ವೃಷಬಾವತಿ ನದಿಯ ಕೊಳಚೆ ನೀರು ಶುದ್ಧೀಕರಿಸಿ ಕೃಷಿಗೆ ಹರಿಸಲು 1500 ಕೋಟಿ ಯೋಜನೆ; ಯೋಗೇಶ್ವರ್

ಬೆಂಗಳೂರು: ವೃಷಬಾವತಿ ನದಿಯ ಕೊಳಚೆ ನೀರನ್ನು ಮುಂದಿನ 5 ವರ್ಷಗಳಲ್ಲಿ ರೂ.1500 ಕೋಟಿಗಳ ವೆಚ್ಚದಲ್ಲಿ ಮೂರನೇ ಹಂತದಲ್ಲಿ ಸಂಸ್ಕರಣೆ ಮಾಡಿ ಕೃಷಿಗೆ ಹಾಗೂ ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಅನುಷ್ಟಾನಗೊಳಿಸುವುದಾಗಿ ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಸಿ.ಪಿ.ಯೋಗೇಶ್ವರ ರವರು ಬಿಡದಿಯ ಈಗಲ್ಟನ್‍ ರೆಸಾರ್ಟನಲ್ಲಿ ನಡೆದ ಮಾಧ್ಯಮ ಗೋಷ್ಟಿಯಲ್ಲಿ ಪ್ರಕಟಿಸಿದ್ದಾರೆ.

ಸಚಿವ ಯೋಗೇಶ‍್ವರ ರವರು ಇಂದು ಬೆಳಿಗ್ಗೆ ಬೆಂಗಳೂರಿನ ಮೈಸೂರು ರಸ್ತೆಯ ಶ್ರೀ ಗಾಳಿ ಆಂಜನೇಯ ದೇವಾಲಯದಿಂದ ಬಿಡದಿಯ ಬೈರಮಂಗಲ ಕೆರೆಯವರೆಗೂ ವೃಷಬಾವತಿ ನದಿಯನ್ನು ಪರಿಶೀಲಿಸಿದರು. ಬೆಂಗಳೂರು ಜಲ ಮಂಡಳಿ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಬೃಹತ್‍ ಬೆಂಗಳೂರು ಮಹಾನಗರ ಪಾಲಿಕೆ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ಬೆಂಗಳೂರು ನಗರದ ಶೇ.40 ರಷ್ಟು ತ್ಯಾಜ್ಯ ನೀರು ವೃಷಬಾವತಿ ನದಿ ಮೂಲಕ ಬಿಡದಿಯ ಬೈರಮಂಗಲ ಕೆರೆಗೆ ಸೇರುತ್ತೀದೆ. ಪ್ರಸಕ್ತ ಕೇವಲ ಎರಡು ಹಂತದಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಲಾಗುತ್ತಿದ್ದು, ಈ ನೀರು ಕೃಷಿ ಸೇರಿದಂತೆ ಯಾವುದಕ್ಕೂ ಬಳಸಲು ಸಾಧ್ಯವಿಲ್ಲ. ಇನ್ನೊಂದೆಡೆ ಸಂಸ್ಕರಣೆ ಮಾಡಿದ ನೀರನ್ನು ಚರಂಡಿಗಳಿಗೆ ಹರಿಸುತ್ತಿದ್ದು, ಯಾವುದೇ ಪ್ರಯೋಜನಕ್ಕೆ ಬರುತ್ತಿಲ್ಲ.

ಬೆಂಗಳೂರು ನಗರದ ವೃಷಬಾವತಿ ಕಣಿವೆ ವ್ಯಾಪ್ತಿಯಲ್ಲಿ ಹರಿಯುವ 1500 ಎಂ.ಎಲ್‍.ಡಿ ತ್ಯಾಜ್ಯ ನೀರನ್ನು ಮೂರು ಹಂತಗಳಲ್ಲಿ ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಣೆ ಮಾಡಿ, ಕೆರೆಗಳನ್ನು ತುಂಬಿಸುವುದು ಹಾಗೂ ಕೃಷಿ ಚಟುವಟಿಕೆಗಳಿಗೆ ಬಳಸುವುದು ನಮ್ಮ ಉದ್ದೇಶವಾಗಿದೆ. ಒಂದು ಎಂ.ಎಲ್‍.ಡಿ ತ್ಯಾಜ್ಯ ನೀರನ್ನು ಮೂರನೇ ಹಂತದಲ್ಲಿ ಸಂಸ್ಕರಣೆ ಮಾಡಲು ರೂ.1.00 ಕೋಟಿ ವೆಚ್ಚವಾಗುತ್ತದೆ. 1500 ಎಂ.ಎಲ್‍.ಡಿ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಲು ರೂ.1500.00 ಕೋಟಿ ವೆಚ್ಚವಾಗಲಿದ್ದು, 3-5 ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ. ಆನಂತರ ಕುಡಿಯುವುದಕ್ಕೆ ಹೊರತುಪಡಿಸಿ, ಬೇರೆ ಎಲ್ಲಾ ಚಟುವಟಿಕೆಗಳಿಗೆ ಈ ಶುದ್ಧ ನೀರನ್ನು ಬಳಸಬಹುದಾಗಿದೆ ಎಂದು ಸಚಿವರು ಇದೇ ವೇಳೆ ವಿವರಿಸಿದ್ದಾರೆ.

ಬಸವನಗುಡಿಯಲ್ಲಿ ಹುಟ್ಟುವ ವೃಷಬಾವತಿ ನದಿ ಬಿಡದಿಯ ಬೈರಮಂಗಲ ಕೆರೆಗೆ ತಲುಪುತ್ತದೆ. ನಾಯಂಡನಹಳ್ಳಿ ಹಾಗೂ ಮೈಲಸಂಧ್ರದಲ್ಲಿ ಇದಿಗ ಎರಡು ಹಂತಗಳಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಲಾಗುತ್ತಿದೆ. ಬೆಂಗಳೂರು ವಿಶ್ವವಿದ್ಯಾಲಯ 600 ಪ್ರದೇಶದಲ್ಲಿದ್ದು, ಅಲ್ಲಿಯೂ ಸಹ ಒಂದು ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು ಅಳವಡಿಸಲು ಯೋಜನೆ ರೂಪಿಸಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್‍ ಸದಸ್ಯರು ಈ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಸಿಂಡಿಕೇಟ್‍ ಸದಸ್ಯರಿಗೆ ಈ ಯೋಜನೆಯ ಮಹತ್ವವನ್ನು ವಿವರಿಸಿ, ಅಲ್ಲಿಯೂ ತ್ಯಾಜ್ಯ ನೀರು ಸಂಸ್ಕರಣ ಘಟಕವನ್ನು ರಾಜ್ಯ ಸರ್ಕಾರದ ವತಿಯಿಂದ ಸ್ಥಾಪಿಸಲಾಗುವುದು ಎಂದು ಸಚಿವರು ಹೇಳಿದರು.
ವೃಷಬಾವತಿ ನದಿಯಲ್ಲಿ ಹರಿಯುವ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡುವ ಬಗ್ಗೆ ಕಾರ್ಖಾನೆಗಳು, ಜನವಸತಿ ಪ್ರದೇಶಗಳು ಹಾಗೂ ಅಪಾರ್ಟಮೆಂಟ್‍ಗಳಿಂದ ಸಂಸ್ಕರಣೆ ಮಾಡದೇ ನದಿಗೆ ನೇರವಾಗಿ ತ್ಯಾಜ್ಯ ನೀರು ಹರಿಸುತ್ತಿರುವುದರ ವಿರುದ್ಧ ಹಾಗೂ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದೇನೆ. ಮುಂದಿನ ವಾರದಲ್ಲಿ ಇದಕ್ಕೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಮುಖ್ಯಸ್ಥರ ಸಭೆ ಕರೆದು ಒಂದು ದೃಢ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದರು.

ವೃಷಬಾವತಿ ಹುಟ್ಟುವ ಪ್ರದೇಶದಿಂದ ಅರ್ಕಾವತಿ ನದಿ ತಲುಪುವರೆಗೆ ಸಮಿಕ್ಷೆ ಮಾಡಿ ವರದಿ ಸಲ್ಲಿಸಿ ಎಂದು ಹೈಕೋರ್ಟ ನಿರ್ದೇಶನ ನೀಡಿದ್ದು, ಈ ನಿಟ್ಟಿನಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಕಾರ್ಯೋ‍ನ್ಮುಖವಾಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ವೃಷಬಾವತಿ ನಿಧಿ ಪ್ರದೇಶದಲ್ಲಿ 3304 ಕೈಗಾರಿಕೆಗಳಿದ್ದು, 1396 ಕೈಗಾರಿಕೆಗಳು ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಉಲ್ಲಂಘನೆ ಮಾಡಿ, ನದಿಗೆ ನೇರವಾಗಿ ತ್ಯಾಜ್ಯ ನೀರನ್ನು ಹರಿಸುತ್ತಿವೆ. 1476 ಕಾರ್ಖಾನೆಗಳ ಮೇಲೆ ಕ್ರಮ ಕೈಗೊಳ್ಳಲಾಗಿದ್ದು, 77 ಕಾರ್ಖಾನೆಗಳ ಮೇಲೆ ಕ್ರಿಮಿನಲ್‍ ಮೊಕದ್ದಮೆ ಹೂಡಲಾಗಿದೆ. 275 ಕಾರ್ಖಾನೆಗಳನ್ನು ಮುಚ್ಚಿಸಲಾಗಿದೆ ಎಂದು ಇದೇ ವೇಳೆ ಸಚಿವರು ವಿವರಿಸಿದರು. ಕೇವಲ ಉದ್ಯಮಿಗಳ ಮೇಲಲ್ಲದೇ ಸಂಬಂಧಪಟ್ಟ ಅಧಿಕಾರಿಗಳ ಮೇಲೆಯೂ ಸಹ ದೂರು ದಾಖಲಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಆದೇಶಿಸಿದರು.

ಬೈರಮಂಗಲ ಕೆರೆ :

ರೂ.250.00 ಕೋಟಿಗಳ ವೆಚ್ಚದಲ್ಲಿ ಬೈರಮಂಗಲ ಕೆರೆಯನ್ನು ಏತ ನೀರಾವರಿ ಯೋಜನೆಯನ್ನು ಅನುಷ್ಟಾನಗೊಳಿಸಲು ಟೆಂಡರ್‍ ಕರೆಯಲಾಗಿದೆ. ಬಿಡದಿ ಕೈಗಾರಿಕಾ ಪ್ರದೇಶದಿಂದ ಹಾಗೂ ಬೆಂಗಳೂರಿನ ವೃಷಬಾವತಿ ನದಿಯಲ್ಲಿ ಹರಿದು ಬರುವ ನೀರನ್ನು ಮೂರನೇ ಹಂತದಲ್ಲಿ ಸಂಸ್ಕರಣೆ ಮಾಡಿ ಬೈರಮಂಗಲ ಕೆರೆಗೆ ನೀರು ಹರಿಸಲು ಯೋಜನೆ ರೂಪಿಸಲಾಗಿದೆ. ಬೆಂಗಳೂರು ನಗರದ ಶೇ.40 ರಷ್ಟು ನೀರು ಈ ಕೆರೆಗೆ ಬರುತ್ತಿದೆ. ಸಣ್ಣ ನೀರಾವರಿ ಇಲಾಖೆಯ ಜೊತೆಯಲ್ಲಿ ಮಾತನಾಡಿ ಮಳೆ ನೀರು ಹಾಗೂ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಬೇರ್ಪಡಿಸಿ, ಸುತ್ತ-ಮುತ್ತ ಹಳ್ಳಿಗಳಲ್ಲಿರುವ 142 ಕೆರೆಗಳಿಗೆ ನೀರನ್ನು ಹರಿಸಲಾಗುವುದು. ಮುಂದಿನ 1-2 ವರ್ಷಗಳಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವುದಾಗಿ ಬೈರಮಂಗಲ ಕೆರೆಯನ್ನು ವೀಕ್ಷಿಸಿದ ನಂತರ ಸಚಿವರು ಹೇಳಿದರು.

ಎಚ್ಡಿ ಕುಮಾರಸ್ವಾಮಿ, ರೇಣುಕಾಚಾರ್ಯ ವಿರುದ್ಧ ಯೋಗೇಶ್ವರ್ ವಾಗ್ದಾಳಿ

ಬೆಂಗಳೂರು: ಮಂಡ್ಯ ಲೋಕಸಭಾ ಸದಸ್ಯೆ ಸುಮಲತಾ ರವರ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್‍.ಡಿ.ಕುಮಾರಸ್ವಾಮಿ ಅವಾಚ್ಯ ಪದ ಬಳಕೆ ಮಾಡಲಾಗಿದ್ದು, ಖಂಡನೀಯ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ ರವರು ಬಿಡದಿಯ ಈಗಲ್ಟನ್‍ ಗಾಲ್ಫ ರೆಸಾರ್ಟನಲ್ಲಿ ಹೇಳಿದ್ದಾರೆ.

ಕೆ.ಆರ್.ಎಸ್‍ ಆಣೆಕಟ್ಟಿನ 30 ಕಿ.ಮೀ ವ್ಯಾಪ್ತಿಯ ಹಲವು ದಶಕಗಳಿಂದ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಕಲ್ಲು ಗಣಿಗಾರಿಕೆಗೆ ಸ್ಪೋಟಕಗಳನ್ನು ಬಳಸುತ್ತಾರೆ. ಇದರಿಂದ ಕೆ.ಆರ್.ಎಸ್‍ ಗೋಡೆಗೆ ದಕ್ಕೆಯುಂಟಾಗಲಿದೆ ಎಂಬ ವರದಿಗಳು ಮಾಧ್ಯಮಗಳಲ್ಲಿಯೂ ಸಹ ಬಂದಿವೆ. ಈ ನಿಟ್ಟಿನಲ್ಲಿ ಸುಮಲತಾ ರವರು ಕೆ.ಆರ್.ಎಸ್‍ ಆಣೆಕಟ್ಟು ಬಿರುಕು ಬೀಳುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿಯವರು ತಮ್ಮ ಬಳಿ ಇರುವ ಮಾಹಿತಿಯನ್ನು ಹೇಳಬೇಕಿತ್ತು. ಅದನ್ನು ಬಿಟ್ಟು ಸುಮಲತಾ ರವರನ್ನು ಅವಾಚ್ಯ ಶಬ್ದಗಳಿಂದ ನಿಂಧಿಸಿರುವುದು ಅವರಿಗೆ ಶೋಭೆ ತರುವುದಿಲ್ಲ. ಕುಮಾರಸ್ವಾಮಿ ವ್ಯಕ್ತಿತ್ವ ಕಳೆದುಕೊಂಡಿದ್ದಾರೆ. ಅವರನ್ನು ಮಾದ್ಯಮಗಳು ವಿಜೃಂಭಿಸುವುದು ಬೇಡ. ಅವರು ಘನತೆ ಹಾಗೂ ತೂಕವನ್ನು ಕಳೆದುಕೊಂಡಿದ್ದಾರೆ ಎಂದರು.

ನಾನು ನನ್ನ ಜಿಲ್ಲೆ ರಾಮನಗರದ ಸಮಸ್ಯೆಗಳ ಬಗ್ಗೆ ಮಾತನಾಡಿದ ಮರುದಿನವೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳ ಮನೆಗೆ ಓಡಿ ಹೋಗುತ್ತಾರೆ. ಅದು ನನಗೆ ತಿರುಗುಬಾಣವಾಗುತ್ತಿದೆ. ಕುಮಾರಸ್ವಾಮಿ ರಾಜಕೀಯವಾಗಿ ನೆಲೆ ಕಳೆದುಕೊಂಡಿದ್ದಾರೆ. ರಾಜಕೀಯವಾಗಿ ದಿನೇ-ದಿನೇ ದುರ್ಬಲವಾಗುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್‍.ಯಡಿಯೂರಪ್ಪರವರ ಸಹಕಾರವಿಲ್ಲದಿದ್ದರೇ ಜೆ.ಡಿ.ಎಸ್‍ ಎಂ.ಎಲ್‍.ಎ ಗಳು ಆ ಪಕ್ಷದಲ್ಲಿ ಇರುತ್ತಿರಲಿಲ್ಲ. ಅವರನ್ನು ಉಳಿಸಿಕೊಳ್ಳಲು ಪದೇ-ಪದೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತಿದ್ದಾರೆ. ರಾಮನಗರ, ಮಂಡ್ಯ ಬಿಟ್ಟರೇ ಅವರ ಪಕ್ಷಕ್ಕೆ ಬೇರೆ ಎಲ್ಲೂ ಅಸ್ತಿತ್ವವಿಲ್ಲ. ಉತ್ತರ ಕರ್ನಾಟಕಕ್ಕೆ ಹೋಗಿ ಪಕ್ಷ ಕಟ್ಟಲೀ ನೋಡೋಣ ಎಂದು ಕುಮಾರಸ್ವಾಮಿಗೆ ಸಚಿವ ಯೋಗೇಶ್ವರ ತಿರುಗೇಟು ನೀಡಿದ್ದಾರೆ.

ರೇಣುಕಾಚಾರ್ಯಗೆ ಸಿ.ಪಿ.ಯೋಗೇಶ‍್ವರ ತಿರುಗೇಟು:

ನಾನು ರಾಜ್ಯ ಬಿ.ಜೆ.ಪಿ ಸರ್ಕಾರ ಹಾಗೂ ಬಿ.ಜೆ.ಪಿ ಪಕ್ಷದೊಳಗಿನ ಲೋಪದೋಷಗಳ ಬಗ್ಗೆ ಮತ್ತು ನನಗೆ ಆಗಿರುವ ನೋವುಗಳ ಬಗ್ಗೆ ಆಯಾ ಸಂದರ್ಭದಲ್ಲಿ ನನ್ನ ನಿಲುವನ್ನು ಪ್ರದರ್ಶಿಸಿದ್ದೇನೆ. ಅದಕ್ಕೆ ಬದ್ಧವಾಗಿರುತ್ತೇನೆ. ರೇಣುಕಾಚಾರ್ಯರವರು ಸಿ.ಎಂ ರವರ ರಾಜಕೀಯ ಕಾರ್ಯದರ್ಶಿ ಆಗಬೇಕಾದರೆ ನನ್ನ ಶ್ರಮವು ಇದೇ. ಅವರಿಗೆ ಸಪ್ತ ಸಚಿವರ ವಸತಿ ಗೃಹದಲ್ಲಿ ಕ್ವಾಟರ್ಸ್ ದೊರೆಯಲು ಹಾಗೂ ಹೊನ್ನಾಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ರೂ.1000.00 ಕೋಟಿ ಅನುದಾನ ಸಿಗಲು ನನ್ನ ಅಳಿಲು ಸೇವೆ ಇದೇ ಎಂಬುದನ್ನು ಅವರು ಮರೆಯಬಾರದು ಎಂದು ಯೋಗೇಶ್ವರ ತಿರುಗೇಟು ನೀಡಿದ್ದಾರೆ.

ನನ್ನನ್ನು ರಾಜೀನಾಮೆ ನೀಡಿ, ವಿಧಾನಸಭೆಗೆ ಆಯ್ಕೆಯಾಗಿ ಬನ್ನಿ ಎಂದು ರೇಣುಕಾರ್ಯ ಸವಾಲು ಹಾಕಿದ್ದಾರೆ. ನಾನು ಸಚಿವನಾಗಿದ್ದಾಗಲೇ ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಿದ್ದೇನೆ. 05 ಬಾರಿ ವಿವಿಧ ಚಿನ್ಹೆಗಳಲ್ಲಿ ಸ್ಪರ್ಧಿಸಿ, ವಿಧಾನಸಭೆಗೆ ಆಯ್ಕೆಯಾಗಿದ್ದೇನೆ. ರೇಣುಕಾಚಾರ್ಯ ರವರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ನನ್ನ ಬಗ್ಗೆ 40 ಶಾಸಕರು ಹೈಕಮಾಂಡಗೆ ದೂರು ನೀಡಿರುವ ಬಗ್ಗೆ ಮಾಹಿತಿ ಇಲ್ಲ. ಎಲ್ಲಾ ವಿಷಯಗಳನ್ನು ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ. ಪಕ್ಷದ ಚೌಕಟ್ಟಿನಲ್ಲಿ ನಾಲ್ಕು ಗೋಡೆಗಳ ಮಧ್ಯೆ ವರಿಷ್ಠರಿಗೆ ಹೇಳಿದ್ದೇನೆ. ಮುಂದೆ ಫಲಿತಾಂಶ ಪ್ರಕಟವಾಗಲಿದೆ ಎಂದು ಮಾರ್ಮಿಕವಾಗಿ ನುಡಿದರು.

ಇದೇ ವೇಳೆ ಸಹಕಾರ ಸಚಿವ ಎಸ್‍.ಟಿ.ಸೋಮಶೇಖರ ರವರ ಆರೋಪಗಳಿಗೆ ಪ್ರತಿಕ್ರಿಯಿಸಿದ ಯೋಗೇಶ್ವರರವರು ಮುಖ್ಯಮಂತ್ರಿ ಬಿ.ಎಸ್‍.ಯಡಿಯೂರಪ್ಪರವರ ಆಡಳಿತ ವೈಕರಿಗಳನ್ನು ಒಪ್ಪದ್ದೇನೆ. ನನಗೆ ಆಗುತ್ತಿರುವ ಕಿರುಕುಳ ಹಾಗೂ ನೋವಿನ ಬಗ್ಗೆ ಹೇಳಿಕೊಂಡಿದ್ದೇನೆ. ಕುಮಾರಸ್ವಾಮಿ ಯಡಿಯೂರಪ್ಪರವರಿಗೆ ದುಂಬಾಲು ಬೀಳಲು ಹಗಲು ಹೊತ್ತು ಹೋದರೇ, ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ರಾತ್ರಿವೇಳೆ ಸಿ.ಎಂ ರವರನ್ನು ಭೇಟಿಯಾಗುತ್ತಾರೆ. ನಾನು ಸಿ.ಎಂ ಬದಲಾಗಬೇಕೆಂದು ಯಾವಾಗಲೂ ಹೇಳಿಲ್ಲ. ನಿನ್ನೇ ತಾನೆ ನಮ್ಮ ನೆಚ್ಚಿನ ಪ್ರಧಾನಮಂತ್ರಿಗಳು ಸಚಿವ ಸಂಪುಟವನ್ನು ವಿಸ್ತರಣೆ ಮಾಡಿದ್ದಾರೆ. ಇದು ಸಂತಸದ ವಿಷಯ. ನಮ್ಮ ಮುಖ್ಯಮಂತ್ರಿಗಳು ಸಹ ಸಮರ್ಥರಾಗಿದ್ದು, ನಾನು ಅವರ ವಿರುದ್ಧವೆಂದು ಬಿಂಬಿಸಬೇಡಿ ಎಂದು ಮಾಧ್ಯಮಗಳಿಗೆ ತಿಳಿಸಿದರು.

ಮೇಕೆದಾಟು ಯೋಜನೆ ಜಾರಿ ಮಾಡಿಯೇ ಮಾಡುತ್ತೇವೆ; ಗೃಹ ಸಚಿವ ಬಸವರಾಜ ಬೊಮ್ಮಾಯಿ ಅಚಲ ವಿಶ್ವಾಸ

ಬೆಂಗಳೂರು: ಕಾವೇರಿ ಕಣಿವೆಯಲ್ಲಿನ ಕರ್ನಾಟಕ ರಾಜ್ಯದ ರೈತರ ಹಕ್ಕಿನ ಸಲುವಾಗಿ ತಮಿಳುನಾಡು ವಿರುದ್ಧ ಕಾನೂನು ಹೋರಾಟ ಮುಂದುವರಿಸುತ್ತೇವೆ. ಈ ಹೋರಾಟದಲ್ಲಿ ಗೆಲ್ಲುವ ಸಂಪೂರ್ಣ ವಿಶ್ವಾಸ ಇದೆ. ಮೇಕೆದಾಟು ಯೋಜನೆಯನ್ನು ಜಾರಿ ಮಾಡಿಯೇ ಮಾಡುತ್ತೇವೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸೋಮವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ಇಂದು-ನಿನ್ನೆಯದಲ್ಲ. ಹಲವಾರು ವರ್ಷಗಳ ಹಿಂದೆ ಈ ಯೋಜನೆ ಸಿದ್ಧವಾಗಿದೆ. ಇದು ವಿದ್ಯುತ್ಚ್ಛಕ್ತಿ, ಕುಡಿಯುವ ನೀರು ಮತ್ತು ಸಂಕಷ್ಟದ ವರ್ಷಗಳಲ್ಲಿ ಉಭಯ ರಾಜ್ಯಗಳ ನಡುವೆ ನೀರಿನ ಸಮರ್ಪಕ ನಿರ್ವಹಣೆ ಮಾಡಲು ಅನುಕೂಲವಾಗುವ ಯೋಜನೆಯಾಗಿದೆ. ಉಭಯ ರಾಜ್ಯಗಳಿಗೂ ಅನುಕೂಲವಾಗುವ ಈ ಯೋಜನೆಯನ್ನು ಜಾರಿ ಮಾಡಲು ನಾವು ಪ್ರಯತ್ನಿಸಿದ್ದರೆ ತಮಿಳುನಾಡು ಸರ್ಕಾರ ತಕರಾರು ತೆಗೆಯುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯದ ಕಾವೇರಿ ಕಣಿವೆಯ ರೈತರ ಹಕ್ಕಿನ ಸಲುವಾಗಿ ನಾವು ಕಾನೂನು ಹೋರಾಟವನ್ನು ಸದಾಕಾಲ ಮಾಡುತ್ತಲೇ ಬಂದಿದ್ದೇವೆ. ನಮ್ಮ ಹಕ್ಕಿನ ಸಲುವಾಗಿ ಈಗಲೂ ನಮ್ಮ ಕಾನೂನು ಹೋರಾಟ ಮುಂದುವರಿಸುತ್ತೇವೆ. ನಮಗೆ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ. ಮೇಕೆದಾಟು ಯೋಜನೆಯನ್ನು ಜಾರಿ ಮಾಡಿಯೇ ಮಾಡುತ್ತೇವೆ ಎಂಬ ವಿಶ್ವಾಸವಿದೆ ಎಂಬ ಭರವಸೆಯ ಮಾತುಗಳನ್ನು ಅವರು ಆಡಿದರು.

ಮೇಕೆದಾಟು ಯೋಚನೆ ಕುರಿತು ಸುಪ್ರೀಂ ಕೋರ್ಟ್ ನೀಡುವ ತೀರ್ಪನ್ನು ಆಧರಿಸಿ ಕೇಂದ್ರ ಸರ್ಕಾರದಿಂದ ಬೇಕಾಗುವ ಎಲ್ಲಾ ಕ್ಲಿಯರೆನ್ಸ್ ಗಳನ್ನು ಪಡೆಯುತ್ತೇವೆ. ಕೇರಳ ಗಡಿ ಭಾಗದಲ್ಲಿ ಸ್ಯಾಟಲೈಟ್ ಫೋನ್ ಗಳ ಬಳಕೆ ಮೇಲೆ ಕಣ್ಣು ಇಟ್ಟಿದ್ದೇವೆ. ನಿರಂತರವಾಗಿ ನಿಗಾ ಇರಿಸಿದ್ದೇವೆ. ಕೆಲ ಪ್ರದೇಶಗಳಲ್ಲಿ ವಿಶೇಷವಾಗಿ ಅರಣ್ಯ ಪ್ರದೇಶದಲ್ಲಿ ರೇಡಗಳನ್ನು ಮಾಡಿದ್ದೇವೆ. ಅಕ್ರಮ ಅರಣ್ಯ ಸಂಪತ್ತು ಸಾಗಾಟವನ್ನು ಪತ್ತೆ ಮಾಡಿ ಕ್ರಮ ಕೈಗೊಂಡಿದ್ದೇವೆ ಎಂದರು.

ಎಸ್‍ಡಿಪಿ ಅನುದಾನ ಬಳಕೆ ಮಾಡದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಿ- ಸಚಿವ ಡಾ. ನಾರಾಯಣಗೌಡ

ಚಿಕ್ಕಮಗಳೂರು, ಜು. 05– ಎಸ್‍ಡಿಪಿ ಅನುದಾನ ಬಳಕೆ ಮಾಡದೆ ಲ್ಯಾಪ್ಸ್ ಮಾಡಿರುವ ಅಧಿಕಾರಿಗಳ ಮೇಲೆ ತಕ್ಷಣವೇ ಶಿಸ್ತು ಕ್ರಮ ತೆಗೆದುಕೊಳ್ಳಿ ಎಂದು ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಾ. ನಾರಾಯಣಗೌಡ ಹೇಳಿದರು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಅನುದಾನ ಸದ್ಬಳಕೆ ಮಾಡದಿರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ವಿಶೇಷ ಅಭಿವೃದ್ಧಿ ಯೋಜನೆಯ (SDP) ಅನುದಾನವನ್ನು ಬಳಸದೆ ಲ್ಯಾಪ್ಸ್ ಮಾಡಿರುವ ಚಿಕ್ಕಮಗಳೂರು ಜಿಲ್ಲೆಯ ಅಧಿಕಾರಿಗಳ ಕಾರ್ಯವೈಖರಿಗೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ಬೇಜವಾಬ್ದಾರಿ ತೋರಿದ ಅಧಿಕಾರಿಗಳ ವಿರುದ್ಧ ತಕ್ಷಣವೆ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ಆದೇಶಿಸಿದರು. ಸಂಸದರ ನಿಧಿ ರೂ. 8.32 ಕೋಟಿ, ಶಾಸಕರ ನಿಧಿ ರೂ. 14.79 ಕೋಟಿ ಅನುದಾನ ಬಾಕಿ ಇದ್ದು, ಕೂಡಲೆ ವೆಚ್ಚಭರಿಸಬೇಕು ಎಂದು ಸೂಚಿಸಿದರು. ಜಿಲ್ಲೆಯಲ್ಲಿ ಒಟ್ಟು ರೂ. 21.05 ಕೋಟಿ ಅನುದಾನದಲ್ಲಿ ಕ್ರೀಡಾ ಇಲಾಖೆಯ ಕಾಮಗಾರಿಗಳು ನಡೆಯುತ್ತಿವೆ. ಕ್ರೀಡೆಗೆ ಹಾಗೂ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಈ ಯೋಜನೆಗಳನ್ನು ತ್ವರಿತಗತಿಯಲ್ಲಿ ಮಾಡಲಾಗುತ್ತಿದೆ. ಐಯ್ಯನಕೆರೆಯಲ್ಲಿ ರೂ. 4.84 ಕೋಟಿ ವೆಚ್ಚದಲ್ಲಿ ಸಾಹಸ ಕ್ರೀಡಾ ಚಟುವಟಿಕೆ ಕೇಂದ್ರ ಮಂಜೂರು ಮಾಡಲಾಗಿದೆ. ಬಾಲಕಿಯರ ಕ್ರೀಡಾ ವಸತಿನಿಲಯ ಮಂಜೂರು ಮಾಡಲಾಗಿದ್ದು, ರೂ. 1.50 ಕೋಟಿ ವೆಚ್ಚದಲ್ಲಿ ಶ್ರೀಘ್ರದಲ್ಲೇ ನಿರ್ಮಾಣವಾಗಲಿದೆ. ಹಾಲಿ ಇರುವ 7 ನೇ ತರಗತಿಯವರೆಗಿನ ಕ್ರೀಡಾ ವಸತಿ ನಿಲಯದಲ್ಲಿ ದ್ವಿತೀಯ ಪಿಯುಸಿ ವರೆಗೆ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಹೇಳಿದರು. ರೈತರಿಗೆ ಅನುಕೂಲವಾಗಲಿ ಎಂದು ಬೆಳೆ ವಿಮೆ ಯೋಜನೆ ಜಾರಿಗೆ ತರಲಾಗಿದೆ. ಆದರೆ ರೈತರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಬೆಳೆ ವಿಮೆ ನೋಂದಣಿ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿಲ್ಲ. ಅಧಿಕಾರಿಗಳು ರೈತರಿಗೆ ಸರಿಯಾದ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಬೆಳೆ ವಿಮೆ ನೋಂದಣಿ ಹೆಚ್ಚಾಗುವಂತೆ ಮಾಡಬೇಕು. ಆ ಮೂಲಕ ರೈತರಿಗೆ ಆಗುವ ನಷ್ಟವನ್ನು ಭರಿಸುವ ಕೆಲಸ ಮಾಡಬೇಕು ಎಂದು ಸಚಿವರು ಸೂಚಿಸಿದರು.

ಕೊರೊನಾದಂತಹ ಸಂಕಷ್ಟದ ಸಂದರ್ಭದಲ್ಲೂ ಸಾಕಷ್ಟು ಪ್ರಮಾಣದಲ್ಲಿ ಅನುದಾನವನ್ನು ನೀಡಲಾಗಿದೆ. ಅನುದಾನದ ಸದ್ಬಳಕೆ ಮಾಡಬೇಕಾದ ಜವಾಬ್ದಾರಿ ಅಧಿಕಾರಿಗಳದ್ದು. ಶಾಸಕರಿಂದ ಕ್ರಿಯಾಯೋಜನೆ ಪಡೆದು ಜನರಿಗೆ ಅನುಕೂಲವಾಗುವಂತಹ ಕೆಲಸಗಳನ್ನು ಮಾಡಬೇಕು. ಯಾವುದೇ ಕಾರಣಕ್ಕು ಸರ್ಕಾರದಿಂದ ಬಿಡುಗಡೆಯಾದ ಅನುದಾನ ಲ್ಯಾಪ್ಸ್ ಆಗಬಾರದು, ಯಾವುದೆ ಕಾಮಗಾರಿ ನೆನೆಗುದಿಗೆ ಬೀಳಬಾರದು. ಆ ರೀತಿ ಆಗದಂತೆ ನೋಡಿಕೊಂಡು ಗುಣಮಟ್ಟದ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸಚಿವ ಡಾ. ನಾರಾಯಣಗೌಡ ಎಚ್ಚರಿಕೆ ನೀಡಿದರು.

ಮಾಜಿ ಸಿಎಂ ಆದವರಿಗೆ ಕನಿಷ್ಠ ಜ್ಞಾನ ಬೇಡ್ವಾ? ಐ ಡೋಂಟ್ ಕೇರ್ ಫಾರ್ ದಿಸ್ ವರ್ಡ್; ಎಚ್ಡಿಕೆ ವಿರುದ್ಧ ಸುಮಲತಾ ಕಿಡಿ

ಬೆಂಗಳೂರು: ಒಬ್ಬ ಮಾಜಿ ಮುಖ್ಯಮಂತ್ರಿ ಆದವ್ರಿಗೆ ಸಂಸದೆ ಬಗ್ಗೆ ಹೇಗೆ ಮಾತನಾಡ್ಬೇಕು ಅನ್ನೊ ಜ್ಞಾನವಿಲ್ಲ,ಐ ಡೋಂಟ್ ಕೇರ್ ಫಾರ್ ದಿಸ್ ವರ್ಡ್ ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ವಿರುದ್ಧ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಸುಮಲತಾ ಜನ ಯಾರು ಸಂಸದರು ಆಗಬೇಕು ಅಂತ ಆರಿಸಿಕಳಿಸಿದ್ದಾರೆ ಇನ್ನೂ ಇದರ ಬಗ್ಗೆ ಅವರಿಗೆ ಅರ್ಥವಾದಂತಿಲ್ಲ ಜನ ಯಾರನ್ನ ಆರಿಸಿ ಕಳಿಸಿದ್ರು ಅನ್ನೋದು ಅರ್ಥವಾಗಿಲ್ಲ ಒಬ್ಬ ಮಹಿಳೆಯ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯೇ? ಮಿಡಿಯಾ ಮುಂದೆ ಹೇಗೆ ಮಾತನಾಡಬೇಕು ಎಂದು ಮಾಜಿ ಸಿಎಂ ಆದವರಿಗೆ ಕನಿಷ್ಠ ಜ್ಞಾನ ಬೇಡ್ವಾ? ಐ ಡೋಂಟ್ ಕೇರ್ ಫಾರ್ ದಿಸ್ ವರ್ಡ್.ನಾನು ಯಾವತ್ತೂ ಇಂತ ಮಾತುಗಳಿಗೆ ತಲೆಕೆಡಿಸಿಕೊಳ್ಳಲ್ಲ ತಲೆ ಕೆಡಿಸಿಕೊಳ್ಳುವುದೂ ಇಲ್ಲ ಎಂದ್ರು.

ಮೈಶುಗರ್ ಕಾರ್ಖಾನೆ ಪ್ರಾರಂಭಕ್ಕೆ ನಾನು ಒತ್ತಾಯಿಸಿದ್ದೆ
ರೈತರ ಕಾಳಜಿ‌ಬಗ್ಗೆ ನಾನು ಒತ್ತಾಯಿಸಿದ್ದೆ ಈಗ ಆರೋಪವನ್ನ ಅವರು ಮಾಡ್ತಿದ್ದಾರೆ ಅವರು ಅಧಿಕಾರದಲ್ಲಿದ್ದಾಗ ಯಾಕೆ ಮಾತನಾಡಲಿಲ್ಲ? ೪೦೦ ಕೋಟಿಯಷ್ಟು ಭ್ರಷ್ಟಾಚಾರ ಅಲ್ಲಿ ಆಗಿದೆ ಇದರ ಬಗ್ಗೆ ಯಾಕೆ ಅವರು ಮಾತನಾಡಲ್ಲ. ಫ್ಯಾಕ್ಟರಿಯನ್ನ ನೀವು ಓಪನ್ ಮಾಡಿ ಎಂದಿದ್ದೇನೆ. ಯಾವುದೇ ಮಾಡೆಲ್ ನಲ್ಲಿ ಬೇಕಾದರೂ ಓಪನ್ ಮಾಡಲಿ.ಆ ನಿರ್ಧಾರ ಸರ್ಕಾರಕ್ಕೆ ಬಿಟ್ಟಿದ್ದು ಪ್ರಾರಂಭಕ್ಕೆ ನಾನು ಒತ್ತಾಯ ಮಾಡುತ್ತಲೇ ಇದ್ದೇನೆ ನಾನು ಖಾಸಗಿಕರಣದಲ್ಲೇ ಆಗಬೇಕೆಂದು ಹೇಳಿಲ್ಲ ಮಾಜಿ ಸಿಎಂ ಹೆಚ್ಡಿಕೆಗೆ ಸುಮಲತಾ ಟಾಂಗ್ ನೀಡಿದ್ರು.

ಕೆಆರ್ ಎಸ್ ಸುತ್ತಮುತ್ತ ಅಕ್ರಮ ಗಣಿಗಾರಿಕೆ ಬಗ್ಗೆ ರೈತರು ನನ್ನ ಮುಂದೆ ಹೇಳಿದ್ದಾರೆ ನಾನು ಕೆಅರ್ ಎಸ್ ಬಗ್ಗೆ ಸಂಸತ್ ನಲ್ಲಿ ಮಾತನಾಡಿದ್ದೇನೆ ಅಲ್ಲಿನ ಇಲ್ಲೀಗಲ್ ಗಣಿಗಾರಿಕೆ ಬಗ್ಗೆ ಧ್ವನಿ ಎತ್ತಿದ್ದೇನೆ ಮುರುಗೇಶ್ ನಿರಾಣಿಯವರಿಗೆ ಅದನ್ನ ತೋರಿಸಿದ್ದೇನೆ ಅಕ್ರಮ ಗಣಿಗಾರಿಕೆ ಬಗ್ಗೆ ಎಕ್ಸ್ ಫೋಸ್ ಮಾಡಿದ್ದೇನೆ ಇದಕ್ಕೆ ಬ್ರೇಕ್ ಹಾಕಿದರೆ ಸಾವಿರಾರು ಕೋಟಿ ಸರ್ಕಾರಕ್ಕೆ ಆದಾಯ ಬರುತ್ತೆ ಈ ಆದಾಯ ಸರ್ಕಾರಕ್ಕೆ ತಾನೇ ಬರೋದು? ಈಗ ಯಾಕೆ ಮುತುವರ್ಜಿ ವಹಿಸಿ ಬರ್ತಾರೋ ಗೊತ್ತಿಲ್ಲ. ಇವತ್ತು ದಿಶಾ ಸಭೆ ಕರೆದಿದ್ದರು ಆದರೆ ಕೆಲವು ಕಾರಣದಿಂದ ಅದನ್ನ ಸಿಎಂರವರು ಮಾಡಲಿಲ್ಲ ಎಂದು
ಮಂಡ್ಯದ ಅಕ್ರಮ ಗಣಿಗಾರಿಕೆ ಬಗ್ಗೆ ಸುಮಲಾತಾ ಆಕ್ರೋಶ ವ್ಯಕ್ತಪಡಿಸಿದ್ರು.

ಕುಮಾರಸ್ವಾಮಿ ಅವರ ಮಾತುಗಳಿಂದ ಅವರ ಸಂಸ್ಕಾರ ಗೊತ್ತಾಗ್ತಿದೆ.ಅವರ ವ್ಯಕ್ತಿತ್ವ ಎಂತದ್ದು ಅನ್ನುವುದನ್ನ ಬಿಚ್ಚಿಟ್ಟುಕೊಳ್ತಿದ್ದಾರೆ.ದೊಡ್ಡ ಹಗರಣ ನಡೆಯುತ್ತಿದೆ ಇದು ಗೊತ್ತಿದ್ದು ಯಾಕೆ ಸುಮ್ಮನಿದ್ರು ಗೊತ್ತಾಗ್ತಿದೆ ಎಲ್ಲಾ ಕಡೆ ಜನರಿಗೆ ಗೊತ್ತಾಗ್ತಿದೆ.ಎಲ್ಲಾ ಕಡೆ ಸ್ಕ್ಯಾಂ ಹೊರಬರ್ತಿವೆ ಕೆಆರ್ ಎಸ್ ಬಗ್ಗೆ ನಾನು ಕಾಳಜಿ ವಹಿಸ್ತಿದ್ದೇನೆ ಇವರಿಗೆ ಯಾಕೆ ಪ್ರಾಬ್ಲಂ ಆಗ್ತಿದೆ ಮಂಡ್ಯದಲ್ಲಿ ಏನೇನು ನಡೆಯುತ್ತಿದೆ ಎಲ್ಲ ಗೊತ್ತು ಕುಮಾರಸ್ವಾಮಿ ವಿರುದ್ಧ ಸುಮಲತಾ ಆಕ್ರೋಶ ವ್ಯಕ್ತಪಡಿಸಿದ್ರು.

ತೋಟದ ಮನೆಯಲ್ಲೇ ಎಚ್ಡಿಕೆ ಜನತಾದರ್ಶನ

ಬೆಂಗಳೂರು: ಮುಖ್ಯಮಂತ್ರಿ ಆಗಿದ್ದಾಗ ಜನತಾದರ್ಶನದ ಮೂಲಕ ಮನೆ ಮಾತಾಗಿದ್ದ ಎಚ್‌ಡಿ ಕುಮಾರಸ್ವಾಮಿ ಮತ್ತೆ ಅದೇ ಹಾದಿಗೆ ಮರಳುತ್ತಿದ್ದಾರೆ.ಮಾಜಿ ಸಿಎಂ ಆಗಿಯೂ ಜನತಾದರ್ಶನ ಮಾಡಿ ಜನರ ಕಷ್ಟ ಕೇಳಲಿದ್ದಾರೆ.ಅದಕ್ಕಾಗಿ ತೋಟದ ಮನೆಯನ್ನೇ ಜನತಾ ದರ್ಶನ ಸ್ಥಳವನ್ನಾಗಿ ಪರಿವರ್ತನೆ ಮಾಡಿದ್ದು ಜನರಿಗೆ ಆಹ್ವಾನ ನೀಡಿದ್ದಾರೆ.

ರಾಮನಗರ ಜಿಲ್ಲೆ ಬಿಡದಿ ಸಮೀಪ ಇರುವ ಕೇತಗಾನಹಳ್ಳಿಯ ನನ್ನ ತೋಟದ ಮನೆಯಲ್ಲಿ ಕಳೆದ ಆರು ತಿಂಗಳಿಂದ ವಾಸ್ತವ್ಯ ಹೂಡಿದ್ದೇನೆ. ನನ್ನ ಹೊಲ ಮತ್ತು ತೋಟದ ಕೃಷಿಯನ್ನು ಇಸ್ರೇಲ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇನೆ. ನನ್ನ ಭೇಟಿಗೆ ರಾಜ್ಯದ ನಾನಾ ಭಾಗಗಳಿಂದ ನಮ್ಮ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಹಿತೈಷಿಗಳು ಆಗಮಿಸುತ್ತಿದ್ದಾರೆ. ಈ ಮೂಲಕ ‌ನನ್ನ ವಿನಮ್ರ ಮನವಿಯೆಂದರೆ, ಬೆಳಗ್ಗೆ 8.30 ರಿಂದ 10.30 ಗಂಟೆಯವರೆಗೆ ನನ್ನ ತೋಟದ ಮನೆಯಲ್ಲಿ ಭೇಟಿಯಾಗಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಭಾನುವಾರ ಹೊರತುಪಡಿಸಿ, ಉಳಿದ ದಿನಗಳಲ್ಲಿ ಈ ಸಮಯದಲ್ಲಿ ಬಂದು ನನ್ನನ್ನು ಭೇಟಿ ಮಾಡಬಹುದು ಎಂದು ತಿಳಿಸಿದ್ದಾರೆ.

ಸಾರ್ಜನಿಕರು ನನ್ನನ್ನು ಭೇಟಿ ಮಾಡುವ ಸದುದ್ದೇಶಕ್ಕಾಗಿಯೇ ನನ್ನ ತೋಟದ ಮನೆಯಲ್ಲಿ ಪುಟ್ಟ ಕಚೇರಿಯೊಂದನ್ನು ಆರಂಭಿಸಿದ್ದೇನೆ. ಈ ದಿನ (5.6.2021) ಕಚೇರಿಗೆ ಔಪಚಾರಿಕವಾಗಿ ಪೂಜೆ ನೆರವೇರಿಸಿದ್ದೇನೆ.
ಇದನ್ನು ತಮ್ಮ ಅವಗಾಹನೆಗೆ ತರುತ್ತಿದ್ದೇನೆ ಎಂದು ತಿಳಿಸಿದ್ದಾರೆ.