ರಾಜ್ಯ ಸರ್ಕಾರಿ ನೌಕರರಿಗೆ ಪರಿಷ್ಕೃತ ವೇತನ!

 

ಬೆಂಗಳೂರು: 6 ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸು ಜಾರಿ ಆದೇಶದಂತೆ ಸರ್ಕಾರಿ ನೌಕರರ ವೇತನ, ಭತ್ಯೆ ಪಿಂಚಣಿ ಪರಿಷ್ಕರಿಸಿ ಏ.1ರಿಂದ ಪೂರ್ವನ್ವಯವಾಗುವಂತೆ ಪಾವತಿ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಪರ ಮುಖ್ಯ ಕಾರ್ಯ ಆದೇಶ ಹೊರಡಿಸಿದ್ದಾರೆ.

2018ರ ಪರಿಷ್ಕೃತ ವೇತನ ಶ್ರೇಣಿ ಹಾಗೂ ಪಿಂಚಣಿ ಲಾಭವನ್ನು ಏ.1ರಿಂದ ಪಾವತಿಸುವಂತೆ ಹಾಗು 2018 ಏಪ್ರಿಲ್ ನಂತರದಲ್ಲಿ ಪರಿಷ್ಕೃತ ವೇತನ ಶ್ರೇಣಿಯನ್ನು ನಿಗದಿಪಡಿಸಿದ ಪ್ರಕರಣಗಳಲ್ಲಿ ಅವರಿಗೆ ಲಭ್ಯವಿರುವ ಬಾಕಿಯನ್ನು ಪಾವತಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್ ಸೂಚನೆ ನೀಡಿದ್ದಾರೆ.

ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಎಲ್ಲ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳಿಗೆ ಐ.ಎನ್.ಎಸ್.ಪ್ರಸಾದ್ ನಿರ್ದೇಶನ ನೀಡಿದ್ದು,ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಯದರ್ಶಿಗಳ ಅಧೀನದಲ್ಲಿ ಬರುವ ಎಲ್ಲ ಮುಖ್ಯಸ್ಥರಿಗೆ ಈ ನಿಟ್ಟಿನಲ್ಲಿ ಸೂಕ್ತ ನಿರ್ದೇಶನ ನೀಡುವಂತೆ ಸೂಚನೆ ನೀಡಿದ್ದಾರೆ.

ಜನವರಿ 31ರಂದು 6ನೇ ವೇತನ ಆಯೋಗ ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆ ಪರಿಷ್ಕರಣೆ ಕುರಿತಂತೆ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಇದನ್ನು ಅನುಷ್ಠಾನಗೊಳಿಸಿ ಮಾರ್ಚ್ 1 ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.

 

 

ಕೈ ಬಿಡಲ್ಲ,ಕಮಲ ಮುಡಿಯಲ್ಲ: ಎಂ.ಬಿ ಪಾಟೀಲ್

ಬೆಂಗಳೂರು: ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷವನ್ನು ತೊರೆಯುವ ಪ್ರಶ್ನೆಯೇ ಇಲ್ಲ ಬಿಜೆಪಿಯವರು ನನ್ನನ್ನು ಸಂಪರ್ಕಿಸಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾದ ವಿಚಾರ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಸ್ಪಷ್ಟಪಡಿಸಿದರು.

ದೆಹಲಿಯಿಂದ ಹಿಂದಿರುಗಿದ ಬಳಿಕ ಸದಾಶಿವನಗರದಲ್ಲಿ ಮಾತನಾಡಿದ ಅವರು, ಸೋನಿಯಾಗಾಂಧಿಯವರ ಆಪ್ತ ಕಾರ್ಯದರ್ಶಿ ಅಹ್ಮದ್ ಪಟೇಲ್ ಆಹ್ವಾನದ ಮೇರೆಗೆ ದೆಹಲಿಗೆ ಹೋಗಿ ರಾಹುಲ್ ಗಾಂಧಿ ಜೊತೆ ಚರ್ಚೆ ನಡೆಸಿದೆ. ನನಗೆ ವೈಯಕ್ತಿಕವಾಗಿ ಅನ್ಯಾಯ ಆಗಿರುವುದರ ಕುರಿತು ಮಾತ್ರ ಚರ್ಚೆ ನಡೆಸಿದೆ ಎಂದರು.

ಪಕ್ಷಕ್ಕೆ ನಾನು ಮಾಡಿರುವ ಸೇವೆ, ನೀರಾವರಿ ಕೆಲಸಗಳ ಬಗ್ಗೆ ಚರ್ಚೆ ನಡೆಸಿದ್ದೇನೆಯೇ ಹೊರತು ನಾನು ರಾಹುಲ್ ಗಾಂಧಿ ಬಳಿ ಯಾವ ಹುದ್ದೆಯನ್ನೂ ಕೇಳಲಿಲ್ಲ, ಮಂತ್ರಿ ಸ್ಥಾನ, ಡಿಸಿಎಂ ಸ್ಥಾನ, ಕೆಪಿಸಿಸಿ ಅಧ್ಯಕ್ಷ ಸ್ಥಾನಗಳನ್ನು ನಾನು ಕೇಳಲಿಲ್ಲ ನಾನು ನನ್ನ ಭಾವನೆಗಳನ್ನು ರಾಹುಲ್ ಗಾಂಧಿ ಜೊತೆ ಹಂಚಿಕೊಂಡಿದ್ದೇನೆ ರಾಜ್ಯದ ವಿದ್ಯಮಾನಗಳನ್ನು ರಾಹುಲ್ ಗಾಂಧಿ ಗಮನಕ್ಕೆ ತಂದಿದ್ದೇನೆ ಆದರೆ ಮಾಧ್ಯಮಗಲ್ಲಿ ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನ, ಡಿಸಿಎಂ ಸ್ಥಾನ ಕೇಳಿದ್ದೇನೆ ಎಂದು ತಪ್ಪು ವರದಿಗಳು ಬಂದಿವೆ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಪಕ್ಷ ಬಿಟ್ಟು ಹೋಗಲ್ಲ, ಕಾಂಗ್ರೆಸ್ ನಲ್ಲೇ ಇರ್ತೇನೆ,ಯಾವುದೇ ಹುದ್ದೆ ನನಗೆ ಬೇಕಿಲ್ಲ,
ಶಾಸಕ ಸ್ಥಾನವೇ ನನಗೆ ಸಾಕು ಶಾಸಕ ಸ್ಥಾನದಲ್ಲೇ ನನಗೆ ತೃಪ್ತಿ ಇದೆ ಎಂದು ಪರೋಕ್ಷವಾಗಿ ಹೈಕಮಾಂಡ್ ವಿರುದ್ಧ ಅಸಮಧಾನ ಹೊರಹಾಕಿದರು.

ಕಬಾಲಿ ಹಿಂದಿಕ್ಕದ ಕಾಲಾ

 

ಬೆಂಗಳೂರು: ತಮಿಳಿನ ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಕಾಲ ಚಿತ್ರಕ್ಕೆ ಉತ್ತಮ ಓಪನಿಂಗ್ ಸಿಕ್ಕರೂ ಮೊದಲ ದಿನದ ಗಳಿಕೆಯಲ್ಲಿ ಕಬಾಲಿಯನ್ನು ಹಿಂದಿಕ್ಕುವಲ್ಲಿ ವಿಫಲವಾಗಿದೆ.

ಯಸ್,ರಜನಿಕಾಂತ್‌ ಅಭಿನಯದ ‘ಕಾಲಾ’ ಕನ್ನಡಿಗರ ತೀವ್ರ ವಿರೋಧದ ನಡುವೆಯೂ ಕರ್ನಾಟಕ ಸೇರಿದಂತೆ ವಿಶ್ವದಾದ್ಯಂತ ತೆರೆ ಕಂಡಿದೆ. ಬಿಡುಗಡೆಯ ಮುನ್ನ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿದ್ದ ಈ ಚಿತ್ರ, ಬಾಕ್ಸ್‌ ಅಫೀಸ್‌ನಲ್ಲಿಯೂ ಒಳ್ಳೆಯ ಓಪನಿಂಗ್‌ ಪಡೆದುಕೊಂಡೂ, ಕಬಾಲಿ ಚಿತ್ರದ ಗಳಿಕೆಯನ್ನು ದಾಟುವ ಗುರಿ ತಲುಪುವಲ್ಲಿ ಮೊದಲ ದಿನ ಎಡವಿದೆ.

ತಮಿಳುನಾಡಿನಲ್ಲಿ ಉತ್ತನ ಗಳಿಕೆ ಮಾಡಿತಾದರೂ
ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಕೇವಲ 7 ಕೋಟಿ ರೂ.ಗಳನ್ನು ಮಾತ್ರ ಗಳಿಸಿದೆ. ಕಬಾಲಿ ಚಿತ್ರ ಮೊದಲ‌ದಿನ ಈ ಎರಡು ರಾಜ್ಯದಲ್ಲಿ ಒಟ್ಟು 12.40 ಕೋಟಿ ರೂ. ಗಳಿಸಿಕೊಂಡಿತ್ತು.ಈ ಗಳಿಕೆಯನ್ನೂ ಮೀರಲಿದೆ ಎನ್ನುವ ನಿರೀಕ್ಷೆಯನ್ನು ಕಾಲಾ ಹುಟ್ಟು ಹಾಕಿತ್ತು,ಆದರೆ ಮೊದಲ ದಿನದ ಗಳಿಕೆಯಲ್ಲಿ ಗುರಿ ಮುಟ್ಟುವಲ್ಲಿ ವಿಫಲವಾಗಿದೆ.

ಇನ್ನು ಇಡೀ ದೇಶದಲ್ಲಿ ಕಾಲಾ ಚಿತ್ರದ ಮೊದಲ ಕಲೆಕ್ಷನ್‌ 25.6 ಕೋಟಿ ರೂ. ಆಗಿದೆ. ಆಸ್ಟ್ರೇಲಿಯಾ ಹಾಗೂ ಯುಎಸ್‌ನಲ್ಲಿ ಕಾಲಾ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್‌ ಸಿಕ್ಕಿದೆ. ಬಿಡುಗಡೆಯಾದ ಎರಡು ದಿನಗಳಲ್ಲಿ ಈ ಚಿತ್ರ ಯುಎಸ್‌ನಲ್ಲಿ 6.83 ಕೋಟಿ ಹಾಗೂ ಆಸ್ಟ್ರೇಲಿಯಾದಲ್ಲಿ 1.6 ಕೋಟಿ ರೂ. ಗಳಿಸಿದೆ.

ರಜನಿ ಅಭಿಮಾನಿಗಳಿಂದ‌ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಕರ್ನಾಟಕದಲ್ಲೂ ಸಿನಿಮಾ ಪ್ರದರ್ಶನ ಆರಂಭಗೊಂಡಿದೆ,ಈಗಾಗಿ ಚಿತ್ರದ ಒಟ್ಟಾರೆ ಗಳಿಕೆಯಲ್ಲಿ ಕಬಾಲಿಯನ್ನು ಹಿಂದಿಕ್ಕುವ ನಿರೀಕ್ಷೆ ಕಾಲಾ ಚಿತ್ರ ತಂಡದ್ದಾಗಿದೆ.

ಜೆಡಿಎಸ್ ಸಚಿವರ ವಿರುದ್ಧ ಎಚ್ಡಿಕೆ ಗರಂ!

ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಸಚಿವ ಸ್ಥಾನ ವಂಚಿತ ಶಾಸಕರ ಬಂಡಾಯ ಎದುರಾಗಿದ್ದರೆ, ಜೆಡಿಎಸ್‌ ಪಕ್ಷದ ಸಚಿವರಲ್ಲಿ ನಿರೀಕ್ಷಿತ ಖಾತೆ ದೊರೆಯದ ಅಸಮಾಧಾನ ಹೆಚ್ಚಾಗಿದೆ. ಸಚಿವರ ಬೆಂಬಲಿಗರು ಬೇರೆ ಖಾತೆಗಳಿಗಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್‌.ಡಿ. ಕುಮಾರಸ್ವಾಮಿ, ಮೊದಲು ಮಂತ್ರಿಯಾಗಬೇಕು ಅಂತಾರೆ , ಬಳಿಕ ವಿಧಾನಸೌಧದ 3 ನೇ ಮಹಡಿಯಲ್ಲಿ  ಕೊಠಡಿಯೇ ಬೇಕು ಅಂತಾರೆ, ಇಂತದ್ದೇ ಮನೆ ಬೇಕು, ಇಂತದ್ದೇ ಖಾತೆ ಬೇಕು ಎನ್ನುತ್ತಾರೆ ಉತ್ತಮವಾಗಿ ಕೆಲಸ ಮಾಡುವವರಿಗೆ ಯಾವ ಖಾತೆಯಾದರೇನು ಎಂದು ಕಿಡಿ ಕಾರಿದರು.

ಸಮರ್ಥವಾಗಿ ಕೆಲಸ ಮಾಡಲು ಎಲ್ಲಾ ಇಲಾಖೆಗಳಲ್ಲೂ ಅವಕಾಶಗಳಿವೆ. ಕೆಲಸ ಮಾಡುವವರಿಗೆ ಯಾವ ಖಾತೆಯಾದರೇನು? ಸಣ್ಣ ನೀರಾವರಿಗಿಂತ, ಉನ್ನತ ಶಿಕ್ಷಣಕ್ಕಿಂತ ಬೇರೆ ಖಾತೆ ಬೇಕೆ? ಯಾವ ಖಾತೆ ಬೇಕು ನೀವೆ ಹೇಳಿ, ಹಣಕಾಸು ಖಾತೆ ನೀಡಲೇ ಎಂದು ಪ್ರತಿಭಟನೆಗಿಳಿದಿರುವ ಜಿ.ಟಿ.ದೇವೇಗೌಡ ಮತ್ತು ಸಿ.ಎಸ್‌.ಪುಟ್ಟರಾಜು ಬೆಂಬಲಿಗರನ್ನು ಖಾರವಾಗಿ ಪ್ರಶ್ನಿಸಿದರು.

ಟ್ರೆಂಡಿ ನೈಲ್ ಆರ್ಟ್ ಇನ್ ಗರ್ಲ್ಸ್ ಫಿಂಗರ್

 

ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಮುಂಗಾರು ಮಳೆ ಆರಂಭಗೊಂಡಿದೆ.ಎಲ್ರೂ ಕೊಡೆ ಮೊರೆ ಹೋದ್ರೆ ಹೆಣ್ಮಕ್ಳು ಮಾತ್ರ ನೈಲ್ ಆರ್ಟ್ ಮೊರೆ ಹೋಗಿದ್ದಾರೆ.ಅರೆ ಇದೇನು ಅಂತೀರಾ, ಇದು ಈ ಸೀಸನ್ ನ ಹೊಸ ಟ್ರೆಂಡ್!

ಯಸ್,ಈಗ ಮನ್ಸೂನ್ ಇರೋದ್ರಿಂದ ಮನ್ಸೂನ್ ನೈಲ್ ಆರ್ಟ್ ಟ್ರೆಂಡ್ ಸಿಲಿಕಾನ್ ಸಿಟಿ ಬೆಡಗಿಯರನ್ನ ಸೆಳೆಯುತ್ತಿದೆ.
ಹೊಸದನ್ನೇ ಇಷ್ಟ ಪಡೋ ಫ್ಯಾಷನ್ ಪ್ರಿಯ ಸ್ತ್ರೀಯರು ಈಗ ಸೀಸನ್ ಫ್ಯಾಷನ್ ಗೂ ಫುಲ್ ಫಿದಾ ಆಗಿದ್ದಾರೆ.ಮನ್ಸೂನ್ ಇರೋದ್ರಿಂದ ಮಾನ್ಸೂನ್ ಟ್ರೇಂಡಿ ನೈಲ್ ಆರ್ಟ್ ಮೊರೆ ಹೋಗಿದ್ದಾರೆ.

ಒಂದೇ ಫ್ಯಾಷನ್ ಗೆ ಜೋತು ಬೀಳದ ನಾರಿ ಮಣಿಯರು ಈಗ ಮನ್ಸೂನ್ ನೈಲ್ ಆರ್ಟ್ ಗೆ ಮನ ಸೋಲುತ್ತಿದ್ದಾರೆ. ಮಳೆಗಾಲಕ್ಕೆ ಸಂಬಂಧಪಟ್ಟ ನಾನಾ ನೈಲ್ ಆರ್ಟ್ ಡಿಸೈನ್ಗಳು ಹೆಂಗಳೆಯರ ಚೆಂದದ ಬೆರಳ ಉಗುರಿನಲ್ಲಿ ರಾರಾಜಿಸುತ್ತಿವೆ.

ಮೊದಲಿಗೆ ಬ್ಲೂ ಮ್ಯಾಚ್ ಆಗುವಂತಹ 2 ಕೋಟ್ ಹಚ್ಚಿಕೊಂಡು ಅದಕ್ಕೆ ಮೋಡ ಕವಿದ ವಾತಾವರಣದ ಚಿತ್ತಾರ ಎದ್ದು ಕಾಣುತ್ತಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗ್ತಿದೆ.ಜೊತೆಗೆ ತುಂತುರು ಹನಿ ಬೀಳುವ ಚಿತ್ರಗಳು, ಇನ್ನಷ್ಟು ಉಗುರಿಗೆ ಅಂದವನ್ನು ಹೆಚ್ಚಿಸುತ್ತೆ, ಹೆಣ್ಮಕ್ಕಳಲ್ಲಿ ಅದ್ರಲ್ಲೂ ಕಾಲೇಜು ಹುಡುಗಿಯರು ಈ ನೈಲ್ ಆರ್ಟ್ ಅನ್ನು ಹೆಚ್ಚು ಇಷ್ಟ ಪಡ್ತಾರೆ.

ಚೆಂದದ ಉಗುರಿಗೆ ಅಂದದ ರಂಗಾದ ಬಣ್ಣ ಬಳಿಯುವುದು ಹುಡುಗಿಯರಿಗೆ ಅಚ್ಚುಮೆಚ್ಚು. ಮಾಮೂಲಿ ನೈಲ್ ಆರ್ಟ್ನಿಂದ ಬೋರ್ ಆಗಿರೋ ನಾರಿಮಣಿಯರು ಈಗ ಮನ್ಸೂನ್ ನೈಲ್ ಆರ್ಟ್ ನತ್ತ ಮುಖ ಮಾಡ್ತಿದ್ದಾರೆ.ಎಂಜಿ ರಸ್ತೆ, ಬ್ರಿಗೇಡ್ ರೋಡ್,ಕಮರ್ಷಿಯಲ್ ಸ್ಟ್ರೀಟ್ ಕಡೆ ಹೋದ್ರೆ ಅಲ್ಲಿನ ಹೆಂಗಳೆಯರ ಬೆರಳಿನ ಉಗುರುಗಳಲ್ಲಿ ಟ್ರೇಂಡಿ ನೈಲ್ ಆರ್ಟ್ ಕಣ್ಮನ ಸೆಳೆಯೋದಂತೂ ಸುಳ್ಳಲ್ಲ.

ಮಕ್ಕಳ ಪುಸ್ತಕ ಗುಚ್ಛ ಅನಾವರಣ

 

ಬೆಂಗಳೂರು: ಬರೆದಂತೆ ಓದಲು, ಓದಿದಂತೆ ಬರೆಯಲು ಬರುವ ಏಕೈಕ ಭಾಷೆ ಕನ್ನಡ ಎಂದು ಲೇಖಕ, ನಾಟಕಕಾರ ವಿವೇಕ ಶಾನಭಾಗ ಅಭಿಪ್ರಾಯ ಪಟ್ಟರು.‌

ಪ್ರಥಮ್ ಬುಕ್ಸ್’ ಸಂಸ್ಥೆಯ ಮಕ್ಕಳ ಜನಪ್ರಿಯ ಸಾಹಿತ್ಯ – ಚಿತ್ರಪುಸ್ತಕ ಗುಚ್ಛ ಅನಾವರಣಗೊಳಿಸಿ ಮಾತನಾಡಿದ ಅವರು,
ಮಕ್ಕಳ ಜನಪ್ರಿಯ ಸಾಹಿತ್ಯ ಚಿತ್ರಪುಸ್ತಕ ಗುಚ್ಛದ ಭಾಗವಾಗಿರುವ ಪಂಜೆ ಮಂಗೇಶರಾಯರ ‘ತೆಂಕಣ ಗಾಳಿಯಾಟ’ ಕವನದ ಬಗ್ಗೆ ಉಲ್ಲೇಖಿಸಿ, ಈ ಪದ್ಯದ ಶಬ್ದಗಳ ಲಾಲಿತ್ಯ ಮಕ್ಕಳ ಅನುಭವ ಪ್ರಪಂಚವನ್ನು ವಿಸ್ತರಿಸುತ್ತದೆ.
ಮಕ್ಕಳಿಗೆ ಸರಳವಾಗಿ ಹೇಳಬೇಕಿಲ್ಲ.ಕಷ್ಟಕರ ವಿಷಯವನ್ನೂ ಅವರು ಅರ್ಥ ಮಾಡಿಕೊಳ್ಳುತ್ತಾರೆ.ಉತ್ತರ ಕರ್ನಾಟಕದ‌ ಮಕ್ಕಳಿಗೆ ಸಮುದ್ರದ ವಿವರಣೆ ತುಂಬಾ ಕುತೂಹಲ ಉಂಟುಮಾಡುತ್ತದೆ. ಬಾಲ್ಯದಲ್ಲಿ ಸಹಜ ಕುತೂಹಲವನ್ನು ತಣಿಸುತ್ತದೆ ಎಂದರು.

ಕಡಲಿನ ಉಬ್ಬರ, ಶಬ್ದಗಳು, ತೆರೆಯ ನರ್ತನ ಮಕ್ಕಳ ಕಲ್ಪನಾ ಲೋಕವನ್ನು ದೊಡ್ಡದಾಗಿಸುತ್ತದೆ.ಜನಪ್ರಿಯ ಸಾಹಿತ್ಯ ಗುಚ್ಛದ ಎಲ್ಲ ಕವಿತೆಗಳು ಐಡಿಯಾ ಅಥವಾ ಥಾಟ್ ಅಲ್ಲ ಅದೊಂದು ಅನುಭವ.ಇಡಿಯಾದ ಅನುಭವವನ್ನು ಮಕ್ಕಳಿಗೆ ತಿಳಿಸುವ ಪ್ರಯತ್ನ ಕನ್ನಡದ ಕೆಲ‌ಮುಖ್ಯ ಲೇಖಕರ ಪರಿಚಯ ವಾಗಲಿ ಎಂಬ ಉದ್ದೇಶ ಐದೇ ಆರಿಸಿಕೊಳ್ಳಲು ಸಾಧ್ಯವಾಯಿತು.
ಇದೇ ಬಗೆಯ ಪುಸ್ತಕಗಳು ಮತ್ತಷ್ಟು ಬರಲಿ. ನಾವು ಚಿಕ್ಕವರಿದ್ದಾಗ ಓದಿದ ಕವಿತೆಗಳಲ್ಲಿರುವ ಚಿತ್ರಗಳು‌ ಇನ್ನೂ ನೆನಪಿವೆ ಸುಂದರವಾದ ಪುಸ್ತಕಗಳು ಇವು ಕನ್ನಡದ ಅಕ್ಷರ ‌ಬಲ್ಲ ಎಲ್ಲರಿಗೂ ಮತ್ತು ಕನ್ನಡೇತರರನ್ನೂ ಆಕರ್ಷಿಸತ್ತವೆ ಎಂದರು.