ಸ್ವರ ಮಾಂತ್ರಿಕನಿಗೆ 72ನೇ ಹುಟ್ಟುಹಬ್ಬದ ಸಂಭ್ರಮ

ಸ್ವರ ಬ್ರಹ್ಮ ಎಸ್.ಪಿ. ಬಾಲಸುಬ್ರಮಣ್ಯಂಗೆ ಇಂದು 72 ನೇ ಹುಟ್ಟು ಹಬ್ಬದ ಸಂಭ್ರಮ. 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಗಾನ ಕೋಗಿಲೆಗೆ ಇಂದು ಅಭಿಮಾನಿಗಳೂ ತುಂಬು ಹೃದಯದಿಂದ ಶುಭ ಹಾರೈಸಿದ್ದಾರೆ.

1946ರ ಜೂನ್ 4 ರಂದು ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಜನ್ಮ ತಾಳಿದ ಎಸ್‍ಪಿಬಿ, ಬಾಲ್ಯದಿಂದಲೇ ಸಂಗೀತ ಲೋಕಕ್ಕೆ ತನ್ನನ್ನು ತಾನು ಅರ್ಪಿಸಿಕೊಂಡವರು. ಓದಿದ್ದು ಇಂಜಿನಿಯರಿಂಗ್. ಆದ್ರೂ ಬದುಕು ಕಟ್ಟಿಕೊಂಡಿದ್ದು ಮಾತ್ರ ಸಂಗೀತ ಕ್ಷೇತ್ರದಲ್ಲಿ. ಶಾಲಾ ಕಾಲೇಜು ದಿನಗಳಿಂದಲೇ ಸಂಗೀತ ಸ್ಪರ್ಧೆಗಳಲ್ಲಿ ಹಾಡಿ ಗಮನ ಸೆಳೆದಿದ್ದ ಎಸ್‍ಪಿಬಿ 1964ರಲ್ಲಿ ಮೊದಲ ಬಾರಿಗೆ ತಮ್ಮ ಹಾಡಿಗೆ ಪ್ರಶಸ್ತಿ ಪಡೆದುಕೊಂಡರು. ಆ ನಂತರ ಅವರು ಹಿಂತಿರುಗಿ ನೋಡಲೇ ಇಲ್ಲ.

ಆರು ರಾಷ್ಟ್ರೀಯ ಪ್ರಶಸ್ತಿ: ಎಸ್‌ಪಿಬಿ 16 ಭಾಷೆಗಳ ಜನರಿಗೆ ತಮ್ಮ ಸ್ವರ ಮಾಧುರ್ಯವನ್ನು ನೀಡಿದ್ದಾರೆ. ಅದರಲ್ಲೂ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳ ಹಾಡಿಗೆ ಆರು ಬಾರಿ ರಾಷ್ಟ್ರೀಯ ಪ್ರಶಸ್ತಿ ಕೂಡ ಪಡೆದುಕೊಂಡಿದ್ದಾರೆ. ಇನ್ನು ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕದ ಪ್ರತಿಷ್ಠಿತ ಪ್ರಶಸ್ತಿಗಳು ಎಸ್‍ಪಿಬಿ ಅವರ ಮುಡಿಗೇರಿವೆ. ಅಷ್ಟೇ ಅಲ್ಲ, ಬಾಲಿವುಡ್ ಫಿಲ್ಮ್‌ಫೇರ್ ಪ್ರಶಸ್ತಿ ಸೇರಿದಂತೆ ದಕ್ಷಿಣ ಭಾರತದ ಒಟ್ಟು ಆರು ಫಿಲ್ಮ್ ಫೇರ್ ಪ್ರಶಸ್ತಿಗಳು ಎಸ್‌ಪಿಬಿ ಪಾಲಾಗಿವೆ.

ಎಸ್.ಪಿ. ಬಾಲಸುಬ್ರಮಣ್ಯಂ ಅವರ ಸಾಧನೆಯನ್ನು ಪರಿಗಣಿಸಿದ ಭಾರತ ಸರ್ಕಾರ 2001ರಲ್ಲಿ ಪದ್ಮಶ್ರೀ ಹಾಗೂ 2011ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

1966ರಲ್ಲಿ ಶ್ರೀ ಶ್ರೀ ಶ್ರೀ ಮರ್ಯಾದ ರಾಮಣ್ಣ ಚಿತ್ರದ ಹಾಡಿನ ಮೂಲಕ ಸಿನಿ ಲೋಕಕ್ಕೆ ಎಂಟ್ರಿ ಪಡೆದ ಎಸ್‍ಪಿಬಿ ಅಲ್ಪ ಕಾಲದಲ್ಲೇ ಜನಪ್ರಿಯ ಹಾಡುಗಾರನಾಗಿ ಹೊರಹೊಮ್ಮಿದ್ದರು. ತೆಲುಗು, ತಮಿಳು ಚಿತ್ರರಂಗದಲ್ಲಿ ತನ್ನ ಕಂಠದಿಂದ ಸಂಗೀತ ಪ್ರೇಮಿಗಳ ಮನ ಸೆಳೆದರು. ಅದ್ರಲ್ಲೂ ಇಳೆಯರಾಜ ಕಾಂಬಿಷೇನ್‍ನಲ್ಲಿ ಎಸ್‍ಪಿಬಿ ಯಶಸ್ಸಿನ ಉತ್ತುಂಗಕ್ಕೇರಿದರು. ದಕ್ಷಿಣ ಭಾರತದ ಘಟಾನುಘಟಿ ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದ ಎಸ್‌ಪಿಬಿ ಕನ್ನಡ ಚಿತ್ರರಂಗದಲ್ಲೂ ಹೆಸರುವಾಸಿಯಾದರು. ಹಂಸಲೇಖಾ ಅವರ ಜೊತೆ ಪ್ರೇಮಲೋಕ ಚಿತ್ರದ ಹಾಡಿನ ಮೂಲಕ ಕನ್ನಡ ಸಿನಿ ರಸಿಕರ ಮನಸ್ಸನ್ನು ಕದ್ದುಬಿಟ್ಟರು. ಇನ್ನು ಬಾಲಿವುಡ್‍ನಲ್ಲಿ ಮೈನೆ ಪ್ಯಾರ್ ಕಿಯಾ ಚಿತ್ರದ ಹಾಡಿಗೂ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಪಡೆದರು.

ಹಾಗಂತ ಎಸ್‍ಪಿಬಿ ಕೇವಲ ಗಾಯನದಲ್ಲಿ ಮಾತ್ರ ಹೆಸರು ಮಾಡಿಲ್ಲ. ಜೊತೆಗೆ ಕೆಲವು ಚಿತ್ರಗಳಲ್ಲಿ ನಟನೆ ಮಾಡಿ ಕೂಡ ಗಮನ ಸೆಳೆದಿದ್ದರು. ಎದೆ ತುಂಬಿ ಹಾಡುವೆನು ಎಂಬ ಕನ್ನಡ ಖಾಸಗಿ ಚಾನೆಲ್‍ನ ಜನಪ್ರಿಯ ಕಾರ್ಯಕ್ರಮದ ಮೂಲಕ ಅನೇಕ ಯುವ ಹಾಡುಗಾರರಿಗೂ ದಾರಿ ದೀಪವಾದರು.

ಅಚ್ಚರಿ ಅಂದ್ರೆ ಕನ್ನಡದಲ್ಲಿ ವಿಷ್ಣು ವರ್ಧನ್ ಚಿತ್ರದ ಬಹುತೇಕ ಹಾಡುಗಳಿಗೆ ಸ್ವರ ನೀಡಿದ್ದರು. ಮತ್ತೊಂದೆಡೆ, ದೇಶ ವಿದೇಶಗಳಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿರುವ ಎಸ್‍ಪಿಬಿ ಗಿನ್ನೇಸ್ ದಾಖಲೆ ಕೂಡ ಬರೆದಿದ್ದಾರೆ. ಒಟ್ಟಿನಲ್ಲಿ 72ರ ಹರೆಯದಲ್ಲೂ ಸಂಗೀತವನ್ನೇ ಉಸಿರು ಅಂತ ಆರಾಧಿಸುತ್ತಾ ಬಂದಿರುವ ಎಸ್‍ಪಿಬಿಗೆ ನಮ್ಮ ಕಡೆಯಿಂದಲೂ ಹುಟ್ಟು ಹಬ್ಬದ ಶುಭಾಶಯ.

ಕಾಲ ಚಿತ್ರ ಬಿಡುಗಡೆ ವಿವಾದ ಹೈ ಅಂಗಳಕ್ಕೆ: ಭದ್ರತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ ಚಿತ್ರತಂಡ!

ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ತಮಿಳಿನ ‘ಕಾಲ’ ಚಿತ್ರ ಬಿಡುಗಡೆಗೆ ರಾಜ್ಯದಲ್ಲಿ ಕೆಲ ಕನ್ನಡ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಚಿತ್ರ ಬಿಡುಗಡೆಗೆ ಸೂಕ್ತ ಭದ್ರತೆ ಒದಗಿಸಲು ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಕೋರಿ ಚಿತ್ರ ತಂಡ ಹೈಕೋರ್ಟ್ ಮೆಟ್ಟಿಲೇರಿದೆ.

ಚಿತ್ರ ನಿರ್ಮಾಣ ಸಂಸ್ಥೆಯಾದ ವೆಂಡರ್‌ಬರ್ ಫಿಲಂ ಪ್ರೈವೆಟ್ ಲಿಮಿಟೆಡ್ ಮತ್ತು ನಿರ್ಮಾಪಕರಾದ ರಜನಿಕಾಂತ್ ಪುತ್ರಿ ಐಶ್ವರ್ಯ ಹಾಗೂ ಅಳಿಯ ಧನುಷ್ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದು, ಅರ್ಜಿಯಲ್ಲಿ ರಾಜ್ಯ ಸರ್ಕಾರ, ಗೃಹ ಇಲಾಖೆ, ಡಿಜಿ-ಐಜಿ, ಬೆಂಗಳೂರು ಪೊಲೀಸ್ ಆಯುಕ್ತರು, ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಟ್, ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ.
ಸೋಮವಾರ ನ್ಯಾಯಮೂರ್ತಿ ಜಿ. ನರೇಂದರ್ ಅವರ ಪೀಠದ ಮುಂದೆ ಹಾಜರಾದ ಅರ್ಜಿದಾರರ ಪರ ವಕೀಲರು, ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕೆಂದು ಕೋರಿದ್ದರು. ಇದರಿಂದ ನ್ಯಾಯಮೂರ್ತಿಗಳು ಅರ್ಜಿಯನ್ನು ಮಂಗಳವಾರ ವಿಚಾರಣೆಗೆ ನಿಗದಪಡಿಸಲು ಕೋರ್ಟ್ ಅಧಿಕಾರಿಗೆ ಸೂಚಿಸಿದರು.

ಅರ್ಜಿಯಲ್ಲೇನಿದೆ?
‘ಕಾಲ’ ಚಿತ್ರ ನಿರ್ಮಾಣಕ್ಕೆ ಈವರೆಗೆ ಒಟ್ಟು 140 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಕರ್ನಾಟಕ ಸೇರಿ ಪ್ರಪಂಚದಾದ್ಯಂತ ಜೂನ್ 7ರಂದು ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಚಿತ್ರ ಪ್ರದರ್ಶಿಸುವುದರಿಂದ 15 ರಿಂದ 20 ಕೋಟಿ ರೂ ವರೆಗೆ ಆದಾಯ ನಿರೀಕ್ಷಿಸಲಾಗಿದೆ. ಆದರೆ, ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಕರ್ನಾಟಕ ಸರ್ಕಾರ ಪಾಲಿಸಬೇಕು ಎಂದು ರಜನಿಕಾಂತ್ ಮಾಧ್ಯಮದ ಮುಂದೆ ನೀಡಿದ್ದ ಹೇಳಿಕೆಯನ್ನು ಮುಂದಿಟ್ಟುಕೊಂಡು ಕರ್ನಾಟಕ ಚಲಚನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಅವರು ಮೇ 28 ರಂದು ಪತ್ರಿಕಾ ಹೇಳಿಕೆ ನೀಡಿ ಚಿತ್ರದ ಬಿಡುಗಡೆಗೆ ಅಥವಾ ವಿತರಣೆಗೆ ಅವಕಾಶ ಕಲ್ಪಿಸುವುದಿಲ್ಲ ಎಂದು ತಿಳಿಸಿದ್ದಾರೆ. ಇದರಿಂದ ನಮ್ಮ ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಂಡಂತಾಗುತ್ತದೆ ಎಂದು ಅರ್ಜಿಯಲ್ಲಿ ದೂರಲಾಗಿದೆ. ಕರ್ನಾಟಕದಲ್ಲಿ ಚಿತ್ರದ ಪ್ರಚಾರ ಹಾಗೂ ಬಿಡುಗಡೆಗೆ ಅಗತ್ಯ ಭದ್ರತೆ ನೀಡಲು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಹಿರಿಯ ನಾಗರಿಕರಿಗೆ ಪಿಂಚಣಿ ನೀಡುವ ಭರವಸೆಗೆ ಬದ್ಧ: ಸಿ ಎಂ ಘೋಷಣೆ

ಬೆಂಗಳೂರು: 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪಿಂಚಣಿ ನೀಡುವ ಭರವಸೆ ನೀಡಿದ್ದೆ. ಅದಕ್ಕೆ ನಾನು ಬದ್ಧನಾಗಿದ್ದು ಮುಂದಿನ ಬಜೆಟ್ ನಲ್ಲಿ ಜಾರಿಗೆ ತರುತ್ತೇನೆ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಘೋಷಿಸಿದರು.

ಹೆಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾದ ಸಂದರ್ಭದಲ್ಲಿ ಅವರು ಕಾಲೇಜು ಶಿಕ್ಷಣ ಪಡೆದ ನ್ಯಾಷನಲ್ ಕಾಲೇಜು ಆಡಳಿತ ಮಂಡಳಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.

ನಾನು ಎಂದೂ ಪೊಳ್ಳು ಭರವಸೆಗಳನ್ನು ನೀಡುವುದಿಲ್ಲ. ಚುನಾವಣೆಯ ವೇಳೆ ಹಿರಿಯ ನಾಗರಿಕರಿಗೆ ಪಿಂಚಣಿ ಯೋಜನೆ ಜಾರಿಗೆ ತರುತ್ತೇನೆ ಎಂದು ಆಶ್ವಾಸನೆ ಕೊಟ್ಟಿದ್ದು ನನ್ನ ಆಂತರಿಕ ಒತ್ತಾಯದಿಂದ. ಆಸ್ಪತ್ರೆಗಳು ಬಹಳ ಕೆಟ್ಟ ಪರಿಸ್ಥಿತಿಯಲ್ಲಿವೆ. ಹಾಗಾಗಿ ಒಂದು ಬಡ ಕುಟುಂಬ 10 ರಿಂದ 20 ಲಕ್ಷ ಹಣವನ್ನು ಆರೋಗ್ಯ ಕಾಪಾಡಿಕೊಳ್ಳಲು ಖರ್ಚು ಮಾಡುವ ಸ್ಥಿತಿಯಲ್ಲಿ ಇಲ್ಲ. ನಾನು ಮಾಡಿದ ಈ ಘೋಷಣೆಯನ್ನು ನಿಲ್ಲಿಸುವುದಿಲ್ಲ ಎಂದರು.

ಸರ್ಕಾರದ ಬೊಕ್ಕಸಕ್ಕೆ ಯಾವುದೇ ಧಕ್ಕೆ ಆಗದ ರೀತಿಯಲ್ಲಿ ರೈತರ ಸಾಲವನ್ನು ಮನ್ನಾ ಮಾಡಬೇಕಿದೆ. 2004ರಲ್ಲಿ ಆರ್ಥಿಕ ಶಿಸ್ತನ್ನು ತರುವ ಉದ್ಧೇಶದಿಂದ ಒಂದು ಕಾಯಿದೆಯನ್ನು ಜಾರಿಗೊಳಿಸಲಾಗಿದೆ. ಅದರ ಇತಿಮಿತಿಯಲ್ಲೆ ನಾನು ಕೆಲಸ ಮಾಡಬೇಕಿದೆ. ಸಾಲ ಮನ್ನಾದಂತಹ ವಿಷಯವನ್ನೂ ಈ ಪರಿಧಿಯಲ್ಲಿಯೇ ಜಾರಿಮಾಡಬೇಕಾದ ಅನಿವಾರ್ಯತೆ ಇದೆ ಎಂದರು.

ಸರ್ಕಾರಿ ಸಂಸ್ಥೆಗಳಲ್ಲಿ ನಡೆಯುವ ದುಂದುವೆಚ್ಚಕ್ಕೆ ಕಡಿವಾಣಹಾಕಲು ನಾನು ಬದ್ಧನಿದ್ದೇನೆ ಎಂದು ಘೋಷಿಸಿದ ಅವರು ನಾನು ಬಳಸುತ್ತಿರುವ ಸರ್ಕಾರಿ ಕಾರಿಗೆ ನನ್ನ ಸ್ವಂತ ದುಡ್ಡಿನಿಂದಲೇ ಇಂಧನವನ್ನು ಹಾಕಿಸಿಕೊಳ್ಳುತ್ತಿದ್ದೇನೆ. ಬದಲಾವಣೆ ತರಬೇಕಾದರೆ ತುಂಬಾ ಸಾಹಸ ಮಾಡಬೇಕಿದೆ. ನನ್ನ ರಾಜ್ಯದ ಜನತೆ ಕಟ್ಟುವ ತೆರಿಗೆ ಹಣವನ್ನು ದುಂದು ವೆಚ್ಚ ಮಾಡದೇ ಒಂದೊಂದು ಪೈಸೆಯೂ ಸದ್ಭಳಕೆ ಆಗಬೇಕು.

ಸಚಿವರುಗಳಿಗೆ ಹೊಸ ವಾಹನಗಳನ್ನು ಖರೀದಿ ಮಾಡಲಾಗಿದೆ ಎನ್ನುವ ವರದಿಯನ್ನು ಪ್ರಸ್ತಾಪಿಸಿದ ಅವರು ನಾನು ಕಾರು ಖರೀದಿಯನ್ನು ಮಾಡಬಾರದು ಎಂದು ಹೇಳಿದ ಮೇಲೂ ಹೊಸ ಕಾರನ್ನು ಯಾರು ಖರೀದಿ ಮಾಡಿದ್ದಾರೆ ಎಂದು ಪರಿಶೀಲಿಸಿದೆ. ಅದು ಕಳೆದ ಸರ್ಕಾರದಲ್ಲಿ ಖರೀದಿ ಮಾಡಿದ ಕಾರು ಎಂಬುದು ತಿಳಿದು ಬಂದಿದೆ ಎಂದರು.

ಕಾವೇರಿ ಪ್ರಾಧಿಕಾರಕ್ಕೆ ರಾಜ್ಯದ ಪ್ರತಿನಿಧಿಯಾಗಿ ರಾಕೇಶ್ ಸಿಂಗ್

ಬೆಂಗಳೂರು: ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ರಾಜ್ಯ ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್‌ರನ್ನು ಪ್ರತಿನಿಧಿಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ರಚಿಸಿ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದ್ದ ಕೇಂದ್ರ ಸರ್ಕಾರ ಕರ್ನಾಟಕ, ತಮಿಳುನಾಡು, ಕೇರಳ ಹಾಗು‌ ಪುದುಚೇರಿ ರಾಜ್ಯಗಳ ಪ್ರತಿನಿಧಿಗಳನ್ನು ನೇಮಿಸುವಂತೆ ಆಯಾ ರಾಜ್ಯಗಳಿಗೆ ಸೂಚನೆ ನೀಡಿತ್ತು. ಕೇಂದ್ರದ ಸೂಚನೆಯಂತೆ ರಾಜ್ಯ ಸರ್ಕಾರ ಇಂದು ತನ್ನ ಪ್ರತಿನಿಧಿಯನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

ಸದ್ಯ ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ರಾಕೇಶ್ ಸಿಂಗ್ ಅವರಿಗೆ ರಾಜ್ಯದ ಪ್ರತಿನಿಧಿಯಾಗಿ ಕೆಲಸ ಮಾಡುವ ಹೊಣೆಗಾರಿಕೆಯನ್ನು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ನೀಡಿದೆ.

ಜಯನಗರಕ್ಕಾಗಿ ಟೊಂಕಕಟ್ಟಿ ನಿಂತ ಬಿಜೆಪಿ!

ಬೆಂಗಳೂರು: ಸಾರ್ವತ್ರಿಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣೆ ಮುಂದೂಡಲ್ಪಟ್ಟಿದ್ದ ಬೆಂಗಳೂರಿನ ಎರಡೂ ಕ್ಷೇತ್ರಗಳ ಪೈಕಿ ಈಗಾಗಲೇ ಒಂದು ಕ್ಷೇತ್ರವನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಉಳಿದ ಒಂದು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯೇ ಈ ಹಿಂದೆ ಚುನಾಯಿತರಾಗಿದ್ದರು. ಹೇಗಾದರೂ ಈ ಕ್ಷೇತ್ರದಲ್ಲಿ ಮತ್ತೆ ಚುನಾವಣೆ ಗೆಲ್ಲಬೇಕು ಎಂದು ಬಿಜೆಪಿ ನಾಯಕರು ಪಣತೊಟ್ಟು ನಿಂತಿದ್ದಾರೆ.

ಇದೇ 11 ರಂದು ನಡೆಯಲಿರುವ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಎನ್ ಪ್ರಹ್ಲಾದ್ ಬಾಬು ಅವರನ್ನು ಗೆಲ್ಲಿಸುವ ಮೂಲಕ ದಿ.ಬಿ.ಎನ್ ವಿಜಯಕುಮಾರ್ ಅವರ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕರೆ ನೀಡಿದ್ದಾರೆ.

ಜಯನಗರದ ಕೃಷ್ಣ ಕನ್ವೆನ್ಷನ್ ಹಾಲ್ ನಲ್ಲಿ ಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೂತ್ ಮಟ್ಟದ ಸಮಿತಿ ಸಭೆ ನಡೆಯಿತು.ಬಿ.ಎಲ್ ಸಂತೋಷ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಅಭ್ಯರ್ಥಿ ಬಿ.ಎನ್ ಪ್ರಹ್ಲಾದ್, ಬೆಂಗಳೂರು ನಗರ ಘಟಕದ ಅಧ್ಯಕ್ಷ ಪಿ.ಎನ್ ಸದಾಶಿವ, ಶಾಸಕರು, ಪಾಲಿಕೆ ಸದಸ್ಯರು, ಪಕ್ಷದ ಪದಾಧಿಕಾರಿಗಳು, ಬೂತ್ ಸದಸ್ಯರು ಉಪಸ್ಥಿತರಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಬಿ.ಎಲ್ ಸಂತೋಷ್,ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರವನ್ನು ಸಮರೋಪಾದಿಯಲ್ಲಿ ನಡೆಸಿ ಕ್ಷೇತ್ರವನ್ನು ಮತ್ತೆ ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳುವ ರೀತಿ ಕೆಲಸ ಮಾಡುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

ಈ ಹಿಂದಿನ ಎರಡು ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ.ಎನ್ ವಿಜಯಕುಮಾರ್ ಗೆಲುವು ಸಾಧಿಸಿದ್ದರು. ಆದರೆ, ಅವರ ಅಕಾಲಿಕ ನಿಧನದಿಂದಾಗಿ ಈ ಬಾರಿ ಅವರ ಸಹೋದರ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ಅವರನ್ನು ಗೆಲ್ಲಿಸಿಕೊಳ್ಳುವ ಮೂಲಕ ದಿ.ವಿಜಯಕುಮಾರ್ ಅವರ ಕ್ಷೇತ್ರವನ್ನು ಮತ್ತೆ ಪಕ್ಷದ ತೆಕ್ಕೆಗೆ ಸಿಗುವಂತೆ ಮಾಡಬೇಕು ಎಂದರು.

ಮುಂಗಾರು ಮಳೆ: ಪ್ರಾಣ, ಆಸ್ತಿ ರಕ್ಷಣೆಗೆ ಆದ್ಯತೆ ನೀಡಲು ಮುಖ್ಯಮಂತ್ರಿ ಸೂಚನೆ

ಬೆಂಗಳೂರು: ಮುಂಗಾರು ಮಳೆಯಿಂದಾಗಿ ಬೆಂಗಳೂರು ನಗರದಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಬೆಂಗಳೂರು ಮಹಾ ನಗರಪಾಲಿಕೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಇಂದು ಮಹಾ ನಗರಪಾಲಿಕೆಯ ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿಗಳು ಮುಂಗಾರು ಮಳೆ ಆರಂಭವಾಗಿದೆ. ಬಿರುಸಿನ ಗಾಳಿಯ ಜೊತೆಗೆ ಬೀಳುತ್ತಿರುವ ಮಳೆ ಆತಂಕಕಾರಿಯಾಗದಂತೆ ನೋಡಿಕೊಳ್ಳಬೇಕಾದ ಅಗತ್ಯ ಇದೆ. ಜನರಿಗೆ ಪ್ರಾಣಾಪಾಯವಾಗದಂತೆ, ರಸ್ತೆಗಳಲ್ಲಿ ಗುಂಡಿ ಬೀಳದಂತೆ ಹಾಗೂ ಆಸ್ತಿಪಾಸ್ತಿಗೆ ಹಾನಿಯಾಗದಂತೆ ನೋಡಿಕೊಳ್ಳಿ ಎಂದರು.

ತಗ್ಗಿನ ಪ್ರದೇಶಗಳಲ್ಲಿ ನೀರು ನುಗ್ಗಿ ಆತಂಕವಾಗದಂತೆ ಹಾಗೂ ಜನಜೀವನ ಅಸ್ತವ್ಯಸ್ಥವಾಗದಂತೆ ನೋಡಿಕೊಳ್ಳಿ. ಕಾಲುವೆಗಳಲ್ಲಿ, ಮೋರಿಗಳಲ್ಲಿ ನೀರು ನಿಲ್ಲದಂತೆ, ಜೀವಗಳು ಕೊಚ್ಚಿಹೋಗದಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮಹಾನಗರಪಾಲಿಕೆಯ ಅಧಿಕಾರಿಗಳು ಮಾತನಾಡಿ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವ ಕೆಲಸ ಈಗಾಗಲೇ ಕೈಗೊಂಡಿದ್ದೇವೆ. ಮಳೆ ಬಿರುಸಾಗುವುದಕ್ಕೆ ಮುನ್ನ ಎಲ್ಲಾ ಗುಂಡಿಗಳನ್ನು ಯುದ್ಧೋಪಾದಿಯಲ್ಲಿ ಮುಚ್ಚುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ತ್ಯಾಜ್ಯ ನಿರ್ವಣೆಯ ಬಗ್ಗೆ ಸಾರ್ವಜನಿಕರು ವ್ಯಕ್ತಪಡಿಸುತ್ತಿರುವ ಆತಂಕವನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು ಇಂದಿಗೂ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ. ಉತ್ತಮ ಸ್ವಚ್ಛತೆಯನ್ನು ಕಾಪಾಡುವುದು ಸರ್ಕಾರದ ಕರ್ತವ್ಯ. ಆದಷ್ಟೂ ಬೇಗ ಪರಿಸ್ಥಿತಿಯನ್ನು ಉತ್ತಮಪಡಿಸುವಂತೆ ತಿಳಿಸಿದರು.