ಹೆಚ್ಡಿಕೆ ಸರ್ಕಾರದ ಮೊದಲ ಸಂಪುಟ ವಿಸ್ತರಣೆಗೆ ಕೌಂಟ್ ಡೌನ್ ಶುರು:ನಾಳೆ ಮಧ್ಯಾಹ್ನ 2.12 ಪ್ರಮಾಣವಚನ

 

ಬೆಂಗಳೂರು : ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಜೆಡಿಎಸ್ ಕಾಂಗ್ರೆಸ್ ದೋಸ್ತಿ ಸರ್ಕಾರದ ಮೊದಲ ಸಂಪುಟ ವಿಸ್ತರಣೆ ಅಪಸ್ವರ, ಅಸಮಧಾನದ ನಡುವೆಯೂ ನಾಳೆ ನಡೆಯುತ್ತಿದೆ.

ಈಗಾಗಲೇ ಪೂರ್ವ ನಿಗದಿಯಂತೆ ರಾಜಭವನದ ಗಾಜಿನ ಮನೆಯಲ್ಲಿ ನಾಳೆ ಮಧ್ಯಾಹ್ನ 2 ಗಂಟೆ 12 ನಿಮಿಷಕ್ಕೆ ನಡೆಯಲಿರುವ ಸರಳ ಸಮಾರಂಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಒಟ್ಟಾರೆಯಾಗಿ 25 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ ಎಂದು ಉಭಯ ಪಕ್ಷಗಳ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ನಾಳೆ ನಗರಕ್ಕೆ ಆಗಮಿಸಲಿರುವ ರಾಜ್ಯಪಾಲ ವಜೂಭಾಯ್ ವಾಲಾ, ಸಂಪುಟದ ನೂತನ ಸದಸ್ಯರಿಗೆ ಪ್ರಮಾಣವಚನ ಭೋದಿಸಲಿದ್ದು, ಹಿರಿಯರ ಜೊತೆ ಕೆಲ ಹೊಸ ಮುಖಗಳಿಗೂ ಮೈತ್ರಿ ಸರ್ಕಾರದ ಸಂಪುಟದಲ್ಲಿ ಮಣೆ ಹಾಕಲಾಗುತ್ತದೆ, ಕಾಂಗ್ರೆಸ್ನ 16, ಜೆಡಿಎಸ್ನ 9 ಮಂದಿ ಸಚಿವರಾಗಲಿದ್ದು, ಇವರಿಗೆ ನಾಳೆ ಸಂಜೆ ವೇಳೆಗೆ ಖಾತೆಗಳ ಹಂಚಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಜೆಡಿಎಸ್ ವರಿಷ್ಠ ಹಾಗು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಿನ್ನೆ ರಾತ್ರಿ ಗೌಡರ ನಿವಾಸದಲ್ಲಿ ಸಮಾಲೋಚನೆ ಮಾಡಿ, ತಮ್ಮ ಪಕ್ಷದ ವತಿಯಿಂದ ಮಂತ್ರಿಮಂಡಲಕ್ಕೆ ಯಾರನ್ನು ಸೇರ್ಪಡೆ ಮಾಡಿಕೊಳ್ಳಬೇಕೆಂಬ ಬಗ್ಗೆ ಪಟ್ಟಿ ಅಂತಿಮಗೊಳಿಸಿದ್ದಾರೆ.
ಕಾಂಗ್ರೆಸ್ ನಲ್ಲಿ ಸಂಜೆವರೆಗೂ ಗೊಂದಲ ಮುಂದುವರೆದಿದ್ದು, 16 ಸಚಿವ ಸ್ಥಾನಕ್ಕೆ 56 ಮಂದಿ ಆಕಾಂಕ್ಷಿಗಳಿದ್ದು, ಪೈಪೋಟಿ ನಡೆಸಿದ್ದಾರೆ.

ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹಾಗೂ ಮೈತ್ರಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗುಲಾಂ ನಬೀ ಅಜಾದ್ ರೊಂದಿಗೆ ಸಮಾಲೋಚನೆ ನಡೆಸಿದ್ದು, ಆ ನಂತರ ಪ್ರದೇಶ ಕಾಂಗ್ರೆಸ್ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಜೊತೆ ಚರ್ಚೆ ನಡೆಸಿ ಪಟ್ಟಿ ಅಂತಿಮಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

ಉಭಯ ಪಕ್ಷಗಳಲ್ಲೂ ಹಲವು ಸಚಿವಾಕಾಂಕ್ಷಿಗಳು ಮಂತ್ರಿಮಂಡಲ ಸೇರಲು ಕಳೆದ ಮೂರು ದಿನಗಳಿಂದ ಭಾರಿ ಕಸರತ್ತು ನಡೆಸಿದ್ದು ಪ್ರಮುಖವಾಗಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪಾತ್ರ ಏನು ಎನ್ನುವುದು ಇನ್ನೂ ನಿಗೂಢವಾಗಿದೆ.

ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಸಂಬಂಧ ಒಂದು ವಾರದಲ್ಲಿ ಸಭೆ: ಭಾರತಿ ವಿಷ್ಣುವರ್ಧನ್ ಗೆ ಸಿಎಂ ಅಭಯ

ಬೆಂಗಳೂರು : ಸಾಹಸ ಸಿಂಹ ದಿ.ವಿಷ್ಣುವರ್ಧನ್ ದ್ಮಾರಕ ನಿರ್ಮಾಣ ಸಂಬಂಧ ಇನ್ನೊಂದು ವಾರದಲ್ಲಿ ಸಭೆ ಕರೆಯುವುದಾಗಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಭಾರತಿ ವಿಷ್ಣುವರ್ಧನ್ ಗೆ ಅಭಯ ನೀಡಿದ್ದಾರೆ.

ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಹಾಗೂ ನಟ ಅನಿರುದ್ಧ್ ಇಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಿದರು. ಜೆ.ಪಿ.ನಗರ ಸಿಎಂ ನಿವಾಸದಲ್ಲಿ ಭೇಟಿ ನೀಡಿ ಶುಭ ಕೋರಿದರು. ನಂತರ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಸಂಬಂಧ ಕೆಲಕಾಲ ಸಿಎಂ ಜೊತೆ ಚರ್ಚಿಸಿದರು.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಮನವಿ ಮಾಡಿದರು.ಮನವಿಗೆ ಸ್ಪಂಧಿಸಿದ ಸಿಎಂ ಒಂದು ವಾರದಲ್ಲಿ ಸಭೆ ಕರೆದು ಈ ಕುರಿತು ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಸಿಎಂ ಭೇಟಿ ಬಳಿಕ ಮಾತನಾಡಿದ ಭಾರತಿ ವಿಷ್ಣುವರ್ಧನ್,ನೂತನ ಸಿಎಂ ಕುಮಾರಸ್ವಾಮಿ ಅವರಿಗೆ ಶುಭ ಕೋರಲು ಬಂದಿದ್ದೆವು, ವಿಷ್ಣು ಸ್ಮಾರಕ ವಿಷಯವನ್ನೂ ಪ್ರಸ್ತಾಪಿಸಿದೆವು,ಡಾ. ವಿಷ್ಣುವರ್ಧನ್ ಸ್ಮಾರಕ ಕುರಿತು ಒಂದು ವಾರದಲ್ಲಿ ಸಭೆ ಕರೆಯುತ್ತೇನೆ,ಆ ಸಭೆಯಲ್ಲಿ ಸ್ಮಾರಕದ ಬಗ್ಗೆ ಚರ್ಚೆ ಮಾಡೋಣ ಎಂದು ತಿಳಿಸಿದ್ದಾರೆ ಎಂದರು.

ಜಯನಗರ ಚುನಾವಣೆ: ಕಣದಿಂದ ಅಭ್ಯರ್ಥಿ ಹಿಂಪಡೆದ ಜೆಡಿಎಸ್!

 

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಚುನಾವಣೆಯಲ್ಲಿ ವಿಫಲವಾಗಿದ್ದ ಮೈತ್ರಿ ಸರ್ಕಾರ ಮೈತ್ರಿ ಜಯನಗರ ಕ್ಷೇತ್ರದಲ್ಲಿ ಯಶಸ್ವಿಯಾಗಿದೆ.ಜೆಡಿಎಸ್ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿದ್ದು ಒಮ್ಮತದ ಅಭ್ಯರ್ಥಿಯಾಗಿ ಮಾಜಿ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾರೆಡ್ಡಿ ಕಣದಲ್ಲಿ ಉಳಿದಿದ್ದು ಬಿಜೆಪಿ ಕ್ಷೇತ್ರವನ್ನು ಕೈ ತೆಕ್ಕೆಗೆ ಪಡೆಯಲು ಸಿದ್ದತೆ ನಡೆಸಿದ್ದಾರೆ.

ಜೂನ್ 11 ರಂದು ನಡೆಯಲಿರುವ ಜಯನಗರ ವಿಧಾನಸಭೆ ಚುನಾವಣಾ ಕಣದಿಂದ ಜೆಡಿಎಸ್ ಅಭ್ಯರ್ಥಿ ಕಾಳೇಗೌಡ ಜೆಡಿಎಸ್ ವರಿಷ್ಠ ದೇವೇಗೌಡರ ಸೂಚನೆ‌ ಮೇರೆಗೆ ಹಿಂದೆ ಸರಿದಿದ್ದಾರೆ.ಮೈತ್ರಿ ಸರ್ಕಾರಕ್ಕೆ ಪೂರಕವಾಗಿ ಜೆಡಿಎಸ್ ಅಭ್ಯರ್ಥಿ ಹಿಂಪಡೆದಿದ್ದು,ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸುವಂತೆ ಪಕ್ಷದ ಕಾರ್ಯಕರ್ಯರು, ಮುಖಂಡರಿಗೆ ದೇವೇಗೌಡ ಸೂಚನೆ ನೀಡಿದ್ದಾರೆ.

ಇದಕ್ಕೂ ಮುನ್ನ ದೇವೇಗೌಡರ ನಿವಾಸಕ್ಕೆ ರಾಮಲಿಂಗಾರೆಡ್ಡಿ ಭೇಟಿ ನೀಡಿದರು.ರಾಮಲಿಂಗಾರೆಡ್ಡಿಗೆ ಕುಪ್ಪೇಂದ್ರ ರೆಡ್ಡಿ, ಸಿ.ಎಸ್ ಪುಟ್ಟರಾಜು ಸಾತ್ ನೀಡಿದರು.‌ಮೈತ್ರಿ ಸರ್ಕಾರದ ಪರವಾಗಿ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿ ಜೆಡಿಎಡ್ ಅಭ್ಯರ್ಥಿ ಕಣದಿಂದ ಹಿಂದಕ್ಕೆ ಪಡೆಯುವಂತೆ ಮನವಿ ಮಾಡಿದರು. ನಮ್ಮ ಸ್ಪರ್ಧೆ ಬಿಜೆಪಿಗೆ ಅನುಕೂಲವಾಗಲಿದೆ ಹಾಗಾಗಿ ಮುಂದಿನ ರಾಜಕೀಯ ದೃಷ್ಠಿಯನ್ನಿಟ್ಟುಕೊಂಡು ಪರಸ್ಪರ ಸಹಕಾರ ಮಾಡಿಕೊಂಡು ಹೋಗೋಣ ಎಂದು ರಾಮನಗರದಲ್ಲಿ ಒಮ್ಮತದ ಅಭ್ಯರ್ಥಿಯಾಗಿ ಜೆಡಿಎಸ್ ಬೆಂಬಲಿಸುವ ಪರೋಕ್ಷ ಸುಳಿವು ನೀಡಿದರು. ಇದಕ್ಕೆ ಸ್ಪಂಧಿಸಿದ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಪಕ್ಷದ ಅಭ್ಯರ್ಥಿಯನ್ನು ಕಣದಿಂದ ಹಿಂದಕ್ಕೆ ಪಡೆಯುವಂತೆ ಸೂಚನೆ ನೀಡಿದರು.

ದೇವೇಗೌಡರ ಭೇಟಿ ಬಳಿಕ ಮಾತನಾಡಿದ ರಾಮಲಿಂಗಾರೆಡ್ಡಿ,
ಬಿಬಿಎಂಪಿ ಮೈತ್ರಿ ಹಿನ್ನಲೆ ಅನೇಕ ಬಾರಿ ದೇವೇಗೌಡರ ಭೇಟಿ ಮಾಡಿದ್ದೆ.ಆದರೆ ಚುನಾವಣೆಯಲ್ಲಿ ಗೆದ್ದ ನಂತರ ಬಂದಿರಲಿಲ್ಲ. ಈಗ ಬಂದಿದ್ದೇನೆ ಅಷ್ಟೆ. ಜಯನಗರ ಚುನಾವಣೆ ಸಂಬಂಧವೂ ಮಾತನಾಡಲು ಬಂದಿಲ್ಲ.ಯಾವುದೇ ಹೊಂದಾಣಿಕೆ ಬಗ್ಗೆ ಚರ್ಚೆ ಆಗಿಲ್ಲ ಎಂದರು.

ಜೆಡಿಎಸ್ ಅಭ್ಯರ್ಥಿ ನಾಮಪತ್ರ ಹಾಕಿದ್ದಾರೆ. ನಾವೂ ಹಾಕಿದ್ದೇವೆ. ಚುನಾವಣೆ ನಡೆಯುತ್ತದೆ ಅಷ್ಟೆ ಎನ್ನುವ ಮೂಲಕ ಪರೋಕ್ಷವಾಗಿ ಜೆಡಿಎಸ್ ಬೆಂಬಲ ನೀಡಿದೆ ಎನ್ನುವ ಸುಳಿವು ನೀಡಿದರು.

ಹಿರಿಯ ಸಚಿವರಿಗೆ ಸ್ಥಾನ ಇಲ್ಲ ಅನ್ನೋ ವಿಚಾರಕ್ಕೆ ದೇವೆಡಗೌಡರ ಭೇಟಿಯಾದ್ರ ಅನ್ನೋ ಪ್ರಶ್ನೆ ಪ್ರತಿಕ್ರಿಯೆ ನೀಡಿದ ಅವರು,ನಾನು ಸಚಿವ ಸ್ಥಾನ ಬೇಕು ಅಂತಾನೇ ಕೇಳಿಲ್ಲ. ಇನ್ನು ಯಾವ ಖಾತೆ ಬೇಕು ಅಂತ ಕೇಳ್ತೀನಾ ಎಂದರು.

ಅಸಮಧಾನವಿದ್ದರೂ ಅಭ್ಯರ್ಥಿ ಗೆಲುವಿಗ ಶ್ರಮಿಸುತ್ತೇವೆ: ಮಾಜಿ ಮೇಯರ್ ನಟರಾಜ್!

ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಅಸಮಧಾನ ಇರವುದು ನಜವಾದರೂ ಒಕ್ಷದ ಅಭ್ಯರ್ಥಿ ಗೆಲುವಿಗೆ ಬಿಬಿಎಂಪಿ ಸದಸ್ಯರೆಲ್ಲಾ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಮಾಜಿ ಮೇಯರ್ ಎಸ್.ಕೆ.ನಟರಾಜ್ ಹೇಳಿದ್ದಾರೆ.

ಜಯನಗರದ ಪೈ ವಿಸ್ತ ಕನ್ವೆನ್ಷನ್ ಹಾಕ್ ನಲ್ಲಿ ಪಾಲಿಕೆಯ ಬಿಜೆಪಿ ಸದಸ್ಯರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ದಿ.ವಿಜಯ್ ಕುಮಾರ್ ಅವರ ಸೇವೆಯನ್ನು ಸ್ಮರಿಸಿ ಅವರಿಗೆ ಬೆಲೆ ಕೊಟ್ಟು ಈ ಬಾರಿ ಬಿಜೆಪಿ ಗೆಲುವಿಗೆ ಶ್ರಮಿಸುತ್ತೇವೆ,ನಾವೆಲ್ಲಾ ಒಗ್ಗಟ್ಟಾಗಿದ್ದೇವೆ. ಈ ಸಾರಿ ಕನಿಷ್ಠ 25 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಬಾಬು ಅವರನ್ನು ಗೆಲ್ಲಿಸಿಕೊಂಡು ವಿಜಯ್ ಕುಮಾರ್ ಗೆ ಶ್ರದ್ಧಾಂಜಲಿ ಸಲ್ಲಿಸುತ್ತೇವೆ ಎಂದರು.

ಇಂದು ನಮ್ಮ ಗೆಲುವಿನ ಸಾಧ್ಯತೆ ಹೆಚ್ಚಿರುವುದರಿಂದ ಉಳಿದ ಪಕ್ಷದವರು ಹತಾಶೆಗೊಂಡಿದ್ದಾರೆ. ಇದರಿಂದ ಏನು ಮಾಡಬೇಕೆಂದು ತಿಳಿಯದೇ ಅನಗತ್ಯ ಆರೋಪ ಮಾಡುತ್ತಿದ್ದಾರೆ. ನಾವೆಲ್ಲಾ ಒಂದಾಗಿದ್ದೇವೆ. ಬೇರೆಯೆನ್ನುವ ಪ್ರಶ್ನೆ ಇಲ್ಲ. ಎಲ್ಲರೂ ಒಂದಾಗಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುತ್ತೇವೆ ಎಂದು ಪಾಲಿಕೆ ಸದಸ್ಯರಲ್ಲಿ ಭಿನ್ನಮತವಿದೆ ಎನ್ನುವ ಆರೋಪವನ್ನು ತಳ್ಳಿಹಾಕಿದರು.

ಪಕ್ಷ ನಮಗೆ ತಾಯಿ ಸಮಾನ. ಪಕ್ಷದ ಉಳಿವಿಗಾಗಿ ಶ್ರಮಿಸುತ್ತೇವೆ. ನಮ್ಮದು ಸಾಂಗಿಕ ಹೋರಾಟ. ಪಕ್ಷಕ್ಕೆ ನಾವು ದ್ರೋಹ ಮಾಡುತ್ತೇವೆ ಎನ್ನುವ ಮಾತು ಸರಿಯಲ್ಲ. ಮಾಧ್ಯಮ ಹಾಗೂ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತಿಗೆ ಯಾರೂ ಬೆಲೆಕೊಡಬೇಡಿ ಎಂದು ಮನವಿ ಮಾಡಿದರು.

ನಮ್ಮೊಂದಿಗೆ ಇಂದು ಕಾರ್ಪೊರೇಟರ್ ನಾಗರಾಜ್ ಅವರು ಮಾತ್ರ ಇಲ್ಲ. ಆದರೆ ಅವರು ಪಕ್ಷದಲ್ಲಿದ್ದೇನೆ ಎಂದು ಹೇಳಿದ್ದಾರೆ. ಅವರು ಅದನ್ನು ಅವರೇ ಸ್ಪಷ್ಟಪಡಿಸಬೇಕು,ಈ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡಲ್ಲ ಎಂದರು.

ಲಿಂಗಾಯತ ಕೋಟಾದಡಿ ಪಂಚಮಸಾಲಿ ಸಮುದಾಯಕ್ಕೆ ಸಂಪುಟದಲ್ಲಿ ಆದ್ಯತೆ ನೀಡಿ: ಪಂಚಮಸಾಲಿ ಶ್ರೀ

ಬೆಂಗಳೂರು: ನಾಳೆ ನಡೆಯಲಿರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಲಿಂಗಾಯತ ಸಮುದಾಯದ ಕೋಟಾದಡಿ ಹಂಚಿಕೆಯಾಗುವ ಸಚಿವ ಸ್ಥಾನಗಳಲ್ಲಿ ಹೆಚ್ಚಿನ ಆಧ್ಯತೆಯನ್ನು ಪಂಚಮಸಾಲಿ ಸಮುದಾಯಕ್ಕೆ ನೀಡಬೇಕು ಎಂದು ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯಂಜಯ ಸ್ವಾಮೀಜಿ ಒತ್ತಾಯಿಸಿದ್ದಾರೆ.

ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ನಿಂದ 16, ಜೆಡಿಎಸ್ ನಿಂದ 4 , ಒಟ್ಟು 20 ಲಿಂಗಾಯತ ಶಾಸಕರು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಇವರಲ್ಲಿ ನಮ್ಮ ಸಮುದಾಯದ ಶಿವಾನಂದ ಪಾಟೀಲ್, ಎಂ.ವೈ ಪಾಟೀಲ್, ಗಣೇಶ್ ಹುಕ್ಕೇರಿ, ಲಕ್ಷ್ಮೀ ಹೆಬ್ಬಾಳ್ಕರ್ ಹಾಗು ಮಹೇಶ್ ಕುಮಠಳ್ಳಿ ಕಾಂಗ್ರೆಸ್ ನಿಂದ ಹಾಗು ಎಂ.ಸಿ ಮನಗುಳಿ ಜೆಡಿಎಸ್ ನಿಂದ ಆಯ್ಕೆಯಾಗಿದ್ದು, ಸಂಪುಟ ವಿಸ್ತರಣೆಯಲ್ಲಿ ಲಿಂಗಾಯತ ಸಮುದಾಯಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು, ಲಿಂಗಾಯತ ಕೋಟಾದಲ್ಲಿ ನೀಡುವ ಸಚಿವ ಸ್ಥಾನಗಳಲ್ಲಿ‌ ಬಹು ಸಂಖ್ಯಾತ ಪಂಚಮಸಾಲಿ ಸಮುದಾಯಕ್ಕೆ ಆಧ್ಯತೆ ನೀಡಬೇಕು ಎಂದರು.

ಈಗಾಗಲೇ ಪರಮೇಶ್ವರ್ ಹಾಗು ದೇವೇಗೌಡರ ಜೊತೆ ಈ ಸಂಬಂಧ ಮಾತುಕತೆ ನಡೆಸಿದ್ದು ಅವರು ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ. ನಮ್ಮ ಸಮುದಾಯಕ್ಕೆ ಆಧ್ಯತೆ ನೀಡಲಿದ್ದಾರೆ ಎನ್ನುವ ವಿಶ್ವಾಸವಿದೆ,ಈ ಹಿಂದೆಯೂ ಯಡಿಯೂರಪ್ಪ ಸರ್ಕಾರ,ಧರಂ ಸಿಂಗ್ ಸತ್ಕಾರ,ಕುಮಾರಸ್ವಾಮಿ ಸರ್ಕಾರ, ಜೆ.ಹೆಚ್.ಪಟೇಲ್ ಸರ್ಕಾರ,ಸಿದ್ದರಾಮಯ್ಯ ಸರ್ಕಾರದಲ್ಲಿಯೂ ನಮ್ಮ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡಿದ್ದರು.ಅದರಂತೆ ಈ ಬಾರಿಯೂ ನೀಡುವ ವಿಶ್ವಾಸವಿದೆ ಎಂದರು.

ಮಠಾಧೀಶರು ರಾಜಕಾರಣ ಮಾಡಬಾರದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದರಲ್ಲಿ ತಪ್ಪೇನಿಲ್ಲ,ಮಠಾಧೀಶರು ರಾಜಕಾರಣ ಮಾಡಬಾರದು,ಆದರೆ ಸಚಿವ ಸ್ಥಾನ ನೀಡಿ ಎಂದು ನಾವು ರಾಜಕೀಯ ಮಾಡುತ್ತಿಲ್ಲ, ಸಮುದಾಯದ ಗುರುಗಳಾಗಿ ಸಮುದಾಯದ ಏಳಿಗೆಗೆ ಸಚುವ ಸ್ಥಾನ ನೀಡಿ ಎಂದು ಸಲಹೆ ನೀಡುತ್ತಿದ್ದೇವೆ,ಇದರಿಂದ ಆ ಪಕ್ಷಗಳಿಗೂ ಲಾಭವಾಗಲಿದೆ ಎಂದರು.

ಬಡ ಮಹಿಳೆಯರಿಗಾಗಿ ಅಗ್ಗದ ಸ್ಯಾನಿಟರಿ ನ್ಯಾಪ್ ಕಿನ್ ಬಿಡುಗಡೆ!

ಬೆಂಗಳೂರು: ದೇಶದ ಶೇ.42 ರಷ್ಟು ಬಡ ಮಹಿಳೆಯರು ದುಬಾರಿ ದರ ಎನ್ನುವ ಕಾರಣಕ್ಕೆ ಉತ್ತಮ ಸ್ಯಾನಿಟರಿ ನ್ಯಾಪ್ ಕಿನ್ ಬಳಕೆ ಮಾಡುತ್ತಿಲ್ಲ. ಅಂತಹವರನ್ನು ಉದ್ದೇಶವಾಗಿಟ್ಟುಕೊಂಡು ಕಡಿಮೆ ದರದ ಉತ್ತಮ ಗುಣಮಟ್ಟದ ಸ್ಯಾನಿಟರಿ ನ್ಯಾಪ್ ಕಿನ್ ಗಳನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.

ದೇಶದ ಮೊದಲ ಬಯೋ ಡಿಗ್ರೇಡಬಲ್‌ ಸ್ಯಾನಿಟರಿ ನ್ಯಾಪ್ ಕಿನ್ ಅನ್ನು ಬಿಡುಗಡೆ ಮಾಡಲಾಯಿತು.‌ ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನ ಯೋಜನೆಯಡಿ ಜನೌಷಧಿ ಸುವಿಧಾ ಸ್ಯಾನಿಟರಿ ನ್ಯಾಪ್ ಕಿನ್ ಅನ್ನು ಕೇಂದ್ರ ಸಚಿವ ಅನಂತ್ ಕುಮಾರ್ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಅವರು, ದೇಶದ ಶೇ.58‌ರಷ್ಟು‌ ಹೆಣ್ಣು ಮಕ್ಕಳು ಮಾತ್ರ ಉತ್ತಮ ಸ್ಯಾನಿಟರಿ ನ್ಯಾಪ್ ಕಿನ್ ಬಳಸುತ್ತಿದ್ದಾರೆ, ಮುಂಬೈ,ದೆಹಲಿ ಸೇರಿದಂತೆ
ಮಹಾನಗರಗಳಲ್ಲಿ ಶೇ.72 ಉತ್ತಮ ಗುಣಮಟ್ಟದ ನ್ಯಾಪ್ ಕಿನ್ ಬಳಕೆ ಮಾಡುತ್ತಿದ್ದಾರೆ ಎಂದು ರಾಷ್ಟೀಯ ಕುಟುಂಬ ಸರ್ವೆ ವರದಿ‌ ಹೇಳಿದೆ,ಬಾಕಿ ಶೇ.42 ಮಹಿಳೆಯರು ಆರ್ಥಿಕ ದುರ್ಬಲತೆ, ಬಡತನದಿಂದ ಈ ಸೌಲಭ್ಯದಿಂದ‌ ವಂಚಿತರಾಗಿದ್ದಾರೆ, ಪರಿಣಾಮ ಸ್ವಾಸ್ಥ್ಯ, ಸ್ವಚ್ಚತೆ, ಸುವಿಧಾ ಸಮಸ್ಯೆ ಎದುರಾಗುತ್ತಿತ್ತು. ಹಾಗಾಗಿ ನಾವು ಸುವಿಧಾ ಹೆಸರಿನಲ್ಲಿಯೇ ನ್ಯಾಪ್ ಕಿನ್ ಬಿಡುಗಡೆ ಮಾಡಿದ್ದೇವೆ ಎಂದರು.

ಕಟ್ಟಡ ಕಾರ್ಮಿಕರು, ಸಫಾಯಿ ಕರ್ಮಚಾರಿಗಳು, ಗಾರ್ಮೆಂಟ್ಸ್ ನೌಕರರು, ಕೂಲಿ ಕಾರ್ಮಿಕರಿಗೆ ಇದು ಸಿಗುತ್ತಿಲ್ಲ,ದುಬಾರಿ ದರ ಕಾರಣ, ಹಾಗಾಗಿ ನಾವು ಕಡಿಮೆ ದರಕ್ಕೆ ಈ ನ್ಯಾಪ್ ಕಿನ್ ಬಿಡುಗಡೆ ಮಾಡಿದ್ದೇವೆ ಎಂದರು.

ಸದ್ಯ ದೇಶದ ಮಾರುಕಟ್ಟೆಯಲ್ಲಿರುವ ಗುಣಮಟ್ಟದ ಸ್ಯಾನಿಟರಿ ನ್ಯಾಪ್‌ಕಿನ್ ಬೆಲೆ 38 ರೂ. ಇದೆ, ಪ್ರತಿ ನ್ಯಾಪ್ ಕಿನ್ ಗೆ 10 ರೂಪಾಯಿ ಆಗಲಿದೆ. ಅಲ್ಲದೇ ಬಯೋ ಡಿಗ್ರೇಡಬಲ್ ನ್ಯಾಪ್ ಕಿನ್ ಯಾವುದೂ ಇಲ್ಲ, ಹಾಗಾಗಿ ನಾವು ದೇಶದಲ್ಲೇ ಮೊದಲ ಬಯೋ ಡಿಗ್ರೆಡಬಲ್ ಸ್ಯಾನಿಟರಿ ನ್ಯಾಪ್ ಕಿನ್ ಅನ್ನು ಇಂದು ಬಿಡುಗಡೆ ಮಾಡಿದ್ದೇವೆ.ಕೇವಲ 10 ರೂ.ಗೆ ನಾಲ್ಕು ನ್ಯಾಪ್ ಕಿನ್ ಸಿಗಲಿದೆ,ಡಬ್ಲ್ಯಹೆಚ್ಒಜಿಎಂಪಿಗೆ ಅನುಸಾರವಾಗಿ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗಿದೆ ಎಂದರು.

ನಮ್ಮ‌ದೇಶದಲ್ಲಿ ಪ್ರತಿ ವರ್ಷ 1.13 ಲಕ್ಷ ಟನ್ 12.3 ಬಿಲಿಯನ್ ನ್ಯಾಪ್ ಕಿನ್ ಬಳಕೆ ಮಾಡಲಾಗುತ್ತಿದೆ ಇದು 500 ವರ್ಷ ಆದರೂ ಡಿ ಕಂಪೋಸ್ ಆಗಲ್ಲ, ಹಾಗಾಗಿ ನಾವು ಹೊಸ
ಆಕ್ಸೋ ಬಯೋ ಡಿಗ್ರೆಡಬಲ್ ತಂತ್ರಜ್ಞಾನದಿಂದ ನ್ಯಾಪ್ ಕಿನ್ ತಯಾರಿ ಮಾಡಿದ್ದೇವೆ, ಇದು ಕೇವಲ 3-6 ತಿಂಗಳಿನಲ್ಲಿ ಬಯೋ ಡಿಗ್ರೆಡಬಲ್ ಆಗಲಿದೆ ಎಂದರು.

ಜುಲೈ 19 ರೊಳಗಿನ ದೇಶಾದ್ಯಂತ ಎಲ್ಲಾ ಮೂಲೆ ಮೂಲೆಗಳಲ್ಲಿಯೂ ಈ ಸುವಿಧಾ ನ್ಯಾಪ್ ಕಿನ್ ಲಭ್ಯವಾಗಲಿದೆ ಎನ್ನುವ ಭರವಸೆ ನಮ್ಮ ಅಧಿಕಾರಿಗಳಿಂದ‌ ಸಿಕ್ಕಿದೆ. ಈಗಾಗಲೇ ನ್ಯಾಪ್ ಕಿನ್ ಮಾರುಕಟ್ಟೆಯಲ್ಲಿದೆ, ಆದರೆ ಎಲ್ಲಾ ಕಡೆ ಲಭ್ಯವಾಗಬೇಕು ಎನ್ನುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.