ಕೃಷಿ ವಿ ವಿ ಖಾಸಗಿಕರಣ ತಪ್ಪಿಸಲು ವಿ ವಿ ಕಾಯ್ದೆಗೆ ಸೂಕ್ತ ತಿದ್ದುಪಡಿ: ಸಿಎಂ ಭರವಸೆ

ಬೆಂಗಳೂರು: ಕೃಷಿ ವಿಶ್ವವಿದ್ಯಾಲಯ ಖಾಸಗಿಕರಣ ತಪ್ಪಿಸಲು ವಿ ವಿ ಕಾಯ್ದೆಗೆ ಸೂಕ್ತ ತಿದ್ದುಪಡಿ ತರವುದಾಗಿ ಮುಖ್ಯ ಮಂತ್ರಿ ಹೆಚ್. ಡಿ. ಕುಮಾರಸ್ವಾಮಿರವರು ತಿಳಿಸಿದರು.

ಕೃಷಿ ವಿಶ್ವವಿದ್ಯಾಲಯದ ಖಾಸಗೀಕರಣ ವಿರೋಧಿಸಿ ಕೃಷಿ ವಿಶ್ವವಿದ್ಯಾಲಯದ ವಿಧ್ಯಾರ್ಥಿಗಳು ಇಂದು ಬೆಳಗ್ಗೆ ಟೌನ್ ಹಾಲ್ ಎದುರು ಪ್ರತಿಭಟನೆ ನಡೆಸುತ್ತಿದ್ದರು. ಬೆಳಿಗ್ಗೆ ಮನೆಯಿಂದ ಹೊರಟ ಮುಖ್ಯ ಮಂತ್ರಿಗಳು ಟೌನ್ ಹಾಲ್ ಬಳಿ ಇಳಿದು ಸಂಜೆ ಕೃಷಿ ಸಚಿವರು, ಕೃಷಿ ಇಲಾಖೆ ಕಾರ್ಯದರ್ಶಿ ಮತ್ತು ವಿಧ್ಯಾರ್ಥಿಗಳನ್ನು ಕರೆಸಿ ಮಾತುಕತೆ ನಡೆಸುವ ಭರವಸೆ ನೀಡಿದರು. ಸಂಜೆ 5 ಘಂಟೆಗೆ ಕೃಷಿ ಸಚಿವ ಶಿವಶಂಕರ್ ರೆಡ್ಡಿ, ಅಧಿಕಾರಿಗಳು ಹಾಗೂ ವಿಧ್ಯಾರ್ಥಿಗಳೊಂದಿಗೆ ಚರ್ಚಿಸಿದರು. ಕೃಷಿ ವಿವಿ ಕಾಯ್ದೆ ತಿದ್ದುಪಡಿಗೆ ಕೂಲಂಕಷ ಪರಿಶೀಲನೆ ನಡೆಸುವಂತೆ ಮುಖ್ಯ ಮಂತ್ರಿ ಸೂಚಿಸಿದರು.

ಮುಖ್ಯಮಂತ್ರಿಗಳ ಭೇಟಿ ಬಳಿಕ ಮಾತನಾಡಿದ ನಟ ಚೇತನ್, ನಮ್ಮ ಮನವಿಯನ್ನ ಸಿಎಂ ಹಾಗೂ ಕೃಷಿ ಸಚಿವರು ಆಲಿಸಿದ್ರು. ಕೃಷಿ ವಿವಿಯನ್ನ ಖಾಸಗಿಯಾಗಿಸೋದು ಬೇಡ ಅನ್ನೋದೇ ನಮ್ಮ ಮೂಲ ಬೇಡಿಕೆ. ಸಿಎಂ ನಮ್ಮ ಬೇಡಿಕೆಗೆ ಸಹಮತ ವ್ಯಕ್ತಪಡಿಸಿ ಪರಿಶೀಲಿಸಿ ಮುಂದುವರಿಯೋ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸುವುದಿಲ್ಲ: ಸಿಎಂ

ಬೆಂಗಳೂರು: ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಷಯದಲ್ಲಿ ಕೆಲವೊಂದು ಸ್ಕೀಂನಲ್ಲಿ ಬದಲಾವಣೆಗೆ ಮನವಿ ಮಾಡಿದ್ದೇವೆಯೇ ಹೊರತು ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸುವುದಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಪ್ರೆಸ್ ಕ್ಲಬ್ ನಲ್ಲಿ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ಕಾವೇರಿ ನಿರ್ವಹಣ ಮಂಡಳಿ ರಚನೆ ವಿಚಾರದ ಬಗ್ಗೆ ಪ್ರಧಾನಿ ಬಳಿ ಚರ್ಚೆ ಮಾಡಿದ್ದೇನೆ ಕಾವೇರಿ ನಿರ್ವಹಣಾ ಮಂಡಳಿ ರಚನೆ ಅವೈಜ್ಞಾನಿಕವಾಗಿದೆ ಮಂಡಳಿಗೆ ಇಬ್ಬರ ಹೆಸರು ಕೊಡಲು ಹೇಳಿದ್ದರು ಆದ್ರೆ ಇನ್ನು ನಾನು ಕೊಡಲಿಲ್ಲ ನ್ಯಾಯಾಂಗ ನಿಂದನೆ ಆದರೆ ನಾನು ನೋಡಿಕೊಳ್ಳುತ್ತೇನೆ ಎಂದಿದ್ದೇನೆ,ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರ ಸಂಬಂಧ
ಸುಪ್ರೀಂಕೋರ್ಟ್ ಆದೇಶವನ್ನು ನಾವು ಉಲ್ಲಂಘನೆ ಮಾಡುವುದಿಲ್ಲ,ಆದರೆ ಕೆಲವೊಂದು ಸ್ಕೀಂ ಗಳಿಗೆ ನಾವು ವಿರೋಧ ವ್ಯಕ್ತಪಡಿಸಿದ್ದೇವೆ ಸ್ಕೀಂ ರಚನೆ ಮಾಡಬೇಕಾದ್ರೆ ಸಂಸತ್ ನಲ್ಲಿ ಚರ್ಚೆಯಾಗಬೇಕಿದೆ ಸ್ಕೀಂ ರಚನೆ ಕೆಲವೊಂದು ಮಾರ್ಪಾಡು ಮಾಡಲು ಮನವಿ ಮಾಡಿಕೊಂಡಿದ್ದೀನಿ ಎಂದರು.

ಕಬಿನಿ ಜಲಾಶಯದಲ್ಲಿ ನೀರು ತುಂಬಿದೆ. ಜೂನ್ ನಲ್ಲೇ ಜಲಾಶಯದಲ್ಲಿ ನೀರು ತುಂಬಿದ ಹಿನ್ನಲೆಯಲ್ಲಿ ತಮಿಳು‌ನಾಡುಗೆ ನೀರು ಬಿಡಲು ಸೂಚನೆ ನೀಡಿದ್ದೇನೆ. ಹೆಚ್ಚುವರಿ ನೀರು ಬಂದ್ರೆ ನಾವು ಶೇಖರಣೆ ಮಾಡಲು ಸಾಧ್ಯ ಇಲ್ಲ ನೀರು ಬಿಟ್ಟಿದಕ್ಕೆ ಭತ್ತ ಬೆಳೆ ನಾಶವಾಗಿದೆ, ರೈತರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದರು.

ಮಹದಾಯಿ ನದಿ ನೀರು ಹಂಚಿಕೆ ವಿಚಾರ ಸಂಬಂಧ
ಕೇಂದ್ರ ಸಚಿವ ನಿತಿನ್ ಗಡ್ಕರಿ ಒಂದು ಟೀಂ ಕರೆಸಿಕೊಂಡಿದ್ರು
ಜುಲೈನಲ್ಲಿ ಅಂತಿಮ ತೀರ್ಪು ಬರಲಿದೆ ಅಂತಿಮ ತೀರ್ಪು ಬಂದ ಬಳಿಕ ನಮ್ಮ ಮುಂದಿನ ನಡೆ ಪ್ರಕಟಿಸಲಿದ್ದೇವೆ ಎಂದರು.

ಮೈತ್ರಿ ಸರ್ಕಾರ 5ವರ್ಷ ಸುಭದ್ರವಾಗಿರುತ್ತೆ 5 ವರ್ಷ ಹೇಗೆ ನಡೆಸಬೇಕು ಎಂದು ನನಗೆ ಗೊತ್ತಿದೆ, 238 ಸ್ಥಳಗಳಲ್ಲಿ ಸಾರ್ವಜನಿಕ ಭಾಷಣ ಮಾಡಿದ್ದೆ, ನಾನೊಬ್ಬನೇ ಭಾಷಣ ಮಾಡಿದ್ದೆ ನಮ್ಮ ಪಕ್ಷದಲ್ಲಿ ಯಾರು ಸ್ಟಾರ್ ಪ್ರಚಾರಕರು ಇಲ್ಲ ಆದ್ರೆ ನಿರೀಕ್ಷೆಯಷ್ಟು ಸೀಟ್ ನಮಗೆ ಬಂದಿಲ್ಲ ಸಾಕಷ್ಟು ಯೋಜನೆಗಳನ್ನ ನಾನು ಹಾಕಿಕೊಂಡಿದ್ದೇನೆ ಎಲ್ಲವನ್ನೂ ಜಾರಿಗೆ ತರುವೆ ಎಂದರು.

ರಸ್ತೆಯಲ್ಲಿ ಹೋಗಬೇಕಾದ್ರೆ ಕಸ ನೋಡಿ ನಾನೇ ತಲೆ ತಗ್ಗಿಸಿದ್ದೇನೆ.ಕಸದ ಮಾಫಿಯಾ ಏನು ಅನ್ನೋದನ್ನ ನಾನು ತಿಳಿದುಕೊಂಡಿದ್ದೇನೆ ಕಸದ ಮಾಫಿಯಾವನ್ನ ಮಟ್ಟಹಾಕಬೇಕಿದೆ ಆ ನಿಟ್ಟಿನಲ್ಲಿ‌ ನಾವು ಹೆಜ್ಜೆ ಇಡುತ್ತೇವೆ,‌ ಭೀಮಾತೀರದ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ
ನಿರ್ದಾಕ್ಷಿಣ್ಯ ಕ್ರಮ ತೆಗದುಕೊಳ್ಳಿ ಎಂದು ಅಧಿಕಾರಿಗಳಿಗೆ ಹೇಳಿದ್ದೀನಿ ಎಂದರು.

ನಾನು ಒಂದು ವರ್ಷ ಅಧಿಕಾರದಲ್ಲಿ ಇರುತ್ತೇನೆ ಎಂದು ಹೇಳಿಲ್ಲ
ನಾನು ಅಸಹಾಯಕತೆ ತೋರಿಸಿಲ್ಲ ಮೈತ್ರಿ ಸರ್ಕಾರದ ಬಗ್ಗೆ ಇಲ್ಲಸಲ್ಲದ ಸುದ್ದಿ ಹರಿದಾಡಿಸುತ್ತಿದ್ದಾರೆ ಈ ಅರ್ಥದಲ್ಲಿ ಲೋಕಸಭಾ ಚುನಾವಣೆವರೆಗೂ ನನ್ನನ್ನ ಟಚ್ ಮಾಡಲು ಸಾಧ್ಯ ಇಲ್ಲ ಅಂದಿದ್ದೆ ಅಷ್ಟೇ ಎಂದು ತಮ್ಮ ಹೇಳಿಕೆಯನ್ನು ಸಿಎಂ ಸಮರ್ಥಿಸಿಕೊಂಡರು.

ನೀರಾವರಿ ಯೋಜನೆಯಲ್ಲಿ ಹಣದ ಕೊರತೆ ಇಲ್ಲ ನಮ್ಮ‌ ರಾಜ್ಯದಲ್ಲಿ ಹಣದ ಸಂಪನ್ಮೂಲ ಇದೆ ಕಾಲಮಿತಿಯೊಳಗೆ ನೀರಾವರಿ ಯೋಜನೆ ಮುಗಿಸುತ್ತೇವೆ, ಸಿಎಂ ಸಾಂದರ್ಭಿಕ ಶಿಶು ಅನ್ನೋ ಪದದ ಅರ್ಥ ಎಷ್ಟೊ ಜನರಿಗೆ ಅರ್ಥ ಆಗಿಲ್ಲ ಏನೇನೋ ವ್ಯಾಖ್ಯಾನ ಕೊಡ್ತಾ ಇದ್ದಾರೆ ಎಂದರು.

ಯಶಸ್ವಿನಿ ಯೋಜನೆಯನ್ನ ಮುಂದುವರೆಸಬೇಕು ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ ಆದ್ರೆ ಕೇಂದ್ರ ಸರ್ಕಾರದ ಯೋಜನೆಯಡಿ ಸೇರಿಸಬೇಕೆಂಬ ಪ್ರಸ್ತಾಪ ಇದೆ ಹಾಗಾಗಿ ಎರಡು ತಿಂಗಳು ಪ್ರಾಥಮಿಕವಾಗಿ ಜಾರಿ ಮಾಡುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಒಟ್ಟಿನಲ್ಲಿ ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದರು.

ಉನ್ನತ ಶಿಕ್ಷಣ ಇಲಾಖೆಗೆ ಸಲಹೆಗಾರರನ್ನಾಗಿ ಪ್ರೊ.ರಂಗಪ್ಪ ನೇಮಕ ಮಾಡುವ ವಿಚಾರ ಸಂಬಂಧ ಯಾವುದೇ ಪ್ರಸ್ತಾಪ ಆಗಿಲ್ಲ ನನ್ನ ಬಳಿ ಆ ರೀತಿ ಯಾವ ಹೆಸರು ಇಲ್ಲ ಮಾಧ್ಯಮಗಳಲ್ಲಿ ಈ ಬಗ್ಗೆ ನೋಡಿದ್ದೀನಿ ಅಷ್ಟೇ ಎಂದರು.

ಸಂಡೂರಿನಲ್ಲಿ ಗಣಿಗಾರಿಕೆಗೆ ಅವಕಾಶ ನೀಡಿದ ವಿಚಾರ ಬೆಳಕಿಗೆ ಬಂದಿದೆ.ಆದರೆ ನನ್ನ ಅವಧಿಯಲ್ಲಿ ಇದು ಆಗಿಲ್ಲ ಅಧಿಕಾರಿಗಳ ಮಟ್ಟದಲ್ಲಿ ಆಗಿದೆ ಎಂದು ತಿಳಿದಿದೆ ಈ ಬಗ್ಗೆ ಮಾಹಿತಿ ಕೇಳಿದ್ದೇನೆ,ಅಧಿಕಾರಿಗಳು ನನ್ನನ್ನ ಭೇಟಿ ಮಾಡಲಿದ್ದಾರೆ ಬಳಿಕ ಈ ಬಗ್ಗೆ ಸೂಕ್ತ ಕ್ರಮ ತೆಗದುಕೊಳ್ಳುತ್ತೇನೆ ಎಂದರು.

ಎಲ್ಲ ಸಮುದಾಯದ ಮಕ್ಕಳಿಗೆ ಉಚಿತ ಬಸ್ ಪಾಸ್ ನೀಡುವ ಚಿಂತನೆ ಇದೆ ಆದರೆ 630 ಕೋಟಿ ಸರ್ಕಾರಕ್ಕೆ ಹೊರೆಯಾಗುತ್ತೆ
ಎಲ್ಲರಿಗೂ ಅನುಕೂಲವಾಗುವಂತ ನಿರ್ಧಾರ ತೆಗದುಕೊಳ್ಳುತ್ತೇವೆ ಎಂದರು.

ರಾಜ್ಯದ ಜನರಿಗೆ ಹೊರೆಯಾಗದಂತೆ ರೈತರ ಸಾಲ ಮನ್ನಾ: ಸಿಎಂ

ಬೆಂಗಳೂರು: ಜುಲೈ ಮೊದಲನೇ ವಾರದಲ್ಲಿ ರಾಜ್ಯ ಮುಂಗಡ ಬಜೆಟ್ ಮಂಡನೆ ಮಾಡುತ್ತೇನೆ, ಬಜೆಟ್ ನಲ್ಲಿ ರೈತರ ಸಾಲ ಮನ್ನಾ ಬಗ್ಗೆ ಘೋಷಣೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.

ಬೆಂಗಳೂರು ವರದಿಗಾರರ ಕೂಟ ಮತ್ತು ಪ್ರೆಸ್‌ಕ್ಲಬ್ ಜಂಟಿಯಾಗಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಕುಮಾರಸ್ವಾಮಿ, ರಾಜ್ಯದ ಮೈತ್ರಿ ಸರ್ಕಾರವನ್ನು ರಾಷ್ಟ್ರ ಮಟ್ಟದಲ್ಲಿ ಎಲ್ಲರೂ ಗಮನಿಸುತ್ತಿದ್ದಾರೆ. ರೈತರ ಸಾಲಮನ್ನಾ ವಿಚಾರದಲ್ಲಿ ನನಗೆ ಕಮಿಟೆಮೆಂಟ್ ಇದೆ. ಈ ವಿಚಾರದಲ್ಲಿ ಹಿಂದೆ ಸರಿಯುವ ಪ್ರಶ್ನೆ ಇಲ್ಲ.  ಸಾಲ ಮನ್ನಾ ಮಾಡಲು ಸಾವಿರಾರು ಕೋಟಿ ಹಣ ಹೊಂದಾಣಿಕೆ ಮಾಡಬೇಕಿದೆ. ಸರ್ಕಾರ ಯಂತ್ರದಲ್ಲಿ ಸೋರಿಕೆಯನ್ನು  ತಡೆಯಬೇಕು ಎಂದರು.

ರೈತರ ಸಾಲಮನ್ನಾ ಬಗ್ಗೆ ಪ್ರಧಾನಿ ಬಳಿಯೂ ಮನವಿ ಮಾಡಿದ್ದೇನೆ. ಕೇಂದ್ರ ಸರ್ಕಾರ ಎರಡು ಲಕ್ಷ ಕೋಟಿ ಬಾಂಡ್ ತಯಾರಿಸಲು ರಾಷ್ಟ್ರೀಯ ಬ್ಯಾಂಕ್ ಗಳಿಗೆ ನೀಡಿದ್ದಾರೆ. ಅದರಲ್ಲಿ 25% ಹಣವನ್ನ ರೈತರ ಸಾಲ ಮನ್ನಾ ಕಡೆ ಡೈವರ್ಟ್ ಮಾಡಿ ಅಂತ ಮನವಿ ಮಾಡಿದ್ದೇನೆ. ರಾಹುಲ್ ಗಾಂಧಿ ಭೇಟಿ ಮಾಡಿ ಅವರಿಂದ ಕೆಲವು ಸಲಹೆಗಳನ್ನು ಪಡೆದುಕೊಂಡಿದ್ದೇನೆ ಮತ್ತು ಕೆಲವೊಂದು ವಿಚಾರಗಳನ್ನು ಅವರ ಮುಂದಿಟ್ಟಿದ್ದೇನೆ ಎಂದು ತಿಳಿಸಿದರು.

ಜುಲೈ ಮೊದಲನೇ ವಾರದಲ್ಲಿ ಬಜೆಟ್ ಮಂಡನೆ ಮಾಡುತ್ತೇನೆ. ಬಜೆಟ್ ನಲ್ಲಿ ರೈತರ ಸಾಲ ಮನ್ನಾ ಬಗ್ಗೆ ಘೋಷಣೆ ಮಾಡುತ್ತೇನೆ. ಸಾಲಮನ್ನಾ ವಿಚಾರದಲ್ಲಿ ಯಾವುದೇ ಅನುಮಾನ ಬೇಡ. ರಾಜ್ಯದ ಜನತೆಗೆ ಹೊರೆಯಾಗದಂತೆ ರೈತರ ಸಾಲಮನ್ನಾ ಮಾಡಲು ಬದ್ಧನಾಗಿದ್ದೇನೆ ಎಂದು ಮತ್ತೊಮ್ಮ ರಾಜ್ಯದ ರೈತರಿಗೆ ಭರವಸೆ ನೀಡಿದರು.

ಲಕ್ಷ್ಮೀ ಹೆಬ್ಬಾಳ್ಕರ್ ಕ್ಷಮೆ ಕೇಳಿದ್ದಾರೆ,ವಿವಾದ ಸಾಕು: ಜಯಮಾಲಾ

ಬೆಂಗಳೂರು: ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ನನ್ನನ್ನು ಅಕ್ಕಾ ಎಂದು ಕರೆದಿದ್ದಾರೆ.ವಯಸ್ಸಿನಲ್ಲಿ ನಾನು ಅವರಿಗಿಂತ ದೊಡ್ಡವಳು.ಹಾಗಾಗಿ ಅವರು ಬಾಯಿತಪ್ಪಿ ಆಡಿದ ಮಾತಿಗೆ ಕ್ಷಮೆ ಕೇಳಿದ್ದಾರೆ.ಕ್ಷಮೆ ಕೇಳಿದ ಮೇಲೂ ಆ ವಿವಾದವನ್ನು ಮುಂದುವರಿಸುವುದು ಸರಿಯಲ್ಲ ಎಂದು ವಿವಾದಕ್ಕೆ ಸಚಿವೆ ಜಯಮಾಲಾ ತೆರೆ ಎಳೆದಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಪಕ್ಷದಲ್ಲೂ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ.ಹೆಣ್ಣುಮಕ್ಕಳು ಆಸೆ ಪಡೋದು ಸಹಜ.ಹಾಗಾಗಿ ಸಚಿವ ಸ್ಥಾನಕ್ಕೆ ಅವರೂ ಆಸೆಪಟ್ಟಿದ್ದಾರೆ.ವಿಧಾನಸಭೆ ಮತ್ತು ವಿಧಾನ ಪರಿಷತ್ ನಲ್ಲಿ ಹೆಚ್ಚಿನ ಹೆಣ್ಣುಮಕ್ಕಳಿಗೆ ಹೆಚ್ಚಿನ ಸಚಿವ ಸ್ಥಾನ ಸಿಗಲಿ.ರೂಪಾ ಶಶಿಧರ್ ಕೂಡ ಸಚಿವೆ ಆಗಲಿ ಎಂದು ಹಾರೈಸುತ್ತೇನೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಜೊತೆ ಮೊದಲ ಸಭೆ ನಡೆದಿದ್ದೇನೆ.ಬಜೆಟ್ ಬರುತ್ತಿರುವುದರಿಂದ ಇಲಾಖೆಯ ಯೋಜನೆಗಳ ಬಗ್ಗೆ ಚರ್ಚೆ ಆಗಿದೆ.ಯಾವುದನ್ನ ಸೇರಿಸಬೇಕು.ಯಾವುದನ್ನು ಬಿಡಬೇಕು ಅಂತ ಚರ್ಚೆ ಮಾಡಿದ್ದೇವೆ.ಎರಡು ಪಕ್ಷಗಳ ಪ್ರಣಾಳಿಕೆ ನಮ್ಮ ಮುಂದೆ ಇದೆ.ಹೀಗಾಗಿ ಹಲವು ಯೋಜನೆಗಳನ್ನು ಅಳವಡಿಸಬೇಕಿದೆ,ಸಿಎಂ ಮತ್ತು ಡಿಸಿಎಂ ಜೊತೆ ಹೊಸ ಯೋಜನೆಗಳ ಕುರಿತು ಚರ್ಚೆ ನಡೆಸ್ತೇನೆ ಎಂದರು.

ಹೆಚ್ ಐವಿ ಸೋಂಕಿತ ಮಕ್ಕಳ ಮನೆ ಖಾಲಿ ಮಾಡುವಂತೆ ಅಕ್ಕಪಕ್ಕದವರ ಒತ್ತಾಯ ಕುರಿತು ಪ್ರತಿಕ್ರಿಯೆ ನೀಡಿದ
ಸಚಿವೆ ಜಯಮಾಲಾ,ಬೆಳಗಾವಿ ಮಹೇಶ್ ಫೌಂಡೇಶನ್ ನಡೆಸುತ್ತಿರುವ ಸಂಸ್ಥೆ ಆ ಸಂಸ್ಥೆಗೂ ಇಲಾಖೆಗೂ ಸಂಬಂಧವಿಲ್ಲ ಆದರೆ ಮಕ್ಕಳು ಇರುವ ಜಾಗ ಬದಲಾಯಿಸಲು ಒತ್ತಡವಿದೆ ಗೊತ್ತಿಲ್ಲದೆ ಆ ಮಕ್ಕಳಿಗೆ ಇಂತ ಸೋಂಕು ಅಂಟಿಕೊಂಡಿದೆ ಮಕ್ಕಳನ್ನ ಮುಟ್ಟಿದರೆ ಸೋಂಕು‌ ಹರಡುತ್ತೆ ಅನ್ನುವುದು ಸರಿಯಲ್ಲ ಆ ಮಕ್ಕಳನ್ನ ಉತ್ತಮ ದೃಷ್ಠಿಯಿಂದ ನೋಡಬೇಕು. ಸಾರ್ವಜನಿಕರು ನಿವೇಶನ ಬದಲಾಯಿಸಿ ಅನ್ನುವುದು ಬೇಡ ಎಂದು ಸಾರ್ವಜನಿಕರಿಗೆ ಸಚಿವೆ ಜಯಮಾಲಾ ಮನವಿ ಮಾಡಿದರು.

ಲಾಭಿ ನಡೆಸಿ ಮಂತ್ರಿಯಾಗಲು ನಾನೇನು ರಾಹುಲ್ ಗಾಂಧಿ ಸಂಬಂಧಿಯಲ್ಲ: ಜಮೀರ್

ಬೆಂಗಳೂರು: ಲಾಭಿ ಮಾಡಿ ಮಂತ್ರಿ ಸ್ಥಾನ ಪಡೆಯಲು ನಾನೇನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಂಬಂಧಿಕನಲ್ಲ,ಸಾಮರ್ಥ್ಯ ಇದ್ದರೆ ಮಾತ್ರ ನಾಯಕನಾಗಲು‌ ಸಾಧ್ಯ ಎಂದು ಮಾಜಿ ಸಚಿವ ತನ್ವೀರ್ ಸೇಟ್ ಗೆ ಆಹಾರ ಮತ್ತಹ ನಾಗರಿಕ ಸರಬರಾಜು ಸಚಿವ ಜಮೀರ್ ಅಹಮದ್ ತಿರುಗೇಟು ನೀಡಿದ್ದಾರೆ.

ನನಗೆ ಸುಮ್ಮಸುಮ್ಮನೆ ಸಚಿವ ಸ್ಥಾನ ಕೊಟ್ಟಿಲ್ಲ. ಕೇಪಬಲ್ ಇದ್ದರೆ ತಾನೇ ನಾಯಕನಾಗೋದು ನಾನು ಮೈಸೂರಿನ ಎನ್.ಆರ್.ಮೊಹಲ್ಲಾಗೆ ಬರ್ತೇನೆ ಅವರು ಅಲ್ಲಿಗೆ ಬರಲಿ
ಯಾರಿಗೆ ಜನ ಬೆಂಬಲವಿದೆ ಅನ್ನೋದು ಗೊತ್ತಾಗಲಿದೆ ಎನ್ನುವ ಮೂಲಕ ಜಮೀರ್ ಅಲ್ಪಸಂಖ್ಯಾತ ನಾಯಕರಲ್ಲ ಎಂದು ಹೇಳಿಕೆ ನೀಡಿದ್ದ ತನ್ವೀರ್ ಸೇಠ್ ಗೆ ಸವಾಲೆಸೆದರು.

ನಾನು ಹೊಂದಾಣಿಕೆ ಮಾಡಿಕೊಂಡು ಹೋಗುವ ರಾಜಕಾರಣಿಯಲ್ಲ ನಾನು ಸುಮ್ಮಸುಮ್ಮನೆ ಸಾವಾಲ್ ಹಾಕಲ್ಲ
ನನಗೆ ಸವಾಲ್ ಹಾಕಿದರೆ ಜವಾಬು ಕೊಡ್ಬೇಕಲ್ಲ ಮುಸ್ಲಿಂ ನಾಯಕ ಯಾರು ಅನ್ನೋದನ್ನ ಜನ ಗುರ್ತಿಸುತ್ತಾರೆ ನಾನೊಬ್ಬ ಸಮಾಜ ಸೇವಕ,ಸಮಾಜಸೇವೆಗೆ ಬಂದವನು ನಾನು ಇಂತದ್ದೇ ಆಗಬೇಕೆಂದು ಕೇಳುವವನಲ್ಲ ನನ್ನ ಹಣೆಯಲ್ಲಿ ದೇವರು ಬರೆದಿದ್ದ,ಅದಕ್ಕೆ ಮಂತ್ರಿಯಾದೆ ಇಲ್ಲವಾದರೆ ಸಿದ್ದರಾಮಯ್ಯಗೂ ಆಗಲ್ಲ ಪರಮೇಶ್ವರ್ ಗೂ ಆಗಲ್ಲ ದೇವರು ಬರೆದಿದ್ದರಿಂದ ಮಂತ್ರಿಯಾಗಿದ್ದೇನೆ ಎಂದರು.

ಗಿನ್ನೀಸ್ ರೆಕಾರ್ಡ್ ಮಾಡುವೆ:

ಸಚಿವನಾದರೆ ಗಿನ್ನೆಸ್ ರೆಕಾರ್ಡ್ ಮಾಡ್ತೇನೆ ಅಂತ ಹೇಳಿದ್ದು ನಿಜ.ನನ್ನ ಹೇಳಿಕೆಗೆ ಈಗಲೂ ಅದಕ್ಕೆ ನಾನು ಬದ್ಧನಾಗಿದ್ದೇನೆ. ನನಗೆ ಸ್ವಲ್ಪ ಸಮಯ ಕೊಡಿ ಮಾಡಿ ತೋರಿಸುತ್ತೇನೆ ಎಂದು ಗಿನ್ನೀಸ್ ರೆಕಾರ್ಡ್ ಮಾಡುವ ಆಶಯ ವ್ಯಕ್ತಪಡಿಸಿದರು.

ದೊಡ್ಡ ಗಾಡಿಲಿ ಓಡಾಡಿದ್ರೆ ತಾನೆ ಮಂತ್ರಿ ಅನ್ನೋದು:

ಮಾಜಿ ಸಿಎಂ ಬಳಸುತ್ತಿದ್ದ ಫಾರ್ಚೂನರ್ ಕಾರು ನೀಡುವಂತೆ ಕೇಳಿದ್ದೆ.ನಾನು ದೊಡ್ಡ ಗಾಡಿಯಲ್ಲೇ ಓಡಾಡೋದು ಹೀಗಾಗಿ ಅವರ ಹಳೆಯ ಗಾಡಿ ಕೇಳಿದ್ದೆ ಅಷ್ಟೇ ದೊಡ್ಡಗಾಡಿಯಲ್ಲಿ ಓಡಾಡಿದ್ರೆ ತಾನೇ ಮಂತ್ರಿ ಅನ್ನೋದು ಕುಮಾರಸ್ವಾಮಿಯವರು ಬಹಳ ಪಾಪ್ಯುಲರ್ ಅದಕ್ಕೆ ಅವರು ಇನ್ನೂ ಸರ್ಕಾರಿ ಕಾರು ಪಡೆದಿಲ್ಲ
ನನ್ನನ್ನ ಯಾರು ಗುರುತಿಸುತ್ತಾರೆ ಅದಕ್ಕೆ ದೊಡ್ಡ ಗಾಡಿಯಲ್ಲಿ ಓಡಾಡಿದ್ರೆ ತಾನೇ ಜನರಿಗೆ ಗೊತ್ತಾಗೋದು ಎಂದು ದೊಡ್ಡ ಗಾಡಿ ಕೇಳಿದ್ದೆ ಎಂದು ಜಮೀರ್ ಹಾಸ್ಯದ ಶೈಲಿಯಲ್ಲಿ ಸರ್ಕಾರಿ ಕಾರಿನ ಬೇಡಿಕೆಯನ್ನು ಸಮರ್ಥಿಸಿಕೊಂಡರು.

ಹಜ್ ಖಾತೆ ನೀಡಿದ್ದಕ್ಕೆ ರೋಷನ್ ಬೇಗ್ ಅಸಮಾಧಾನ ಕುರಿತು ಮಾತನಾಡಿದ ಜಮೀರ್ ಅಹಮದ್, ಎಲ್ಲರಿಗೂ ಅಸಮಾಧಾನ ಇರುತ್ತದೆ ರೋಷನ್ ಬೇಗ್ ಹಿರಿಯ ನಾಯಕರು ಅವರು ಹಜ್ ಖಾತೆ ಕೇಳೋದ್ರಲ್ಲಿ ತಪ್ಪೇನಿಲ್ಲ ಹೊಸಬರಿಗೆ ಕೊಡೋಣ ಅಂತ ನಮ್ಮ ಹೈಕಮಾಂಡ್ ನೀಡಿದೆ ಯಾರು ಕೇಪಬಲ್ ಇರ್ತಾರೋ ಅವರಿಗೆ ನೀಡಿದ್ದಾರೆ ನಾನು ಉಮ್ರಾಗೆ ಹೋಗುವ ಮೊದಲು ಅವರ ಭೇಟಿಗೆ ಪ್ರಯತ್ನಿಸಿದ್ದೆ ಅವರು ಭೇಟಿಗೆ ಸಿಕ್ಕಿಲ್ಲ ಎಂದರು.

ದುಬಾರಿ ಬೆಲೆಗೆ ರಾಗಿ ಖರೀದಿ ಪರಿಶೀಲನೆ:

3 ಕೋಟಿ ಬಿಪಿಎಲ್ ಕಾರ್ಡ್ ಬಗ್ಗೆ ಸಮಸ್ಯೆಯಾಗಿತ್ತು 45 ಲಕ್ಷ ಕಾರ್ಡ್ ಪೆಂಡಿಂಗ್ ಬಗ್ಗೆ ಚರ್ಚೆಯಾಗಿದೆ. ಕಾರ್ಡ್ ದಾರರಿಗೆ ರಾಗಿ ನೀಡುತ್ತಿದ್ದೇವೆ ,7 ಕೆ.ಜಿಯಲ್ಲಿ 5 ಅಕ್ಕಿ,2 ಕೆಜಿ ರಾಗಿಯನ್ನು ಹಳೆ ಮೈಸೂರು ಭಾಗದಲ್ಲಿ ನೀಡುತ್ತಿದ್ದೇವೆ.ರೈತರಿಂದಲೇ ನೇರವಾಗಿ 25.47ರೂ.ಗೆ ರಾಗಿ ಖರೀದಿ ಮಾಡುತ್ತಿದ್ದೇವೆ ಆದರೆ ಮಾರುಕಟ್ಟೆಯಲ್ಲಿ 19 ರೂ.ಗೆ ಸಿಗಲಿದೆ ಹೀಗಾಗಿ‌ ಹೆಚ್ಚುವರಿ ಹಣ ಯಾಕೆ ಫೋಲು ಮಾಡಬೇಕು ಇಲ್ಲಾ ಅಧಿಕಾರಿಗಳು ಇದರಲ್ಲಿ ಮೋಸ ಮಾಡುತ್ತಿದ್ದಾರಾ ಇದರ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದೇವೆ ಎಂದರು.

ಪ್ರೊ.ರಂಗಪ್ಪಗೆ ಉನ್ನತ ಶಿಕ್ಷಣ ಇಲಾಖೆ ಸಲಹೆಗಾರ ಹುದ್ದೆ ನೀಡುತ್ತಿರುವುದಕ್ಕೆ ಬಿಜೆಪಿ ತೀವ್ರ ವಿರೋಧ

ಬೆಂಗಳೂರು: ಕೆಎಸ್‌ಓಯು ಮಾನ್ಯತೆ ರದ್ದು, ನಕಲಿ ಅಂಕಪಟ್ಟಿ ಸೃಷ್ಟಿ ಸೇರಿದಂತೆ ಹಲವು ಆರೋಪಗಳನ್ನು ಎದುರಿಸುತ್ತಿರುವ ಪ್ರೊ.ಕೆ.ಎಸ್ ರಂಗಪ್ಪ ಅವರಿಗೆ ಉನ್ನತ ಶಿಕ್ಷಣ ಪರಿಷತ್ ನ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಉನ್ನತ ಶಿಕ್ಷಣ ಇಲಾಖೆ ಸಲಹೆಗಾರನ್ನಾಗಿ ‌ನೇಮಕ ಮಾಡಿದರೆ ಬಿಜೆಪಿ ಸದನದ ಒಳಗೆ ಹಾಗು ಹೊರಗೆ ಹೋರಾಟ ನಡೆಸಲಿದೆ ಎಂದು ಬಿಜೆಪಿ ಮುಖಂಡ ಗೋ.ಮಧುಸೂದನ್ ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಮಲ್ಲೇಶ್ವರಂ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಗೋ.ಮಧುಸೂದನ್, ಮೈಸೂರಿನ ಕರ್ನಾಟಕ‌ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕಳೆದ ಐದು ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿದೆ. ಇದಕ್ಕೆ ಪ್ರಮುಖ ಕಾರಣ ಕುಲಪತಿಗಳಾಗಿದ್ದ ಪ್ರೊ.ಕೆ.ಎಸ್.ರಂಗಪ್ಪ ಹಾಗು ಅವರ ನೆರಳಿನಂತೆ ಇದ್ದ ಪ್ರೊ.ಕೃಷ್ಣನ್. ರಂಗಪ್ಪ ಅವರು ಅಕ್ರಮವಾಗಿ ವಿವಿಯ ವ್ಯಾಪ್ತಿಯನ್ನು ಮೀರಿ ಖಾಸಗಿ ಸಂಸ್ಥೆಗಳನ್ನು ವಿವಿ ಪಾಲುದಾರರಾಗಿ ಮಾಡಿಕೊಂಡಿದ್ದಾರೆ. ಅವರ ಮೂಲಕ ಡಿಗ್ರಿಗಳು, ಪ್ರಮುಖವಾಗಿ ತಾಂತ್ರಿಕ‌ ಪದವಿ ಸರ್ಟಿಫಿಕೇಟ್ ಮಾರಾಟ ಕೇಂದ್ರವೇ ನಿರ್ಮಾಣವಾಗಿತ್ತು. ಎಐಸಿಟಿ ಒಪ್ಪಗೆ ಇಲ್ಲದಿದ್ದರೂ ಸಹ ಸ್ಪೇಸ್ ಇಂಜಿನಿಯರಿಂಗ್, ಬಿಟೆಕ್,ಎಂಟೆಕ್ ಡಿಗ್ರಿಗಳನ್ನ ಕೊಡಲಾಗಿದೆ.

ಈಗಾಗಲೇ ರಂಗಪ್ಪನವರ ಅಕ್ರಮಗಳ ಬಗ್ಗೆ ವಿಧಾನ ಪರಿಷತ್ ನ ಸದನ ಸಮಿತಿ ವರದಿಯನ್ನು ಸಲ್ಲಿಸಿದೆ. ಕೇಂದ್ರ ಮಾನವ ಸಂಪನ್ಮೂಲ ಸಚಿವರಿಗೂ ವರದಿ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರ ಯಾವುದೇ ಕ್ಷಣದಲ್ಲಾದರೂ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬಹುದು. ಕುಮಾರಸ್ವಾಮಿ ಯವರು ರಂಗಪ್ಪನವರನ್ನು ಉನ್ನತ ಶಿಕ್ಷಣದ ಸಲಹೆಗಾರರಾಗಿ ನೇಮಕ ಮಾಡಿಕೊಂಡ ಮರುಕ್ಷಣವೇ ಸಿಬಿಐ ತನಿಖೆ ಪ್ರಾರಂಭವಾದರೆ ರಾಜ್ಯ ಸರ್ಕಾರಕ್ಕೆ ಎಂತಹಾ ಮಂಗಳಾರತಿ ಆಗುತ್ತದೆ ಎಂಬುದನ್ನು ಕುಮಾರಸ್ವಾಮಿ ಯವರು ಅರ್ಥ ಮಾಡಿಕೊಳ್ಳಬೇಕು ಎಂದರು.