ಕುಮಾರಸ್ವಾಮಿ ತಮ್ಮ ಹಣಕಾಸಿನ ಇತಿಮಿತಿ ಅರಿತು ರೈತರ ಸಾಲ ಮನ್ನಾ ಘೋಷಣೆ ಮಾಡಬೇಕಿತ್ತು: ಬಿಎಸ್ವೈ

ಬೆಂಗಳೂರು: ಬಿಜೆಪಿ ಅಧಿಕಾರದಲ್ಲಿರುವ ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ರೈತರ ಸಾಲ ಮನ್ನಾ ಮಾಡಲಾಗಿದೆ. ಆದರೆ, ಅಲ್ಲಿ ರೈತರ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರ ಒಂದು ನಯಾಪೈಸೆ ನೆರವು ನೀಡಿಲ್ಲ ಎನ್ನುವ ಮೂಲಕ ರೈತರ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರದಿಂದ ಯಾವುದೇ ನೆರವು ಸಿಗುವುದಿಲ್ಲ ಎಂಬ ಸುಳಿವನ್ನು ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ನೀಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ, ರೈತರ ಸಾಲ ಮನ್ನಾ ಮಾಡಲು ಶೇ.50ರಷ್ಟು ನೆರವು ನೀಡುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಕೇಂದ್ರ ಸರ್ಕಾರಕ್ಕೆ ಮಾಡಿದ ಮನವಿಗೆ ತಿರುಗೇಟು ನೀಡಿದರು, ತಮ್ಮ ಆರ್ಥಿಕ ಇತಿಮಿತಿ ಅರಿತು ರೈತರ ಸಾಲ ಮನ್ನಾ ಘೋಷಣೆ ಮಾಡಬೇಕಿತ್ತು. ಈಗಲೂ ಕುಮಾರಸ್ವಾಮಿಯವರು ಬಜೆಟ್ ಮಂಡನೆ ಮಾಡುವವರೆಗೆ ನಾವು ಕಾಯುತ್ತೇವೆ. ಅಲ್ಲಿಯವರಗೆ ಯಾವುದೇ ಪ್ರತಿಕ್ರಿಯೆ ನೀಡದಂತೆ ಬಿಜೆಪಿಯ ಎಲ್ಲ ಪ್ರಮುಖರಿಗೆ ಸೂಚಿಸಿದ್ದೇನೆ ಎಂದು ಹೇಳಿದರು. ಆದ್ರೂ, ಬಜೆಟ್‌ ಮಂಡನೆಗೂ ಮುನ್ನ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪ್ರಣಾಳಿಕೆಗಳನ್ನು ಮುಖ್ಯಮಂತ್ರಿಗಳು ಓದಬೇಕು ಎಂದರು.

ಸರ್ಕಾರ ಗೊಂದಲದ ಗೂಡಾಗಿದ್ದು ಬಜೆಟ್‌ ಮಂಡನೆ ವಿಚಾರದಲ್ಲೂ ಗೊಂದಲವಿದೆ. ಸಿದ್ದರಾಮಯ್ಯ ಬಜೆಟ್‌ ಬೇಡ ಅಂದರೆ ಡಿಸಿಎಂ ಪರಮೇಶ್ವರ್ ಬಜೆಟ್‌ ಮಂಡಿಸಬೇಕು ಎನ್ನುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಸಾಲದ ಕಾವೇರಿ, ಜೋಗದಿಂದ ಬೆಂಗಳೂರಿಗೆ ಬರುತ್ತೆ ಕುಡಿಯುವ ನೀರು: ಭಗೀರಥ ಪ್ರಯತ್ನದ ಸುಳಿವು ನೀಡಿದ ಪರಂ

ಬೆಂಗಳೂರು: ರಾಜಧಾನಿಯ ಕುಡಿಯುವ ನೀರಿನ ದಾಹ ತಣಿಸಲು ಕಾವೇರಿಯಿಂದ ಅಸಾಧ್ಯವೆನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಲಿಂಗನಮಕ್ಕಿ ಹಾಗೂ ಎತ್ತಿನಹೊಳೆ ನೀರನ್ನು ರಾಜಧಾನಿಗೆ ಪೂರೈಸಲು ಗಂಭೀರ ಚಿಂತನೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಾ.ಜಿ ಪರಮೇಶ್ವರ್ ಹೇಳಿದರು.

ಮುಂದಿನ ಐದು ದಿನಗಳ ಕಾಲ ಹೆಚ್ಚು ಮಳೆ ಸುರಿಯುವ ಮುನ್ಸೂಚನೆ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಸಂಬಂಧ ವಿಧಾನಸೌಧದಲ್ಲಿ ಇಂದು ಬೆಂಗಳೂರು ಶಾಸಕರು,ಸಂಸದರ ಸಭೆ ನಡೆಯಿತು. ಡಿಸಿಎಂ ಪರಮೇಶ್ವರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯದ ಬಗ್ಗೆ ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ ಪ್ರಸ್ತಾಪಿಸಿದರು. ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಸ್ವಚ್ಛಗೊಳಿಸ ಬೇಕು ಎಂದು ಅಧಿಕಾರಿಗಳ ಗಮನ ಸೆಳೆದರು.

ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪರಮೇಶ್ವರ್, ಬೆಂಗಳೂರಿನ ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತು ಚರ್ಚೆ ನಡೆಸಿದ್ದೇವೆ. ಅಂತರ್ಜಲ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ನೀರಿಗಾಗಿ ಪರ್ಯಾಯ ವ್ಯವಸ್ಥೆ ಮಾಡಲು ಚಿಂತನೆ ಮಾಡುತ್ತಿದ್ದೇವೆ. ಕಾವೇರಿ 5ನೇ ಹಂತದ ಯೋಜನೆ ಮಾಡಬೇಕು ಕಾವೇರಿ ನೀರಿನ ಲಭ್ಯತೆ ಆಧಾರದಲ್ಲಿ 5ನೇ ಹಂತವೇ ಕೊನೆಯ ಯೋಜನೆಯಾಗಲಿದೆ. ಆದ್ದರಿಂದ ಲಿಂಗನಮಕ್ಕಿ ಜಲಾಶಯ ಹಾಗು ಎತ್ತಿನಹೊಳೆ ಯೋಜನೆಯಿಂದ ಬೆಂಗಳೂರಿಗೆ ನೀರು ಸರಬರಾಜು ಮಾಡುವ ಬಗ್ಗೆ ಚಿಂತನೆ ಇದೆ. ಬೋರ್ ವೆಲ್ ತೆಗೆಯುವುದನ್ನು ನಿರ್ಬಂಧ ಮಾಡುತ್ತೇವೆ ಮನೆ ನಿರ್ಮಾಣ ಪರವಾನಿಗೆ ನೀಡಲು ಮಳೆ ನೀರು ಕೊಯ್ಲು ಕಡ್ಡಾಯಗೊಳಿಸಿ ಅಂತರ್ಜಲ ವೃದ್ಧಿಗೆ ಕ್ರಮ ವಹಿಸುತ್ತೇವೆ ಎಂದರು.

ಬೆಂಗಳೂರು ಕೆರೆಗಳು ಸಂಪೂರ್ಣ ಕಲುಷಿತ ಆಗಿವೆ ಕೆಲ ಕೆರೆಗಳು ಸರಿಪಡಿಸಲು ಆಗದ ಸ್ಥಿತಿಗೆ ತಲುಪಿವೆ
ಕೆರೆಗಳ ಮಾಲಿನ್ಯ ತಡೆದು ಅಭಿವೃದ್ಧಿ ಮಾಡಲು ಸಮರೋಪಾದಿಯಲ್ಲಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.

ಬಿಎಸ್ವೈ ನನ್ನನ್ನು ಬೀದಿಗೆ ತಳ್ಳಿದರು: ಪುಟ್ಟಸ್ವಾಮಿ

ಬೆಂಗಳೂರು: ರಾಜಕಾರಣದಲ್ಲಿ 40 ವರ್ಷ ದುಡಿದಿದ್ದೇನೆ. ಯಡಿಯೂರಪ್ಪ ಅವರ ಎಲ್ಲಾ ಕಷ್ಟ ಕಾಲದಲ್ಲಿ ಅವರ ಜೊತೆಗಿದ್ದೆ. ಆದ್ರೆ ಈಗ ಕೆ.ಪಿ. ನಂಜುಂಡಿಯನ್ನು ವಿಧಾನ ಪರಿಷತ್ ಸದಸ್ಯರಾಗಿ ಮಾಡುವ ಮೂಲಕ ಯಡಿಯೂರಪ್ಪನವರೇ ನನಗೆ ಅನ್ಯಾಯ ಮಾಡಿದ್ದಾರೆ. ಈ ಎಲ್ಲಾ ಘಟನೆಗಳಿಂದ ಬೇಸತ್ತು ಇಂದು ಒಬಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಬಿ.ಜೆ.ಪುಟ್ಟಸ್ವಾಮಿ ಸ್ಪಷ್ಟೀಕರಣ ನೀಡಿದ್ದಾರೆ.

ರಾಜೀನಾಮೆ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಬಿ.ಜೆ.ಪುಟ್ಟಸ್ವಾಮಿ, ಬಿ.ಎಸ್ ಯಡಿಯೂರಪ್ಪರನ್ನ ದೇವರು ಅಂತ ನಂಬಿದ್ದೆ ಆದರೆ ನನ್ನನ್ನ ಬೀದಿಗೆ ತಳ್ಳಿದ್ದಾರೆ, ಪರಿಷತ್ ಸ್ಥಾನ ನೀಡದೇ ವಂಚನೆ ಮಾಡಿದ್ದಾರೆ ಕೆ.ಪಿ ನಂಜುಡಿಗಿಂತ ನಾನು ಸಮರ್ಥನಲ್ಲವೇ.? ನನಗೂ ಕೆ.ಪಿ ನಂಜುಂಡಿಗೂ ಹೋಲಿಕೆ ಮಾಡೋದಕ್ಕೆ ಸಾಧ್ಯವಿಲ್ಲ, ಅಂತ ಕೆಲಸವನ್ನ ಯಡಿಯೂರಪ್ಪ ಮಾಡಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಪರಿಷತ್ ಸ್ಥಾನ ಕೇಳುವ ಹಕ್ಕು ನನಗಿದೆ ಈಗಿರುವ ಸದಸ್ಯರು ನನಗಿಂತ ಉತ್ತಮರಾ? 40 ವರ್ಷ ರಾಜಕಾರದಲ್ಲಿ ದುಡಿದಿದ್ದೇನೆ,ಎಲ್ಲಾ ಕಾಲದಲ್ಲೂ ಯಡಿಯೂರಪ್ಪ ಜೊತೆಗಿದ್ದೆ, ಯಡಿಯೂರಪ್ಪನವರಿಗೋಸ್ಕರ ಸಿದ್ದರಾಮಯ್ಯ, ಕುಮಾರಸ್ವಾಮಿಯವರ ವಿರೋಧ ಕಟ್ಟಿಕೊಂಡಿದ್ದೇನೆ.‌ಅದ್ರೆ ಇಂದು ಅವರೇ ನನಗೆ ಅನ್ಯಾಯ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಗೌರಿ ಹಂತಕನ ವಶ ನೀಡಲ್ಲ,ಇಲ್ಲೇ ತನಿಖೆ ನಡೆಸಿ: ಮಹಾ ಎಸ್ಐಟಿಗೆ ಸೂಚನೆ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ.ಮಹತ್ವದ ಬೆಳವಣಿಗೆಯಲ್ಲಿ
ಮಹಾರಾಷ್ಟ್ರ ಹಾಗೂ ಆಂಧ್ರ ಪ್ರದೇಶ ಎಸ್ಐಟಿ ತಂಡ ಸಿಲಿಕಾನ್ ಸಿಟಿಗೆ ಆಗಮಿಸಿದ್ದು ದಾಬೋಲ್ಕರದ ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸಲು ಆರೋಪಿಗಳನ್ನ ವಶಕ್ಕೆ ಪಡೆಯಲು ಯತ್ನಿಸುತ್ತಿದೆ.

ಪತ್ರಕರ್ತೆ ಗೌರಿ ಹಂತಕರು ಬಂಧನವಾಗುತ್ತಿದ್ದಂತೆ ಕರ್ನಾಟಕ ಎಸ್ಐಟಿ ಕಛೇರಿಗೆ ಮಹಾರಾಷ್ಟ್ರ ಎಸ್ಐಟಿ ತಂಡ ದೌಡಾಯಿಸಿದೆ.ಮಹಾರಾಷ್ಟ್ರ ಎಸ್ಐಟಿ ಅಧಿಕಾರಿಗಳು ಅಗಮಿಸಿದ ಹಿನ್ನೆಲೆಯಲ್ಲಿ ಪ್ಯಾಲೇಸ್ ರಸ್ತೆಯ ಸಿಐಡಿ ಕಚೇರಿ ಅವರಣದಲ್ಲಿರುವ ಎಸ್ಐಟಿಗೆ ತನಿಖಾಧಿಕಾರಿ ಎಂ ಎನ್ ಅನುಚೇತ್ ಸೇರಿ ಹಲವು ಅಧಿಕಾರಿಗಳು ಕಚೇರಿಗೆ ಆಗಮಿಸಿದ್ದು ಆರೋಪಿ ವಶ ಸಂಬಂಧ ಮಾತುಕತೆ ನಡೆಸಿದರು.

ಸಧ್ಯ ಈ ವಿಶೇಷ ತನಿಖಾ ತಂಡ ಲೇಖಕ ದಾಬೋಲ್ಕರ್ ಹತ್ಯೆ ಪ್ರಕರಣ ಸಂಬಂಧ ಮಾಹಿತಿ ಕಲೆ ಹಾಕುತ್ತಿದೆ.ದಾಬೋಲ್ಕರ್ ಹತ್ಯೆಯಲ್ಲಿ ಗೌರಿ ಹಂತಕರ ಪಾತ್ರವಿದೆಯಾ ಎನ್ನುವ ಅಂಶದ ಮೇಲೆ ಈ ತನಿಖೆ ನಡೆಸುತ್ತಿದೆ.

ಗೌರಿ ಕೇಸ್ ನಲ್ಲಿ ಬಂಧಿತರ ವಿಚಾರಣೆ ನಡೆಸಲು ಮಹಾರಾಷ್ಟ್ರ ಎಸ್ಐಟಿ ಸಿದ್ದತೆ ನಡೆಸಿದ್ದು ಇದಕ್ಕಾಗಿ ಸಂಬಂಧಪಟ್ಟ ಕಾನೂನು ಪ್ರಕ್ರಿಯೆಗಳನ್ನು ಆರಂಭಿಸಿದೆ.ಆರೋಪಿಗಳನ್ನ ವಶಕ್ಕೆ ನೀಡುವಂತೆ ಕರ್ನಾಟಕ ಎಸ್ಐಟಿಗೆ ಮನವಿ ಮಾಡಿದೆ.
ಬಂಧಿತ ಆರೋಪಿಗಳನ್ನ ಪೂರ್ಣ ಪ್ರಮಾಣದಲ್ಲಿ ವಶಕ್ಕೆ ನೀಡುವಂತೆ ಕರ್ನಾಟಕ ಎಸ್ಐಟಿ ಗೆ ಮನವಿ ಮಾಡಿದೆ.

ಆದರೆ ಮಹಾರಾಷ್ಟ್ರ ಎಸ್ಐಟಿ ಅಧಿಕಾರಿಗಳ ಮನವಿಯನ್ನು ಕರ್ನಾಟಕ ಎಸ್ಐಟಿ ತಂಡದ ಅಧಿಕಾರಿಗಳು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.ದಿನಕ್ಕೆ 2 ಗಂಟೆಗಳ ಕಾಲ ಆರೋಪಿಗಳನ್ನ ವಶಕ್ಕೆ ನೀಡುತ್ತೇವೆ, ಬೆಂಗಳೂರಿನಲ್ಲಿ ಇದ್ದುಕೊಂಡು ಆರೋಪಿಗಳನ್ನ ವಿಚಾರಣೆ ನಡೆಸುವಂತೆ ಮಹಾರಾಷ್ಟ ಎಸ್ಐಟಿಗೆ ಕರ್ನಾಟಕ ಎಸ್ಐಟಿ ಸೂಚನೆ ನೀಡಿದೆ.

ಬಿಎಡ್ ಮುಗಿಸದ ಉಪನ್ಯಾಸಕರ ವೇತನ ತಡೆಗೆ ಹೊರಟ್ಟಿ ಕಿಡಿ: ಸಂಬಳ ಬಿಡುಗಡೆಗೆ ಒತ್ತಾಯಿಸಿ ಪತ್ರ

ಬೆಂಗಳೂರು:ಅನಿವಾರ್ಯ ಕಾರಣದಿಂದ ಬಿಎಡ್ ಪದವಿ ಮುಗಿಸದ ಉಪನ್ಯಾಸಕರ ಸಂಬಳ ತಡೆ ಹಿಡಿಯಲಾಗಿದೆ.

ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಬೇಕು ಎಂದು ಪ್ರಾಥಮಿಕ ಶಿಕ್ಷಣ ಸಚಿವ ಎನ್ ಮಹೇಶ್ ಗೆ ಮಾಜಿ ಶಿಕ್ಷಣ ಸಚಿವ ಬಸವರಾಜ್ ಹೊರಟ್ಟಿ ಪತ್ರ ಬರೆದಿದ್ದಾರೆ.

ಅನುದಾನಿತ ಪಿಯು ಕಾಲೇಜ್ ಗಳಲ್ಲಿನ ಬಿಎಡ್ ಪದವಿ ಪಡೆಯದ ಉಪನ್ಯಾಸಕರ ಸಂಬಳ ತಡೆ ಹಿಡಿದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಹೊರಟ್ಟಿ ಎನ್ ಸಿಇಆರ್ ಟಿ ನಿಯಮದಂತೆ ಪದವಿಪೂರ್ವ ಕಾಲೇಜ್ ಗಳ ಉಪನ್ಯಾಸಕರು ಬಿಎಡ್ ಪದವಿ ಹೊಂದಿರಬೇಕು. ರಾಜ್ಯ ಸರ್ಕಾರ ಬಿಎಡ್ ಪದವಿ ಪಡೆಯಲು 4 ವರ್ಷಗಳ ಕಾಲಾವಕಾಶವನ್ನು ಉಪನ್ಯಾಸಕರಿಗೆ ನೀಡಿದೆ.4 ವರ್ಷಗಳಲ್ಲಿ ಬಿಎಡ್ ಪದವಿ ಪಡೆಯಬೇಕೇಂಬ ಷರತ್ತಿನಲ್ಲಿ ಉಪನ್ಯಾಸಕರನ್ನಾಗಿ ಹಲವರ ನೇಮಕವಾಗಿದೆ..ಆದರೆ ಅನಿವಾರ್ಯ ಕಾರಣದಿಂದ ಬಿಎಡ್ ಪದವಿ ಮುಗಿಸದ ಉಪನ್ಯಾಸಕರ ಸಂಬಳ ತಡೆ ಹಿಡಿಯಲಾಗಿದೆ.ಕೂಡಲೇ ಸರ್ಕಾರ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಬೇಕು ಎಂದು ಬಸವರಾಜ್ ಹೊರಟ್ಟಿ ಪತ್ರದ ಮೂಲಕ ಆಗ್ರಹಿಸಿದ್ದಾರೆ.

ಸಮಸ್ಯೆ ಬಗೆಹರಿಯದಿದ್ದರೆ ಮುಂದಿನ ದಿನಗಳಲ್ಲಿ ಉಪನ್ಯಾಸಕರ ಹೋರಾಟ ಆರಂಭವಾಗೋ ಅಪಾಯವಿದೆ.ಆದ್ದರಿಂದ ತಡೆಹಿಡಿಯಲಾಗಿರುವ ಸಂಬಳವನ್ನು ತಕ್ಷಣ ಬಿಡುಗಡೆ ಮಾಡುವಂತೆ ಶಿಕ್ಷಣ ಸಚಿವರಿಗೆ ಹೊರಟ್ಟಿ ಪತ್ರದ ಮೂಲಕ ಸಲಹೆ ನೀಡಿದ್ದಾರೆ.
.

ಗೌರವಧನ ಎಂದರೆ ಗೌರವಯುತವಾಗಿರಬೇಕು; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ಬೆಂಗಳೂರು: ಬಿಸಿಯೂಟ ನೌಕರರಿಗೆ ಕನಿಷ್ಟ ಗೌರವಧನ ನಿಗದಿಪಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಈ ಸಂಬಂಧ ಮಹಿಳಾ ಎಂಪವರ್‌ಮೆಂಟ್ ಪಾರ್ಟಿ (ಎಂಇಪಿ) ಅಧ್ಯಕ್ಷೆ ನೌಹೀರಾ ಶೇಖ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಪೀಠದಲ್ಲಿ ಸೋಮವಾರ ನಡೆಯಿತು.

ಈ ವೇಳೆ ಸಿಜೆ ದಿನೇಶ್ ಮಹೇಶ್ವರಿ, ಬಿಸಿಯೂಟ ನೌಕರರು ಬೇರೆಯವರಿಗೆ ಅಡುಗೆ ಮಾಡಿಕೊಡುತ್ತಾರೆ. ಆದರೆ ಅವರ ಊಟಕ್ಕೆ ನೀವು ಹಣ ನೀಡುತ್ತಿಲ್ಲವೇಕೆ ಎಂದು ಖಾರವಾಗಿ ಪ್ರಶ್ನಿಸಿದರು.

ದನಿಯಿಲ್ಲದ ಜನರಿಗೆ ನೀವು ಅಪಮಾನ‌ ಮಾಡುತ್ತಿದ್ದೀರಿ. ಅವರಿಗೆ ನೀಡುವ ಗೌರವಧನ ಗೌರವಯುತವಾಗಿಲ್ಲದಿದ್ದರೆ ಹೇಗೆ? ಬಿಸಿಯೂಟ ಮಾಡುವುದೆಂದರೆ ಕೇವಲ ಕುಕ್ಕರ್ ಕೂಗಿಸಿದಂತಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು.

ಹಾಗೆಂದ ಮಾತ್ರಕ್ಕೆ ನೌಕರರ ಮುಷ್ಕರವನ್ನು ನ್ಯಾಯಾಲಯ ಸಮರ್ಥಿಸುವುದಿಲ್ಲ. ಅವರಿಗೆ ನ್ಯಾಯಯುತ ಗೌರವಧನ ನೀಡುವ ಕುರಿತು 6 ವಾರಗಳಲ್ಲಿ ನಿಮ್ಮ ನಿಲುವೇನು ಎಂಬುದನ್ನು ನ್ಯಾಯಾಲಯಕ್ಕೆ ತಿಳಿಸಿ ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದ ಪೀಠ, ಅರ್ಜಿ ವಿಚಾರಣೆ ಮುಂದೂಡಿತು.