ವಯೋಸಹಜ ಅನಾರೋಗ್ಯದಿಂದ ವಾಜಪೇಯಿ ಆಸ್ಪತ್ರೆಗೆ ದಾಖಲು

ನವದೆಹಲಿ: ಅನಾರೋಗ್ಯದ ಕಾರಣದಿಂದ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸೋಮವಾರ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

93ರ ಹರಯದ ವಾಜಪೇಯಿ ಅವರ ಆರೋಗ್ಯ ಕುರಿತು ದೆಹಲಿ ಏಮ್ಸ್ ನಿರ್ದೇಶಕ ಡಾ.ರಣ್ ದೀಪ್ ಗುಲೇರಿಯಾ ಮಾಹಿತಿ ನೀಡಿದ್ದು, ವಾಜಪೇಯಿಯವರ ಆರೋಗ್ಯದ ಬಗ್ಗೆ  ಆತಂಕ ಪಡುವ ಅಗತ್ಯವಿಲ್ಲ, ಇದೊಂದು ನಿಗದಿತ ಆರೋಗ್ಯ ತಪಾಸಣೆ ಎಂದು ಹೇಳಿದ್ದಾರೆ.

ಶಿಲ್ಪಾ ಶೆಟ್ಟಿಗೆ 43ನೇ ಹುಟ್ಟು ಹಬ್ಬದ ಸಂಭ್ರಮ!

ಮುಂಬೈ: ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಶನಿವಾರ ತಮ್ಮ 43ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಬಾರಿ ಹುಟ್ಟುಹಬ್ಬದ ವಿಶೇಷ ಏನಂದ್ರೆ, ಶಿಲ್ಪಾ ಪತಿ ರಾಜ್‌ ಕುಂದ್ರಾ ಅತ್ಯಂತ ಸುಂದರ ಕೇಕ್‌ವೊಂದರ ಮೂಲಕ ಶಿಲ್ಪಾರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ಶಿಲ್ಪಾ ಹುಟ್ಟುಹಬ್ಬಕ್ಕೆ ರಾಜ್ ಕುಂದ್ರಾ ನೀಡಿರುವ ಕೇಕ್ ವಿಶೇಷ ಏನಂದ್ರೆ, ಆಕರ್ಷಕ ಕೇಕ್‌ ಮೇಲೆ ಶಿಲ್ಪಾ ಅವರ ಪುಟ್ಟ ಪ್ರತಿಮೆಯನ್ನು ನಿಲ್ಲಿಸಲಾಗಿದೆ. ಜೊತೆಗೆ “ಟು ದ ಸೂಪರ್‌ ಸೆ ಊಪರ್‌, ಡಾಟರ್‌, ಸಿಸ್ಟರ್‌, ವೈಫ್ ಆ್ಯಂಡ್‌ ಮಮ್‌’ ಎಂದು ಬರೆಯಲಾಗಿದೆ.

ಶಿಲ್ಪಾ ರಿಯಾಲಿಟಿ ಶೋ ಒಂದರ ತೀರ್ಪುಗಾರರಾಗಿದ್ದು ಉತ್ತಮ ಪ್ರದರ್ಶನಗಳನ್ನು ನೋಡಿದ ತಕ್ಷಣ “ಸೂಪರ್‌ ಸೆ ಊಪರ್‌’ ಎಂದು ಪ್ರಶಂಸಿಸುತ್ತಾರೆ. ಅವರ ಈ ಮಾತು ಭಾರೀ ಜನಪ್ರಿಯತೆ ಪಡೆದಿದ್ದು, ಈ ಪದದ ಮೂಲಕವೇ ಪತ್ನಿಗೆ ವಿಶೇಷ ಗಿಫ್ಟ್ ನೀಡಿರುವುದು ಈ ಬಾರಿ ಹುಟ್ಟು ಹಬ್ಬದ ಸ್ಪೆಷಲ್.

ಕ್ವಾಂಟಿಕೊ ವಿವಾದಿತ ಸಂಚಿಕೆ ವಿಚಾರ: ಕ್ಷಮೆ ಯಾಚಿಸಿದ ಪ್ರಿಯಾಂಕ

ನವದೆಹಲಿ: ಪಾಕಿಸ್ತಾನದವರನ್ನು ಭಯೋತ್ಪಾದಕ ದಾಳಿಯಲ್ಲಿ ಸಿಲುಕಿಸಲು ಭಾರತೀಯರು ಪ್ರಯತ್ನಿಸುತ್ತಿದ್ದಾರೆ ಎನ್ನುವಂತೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ನಡೆಸಿಕೊಡುವ ‘ಕ್ವಾಂಟಿಕೋ’ ಕಾರ್ಯಕ್ರಮದಲ್ಲಿ ತೋರಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವಿವಾದಕ್ಕೆ ಗುರಿಯಾಗುತ್ತಿದ್ದಂತೆ ನಟಿ ಪ್ರಿಯಾಂಕಾ ಚೋಪ್ರಾ ಕ್ಷಮೆ ಕೇಳಿದ್ದಾರೆ.

ವಿವಾದದ ಬಗ್ಗೆ ಪ್ರಿಯಾಂಕಾ ಕೊನೆಗೂ ಮೌನ ಮುರಿದಿದ್ದು ಕ್ವಾಂಟಿಕೋ ಎಪಿಸೋಡಿನಲ್ಲಿ ಆ ರೀತಿ ತೋರಿಸಿರುವುದು ನನಗೆ ತುಂಬಾ ಬೇಸರವನ್ನುಂಟು ಮಾಡಿದೆ. ಇದರಿಂದ ಭಾರತೀಯರ ಮನಸ್ಸಿಗೆ ಘಾಸಿಯಾಗಿರುವುದಕ್ಕೆ ಕ್ಷಮೆ ಕೇಳುತ್ತೇನೆ. ಯಾರಿಗೂ ನೋವು ಮಾಡುವ ಉದ್ದೇಶ ನನಗಿರಲಿಲ್ಲ. ನಾನು ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತಿದ್ದೇನೆ. ನಾನು ಭಾರತೀಯಳು ಎಂದು ಹೇಳಲು ಹೆಮ್ಮೆ ಪಡುತ್ತೇನೆ. ಆ ಭಾವನೆ ಎಂದಿಗೂ ಬದಲಾಗುವುದಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ.

ಕ್ವಾಂಟಿಕೊ ಕಾರ್ಯಕ್ರಮದ ಈ ಸಂಚಿಕೆ ಪ್ರಸಾರವಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆ ಕೇಳಿಬಂದಿತ್ತು. ಭಾರತೀಯಳಾಗಿ ಪ್ರಿಯಾಂಕಾ ಈ ಸಂಚಿಕೆ ಪ್ರಸಾರಕ್ಕೆ ಒಪ್ಪಿದ್ದಾದರೂ ಹೇಗೆ? ಎಂದು ಹಲವರು ಪ್ರಶ್ನೆ ಕೇಳಿದ್ದರು. ಈ ವಿಚಾರ ವಿವಾದವಾಗುತ್ತಿದ್ದಂತೆ ಕ್ವಾಂಟಿಕೋ ನಿರ್ಮಾಣ ಸಂಸ್ಥೆ ಎಬಿಸಿ ಕೂಡ ಭಾರತೀಯರ ಕೇಳಿತ್ತು. ಈ ಸಂಚಿಕೆಯನ್ನು ಪ್ರಿಯಾಂಕ ನಿರ್ಮಿಸಿಲ್ಲ, ಅವರು ಕಥೆ  ಅಥವಾ ನಿರ್ದೇಶನ ಮಾಡಿಲ್ಲ ಎಂದು ಸ್ಪಷ್ಟನೆಯನ್ನೂ ನೀಡಿತ್ತು. ಇಂದು ಪ್ರಿಯಾಂಕ ಕೂಡ ಕ್ಷಮೆ ಯಾಚಿಸಿದ್ದಾರೆ.

ರಾಜಕೀಯ ರೀ ಎಂಟ್ರಿಗೆ ಉಪ್ಪಿ ಸಜ್ಜು

 

ಬೆಂಗಳೂರು: ಕೆಪಿಜೆಪಿ ಪಕ್ಷವನ್ನು ಕಟ್ಟಿ ಕಣ್ಮರೆಯಾಗಿದ್ದ ನಟ ಕಮ್ ರಾಜಕಾರಣಿ ಉಪೇಂದ್ರ ಮತ್ತೆ ಪ್ರತ್ಯಕ್ಷರಾಗಿದ್ದಾರೆ. ರಾಜಕಾರಣಿಗಳು ಮಾಡಬೇಕಿರುವ ಕೆಲಸವೇನು,ಮಾಧ್ಯಮಗಳ ಪಾತ್ರವೇನು ಎನ್ನುವುದನ್ನು ತಮ್ಮ ಫೇಸ್ ಬುಕ್ ವಾಲ್ ಮೂಲಕ ಹೇಳಿದ್ದಾರೆ.

ಯಸ್,ಪ್ರಜಾಕೀಯ ಕಲ್ಪನೆಯನ್ನು ಹುಟ್ಟುಹಾಕಿ ರಾಜಕೀಯದ ಮೊದಲ ಹೆಜ್ಜೆಯಲ್ಲೇ ಹಿನ್ನಡೆ ಅನುಭವಿಸಿದ್ದ ರಿಯಲ್‌ ಸ್ಟಾರ್ ಉಪೇಂದ್ರ ಮತ್ತೆ ರೀ ಎಂಟ್ರಿಗೆ ಸಜ್ಜಾಗಿದ್ದಾರೆ.ಹೊಸ ಪಕ್ಷವನ್ನು ನೋಂದಣಿ ಮಾಡಿಸಿದ್ದು ಮತ್ತೆ ಪ್ರಜಾಕೀಯದ ಗೆಟಪ್ ನಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.

ಅದಕ್ಕೆ ಪೂರ್ವಭಾವಿ ಎನ್ನುವಂತೆ ಸಾಮಾಜಿಕ ಜಾಲತಾಣದ ಮುಂದೆ ಪ್ರತ್ಯಕ್ಷರಾಗಿ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.ಆ ಮೂಲಕ ಜನರನ್ನು ತಲುಪುವ ಯತ್ನ ನಡೆಸುತ್ತಿದ್ದಾರೆ.

ಉಪ್ಪಿ ಬರೆದುಕೊಂಡಿರುವುದೇನು?

ಹೊಟ್ಟೆ ತುಂಬಿದವಗೆ, ಕೈ ತುಂಬಾ ಸಂಬಳ ಬರುವವಗೆ, ಮನೆ ತುಂಬಾ ಸೌಕರ್ಯವಿರುವವಗೆ, ಬ್ಯಾಂಕ್ ಬ್ಯಾಲೆನ್ಸ್ ಇದ್ದವಗೆ, ತನ್ನ ಸ್ವಂತ ವಾಹನದಲ್ಲಿ ಚಲಿಸುವವಗೆ ಈ ದೇಶದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಕಂಡು ಬರುವುದು ಸಹಜ. ಅದು ಕೇವಲ ಶೇ.20 ರಿಂದ 30 ಮಾತ್ರ.

ಆದರೆ ಉಳಿದ ಶೇ.70 ಎರಡು ಹೊತ್ತು ಸರಿಯಾಗಿ ಊಟವಿಲ್ಲದೆ, ತೊಡಲು ಸರಿಯಾದ ಬಟ್ಟೆಯಿಲ್ಲದೆ, ತಲೆಯ ಮೇಲೆ ಚಪ್ಪರವಿಲ್ಲದ, ಮಕ್ಕಳನ್ನು ಸರಿಯಾದ ಶಾಲೆಗೆ ಕಳಿಸಲಾಗದ, ಸಾಲದಿಂದ ಮರುಗಿ ಹೋದ ರೈತ, ಕುಡಿಯಲು ನೀರಿಲ್ಲದೆ ಭವಣೆ ಪಡುತ್ತಿರುವ ಜನ, ಕೆಲಸವಿಲ್ಲದೆ ಪರದಾಡುವ ಯುವಕ- ಯುವತಿಯರು, ಇವರ ಕಷ್ಟ-ಕಾರ್ಪಣ್ಯವನ್ನು ಹೋಗಲಾಡಿಸುವುದು ಸರ್ಕಾರದ ಪ್ರಾಮುಖ್ಯತೆಯಾಗಿರ ಬೇಕೆ ವಿನಹ ದೇಶ ಭಕ್ತಿ ಭೊಧಿಸುವುದಲ್ಲ.

ಹಸಿದ ಹೊಟ್ಟೆಗೆ ಇದು ಎಲ್ಲಷ್ಟೂ ಅರ್ಥವಿಲ್ಲ. ಆದ್ದರಿಂದ ಎಲ್ಲಾ ರಾಜಕಾರಣಿಗಳಲ್ಲಿ ನನ್ನ ವಿನಂತಿಯೆಂದರೆ ಜಾತಿ, ಧರ್ಮ, ರಾಜಕೀಯ ಹಾಗೂ ಸ್ವಂತ ಪ್ರತಿಷ್ಟೆಯಿಂದ ಹೊರ ಬಂದು ಈ ಶೇ.70 ಬಡ ಜನರ ಸೇವೆಗಾಗಿ ನಮ್ಮ ದೇಶದ ಹಾಗೂ ರಾಜ್ಯದ ತೆರಿಗೆ ಹಣವನ್ನು ಯಾವುದೆ ಲಂಚ ವ್ಯವಹಾರಕ್ಕೆ ಆಸ್ಪದ ಕೊಡದೆ ಜನರ ಸೇವೆಗೆ ಉಪಯೊಗಿಸುವ ವಿಧಾನದ ಬಗ್ಗೆ ಚರ್ಚೆ ಮಾಡಿ.

ಮಾಧ್ಯಮದವರು ಕೂಡ ಈ ವಿಷಯ ಚರ್ಚೆ ಮಾಡ ಬೇಕೆ ವಿನಹ, TRP ಗಾಗಿ ರಾಜಕಾರಣಿಗಳ ಡೊಂಬರಾಟವಲ್ಲ.

ದೇವಸ್ಥಾನದ ಧರ್ಮದರ್ಶಿ ಅಡ್ಡಗಟ್ಟಿ ದರೋಡೆ!

ತುಮಕೂರು: ಕುಣಿಗಲ್‌ನ ಬಿದನಗೆರೆಯಲ್ಲಿ ಶನಿಮಹಾತ್ಮ ದೇವಾಲಯದ ಧರ್ಮದರ್ಶಿಯನ್ನು ಅಡ್ಡಗಟ್ಟಿದ ದರೋಡೆಕೋರರು  20 ಲಕ್ಷ ರೂಪಾಯಿ ಮತ್ತು ಕಾರನ್ನು ದರೋಡೆ ಮಾಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

ಕಾರಿನಲ್ಲಿ ತೆರಳುತ್ತಿದ್ದ ಧನಂಜಯ ಸ್ವಾಮೀಜಿಯನ್ನು ಅಡ್ಡಗಟ್ಟಿದ 6 ಮಂದಿ ದರೋಡೆಕೋರರು ಕಣ್ಣಿಗೆ ರಾಸಾಯನಿಕ ಸಿಂಪಡಿಸಿ 20 ಲಕ್ಷ ರೂಪಾಯಿ ಹಣ ಮತ್ತು ಕಾರನ್ನು ಎಗರಿಸಿ ಪರಾರಿಯಾಗಿದ್ದಾರೆ.

ಧನಂಜಯ ಸ್ವಾಮೀಜಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕುಣಿಗಲ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ನಟ ಸಾರ್ವಭೌಮ ಚಿತ್ರದಲ್ಲಿ ಅಪ್ಪುಗೆ ಇಬ್ಬರು ನಾಯಕಿಯರು

ಬೆಂಗಳೂರು:ನಟ ಸಾರ್ವಭೌಮ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ಡಿಂಪಲ್ ಕ್ವೀನ್ ರಚಿತಾ ರಾಮ್ ಜೊತೆ ಇನ್ನೊಬ್ಬ ನಾಯಕ ನಟಿ ಇದ್ದಾರೆ ಎನ್ನುವ ಮಾಹಿತಿಯನ್ನು ಚಿತ್ರತಂಡ ಬಹಿರಂಗಪಡಿಸಿದೆ.

ಯಸ್,ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟ ಸಾರ್ವಭೌಮ‌ ಚಿತ್ರದ ಚಿತ್ರೀಕರಣ ಈಗಾಗಲೇ ಅರ್ಧದಷ್ಟು ಮುಗಿದಿದೆ.ನಾಯಕಿ ರಚಿತಾ ರಾಮ್ ಅಭಿನಯದ ಬಹುತೇಕ ಭಾಗದ ಚಿತ್ರೀಕರಣ ಮುಕ್ತಾಯಗೊಂಡಿದ್ದು ಚಿತ್ರತಂಡ ಇದೀಗ ಹೊಸ ಟ್ವಿಸ್ಟ್ ಪ್ರಕಟಿಸಿದೆ.‌ಚಿತ್ರದಲ್ಲಿ ಇಬ್ಬರು ನಾಯಕಿಯರು ಎನ್ನುವ ಮಾಹಿತಿ ಹರಿಬಿಟ್ಟಿದೆ.

ಡಿಂಪಲ್ ಕ್ವೀನ್ ರಚಿತಾ ರಾಮ್ ಜೊತೆ ಮತ್ಯಾರು ನಾಯಕಿ ಎನ್ನುವುದನ್ನು ಚಿತ್ರತಂಡ ಸಸ್ಪೆನ್ಸ್ ಆಗಿ ಇರಿಸಿದೆ.ಈಗಾಗಲೇ ಎರಡನೇ ನಾಯಕಿಯ ಆಯ್ಕೆ ಪೂರ್ಣಗೊಂಡಿದ್ದು ಅವರ ಭಾಗದ ಚಿತ್ರೀಕರಣ ಆರಂಭವಾಗುವವರೆಗೂ ಆ ನಟಿಯ ಹೆಸರನ್ನೂ ಬಹಿರಂಗಪಡಿಸುವುದಿಲ್ಲ ಎಂದು‌ ಚಿತ್ರತಂಡ ಹೇಳಿದೆ. ಹೀಗಾಗಿ ಡಿಂಪಲ್‌ಕ್ವೀನ್ ಗೆ ಈ ಚಿತ್ರದಲ್ಲಿ ಬರುವ ಕಾಂಪಿಟೇಟರ್ ಯಾರು ಎನ್ನುವ ಪ್ರಶ್ನೆ ಇದೀಗ ಗಾಂಧಿನಗರದಲ್ಲಿ‌ ಸುಳಿದಾಡುತ್ತಿದೆ.