ದೇವಸ್ಥಾನದ ನಿರ್ವಹಣೆಯನ್ನು ಧರ್ಮಸ್ಥಳ ನೋಡಿ ಕಲಿಯಿರಿ: ಪುರಿ ಆಡಳಿತ ಮಂಡಳಿಗೆ ಸುಪ್ರೀಂ ಚಾಟಿ

 

ನವದೆಹಲಿ: ದೇವಸ್ಥಾನ ನಿರ್ವಹಣೆಯನ್ನು ಯಾವ ರೀತಿ ಮಾಡಬೇಕು ಎಂದು ಧರ್ಮಸ್ಥಳದ ಆಡಳಿತ ನೋಡಿ ಕಲಿಯಿರಿ ಎಂದು ಒಡಿಶಾದ ಪುರಿ ಜಗನ್ನಾಥ ದೇವಸ್ಥಾನದ ಆಡಳಿತ ಮಂಡಳಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

ದೇವಸ್ಥಾನದಲ್ಲಿ ದೇವಾಳದ ಸಿಬ್ಬಂದಿಯಿಂದ ಭಕ್ತರ ಮೇಲೆ ಆಗುತ್ತಿರುವ ಶೋಷಣೆಯ ವಿರುದ್ಧವಾಗಿ ಮೃಣಾಲಿನಿ ಪಧಿ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ ಆದರ್ಶ ಗೋಯಲ್ ಮತ್ತು ನ್ಯಾ ಅಶೋಕ್ ಭೂಷಣ್ ಅವರಿದ್ದ ಪೀಠ ದೇವಸ್ಥಾನದ ಆಡಳಿತ ಮಂಡಳಿಗೆ ಹಲವು ನಿರ್ದೇಶನಗಳನ್ನು ನೀಡಿದೆ.

ಕರ್ನಾಟಕದ ಧರ್ಮಸ್ಥಳ ದೇವಸ್ಥಾನ, ಜಮ್ಮು ಮತ್ತು ಕಾಶ್ಮೀರದ ವೈಷ್ಣವ ದೇವಿ, ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದ ನಿರ್ವಹಣೆ ವ್ಯವಸ್ಥೆಯನ್ನು ಅಧ್ಯಯನ ನಡೆಸುವಂತೆ ಒಡಿಶಾ ಸರ್ಕಾರಕ್ಕೆ ಪೀಠ ನಿರ್ದೇಶನ ನೀಡಿದೆ.

ಲಕ್ಷಾಂತರ ಭಕ್ತರು ಪ್ರತಿ ವರ್ಷ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪ್ರಾರ್ಥನೆ ಸಲ್ಲಿಸಿ ದಾನವನ್ನು ಅರ್ಪಣೆ ಮಾಡುತ್ತಾರೆ. ಹಾಗಾಗಿ ಭಕ್ತರ ಸೇವಾದರ್ಶನಕ್ಕೆ ಮುಕ್ತ ಅವಕಾಶ ಮಾಡಿಕೊಡುವುದು ಹಾಗೂ ದೇವಸ್ಥಾನದ ವಾತಾವರಣವನ್ನು ಸರಿಯಾಗಿ ಇಟ್ಟುಕೊಳ್ಳುವುದು ಆಡಳಿತ ಮಂಡಳಿಯ ಕರ್ತವ್ಯವಾಗಿದೆ ಎಂದು ಪೀಠ ತಿಳಿಸಿದೆ.

ದೇವಸ್ಥಾನದಲ್ಲಿ ಭಕ್ತರು ಎದುರಿಸುತ್ತಿರುವ ಸಮಸ್ಯೆಗಳು, ಶೋಷಣೆಗಳು ಹಾಗೂ ಆಡಳಿತ ಮಂಡಳಿಯಲ್ಲಿರುವ ನ್ಯೂನತೆಗಳನ್ನು ಜೂನ್ 30 ರೊಳಗೆ ಮಧ್ಯಂತರ ವರದಿ ಮಾಡುವಂತೆ ಪೂರಿ ಜಿಲ್ಲಾ ನ್ಯಾಯಾಧೀಶರಿಗೆ ಪೀಠ ಆದೇಶಿಸಿದೆ.

ಐದಂತಸ್ತಿನ ಕಟ್ಟಡದಲ್ಲಿ ಬೆಂಕಿ: ಇಬ್ಬರಿಗೆ ಗಾಯ

ಮುಂಬಯಿ: ಲೈಟ್‌ ಆಫ್ ಏಷ್ಯಾ ರೆಸ್ಟೋರೆಂಟ್‌ ಕಟ್ಟಡದಲ್ಲಿ ಇಂದು ಬೆಳಗಿನ ಜಾವ 4.30 ರ ವೇಳೆಗೆ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಬೆಂಕಿ ನಂದಿಸಲು ತೆರಳಿದ್ದ ಇಬ್ಬರು ಅಗ್ನಿ ಶಾಮಕ ದಳದ ಸಿಬಂದಿಗಳು ಏಣಿಯಿದ್ದ ಬಿದ್ದು ಗಾಯಗೊಂಡಿದ್ದಾರೆ.

ಮುಂಬಯಿ ಬಂದರು ಪ್ರದೇಶದ ಪಟೇಲ್‌ ಚೆಂಬರ್ಸ್‌ನ  ಲೈಟ್‌ ಆಫ್ ಏಷ್ಯಾ ರೆಸ್ಟೋರೆಂಟ್‌ ಕಟ್ಟಡದಲ್ಲಿ ಇಂದು ಮುಂಜಾನೆ ಭಾರೀ ಬೆಂಕಿ ಕಾಣಿಸಕೊಂಡಿದೆ. ಘಟನೆ ಸಂಬಂಧ ಮಾಹಿತಿ ದೊರೆತ ತಕ್ಷಣ ಸ್ಥಳಕ್ಕೆ 15 ಕ್ಕೂ ಹೆಚ್ಚು ಅಗ್ನಿ ಶಾಮಕ ದಳದ ವಾಹನಗಳು ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಟ್ಟಡ ಸಂಪೂರ್ಣ ಹಾನಿಯಾಗಿದ್ದು ಒಂದು ಭಾಗ ಕುಸಿದು ಬಿದ್ದಿದೆ.

5 ಅಂತಸ್ತಿನ ಕಟ್ಟಡ ಇದಾಗಿದ್ದು. ಅಪಾಯಕಾರಿ ಕಟ್ಟಡಗಳ ಸಾಲಿಗೆ ಇದು ಸೇರಿತ್ತು. ಮುಂಬಯಿಯ ಜನನಿಭಿಡ ಸ್ಥಳದಲ್ಲಿ ಕಟ್ಟಡವಿದ್ದು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ. ಕಟ್ಟಡ ತೆರವುಗೊಳಿಸದಿದ್ದಲ್ಲಿ ಸಾರ್ವಜನಿಕರಿಗೆ ಅಪಾಯವಿದೆ.

ಮೈತ್ರಿ ಸರ್ಕಾರದ ಸಚಿವರಿಗೆ ಕೊನೆಗೂ ಖಾತೆ ಭಾಗ್ಯ

ಬೆಂಗಳೂರು : ಹಲವು ಬಿಕ್ಕಟ್ಟುಗಳ ಮಧ್ಯೆಯೂ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಕೊನೆಗೂ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.

ಇಂಧನ, ಹಣಕಾಸು, ಗುಪ್ತವಾರ್ತೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಖಾತೆಯನ್ನು ಮುಖ್ಯಮಂತ್ರಿ ಎಚ್.‍ಡಿ. ಕುಮಾರಸ್ವಾಮಿ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರಿಗೆ ಗೃಹ ಮತ್ತು ಬೆಂಗಳೂರು ನಗರಾಭಿವೃದ್ಧಿ ಇಲಾಖೆಯನ್ನು ನೀಡಲಾಗಿದೆ.

ಕಳೆದ ಬಾರಿ ಇಂಧನ ಸಚಿವರಾಗಿದ್ದ ಡಿ.ಕೆ ಶಿವಕುಮಾರ್ ಅವರಿಗೆ ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಿಕ್ಕಿದ್ದರೆ, ಎಚ್.‍ಡಿ ರೇವಣ್ಣ ಅವರಿಗೆ ಲೋಕೋಪಯೋಗಿ ಖಾತೆ ದೊರೆತಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರು ಮೇ 23 ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಇದಾದ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಜೂನ್ 6 ರಂದು 25 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರೂ ಖಾತೆ ಹಂಚಿಕೆಯಾಗಿರಲಿಲ್ಲ.

ಸಚಿವರ ಖಾತೆ ಹಂಚಿಕೆ ಪ್ರಕ್ರಿಯೆ ಪೂರ್ಣಗೊಳಿಸಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಮಧ್ಯಾಹ್ನ ಪಟ್ಟಿಯನ್ನು ಅನುಮೋದನೆಗಾಗಿ ರಾಜ್ಯಪಾಲರಿಗೆ ಕಳುಹಿಸಿದ್ದರು. ರಾಜ್ಯಪಾಲರು ಖಾತೆಗಳ ಪಟ್ಟಿಯನ್ನು ಅನುಮೋದಿಸಿದ್ದು, ಅಧಿಕೃತವಾಗಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಯಾರಿಗೆ, ಯಾವ ಖಾತೆ :

ಹೆಚ್.ಡಿ. ಕುಮಾರಸ್ವಾಮಿ – ಹಣಕಾಸು/ ಇಂಧನ / ಗುಪ್ತವಾರ್ತೆ / ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಖಾತೆ

ಡಾ.ಜಿ. ಪರಮೇಶ್ವರ್ – ಗೃಹ / ಬೆಂಗಳೂರು ನಗರಾಭಿವೃದ್ಧಿ

ಹೆಚ್.‍ಡಿ ರೇವಣ್ಣ – ಲೋಕೋಪಯೋಗಿ ಇಲಾಖೆ

ಆರ್.‍ವಿ ದೇಶಪಾಂಡೆ – ಕಂದಾಯ ಇಲಾಖೆ

ಡಿ.ಕೆ. ಶಿವಕುಮಾರ್ – ಜಲಸಂಪನ್ಮೂಲ / ವೈದ್ಯಕೀಯ ಶಿಕ್ಷಣ

ಕೆ.ಜೆ.ಜಾರ್ಜ್ – ಬೃಹತ್ ಕೈಗಾರಿಕೆ

ಬಂಡೆಪ್ಪ ಕಾಶಂಪುರ್ – ಸಹಕಾರ ಇಲಾಖೆ

ಕೃಷ್ಣಬೈರೇಗೌಡ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ / ಕಾನೂನು ಮತ್ತು ಸಂಸದೀಯ ವ್ಯವಹಾರ

ಯು.ಟಿ. ಖಾದರ್ – ನಗರಾಭಿವೃದ್ಧಿ / ವಸತಿ

ಸಿ.ಎಸ್. ಪುಟ್ಟರಾಜು – ಸಣ್ಣ ನೀರಾವರಿ

ಶಿವಶಂಕರ್ ರೆಡ್ಡಿ – ಕೃಷಿ
ಪ್ರಿಯಾಂಕ್ ಖರ್ಗೆ – ಸಮಾಜ ಕಲ್ಯಾಣ ಇಲಾಖೆ

ಜಮೀರ್ ಅಹಮದ್ – ಆಹಾರ ಮತ್ತ ನಾಗರೀಕ ಪೂರೈಕೆ / ಅಲ್ಪಸಂಖ್ಯಾತ ಕಲ್ಯಾಣ

ಶಿವಾನಂದ ಪಾಟೀಲ್ – ಆರೋಗ್ಯ ಇಲಾಖೆ

ವೆಂಕಟರಮಣಪ್ಪ – ಕಾರ್ಮಿಕ ಇಲಾಖೆ

ರಾಜಶೇಖರ್ ಪಾಟೀಲ್ – ಗಣಿ ಮತ್ತು ಭೂವಿಜ್ಞಾನ

ಪುಟ್ಟರಂಗಶೆಟ್ಟಿ – ಹಿಂದುಳಿದ ವರ್ಗಗಳ ಕಲ್ಯಾಣ

ಆರ್. ಶಂಕರ್ – ಅರಣ್ಯ ಮತ್ತು ಪರಿಸರ

ಜಯಮಾಲ – ಮಹಿಳಾ ಮತ್ತು ಮಕ್ಕಳ ಕಲ್ಯಾಣ/ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ

ರಮೇಶ್ ಜಾರಕಿಹೊಳಿ – ಪೌರಾಡಳಿತ ಮತ್ತು ಯುವಜನ ಮತ್ತು ಕ್ರೀಡೆ

ಜಿ.ಟಿ. ದೇವೇಗೌಡ – ಉನ್ನತ ಶಿಕ್ಷಣ

ಸಾ.ರಾ ಮಹೇಶ್ – ಪ್ರವಾಸೋದ್ಯಮ

ಎನ್ ಮಹೇಶ್ – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

ಡಿ.ಸಿ. ತಮ್ಮಣ್ಣ – ಸಾರಿಗೆ

ಎಂ.ಸಿ. ಮನಗೂಳಿ – ತೋಟಗಾರಿಕೆ

ವೆಂಕಟರಾವ್ ನಾಡಗೌಡ- ಪಶುಸಂಗೋಪನೆ

ಗುಬ್ಬಿ ಶ್ರೀನಿವಾಸ್ – ಸಣ್ಣ ಕೈಗಾರಿಕೆ

“ಕಾಲ” ವೀಕ್ಷಿಸಿದವರ ಸನ್ಮಾನ: ವಿನೂತನ ಪ್ರತಿಭಟನೆ

ತುಮಕೂರು: ರಜನೀಕಾಂತ್ ಅಭಿಯನದ ಕಾಲಾ ಚಿತ್ರ ಪ್ರದರ್ಶನಕ್ಕೆ ರಾಜ್ಯಾದ್ಯಂತ ಕನ್ನಡಪರ ಸಂಘಟನೆಗಳ ಸಾಕಷ್ಟು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಯನ್ನು ನಡೆಸಿವೆ. ಈ ಮಧ್ಯೆ ತುಮಕೂರು ಜಿಲ್ಲೆಯ ಕೊರಟಗೆರೆಯ ಚಿತ್ರಮಂದಿರವೊಂದರಲ್ಲಿ ಕಾಲಾ ಚಿತ್ರ ಬಿಡುಗಡೆಯಾಗಿದ್ದು ಚಿತ್ರ ವಿಕ್ಷಿಸಿದವರಿಗೆ ಹೂವಿನ ಅಭಿಷೇಕ ಮಾಡುವ ಮೂಲಕ ಯುವಕರು ವಿನೂತನ ಪ್ರತಿಭಟನೆ ನಡೆಸಿದ್ದಾರೆ.

ಕೊರಟಗೆರೆಯ ಶಿವಗಂಗಾ ಚಿತ್ರಮಂದಿರದಲ್ಲಿ ಕಾಲಾ ಚಿತ್ರ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ಜಿಲ್ಲೆಯ 10 ತಾಲೂಕುಗಳ ಪೈಕಿ ಕೊರಟಗೆರೆ ಪಟ್ಟಣದಲ್ಲಿ ಮಾತ್ರ ಚಿತ್ರ ಬಿಡುಗಡೆಯಾಗಿದ್ದು, ಮಧುಗಿರಿ, ಪಾವಗಡ, ತುಮಕೂರು, ಸಿರಾ ಕಡೆಯಿಂದ ಕೊರಟಗೆರೆ ಕಡೆಗೆ ಪ್ರೇಕ್ಷಕರು ಆಗಮಿಸುತ್ತಿದ್ದಾರೆ.

ಕನ್ನಡಪರ ಸಂಘಟನೆಯ ಕಾರ್ಯಕರ್ತರು ಚಿತ್ರ ವೀಕ್ಷಿಸಿ ಹೊರ ಬಂದ ಪ್ರೇಕ್ಷಕರಿಗೆ ಹೂವಿನ ಹಾರ ಹಾಕಿ, ಪುಷ್ಪಾರ್ಚನೆ ಮಾಡಿ ಸನ್ಮಾನ ಮಾಡುವ ಮೂಲಕ ವಿನೂತನ ಪ್ರತಿಭಟನೆಗೆ ಮುಂದಾಗಿದ್ದಾರೆ.

ಮಾಸ್ತಿಗುಡಿ ದುರಂತ ಪ್ರಕರಣ: ದುನಿಯ ವಿಜಯ್ ಬಂಧನ

ಮಾಸ್ತಿಗುಡಿ ಚಿತ್ರದ ಚಿತ್ರೀಕ ರಣ ವೇಳೆ ನಡೆದಿದ್ದ ದುರ್ಘಟನೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ಹಾಜರಾಗದೆ ಆರೋಪಿ ಸುಂದರ್ ಪಿ. ಗೌಡ ತಲೆಮರೆಸಿಕೊಂಡು ಓಡಾಡುತ್ತಿರುವ ಸಂಬಂಧ ಆರೋಪಿಗೆ ಸಹಾಯ ಮಾಡಿದ್ದಾರೆ ಎಂಬ ಕಾರಣಕ್ಕೆ ನಟ ದುನಿಯ ವಿಜಯ್‌ರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸುಂದರ್ ಪಿ.ಗೌಡರನ್ನು ಬಂಧಿಸಲು ತಾವರೆಕೆರೆ ಪೊಲೀಸರು ತೆರಳಿದಾಗ ತಮ್ಮ ಮನೆಯಲ್ಲಿದ್ದ ಸುಂದರ್​ ತಪ್ಪಿಸಿಕೊಳ್ಳು ವಿಜಯ್​ ಸಹಾಯ ಮಾಡುವ ಮೂಲಕ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ತಾವರೆಕೆರೆ ಠಾಣೆ ಪೊಲೀಸ್​ ಪೇದೆ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್​ ಠಾಣೆಯಲ್ಲಿ ನಟ ವಿಜಯ್ ವಿರುದ್ಧ ದೂರು ದಾಖಲಿಸಿದ್ದರು.

ಸುಂದರ್ ತಪ್ಪಿಸಿಕೊಳ್ಳಲು ಸಹಾಯ‌ಮಾಡುವುದಲ್ಲದೆ ದುನಿಯ ವಿಜಯ್ ಕೂಡ ಪರಾರಿಯಾಗಿದ್ದರು. ತಲೆಮರೆಸಿಕೊಂಡಿದ್ದ ವಿಜಯ್​ ಹುಡುಕಾಟಕ್ಕಾಗಿ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು  ವಿಶೇಷ ತಂಡ ರಚಿಸಿದ್ದರು. ಈ ವಿಶೇಷ ತಂಡ ವಿಜಯ್​ರನ್ನು ತಮಿಳುನಾಡಿನಲ್ಲಿ ಬಂಧಿಸಿದ್ದು ಬೆಂಗಳೂರಿಗೆ ಕರೆ ತರಲಾಗುತ್ತಿದೆ.

ಪ್ರಕರಣ ಸಂಬಂಧ ದುನಿಯ ವಿಜಯ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬೆಂಗಳೂರಿಗೆ ಕರೆತಂದ ಕೂಡಲೇ ವಿಜಯ್‌ರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು.

ಬಂಧನದ ಭೀತಿ ಎದುರಾಗಿತ್ತಿದ್ದಂತೆ ವಿಜಯ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ವಿಜಯ್‌ರನ್ನು ಬೆಳಗ್ಗೆ 8:30 ಕ್ಕೆ ಬಂಧಿಸಲಾಗಿತ್ತು. ಬಂಧನದ ಮಾಹಿತಿ ಕೋರ್ಟ್ ಗೆ ರವಾನೆಯಾಗಿತ್ತು. ನಿರೀಕ್ಷಣಾ ಜಾಮೀನು 12:30ಕ್ಕೆ ಮಂಜೂರಾಗಿದೆ. ಬಂಧನದ ಮಾಹಿತಿ ನ್ಯಾಯಾಲಯಕ್ಕೆ ತಿಳಿಸಿದ್ದರೂ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಹುದೇ ಎಂಬ ಬಗ್ಗೆ ಪೊಲೀಸರು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ನಾಳೆ ಬೆಳಗ್ಗೆ ಮ್ಯಾಜಿಸ್ಟ್ರೇಟ್ ಮುಂದೆ ವಿಜಯ್‌ರನ್ನು ಹಾಜರುಪಡಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ.

ಕೆಪಿಸಿಸಿ ಕಚೇರಿ ಬಳಿ ಹ್ಯಾರಿಸ್ ಬೆಂಬಲಿಗನಿಂದ ಆತ್ಮಹತ್ಯೆಗೆ ಯತ್ನ: ಲಘು ಲಾಠಿ ಪ್ರಹಾರ

ಬೆಂಗಳೂರು: ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್ ಶಾಸಕರ ಬಂಡಾಯ ಒಂದೆಡೆಯಾದರೆ, ಮತ್ತೊಂದೆಡೆ ಶಾಸಕರ ಬೆಂಬಲಿಗರು, ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಶಾಸಕ ಎನ್​.ಎ. ಹ್ಯಾರಿಸ್​ಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಹ್ಯಾರಿಸ್​ ಬೆಂಬಲಿಗನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಇಂದು ಕೆಪಿಸಿಸಿ ಕಚೇರಿ ಬಳಿ ನಡೆದಿದೆ.

ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್​ ಬೆಂಬಲಿಗರು ಹಾಗೂ ಕಾರ್ಯಕರ್ತರು ಬೆಳಗ್ಗೆಯಿಂದ ಕೆಪಿಸಿಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಹ್ಯಾರಿಸ್​ ಬೆಂಬಲಿಗ ಸಲೀಂ ಎಂಬಾತ ಕಟೌಟ್​ ಕಟ್ಟಲು ನಿಲ್ಲಿಸಿದ್ದ ಮರಕ್ಕೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ.

ಸ್ಥಳದಲ್ಲಿದ್ದ ಪೊಲೀಸರು ಸಲೀಂನನ್ನು ರಕ್ಷಿಸಿದ್ದು, ವಶಕ್ಕೆ ಪಡೆದಿದ್ದಾರೆ. ಪ್ರತಿಭಟನಾಕಾರರು ಕಾಂಗ್ರೆಸ್​ ನಾಯಕರು ಕಚೇರಿ ಒಳಗೆ ತೆರಳದಂತೆ ಅಡ್ಡಲಾಗಿ ಕುಳಿತು ಧರಣಿ ನಡೆಸುತ್ತಿದ್ದಾರೆ. ಈ ವೇಳೆ ಪೊಲೀಸರು ಲಘ ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು.
ಮುಂಜಾಗ್ರತಾ ಕ್ರಮವಾಗಿ ಕೆಪಿಸಿಸಿ ಸಿಬ್ಬಂದಿ ಕಚೇರಿಯ ಬಾಗಿಲು ಹಾಕಿಕೊಂಡು ಕೆಲಸ ಮಾಡುತ್ತಿದ್ದಾರೆ.

ಕಾಂಗ್ರೆಸ್​ ಕಚೇರಿಗೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಹ್ಯಾರಿಸ್​ ಬೆಂಬಲಿಗನೊಬ್ಬ ಕೆಪಿಸಿಸಿ ಕಚೇರಿ ಬಳಿ ಇರುವ ಹೋರ್ಡಿಂಗ್ಸ್​ ಮೇಲೆ ಏರಿ ಪ್ರತಿಭಟನೆ ನಡೆಸಿದ್ದು, ಜತೆಗೆ ಬೆಂಬಲಿಗನೊಬ್ಬ ತಲೆ ಬೋಳಿಸಿಕೊಳ್ಳವ ಮೂಲಕ ಹೈಕಮಾಂಡ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ.