ಅತಿಯಾದ ಮೈದಾಹಿಟ್ಟು ಬಳಸುತ್ತಿದ್ದೀರಾ? ಹಾಗಾದರೆ ಇದನ್ನು ಓದಲೇಬೇಕು

 

ಬೆಂಗಳೂರು:ಮೈದಾ ಹಿಟ್ಟು ಬಹುತೇಕ ಎಲ್ಲರಿಗೂ ಗೊತ್ತು,ಮೈದಾ ಹಿಟ್ಟು ಬಳಸಿ ಮಾಡಿದ ಅಡುಗೆಯನ್ನು ಬಾಯಿ ಚಪ್ಪರಿಸುಕೊಂಡು ತಿನ್ನುತ್ತೇವೆ,ಆದರೆ ಮೈದಾದಿಂದ ತಯಾರಾದ ಪದಾರ್ಥಗಳ ಮಿತ ಬಳಕೆ ಅತು ಮುಖ್ಯ.ಯಾಕೆಂದರೆ ಮೈದಾ ಹೆಚ್ಚಾದರೆ ಆರೋಗ್ಯದ ಸಮಸ್ಯೆ ಖಚಿತ.

ಮೈದಾ ಹಿಟ್ಟು ಒಂದು ಸಂಸ್ಕರಿಸಿದ ಗೋಧಿ ಹಿಟ್ಟು.ಇದರಲ್ಲಿ ಇರುವ ನಾರಿನ ಅಂಶವನ್ನು ಸಂಪೂರ್ಣವಾಗಿ ತೆಗೆದಿರುತ್ತಾರೆ. ಜೊತೆಗೆ ಇದನ್ನು ಬೆಂಜೋಯಿಕ್ ಪೆರಾಕ್ಸೈಡ್ ಎಂಬ ರಾಸಾಯನಿಕದಿಂದ ಬ್ಲೀಚ್ ಮಾಡುತ್ತಾರೆ.ಹೀಗಾಗಿ ಶುಭ್ರ ಬಿಳಿ ಬಣ್ಣ ಹಾಗೂ ನಯವಾದ ವಿನ್ಯಾಸವನ್ನು ಪಡೆಯುತ್ತದೆ. ಈ ಆಕ್ಸೈಡ್ ಅನ್ನು ಚೀನಾ ಮತ್ತು ಯೂರೋಪ್ಗಳಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ.ಆದರೆ ನಮ್ಮಲ್ಲಿ ಬಳಕೆ ಇನ್ನೂ ಚಾಲ್ತಿಯಲ್ಲಿದೆ.

ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳು:

1. ಸಕ್ಕರೆ ಖಾಯಿಲೆ

ಇದರಲ್ಲಿ 100% ಕಾರ್ಬೊಹೈಡ್ರೇಟ್ ಅಂಶವಿದ್ದು ಇದು ರಕ್ತದಲ್ಲಿ ಸಕ್ಕರೆ ಅಂಶವನ್ನು ಹೆಚ್ಚಿಸುತ್ತದೆ. ಇದರಿಂದ ಮಧುಮೇಹ ರೋಗ ಬರುವ ಸಾಧ್ಯತೆ ತುಂಬಾ ಹೆಚ್ಚು.

2.ದೇಹದ ತೂಕದಲ್ಲಿ ಹೆಚ್ಚಳ

ಮೈದಾದಲ್ಲಿ ನಾರಿನ ಅಂಶ ಸಂಪೂರ್ಣವಾಗಿ ತೆಗೆದಿರುವುದರಿಂದ ದೇಹದಲ್ಲಿ ಅನಗತ್ಯವಾದ ಕೊಬ್ಬು ಸಂಗ್ರಹವಾಗುತ್ತದೆ. ಇದರಿಂದ ದೇಹದ ತೂಕ ಹೆಚ್ಚಿ ಬೊಜ್ಜು ಮುಂತಾದ ಸಮಸ್ಯೆಗಳಿಗೆ ಎಡೆ ಮಾಡಿ ಕೊಡುತ್ತದೆ.

3. ಸೋಮಾರಿತನ ಹೆಚ್ಚುತ್ತದೆ

ಮೈದಾದಲ್ಲಿ ಕಾರ್ಬೋಹೈಡ್ರೇಟ್ ಅಧಿಕವಾಗಿರುವುದರಿಂದ ಇದನ್ನು ಸೇವಿಸಿದ ಕೂಡಲೇ ರಕ್ತದಲ್ಲಿ ಸಕ್ಕರೆ ಅಂಶ ಏರುತ್ತದೆ ಮತ್ತು ಅಷ್ಟೇ ನಿಧಾನವಾಗಿ ಇಳಿಯುತ್ತದೆ. ಇದರಿಂದ ಸೋಮಾರಿತನ ಆವರಿಸಿ ನಿದ್ರೆ ಬರುತ್ತದೆ.

4. ಕೊಲೆಸ್ಟ್ರಾಲ್ ಹೆಚ್ಚುತ್ತದೆ

ನಮ್ಮ ಆಹಾರದಲ್ಲಿ ಇರುವ ನಾರಿನಂಶವು ನಮ್ಮ ದೇಹದ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಿಸುತ್ತದೆ. ಮೈದಾದಲ್ಲಿ ನಾರಿನಂಶ ಸಂಪೂರ್ಣವಾಗಿ ತೆಗೆದಿರುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚುತ್ತದೆ.

5. ಹಸಿವು ಜಾಸ್ತಿಯಾಗುತ್ತದೆ

ಮೈದಾದ ಅತಿ ಕೆಟ್ಟ ಗುಣ ಏನೆಂದರೆ ಇದನ್ನು ಸೇವಿಸಿದ ಕೂಡಲೇ ರಕ್ತದಲ್ಲಿ ಸಕ್ಕರೆ ಪ್ರಮಾಣ ಥಟ್ಟನೆ ಲಭ್ಯವಾಗಿ ಮತ್ತೆ ಅಷ್ಟೇ ಬೇಗ ಖಾಲಿಯಾಗುವುದು. ಇದರಿಂದ ದೇಹವು ಪುನಃ ಪುನಃ ಸಕ್ಕರೆಯ ಬೇಡಿಕೆ ಇಡುತ್ತದೆ.

6. ಮಲಬದ್ಧತೆ ಜಾಸ್ತಿಯಾಗುತ್ತದೆ

ನಾರು ಪದಾರ್ಥಗಳು ಮಲವಿಸರ್ಜನೆಯು ಸರಾಗವಾಗಿ ಆಗುವಂತೆ ನೋಡಿಕೊಳ್ಳುತ್ತವೆ. ಆದರೆ ಮೈದಾದಲ್ಲಿ ನಾರು ಇಲ್ಲದೆ ಇರುವ ಕಾರಣ ಮಲವಿಸರ್ಜನೆಗೆ ತೊಡಕು ಉಂಟಾಗಿ ಮಲಬದ್ಧತೆ ಸಮಸ್ಯೆ ತಲೆದೋರಬಹುದು

7. ಸಿಟ್ಟು, ಅಸಹನೆ ಜಾಸ್ತಿಯಾಗುತ್ತದೆ

ಮೈದಾ ಸೇವಿಸಿದ ಕೂಡಲೇ ಸಕ್ಕರೆ ಅಂಶದಲ್ಲಿ ಏರುಪೇರು ಆಗುತ್ತದೆ ಇದು ಮೆದುಳಿನಲ್ಲಿ ಸೆರೋಟೋನಿನ್ ಎಂಬ ರಸದೂತದ ಸ್ರವಿಸುವಿಕೆಗೆ ಅಡ್ಡಿ ಉಂಟು ಮಾಡುತ್ತದೆ. ಇದರಿಂದ ಸಿಟ್ಟು ಅಸಹನೆ ಜಾಸ್ತಿಯಾಗುತ್ತದೆ.

ಸಂಗ್ರಹ ಮಾಹಿತಿ….

ಕೂದಲು ಹಾಗೂ ತ್ವಚೆಯನ್ನು ನೈಸರ್ಗಿಕವಾಗಿ ಕಾಪಾಡೋದು ಹೇಗೆ ಗೊತ್ತ?

ಕೂದಲು‌ ಮತ್ತು ತ್ವಚೆಯ ಸೌಂದರ್ಯಕ್ಕಾಗಿ ನಾನಾ ಕಸರತ್ತುಗಳನ್ನು ಮಾಡುತ್ತೇವೆ. ವಾರಕ್ಕೊಂದು ಬಗೆಯ ಶಾಂಪೂ, ಸೋಪುಗಳನ್ನು ನಮ್ಮ ಮೇಲೆ ನಾವು ಪ್ರಯೋಗಿಸಿಕೊಳ್ಳೆತ್ತೇವೆ. ಆದ್ರೆ ಕೊನೆಗೆ ನಮಗೆ ಸಿಗುವುದು ಕಾಂತಿ ಹೀನ ತ್ವಚೆ ಮತ್ತು ಕೂದಲು.

ನಮ್ಮ ತ್ವಚೆಯ ಮತ್ತು ಕೂದಲಿನ ಹಾರೈಕೆಗೆ ಆದಷ್ಟು ನೈಸರ್ಗಿಕ ವಿಧಾನಗಳನ್ನು ಬಳಸುವುದು ಒಳ್ಳೆಯದು. ಹಾಗಾದ್ರೆ ಯಾವ ರೀತಿ ನೈಸರ್ಗಿಕವಾಗಿ ನಮ್ಮ ತ್ವಚೆ ಕಾಪಾಡಿಕೊಳ್ಳಬಹುದು ಅಂತಾ ಯೋಚಿಸುತ್ತಿದ್ದೀರಾ ಅದಕ್ಕೆ ಉತ್ತರ ನಾವು ನೀಡುತ್ತೇವೆ.

ಸ್ನಾನಕ್ಕಾಗಿ ಚೂರ್ಣ
ಬೇಕಾಗುವ ಪದಾರ್ಥಗಳು

* ಬಿಲ್ವಪತ್ರೆ
* ಬೇವಿನ ಎಲೆ
* ಶೀಗೆಪುಡಿ
* ಕಡಲೇಹಿಟ್ಟು

ಬಿಲ್ವಪತ್ರೆ, ಬೇವಿನ ಎಲೆ, ಶೀಗೆಪುಡಿ
ಇವುಗಳನ್ನು ಸಮಪ್ರಮಾಣದಲ್ಲಿ ಬೆರೆಸಿ ನುಣ್ಣಗೆ ಪುಡಿ ಮಾಡಿ ಇದಕ್ಕೆ ಸ್ವಲ್ಪ ಕಡಲೇಹಿಟ್ಟನ್ನು ಸೇರಿಸಿ ಒಂದು ಚೂರ್ಣ ತಯಾರಿಸಿ ಈ ಚೂರ್ಣವನ್ನು ಪ್ರತಿದಿನ ಸ್ನಾನಕ್ಕೆ ಬಳಸುವುದರಿಂದ ಕೂದಲು ಮತ್ತು ದೇಹ ಕಾಂತಿಯುತವಾಗುತ್ತದೆ.

ಅಭರಣಗಳ ನಿರ್ವಹಣೆಗೆ ಸುಲಭ ವಿಧಾನ ಇಲ್ಲಿದೆ ನೋಡಿ!

ಬಗೆಬಗೆ ವಿನ್ಯಾಸದ ಆಭರಣಗಳನ್ನು ಕೊಳ್ಳುವುದಷ್ಟೇ ಮುಖ್ಯವಲ್ಲ. ಅವುಗಳನ್ನು ಜಾಗ್ರತೆಯಿಂದ ಕಾಪಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಆಭರಣಗಳನ್ನು ಸೂಕ್ತ ನಿರ್ವಹಣೆ ಮಾಡದಿದ್ದರೆ ಅವು ಹಾಳಾಗುತ್ತವೆ ಮತ್ತು ಅವುಗಳ ವಿನ್ಯಾಸಕ್ಕೆ ಧಕ್ಕೆಯಾಗುತ್ತದೆ. ಎಲ್ಲೆಂದರಲ್ಲಿ ಇರಿಸುವುದರಿಂದ ಅವುಗಳ ಹೊಳಪು ಮಾಸುವುದರ ಜೊತೆಗೆ ಅವು ಕಾಂತಿ ಹೀನವಾಗುತ್ತವೆ.

ಆಭರಣಗಳ ಸುರಕ್ಷತೆ ಜೊತೆಗೆ ಅವುಗಳು ಹಾಳಾಗದಂತೆ ನೋಡಿಕೊಳ್ಳುವುದು ಮುಖ್ಯ. ಲಾಕರ್‌ನಲ್ಲಿಟ್ಟಾಗ ಅದರೊಳಗೆ ಆಭರಣಗಳಿಗೆ ಯಾವುದೇ ಧಕ್ಕೆಯಾಗುವುದಿಲ್ಲವೇ ಎಂಬುದನ್ನು ನೋಡಿಕೊಳ್ಳಬೇಕು. ಇತರೇ ಕೃತಕ ಆಭರಣಗಳು ಇಲ್ಲವೇ ಗೋಲ್ಡ್‌ ಕೋಟೆಡ್‌ ಆಭರಣಗಳ ಜತೆಗೆ ಯಾವುದೇ ಬಂಗಾರದ ಹಾಗೂ ಮುತ್ತಿನ ಆಭರಣಗಳನ್ನು ಇರಿಸಕೂಡದು. ಒಂದಕ್ಕೊಂದು ತಿಕ್ಕಿ ಕಲೆಯಾಗುವ ಸಾಧ್ಯತೆಯಿರುತ್ತದೆ. ಪ್ರತಿಯೊಂದು ಅಭರಣಗಳನ್ನು ಪ್ರತ್ಯೇಕವಾಗಿರಿಸುವ ಅಭ್ಯಾಸ ಮಾಡಿಕೊಳ್ಳಿ. ಮೊದಲು ಇವುಗಳನ್ನು ನೀಟಾಗಿ ಒಂದು ಮೃದುವಾದ ಬಟ್ಟೆಯಲ್ಲಿಟ್ಟು ನಂತರ ಬಾಕ್ಸ್‌ನಲ್ಲಿಡುವುದು ಉತ್ತಮ.

ಬಂಗಾರದ ಆಭರಣಗಳ ನಿರ್ವಹಣೆ 

ಬೆಲೆಬಾಳುವ ಆಭರಣಗಳನ್ನು ಕಬ್ಬಿಣ ಅಥವಾ ಸ್ಟೀಲ್‌ ಡಬ್ಬಿಗಳಲ್ಲಿ ಇರಿಸ ಬಾರದು.  ಆಗಾಗ್ಗೆ ಪಾಲಿಷ್‌ ಮಾಡಿಸುವುದು ಬೇಡ. ಆಭರಣಗಳನ್ನು ಸ್ವಚ್ಛಗೊಳಿಸಲು ಆಸಿಡ್‌ ಬಳಸ ಬಾರದು. ಬಂಗಾರದ ಆಭರಣಗಳನ್ನು ಸುತ್ತಿಡಲು ಟಿಷ್ಯೂ ಪೇಪರ್‌ ಇಲ್ಲವೇ ಮೃದುವಾದ ವಸ್ತ್ರ ಬಳಸುವುದು ಉತ್ತಮ.

ಮುತ್ತಿನ ಆಭರಣಗಳ ಸೌಂದರ್ಯ 

ಮುತ್ತಿನ ಆಭರಣಗಳನ್ನು ಸ್ವಚ್ಚಗೊಳಿಸುವಾಗ ನೀರಿನಲ್ಲಿ ನೆನಸಬೇಡಿ. ಅವುಗಳನ್ನು ಉಪಯೋಗಿಸಿ ತೆಗೆದಿಡುವಾಗ ಶುದ್ಧವಾದ ಹತ್ತಿಯಿಂದ ಮೃದುವಾಗಿ ಒರೆಸಿ. ಕೊಳೆ ಹೊರಟು ಹೋಗುತ್ತದೆ. ಮುತ್ತಿನ ಆಭರಣಗಳನ್ನು ಹತ್ತಿಯಲ್ಲಿ ಸುತ್ತಿಡಿ. ಬೆವರುವವರು ಹಾಕಿದಾಗ ಕಲೆಯುಂಟಾಗಬಹುದು.

ಹೊಳೆಯುವ ಬೆಳ್ಳಿ ಆಭರಣಗಳು

ಬೆಳ್ಳಿ ಆಭರಣಗಳನ್ನು ಸಾಬೂನಿನ ಪೌಡರ್‌ ಹಾಕಿದ ಬಿಸಿನೀರಿನಲ್ಲಿ ನೆನೆಸಿ ತೊಳೆಯಬಹುದು. ಅಂಟುವಾಳ ಕಾಯಿ, ಹುಣಸೇಹಣ್ಣುಗಳಿಂದಲೂ ಸ್ವಚ್ಛಗೊಳಿಸಬಹುದು. ಆಲೂಗೆಡ್ಡೆ ಬೇಯಿಸಿ ಕುದಿಸಿದ ನೀರಿನಲ್ಲಿ ಕೆಲ ಕಾಲ ಇರಿಸಿ ತೊಳೆಯಬಹುದು. ಹಳೆಯ ಟೂತ್‌ ಬ್ರಷ್‌ ಉಪಯೋಗಿಸಿ ಕೊಳೆ ತೆಗೆಯಬಹುದು.

         ಜ್ಞಾನಜ್ಯೋತಿ ಬ್ಯೂಟಿ ಎಕ್ಸ್‌ಪರ್ಟ್

ಉತ್ತಮ ಆರೋಗ್ಯಕ್ಕೆ ಮೊಸರು ಎಷ್ಟು ಅಗತ್ಯ?

ಪ್ರಕೃತಿ ವರವಾಗಿ ನೀಡಿರುವ ಹಲವಾರು ನೈಸರ್ಗಿಕ ಆಹಾರಗಳಲ್ಲಿ ಮೊಸರು ಕೂಡ ಒಂದು. ನೀರು ಹೊರತು ಪಡಿಸಿದರೆ ಸುಲಭವಾಗಿ ಜೀರ್ಣವಾಗುವ ಆಹಾರ ಮೊಸರು. ಮೊಸರಿನಲ್ಲಿ ಅನೇಕ ಪೋಷಕಾಂಶಗಳಿದ್ದು, ಪ್ರತಿದಿನ ಮೊಸರು ಸೇವನೆಯಿಂದ ರೋಗಗಳು ನಮ್ಮ ಬಳಿ ಸುಳಿಯುವುದಿಲ್ಲ.

ಮೊಸರಿನಲ್ಲಿ ಆರೋಗ್ಯ ವೃದ್ಧಿಸುವ ಶಕ್ತಿ ಮಾತ್ರವಲ್ಲ, ಸೌಂದರ್ಯ ವೃದ್ಧಿಸುವ ಶಕ್ತಿಯೂ ಇದೆ. ದಿನಕ್ಕೆ 250 ರಿಂದ 600 ಗ್ರಾಂ ಮೊಸರು ತಿಂದರೆ ಮನುಷ್ಯ ಜೀವಮಾನ ಪೂರ್ತಿ ಆರೋಗ್ಯವಂತನಾಗಿ, ಉತ್ಸಾಹಭರಿತನಾಗಿರುತ್ತಾನೆ. ಮುಪ್ಪನ್ನು ಮುಂದೂಡುವ ಶಕ್ತಿ ಮೊಸರಿಗಿದೆ.

ಮೊಸರಿನ ಸೇವನೆಯಿಂದ ಹಲವು ಉಪಯೋಗಗಳಿವೆ

1. ನಿಯಮಿತವಾಗಿ ಮೊಸರನ್ನು ಸೇವಿಸುವುದರಿಂದ ರಕ್ತಪರಿಚಲನೆ ಸರಾಗವಾಗಿ ಆಗುತ್ತದೆ ಹಾಗೂ ದೇಹದಲ್ಲಿನ ನಿಶಕ್ತಿ ಕಡಿಮೆಯಾಗುತ್ತದೆ.

2. ಜೀರ್ಣ ಶಕ್ತಿ ವೃದ್ಧಿಯಾಗುತ್ತದೆ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.

3. ಮೊಸರಿನಲ್ಲಿರುವ ಕ್ಯಾಲ್ಸಿಯಂ ಮೂಳೆಗಳ ಬೆಳವಣಿಗೆಗೆ ಸಹಕಾರಿಯಾಗಿದೆ.

4. ಬೇಧಿ, ಮಲಬದ್ಧತೆ, ನಿದ್ರಾಹೀನತೆ, ಕಾಮಾಲೆಯಂತಹ ಕಾಯಿಲೆಗಳಿಗೆ ಮೊಸರು ಅತ್ಯುತ್ತಮ ಔಷಧ.

5. ಮೊಸರಿಗೆ ಒಂದು ಚಮಚ ಜೇನುತುಪ್ಪ ಬೆರಸಿ ಸೇವಿಸಿದರೆ ಬಾಯಿಹುಣ್ಣು ನಿವಾರಣೆಯಾಗುತ್ತದೆ.

6. ರಾತ್ರಿ ವೇಳೆ ಮೊಸರಿನ ಸೇವನೆಯಿಂದ ನಿದ್ರಾಹೀನತೆ ನಿವಾರಣೆಯಾಗುತ್ತದೆ.

7. ಮೊಸರನ್ನು ಸೌಂದರ್ಯ ವರ್ಧಕವಾಗಿಯೂ ಉಪಯೋಗಿಸಲಾಗುತ್ತದೆ. ತ್ವಚೆಯ ರಕ್ಷಣೆಗೆ ಮೊಸರು ಅತ್ಯುತ್ತಮವಾಗಿದೆ.

ರೈತರ ಸಾಲ ಮನ್ನಾಕ್ಕೆ ನೆರವು ನೀಡಿ: ಕೇಂದ್ರಕ್ಕೆ ಸಿಎಂ ಮನವಿ

ನವದೆಹಲಿ: ರಾಷ್ಟ್ರ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಕೃಷಿ ಬಿಕ್ಕಟ್ಟು ಕೂಡ ಒಂದಾಗಿದ್ದು, ರೈತರ ಸಾಲ ಮನ್ನಾದ ಕುರಿತು ರಾಜ್ಯದ ಜನರು ಎದುರು ನೋಡುತ್ತಿದ್ದಾರೆ. ಆದ್ದರಿಂದ, ರೈತರ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರ ನೆರವು ನೀಡಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ನವದೆಹಲಿಯಲ್ಲಿ ನಡೆಯುತ್ತಿರುವ ನೀತಿ ಆಯೋಗದ ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಭಾಗವಹಿಸಿದ್ದಾರೆ. ಸಭೆಗೂ ಮುನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಸಭೆಯಲ್ಲಿ ರಾಜ್ಯದ ಕೆಲವು ಆದ್ಯತೆಗಳ ಕುರಿತು ವಿಷಯ ಮಂಡನೆ ಮಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಜಕೀಯವಾಗಿ ಬೇರೆ ಬೇರೆ ಸಿದ್ಧಾಂತಗಳನ್ನು ಪ್ರತಿನಿಧಿಸುತ್ತಿದ್ದರೂ ದೇಶದ ಅಭಿವೃದ್ಧಿಯ ವಿಷಯಕ್ಕೆ ಕೈಜೋಡಿಸಬೇಕಿದೆ. ರೈತರ ಸಮಸ್ಯೆ ಬಗೆಹರಿಸಲು ನಮ್ಮ ಸರ್ಕಾರ ಸಿದ್ಧವಾಗಿದೆ. ಬರ, ಬೆಳೆಹಾನಿಯಂತಹ ಅನೇಕ ಸಮಸ್ಯೆಯಿಂದಾಗಿ ಕರ್ನಾಟಕದ 85 ಲಕ್ಷ ರೈತರು ಬ್ಯಾಂಕ್​ಗಳಲ್ಲಿ ಸಾಲ ಹೊಂದಿದ್ದಾರೆ. ಈ ಸಾಲವನ್ನು ಮನ್ನಾ ಮಾಡಲು ರಾಜ್ಯ ಸರ್ಕಾರ ಸಿದ್ಧವಿದ್ದು ಇದಕ್ಕೆ ಶೇ 50ರಷ್ಟು ಬೆಂಬಲವನ್ನು ಕೇಂದ್ರ ಸರ್ಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ರಾಷ್ಟ್ರೀಯ ಸ್ವಾಸ್ಥ್ಯ ಸುರಕ್ಷಾ ಮಿಷನ್ ಅನ್ನು ನಾವು ಸ್ವಾಗತಿಸುತ್ತೇವೆ. ಇದೇ ರೀತಿಯಲ್ಲಿ ರಾಜ್ಯ ಸರ್ಕಾರ ಯಶಸ್ವಿನಿ ಸೇರಿದಂತೆ ಹಲವು ವಿಭಾಗದ ಜನರಿಗೆ ಕಳೆದ 15 ವರ್ಷಗಳಿಂದ ಆರೋಗ್ಯ ಸೇವೆಯನ್ನು ಒದಗಿಸುತ್ತಿದ್ದೇವೆ. ಇದು 30 ಲಕ್ಷ ಎಪಿಲ್ ಕುಟುಂಬ ಸೇರಿದಂತೆ 145 ಲಕ್ಷ ಕುಟುಂಬಗಳಿಗೆ ಆರೋಗ್ಯ ಸೇವೆ ಒದಗಿಸುತ್ತಿದ್ದು, ಇದು ಕೇಂದ್ರದ ಯೋಜನೆಗಿಂತ ದೊಡ್ಡದಾಗಿದೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸಹಮತದಿಂದ ಈ ಎರಡೂ ಯೋಜನೆಗಳನ್ನು ಕಾರ್ಯಗತಗೊಳಿಸುವುದಾಗಿ ತಿಳಿಸಿದರು.

ಹಿಂದುಳಿದ ಯಾದಗಿರಿ, ರಾಯಚೂರು ಜಿಲ್ಲೆಗಳ ಅಭಿವೃದ್ಧಿಗೆ ನಾವು ಕ್ರಮ ಕೈಗೊಳ್ಳಬೇಕಾಗಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರ ವರ್ಷಕ್ಕೆ 100 ಕೋಟಿ ರೂ.ನಂತೆ ಐದು ವರ್ಷ ಹಣ ನೀಡಬೇಕು ಎಂದರು. ಇನ್ನು ಯುವಜನತೆಗೆ ಉದ್ಯೋಗ ಕಲ್ಪಿಸಲು ಕೌಶಲ್ಯ ರೂಪಿಸಿದರೆ ಸಾಲದು ಅದಕ್ಕೆ ತಕ್ಕಂತೆ ಉದ್ಯೋಗ ಸೃಷ್ಟಿ ಕೂಡ ಮಾಡಬೇಕು ಎಂದು ಸಲಹೆ ನೀಡಿದರು.

ಬಿ ಪ್ಯಾಕ್ ಸಲಹೆಗಳನ್ನು ಕಾಲಮಿತಿಯೊಳಗೆ ಜಾರಿಗೊಳಿಸಲು ಸಿಎಂ ಸೂಚನೆ

ಬೆಂಗಳೂರು: ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ಮುಕ್ತ ಬೆಂಗಳೂರು ನಿರ್ಮಿಸುವ ನಿಟ್ಟಿನಲ್ಲಿ ಹಾಗೂ ಬಿ ಪ್ಯಾಕ್ ತಂಡ ನೀಡಿರುವ ಅಭಿಪ್ರಾಯವನ್ನು ನಿಗಧಿತ ಕಾಲಾವಧಿಯ ಒಳಗೆ ಪೂರ್ಣಗೊಳಿಸುವಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಇಂದು ಬಿ ಪ್ಯಾಕ್ ಕಚೇರಿಗೆ ಭೇಟಿ ನೀಡಿದ ಮುಖ್ಯಮಂತ್ರಿಗಳು, ಬಿ ಪ್ಯಾಕ್ ಅಧ್ಯಕ್ಷೆ ಕಿರಣ್ ಮಜುಂದಾರ್, ಉಪಾಧ್ಯಕ್ಷ ಮೋಹನ್ ದಾಸ್ ಪೈ, ಸಿಇಓ ರೇವತಿ ಅಶೋಕ್, ಆರ್ ಕೆ ಮಿಶ್ರಾ, ಆನಂದ ಗುಂಡೂರಾವ್ ಅವರಿಂದ ಬೆಂಗಳೂರು ಅಭಿವೃದ್ದಿ ಕುರಿತು ಮಾಹಿತಿ ಪಡೆದರು.

ಬೆಂಗಳೂರು ಅಭಿವೃದ್ದಿಗೆ ಸಂಬಂಧಿಸಿದಂತೆ ಈಗಾಗಲೇ ಚಾಲ್ತಿಯಲ್ಲಿರುವ ಯೋಜನೆಗಳು, ಹೈ ಟ್ರಾಫಿಕ್ ಡೆನ್ಸಿಟಿ ಕಾರಿಡಾರ್, ವೈಟ್ ಟಾಪಿಂಗ್, ಕಸ ವಿಲೇವಾರಿ ಮತ್ತು ಮೆಟ್ರೋ ಯೋಜನೆ ಕುರಿತಂತೆ ಮುಖ್ಯಮಂತ್ರಿಗಳಿಗೆ ಬಿ ಪ್ಯಾಕ್ ತಂಡ ತನ್ನ ನೋಟವನ್ನು ಹಂಚಿಕೊಂಡಿತು.

ಬೆಂಗಳೂರನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಬೇಕು. ಪೋಸ್ಟರ್ ಫ್ಲೆಕ್ಸ್ ರಹಿತವಾಗಿಸಬೇಕು, ಕಸ ವಿಲೇವಾರಿಗೆ ಆಧುನಿಕ ತಂತ್ರಜ್ಞಾನ ಬಳಸಬೇಕು ಎಂದು ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತಾ ಬಿ ಪ್ಯಾಕ್ ತಂಡ ತಿಳಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು. ಬೆಂಗಳೂರು ನಗರಾಭಿವೃದ್ದಿ ಸಚಿವರಾಗಿರುವ ಉಪ ಮುಖ್ಯಮಂತ್ರಿಗಳ ಜೊತೆ ಈ ಬಗ್ಗೆ ಚರ್ಚಿಸಿ ಬೆಂಗಳೂರು ಅಭಿವೃದ್ದಿಗೆ ಇರುವ ಹಲವು ಏಜೆನ್ಸಿಗಳ ಸಭೆ ಕರೆಯುವುದಾಗಿ ತಿಳಿಸಿದರು. ಅವಶ್ಯವಿರುವ ಎಲ್ಲಾ ಕಾರ್ಯ ಒಂದು ವರ್ಷದೊಳಗೆ ಪೂರ್ಣಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದರು.