ಕ್ರೀಡಾ ವಸತಿ ನಿಲಯಕ್ಕೆ ಸಚಿವರ ಭೇಟಿ, ಪರಿಶೀಲನೆ

ಮಡಿಕೇರಿ ಜು. 01:ನಗರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಚೇರಿಗೆ ಭೇಟಿ ನೀಡಿದ ಸಚಿವರು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ವಸತಿ ನಿಲಯಗಳನ್ನು ವೀಕ್ಷಿಸಿದರು

ವಿದ್ಯಾರ್ಥಿಗಳ ಕೊಠಡಿ ಮತ್ತು ಮೇಲ್ವಿಚಾರಣೆಯನ್ನು ಪರೀಶೀಲಿಸಿದ ಸಚಿವರು ಗುಣಮಟ್ಟದ ಹಾಸಿಗೆ, ಸ್ಟಡಿ ಟೇಬಲ್‍ಗಳನ್ನು ವಿದ್ಯಾರ್ಥಿಗಳ ಅನುಕೂಲಕ್ಕೆ ಅನುಗುಣವಾಗಿ ನಿರ್ಮಿಸುವಂತೆ ಸಲಹೆ ನೀಡಿದರು.
ವಸತಿ ನಿಲಯಗಳು, ಕ್ರೀಡಾಂಗಣಗಳು ಅದರ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಅನಗತ್ಯ ವಸ್ತುಗಳನ್ನು ನಿಲಯದ ಸುತ್ತಮುತ್ತಲಿನ ಆವರಣದಲ್ಲಿ ಹಾಕಬಾರದು, ಕಸ ವಿಲೇವಾರಿ ಕೆಲಸಗಳು ತ್ವರಿತಗತಿಯಲ್ಲಿ ಜರುಗಬೇಕು. ವಿದ್ಯಾರ್ಥಿಗಳ ಅರೋಗ್ಯ ದೃಷ್ಠಿಯಿಂದ ಸಂಬಂಧಪಟ್ಟ ಇಲಾಖೆಗಳು ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ನಂತರ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಸಚಿವರು ಕ್ರಿಡಾಂಗಣದ ಸ್ವಚ್ಛತೆ, ಆಗಬೇಕಾಗಿರುವ ಅಭಿವೃದ್ಧಿ ಕಾಮಗಾರಿಗಳು, ಕ್ರಿಡಾಸಾಮಗ್ರಿಗಳ ಗುಣಮಟ್ಟ, ಮೊದಲಾದ ವಿಷಯಗಳ ಬಗ್ಗೆ ಹಾಗೂ ತರಬೇತುದಾರರಿಂದ ಕ್ರೀಡಾಭಿವೃದ್ಧಿ ಸವಲತ್ತುಗಳ ಸಮರ್ಪಕ ಬಳಕೆಯ ಮಾಹಿತಿಯನ್ನು ಪಡೆದರು.

ಶಾಸಕರಾದ ಸುನೀಲ್ ಸುಬ್ರಮಣಿ, ಜಿಲ್ಲಾಧಿಕಾರಿ ಚಾರುಲತ್ ಸೋಮಲ್, ಜಿ.ಪಂ ಸಿಇಒ ಭನ್ವರ್ ಸಿಂಗ್ ಮೀನಾ, ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಯುವ ಸಬಲೀಕರಣ ಇಲಾಖೆ ಆಯುಕ್ತರಾದ ಗೋಪಾಲಕೃಷ್ಣ, ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕರಾದ ಗುರುಸ್ವಾಮಿ ಇತರರು ಇದ್ದರು.

ಜೆಡಿಎಸ್‍ಗೆ ಸೇರ್ಪಡೆಯಾದ ನೂರಾರು ಮುಖಂಡರು

ಬೆಂಗಳೂರು– ಮುಂಬರುವ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಜೆಡಿಎಸ್‍ಗೆ ಇಂದು ವಿವಿಧ ಪಕ್ಷಗಳ ನೂರಾರು ಮುಖಂಡರು ಪಕ್ಷಕ್ಕೆ ಸೇರ್ಪಡೆಯಾದರು.

ಈಗಾಗಲೇ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಎಂದು ಘೋಷಣೆಯಾಗಿರುವ ನಿಯಾಜ್ ಶೇಖ್ ನೇತೃತ್ವದಲ್ಲಿ 300ಕ್ಕೂ ಹೆಚ್ಚು ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್ ಮತ್ತಿತರರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಜೆಪಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷಕ್ಕೆ ಸೇರ್ಪಡೆಯಾದ ಎಲ್ಲರನ್ನೂ ಬಾವುಟ ಮತ್ತು ಶಾಲು ಹೊದಿಸಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ಕಾಂಗ್ರೆಸ್ ಹಾಗೂ ಬಿಜೆಪಿ ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಕಾರ್ಯಕರ್ತರು ಜೆಡಿಎಸ್‍ನ ತತ್ವ-ಸಿದ್ಧಾಂತ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನಾಯಕತ್ವವನ್ನು ಒಪ್ಪಿಕೊಂಡು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಮಾಜಿ ಸಚಿವ ಸಿ.ಎಂ.ಉದಾಸಿ ಅವರ ನಿಧನದಿಂದ ತೆರವಾಗಿರುವ ಹಾನಗಲ್ ವಿಧಾನಸಭಾ ಕ್ಷೇತ್ರಕ್ಕೆ ಸದ್ಯದಲ್ಲೇ ಉಪಚುನಾವಣೆ ದಿನಾಂಕ ಘೋಷಣೆಯಾಗಲಿದೆ. ಜೆಡಿಎಸ್ ಈಗಾಗಲೇ ನಿಯಾಜ್ ಶೇಖ್ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದೆ.

ಬಿಜೆಪಿ ಮತ್ತು ಕಾಂಗ್ರೆಸ್‍ಗೆ ಪ್ರಬಲ ಸ್ಪರ್ಧೆ ನೀಡಲೇಬೇಕೆಂದು ಪಣ ತೊಟ್ಟಿರುವ ಜೆಡಿಎಸ್ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯ ಮೆರೆಯಲು ಸಜ್ಜಾಗಿದೆ.

ಲಸಿಕೀಕರಣ ಮುಗಿಯುತ್ತಿದ್ದಂತೆ ಕಾಲೇಜು ಆರಂಭ ಕುರಿತು‌ ನಿರ್ಧಾರ: ಡಿಸಿಎಂ

ಬೆಂಗಳೂರು: ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ಸಿಬ್ಬಂದಿಯ ಲಸಿಕೀಕರಣ ಕಾರ್ಯಕ್ರಮವನ್ನು ಚುರುಕುಗೊಳಿಸಬೇಕು. ಸಾಧ್ಯವಾದಷ್ಟು ಇದೇ 7ರೊಳಗೆ ಮುಗಿಸಲು ಆದ್ಯತೆ‌ ನೀಡಬೇಕು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಎಲ್ಲ ವಿವಿಗಳ ಕುಲಪತಿಗಳಿಗೆ ನಿರ್ದೇಶನ ನೀಡಿದರು.

ಕೋವಿಡ್ ‌ಲಸಿಕೆಯನ್ನು‌ ಹೆಚ್ಚು ತ್ವರಿತವಾಗಿ‌ ಕೊಡಿಸುವ ಸಂಬಂಧ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳ ಜತೆ ಗುರುವಾರ ವಿಡಿಯೊ ಸಂವಾದ ನಡೆಸಿದ ನಂತರ ಅವರು‌ ಸುದ್ದಿಗಾರರ ಜತೆ ಮಾತನಾಡಿದರು.

ರಾಜ್ಯದಲ್ಲಿ ಇನ್ನೆರಡು ತಿಂಗಳ ಒಳಗಾಗಿ ಒಟ್ಟು ಜನಸಂಖ್ಯೆಯಲ್ಲಿ ಶೇ.50ರಷ್ಟು ಜನರಿಗೆ ಲಸಿಕೆ ಲಭ್ಯವಾಗಲಿದೆ. ಈ ನಿಟ್ಟಿನಲ್ಲಿ ಭೌತಿಕ ತರಗತಿಗಳು ಆರಂಭಕ್ಕೆ ಮುನ್ನವೇ ಎಲ್ಲ ವಿದ್ಯಾರ್ಥಿಗಳಿಗೆ ಲಸಿಕೆ ನೀಡಬೇಕು ಹಾಗೂ ನಿತ್ಯವೂ ಪೂರೈಕೆಯಾಗುವ  ಲಸಿಕೆಯನ್ನು ಸಂಬಂಧಿಸಿದ ಅಧಿಕಾರಿಗಳ ಜತೆ ಸಮನ್ವಯ ಸಾಧಿಸಿಕೊಂಡು ಪಡೆದುಕೊಳ್ಳಬೇಕು ಎಂದರು.

ಯಾವುದೇ ಕಾರಣಕ್ಕೂ ಶೈಕ್ಷಣಿಕ ಚಟುವಟಿಕೆ ನಿಲ್ಲಬಾರದು, ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಆಗಬಾರದು. ಈ ಹಿನ್ನೆಲೆಯಲ್ಲಿ ಲಸಿಕೆಯೇ ಪರಿಹಾರ. ಇದನ್ನು ಎಲ್ಲ ಕುಲಪತಿಗಳು ಗಂಭೀರವಾಗಿ ಪರಿಗಣಿಸಬೇಕು. ಎಲ್ಲ ವಿವಿಗಳಲ್ಲಿ ಲಸಿಕೀಕರಣ ಮುಗಿದ ನಂತರ ನೇರ ತರಗತಿಗಳನ್ನು ಆರಂಭ ಮಾಡುವ ಕುರಿತು ನಿರ್ದರಿಸಲಾಗುವುದು., ಈಗ ನಡೆಯುತ್ತಿರುವ ಆನ್‌ಲೈನ್‌ ತರಗತಿಗಳು ಅಬಾಧಿತ ಎಂದರು.

ಪದವಿ ವಿದ್ಯಾರ್ಥಿಗಳಿಗೆ ಹೆಲ್ಪ್‌ಲೈನ್‌

ವಿದ್ಯಾರ್ಥಿಗಳಿಗೆ ಈಗಾಗಲೇ ಡಿಜಿಟಲ್‌ ವೇದಿಕೆಗಳ ಮೂಲಕ ಎಲ್ಲ ಮಾಹಿತಿ ಸಿಗುತ್ತಿದ್ದಾಗ್ಯೂ ಅವರ ಮತ್ತಷ್ಟು ಅನುಕೂಲಕ್ಕಾಗಿ ಹೆಲ್ಪ್‌ಲೈನ್‌ ವ್ಯವಸ್ಥೆಯನ್ನು ರೂಪಿಸಲಾಗುವುದು ಎಂದು ಈ ಸಂದರ್ಭದಲ್ಲಿ ಡಿಸಿಎಂ ಹೇಳಿದರು.ಹೆಲ್ಪ್‌ಲೈನ್‌ ವ್ಯವಸ್ಥೆಯನ್ನು ಆಯಾ ವಿವಿ ವ್ಯಾಪ್ತಿಯಲ್ಲಿ ಮಾಡಿಕೊಳ್ಳಬೇಕು. ಅದಕ್ಕೆ ಬೇಕಾದ ಸಂಪೂರ್ಣ ಸಹಕಾರವನ್ನು ಸರಕಾರ ನೀಡುತ್ತದೆ. ಕಾಲ್‌ ಸೆಂಟರ್‌ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಸಹಾಯ ಆಗಲಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಆಗುತ್ತಿರುವ ಹಿನ್ನೆಲೆಯಲ್ಲಿ ಇದೊಂದು ಅತ್ಯುತ್ತಮ ಉಪಕ್ರಮ ಆಗಲಿದೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

ಉನ್ನತ ಶಿಕ್ಷಣ ಪರಿಷತ್‌ ಉಪಾಧ್ಯಕ್ಷ ಡಾ.ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲಕೃಷ್ಣ ಜೋಶಿ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕುಲಪತಿ ಪ್ರೊ.ಕರಿಸಿದ್ದಪ್ಪ ಸೇರಿದಂತೆ ಮೈಸೂರು, ಮಂಗಳೂರು, ಬೆಳಗಾವಿ, ಶಿವಮೊಗ್ಗ ಮುಂತಾದ ವಿವಿಗಳ ಕುಲಪತಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

ವೃಷಭಾವತಿ ಕಣಿವೆ ವ್ಯಾಪ್ತಿಯಲ್ಲಿ ಮಾಲಿನ್ಯ ತಪಾಸಣೆಗೆ 3 ತುರ್ತು ಸ್ಪಂದನ ವಾಹನಗಳಿಗೆ ಸಚಿವ ಸಿ.ಪಿ. ಯೋಗೇಶ್ವರ ಚಾಲನೆ

ಬೆಂಗಳೂರು:ರಾಜ್ಯ ಪರಿಸರ ಮಾಲಿನ್ಯ ಮಂಡಳಿಯು ವೃಷಭಾವತಿ ಕಣಿವೆ ವ್ಯಾಪ್ತಿಯಲ್ಲಿರುವ ಕೈಗಾರಿಕೆಗಳು ಹಾಗೂ ಉದ್ದಿಮೆಗಳಿಂದಾಗುವ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಮಾಲಿನ್ಯ ತಪಾಸಣೆ ಮಾಡಲು 3 ತುರ್ತು ಸ್ಪಂದನ ವಾಹನಗಳನ್ನು ನಿಯೋಜನೆ ಮಾಡಿದೆ.

ಪರಿಸರ, ಜೀವಿಶಾಸ್ತ್ರ ಹಾಗೂ ಪ್ರವಾಸೋದ್ಯಮ ಸಚಿವರಾದ ಸಿ.ಪಿ. ಯೋಗೇಶ್ವರ ಅವರು ವಿಧಾನಸೌಧದ ಆವರಣದಲ್ಲಿ ತುರ್ತು ಸ್ಪಂದನ ವಾಹನಗಳಿಗೆ ಚಾಲನೆ ನೀಡಿ ಸೇವೆಗೆ ಸಮರ್ಪಿಸಿದರು. ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ವೃಷಭಾವತಿ ಕಣಿವೆ ಪ್ರದೇಶದಲ್ಲಿ ಮಾಲಿನ್ಯ ತಡೆಗಟ್ಟುವಂತೆ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗಿತ್ತು. ಈ ಹಿನ್ನಲೆಯಲ್ಲಿ, ಮಾಲಿನ್ಯ ನಿಯಂತ್ರಿಸಲು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು. ಬೆಂಗಳೂರು ನಗರದಲ್ಲಿ ವೃಷಭಾವತಿ ಕಣಿವೆ ಸೇರಿದಂತೆ ಇತರೆಡೆ ಅಧಿಕ ಪ್ರಮಾಣದಲ್ಲಿ ಕೈಗಾರಿಕೆ ತ್ಯಾಜ್ಯದಿಂದ ಮಾಲಿನ್ಯವಾಗುತ್ತಿದೆ. ಈ ಬಗ್ಗೆ ಸಹ ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಳೆದ 8 ತಿಂಗಳಿಂದ ಶಾಶ್ವತ ಅಧ್ಯಕ್ಷರಿಂದ ಅವರನ್ನು ಸಹ ತ್ವರಿತವಾಗಿ ನೇಮಕ ಮಾಡಬೇಕಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್ ಕುಮಾರ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಶ್ರೀನಿವಾಸಲು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ವೃಷಭಾವತಿ ಕಣಿವೆ ವ್ಯಾಪ್ತಿಯಲ್ಲಿರುವ ಕೈಗಾರಿಕೆಗಳಿಂದ ಉಂಟಾಗುವ ಮಾಲಿನ್ಯ ತಡೆಗಟ್ಟಲು ದ್ರವ ತ್ಯಾಜ್ಯ ಸಂಸ್ಕರಣಾ ಘಟಕಗಳು, ಸಾಮಾನ್ಯ ತ್ಯಾಜ್ಯ ಘಟಕಗಳು ಮತ್ತು ಕೈಗಾರಿಕೆ ತಪಾಸಣೆ ಕಾರ್ಯ ಮಾಡಲು ಅಧಿಕಾರಿಗಳ ತಂಡವನ್ನು ರಚಿಸಿದ್ದು, ಈ ಅಧಿಕಾರಿಗಳು ತುರ್ತು ಸ್ಪಂದನ ವಾಹನಗಳ ಮೂಲಕ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ರಾಷ್ಟ್ರದಲ್ಲೇ ಪ್ರಥಮ ಬಾರಿಗೆ ಮಾಲಿನ್ಯ ತಡೆಗಟ್ಟಲು ಅಭಿಯಾನವನ್ನು ಆಯೋಜಿಸಲಾಗಿದೆ.

ತಪಾಸಣೆಗೆ ತೆರಳುವ ಪ್ರತಿಯೊಂದು ವಾಹನಕ್ಕೆ ತಲಾ ಇಬ್ಬರು ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಬೆಂಗಳೂರು ಉತ್ತರ ವಲಯದ ಹಿರಿಯ ಪರಿಸರ ಅಧಿಕಾರಿ ಸಿ. ಸಿದ್ದರಾಮಯ್ಯ ರವರನ್ನು ವಿಶೇಷ ತಪಸಣಾ ಅಭಿಯಾನದ ಸಮನ್ವಯ ಅಧಿಕಾರಿಯಾಗಿ ನಾಮನಿರ್ದೇಶನ ಮಾಡಲಾಗಿದೆ. ಈ ಅಭಿಯಾನದ ಕೊನೆಯಲ್ಲಿ “ನೀರಿ” (ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ) ನೀಡಿರುವ ಸಲಹೆಗಳಿಗೆ ಸಂಬಂಧಪಟ್ಟಂತೆ ಅಲ್ಪಾವಧಿ ಹಾಗೂ ದೀರ್ಘಾವಧಿ ಕ್ರಮಗಳನ್ನು ಅನುಷ್ಠಾನಗೊಳಿಸಿ ನಿರ್ದಿಷ್ಟ ಶಿಫಾರಸ್ಸುಗಳು ಹಾಗೂ ಕಾರ್ಯ ಯೋಜನೆಯೊಂದಿಗೆ ಅಂತಿಮ ವರದಿ ಸಲ್ಲಿಸಲಿದ್ದಾರೆ.

ರಾಜ್ಯ ಹೈಕೋರ್ಟ್ ರಿಟ್ ಖಟ್ಲೆ ಸಂಖ್ಯೆ 6961/2020ರ ವಿಚಾರಣೆಯ ಭಾಗವಾಗಿ ವೃಷಭಾವತಿ ನದಿ ಕಣಿವೆ ವ್ಯಾಪ್ತಿಯಲ್ಲಿನ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ‘ನೀರಿ’ (ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ) ಸಲ್ಲಿಸಿದ್ದ ವರದಿಯನ್ನು ಪರಿಗಣಿಸಿ, ಅದರಲ್ಲಿ ನೀಡಲಾಗಿರುವ ಸಲಹೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅಲ್ಪಾವಧಿ ಮತ್ತು ದೀರ್ಘಾವಧಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶಿಸಿದೆ. ಇದೇ ವೇಳೆ, ಕಣಿವೆ ವ್ಯಾಪ್ತಿಯಲ್ಲಿ ಸರ್ವೆಯನ್ನು ನಡೆಸುವಂತೆಯೂ ಸೂಚಿಸಿದೆ.

ಹೈಕೋರ್ಟ್ನ ನಿರ್ದೇಶನದ ಮೇರೆಗೆ ರಾಜ್ಯ ಪರಿಸರ ಮಾಲಿನ್ಯ ಮಂಡಳಿಯು ವೃಷಭಾವತಿ ಕಣಿವೆ ವ್ಯಾಪ್ತಿಯಲ್ಲಿ ಮಾಲಿನ್ಯ ತಪಾಸಣೆ ಅಭಿಯಾನವನ್ನು ಕೈಗೊಂಡಿದೆ.

ಮುಖ್ಯಮಂತ್ರಿಗಳೇ ಕನಿಷ್ಟ ಪಕ್ಷ ಚಾಮರಾಜನಗರ ದುರಂತದ 36 ಮೃತರ ಕುಟುಂಬವನ್ನಾದರೂ ಭೇಟಿ ಮಾಡಿ, ಅವರ ಗೋಳು ಕೇಳಿ; ಡಿ.ಕೆ. ಶಿವಕುಮಾರ್ ಆಗ್ರಹ

ಬೆಂಗಳೂರು:‘ಮುಖ್ಯಮಂತ್ರಿಗಳು ಹಾಗೂ ಅವರ ಸಂಪುಟ ಸಹೋದ್ಯೋಗಿಗಳು ಇಡೀ ರಾಜ್ಯ ಸುತ್ತಿ ಜನರ ಸಂಕಷ್ಟ ಆಲಿಸಬೇಕು. ಇಡೀ ರಾಜ್ಯ ಆಗದಿದ್ದರೂ ಕನಿಷ್ಟ ಪಕ್ಷ ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ 36 ಮಂದಿಯ ಕುಟುಂಬಗಳನ್ನಾದರೂ ಭೇಟಿ ಮಾಡಿ, ಅವರ ಕಷ್ಟ ಕೇಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು’ನಮ್ಮ ಧ್ವನಿ ಸರ್ಕಾರಕ್ಕೆ ಕೇಳಿಸುತ್ತಿಲ್ಲ. ನಮ್ಮ ಜನರ ನೋವು ಅದಕ್ಕೆ ಕಾಣುತ್ತಿಲ್ಲ. ನಮಗೆ ಹಾಗೂ ನ್ಯಾಯಾಲಯಗಳಿಗೆ ಕಾಣುತ್ತಿವೆ. ಈ ನಿಟ್ಟಿನಲ್ಲಿ ನ್ಯಾಯಾಲಯ ನಿರಂತರವಾಗಿ ಜನಪರ ಆದೇಶ ನೀಡುತ್ತಲೇ ಇದೆ.ನಿನ್ನೆ ಕೂಡ ಸುಪ್ರೀಂ ಕೋರ್ಟ್ ಪರಿಹಾರ ವಿಚಾರವಾಗಿ 6 ತಿಂಗಳ ಸಮಯಾವಕಾಶ ನೀಡಿದೆ. ಪ್ರಜಾಪ್ರಭುತ್ವದಲ್ಲಿ ಪತ್ರಿಕಾರಂಗದ ವರದಿಗಳನ್ನು ನ್ಯಾಯಾಂಗ ಗಂಭೀರವಾಗಿ ಪರಿಗಣಿಸಿ ಜನರ ಪರವಾಗಿ ನಿಂತಿದೆ. ಅದಕ್ಕಾಗಿ ರಾಜ್ಯದ ಜನರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಚಾಮರಾಜನಗರ ದುರಂತದಲ್ಲಿ 36 ಜನ ಸತ್ತಿದ್ದರೂ ಸರ್ಕಾರ 24 ಕುಟುಂಬಗಳಿಗೆ ಮಾತ್ರ ಪರಿಹಾರ ಕೊಟ್ಟಿದೆ. ಈ ಘಟನೆಗೆ ಇದುವರೆಗೂ ಯಾರನ್ನೂ ಹೊಣೆ ಮಾಡಿಲ್ಲ. ನೀವು ತಪ್ಪು ಮಾಡಿಲ್ಲ ಅಂದಮೇಲೆ ನೀವ್ಯಾಕೆ ಜನರ ಬಳಿ ಹೋಗಿ ಅವರನ್ನು ಮಾತನಾಡಿಸುತ್ತಿಲ್ಲ. ಅವರ ಗೋಳು ಕೇಳದಿದ್ದ ಮೇಲೆ ಈ ಸರ್ಕಾರಕ್ಕೆ ಯಾಕಿರಬೇಕು? ಮುಖ್ಯಮಂತ್ರಿಗಳೇ ಹೋಗಬೇಕು ಅಂತಾ ಇಲ್ಲ, ಯಾರಾದರೂ ಮಂತ್ರಿ ಹೋಗಬಹುದಲ್ಲ. ಯಾಕೆ ಆ ಕೆಲಸ ಆಗಿಲ್ಲ? ನ್ಯಾಯಾಲಯವೇ ಈ ಸಾವುಗಳು ಆಕ್ಸಿಜನ್ ಕೊರತೆಯಿಂದ ಆಗಿವೆ ಎಂದ ಮೇಲೆ ಇವು ಸಹಜ ಸಾವೋ, ಕೊಲೆಯೋ ನೀವೇ ನಿರ್ಧರಿಸಿ. ಅಲ್ಲಿ ಆಕ್ಸಿಜನ್ ಕೊರತೆ ಇದೆ ಅಂತ ಅಧಿಕಾರಿಗಳಿಂದ ಮಂತ್ರಿಗಳವರೆಗೂ ಎಲ್ಲರಿಗೂ ಮೊದಲೇ ಗೊತ್ತಿತ್ತು. ಆದರೂ ಆಕ್ಸಿಜನ್ ಪೂರೈಸಲು ಕ್ರಮ ತೆಗೆದುಕೊಳ್ಳಲಿಲಿಲ್ಲ. ಕೊರತೆ ಇದ್ದ ಕಾರಣ ಒಂದೇ ಆಕ್ಸಿಜನ್ ಪೈಪ್ ಅನ್ನು ಒಬ್ಬರಾದ ಮೇಲೆ ಮತ್ತೊಬ್ಬರಿಗೆ ಐದೈದು ನಿಮಿಷದಂತೆ ನೀಡಲಾಗಿದೆ ಎಂದರು.

ನಾನು ಚಾಮರಾಜನಗರ ನಗರಕ್ಕೆ ಹೋದಾಗ ಅಲ್ಲಿನ ಜನ ತಮ್ಮ ಗೋಳು ತೋಡಿಕೊಂಡಾಗ ಮನಸಿಗೆ ಬಹಳ ಬೇಸರವಾಯಿತು. ರಾಷ್ಟ್ರೀಯ ಮಟ್ಟದ ಶೂಟರ್ ಮಡಿಲಿನಲ್ಲೇ ತಾಯಿ ವಿಲಿವಿಲಿ ಒದ್ದಾಡಿ ಪ್ರಾಣ ಬಿಟ್ಟಿದ್ದಾಳೆ. ಕೆಲವು ಕಡೆ ವೈದ್ಯರು, ನರ್ಸ್ ಗಳು ಇರಲಿಲ್ಲ. 36 ಜನರೂ ಪ್ರಾಣಿಗಳಂತೆ ನರಳಾಡಿ ಸತ್ತಿದ್ದಾರೆ. ಜನರಿಗೆ ಗೊತ್ತಾಗಬಾರದು ಎಂದು ಸತ್ತವರನ್ನು ಅಲ್ಲಿಂದ ಬೆರೆ ಕಡೆಗೆ ಸಾಗಿಸಿದ್ದಾರೆ.36 ಮೃತರ ಪೈಕಿ 80% ರಷ್ಟು ಜನ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಒಬ್ಬನಿಗೆ ಮದುವೆಯಾಗಿ 3 ತಿಂಗಳಾಗಿದೆ. ಮತ್ತೊಬ್ಬನಿಗೆ ಮದುವೆ ನಿಶ್ಚಯವಾಗಿತ್ತು. ಎಲ್ಲರೂ ಅವರವರ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದವರು.ಎಲ್ಲ ವಿಚಾರವನ್ನು ನಾನು ಇಲ್ಲಿ ಮಾತನಾಡುವುದಿಲ್ಲ, ಅಧಿವೇಶನದಲ್ಲಿ ಮಾತನಾಡುತ್ತೇನೆ. ಮೆಡಿಕಲ್ ಟೂರಿಸಂಗೆ ಹೆಸರುವಾಸಿಯಾಗಿರುವ ನಮ್ಮ ರಾಜ್ಯದಲ್ಲೇ, ವೈದ್ಯರು, ಡೀನ್ ಗಳು ಇರುವ ಆಸ್ಪತ್ರೆಯಲ್ಲೇ ಈ ಪರಿಸ್ಥಿತಿಯಾದರೆ ಇನ್ನು ಬೇರೆ ಕಡೆ ಹೇಗಿರಬೇಡ ಎಂದು ಪ್ರಶ್ನಿಸಿದರು.

ಒಬ್ಬ ಯುವಕನ ದೇಹವನ್ನು ಬೇರೆಯವರಿಗೆ ನಿಮ್ಮ ಕಡೆಯವರು ತೆಗೆದುಕೊಂಡು ಹೋಗಿ ಎಂದು ಬಲವಂತ ಮಾಡಿದ್ದಾರೆ. ಆಮೇಲೆ ಅವರು ನಮ್ಮವರಲ್ಲ ಎಂದು ಮತ್ತೆ ವಾಪಸ್ ತಂದುಕೊಟ್ಟಿದ್ದಾರೆ. ನಂತರ ಆತನನ್ನು ಅವನ ಸ್ನೇಹಿತರು ಗುರುತಿಸಿ, ಆತನ ತಾಯಿಗೆ ಶವ ಹಸ್ತಾಂತರ ಮಾಡಿದ್ದಾರೆ.ನಾನು ಹೋಗುವ ದಿನದವರೆಗೂ ಸೋಂಕಿತನಾಗಿದ್ದ ವ್ಯಕ್ತಿಗೆ ತನ್ನ ಮಗಳು ಹಾಗೂ ಅತ್ತೆ ಸತ್ತಿದ್ದಾಳೆ ಎನ್ನುವ ವಿಷಯವೇ ಗೊತ್ತಿರಲಿಲ್ಲ. ಗಂಡನನ್ನು ಕಳೆದುಕೊಂಡ ಮತ್ತೊಂದು ಹೆಣ್ಣು ಮಗಳಿಗೆ ಚಿಕ್ಕ ಮಕ್ಕಳು ಹಾಗೂ ಅತ್ತೆ, ಮಾವನ ಜವಾಬ್ದಾರಿ ಇದೆ. ಆಕೆಗೆ ಗಂಡನ ಮರಣ ಪ್ರಮಾಣ ಪತ್ರವನ್ನೇ ನೀಡುತ್ತಿಲ್ಲ. ಹೀಗಾಗಿ ಪರಿಹಾರವೂ ಸಿಕ್ಕಿಲ್ಲ. ಆಕ್ಸಿಜನ್ ನೀಡದೇ ಕೊಂದು ಹಾಕಿ, ಸಹಜ ಸಾವು ಅಂತಾ ಮರಣ ಪತ್ರ ನೀಡುತ್ತಿದ್ದಾರೆ.ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಸತ್ತವರಿಗೆ ಪರಿಹಾರ ನೀಡಬೇಕು ಅಂತಾ ಕೋರ್ಟ್ ಹಾಗೂ ನಾವು ಒತ್ತಾಯ ಮಾಡಿದ್ದೇವೆ. ನಾನು ಹಾಗೂ ನಮ್ಮ ನಾಯಕರು ಚಾಮರಾಜನಗರಕ್ಕೆ ಹೋಗಿ ಅವರಿಗೆ ತಲಾ 1 ಲಕ್ಷ ರುಪಾಯಿ ಪರಿಹಾರವನ್ನು ಪಕ್ಷದ ವತಿಯಿಂದ ಕೊಟ್ಟಿದ್ದೇವೆ. ಸಂತ್ರಸ್ತ ಕುಟುಂಬದವರಿಗೆ ಮರಣ ಪ್ರಮಾಣ ಪತ್ರ ನೀಡುತ್ತಿಲ್ಲ. ಹಾಗಾದರೆ ಅವರು ಈಗ ಹೇಗೆ ಅರ್ಜಿ ಹಾಕಬೇಕು? ಅವರಿಗೆ ಪರಿಹಾರ ಹೇಗೆ ಸಿಗಬೇಕು? ಇಂತಹ ಸಮಯದಲ್ಲಿ ನಾನು ಚೆಕ್ ಬುಕ್ ತೆಗೆದುಕೊಂಡು ಹೋಗಿ, ಸಂಬಂಧಪಟ್ಟವರನ್ನು ಮಾತನಾಡಿಸಿ, ಕೋವಿಡ್ ನಿಂದ ಸತ್ತವರ ಕುಟುಂಬಗಳಿಗೆ ಪರಿಹಾರ ನೀಡಿದ್ದೇನೆ. ಅದೇ ರೀತಿ ಸರ್ಕಾರಕ್ಕೆ ಯಾಕೆ ನೀಡಲು ಆಗುತ್ತಿಲ್ಲ ಎಂದರು.

ಸರ್ಕಾರಿ ವೆಬ್ಸೈಟ್ ನಲ್ಲಿ ಜೂನ್ 13 ರವರೆಗೂ 3,27,985 ಜನ ಕೋವಿಡ್ ನಿಂದ ಸತ್ತಿದ್ದಾರೆ. ಆದರೆ ಸರ್ಕಾರ ಹೇಳುತ್ತಿರೋದು 30 ಸಾವಿರ ಮಾತ್ರ. ಹಾಗಾದರೆ ಉಳಿದವರಿಗೆ ಪರಿಹಾರ ನೀಡುವವರು ಯಾರು? ಪರಿಹಾರದಿಂದ ಅವರು ಬದುಕುವುದಿಲ್ಲ ಎನ್ನುವುದು ಬೇರೆ ಮಾತು. ಆದರೆ ನಿಮ್ಮ ಜತೆ ಸರ್ಕಾರ ಇದೆ ಅಂತಾ ಧೈರ್ಯ ಹೇಳಬಹುದಲ್ಲವೇ?ಆಸ್ಪತ್ರೆಗೆ ಸೇರುವಾಗಲೂ ಹಣ, ಸತ್ತ ಮೇಲೆ ಹೆಣ ಪಡೆಯಲು ಹಣ. ರಾಜ್ಯಕ್ಕೆ ಇದೇನು ಗ್ರಹಚಾರ ಬಂತು ಮುಖ್ಯಮಂತ್ರಿಗಳೇ? ಆರೋಗ್ಯ ಸಚಿವರೇ? ನಾನು ಮಂತ್ರಿಗಳನ್ನು ಕಳಿಸಿ ಎಂದು ಹೇಳಿದ ನಂತರ ಮಂತ್ರಿಗಳನ್ನು ಕಳಿಸುತ್ತೀರಿ. ಅಲ್ಲಿಯವರೆಗೂ ಯಾರೂ ಹೋಗುವುದಿಲ್ಲ? ದೊಡ್ಡವರು ಸತ್ತರೆ, ಅವರ ಮನೆಗೆ ಹೋಗಿ ನಿಮ್ಮ ಜತೆ ಇದ್ದೇವೆ ಎಂದು ಹೇಳುತ್ತೀರಿ. ಆದರೆ ಬಡವರು ಸತ್ತಾಗ, ಯಾರೂ ಹೋಗಿ ನೋಡುವುದಿಲ್ಲ. ಸರಕಾರಕ್ಕೆ ಜವಾಬ್ದಾರಿ ಬೇಡವೇ? ಇದನ್ನು ಕೇಳುವುದು ತಪ್ಪಾ? ನಾವು ರಾಜಕೀಯ ಮಾಡುತ್ತಿಲ್ಲ, ಅದರ ಅಗತ್ಯವಿಲ್ಲ. ಹೀಗಾಗಿ ಕೋವಿಡ್ ಸಂತ್ರಸ್ತರು, ರೈತರು, ಕಾರ್ಮಿಕರನ್ನು ಭೇಟಿ ಮಾಡಿ, ಅವರಿಗೆ ಕಷ್ಟ ಆಲಿಸಿ, ಪರಿಹಾರ ದೊರಕಿಸಿಕೊಡಲು ನೆರವಾಗುವಂತೆ ನಮ್ಮ ನಾಯಕರು, ಕಾರ್ಯಕರ್ತರಿಗೆ ಮನವಿ ಮಾಡಿದ್ದೇನೆ. ಕೋವಿಡ್ ಸಂತ್ರಸ್ತರ ಪರವಾಗಿ ನಾವು ಹೋರಾಟ ಮಾಡಬೇಕಿದೆ. ವಿರೋಧ ಪಕ್ಷದ ಜವಾಬ್ದಾರಿ ಅದು. ಇದಕ್ಕಾಗಿ ನಾವು ನಮ್ಮ ಮುಖಂಡರು ಸೇರಿ ಒಂದು ತಿಂಗಳ ಜನ ಸಂಪರ್ಕ ಅಭಿಯಾನ ಮಾಡುತ್ತಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲ ಸೂಚನೆ, ದಾಖಲೆ ಕಳುಹಿಸಿಕೊಟ್ಟಿದ್ದೇನೆ ಎಂದರು.

ಕೋವಿಡ್ ಡೆತ್ ಆಡಿಟ್ ಆಗಿಲ್ಲ. ಅದು ಆಗಬೇಕು. ಸತ್ತಿರುವ ಎಲ್ಲರಿಗೂ ಹೈಕೋರ್ಟ್ ಸೂಚನೆಯಂತೆ ಪರಿಹಾರ ಸಿಗಬೇಕು. ರಾಜ್ಯದಲ್ಲಿ ಕೋವಿಡ್ ನಿಂದ ಸತ್ತಿರುವ ಎಲ್ಲ 3 ಲಕ್ಷ ಜನರಿಗೂ ಕೋರ್ಟ್ ಆದೇಶದಂತೆ ಪರಿಹಾರ ಸಿಗಬೇಕು. ಇದು ಜನರ ಹಕ್ಕು, ಸರ್ಕಾರದ ಜವಾಬ್ದಾರಿ.ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಕೋವಿಡ್ ವಾರಿಯರ್ ಗಳನ್ನು ನೇಮಕ ಮಾಡಿ, ಪ್ರತಿ ಮನೆ ಮನೆಗೂ ಹೋಗಿ ಸಂತ್ರಸ್ತರಿಗೆ ಸಾಂತ್ವನ ಹೇಳಲು ಸೂಚಿಸಲಾಗಿದೆ. ಅವರಿಗೆ ಸಹಾಯ ಹಸ್ತ ನೀಡಬೇಕು, ಅವರಿಂದ ಮಾಹಿತಿ ಪಡೆದು ನಮಗೆ ಕಳುಹಿಸಿಕೊಡಬೇಕು.ಇದರ ಮೇಲ್ವಿಚಾರಣೆಗೆ ಒಂದೊಂದು ಜಿಲ್ಲೆಗೂ ನಾಯಕರನ್ನು ನೇಮಿಸುತ್ತಿದ್ದೇವೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ವೀಕ್ಷಕರನ್ನು ನೇಮಿಸುತ್ತಿದ್ದು, ಅವರು ಅಲ್ಲಿ ಹೋಗಿ ಸಭೆ ಮಾಡಬೇಕು. ಜುಲೈ 7 ರಂದು ಬೆಲೆ ಏರಿಕೆ ವಿರುದ್ಧ ಸೈಕಲ್ ರಾಲಿ ಮಾಡಲಾಗುತ್ತದೆ. ನಂತರ ಕೋವಿಡ್ ವಿಚಾರವಾಗಿ ಸಭೆ ಮಾಡುತ್ತಾರೆ. ನಾನು ನಮ್ಮ ನಾಯಕರು ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಭೆ ಮಾಡುತ್ತೇವೆ.ಇದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಕಾರ್ಯಕ್ರಮ ಅಲ್ಲ. ಇದು ಜನರ ಕಾರ್ಯಕ್ರಮ. ಜನರ ನೋವಿಗೆ ಸ್ಪಂದಿಸುವ ಕಾರ್ಯಕ್ರಮ. ಸರ್ಕಾರ ತನ್ನ ಜವಾಬ್ದಾರಿ ನಿಭಾಯಿಸದಿದ್ದಾಗ, ನಾವು ಈ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದರು.

ಚಾಮರಾಜನಗರ ದುರಂತದಲ್ಲಿ 36 ಮಂದಿ ಸತ್ತಿದ್ದರೂ ಇದರ ಹೊಣೆಯನ್ನು ಯಾರೂ ಹೊತ್ತಿಲ್ಲ. ಸುಮೋಟೋ ಕೇಸ್ ದಾಖಲಿಸಿ ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು.ಇಷ್ಟು ದೊಡ್ಡ ದುರಂತ ನಡೆದರೂ ಯಾರ ಮೇಲೂ ಕ್ರಮ ಇಲ್ಲ. ಇವರನ್ನು ರಕ್ಷಣೆ ಮಾಡಲು ಸರ್ಕಾರ ಮುಂದಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿ. ಆದರೂ ಸರ್ಕಾರ ಸುಳ್ಳು ಹೇಳುತ್ತಿದೆ.ಇಂದು ಮಾಧ್ಯಮ ಹಾಗೂ ವೈದ್ಯರ ದಿನವಾಗಿದ್ದು, ನಿಮಗೆ, ನಿಮ್ಮ ಸೇವೆಗೆ ಅಭಿನಂದನೆಗಳು.ಸತ್ತವರ ಜೇಬಿನಲ್ಲಿ ಇದ್ದ ವಸ್ತುಗಳನ್ನು ತೆಗೆದುಕೊಂಡಿದ್ದಾರೆ, ಎಷ್ಟೋ ಹೆಣ್ಣು ಮಕ್ಕಳ ತಾಳಿ ಎಳೆದುಕೊಂಡಿದ್ದಾರೆ. ಕಿವಿ ಒಲೆ, ಮೂಗು ಬೊಟ್ಟುಗಳನ್ನು ಚರ್ಮಸಮೇತ ಕಿತ್ತು ಹಾಕಿದ್ದಾರೆ ಎಂದು ಜನ ನಮ್ಮ ಬಳಿ ನೋವು ಹೇಳಿಕೊಂಡರು.ಆ 36 ಕುಟುಂಬದ ನೋವು ನೋಡಿದರೆ ಕರಳು ಕಿತ್ತು ಬರುತ್ತದೆ. ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇದೆಯೋ, ಇಲ್ಲವೋ ಅನಿಸುತ್ತದೆ. ಮುಖ್ಯಮಂತ್ರಿಗಳೇ ಈಗಲಾದರೂ ನೀವು ಅಥವಾ ನಿಮ್ಮ ಮಂತ್ರಿಗಳು ರಾಜ್ಯ ಪ್ರವಾಸ ಮಾಡಬೇಕು. ರಾಜ್ಯ ಪ್ರವಾಸ ಮಾಡಲು ಆಗದಿದ್ದರೆ ಕನಿಷ್ಟ ಪಕ್ಷ ಆ 36 ಮಂದಿ ಅತ್ತವರ ಕುಟುಂಬಗಳನ್ನಾದರೂ ಭೇಟಿ ಮಾಡಿ, ಅವರ ನೋವು ಕೇಳಿ ಎಂದು ಕೇಳಿಕೊಳ್ಳುತ್ತೇನೆ. ಆಗಲಾದರು ನೀವು ಆ ಜನರ ಪರ ಕಾರ್ಯಕ್ರಮ ಹಾಕಿಕೊಳ್ಳಲು ಅವಕಾಶವಾಗುತ್ತದೆ ಎಂದರು.

ನೀವು ಕಾರ್ಮಿಕರಿಗೆ 2 ಸಾವಿರ ಕೊಟ್ಟ ಮಾತ್ರಕ್ಕೆ ಅವರ ಜೀವನ ಸುಧಾರಿಸುತ್ತದೆಯಾ? ಅರ್ಹರಿಗೆ ಪರಿಹಾರ ತಲುಪಿದೆಯಾ? ರೈತರಿಗೆ ಹೆಕ್ಟೇರ್ ಗೆ 10 ಸಾವಿರ ಎಂದರೆ ಅರ್ಧ ಎಕರೆ, ಸಣ್ಣ ಜಮೀನು ಇರುವವರು ಅದಕ್ಕೆ ಅರ್ಜಿ ಹಾಕುತ್ತಾರಾ? ಕೂಲಿ ಕಾರ್ಮಿಕ ಪರಿಹಾರ ಪಡೆಯಲು ಅಧಿಕಾರಿಯಿಂದ ಪ್ರಮಾಣ ಪತ್ರ ಬೇಕಂತೆ. ಅದನ್ನು ಪಡೆಯಲು ಕೂಲಿ ಕಾರ್ಮಿಕ ಲಂಚ ಕೊಡಬೇಕಾ? ಇಂದು ಸಂಜೆ ಒಳಗೆ ನಿಮ್ಮ ಸಚಿವರಿಗೆ ಹೇಳಿ, ಎಷ್ಟು ಜನ ಅರ್ಜಿ ಹಾಕಿದ್ದಾರೆ ಅಂತಾ ಹೇಳಿಸಿ. 2 ಸಾವಿರ ಭಿಕ್ಷೆ ಬೇಡಲು ಜನ ನಿಮ್ಮ ಬಳಿ ಬರುವುದಿಲ್ಲ. ಅವರ ಸ್ವಾಭಿಮಾನದ ಬದುಕಿಗೆ ಕೊಳ್ಳಿ ಇಡಬೇಡಿ.ಸರ್ಕಾರ ಅಧಿವೇಶನ ಕರೆಯಲಿ ಅಂತಾ ಕಾಯುತ್ತಿದ್ದೇವೆ. ಅವರು ಕರೆಯಲಿ, ನಾವು ನಮ್ಮ ಹೋರಾಟ ಮಾಡುತ್ತೇವೆ ಎಂದರು.

ಈಶ್ವರ್ ಖಂಡ್ರೆ ಮಾತು:

ಈ ವೇಳೆ ಮಾತನಾಡಿದ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ ಅವರು,’ಸರ್ಕಾರ ಸಾವಿನಲ್ಲಿ ಸುಳ್ಳು ಲೆಕ್ಕ ಕೊಡುತ್ತಿದೆ. ಬೀದರ್ ಜಿಲ್ಲಾ ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ 557 ಜನ ಸತ್ತಿದ್ದಾರೆ. ಆ ಪಟ್ಟಿ ನನ್ನ ಬಳಿ ಇದೆ. ಆದರೆ ಆರೋಗ್ಯ ಇಲಾಖೆ ಬುಲೆಟಿನ್ ನಲ್ಲಿ 141 ಜನ ಸತ್ತಿದ್ದಾರೆ ಎಂದು ಸುಳ್ಳು ಲೆಕ್ಕ ಕೊಟ್ಟಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಸತ್ತವರು ಹೊರತುಪಡಿಸಿ, ಖಾಸಗಿ ಆಸ್ಪತ್ರೆ ಹಾಗೂ ಮನೆಯಲ್ಲಿ ಒಂದು ತಿಂಗಳಲ್ಲಿ 2 ಸಾವಿರಕ್ಕೂ ಹೆಚ್ಚು ಜನ ಸತ್ತಿದ್ದಾರೆ. ಇದು ಕೇವಲ ಬೀದರ್ ಜಿಲ್ಲೆಯ ಲೆಕ್ಕ. ಇಡೀ ರಾಜ್ಯದ ಲೆಕ್ಕ ಪರಿಗಣಿಸಿದರೆ, ನಮ್ಮ ಅಧ್ಯಕ್ಷರು ಹೇಳಿದಂತೆ 3 ಲಕ್ಷಕ್ಕೂ ಹೆಚ್ಚು ಮಂದಿ ಸತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ’ ಎಂದರು.

ಕೆ.ಸಿ ಜನರಲ್‌ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ: ವೈದ್ಯರಲ್ಲಿ ವೈದ್ಯರಾದ ಡಿಸಿಎಂ

ಬೆಂಗಳೂರು: ಸ್ವತಃ ವೈದ್ಯರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ವೈದ್ಯರ ದಿನಾಚರಣೆ ನಿಮಿತ್ತ ವೈದ್ಯರಲ್ಲಿ ವೈದ್ಯರಾಗಿಯೇ ಶುಭ ಕೋರಿ ಸಂಭ್ರಮಿಸಿದ ಪ್ರಸಂಗ ನಗರದ ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ನಡೆಯಿತು.

ಬೆಳಗ್ಗೆಯೇ ಆಸ್ಪತ್ರೆಗೆ ಧಾವಿಸಿದ ಡಿಸಿಎಂ ಅವರು, ವೈದ್ಯರಿಗೆ ಹೂಗುಚ್ಛ- ಸಿಹಿ  ನೀಡಿ ಶುಭಾಶಯ ಕೋರಿದರಲ್ಲದೆ, ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಅವರ ಕಷ್ಟ-ಸುಖಗಳನ್ನು ಆಲಿಸಿದರು.

ಯಾವುದೇ ಶಿಷ್ಟಾಚಾರಕ್ಕೆ ಅವಕಾಶವಿಲ್ಲದೆ, ಉಪ ಮುಖ್ಯಮಂತ್ರಿ ಎಂಬ ಸಂಗತಿಯನ್ನು ಬದಿಗಿಟ್ಟು ವೈದ್ಯರೊಂದಿಗೆ ಮುಕ್ತವಾಗಿ ಬೆರೆತ ಅವರು, ಪ್ರತಿಯೊಬ್ಬರನ್ನೂ ಮಾತನಾಡಿಸಿ ಆತ್ಮೀಯತೆಯಿಂದ ಅವರ ವಿಚಾರಗಳನ್ನು, ಮನವಿಗಳನ್ನು ಕೇಳಿಸಿಕೊಂಡರು. ಸಿಬ್ಬಂದಿ ಮತ್ತು ವೈದ್ಯರ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು

ಡಿಸಿಎಂ ಆಗಮನದಿಂದ ಪುಳಕಿತರಾದ ಎಲ್ಲ ವೈದ್ಯರು, ಅವರ ಜತೆ ಸೆಲ್ಫಿ ತೆಗೆದುಕೊಂಡರಲ್ಲದೆ ಉಪ ಮುಖ್ಯಮಂತ್ರಿಗಳೇ ಸ್ವತಃ ಆಸ್ಪತ್ರೆಗೆ ಬಂದು ಡಾಕ್ಟರ್ಸ್‌ ಡೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಸಂತಸ ಉಂಟು ಮಾಡಿದೆ. ಇದು ನಮ್ಮ ಜೀವಮಾನದಲ್ಲೇ ಆವಿಸ್ಮರಣಿಯ ಘಟನೆ ಎಂದು ಕೆಲ ವೈದ್ಯರು ಅಭಿಪ್ರಾಯ ಹಂಚಿಕೊಂಡರು.

ನಾನೂ ವೈದ್ಯ ಎಂದು ಹೇಳಲು ಹೆಮ್ಮೆ ಇದೆ: 

ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ; “ನಾನು ವೈದ್ಯ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ. ಅದರಲ್ಲೂ ಇಷ್ಟು ಜನ ವೈದ್ಯರ ಜತೆ ನಾನೂ ವೈದ್ಯನಾಗಿ ಇರುವುದು ನನ್ನ ಸಂತೋಷವನ್ನು ಹೆಚ್ಚಿಸಿದೆ” ಎಂದು ಭಾವುಕರಾಗಿ ಹೇಳಿದರು.

ಕೋವಿಡ್‌ ಸೋಂಕಿನ ಹಿನ್ನೆಲೆಯಲ್ಲಿ ವೈದ್ಯರು ಒತ್ತಡದಲ್ಲಿದ್ದಾರೆಂಬುದು ನಿಜ. ಹಗಲಿರುಳೆನ್ನದೆ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಸೋಂಕಿಗೆ ಎದೆಯೊಡ್ಡಿ ಪ್ರಾಣಗಳನ್ನು ಕಾಪಾಡುತ್ತಿದ್ದಾರೆ. “ವೈದ್ಯೋ ನಾರಾಯಣ ಹರಿ” ಎಂಬ ಮಾತು ಸಾಕ್ಷಾತ್ಕಾರವಾಗಿದೆ ಎಂದು ಅವರು ನುಡಿದರು.

ಆರೋಗ್ಯ ಇಲಾಖೆಗೆ 1,500 ಕೋಟಿ ರೂ.:

ವೈದ್ಯರು ಮತ್ತು ಜನರಿಗೆ ಅನುಕೂಲವಾಗುವಂತೆ ರಾಜ್ಯದ ಆರೋಗ್ಯ ಮೂಲಸೌಕರ್ಯಗಳನ್ನು ಆಮೂಲಾಗ್ರವಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಹೆಚ್ಚುವರಿಯಾಗಿ ಸುಮಾರು 1,500 ಕೋಟಿ ರೂ. ವೆಚ್ಚದಲ್ಲಿ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳಿಂದ ಮೊದಲುಗೊಂಡು ತಾಲೂಕು-ಜಿಲ್ಲಾಸ್ಪತ್ರೆಗಳ ಸೌಲಭ್ಯಗಳನ್ನು ಗಣನೀಯವಾಗಿ ಹೆಚ್ಚಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.

ತಂತ್ರಜ್ಞಾನ ಅಭಿವೃದ್ಧಿ, ಮೂಲಸೌಕರ್ಯ, ವೈದ್ಯರು ಮತ್ತು ಸಿಬ್ಬಂದಿ ನೇಮಕ ಮತ್ತಿತರೆ ಉದ್ದೇಶಕ್ಕಾಗಿ ಈ ಮೊತ್ತವನ್ನು ವಿನಿಯೋಗ ಮಾಡಲಾಗುತ್ತಿದೆ. ಪ್ರತೀ ತಾಲೂಕು ಆಸ್ಪತ್ರೆಯ್ಲಿ ಕೊನೆಪಕ್ಷ 25 ಐಸಿಯು ಬೆಡ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಇದರ ಜತೆಗೆ ಪ್ರತಿ ವಿಧಾನಸಭೆ ಕ್ಷೇತ್ರದಲ್ಲೂ 100 ಹಾಸಿಗೆಗಳ ಆಸ್ಪತ್ರೆಯನ್ನು ಹಾಗೂ ಪ್ರತೀ ನಾಲ್ಕು ಕ್ಷೇತ್ರಗಳಿಗೊಂದು ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ಆರಂಭಿಸಲಾಗುವುದು. ಎಲ್ಲರಿಗೂ ಸುಲಭವಾಗಿ, ಕಡಿಮೆ ದರದಲ್ಲಿ ಆರೋಗ್ಯ ಸೌಲಭ್ಯ ಸಿಗಬೇಕು. ಈ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಂಡಿದೆ ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.

ಆಪರೇಷನ್‌ ಆಕ್ಸಿಜನ್; ಡಿಸಿಎಂ ಕೃತಜ್ಞತೆ

ಕಳೆದ ಮೇ 5ರಂದು ರಾತ್ರಿ ಕೆಸಿ ಜನರಲ್‌ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಕೊರತೆ ಉಂಟಾದಾಗ ಇಡೀ ರಾತ್ರಿ ಇಡೀ ವೈದ್ಯರ ತಂಡ, ಸಿಬ್ಬಂದಿ ಸೋಂಕಿತರ ಕಾಳಜಿ ವಹಿಸಿದ್ದ ಘಟನೆಯನ್ನು ಸ್ಮರಿಸಿದ ಡಿಸಿಎಂ ಡಾ.ಅಶ್ವತ್ಥನಾರಾಯಣ ಅವರು, ಅಂದು ಕರ್ತವ್ಯದಲ್ಲಿದ್ದು ಸೋಂಕಿತರ ಪ್ರಾಣ ರಕ್ಷಣೆ ಮಾಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಡಾ.ಮೋಹನ್ ಅವರ ನೇತೃತ್ವದಲ್ಲಿ ಎಲ್ಲ ಸಿಬ್ಬಂದಿ, ವೈದ್ಯರು ಅತ್ಯುತ್ತಮವಾಗಿ ಕೆಲಸ ಮಾಡಿದರು. ಸ್ವಲ್ಪ ಎಚ್ಚರ ತಪ್ಪಿದ್ದಿದ್ದರೆ ದೊಡ್ಡ ಅನಾಹುತ ಆಗುತ್ತಿತ್ತು. ಇಡೀ ರಾತ್ರಿ ಸ್ವಲ್ಪವೂ ಎಚ್ಚರ ತಪ್ಪದೇ ಕೆಲಸ ಮಾಡಿದ ಎಲ್ಲರಿಗೂ ಸರಕಾರ ಋಣಿಯಾಗಿದೆ ಎಂದರು ಡಿಸಿಎಂ

ಈ ಸಂದರ್ಭದಲ್ಲಿ ಕೆ.ಸಿ ಜನರಲ್‌ ಆಸ್ಪತ್ರೆ ಅಧೀಕ್ಷಕ ಡಾ.ವೆಂಕಟೇಶಯ್ಯ, ಡಾ. ಮೋಹನ್‌ ಸೇರಿದಂತೆ ಎಲ್ಲ ವೈದ್ಯರು, ಸಿಬ್ಬಂದಿ ಹಾಜರಿದ್ದರು.