ನಾನು ಹೇಳಿದ ಸೇವೆ ಆ ಸೇವೆಯಲ್ಲ ಅಂದ್ರು ಹೆಬ್ಬಾಳ್ಕರ್

ಬೆಂಗಳೂರು: ನಾನು ಹೇಳಿದ ಸೇವೆಯನ್ನು ಅವರು ಯಾವ ರೀತಿಯ ಸೇವೆ ಎಂದುಕೊಂಡರೋ ಗೊತ್ತಿಲ್ಲ,ತಪ್ಪಾಗಿ ತಿಳಿದುಕೊಂಡರೆ ಅದಕ್ಕೆ ನಾನು ಹೊಣೆಯಲ್ಲ ಎಂದು ಸಚಿವೆ ಜಮಲಾಪ ವಿರುದ್ಧ ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಸಮರ್ಥಿಸಿಕೊಂಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು,ನಾನು ವಾಸ್ತವದಲ್ಲಿ ಜೀವಿಸುವವಳು.ಸಚಿವ ಸ್ಥಾನ ಸಿಕ್ಕಿಲ್ಲ.ಎರಡನೆ ಹಂತದಲ್ಲಿ ಸಚಿವ ಸ್ಥಾನ ಕೊಡುವುದು ಬಿಡುವುದು ಹೈ ಕಮಾಂಡ್ ಗೆ ಬಿಟ್ಟ ವಿಷಯ‌.ಅದಕ್ಕಾಗಿ ನಾನು ಯಾವುದೇ ಲಾಭಿ ಮಾಡಿಲ್ಲ.ಪಕ್ಷ ಸಂಘಟನೆ ಮಾಡುತ್ತೇನೆ ಎಂದರು.

ಹೊಟ್ಟೆಕಿಚ್ಚಿಗೆ ಮದ್ದಿಲ್ಲ ಎಂದು ಸಚಿವೆ ಜಯಮಾಲ ಹೇಳಿಕೆ ನೀಡಿದ್ದರು. ಈ ವಿಷಯ ಇಡೀ ಜಗತ್ತಿಗೆ ಗೊತ್ತಿದೆ.ನಮ್ಮ ಕಡೆ ಸೇವೆ ಎಂಬ ಪದವನ್ನು ವಿಶಾಲಾರ್ಥದಲ್ಲಿ ಬಳಕೆ ಮಾಡುತ್ತಾರೆ.ದೇವರ ಸೇವೆ ಮಾಡುವುದು,ಅಭಿಷೇಕ ಸೇವೆ ಮಾಡುವುದು ಎನ್ನುವ ರೀತಿಯಲ್ಲೇ ಪಕ್ಷಕ್ಕೆ ಅವರು ಮಾಡಿರುವ ಸೇವೆ ನಾಯಕರಿಗೆ ಇಷ್ಟವಾಗಿರಬಹುದು ಎಂಬರ್ಥದಲ್ಲಿ ಹೇಳಿದ್ದೇನೆ.ನಾನು ಹೊಟ್ಟೆಕಿಚ್ಚಿನಿಂದ ಯಾವ ಮಾತೂ ಹೇಳಿಲ್ಲ.ಅವರು ತಪ್ಪು ತಿಳಿದುಕೊಂಡ್ರೆ ನಾನೇನು ಮಾಡಲು ಸಾಧ್ಯವಿಲ್ಲ ಎಂದು ಸಮರ್ಥನೆ ನೀಡಿದರು.

ಲಾರಿಗಳ ಸಂಚಾರ ಸ್ಥಗಿತ: ಮಾಲೀಕರಲ್ಲಿ ಮೂಡದ ಒಮ್ಮತ

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದೇಶದಾದ್ಯಂತ ಲಾರಿ ಮುಷ್ಕರಕ್ಕೆ ಕರೆ ನೀಡಲಾಗಿದ್ದು ಇಂದಿನಿಂದ ಬೆಂಗಳೂರಲ್ಲೂ ಲಾರಿಗಳ ಸಂಚಾರ ಸ್ಥಗಿತಗೊಂಡಿದೆ.

ಡೀಸೆಲ್ ದರ ಏರಿಕೆ, ವಾಹನಗಳ ಥರ್ಡ್ ಪಾರ್ಟಿ ವಿಮಾ ಪ್ರೀಮಿಯಮ್ ದರ ಹೆಚ್ಚಳಕ್ಕೆ ವಿರೋಧ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲಾರಿ ಮಾಲೀಕರ ಸಂಘಟನೆಗಳು ದೇಶಾದ್ಯಂತ ಅನಿರ್ದಿಷ್ಟವಾವಧಿ ಬಂದ್ ಕರೆ ನೀಡಿದ್ದವು. ದೇಶದಾದ್ಯಂತ ಸರಕು ಸಾಗಣಿಕೆ ಲಾರಿಗಳು ಸೇರಿದಂತೆ ಎಲ್ಲಾ ರೀತಿಯ ಲಾರಿಗಳ ಸಂಚಾರ ಸ್ಥಗಿತಗೊಂಡಿದೆ. ಹಾಲು, ಔಷಧಿ ಸೇರಿದಂತೆ ಅಗತ್ಯ ವಸ್ತುಗಳ ಸಾಗಾಟಕ್ಕೆ ಅವಕಾಶ ನೀಡಲಾಗಿದೆ.

ಲಾರಿ ಮಾಲೀಕರ ಬೇಡಿಕೆ ಈಡೇರಿಕೆಗೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ರು ಯಾವುದೇ ಪ್ರಯೋಜನವಾಗದ ಹಿನ್ನೆಲೆ ಲಾರಿ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿ ಆರು ಲಕ್ಷಕ್ಕೂ ಅಧಿಕ ಲಾರಿಗಳು ಸಂಚಾರ ಸ್ಥಗಿತಗೊಳಿಸಿವೆ ಎಂದು ಕರ್ನಾಟಕ ಲಾರಿ  ಮಾಲೀಕರ ಸಂಘದ ಅಧ್ಯಕ್ಷ ಚೆನ್ನಾರೆಡ್ಡಿ ತಿಳಿಸಿದರು.

ಲಾರಿ ಮಾಲೀಕರಲ್ಲಿ ಒಡಕು!

ಲಾರಿ ಮಾಲೀಕರಲ್ಲಿ ಒಡಕು ಉಂಟಾಗಿದ್ದು ಎರಡು ಗುಂಪುಗಳ ನಿರ್ಮಾಣವಾಗಿದೆ. ಷಣ್ಮುಗಪ್ಪ ಹಾಗೂ ಚನ್ನಾರೆಡ್ಡಿ ನೇತೃತ್ವದಲ್ಲಿ ಎರಡು ಬಣ ನಿರ್ಮಾಣವಾಗಿದ್ದು ಇಂದಿನ ಮುಷ್ಕರಕ್ಕೆ ಷಣ್ಮುಗಪ್ಪ ನೇತೃತ್ವದ ಬಣ ಬೆಂಬಲ ನೀಡದೆ ವಿರೋಧ ವ್ಯಕ್ತಪಡಿಸಿದೆ. ಷಣ್ಮುಗಪ್ಪ ಬಣದ ಲಾರಿ ಮಾಲೀಕರು ಮುಷ್ಕರದಲ್ಲಿ ಭಾಗವಹಿಸದ ಹಿನ್ನೆಲೆ ಅವರ ಲಾರಿಗಳು ಎಂದಿನಂತೆ ಸಂಚಾರ ನಡೆಸುತ್ತಿವೆ.

ಪರಿಷತ್‌ಗೆ ಆಯ್ಕೆಯಾದ 11 ಸದಸ್ಯರಿಂದ ಪ್ರಮಾಣ ವಚನ

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನೂತನವಾಗಿ ಆಯ್ಕೆಯಾಗಿರುವ 11 ಸದಸ್ಯರು ಇಂದು ಪ್ರಮಾಣ ವಚನ ಸ್ವೀಕರಿಸಿದರು. ವಿಧಾನಸೌಧದ ಬ್ಯಾಕ್ವೇಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಪ್ರಮಾಣವಚನ ಭೋದಿಸಿದರು.

ವಿಧಾನ ಪರಿಷತ್ ನೂತನ ಸದಸ್ಯರಾಗಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿರುವ ಸಿ.ಎಂ.ಇಬ್ರಾಹಿಂ, ಕೆ.ಗೋವಿಂದರಾಜ್, ಕೆ.ಹರೀಶ್ ಕುಮಾರ್, ಅರವಿಂದ ಕುಮಾರ್ ಬಿಜೆಪಿಯಿಂದ ಆಯ್ಕೆಯಾಗಿರುವ ಡಾ.ತೇಜಸ್ವಿನಿಗೌಡ, ರಘುನಾಥ್ ರಾವ್ ಮಲ್ಕಾಪುರೆ, ಎನ್.ರವಿಕುಮಾರ್, ಎಸ್.ರುದ್ರೆಗೌಡ, ಕೆ.ಪಿ.ನಂಜುಂಡಿ ಹಾಗೂ ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿರುವ ಎಸ್.ಎಲ್.ಧರ್ಮೇಗೌಡ, ಬಿ.ಎಂ.ಫಾರುಕ್ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಡಿಸಿಎಂ ಪರಮೇಶ್ವರ್, ವಿಪಕ್ಷ ನಾಯಕ ಬಿ.ಎಸ್ ಯಡಿಯೂರಪ್ಪ, ಸಚಿವರಾದ ಜಯಮಾಲಾ, ಕೃಷ್ಣಬೈರೇಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಬಿಬಿಎಂಪಿ ಬೈ ಎಲೆಕ್ಷನ್: ಕೈ ಕಾರ್ಯಕರ್ತನ ಮೇಲೆ ಹಲ್ಲೆ

ಬೆಂಗಳೂರು: ಬಿನ್ನಿಪೇಟೆ ವಾರ್ಡ್ ಉಪ ಚುನಾವಣೆ ಸಂಬಂಧ ಜೆಡಿಎಸ್ ಕಾರ್ಯಕರ್ತರಿಂದ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.

ಕಳೆದ ರಾತ್ರಿ ಸುಮಾರು 12 .15ರ ಸುಮಾರಿಗೆ ಮಾಗಡಿ ರಸ್ತೆಯ ಬಿನ್ನಿಪೇಟೆಯ ವಾರ್ಡ್ 121 ರಲ್ಲಿ ಘಟನೆ ನಡೆದಿದ್ದು, 10 ಜನ ಜೆಡಿಎಸ್ ಕಾರ್ಯಕರ್ತರ ತಂಡ ಕಾಂಗ್ರೆಸ್ ಕಾರ್ಯಕರ್ತ ಸುರೇಶ್ ಕುಮಾರ್ ಮೇಲೆ  ಏಕಾಏಕಿ ದಾಳಿ ನಡೆಸಿದ್ದಾರೆ.

ಗಾಯಾಳು ಸುರೇಶ್ ಕುಮಾರ್ ಮಾಗಡಿ ರಸ್ತೆಯ ಮಧು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೆ.ಪಿ‌ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾವೇರಿ ನಿರ್ವಹಣಾ ಪ್ರಾಧಿಕಾರ ರಚನೆಗೆ ಗೆಜೆಟ್ ನೋಟಿಫಿಕೇಷನ್: ರಾಜ್ಯದ ಒಪ್ಪಿಗೆ ಇಲ್ಲವೆಂದ ಹೆಚ್ಡಿಕೆ

ದೆಹಲಿ/ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ನಿರ್ವಹಣಾ ಪ್ರಾಧಿಕಾರ ರಚನೆಗೆ ಕೇಂದ್ರ ಸರ್ಕಾರ ಹೊರಡಿಸಿರುವ ಗೆಜೆಟ್ ನೋಟಿಫಿಕೇಷನ್ ಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿಲ್ಲ,ನೋಟಿಫಿಕೇಷನ್ ನಲ್ಲಿನ ನ್ಯೂನತೆಯನ್ನು ಸರಿಪಡಿಸಬೇಕು ಎನ್ನುವ ನಮ್ಮ ಬೇಡಿಕೆಯನ್ನು ಕೇಂದ್ರದ ಮುಂದಿಟ್ಟು ಪ್ರಧಾನಿ ಮೋದಿ‌ ಜೊತೆ ಚರ್ಚೆ ನಡೆಸುತ್ತೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಭೇಟಿ ಮಾಡಿದರು. ಸಮ್ಮಿಶ್ರ ಸರ್ಕಾರ ಮುನ್ನಡೆಸುವ ಸವಾಲುಗಳು,ಸಮಸ್ಯೆಗಳ ಕುರಿತು ಸಮಾಲೋಚನೆ ನಡೆಸಿದರು.

ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿಎಂ,ಇದೊಂದು ಸೌಹಾರ್ದಯುತ ಭೇಟಿಯಷ್ಟೆ.ಸಮ್ಮಿಶ್ರ ಸರ್ಕಾರದಲ್ಲಿ ಮುಂದೆ ಹೇಗೆ ಒಮ್ಮತದಿಂದ‌ ಹೋಗಬೇಕು,ರಾಜ್ಯದ ಅಭಿವೃದ್ಧಿಗೆ ಅವರ ಕಲ್ಪನೆಗಳೇನು?ಆ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದೇವೆ.ಸುಭದ್ರ ಸರ್ಕಾರ ನೀಡುವುದು,ರಾಜ್ಯದ ಅಭಿವೃದ್ಧಿಗೆ ಪೂರಕ ಸಹಕಾರ ನೀಡಲು ಮನವಿ ಮಾಡಿದ್ದು ರಾಹುಲ್ ಗಾಂಧಿ ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ ಎಂದರು.

ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಿಲ್ಲ, ಅದು ಅವರ ಪಕ್ಷದಲ್ಲಿ ಅವರ ಶಾಸಕರ ಜೊತೆ ಆ ಪಕ್ಷದ ನಾಯಕರೇ ಚರ್ಚೆ ಮಾಡಲಿದ್ದಾರೆ. ಸಮಸ್ಯೆಗಳಿಗೆ ಅವರೇ ಕುಳಿತು ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲಿದ್ದಾರೆ ಎಂದರು.

ಇಂದಿನ ಪ್ರಧಾನಿ ಭೇಟಿಯ ಉದ್ದೇಶ ಕಾವೇರಿ ಸಮಸ್ಯೆ ಸಂಬಂಧ ಚರ್ಚೆ ನಡೆಸುವುದೇ ಆಗಿದೆ.ಕಾವೇರಿ ನಿರ್ವಹಣಾ ಪ್ರಾಧಿಕಾರ ರಚಿಸಲು ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ.ಪ್ರತಿ 10 ದಿನಕ್ಕೆ ಒಮ್ಮೆ ನಮ್ಮ ಜಲಾಶಯದ ನೀರನ್ನು ಪರಿಶೀಲಿಸಿ ಪ್ರತು ತಿಂಗಳು ಜಲಾಶಯದಿಂದ ನೀರು ಬಿಡುವ ನಿರ್ಧಾರ ಅಧಿಕಾರ ಸಮಿತಿಗೆ ನೀಡಿರುವುದು ಅವೈಜ್ಞಾನಿಕವಾಗಿದೆ.ಅದು ಸರಿಯಲ್ಲ,ಯಾವ ಬೆಳೆ ಬೆಳೆಯಬೇಕು ಎಂದು ಪ್ರಾಧಿಕಾರ ನಿರ್ಧಾರಮಾಡಿದರೆ ಹೇಗೆ? ಇದು ನಮ್ಮ‌ ರೈತರಿಗೆ ಮಾರಕ, ಅಲ್ಲದೆ ನಮ್ಮಿಂದ ನೀರು ಪಡೆದ ನಂತರ ಅಲ್ಲಿ ಹೆಚ್ಚಿನ ಮಳೆಯಾಗಿ ಅವರ ಡ್ಯಾಂ ತುಂಬಿದರೆ ಆ ನೀರು ಸಮುದ್ರಕ್ಕೆ ಹೋಗಲಿದೆ.ಅದು ಅವೈಜ್ಞಾನಿಕ ಹಾಗಾಗಿ ಯಾವ ಸಮಯಕ್ಕೆ ನೀರ ಬಿಡಬೇಕು ಎಂದು ನಿರ್ಧರಿಸುವ ಅಧಿಕಾರ ನಮಗೂ ಬೇಕು‌ ಎಂದರು.

ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ‌ ಇದ್ದೇವೆ, ಅಂತಾರಾಜ್ಯ ವಿವಾದ ಪರಿಹಾರಕ್ಕೆ ಸುಪ್ರೀಂ ಕೋರ್ಟ್ ಕೈಗೊಳ್ಳುವ ನಿರ್ಧಾರ ಅಂತಿಮವಲ್ಲ,ಪಾರ್ಲಿಮೆಂಟ್ ಬೋರ್ಡ್ ಅಂತಿಮ,ಆದರೆ ಅಲ್ಲಿ ಚರ್ಚೆಯಾಗುವ ಮುನ್ನವೇ ನೋಟಿಫಿಕೇಷನ್ ಹೊರಡಿಸಿದ್ದಾರೆ, ಅದನ್ನ ಇಂದು‌ ಕೇಂದ್ರದ ಗಮನಕ್ಕೆ‌ ತರುತ್ತೇನೆ ಎಂದರು.

ಸರಗಳ್ಳನ ಮೇಲೆ ಪೊಲೀಸ್ ಫೈರಿಂಗ್

ಬೆಂಗಳೂರು: ನಗರದಲ್ಲಿ ಸರಗಳ್ಳರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.ಬಂಧನದ ವೇಳೆ ಸರಗಳ್ಳರು ನಡೆಸಿದ ದಾಳಿಗೆ ಪ್ರತಿಯಾಗಿ ಪೊಲೀಸರು ಆತ್ಮರಕ್ಷಣೆಗಾಗಿ ಫೈರಿಂಗ್ ನಡೆಸಿದ್ದಾರೆ.

ಕೋಡಿಪಾಳ್ಯ ನೈಸ್‌ರೋಡ್‌ ಮಾರ್ಗ ಮಧ್ಯೆ ಬೆಳಿಗ್ಗೆ 5.45ರ ಸುಮಾರಿಗೆ ಪೊಲೀಸರಿಂದ ಗುಂಡಿನ ದಾಳಿ ನಡೆದಿದ್ದು ಸರಗಳ್ಳ ಅಚ್ಯುತ್‌ಕುಮಾರ್‌ ಗಣಿ ಕಾಲಿಗೆ ಬಿದ್ದ ಗುಂಡೇಟು ಬಿದ್ದಿದೆ.
ಆತನನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅನ್ನಪೂರ್ಣೇಶ್ವರಿನಗರ ಠಾಣೆ ಸಬ್‌ಇನ್ಸ್‌ಪೆಕ್ಟರ್ ಪ್ರವೀಣ್‌ ಯಲಿಗಾರ್‌ರಿಂದ ಫೈರಿಂಗ್‌ ನಡೆಸಿದ್ದು 15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗರುವ ಅಚ್ಯುತ್‌ಕುಮಾರ್‌ ಗಣಿ
ಆರೋಪಿಗಾಗಿ ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು ಶೋಧ ನಡೆಸಿದ್ದರು ನೈಸ್‌ ರೋಡ್‌ ಬಳಿ ಪತ್ತೆಯಾದ ವೇಳೆ ಬಂಧನಕ್ಕೆ ಮುಂದಾಗಿದ್ದರು ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿ ಪೊಲೀಸರ ಮೇಲೆ ಹಲ್ಲೆಗೆ ಯತ್ನ ಈ ಸಂದರ್ಭದಲ್ಲಿ ಆರೋಪಿ ಅಚ್ಯುತ್‌ಕುಮಾರ್‌ ಗಣಿ ಮೇಲೆ ಫೈರಿಂಗ್‌ ನಡೆಸಲಾಗಿದೆ. ಸ್ಥಳಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ರವಿ .ಡಿ.ಚನ್ನಣನವರ್ ಭೇಟಿ ಪರಿಶೀಲನೆ ನಡೆಸಿದ್ದಾರೆ.