆಚ್ಚಿಸುತ್ತದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮನ್ನು ನಾವು ಕ್ರಿಯಾಶೀಲವಾಗಿಟ್ಟುಕೊಳ್ಳಲು, ಶಾಂತ ಮನಸ್ಸನ್ನು ಹೊಂದಲು ಯೋಗ ಅಗತ್ಯ.ಯೋಗ ಭಾರತ ಜಗತ್ತಿಗೆ ನೀಡಿರುವ ಕೊಡುಗೆ. ಇದನ್ನು ವಿಶ್ವಸಂಸ್ಥೆಯೂ ಸಹಾ ಗುರುತಿಸಿ ಅದನ್ನು ಪ್ರಚುರಪಡಿಸಲೆಂದೇ ‘ವಿಶ್ವ ಯೋಗ ದಿನಾಚರಣೆಯನ್ನು’ ಆಚರಿಸುವ ವ್ಯವಸ್ಥೆ ಮಾಡಿತು. 2015ರಿಂದ ಆರಂಭವಾದ ಈ ದಿನಾಚರಣೆ ಜಗತ್ತಿನ ಅನೇಕ ದೇಶಗಳಿಗೆ ಸ್ಫೂರ್ತಿ ತುಂಬಿದೆ. ಅಷ್ಟೇ ಅಲ್ಲ ಭಾರತದ ಯೋಗ ಪರಂಪರೆಯ ಹಿರಿಮೆಯ ಬಗ್ಗೆಯೂ ಕಣ್ಣೋಟ ನೀಡಿದೆ.

ಯೋಗದ ಮಹತ್ವವನ್ನು ಜಗತ್ತಿಗೆ ಅರಿವು ಮಾಡಿಸುವ ಉದ್ಧೇಶದಿಂದ ಮೈಸೂರಿನಲ್ಲಿ ಪ್ರತೀ ವರ್ಷ ಯೋಗದಲ್ಲಿ ಗಿನ್ನೆಸ್ ದಾಖಲೆ ಸ್ಥಾಪಿಸುವ ಪ್ರಯತ್ನ ನಡೆಯುತ್ತಿದೆ. ಅಂತೆಯೇ ಈ ವರ್ಷವೂ ಸಂಘ ಸಂಸ್ಥೆಗಳು ಒಗ್ಗೂಡಿ ಗಿನ್ನೆಸ್ ದಾಖಲೆ ಸ್ಥಾಪನೆಗೆ ಮುಂದಾಗಿದ್ದಾರೆ. ಅವರ ಪ್ರಯತ್ನ ಯಶಸ್ವಿಯಾಗಲಿ ಎಂದು ನಾನು ಹಾರೈಸುತ್ತೇನೆ,ಯೋಗ ದಿನಾಚರಣೆಯ ದಿನ ಮಾತ್ರವಲ್ಲದೆ ಪ್ರತೀ ದಿನ ಯೋಗಕ್ಕೆ ನಿಮ್ಮನ್ನು ಅರ್ಪಿಸಿಕೊಳ್ಳಿ ಎಂದು ಆಶಿಸುತ್ತೇನೆ ಎಂದು ಸಂದೇಶ ಪತ್ರದ ಮೂಲಕ ತಿಳಿಸಿದ್ದಾರೆ.

ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ನಾಗತಿಹಳ್ಳಿ ಚಂದ್ರಶೇಖರ್ ನೇಮಕ!

ಬೆಂಗಳೂರು: ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಅಧ್ಯಕ್ಷರಾಗಿ ನಾಗತಿಹಳ್ಳಿ ಚಂದ್ರಶೇಖರ್ ಅವರನ್ನು ನೇಮಕ ಮಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ.

ತಕ್ಷಣದಿಂದ ಜಾರಿಗೆ ಬರುವಂತೆ ನಾಗತಿಹಳ್ಳಿ ಚಂದ್ರಶೇಖರ್ ಅವರನ್ನು ಚಲನಚಿತ್ರ ಅಕಾಡೆಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಈ ಹಿಂದೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅಕಾಡೆಮಿ ಅಧ್ಯಕ್ಷರಾಗಿದ್ದರು.

ಜ್ಯಾತ್ಯಾತೀತವಾಗಿ, ಪಕ್ಷಾತೀತವಾಗಿ ನಾಡಪ್ರಭುವಿನ ಜಯಂತಿ ಆಚರಣೆ: ಡಿಕೆಶಿ

ಬೆಂಗಳೂರು: ಜ್ಯಾತ್ಯಾತೀತವಾಗಿ, ಪಕ್ಷಾತೀತವಾಗಿ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಇದೇ 27ರಂದು ಅರಮನೆ ಮೈದಾನದಲ್ಲಿ ಸರ್ಕಾರದ ವತಿಯಿಂದ ಆಚರಿಸಲಾಗುವುದು ಎಂದು ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ವಿಧಾನಸೌಧದಲ್ಲಿ ಇಂದು ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಸಂಬಂಧ ಪೂರ್ವಭಾವಿ ಸಭೆ ನಡೆಸಲಾಯಿತು. ಸಭೆಯ ನಂತರ ಮಾತನಾಡಿದ ಡಿ.ಕೆ.ಶಿವಕುಮಾರ್, ಬೆಂಗಳೂರಿನಲ್ಲಿರುವ ಕೆಂಪೇಗೌಡರ ನಾಲ್ಕು ಗಡಿ ಗೋಪುರಗಳಿಂದ ಬರುವ ಮೆರವಣಿಗೆಯು 11 ಗಂಟೆಯೊಳಗೆ ಸ್ವತಂತ್ರ ಉದ್ಯಾನವನದಲ್ಲಿ ಸಮಾವೇಶಗೊಳ್ಳಲಿದ್ದು, ಕಲಾತಂಡಗಳು ಸಾಂಸ್ಕೃತಿಕ ವೈಭವದಿಂದ ಕೂಡಿದ ಮೆರವಣಿಗೆ ಮೂಲಕ ಅರಮನೆ ಮೈದಾನದಲ್ಲಿ ಆಯೋಜಿಸಿರುವ ವೇದಿಕೆಗೆ ಬರಲಾಗುತ್ತದೆ ಎಂದು ಹೇಳಿದರು.

ಎಲ್ಲ ಸಮುದಾಯದ ಕಾರ್ಮಿಕರು, ವರ್ತಕರು, ಕೈಗಾರಿಕಾ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಶಾಸಕರಿಗೆ, ಪಾಲಿಕೆ ಸದಸ್ಯರಿಗೆ ಆಹ್ವಾನ ನೀಡಲಾಗುವುದು. ನಾಳೆಯಿಂದಲೇ ಕೆಂಪೇಗೌಡ ಜಯಂತಿ ಬಗ್ಗೆ ಜಾಹೀರಾತು ನೀಡಬೇಕು. ಕಳೆದ ಬಾರಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಕೆಂಪೇಗೌಡ ಜಯಂತಿ ಆಚರಣೆ ಮಾಡಲಾಗಿತ್ತು. ಹೆಚ್ಚು ಜನರು ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಸ್ಥಳಾವಕಾಶದ ಕೊರತೆಯಿಂದ ಮತ್ತು ಭದ್ರತೆಯ ದೃಷ್ಟಿಯಿಂದ ಈ ಬಾರಿ ಅರಮನೆ ಮೈದಾನದಲ್ಲಿ ಆಚರಣೆ ಮಾಡಲು ತೀರ್ಮಾನಿಸಲಾಗಿದೆ ಎಂದರು.

ಅದಮ್ಯ ಚೇತನದ ವತಿಯಿಂದ ಜೂನ್ 23 ರಂದು ಜಯನಗರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಬೆಂಗೂರು: ಪ್ರಧಾನಿ ಮೋದಿ ಅವರ ಆಶಯವನ್ನು ಜನ ಸಾಮಾನ್ಯರಿಗೆ ತಲುಪಿಸುವ ಗುರಿಯ ಹಿನ್ನಲೆಯಲ್ಲಿ ಜೂನ್ 23 ರಂದು ಜಯನಗರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಯೋಜಿಸಲಾಗಿದೆ ಎಂದು ಅದಮ್ಯ ಚೇತನ ಮುಖ್ಯಸ್ಥೆ ತೇಜಸ್ವೀನಿ ಅನಂತಕುಮಾರ್ ಹೇಳಿದ್ದಾರೆ.

ನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆಯ ತಾಲೀಮು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ 23 ರಂದು ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಅದಮ್ಯ ಚೇತನ ಹಾಗೂ ಬಿ ಎನ್ ಎಮ್ ಐ ಟಿ ಸಹಯೋಗದಲ್ಲಿ ಆಯೋಜಿಲಾಗಿರುವ ಈ ಕಾರ್ಯಕ್ರಮದಲ್ಲಿ 10 ಸಾವಿರ ಜನರು ಭಾಗವಹಿಸಲಿದ್ದಾರ ಎಂದರು.

ಕೇಂದ್ರ ಸಚಿವ ಅನಂತಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಚಕ್ರವರ್ತಿ ಸೂಲಿಬೆಲೆ ಅವರು ಅಂದು ಯೋಗದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಪರಿಷತ್ ಸದಸ್ಯೆ ತಾರಾ ಅನುರಾಧಾ, ಶಾಸಕರಾದ ರವಿ ಸುಬ್ರಮಣ್ಯ ಹಾಗೂ ಉದಯ ಗರಢಾಚಾರ್, ಬಿ ಎನ್ ಎಮ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀ ನಾರಾಯಣ ರಾವ್ ಆರ್ ಮಾನೆ ಅವರು ಪಾಲ್ಗೊಳ್ಳಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ 50 ಕ್ಕೂ ಹೆಚ್ಚು ಶಾಲೆಯ ಮಕ್ಕಳು ಭಾಗಿಯಾಗಲಿದ್ದಾರೆ. ಸರಕಾರಿ ಶಾಲೆಯ ಮಕ್ಕಳಿಗೆ ಆದ್ಯತೆ ನೀಡಲಾಗಿದ್ದು, ಜನ ಸಾಮಾನ್ಯರೂ ಕೂಡಾ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದಾಗಿದೆ.

ಇಂದು ನಡೆದ ಪೂರ್ವ ತಾಲೀಮು ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಜನರು ಪಾಲ್ಗೊಂಡಿದ್ದರು.

ಇನ್ಮುಂದೆ ಪಾರ್ಕಿಂಗ್ ಜಾಗವಿದ್ರೆ ಮಾತ್ರ ಕಾರು ನೋಂದಣಿ:ಹೊಸ ನಿಯಮ ಜಾರಿಗೆ ಚಿಂತನೆ

ಬೆಂಗಳೂರು: ಸ್ವಂತ ಕಾರು ಖರೀದಿ ಮಾಡಬೇಕೆಂದುಕೊಂಡಿದ್ರೆ ಮೊದಲು ಕಾರ್ ಪಾರ್ಕಿಂಗ್ ಗೆ ಜಾಗ ಹುಡುಕಲು ಶುರುಮಾಡಿ, ಇಲ್ಲದಿದ್ರೆ ನಿಮ್ಮ ಕಾರು ನೋಂದಣಿಯೇ ಆಗಲ್ಲ.

ಸಿಲಿಕಾನ್ ಸಿಟಿಯಲ್ಲಿ ಅಲ್ಪಸ್ವಲ್ಪ ಹಣ ಕೂಡಿಟ್ಟು ಇಎಂಐ ಕಟ್ಟಿ ಕಾರು ಖರೀದಿಸಬೇಕು ಎನ್ನುವವರ ಸಂಖ್ಯೆ ದೊಡ್ಡದಿದೆ,ಆದ್ರೆ ಅವರಿಗೆಲ್ಲಾ ಸಾರಿಗೆ ಇಲಾಖೆ ಶಾಕ್ ನೀಡಿದೆ.ಹೊಸ ಕಾರು ಕೊಳ್ಳುವವರ ಮನೆ ಮುಂದೆ ಕಾರ್ ಪಾರ್ಕಿಂಗ್ ಗೆ ಜಾಗ ಇದ್ರೆ ಮಾತ್ರ ನೋಂದಣಿ, ಪಾರ್ಕಿಂಗ್ ಗೆ ಜಾಗ ಇಲ್ಲದಿದ್ದರೆ ಕಾರು ನೋಂದಣಿಗೆ ಅವಕಾಶ ಇಲ್ಲ ಇಂತಹ ನಿಯಮ ತರಲು ಸಾರಿಗೆ ಇಲಾಖೆ ಚಿಂತನೆ ನಡೆಸಿದೆ.

ಬೆಂಗಳೂರಿನಲ್ಲಿ ಪಾರ್ಕಿಂಗ್, ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ,ಮನೆ ಮುಂದಿನ ಫುಟ್ ಪಾತ್ ಮೇಲೆ ಕಾರು ನಿಲ್ಲಿಸುತ್ತಿರುವ ಕಾರಣ ಸಂಚಾರಕ್ಕೆ ಸಾಕಷ್ಟು ಅಡಚಣೆಯಾಗುತ್ತಿದೆ, ಇದಕ್ಕೆ ಕಡಿವಾಣ ಹಾಕಲು ಇಂತಹ ನಿಯಮ ತರಲು ಚಿಂತನೆ ನಡೆಸಿದ್ದು, ಸಾರ್ವಜನಿಕರ ಜೊತೆ ಚರ್ಚೆ ನಡೆಸಿ ನಿಯಮ ರೂಪಿಸಲಿದೆ.

ಒಂದು ವೇಳೆ ಸರ್ಕಾರ ಈ ನಿಯಮ ಜಾರಿಗೆ ತಂದಿದ್ದೇ ಆದಲ್ಲಿ ನಗರದಲ್ಲಿನ ಕಾರು ಮಾರಾಟ ಗಣನೀಯ‌ ಪ್ರಮಾಣದಲ್ಲಿ ಕುಸಿಯುವುದು ಗ್ಯಾರಂಟಿ.ಬೇರೆ ಜಿಲ್ಲೆಗಳಲ್ಲಿ ವಾಹನ ನೋಂದಾಯಿಸಿಕೊಂಡು ನಗರಕ್ಕೆ ಕಾರುಗಳನ್ನು ತರುವ ಪರ್ಯಾಯ ಆಯ್ಕೆಗೆ ಜನ ಹೋಗುವ ಸಾಧ್ಯತೆ ಇದೆ.ಇದನ್ನೆಲ್ಲಾ ಹೇಗೆ ನಿಯಂತ್ರಿಸಬೇಕು ಎನ್ನುವ ಕುರಿತು ಸಾರಿಗೆ ಇಲಾಖೆ ಚರ್ಚೆ ನಡೆಸಲಿದೆ.