19 ವರ್ಷದೊಳಗಿನವರ ಕ್ರಿಕೆಟ್ ತಂಡಕ್ಕೆ ಅರ್ಜುನ್ ಆಯ್ಕೆ!

ಮುಂಬಯಿ: ಮಾಸ್ಟರ್ ಬ್ಲಾಸ್ಟರ್ ಸಚಿನ್‌ ತೆಂಡೂಲ್ಕರ್‌ ಅವರ ಮಗ ಅರ್ಜುನ್‌ ತೆಂಡೂಲ್ಕರ್‌ 19 ವರ್ಷದೊಳಗಿನವರ ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಗುರುವಾರ ನಡೆದ ಆಯ್ಕೆ ಸಮಿತಿಯಲ್ಲಿ ಅರ್ಜುನ್ ತೆಂಡೂಲ್ಕರ್ ಅವರನ್ನು 19 ವರ್ಷದೊಳಗಿನವರ ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದೆ. 18 ವರ್ಷದ ಅರ್ಜುನ್‌ ತೆಂಡುಲ್ಕರ್‌ ಆಲ್‌ರೌಂಡರ್‌ ಆಗಿ ಭರವಸೆ ಮೂಡಿಸಿದ್ದಾರೆ.

ಅಂಗಡಿಗಳ ಶೆಟರ್ ಮುರಿದು ಕಳ್ಳರ ಕೈಚಳಕ!

ಬೆಂಗಳೂರು: ಒಂದೇ ರಾತ್ರಿ ನಾಲ್ಕು ಕಡೆ ಅಂಗಡಿಗಳ ಶೆಟರ್ ಮುರಿದು ಕಳ್ಳರು ತಮ್ಮ ಕೈಚಳಕ ತೋರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ‌. ಅನ್ನಪೂರ್ಣೇಶ್ವರಿ ನಗರದ ಶ್ರೀಗಂಧ ಕಾವಲ್’ನ ಡಿ ಬ್ಲಾಕ್ ನಲ್ಲಿ ಜೂನ್ 2 ರ ತಡರಾತ್ರಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಮೊದಲು ಮೆಡಿಕಲ್ ಸ್ಟೋರ್ ಒಂದರ ಶೆಟರ್ ಮುರಿದು ಕಳ್ಳರು ಒಳ ನುಗ್ಗುತ್ತಾರೆ. ನಂತರ ಮೆಡಿಕಲ್ ಸ್ಟೋರ್’ನ ಒಳಗೆ ಹಣ ಸಿಗದಿದ್ದಾಗ ಕಳ್ಳರು ಔಷಧಿಗಳನ್ನು ಬಿಸಾಡಿದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ.

ನಂತರ ಮೆಡಿಕಲ್ ಸ್ಟೊರ್ ಪಕ್ಕದ ಎಂ.ಆರ್.ಡಿಜಿಟಲ್ ಸ್ಟುಡಿಯೋ ಶೆಟರ್ ಮುರಿದು ಒಳನುಗ್ಗುತ್ತಾರೆ.
ಸ್ಟುಡಿಯೋದಲ್ಲಿ ಬೆಲೆಬಾಳುವ ನಿಕಾನ್ ಹಾಗೂ ಕ್ಯಾನನ್ ಎರಡು ಕ್ಯಾಮೆರಾ, ಲೆನ್ಸ್ ಗಳನ್ನು ಹೊತ್ತೊಯ್ದಿದ್ದಾರೆ.

ಘಟನೆ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಸ್ಟುಡಿಯೋ ಮಾಲೀಕ ದೂರು ದಾಖಲಿದ್ದು,
ಮೆಡಿಕಲ್ ಸ್ಟೋರ್ ನಲ್ಲಿ ಯಾವುದೇ ವಸ್ತು, ಹಣ ಕಳುವಾಗದ ಹಿನ್ನಲೆ ಮೆಡಿಕಲ್ ಸ್ಟೋರ್ ಮಾಲೀಕ ಯಾವುದೇ ದೂರು ದಾಖಲು ಮಾಡಿಲ್ಲ.

ಸದ್ಯ ಆರೋಪಿಗಳ ಪತ್ತೆಗಾಗಿ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.

ಮೈತ್ರಿ ಸರ್ಕಾರ ಹೆಚ್ಚು ದಿನ ಉಳಿಯಲ್ಲ: ಅನಂತ್ ಕುಮಾರ್

ಬೆಂಗಳೂರು: 37 ಸ್ಥಾನ ಪಡೆದ ಪಕ್ಷ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದೆ. ಆದರೆ, ಈ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ. ಸರ್ಕಾರದಲ್ಲಿ ಸೃಷ್ಠಿಯಾಗಿರುವ ಸಂಪುಟ ಬಿಕ್ಕಟ್ಟು ಮತ್ತೊಂದು ರಾಜಕೀಯ ಪುನರ್ ಸಮೀಕರಣಕ್ಕೆ ದಾರಿ ಮಾಡಿಕೊಡಲಿದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ವಿಶ್ಲೇಷಿಸಿದ್ದಾರೆ.

ಬೆಂಗಳೂರು ಪದವೀಧರರ ಕ್ಷೇತ್ರದ ಚುನಾವಣೆಗೆ ಕೇಂದ್ರ ಸಚಿವ ಅನಂತ್ ಕುಮಾರ್‌ ತಮ್ಮ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಜೊತೆ ಬಂದು ವಿವಿ ಪುರಂನ ಲಾಲ್ ಬಾಗ್ ವೆಸ್ಟ್ ಗೇಟ್ ಬಳಿಯಿರುವ ಸರಸ್ವತಿ ವಿದ್ಯಾ ಮಂದಿರದಲ್ಲಿ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಮತದಾನ ನಂತರ ಮಾತನಾಡಿದ ಅನಂತಕುಮಾರ್, ಇವತ್ತು ವಿಧಾನಪರಿಷತ್ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು. ನಾನೂ ಸಹಾ ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಮತ ಚಲಾವಣೆ ಮಾಡಿದ್ದೇನೆ. ನಮ್ಮ ಎಲ್ಲ ಅಭ್ಯರ್ಥಿಗಳು ಈ ಚುನಾವಣೆಯಲ್ಲಿ ಗೆಲುವು ಪಡೆಯಲಿದ್ದಾರೆ‌ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ ದಿಕ್ಕು ತಪ್ಪಿದ್ದು ಸರ್ಕಾರ ಅತಂತ್ರ ಪರಿಸ್ಥಿತಿಯಲ್ಲಿದೆ. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ 25 ಸಚಿವರು ಸರ್ಕಾರ ರಚನೆ ಆದ ಮೇಲೂ ಖಾತೆ ರಹಿತರಾಗಿದ್ದಾರೆ. ಖಾತೆ ಹಂಚಿಕೆಯಲ್ಲಿ ಎರಡೂ ಪಕ್ಷಗಳಲ್ಲಿ ಬಿಕ್ಕಟ್ಟು ತಲೆದೋರಿದೆ. ಇದು ರಾಜ್ಯ ರಾಜಕೀಯದಲ್ಲಿ ಪುನರ್ ಸಮೀಕರಣಕ್ಕೆ ಕಾರಣವಾಗಲಿದೆ ಎಂದು ವಿಶ್ಲೇಷಿಸಿದರು. ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಎರಡೂ ಪಕ್ಷಗಳ ಶಾಸಕರಿಗೆ ಮತ್ತು ಕಾರ್ಯಕರ್ತರಿಗೆ ಇಷ್ಟವಿಲ್ಲ ಅಷ್ಟೇ ಅಲ್ಲ ಮೈತ್ರಿ ಸರಕಾರ ರಾಜ್ಯದ ಜನತೆಗೂ ಇಷ್ಟವಿಲ್ಲ ಎಂದರು.

ಮೊದಲ ಬಾರಿ ನಾವು ಅಧಿಕಾರ ಸ್ವೀಕಾರ ಮಾಡಿದಾಗಲೇ ನಮಗೆ ಬಹುಮತ ಬರಬೇಕಿತ್ತು, ಆದರೆ 37 ಸ್ಥಾನ ಪಡೆದ ಪಕ್ಷ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದೆ. ಇವರು ಎಷ್ಟು ದಿನ ಆಡಳಿತ ನಡೆಸುತ್ತಾರೋ ನಡೆಸಲಿ ಎಂದರು.

ಪ್ರಣಬ್ ಮುಖರ್ಜಿ ಒಬ್ಬ ಮುತ್ಸದ್ದಿ ರಾಜಕಾರಣಿ ಅವರು ನೆನ್ನೆ ಆರ್ ಎಸ್ ಎಸ್ ನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತಾಡಿದ್ದಾರೆ, 80 ವರ್ಷಗಳಿಂದ ದೇಶ ಸೇವೆ ಮಾಡುತ್ತಲೆ ಬಂದಿರುವ ಸಂಘಕ್ಕೆ ಒಂದು ಸಮರ್ಥನೆ ಸಿಕ್ಕಿಂತಾಗಿದೆ, ಪ್ರಣಬ್ ಮುಖರ್ಜಿ ಭಾಷಣ ಸಂಘವನ್ನು ಪ್ರೀತಿಸುವ, ಸಂಘವನ್ನು ವಿರೋಧಿಸುವವರಿಗೆ ಒಂದು ಸಂದೇಶ ರವಾನಿಸಿದೆ ಎಂದು ಅಭಿಪ್ರಾಯಪಟ್ಟರು.

ಪರಿಷತ್ ಪದವೀಧರರ ಚುನಾವಣೆ: ಇಂದು ಮತದಾನ

ಬೆಂಗಳೂರು: ವಿಧಾನಸಭಾ ಚುನಾವಣೆ ಮುಗಿದು ಹೊಸ ಸರ್ಕಾರ ರಚನೆಯಾದ ಬೆನ್ನಲ್ಲೆ ಇಂದು ವಿಧಾನಪರಿಷತ್‌ನ 6 ಪದವೀಧರರ ಮತ್ತು ಶಿಕ್ಷಕರ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು ಇಂದು ಮತದಾನ ಪ್ರಕ್ರಿಯೆ ಚುರುಕುಗೊಂಡಿದೆ.

ಬೆಂಗಳೂರು ಪದವೀಧರರ ಕ್ಷೇತ್ರ ವ್ಯಾಪ್ತಿಯಲ್ಲಿ
ಬೆಂಗಳೂರು ನಗರ – ಗ್ರಾಮೀಣ ಮತ್ತು ರಾಮನಗರ ಜಿಲ್ಲೆಗಳ ಪದವೀಧರರು ಮತದಾನ ಮಾಡಲಿದ್ದಾರೆ. ಬೆಂಗಳೂರು ಪದವೀಧರರ ಕ್ಷೇತ್ರದಲ್ಲಿ‌ 65, 354 ಪದವೀಧರ ಮತದಾರಿದ್ದು 38,451 ಪುರುಷರು ಹಾಗೂ 26,891 ಮಹಿಳಾ ಮತದಾರಿದ್ದಾರೆ.

ಪದವೀಧರರ ಕ್ಷೇತ್ರದಲ್ಲಿ 82 ಮುಖ್ಯ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. 46 ಹೆಚ್ಚುವರಿ ಮತಗಟ್ಟೆಗಳು ಸೇರಿದಂತೆ 36 ಮುಖ್ಯ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಬೆಂಗಳೂರು ಪದವೀಧರರ ಕ್ಷೇತ್ರದಲ್ಲಿ 22 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಪದವೀಧರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿರುವವರಿಗೆ ಮಾತ್ರ ಮತ ಚಲಾಹಿಸಲು ಅವಕಾಶ ವಿದ್ದು, ನಗರದ ಆರ್.ಸಿ ಕಾಲೇಜಿನಲ್ಲಿ ಜೂನ್ 12 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ..

ಬೆಂಗಳೂರು ಪದವೀಧರ ಕ್ಷೇತ್ರದ
ಕಣದಲ್ಲಿ ಬಿಜೆಪಿಯಿಂದ ಅ ದೇವೆಗೌಡ, ಕಾಂಗ್ರೆಸ್ ‌ನಿಂದ ರಾಮೋಜಿಗೌಡ, ಜೆಡಿಎಸ್ ನಿಂದ ಅಚ್ಚೇಗೌಡ ಶಿವಣ್ಣ, ಸಿಪಿಐ ನಿಂದ ಪ್ರಕಾಶ ಕೆ, ಭಾರತೀಯ ಜನತಾದಳ ಪಕ್ಷದಿಂದ ವಿ.ಸುರೇಶ್ ಬಾಬು ಸ್ಪರ್ಧಿಸಿದ್ದು, ಒಟ್ಟು
17 ಮಂದಿ ಪಕ್ಷೇತರರು ಅಭ್ಯರ್ಥಿಗಳು ಕಣಕ್ಕಿಳಿದ್ದಿದಾರೆ.

ನಟ ಪುನೀತ್ ರಾಜ್ ಕುಮಾರ್ ಚಲಿಸುತ್ತಿದ್ದ ಕಾರಿಗೆ ಅಪಘಾತ!

ಬಳ್ಳಾರಿ: ನಟ ಪುನೀತ್ ರಾಜ್ ಕುಮಾರ್ ಪ್ರಯಾಣಿಸುತ್ತಿದ್ದ ಕಾರು ಬಳ್ಳಾರಿಯಿಂದ ಬೆಂಗಳೂರಿಗೆ ತೆರಳುವ ವೇಳೆ ಅಪಘಾತಕ್ಕೊಳಗಾದ ಘಟನೆ ಇಂದು ನಡೆದಿದೆ.

ನಟಸಾರ್ವಭೌಮ ಚಿತ್ರದ ಚಿತ್ರೀಕರಣ ಮುಗಿಸಿ ಬಳ್ಳಾರಿಯಿಂದ ಬೆಂಗಳೂರಿಗೆ ವಾಪಸ್ಸಾಗುವ ವೇಳೆ ಅನಂತಪುರ ಬಳಿ ಅಪಘಾತವಾಗಿದೆ. ರಸ್ತೆ ಕಾಮಗಾರಿ ನಡೆಯುತ್ತಿದ್ದ ವೇಳೆ ಘಟನೆ ಸಂಭವಿಸಿದ್ದು, ಕಾರಿನ ಟೈರ್ ಬಸ್ಟ್ ಆದ ಕಾರಣ ನಿಯಂತ್ರಣ ತಪ್ಪಿ ಅಪಘಾತವಾಗಿದೆ.

ನಟ ಪುನರ್ ರಾಜಕುಮಾರ್ ‌ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅದೃಷ್ಟವಶಾತ್ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಅಫಘಾತದ ನಂತರ ಬೇರೊಂದು ಕಾರಿನಲ್ಲಿ ಬೆಂಗಳೂರಿಗೆ ಪುನೀತ್ ವಾಪಸ್ಸಾಗಿದ್ದಾರೆ.

ಪುನೀತ್ ರಾಜಕುಮಾರ ಜೊತೆ ಗನ್ ಮ್ಯಾನ್ ಹಾಗೂ ಕಾರಿನ ಚಾಲಕರಿದ್ದು, ರೇಂಜ್ ರೋವರ್ ಕಾರಿನಲ್ಲಿ ಚಲಿಸುತ್ತಿದ್ದ ವೇಳೆ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ‌.

ಸಿದ್ದು ವಿರುದ್ಧ ಮುನಿಸಿಕೊಂಡ ಸಚಿವ ಸ್ಥಾನ ವಂಚಿತ ಶಾಸಕರು?

ಬೆಂಗಳೂರು: ಮೈತ್ರಿ ಸರ್ಕಾರಕ್ಕೆ ಸಚಿವ ಸ್ಥಾನ ವಂಚಿತ ಹಿರಿಯ ಶಾಸಕರ ಬಂಡಾಯದ ಬಿಸಿ ಎದುರಾಗಿದೆ. ಇದೀಗ ಲಿಂಗಾಯತ – ವೀರಶೈವ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಎಂ.ಬಿ.ಪಾಟೀಲ್‌ಗೆ ಸಚಿವ ಸ್ಥಾನ ನೀಡದಿರುವುದು ಹಲವು ಶಾಸಕರ ಅಸಮಧಾನಕ್ಕೆ ಕಾರಣವಾಗಿದ್ದು ಬಂಡಾಯ ಶಾಸಕರು ಎಂ.ಬಿ.ಪಾಟೀಲ್ ನಿವಾಸದಲ್ಲಿ ಪ್ರತ್ಯೇಕ ಸಭೆ ನಡೆಸುತ್ತಿದ್ದಾರೆ.

ಸದಾಶಿವನಗರದಲ್ಲಿರುವ ಮಾಜಿ ಸಚಿವ ಎಂ.ಬಿ. ಪಾಟೀಲ್ ನಿವಾಸದಲ್ಲಿ ಸಭೆ ಸೇರಿರುವ ಸಚಿವ ಸ್ಥಾನ ವಂಚಿತ ಶಾಸಕರು ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೂ ಮುನಿಸಿಕೊಂಡಿದ್ದಾರೆ ಎನ್ನಲಾಗಿತ್ತಿದೆ.

ಎಂ.ಬಿ.ಪಾಟೀಲ್ ನಿವಾಸದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದ್ದು, ಸಚಿವ ಸ್ಥಾನ ಕೊಡಿಸುವ ಮಾತು ನೀಡಿದ್ದ ಸಿದ್ದರಾಮಯ್ಯ ಮಾತು ತಪ್ಪಿದ್ದಾರೆ. ಕಡೆಯ ಕ್ಷಣದಲ್ಲಿ ನಮ್ಮ ಕೈ ಬಿಟ್ಟಿದ್ದಾರೆ. ಪಕ್ಷದ ಮುಖಂಡರು, ಹೈಕಮಾಂಡ್ ಹಾಗೂ ಸಿದ್ದರಾಮಯ್ಯ ಎಲ್ಲರೂ ಕೈ ಕೊಟ್ಟಿದ್ದು ಇವರೆಲ್ಲರಿಗೂ ತಕ್ಕ ಪಾಠ ಕಲಿಸುವ ಬಗ್ಗೆ ಸಾಮೂಹಿಕ ನಿರ್ಧಾರ ಕೈಗೊಳ್ಳುವ ಚರ್ಚೆ ನಡೆದಿದೆ ಎನ್ನಲಾಗಿದೆ.

ಕಳೆದ ನಾಲ್ಕು ಗಂಟೆಯಿಂದ ಸಭೆ ಮುಂದುವರಿದಿದ್ದು, ಇನ್ನೂ ಒಂದೆರಡು ಗಂಟೆ ನಡೆಯುವ ನಿರೀಕ್ಷೆ ಹೊಂದಲಾಗಿದೆ. ಮುಂದಿನ ನಡೆ ಕೈಗೊಳ್ಳುವ ವಿಚಾರದಲ್ಲಿ ಈ ಸಭೆ ಮಹತ್ವದ್ದಾಗಿದ್ದು, ಸಿದ್ದರಾಮಯ್ಯ, ಹೈಕಮಾಂಡ್, ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ದೊಡ್ಡ ಶಾಕ್ ನೀಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಅತೃಪ್ತರಮುಂದಿನ ನಿರ್ಧಾರ ಸಾಕಷ್ಟು ಕುತೂಹಲ ಮೂಡಿಸುತ್ತಿದೆ.
ಎಂಟಿಬಿ ನಾಗರಾಜ್ ಸಭೆಯಿಂದ ಒಮ್ಮೆ ಆಚೆ ಬಂದಿದ್ದು ಈ ಸಂದರ್ಭ ಮಾತನಾಡಿ, ಇನ್ನೂ ಎರಡು ದಿನ ಸಭೆ ನಡೆಯಲಿದೆ. ಸಾಕಷ್ಟು ವಿಚಾರ ಚರ್ಚೆ ಆಗುತ್ತಿದೆ. ಇನ್ನಷ್ಟು ಅತೃಪ್ತರು ನಮ್ಮನ್ನು ಸೇರಿಕೊಳ್ಳಲಿದ್ದಾರೆ. ಆಮೇಲೆ ಎಲ್ಲವನ್ನೂ ವಿವರಿಸುತ್ತೇವೆ ಎಂದಿದ್ದಾರೆ.
ಸಚಿವ ಸ್ಥಾನ ಪ್ರಭಲ ಆಕಾಂಕ್ಷಿಗಳಾದ ರೋಷನ್ ಬೇಗ್, ಸತೀಶ್ ಜಾರಕಿಹೊಳಿ, ಎಂಟಿಬಿ ನಾಗರಾಜ್, ಭೀಮಾ ನಾಯ್ಕ್, ಡಾ. ಕೆ. ಸುಧಾಕರ್ ಸೇರಿದಂತೆ ಹಲವು ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.