ಡಿಕೆಶಿ ರಾಜೀನಾಮೆ ಕೊಡುವಂತದ್ದು ಏನು ಆಗಿಲ್ಲ: ಸಿಎಂ

ಬೆಂಗಳೂರು: ಐಟಿ ಇಲಾಖೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನ್ಮಕವಾಗಿ ಸಚಿವ ಡಿಕೆ ಶಿವಕುಮಾರ್ ಜಿತೆಗೆ ನಾವಿದ್ದೇವೆ.ಅವರೂ ಕೂಡ ಕಾನೂನತ್ಮಕವಾಗಿ ಹೋರಾಟ ನಡೆಸುತ್ತಿದ್ದಾರೆ ಇದನ್ನು ದೊಡ್ಡ ಸುದ್ದಿ ಮಾಡುವ ಅವಶ್ಯಕತೆ ಇಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಗೃಹ ಕಛೇರಿ ಕೃಷ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಡಿಕೆಶಿಯವರು ರಾಜೀನಾಮೆ ಯಾಕೆ ಕೊಡಬೇಕು, ರಾಜೀನಾಮೆ ಕೊಡುವಂತದ್ದೇನೂ ಆಗಿಲ್ಲ. ಬಿಜೆಪಿಯವರು ಎಷ್ಟು ಬಾರಿ ರಾಜೀನಾಮೆ ನೀಡಿದ್ದಾರೆ. ಅದರ ಬಗ್ಗೆ ಮುಂದೆ ಮಾತನಾಡ್ತೀನಿ ಎಂದರು.

ಜಮೀರ್ ಅಹಮದ್ ಮೆಕ್ಕಾ ಹೋಗಿ ಬಂದಿದ್ದಾರೆ. ಮೆಕ್ಕಾದಿಂದ ತಂದಿದ್ದ ಖರ್ಜುರಾ ಮತ್ತು ಹೋಲಿ ನೀರು ಕೊಡಲು ಬಂದಿದ್ರು ಅಷ್ಟೇ. ಇದನ್ನೂ ದೊಡ್ಡ ಸುದ್ದಿ ಮಾಡಬೇಕಾ? ಮೆಕ್ಕಾಗೆ ಹೋಗಿದ್ದರು ತಂದು ಕೊಟ್ಟಿದ್ದಾರೆ. ಪರಿಷತ್ ಸದಸ್ಯ ಫಾರುಕ್ ಸಹ ತಂದು ಕೊಟ್ಟಿದ್ದರು. ಅದ್ರಲ್ಲೇನೂ ವಿಶೇಷ ಇಲ್ಲ ಎಂದು ತಿಳಿಸಿದರು.

ತೆನೆಹೊತ್ತ ಮಹಿಳೆ ಕೈಹಿಡಿದ ಬಿನ್ನಿಪೇಟೆ ಮತದಾರ!

ಬೆಂಗಳೂರು: ಬಿನ್ನಿಪೇಟೆ ವಾರ್ಡ್ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಐಶ್ವರ್ಯ ನಾಗರಾಜ್ ಸಮಾರು 2 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಈ ಮೂಲಕ ಕೆಪಿಸಿಸಿ ಕಾರ್ಯಧ್ಯಕ್ಷ ದಿನೇಶ್ ಗುಂಡೂರಾವ್‌ಗೆ ತೀವ್ರ ಮುಖಭಂಗವಾಗಿದೆ.

ದಿನೇಶ್ ಗುಂಡೂರಾವ್ ಮತ್ತು ಬಿಟಿಎಸ್ ನಾಗರಾಜ್ ಪ್ರತಿಷ್ಠೆಯ ಕಣವಾಗಿದ್ದ ಬಿನ್ನಿಪೇಟೆ ವಾರ್ಡ್ ಉಪ ಚುನಾವಣೆಯಲ್ಲಿ ಬಿಟಿಸ್ ನಾಗರಾಜ್ ಮಗಳು ಐಶ್ವರ್ಯ ನಾಗರಾಜ್ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ – 7188, ಕಾಂಗ್ರೆಸ್ 5249, ಬಿಜೆಪಿ – 2455 ಮತಗಳನ್ನು ಪಡೆದಿದ್ದಾರೆ‌.

ಫಲಿತಾಂಶ ಬಳಿಕ ಮಾತನಾಡಿದ ಐಶ್ವರ್ಯ, ದಿನೇಶ್ ಗುಂಡೂರಾವ್ ಇನ್ನಾದ್ರೂ ವಾರ್ಡ್ ನಲ್ಲಿ ಕೆಲಸ ಮಾಡಿಸಲಿ. ಹಣ ಹಂಚಿದರೆ ಓಟ್ ಹಾಕ್ತಾರೆ ಅನ್ನೋದನ್ನು ದಿನೇಶ್ ಗುಂಡೂರಾವ್ ಮರೆಯಬೇಕು. ಬಿನ್ನಿಪೇಟೆ ಕಾಂಗ್ರೆಸ್ ಭದ್ರಕೋಟೆ ಅಂತ ದಿನೇಶ್ ಗುಂಡೂರಾವ್ ಹೇಳ್ತಿದ್ರು. ಆದರೆ ಇದು ಜನರ ಗೆಲುವು, ಬಿನ್ನಿಪೇಟೆಯಲ್ಲಿ ಕಾಂಗ್ರೇಸ್ ಇದ್ದಿದ್ದೇ ನಮ್ಮ ಅಪ್ಪನಿಂದ ಎಂದು ದಿನೇಶ್ ಗುಂಡೂರಾವ್ ವಿರುದ್ದ ಕಿಡಿಕಾರಿದರು.

ನನ್ನ ಬಳಿಯೂ ಡೈರಿಗಳಿವೆ ಸಮಯ ಬಂದಾಗ ನಾನೇನು ಎಂದು ತೋರಿಸುತ್ತೇನೆ: ಡಿಕೆಶಿ ಕಿಡಿ

ಬೆಂಗಳೂರು: ನನ್ನ ಬಳಿಯೂ ಸಾಕಷ್ಟು ಡೈರಿಗಳಿವೆ ಸಮಯ ಬಂದಾಗ ಬಿಡೋದು ನಂಗೂ ಗೊತ್ತಿದೆ. ನನ್ನನ್ನೇ ಏಕೆ ಟಾರ್ಗೆಟ್ ಮಾಡ್ತಿದ್ದಾರೆ ಯಾಕೆ ? ಬೇರೆಯವರ ಮನೇಲಿ ಡೈರಿ, ಲೆಕ್ಕ ಇಟ್ಟಿದ್ದು ಗೊತ್ತಿದ್ರೂ ಯಾಕೆ ಅಂತವರ ಮೇಲೆ ದಾಳಿ ಇಲ್ಲ. ನನ್ನನ್ನ ಹೆದರಿಸಲು ಬಂದ್ರೆ ನಾನೇನು ಹೆದರಲ್ಲ‌ ಎನ್ನುವ ಮೂಲಕ ಸಚಿವ ಡಿ.ಕೆ.ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ನನಗೆ, ನನ್ನ ಸಂಬಂಧಿಕರಿಗೆ ಹಾಗೂ ಆಪ್ತರಿಗೆ ಸಾಕಷ್ಟು ಕಿರುಕುಳ ಕೊಡುತ್ತಿದ್ದಾರೆ. ಇದೆಲ್ಲವೂ ಯಾಕೆ ಮಾಡ್ತಿದ್ದಾರೆ ಅಂತ ಗೊತ್ತಿದೆ. ನಾನು ಈಗ ಮಾತನಾಡಲ್ಲ,ಸಮಯ ಬಂದಾಗ ಮಾತನಾಡುತ್ತೇನೆ. ನಿಮಗೆ ಏನು ಅನ್ಸುತ್ತೆ ಅದನ್ನ ನೀವು ಮಾಡಿ, ಅವರಿಗೆ ಏನು ಅನ್ಸುತ್ತೆ ಅದನ್ನ ಅವರು ಮಾಡಲಿ. ಕೊನೆಗೆ ದೇಶ, ಕಾನೂನು ಎಲ್ಲವೂ ಇದೆ. ಕಾನೂನು ಮೂಲಕ ಹೋರಾಟ ಮಾಡೋದು ಗೊತ್ತಿದೆ ಎಂದು ಹೇಳಿದರು.

ನನ್ನನ್ನ ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಡಿಕೆಶಿ ಯಾವುದಕ್ಕೂ ಹೆದರುವುದಿಲ್ಲ. ನಾನು ಕಾನೂನಿಗೆ ಬೆಲೆ ಕೊಡುವವನು, ಕೋರ್ಟ್ ನಲ್ಲಿ ಇರೋದ್ರಿಂದ ಈಗ ಏನು ಹೇಳೋದಿಲ್ಲ. ಇಲ್ಲದಿದ್ದರೆ ನಾನೇನು ಅನ್ನೋದನ್ನ ತೋರಿಸುತ್ತಿದ್ದೆ. ಈಗ ಒಂದು ಐಟಿ ಕೇಸ್ ಪಿಟ್ ಮಾಡಿದ್ದಾರೆ. ಆದರೆ, ಸಮನ್ಸ್ ಇನ್ನೂ ಯಾವುದು ಬಂದಿಲ್ಲ. ವಿಚಾರಣೆಗೆ ಹಾಜರಾಗಿ ಅಂತ ನೊಟೀಸ್ ಬಂದಿದೆ. ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ನನಗೆ, ನನ್ನ ತಾಯಿ ಹಾಗೂ ಸಹೋದರನಿಗೆ ನೊಟೀಸ್ ಬಂದಿದೆ.

ನ್ಯಾಯಾಲಯದಿಂದ ಇನ್ನೆರಡು ಸಮನ್ಸ್ ದಿನಗಳಲ್ಲಿ ಪೋಸ್ಟಲ್ ಮೂಲಕ ಸಮನ್ಸ್ ಬರಬಹುದು. ವಿಚಾರಣೆಗೆ ಹಾಜರಾಗುತ್ತೇವೆ. ನಮಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ ಎಂದರು.

ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿನ ಪಿಡಿಪಿ-ಬಿಜೆಪಿ ಮೈತ್ರಿ ಮುರಿದು ಬಿದ್ದಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರ ಆಡಳಿತ ಜಾರಿಮಾಡಲಾಗಿದೆ. ಮುಫ್ತಿ ಮೆಹಬೂಬ ರಾಜೀನಾಮೆ ನೀಡಿದ ನಂತರ ರಾಜ್ಯಪಾಲ ಎನ್‌. ಎನ್‌. ವೋಹ್ರಾ ಅವರು ರಾಜ್ಯಪಾಲರ ಆಳ್ವಿಕೆಗೆ ಶಿಫಾರಸ್ಸು ಮಾಡಿದ್ದರು.

ಜಮ್ಮು ಕಾಶ್ಮೀರದಲ್ಲಿ ಪಿಡಿಪಿ ಪಕ್ಷಕ್ಕೆ ಬಿಜೆಪಿ ನೀಡಿದ್ದ ಬೆಂಬಲವನ್ನು ವಾಪಸ್ಸು ಪಡೆದ ಹಿನ್ನೆಲೆ ಮುಖ್ಯಮಂತ್ರಿ ಸ್ಥಾನಕ್ಕೆ ಮುಫ್ತಿ ಮೆಹಬೂಬ ರಾಜೀನಾಮೆ ನೀಡಿದ್ದರು. ರಾಜೀನಾಮೆ ನೀಡಿದ 24 ಗಂಟೆಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದ್ದು, ರಾಜ್ಯಪಾಲ ಎನ್‌. ಎನ್‌. ವೋಹ್ರಾ ಅವರು ಶಿಫಾರಸ್ಸು ಮಾಡಿದ ಪತ್ರಕ್ಕೆ ರಾಷ್ಟ್ರಪತಿ ಕೋವಿಂದ್‌ ಅವರು ಸಹಿ ಮಾಡಿದ್ದಾರೆ.

ಮೋದಿ‌ ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ ಐಪಿಎಸ್ ಅಧಿಕಾರಿ ಕಿಶೋರ್ ಚಂದ್ರ

ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ಅವರ ಫಿಟ್ನೆಸ್ ಚಾಲೆಂಜ್ ಇದೀಗ ವೈರಸ್ ರೀತಿ ದೇಶಾದ್ಯಂತ ಹರಡಿದ್ದು,ರಾಜಕಾರಣಿಗಳ ನಂತರ ಇದೀಗ‌ಅಧಿಕಾರಿಗಳೂ‌ ಚಾಲೆಂಜ್ ಸ್ವೀಕರಿಸಿ ಸಾಮರ್ಥ್ಯ ತೋರಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಯಸ್,ಈಗ ಮೋದಿ‌ ಚಾಲೆಂಜ್‌ ಸ್ವೀಕರಿಸಿರುವ ಅಧಿಕಾರಿ ರಾಜ್ಯ ಗೃಹಮಂಡಳಿ ವ್ಯವಸ್ಥಾಪಕ ನಿರ್ದೇಶಕರಾದ ಹಿರಿಯ ಐಪಿಎಸ್ ಅಧಿಕಾರಿ ಕಿಶೋರ್ ಚಂದ್ರ.ಈ ಅಧಿಕಾರಿ ವ್ಯಾಯಾಮ‌ ಮಾಡುತ್ತಿರುವ ನಾಲ್ಕು ನಿಮಿಷದ ವಿಡಿಯೋವನ್ನು ಎಡಿಜಿಪಿ ಪ್ರತಾಫ್ ರೆಡ್ಡಿ ತಮ್ಮ ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ.ಆ ಮೂಲಕ ಮೋದಿ ಫಿಟ್ನೆಸ್ ಚಾಲೆಂಜ್ ಗೆ ಉತ್ತರ ನೀಡಿದ್ದಾರೆ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಮೋದಿ ರಾಜ್ಯದ ಸಿಎಂ ಹಾಗೂ 40 ವರ್ಷ ಮೀರಿದ ಐಪಿಎಸ್ ಅಧಿಕಾರಿಗಳಿಗೆ ಸವಾಲಾಕಿದ್ರು ಮೋದಿ ಸವಾಲಿಗೆ 59 ವರ್ಷದ ಕಿಶೋರ್ ಚಂದ್ರ ತಮ್ಮ ಪಿಟ್ನೆಸ್ ಸಾಮರ್ಥ್ಯ ತೋರಿದ್ದಾರೆ.

ಬೆಂಬಲ ವಾಪಸ್ ಪಡೆದ ಬಿಜೆಪಿ:ಕಾಶ್ಮೀರದಲ್ಲಿ ಮೈತ್ರಿ ಸರ್ಕಾರ ಪತನ

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿನ ಪಿಡಿಪಿ ಬಿಜೆಪಿ ಮೈತ್ರಿ ಕಡಿದುಬಿದ್ದಿದ್ದು,ಸಮ್ಮಿಶ್ರ ಸರ್ಕಾರ ಪತನಗೊಂಡಿದೆ,ಆ ಮೂಲಕ ಮೊದಲ ಬಾರಿ ಸರ್ಕಾರದ ಭಾಗವಾಗಿದ್ದ ಕೇಸರಿ ಪಡೆ ಕಣಿವೆ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿದೆ.

ಜಮ್ಮು ಕಾಶ್ಮೀರದಲ್ಲಿ ಕ್ಷಿಪ್ರ ರಾಜಕೀಯ ವಿದ್ಯಮಾನ ನಡೆದಿದ್ದು, ಪಿಡಿಪಿಗೆ ನೀಡಿದ್ದ ಬೆಂಬಲವನ್ನು ಬಿಜೆಪಿ ವಾಪಸ್ ಪಡೆದಿದೆ.
ಬೆಂಬಲ ವಾಪಸ್ ಪತ್ರ ಮತ್ತು ರಾಜೀನಾಮೆಯನ್ನು ರಾಜ್ಯಪಾಲ ಎನ್ ಎನ್ ವೋಹ್ರಾ ಅವರಿಗೆ ರವಾನಿಸಿದೆ.
ಇದರಿಂದಾಗಿ ಸರ್ಕಾರ ಅಲ್ಪಮತಕ್ಕೆ‌ ಕುಸಿದಿದ್ದು ಮುಖ್ಯಮಂತ್ರಿ ಸ್ಥಾನಕ್ಕೆ ಮೆಹಬೂಬ ಮುಫ್ತಿ ರಾಜೀನಾಮೆ ಸಲ್ಲಿಕೆ ಮಾಡಿದರು.

ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಬಳಿಕ ಮಾತನಾಡಿದ ಮೆಹಬೂಬ ಮುಫ್ತಿ, ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು ಯಾವುದೇ ಪಕ್ಷದ ಬೆಂಬಲ ಕೇಳುವುದಿಲ್ಲ,ಸರ್ಕಾರ ರಚನೆಯ ಹಕ್ಕು ಮಂಡನೆ ಮಾಡುವುದೂ ಇಲ್ಲ ಎಂದರು.

ಕಾಶ್ಮೀರಕ್ಕೆ ನೀಡಿರುವ ಸಂವಿಧಾನದ 370ನೇ ವಿಧಿಯನ್ನು ನಾವು ಸಮರ್ಥಿಸಿದ್ದೇವೆ. ರಾಜ್ಯದಲ್ಲಿ 370ನೇ ವಿಧಿಗಾಗಿ ನಾವು ಹೋರಾಡಿದ್ದೇವೆ,ಅಧಿಕಾರಕ್ಕಾಗಿ ನಾವು ಮೈತ್ರಿ ರಚಿಸಿಕೊಂಡಿರಲಿಲ್ಲ. ಜನರಿಗಾಗಿ ಮೈತ್ರಿಕೂಟದಲ್ಲಿ ಭಾಗಿಯಾಗಿದ್ದೆವು.

ನಮಗೆ ದೈಹಿಕ ಬಲ ನೀತಿಯಲ್ಲಿ ನಂಬಿಕೆ ಇಲ್ಲ. ಇದೇ ಕಾರಣದಿಂದ ದ್ವಿಪಕ್ಷೀಯ ಕದನ ವಿರಾಮ ಘೋಷಣೆಗೆ ಬದ್ಧವಾಗಿದ್ದೆವು. ಪಾಕ್​​ನೊಂದಿಗೆ ಕೂಡ ಉತ್ತಮ ಸಂಬಂಧವನ್ನು ನಾವು ಬಯಸಿದ್ದೆವು. ನಾವು ಎಲ್ಲರೊಂದಿಗೆ ಮಾತುಕತೆ ಬಯಸುತ್ತೇವೆ ಪಾಕಿಸ್ತಾನದೊಂದಿಗೆ ಕೂಡ ನಾವು ಚರ್ಚೆ ಬಯಸುತ್ತೇವೆ, ದೈಹಿಕ ಬಲ ನೀತಿ ಕಾಶ್ಮೀರದಲ್ಲಿ ಯಶಸ್ವಿಯಾಗುವುದಿಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡಿದರು.

ಇನ್ನು ಭಾರತದ ರಕ್ಷಣೆ ಮತ್ತು ಸಾರ್ವಭೌಮತ್ವವನ್ನು ಗಮನದಲ್ಲಿಟ್ಟುಕೊಂಡು ಮೈತ್ರಿಯನ್ನು ತೊರೆಯಲಾಗಿದೆ ಎಂದು ಕಾಶ್ವೀರ ಬಿಜೆಪಿ ನಾಯಕ ರಾಂ ಮಾದವ್ ಹೇಳಿದ್ದಾರೆ. ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ರಾಜ್ಯದಲ್ಲಿ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬೆಂಬಲ ವಾಪಸ್ ಪಡೆದ ನಿಲುವನ್ನು ಸಮರ್ಥಿಸಿಕೊಂಡರು.

ಇನ್ನು ಸರ್ಕಾರ ಪತನಗೊಳ್ಳುತ್ತಿದ್ದಂತೆ ಮಾಜಿ ಸಿಎಂ ಒಮರ್ ಅಬ್ದುಲ್ಲಾ ರಾಜ್ಯಪಾಲರನ್ನ ಭೇಟಿಯಾದರು.ನಾವು ಸರ್ಕಾರ ರಚಿಸಲು ಹಕ್ಕು ಮಂಡಿಸುವುದಿಲ್ಲ ಯಾವುದೇ ಪಕ್ಷದೊಂದಿಗೆ ಮೈತ್ರಿ ಸರ್ಕಾರ ರಚಿಸುವುದಿಲ್ಲ ಎನ್ನುವ ಮಾಹಿತಿ ನೀಡಿದರು.

ಪಿಡಿಪಿ,ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಸರ್ಕಾರ ರಚನೆಯ ಹಕ್ಕು ಮಂಡಿಸಲು ನಿರಾಕರಿಸಿರುವ ಕಾರಣ ಜಮ್ಮು,ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ರಾಜ್ಯಪಾಲರು ನೀಡುವ ವರದಿಯ ಮೇಲೆ ಮುಂದಿನ ನಿರ್ಧಾರ ಪ್ರಕಟಗೊಳ್ಳಲಿದೆ.