ಬಿಎಂಟಿಸಿ ಬಸ್ ಪ್ರಯಾಣದರ ಹೆಚ್ಚಳಕ್ಕೆ ಸರ್ಕಾರದಿಂದ‌ ರೆಡ್ ಸಿಗ್ನಲ್

ಬೆಂಗಳೂರು ಬಸ್ ಪ್ರಯಾಣದರ ಹೆಚ್ಚಳಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಲ್ಲಿಕೆ ಮಾಡಿದ್ದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಸ್ಪಷ್ಟವಾಗಿ ತಿರಸ್ಕರಿಸಿದೆ.

ಹೌದು,ಬಿಎಂಟಿಸಿ ಬಸ್ ಪ್ರಯಾಣ ದರವನ್ನು ಶೇ.15-20 ರಷ್ಟು ಹೆಚ್ಚಳ ಮಾಡಲು ಅನುಮತಿ ನೀಡುವಂತೆ ಬಿಎಂಟಿಸಿ ಅಧ್ಯಕ್ಷ ವಿ.ಪೊನ್ನುರಾಜ್ ಸಲ್ಲಿಸಿದ್ದ ಪ್ರಸ್ತಾವನೆಗೆ ಸಮ್ಮತಿ ನೀಡಲು ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ನಿರಾಕರಿಸಿದ್ದಾರೆ. ಸಧ್ಯದ ಮಟ್ಟಿಗೆ ಬಸ್ ಪ್ರಯಾಣದರ ಎರಿಕೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸರ್ಕಾರ ರಚನೆಯಾಗಿ ತಿಂಗಳು‌ ಕೂಡ ಕಳೆದಿಲ್ಲ,ಇಷ್ಟು ಬೇಗ ಬಸ್ ಪ್ರಯಾಣದರ ಹೆಚ್ಚಿಸಿದರೆ ಅದು ಸರ್ಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.ಸರ್ಕಾರ ಜನ ವಿರೋಧಿ ಎನ್ನುವ ಹಣೆಪಟ್ಟಿ ಕಟ್ಟಿಕೊಳ್ಳಬೇಕಾಗಲಿದೆ ಎನ್ನುವ ಕಾರಣಕ್ಕೆ ಬಸ್ ಪ್ರಯಾಣದರ ಹೆಚ್ಚಳಕ್ಕೆ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ರೆಡ್ ಸಿಗ್ನಲ್ ನೀಡಿದ್ದಾರೆ.

ಈ ಹಿಂದೆಯೂ ಬಿಎಂಟಿಸಿ ಬಸ್ ಪ್ರಯಾಣದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.ಆದರೆ ಚುನಾವಣಾ ವರ್ಷ ಎನ್ನುವ ಕಾರಣಕ್ಕೆ ಅಂದಿನ ಸಾರಿಗೆ ಸಚಿವ ಹೆಚ್.ಎಂ ರೇವಣ್ಣ ಪ್ರಯಾಣ ದರ ಹೆಚ್ಚಳಕ್ಕೆ ಅನುಮತಿ ನೀಡಿರಲಿಲ್ಲ.ಈಗ ಎರಡನೇ ಬಾರಿ ಸಲ್ಲಿಸಿದ್ದ ಪ್ರಸ್ತಾವನೆಯೂ ತಿರಸ್ಕೃತಗೊಂಡಿದೆ.

ಸತತವಾಗಿ ಡೀಸೆಲ್ ದರದಲ್ಲಿ ಆಗುತ್ತಿರುವ ಹೆಚ್ಚಳ ಮತ್ತು ಸಿಬ್ಬಂದಿ ವೇತನ ಹೆಚ್ಚಳದಿಂದಾಗಿ ಬಿಎಂಟಿಸಿ ಬೊಕ್ಕಸಕ್ಕೆ ಕೊಟ್ಯಾಂತರ ರೂ.ಗಳ ಆರ್ಥಿಕ ಹೊರೆ ಹೆಚ್ಚಾಗಿದೆ.ಹೀಗಾಗಿ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಅನುಮತಿ ಕೋರಲಾಗಿತ್ತು.

ಕೆಎಸ್ಆರ್‌ಟಿಸಿ ದರವೂ ಏರಿಕೆ ಇಲ್ಲ:

ಬಿಎಂಟಿಸಿ ಬಸ್ ಪ್ರಯಾಣದರ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಸಮ್ಮತಿ ನೀಡಿದಲ್ಲಿ ಕೆಎಸ್ಆರ್‌ಟಿಸಿ ಬಸ್ ಪ್ರಯಾಣದರ ಹೆಚ್ಚಳಕ್ಕೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಲು ಕೆಎಸ್ಆರ್‌ಟಿಸಿ, ಈಶಾನ್ಯ ಸಾರಿಗೆ,ವಾಯುವ್ಯ ಸಾರಿಗೆ ನಿಗಮಗಳು ಸಿದ್ದತೆ ಮಾಡಿಕೊಂಡಿದ್ದವು,ಆದರೆ ಬಿ ಎಂ ಟಿ ಸಿ ಪ್ರಸ್ತಾವನೆ ತಿರಸ್ಕಾರಗೊಂಡ ಹಿನ್ನಲೆಯಲ್ಲಿ ಸಾರಿಗೆ ನಿಗಮಗಳು ಸಧ್ಯಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡದಿರಲು ನಿರ್ಧರಿಸಿವೆ.

ದಿವಾ ಮಿಸ್ ಯೂನಿವರ್ಸ್ ಇಂಡಿಯಾಗೆ ಆಡಿಷನ್

ಬೆಂಗಳೂರು:ದೇಶದ ಮಿಸ್  ಯೂನಿವರ್ಸ್‌ ಸ್ಪರ್ಧೆಗೆ ಅರ್ಹತೆ ಪಡೆಯಲು ಮೆಟ್ಟಿಲಾಗಿರುವ ಯಮಾಹಾ ಫ್ಯಾಸಿನೋ ಮಿಸ್ ದಿವಾ ಮಿಸ್ ಯೂನಿವರ್ಸ್‌ ಇಂಡಿಯಾ 2018 ಗ್ಲಾಮರ್ ಆರಂಭಗೊಂಡಿದೆ.

ಈ ಸ್ಪರ್ಧೆಯ ವಿಜೇತರು ದೇಶದ ಮಿಸ್  ಯೂನಿವರ್ಸ್‌ ಸ್ಪರ್ಧೆಗೆ ಅರ್ಹತೆ ಪಡೆಯಲಿದ್ದು,ಭಾರತದ ಸೌಂದರ್ಯ ಮತ್ತು ಪ್ರತಿಭೆಯನ್ನು ಜಾಗತಿಕ ವೇದಿಕೆಗೆ ಕೊಂಡೊಯ್ಯುವುದಕ್ಕಾಗಿ, ಈ ಕಾರ್ಯಕ್ರಮದ ಸಲಹೆಗಾರ್ತಿ ಮತ್ತು ರಾಯಭಾರಿಯಾಗಿರುವ ಲಾರಾ ದತ್ತಾ, ಖುಷಿ, ಸಾಹಸ, ತಮಾಷೆ, ಸ್ಪರ್ಧಾ ಮನೋಭಾವ, ಸಂವೇದನೆ, ಫಿಟ್, ಖುಷಿಯನ್ನೊಳಗೊಂಡ ಒಬ್ಬ ಯುವತಿಯನ್ನು ಕಂಡುಕೊಳ್ಳುವಲ್ಲಿ ಶ್ರಮಿಸಲಿದ್ದಾರೆ.

ದಿವಾಗಳು ತೀವ್ರ ತರಬೇತಿಗೆ ಒಳಪಡುವ ಜೊತೆಗೆ ಮಾಡೆಲ್ ಉದ್ಯಮದಲ್ಲೇ ಉತ್ತಮ ಪರಿಣಿತಿಯನ್ನು ಪಡೆಯತ್ತಾರೆ ಮತ್ತು ಮುಂದಿನ ಯಮಾಹಾ ಫ್ಯಾಸಿನೋ ಮಿಸ್ ದಿವಾ – ಮಿಸ್ ಯೂನಿವರ್ಸ್‌ ಇಂಡಿಯಾ 2018ರ ಗ್ರ್ಯಾಂಡ್‌ ಫಿನಾಲೆಯಲ್ಲಿ ಕಾಣಿಸಿಕೊಳ್ಳುತ್ತಾರೆ.

ದೇಶಾದ್ಯಂತ ಜೂನ್ 24ರಿಂದ ಆಡಿಷನ್‌ಗಳು ಆರಂಭವಾಗಲಿವೆ. ಮಿಸ್‌ ಯೂನಿವರ್ಸ್‌ಗೆ ಟಿಕೆಟ್‌ ಪಡೆಯಲು ಜೀವನದಲ್ಲಿ ಒಮ್ಮೆ ಅವಕಾಶವನ್ನು ವಿಜೇತರು ಪಡೆಯಲಿದ್ದಾರೆ. 10 ನಗರಗಳಲ್ಲಿ ಆಡಿಷನ್‌ಗಳು ನಡೆಯಲಿದ್ದು, ಲಖನೌ, ಕೋಲ್ಕತಾ, ಇಂದೋರ್, ಹೈದರಾಬಾದ್, ಪುಣೆ, ಅಹಮದಾಬಾದ್‌, ಬೆಂಗಳೂರು, ಚಂಡೀಗಢ ಮತ್ತು ದೆಹಲಿಯಲ್ಲೂ ಜರುಗಲಿದೆ. ಅಂತಿಮ ಕಾರ್ಯಕ್ರಮ ಮುಂಬೈನಲ್ಲಿ ನಡೆಯಲಿದೆ. 4 ಸಿಟಿ ಟೂರ್‌ ಎಂಬ ಹೊಸ ಮಾದರಿಯನ್ನು ಅಳವಡಿಸಿಕೊಳ್ಳಲಾಗಿದ್ದು, ಗೋವಾ, ದೆಹಲಿ, ಚೆನ್ನೈ ಮತ್ತು ಮುಂಬೈನಲ್ಲಿ ಉಪ ಸ್ಪರ್ಧೆ ನಡೆಯಲಿದೆ.

ಲಾರಾ ದತ್ತಾ ಹಾಗೂ ಪ್ಯಾನೆಲಿಸ್ಟ್‌ಗಳು ಮತ್ತು ತೀರ್ಪುಗಾರರು ದೇಶದ ವಿವಿಧ ಭಾಗದ ಮಿಸ್ ದಿವಾಗಳನ್ನು ವಿವಿಧ ಟಾಸ್ಕ್‌ಗಳ ಆಧಾರದಲ್ಲಿ ಜಡ್ಜ್ ಮಾಡಲಿದ್ದಾರೆ. ಥೀಮ್‌ಗಳನ್ನು ವಿವಿಧ ಅಂಶಗಳನ್ನು ಆಧರಿಸಿ ವಿನ್ಯಾಸಗೊಳಿಸಲಾಗುತ್ತದೆ ಮತ್ತು ತೀರ್ಪು ನೀಡಲಾಗುತ್ತದೆ. ರ್ಯಾಂಪ್‌ ವಾಕ್‌, ಫೊಟೊ ಶೂಟ್, ಪರ್ಫೆಕ್ಟ್‌ ಬಾಡಿ, ಸಂವಹನ ಕೌಶಲಗಳು ಮತ್ತು ಇತರೆ ಥೀಮ್‌ಗಳು ಇರಲಿವೆ.

ಇದು ಭಾರತದ ಶೋ ಟೈಮ್! ಮಿಸ್ ಯೂನಿವರ್ಸ್‌ 2018 ರಲ್ಲಿ ದೇಶವನ್ನು ಪ್ರತಿನಿಧಿಸುವ ಸುಂದರಿಯನ್ನು ನಾವು ಆಯ್ಕೆ ಮಾಡಲಿದ್ದು, ದೇಶದ ಎಲ್ಲ ಮಹಿಳೆಯರನ್ನೂ ಈ ಸ್ಪರ್ಧೆಗೆ ಆಹ್ವಾನಿಸುತ್ತಿದ್ದೇವೆ ಎಂದು ಯಮಾಹಾ ಫ್ಯಾಸಿನೋ ಮಿಸ್ ದಿವಾ 2018 ತಿಳಿಸಿದೆ.

ದೆಹಲಿ ರಾಜಕೀಯ ಪ್ರಹಸನ: ಮೌನ ಮುರಿದ ರಾಹುಲ್

ನವದೆಹಲಿ : ಕಳೆದ ಒಂದು ವಾರದಿಂದ ದೆಹಲಿಯಲ್ಲಿ ನಡೆಯುತ್ತಿರುವ ರಾಜಕೀಯದ ಕುರಿತು ಕೊನೆಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮೌನ ಮುರಿದಿದ್ದು, ಟ್ವಿಟ್ಟರ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಗುಡುಗಿದ್ದಾರೆ.

ದೆಹಲಿಯಲ್ಲಿ ಸೃಷ್ಟಿಯಾಗಿರುವ ಅರಾಜಕತೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ದೆಹಲಿ ಮುಖ್ಯಮಂತ್ರಿ ಇಬ್ಬರೂ ಕಾರಣರಾಗಿದ್ದಾರೆ‌. ಇವರಿಂದ ದೆಹಲಿಯ ಜನರು ಬಲಿಪಶುಗಳಾಗಿದ್ದಾರೆ ಎಂದು ಬಿಜೆಪಿ ಮತ್ತು ಎಎಪಿ ಪಕ್ಷಗಳ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಹುಲ್‌ ಟ್ವಿಟರ್‌ ಅಂಶಗಳು

ದಿಲ್ಲಿ ಸಿಎಂ ಎಲ್‌ಜಿ ಕಛೇರಿಯಲ್ಲಿ ಧರಣಿ ಕೂತಿದ್ದಾರೆ;

ಬಿಜೆಪಿ ದಿಲ್ಲಿ ಸಿಎಂ ನಿವಾಸದಲ್ಲಿ ಧರಣಿ ಕೂತಿದೆ;

ದಿಲ್ಲಿ ಸರ್ಕಾರಿ ಅಧಿಕಾರಿಗಳು ಪತ್ರಿಕಾ ಗೋಷ್ಠಿ ನಡೆಸುತ್ತಿದ್ದಾರೆ;

ಈ ಎಲ್ಲ ಅರಾಜಕತೆಗೆ ಪ್ರಧಾನಿ ಕುರಡರಾಗಿದ್ದಾರೆ; ಪರೋಕ್ಷವಾಗಿ ರಾಷ್ಟ್ರ ರಾಜಧಾನಿಯಲ್ಲಿ ಅರಾಜಕತೆ, ಅವ್ಯವಸ್ಥೆಗೆ ಕಾರಣರಾಗಿದ್ದಾರೆ;

ಈ ಎಲ್ಲಾ ಪ್ರಹಸನಗಳಿಂದ ದೆಹಲಿ ಜನರು ಬಲಿಪಶುಗಳಾಗಿದ್ದಾರೆ.

ಇಂಗ್ಲೆಂಡ್ ಆಟಕ್ಕಾಗಿ ಬೆಂಗಳೂರಿನಲ್ಲಿ ಅಭ್ಯಾಸ ನಡೆಸಿದ ಧೋನಿ!

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರಸಿಂಗ್ ದೋನಿ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ನಡೆಸಿದರು.

ಎಂ.ಎಸ್.ಧೋನಿ ಅವರಿಗೆ ಥ್ರೋ ಡೌನ್ ಪರಿಣತ ರಾಘವೇಂದ್ರ ಮತ್ತು ಮಧ್ಯಮ ವೇಗದ ಬೌಲರ್ ಶಾರ್ದೂಲ್ ಠಾಕೂರ್ ಬೌಲಿಂಗ್ ಮಾಡಿದರು.

ಭಾರತ ಕ್ರಿಕೆಟ್ ತಂಡ 20–20 ಮತ್ತು ಏಕದಿನ ಸರಣಿಗಳಲ್ಲಿ ಆಟವಾಡಲು ಇದೇ ತಿಂಗಳ ಕೊನೆಯಲ್ಲಿ ಇಂಗ್ಲೆಂಡ್ ಪ್ರವಾಸ ಬೆಳೆಸಲಿದೆ. ಈ ತಂಡದಲ್ಲಿ ದೋನಿ ಆಡಲಿದ್ದಾರೆ. ಆದ್ದರಿಂದ ಬೆಂಗಳೂರಿನ ಎನ್‌ಸಿಎ ಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ಅಭ್ಯಾಸ ನಡೆಸಿದರು.

ವಾಟ್ಸಾಪ್ ಶೀಘ್ರದಲ್ಲೇ ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ಸೇವೆ ಸ್ಥಗಿತಗೊಳಿಸಲಿದೆ: ಅದ್ರಲ್ಲಿ ನಿಮ್ಮ ಫೋನ್ ಕೂಡ ಇದೆಯೇ ತಿಳಿಬೇಕಾ?

ನವದೆಹಲಿ: ವಾಟ್ಸಾಪ್ ಈ ವರ್ಷ ಹಲವಾರು ಸ್ಮಾರ್ಟ್ ಫೋನ್ ಗಳಿಗೆ ತನ್ನ ಸೇವೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಹೌದು ವಾಟ್ಸಾಪ್ ಅಪ್ಲಿಕೇಷನ್ ಅನ್ನು ನವೀಕರಣ ಮಾಡಲಾಗಿದ್ದು. ಅಪ್‌ಡೇಟ್ ವರ್ಷನ್ ಬಿಡುಗಡೆ ಮಾಡಲಾಗುತ್ತಿದೆ. ಈ ಅಪ್ ಡೇಟ್ ವರ್ಷನ್ ಬಳಸಲಾಗದ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ವಾಟ್ಸಾಪ್ ಕಂಪನಿಯು 2018 ರ ಅಂತ್ಯದ ವೇಳೆಗೆ ಯಾವೆಲ್ಲಾ ಸ್ಮಾರ್ಟ್‌ಫೋನ್ಗಳಲ್ಲಿ ಸೇವೆ ಸ್ಥಗಿತಗೊಳಿಸಲಿದೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಳೆಯ ಆವೃತ್ತಿಯ ಸ್ಮಾರ್ಟ್ ಫೋನ್‌ಗಳನ್ನು ಬಳಸುತ್ತಿರುವ ತನ್ನ ಬಳಕೆದಾರರು ಹೊಸ ಆವೃತ್ತಿ ಪೋನ್‌ಗಳನ್ನು ಬಳಸುವಂತೆ ಕಂಪನಿ ಮನವಿ ಮಾಡಿದ್ದು, ಒಂದು ವೇಳೆ ಹಳೇ ಆವೃತ್ತಿ ಫೋನ್ ಬಳಸುತ್ತಿದ್ದರೆ ವಾಟ್ಸಾಪ್ ಯಾವಾಗ ಬೇಕಾದರೂ ತನ್ನ ಸೇವೆ ಸ್ಥಗಿತಗೊಳಿಸಬಹುದು ಆದ್ದರಿಂದ ಹೊಸ ಆವೃತ್ತಿಗೆ ಅಪ್‌ಡೇಟ್ ಮಾಡಲು ನಾವು ಶಿಫಾರಸ್ಸು ಮಾಡುತ್ತೇವೆ ಎಂದು ತಿಳಿಸಿದೆ.

ಈಗಾಗಲೇ WhatsApp ಸೇವೆ ಸ್ಥಗಿತಗೊಂಡಿರುವ ಸ್ಮಾಟ್‌ಫೋನ್ ಆವೃತ್ತಿಗಳ

* ಆಂಡ್ರಾಯ್ಡ್ ಆವೃತ್ತಿಗಳು 2.3.3 ಕ್ಕಿಂತ ಹಳೆಯದು

* ವಿಂಡೋಸ್ ಫೋನ್ 8.0 ಮತ್ತು ಅದಕ್ಕಿಂತ ಹಳೆಯದು

* ಐಫೋನ್ 3 ಜಿಎಸ್ / ಐಒಎಸ್ 6

* ನೋಕಿಯಾ ಸಿಂಬಿಯಾನ್ ಎಸ್ 60

* ಬ್ಲ್ಯಾಕ್ಬೆರಿ ಓಎಸ್ ಮತ್ತು ಬ್ಲ್ಯಾಕ್ಬೆರಿ 10

ಈ ವರ್ಷದಿಂದ WhatsApp ಸೇವೆ ಸ್ಥಗಿತಗೊಳ್ಳಲಿರುವ ಆವೃತ್ತಿಗಳು

* ನೋಕಿಯಾ S40 ಡಿಸೆಂಬರ್ 31, 2018 ರವರೆಗೆ

* ಫೆಬ್ರವರಿ 1, 2020 ರವರೆಗೆ Android ಆವೃತ್ತಿಗಳು 2.3.7 ಮತ್ತು ಅದಕ್ಕಿಂತ ಹೆಚ್ಚಿನವು

* ಫೆಬ್ರವರಿ 1, 2020 ರವರೆಗೆ ಐಒಎಸ್ 7 ಮತ್ತು ಅದಕ್ಕಿಂತ ಹೆಚ್ಚಿನದು

WhatsApp ಹೊಸ ಆವೃತ್ತಿಗೆ ಅಪ್ಗ್ರೇಡ್ ಮಾಡಲು ಸೂಚಿಸಿರುವ ಆವೃತ್ತಿಗಳು.

* ಆಂಡ್ರಾಯ್ಡ್ ಓಎಸ್ 4.0 ಮತ್ತು ಮೇಲಿನದು

* ಐಒಎಸ್ ಐಒಎಸ್ 8 ಮತ್ತು ಮೇಲ್ಪಟ್ಟು ಚಾಲನೆಯಲ್ಲಿದೆ

* ವಿಂಡೋಸ್ ಫೋನ್ 8.1 ಮತ್ತು ಮೇಲಿನದು

ಗೌರಿ ಹತ್ಯೆ ಆರೋಪಿಗಳಿಗೆ ದೈಹಿಕ ಹಿಂಸೆ ಆರೋಪ: ದಾಖಲೆ ಪರಿಶೀಲಿಸಲು ಮುಂದಾದ ಹೈ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿರುವ ನಾಲ್ಕು ಆರೋಪಿಗಳಿಗೆ ದೈಹಿಕ ಹಿಂಸೆ ನೀಡಲಾಗುತ್ತಿದೆ ಎಂದು ಆರೋಪ ಮಾಡಲಾಗಿದ್ದು, ಈ ಸಂಬಂಧ ಅಧೀನ ನ್ಯಾಯಾಲಯಗಳಿಗೆ ಸಲ್ಲಿಕೆಯಾಗಿರುವ ದಾಖಲೆಗಳನ್ನು ಪರಿಶೀಲಿಸಲು ಹೈಕೋರ್ಟ್ ಮುಂದಾಗಿದೆ.

ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ತಮಗೆ ದೈಹಿಕ ಹಿಂಸೆ ನೀಡುತ್ತಿದ್ದು, ಈ ಕುರಿತು ವಿಚಾರಣೆ ನಡೆಸಲು ಗೃಹ ಇಲಾಖೆಗೆ ನಿರ್ದೇಶಿಸುವಂತೆ ಕೋರಿ ಆರೋಪಿಗಳಾದ ಸುಜಿತ್ ಕುಮಾರ್ ಅಲಿಯಾಸ್ ಪ್ರವೀಣ್, ಮನೋಹರ್ ಯಡವೆ, ಅಮೋಲ್ ಕಾಳೆ ಮತ್ತು ಅಮಿತ್ ರಾಮಚಂದ್ರ ದೇಗ್ವೆಕರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿ ವಿಚಾರಣೆ ನ್ಯಾಯಮೂರ್ತಿ ಕೆ.ಎನ್. ಪಣೀಂದ್ರ ಅವರಿದ್ದ ಏಕಸದಸ್ಯ ಪೀಠದಲ್ಲಿ ನಡೆಯಿತು. ಆರೋಪಿಗಳಿಗೆ ದೈಹಿಕ ಹಿಂಸೆ ನೀಡಿದ್ದಾರೆ ಎಂಬ ಆರೋಪ ಸಂಬಂಧ ಪ್ರಕರಣದ ವಿಚಾರಣೆ ನಡೆಸುತ್ತಿರುವ 1ನೇ ಎಸಿಎಂಎಂ ಹಾಗೂ 3ನೇ ಎಸಿಎಂಎಂ ನ್ಯಾಯಾಲಯಗಳ ಗಮನಕ್ಕೆ ತರಲಾಗಿದೆ. ಹೀಗಿದ್ದರೂ ಅಧೀನ ನ್ಯಾಯಾಲಯಗಳು ಅರ್ಜಿದಾರರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲು ಆದೇಶಿಸಲಿಲ್ಲ ಎಂದು ಅರ್ಜಿದಾರರ ಪರ ವಕೀಲ ಅಮೃತೇಶ್ ದೂರಿದರು.

ಸರ್ಕಾರಿ ಅಭಿಯೋಜಕ ರಾಚಯ್ಯ ವಾದ ಮಂಡಿಸಿ, ತನಿಖೆಯ ವೇಳೆ ಪೊಲೀಸರು ಅರ್ಜಿದಾರರಿಗೆ ಯಾವುದೇ ರೀತಿಯ ದೈಹಿಕ ಹಿಂಸೆ ನೀಡಿಲ್ಲ. ಹಲವು ಬಾರಿ ಆರೋಪಿಗಳನ್ನು ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಒಮ್ಮೆಯೂ ಅವರು ಪೊಲೀಸರು ತಮಗೆ ಚಿತ್ರಹಿಂಸೆ ನೀಡಿರುವ ಕುರಿತು ನ್ಯಾಯಾಧೀಶರಿಗೆ ತಿಳಿಸಿಲ್ಲ. ಆರೋಪಿಗಳ ಪರ ವಕೀಲರು ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದರು.

ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರ ಪರ ವಕೀಲರು ಸಲ್ಲಿಸಿರುವ ಪ್ರಮಾಣ ಪತ್ರದ ಸತ್ಯಾಸತ್ಯತೆ ಪರಿಶೀಲಿಸಲು ಅಧೀನ ನ್ಯಾಯಾಲಯಗಳಿಂದ ದಾಖಲೆ ತರಿಸಿಕೊಂಡು ಪರಿಶೀಲನೆ ನಡೆಸುವ ಅಗತ್ಯವಿದೆ. ಹೀಗಾಗಿ, ಪ್ರಮಾಣಪತ್ರದ ಪ್ರತಿಯನ್ನು 1ನೇ ಎಸಿಎಂಎಂ ಹಾಗೂ 3ನೇ ಎಸಿಎಂಎಂ ನ್ಯಾಯಾಲಯಗಳಿಗೆ ಕಳುಹಿಸಬೇಕು. ಪ್ರಮಾಣಪತ್ರದಲ್ಲಿ ಮಾಡಲಾಗಿರುವ ಆರೋಪಗಳ ಸಂಬಂಧ 1ನೇ ಎಸಿಎಂಎಂ ಮತ್ತು 3ನೇ ಎಸಿಎಎಂ ನ್ಯಾಯಾಲಯಗಳು 10 ದಿನಗಳ ಒಳಗೆ ಹೈಕೋರ್ಟ್‌ಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿ ಅರ್ಜಿ ವಿಚಾರಣೆ ಮುಂದೂಡಿತು.