ಬೆಂಗಳೂರು: 37 ಸ್ಥಾನ ಗೆದ್ದಿರುವ ಜೆಡಿಎಸ್ ಪಕ್ಷದ ಮುಂದೆ ಮಂಡಿಯೂರುವ ಸ್ಥಿತಿ ನಮಗೆ ಬರಬಾರದಿತ್ತು. ಅನಿವಾರ್ಯ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಟ್ಟಿದ್ದೇವೆ ಈ ಬಗ್ಗೆ ನಮಗೂ ನೋವಿದೆ. ಈ ರೀತಿ ಬೇಸರ ತೋಡಿಕೊಂಡಿದ್ದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್.
ಜೂನ್ 2 ರಂದು ಸರ್ದಾರ್ ಪಟೇಲ್ ಭವನದಲ್ಲಿ ನಡೆದ ಕಾಂಗ್ರೆಸ್ ಆತ್ಮಾವಲೋಕನಾ ಸಭೆಯಲ್ಲಿ ಕಾರ್ಯಕರ್ತರ ಎದುರು ಪರಮೇಶ್ವರ್ ಬೇಸರ ವ್ಯಕ್ತಪಡಿಸಿದ್ದರು. ಆದರೆ, ಅದು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ನಾನು ಆ ರೀತಿ ಹೇಳಿಯೇ ಇಲ್ಲ ಎಂದು ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದ್ದರು.
ಆದ್ರೆ ಪರಮೇಶ್ವರ್ ಮಾತನಾಡಿದ್ದ ಆಡಿಯೋ ಇಂದು ಬಹಿರಂಗಗೊಂಡಿದೆ.
ಜೆಡಿಎಸ್ ಕಾಂಗ್ರೆಸ್ ದೋಸ್ತಿ ಬಗ್ಗೆ ಅತೃಪ್ತಿ ಹೊರಹಾಕಿರುವ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ನೀವೇ ಮುಖ್ಯಮಂತ್ರಿ ಪದವಿ ಇಟ್ಟುಕೊಳ್ಳಿ ಎಂದು 37 ಸ್ಥಾನ ಗೆದ್ದ ಪ್ರಾದೇಶಿಕ ಪಕ್ಷದ ಹಿಂದೆ ಓಡುವಂಥ ದಯನೀಯ ಸ್ಥಿತಿ ಕಾಂಗ್ರೆಸ್‌ಗೆ ಬರಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪರಮೇಶ್ವರ ಮೈತ್ರಿ ಸರ್ಕಾರದ ಬಗ್ಗೆ ಏನ್ ಹೇಳಿದ್ದಾರೆ ಎನ್ನುವ ಪೂರ್ಣ ಮಾಹಿತಿ ಇಲ್ಲಿದೆ.
ಆಡಿಯೋ: 01
ಪರಮೇಶ್ವರ್ – ನಾವೀಗ ಬಹಳ ಕಷ್ಟದ ಪರಿಸ್ಥಿತಿಯಲ್ಲಿದ್ದೇವೆ. ನಾನು ಪ್ರಾಮಾಣಿಕವಾಗಿ ಎರಡು ಮಾತುಗಳನ್ನು ಆಡುತ್ತೇನೆ.ಎಲ್ಲವೂ ಚೆನ್ನಾಗಿದೆ ಅಂತ ದಯಮಾಡಿ ತಿಳಿದುಕೊಳ್ಳಬೇಡಿ. ಒಂದು ರಾಷ್ಟ್ರೀಯ ಪಕ್ಷ , ಕೇವಲ 37 ಸ್ಥಾನಗಳನ್ನು ಗೆದ್ದಿರತ್ತಕ್ಕಂತ ಒಂದು ಪ್ರಾದೇಶಿಕ ಪಕ್ಷಕ್ಕೆ , ನೀವೇ ಮುಖ್ಯಮಂತ್ರಿ ಸ್ಥಾನ ತಗೋಳಿ ನೀವೇ ಸರ್ಕಾರ ಅಂತ ಹೇಳುವಾಗ ಮುಖ್ಯಮಂತ್ರಿ ಪದವಿ ಹಾಗೂ ಸಚಿವ ಸ್ಥಾನಗಳನ್ನು ಬೇರೆಯವರಿಗೆ ನೀಡುವಾಗ ಎಷ್ಟು ನೋವಾಗುತ್ತದೆ ಎಂಬುದನ್ನು ನಾನು ನಿಮಗೆ ಬಿಡಿಸಿ ಹೇಳಬೇಕಾದ ಅವಶ್ಯಕತೆ ಇಲ್ಲ. ಬಹಳ ಜನ ನಿಮ್ಮಲ್ಲಿ ಹಲವು ಜನ ನನ್ನ ಹತ್ತಿರ ಬಂದು ಹೇಳಿದ್ರು. ಯಾಕ್ ಸ್ವಾಮಿ ಇಂತಹ ಕೆಲಸ ಮಾಡ್ತಿದ್ದೀರಿ ಅಂತ. ನಾವೇ ಮುಖ್ಯಮಂತ್ರಿಯಾಗಬಹುದಿತ್ತು. ನಾವೇ ಹೀಗ್ ಮಾಡಬಹುದಿತ್ತು. ನೀವ್ ಹೀಗ್ ಆಗಬಹುದಾಗಿತ್ತು. ನೀವ್ ಯಾಕ್ ಹೀಗ್ ಮಾಡಿದ್ರಿ ಅಂತ ಕೆಲವರು ಬಂದು ಹೇಳಿದ್ರು.ಆದರೆ ಯಾವ್ ರೀತಿ ಪರಿಸ್ಥಿತಿ, ರಾಜಕೀಯ ಪರಿಸ್ಥಿತಿ ಯೋಚನೆ ಮಾಡಿ.15 ತಾರೀಖು ನಾನು ಹೋರಾಟ ಮಾಡ್ತಾ ಇದ್ದೀನಿ ನನ್ನ ಕ್ಷೇತ್ರದಲ್ಲಿ. ನನ್ನದೇ ಕ್ಷೇತ್ರದಲ್ಲಿ 13 ನೇ ತಾರೀಖು ಹೋರಾಟ, ಹೊಡೆದಾಟ, ಊರಲ್ಲಿ ಕಿತ್ತಾಟ ,15 ನೇ ತಾರೀಖು ರಿಸಲ್ಟ್ ಬರುತ್ತೆ.ಯೋಚನೆ ಮಾಡಿ ಪರಿಸ್ಥಿತಿ ಹೇಗ್ ಇದೆ ಅನ್ನೋದನ್ನು ಯೋಚನೆ ಮಾಡಿ. ನಮ್ಮ ಬಳಿ ಈಗ ಹೆಚ್ಚು ಸಮಯ ಉಳಿದಿಲ್ಲ. ಮುಂಬರುವ ಲೋಕಸಭೆ ಹಾಗೂ ಸ್ಥಳೀಯ ಚುನಾವಣೆಗಳಲ್ಲಿ ಗೆದ್ದರೆ ಮಾತ್ರ, ಸರ್ಕಾರದಲ್ಲಿ ಕಾಂಗ್ರೆಸ್‌ನ ಧ್ವನಿ ಗಟ್ಟಿಯಾಗುತ್ತದೆ. ಪಕ್ಷದ ಪುನಶ್ಚೇತನ ಮಾಡುವ ಶಕ್ತಿಯೂ ಸಿಗುತ್ತದೆ. ಒಂದು ವೇಳೆ ಅಲ್ಲೂ ಫಲಿತಾಂಶ ಉಲ್ಟಾ ಆದರೆ, ನಾವು ಹೀಗೆಯೇ ಗೆದ್ದ ಎತ್ತಿನ ಬಾಲ ಹಿಡಿದುಕೊಂಡು ಹೋಗಬೇಕಾಗುತ್ತದೆ.
ಆಡಿಯೋ: 02
ಪರಮೇಶ್ವರ್ -ಮೊನ್ನೆ ಖಾತೆ ಹಂಚಿಕೆಯಲ್ಲು ಗೊಂದಲ ಆಯ್ತು.ಪ್ರಾಮಾಣಿಕವಾಗಿ ಚರ್ಚೆ ಮಾಡೋಣ.ಇಲ್ಲಿಯವರಿಗೆ ಮಾತನಾಡಿಕೊಂಡ್ರು ಅಂದ್ರೆ ಪರಮೇಶ್ವರ ಒಬ್ಬನೇ ಪ್ರಮಾಣ ವಚನ ಸ್ವೀಕರ ಮಾಡಿದ್ದಾನೆ ಅಂತ ಪಕ್ಷದ ಕೆಲವರು ನನ್ನ ವಿರುದ್ಧ ತೆರೆಮರೆಯಲ್ಲಿ ಮಾತನಾಡಿಕೊಂಡರು. ಆದರೆ,ತಪ್ಪು ನನ್ನದಲ್ಲ.ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ನಾನ್ ಬಂದಿದ್ದೇನೆ .ಮೇಡಮ್ ಬಂದಿದ್ದಾರೆ.ಈ ದೇಶದ ವಿವಿಧ ರಾಜ್ಯಗಳ ರಾಷ್ಟ್ರೀಯ ಪಕ್ಷಗಳ ಮುಖಂಡರು ಬಂದಿದ್ದಾರೆ. ಪ್ರಮಾಣ ವಚನವನ್ನು ಇಡೀ ದೇಶವೇ ನೋಡಿದೆ, ಪ್ರಪಂಚ ನೋಡಿದೆ, ಅಂತಹ ಸಂದರ್ಭದಲ್ಲಿ ಕಾಂಗ್ರೆಸ್‌ನವರು ಒಬ್ಬರೇ ಒಬ್ಬರು ಇಲ್ಲದೇ ಹೋದ್ರೆ ಏನ್ ಆಗಬಹುದು ಅಂದ್ರು ರಾಹುಲ ಗಾಂಧಿ.ಅಧಿಕಾರಕ್ಕೆ ಬಂದ್ರು ಒಂದು ಖಾತೆ ಇಲ್ಲದೆ ಹೋದ್ರೆ ಹೇಗೆ ರಾಷ್ಟ್ರೀಯ ಪಕ್ಷದ ಘನತೆ ಏನಾಗುತ್ತಿತ್ತು ಯೋಚಿಸಿ.ಅದೊಂದೇ ಕಾರಣಕ್ಕೆ ನಾನು ಪ್ರಮಾಣ ವಚನ ತಗೊಂಡೆ.ಸುಲಭನಾಗಿದ್ದೇವೆ ಈ ಮೈತ್ರಿ ಸರ್ಕಾರ ಮಾಡ್ಕೊಂಡಿದಿವಿ, ನಮ್ ಸರ್ಕಾರವಿದೆ ,ಪರಮೇಶ್ವರ ಇದ್ದಾರೆ 20 ಜನ ಬರ್ತಾರೆ ಅಂತ ಅರಾಮಾಗಿರತ್ತೆ ಅಂತ ದಯವಿಟ್ಟು ತಿಳಿದುಕೊಳ್ಳಬೇಡಿ ಕಠಿಣದ ದಿವಸಗಳು ಇದ್ದಾವೆ. “ಟಫ್ ಟೈಮ್”. ಅದಕ್ಕೆ ನಿಮ್ಮನೆಲ್ಲಾ ವಿನಂತಿ ಮಾಡಿಕೊಳ್ಳುತ್ತೇನೆ. ನೀವೆಲ್ಲಾ ,ನೀವೆಲ್ಲಾ ಇನ್ನಷ್ಟು ಜಾಸ್ತಿ ಕೆಲಸ ಮಾಡಬೇಕು.
ಇದು ಪರಮೇಶ್ವರ್ ಆಡಿರುವ ಮಾತುಗಳು.
ಈವರೆಗೂ ನಾನು ಆ ರೀತಿ ಹೇಳಿಲ್ಲ ಎನ್ನುತ್ತಿದ್ದ ಡಿಸಿಎಂ ಪರಮೇಶ್ವರ್ ಇದೀಗ ಆಡಿಯೋ ಬಹಿರಂಗವಾದ ನಂತರ ಯಾವ ಸಮಜಾಯಿಷಿ ನೀಡುತ್ತಾರೋ ಕಾದು ನೋಡಬೇಕು.