ಅನ್ ಲಾಕ್ 3.O ರಲ್ಲಿ ಯಾವುದಕ್ಕೆಲ್ಲಾ ಅವಕಾಶ ಸಿಕ್ತು ಗೊತ್ತಾ? ಯಡಿಯೂರಪ್ಪ ಸುದ್ದಿಗೋಷ್ಟಿಯಲ್ಲಿ ನೀಡಿದ್ರು ಕಂಪ್ಲೀಟ್ ಮಾಹಿತಿ..

ಬೆಂಗಳೂರು: ಮಾಲ್ ಗಳ ಆರಂಭ,ದೇವಾಲಯಗಳಿಗೆ ಭಕ್ತರ ಪ್ರವೇಶಕ್ಕೆ ಅವಕಾಶ, ವೀಕೆಂಡ್ ಕರ್ಫ್ಯೂ ರದ್ದು ಮಾಡುವ ಮಹತ್ವದ ನಿರ್ಧಾರದೊಂದಿಗೆ ಜುಲೈ 5 ರಿಂದ ಅನ್ ಲಾಕ್ 3.O ಜಾರಿಗೆ ಬರಲಿದ್ದು,ಮುಂದಿನ 15 ದಿನಗಳ ಅವದಿಗೆ ನೂತನ ನಿಯಮ ಜಾರಿಗೆ ಬರಲಿದ್ದು, ಸೋಂಕು ಹೆಚ್ಚಳವಾದಲ್ಲಿ ಮತ್ತೆ ನಿಯಮ ಕಠಿಣಗೊಳಿಸಲಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ.

ಕೋವಿಡ್-19 ನಿಯಂತ್ರಣ ತಾಂತ್ರಿಕ ಸಲಹೆಗಳನ್ನು ಗಮನಿಸಿ ಸಚಿವ ಸಂಪುಟದ ಸಹೋದ್ಯೋಗಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ದಿನಾಂಕ: 05-07-2021 ರಂದು ಬೆಳಿಗ್ಗೆ 5 ಗಂಟೆಯಿಂದ ದಿನಾಂಕ: 19-07-2021 ಬೆಳಿಗ್ಗೆ 5.00 ಗಂಟೆಯವರೆಗೆ ಜಾರಿಗೆ ಬರುವಂತೆ ಈ ಕೆಳ ಕಾಣಿಸಿದ ಸಡಿಲಿಕೆಗಳು/ನಿರ್ಬಂಧಗಳು ಜಾರಿಯಲ್ಲಿರುತ್ತವೆ.

1. ಸರ್ಕಾರಿ/ಖಾಸಗಿ ಕಛೇರಿಗಳು ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳು ಶೇ. 100 ರಷ್ಟು ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ.

2. ಮಾಲ್ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.

3. ಮೆಟ್ರೋ ಸೇರಿದಂತೆ ಸಾರ್ವಜನಿಕ ಸಾರಿಗೆ ಶೇ. 100 ರಷ್ಟು ಪ್ರಮಾಣಿಕರೊಂದಿಗೆ ಸಂಚರಿಸಲು ಅವಕಾಶ ನೀಡಲಾಗಿದೆ.

4. ಧಾರ್ಮಿಕ ಸ್ಥಳಗಳಲ್ಲಿ ದರ್ಶನಕ್ಕೆ ಅವಕಾಶ ನೀಡಲಾಗಿದೆ.

5. ಮದುವೆ ಹಾಗೂ ಇನ್ನಿತರೆ ಕೌಟುಂಬಿಕ ಶುಭ ಸಮಾರಂಭಗಳಿಗೆ 100 ಜನರೊಂದಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ.

6. ಈಜುಕೊಳಗಳಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಅವಕಾಶ ನೀಡಲಾಗಿದೆ.

7. ಕ್ರೀಡಾ ಸಂಕೀರ್ಣಗಳಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಅವಕಾಶ ನೀಡಲಾಗಿದೆ.

8. ಅಂತ್ಯ ಸಂಸ್ಕಾರಕ್ಕೆ 20 ಸದಸ್ಯರು ಭಾಗವಹಿಸಲು ಅವಕಾಶ ನೀಡಲಾಗಿದೆ.

9. ಕೊರೋನಾ ಕರ್ಫ್ಯೂ (ನೈರ್ಟ್ ಕರ್ಫ್ಯೂ) ರಾತ್ರಿ 9.00 ರಿಂದ ಬೆಳಿಗ್ಗೆ 5.00 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.

10. ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರುವುದಿಲ್ಲ.

11. ಸಾಮಾಜಿಕ, ಧಾರ್ಮಿಕ, ಮತ್ತು ರಾಜಕೀಯ ಸಭೆ ಸಮಾರಂಭಗಳಿಗೆ, ಪ್ರತಿಭಟನೆಗಳಿಗೆ ಹಾಗೂ ಇತರೆ ಸಮಾರಂಭಗಳಿಗೆ ಅವಕಾಶವಿಲ್ಲ.

12. ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯುವ ಬಗ್ಗೆ ಪ್ರತ್ಯೇಕವಾಗಿ ತೀರ್ಮಾನಿಸಲಾಗುವುದು.
13. ಪಬ್ಗಳು ಕಾರ್ಯನಿರ್ವಹಿಸಲು ಅವಕಾಶವಿಲ್ಲ. ಬಾರ್ಗಳು ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ.

14. ಚಿತ್ರಮಂದಿರಗಳು ಕಾರ್ಯನಿರ್ವಹಣೆಗೆ ಅವಕಾಶವಿಲ್ಲ.

• ಜಿಲ್ಲೆಯಲ್ಲಿರುವ ಪರಿಸ್ಥಿತಿಗನುಗುಣವಾಗಿ ಆಯಾಯ ಜಿಲ್ಲೆಯ ಜಿಲ್ಲಾಡಳಿತಗಳು ಇನ್ನೂ ಹೆಚ್ಚಿನ ನಿರ್ಬಂಧಗಳು ಅವಶ್ಯವಿದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರುಗಳೊಂದಿಗೆ ಸಮಾಲೋಚಿಸಿ ತೀರ್ಮಾನ ತೆಗೆದುಕೊಳ್ಳಲು ಸೂಚಿಸಿದೆ.
• ಕೋವಿಡ್-19 ನಿಯಂತ್ರಿಸುವ ದೃಷ್ಟಿಯಿಂದ ಸಾರ್ವಜನಿಕರು ನಿಯಂತ್ರಣ ಕ್ರಮಗಳಾದ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ವೈಯಕ್ತಿಕ ಮತ್ತು ಸಾಮಾಜಿಕ ಸ್ವಚ್ಛತೆ ಕಡೆಗೆ ಗಮನ ಹರಿಸಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲು ವಿನಂತಿ.

ನಿಮ್ಮ ಸಂಕಷ್ಟ ನಿವಾರಣೆಗೆ ನಾನು, ಸಿದ್ದರಾಮಯ್ಯ ವಿಧಾನಸೌಧದಲ್ಲಿ ಹೋರಾಡುತ್ತೇವೆ; ಡಿ.ಕೆ. ಶಿವಕುಮಾರ್

ಬೆಂಗಳೂರು:ಕೋವಿಡ್ ಸಂಕಷ್ಟ ನಿವಾರಣೆಗೆ ನಾನು ಹಾಗೂ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಹೋರಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

ಕೋವಿಡ್ ಸಂಕಷ್ಟಪೀಡಿತರಿಗೆ ಸಾಂತ್ವನ ಹೇಳಿ, ಅವರಿಗೆ ಪರಿಹಾರ ಸಿಗುವಂತೆ ಮಾಡಲು ಕಾಂಗ್ರೆಸ್ ಒಂದು ತಿಂಗಳ ಕಾರ್ಯಕ್ರಮ ಹಮ್ಮಿಕೊಂಡಿದೆ. ನಮ್ಮ ಕಾರ್ಯಕರ್ತರು ನಿಮ್ಮ ಮನೆ ಬಾಗಿಲಿಗೆ ಬಂದಾಗ, ಕೋವಿಡ್ ನಿಂದ ನಿಮಗಾಗಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿ ಕೊಡಿ. ನಾನು ಹಾಗೂ ಸಿದ್ದರಾಮಯ್ಯನವರು ವಿಧಾನಸೌಧದಲ್ಲಿ ನಿಮ್ಮ ಪರ ಹೋರಾಟ ಮಾಡುತ್ತೇವೆ’ ಎಂದೂ ಅವರು ತಿಳಿಸಿದ್ದಾರೆ.

ರಾಜಾಜಿನಗರದ ಮಂಜುನಾಥನಗರದಲ್ಲಿ ಆಹಾರ ಕಿಟ್ ಗಳ ವಿತರಣೆ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ, ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಿಷ್ಟು:

‘ಈ ಭಾಗದಲ್ಲಿ ನಮ್ಮ ನಾಯಕರು ನೂರಾರು ದಿನಗಳಿಂದ ಬಡವರಿಗೆ ಆಹಾರ ಕಿಟ್ ಗಳನ್ನು ನೀಡುತ್ತಿದ್ದಾರೆ. ಕನಿಷ್ಟ ಸಾವಿರ ರೂಪಾಯಿ ಮೌಲ್ಯದ ಫುಡ್ ಕಿಟ್ ನೀಡುತ್ತಿದ್ದಾರೆ. ಕೃಷ್ಣಮೂರ್ತಿ ಅವರು ಶ್ರೀಮಂತರಲ್ಲ. ಅವರಿಗೆ ಅಧಿಕಾರವೂ ಇಲ್ಲ. ಅವರನ್ನು ನೀವು ಕಾರ್ಪೊರೇಷನ್ ಗೆ ಕಳುಹಿಸಿದ್ದೀರಿ ಎಂಬ ಕಾರಣಕ್ಕೆ ಅವರು ತಮ್ಮ ಕೈಲಾದ ಸಹಾಯವನ್ನು ನಿಮಗೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಕರೆಗೆ ಗೌರವ ಕೊಟ್ಟು ಈ ಕೆಲಸ ಮಾಡುತ್ತಿದ್ದು, ಪಕ್ಷದ ಪರವಾಗಿ ಅವರನ್ನು ಅಭಿನಂದಿಸುತ್ತೇನೆ.

ಇಲ್ಲಿರುವವರೆಲ್ಲ ಕಾರ್ಮಿಕರು. ಕಳೆದ ವರ್ಷ ನಿಮಗೆ 10 ಸಾವಿರ ಕೊಡಿಸಲು ನಾನು ಹಾಗೂ ಸಿದ್ದರಾಮಯ್ಯನವರು ಹೋರಾಟ ಮಾಡಿದೆವು. ಸರ್ಕಾರ 5 ಸಾವಿರ ನೀಡುವುದಾಗಿ ಹೇಳಿತ್ತು. ಆದರೆ ಆ ಹಣ ನಿಮಗೆ ಬಂತಾ.? ಈ ವರ್ಷ ಘೋಷಿಸಿದ 2-3 ಸಾವಿರ ಪರಿಹಾರ ಬಂತಾ.? ಯಾರಿಗೂ ಬಂದಿಲ್ಲ. ನಮ್ಮ ಹೋರಾಟಕ್ಕೆ ಹೆದರಿ ಸರ್ಕಾರ ಕಳೆದ ವರ್ಷ 1900 ಕೋಟಿ, ಈ ವರ್ಷ ಸಾವಿರ ಕೋಟಿ ರುಪಾಯಿ ಪ್ಯಾಕೇಜ್ ಘೋಷಿಸಿತು. ಚಾಲಕರಿಗೆ 5 ಸಾವಿರ ನೀಡುತ್ತೇವೆ ಎಂದರು, ಅವರಿಗೂ ಹಣ ಬರಲಿಲ್ಲ. ಇದು ನುಡಿದಂತೆ ನಡೆಯದ ಸರ್ಕಾರ. ಅದಕ್ಕಾಗಿಯೇ ಇಂದು ಇಲ್ಲಿನ 5 ಸಾವಿರ ಜನಕ್ಕೆ ಫುಡ್ ಕಿಟ್ ನೀಡಲು ನಮ್ಮ ನಾಯಕರು ಮುಂದಾಗಿದ್ದಾರೆ.

ನಮ್ಮ ಶಾಸಕರು ಇರುವ ಕಡೆ ಮಾತ್ರವಲ್ಲ, ಎರಡು ಮೂರು ಬಾರಿ ನಮ್ಮ ಅಭ್ಯರ್ಥಿಗಳು ಸೋತಿರುವ ಕ್ಷೇತ್ರಗಳಲ್ಲೂ ಪಕ್ಷದ ವತಿಯಿಂದ ಬಡವರಿಗೆ ಸಹಾಯ ಹಸ್ತ ನೀಡಲಾಗಿದೆ. ಅಲ್ಲಿನ ಬೇರೆ ಪಕ್ಷದ ಶಾಸಕರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ನಮ್ಮ ನಾಯಕರುಗಳು ಜನರಿಗೆ ಸಹಾಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಸೋತಿದ್ದರೂ ಸಂಕಷ್ಟದ ಸಮಯದಲ್ಲಿ ನಿಮ್ಮ ಕೈ ಬಿಡಲಿಲ್ಲ. ಇದು ಬೆಂಗಳೂರಿನ ವಿಚಾರ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ನಮ್ಮವರು ಜನರ ಸಹಾಯಕ್ಕೆ ನಿಂತಿದ್ದಾರೆ. ಕೊರೋನಾ ಸಂತ್ರಸ್ತರಿಂದ ಅರ್ಜಿ ಹಾಕಿಸಿ, ಅವರಿಗೆ ಪರಿಹಾರ ಒದಗಿಸಲು ವಾರ್ಡ್ ವಾರು ತಂಡಗಳನ್ನು ರಚಿಸಿ ಜನರಿಗೆ ನೆರವಾಗಲು ಕಾರ್ಯಕ್ರಮ ರೂಪಿಸಿದ್ದೇವೆ. ಸತ್ತವರ ಕುಟುಂಬ, ಆಸ್ಪತ್ರೆಯಲ್ಲಿ ನರಳಾಡಿದವರು, ಉದ್ಯೋಗ, ಆದಾಯ ಕಳೆದುಕೊಂಡವರಿಗೆ ಆಗಿರುವ ನಷ್ಟ, ಸಮಸ್ಯೆಯನ್ನು ಪಟ್ಟಿ ಮಾಡಿಕೊಡಿ. ನಿಮ್ಮ ಪರವಾಗಿ ನಾನು ಹಾಗೂ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿ ಹೇಗೆ ಹೋರಾಟ ಮಾಡುತ್ತೇವೆ ಎಂಬುದನ್ನು ನೋಡಿ.

ನಿಮ್ಮ ನೋವಿಗೆ ಸರಕಾರದ ಯಾರೂ ಸ್ಪಂದಿಸಲಿಲ್ಲ. ಆಸ್ಪತ್ರೆಯಲ್ಲಿ ಹಾಸಿಗೆ ಸಿಗಲಿಲ್ಲ. ಪರಿಹಾರ ಪಡೆಯಲು ನೀವು ಆನ್ಲೈನ್ ನಲ್ಲಿ ಅರ್ಜಿ ಹಾಕಬೇಕಂತೆ. ಇದಕ್ಕಾಗಿಯೇ ನಾವು ಕಾರ್ಯಕ್ರಮ ರೂಪಿಸಿದ್ದು, ನಿಮ್ಮ ಮನೆಗೆ ನಮ್ಮ ಕಾರ್ಯಕರ್ತರು ಬರುತ್ತಾರೆ. ನಿಮಗೆ ಪರಿಹಾರ ಕೊಡಿಸಲು ನಾವು ಪ್ರಯತ್ನಿಸುತ್ತೇವೆ. ಮುಂದಿನ ಬಾರಿ ನೀವು ನಮ್ಮ ಪಕ್ಷವನ್ನು ಅಧಿಕಾರಕ್ಕೆ ತನ್ನಿ. ನಿಮ್ಮ ಋಣ ಹೇಗೆ ತೀರಿಸುತ್ತೇವೆ ಎಂಬುದರ ಬಗ್ಗೆ ಮುಂದೆ ಮಾತನಾಡುತ್ತೇನೆ. ನಮ್ಮ ಚುನಾವಣಾ ಪ್ರಣಾಳಿಕೆ ಬಂದಾಗ ಏನು ಹೇಳಬೇಕೋ ಅದನ್ನು ಹೇಳುತ್ತೇವೆ.’

ಬರೀ 17 ಜನ ಅಲ್ಲ, ಕಾಂಗ್ರೆಸ್ ಸಿದ್ಧಾಂತ, ನಾಯಕತ್ವ ಒಪ್ಪುವ ಯಾರೂ ಬೇಕಾದರೂ ಪಕ್ಷ ಸೇರಲು ಅರ್ಜಿ ಹಾಕಬಹುದು; ಡಿ.ಕೆ. ಶಿವಕುಮಾರ

ಬೆಂಗಳೂರು:‘ಕಾಂಗ್ರೆಸ್ ಪಕ್ಷದ ಸಿದ್ಧಾಂತ, ನಾಯಕತ್ವ ಒಪ್ಪಿ, ಕೆಲಸ ಮಾಡಲು ಇಚ್ಛಿಸುವ ಯಾರೇ ಆದರೂ ಪಕ್ಷ ಸೇರಲು ಅರ್ಜಿ ಹಾಕಬಹುದು. ನಾನು ಕೇವಲ 17 ಜನರನ್ನು ಉದ್ದೇಶಿಸಿ ಈ ಮಾತು ಹೇಳುತ್ತಿಲ್ಲ. ಯಾರೇ ಅರ್ಜಿ ಹಾಕಿದರೂ ಪಕ್ಷ ಅದನ್ನು ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳಲಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟವಾಗಿ ಹೇಳಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಶನಿವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್ ಅವರು ‘ಯಾರು ಕಾಂಗ್ರೆಸ್ ಸಿದ್ಧಾಂತ, ನಾಯಕತ್ವ ನಂಬಿ ಪಕ್ಷ ಸೇರಲು ಬಯಸುತ್ತಾರೋ ಅವರು ಅಲ್ಲಂ ವೀರಭದ್ರಪ್ಪ ಅವರ ನೇತೃತ್ವದ ಸಮಿತಿಗೆ ಅರ್ಜಿ ಹಾಕಲಿ. ಅವರು ಪರಿಶೀಲಿಸಿ, ಯಾರನ್ನು ತೆಗೆದುಕೊಳ್ಳಬೇಕು, ಯಾರನ್ನು ತೆಗೆದುಕೊಳ್ಳಬಾರದು ಅಂತಾ ನಿರ್ಧರಿಸುತ್ತಾರೆ. ಮುಂದೆ ಯಾವುದೇ ಗೊಂದಲ ಉದ್ಭವಿಸಬಾರದು ಎಂದು ನಾವು ಬ್ಲಾಕ್ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ, ಆನಂತರ ರಾಜ್ಯಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಯಾರಿಗೆ ಇಚ್ಛೇ ಇದೆಯೋ ಅವರು ಅರ್ಜಿ ಹಾಕಲಿ, ಆಮೇಲೆ ಆ ಬಗ್ಗೆ ತೀರ್ಮಾನ ಮಾಡೋಣ ಎಂದರು.

ನಮ್ಮಲ್ಲಿ ಒಬ್ಬೊಬ್ಬರದ್ದೂ ಒಂದೊಂದು ಅಭಿಪ್ರಾಯ ಇರುತ್ತದೆ. ಇಲ್ಲಿ ವೈಯಕ್ತಿಕ ಅಭಿಪ್ರಾಯ ಮುಖ್ಯ ಅಲ್ಲ. ಪಕ್ಷದ ಒಟ್ಟಾರೆ ಅಭಿಪ್ರಾಯ ಮುಖ್ಯ. ಪಕ್ಷ ತೊರೆದು ಮಂತ್ರಿಯಾಗಿರುವ 17 ಜನರಲ್ಲಿ ಯಾರೂ ಪಕ್ಷ ಸೇರುವ ಬಗ್ಗೆ ಸಂಪರ್ಕ ಮಾಡಿಲ್ಲ. ನಾನು ಕೇವಲ ಈ 17 ಜನರನ್ನು ಉದ್ದೇಶಿಸಿ ಮಾತ್ರ ಈ ಮಾತು ಹೇಳುತ್ತಿಲ್ಲ. ಯಾರು ಬೇಕಾದರೂ ಅರ್ಜಿ ಹಾಕಬಹುದು. ನೀವು ಬೇಕಾದದರೂ ಅರ್ಜಿ ಹಾಕಿ. ರಾಜಕೀಯದಲ್ಲಿ ಬೆನ್ನಿಗೆ ಚೂರಿ ಹಾಕುವ ಕೆಲಸ ನಿತ್ಯ ನಡೆಯುತ್ತಿರುತ್ತದೆ. ಇದು ಕೇವಲ ಡಿ.ಕೆ. ಶಿವಕುಮಾರ್ ಅಥವಾ ಕಾಂಗ್ರೆಸ್ ಪಕ್ಷ ಅಂತ ಅಲ್ಲ, ಎಲ್ಲ ಪಕ್ಷದಲ್ಲೂ ಇಂತಹ ಉದಾಹರಣೆಗಳನ್ನು ನೋಡಿದ್ದೇವೆ. ಪ್ರತಾಪಗೌಡ ಪಾಟೀಲ್ ಅವರನ್ನು ನಾವು ಬಿಜೆಪಿಯಿಂದಲೇ ಕರೆ ತಂದಿದ್ದೆವು. ಹೀಗೆ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೋಗುವುದು, ಮರಳುವುದು ರಾಜಕೀಯದಲ್ಲಿ ಸಾಮಾನ್ಯ ಎಂದರು.

ಜನರ ಜೀವ ಉಳಿಸಲು ಸರ್ಕಾರ ಏನೇ ಮಾಡಿದರೂ ಸಹಕಾರ ನೀಡುತ್ತೇವೆ:

‘ಸರ್ಕಾರ ಯಾವುದೇ ಜನಪರ ನಿರ್ಧಾರ ತೆಗೆದುಕೊಂಡರೂ ನಾವು ಅಡ್ಡಿ ಮಾಡುವುದಿಲ್ಲ. ಜನರ ಜೀವ ಉಳಿಸಲು ಲಸಿಕೆ ನೀಡಿ, ನೊಂದವರಿಗೆ ಪರಿಹಾರ ನೀಡಿ. ಇದೇ ನಮ್ಮ ಆಗ್ರಹ.
ಅಸಂಘಟಿತ ಕಾರ್ಮಿಕರು ಹಾಗೂ ಸಾಂಪ್ರದಾಯಿಕ ವೃತ್ತಿ ಅವಲಂಬಿತವರಿಗೆ, ಎಲ್ಲ ಸಮಾಜದವರಿಗೆ, ಕೊರೋನಾದಿಂದ ಯಾರು ನೊಂದಿದ್ದಾರೆ, ಸತ್ತಿದ್ದಾರೆ ಅವರಿಗೆ ಸರ್ಕಾರ ಪರಿಹಾರ ನೀಡಿಲ್ಲ. ಈಗಲೂ ಜನ ಅರ್ಜಿ ಹಿಡಿದು ಅಲೆದಾಡುವ ಪರಿಸ್ಥಿತಿ ಇದೆ. ಸರ್ಕಾರ ಯಾಕೆ ಈ ರೀತಿ ತಪ್ಪು ಮಾಡುತ್ತಿದೆಯೋ ಗೊತ್ತಿಲ್ಲ. ಜೀವ ಇದ್ದರೆ ಜೀವನ ಅಂತಾ ನಾನು ಪದೇ ಪದೆ ಹೇಳುತ್ತಿದ್ದೇನೆ. ಇವರು ಬದುಕಿರುವಾಗ ಪರಿಹಾರ ನೀಡಬೇಕೇ ಹೊರತು, ಸತ್ತಾಗ ಕೊಡೋದಲ್ಲ. ಆಸ್ಪತ್ರೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವವರಿಗೆ ನೆರವಾಗಲಿ. ಅವರು ಅನ್ ಲಾಕ್ ಆದರೂ ಮಾಡಲಿ, ಬೇರೆ ಏನಾದರೂ ಮಾಡಲಿ, ಜನರಿಗೆ ಒಳ್ಳೆಯದು ಮಾಡಲಿ, ಅಷ್ಟೇ ಎಂದರು.

2021-22 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯವರ ಅಭಿವೃದ್ಧಿಗಾಗಿ 26,005.01 ಕೋಟಿ ರೂ. ಅನುದಾನ: ಸಿಎಂ

ಬೆಂಗಳೂರು. ಜುಲೈ 02:-ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸಮಗ್ರ ಅಭಿವೃದ್ದಿಗಾಗಿ ಕರ್ನಾಟಕ ಅನುಸೂಚಿತ ಜಾತಿಗಳ ಉಪಹಂಚಿಕೆ ಮತ್ತು ಬುಡಕಟ್ಟು ಉಪಹಂಚಿಕೆ ಅಧಿನಿಯಮ 2013 ನ್ನು ಜಾರಿಗೆ ತಂದು ಅನುಷ್ಠಾನಗೊಳಿಸಲಾಗುತ್ತಿದೆ. ಈ ಕಾಯ್ದೆಯನ್ವಯ ರಾಜ್ಯ ಅಭಿವೃದ್ದಿ ಪರಿಷತ್ ಸಭೆ ನಡೆಸಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ.

2021-22 ನೇ ಸಾಲಿನ ಆಯವ್ಯಯ ಹಂಚಿಕೆ ವಿವರ:

2021-22 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯವರ ಅಭಿವೃದ್ಧಿಗಾಗಿ 18,331.54 ಕೋಟಿ ರೂ. ಹಾಗೂ ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ 7673.47 ಕೋಟಿ ರೂ.ಗಳು ಒಟ್ಟಾರೆಯಾಗಿ 26,005.01 ಕೋಟಿ ರೂ. ಅನುದಾನವನ್ನು 35 ಅಭಿವೃದ್ಧಿ ಇಲಾಖೆಗಳಿಗೆ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿಯವರು ತಿಳಿಸಿದರು.

ಇಂದಿನ ರಾಜ್ಯ ಪರಿಷತ್ ಸಭೆಯಲ್ಲಿ ಎಲ್ಲಾ ಇಲಾಖೆಗಳ ಕ್ರಿಯಾ ಯೋಜನೆಗಳ ಬಗ್ಗೆ ಚರ್ಚಿಸಿ ಅನುಮೋದನೆ ನೀಡಲಾಗಿದೆ.ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ನಿಯಮಗಳು, 2017 ರ ಅನ್ವಯ ಮುಂದುವರೆದ ಕಾಮಗಾರಿಗಳಿಗೆ ಮೊದಲನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡಿ, ಅನುಷ್ಠಾನ ಮಾಡಲು ಎಲ್ಲಾ ಇಲಾಖೆಗಳಿಗೆ ತಿಳಿಸಿದರು.

ಸಮಾಜ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ನೋಡಲ್ ಏಜೆನ್ಸಿ ಸಭೆ ನಡೆಸಿ ವಿವಿಧ ಇಲಾಖೆಗಳು ಸಲ್ಲಿಸಿರುವ ಕ್ರಿಯಾ ಯೋಜನೆಯನ್ನು ಪರಿಶೀಲಿಸಿ ಅಗತ್ಯ ಮಾರ್ಪಾಡು ಹಾಗೂ ಶಿಫಾರಸ್ಸುಗಳೊಂದಿಗೆ ರಾಜ್ಯ ಪರಿಷತ್ ಅನುಮೋದನೆಗೆ ಕ್ರಿಯಾ ಯೋಜನೆ ಮಂಡಿಸಲಾಯಿತು.

ಈ ಕ್ರಿಯಾ ಯೋಜನೆಯನ್ನು ಎಲ್ಲಾ ಇಲಾಖೆಗಳಿಗೆ ಕಳುಹಿಸಿ, ಆಯಾ ಇಲಾಖೆಗಳು ಅಗತ್ಯವಿದ್ದಲ್ಲಿ ಸರ್ಕಾರಿ ಆದೇಶಗಳನ್ನು ಹೊರಡಿಸಿ, ನಿಗದಿತ ಅವಧಿಯೊಳಗೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ನಿರ್ದೇಶನ ನೀಡಿದರು.

ಪ್ರಸಕ್ತ ವರ್ಷದ ಪರಿಸ್ಥಿತಿಯನ್ನು ಗಮನಿಸಿ, ಆರ್ಥಿಕ, ಶಿಕ್ಷಣ, ಆರೋಗ್ಯ ಮತ್ತು ಇತರೆ ಅಭಿವೃದ್ದಿ ಕಾರ್ಯಕ್ರಮಗಳು ಹಾಗೂ ಮೂಲಭೂತ ಸೌಕರ್ಯಗಳನ್ನು ಸಂಬಂಧಿಸಿದ ಇಲಾಖೆಗಳು ಪ.ಜಾತಿ/ ಪ.ಪಂಗಡದ ಜನರಿಗೆ ಅನುಕೂಲವಾಗುವಂತೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ತಿಳಿಸುತ್ತಾ, 100% ಗುರಿಯನ್ನು ಸಾಧಿಸಲು ಸ್ಪಷ್ಟ ನಿರ್ದೇಶನ ನೀಡಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಭೂಮಿ ಹಂಚಿಕೆ ಮತ್ತಿತರ ಯಾವುದೇ ಸೌಲಭ್ಯ ವಿತರಿಸುವಾಗ ಜಂಟಿ ಹೆಸರಿನಲ್ಲೇ ನೀಡುವಂತೆ ಸೂಚಿಸಲಾಯಿತು.ಎಸ್.ಸಿ/ ಎಸ್‍ಟಿ ಫಲಾನುಭವಿಗಳಿಗೆ ಶೌಚಾಲಯ / ಸ್ನಾನ ಗೃಹ ನಿರ್ಮಾಣಕ್ಕೆ ಕೇಂದ್ರ ಹಾಗೂ ರಾಜ್ಯದ ಪಾಲು ಸೇರಿಸಿ ನೀಡುತ್ತಿರುವ ಸಹಾಯಧನವನ್ನು ತಲಾ ರೂ. 15,000 ಗಳಿಂದ 20,000 ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಯಿತು.

ಈ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಜನರ ಬದುಕಿನ ಮಟ್ಟ ಸುಧಾರಣೆಗೆ ಪೂರಕವಾಗುವಂತೆ ಈ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು. ಅಧಿಕಾರಿಗಳು ಸ್ವಯಂ ಪ್ರೇರಿತರಾಗಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕೆಂದು ಹಾಗೂ ಇದರಲ್ಲಿ ಯಾವುದೇ ಲೋಪವಾದಲ್ಲಿ ಕಾಯ್ದೆಯನ್ವಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

2020-21 ನೇ ಸಾಲಿನ ಪ್ರಗತಿಯ ವಿವರ:

2020-21ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯವರ ಅಭಿವೃದ್ದಿಗಾಗಿ 18,131.12 ಕೋಟಿ ರೂ. ಗಳನ್ನು ಒದಗಿಸಿದ್ದು, 17,352.45 ಕೋಟಿ ರೂ.ಗಳು ವೆಚ್ಚವಾಗಿರುತ್ತದೆ. ಶೇಕಡ ಪ್ರಗತಿ -96%.ಪರಿಶಿಷ್ಟ ಪಂಗಡದವರ ಅಭಿವೃದ್ದಿಗಾಗಿ 7814.78 ಕೋಟಿ ರೂ.ಗಳನ್ನು ಒದಗಿಸಿದ್ದು, 7294.54 ಕೋಟಿ ರೂ .ಗಳು ವೆಚ್ಚವಾಗಿರುತ್ತದೆ. ಶೇಕಡ ಪ್ರಗತಿ – 93%.36 ಅಭಿವೃದ್ದಿ ಇಲಾಖೆಗಳಿಂದ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದ್ದು, ಒಟ್ಟಾರೆ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಅಡಿಯಲ್ಲಿ ಹಂಚಿಕೆ ಮಾಡಿರುವ ರೂ 25,945.90 ಕೋಟಿಗಳಲ್ಲಿ, ರೂ.24,646.99 ಕೋಟಿಗಳ ವೆಚ್ಚ ಭರಿಸಲಾಗಿದೆ. ಶೇಕಡ ಪ್ರಗತಿ-95%.2020-21 ನೇ ಸಾಲಿನಲ್ಲಿ ಕೃಷಿ ವಲಯದಡಿ ಕೃಷಿ ಹಾಗೂ ಪಶುಸಂಗೋಪನೆ ಕಾರ್ಯಕ್ರಮಗಳಿಗೆ 1594.40 ಕೋಟಿ ರೂ. ವೆಚ್ಚದಲ್ಲಿ 14.89 ಲಕ್ಷ ಪರಿಶಿಷ್ಟ ಜಾತಿ ಹಾಗೂ 8.64 ಲಕ್ಷ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ 845.28 ಕೋಟಿ ರೂ. ವೆಚ್ಚದಲ್ಲಿ 13.43 ಲಕ್ಷ ಪರಿಶಿಷ್ಟ ಜಾತಿ ಹಾಗೂ 6.00 ಲಕ್ಷ ಪರಿಶಿಷ್ಟ ಪಂಗಡದ ಮಹಿಳೆಯರು ಮತ್ತು ಮಕ್ಕಳಿಗೆ ಪೌಷ್ಟಿಕ ಆಹಾರ ಇತ್ಯಾದಿ ಸೌಲಭ್ಯ ಒದಗಿಸಲಾಗಿದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯಿಂದ 910.64 ಕೋಟಿ ರೂ. ವೆಚ್ಚದಲ್ಲಿ ಪರಿಶಿಷ್ಟ ಜಾತಿಯ 15.45 ಲಕ್ಷ ಮತ್ತು ಪರಿಶಿಷ್ಟ ಪಂಗಡದ 6.40 ಲಕ್ಷ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಸೈಕಲ್ , ಆರ್.ಟಿ.ಇ ಕಾಯ್ದೆ ಮತ್ತು ಇತರೆ ಶುಲ್ಕ ಪಾವತಿ, ಮಧ್ಯಾಹ್ನ ಭೋಜನ, ಇತ್ಯಾದಿ ಸೌಲಭ್ಯಗಳನ್ನು ನೀಡಲಾಗಿದೆ.ಉನ್ನತ ಶಿಕ್ಷಣ ಇಲಾಖೆಯಲ್ಲಿ 83.38 ಕೋಟಿ ರೂ. ವೆಚ್ಚದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸೌಲಭ್ಯ ಒದಗಿಸಲಾಗಿದೆ.

ಗ್ರಾಮೀಣಾಭೀವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ರೂ.2888.28 ಕೋಟಿವೆಚ್ಚದಲ್ಲಿ ಸ್ವಚ್ಚ ಭಾರತ ಕುಡಿಯುವ ನೀರು ಮತ್ತು ನರೇಗಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು ಪ. ಜಾತಿಯ 5.81 ಲಕ್ಷ ಮತ್ತು ಪ. ಪಂಗಡದ 3.22 ಲಕ್ಷ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲಾಗಿದೆ.

ಕಂದಾಯ ಇಲಾಖೆಯಿಂದ 284.27 ಕೋಟಿ ರೂ. ವೆಚ್ಚದಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ಪರಿಶಿಷ್ಟ ಜಾತಿ 17.34 ಲಕ್ಷ ಮತ್ತು ಪರಿಶಿಷ್ಟ ಪಂಗಡದ 7.29 ಲಕ್ಷ ಫಲಾನುಭವಿಗಳಿಗೆ ವಿವಿಧ ರೀತಿಯ ಪಿಂಚಣಿಗಳನ್ನು ಒದಗಿಸಲಾಗಿದೆ.

ಇಂಧನ ಇಲಾಖೆಯಿಂದ 2159.74 ಕೋಟಿ ರೂ. ವೆಚ್ಚದಲ್ಲಿ ಪರಿಶಿಷ್ಟ ಜಾತಿ 6.53 ಲಕ್ಷ ಮತ್ತು ಪರಿಶಿಷ್ಟ ಪಂಗಡದ 2.81 ಲಕ್ಷ ರೈತರ 10 ಹೆಚ್,ಪಿ ಪಂಪ್ ಸೆಟ್ ಗಳಿಗೆ ಸಹಾಯಧನ/ ಗಂಗಾ ಕಲ್ಯಾಣದಡಿ ಕೊಳವೆ ಬಾವಿಗಳ ವಿದ್ಯುದ್ದೀಕರಣ, ಕುಟೀರ ಜ್ಯೋತಿ/ ಭಾಗ್ಯ ಜ್ಯೋತಿ ಸೌಲಭ್ಯ ಒದಗಿಸಲಾಗಿದೆ.

ವಸತಿ ಇಲಾಖೆಯಡಿ 863.41 ಕೋಟಿ ರೂ. ವೆಚ್ಚದಲ್ಲಿ ಪರಿಶಿಷ್ಟ ಜಾತಿಯ 24,290 ಮತ್ತು ಪ.ಪಂಗಡ -9,546 ಕುಟುಂಬಗಳಿಗೆ ವಸತಿ ಸೌಲಭ್ಯ ಒದಗಿಸಲಾಗಿದೆ.
ಇದೇ ರೀತಿ ಲೋಕೋಪಯೋಗಿ , ನಗರಾಭಿವೃದ್ದಿ , ಜಲ ಸಂಪನ್ಮೂಲ ಇಲಾಖೆ ಮತ್ತು ಯೋಜನಾ ಇಲಾಖೆಗಳ ಮೂಲಕ ವಿವಿಧ ಕಾಮಗಾರಿಗಳಿಗಾಗಿ 5535.88 ಕೋಟಿ ರೂ. ವೆಚ್ಚ ಭರಿಸಲಾಗಿದೆ.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಡಿ 1055.33 ಕೋಟಿ ರೂ. ವೆಚ್ಚದಲ್ಲಿ ಪ.ಜಾತಿಯ 2.37 ಲಕ್ಷ ಮತ್ತು ಪ.ಪಂಗಡ 1 ಲಕ್ಷ ಫಲಾನುಭವಿಗಳಿಗೆ ವಿವಿಧ ಸೌಲಭ್ಯ ಒದಗಿಸಲಾಗಿದೆ.

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಡಿ 780.97 ಕೋಟಿ ರೂ. ವೆಚ್ಚದಲ್ಲಿ ಅನ್ನಭಾಗ್ಯ ಯೋಜನೆಯಡಿ ಪ.ಜಾತಿಯ 17.65 ಲಕ್ಷ ಮತ್ತು ಪ.ಪಂಗಡದ 7.28 ಲಕ್ಷ ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಪಡಿತರ ಆಹಾರವನ್ನು ಒದಗಿಸಲಾಗಿದೆ.

ಸಮಾಜ ಕಲ್ಯಾಣ ಇಲಾಖೆಯಡಿ ಪರಿಶಿಷ್ಟ ಜಾತಿಯವರಿಗೆ 3200.87 ಕೋಟಿ ರೂ. ಹಾಗೂ ಪರಿಶಿಷ್ಟ ಪಂಗಡದವರಿಗೆ ರೂ.1270.50 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿ ವೇತನ, ವಿದ್ಯಾರ್ಥಿ ನಿಲಯ ನಿರ್ವಹಣೆ, ವಸತಿ ಶಾಲೆ ನಿರ್ವಹಣೆ, ವಿವಿಧ ನಿಗಮಗಳಿಂದ ಆರ್ಥಿಕ ಸಹಾಯ ಇತ್ಯಾದಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದ್ದು, ಪರಿಶಿಷ್ಟ ಜಾತಿ-11.73 ಲಕ್ಷ ಹಾಗೂ ಪರಿಶಿಷ್ಟ ಪಂಗಡದ -4.62 ಲಕ್ಷ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲಾಗಿದೆ.

ಕ್ರೈಸ್ ವಸತಿ ಶಾಲೆಗಳಲ್ಲಿ 1.46 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಇತರೆ ಇಲಾಖೆಗಳಾದ ಕೌಶಲ್ಯಾಭಿವೃದ್ದಿ ,ವಾರ್ತಾ, ಯುವಸಬಲೀಕರಣ, ಐ.ಟಿ.& ಬಿ.ಟಿ , ಸಣ್ಣ ಕೈಗಾರಿಕೆ ಇತ್ಯಾದಿ ಇಲಾಖೆಗಳಿಗೆ ಅನುದಾನ ಒದಗಿಸಿ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ.

.

ಚಾಮರಾಜನಗರ ದುರಂತದಲ್ಲಿ ಸತ್ತವರಿಗೆ ಸರ್ಕಾರ ಕೋವಿಡ್ ಮರಣ ಪ್ರಮಾಣ ಪತ್ರ ನೀಡದಿರುವುದಕ್ಕೆ ಡಿ.ಕೆ. ಶಿವಕುಮಾರ್ ಆಕ್ರೋಶ

ಬೆಂಗಳೂರು:ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರಿಗೆ ಕೋವಿಡ್ ಸಾವು ಎಂದು ಮರಣ ಪ್ರಮಾಣ ಪತ್ರ ನೀಡದಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, ‘ರಾಜ್ಯದಲ್ಲಿ 3.30 ಲಕ್ಷ ಕೋವಿಡ್ ಸಾವುಗಳ ಆಗಿವೆ ಎಂಬುದಕ್ಕೆ ನಮ್ಮ ಬಳಿ ದಾಖಲೆಗಳಿವೆ. ನಾನು ಕೂಡ ರಾಜ್ಯದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ. ಅದರಲ್ಲೂ ಚಾಮರಾಜನಗರದಲ್ಲೇ ಒಂದೇ ದಿನ 65 ಮಂದಿ ಆಕ್ಸಿಜನ್ ಇಲ್ಲದೆ ಸತ್ತಿದ್ದಾರೆ. ಆದರೆ ಆಸ್ಪತ್ರೆಯಲ್ಲಿ 36 ಮಂದಿ ಸತ್ತಿದ್ದಾರೆ ಎಂದು ವರದಿ ಬಂದಿವೆ. ಸರ್ಕಾರ ಕೇವಲ 3 ಜನ ಸತ್ತಿದ್ದಾರೆ ಎಂದಿತ್ತು. ನಾನು 36 ಮೃತರ ಕುಟುಂಬಗಳ ಮನೆಗಳಿಗೆ ಭೇಟಿ ಕೊಟ್ಟಿದ್ದೆ. ಇವರಲ್ಲಿ ಯಾರಿಗೂ ಸರ್ಕಾರ ಕೋವಿಡ್ ಸಾವು ಎಂದು ಮರಣ ಪ್ರಮಾಣ ಪತ್ರ ಕೊಟ್ಟಿಲ್ಲ. ಈ ಮಧ್ಯೆ ಸರ್ಕಾರ 1 ಲಕ್ಷ ಪರಿಹಾರ ನೀಡುವುದಾಗಿ ತಿಳಿಸಿದೆ. ಸುಪ್ರೀಂ ಕೋರ್ಟ್ ಪರಿಹಾರ ನೀಡಲು ಕಾಲಾವಕಾಶ ನಿಗದಿ ಮಾಡಿದೆ ಎಂದರು.

ಆಂಧ್ರಪ್ರದೇಶ ಸರ್ಕಾರ ಮೃತರಿಗೆ ಪರಿಹಾರ ಘೋಷಿಸಿದೆ. ನಮ್ಮ ರಾಜ್ಯದಲ್ಲೂ ಮೃತರಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸುತ್ತಿದ್ದೇವೆ. ಈ ಸೋಂಕಿನಿಂದ ಸತ್ತವರ ಮಾಹಿತಿ ಪಡೆಯಲು ಸರ್ಕಾರ ಡೆತ್ ಆಡಿಟ್ ಮಾಡಿ ಅವರಿಗೆ ಪರಿಹಾರ ನೀಡಬೇಕು. ನಿನ್ನೆ ನಮ್ಮ ಕಾರ್ಯಾಧ್ಯಕ್ಷರು ಬೀದರ್ ಒಂದೇ ಜಿಲ್ಲೆಯಲ್ಲಿ ಸರ್ಕಾರ ಹೇಗೆ ಸುಳ್ಳು ಸಾವಿನ ಲೆಕ್ಕ ನೀಡುತ್ತಿದೆ ಎಂದು ಹೇಳಿದ್ದಾರೆ. ಇದಕ್ಕಾಗಿ ನಮ್ಮ ಪಕ್ಷದ ಕಾರ್ಯಕರ್ತರಿಗೆ ಪ್ರತಿ ಮನೆಗೂ ಹೋಗಿ ಅವರ ಮಾಹಿತಿ ಪಡೆದು, ಅವರಿಗೆ ಪರಿಹಾರ ಸಿಗುವಂತೆ ಮಾಡಬೇಕೆಂದು ಸೂಚನೆ ಕೊಟ್ಟಿದ್ದೇವೆ. ನಾವು ಈ ಸಂಕಷ್ಟದ ಸಮಯದಲ್ಲಿ ಜನರ ಬೆನ್ನಿಗೆ ನಿಲ್ಲುತ್ತೇವೆ’ ಎಂದು ತಿಳಿಸಿದರು.

ಇನ್ನು ವಿಜಯೇಂದ್ರ ಅವರ ಹೆಸರಲ್ಲಿ ಸಚಿವ ಶ್ರೀರಾಮುಲು ಅವರ ಆಪ್ತ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಪಿಎ ವಿಚಾರದಲ್ಲಿ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಸಚಿವರ ಪಿಎಗಳ ವ್ಯವಹಾರಗಳ ಬಗ್ಗೆ ಮಾತನಾಡುವುದಿಲ್ಲ’ ಎಂದು ತಿಳಿಸಿದರು.

ಕಾಂಗ್ರೆಸ್ ಅಪ್ಪ, ಅಮ್ಮ ಇಲ್ಲದ ಮನೆಯಾಗಿದೆ ಎಂಬ ಸಚಿವ ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಅಯ್ಯೋ ಪಾಪ, ವಿಧಾನಸಭೆ ಚುನಾವಣೆ ಬರಲಿ, ಜನರೇ ಉತ್ತರ ಕೊಡುತ್ತಾರೆ’ ಎಂದರು.

ಇನ್ನು ಕುಮಾರಸ್ವಾಮಿ ಅವರು 17 ಮಂದಿ ಪಕ್ಷ ತೊರೆದವರ ವಿಚಾರವಾಗಿ ನೀಡಿರುವ ಹೇಳಿಕೆ ವಿಚಾರವಾಗಿ ಮಾತನಾಡಿ, ‘ಕುಮಾರಸ್ವಾಮಿ ಅವರ ಹೇಳಿಕೆಯನ್ನು ನೋಡಿದೆ, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂದು ಗೊತ್ತಿಲ್ಲ. ಅವರ ಜೀವ ಉಳಿಸುವುದು ಎಂದರೆ ಯಾವ ರೀತಿ ಎಂದು ಗೊತ್ತಾಗಿಲ್ಲ’ ಎಂದರು.

ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಆರ್ಥಿಕ ನೆರವು,ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒಪ್ಪಿಗೆ

ಬೆಂಗಳೂರು:ಕೇಂದ್ರ ಪುರಸ್ಕೃತ ಯೋಜನೆಗಳಿಗೆ ತನ್ನ ಪಾಲಿನ ಹಣ ಬಿಡುಗಡೆ ಮಾಡಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒಪ್ಪಿಗೆ ಕೊಟ್ಟಿದ್ದಾರೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಂಗಳೂರಿನಲ್ಲಿ ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ಈ ಭರವಸೆ ನೀಡಿದ್ದಾರೆಂದು ಬೊಮ್ಮಾಯಿ ತಿಳಿಸಿದರು.

ರಾಜ್ಯದಲ್ಲಿನ ಆರ್ಥಿಕ ಪರಿಸ್ಥಿತಿ, ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಕುರಿತು ನಿರ್ಮಲಾ ಸೀತಾರಾಮನ್ ಜತೆ ಚರ್ಚೆ ನಡೆಸಲಾಯಿತು.

ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆಗಳಡಿ ರಾಜ್ಯಸರ್ಕಾರಕ್ಕೆ ಬಿಡುಗಡೆಯಾಗಬೇಕಿರುವ ಹಣಕಾಸಿನ ನೆರವು ನೀಡುವಂತೆ ಮನವಿ ಮಾಡಿಕೊಳ್ಳಲಾಯಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ನಿರ್ಮಲಾ ಸೀತಾರಾಮನ್, ತ್ವರಿತ ಗತಿಯಲ್ಲಿ ಕೇಂದ್ರ ಪ್ರಯೋಜಿತ ಯೋಜನೆಗಳಿಗೆ ತನ್ನ ಪಾಲಿನ ಆರ್ಥಿಕ ನೆರವು ನೀಡುವುದಾಗಿ ತಿಳಿಸಿದರು ಎಂದು ಸಚಿವ ಬೊಮ್ಮಾಯಿ ಹೇಳಿದರು.

ಕಳೆದ ವರ್ಷದ ಜಿಎಸ್ಟಿ ಪರಿಹಾರ ಬಾಕಿ 11800 ಕೋಟಿ ರೂಪಾಯಿ ಹಣವನ್ನು ರಾಜ್ಯಕ್ಕೆ ನೀಡಲು ಕ್ರಮಕೈಗೊಳ್ಳಲಾಗುವುದು. ಕಳೆದ ಬಾರಿಯಂತೆ ಜಿಎಸ್ಟಿ ಪರಿಹಾರ 18000 ಕೋಟಿ ರೂಪಾಯಿ ಹಣವನ್ನು ಕೇಂದ್ರ ಸರ್ಕಾರ ಸಾಲ ಪಡೆದು ರಾಜ್ಯಕ್ಕೆ ಒದಗಿಸುವುದಾಗಿ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದರೆಂದು ಬೊಮ್ಮಾಯಿ ವಿವರಿಸಿದರು.

2021- 22 ನೇ ಸಾಲಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ ಸಂಗ್ರಹವಾಗಿರುವ ಜಿಎಸ್ಟಿ ಪಾಲಿನ ಮೊದಲ ಕಂತನ್ನು ರಾಜ್ಯಕ್ಕೆ ಬಿಡುಗಡೆ ಮಾಡುವಂತೆ ಮನವಿ ಮಾಡಿದೆ. ಅದಕ್ಕೆ ಸಚಿವರು ಒಪ್ಪಿಗೆ ನೀಡಿದರು. ಕೋವಿಡ್ ನಿರ್ವಹಣೆ ಮತ್ತು ಕೋವಿಡ್ ಮೂರನೇ ಅಲೆ ತಯಾರಿಗೆ ಬೇಕಾದ ಹಣಕಾಸಿನ ವ್ಯವಸ್ಥೆಗಳ ಕುರಿತು ಸಭೆಯಲ್ಲಿ ಚರ್ಚೆಯಾಯಿತು. ಕೋವಿಡ್ ನಿರ್ವಹಣೆಗೆ ಯಾವುದೇ ರೀತಿಯ ಹಣಕಾಸಿನ ಅಭಾವ ಆಗದಂತೆ ನೋಡಿಕೊಳ್ಳುವ ಭರವಸೆಯನ್ನು ಅವರು ನೀಡಿದರು ಎಂದು ಸಚಿವರು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಕೋವಿಡ್ ಎರಡನೆ ಅಲೆಯನ್ನು ನಿರ್ವಹಣೆ ಮಾಡಿದ ರೀತಿ, ಬಡವರಿಗೆ ನೀಡಲಾದ ಪ್ಯಾಕೇಜ್, ಕೋವಿಡ್ ನಿಂದ ಸಾವನ್ನಪ್ಪಿದ ಬಿಪಿಎಲ್ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ, ಖಾಸಗಿ ಆಸ್ಪತ್ರೆಗಳ ಸಹಕಾರದೊಂದಿಗೆ ಕೋವಿಡ್ ಎರಡನೇ ಅಲೆಯನ್ನು ನಿರ್ವಹಣೆ ಮಾಡಿದ ರಾಜ್ಯ ಸರ್ಕಾರದ ಕ್ರಮಕ್ಕೆ ನಿರ್ಮಲ ಸಿತಾರಾಮನ್ ಹರ್ಷ ವ್ಯಕ್ತಪಡಿಸಿದರು.

ನಿರ್ಮಲಾ ಸೀತಾರಾಮನ್ ಅವರೊಂದಿಗಿನ ಭೇಟಿ ಯಶಸ್ವಿಯಾಗಿದೆ. ರಾಜ್ಯದ ಬೇಡಿಕೆಗಳಿಗೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಜಿಎಸ್ಟಿ ಪರಿಹಾರದ ಬಾಕಿ ಹಣ ಬಿಡುಗಡೆಗೆ ಒಪ್ಪಿದ್ದಾರೆ. ಕೋವಿಡ್ ನಿರ್ವಹಣೆಗೆ ಆರ್ಥಿಕ ನೆರವಿನ ಭರವಸೆ ನೀಡಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.