ಕೈ ಅಧ್ಯಕ್ಷಗಿರಿಗೆ ಹಿರಿಯ ಕಾಂಗ್ರೆಸಿಗರ ಪೈಪೋಟಿ

ಬೆಂಗಳೂರು: ಡಾ.ಜಿ.ಪರಮೇಶ್ವರ್ ಉಪಮುಖ್ಯಮಂತ್ರಿಯಾದ ನಂತರ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಜೋರಾಗಿದೆ. ಒಂದೆಡೆ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ ರಚನೆಗೆ ಹೆಗಲು ನೀಡಿದ್ದ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗುತ್ತಾರೆ ಎಂಬ ಮಾತು ಕೇಳಿಬರುತ್ತಿದ್ದರೆ ಮತ್ತೊಂದೆಡೆ ಕಾಂಗ್ರೆಸ್ ಹಿರಿಯ ಮುಖಂಡ ಆರ್.ವಿ. ದೇಶಪಾಂಡೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

ಜನತಾಪರಿವಾರದಿಂದ ರಾಜಕೀಯ ಬದುಕು ಆರಂಭಿಸಿದ ಆರ್.ವಿ.ದೇಶಪಾಂಡೆ ರಾಮಕೃಷ್ಣ ಹೆಗಡೆ, ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿಗಳಾಗಿದ್ದಾಗ ಅವರ ಸಚಿವ ಸಂಪುಟದಲ್ಲಿ ಪ್ರಮುಖ ಖಾತೆ ನಿರ್ವಹಿಸಿದ್ದರು. ಆದರೆ ಇಂದು ದೇವೇಗೌಡರ ಪುತ್ರ ಎಚ್.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದು, ಅವರ ಸಂಪುಟದಲ್ಲಿ ಸಚಿವರಾಗಲು ಅದೇಕೋ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ತಮ್ಮಂತ ಹಿರಿಯ ರಾಜಕಾರಣಿ ಕುಮಾರಸ್ವಾಮಿ ಅಡಿ ಕಾರ್ಯನಿರ್ವಹಿಸುವುದು ಕೊಂಚ ಮುಜುಗರವೆಂದು ಭಾವಿಸಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ ಅವರು ಬೇರೊಂದು ಯೋಚನೆಯನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಕೈ ಅಧ್ಯಕ್ಷ ಸ್ಥಾನ

ಈಗಾಗಲೇ ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಆರ್.ವಿ. ದೇಶಪಾಂಡೆ ಸಚಿವರಾಗುವುದಕ್ಕಿಂತ ಕೆಪಿಸಿಸಿ ಅಧ್ಯಕ್ಷರಾಗುವುದು ಉತ್ತಮ ಎಂದು ಭಾವಿಸಿದ್ದಾರೆ ಎನ್ನಲಾಗಿದೆ. ಇದಕ್ಕಾಗಿಯೇ ನಾನು ಎಚ್‍ಡಿಕೆ ಸಂಪುಟ ಸೇರಲ್ಲ, ನನಗೆ ಬೇರೆ ಜವಾಬ್ದಾರಿ ಕೊಡಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಕೋರಿದ್ದಾರೆ ಎನ್ನಲಾಗುತ್ತಿದೆ.

ರಾಮಕೃಷ್ಣ ಹೆಗಡೆ ಮತ್ತು ಕುಮಾರಸ್ವಾಮಿ ಅವರ ತಂದೆ ಎಚ್.ಡಿ ದೇವೆಗೌಡರ ಸಂಪುಟದಲ್ಲಿ ಕಾರ್ಯನಿರ್ವಹಿಸಿದ್ದೇನೆ. ಹೀಗಾಗಿ ಎಚ್ಡಿಕೆ ಸಂಪುಟದಲ್ಲಿ ಕೆಲಸ ಮಾಡಲು ನನಗೆ ಇಷ್ಟವಿಲ್ಲ ಎಂದು ರಾಹುಲ್ ಗಾಂಧಿ ಬಳಿ ಹೇಳಿಕೊಂಡಿರುವ ದೇಶಪಾಂಡೆ, ಇದಕ್ಕೆ ಪ್ರತಿಯಾಗಿ ಮಹತ್ವದ ಹುದ್ದೆಯಾದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೇಳಿದ್ದಾರೆ ಎನ್ನಲಾಗಿದೆ. ಸದ್ಯವೇ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರಿಂದ ತೆರವಾಗುವ ಈ ಸ್ಥಾನಕ್ಕೆ ಅದಾಗಲೇ ಮಾಜಿ ಸಚಿವರಾದ ಎಸ್.ಆರ್. ಪಾಟೀಲ್, ಡಿ.ಕೆ. ಶಿವಕುಮಾರ್, ಸಂಸದ ಕೆ.ಎಚ್. ಮುನಿಯಪ್ಪ ಕಣ್ಣಿಟ್ಟಿದ್ದಾರೆ. ಈ ನಡುವೆ ದೇಶಪಾಂಡೆ ಕೂಡ ಇತ್ತ ಗಮನ ಹರಿಸಿರುವುದು ನಿಜಕ್ಕೂ ರಾಹುಲ್‍ಗೆ ತಲೆನೋವಾಗಿ ಪರಿಣಮಿಸಿದೆ.

ಕೈಗಾರಿಕಾ ಸಚಿವರಾಗುವಂತೆ ಒತ್ತಡ

ರಾಜ್ಯದಲ್ಲಿ ಕೈಗಾರಿಕಾ ಸಚಿವರಾಗಿ ಅತಿದೊಡ್ಡ ಹೆಸರು ಮಾಡಿರುವ ದೇಶಪಾಂಡೆಯವರನ್ನು ಈ ಬಾರಿಯೂ ಹೇಗಾದರೂ ಸಮ್ಮಿಶ್ರ ಸರ್ಕಾರದಲ್ಲಿ ಬೃಹತ್ ಕೈಗಾರಿಕಾ ಸಚಿವರನ್ನಾಗಿ ಮಾಡುವ ಆಶಯ ಕಾಂಗ್ರೆಸ್ ನಾಯಕರದ್ದು. ಅಲ್ಲದೇ ಸದ್ಯ ಈ ಖಾತೆ ಕೂಡ ಕಾಂಗ್ರೆಸ್ ಪಾಲಿಗೆ ಒಲಿದಿರುವುದರಿಂದ ಇವರನ್ನು ಬಿಟ್ಟರೆ ಆ ಖಾತೆಗೆ ಬೇರೆಯವರು ಸರಿಬರುವುದಿಲ್ಲ ಎನ್ನುವ ಅಭಿಪ್ರಾಯ ಕೂಡ ಕೇಳಿಬರುತ್ತಿದೆ.
ಸದ್ಯ ದಿಲ್ಲಿಯಲ್ಲಿರುವ ಆರ್.ವಿ. ದೇಶಪಾಂಡೆ ಅವರ ಮನವೊಲಿಸುವ ಯತ್ನ ನಡೆದಿದೆ. ಕೆಪಿಸಿಸಿ ಸ್ಥಾನಕ್ಕೆ ಆಸೆ ಪಟ್ಟು ಕುಳಿತಿರುವ ಅವರನ್ನು ನಾಳೆ ಬೆಳಗ್ಗೆ ಬರುವ ರಾಹುಲ್‍ಗಾಂಧಿ ಹೇಗೆ ಸಚಿವ ಸ್ಥಾನಕ್ಕೆ ಒಪ್ಪಿಸುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.

 

 

ನನ್ನ ಮತ್ತು ಹೈ ಕಮಾಂಡ್ ಜತೆ ಭಿನ್ನಾಭಿಪ್ರಾಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

 

 

ಬೆಂಗಳೂರು:ನನ್ನ ಹಾಗೂ ಹೈಕಮಾಂಡ್ ಮಧ್ಯೆ ಭಿನ್ನಾಭಿಪ್ರಾಯ ಇದೆ ಅಂತ ಬಿಂಬಿಸಲು ನನ್ನ ಹೆಸರು ಮಧ್ಯೆ ತರಲಾಗಿದ್ದು, ಇದೆಲ್ಲಾ ಊಹಾಪೋಹ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕುಮಾರಸ್ವಾಮಿಯವರು ಐದು ವರ್ಷ ಸಿಎಂ ಎಂದು ಹೈಕಮಾಂಡ್ ತೀರ್ಮಾನಿಸಿದೆ. ಹೈಕಮಾಂಡ್ ತೀರ್ಮಾನವನ್ನು ಎಲ್ಲರೂ ಒಪ್ಪಿಕೊಂಡಿದ್ದೇವೆ. ಹೈಕಮಾಂಡ್ ತೀರ್ಮಾನವನ್ನು ಕೆ.ಸಿ.ವೇಣುಗೋಪಾಲ್ ಪ್ರಕಟ ಮಾಡಿದ್ದಾರೆ. ಒಂದು ತಂಡವಾಗಿ ನಾವೆಲ್ಲ ಹೈಕಮಾಂಡ್ ತೀರ್ಮಾನ ಒಪ್ಪಿಕೊಂಡಿದ್ದೇವೆ ಎಂದು ತಿಳಿಸಿದರು.

ಕೆ‌‌‌‌‌.ಸಿ.ವೇಣುಗೋಪಾಲ್ ಹಾಗು ನನ್ನ ನಡುವೆ ಅಸಮಧಾನ ಇದೆ ಅನ್ನೋದು ಊಹಾಪೋಹವಾಗಿದೆ. ನಾನು ಜೆಡಿಎಸ್ ಜತೆ ಐದು ವರ್ಷ ಬೆಂಬಲದ ಬಗ್ಗೆ ಅವರ ಬಳಿ ಚರ್ಚೆ ಮಾಡಿಲ್ಲ. ಕಾಂಗ್ರೆಸ್ ಹೈ ಕಮಾಂಡ್ ತೆಗದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ. ನಾನು ಯಾವ ವಿಚಾರವೂ ಮಾತನಾಡಿಲ್ಲ. ಕೆ.ಸಿ.ವೇಣುಗೋಪಾಲ್ ಜೊತೆಯೂ ಚರ್ಚೆ ನಡೆಸಿಲ್ಲ. ಪಕ್ಷದ ಸಭೆಗೂ ನಾನು ಹೋಗಲಿಲ್ಲ. ಆದರೂ ನನ್ನ ಹೆಸರು ಸುಮ್ ಸುಮ್ಮನೆ ಮಧ್ಯೆ ಎಳೆದು ತಂದಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಇನ್ನು ಸಚಿವ ಸಂಪುಟದಲ್ಲಿ ಈ ಬಾರಿ ಹಿರಿಯರಿಗೆ ಕೊಕ್ ವಿಚಾರ ನೀಡುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹೈ ಕಮಾಂಡ್ ಯಾರಿಗೆ ಸ್ಥಾನ ನೀಡಬೇಕು ಅನ್ನುವ ಬಗ್ಗೆ ನಿರ್ಧಾರ ತೆಗದುಕೊಳ್ಳಲಿದೆ ಎಂದು ಇದೇ ವೇಳೆ ವಿವರಿಸಿದರು.

ಅಸಮಾಧಾನ ಇದ್ದರೆ ಬಗೆಹರಿಸುತ್ತೇವೆ:
ಕಾರ್ಯಾಧ್ಯಕ್ಷ ಸ್ಥಾನಕ್ಕೆ ಎಸ್.ಆರ್.ಪಾಟೀಲ್ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಖರ್ಗೆ, ಎಸ್.ಆರ್. ಪಾಟೀಲ್ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು. ಅವರು ಕಾರ್ಯಾಧ್ಯಕ್ಷ ಸ್ಥಾನಕ್ಕೆ
ಯಾವ ಕಾರಣಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಗೊತ್ತಿಲ್ಲ. ರಾಜೀನಾಮೆ ಪತ್ರದಲ್ಲಿ ಏನೀದೆ ಎಂದು ಗೊತ್ತಿಲ್ಲ. ಈ ಬಗ್ಗೆ ಮಾಹಿತಿ ತೆಗೆದುಕೊಳ್ಳುತ್ತೇನೆ. ಅವರಿಗೆ ಅಸಮಾಧಾನ ಆಗಿದ್ದರೆ, ಕುಳಿತು ಚರ್ಚೆ ಮಾಡಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಆರ್ ಟಿ ಐಯಡಿ ಮಾಹಿತಿ ನಿರಾಕರಣೆ: ವಜೂಬಾಯಿ ವಾಲಾ ವಿರುದ್ಧ ರಾಷ್ಟ್ರಪತಿಗೆ ದೂರ

 

 

ಬೆಂಗಳೂರು: ಮಾಹಿತಿ ಹಕ್ಕು ಕಾಯ್ದೆಯಡಿ ರಾಜ್ಯಪಾಲ ವಜೂಬಾಯಿ ವಾಲಾ ಮಾಹಿತಿ ಒದಗಿಸುತ್ತಿಲ್ಲ ಎಂದು ಆರೋಪಿಸಿ ರಾಷ್ಟ್ರಪತಿಗೆ ಆರ್ ಟಿ ಐ ಕಾರ್ಯಕರ್ತ ನರಸಿಂಹ ಮೂರ್ತಿ ಎಂಬವರು ದೂರು ನೀಡಿದ್ದಾರೆ.

ರಾಷ್ಟ್ರಪತಿಗೆ ಸಲ್ಲಿಸಿರುವ ತಮ್ಮ ದೂರಿನಲ್ಲಿ ನರಸಿಂಹ ಮೂರ್ತಿ, ಕರ್ನಾಟಕ ರಾಜ್ಯಪಾಲರಾದ ವಜೂಬಾಯಿ ವಾಲಾ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿಯನ್ನು ನೀಡಲು ನಿರಾಕರಿಸುವ ಮೂಲಕ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದಾರೆ. ಆ ಮೂಲಕ ಅವರು ಅಧಿಕಾರ ದುರ್ಬಳಕೆ ಮತ್ತು ಆಡಳಿತ ಲೋಪ ಎಸಗುತ್ತಿದ್ದಾರೆ. ವಾಲಾ ಅವರು ಅಧಿಕಾರ ಸ್ವೀಕಾರ ಮಾಡಿದಾಗಿನಿಂದ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿಗಳನ್ನು ನೀಡುತ್ತಿಲ್ಲ. ಕಾಯ್ದೆ ಪ್ರಕಾರ ರಾಜ್ಯಪಾಲರ ಕಚೇರಿ ಸಾರ್ವಜನಿಕ ಕಚೇರಿಯಲ್ಲ ಎಂಬ ಕಾರಣ ಹೇಳಿ ಮಾಹಿತಿ ನಿರಾಕರಿಸಲಾಗುತ್ತಿದೆ. ಈ ಮುಂಚಿನ ರಾಜ್ಯಪಾಲರು ಆರ್ ಟಿ ಐಯಡಿ ಕೋರಿದ ಮಾಹಿತಿಯನ್ನು ನೀಡುತ್ತಿದ್ದರು. ಮಾಹಿತಿ ನಿರಾಕರಣೆಯಿಂದ ಸಾರ್ವಜನಿಕರಿಗೆ ಅನಾನುಕೂಲವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪ್ರತಿ ಬಾರಿಯೂ ಮಾಹಿತಿ ಕೋರಿದಾಗ, ರಾಜಭವನ ಮಾಹಿತಿ ಹಕ್ಕು ಕಾಯ್ದೆಯಡಿ ಬರುತ್ತೋ ಇಲ್ಲವೋ ಎಂಬ ವಿಷಯ ಸುಪ್ರೀಂ ಕೊರ್ಟ್ನಲ್ಲಿ ವಿಚಾರಣೆಯಲ್ಲಿದ್ದು, ಹೀಗಾಗಿ ಮಾಹಿತಿ ಕೊಡಲು ಸಾಧ್ಯವಿಲ್ಲ ಎಂಬ ಪ್ರತಿಕ್ರಿಯೆ ರಾಜಭವನದಿಂದ ಬರುತ್ತದೆ. ೨೦೧೮ರ ಜನವರಿಯಲ್ಲಿ ಈ ಸಂಬಂಧದ ಅರ್ಜಿಯನ್ನು ಸುಪ್ರೀಂ ಕೊರ್ಟ್ ಇತ್ಯರ್ಥಗೊಳಿಸಿದೆ. ಜತೆಗೆ, ಕಾಯ್ದೆ ಪ್ರಕಾರ ಸಂವಿಧಾನ ಸ್ಥಾಪಿತ ಎಲ್ಲ ಇಲಾಖೆಗಳು, ಸಂಸ್ಥೆಗಳು ಸಾರ್ವಜನಿಕ ಕಚೇರಿಗಳಾಗಿವೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ. ಹೀಗಿದ್ದರೂ ಮಾಹಿತಿ ನಿರಾಕರಿಸುತ್ತಿರುವುದು ಕಾನೂನು ಬಾಹಿರವಾಗಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಾಷ್ಟ್ರಪತಿಗಳಿಗೆ ಆರ್ ಟಿ ಐ ಕಾರ್ಯಕರ್ತ ನರಸಿಂಹ ಮೂರ್ತಿ ಮನವಿ ಮಾಡಿದ್ದಾರೆ.

ಕೃಷಿಗೆ ಇಸ್ರೇಲ್ ತಂತ್ರಜ್ಞಾನದ ಟಚ್:ಬ್ಲೂ ಪ್ರಿಂಟ್ ಸಿದ್ದ?

ಬೆಂಗಳೂರು: ಇಸ್ರೇಲ್ ಮಾದರಿ ಕೃಷಿ ಯೋಜನೆ ಜಾರಿಗೆ ತರಲು ನಿರ್ಧರಿಸಲಾಗಿದ್ದು, ಮಂಡ್ಯ ಜಿಲ್ಲೆಯ ವಿಸಿ ಫಾರಂನಲ್ಲಿ ಪೈಲಟ್ ಪ್ರಾಜೆಕ್ಟ್ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲೆಗಳಲ್ಲಿ ಇಸ್ರೇಲ್ ಮಾದರಿ ಕೃಷಿ ಜಾರಿಗೆ ನೀಲಿನಕ್ಷೆ ತಯಾರು ಮಾಡುತ್ತೇವೆ,
ಇಸ್ರೇಲ್ ತಂತ್ರಜ್ಞಾನ ಅಳವಡಿಕೆ ಮೂಲಕ ಕೃಷಿ ಮಾಡುವ ಕುರಿತು ರಾಜ್ಯದ ರೈತರಿಗೆ ಮಾರ್ಗದರ್ಶನ ಮಾಡಲು ಇಸ್ರೇಲ್ ನಿಂದ ಅಧಿಕಾರಿಗಳು ಮತ್ತು ರೈತರ ತಂಡ ರಾಜ್ಯಕ್ಕೆ ಬರಲಿದೆ ಈಗಾಗಲೇ ಈ ಕುರಿತು ಚರ್ಚೆ ನಡೆಸಿದ್ದೇನೆ ಎಂದರು.

ರಾಜ್ಯದಲ್ಲಿ ಅವಧಿಪೂರ್ವವಾಗಿ ಮುಂಗಾರು ಆರಂಭವಾಗಿದೆ. ನಿರೀಕ್ಷೆಗೂ ಮೀರಿ ಉತ್ತಮ ಮಳೆಯಾಗಿದೆ. ಈವರೆಗೆ ಶೇ.೫೧ ರಷ್ಟು ಹೆಚ್ಚು ಮಳೆಯಾಗಿದೆ. ರೈತರ ಕೃಷಿ ಚಟುವಟಿಕೆಗೆ ಯಾವುದೇ ತೊಂದರೆಯಾಗಬಾರದು. ರೈತರಿಗೆ ಗೊಬ್ಬರ ಔಷಧಿ ಬಿತ್ತನೆ ಬೀಜ ಕೊರತೆಯಾಗಬಾರದು. ಈ ನಿಟ್ಟಿನಲ್ಲಿ ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಹಣ ಪಾವತಿಗೆ ಆದೇಶಿಸಿದ್ದೇವೆ. ಈಗಾಗಲೇ ನೋಟೀಸ್ ಕೂಡ ಜಾರಿ ಮಾಡಲಾಗಿದೆ. ಕಾರ್ಖಾನೆ ಮಾಲೀಕರು ರೈತರಿಗೆ ಸಹಕಾರ ಕೊಡಬೇಕು.

ಹಾಲುದರ ಇಳಿಕೆಗೆ ಆಕ್ಷೇಪವಿಲ್ಲ: ರೈತರಿಂದ ಖರೀದಿಸುವ ಹಾಲು ದರ ಕಡಿಮೆ ಮಾಡುವ ಕುರಿತು ಒಕ್ಕೂಟಗಳಿಂದ ಯಾವುದೇ ಪ್ರಸ್ತಾಪ ಬಂದಿಲ್ಲ. ರಾಜ್ಯದಲ್ಲಿ‌‌ ಹಾಲು ಉತ್ಪಾದನೆ ಹೆಚ್ಚಾಗುತ್ತಿದೆ. ಪ್ರತಿದಿನ ೮೨ ಲಕ್ಷ ಲೀಟರ್ ಹಾಲು ಉತ್ಪಾದನೆ ಆಗ್ತಿದೆ. ಆದರೆ, ರಾಜ್ಯಕ್ಕೆ ಬೇಕಾಗಿರೋದು ೩೬ ಲಕ್ಷ ಲೀಟರ್ ಹಾಲು ಮಾತ್ರ. ಹೀಗಾಗಿ ಬಹಳಷ್ಟು ಜಿಲ್ಲಾ ಹಾಲು ಒಕ್ಕೂಟಗಳು ನಷ್ಟದಲ್ಲಿವೆ. ನಷ್ಟವನ್ನು ಸರಿದೂಗಿಸಲು ಆ ಒಕ್ಕೂಟಗಳು ಚಿಂತನೆ ಮಾಡಿರಬಹುದು. ಆದ್ದರಿಂದ, ಆ ಬಗ್ಗೆ ಸರ್ಕಾರ ಹಸ್ತಕ್ಷೇಪ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.

ಬದಲಾದ ಸರ್ಕಾರದ ನಿರ್ಧಾರ; ಕಾಸುಕೊಟ್ರೆ ಮಾತ್ರ ಪಾಸ್!

 

ಬೆಂಗಳೂರು: ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಘೋಷಿಸಿದ್ದ ಮಹತ್ವಾಕಾಂಕ್ಷಿ ಭಾಗ್ಯವೊಂದಕ್ಕೆ ಹೊಸ ಸಮ್ಮಿಶ್ರ ಸರ್ಕಾರ ಎಳ್ಳುನೀರು ಬಿಟ್ಟಿದೆ.
ಕಳೆದ ಬಜೆಟ್‍ನಲ್ಲಿ ಸಿಎಂ ಸಿದ್ದರಾಮಯ್ಯ ಮಕ್ಕಳಿಗೆ ಉಚಿತ ಬಸ್‍ ಪಾಸ್‍ ನೀಡುವುದಾಗಿ ಘೋಷಿಸಿದ್ದರು. ಆದರೆ ವೆಚ್ಚಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಸಮ್ಮಿಶ್ರ ಸರ್ಕಾರದ ಸಿಎಂ ಎಚ್‍.ಡಿ. ಕುಮಾರಸ್ವಾಮಿ ಮಹತ್ವಾಕಾಂಕ್ಷಿ ಯೋಜನೆಗೆ ಕಡಿವಾಣ ಹಾಕಿದ್ದಾರೆ. ಇದರಿಂದಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಉಚಿತ ಬಸ್‍ ಪಾಸ್‍ ನಿರೀಕ್ಷಿಸುತ್ತಿದ್ದ ವಿದ್ಯಾರ್ಥಿಗಳು ಬದಲಾಗಿ ಹಣ ನೀಡಿಯೇ ಪಾಸ್ ಖರೀದಿಸಬೇಕಾಗಿದೆ. ಉಚಿತ ಬಸ್ ಪಾಸ್ ನೀಡುವುದಾಗಿ 2018-19 ಬಜೆಟ್ನಲ್ಲಿ ಘೋಷಣೆ ಯಾಗಿದ್ದರೂ ನೂರಾರು ಕೋಟಿ ರೂ. ಆರ್ಥಿಕ ಹೊರೆ ಆಗುತ್ತದೆ ಎಂಬ ಕಾರಣದಿಂದ ಸಾರಿಗೆ ಇಲಾಖೆಯ ಪ್ರಸ್ತಾವನೆಗೆ ಹಣಕಾಸು ಇಲಾಖೆ ತಾತ್ಕಾಲಿಕ ತಡೆ ನೀಡಿದೆ ಎಂದು ತಿಳಿದು ಬಂದಿದೆ.

ಹೊಸ ಬಜೆಟ್‍ನಲ್ಲಿ ಪರಿಶೀಲನೆ

ಹೊಸ ಸರ್ಕಾರದ ಬಜೆಟ್‍ ಆದಷ್ಟು ಬೇಗ ಮಂಡನೆಯಾಗಲಿದ್ದು, ಇದರ ಪೂರ್ವಭಾವಿ ಸಭೆಯಲ್ಲಿ ವಿಷಯವನ್ನು ಮರು ಪ್ರಸ್ತಾಪಿಸುವಂತೆ ಸೂಚಿಸಲಾಗಿದೆ. ಹಿಂದಿನ ಸರ್ಕಾರ ಕಳೆದ ಫೆಬ್ರವರಿಯಲ್ಲಿ ಮಂಡಿಸಿದ್ದ ಬಜೆಟ್‍ನಲ್ಲಿ 2018-19 ಶೈಕ್ಷಣಿಕ ವರ್ಷದಿಂದ ರಾಜ್ಯದ 19.60 ಲಕ್ಷ ವಿದ್ಯಾರ್ಥಿಗಳಿಗೆ ನೆರವಾಗುವಂತೆ ಉಚಿತ ಬಸ್ ಪಾಸ್ ನೀಡುವುದಾಗಿ ಘೋಷಿಸಿತ್ತು.
ಏಪ್ರಿಲ್ ಅಂತ್ಯದಲ್ಲಿ ಯೋಜನೆ ಅನುಷ್ಠಾನದ ಕುರಿತು ಆದೇಶ ಹೊರಡಿಸಲು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ಸಾರಿಗೆ ಇಲಾಖೆಗೆ ಪತ್ರ ಬರೆದಿದ್ದರು. 2018-19ನೇ ಸಾಲಿನಲ್ಲಿ ಉಚಿತ ಪಾಸ್ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ 22 ರಿಂದ 23 ಲಕ್ಷದವರೆಗೆ ಏರಿಕೆಯಾಗಲಿದೆ. ಈ ಹಿನ್ನೆಲೆಯಲ್ಲಿ ಉಚಿತ ಬಸ್ ಪಾಸ್ ವಿತರಿಸಲು 1,955.06 ಕೋಟಿ ರೂ. ವೆಚ್ಚವಾಗಲಿದೆ. 2018-19ನೇ ಸಾಲಿನ ಬಜೆಟ್ನಲ್ಲಿ ಪಾಸ್ಗೆ 836.98 ಕೋಟಿ ರೂ. ಸಹಾಯಧನ ನಿಗದಿಪಡಿಸಲಾಗಿದ್ದು, ಉಳಿದ 629.32 ಕೋಟಿ ರೂ. ಹೆಚ್ಚುವರಿಯಾಗಿ ಒದಗಿಸಲು ಕೋರಿದ್ದರು. ಆದರೆ ಸದ್ಯ ಸಾಕಷ್ಟು ಕಾರಣಕ್ಕೆ ಬೊಕ್ಕಸದಿಂದ ಹಣ ತೆಗೆಯುವ ಅಗತ್ಯ ಇರುವುದರಿಂದ ಸದ್ಯಕ್ಕೆ ಪ್ರಸ್ತಾವನೆಯನ್ನು ಕೈಬಿಡಲು ನಿರ್ಧರಿಸಲಾಗಿದೆ.

ಯೋಜನೆಯಿಂದ ಹೊರೆ

ಯೋಜನೆ ಅನುಷ್ಠಾನದಿಂದ ಸರ್ಕಾರದ ಮೇಲೆ 629 ಕೋಟಿ ರೂ.ಹೆಚ್ಚುವರಿ ಹೊರೆ ಬೀಳುವ ಹಿನ್ನೆಲೆಯಲ್ಲಿ, ಹಣಕಾಸು ಇಲಾಖೆಯ ಒಪ್ಪಿಗೆ ಕೋರಿ ಸಾರಿಗೆ ಇಲಾಖೆ ಕಡತ ರವಾನಿಸಿತ್ತು. ಈ ಕಡತಕ್ಕೆ ಇದೀಗ ಹಣಕಾಸು ಇಲಾಖೆ ಪ್ರತಿಕ್ರಿಯೆ ನೀಡಿದ್ದು, ಹೊಸ ಸರ್ಕಾರ ಮಂಡಿಸಲಿರುವ ಬಜೆಟ್ನಲ್ಲಿ ಈ ವಿಚಾರ ಮರುಪ್ರಸ್ತಾಪಿಸುವಂತೆ ಸೂಚಿಸಿದೆ. ಇದರಿಂದ ಕೆಎಸ್ಆರ್ಟಿಸಿ, ಬಿಎಂಟಿಸಿ, ಈಶಾನ್ಯ ಮತ್ತು ವಾಯವ್ಯ ರಾಜ್ಯ ರಸ್ತೆ ಸಾರಿಗೆ ನಿಗಮಗಳು ವಿದ್ಯಾರ್ಥಿಗಳಿಗೆ ರಿಯಾಯಿತಿ ಬಸ್ ಪಾಸ್ ವಿತರಿಸುತ್ತಿದೆ. 7ನೇ ತರಗತಿಯವರೆಗೆ ಈಗಾಗಲೇ ಉಚಿತ ಪಾಸ್ ಸೌಲಭ್ಯವಿದೆ. ಉಳಿದ ವಿದ್ಯಾರ್ಥಿಗಳ ಒಟ್ಟು ಪಾಸ್ ವೆಚ್ಚದಲ್ಲಿ ಶೇ.50 ಸರ್ಕಾರದಿಂದ ಸಹಾಯಧನ, ಶೇ.25 ಮೊತ್ತ ವಿದ್ಯಾರ್ಥಿಗಳಿಂದ ಮತ್ತು ಉಳಿದ ಶೇ.25 ಮೊತ್ತವನ್ನು ನಿಗಮವೇ ಭರಿಸುತ್ತಿದೆ. 2017ರಲ್ಲಿ ಎಸ್ಸಿಪಿ, ಟಿಎಸ್ಪಿ ಕ್ರಿಯಾ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಲಾಗಿತ್ತು. ಈ ಯೋಜನೆ ಮುಂದುವರಿಯಲಿದ್ದು, ಉಳಿದ ಎಲ್ಲ ವರ್ಗದ ವಿದ್ಯಾರ್ಥಿಗಳು ಹಣ ನೀಡಿಯೇ ಪಾಸ್ ಪಡೆದುಕೊಳ್ಳಬೇಕು.

ಕಾವೇರಿ ವಿಚಾರ: ಕಾನೂನು ತಜ್ಞರ ಜತೆ ಸಮಾಲೋಚಿಸಿ ಮುಂದಿನ ನಿರ್ಧಾರ: ಸಿಎ

ಬೆಂಗಳೂರು: ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆ ವಿಚಾರವಾಗಿ ಕೇಂದ್ರ ಸರ್ಕಾರ ನಿನ್ನೆ ಅಧಿಸೂಚನೆ ಹೊರಡಿಸಿದ್ದು, ಈ ಬಗ್ಗೆ ಕಾನೂನು ತಜ್ಞರು ಮತ್ತು ಪರಿಣತರ ಜತೆ ಸಭೆ ನಡೆಸಲಿದ್ದೇವೆ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾನೂನು ತಜ್ಞರು, ಪರಿಣತರ ಜತೆ ಚರ್ಚಿಸಿ, ಅಧಿಸೂಚನೆಯಿಂದಾಗುವ ಸಾಧಕ ಬಾಧಕಗಳ ಬಗ್ಗೆ ಸಮಾಲೋಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟ ಪಡಿಸಿದರು.

ಶೀಘ್ರ ಬಜೆಟ್ ಸಿದ್ಧತಾ ಸಭೆ:
ಇದೇ ವೇಳೆ ಬಜೆಟ್ ಮಂಡನೆ ಬಗ್ಗೆ ಮಾತನಾಡಿದ ಅವರು, ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಹೊಸ ಬಜೆಟ್ ಮಂಡನೆ ಮಾಡಬೇಕು ಮತ್ತು ಜಂಟಿ ಅಧಿವೇಶನ ಕರೆಯಬೇಕಾಗಿದೆ. ಇನ್ನು ಮೂರು ನಾಲ್ಕು ದಿನಗಳಲ್ಲಿ ಬಜೆಟ್ ಸಿದ್ಧತಾ ಸಭೆ ನಡೆಸಲಿದ್ದೇವೆ. ಕಳೆದ ವರ್ಷದ ಬಜೆಟ್ ಮಂಡನೆ ಅಂಶಗಳು, ಹಿಂದಿನ ಸರ್ಕಾರದ ಜನಪ್ರಿಯ ಯೋಜನೆ, ಕಾಂಗ್ರೆಸ್ ಪ್ರಣಾಳಿಕೆ ಮತ್ತು ನಮ್ಮ ಪ್ರಣಾಳಿಕೆ ಗಳನ್ನು ಒಳಗೊಂಡಂತೆ ಹೊಸ ಯೋಜನೆಗಳನ್ನು ಘೋಷಣೆ ಮಾಡುತ್ತೇವೆ ಎಂದು ತಿಳಿಸಿದರು.

ಖಾತೆ ಹಂಚಿಕೆಯಲ್ಲಿ ಜೆಡಿಎಸ್ ಒತ್ತಡ ಇಲ್ಲ:
ಖಾತೆ ಹಂಚಿಕೆ ವಿಚಾರವಾಗಿ ದೇವೇಗೌಡರು ಯಾವುದೇ ಹಸ್ತಕ್ಷೇಪ ಮಾಡಿಲ್ಲ ಎಂದು ಸಿಎಂ ಸ್ಪಷ್ಟ ಪಡಿಸಿದರು.
ದೇವೇಗೌಡರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ, ಖಾತೆ ಹಂಚಿಕೆ ವಿಚಾರವಾಗಿ ಜಟಾಪಟಿ ಆಯ್ತು ಎಂಬುದು ಕಪೋಕಲ್ಪಿತ ಸುದ್ದಿ. ಇಂಧನ ಖಾತೆ ಸಂಬಂಧ ಡಿಕೆಶಿ ಮತ್ತು ರೇವಣ್ಣ ಇಬ್ಬರಿಗೂ ಆಸಕ್ತಿ ಇದ್ದಿದ್ದು ನಿಜ. ಸಮ್ಮಿಶ್ರ ಸರ್ಕಾರದಲ್ಲಿ ಕೊಟ್ಟು ತೆಗೆದುಕೊಳ್ಳುವ ನೀತಿ ಅನ್ವಯ ಕೆ.ಸಿ. ವೇಣುಗೋಪಾಲ್ ಪಟ್ಟಿ ಅಂತಿಮ ಗೊಳಿಸಲು ದೇವೇಗೌಡರ ಜತೆ ಸಭೆ ನಡೆಸಿದ್ದರು. ಆದರೆ ಅವರು ಈ ವಿಚಾರದಲ್ಲಿ ಯವುದೇ ರೀತಿಯ ಮೂಗುತೂರಿಸಿಲ್ಲ. ರೇವಣ್ಣರಿಗೆ ಇಂಧನ ಖಾತೆ ನೀಡುವ ಬಗ್ಗೆ ಮಧ್ಯಪ್ರವೇಶ ಮಾಡಿಲ್ಲ. ಅದು ಕಪೋಕಲ್ಪಿತ ಎಂದು ಸ್ಪಷ್ಟ ಪಡಿಸಿದರು.
ಕಾಂಗ್ರೆಸ್ ನಾಯಕರಿಗೂ ಈ ವಿಚಾರ ಗೊತ್ತಿದೆ. ನಾನು ಹಣಕಾಸು ಖಾತೆ ಕೇಳಿದ್ದು ನಿಜ. ಬೇರೆ ಖಾತೆಗಳ ಸಂಬಂಧ ಜಟಾಪಟಿ ಇಲ್ಲ. ಜೆಡಿಎಸ್ ಯಾವುದೇ ವಿಚಾರವಾಗಿ ಒತ್ತಡ ಹೇರಿಲ್ಲ. ಡಿಕೆಶಿ ಜತೆನೂ ಈ ಬಗ್ಗೆ ಮಾತನಾಡಿದ್ದೇನೆ. ಡಿಕೆಶಿಗೆ ಖಾತೆ ನೀಡುವ ಬಗ್ಗೆ ಕಾಂಗ್ರೆಸ್ ನಾಯಕರು ನಿರ್ಧಾರ ಕೈಗೊಳ್ಳುತ್ತಾರೆ. ಖಾತೆ ಹಂಚಿಕೆ ಪಟ್ಟಿಯನ್ನು ಕಾಂಗ್ರೆಸ್ ನಾಯಕರೇ ಸಮಾಲೋಚನೆ ಮಾಡಿ ಅಂತಿಗೊಳಿಸಿದ್ದಾರೆ. ಮಂತ್ರಿ ಮಂಡಲ ರಚನೆಯಾದ ಬಳಿಕ ಖಾತೆ ಹಂಚಿಕೆ ಆಗುತ್ತದೆ ಎಂದು ತಿಳಿಸಿದರು