ನಂ 1 ಕೈಗಾರಿಕಾ ಸ್ನೇಹೀ ರಾಜ್ಯವಾಗುವತ್ತ ದಾಪುಗಾಲು: ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್

ಬೆಂಗಳೂರು ಜುಲೈ 02: ಕರೋನಾ ಸಂಕಷ್ಟ ಕಾಲದಲ್ಲೂ ಕರ್ನಾಟಕ ರಾಜ್ಯ ಅತಿ ಹೆಚ್ಚು ಬಂಡವಾಳ ಹೂಡಿಕೆಯ ಪ್ರಸ್ತಾಪಗಳನ್ನು ಹಾಗೂ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ರಾಜ್ಯ ಸರಕಾರ ಹೊರತಂದಿರುವ ಕ್ರಾಂತಿಕಾರಿ ಕಾನೂನುಗಳು ಹಾಗೂ ನೀತಿಗಳಿಂದ ಕರ್ನಾಟಕ ರಾಜ್ಯ ದೇಶದಲ್ಲಿ ನಂ 1 ಕೈಗಾರಿಕಾ ಸ್ನೇಹಿ ರಾಜ್ಯವಾಗುವತ್ತ ದಾಪುಗಾಲು ಇಡುತ್ತಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಶ್ರೀ ಜಗದೀಶ್‌ ಶೆಟ್ಟರ್‌ ಹೇಳಿದರು.

ಇಂದು ಬೆಂಗಳೂರು ನಗರದಲ್ಲಿ ಲಘು ಉದ್ಯೋಗ ಭಾರತಿ ಕರ್ನಾಟಕ, ಬೆಂಗಳೂರು ಉತ್ತರ ಪೀಣ್ಯ ಘಟಕದ ಉದ್ಘಾಟನೆಯನ್ನು ಮಾಡಿ ಅವರು ಮಾತನಾಡಿದರು. ಕರ್ನಾಟಕ ರಾಜ್ಯವನ್ನು ಇನ್ನೂ ಹೆಚ್ಚು ಕೈಗಾರಿಕಾ ಸ್ನೇಹಿ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕೈಗೊಂಡಿರುವ ಕ್ರಾಂತಿಕಾರಿ ಕಾನೂನು ಹಾಗೂ ನೀತಿಗಳು ಫಲ ನೀಡುತ್ತಿವೆ. ಕರೋನಾ ಸಂಕಷ್ಟ ಕಾಲದಲ್ಲೂ ಕೂಡಾ ಬಂಡವಾಳ ಹೂಡಿಕೆಯ ಪ್ರಸ್ತಾವನೆಯಲ್ಲಿ ರಾಜ್ಯ ಮೊದಲ ಸ್ಥಾನ ಪಡೆದುಕೊಂಡಿದ್ದರೆ, ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಇದೇ ರೀತಿಯ ಟ್ರೆಂಡ್‌ ಮುಂದುವರೆದಲ್ಲಿ ನಂ 1 ಸ್ಥಾನ ಪಡೆದುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.

ರಾಜ್ಯ ಹಾಗೂ ಕೇಂದ್ರ ಸರಕಾರ ಗಳು ಸಣ್ಣ ಕೈಗಾರಿಕೆಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿವೆ. ಕರೋನಾ ಸಂಕಷ್ಟ ಕಾಲದಲ್ಲಿ ಎಲ್ಲಾ ಕ್ಷೇತ್ರಗಳು ತೀವ್ರ ತೊಂದರೆಗೆ ಈಡಾಗಿವೆ. ಇದಕ್ಕೆ ಸಣ್ಣ ಕೈಗಾರಿಕೆಗಳು ಹೊರತಾಗಿಲ್ಲ. ದೇಶದ ಜಿಡಿಪಿ ಹಾಗೂ ಉದ್ಯೋಗಾವಕಾಶ ಹೆಚ್ಚಳಕ್ಕೆ ಸಣ್ಣ ಕೈಗಾರಿಕೆಗಳ ಕೊಡುಗೆ ಅಪಾರ. ಇವುಗಳ ಪುನಶ್ಚೇತನಕ್ಕೆ ರಾಜ್ಯ ಸರಕಾರ ಹೆಚ್ಚಿನ ಒಲುವ ನೀಡುತ್ತಿದೆ ಎಂದರು.

ಕೈಗಾರಿಕೆಗಳಿಗೆ ವಿದ್ಯುತ್‌ ದರ ಇಳಿಕೆ: ರಾಜ್ಯದಲ್ಲಿ ಕೈಗಾರಿಕೆಗಳ ಬಳಸುವ ವಿದ್ಯುತ್‌ ಮೇಲೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿರುವುದನ್ನ ಮುಖ್ಯಮಂತ್ರಿ ಗಳ ಗಮನಕ್ಕೆ ತರಲಾಗಿದೆ. ಅವರು ಕೈಗಾರಿಕೆಗಳಿಗೆ ವಿಧಿಸುವ ಶುಲ್ಕದಲ್ಲಿ ಕಡಿಮೆ ಮಾಡುವ ನಿಟ್ಟಿನಲ್ಲಿ ಒಲವು ತೋರಿಸಿದ್ದಾರೆ. ಈ ಬಗ್ಗೆ ಕೆಲವೇ ದಿನಗಳಲ್ಲಿ ಸ್ಪಷ್ಟ ನಿರ್ಧಾರ ಹೊರಬೀಳಲಿದೆ ಎಂದರು.

ಪೀಣ್ಯ ಕೈಗಾರಿಕಾ ಟೌನ್‌ಶಿಪ್‌:
ರಾಜ್ಯದಲ್ಲಿ ಕೈಗಾರಿಕಾ ಟೌನ್‌ಶಿಪ್‌ಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಹಲವಾರು ಸುತ್ತಿನ ಚರ್ಚೆಗಳು ನಡೆದಿವೆ. ಆದರೆ, ಇವುಗಳ ಘೋಷಣೆಗಾಗಿ ಹಲವಾರು ಇಲಾಖೆಗಳ ಅನುಮತಿಯ ಅಗತ್ಯವಿದ್ದು, ಇನ್ನು ಕೆಲವೇ ದಿನಗಳಲ್ಲಿ ಸಚಿವ ಸಂಪುಟದ ಮುಂದೆ ವಿಷಯ ಮಂಡಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕೈಗಾರಿಕೆಗಳಿಗೆ ಆಸ್ತಿ ತೆರಿಗೆ: ವಸತಿ ಮತ್ತು ವಾಣಿಜ್ಯ ಆಸ್ತಿ ತೆರಿಗೆಗಳ ಮಧ್ಯದಲ್ಲಿ ಕೈಗಾರಿಕೆಗಳಿಗೆ ಪ್ರತ್ಯೇಕ ಆಸ್ತಿ ತೆರಿಗೆ ಸ್ಲಾಬನ್ನು ಘೋಷಿಸಬೇಕು ಎನ್ನುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳಲ್ಲಾಗಿದೆ. ಇದರ ಬಗ್ಗೆಯೂ ಶೀಘ್ರದಲ್ಲೇ ತಿರ್ಮಾನ ಕೈಗೊಳ್ಳಲಾಗುವುದು ಎಂದರು.

ವಿದ್ಯುತ್‌ ಇಲಾಖೆ ಅಧಿಕಾರಿಗಳೊಂದಿಗೆ ಸಭೆ:
ಸಣ್ಣ ಕೈಗಾರಿಕೆಗಳಿಗೆ ಆಕ್ಯೂಪೆನ್ಸಿ ಪ್ರಮಾಣ ಪತ್ರದ ಬಗ್ಗೆ ಆಗುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿದ್ಯುತ್‌ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಆದರೆ, ಇದುವರೆಗೂ ಅದರ ಬಗ್ಗೆ ಅಂತಿಮ ತೀರ್ಮಾನವಾಗಿಲ್ಲ. ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ಶ್ರೀ ಎನ್‌ ತಿಪ್ಪೇಸ್ವಾಮಿ, ಲಘು ಉದ್ಯೋಗ ಭಾರತಿ ಕರ್ನಾಟಕದ ಅಧ್ಯಕ್ಷರಾದ ಪಿ.ಎಸ್‌.ಶ್ರೀಕಂಠ ದತ್ತ, ಲಘು ಉದ್ಯೋಗ ಭಾರತಿ ಕರ್ನಾಟಕದ ಪ್ರಧಾನ ಕಾರ್ಯದರ್ಶಿಯವರಾದ ಕೆ.ನಾರಾಯಣ ಪ್ರಸನ್ನ, ಲಘು ಉದ್ಯೋಗ ಭಾರತಿ ಕರ್ನಾಟಕ, ಬೆಂಗಳೂರು ಉತ್ತರದ ಅಧ್ಯಕ್ಷರಾದ ಅಶ್ವತ್ಥ ನಾರಾಯಣ ಸೇರಿದಂತೆ ನೂರಾರು ಕೈಗಾರಿಕೋದ್ಯಮಿಗಳು ಪಾಲ್ಗೊಂಡಿದ್ದರು.

ಕರ್ನಾಟಕ ಭಾರತದ ಬಯೋಟೆಕ್ನಾಲಜಿಯ ರಾಜಧಾನಿ; ವಿತ್ತ ಸಚಿವೆ ನಿರ್ಮಲ ಸೀತಾರಾಮನ್

ಬೆಂಗಳೂರು, ಜುಲೈ 02:ಜೈವಿಕ ನಾವೀನ್ಯತೆ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿಯೇ ಬಹು ಮುಖ್ಯ ಪಾತ್ರವಹಿಸಿದೆ ಮತ್ತು ಇತರೆ ರಾಜ್ಯಗಳಿಗೆ ಮಾದರಿಯಾಗಿದೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಭಾರತದ ಏಕೈಕ ರಾಜ್ಯವಾಗಿದ್ದು, ಕರ್ನಾಟಕ ಭಾರತದ ಬಯೋಟೆಕ್ನಾಲಜಿಯ ರಾಜಧಾನಿಯಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ಸೀತಾರಾಮನ್ ಅವರು ಹೇಳಿದರು.

ಇಂದು ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಬೆಂಗಳೂರು ಹೆಲಿಕ್ಸ್ ಬಯೋಟೆಕ್ನಾಲಜಿ ಪಾರ್ಕ್‍ನ್ನು ವೀಕ್ಷಿಸಿದ ನಂತರ ಕರ್ನಾಟಕದ ಬಯೋಟೆಕ್ನಾಲಜಿ ಕ್ಷೇತ್ರದ ಉದ್ಯಮಿಗಳು ಹಾಗೂ ನವೋದ್ಯಮಿಗಳೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಬೆಂಗಳೂರು ಸೇರಿದಂತೆ ಕರ್ನಾಟಕದ ಇತರೆ ಭಾಗಗಳಲ್ಲಿ ಸ್ಥಾಪಿಸಲಾಗಿರುವ ಬಯೋಟೆಕ್ನಾಲಜಿ ಉದ್ಯಮಗಳು ಭಾರತಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಹೆಸರನ್ನು ತಂದುಕೊಟ್ಟಿವೆ ಎಂದು ಕೊಂಡಾಡಿದರು.

ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದೆ. ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಬಯೋಟೆಕ್ನಾಲಜಿ ಕ್ಷೇತ್ರ ಭವಿಷ್ಯದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ ಎಂಬ ನಂಬಿಕೆ ನನಗಿದೆ. ಈ ಕ್ಷೇತ್ರದ ಬೆಳವಣಿಗೆಗೆ ಸರ್ಕಾರ ಸಕಲ ಸೌಲಭ್ಯಗಳನ್ನು ನೀಡಲು ಉತ್ಸುಕವಾಗಿದೆ ಎಂದು ತಿಳಿಸಿದರು.

ನವೋದ್ಯಮದ ಕ್ಷೇತ್ರಗಳಿಗೆ ಕೇಂದ್ರ ಸರ್ಕಾರ ಈಗಾಗಲೇ ಹಲವು ರೀತಿಯ ಸೌಲಭ್ಯಗಳನ್ನು ನೀಡಿದ್ದು, ಪ್ರಧಾನಿ ನರೇಂದ್ರ ಮೋದಿಯವರು ದೇಶದ ಆರ್ಥಿಕ ವ್ಯವಸ್ಥೆಯನ್ನು ಸದೃಡಗೊಳಿಸಬಲ್ಲ ಕ್ಷೇತ್ರಗಳ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಘೋಷಿಸಿದ್ದಾರೆ.

ಕರ್ನಾಟಕ ರಾಜ್ಯವು ಕಳೆದ ಎರಡು ದಶಕಗಳಿಂದ ಬಯೋಟೆಕ್ನಾಲಜಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತನ್ನು ನೀಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಇಲ್ಲಿನ ಸರ್ಕಾರಿ ಸಹಭಾಗಿತ್ವದೊಂದಿಗೆ ಖಾಸಗಿ ಸಂಸ್ಥೆಗಳ ನಿರ್ವಹಣೆ ಮತ್ತು ಅದರೊಂದಿಗೆ ಶಿಕ್ಷಣ ಕ್ಷೇತ್ರವನ್ನು ಸಹ ಕೊಂಡುಯ್ಯುತ್ತಿರುವುದು ಭವಿಷ್ಯದ ವಿಜ್ಞಾನಿಗಳನ್ನು ರೂಪಿಸುವ ಕಾರ್ಯ ಸಹ ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

ಇಂತಹ ಬೇಟಿಗಳು ಹಾಗೂ ಸಂವಾದಗಳು ಸರ್ಕಾರ ಹೊಸ ಯೋಜನೆಗಳನ್ನು ರೂಪಿಸುವಲ್ಲಿ ಸಹಾಯಕವಾಗುತ್ತವೆ. ಇಂದಿನ ಸಂವಾದದಲ್ಲಿ ಚರ್ಚಿಸಲಾದ ವಿಷಯಗಳು, ಸಲಹೆಗಳು ಮತ್ತು ಪ್ರಶ್ನೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದ್ದು, ಅವುಗಳೆಲ್ಲವನ್ನು ತಾವೇ ಖುದ್ದಾಗಿ ಪರಿಶೀಲಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ಅಗತ್ಯ ಬಿದ್ದಲ್ಲಿ ಉದ್ಯಮಿಗಳನ್ನು ದೆಹಲಿಗೆ ಕರೆಸಿಕೊಂಡು ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದರು.

ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ ಹಾಗೂ ಐಟಿ-ಬಿಟಿ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರು ಸಂವಾದದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಭಾರತದ ಬಯೋಟೆಕ್ನಾಲಜಿ ಆರ್ಥಿಕತೆಯಲ್ಲಿ ಕರ್ನಾಟಕ ಒಂದು ಪ್ರಮುಖ ರಾಜ್ಯವಾಗಿದ್ದು, 2025ರ ವೇಳೆಗೆ ಶೇಕಡ 19ರ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಪ್ರಧಾನಮಂತ್ರಿಗಳ ಆತ್ಮನಿರ್ಭರ ಭಾರತ ಯೋಜನೆಗೆ ಕರ್ನಾಟಕ ಸರ್ಕಾರ ಸ್ಥಳೀಯ ಉದ್ಯಮಿಗಳಿಗೆ ಅನೇಕ ಸೌಲಭ್ಯಗಳನ್ನು ನೀಡಿದ್ದು, ಇಲ್ಲಿನ ಅನೇಕ ಖಾಸಗಿ ಸಂಸ್ಥೆಗಳು ಬಯೋಟೆಕ್ನಾಲಜಿ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮನ್ನಣೆಗಳಿಸಿವೆ. ಬಯೋಟೆಕ್ನಾಲಜಿ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಗಾಗಿ ಕರ್ನಾಟಕ – 2030 ಯೋಜನೆಯನ್ನು ಸಿದ್ಧಪಡಿಸಲಾಗಿದ್ದು, ಅನೇಕ ಗುರಿಗಳನ್ನು ಹೊಂದಲಾಗಿದೆ ಎಂದು ತಿಳಿಸಿದರು.

ಕೇಂದ್ರ ವಿತ್ತ ಸಚಿವಾಲಯದ ಸರ್ಕಾರದ ಕಾರ್ಯದರ್ಶಿ ತರುಣ್ ಬಜಾಜ್ ಅವರು ಮಾತನಾಡಿ ಇಂದಿನ ಸಂವಾದದಲ್ಲಿ ನಡೆದ ವಿಷಯಗಳ ಕುರಿತು ಸಂಬಂಧಿಸಿದ ಇಲಾಖೆಗಳೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು. ಇಂತಹ ಬೇಟಿ ಹಾಗೂ ಸಂವಾದಗಳು ಸರ್ಕಾರದ ಯೋಜನೆಗಳನ್ನು ರೂಪಿಸುವಲ್ಲಿ ಸಹಾಯಕವಾಗುತ್ತವೆ. ಉದ್ಯಮಿಗಳು ತಮ್ಮ ಯಾವುದೇ ಸಲಹೆ ಸೂಚನೆ ಹಾಗೂ ಪ್ರಶ್ನೆಗಳಿಗೆ ನೇರವಾಗಿ ತಮ್ಮನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.

ರಾಜ್ಯ ಸರ್ಕಾರದ ಐಟಿ-ಬಿಟಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ ಅವರು ಮಾತನಾಡಿ ಅಂತರರಾಷ್ಟ್ರೀಯ ಮಟ್ಟದ ಬಯೋಟೆಕ್ನಾಲಜಿ ಪಾರ್ಕ್ ಸ್ಥಾಪಿಸುವಲ್ಲಿ ಹಾಗೂ ರಾಜ್ಯದ ಇತರೆ ನಗರಗಳಿಗೆ ಸಹ ಅದನ್ನು ವಿಸ್ತರಿಸುವಲ್ಲಿ ರಾಜ್ಯ ಸರ್ಕಾರ ಕಳೆದ ಎರಡು ದಶಕಗಳಿಂದ ಕೈಗೊಂಡಿರುವ ಕ್ರಮಗಳ ಕುರಿತು ವಿವರಿಸಿದರು.

ಬಯೋಟೆಕ್ನಾಲಜಿ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮನ್ನಣೆ ಗಳಿಸಿರುವ ಖ್ಯಾತ ಮಹಿಳಾ ಉದ್ಯಮಿ ಡಾ. ಕಿರಣ್ ಮಜುಂದಾರ್ ಶಾ ಅವರು ಸೇರಿದಂತೆ ಅನೇಕ ಉದ್ಯಮಿಗಳು ತಮ್ಮ ಕ್ಷೇತ್ರದ ಸಮಸ್ಯೆ ಹಾಗೂ ಭವಿಷ್ಯದ ಕುರಿತು ಸಂವಾದದಲ್ಲಿ ಕೇಂದ್ರ ಸಚಿವರ ಗಮನ ಸೆಳೆದರು.

ರಾಜ್ಯ ಐಟಿ-ಬಿಟಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಮೀನಾ ನಾಗರಾಜ್ ಅವರು ಸ್ವಾಗತ ಕೋರಿದರು. ಸಂವಾದ ಆರಂಭವಾಗುವ ಮುನ್ನಾ ಕೇಂದ್ರ ಸಚಿವೆ ಹಾಗೂ ಅಧಿಕಾರಿಗಳ ತಂಡ ರಾಜ್ಯ ಸರ್ಕಾರದ ಬೆಂಗಳೂರು ಜೈವಿಕ ನಾವೀನ್ಯತೆ ಕೇಂದ್ರ ಸೇರಿದಂತೆ ಹಲವು ಸಂಸ್ಥೆಗಳಿಗೆ ಬೇಟಿ ನೀಡಿ ವೀಕ್ಷಿಸಿದರು.

ಕನ್ನಡ ಪುಸ್ತಕ ಪ್ರಾಧಿಕಾರದ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟ:ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ ಆಯ್ಕೆ

ಬೆಂಗಳೂರು:ಕನ್ನಡ ಪುಸ್ತಕ ಪ್ರಾಧಿಕಾರದ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಪೂರ್ಣ ಗೊಂಡಿದ್ದು, ,

ಹಿರಿಯ ಸಾಹಿತಿ, ಚಿಂತಕ *ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ* ಅವರನ್ನು ಡಾ. ಎಂ.ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್. ನಂದೀಶ್ ಹಂಚೆ ಹೇಳಿದ್ದಾರೆ.

ಕನ್ನಡ ಪುಸ್ತಕ ಪ್ರಾಧಿಕಾರದಿಂದ ನೀಡಲಾಗುವ ಅತ್ಯುತ್ತಮ ಪ್ರಕಾಶನ ಪ್ರಶಸ್ತಿಯನ್ನು *ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ* ಕ್ಕೆ ನೀಡಲಾಗಿದೆ.

ಡಾ. ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿಗೆ ಮೈಸೂರಿನ *ಸಯ್ಯದ್ ಇಸಾಕ್* ಅವರನ್ನು ಆಯ್ಕೆ ಮಾಡಲಾಗಿದೆ.

ಡಾ|| ಅನುಪಮ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿಯನ್ನು *ಡಾ|| ಸುಧೀಂದ್ರ ಹಾಲ್ದೊಡ್ಡೇರಿ* ಅವರಿಗೆ ನೀಡಲಾಗಿದೆ ಎಂದು ಡಾ. ಎಂ.ಎನ್. ನಂದೀಶ್ ಹಂಚೆ ತಿಳಿಸಿದ್ದಾರೆ.

ಪುಸ್ತಕ ಬಹುಮಾನಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು ಕೆಲವು ದಿನಗಳಲ್ಲೇ ಪ್ರಕಟ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ರೂ.1.00ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.

ಡಾ. ಎಂ.ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ ರೂ.75,000-00 ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.

ಡಾ. ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ ರೂ.50,000-00 ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.

ಡಾ|| ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿ ರೂ.25,000-00 ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.

ಯಲಹಂಕ ಕೊವಿಡ್‌ ಆಸ್ಪತ್ರೆಗೆ ನಿಮರ್ಲಾ ಸೀತಾರಾಮನ್‌ ಭೇಟಿ

ಬೆಂಗಳೂರು: ಬೋಯಿಂಗ್‌ ಸಂಸ್ಥೆಯು, ‘ಸೆಲ್ಕೋ’, ‘ಡಾಕ್ಟರ್ಸ್‌ ಫಾರ್‌ ಯು’ ಸಹಯೋಗದೊಂದಿಗೆ ಯಲಹಂಕದಲ್ಲಿ ನಿರ್ಮಿಸಿರುವ 100 ಹಾಸಿಗೆಗಳ ಅತ್ಯಾಧುನಿಕ ಕೊವಿಡ್‌-ಕೇರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಗುರುವಾರ ಭೇಟಿ ನೀಡಿದರು.

ಯಲಹಂಕದಲ್ಲಿ ಬೋಯಿಂಗ್ ಸಂಸ್ಥೆಯು ಕೊವಿಡ್‌ ಕೇರ್‌ ಆಸ್ಪತ್ರೆ ನಿರ್ಮಿಸುತ್ತಿರುವ ವಿಷಯವನ್ನು ರಾಜ್ಯಕ್ಕೆ ಮೊದಲಿಗೆ ತಿಳಿಸಿದವರೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌. ಮೇ 7ರಂದು ಈ ವಿಷಯವನ್ನು ಟ್ವೀಟ್‌ ಮಾಡಿದ್ದ ವಿತ್ತ ಸಚಿವೆಗೆ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಧನ್ಯವಾದ ಹೇಳಿದ್ದರು.

ಬೋಯಿಂಗ್‌ ಸಂಸ್ಥೆಯು ಸೆಲ್ಕೋ’ ಮತ್ತು ‘ಡಾಕ್ಟರ್ಸ್‌ ಫಾರ್‌ ಯು’ ಸಹಯೋಗದೊಂದಿಗೆ ಅತಿ ಕಡಿಮೆ ಅವಧಿಯಲ್ಲಿ ಕೊವಿಡ್‌-ಕೇರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಿರುವ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದರು.

“ಕಾರ್ಪೋರೇಟ್‌ ಕಂಪನಿಗಳು ತಮ್ಮ ಸಮುದಾಯಿಕ ಜವಾಬ್ದಾರಿ ಕಾರ್ಯಕ್ರಮದ ಭಾಗವಾಗಿ ಕೋವಿಡ್‌ ಅಲೆ ನಿಯಂತ್ರಣ, ಚಿಕಿತ್ಸೆಯಲ್ಲಿ ಭಾಗಿಯಾಗಿರುವುದು ಶ್ಲಾಘನೀಯ,”ಎಂದರು

ಕರ್ನಾಟಕ ವಿದ್ಯುತ್‌ ನಿಗಮ ಆಸ್ಪತ್ರೆ ನಿರ್ಮಾಣಕ್ಕೆ ಅರ್ಧ ಎಕರೆ ಜಾಗ ಅಗತ್ಯ ಜಾಗ ಒದಗಿಸಿದೆ. ಡಾಕ್ಟರ್ಸ್‌ ಫಾರ್‌ ಯು ಸರ್ಕಾರೇತರ ಸಂಸ್ಥೆಯು ಆಸ್ಪತ್ರೆ ನಿರ್ವಹಣೆ ಮತ್ತು ಆರೋಗ್ಯ ಸೇವೆ ಒದಗಿಸುವ ಜವಾಬ್ದಾರಿ ವಹಿಸಿಕೊಂಡಿದೆ. ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಇರುವ ಆಸ್ಪತ್ರೆಯನ್ನು ಕೇವಲ 20 ದಿನದೊಳಗೆ ಪೂರ್ಣಗೊಳಿಸಿರುವುದು ವಿಶೇಷ.

ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣಾ ಉಪಸ್ಥಿತರಿದ್ದರು.

ಜಿ ಎಸ್ ಟಿ ಯಶಸ್ಸಿಗೆ ತೆರಿಗೆ ಸಲಹೆಗಾರರ ಕೊಡುಗೆ ಅಪಾರ :ಗೃಹ ಸಚಿವ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ:ಸರಕು ಮತ್ತು ಸೇವಾ ತೆರಿಗೆ ( GST )ವ್ಯವಸ್ಥೆ ದೇಶದಲ್ಲಿ ಯಶಸ್ವಿಯಾಗಲು ತೆರಿಗೆ ಸಲಹೆಗಾರರ ಕೊಡುಗೆ ಅಪಾರವಾಗಿದೆ ಎಂದು ಜಿಎಸ್ಟಿ ಮಂಡಳಿಯ ಕರ್ನಾಟಕದ ಪ್ರತಿನಿಧಿ, ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಹೇಳಿದರು.

ಗುರುವಾರ ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘ ಆಯೋಜಿಸಿದ್ದ ನಾಲ್ಕನೇ ವರ್ಷದ ಜಿಎಸ್ಟಿ ದಿನದ ಅಂಗವಾಗಿ ಆಯೋಜಿಸಿದ್ದ ಸಮಾರಂಭವನ್ನು ಉದ್ಘಾಟಿಸಿ ವರ್ಚುವಲ್ ಮೂಲಕ ಅವರು ಮಾತನಾಡಿದರು.

ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ಬಗ್ಗೆ ಹತ್ತು ವರ್ಷಗಳ ಕಾಲ ಚರ್ಚೆಯಾಗಿದೆ. ಇಷ್ಟು ವರ್ಷಗಳ ಸುದೀರ್ಘ ಚರ್ಚೆಯ ನಂತರ ಜಿಎಸ್ಟಿ ಜಾರಿಯಾಗಿದೆ. ಒಂದು ರಾಷ್ಟ್ರ ಒಂದು ತೆರಿಗೆ ಪರಿಕಲ್ಪನೆಯ ಜತೆ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಹಲವಾರು ವೈರುಧ್ಯ ಮತ್ತು ವೈವಿಧ್ಯತೆ ರಾಜ್ಯಗಳನ್ನು ಒಗ್ಗೂಡಿಸಿಕೊಂಡು ಹೋಗೋದು ಬಹುದೊಡ್ಡ ಕೆಲಸ. ಈ ದೊಡ್ಡ ಕೆಲಸದ ಹಿಂದಿರುವ ಇಂಜಿನ್ ಎಂದರೆ ಪ್ರಧಾನಿ ನರೇಂದ್ರ ಮೋದಿ ಎಂದು ಅವರು ಬಣ್ಣಿಸಿದರು.

ದೇಶದಲ್ಲಿ ಜಿಎಸ್ಟಿ ಜಾರಿಯಾದಾಗ ಹಳೇ ಪದ್ಧತಿಯಿಂದ ಹೊಸ ಪದ್ಧತಿಗೆ ಹೊಸ ಪದ್ಧತಿಗೆ ತಮ್ಮನ್ನು ತಾವು ಪರಿವರ್ತನೆ ಗೊಳಿಸಿಕೊಂಡವರು ಎಂದರೆ ತೆರಿಗೆ ಸಲಹೆಗಾರರು. ಅವರು ಹೊಸ ತೆರಿಗೆ ಪದ್ಧತಿಯನ್ನು ಅನುಷ್ಠಾನಕ್ಕೆ ತಂದರುಮ. ಜನರಲ್ಲಿ ಗೊಂದಲ ಸೃಷ್ಟಿಯಾಗದಂತೆ ಮುತುವರ್ಜಿ ವಹಿಸಿದರು. ಈ ಕಾರಣದಿಂದಾಗಿ ದೇಶದಲ್ಲಿ ಇಂದು ಜಿಎಸ್ಟಿ ತೆರಿಗೆ ವ್ಯವಸ್ಥೆ ನಾಲ್ಕು ವರ್ಷಗಳನ್ನು ಪೂರೈಸಿದೆ. ನಮ್ಮ ಮುಂದೆ ಮುಂದಿನ 40 ವರ್ಷಗಳಲ್ಲಿ ತೆರಿಗೆ ವ್ಯವಸ್ಥೆಯಲ್ಲಿ ಇನ್ನಷ್ಟು ಸರಳಿಕರಣ ಮಾಡಬೇಕಾದದ್ದು ಅಗತ್ಯವಾಗಿದೆ. ಒಟ್ಟಾರೆ ದೇಶಕಟ್ಟುವ ಕೆಲಸದಲ್ಲಿ ಹಾಗೂ ದೇಶದ ಅಭಿವೃದ್ಧಿಯಲ್ಲಿ ತೆರಿಗೆ ಸಲಹೆಗಾರರು ನಿರ್ವಹಿಸುವ ಪಾತ್ರ ಬಹುಮುಖ್ಯವಾಗಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಕಾರ್ಮಿಕರಿಗೆ ಭರ್ಜರಿ ಕೊಡುಗೆ ನೀಡಿದ ಸಚಿವ ಶಿವರಾಮ ಹೆಬ್ಬಾರ್

ಬೆಂಗಳೂರು : ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅವರು ಇಂದು ಕಾರ್ಮಿಕ ಕಲ್ಯಾಣ ಭವನದಲ್ಲಿ ಇಲಾಖೆಯ ಅಧಿಕಾರಿಗಳು ಹಾಗೂ ಮಂಡಳಿಯ ನಿರ್ದೇಶಕರೊಂದಿಗೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ಸಭೆ ನಡೆಸಿದರು.

ಇಂದಿನ ಸಭೆಯಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಮಂಡಳಿಯ ವತಿಯಿಂದ ನೀಡಲಾಗುತ್ತಿರುವ ಧನ ಸಹಾಯದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆ ಮಾಡುವುದರ ಮೂಲಕವಾಗಿ ಸಚಿವ ಶಿವರಾಮ ಹೆಬ್ಬಾರ್ ಅವರು ಕಾರ್ಮಿಕರಿಗೆ ಭರ್ಜರಿ ಕೊಡುಗೆಯನ್ನು ನೀಡಿದ್ದಾರೆ‌.

ಪಿಂಚಣಿ ಸೌಲಭ್ಯವನ್ನು 2000 ದಿಂದ 3 000 ರೂಪಾಯಿಗಳಿಗೆ ಏರಿಸಲಾಗಿದೆ, ಕುಟುಂಬ ಪಿಂಚಣಿಯನ್ನು 1000 ದಿಂದ 2000 ರೂಪಾಯಿ ವರೆಗೆ ಹೆಚ್ಚಿಸಲಾಯಿತು, ಹೆರಿಗೆ ಸೌಲಭ್ಯಗಳನ್ನು 20,00೦ ದಿಂದ 25,000 ರೂಪಾಯಿಗಳಿಗೆ ಹೆಚ್ಚಿಸಲಾಯಿತು, ಮಂಡಳಿವತಿಯಿಂದ ಹೆಣ್ಣು ಮಗುವಿಗೆ ನೀಡಲಾಗುತ್ತಿದ್ದ 30,000 ರೂಪಾಯಿಯನ್ನು 35,000 ರೂಪಾಯಿಗಳಿಗೆ ಏರಿಸಲಾಯಿತು, ನರ್ಸರಿ ವಾರ್ಷಿಕ ಸಹಾಯ ಧನವನ್ನು 3000 ದಿಂದ 5000 ರೂಪಾಯಿಗಳಿಗೆ ಹೆಚ್ಚಿಸಲಾಯಿತು, 1 ರಿಂದ ನಾಲ್ಕನೇ ತರಗತಿಯ ಮಕ್ಕಳಿಗೆ 3 ರಿಂದ 5 ಸಾವಿರ ,5 ರಿಂದ 8 ನೇ ತರಗತಿಯ ಮಕ್ಕಳಿಗೆ 5 ಸಾವಿರ ದಿಂದ 8 ಸಾವಿರ, 9 ರಿಂದ 10 ನೇ ತರಗತಿಯ ಮಕ್ಕಳಿಗೆ 10 ರಿಂದ 12 ಸಾವಿರ , ಪ್ರಥಮ ಪಿಯುಸಿ ಮಕ್ಕಳಿಗೆ 10,೦0೦ ದಿಂದ 15,000 , ಆಯ್.ಟಿ.ಆಯ್ ಮಕ್ಕಳಿಗೆ 12,000 ರಿಂದ 20,000 , ಪದವಿ ವಿಧ್ಯಾರ್ಥಿಗಳಿಗೆ 15,000 ದಿಂದ 25,000 ಹೆಚ್ಚಿಸಲಾಗಿದೆ.

ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 25,000 ರಿಂದ 40,000 ಸಾವಿರ ಏರಿಸಲಾಗಿದೆ, ಡಿಪ್ಲೊಮಾ ವಿಧ್ಯಾರ್ಥಿಗಳಿಗೆ 15,000 ರಿಂದ 20,000 ಸಾವಿರ , ಎಮ್.ಬಿ.ಬಿ.ಎಸ್ ವಿಧ್ಯಾರ್ಥಿಗಳಿಗೆ 30 ಸಾವಿರದಿಂದ 50 ಸಾವಿರ ಎಮ್.ಡಿ ವಿಧ್ಯಾರ್ಥಿಗಳಿಗೆ 45 ರಿಂದ 7೦ ಸಾವಿರ ಪಿ.ಎಚ.ಡಿ ವಿದ್ಯಾರ್ಥಿಗಳಿಗೆ 25 ರಿಂದ 50 ಸಾವಿರ ಗಳಷ್ಟು ಸಹಾಯ ಧನವನ್ನು ಹೆಚ್ಚಿಸಲಾಗಿದೆ.

ರಾಷ್ಟ್ರೀಯ ಕಾನೂನು ಕಾಲೇಜಿನಲ್ಲಿ ಹಾಗೂ IIT ಗಳಲ್ಲಿ ವ್ಯಾಸಂಗ ಮಾಡುವ ಕಟ್ಟಡ ಕಾರ್ಮಿಕರ ಮಕ್ಕಳ ಸಂಪೂರ್ಣ ಶೈಕ್ಷಣಿಕ ವೆಚ್ಚದಲ್ಲಿ ಮಂಡಳಿ ಭರಿಸಲಿದೆ, ಪ್ಯಾರಾ ಮೆಡಿಕಲ್ , ಬಿಎಡ್ ಕೋರ್ಸ್ ಗಳನ್ನು ಹೊಸದಾಗಿ ಸೇರಿಸಲಾಗಿದೆ, ಕಾನೂನು ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿಗಳಿಗೆ 30,೦0೦ ಹಾಗೂ ಇತರೆ ವೃತ್ತಿಪರ ಕೋರ್ಸ್ ಗಳಿಗೆ ಸಹಾಯ ಧನವನ್ನು ನೀಡಲಾಗುವುದು.

ಕಟ್ಟಡ ಕಾರ್ಮಿಕರ ವೈದ್ಯಕೀಯ ಸಹಾಯ ಧನವನ್ನು 10,000 ದಿಂದ 20,000 ರೂಪಾಯಿಗಳಿಗೆ ಹೆಚ್ಚಿಸಲಾಯಿತು, ವಿವಾಹ ಸಹಾಯಧನವನ್ನು 50 ಸಾವಿರದಿಂದ 60 ಸಾವಿರಕ್ಕೆ ಹೆಚ್ಚಿಸಲಾಯಿತು, ಈ ಎಲ್ಲಾ ನೂತನ ಪರಿಷ್ಕೃತ ಸಹಾಯ ಧನವನ್ನು ಇಂದಿನಿಂದಲ್ಲೆ ಜಾರಿಗೊಳಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯದ ಸುಮಾರು 8 ಲಕ್ಷಕ್ಕೂ ಅಧಿಕ ಕಾರ್ಮಿಕ ಈ ಸೌಲಭ್ಯ ಸಹಾಯವನ್ನು ಪಡೆಯಲ್ಲಿದ್ದಾರೆ ಮಂಡಳಿಯು ವಾರ್ಷಿಕವಾಗಿ ಸುಮಾರು 100 ಕೋಟಿ ರೂಪಾಯಿಗಳನ್ನು ಈ ಎಲ್ಲಾ ಯೋಜನೆಗಳಿಗೆ ವೆಚ್ಚ ಮಾಡಲಿದ್ದೆ ಎಂದು ಅಂದಾಜಿಸಲಾಗಿದೆ.

ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿಯ ವತಿಯಿಂದ ಅಗಸ್ಟ ತಿಂಗಳ ಅಂತ್ಯದೊಳಗಾಗಿ ವಿಶೇಷ ಅದಾಲತ ಮೂಲಕವಾಗಿ ಸಹಾಯ ಧನವನ್ನು ಪಡೆಯುವುದಕ್ಕೆ ಅರ್ಜಿ ಸಲ್ಲಿಸಿರುವ ಎಲ್ಲರ ಅರ್ಜಿಯನ್ನು ಇತ್ಯರ್ಥ ಮಾಡುವಂತೆ ಅಧಿಕಾರಿಗಳಿಗೆ ಖಡಕಕ್ಕಾಗಿ ಸೂಚಿಸಿದರು.