ವಿದುರಾಶ್ವತ್ಥವನ್ನು ಅಂತಾರಾಷ್ಟ್ರೀಯ ಸ್ಮರಣ ಕೇಂದ್ರವಾಗಿಸಿ:ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ

ಚಿಕ್ಕಬಳ್ಳಾಪುರ; ಸ್ವಾತಂತ್ರ್ಯ ಹೋರಾಟದ ಇತಿಹಾಸವಿರುವ ವಿದುರಾಶ್ವತ್ಥವನ್ನು ಅಂತಾರಾಷ್ಟ್ರೀಯ ಸ್ಮರಣ ಕೇಂದ್ರವಾಗಿ ರೂಪಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು.

ವಿದುರಾಶ್ವತ್ಥದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ರಾಜ್ಯಪಾಲ ವಿ.ಆರ್.ವಾಲ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು.

ನಂತರ ಮಾತನಾಡಿದ ಸಚಿವರು, ವಿದುರಾಶ್ವತ್ಥದಲ್ಲಿ 1938 ರಲ್ಲಿ ಧ್ವಜಾರೋಹಣ ನೆರವೇರಿಸುವ ವೇಳೆ ಬ್ರಿಟಿಷರು ಗುಂಡಿನ ದಾಳಿ ನಡೆಸಿ ಹೋರಾಟಗಾರರು ಹುತಾತ್ಮರಾದರು. ಈ ಸ್ಥಳಕ್ಕೆ ವಿದುರ ಬಂದು ಅಶ್ವತ್ಥಕಟ್ಟೆ ನಿರ್ಮಿಸಿದರು ಎಂಬ ಹಿನ್ನೆಲೆ ಇದೆ. ಇಲ್ಲಿ ನಾಗಪೂಜೆ ಕೂಡ ನಡೆಯುತ್ತಿದೆ. ಇದನ್ನು ಐತಿಹಾಸಿಕ, ಧಾರ್ಮಿಕ ತಾಣವಾಗಿ ಅಭಿವೃದ್ಧಿಪಡಿಸಿ, ಅಂತಾರಾಷ್ಟ್ರೀಯ ಸ್ಮರಣ ಕೇಂದ್ರವಾಗಿ ರೂಪಿಸಬೇಕು. ಈಗಾಗಲೇ ಸಮಿತಿಯು ಡಿಪಿಆರ್ ಮಾಡಿಕೊಟ್ಟಿದ್ದು, ಇದಕ್ಕಾಗಿ 15-16 ಕೋಟಿ ರೂ. ಖರ್ಚಾಗುತ್ತದೆ. ಈ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು ಎಂದು ಕೋರಿದರು.

ಸ್ವಾತಂತ್ರ್ಯ ಪಡೆದು 75 ವರ್ಷವಾಗುತ್ತಿರುವ ಸಂದರ್ಭದಲ್ಲಿ ದೇಶಾದ್ಯಂತ ಸಂಭ್ರಮಾಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಬಗ್ಗೆ ಚಿಂತನೆ ನಡೆಸಲು ಕಾರ್ಯಕ್ರಮ ನಡೆಸುವಂತೆ ಕರೆ ನೀಡಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಅನೇಕರು ಹುತಾತ್ಮರಾಗಿದ್ದು, ಅವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ ನಡೆಯುತ್ತಿದೆ. ಐತಿಹಾಸಿಕ, ಧಾರ್ಮಿಕ ಕ್ಷೇತ್ರವಾದ ವಿದುರಾಶ್ವತ್ಥದಲ್ಲಿ ಕೂಡ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದರು.

ಕೃಷ್ಣಾ ನದಿಯಿಂದ 5 ಟಿಎಂಸಿಯನ್ನು ಆಂಧ್ರಪ್ರದೇಶದಿಂದ ಸಹಕಾರದಿಂದ ಪಡೆದರೆ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ನೀರಾವರಿ ಕಲ್ಪಿಸಬಹುದು. ನಮ್ಮ ನದಿ ಮೂಲಗಳಿಂದ ಆ ರಾಜ್ಯದ ಜನರಿಗೆ ನೀರು ನೀಡಬಹುದು. ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣವಾಗಿದ್ದು, ಮುಂದಿನ ವರ್ಷದ ಜೂನ್ ಗೆ ಸಿದ್ಧವಾಗಲಿದೆ ಎಂದರು.

ಕೋವಿಡ್ ಆರ್ಥಿಕ ಸಂಕಷ್ಟವಿರುವುದರಿಂದ ಈ ಬಾರಿ ಹೆಚ್ಚಿನ ಗಾತ್ರದ ಬಜೆಟ್ ನೀಡುವುದಿಲ್ಲ ಎಂಬ ಅಪನಂಬಿಕೆ ಇತ್ತು. ಆದರೆ ಮುಖ್ಯಮಂತ್ರಿಗಳು ಹೆಚ್ಚು ಗಾತ್ರದ ಬಜೆಟ್ ಮಂಡಿಸಿ ಎಲ್ಲ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ನೀಡಿದ್ದಾರೆ. ಮಹಿಳಾ ಅಸಮಾನತೆ ದೂರವಾಗಿಸಲು, ಅಂತಾರಾಷ್ಟ್ರೀಯ ಮಹಿಳಾ ದಿನದಂದು ಮಂಡಿಸಿದ ಬಜೆಟ್ ನಲ್ಲಿ ಮಹಿಳಾ ಸಬಲೀಕರಣಕ್ಕೆ ಉತ್ತಮ ಕೊಡುಗೆ ನೀಡಲಾಗಿದೆ. ನಂದಿ ಬೆಟ್ಟ, ಎತ್ತಿನೆಹೊಳೆ ಯೋಜನೆ ಜಾರಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಜಿಲ್ಲೆಗೆ ನೀಡಲಾಗಿದೆ ಎಂದರು.

ಕಾಂಗ್ರೆಸ್ ಸಾಗರವಿದ್ದಂತೆ, ಆಕಾಶದಿಂದ ಬಿದ್ದ ನೀರು ಸಾಗರ ಸೇರಲೇಬೇಕು: ಡಿ.ಕೆ. ಶಿವಕುಮಾರ್

ಬೆಂಗಳೂರು:‘ಕಾಂಗ್ರೆಸ್ ಪಕ್ಷ ಸಾಗರವಿದ್ದಂತೆ. ಆಕಾಶದಿಂದ ಹನಿಯಾಗಿ ಬಿದ್ದ ಮಳೆ ನೀರು, ಹೊಳೆ, ನದಿಯಾಗಿ ಸಾಗರ ಸೇರಬೇಕು. ಅದೇ ರೀತಿ ಹುಟ್ಟಿನಿಂದಲೇ ರಕ್ತಗತ ಕಾಂಗ್ರೆಸ್ಸಿಗರಾಗಿರುವ ಮಧು ಬಂಗಾರಪ್ಪ ಅವರು ಕಾಂಗ್ರೆಸ್ ಗೆ ಮರಳಲಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಮಾಜಿ ಶಾಸಕ ಮಧು ಬಂಗಾರಪ್ಪ ಅವರ ಜತೆ ಸದಾಶಿವನಗರದ ತಮ್ಮ ನಿವಾಸದಲ್ಲಿ ಶುಕ್ರವಾರ ಸಮಾಲೋಚನೆ ನಡೆಸಿದ ಬಳಿಕ ಅವರ ಜತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಶಿವಕುಮಾರ್ ಅವರು ಹೇಳಿದ್ದಿಷ್ಟು:

‘ರಾಜಕಾರಣದ ಆರಂಭದ ದಿನಗಳಲ್ಲಿ ನನ್ನನ್ನು ಗುರುತಿಸಿ, ಬೆಳೆಸಿದ ಧಿಮಂತ ನಾಯಕ ಬಂಗಾರಪ್ಪನವರನ್ನು ನಾನಿವತ್ತು ಸ್ಮರಿಸುತ್ತೇನೆ. ಬಹಳ ಚಿಕ್ಕ ವಯಸ್ಸಿನಲ್ಲೇ, ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ, ನಾನು ಸೇರಿದಂತೆ ಬಹಳ ಯುವಕರನ್ನು ಅವರು ಆಕರ್ಷಿಸಿದ್ದರು. ಅವರ ರಾಜಕಾರಣದ ಗರಡಿಯಲ್ಲಿ ಬೆಳೆದವನು ನಾನು. ಇಲ್ಲಿವರೆಗೂ ಬಂದಿದ್ದೇನೆ. ಇವತ್ತು ಅವರ ಸುಪುತ್ರ ಮಧುಬಂಗಾರಪ್ಪ ಅವರು ನನ್ನನ್ನು ಭೇಟಿ ಮಾಡಿದ್ದಾರೆ.

ಬಹಳ ದಿನಗಳಿಂದ ನಾನು ಅವರಿಗೆ ಗಾಳ ಹಾಕಿಕೊಂಡೇ ಬಂದಿದ್ದೆ. ಅವರ ತಂದೆ ನಮ್ಮ ಪಕ್ಷದ ಸಂಘಟನೆಗೆ ದೊಡ್ಡ ಶಕ್ತಿ ಕೊಟ್ಟಿದ್ದರು ರಾಜ್ಯದಲ್ಲಿ ಅನೇಕ ನಾಯಕರನ್ನು ಬೆಳೆಸಿ, ಅನೇಕ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಇವೆಲ್ಲವೂ ಶಾಶ್ವತವಾಗಿ ಉಳಿದಿವೆ.

ಕೆಲವು ಭಿನ್ನಾಭಿಪ್ರಾಯಗಳಿಂದ ಅವರು ನಮ್ಮ ಪಕ್ಷ ತೊರೆದಿದ್ದರು. ಅದರ ಬಗ್ಗೆ ಈಗ ಚರ್ಚೆ ಬೇಡ. ಆಕಾಶದಿಂದ ಹನಿಯಾಗಿ ಬಿದ್ದ ನೀರು ನದಿ ಮೂಲಕ ಸಮುದ್ರ ಸೇರಲೇಬೇಕು. ಕಾಂಗ್ರೆಸ್ ಪಕ್ಷ ಕೂಡ ಸಾಗರ ಇದ್ದಂತೆ. ನಮ್ಮ ವರಿಷ್ಠರು ನಮಗೆ ಕರೆ ಮಾಡಿ, ಮಧು ಬಂಗಾರಪ್ಪ ನಿಮ್ಮನ್ನು ಬಂದು ಭೇಟಿ ಮಾಡಲಿದ್ದಾರೆ ಎಂದು ಸೂಚಿಸಿದ್ದರು. ವರಿಷ್ಠರು ಮಧುಬಂಗಾರಪ್ಪ ಅವರನ್ನು ದೆಹಲಿಗೆ ಕರೆಸಿಕೊಂಡು ಮಾತನಾಡಿದ್ದಾರೆ. ಅವರೂ ಕೂಡ ಘಳಿಗೆ, ಮುಹೂರ್ತದ ಬಗ್ಗೆ ಯೋಚಿಸುತ್ತಿದ್ದರು.

ಇವರ ಜತೆ ರಾಜ್ಯದ ಉದ್ದಗಲಕ್ಕೂ ಅನೇಕ ಬೆಂಬಲಿಗರು, ಜೊತೆಯಲ್ಲಿ ಕೆಲಸ ಮಾಡಿದವರು ಇದ್ದಾರೆ. 10 ವರ್ಷಗಳ ಕಾಲ ಪಕ್ಷದಲ್ಲಿ ದುಡಿದಿದ್ದಾರೆ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಮಧು ಅವರು ಹುಟ್ಟಿನಿಂದಲೇ, ರಕ್ತಗತವಾಗಿ ಕಾಂಗ್ರೆಸಿಗರಾಗಿದ್ದಾರೆ. ಅವರ ಎಲ್ಲ ಆಚಾರ-ವಿಚಾರಗಳು ಕಾಂಗ್ರೆಸ್ ತತ್ವ-ಸಿದ್ದಾಂತ ಆಧಾರದ ಮೇಲೆ ನಿಂತಿವೆ. ಹೀಗಾಗಿ ಕಾಂಗ್ರೆಸ್ ಅವರಿಗೆ ಹೊಸದಲ್ಲ. ಯಾವಾಗ ಪಕ್ಷ ಸೇರುತ್ತಾರೆ ಎಂಬುದರ ಬಗ್ಗೆ ರಾಷ್ಟ್ರೀಯ ನಾಯಕರ ಜತೆ ಮಾತನಾಡಬೇಕಿದೆ. ಇವರು ನಮ್ಮ ವಿರೋಧ ಪಕ್ಷದ ನಾಯಕರನ್ನೂ ನಿನ್ನೆ ಭೇಟಿ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಕಾಗೋಡು ತಿಮ್ಮಪ್ಪ, ವೀರಪ್ಪ ಮೊಯ್ಲಿ, ಜನಾರ್ಧನ ಪೂಜಾರಿ, ಆಸ್ಕರ್ ಫರ್ನಾಂಡೀಸ್, ಮಲ್ಲಿಕಾರ್ಜುನ ಖರ್ಗೆ ಹಾಗೂ ಜಾರ್ಜ್ ಅವರು ಸೇರಿದಂತೆ ಅನೇಕ ಹಿರಿಯ ನಾಯಕರು ಬಂಗಾರಪ್ಪ ಅವರ ಜತೆ ಕೆಲಸ ಮಾಡಿದ್ದರು. ಅವರ ಆಶೀರ್ವಾದವೂ ಇವರಿಗೆ ಇದೆ. ಇವರನ್ನು ಪ್ರೀತಿಯಿಂದ ಬರ ಮಾಡಿಕೊಳ್ಳಲು ಎದುರು ನೋಡುತ್ತಿದ್ದಾರೆ. ಹೀಗಾಗಿ ಸೇರ್ಪಡೆ ದಿನದ ಬಗ್ಗೆ ಹೈಕಮಾಂಡ್ ಜತೆ ಚರ್ಚಿಸಿ ತಿಳಿಸುತ್ತೇವೆ.

ತಮ್ಮ ಮನೆಗೆ ಮರಳುವ ಮಹತ್ವದ ನಿರ್ಧಾರ ತೆಗೆದುಕೊಂಡಿರುವುದಕ್ಕೆ ಕಾಂಗ್ರೆಸ್ ಪಕ್ಷ ಬಹಳ ಸಂತೋಷದಿಂದ ಅವರನ್ನು ಸ್ವಾಗತ ಮಾಡುತ್ತದೆ.’

ಗೀತಾ ಅವರು ಸಾಧಾರಣ ಮಹಿಳೆ ಅಲ್ಲ, ಅವರಿಗೆ ಸೂಕ್ತ ಗೌರವ ನೀಡಬೇಕು:

ಗೀತಾ ಶಿವರಾಜ್ ಕುಮಾರ್ ಅವರು ಸಾಮಾನ್ಯ ಮಹಿಳೆ ಅಲ್ಲ. ಪಕ್ಷ ಕಷ್ಟಕಾಲದಲ್ಲಿದ್ದಾಗ ಅದಕ್ಕಾಗಿ ಹೋರಾಟ ಮಾಡಿದವರು. ಗೌರವಾನ್ವಿತ ಕುಟುಂಬಕ್ಕೆ ಸೇರಿದವರಾಗಿದ್ದು, ಅವರಿಗೆ ಅವರದೇ ಆದ ಗೌರವವನ್ನು ನಾವು ನೀಡಬೇಕು. ಈ ಬಗ್ಗೆ ನಾನು ದೆಹಲಿ ನಾಯಕರೊಂದಿಗೆ ಚರ್ಚಿಸಿ, ಕೆಲವು ಪ್ರಕ್ರಿಯೆಗಳನ್ನು ಅನುಸರಿಸಬೇಕು. ಅವರೊಂದಿಗೆ ನಾವು ಚರ್ಚಿಸುತ್ತೇವೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ರಾಹುಲ್ ಗಾಂಧಿ, ಸೋನಿಯಾಗಾಂಧಿ ಅವರ ನಾಯಕತ್ವ ಹಾಗೂ ಕಾಂಗ್ರೆಸ್ ಪಕ್ಷದ ಸಿದ್ಧಾಂತ ನಂಬಿ ಬರುವವರಿಗೆ ಸ್ವಾಗತ ಎಂದು ಕರೆ ಕೊಟ್ಟಿದ್ದೆವು. ರಾಜ್ಯದಲ್ಲಿ, ರಾಷ್ಟ್ರದಲ್ಲಿ ಬದಲಾವಣೆ ಆಗಬೇಕು ಎಂದು ಜನ ಬಯಸುತ್ತಿದ್ದಾರೆ. ಹೀಗಾಗಿ ನಾಯಕರಿಂದ ಹಿಡಿದು ಗ್ರಾಮ ಪಂಚಾಯ್ತಿ ಮಟ್ಟದ ಕಾರ್ಯಕರ್ತರವರೆಗೂ ಯಾರಿಗೆ ಬದಲಾವಣೆ ತರಬೇಕು ಎಂಬ ಇಚ್ಛೆ ಇದೆಯೋ ಅವರಿಗೆ ಆಹ್ವಾನ ನೀಡಿದ್ದೆವು. ಸಾಮಾನ್ಯ ಜನ ಜೀವನ ನಡೆಸುವುದೇ ಕಷ್ಟವಾಗಿದೆ. ಸಣ್ಣ ಕಾರ್ಮಿಕನಿಂದ ಹಿಡಿದು, ರೈತರು, ಚಾಲಕರು, ಬೀದಿ ವ್ಯಾಪಾರಿಗಳು ಎಲ್ಲರೂ ಈ ಸರ್ಕಾರಗಳಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಎಲ್ಲರೂ ಬದಲಾವಣೆ ಬಯಸುತ್ತಿದ್ದಾರೆ.

ಯಾರನ್ನು ಟಾರ್ಗೆಟ್ ಮಾಡುತ್ತಿಲ್ಲ:

ನಾನು ಯಾರನ್ನು ಟಾರ್ಗೆಟ್ ಮಾಡಿಲ್ಲ. ಜೆಡಿಎಸ್ ಪಕ್ಷವಾಗಿ ಅವರ ಕೆಲಸ ಅವರು ಮಾಡಲಿ. ನಾನು ನಮ್ಮ ಪಕ್ಷ ಬಲಪಡಿಸಲು ಏನು ಮಾಡಬೇಕೋ ಅದನ್ನು ಮಾಡುತ್ತಿದ್ದೇನೆ. ಯಾರನ್ನೂ ಗುರಿಯಾಗಿಸಿ ಕೆಲಸ ಮಾಡುತ್ತಿಲ್ಲ. ರಾಜಕೀಯದಲ್ಲಿ ನಾವು ಪಕ್ಷವನ್ನು ಬೆಳಸದಿದ್ದರೆ, ಕವಲುದಾರಿಗೆ ಬಂದು ನಿಲ್ಲುತ್ತದೆ. ಬಿಜೆಪಿಯನ್ನು ರಾಜ್ಯ ಹಾಗೂ ದೇಶದಲ್ಲಿ ಅಧಿಕಾರದಿಂದ ದೂರ ಇಡುವುದಷ್ಟೇ ನಮ್ಮ ಗುರಿ.

*ಎಸ್ಐಟಿ ಮಾಡಿದ್ದಾರೆ ನೋಡೋಣ:*

ಸಿಡಿ ಪ್ರಕರಣದ ವಿಚಾರಣೆಗೆ ಎಸ್ಐಟಿ ರಚಿಸಿದ್ದಾರೆ. ನೋಡೋಣ ಏನು ಮಾಡುತ್ತಾರೆ. ಸಿಡಿ ನಕಲಿ ಅಂದಿದ್ದಾರೆ. ನಮ್ಮ ಪಕ್ಷದ ಹೆಸರನ್ನು ಎತ್ತಿದ್ದಾರೆ. ಈ ವಿಚಾರ ಸಾರ್ವಜನಿಕವಾಗಿದ್ದು, ಎಲ್ಲ ಪರೀಕ್ಷೆಯನ್ನು ನಡೆಸಲಿ.

ವಿಡಿಯೋದಲ್ಲಿರುವುದು ರಮೇಶ್ ಜಾರಕಿಹೊಳಿಯೋ ಅಲ್ಲವೋ ಎಂಬುದಕ್ಕಿಂತ, ಯಡಿಯೂರಪ್ಪ ಭ್ರಷ್ಟ, ಕನ್ನಡಿಗರು, ಮಾಧ್ಯಮಗಳ ನಿಂದನೆ, ಬೆಳಗಾವಿ ಪ್ರತ್ಯೇಕ ರಾಜ್ಯ ಎಂದಿದ್ದಾರೆ. ಇವೆಲ್ಲವೂ ಗಂಭೀರ ವಿಚಾರಗಳಾಗಿವೆ. ಇವುಗಳ ಬಗ್ಗೆ ಚರ್ಚೆ ಆಗಬೇಕು. ಅವರು ನಮ್ಮ ಮೇಲೆ ಏನೇ ಆರೋಪ ಮಾಡಲಿ, ಈ ವಿಚಾರ ತನಿಖೆಯಾಗಲಿ ಎಂಬುದಷ್ಟೇ ನಮ್ಮ ಆಗ್ರಹ.

ಮಧು ಬಂಗಾರಪ್ಪ ಅವರ ಮಾತುಗಳು:

ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿರುವ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇವರು ಬಂಗಾರಪ್ಪನವರ ಬೆಂಬಲಿಗರಾಗಿ ಅವರ ವಿಚಾರಗಳ ಪರವಾಗಿ ನಿಂತು ಸಹಕಾರ ನೀಡಿದ್ದಾರೆ. ಇಂದಿರಾ ಗಾಂಧಿ ಅವರ ಸಮಯದಲ್ಲಿ ನಮ್ಮ ತಂದೆ ಅವರು ಅಧ್ಯಕ್ಷರಾಗಿದ್ದಾಗ ಕಾಂಗ್ರೆಸ್ 28 ಸಂಸದ ಸ್ಥಾನಗಳಲ್ಲಿ 27 ಅನ್ನು ಗೆದ್ದಿತ್ತು. ನಮ್ಮ ತಂದೆ ಮುಖ್ಯಮಂತ್ರಿಯಾಗಿದ್ದಾಗ 28ರಲ್ಲಿ 23 ಸ್ಥಾನ ಗೆದ್ದಿದ್ದೆವು. ಬಂಗಾರಪ್ಪ ಅವರ ಅನುಯಾಯಿಯಾಗಿ ಶಿವಕುಮಾರ್ ಅವರು ಮುಂದಿನ ದಿನಗಳಲ್ಲಿ ಅವರಂತೆಯೇ ಪಕ್ಷಕ್ಕೆ ಶಕ್ತಿ ತುಂಬಿ, ಕಾಂಗ್ರೆಸ್ ಪಕ್ಷ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಅಧಿಕಾರಕ್ಕೆ ಬರುವ ವಿಶ್ವಾಸವಿದೆ.

ಶಿವಕುಮಾರ್ ಅವರು ನಾನು ಶಾಸಕನಾಗಿದ್ದಾಗ ವಿರೋಧ ಪಕ್ಷದ ಶಾಸಕನಂತೆ ನನ್ನನ್ನು ನೋಡಲೇ ಇಲ್ಲ. ಸಿದ್ದರಾಮಯ್ಯ ಅವರಿಂದ ಹಿಡಿದು ಇತರೆ ಎಲ್ಲ ನಾಯಕರು ನನ್ನನ್ನು ಬಂಗಾರಪ್ಪನವರ ಮಗ ಎಂದು ವಿಶೇಷ ಪ್ರೀತಿ ಕೊಟ್ಟಿದ್ದರು. ಈ ರಾಜ್ಯಕ್ಕೆ ಕಾಂಗ್ರೆಸ್ ಅವಶ್ಯಕತೆ ಇದೆ ಎನ್ನುವುದು ಜನಸಾಮಾನ್ಯರ ಜತೆಗೆ ನನಗೂ ಅನಿಸಿದೆ. ಹೀಗಾಗಿ ಪಕ್ಷದ ಕೆಲಸ ಕಾರ್ಯಗಳಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಡುವಂತೆಯ ನಾನು ಅಧ್ಯಕ್ಷರನ್ನು ಮನವಿ ಮಾಡಿದ್ದೇನೆ.

ಅಧಿಕೃತವಾಗಿ ಪಕ್ಷ ಸೇರುವುದು ಬೇರೆ ವಿಚಾರ. ಆದರೆ ನಾನು ನಿನ್ನೆಯಿಂದಲೇ ಕಾಂಗ್ರೆಸಿಗನಾಗಿ ನನ್ನ ಕಾರ್ಯ ಆರಂಭಿಸಿದ್ದೇನೆ. ಮುಂದಿನ ದಿನಗಳಲ್ಲಿ ನಮ್ಮ ಅಕ್ಕ ಗೀತಾ ಶಿವರಾಜಕುಮಾರ್ ಅವರೂ ಕೂಡ ಪಕ್ಷ ಸೇರುವ ಬಗ್ಗೆ ನಿರ್ಧರಿಸಿದ್ದಾರೆ. ಅಧ್ಯಕ್ಷರು ಹಾಗೂ ಪಕ್ಷದ ಎಲ್ಲರೂ ಸೇರಿ ಈ ಬಗ್ಗೆ ಅಧಿಕೃತ ತೀರ್ಮಾನ ತೆಗೆದುಕೊಳ್ಳಲಾಗುವುದು.

ಈ ಸಂದರ್ಭದಲ್ಲಿ ರಾಜ್ಯ ಹಾಗೂ ರಾಷ್ಟ್ರ ನಾಯಕರು ಹಾಗೂ ಕಾರ್ಯಕರ್ತರಿಗೆ ಹೃದಯಪೂರ್ವಕ ಧನ್ಯವಾದ ತಿಳಿಸುತ್ತೇನೆ.

ಈ ಹಿಂದಿನ ಪಕ್ಷದ ಬಗ್ಗೆ ನಾನು ಹೆಚ್ಚು ವಿಶ್ಲೇಷಣೆಯಾಗಲಿ, ಚರ್ಚೆಯಾಗಲಿ ಮಾಡುವುದಿಲ್ಲ. ಬಂಗಾರಪ್ಪನವರಿಗೆ ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಅವಕಾಶ ಕೊಟ್ಟಿದ್ದು ಕಾಂಗ್ರೆಸ್ ಹಾಗೂ ನನಗೆ ಇಲ್ಲಿ ಹೆಚ್ಚಿನ ಅವಕಾಶ ಸಿಗಲಿದೆ. ಅಧಿಕಾರ ಸಿಗಲೇಬೇಕು ಅಂತ ಅಲ್ಲ. ರಾಜ್ಯದಲ್ಲಿ ನಾಯಕರಾಗಿ ಬೆಳೆಯಲು ಅವಕಾಶ ಕಲ್ಪಿಸುವುದು ಕಾಂಗ್ರೆಸ್. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇನೆ. ಕುಮಾರಸ್ವಾಮಿ ಅವರಿಗೆ ಅಣ್ಣನ ಸ್ಥಾನಕ್ಕೆ ಕೊಡೊ ಗೌರವ ಕೊಡುತ್ತೇನೆ. ಹೀಗಾಗಿ ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಕಳೆದ 10 ವರ್ಷ ನಾನು ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ.

ಶರಣರ ತಾಣಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಬಿ.ಎಸ್. ಯಡಿಯೂರಪ್ಪ

ಮೈಸೂರು,ಜನವರಿ.23: ಶರಣ-ಶರಣೆಯರ ಜನ್ಮ ತಾಣಗಳನ್ನು ದಾನಿಗಳ ಸಹಕಾರದೊಂದಿಗೆ ಅಭಿವೃದ್ಧಿಪಡಿಸುವ ಕೆಲಸವನ್ನು ಸರ್ಕಾರ ಪ್ರಾಮಾಣಿಕವಾಗಿ ಮಾಡುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.

ಶನಿವಾರ ಮೈಸೂರಿನಲ್ಲಿ ಜೆ.ಪಿ.ನಗರ ಶರಣ ವೇದಿಕೆ ವತಿಯಿಂದ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಶಿವಶರಣೆ ಅಕ್ಕಮಹಾದೇವಿ ಅವರ 11 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣಗೊಳಿಸಿ ಅವರು ಮಾತನಾಡಿದರು.

ಅಕ್ಕಮಹಾದೇವಿಯವರ ಜನ್ಮಸ್ಥಳವಾದ ಶಿಕಾರಿಪುರ ತಾಲ್ಲೂಕಿನ ಉಡುತಡಿಯನ್ನು ಶ್ರದ್ಧಾಭಕ್ತಿಯ ಕೇಂದ್ರವನ್ನಾಗಿ ರೂಪಿಸಲು 30 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ಈ ಕ್ಷೇತ್ರ ದೇಶದ ಗಮನ ಸೆಳೆಯುವ ಶ್ರದ್ಧಾ, ಭಕ್ತಿ ಕೇಂದ್ರ, ಪುಣ್ಯ ಕ್ಷೇತ್ರ ಆಗಲಿದೆ. ಬಸವೇಶ್ವರರ ಜನ್ಮಸ್ಥಳವಾದ ಬಸವಕಲ್ಯಾಣದಲ್ಲಿಯೂ ಭವ್ಯವಾದ ಸ್ಮಾರಕ ನಿರ್ಮಾಣವನ್ನು 500 ಕೋಟಿ ರೂ. ವೆಚ್ಚದಲ್ಲಿ ಮಾಡಲಾಗುತ್ತಿದೆ ಎಂದರು.

ಅಕ್ಕಮಹಾದೇವಿಯವರು ವಚನ ಸಾಹಿತ್ಯದ ಪ್ರಮುಖರಲ್ಲಿ ಒಬ್ಬರು. ನೇರ ವ್ಯಕ್ತಿತ್ವ ಅವರದ್ದು. ಬೆಟ್ಟದಲ್ಲೊಂದು ಮನೆಯ ಮಾಡಿ ಮೃಗಗಳಿಗಂಜಿದಡೆಂತಯ್ಯ ಎಂದ ಅಕ್ಕ ಮಹಾವೇವಿ, ತಮ್ಮ ವಿಶಿಷ್ಟ ಸಂವೇದನೆಯ ಮೂಲಕ ಗಮನ ಸೆಳೆದಿದ್ದಾರೆ ಎಂದರು.

ಮನುಷ್ಯನ ಆತ್ಮಕಲ್ಯಾಣ, ಸಮುದಾಯದ ಕಲ್ಯಾಣ ಸಾಧಿಸಲು ಅಂತರಂಗ ಮತ್ತು ಬಹಿರಂಗ ಶುದ್ಧವಾಗಿರಬೇಕು ಎಂಬುದು ಅಕ್ಕನ ಆಶಯವಾಗಿತ್ತು. ಶರಣ ಸಂಕುಲದ ಅಪೇಕ್ಷೆ ಕೂಡ ಆಗಿತ್ತು. ಇಂತಹ ಸಾಕ್ಷಿ ಪ್ರಜ್ಞೆ ಇರಬೇಕು ಎಂದು ಹೇಳಿದರು.

ಈ ನಾಡಿನಲ್ಲಿ ಶರಣ-ಶರಣೆಯ ಅನೇಕ ಸ್ಥಳಗಳಿವೆ. ಅವುಗಳನ್ನು ಅಭಿವೃದ್ಧಿಪಡಿಸಿ, ಮುಂದಿನ ನೂರಾರು ವರ್ಷಗಳು ನಮ್ಮ ಯುವ ಪೀಳಿಗೆಯ ನೆನಪಿನಲ್ಲಿ ಉಳಿಯುವಂತೆ ಮಾಡುವುದು ಎಲ್ಲರ ಕರ್ತವ್ಯ. ಆ ನಿಟ್ಟಿನಲ್ಲಿ ಸರ್ಕಾರದ ಪ್ರಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.

ಮಹಿಳಾ ಸಮಾನತೆ ಮತ್ತು ಸಬಲೀಕರಣವನ್ನು ಪ್ರತಿಪಾದಿಸಿದ ಅಕ್ಕಮಹಾದೇವಿಯವರು ಮಹಿಳೆಯರನ್ನು ಶೋಷಣೆಯಿಂದ ಮುಕ್ತಗೊಳಿಸಲು ತಮ್ಮ ವಚನಗಳ ಮೂಲಕ ತಳಪಾಯ ಹಾಕಿದರು. ಅಂಥವರ ಪ್ರತಿಮೆಯನ್ನು ಮೈಸೂರಿನ ಜೆ.ಪಿ.ನಗರ ಶರಣ ವೇದಿಕೆ ನಿರ್ಮಿಸಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್, ಸುತ್ತೂರು ಮಠದ ಶ್ರೀಗಳಾದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ. ರಾಮದಾಸ್, ಜಿ.ಟಿ.ದೇವೇಗೌಡ, ತನ್ವಿರ್ ಸೇಠ್, ಎಲ್.ನಾಗೇಂದ್ರ, ವಿವಿಧ ಪ್ರಾಧಿಕಾರ, ನಿಗಮ-ಮಂಡಳಿಗಳ ಅಧ್ಯಕ್ಷರು, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ಸಮಸಮಾಜ ನಿರ್ಮಾಣದ ಕನಸು ಕಂಡಿದ್ದ ಬಸವಣ್ಣ: ಬಿ.ಎಸ್.ಯಡಿಯೂರಪ್ಪ

ಮೈಸೂರು, ಜನವರಿ.23: ವರ್ಗ, ವರ್ಣ, ಜಾತಿ, ಮತ ಮತ್ತು ಲಿಂಗ ತಾರತಮ್ಯವಿಲ್ಲದ ಸಮ-ಸಮಾಜ ನಿರ್ಮಾಣದ ಕನಸನ್ನು 12ನೇ ಶತಮಾನದಲ್ಲಿ ಭಿತ್ತಿದವರು ಬಸಣ್ಣನವರು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.

ಮೈಸೂರಿನ ವಿಜಯನಗರದಲ್ಲಿ ಬಸವ ಸಮಿತಿ ವತಿಯಿಂದ ನಿರ್ಮಿಸಿದ ಬಸವ ಭವನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾನತೆ, ಕಾಯಕ, ದಾಸೋಹದ ತತ್ವಗಳನ್ನು ಬೋಧಿಸಿದ್ದಲ್ಲದೆ ಅದನ್ನು ಆಚರಿಸಿದ ಮಹಾನ್ ಮಾನವತವಾದಿ ಬಸವಣ್ಣನವರು. ಅವರು ರಚಿಸಿದ ವಚನದ ಸತ್ವ, ಸಂದೇಶಗಳು ಸರ್ವಕಾಲಿಕವಾದದ್ದು ಎಂದು ಹೇಳಿದರು.

ಜಗತ್ತಿನ ಮೊದಲ ಸಂಸತ್ ಎಂದೆ ಪರಿಗಣಿಸಲಾಗಿದ್ದ ಅನುಭವ ಮಂಟಪವು ಪ್ರಜಾಪ್ರಭುತ್ವ ಪರಿಕಲ್ಪನೆಯನ್ನು ಸಮಾಜಕ್ಕೆ ನೀಡಿತ್ತು. ಇಂದು ಅದೇ ಬಸವ ಕಲ್ಯಾಣದಲ್ಲಿ ಭವ್ಯವಾದಂತಹ ಅನುಭವ ಮಂಟಪ ನಿರ್ಮಾಣಕ್ಕೆ 500 ಕೋಟಿ ಮಂಜೂರು ಮಾಡಲಾಗಿದ್ದು, ಕಾಮಗಾರಿ ನಡೆಯುತ್ತಿದೆ. ಅದು ದೇಶದ ಜನರ ಗಮನ ಸೆಳೆಯುವಂತಹ ಅತ್ಯಂತ ಭವ್ಯವಾದಂತಹ ಕಟ್ಟಡ ಆಗಲಿದೆ ಎಂದರು.

ಅಲ್ಲಮ ಪ್ರಭು, ಅಕ್ಕ ಮಹಾದೇವಿಯವರಿಗೆ ಜನ್ಮಕೊಟ್ಟಂತಹ ನಾಡು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ. ಅಕ್ಕ ಮಹಾದೇವಿ ಹುಟ್ಟಿದ ಸ್ಥಳದಲ್ಲಿ ಹತ್ತಾರು ಕೋಟಿ ಖರ್ಚುಮಾಡಿ ಅಭಿವೃದ್ಧಿ ಕಾರ್ಯಗಳು ಈಗಾಗಲೇ ಪ್ರಾರಂಭವಾಗಿದ್ದು, ಇನ್ನು 2 ವರ್ಷದೊಳಗಾಗಿ ಪೂರ್ಣವಾಗುವ ಭರವಸೆಯನ್ನು ನೀಡಿದರು.

12ನೇ ಶತಮಾನದಲ್ಲಿ ಹುಟ್ಟಿದ ಅನೇಕ ಶರಣ, ಶರಣೆಯರಿಗೆ ಜನ್ಮಕೊಟ್ಟಂತಹ ಕರ್ಮಭೂಮಿ, ಧರ್ಮಭೂಮಿ, ಭವ್ಯಭೂಮಿಯಾಗಿದೆ ಈ ನಾಡು. ಇವರೆಲ್ಲರ ನೆನಪನ್ನು ಮುಂದಿನ ಪೀಳಿಗೆಗೆ ಉಳಿಸುವ ಚಿಂತನೆಯನ್ನು ಮಾಡುತ್ತಿದ್ದು, ಇದಕ್ಕಾಗಿ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವಚನಗಳ ಮೂಲಕ ಬಸವಣ್ಣನವರು ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಅಂದಿನ ಕಾಲಕ್ಕೆ ಪ್ರಜಾಪ್ರಭುತ್ವ ಸಮಾಜದಲ್ಲಿ ಸ್ತ್ರೀ ಸಮಾನತೆ, ಮಹಿಳಾ ಶಿಕ್ಷಣ, ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅನುಭವ ಮಂಟಪವನ್ನು ಹಲವು ಬಾರಿ ನೆನಪು ಮಾಡಿಕೊಂಡು ಬಸವಣ್ಣ ಮತ್ತು ಅಕ್ಕ ಮಹಾದೇವಿಯವರ ವಿಚಾರಧಾರೆಗಳನ್ನು ದೇಶದ ಜನರಿಗೆ ತಿಳಿಸುವಂತಹ ಕೆಲಸವನ್ನು ಮಾಡಿದ್ದಾರೆ ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಲ್. ನಾಗೇಂದ್ರ, ತನ್ವೀರ್ ಸೇಠ್, ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಹೊಸಮಠದ ಶ್ರೀಗಳಾದ ಚಿದಾನಂದ ಸ್ವಾಮೀಜಿ ಸೇರಿದಂತೆ ಇತರರು ಹಾಜರಿದ್ದರು.

ಹುಣಸೋಡು ದುರಂತಕ್ಕೆ ಸಿಎಂ, ಜಿಲ್ಲಾ ಉಸ್ತುವಾರಿ ಸಚಿವರೇ ಹೊಣೆ: ಸಿದ್ದರಾಮಯ್ಯ

ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.

ಇಂದು ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಸಲಾಗುತ್ತಿದೆ. ಇದಕ್ಕೆ ಯಡಿಯೂರಪ್ಪ ಅವರ ಕುಮ್ಮಕ್ಕು ಕಾರಣ ಎಂದು ದೂರಿದರು.

ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರು ಅರ್ಜಿ ಸಲ್ಲಿಸಿ ಪರವಾನಿಗೆ ಪಡೆಯಬಹುದು ಎಂದು ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಅಕ್ರಮ ಗಣಿಗಾರಿಕೆಯೇ ಅಪರಾಧ. ಅದಕ್ಕೆ ಏನು ಶಿಕ್ಷೆ ? ಅರ್ಜಿ ಹಾಕಿಕೊಂಡು ಅಕ್ರಮವನ್ನು ಸಕ್ರಮ ಮಾಡಿಕೊಳ್ಳಿ ಎಂದು ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಹೇಳಬಹುದೇ ? ಎಂದು ಪ್ರಶ್ನಿಸಿದರು.

ಇದು ಅಕ್ರಮ ಮನೆ, ಜಮೀನು ಸಕ್ರಮ ಮಾಡುವುದಲ್ಲ. ಹಾಗಾದರೆ ಗಣಿ ಇಲಾಖೆಯ ಕಾನೂನು ಇರುವುದೇಕೆ. ಮುಖ್ಯಮಂತ್ರಿಗಳ ಹೇಳಿಕೆ ಖಂಡನೀಯ. ಬೇಜವಾಬ್ದಾರಿತರನದ ಪರಮಾವಧಿ. ಮುಖ್ಯಮಂತ್ರಿಗಳೇ ಕಾನೂನು ಬಾಹಿರ ಕ್ರಮಗಳನ್ನು ಸಕ್ರಮ ಮಾಡುತ್ತೇವೆ ಎಂದು ಹೇಳುವುದು ಸರಿಯಲ್ಲ. ಅದು ಅಕ್ರಮಗಳಿಗೆ ಸಹಕರಿಸಿದಂತೆ ಆಗುತ್ತದೆ.
ರಾಜ್ಯದ ಯಾವುದೇ ಭಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರಲಿ, ಅದರಲ್ಲಿ ಯಾವುದೇ ಪಕ್ಷದವರು ಭಾಗಿಯಾಗಿರಲಿ. ಸರ್ಕಾರ ಕ್ರಮ ಜರುಗಿಸಬೇಕು ಎಂದು ಸಿದ್ದರಾಮಯ್ಯ ಅವರು ಆಗ್ರಹಿಸಿದರು.

ಸಿಎಂ, ಉಸ್ತುವಾರಿ ಸಚಿವರೇ ಹೊಣೆ :
ಶಿವಮೊಗ್ಗದ ಹುಣಸೋಡು ಗ್ರಾಮದಲ್ಲಿ ಸಂಭವಿಸಿರುವ ದುರಂತ ಕುರಿತು ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದೆ. ಆಂಧ್ರದಿಂದ ಪರವಾನಿಗೆ ಇಲ್ಲದೆ ಜಿಲಿಟಿನ್ ಮತ್ತು ಡೈನಮೇಟ್ ತರಲಾಗಿತ್ತು. ಇದು ಮೊದಲ ಅಪರಾಧ. ತಂದಿದ್ದನ್ನು ಸುರಕ್ಷಿತವಾದ ಜಾಗದಲ್ಲಿ ಇಡದೇ ಹೋಗಿದ್ದಿದು ಎರಡನೇ ಅಪರಾಧ. ಅಧಿಕಾರಿಗಳ ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯ ಈ ದುರಂತದಲ್ಲಿ ಎದ್ದು ಕಾಣುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ.

ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರೇ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಕಡೆ ಅಕ್ರಮ ಗಣಿಗಾರಿಕೆಗಳು ನಡೆಯುತ್ತಿವೆ ಎಂದು ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿಯವರ ತವರು ಜಿಲ್ಲೆಯಲ್ಲಿಯೇ ಪರವಾನಿಗೆ ಇಲ್ಲದೆ ಯದ್ವಾತದ್ವಾ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದರೆ ಇದು ಜಿಲ್ಲಾಡಳಿತರ ವೈಫಲ್ಯ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ಅವರು ಇದರ ಹೊಣೆ ಹೊರಬೇಕು.

ಈ ಹಿಂದೆ ನಡೆದ ಕೆಡಿಪಿ ಸಭೆಯಲ್ಲಿ ಈಶ್ವರಪ್ಪ ಅವರು ಮಾತನಾಡುತ್ತಾ, ಊರಿನ ಒಳ್ಳೆಯದಕ್ಕೆ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಕಣ್ಣು ಮುಚ್ಚಿಕೊಂಡಿರಿ ಎಂದು ಸಲಹೆ ನೀಡಿದ್ದಾರೆ. ಜನಪ್ರತಿನಿಧಿಯೇ ಹೀಗೇ ಹೇಳಿದ ಬಳಿಕ ಅಧಿಕಾರಿಗಳು ಬೇವಾಬ್ದಾರಿಯಿಂದ ಕೆಲಸ ಮಾಡದೆ ಇನ್ನೇನು ಮಾಡಿಯಾರು ? ಜಿಲ್ಲೆಯಲ್ಲಿ ಎಲ್ಲ ಕ್ವಾರಿಗಳು ಮತ್ತು ಕ್ರಷರ್‍ಗಳು ಸಕ್ರಮವಾಗಿ ನಡೆಯುತ್ತಿವೆ ಎಂದೂ ಈಶ್ವರಪ್ಪ ಅವರೇ ಹೇಳಿದ್ದಾರೆ. ಆದರೆ, ಆಯನೂರು ಮಂಜುನಾಥ್ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದಿದ್ದಾರೆ. ಮಂಜುನಾಥ್ ಅವರು ಬಿಜೆಪಿಯ ಹಿರಿಯ ನಾಯಕರು. ವಿಧಾನ ಪರಿಷತ್ತಿನ ಹಾಲಿ ಸದಸ್ಯರು.
ಕ್ರಷರ್ ನಡೆಸುತ್ತಿದ್ದವರ ಬೇಜವಾಬ್ದಾರಿತನವೂ ಇದರಲ್ಲಿ ಎದ್ದು ಕಾಣುತ್ತಿದೆ.

ನನ್ನ ಪ್ರಕಾರ ಇದು ಗಂಭೀರವಾದ ವಿಷಯ. ಸ್ಫೋಟದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಘಟನೆ ಕುರಿತು ಹಾಗೂ ಆಯನೂರು ಮಂಜುನಾಥ್ ಮತ್ತು ಈಶ್ವರಪ್ಪ ಅವರ ಹೇಳಿಕೆ ಹಿನ್ನೆಲೆಯಲ್ಲಿ ಸತ್ಯ ಏನೆಂದು ಗೊತ್ತಾಗಬೇಕು. ಮೃತರ ಕುಟುಂಬದವರಿಗೆ ನ್ಯಾಯಯುತ ಪರಿಹಾರ ಘೋಷಣೆ ಮಾಡಬೇಕು. ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ಕೊಡಬೇಕು. ಹೈಕೋರ್ಟ್‍ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ಆಗಬೇಕು ಎಂದರು.

ಸಾಹಿತಿಗಳ ವಲಯಕ್ಕೆ ಮಾಡಿದ ಅವಮಾನ :
ಯಾರೋ ಕೊಟ್ಟ ದೂರಿನ ಹಿನ್ನೆಲೆಯಲ್ಲಿ ಹಿರಿಯ ಸಾಹಿತಿ ಹಂ.ಪಾ. ನಾಗರಾಜಯ್ಯ ಅವರನ್ನು ಮಂಡ್ಯ ಪೊಲೀಸರು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿರುವುದು ಇಡೀ ಸಾಹಿತಿಗಳ ವಲಯಕ್ಕೆ ಮಾಡಿದ ಅವಮಾನ. ನಾವು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಇದ್ದೇವೆಯೋ ಅಥವಾ ಇಲ್ಲವೋ ಎಂಬ ಅನುಮಾನ ಇದರಿಂದ ಉಂಟಾಗಿದೆ.

ನರೇಂದ್ರ ಮೋದಿಯವರ ಸರ್ಕಾರ ಆರಂಭದಲ್ಲಿ ಧರ್ಮರಾಯನಂತೆ ಇತ್ತು. ಈಗ ದುರ್ಯೋದನನ ಸರ್ಕಾರವಾಗಿದೆ ಎಂದು ಹಂಪನಾ ಅವರು ಹೇಳಿದ್ದಾರೆ. ಇದರಲ್ಲಿ ಮಾನಹಾನಿಯಾಗುವ ಅಂಶ ಏನಿದೆ. ದೇಶದ ಪ್ರತಿಯೊಬ್ಬ ನಾಗರಿಕರಿಗೂ ಅವರ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಗ್ಗೆ ಮಾತನಾಡುವ ಹಕ್ಕು ಇದೆ. ಯಾರೂ ಅದನ್ನು ನಿಯಂತ್ರಿಸಲು ಆಗದು.

ಹಂ.ಪಾ. ನಾಗರಾಜಯ್ಯ ಅವರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ. ಯಾರೋ ದೂರು ಕೊಟ್ಟರು ಎಂಬ ಕಾರಣಕ್ಕೆ ಹಿರಿಯ ಸಾಹಿತಿಯನ್ನು ಠಾಣೆಗೆ ಕರೆಯಿಸಿಕೊಂಡು ವಿಚಾರಣೆ ನಡೆಸುವುದು ಪ್ರಜಾಸತ್ತೆಗೆ ಮಾಡಿದ ಅವಮಾನ. ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಯಡಿಯೂರಪ್ಪ ಅವರಿಗೆ ಗೌರವ ಇದ್ದರೆ ಸಂಬಂಧಿಸಿದ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಬೇಕು ಎಂದರು.

ಬೆಂಗಳೂರಿನಲ್ಲಿ ಇತ್ತೀಚೆಗೆ ಕಾಂಗ್ರೆಸ್ ನಡೆಸಿದ ರಾಜಭವನ ಚಲೋ ವೇಳೆ ನಡೆದ ಘಟನೆ ಸಂಬಂಧ ಶಾಸಕರಾದ ಸೌಮ್ಯ ರೆಡ್ಡಿಯವರೇ ದೂರು ನೀಡಿದ್ದಾರೆ. ಆ ದೂರು ಏನಾಯಿತು. ಸೌಮ್ಯ ರೆಡ್ಡಿ ಹಾಗೂ ಅವರ ವಿರುದ್ಧ ನೀಡಿರುವ ದೂರುಗಳನ್ನೂ ಸ್ವೀಕಾರ ಮಾಡಿ ತನಿಖೆ ಜರುಗಿಸಲಿ. ಸೌಮ್ಯರೆಡ್ಡಿ ಘಟನೆ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ. ಅದು ಅವರ ದೊಡ್ಡಗುಣ ಎಂದರು.

28ರಂದು ಕಾಂಗ್ರೆಸ್ ಶಾಸಕಾಂಗ ಸಭೆ :
ವಿಧಾನ ಮಂಡಲದ ಜಂಟಿ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಜನವರಿ 28 ರಂದು ಬೆಳಗ್ಗೆ 9 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ವಿಧಾನ ಪರಿಷತ್ ಉಪ ಸಭಾಪತಿ ಚುನಾವಣೆಗೆ ಅಭ್ಯರ್ಥಿ ಕಣಕ್ಕಿಳಿಸುವ ಕುರಿತು ಅಂದು ತೀರ್ಮಾನ ಕೈಗೊಳ್ಳಲಾಗುವುದು. ಪರಿಶಿಷ್ಟ ಜಾತಿಯ ಎಡಗೈ ಗುಂಪಿನ ನಾಯಕರಿಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆ ನೀಡಬೇಕು. ಇದು ನನ್ನ ಅಭಿಪ್ರಾಯ.

ತಾಲೂಕು ಪಂಚಾಯಿತಿ ವ್ಯವಸ್ಥೆಯನ್ನು ಸುಲಭವಾಗಿ ರದ್ದುಗೊಳಿಸಲಾಗದು. ಅದಕ್ಕೆ ಸಂವಿಧಾನಕ್ಕೆ ತಿದ್ದುಪಡಿ ತರಲಾಗದು. ಈಶ್ವರಪ್ಪ ಅವರಿಗೆ ಕಾನೂನು ಗೊತ್ತಿಲ್ಲ.
ಬಿಜೆಪಿಗೆ ವಲಸೆ ಹೋದವರಿಗೆ ಈಗ ಅತೃಪ್ತಿ ಕಾಡುತ್ತಿದೆ. ವಲಸೆ ಹೋದವರು ಮೊದಲು ಯಡಿಯೂರಪ್ಪ ಅವರನ್ನು ಮಾತು ತಪ್ಪದ ಮಗ ಎಂದು ಹಾಡಿ ಹೊಗಳುತ್ತಿದ್ದರು. ಈಗ ನಾಲಿಗೆ ಇಲ್ಲದ ನಾಯಕ ಎನ್ನುತ್ತಿದ್ದಾರೆ. ಪ್ರಳಯವಾದರೂ ಸರಿ, ವಲಸಿಗರನ್ನು ಕಾಂಗ್ರೆಸ್‍ಗೆ ಮತ್ತೆ ಸೇರಿಸುವುದಿಲ್ಲ ಎಂದು ಹೇಳಿದ್ದೆ. ಅದಕ್ಕೆ ಈಗಲೂ ಬದ್ಧನಾಗಿದ್ದೇನೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.

ಬಿಜೆಪಿಯಿಂದ ಇಡೀ ದೇಶವೇ ನಿರುದ್ಯೋಗಿ, ಇದಕ್ಕೆ ಪ್ರತಿಪಕ್ಷ ಹೊರತಲ್ಲ; ಡಿ.ಕೆ. ಶಿವಕುಮಾರ್ ಟಾಂಗ್

ಬೆಂಗಳೂರು:‘ನಾವು ರಾಜ್ಯ ಹಾಗೂ ದೇಶದ ರೈತರ ಪರ ಧ್ವನಿ ಎತ್ತಿದ್ದೇವೆ. ಕೆಲವು ಸಚಿವರು ನಾವು ಅಸ್ತಿತ್ವ ಉಳಿಸಿಕೊಳ್ಳಲು ಮಾಡಿದ್ದೇವೆ, ನಾವು ನಿರುದ್ಯೋಗಿಗಳು ಎಂದಿದ್ದಾರೆ. ನಿಜ, ಬಿಜೆಪಿ ಆಡಳಿತದಲ್ಲಿ ಇಡೀ ದೇಶವೇ ನಿರುದ್ಯೋಗಿಯಾಗಿದ್ದು, ವಿರೋಧ ಪಕ್ಷವಾದ ನಾವೂ ನಿರುದ್ಯೋಗಿಗಳೇ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಟಾಂಗ್ ಕೊಟ್ಟಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದ ಬಳಿ ಶನಿವಾರ ಮಾತನಾಡಿದ ಅವರು ಹೇಳಿದ್ದಿಷ್ಟು:

‘ನಾವು ಮುಖ್ಯಮಂತ್ರಿಗಳಿಗೆ, ಅವರ ಪದವಿಗೆ, ಹಿರಿತನಕ್ಕೆ ಗೌರವ ನೀಡುತ್ತೇವೆ. ಇವತ್ತೂ ಗೌರವಿಸುತ್ತೇವೆ, ನಾಳೆಯೂ ಗೌರವಿಸುತ್ತೇವೆ. ಅವರ ಪ್ರಕಾರ ನಾವೆಲ್ಲ ಸತ್ತ ಕುದುರೆಗಳಂತೆ, ನಮ್ಮ ಪಕ್ಷವೇ ಇಲ್ಲ. ಇನ್ನು ಸಾಮ್ರಾಟ್ ಅಶೋಕರ ಪ್ರಕಾರ ನಾವು ನಿರುದ್ಯೋಗಿಗಳು. ಅದು ನಿಜ, ಬಿಜೆಪಿ ಆಡಳಿತದಲ್ಲಿ ದೇಶದ ಎಲ್ಲೆಡೆ ನಿರುದ್ಯೋಗ ಹೆಚ್ಚಾಗಿದ್ದು, ನಾವು ಕೂಡ ನಿರುದ್ಯೋಗಿಗಳಾಗಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ದೇಶಕ್ಕೆ ಕೊಟ್ಟ ಬಹುದೊಡ್ಡ ಬಳುವಳಿ ನಿರುದ್ಯೋಗ ಸಮಸ್ಯೆ. ಗೃಹ ಸಚಿವರು ಟ್ರಾಫಿಕ್ ಜಾಮ್ ಅಂತಾರೆ. ನಾವು ಪ್ರತಿಭಟನೆ ಮಾಡಿದ್ದು ಅಸ್ತಿತ್ವಕ್ಕೆ ಅಲ್ಲ, ರಾಜ್ಯ ಹಾಗೂ ದೇಶದ ರೈತರ ಧ್ವನಿ ಪ್ರತಿಬಿಂಬಿಸಲು.

ರಾಜಕಾರಣದಲ್ಲಿ ಏನು ಬೇಕಾದರೂ ಸಾಧ್ಯ. ಸಾಧ್ಯತೆಗಳ ಕಲೆ ರಾಜಕಾರಣ. ವಿಧಾನ ಪರಿಷತ್ ನಲ್ಲಿ ಸಭಾಪತಿಗಳು ಬರುವ ಮುನ್ನ ಬಾಗಿಲು ಹಾಕಿಕೊಂಡು ಕಲಾಪ ನಡೆಸುತ್ತಾರೆ ಎಂದು ನಾವು ನಿರೀಕ್ಷಿಸಿದ್ದೆವೆ?

ಪೊಲೀಸರ ದೌರ್ಜನ್ಯ ವ್ಯವಸ್ಥಿತ ಸಂಚು:

ಶಾಸಕಿ ಸೌಮ್ಯ ರೆಡ್ಡಿ ಅವರು ತಮ್ಮ ವೈಯಕ್ತಿಕ ರಕ್ಷಣೆಗಾಗಿ ತಮ್ಮನ್ನು ಎಳೆದಾಡುತ್ತಿದ್ದ ಪೊಲೀಸರಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಪೊಲೀಸರು ಎಲ್ಲ ಮಹಿಳಾ ನಾಯಕಿಯರನ್ನು ಎಳೆದಾಡುತ್ತಿದ್ದನ್ನು ನಾವೇ ನೋಡಿದ್ದೇವೆ. ಇನ್ನು ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆಯಾಗಿದೆ. ಅವರ ಬಟ್ಟೆ ಬಿಚ್ಚಿಸಿ ದೌರ್ಜನ್ಯ ಎಸಗಿದ್ದಾರೆ. ನಾವು ಎಷ್ಟೇ ಸಹಕಾರ ಕೊಟ್ಟರೂ ವ್ಯವಸ್ಥಿತ ಸಂಚಿನಿಂದಾಗಿ ಪೊಲೀಸರು ನಮ್ಮ ನಾಯಕರು ಹಾಗೂ ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗಿದ್ದಾರೆ.

ಸೌಮ್ಯ ರೆಡ್ಡಿ ಮೇಲೆ ಎಫ್ ಐಆರ್ ದಾಖಲಿಸುವ ಪೊಲೀಸರು, ಬಿಜೆಪಿ ನಾಯಕರು ಪ್ರಚೋದನಕಾರಿ ಹೇಳಿಕೆ ಕೊಟ್ಟು ಗಲಭೆಗೆ ಕಾರಣವಾದಾಗ ಸುಮೋಟೋ ಪ್ರಕರಣ ಯಾಕೆ ದಾಖಲಿಸಲಿಲ್ಲ? ಅವರ ವಿಚಾರದಲ್ಲಿ ಪೊಲೀಸರು ಹೇಡಿಗಳಂತೆ ವರ್ತಿಸಿದ್ದಾರೆ.

ಆರ್.ಆರ್. ನಗರ ಚುನಾವಣೆ ಸಮಯದಲ್ಲಿ ನನ್ನ ಮೇಲೆ ಸಿದ್ದರಾಮಯ್ಯ ಅವರ ಮೇಲೆ ಯಾಕೆ ಪ್ರಕರಣ ಹಾಕಲಿಲ್ಲ. ಕೇವಲ ಆ ಹೆಣ್ಣು ಮಗಳ ಮೇಲೆ ಕೇಸ್ ಹಾಕಿದರು? ನೀವು ಬೇಕಾದರೆ ಸಂಪೂರ್ಣ ವಿಡಿಯೋ ನೋಡಿ.

ಸೌಮ್ಯಾ ರೆಡ್ಡಿ ಅವರನ್ನು ಬಂಧಿಸಿದರೂ ನಾವು ಅವರ ಪರ ನಿಲ್ಲುತ್ತೇವೆ. ನಮ್ಮ ಬಳಿಯೂ ಸಾಕ್ಷ್ಯಗಳಿವೆ. ನಾವು ಅದನ್ನು ಮುಂದಿಡುತ್ತೇವೆ. ಆಕೆ ಕೆಳಗೆ ಬಿದ್ದಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ, ನನಗೆ ಬೇರೆ ಯಾರ ಸಾಕ್ಷಿಯೂ ಬೇಡ.

ಈ ಕೃತ್ಯದ ಹಿಂದೆ ಸರ್ಕಾರದ ಕೈವಾಡ ಇದೆ. ಸರ್ಕಾರ ಹೇಳದೆ ಯಾವ ಎಫ್ ಐಆರ್ ಹಾಕಲು ಸಾಧ್ಯವಿಲ್ಲ. ಪೊಲೀಸರ ದಬ್ಬಾಳಿಕೆ ವೇಳೆ ಸ್ವಯಂ ರಕ್ಷಣೆ ಮಾಡಿಕೊಳ್ಳುವುದು ಆಕೆಯ ಹಕ್ಕು. ಈ ಕೇಸ್ ಬರಲಿ ನಾವು ಎದುರಿಸಲು ಸಿದ್ಧ.

ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ:

ನಾವು ರಾಜ್ಯದ ಎಲ್ಲ ವಿದ್ಯಮಾನ ಗಮನಿಸುತ್ತಿದ್ದೇವೆ. ನಮ್ಮ ಧರ್ಮೇಗೌಡರು ಆ ರೀತಿ ತೀರ್ಮಾನಕ್ಕೆ ಬರಬಾರದಿತ್ತು. ಇದರಿಂದ ಎಲ್ಲರಿಗೂ ನೋವಾಗಿದೆ. ನಾವು ಶಾಸಕಾಂಗ ಪಕ್ಷದ ಸಭೆಯಲ್ಲಿ ಆ ಸ್ಥಾನದ ಗೌರವ, ಪಕ್ಷದ ಹಿತದೃಷ್ಟಿ, ಸಮಿತಿ ನೀಡಿರುವ ವರದಿ ಗಮನದಲ್ಲಿಟ್ಟುಕೊಂಡು ಈ ಪಕ್ಷದ ತೀರ್ಮಾನ ಮಾಡುತ್ತೇವೆ’