ಸೌಮ್ಯರೆಡ್ಡಿಗೆ ಒಲಿದ “ಜಯ”ನಗರ


ಬೆಂಗಳೂರು:‌ ಬಿಜೆಪಿ ಭದ್ರಕೋಟೆ ಜಯನಗರ‌‌ ವಿಧಾನಸಭಾ ಕ್ಷೇತ್ರ ಕೈ ಪಾಲಾಗಿದೆ.ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ ಗೆಲುವಿನೊಂದಿಗೆ ಚೊಚ್ಚಲ ಬಾರಿಗೆ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ.

ಜಯನಗರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಎನ್.ಎಂ.ಕೆ.ಆರ್.ವಿ ಕಾಲೇಜಿನಲ್ಲಿ ನಡೆಯಿತು. ಮೊದಲ ಸುತ್ತಿನಿಂದಲೇ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿ ಅಂತಿಮ 15 ನೇ ಸುತ್ತಿನಲ್ಲೂ ಮುನ್ನಡೆಯೊಂದಿಗೆ ಗಲುವಿನ ನಗೆ ಬೀರಿದರು.

ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿ 54457 ಪಡೆದರೆ ಬಿಜೆಪಿಯ ಪ್ರಹ್ಲಾದ್ ಬಾಬು 51568 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.2889 ಮತಗಳ ಅಂತರದಿಂದ ಸೌಮ್ಯಾರೆಡ್ಡಿ ಜಯನಗರವನ್ನು ಗೆದ್ದುಕೊಂಡರು.ಲಂಚ ಮುಕ್ತ ಜಯನಗರ ನಿರ್ಮಾಣ ಅಂಜೆಡಾವನ್ನು ಜನರ ಮುಂದಿಟ್ಟು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ರವಿಕೃಷ್ಣ ರೆಡ್ಡಿ 1591 ಮತಗಳನ್ನು ಪಡೆಯುವ ಮೂಲಕ ಠೇವಣಿ ಕಳೆದುಕೊಂಡಿದ್ದಾರೆ.

ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಹಿಂಪಡೆದು ಮೈತ್ರಿ ಸರ್ಕಾರದ ಭಾಗವಾದ ಕಾಂಗ್ರೆಸ್ ಗೆ ಬೆಂಬಲ ನೀಡಿತ್ತು.ಕೊನೆ ಕ್ಷಣದಲ್ಲಿ ಎಂಇಪಿ ಕೂಡ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದರು.
ಇದರಿಂದಾಗಿ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವ ನೇರಾ ಹಣಾಹಣಿ ಏರ್ಪಟ್ಟಿತ್ತು. ಕಾಂಗ್ರೆಸ್ ಜೆಡಿಎಸ್ ಪಕ್ಷಗಳ ಮೈತ್ರಿಯಲ್ಲಿ ಗೆಲುವು ಸಾಧಿಸಿದ ಮೊದಲ ಅಭ್ಯರ್ಥಿ ಸೌಮ್ಯರೆಡ್ಡಿಯಾಗಿದ್ದಾರೆ.

ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ತೆನೆ ಇಳಿಸಿದ ರಮೇಶ್ ಬಾಬು:ಕಮಲಕ್ಕೆ ಗೆಲುವಿತ್ತ ನಾರಾಯಣಸ್ವಾಮಿ

ಬೆಂಗಳೂರು: ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೈ.ಎ ನಾರಾಯಣಸ್ವಾಮಿ ಗೆಲುವು ಸಾಧಿಸಿದ್ದು ಉಪ ಚುನಾವಣೆಯಲ್ಲಿ ಕಳದುಕೊಂಡಿದ್ದ ಕ್ಷೇತ್ರವನ್ನು ಬಿಜೆಪಿ ಮತ್ತೆ ಪಡೆದುಕೊಳ್ಳುವಲ್ಲಿ‌ ಯಶಸ್ವಿಯಾಗಿದೆ.

ಆರ್.ಸಿ ಕಾಲೇಜು ಮತ ಎಣಿಕೆ ಕೇಂದ್ರದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರ ಹಾಗು ಬೆಂಗಳೂರು ಪದವೀಧರ ಕ್ಷೇತ್ರದ ಮತಗಳ ಎಣಿಕೆ ನಡೆಯಿತು. ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಎರಡನೇ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಗೆಲುವಿನ ನಗೆ ಬೀರಿದರು.

ಗೆಲುವಿಗೆ ಅಗತ್ಯವಿದ್ದ 8441.5 ಮತದ ಸಂಖ್ಯೆಯನ್ನು ಮೊದಲ‌ ಪ್ರಾಶಸ್ತ್ಯದ ಮತ ಎಣಿಕೆ ಸುತ್ತಿನಲ್ಲಿ ಯಾವ ಅಭ್ಯರ್ಥಿಯೂ ತಲುಪದ ಕಾರಣ ನಡೆದ ಎರಡನೇ ಪ್ರಾಶಸ್ತ್ಯದ ಮತಗಳ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಅಗತ್ಯ ಮತ ಪಡೆಯುವ ಮೂಲಕ ತಮ್ಮ ರಾಜೀನಾಮೆಯಿಂದ ಕಳದುಕೊಂಡಿದ್ದ ಆಗ್ನೇಯ ಶಿಕ್ಷಕರ ಕ್ಷೇತ್ರವನ್ನು ನಾರಾಯಣಸ್ವಾಮಿ ಮರಳಿ ಪಕ್ಷಕ್ಕೆ ತಂದುಕೊಡುವಲ್ಲಿ ಯಶಸ್ವಿಯಾದರು.

1800 ಸಾವಿರ ಮತಗಳ ಅಂತರದಿಂದ ಗೆಲುವು ಸಿಕ್ಕಿದೆ,ನನಗೆ ಟಿಕೆಟ್ ನೀಡಿ ಗೆಲುವಿಗೆ ಸಹಕಾರ ನೀಡಿದ ಪಕ್ಷದ ನಾಯಕರು, ನನ್ನ ಪರ ಕೆಲಸ ಮಾಡಿದ ಐದು ಜಿಲ್ಲೆಗಳ ಕಾರ್ಯಕರ್ತರು, ಮುಖಂಡರಿಗೆ ಧನ್ಯವಾದ ಅರ್ಪಿಸುತ್ತೇನೆ,ಇದು ಪಕ್ಷದ ಗೆಲುವಾಗಿದೆ,ನನಗೆ ಮತ ನೀಡಿದ ಎಲ್ಲ ಶಿಕ್ಷಕ ಸಮೂಹಕ್ಕೆ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ತಿಳಿಸಿದರು.

ಯಾರಿಗೆ ಎಷ್ಟು ಮತ?

ಬಿಜೆಪಿಯ ವೈ.ಎ ನಾರಾಯಣಸ್ವಾಮಿ ಪಡೆದ ಮತ 8479
ಜೆಡಿಎಸ್ ನ ರಮೇಶ್ ಬಾಬು ಒಡೆದ ಮತ 6607
ಕಾಂಗ್ರೆಸ್ ನ ರಾಮಪ್ಪ ಪಡೆದ ಮತ 1652

ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಹಾರಿದ ಕೇಸರಿ ಬಾವುಟ:

ಹೆಬ್ಬಾಳ ವಿಧಾನಸಭಾ ಉಪಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದ ನಾರಾಯಣಸ್ವಾಮಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ನಡೆದ ಆಗ್ನೇಯ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ರಮೇಶ್ ಬಾಬು ಗೆದ್ದಿದ್ದರು.ಆದರೆ ಈಗ ನಡೆದ ಚುನಾವಣೆಯಲ್ಲಿ ಉಪ ಚುನಾವಣೆಯಲ್ಲಿ ಗೆದ್ದ ಕ್ಷೇತ್ರ ಉಳಿಸಿಕೊಳ್ಳುವಲ್ಲಿ ಜೆಡಿಎಸ್ ವಿಫಲವಾಗಿದ್ದು ಕಳೆದುಕೊಂಡಿದ್ದ ಕ್ಷೇತ್ರವನ್ನು ಬಿಜೆಪಿ ಮರಳಿ ಪಡೆದುಕೊಂಡಿದೆ.

ವಸತಿ ಇಲಾಖೆ ಮನೆಗಳ ಬೇಷರತ್ ಮಾರಾಟ: ಯು.ಟಿ.ಖಾದರ್ ಹೇಳಿಕೆ

ಬೆಂಗಳೂರು: ರಾಜಧಾನಿಯಲ್ಲಿ ಸ್ವಂತ ಮನೆ ಹೊಂದಬೇಕು ಎನ್ನುವವರಿಗೆ ರಾಜ್ಯ ಸರ್ಕಾರ ಸಂತಸದ ಸುದ್ದಿ ನೀಡಿದೆ. ವಸತಿ ಇಲಾಖೆ ನಿರ್ಮಿಸಿರುವ ಫ್ಲಾಟ್ ಗಳು ಷರತ್ತು ರಹಿತವಾಗಿ ಮಾರಾಟ ಮಾಡುವುದಾಗಿ ವಸತಿ ಸಚಿವ ಯು.ಟಿ.ಖಾದರ್ ಘೋಷಿಸಿದ್ದಾರೆ.

ವಸತಿ ಇಲಾಖೆ ನಿರ್ಮಿಸಿರುವ ಸಮುಚ್ಚಯಗಳಲ್ಲಿ ಮನೆ ಖರೀದಿಸುವುದು ಇನ್ನು ಸುಲಭ. 50 ಸಾವಿರ ಹಣ ಕಟ್ಟಿದ್ರೆ ಸಾಕು ಫ್ಲ್ಯಾಟ್ ನಿಮ್ಮದಾಗುತ್ತದೆ. ಹೌದು,
ನೂತನ ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು ಟಿ ಖಾದರ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಒಂದು ಕೊಠಡಿ ಹೊಂದಿರುವ ಫ್ಲ್ಯಾಟ್ ಪಡೆಯಲು 50 ಸಾವಿರ ರೂ ಪಾವತಿಸಿ ಅರ್ಜಿ ಖರೀದಿಸಿದ್ರೆ ಸಾಕು ಮನೆ ನಿಮ್ಮದಾಗುತ್ತದೆ. ಸದ್ಯ ವಸತಿ ಇಲಾಖೆಯಲ್ಲಿ 19 ಲಕ್ಷಕ್ಕೂ ಹೆಚ್ಚು ಫ್ಲ್ಯಾಟ್ ಗಳು ಲಭ್ಯವಿದ್ದು. ಅಗತ್ಯ ಇರುವವರು ಆನ್ ಲೈನ್ ಮೂಲಕ ಇಲ್ಲ ಸಂಬಂಧ ಪಟ್ಟ ಇಲಾಖೆ ಮೂಲಕ ಅರ್ಜಿ ಖರೀದಿಸಬಹುದಾಗಿದ್ದು. ಈ ಯೋಜನೆ ಇಂದಿನಿಂದಲೇ ಜಾರಿಯಾಗಲಿದೆ ಎಂದು ಘೋಷಣೆ ಮಾಡಿದರು.

ಶ್ರೀದೇವಿ ಪುತ್ರಿ ಚಿತ್ರದ ಟ್ರೈಲರ್ ಬಿಡುಗಡೆ!

ಮುಂಬಯಿ: ಶ್ರೀದೇವಿ ಪುತ್ರಿ ಜಾನ್ಹವಿ ಕಪೂರ್ ಹಾಗೂ ರಾಜೇಶ್ ಕತ್ತರ್ ಪುತ್ರ ಈಶಾನ್​ ಕತ್ತರ್​ ಅಭಿನಯಿಸಿರುವ ‘ದಡಕ್​’ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದೆ. ಧರ್ಮ ಪ್ರೊಡಕ್ಷನ್​ ಅಡಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಟ್ರೇಲರ್​ನಲ್ಲಿ ಜಾನ್ಹವಿ ಹಾಗೂ ಈಶಾನ್​ ರೊಮಾನ್ಸ್ ಜೋರಾಗಿದೆ.

ಮರಾಠಿಯ ಸೂಪರ್ ಹಿಟ್ ಚಿತ್ರ ‘ಸೈರಾಟ್​’ನ ರಿಮೇಕ್​ ಆಗಿರುವ ದಡಕ್​ ಚಿತ್ರದಲ್ಲಿ ಜಾನ್ಹವಿ ಹಾಗೂ ಈಶಾನ್​ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಈ ಸಿನಿಮಾದ ನಿರ್ಮಾಪಕರು ಜಾನ್ಹವಿ ಹಾಗೂ ಈಶಾನ್​ಗಾಗಿ ಒಂದು ಸಂದೇಶ ಬರೆದಿದ್ದರು. ಅದು ಈ ಹೊಸ ವರ್ಷದಲ್ಲಿ ಹೊಸ ಸಂಬಂಧದ ಆರಂಭ ಎಂದು ಬರೆಯಲಾಗಿತ್ತು.

ಜಾನ್ಹವಿ ಅಣ್ಣ ಅರ್ಜುನ್ ಕಪೂರ್​​ ಈ ಟ್ರೇಲರ್​ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣ ಇಸ್ಟಾಗ್ರಾಮ್ನಲ್ಲಿ ಕ್ಷಮೆ ಕೇಳಿದ್ದಾರೆ.

ಏಮ್ಸ್ ಆಸ್ಪತ್ರೆಗೆ ಮೋದಿ ಭೇಟಿ: ವಾಜಪೇಯಿ ಆರೋಗ್ಯದ ಕುರಿತು ವೈದ್ಯರೊಂದಿಗೆ ಚರ್ಚೆ

ನವದೆಹಲಿ: ವಯೋಸಹಜ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ಕುರಿತು ಏಮ್ಸ್ ವೈದ್ಯರಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾಹಿತಿ ಪಡೆದಿದ್ದಾರೆ.

ಇಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದ ನರೇಂದ್ರ ಮೋದಿಯವರು ಕುಟುಂಬ ಸದಸ್ಯರಿಗೆ ದೈರ್ಯ ಹೇಳಿದ್ದಾರೆ. ಅಲ್ಲದೆ ಏಮ್ಸ್ ವೈದ್ಯರೊಂದಿಗೆ ವಾಜಪೇಯಿಯವರ ಆರೋಗ್ಯ ಕುರಿತು ಸುಮಾರು 50 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ.

93 ವರ್ಷದ ವಾಜಪೇಯಿ ಅವರು ನಿನ್ನೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಶೀಘ್ರವಾಗಿ ಗುಣಮುಖರಾಗಲೆಂದು ದೇಶದ ಹಲವು ಕಡೆ ಹೋಮ-ಹವನಗಳನ್ನೂ ನಡೆಸಲಾಗುತ್ತಿದೆ.

 

 

ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡ ಕುಸಿತ: ಆತಂಕದಲ್ಲಿ ವಾಹನ ಸವಾರರು

ಬೆಳ್ತಂಗಡಿ: ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಚಾರ್ಮಾಡಿ ಘಾಟ್‌ನಲ್ಲಿ ಮಳೆಯಿಂದಾಗಿ ಹಲವು ಕಡೆಗಳಲ್ಲಿ ಭಾರೀ ಗುಡ್ಡ ಕುಸಿತ ಸಂಭವಿಸಿದೆ. ನಿನ್ನೆ ಸಂಜೆಯಿಂದ ನೂರಾರು ವಾಹನಗಳು ಹಿಂದೆ-ಮುಂದೆ ಚಲಿಸಲಾಗದೆ ಸವಾರರು ಆತಂಕದಲ್ಲಿ ಮುಳುಗಿದ್ದಾರೆ.

ಬೆಳ್ತಂಗಡಿ ಸುತ್ತಮುತ್ತ ಬೃಹತ್‌ ಗುಡ್ಡ ಕುಸಿದು ರಸ್ತೆ ಸಂಪೂರ್ಣ ಬಂದ್‌ ಆಗಿದೆ. ವಾಹನ ಸವಾರರು ಊಟ, ತಿಂಡಿಯಲ್ಲದೆ ಪರದಾಡುವಂತಾಗಿದೆ. ಸ್ಥಳೀಯರು ಆಹಾರದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಸ್ಥಳೀಯ ಪೊಲೀಸರು ರಸ್ತೆ ತೆರವು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ಸ್ಥಳಕ್ಕೆ ತೆರಳಲು ಹರಸಾಹಸ ಪಡಬೇಕಾಗಿದೆ. ಇನ್ನೂ ಗುಡ್ಡ ಕುಸಿಯುವ ಭೀತಿಯಿಂದ ವಾಹನದಲ್ಲಿರುವ ಸವಾರರು ಆತಂಕದಲ್ಲಿದ್ದಾರೆ.