ಕೇಂದ್ರ ಸೇವೆಗೆ ನೀಯೋಜನೆಗೊಂಡ ಐಎಎಸ್‌ ಅಧಿಕಾರಿ ನಕುಲ್‌ರನ್ನು ಅಭಿನಂದಿಸಿದ ಡಿಸಿಎಂ

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಕಾರ್ಯದರ್ಶಿಯಾಗಿ ನೇಮಕವಾಗಿರುವ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್‌ ಅವರನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಭಿನಂದಿಸಿದರು.

ಬೆಂಗಳೂರಿನಲ್ಲಿ ಶನಿವಾರ ಕರ್ನಾಟಕ ಆರ್ಯವೈಶ್ಯ ಸಭಾ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಕುಲ್‌ ಅವರನ್ನು ಡಿಸಿಎಂ ಗೌರವಿಸಿದರಲ್ಲದೆ, ರಾಷ್ಟ್ರ ಮಟ್ಟದಲ್ಲಿ ನಮ್ಮ ರಾಜ್ಯದ ಕೇಡರಿನ ಐಎಎಸ್‌ ಅಧಿಕಾರಿಗಳು ಉತ್ತಮ ಸಾಧನೆ ಮಾಡಲಿ. ತಮ್ಮ ಕರ್ತವ್ಯನಿಷ್ಠೆ, ಪ್ರಾಮಾಣಿಕತೆಯಿಂದ ಎಲ್ಲರಿಗೂ ಮಾದರಿಯಾಗಲಿ. ನಕುಲ್‌ ಅವರೂ ಇಂಥ ಮಾದರಿ ವ್ಯಕ್ತಿತ್ವವುಳ್ಳ ಅಧಿಕಾರಿ ಎಂದು ಶ್ಲಾಘಿಸಿದರು.

ಕೇಂದ್ರದ ಹಣಕಾಸು ಇಲಾಖೆಯನ್ನು ಪ್ರವೇಶಿಸುವುದು ಅಷ್ಟು ಸುಲಭವಲ್ಲ. ಪ್ರಾಮಾಣಿಕ-ದಕ್ಷ ಸೇವಾ ಹಿನ್ನೆಲೆ ಇದ್ದರೆ ಮಾತ್ರ ಅದು ಸಾಧ್ಯವಾಗುತ್ತದೆ. ರಾಜ್ಯದಲ್ಲಿಯೂ ನಕುಲ್‌ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಬಳ್ಳಾರಿ ಜಿಲ್ಲಾಧಿಕಾರಿ ಆಗಿಯೂ ದಕ್ಷವಾಗಿ ಕೆಲಸ ಮಾಡಿದ್ದಾರೆಂದು ಉಪ ಮುಖ್ಯಮಂತ್ರಿ ಹೇಳಿದರು.

ಸದ್ಯಕ್ಕೆ, ದೇಶವನ್ನು ಅಭಿವೃದ್ಧಿಹೊಂದಿದ ದೇಶವನ್ನಾಗಿ ರೂಪಿಸಲು ನರೇಂದ್ರ ಮೋದಿ ಅವರ ಸರಕಾರ ಅಹರ್ನಿಷಿ ಕೆಲಸ ಮಾಡುತ್ತಿದೆ. ಅದಕ್ಕೆ ಪೂರಕವಾಗಿ ಆರ್ಥಿಕ ಇಲಾಖೆ ಪಾತ್ರ ಬಹಳ ದೊಡ್ಡದು. ಅಂಥ ಇಲಾಖೆಗೆ ನಕುಲ್‌ ಹೋಗುತ್ತಿರುವುದು ಕನ್ನಡಿಗರೆಲ್ಲರೂ ಹೆಮ್ಮೆ ಪಡುವ ಸಂಗತಿ ಎಂದು ಡಿಸಿಎಂ ನುಡಿದರು.

ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಮೋಹನ್‌, ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಕರ್ನಾಟಕ ಆರ್ಯವೈಶ್ಯ ಸಭಾ ಅಧ್ಯಕ್ಷ ರವಿಶಂಕರ್‌ ಮತ್ತಿತರೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಮಿಡ್ಲ್‌ಕ್ಲಾಸ್‌, ಮೀಡಿಯಾ ಅಂಡ್‌ ಮೋದಿ ಕೃತಿ ಲೋಕಾರ್ಪಣೆ

ಬೆಂಗಳೂರು: ದೇಶದ ಮಧ್ಯಮ ವರ್ಗದ ಜನರ ಕಲ್ಯಾಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರಷ್ಟು ಶ್ರಮಿಸಿದ ಮತ್ತೊಬ್ಬ ನಾಯಕರಿಲ್ಲ. ಈ ವರ್ಗದ ಸಮಸ್ಯೆಗಳನ್ನು, ಆ ಜನರ ಮನಸ್ಸನ್ನು ಅವರಷ್ಟು ಆಳವಾಗಿ ಅರ್ಥ ಮಾಡಿಕೊಂಡವರು ಮತ್ತೊಬ್ಬರಿಲ್ಲ. ಯಾಕೆಂದರೆ, ಸ್ವತಃ ಮೋದಿ ಅವರೂ ಮಧ್ಯಮ ವರ್ಗದಿಂದಲೇ ಬಂದವರು. ಹೀಗಾಗಿ ಭಾರತ ಬದಲಾವಣೆಯತ್ತ ಸಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು.

ಬೆಂಗಳೂರಿನಲ್ಲಿ ಶನಿವಾರದಂದು ದಿ ಹಿಂದೂ ಪತ್ರಿಕೆಯ ಡೆಪ್ಯೂಟಿ ಎಡಿಟರ್ ನಾಗೇಶ್‌ ಪ್ರಭು ಅವರು ಬರೆದಿರುವ ʼಮಿಡ್ಲ್‌ಕ್ಲಾಸ್‌, ಮೀಡಿಯಾ ಅಂಡ್‌ ಮೋದಿʼ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಡಿಸಿಎಂ ಅವರು, ಭಾರತೀಯ ಮಧ್ಯಮ ವರ್ಗದ ಸಮಸ್ಯೆಗಳು, ಆಕಾಂಕ್ಷೆಗಳು ಮತ್ತು ಮೌಲ್ಯಗಳನ್ನು ಬಹಳ ನಿಕಟವಾಗಿ ಕಂಡು ಅನುಭವಿಸಿದ ಕಾರಣಕ್ಕೆ ಮೋದಿ ಅವರಿಂದು ಈ ವರ್ಗದ ಕಲ್ಯಾಣಕ್ಕೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದರು ಎಂದರು.

ಮೋದಿ ಅವರ ಕಠಿಣ ಬದ್ಧತೆ:

ಗುಜರಾತಿನ ಮುಖ್ಯಮಂತ್ರಿ ಆಗಿದ್ದಾಗಲೇ ಅವರು ಮಧ್ಯಮ ವರ್ಗದ ಜನರ ಸಮಸ್ಯೆಗಳ ನಿವಾರಣೆಗೆ ಸಾಕಷ್ಟು ಕೆಲಸ ಮಾಡಿದ್ದರು. ಪ್ರಧಾನಿಯಾದ ಮೇಲೆ ಈ ಕಾರ್ಯಕ್ರಮಗಳು ಮತ್ತಷ್ಟು ವಿಸ್ತೃತವಾಗಿ ಆರಂಭವಾದವು. ಹಾಗೆ ನೋಡಿದರೆ, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಈ ವರ್ಗದ ಜನರಿಗಾಗಿ ಕಠಿಣ ಬದ್ಧತೆಯಿಂದ ದುಡಿದ ನಾಯಕರಲ್ಲಿ ಮೋದಿ ಅವರು ಅಗ್ರಗಣ್ಯರು ಎಂಬುದು ನನ್ನ ಅಭಿಪ್ರಾಯ. ಕಳೆದ ಆರೂವರೆ ವರ್ಷಗಳಲ್ಲಿ ದೇಶದ ಮಧ್ಯಮ ವರ್ಗದ ಜೀವನಮಟ್ಟ ಗಣನೀಯವಾಗಿ ಸುಧಾರಿಸಿದೆ ಎಂದರು ಉಪ ಮುಖ್ಯಮಂತ್ರಿ.

2014ರಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಪ್ರಧಾನಿ ಮೋದಿ ಅವರು ಮಧ್ಯಮ ವರ್ಗದ ಆಶಯಗಳನ್ನು ಈಡೇರಿಸುತ್ತಲೇ ಬಂದರು. ಡಿಜಿಟಲ್ ಇಂಡಿಯಾ, ಆಯುಷ್ಮಾನ್ ಭಾರತ್, ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಜಿಎಸ್ಟಿ, ಸ್ಟಾರ್ಟ್ಅಪ್ ಮುಂತಾದ ಯೋಜನೆಗಳ ಮೂಲಕ ಅವರು ಇಡೀ ವ್ಯವಸ್ಥೆಯನ್ನು ಮಧ್ಯಮ ವರ್ಗದ ಜನರಿಗೆ ಪೂರಕವಾಗಿ ದೇಶವನ್ನು ರೂಪಾಂತರ ಮಾಡಿದರು. ಅದೊಂದು ಅಸಾಮಾನ್ಯ ಸಾಧನೆ ಎಂದು ಡಾ.ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು.

ಜಗತ್ತೇ ಬೆರಗಾಗಿದೆ:

2019ರಲ್ಲಿ ಮೋದಿ ಅವರು ಮತ್ತೆ ಅಧಿಕಾರಕ್ಕೆ ಬರುತ್ತಿದ್ದಂತೆ ಕೋವಿಡ್‌ ಮಾರಿ ದೇಶವನ್ನ ಆವರಿಸಿಕೊಂಡಿತು. ಒಂದೆಡೆ ಬಾಹ್ಯ ಒತ್ತಡಗಳು, ಇನ್ನೊಂದೆಡೆ ಆಂತರಿಕವಾಗಿ ಕೋವಿಡ್‌ ಸವಾಲು. ಮೋದಿ ಅವರು ಎಲ್ಲಿಯೂ ಧೃತಿಗೆಡದೇ ತಮ್ಮ ದೂರದೃಷ್ಟಿ, ದಕ್ಷತೆಯ ಮೂಲಕ ಸಮರ್ಥವಾಗಿ ಎದುರಿಸಿದರು. ಬೃಹತ್ ಪ್ಯಾಕೇಜ್‌‌ ಮೂಲಕ ಬಡವರು, ಮಧ್ಯಮ ವರ್ಗದ ಜನರಿಗೆ ಸಮಸ್ಯೆ ಆಗದಂತೆ ನೋಡಿಕೊಂಡರು. ಲಾಕ್‌ಡೌನ್‌ ಕಾಲದಲ್ಲಿ ಅವರು ದೇಶವನ್ನು ಮುನ್ನಡೆಸಿದ ರೀತಿ ಹಾಗೂ ಜನರು ಅವರ ಮೇಲಿಟ್ಟ ವಿಶ್ವಾಸದ ಬಗ್ಗೆ ಇಡೀ ಜಗತ್ತೇ ಚಕಿತವಾಯಿತು ಎಂದು ಡಿಸಿಎಂ ನುಡಿದರು.

ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.30ರಷ್ಟು ಮಧ್ಯಮ ವರ್ಗವೇ. ಯಾವುದೇ ವೇಳೆಯಲ್ಲಿ ಏನೇ ವ್ಯತ್ಯಾಸವಾದರೂ ಮೊದಲು ಪರಿಣಾಮ ಬೀರುವುದು ಈ ವರ್ಗದ ಮೇಲೆಯೇ. ಈ ಅಂಶವನ್ನು ಮನಗಂಡಿರುವ ಮೋದಿ ಅವರು ಆತ್ಮನಿರ್ಭರ ಭಾರತ ಮೂಲಕ ಅವರು ಭವಿಷ್ಯದಲ್ಲಿ ಸವಾಲುಗಳಿಗೆ ಸಿಗದಿರುವಂತೆಯೇ ನೋಡಿಕೊಳ್ಳಲು ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ ಎಂದು ಅವರು ಹೇಳಿದರು.

ಮಣಿಪಾಲ್‌ ಗ್ಲೋಬಲ್‌ ಎಜ್ಯುಕೇಶನ್‌ ಸಂಸ್ಥೆಯ ಅಧ್ಯಕ್ಷ ಟಿ.ವಿ.ಮೋಹನದಾಸ್‌ ಪೈ, ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ್‌ ಹಾಗೂ ಆರ್ಥಿಕ ತಜ್ಞ ಪ್ರೊ.ಆರ್‌.ಎಸ್.ದೇಶಪಾಂಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಲೇಖಕ ನಾಗೇಶ ಪ್ರಭು ಪುಸ್ತಕ ಕುರಿತು‌ ಮಾತನಾಡಿದರು.

ಸರಕಾರದ ಕೆಲಸಗಳನ್ನು ಜನರಿಗೆ ಮುಟ್ಟಿಸುವುದು ಡೊಡ್ಡ ಟಾಸ್ಕ್:‌ ಡಿಸಿಎಂ

ಬೆಂಗಳೂರು: ಸರಕಾರ ಮಾಡುತ್ತಿರುವ ಜನಪರ ಕೆಲಸಗಳನ್ನು ಜನರಿಗೆ ಇನ್ನೂ ಉತ್ತಮವಾಗಿ ಮುಟ್ಟಿಸುವ ಕೆಲಸ ಆಗಬೇಕು. ಇದು ಅತ್ಯಂತ ಡೊಡ್ಡ ಟಾಸ್ಕ್ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಬೆಂಗಳೂರಿನಲ್ಲಿ ಶನಿವಾರ ಬಿಜೆಪಿ ರಾಜ್ಯ ಘಟಕ ಹಮ್ಮಿಕೊಂಡಿದ್ದ ಮಾಧ್ಯಮ ಕಾರ್ಯಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಕ್ಷ ಮತ್ತು ಸರಕಾರದ ನಡುವೆ ಸಂಪರ್ಕದ ಅಂತರ ಇರಬಾರದು. ಅದನ್ನು ಹೋಗಲಾಡಿಸಲು ಇಂಥ ಮಾಧ್ಯಮ ಕಾರ್ಯಗಾರಗಳು ಹೆಚ್ಚು ಪೂರಕವಾಗುತ್ತವೆ ಎಂದರು.

ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದಾಗಿನಿಂದ ಅನೇಕ ಸುಧಾರಣೆಗಳನ್ನು ಜಾರಿಗೆ ತರಲಾಗಿದೆ. ಶೈಕ್ಷಣಿಕ, ಕೈಗಾರಿಕೆ, ಕೃಷಿ, ಮಾರುಕಟ್ಟೆ ಸೇರಿದಂತೆ ಹತ್ತಾರು ಕ್ಷೇತ್ರಗಳಲ್ಲಿ ಕಳೆದ ಎಪ್ಪತ್ತು ವರ್ಷಗಳಿಂದ ಸಾಧ್ಯವಾಗದ ಸುಧಾರಣಾ ಕ್ರಮಗಳನ್ನು ಜಾರಿ ಮಾಡಲಾಗಿದೆ. ಜತೆಗೆ, ಅನೇಕ ಕಾಯ್ದೆಗಳನ್ನು ಕೂಡ ಜಾರಿಗೆ ತರಲಾಗಿದೆ. ಇವೆಲ್ಲ ಅಂಶಗಳ ಬಗ್ಗೆ ಆಳವಾಗಿ ಆಧ್ಯಯನ ಮಾಡಿ ಜನರಿಗೆ ಮುಟ್ಟಿಸುವ ಕೆಲಸ ಆಗಬೇಕು ಎಂದರೆ ಮೊದಲು ನಾವು ಪೂರ್ಣವಾಗಿ ತಿಳಿದುಕೊಳ್ಳಬೇಕು. ಪಕ್ಷದ ಹಾಗೂ ಸರಕಾರದ ವೇದಿಕೆಯಲ್ಲಿ ಕೆಲಸ ಮಾಡುವ ನಾವು ಚೆನ್ನಾಗಿ ಗ್ರಹಿಸಿಕೊಂಡರೆ ಮಾತ್ರ ಜನಸಾಮಾನ್ಯರಿಗೂ ಸುಲಭವಾಗಿ ವಿಷಯ ದಾಟಿಸಬಹುದು ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಮಾಧ್ಯಮಗಳಲ್ಲಿ ಪಕ್ಷದ ನಿಲುವುಗಳು ಹಾಗೂ ಸರಕಾರದ ಕೆಲಸಗಳು ಪರಿಣಾಮಕಾರಿಯಾಗಿ ಧ್ವನಿಸಬೇಕು. ಅದಕ್ಕೆ ಸಾಕಷ್ಟು ಪೂರ್ವಸಿದ್ಧತೆ ಹಾಗೂ ಅಧ್ಯಯನ ಅಗತ್ಯ. ಈ ಕೆಲಸವನ್ನು ಉತ್ತಮವಾಗಿ ಮಾಡಿದರೆ ಪಕ್ಷ ಮತ್ತಷ್ಟು ಗಟ್ಟಿಗೊಳ್ಳುತ್ತದೆ ಎಂದು ಡಿಸಿಎಂ ಅಭಿಪ್ರಾಯಪಟ್ಟರು.

ಕಾರ್ಯಾಗಾರವನ್ನು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಉದ್ಘಾಟನೆ ಮಾಡಿದರು. ಪಕ್ಷದ ರಾಜ್ಯ ಉಪಾಧ್ಯಕ್ಷ ನಿರ್ಮಲ್‌ ಕುಮಾರ್‌ ಸುರಾನ, ರಾಜ್ಯಸಭೆ ಸದಸ್ಯ ರಾಜೀವ್‌ ಚಂದ್ರಶೇಖರ್‌, ವಕ್ತಾರ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌, ಪಕ್ಷದ ರಾಷ್ಟ್ರೀಯ ವಕ್ತಾರೆ ನೂಪುರ್‌ ಶರ್ಮಾ ಮುಂತಾದವರು ಪಾಲ್ಗೊಂಡಿದ್ದರು.

ಪೊಲೀಸರು ತಡೆದ ಕಡೆ ರಸ್ತೆ ಬಂದ್ ಮಾಡಿ; ಕಾಂಗ್ರೆಸ್ ಕಾರ್ಯಕರ್ತರು, ರೈತರಿಗೆ ಡಿ.ಕೆ. ಶಿವಕುಮಾರ್ ಕರೆ

ಬೆಂಗಳೂರು: ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಜನರ ಪ್ರತಿಭಟನೆ ಹಕ್ಕನ್ನು ಕಸಿಯುವ ಪ್ರಯತ್ನ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ಮತ್ತು ಜನ ವಿರೋಧಿ ಕಾಯ್ದೆಗಳ ವಿರುದ್ಧದ ‘ರಾಜಭವನ ಚಲೋ’ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸುತ್ತಿರುವ ರೈತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ನಿನ್ನೆ ರಾತ್ರಿಯಿಂದಲೇ ಪೊಲೀಸರು ಮಾರ್ಗ ಮಧ್ಯದಲ್ಲೇ ತಡೆಯುತ್ತಿದ್ದಾರೆ. ಆ ಮೂಲಕ ರಾಜ್ಯ ಬಿಜೆಪಿ ಸರಕಾರ ದೌರ್ಜನ್ಯ ಮೆರೆಯುತ್ತಿದೆ ಎಂದು ಅವರು ಕಿಡಿ ಕಾರಿದ್ದಾರೆ.

ಹೋರಾಟ ನಮ್ಮ ಉಸಿರು. ಪ್ರತಿಭಟನೆ ಹಕ್ಕು ಕಸಿಯುವ ಅಧಿಕಾರ ಯಾರಿಗೂ ಇಲ್ಲ. ಹೀಗಾಗಿ ಪೊಲೀಸರು ಎಲ್ಲಿ ತಡೆಯುತ್ತಾರೋ ಅಲ್ಲೇ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿ, ರಸ್ತೆ ಬಂದ್ ಮಾಡಿ’ ಎಂದು ಶಿವಕುಮಾರ್ ಅವರು ಮಾಧ್ಯಮ ಹೇಳಿಕೆಯಲ್ಲಿ ಕರೆ ನೀಡಿದ್ದಾರೆ.

ಉದ್ಧವ್‌ ಠಾಕ್ರೆ ಸರಕಾರಕ್ಕೆ ನೀಡಿರುವ ಬೆಂಬಲ ವಾಪಸ್‌ ಪಡೆಯಿರಿ;ಕಾಂಗ್ರೆಸ್‌ ನಾಯಕರಿಗೆ ಸವಾಲು ಹಾಕಿದ ಡಿಸಿಎಂ

ಬೆಂಗಳೂರು: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮಾತುಗಳು ಉದ್ಧಟತನದಿಂದ ಕೂಡಿವೆ. ದೇಶದ ಏಕತೆ- ಸಮಗ್ರತೆಗೆ ಧಕ್ಕೆ ಉಂಟು ಮಾಡುವಂಥ ಇಂಥ ವ್ಯಕ್ತಿಯ ನೇತೃತ್ವದ ಸರಕಾರಕ್ಕೆ ನೀಡಿರುವ ಬೆಂಬಲವನ್ನು ಕಾಂಗ್ರೆಸ್‌ ಪಕ್ಷ ಕೂಡಲೇ ವಾಪಸ್‌ ಪಡೆಯಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಒತ್ತಾಯ ಮಾಡಿದರು

ಬೆಂಗಳೂರಿನ ಮಲ್ಲೇಶ್ವರದ ಗಾಂಧಿಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಕೋವಿಡ್‌ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿಯಂಥ ಸಾಂವಿಧಾನಿಕ, ಘನತೆಯುಳ್ಳ ಪದವಿಯಲ್ಲಿದ್ದು ಅತ್ಯಂತ ಬೇಜವಾಬ್ದಾರಿಯಾಗಿ ಹೇಳಿಕೆ ನೀಡಿರುವ ಉದ್ಧವ್‌ ಠಾಕ್ರೆ ಮಾತುಗಳನ್ನು ಒಪ್ಪಲು ಸಾಧ್ಯವೇ ಇಲ್ಲ. ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದ ಎನ್ನುವುದು ಮುಗಿದ ಅಧ್ಯಾಯ ಎಂದರು.

ಹಳೆಯ ವಿಷಯವನ್ನು ಕೆದಕುತ್ತ ದೇಶದ ಏಕತೆಗೆ ಧಕ್ಕೆ ತರುವಂಥ ಕೆಲಸವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಮಾಡುತ್ತಿದ್ದಾರೆ. ಇದು ಅನಪೇಕ್ಷಿತ-ಅನಗತ್ಯ. ಕರ್ನಾಟಕ ಇಂಥ ಹೇಳಿಕೆಗಳಿಗೆ, ಬೆದರಿಕೆಗಳಿಗೆ ಬಗ್ಗುವ-ಹೆದರುವ ರಾಜ್ಯವಲ್ಲ. ನಮ್ಮ ಸಹಿಷ್ಣುತೆ, ಶಾಂತಿಪ್ರಿಯತೆಯನ್ನೇ ದೌರ್ಬಲ್ಯ ಎಂದು ಎಣಿಸಬಾರದು. ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾದರೂ ಇನ್ನು ಗಡಿ ವಿಷಯವನ್ನು ಇಟ್ಟುಕೊಂಡು ರಾಜಕಾರಣ ಮಾಡುತ್ತಿರುವ ಶಿವಸೇನೆಯಂಥ ಪಕ್ಷಗಳು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಡಿಸಿಎಂ ಕಿಡಿ ಕಾರಿದರು.

ಕಾಂಗ್ರೆಸ್‌ ನಾಯಕರು, ಅದರಲ್ಲೂ ಸಿದ್ದರಾಮಯ್ಯ ಅವರಂಥ ನಾಯಕರು ಉದ್ಧವ್‌ ಠಾಕ್ರೆ ಹೇಳಿಕೆಯನ್ನು ಖಂಡನೆ ಮಾಡಿರುವುದು ಸ್ವಾಗತಾರ್ಹ. ಕೂಡಲೇ ಅವರೆಲ್ಲರೂ ತಮ್ಮ ಪಕ್ಷದ ಹೈಕಮಾಂಡ್‌ ಮೇಲೆ ಒತ್ತಡ ಹೇರಿ ಶಿವಸೇನೆ ಸರಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್‌ ಪಡೆಯುವಂತೆ ಮಾಡಬೇಕು. ಆಗ ಮಾತ್ರ ಕರ್ನಾಟಕದ ಕುರಿತ ಕಾಂಗ್ರೆಸ್‌ ಪಕ್ಷದ ಬದ್ಧತೆ ಏನೆಂಬುದು ಜನರಿಗೆ ಗೊತ್ತಾಗುತ್ತದೆ ಎಂದು ಡಾ.ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು.

ನಾವು ಭಾರತೀಯರು:

ಭಾರತ ಇವತ್ತು ಬದಲಾಗಿದೆ. ಸಂಘಟಿತವಾಗಿ ಹೊರಗಿನ ಶಕ್ತಿಗಳನ್ನು ಎದುರಿಸುತ್ತ ವೇಗವಾಗಿ ಪ್ರಗತಿ ಹೊಂದುತ್ತಿದೆ. ಇಂಥ ಸಂದರ್ಭದಲ್ಲಿ ಸಂಕುಚಿತ ವಿಷಯಗಳನ್ನೂ, ಅದರಲ್ಲೂ ಎಂದೋ ಮುಗಿದ ಅಧ್ಯಾಯವನ್ನು ಇಟ್ಟುಕೊಂಡು ನೆಮ್ಮದಿ ಕೆಡಿಸುವಂಥ ಕೆಲಸ ಮಾಡಬಾರದು. ಒಂದು ರಾಜ್ಯದ ಮುಖ್ಯಮಂತ್ರಿ ಪದವಿಯಲ್ಲಿ ಕೂತ ವ್ಯಕ್ತಿಗೆ ಇದು ಶೋಭೆಯಲ್ಲ ಎಂದು ಡಿಸಿಎಂ ಖಾರವಾಗಿ ಪ್ರತಿಕ್ರಿಯಿಸಿದರು.

ಕೋವಿಡ್ ಲಸಿಕೆ ಅಭಿಯಾನಕ್ಕೆ ಸುರೇಶ್ ಕುಮಾರ್ ಚಾಲನೆ

ಬೆಂಗಳೂರು: ರಾಜಾಜಿನಗರದ ವಿವಿಧ ಆಸ್ಪತ್ರೆಗಳಲ್ಲಿ ಸೋಮವಾರ ಕೊರೋನಾ ವಾರಿಯರ್ಸ್‍ಗಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಚಾಲನೆ ನೀಡಿದರು.

ಮಂಜುನಾಥನಗರದ ಪ್ರಾಥಮಿಕ ಆರೋಗ್ಯ ಕೇಂದ್ರ, ಕಾಮಾಕ್ಷಿ ಪಾಳ್ಯದ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ರಾಜಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವಾರು ಖಾಸಗಿ ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಲಸಿಕಾ ಕಾರ್ಯಕ್ರಮಗಳಿಗೆ ಸಚಿವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸುರೇಶ್ ಕುಮಾರ್, ಕೋವಿಡ್ ಮಹಾಮಾರಿಯಂತಹ ಇಂತಹ ಸಾಂಕ್ರಾಮಿಕ ರೋಗವನ್ನು ಹಿಮ್ಮೆಟ್ಟಿಸಲು ತಮ್ಮ ಮನೆ ಮಠ ತೊರೆದು ಹೋರಾಟ ನಡೆಸಿದ ವೈದ್ಯರು, ದಾದಿಯರು ಸೇರಿದಂತೆ ಆರೋಗ್ಯ ಇಲಾಖೆ ಎಲ್ಲ ಸ್ತರದ ನೌಕರರ ಶ್ರಮ ಇತಿಹಾಸದಲ್ಲಿ ದಾಖಲಾಗುವಂತಹುದಾಗಿದೆ. ಅಂತಹ ಸ್ಮರಣೀಯ ಕಾರ್ಯ ನಿಮ್ಮಿಂದಾಗಿದೆ. ನೀವೆಲ್ಲರೂ ಪ್ರಾತಃಸ್ಮರಣೀಯರಾಗಿದ್ದೀರಿ ಎಂದು ಕೋವಿಡ್ ವಾರಿಯರ್ಸ್‍ಗಳ ಸೇವೆಯನ್ನು ಶ್ಲಾಘಿಸಿದರು.

ಕೊರೋನಾ ಸೋಂಕು ಇಡೀ ವಿಶ್ವದ ಎಲ್ಲರ ಜೀವನದ ಮೇಲೂ ಒಂದಲ್ಲ ಒಂದು ರೀತಿಯ ಪರಿಣಾಮವನ್ನುಂಟು ಮಾಡಿದೆಯಾದರೂ ಆರೋಗ್ಯ ಕಾರ್ಯಕರ್ತರು, ತಮ್ಮ ಹಾಗೂ ತಮ್ಮ ಕುಟುಂಬದ ಆರೋಗ್ಯವನ್ನೂ ಲೆಕ್ಕಿಸದೇ ರೋಗಿಗಳ ಆರೈಕೆಂiÀಲ್ಲಿ ತೊಡಗಿಸಿಕೊಂಡು ಸೇವೆ ಮಾಡಿರುವುದನ್ನು ಯಾರೂ ಸಹ ಮರೆಯದಂತಹುದಾಗಿದೆ. ಹಾಗೆಯೇ ಲಸಿಕೆ ಪಡೆಯುವ ಈ ಸಂದರ್ಭದಲ್ಲೂ ಆರೋಗ್ಯ ಕಾರ್ಯಕರ್ತರೇ ಮೊದಲಿಗರಾಗಿ ಲಸಿಕೆ ಪಡೆದು ರಾಷ್ಟ್ರದ ಪ್ರಜೆಗಳಿಗೆ ಲಸಿಕೆ ಪಡೆಯಲು ಪ್ರೇರಣಾದಾಯಿಯಾಗಿದ್ದಾರೆಂದು ಸಂತಸ ವ್ಯಕ್ತಪಡಿಸಿದರು.

ಕಡಿಮೆ ಅವಧಿಯಲ್ಲಿ ಹಗಲಿರುಳು ಶ್ರಮಿಸಿ ವ್ಯಾಕ್ಸಿನ್ ಸಂಶೋಧಿಸಿದ ವಿಜ್ಞಾನಿಗಳು ಒಂದು ರೀತಿಯಲ್ಲಿ ತಪಸ್ವಿಗಳೇ ಆಗಿದ್ದಾರೆ. ಕೊರೋನಾ ವಾರಿಯರ್ಸ್‍ಗಳಾಗಿ ದುಡಿಯುತ್ತಿರುವವರಿಗೆ ಮತ್ತು ಲಸಿಕೆ ಸಂಶೋಧಿಸಿದ ವಿಜ್ಞಾನಿಗಳ ತಂಡಕ್ಕೆ ಇಡೀ ರಾಷ್ಟ್ರದ ಪ್ರಜೆಗಳ ಕೃತಜ್ಞತೆಗಳು ಸಲ್ಲುತ್ತವೆ ಎಂದರು.

ಲಸಿಕೆ ನೀಡಿದ ನಂತರ ಕೆಲ ಹೊತ್ತು ಆಸ್ಪತ್ರೆಗಳಲ್ಲೇ ಇದ್ದು, ಲಸಿಕೆ ಪಡೆದವರ ಅಭಿಪ್ರಾಯಗಳನ್ನು ಆಲಿಸಿದರು. ಗಂಟಲು ದ್ರವ ಸಂಗ್ರಹಕಾರರು, ಪ್ರಯೋಗಾಲಯ ತಂತ್ರಜ್ಞರು, ವಾರ್ಡ್ ಆರೋಗ್ಯ ಪರಿವೀಕ್ಷಕರು, ಆಶಾಕಾರ್ಯಕರ್ತೆಯರು, ವೈದ್ಯಾಧಿಕಾರಿಗಳು ಸೇರಿದಂತೆ ಕೊರೋನಾ ವಿರುದ್ಧದ ಹೋರಾಟದಲ್ಲಿ ನೇರವಾಗಿ ತೊಡಗಿಸಿಕೊಂಡ ಸಿಬ್ಬಂದಿ ಲಸಿಕೆಗಳನ್ನ ಪಡೆದರು.

ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಬಿಬಿಎಂಪಿ ಅಧಿಕಾರಿಗಳು ಹಾಜರಿದ್ದರು.