Video-ಜನಧನ್ ಖಾತೆಗಳಿಂದ ತಲಾ 2 ರೂ.ನಂತೆ 6,000 ಕೋಟಿ ರೂ. ಅಕ್ರಮ ವರ್ಗಾವಣೆ ಶಂಕೆ: ಹೆಚ್.ಡಿ.ಕುಮಾರಸ್ವಾಮಿ 

ಬೆಂಗಳೂರು: ಜನಧನ್ ಖಾತೆಗಳಿಂದ ತಲಾ 2 ರೂಪಾಯಿ ಲೆಕ್ಕದಲ್ಲಿ ಸುಮಾರು 6,000 ಕೋಟಿ ರೂಪಾಯಿಯಷ್ಟು ಹಣವನ್ನು ಅಕ್ರವಾಗಿ ವರ್ಗಾವಣೆ ಮಾಡಿಕೊಂಡಿರುವ ಮಾಹಿತಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಜನತಾ ಪರ್ವ 1.O ಎರಡನೇ ಹಂತದ ಕಾರ್ಯಗಾರ ‘ ಜನತಾ ಸಂಗಮದ ನಾಲ್ಕನೇ ದಿನ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಇಷ್ಟು ಹಣದ ಅಕ್ರಮ ವರ್ಗಾವಣೆ ಹಿಂದೆ ಯಾರು ಇದ್ದಾರೆ ಎನ್ನುವ ಮಾಹಿತಿ ಜನರಿಗೆ ಗೊತ್ತಾಗಬೇಕಿದೆ ಎಂದರು.

ಬಹುಶಃ ಈ ಎಲ್ಲ ಮಾಹಿತಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಚೆನ್ನಾಗಿ ಗೊತ್ತಾಗಿದೆ. ಅವರ ಬಳಿ ಎಲ್ಲ ಮಾಹಿತಿ ಇದ್ದು, ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರಬಹುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಬಿಟ್ ಕಾಯಿನ್ ಆರೋಪಿಗೆ ಜಾಮೀನು ಸಿಕ್ಕಿದ್ದು ಹೇಗೆ?:

ಬಿಟ್ ಕಾಯಿನ್ ಹಗರಣದ ಮುಖ್ಯ ಆರೋಪಿಗೆ ಜಾಮೀನು ಸಿಕ್ಕಿದ ಬಗ್ಗೆ ಗಂಭೀರ ಅನುಮಾನಗಳನ್ನು ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿಗಳು, ಆರೋಪಿಗೆ ಜಾಮೀನು ಕೊಡಲು ಖಾತರಿ ಕೊಟ್ಟಿದ್ದು ಯಾರು? ಆತನ ಪರ ವಾದ ಮಂಡಿಸಿದ ವಕೀಲರು ಯಾರು? ಎಂದು ಪ್ರಶ್ನಿಸಿದರು.

ಆರೋಪಿ ಜೈಲಿನಿಂದ ಹೊರಬಂದ ನಂತರ ಮಾಧ್ಯಮದವರ ಮುಂದೆ ಕಾಣಿಸಿಕೊಂಡಿದ್ದಾನೆ. ಮಾಧ್ಯದವರ ಜತೆ ಆ ವ್ಯಕ್ತಿ ಮಾತನಾಡುತ್ತಾನೆ, ನಂತರ ಆಟೋ ಹತ್ತಿ ಹೋಗುತ್ತಾನೆ. ಇದೆಲ್ಲ ನೋಡಿದರೆ ಅದರ ಹಿಂದೆ ಯಾರೋ ಇರುವುದು ಸ್ಪಷ್ಟ ಎಂದರು ಅವರು.

ಬಿಟ್ ಕಾಯಿನ್ ಹಗರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎಂಬ ಅನುಮಾನ ದಟ್ಟವಾಗಿದೆ. ಸರ್ಕಾರದ ಪರ ವಕೀಲರು ಎಷ್ಟರ ಮಟ್ಟಿಗೆ ವಾದ ಮಂಡಿಸಿದ್ದಾರೆ ಎನ್ನುವುದೂ ಮುಖ್ಯ. ಇಲ್ಲಿ ಯಾರಿಂದ ಯಾರ ರಕ್ಷಣೆ ಆಗಿದೆ? ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಕಠಿಣ ಕ್ರಮ ಕೈಗೊಂಡಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಹಗರಣ ತನಿಖೆಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರು ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು; ಸೂಕ್ತ ತನಿಖೆ ಆಗಲಿ ಅಂತ ಅವರು ಪತ್ರ ಬರೆದಿರಬಹುದು. ಹಗರಣದಲ್ಲಿ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು ಒಳಗೊಂಡಿದ್ದಾರೆ ಎನ್ನುವ ಮಾತೂ ಇದೆ. ಪದೇ ಪದೆ ಹೀಗಾದರೆ ಜನ ಯಾರನ್ನು ನಂಬಬೇಕು. ಒಬ್ಬರಿಂದ ಜನರು ಎಲ್ಲಾ ರಾಜಕಾರಣಿಗಳ ಕಡೆ ಕೈ ತೋರಿಸುವಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಭಾರತದ ಮಾನ ಹರಾಜು ಆಗಬಾರದು ಅಂತ ಒಂದಿಷ್ಟು ಜನರ ಮಾಹಿತಿಯನ್ನು ಹೊರಬಿಟ್ಟಿಲ್ಲ ಅಂತ ಕಾಣುತ್ತೆ. ಆದಷ್ಟು ಬೇಗ ಜನತೆಗೆ ಸತ್ಯ ತಿಳಿಯಲಿ. ಪ್ರಧಾನ ಮಂತ್ರಿಯವರು ಅಮೆರಿಕಕ್ಕೆ ಭೇಟಿ ನೀಡಿದ್ದಾಗ ಈ ಬಗ್ಗೆ ಮಾಹಿತಿ ಸಿಕ್ಕಿದೆ. ಅವರಿಗೆ ಮುಜುಗರ ಅಗಿರುವ ಕಾರಣಕ್ಕೆ ಇಡೀ ಪ್ರಕರಣವನ್ನು ಅವರು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಗಾಜಿನ ಮನೆಯಲ್ಲಿ ಕೂತು ಕಾಂಗ್ರೆಸ್ ಕಲ್ಲು ಹೊಡೆಯುತ್ತಿದೆ!!:

ಬಿಟ್ ಕಾಯಿನ್ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಗಾಜಿನ‌ ಮನೆಯಲ್ಲಿ ಕೂತು ಕಲ್ಲು ಹೊಡೆಯುತ್ತಿದೆ. ಆ ಕಲ್ಲು ಯಾರಿಗೆ ಬೀಳುತ್ತದೆ? ಈಗಾಗಲೇ ಕಾಂಗ್ರೆಸ್ ನಾಯಕರಿಗೆ ಸಂಬಂಧಿಸಿದ ಕೆಲ ಹೆಸರುಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಆದರೆ, ಕಾಂಗ್ರೆಸ್ ನಾಯಕರು ಬಿಜೆಪಿ ನಾಯಕರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅವರು ಮಾರ್ಮಿಕವಾಗಿ ಹೇಳಿದರು.

ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಸಾಕ್ಷಿ ಸಮೇತ ಹೋರಾಟ ಮಾಡಿದ್ದು ಜೆಡಿಎಸ್ ಮಾತ್ರ. ನಮ್ಮ ಹೋರಾಟದ ಫಲವಾಗಿ ಯಾರೆಲ್ಲ ಜೈಲಿಗೆ ಹೋದರು ಎನ್ನುವುದು ಜನತೆಗೆ ಗೊತ್ತಿದೆ ಎಂದು ಅವರು ತಿಳಿಸಿದರು.

ಸರಕಾರ ಏನು ಮಾಡುತ್ತಿದೆ?:

ರಾಜ್ಯದಲ್ಲಿ ನಿರಂತರವಾಗಿ ಮಳೆ ಆಗುತ್ತಿದೆ. ರೈತರು, ಸಾಮಾನ್ಯ ಜನರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಮಂತ್ರಿಗಳು, ಅಧಿಕಾರಿಗಳು ಏನು ಮಾಡುತ್ತಿದ್ದರೋ ಗೊತ್ತಿಲ್ಲ. ಅವರಿಗೆಲ್ಲ ಯಾರು ಕೆಲಸ ಹೇಳುತ್ತಿದ್ದರೋ ತಿಳಿಯುತ್ತಿಲ್ಲ. ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎನ್ನುವಂತ ಪರಿಸ್ಥಿತಿ ಇದೆ. ಯಾರೂ ಜನರ ಸಮಸ್ಯೆ ಆಲಿಸುತ್ತಿಲ್ಲ. ಆಡಳಿತ ಯಂತ್ರ ಕುಸಿಯುವ ಹಂತಕ್ಕೆ ಹೋಗುವುದರೊಳಗೆ ಅತ್ತ ಸರಕಾರ ಗಮನ ಹರಿಸಬೇಕು ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.

ಬಿಬಿಎಂಪಿ ಕಾರ್ಯವೈಖರಿ ಬಗ್ಗೆ ಹೈಕೋರ್ಟ್ ವ್ಯಕ್ತ ಮಾಡಿರುವ ಅಭಿಪ್ರಾಯವನ್ನು ಎಲ್ಲರೂ ಗಮನಿಸಬೇಕು. ಮುಖ್ಯ ಆಯುಕ್ತರನ್ನು ಜೈಲಿಗೆ ಕಲಿಸುವ ಎಚ್ಚರಿಕೆಯನ್ನು ನ್ಯಾಯಾಲಯ ಸರಕಾರಕ್ಕೆ ನೀಡಿದೆ. ಇದೆಲ್ಲವನ್ನು ಸರಕಾರ ಕೂಡಲೇ ಸರಿ ಮಾಡಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ರಮೇಶ ಗೌಡ ಹಾಜರಿದ್ದರು.

Video-ಕಾಂಗ್ರೆಸ್ ನಾಯಕರ ಘನತೆ ಹಾಳು ಮಾಡುವ ಹುನ್ನಾರ ನಡೆಯುತ್ತಿದೆ: ಡಿಕೆ ಶಿವಕುಮಾರ್

ಬೆಂಗಳೂರು: ‘ಹಳೇ ಪ್ರಕರಣವನ್ನು ಇಟ್ಟುಕೊಂಡು ಕಾಂಗ್ರೆಸ್ ನಾಯಕರ ಘನತೆ ಹಾಳು ಮಾಡುವ ಹುನ್ನಾರ ನಡೆಯುತ್ತಿದೆ. ಈ ರೀತಿ ಕಾಂಗ್ರೆಸ್ ನಾಯಕರ ಘನತೆಗೆ ಧಕ್ಕೆ ತರಲು ಸಾಧ್ಯವಿಲ್ಲ. ನಮ್ಮ ಬಳಿಯೂ ಕೆಲವು ಮಾಹಿತಿಗಳಿವೆ, ಸೂಕ್ತ ಸಮಯದಲ್ಲಿ ನಾವು ಮಾತನಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಇಡೀ ಹಗರಣದ ಸಂಪೂರ್ಣ ಸತ್ಯಾಂಶ ಹೊರಬರಬೇಕಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಪ್ರಕರಣದ ವಿಚಾರಣೆಯನ್ನು ಇ.ಡಿ.ಗೆ ಹಸ್ತಾಂತರ ಮಾಡಲಾಗಿದೆ ಎಂಬುದು ಮುಖ್ಯಮಂತ್ರಿಗಳ ಹೇಳಿಕೆ. ಈಗ ಅವರು ಕೆಲವು ಕಾಂಗ್ರೆಸ್ ನಾಯಕರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ. ಹಳೇ ಪ್ರಕರಣದವನ್ನು ಉಲ್ಲೇಖಿಸಿ ದಾರಿ ತಪ್ಪಿಸುತ್ತಿದ್ದಾರೆ. ಇದೇ ರೀತಿ ಹಲವು ವದಂತಿಗಳನ್ನು ಹರಿಯಬಿಡಲಾಗಿದೆ.

ಪ್ರಧಾನ ಮಂತ್ರಿಗಳಿಗೆ ಜನಸಾಮಾನ್ಯ ಬರೆದ ದೂರಿನ ಪತ್ರವನ್ನು ಓದಿದ್ದೇನೆ. ಅದರಲ್ಲಿ ಅನೇಕ ಬಿಜೆಪಿ ನಾಯಕರ ಹೆಸರುಗಳಿವೆ. ಅದು ನಿಜವೇ? ಅವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಯೇ, ಇಲ್ಲವೇ? ಅವರ ಹೆಸರುಗಳನ್ನು ಬಹಿರಂಗ ಪಡಿಸಲಿ. ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಪೊಲೀಸ್ ಅಧಿಕಾರಿಗಳು ಈ ವಿಚಾರವಾಗಿ ಪತ್ರಿಕಾಗೋಷ್ಠಿ ನಡೆಸಿರುವಾಗ, ಈ ವಿಚಾರವನ್ನು ಜನರ ಮುಂದೆ ಇಡುವುದು ಸರ್ಕಾರದ ಜವಾಬ್ದಾರಿ.

ಅವರು ತಮ್ಮ ನಾಯಕರ ಹೆಸರು ಮುಚ್ಚಿಟ್ಟು, ಕಾಂಗ್ರೆಸ್ ನಾಯಕರ ಹೆಸರು ತಳುಕು ಹಾಕಲು ಪ್ರಯತ್ನಿಸುತ್ತಿದ್ದಾರೆ. ನಾವು ಯಾರನ್ನೂ ರಕ್ಷಣೆ ಮಾಡುವುದಿಲ್ಲ. ಅದೇ ರೀತಿ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ಹೆಸರೂ ಹೊರಬರಬೇಕು. ಬಿಜೆಪಿ ನಾಯಕರು, ಮಂತ್ರಿಗಳೇ ಈ ವಿಚಾರವಾಗಿ ಮಾಧ್ಯಮಗಳು ಹಾಗೂ ಕಾಂಗ್ರೆಸ್ ನಾಯಕರಿಗೆ ಈ ಪ್ರಕರಣದಲ್ಲಿ ಭಾಗಿಯಾಗಿರುವ ಸಚಿವರು, ಅವರ ಮಕ್ಕಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.

ಬಿಜೆಪಿಯಲ್ಲಿ ಭಿನ್ನಮತ, ಆಂತರಿಕ ಜಗಳ ಸಾಮಾನ್ಯ. ಹೀಗಾಗಿ ನಮಗೆ ಕೇಳಿ ಬಂದಿರುವ ಬಿಜೆಪಿ ನಾಯಕರ ಹೆಸರುಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ತನಿಖೆ ಸರಿಯಾದ ಮಾರ್ಗದಲ್ಲಿ ನಡೆದು ನಮಗೆ ಸತ್ಯಾಂಶ ಹೊರಬರಬೇಕಿದೆ. ಆದರೆ ಬಿಜೆಪಿ ಈ ಪ್ರಕರಣದಲ್ಲಿ ತನ್ನ ನಾಯಕರನ್ನು ರಕ್ಷಿಸಿ ಕಾಂಗ್ರೆಸ್ ನಾಯಕರ ಮೇಲೆ ಆರೋಪ ಹೊರಿಸುವ ರೀತಿಯಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ.’

ರೈತರನ್ನು ಗೌರವದಿಂದ ನಡೆಸಿಕೊಳ್ಳಲಿ:

ಬೆಳಗಾವಿ ರೈತರ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ‘ಬೆಳಗಾವಿಯಲ್ಲಿ ರೈತರ ಹೋರಾಟ ಅವರ ಹಕ್ಕು. ಆಸ್ತಿ, ಜಮೀನು ಕಳೆದುಕೊಳ್ಳುವುದರ ವಿರುದ್ಧ ಅವರು ಹೋರಾಟ ಮಾಡುತ್ತಿದ್ದಾರೆ. ಅವರಿಗೆ ಸೂಕ್ತ ಪರಿಹಾರ ನೀಡಿ, ಅವರ ಮನವೊಲಿಸಬೇಕು. ಗೌರವದಿಂದ ನಡೆಸಿಕೊಳ್ಳಬೇಕು. ಅದನ್ನು ಬಿಟ್ಟು ಸೀರೆ ಎಳೆಯುವುದು, ಆತ್ಮಹತ್ಯೆಗೆ ಪ್ರೇರೇಪಿಸುವುದು ಸರಿಯಲ್ಲ. ಈ ರೀತಿ ಪೊಲೀಸರ ದೌರ್ಜನ್ಯ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಇದು ಖಂಡನೀಯ. ರೈತರನ್ನು ಗೌರವದಿಂದ ನಡೆಸಿಕೊಂಡು, ತಾಳ್ಮೆಯಿಂದ ಮಾತನಾಡಬೇಕು’ ಎಂದರು.

ಸ್ಪೀಕರ್ ವರ್ತನೆಗೆ ಬೇಸರ:

‘ಸ್ಪೀಕರ್ ಅವರು ಶ್ರೀನಿವಾಸ ಮಾನೆ ಅವರ ಪ್ರಮಾಣ ವಚನಕ್ಕೆ ಇಂದು ಬೆಳಗ್ಗೆ 11 ಗಂಟೆಗೆ ಸಮಯ ನೀಡಿದ್ದರು. ಟ್ರಾಫಿಕ್ ಹಿನ್ನೆಲೆಯಲ್ಲಿ 5 ನಿಮಿಷ ತಡವಾಯಿತು. ನಮ್ಮದು ತಪ್ಪಿದೆ. ಆದರೆ ಅವರ ಸ್ವಲ್ಪ ಸಮಯಾವಕಾಶ ನೀಡಬಹುದಾಗಿತ್ತು. ಸ್ಪೀಕರ್ ಅವರು ಬಹಳ ಬ್ಯುಸಿಯಾಗಿರುವ ಹಿನ್ನೆಲೆಯಲ್ಲಿ ಬೇರೆ ಕಾರ್ಯಕ್ರಮ ಇದೆ ಎಂದು 12 ಗಂಟೆಗೆ ಸಮಯ ನಿಗದಿ ಮಾಡಿ ಹೊರಟರು. ನಾವು ಸ್ಪೀಕರ್ ಅವರಿಗೆ ಗೌರವ ಕೊಡಬೇಕು, ಕೊಡುತ್ತಿದ್ದೇವೆ. ಒಂದೂವರೆ ಗಂಟೆಯಿಂದ ಮಾಧ್ಯಮದವರು, ನಾವು ಕಾಯುತ್ತಿದ್ದೇವೆ.

ನಮಗೆ ಅವರ ಭಾವನೆಯೂ ಅರ್ಥವಾಗುತ್ತದೆ. ಹಾನಗಲ್ ಕ್ಷೇತ್ರದಲ್ಲಿನ ಸೋಲಿನ ಆಕ್ರೋಶವನ್ನು ಸ್ಪೀಕರ್ ಅವರು ಈ ರೀತಿ ವ್ಯಕ್ತಪಡಿಸುತ್ತಿದ್ದಾರೆ. ಅವರು ಯಾವಾಗ ಸಮಯ ನಿಗದಿ ಮಾಡುತ್ತಾರೋ ಮಾಡಲಿ. ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯ ಬೆಳವಣಿಗೆಯಲ್ಲ. ಇರಲಿ, ಇಲ್ಲಿ ರಾಜಕಾರಣ ಮಾತನಾಡುವುದು ಬೇಡ.’

ತಡವಾಗಿ ಬರುವ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದರಾ ಎಂಬ ಪ್ರಶ್ನೆಗೆ, ‘ಖಂಡಿತವಾಗಿ ನಾವು ಮಾಹಿತಿ ನೀಡಿದ್ದೆವು. ಅವರು ಶಿಸ್ತುಬದ್ಧ, ಸಂವಿಧಾನಬದ್ಧವಾಗಿ ಅಧಿವೇಶನ ನಡೆಸಿಕೊಂಡು ಬಂದಿದ್ದಾರೆ. ನಾವು ಕೂಡ ಧರಣಿ ಮಾಡಬಹುದು, ಆದರೆ ನಾವು ತಾಳ್ಮೆಯಿಂದ ಅನುಸರಿಸಿಕೊಂಡು ಹೋಗುತ್ತೇವೆ’ ಎಂದರು.

ಬಂಧಿಸಲು ತಡವೇಕೆ?

ಬಿಟ್ ಕಾಯಿನ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಮಕ್ಕಳು ಭಾಗಿಯಾಗಿದ್ದಾರೆ ಎಂಬ ವದಂತಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಾಂಗ್ರೆಸ್ ನಾಯಕರ ಮಕ್ಕಳು ಭಾಗಿಯಾಗಿದ್ದರೆ, ಅವರನ್ನು ಬಂಧಿಸಲು ತಡ ಮಾಡುತ್ತಿರುವುದೇಕೆ? ಕೂಡಲೇ ಬಂಧಿಸಲಿ. ಸಮಯ ವ್ಯರ್ಥ ಮಾಡುವುದೇಕೆ? ಅವರು ಯಾವ ರೀತಿ ಬಿಟ್ ಕಾಯಿನ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಿ. ಆರೋಪಿ ಸ್ನೇಹಿತನಾಗಿದ್ದ ಮಾತ್ರಕ್ಕೆ ಪ್ರಕರಣದಲ್ಲಿ ಸಿಲುಕಿಸಲು ಸಾಧ್ಯವಿಲ್ಲ. ಇದು ಬೆಂಗಳೂರು, ಕರ್ನಾಟಕ ರಾಜ್ಯದ ಘನತೆಯ ವಿಚಾರ. ಹೀಗಾಗಿ ಈ ಪ್ರಕರಣದ ಸತ್ಯಾಂಶ ಹೊರಬರಬೇಕಿದೆ’ ಎಂದರು.

ಈ ಪ್ರಕರಣದ ಹಾದಿ ತಪ್ಪಿಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ, ‘ಹಣ್ಣು ತಿಂದವರು ಯಾರೋ, ಸಿಪ್ಪೆ ತಿಂದವರು ಯಾರೋ, ಮೂತಿಗೆ ಒರೆಸಿದವರು ಯಾರೋ, ಎಲ್ಲವೂ ಮುಂದೆ ಗೊತ್ತಾಗುತ್ತದೆ’ ಎಂದು ಉತ್ತರಿಸಿದರು.

ಮುಖ್ಯಮಂತ್ರಿಗಳ ದೆಹಲಿ ಪ್ರವಾಸದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಮುಖ್ಯಮಂತ್ರಿಗಳು ಯಾಕೆ ಹೋದರೊ, ಏನು ಗುಸುಗುಸು ನಡೆಯುತ್ತಿದೆಯೋ, ಅವರ ಪಕ್ಷದ ನಾಯಕರೇ ಕರೆ ಮಾಡಿ, ಮುಖ್ಯಮಂತ್ರಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ಈಗ ಆ ವಿಚಾರ ಮಾತನಾಡುವುದು ಬೇಡ’ ಎಂದು ಉತ್ತರಿಸಿದರು.

ಬಿಟ್ ಕಾಯಿನ್ ವಿಚಾರವಾಗಿ ತಲೆಕೆಡಿಸಿಕೊಳ್ಳಬೇಡಿ ಎಂದು ಪ್ರಧಾನಿ ಧೈರ್ಯ ತುಂಬಿದ್ದಾರೆ ಎಂಬ ಬೊಮ್ಮಾಯಿ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಬಹಳ ಸಂತೋಷ. ಆ ಪ್ರಕರಣದ ವಿಚಾರವನ್ನು ಜನರ ಮುಂದೆ ಬಿಚ್ಚಿಡಲಿ. ಈ ವಿಚಾರವನ್ನು ಪ್ರಧಾನಿ ಮುಂದೆ ಇವರು ಪ್ರಸ್ತಾಪ ಮಾಡಿದ್ದೇಕೆ? ಅವರು ಯಾಕೆ ತಲೆಕೆಡಿಸಿಕೊಳ್ಳಬೇಡಿ ಎಂದರು. ಯಾರಿಗಾದರೂ ತೊಂದರೆ, ಲಾಸ್ ಆಗಿದೆಯಾ? ಹೊರ ರಾಷ್ಟ್ರಗಳ ಹಣ ಹೋಗಿದೆಯಾ? ಅವರ ಹಸ್ತಕ್ಷೇಪ ಇದೆಯಾ? ಪ್ರಕರಣ ಹೇಗೆ ನಡೆದಿದೆ? ಯಾಕೆ ಬಂಧಿಸಿ ವಿಚಾರಣೆ ಮಾಡಿದರು? ಬಿಟ್ ಕಾಯಿನ್ ವಿಚಾರದಲ್ಲೇ ಯಾಕೆ ಎಫ್ಐಆರ್ ದಾಖಲಿಸಿದರು? ಎಲ್ಲ ಮಾಹಿತಿ ನೀಡಿ ಸ್ಪಷ್ಟತೆ ನೀಡಲಿ. ಕೆಲವು ಮಾಹಿತಿಗಳನ್ನು ಮಾತ್ರ ಮಾಧ್ಯಮಗಳಿಗೆ ಬಿಡುಗಡೆ ಮಾಡುವುದೇಕೆ?’ ಎಂದರು.

ಮಾಮನಿ ಅವರು ಪ್ರಧಾನಿ ಅವರಿಗೆ ಬರೆದ ಪತ್ರದಲ್ಲಿ ಬಿಜೆಪಿ ನಾಯಕರ ಹೆಸರಿದೆ ಎಂಬ ಪ್ರಶ್ನೆಗೆ, ‘ಆ ಪತ್ರದಲ್ಲಿರುವ ಹೆಸರುಗಳ ಬಗ್ಗೆ ಬಿಜೆಪಿ ನಾಯಕರು ಯಾಕೆ ಮಾತನಾಡುತ್ತಿಲ್ಲ? ಅದು ಸತ್ಯವೋ? ಸುಳ್ಳೋ ಎಂದು ನಾನು ಹೇಳುವುದಿಲ್ಲ. ಇದೆಲ್ಲವೂ ತನಿಖೆಯಾಗಬೇಕಲ್ಲವೇ?’ ಎಂದರು.

ಕಾಂಗ್ರೆಸ್ ನಾಯಕರು ಬಾಯಿ ಚಪಲಕ್ಕೆ ಮಾತನಾಡಬಾರದು, ದಾಖಲೆ ಇಟ್ಟುಕೊಂಡು ಮಾತನಾಡಲಿ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿಯವರು ಬಾಯಿ ಚಪಲಕ್ಕಾಗಿಯೇ ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುತ್ತಿದ್ದಾರೆ. ಮಾಧ್ಯಮಗಳ ಮೂಲಕ ಕಾಂಗ್ರೆಸ್ ನಾಯಕರ ಹೆಸರು ಹರಿಬಿಡುತ್ತಿದ್ದಾರೆ’ ಎಂದರು.

Video-ಸಿಎಂ ಬಸವರಾಜ ಬೊಮ್ಮಾಯಿಗೆ ಮೋದಿ ಹೇಳಿದ್ದೇನು ಗೊತ್ತಾ..?

ಬೆಂಗಳೂರು, ನವೆಂಬರ್ 11:ರಾಜ್ಯದಲ್ಲಿ ಕಳೆದ ನೂರು ದಿನಗಳಲ್ಲಿ ಕೈಗೊಂಡಿರುವ ಹಲವು ಸುಧಾರಣಾ ಕ್ರಮಗಳು ಹಾಗೂ ನೂತನ ಯೋಜನೆಗಳ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಂತೃಪ್ತಿ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಅವರು ಇಂದು ನವ ದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ನಂತರ ಕರ್ನಾಟಕ ಭವನದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ಭೇಟಿಯ ಸಂದರ್ಭದಲ್ಲಿ ಕಳೆದ ನೂರು ದಿನಗಳಲ್ಲಿ ಕೈಗೊಂಡ ಸುಧಾರಣಾ ಕ್ರಮಗಳ ಬಗ್ಗೆ ಹಾಗೂ ನೂತನ ಕಾರ್ಯಕ್ರಮಗಳ ಬಗ್ಗೆ ಪ್ರಧಾನಿಯವರಿಗೆ ಮಾಹಿತಿ ನೀಡಲಾಯಿತು. ಈ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿಯವರು ಕೆಲವು ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಕುರಿತಂತೆ ಹಲವು ಸಲಹೆ, ಮಾರ್ಗದರ್ಶನ ನೀಡಿದರು ಎಂದು ಮುಖ್ಯಮಂತ್ರಿಯವರು ತಿಳಿಸಿದರು.

ಪಿಎಂ ಭೇಟಿಯಾದ ಸಿಎಂ

ಪ್ರಧಾನಿಯವರು ವಿಶೇಷವಾಗಿ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ಹಾಗೂ ಕೆಟಿಪಿಪಿ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಇನ್ನಷ್ಟು ಪಾರದರ್ಶಕತೆ ತರುವ ಕ್ರಮಗಳನ್ನು ಶ್ಲಾಘಿಸಿದರು. ರೈತ ವಿದ್ಯಾನಿಧಿ ಯೋಜನೆ ರಾಜ್ಯದಲ್ಲಿ ಯಶಸ್ವಿಯಾಗಬೇಕು. ಏಕೆಂದರೆ, ಡಿಜಿಟಲ್ ವೇದಿಕೆಯಲ್ಲಿ ರಾಜ್ಯದ ಎಲ್ಲ ರೈತರ ಮಾಹಿತಿ ಲಭ್ಯವಿದೆ. ರಾಜ್ಯದ ಯಶಸ್ಸನ್ನು ಗಮನಿಸಿ ಇತರ ರಾಜ್ಯಗಳಿಗೆ ಈ ಯೋಜನೆ ವಿಸ್ತರಿಸಲು ಚಿಂತನೆ ನಡೆಸಲಾಗುವುದು ಎಂದು ಪ್ರಧಾನಿಯವರು ತಿಳಿಸಿದರು. ಅತಿ ಹೆಚ್ಚು ಅಂದಾಜು ಸಿದ್ಧಪಡಿಸುವುದು, ಕೆಲವರಿಗೆ ಮಾತ್ರ ಟೆಂಡರ್ ದೊರೆಯುವ ಉದ್ದೇಶಕ್ಕೆ ನಿರ್ದಿಷ್ಟ ಷರತ್ತುಗಳನ್ನು ವಿಧಿಸುವಂತಹ ಪರಿಪಾಠಗಳಿಗೆ ಕಡಿವಾಣ ಹಾಕಲು ಕೆಟಿಪಿಪಿ ಕಾಯ್ದೆಗೆ ತಿದ್ದುಪಡಿ ತಂದಿರುವುದು ಒಂದು ದಿಟ್ಟ ನಿರ್ಧಾರ. ಎಲ್ಲ ಇಲಾಖೆಗಳಲ್ಲಿಯೂ ಇದನ್ನು ಜಾರಿಗೊಳಿಸುವಂತೆ ಪ್ರಧಾನಿಯವರು ಸಲಹೆ ಮಾಡಿದರು ಎಂದು ಮುಖ್ಯಮಂತ್ರಿಯವರು ತಿಳಿಸಿದರು.

ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಪ್ರಗತಿಯ ಕುರಿತು ಮಾಹಿತಿ ಪಡೆದ ಪ್ರಧಾನಿಯವರು ವಿಶ್ವವಿದ್ಯಾಲಯಗಳು, ಶಿಕ್ಷಕರು, ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೊಸ ನೀತಿಯನ್ನು ಅನುಷ್ಠಾನಗೊಳಿಸುವಂತೆ ಸಲಹೆ ನೀಡಿದರು. ಅಮೃತ ಯೋಜನೆಗಳ ಕುರಿತು ಹರ್ಷ ವ್ಯಕ್ತಪಡಿಸಿ, ಗ್ರಾಮ ಪಂಚಾಯಿತಿಗಳ ಸಮಗ್ರ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಸಂಯೋಜನೆಗೊಳಿಸಿ, ಕ್ರಮ ಕೈಗೊಳ್ಳುವಂತೆ ಹಾಗೂ ಇದರ ಮೇಲ್ವಿಚಾರಣೆಗೆ ಹಿರಿಯ ಅಧಿಕಾರಿಯ ನೇಮಕ ಮಾಡುವಂತೆ ತಿಳಿಸಿದರು. ವಸತಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು, ಪ್ರಧಾನ್ ಮಂತ್ರಿ ಆವಾಸ್ ಯೋಜನೆಯೊಂದಿಗೆ ಸಂಯೋಜನೆ ಮಾಡುವಂತೆ ತಿಳೀಸಿದರು. ಇದರೊಂದಿಗೆ ಕೌಶಲ್ಯ ಅಭಿವೃದ್ಧಿ, ಸ್ವಸಹಾಯ ಸಂಘಗಳ ಸಬಲೀಕರಣ ಮೊದಲಾದ ವಿಷಯಗಳ ಕುರಿತು ಚರ್ಚಿಸಲಾಯಿತು ಎಂದು ಮುಖ್ಯಮಂತ್ರಿಯವರು ತಿಳಿಸಿದರು/

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಹೆಣ್ಣುಮಕ್ಕಳ ಆರ್ಥಿಕ ಸಬಲೀಕರಣಕ್ಕೆ ನೆರವು ನೀಡಲು ಬ್ಯಾಂಕುಗಳು ಹೆಚ್ಚಿನ ಉತ್ಸುಕತೆ ತೋರದಿರುವ ಬಗ್ಗೆ ಪ್ರಧಾನಿಯವರ ಗಮನ ಸೆಳೆದಿದ್ದು, ಹೆಣ್ಣುಮಕ್ಕಳಿಗೆ ಹೆಚ್ಚಿನ ನೆರವು ನೀಡುವಂತೆ ಬ್ಯಾಂಕುಗಳಿಗೆ ನಿರ್ದೇಶನ ನೀಡುವುದಾಗಿ ತಿಳಿಸಿದರು. ರಾಜ್ಯದಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ, ಉದ್ಯೋಗ ನೀತಿ ಮೊದಲಾದವುಗಳ ಕುರಿತೂ ಸಹ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಡಿಸೆಂಬರ್ ನಲ್ಲಿ ರಾಜ್ಯಕ್ಕೆ ಪ್ರಧಾನಿ ಭೇಟಿ:

ರಾಜ್ಯದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ/ ಶಂಕುಸ್ಥಾಪನೆಗೆ ಡಿಸೆಂಬರ್ ತಿಂಗಳಲ್ಲಿ ಬೆಂಗಳೂರಿಗೆ ಆಗಮಿಸುವಂತೆ ಪ್ರಧಾನಿಯವರಿಗೆ ಆಹ್ವಾನ ನೀಡಲಾಗಿದೆ. ಬೆಂಗಳೂರು ಉಪ ನಗರ ರೈಲು ಯೋಜನೆಯ ಅಡಿಗಲ್ಲು ಸಮಾರಂಭ, ಅಂಬೇಡ್ಕರ್ ಸ್ಕೂಲ್ ಆಫ್ ಇಕನಾಮಿಕ್ಸ್ ಹಾಗೂ ಉನ್ನತೀಕರಿಸಿದ ಐಟಿಐಗಳ ಉದ್ಘಾಟನೆ ಹಾಗೂ ಬೆಂಗಳೂರು ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಪ್ರಧಾನಿಯವರನ್ನು ಆಹ್ವಾನಿಸಲಾಗಿದೆ. ಡಿಸೆಂಬರ್ ತಿಂಗಳಲ್ಲಿ ಎರಡು ದಿನ ಈ ಕಾರ್ಯಕ್ರಮಗಳನ್ನು ನಿಗದಿಪಡಿಸುವಂತೆ ಪ್ರಧಾನಿಯವರು ತಿಳಿಸಿದ್ದು, ಎರಡು ಬಾರಿ ರಾಜ್ಯಕ್ಕೆ ಆಗಮಿಸಲಿದ್ದಾರೆ. ಪ್ರಧಾನಿ ಕಾರ್ಯಾಲಯ ನಿಗದಿ ಪಡಿಸಿದ ದಿನಾಂಕಗಳಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ನಿಷ್ಠೆಯಿಂದ ದಿಟ್ಟತನದಿಂದ ಜನಪರ ಕೆಲಸ ಮಾಡುವಂತೆ ಪ್ರಧಾನಿಯವರು ತಿಳಿಸಿದ್ದಾರೆ. ವಿಧಾನಸಭಾ ಉಪಚುನಾವಣೆಯ ಫಲಿತಾಂಶಗಳ ಕುರಿತು ಮಾಹಿತಿ ನೀಡಿದಾಗ, ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ, 2023ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜನಪರ ಕೆಲಸ ಮಾಡುವಂತೆ ಸಲಹೆ ನೀಡಿದ್ದಾರೆ ಎಂದು ಸಿಎಂ ತಿಳಿಸಿದರು.

Video-ಮಳೆ: ತುರ್ತು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಸೂಚನೆ

ಬೆಂಗಳೂರು, ನವೆಂಬರ್ 05: ಪ್ರಸ್ತುತ ವರ್ಷ ಅಕಾಲಿಕ ಮಳೆ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿದ್ದು, ತುರ್ತು, ಅಲ್ಪಾವಧಿ, ದೀರ್ಘಾವಧಿ ಕ್ರಮಗಳನ್ನು ತಕ್ಷಣವೇ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರು ನಗರದಲ್ಲಿ ಸುರಿಯುತ್ತಿರುವ ಮಳೆಯಿಂದ ಉಂಟಾಗಿರುವ ಹಾನಿಗೆ ಸಂಬಂಧಿಸಿದಂತೆ ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಇನ್ನೆರಡು ದಿನಗಳ ಕಾಳ ಬೆಂಗಳೂರಿನಲ್ಲಿ ಮಳೆಯಾಗುವ ಸಂಭವವಿರುವ ಬಗ್ಗೆ ಹವಾಮಾನ ಮುನ್ಸೂಚನೆ ಇದೆ. ಬೆಂಗಳೂರು ಮಳೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಮಳೆಯನ್ನು ನಿಭಾಯಿಸುವ ವಿಧಾನ ಬದಲಾಯಿಸಿ, ಮಳೆಯಿಂದ ಆಗುತ್ತಿರುವ ಹಾನಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕು ಎಂದ ಮುಖ್ಯಮಂತ್ರಿಗಳು, ಬೆಂಗಳೂರು ಅಂತರರಾಷ್ಟ್ರೀಯ ನಗರವಾಗಿದ್ದು, ನಗರದಲ್ಲಿ ಮಳೆಯಿಂದಾಗುವ ಹಾನಿಯನ್ನು ತಡೆಗಟ್ಟಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಈ ಬಾರಿ ಮಳೆಯ ಕಾರಣ ಎಲ್ಲಲ್ಲಿ ಹಾನಿಯಾಗಿದೆ ಎನ್ನುವ ಬಗ್ಗೆ ಹಾಗೂ ಕೈಗೊಂಡಿರುವ ಕ್ರಮ ಮುಂದೆ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿಗಳು, ಚರಂಡಿಯಿಂದ ನೀರು ಹೊರಬರುತ್ತದೆ ಎಂದರೆ ಅದನ್ನು ಸರಿಪಡಿಸುವುದು ಅಧಿಕಾರಿಗಳ ಜವಾಬ್ದಾರಿ. ಸಮಸ್ಯೆಯನ್ನು ಅರ್ಥಮಾಡಿಕೊಂಡು ಪರಿಹಾರವನ್ನು ಕಂಡುಕೊಳ್ಳಬೇಕು ಎಂದರು.

ತೀವ್ರ ಪ್ರವಾಹವಾಗುವ ಪ್ರದೇಶಗಳನ್ನು ಹಾಗೂ ಮುಖ್ಯ ಚರಂಡಿಗಳಲ್ಲಿ ಸಮಸ್ಯೆ ಇರುವಲ್ಲೆಲ್ಲಾ ಗುರುತಿಸಿ ಸರಿಪಡಿಸಬೇಕು. ಚರಂಡಿಗಳ ನಿರ್ಮಾಣ ಮಾಡುವಾಗ ಅವುಗಳ ವಿನ್ಯಾಸವನ್ನು ಸೂಕ್ತವಾಗಿ ಮಾಡಬೇಕು. ರಾಜಕಾಲುವೆಗಳ ಸುತ್ತಲು ಅಕ್ರಮ ಬಡಾವಣೆಗಳು ಬಂದಿವೆ. ಪ್ರಾರಂಭದಲ್ಲಿಯೇ ಅಕ್ರಮವನ್ನು ತಡೆಯಬೇಕಿತ್ತು. ಆದರೆ ಆಡಳಿತಾತ್ಮಕವಾಗಿ ಕ್ರಮಗಳನ್ನು ಕೈಗೊಳ್ಳಲೇಬೇಕು ಎಂದು ಸೂಚಿಸಿದರು.
ತೀವ್ರವಾಗಿ ಪ್ರವಾಹ ಉಂಟಾಗುವ ಪ್ರದೇಶಗಳಲ್ಲಿಯಾದರೂ ತಕ್ಷಣವೇ ವೈಜ್ಞಾನಿಕ ಕ್ರಮ ಕೈಗೊಳ್ಳಬೇಕು. ನಗರದಲ್ಲಿ ಪ್ರತಿ 50 ಮೀಟರ್‍ಗಳಿಗೆ ರೀಚಾರ್ಚಿಂಗ್ ಪಿಟ್ಸ್ ಅಗತ್ಯವಿದೆ. ಪ್ರಾಯೋಗಿಕವಾಗಿ ಈ ಕಾರ್ಯವನ್ನು ಕೈಗೊಳ್ಳುವಂತೆ ಸೂಚಿಸಿದರು. ಒಂದು ಕಿ.ಮೀ ವ್ಯಾಪ್ತಿಯಲ್ಲಿ ಮೊದಲು ಕಾರ್ಯಗತಗೊಳಿಸಲು ಸೂಚನೆ ನೀಡಿದರು.

ಮಾಹಿತಿ ಸಲ್ಲಿಸಿ:

ಬೆಂಗಳೂರಿನಲ್ಲಿನ ಮಳೆಯಾದಾಗ ಮನೆಗಳಿಗೆ ನೀರು ನುಗ್ಗುವ ಪ್ರದೇಶಗಳನ್ನು ವಲಯವಾರು ವಿಭಜಿಸಿ, ತಗ್ಗು ಪ್ರದೇಶಗಳ ಪಟ್ಟಿ ನೀಡಲು ಸೂಚನೆ ನೀಡಿದ ಮುಖ್ಯಮಂತ್ರಿಗಳು, ನೀರು ನುಗ್ಗಲು ಕಾರಣಗಳೇನು ಎಂದು ಗುರುತಿಸಿ, ಅದನ್ನು ತಡೆಯಲು ಅಲ್ಪಾವಧಿ ಕ್ರಮ ಹಾಗೂ ದೀರ್ಘಾವಧಿ ಕ್ರಮಗಳೇನು ಎಂದು ಪಟ್ಟಿ ಮಾಡಲು ಸೂಚಿಸಿದರು.

ಒಳಚರಂಡಿಗಳ ಪೈಕಿ ಎಲ್ಲಿ ತೀವ್ರ ಸಮಸ್ಯೆ ಇದೆ ಅವುಗಳನ್ನು ಗುರುತಿಸಿ, ಎಲ್ಲಿ ತಡೆಗೋಡೆಗಳನ್ನು ನಿರ್ಮಿಸಬೇಕು ಅಂಥ ಎಷ್ಟು ಸ್ಥಳಗಳಿವೆ ಅವುಗಳನ್ನು ಗುರುತಿಸಲು ಪಟ್ಟಿ ಮಾಡಬೇಕು. ಸಮಗ್ರ ವರದಿಯನ್ನು ತಯಾರಿಸಿ ಅತಿಸೂಕ್ಷ್ಮ ಹಾಗೂ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿರಬೇಕು ಎಂದು ಸೂಚಿಸಿದರು.
ಮಳೆಯಾದ ಸಂದರ್ಭದಲ್ಲಿ ಹಾನಿಯಾಗಲು ಎರಡು ಪ್ರಮುಖ ಕಾರಣಗಳೆಂದರೆ, ತಗ್ಗಿನ ಪ್ರದೇಶ ಹಾಗೂ ತಡೆಗೋಡೆಗಳಲ್ಲಿಲ್ಲದಿರುವುದು. ಆದ್ದರಿಂದ ಸೂಕ್ತ ಯೋಜನೆಯನ್ನು ಸಿದ್ಧಪಡಿಸುವಂತೆ ಸೂಚಿಸಿದರು.

ಸಮರೋಪಾದಿಯಲ್ಲಿ ಹೂಳು ತೆಗೆಯಿರಿ:
ಸಮರೋಪಾದಿಯಲ್ಲಿ ಒಳಚರಂಡಿಗಳ ಹೂಳು ತೆಗೆಯುವ ಕೆಲಸ ಕೈಗೊಳ್ಳಲು ಸೂಚನೆ ನೀಡಿದ ಮುಖ್ಯಮಂತ್ರಿಗಳು ಒಟ್ಟು 842 ಕಿಮಿ ಪೈಕಿ 389 ಕಿ.ಮೀ ತಡೆಗೋಡೆ ನಿರ್ಮಿಸಲಾಗಿದೆ. ನಗರೋತ್ಥಾನ ಯೋಜನೆಯಡಿ ಕೈಗೊಂಡಿರುವ 75 ಕಿ.ಮೀ ತಡೆಗೋಡೆ ಈಗಾಗಲೇ ನಿರ್ಮಿಸಲಾಗಿದ್ದು, ಬಾಕಿ 15 ಕಿ.ಮೀ ಗೆ ತಡೆಗೋಡೆ ನಿರ್ಮಿಸಬೇಕಿದೆ. 50 ಕಿ.ಮೀ ಹಳೆ ತಡೆಗೋಡೆಗಳ ಪುನರ್ ನಿರ್ಮಾಣ ಕಾರ್ಯವೂ ಚುರುಕುಗೊಳ್ಳಬೇಕು ಎಂದರು.

ತಂಡಗಳ ನಿಯೋಜನೆ:
ಪ್ರಸ್ತುತ 64 ರಕ್ಷಣಾ ತಂಡಗಳಿದ್ದು, ಪ್ರತಿ ತಂಡದಲ್ಲಿ 15 ಜನರಿದ್ದು, ಸಿಬ್ಬಂದಿ ಸಂಖ್ಯೆಯನ್ನು ಕನಿಷ್ಠ 30 ಕ್ಕೆ ಹೆಚ್ಚಿಸಬೇಕು. ಅವರನ್ನು ತಕ್ಷಣವೇ ನಿಯೋಜಿಸಲು ಸೂಚನೆ ನೀಡಿದರು. ಬಿಬಿಎಂಪಿ ವತಿಯಿಂದ ಪ್ರತಿ ತಂಡದಲ್ಲಿ ಮಾನವ ಸಂಪನ್ಮೂಲ ಹಾಗೂ ಉಪಕರಣಗಳನ್ನು ಹೆಚ್ಚಿಸಲು ಸೂಚಿಸಿದರು. ಬೆಂಗಳೂರಿಗೆ ಪ್ರತ್ಯೇಕ ಎಸ್.ಡಿ.ಆರ್.ಎಫ್ ತಂಡಗಳನ್ನು ನಾಲ್ಕು ವಲಯಗಳಲ್ಲಿಯೂ ಮೀಸಲಿರಿಸಲು ಸೂಚಿಸಿದ ಮುಖ್ಯಮಂತ್ರಿಗಳು, ಸಿಬ್ಬಂದಿಗೆ ಸೂಕ್ತ ತರಬೇತಿಯನ್ನು ನೀಡಲು ಹಾಗೂ ಅಗತ್ಯವಿರುವ ಉಪಕರಣಗಳನ್ನೂ ಖರೀದಿಸಲು ಪಟ್ಟಿ ಮಾಡಿ ಪ್ರಸ್ತಾವನೆ ಸಲ್ಲಿಸಲು ನಿರ್ದೇಶನ ನೀಡಿದರು. ನಾಗರಿಕಾ ರಕ್ಷಣಾ ಹಾಗೂ 500 ಹೋಮ್ ಗಾರ್ಡ್‍ಗಳು, ಸ್ವಯಂಸೇವಕರ ಸೇವೆಯನ್ನೂ ಪಡೆಯಲು ತಿಳಿಸಿದರು.

ಅನುದಾನ:
ಬಿಬಿಎಂಪಿ ಮತ್ತು ಎನ್‍ಡಿಆರ್‍ಎಫ್ ವತಿಯಿಂದ ಕೈಗೊಳ್ಳುವ ತುರ್ತು ರಕ್ಷಣೆ ಮತ್ತು ಪರಿಹಾರಕ್ಕೆ ಅಗತ್ಯವಿರುವ ಅನುದಾನವನ್ನು ನೀಡಲು ಸರ್ಕಾರ ಸಿದ್ಧವಿದ್ದು, ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿದ ಮುಖ್ಯಮಂತ್ರಿಗಳು, ಎಸ್.ಟಿ.ಪಿ ಗಳು ತಮ್ಮ ಸಾಮಥ್ರ್ಯಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುತ್ತಿಲ್ಲ. ಅವುಗಳ ಸಾಮಥ್ರ್ಯವನ್ನು ಹೆಚ್ಚಿಸಲು ಸೂಚಿಸಿದರು. ರಕ್ಷಣಾ ಕಾರ್ಯ ಕೈಗೊಳ್ಳಲು ಎಸ್.ಡಿ.ಆರ್.ಎಫ್ ತಂಡಗಳು ತುರ್ತಾಗಿ ಸ್ಥಳಕ್ಕೆ ತೆರಳಬೇಕು ಎಂದು ಸೂಚಿಸಿದರು.
ಪ್ರತಿ ತಿಂಗಳು ಬಿಬಿಎಂಪಿ ಆಯುಕ್ತರು ಹಾಗೂ ವಲಯ ಆಯುಕ್ತರು ಸಭೆ ನಡೆಸಿ ಸಮಸ್ಯೆಗಳನ್ನು ನನಗೆ ವರದಿ ಮಾಡಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು. ರಸ್ತೆಗಳನ್ನು ಚಾಲನಾಸ್ನೇಹಿಯಾಗುವಂತೆ ಮಾಡಲು ಸಮರೋಪಾದಿಯಲ್ಲಿ ಕೈಗೊಳ್ಳಬೇಕು. ಸಭೆಗಳಲ್ಲಿ ಕೈಗೊಳ್ಳುವ ನಿರ್ಧಾರಗಳು ತಳಮಟ್ಟದವರೆಗೂ ಹೋಗಬೇಕು. ಜೂನಿಯರ್ ಇಂಜಿನಿಯರ್‍ಗಳನ್ನು ಒಳಗೊಂಡ ಸಭೆ ನಡೆಸಿ ಸೂಕ್ತ ನಿರ್ದೇಶನಗಳನ್ನು ನೀಡುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಸಚಿವ ಡಾ:ಅಶ್ವತ್ಥ್ ನಾರಾಯಣ್, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಆಡಳಿತಾಧಿಕಾರಿ ರಾಕೇಶ್ ಸಿಂಗ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಡಾ: ಮನೋಜ್ ರಾಜನ್, ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮಹಾನಿರ್ದೇಶಕ ಮತ್ತು ಆರಕ್ಷಕ ಮಹಾನಿರೀಕ್ಷಕರು ಸಭೆಯಲ್ಲಿ ಉಪಸ್ಥಿತರಿದ್ದರು.

ಕೇದಾರನಾಥದಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ…

ಕೇದಾರನಾಥ:ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರು ಕೇದಾರನಾಥದಲ್ಲಿಂದು ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಿದರು ಮತ್ತು ಪೂರ್ಣಗೊಂಡಿರುವ ಹಲವು ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಅವರು ಶ್ರೀ ಆದಿ ಶಂಕರಾಚಾರ್ಯರ ಸಮಾಧಿಯನ್ನು ಉದ್ಘಾಟಿಸಿದರು ಮತ್ತು ಶ್ರೀ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಅಲ್ಲದೆ, ಅವರು ಹಾಲಿ ನಡೆಯುತ್ತಿರುವ ಹಾಗೂ ಪೂರ್ಣಗೊಂಡಿರುವ ಮೂಲಸೌಕರ್ಯ ಯೋಜನೆಗಳನ್ನು ಪರಿಶೀಲಿಸಿದರು.

ಪ್ರಧಾನಮಂತ್ರಿ ಅವರು ಕೇದಾರನಾಥದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕೇದಾರನಾಥದಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಜೊತೆಗೆ 12 ಜ್ಯೋತಿರ್ಲಿಂಗಗಳು ಮತ್ತು 4 ಧಾಮಗಳು ಮತ್ತು ದೇಶಾದ್ಯಂತ ಅನೇಕ ನಂಬಿಕೆಯ ಸ್ಥಳಗಳಲ್ಲಿ ಪ್ರಾರ್ಥನೆಗಳು ಹಾಗೂ ಆಚರಣೆಗಳನ್ನು ನಡೆಸಲಾಯಿತು.

ನಂತರ ಅಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಭಾರತದ ಶ್ರೇಷ್ಠ ಆಧ್ಯಾತ್ಮಿಕ ಖುಷಿ ಸಂಪ್ರದಾಯವನ್ನು ಮೆಲುಕು ಹಾಕಿದರು ಮತ್ತು ಕೇದಾರನಾಥ ಧಾಮಕ್ಕೆ ಬಂದಿದ್ದಕ್ಕಾಗಿ ಆಗಿರುವ ವರ್ಣನಾತೀತ ಸಂತೋಷವನ್ನು ವ್ಯಕ್ತಪಡಿಸಿದರು. ನಿನ್ನೆ ನೌಶೇರಾದಲ್ಲಿ ಯೋಧರೊಂದಿಗೆ ನಡೆಸಿದ ಸಂವಾದವನ್ನು ನೆನಪು ಮಾಡಿಕೊಂಡ ಅವರು, ನಿನ್ನೆ ದೀಪಾವಳಿಯಂದು 130 ಕೋಟಿ ಭಾರತೀಯರ ಭಾವನೆಗಳನ್ನು ಯೋಧರಿಗೆ ಕೊಂಡೊಯ್ಯಲಾಗಿತ್ತು, ಇಂದು ಗೋವರ್ಧನ ಪೂಜೆಯಂದು ನಾನು ಯೋಧರ ನಾಡಿನಲ್ಲಿದ್ದೇನೆ ಮತ್ತು ಬಾಬ ಕೇದಾರರ ದಿವ್ಯ ಸಾನಿಧ್ಯದಲ್ಲಿದ್ದೇನೆ ಎಂದರು. ಪ್ರಧಾನಮಂತ್ರಿ ಅವರು ರಾಮಚರಿತ ಮಾನಸದಿಂದ ಪದ್ಯವನ್ನು ‘अबिगत अकथ अपार, नेति-नेति नित निगम कह’ ಉಲ್ಲೇಖಿಸಿ ಕೆಲವು ಅನುಭವಗಳು ಅಲೌಕಿಕವಾಗಿರುತ್ತವೆ. ಮತ್ತು ಅವುಗಳನ್ನು ಪದಗಳಲ್ಲಿ ವರ್ಣಿಸಲಾಗದು . ಅಂತಹ ಅನುಭವ ತನಗೆ ಬಾಬಾ ಕೇದಾರನಾಥನ ದಿವ್ಯ ಸನ್ನಿಧಿಯಲ್ಲಿ ಆಗುತ್ತಿದೆ ಎಂದರು.

ಆಶ್ರಯ, ಸಹಾಯ ಕೇಂದ್ರಗಳಂತಹ ಸೌಲಭ್ಯಗಳು ಅರ್ಚಕರು ಮತ್ತು ಭಕ್ತಾದಿಗಳ ಜೀವನವನ್ನು ಸುಗಮಗೊಳಿಸಲಿವೆ ಮತ್ತು ಅವರು ತೀರ್ಥಯಾತ್ರೆಯ ಸಂಪೂರ್ಣ ಅನುಭವವನ್ನು ಪಡೆಯಲು ಅನುವು ಮಾಡಿಕೊಡುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಕೇದಾರನಾಥದಲ್ಲಿ 2013ರಲ್ಲಿ ಉಂಟಾಗಿದ್ದ ಪ್ರವಾಹವನ್ನು ನೆನಪು ಮಾಡಿಕೊಂಡ ಪ್ರಧಾನಮಂತ್ರಿ, ವರ್ಷಗಳ ಹಿಂದೆ ಉಂಟಾದ ಪ್ರವಾಹದಿಂದ ಆದ ಹಾನಿಯನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಹೇಳಿದರು. “ಇಲ್ಲಿಗೆ ಬರುತ್ತಿದ್ದ ಜನರು ಈ ನಮ್ಮ ಕೇದಾರ ಎದ್ದು ನಿಲ್ಲುತ್ತದೆಯೇ? ಎಂದು ಕೇಳುತ್ತಿದ್ದರು. ಆದರೆ ನನ್ನೊಳಗಿನ ಧ್ವನಿ ಹೇಳುತ್ತಿತ್ತು, ಕೇದಾರನಾಥ ಮೊದಲಿಗಿಂತಲೂ ಹೆಚ್ಚು ಹೆಮ್ಮೆಯಿಂದ ಎದ್ದು ನಿಲ್ಲುತ್ತದೆ” ಎಂದು.

ಕೇದಾರ ಭಗವಂತನ ಕೃಪೆ ಮತ್ತು ಆದಿ ಶಂಕರಾಚಾರ್ಯರ ಪ್ರೇರಣೆ ಹಾಗೂ ಭುಜ್ ಭೂಕಂಪದ ನಂತರ ಪರಿಣಾಮಗಳನ್ನು ನಿರ್ವಹಿಸಿದ ಅನುಭವದಿಂದಾಗಿ ಸಂಕಷ್ಟ ಸಮಯದಲ್ಲಿ ಸಹಾಯ ಮಾಡಬಹುದು ಎಂದೆನಿಸಿತ್ತು ಎಂದು ಪ್ರಧಾನಮಂತ್ರಿ ಹೇಳಿದರು. ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡ ಅವರು, ತಮ್ಮ ಜೀವನದ ಆರಂಭದಲ್ಲಿ ತಮ್ಮನ್ನು ಪೋಷಿಸಿದ ಸ್ಥಳಕ್ಕೆ ಸೇವೆ ಸಲ್ಲಿಸಲು ಇದು ಒಂದು ಅದೃಷ್ಟ ಎಂದರು. ಧಾಮದ ಅಭಿವೃದ್ಧಿ ಕಾರ್ಯಗಳನ್ನು ನಿರಂತರವಾಗಿ ನಡೆಸುತ್ತಿರುವ ಎಲ್ಲ ಕಾರ್ಯಕರ್ತರು, ಅರ್ಚಕರು, ಅರ್ಚಕರ ಕುಟುಂಬಗಳು ಮತ್ತು ಅಧಿಕಾರಿಗಳು ಹಾಗೂ ಮುಖ್ಯಮಂತ್ರಿಗಳಿಗೆ ಪ್ರಧಾನಮಂತ್ರಿ ಧನ್ಯವಾದಗಳನ್ನು ಹೇಳಿದರು. ನಾನು ಡ್ರೋಣ್ ಮತ್ತಿತರ ತಂತ್ರಜ್ಞಾನದ ವಿಧಾನಗಳ ಮೂಲಕ ಕಾಮಗಾರಿಯ ಮೇಲೆ ನಿಗಾ ಇರಿಸಿದ್ದೆ ಎಂದರು. “ಈ ಪ್ರಾಚೀನ ತಪೋಭೂಮಿಯಲ್ಲಿ ಶಾಶ್ವತವಾದ ಆಧುನಿಕತೆಯ ಸಂಯೋಜನೆಯಿಂದಾಗಿ ನಡೆದ ಅಭಿವೃದ್ಧಿ ಕಾರ್ಯಗಳಿಗೆ ಭಗವಾನ್ ಶಂಕರನ ನೈಸರ್ಗಿಕ ಅನುಗ್ರಹದ ಫಲಿತಾಂಶವಾಗಿದೆ “ಎಂದು ಹೇಳಿದರು.

ಆದಿ ಶಂಕರಾಚಾರ್ಯರ ಕುರಿತು ಮಾತನಾಡಿದ ಶ್ರೀ ನರೇಂದ್ರ ಮೋದಿ, ಸಂಸ್ಕೃತದಲ್ಲಿ ಶಂಕರ ಎಂದರೆ “ಶಂ ಕರೋತಿ ಸಃ ಶಂಕರಃ” ಎಂದು. ಅಂದರೆ ಕಲ್ಯಾಣ ಮಾಡುವವನು ಶಂಕರ. ಈ ವಾಕ್ಯರಣವನ್ನು ಸ್ವತಃ ಆಚಾರ್ಯ ಶಂಕರರೇ ನಿರೂಪಿಸಿದ್ದಾರೆ. ಅವರ ಜೀವನ ಅಸಾಧಾರಣವಾದುದು ಏಕೆಂದರೆ ಅವರು ಸಾಮಾನ್ಯ ಜನರ ಕಲ್ಯಾಣಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದು ಅವರು ಹೇಳಿದರು. ಆಧುನಿಕತೆ ಮತ್ತು ಧರ್ಮವು ಏಕತಾನತೆ ಮತ್ತು ಹಳತಾದ ಆಚರಣೆಗಳೊಂದಿಗೆ ಸಂಬಂಧ ಹೊಂದಲು ಸಮಯವಿತ್ತು ಎಂದು ಪ್ರಧಾನಮಂತ್ರಿ ಸ್ಮರಿಸಿದರು. ಆದರೆ ಭಾರತೀಯ ತತ್ವಶಾಸ್ತ್ರ ಮಾನವ ಕಲ್ಯಾಣದ ಬಗ್ಗೆ ಮಾತನಾಡುತ್ತದೆ ಮತ್ತು ಜೀವನವನ್ನು ಸಮಗ್ರವಾಗಿ ನೋಡುತ್ತದೆ. ಸಮಾಜಕ್ಕೆ ಈ ಸತ್ಯದ ಅರಿವನ್ನು ಮೂಡಿಸುವ ಕಾರ್ಯವನ್ನು ಆದಿ ಶಂಕರಾಚಾರ್ಯರು ಮಾಡಿದ್ದಾರೆ ಎಂದರು.

ಇಂದು ನಮ್ಮ ಸಾಂಸ್ಕೃತಿಕ ಪರಂಪರೆಯ ನಂಬಿಕೆಯ ಕೇಂದ್ರಗಳನ್ನು ಸಾಧ್ಯವಾದಷ್ಟೂ ವಿಶ್ವಾಸಾರ್ಹ ಮತ್ತು ಹೆಮ್ಮೆಯಿಂದ ನೋಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. “ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಭವ್ಯ ಮಂದಿರ ನಿರ್ಮಾಣವಾಗುತ್ತಿದೆ, ಅಯೋಧ್ಯೆಗೆ ತನ್ನ ಗತ ವೈಭವ ಮರಳುತ್ತಿದೆ. ಎರಡು ದಿನಗಳ ಹಿಂದೆ, ಅಯೋಧ್ಯೆಯಲ್ಲಿನ ಅದ್ದೂರಿ ದೀಪೋತ್ಸವದ ಆಚರಣೆಯನ್ನು ಇಡೀ ಜಗತ್ತು ನೋಡಿದೆ ಎಂದರು. ಇಂದು ನಾವು ಭಾರತದ ಪ್ರಾಚೀನ ಸಾಂಸ್ಕೃತಿಕ ರೂಪ ಹೇಗಿದ್ದೀರಬಹುದೆಂದು ಊಹಿಸಿಕೊಳ್ಳಬಹುದು ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಇಂದಿನ ಭಾರತಕ್ಕೆ ತನ್ನ ಪರಂಪರೆಯ ಬಗ್ಗೆ ವಿಶ್ವಾಸವಿದೆ ಎಂದು ಪ್ರಧಾನಮಂತ್ರಿ ಹೇಳಿದರು. “ಭಾರತ ಇಂದು ತಾನೇ ಕಠಿಣ ಗುರಿಗಳನ್ನು ಮತ್ತು ಗಡುವುಗಳನ್ನು ಹಾಕಿಕೊಳ್ಳುತ್ತದೆ. ಇಂದು ಭಾರತ ಗಡುವುಗಳು ಮತ್ತು ಗುರಿಗಳಿಗೆ ಅಂಜುತ್ತದೆ ಎಂಬುದು ಸ್ವೀಕಾರಾರ್ಹವಲ್ಲ “ಎಂದು ಪ್ರಧಾನಮಂತ್ರಿ ಹೇಳಿದರು.

ಸ್ವಾತಂತ್ರ್ಯ ಸಂಗ್ರಾಮದ ವೀರರ ಕೊಡುಗೆ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು “ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದ ವೈಭವದ ಸ್ಥಳಗಳಿಗೆ ಮತ್ತು ಧಾರ್ಮಿಕ ಯಾತ್ರಾ ಸ್ಥಳಗಳಿಗೆ ಭೇಟಿ ನೀಡಬೇಕು ಮತ್ತು ಭಾರತದ ಆತ್ಮವನ್ನು ಪರಿಚಯ ಮಾಡಿಕೊಳ್ಳಬೇಕು” ಎಂದು ದೇಶವಾಸಿಗಳನ್ನು ಕೋರಿದರು.

21ನೇ ಶತಮಾನದ ಮೂರನೇ ದಶಕ ಉತ್ತರಾಖಂಡ್ ಗೆ ಸಂಬಂಧಿಸಿದ್ದು ಎಂದು ಪ್ರಧಾನಮಂತ್ರಿ ಹೇಳಿದರು. ಚಾರ್ ಧಾಮ್ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಚಾರ್ ಧಾಮ್ ರಸ್ತೆ ಯೋಜನೆಯ ಕಾಮಗಾರಿ ಅತ್ಯಂತ ವೇಗವಾಗಿ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಭವಿಷ್ಯದಲ್ಲಿ ಕೇಬಲ್ ಕಾರ್ ಮೂಲಕ ಕೇದಾರನಾಥ ಜಿ ದರ್ಶನಕ್ಕೆ ಇಲ್ಲಿಗೆ ಬರುವಂತೆ ಕೆಲಸ ಆರಂಭಿಸಲಾಗಿದೆ ಎಂದರು. ಇಲ್ಲಿ ಪವಿತ್ರ ಹೇಮಕುಂಡ್ ಸಾಹಿಬ್ ಜಿ ಕೂಡ ಇದೆ. ಹೇಮಕುಂಡ್ ಸಾಹೀಬ್ ಜಿ ಯಲ್ಲಿ ದರ್ಶನವನ್ನು ಸುಲಭವಾಗಿಸಲು ರೋಪ್ ವೇ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. “ಉತ್ತರಾಖಂಡ್ ಜನರ ಅಪಾರ ಸಾಮರ್ಥ್ಯ ಮತ್ತು ಅವರ ಸಾಮರ್ಥ್ಯದಲ್ಲಿರುವ ಸಂಪೂರ್ಣ ನಂಬಿಕೆಯನ್ನು ಗಮನದಲ್ಲಿರಿಸಿಕೊಂಡು, ರಾಜ್ಯ ಸರ್ಕಾರ ಉತ್ತರಾಖಂಡ್ ದ ಅಭಿವೃದ್ಧಿ ‘ಮಹಾಯಜ್ಞ’ ದಲ್ಲಿ ತೊಡಗಿಸಿಕೊಂಡಿದೆ” ಎಂದು ಹೇಳಿದರು.

ಕೊರೊನಾ ವಿರುದ್ಧದ ಹೋರಾಟದಲ್ಲಿ ಉತ್ತರಾಖಂಡ್ ತೋರಿದ ಶಿಸ್ತನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ಭೌಗೋಳಿಕ ಸಮಸ್ಯೆಗಳನ್ನು ನಿವಾರಿಸಿಕೊಂಡು ಇಂದು ಉತ್ತರಾಖಂಡ್ ಮತ್ತು ಅದರ ಜನರು ಶೇ.100ರಷ್ಟು ಒಂದು ಡೋಸ್ ಲಸಿಕೆ ನೀಡಿಕೆ ಗುರಿಯನ್ನು ಸಾಧಿಸಿದೆ. ಇದು ಉತ್ತರಾಖಂಡ್ ನ ಸಾಮರ್ಥ್ಯ ಮತ್ತು ಶಕ್ತಿಯಾಗಿದೆ ಎಂದರು. “ಉತ್ತರಾಖಂಡ್ ಅತಿ ಎತ್ತರದಲ್ಲಿ ನೆಲೆಗೊಂಡಿದೆ. ನನ್ನ ಉತ್ತರಾಖಂಡವು ತನ್ನದೇ ಆದ ಎತ್ತರಕ್ಕಿಂತ ಹೆಚ್ಚಿನ ಎತ್ತರವನ್ನು ತಲುಪುತ್ತದೆ”ಎಂದು ಪ್ರಧಾನಮಂತ್ರಿ ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು.

ಶ್ರೀ ಆದಿ ಶಂಕರಾಚಾರ್ಯರ ಸಮಾಧಿ 2013ರ ಪ್ರವಾಹದಲ್ಲಿ ಸಂಪೂರ್ಣ ಹಾಳಾಗಿತ್ತು, ನಂತರ ಅದನ್ನು ಪುನರ್ ನಿರ್ಮಿಸಲಾಗಿದೆ. ಇಡೀ ಪುನರ್ ನಿರ್ಮಾಣ ಕಾಮಗಾರಿಯನ್ನು ಪ್ರಧಾನಮಂತ್ರಿಯವರ ಮಾರ್ಗದರ್ಶನದಲ್ಲಿ ಕೈಗೊಳ್ಳಲಾಗಿದೆ, ಅವರೇ ಖುದ್ದು ಯೋಜನೆಯನ್ನು ನಿರಂತರವಾಗಿ ಪರಾಮರ್ಶಿಸುತ್ತಿದ್ದರು ಮತ್ತು ಪ್ರಗತಿಯ ಮೇಲ್ವಿಚಾರಣೆ ನಡೆಸಿದರು. ಇಂದೂ ಕೂಡ ಪ್ರಧಾನಮಂತ್ರಿ ಅವರು ಸರಸ್ವತಿ ಅಷ್ಟಪಥದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ತಪಾಸಣೆ ಮಾಡಿದರು ಮತ್ತು ಪರಿಶೀಲಿಸಿದರು. ಸರಸ್ವತಿ ತಡೆ ಗೋಡೆ, ಅಷ್ಟಪಥ ಮತ್ತು ಘಾಟ್ ಗಳು, ಮಂದಾಕಿನಿ ತಡೆ ಗೋಡೆ ಅಷ್ಟಪಥ, ತೀರ್ಥ ಪುರೋಹಿತರ ಮನೆಗಳು ಮತ್ತು ಮಂದಾಕಿನಿ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಗರುಡ್ ಛಟ್ಟಿ ಸೇತುವೆ ಕಾಮಗಾರಿಗಳು ಸೇರಿ ಪ್ರಮುಖ ಮೂಲಸೌಕರ್ಯ ಕಾಮಗಾರಿಗಳು ಮುಕ್ತಾಯಗೊಂಡಿವೆ.

130 ಕೋಟಿ ರೂ.ಗೂ ಅಧಿಕ ವೆಚ್ಚದ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಅಲ್ಲದೆ, ಪ್ರಧಾನಿ ಅವರು 180 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ಸಂಗಮ್ ಘಾಟ್ ಮರು ಅಭಿವೃದ್ಧಿ, ಪ್ರಾಥಮಿಕ ಚಿಕಿತ್ಸಾ ಮತ್ತು ಪ್ರವಾಸಿಗರ ಸಹಾಯ ಕೇಂದ್ರ, ಆಡಳಿತ ಕಚೇರಿ ಮತ್ತು ಆಸ್ಪತ್ರೆ, ಎರಡು ಅತಿಥಿ ಗೃಹಗಳು, ಪೊಲೀಸ್ ಠಾಣೆ, ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರ, ಮಂದಾಕಿನಿ ಅಷ್ಟಪಥ ಸರದಿ ವ್ಯವಸ್ಥೆ ಮತ್ತು ಮಳೆಯಿಂದ ಆಶ್ರಯತಾಣಗಳು ಮತ್ತು ಸರಸ್ವತಿ ನಾಗರಿಕ ಸೌಕರ್ಯ ಕಟ್ಟಡ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.

ದೀಪಾವಳಿ: ಬಿಡದಿ ತೋಟದಲ್ಲಿ ಗೋಪೂಜೆ ನೆರವೇರಿಸಿದ ಹೆಚ್ ಡಿಕೆ ದಂಪತಿ

ಬಿಡದಿ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಧರ್ಮಪತ್ನಿಯವರು ಮತ್ತು ಶಾಸಕರಾದ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರು ಬಿಡದಿಯ ತೋಟದಲ್ಲಿ ಗೋಪೂಜೆ ನೆರವೇರಿಸಿದರು.

ಭಾಗವತ ಪುರಾಣದ ಪ್ರಕಾರ ಕಾರ್ತಿಕ ಶುಕ್ಲ ಪಾಡ್ಯಮಿಯಂದು ಶ್ರೀಕೃಷ್ಣ ಪರಮಾತ್ಮನು ಇಂದ್ರನನ್ನು ಸೋಲಿಸಿದ ದಿನವೂ ಹೌದು. ಇಂದ್ರನ ದಾಳಿಯಿಂದ ತನ್ನ ಗೋ ಸಮೂಹವನ್ನು ರಕ್ಷಿಸಲು ಗೋಪಾಲನು ಗೋವರ್ಧನ ಗಿರಿಯನ್ನೆತ್ತಿದ ದಿನವಿದು. ಆದ್ದರಿಂದಲೇ ಇಂದು ಗೋ ಪೂಜೆ ಮತ್ತು ಗೋವರ್ಧನ ಪೂಜೆಯನ್ನು ಆಚರಿಸಲಾಗುತ್ತದೆ. ಕೆಲವೆಡೆ ರೈತರು ಇದನ್ನು ಹಟ್ಟಿಹಬ್ಬವೆಂದು ಆಚರಿಸುತ್ತಾರೆ ಎಂದು ಇದೇ ವೇಳೆ ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಬೆಳಕಿನ ಹಬ್ಬ ದೀಪಾವಳಿ ವೇಳೆ ಗೋವಿನ ಪೂಜೆಗೆ ವಿಶೇಷ ಮಹತ್ವವಿದೆ. ಈ ಹಿನ್ನೆಲೆಯಲ್ಲಿ ಬಿಡದಿಯ ನನ್ನ ತೋಟದಲ್ಲಿ ಗೋ ಪೂಜೆಯನ್ನು ನೆರವೇರಿಸಲಾಯಿತು ಎಂದು ಅವರು ತಿಳಿಸಿದರು.

ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಸುಡುವ ಸಮಯದಲ್ಲಿ ಕೆಲವರು ದೃಷ್ಟಿಗೆ ಹಾನಿ ಮಾಡಿಕೊಂಡಿರುವ ಸುದ್ದಿಗಳನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಯಾರೂ ಕೂಡ ಈ ಎಚ್ಚರ ತಪ್ಪಬಾರದು. ಮಕ್ಕಳ ಬಗ್ಗೆ ಪೋಷಕರು ಗಮನ ಇಟ್ಟಿರಬೇಕು. ಇನ್ನೂ ಮಕ್ಕಳಿಗೆ ಕೋರೋನ ಲಸಿಕೆ ಬಂದಿಲ್ಲ ಎನ್ನುವುದನ್ನು ಮರೆಯಬಾರದು ಎಂದು ಹೆಚ್ ಡಿಕೆ ಅವರು ಕಿವಿಮಾತು ಹೇಳಿದ್ದಾರೆ.