ಕುಮಾರಣ್ಣನವರ ವರ್ಚಸ್ಸು ಕುಗ್ಗಿಸಲು ವಿರೋಧಿ ಬಣಗಳು ಸೃಷ್ಟಿಯಾದವು: ನಿಖಿಲ್

ಮಂಡ್ಯ: ಕಳೆದ ಲೋಕಸಭಾ ಚುನಾವಣೆಯಲ್ಲಿ ನಾನು ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಜಿಲ್ಲೆಯ ಶಾಸಕರ ಒತ್ತಾಯ ಮತ್ತು ಪ್ರೀತಿಗೆ ಮಣಿದು. ನಾನು ದೆಹಲಿಗೆ ಹೋಗಿ ಮೆರೆಯಬೇಕಿರಲಿಲ್ಲ. ಆದರೆ, ನನ್ನು ನಂಬಿ ಕೆಲವು ನಿಷ್ಠಾವಂತ ಕಾರ್ಯಕರ್ತರು ಮನೆ-ಮಠ ಕಳೆದುಕೊಂಡಿದ್ದಕ್ಕೆ ತೀವ್ರ ನೋವಿದೆ ಎಂದು ನಿಖಿಲ್ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ರು.

ಮಳವಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಬೆಂಬಲಿತ ನೂತನ ಗ್ರಾಮಪಂಚಾಯಿತಿ ಅಭ್ಯರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಭಾವುಕರಾಗಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಈ ಮಾತನ್ನ ಹೇಳಿದರು.

ನಾನು ಮಂಡ್ಯ ಅಭ್ಯರ್ಥಿಯಾಗಿದ್ದು ಸ್ಥಳೀಯ ಶಾಸಕರು, ಮುಖಂಡರ ಪ್ರೀತಿ, ವಿಶ್ವಾಸಕ್ಕೆ ಮಣಿದು. ಚುನಾವಣೆಗೆ ಸ್ಪರ್ಧಿಸುವ ಮೊದಲು ಮಂಡ್ಯ ಕ್ಷೇತ್ರದ ಜೊತೆ ಅಷ್ಟು ಒಡನಾಟ ಇರಲಿಲ್ಲ. ಹಾಗೆ ನನ್ನ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿದ್ದವರಿಗೂ ಜಿಲ್ಲೆಯಲ್ಲಿ ಅಷ್ಟು ಜನ ಸಂಪರ್ಕ ಇರಲಿಲ್ಲ. ಆದರೆ, ಕುಮಾರಣ್ಣನವರ ವರ್ಚಸ್ಸು ಕುಗ್ಗಿಸಲು ವಿರೋಧಿ ಬಣ ಸೃಷ್ಟಿಯಾದವು. ಇದೆಲ್ಲದರ ಬಗ್ಗೆ ನನಗೆ ಬೇಸರವಿಲ್ಲ. ಆದರೆ, ನನ್ನನ್ನು ನಂಬಿ ಬೆಟ್ಟಿಂಗ್ ಕಟ್ಟಿ ಮನೆ ಮಠ ಕಳೆದುಕೊಂಡವರ ಬಗ್ಗೆ ತೀವ್ರ ನೋವಿದೆ ಎಂದು ಭಾವುಕರಾದರು.

ಬೆಳಗಾವಿಗೆ ಆಗಮಿಸಿದ ಕೇಂದ್ರ ಗೃಹಸಚಿವ ಅಮಿತ್ ಶಾ: ಗಣ್ಯರಿಂದ ಸ್ವಾಗತ

ಬೆಳಗಾವಿ, ಜ.17(ಕರ್ನಾಟಕ ವಾರ್ತೆ): ಜನಸೇವಕ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಇಲ್ಲಿಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜತೆ ಆಗಮಿಸಿದ ಕೇಂದ್ರ ಗೃಹ ಸಚಿವರನ್ನು ಬರಮಾಡಿಕೊಳ್ಳಲಾಯಿತು.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ಗಣ್ಯರನ್ನು ಸ್ವಾಗತಿಸಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅಭಯ್ ಪಾಟೀಲ, ಮಹೇಶ್ ಕುಮಠಳ್ಳಿ, ಅನಿಲ್ ಬೆನಕೆ, ಮಹಾದೇವಪ್ಪ ಯಾದವಾಡ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಿಶೇಷ ವಿಮಾನದಲ್ಲಿ ಆಗಮಿಸಿದ ಕೇಂದ್ರ ಸಚಿವ ಅಮಿತ್ ಶಾ ಅವರು ನಂತರ ಬೆಳಗಾವಿ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಬಾಗಲಕೋಟೆಗೆ ತೆರಳಿದರು.
***

ಬೆಳಗಾವಿಯಲ್ಲಿ ಐಟಿ ಪಾರ್ಕ್;‌ ರಕ್ಷಣಾ ಇಲಾಖೆ ವಶದಲ್ಲಿರುವ 750 ಎಕರೆ ಬಿಟ್ಟುಕೊಡುವಂತೆ ರಾಜನಾಥ್‌ ಸಿಂಗ್‌ಗೆ ಮನವಿ ಸಲ್ಲಿಸಿದ ಡಿಸಿಎಂ

ಬೆಂಗಳೂರು: ಬೆಳಗಾವಿಯಲ್ಲಿ ಐಟಿ ಪಾರ್ಕ್‌ ಸ್ಥಾಪಿಸುವ ಹಿನ್ನೆಲೆಯಲ್ಲಿ ರಕ್ಷಣಾ ಇಲಾಖೆ ವಶದಲ್ಲಿರುವ ರಾಜ್ಯದ 10,639 ಎಕರೆ ಭೂಮಿಯ ಪೈಕಿ 750 ಎಕರೆ ಭೂಮಿಯನ್ನು ರಾಜ್ಯ ಸರಕಾರಕ್ಕೆ ಬಿಟ್ಟುಕೊಡುವಂತೆ ಐಟಿ-ಬಿಟಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಶುಕ್ರವಾರ ಸಂಜೆ ರಕ್ಷಣಾ ಸಚಿವರನ್ನು ಭೇಟಿಯಾಗಿ ಮನವಿ ಪತ್ರ ನೀಡಿದ ಡಿಸಿಎಂ, ರಾಜನಾಥ್‌ ಸಿಂಗ್‌ ಅವರು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ತಿಳಿಸಿದರು.

ಈ ಹಿಂದೆಯೇ ಹತ್ತು ಸಾವಿರ ಎಕರೆಯಷ್ಟು ಭೂಮಿಯನ್ನು ರಕ್ಷಣಾ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಪ್ರತೀ ಹತ್ತು ವರ್ಷಕ್ಕೊಮ್ಮೆ ಗುತ್ತಿಗೆ ನವೀಕರಣ ಮಾಡಲಾಗುತ್ತಿದೆ. ಇಷ್ಟು ಪ್ರಮಾಣದ ಭೂಮಿಯನ್ನು ರಕ್ಷಣಾ ಇಲಾಖೆ ಬಳಸುತ್ತಿಲ್ಲ. ಹೀಗಾಗಿ ಈ ಜಾಗದ 750 ಎಕರೆ ಪ್ರದೇಶದಲ್ಲಿ ಮಾಹಿತಿ ತಂತ್ರಜ್ಞಾನ ಪಾರ್ಕ್‌ ಸ್ಥಾಪನೆ ಮಾಡುವ ಬಗ್ಗೆ ಪ್ರಸ್ತಾವನೆ ಬಂದಿದೆ. ಈ ಪಾರ್ಕ್‌ ಬಂದರೆ ಬೆಳಗಾವಿ ಹಾಗೂ ಉತ್ತರ ಕರ್ನಾಟಕ ಪ್ರದೇಶದಲ್ಲಿ 60 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತದೆ. ಜತೆಗೆ ಧಾರವಾಡದ ಐಐಟಿ ಮತ್ತು ಐಐಐಟಿ ಹಾಗೂ ಕೆಎಲ್‌ಇ ಶೈಕ್ಷಣಿಕ ಸಂಸ್ಥೆಗಳಿಂದ ಹೊರಬರುವ ಸ್ಥಳೀಯ ಪ್ರತಿಭೆಗಳಿಗೆ ಉದ್ಯೋಗಾವಕಾಶ ಕಲಿಸುವ ಉದ್ದೇಶವಿದೆ ಎಂಬ ವಿಷಯವನ್ನು ರಾಜನಾಥ್‌ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಅವರು ಅತ್ಯಂತ ಸಕಾರಾತ್ಮಕ ಸ್ಪಂದಿಸಿದ್ದು, ಆದಷ್ಟು ಬೇಗ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ ಎಂದು ಡಿಸಿಎಂ ತಿಳಿಸಿದರು.

ಈ ಭೂಮಿ ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲೇ ಇದ್ದು, ಐಟಿ ಪಾರ್ಕ್‌ ಸ್ಥಾಪನೆಗೆ ಅತ್ಯುತ್ತಮ ಜಾಗವಾಗಿದೆ. ಸ್ಥಳೀಯ ಆಡಳಿತ, ಮಾಹಿತಿ ತಂತ್ರಜ್ಞಾನ ಇಲಾಖೆ ಅಧಿಕಾರಿಗಳು, ಐಟಿ-ಬಿಟಿ ವಿಷನ್‌ ಗ್ರೂಪ್‌ ಸೇರಿದಂತೆ ಎಲ್ಲರೂ ಈ ಜಾಗವೇ ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಎಲ್ಲ ಸಂಗತಿಗಳನ್ನು ರಾಜನಾಥ್‌ ಸಿಂಗ್‌ ಅವರಿಗೆ ತಿಳಿಸಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯ ಕನಸಿಗೆ ಕರ್ನಾಟಕವು ಶೇ.30ರಷ್ಟು ಪಾಲು ಕೊಡುವ ಗುರಿಯನ್ನು ಹಾಕಿಕೊಂಡಿದೆ. ಆ ನಿಟ್ಟಿನಲ್ಲಿ 2020-21ನೇ ಸಾಲಿನ ನೂತನ ಐಟಿ ನೀತಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಆ ನೀತಿಯ ಭಾಗವಾಗಿ ಬೆಳಗಾವಿಯಲ್ಲಿ ಐಟಿ ಪಾರ್ಕ್‌ ಸ್ಥಾಪನೆ ಮಾಡುವ ಪ್ರಸ್ತಾವನೆ ಇದೆ ಎಂದು ರಕ್ಷಣಾ ಸಚಿವರಿಗೆ ವಿವರಿಸಲಾಯಿತು ಎಂದು ಡಿಸಿಎಂ ತಿಳಿಸಿದರು.

ಉತ್ತರ ಕರ್ನಾಟಕದಲ್ಲಿ 21 ಸಾವಿರ ಕೋಟಿ ರೂ. ವೆಚ್ಚದಲ್ಲಿ 13 ಹೆದ್ದಾರಿಗಳ ಅಭಿವೃದ್ಧಿ- ಕೇಂದ್ರ ಸಚಿವ ನಿತಿನ್ ಗಡ್ಕರಿ

ಬೆಂಗಳೂರು, ಜನವರಿ 15-ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಹಾಗೂ ಎಂಎಸ್ಎಂಇ ಸಚಿವ ನಿತಿನ್ ಗಡ್ಕರಿ ಅವರು ಇಂದು ಉತ್ತರ ಕರ್ನಾಟಕ ಭಾಗದಲ್ಲಿ 21 ಸಾವಿರ ಕೋಟಿ ರೂ. ವೆಚ್ಚದಲ್ಲಿ 847 ಕಿ.ಮೀ. ಉದ್ದದ ಹೆದ್ದಾರಿ ನಿರ್ಮಾಣದ 13 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಘೋಷಿಸಿದರು.

ಅವರು ಇಂದು 323 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿರುವ ಹುಬ್ಬಳ್ಳಿಯ ರಾಣಿ ಚೆನ್ನಮ್ಮ ವೃತ್ತದ ಎಲಿವೇಟೆಡ್ ಕಾರಿಡಾರ್ ಹಾಗೂ ಕಲಘಟಗಿ ತಾಲ್ಲೂಕು ದಾಸ್ತಿಕೊಪ್ಪ ಗ್ರಾಮದಲ್ಲಿ ಬೇಡ್ತಿ ನಾಲೆಗೆ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತ ಸರ್ಕಾರವು ಕರ್ನಾಟಕ ರಾಜ್ಯದಲ್ಲಿನ ಹೆದ್ದಾರಿಗಳ ಅಭಿವೃದ್ಧಿಗೆ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ ಬೈಪಾಸ್ ಚತುಷ್ಪಥ ರಸ್ತೆ ನಿರ್ಮಾಣ, ಬೆಳಗಾವಿ ಚತುಷ್ಪಥ ವರ್ತುಲ ರಸ್ತೆ ಸೇರಿದಂತೆ ಒಟ್ಟು 13 ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ವಿವರಿಸಿದರು.

ಅಂತೆಯೇ ಹುಬ್ಬಳ್ಳಿ-ಹೊಸಪೇಟೆ ಹೆದ್ದಾರಿ ಸೇರಿದಂತೆ, ಉತ್ತರ ಕರ್ನಾಟಕದ ಪ್ರಗತಿಯಲ್ಲಿರುವ ಯೋಜನೆಗಳನ್ನೂ ಸಹ ಶೀಘ್ರವೇ ಪೂರ್ಣಗೊಳಿಸುವ ಭರವಸೆ ನೀಡಿದರು.

ಕರ್ನಾಟಕ ಪ್ರಗತಿಶೀಲ ರಾಜ್ಯವಾಗಿದ್ದು, ಕೃಷಿ ಹಾಗೂ ಕೈಗಾರಿಕೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಬಡತನ ನಿರ್ಮೂಲನೆಗೆ ರಾಜ್ಯ ಸರ್ಕಾರದೊಂದಿಗೆ ಕೈ ಜೋಡಿಸಿ ಶ್ರಮಿಸುವುದಾಗಿ ಸಚಿವರು ಹೇಳಿದರು. ಸಾರಿಗೆ ವಲಯದಲ್ಲಿ ಹಸಿರು ಇಂಧನ ಬಳಕೆಗೆ ಆದ್ಯತೆ ನೀಡುವ ಮೂಲಕ ರೈತರಿಗೂ ಅನುಕೂಲವಾಗಲಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಒಂದು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಎರಡನೇ ಬಾರಿಗೆ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಶಂಕುಸ್ಥಾಪನೆ ನಡೆಸುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.

ರಾಣಿ ಚೆನ್ನಮ್ಮ ವೃತ್ತದ ಎಲಿವೇಟೆಡ್ ಕಾರಿಡಾರ್ ಹಾಗೂ ದಾಸ್ತಿಕೊಪ್ಪ ಗ್ರಾಮದ ಬೇಡ್ತಿ ನಾಲಾ ಮೇಲಿನ ಸೇತುವೆ ನಿರ್ಮಾಣದಿಂದ ಅಂಕೋಲಾ- ಗುತ್ತಿ ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ 1.16 ಲಕ್ಷ ಕೋಟಿ ರೂ. ಗಳನ್ನು ಹೆದ್ದಾರಿ ಅಭಿವೃದ್ಧಿಗಾಗಿ ಹೂಡಿಕೆ ಮಾಡುವ ಕೇಂದ್ರ ಸರ್ಕಾರದ ಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ರಾಜ್ಯದ ಎಲ್ಲ ಹೆದ್ದಾರಿ ಯೋಜನೆಗಳು ಕಾಲಬದ್ಧವಾಗಿ ಪೂರ್ಣಗೊಳ್ಳಲು ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರು ರಾಣಿ ಚೆನ್ನಮ್ಮ ವೃತ್ತದ ಎಲಿವೇಟೆಡ್ ಕಾರಿಡಾರ್ ನಿಂದ ಹುಬ್ಬಳ್ಳಿ ನಗರದಲ್ಲಿ ಸಂಚಾರ ದಟ್ಟಣೆ ನಿವಾರಣೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಅವರು ಮಾತನಾಡಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಅಧಿಕಾರದ ಅವಧಿಯಲ್ಲಿ 77,297 ಕೋಟಿ ರೂಪಾಯಿಗಳ ವೆಚ್ಚದಲ್ಲಿ 222 ಯೋಜನೆಗಳಿಗೆ ಮಂಜೂರಾತಿ ನೀಡಿ, 8,819 ಕಿ.ಮೀ. ರಸ್ತೆಯನ್ನು ಮೇಲ್ದರ್ಜೆಗೆ ಏರಿಸಲು ಕ್ರಮ ವಹಿಸಿದ್ದನ್ನು ಶ್ಲಾಘಿಸಿದರು.

ಕರ್ನಾಟಕ ರಾಜ್ಯದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮತ್ತು ಹೆದ್ದಾರಿಯಲ್ಲಿ ಸಂಪೂರ್ಣ ಸಹಕಾರ ನೀಡುತ್ತಿರುವುದಕ್ಕಾಗಿ ಮತ್ತು ಕೋವಿಡ್ 19 ಸಾಂಕ್ರಾಮಿಕ ಸನ್ನಿವೇಶದಲ್ಲಿಯೂ ಕೂಡ ರಸ್ತೆಗಳ ನಿರ್ಮಾಣ ವಿಷಯದಲ್ಲಿ ತೋರಿರುವ ಮುತುವರ್ಜಿ, ಮಾರ್ಗದರ್ಶನ, ಆರ್ಥಿಕ ಹಾಗೂ ತಾಂತ್ರಿಕ ನೆರವು ನೀಡಿದ್ದಕ್ಕಾಗಿ ಕರ್ನಾಟಕ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ಹುಬ್ಬಳ್ಳಿ ನಗರದ ಜನತೆಯ ಬಹುದಿನಗಳ ಬೇಡಿಕೆ ಈಡೇರುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಅಂತೆಯೇ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯನ್ನು ಚತುಷ್ಪಥ ರಸ್ತೆಯಾಗಿಸಲು ಹಾಗೂ ಹುಬ್ಬಳ್ಳಿ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಶೀಘ್ರವೇ ಪೂರ್ಣಗೊಳಿಸುವಂತೆ ಮನವಿ ಮಾಡಿದರು.

ಸಮಾರಂಭದಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ರಾಜ್ಯ ಸಚಿವ ಜನರಲ್ ವಿ.ಕೆ. ಸಿಂಗ್ ಮತ್ತು ಇತರರು ಭಾಗವಹಿಸಿದ್ದರು.

ಪ್ರಥಮ ಪಿಯು ಆರಂಭಕ್ಕೆ ಪ್ರಿನ್ಸಿಪಾಲರ ಒತ್ತಾಯ: ಸುರೇಶ್ ಕುಮಾರ್

ಬೆಂಗಳೂರು: ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳ ಪೋಷಕರ ಮತ್ತು ವಿದ್ಯಾರ್ಥಿಗಳ ಹೆಚ್ಚಿನ ಒತ್ತಡದ ಹಿನ್ನೆಲೆಯಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದ ಪ್ರಥಮ ಪದವಿಪೂರ್ವ ತರಗತಿಗಳನ್ನು ಶೀಘ್ರದಲ್ಲೇ ಆರಂಭಿಸಬೇಕೆಂದು ವಿವಿಧ ಜಿಲ್ಲೆಗಳ ಪ್ರಾಚಾರ್ಯರು ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ.

ದ್ವಿತೀಯ ಪಿಯು ತರಗತಿಗಳ ಆರಂಭದ ಪ್ರಗತಿ ಕುರಿತು ಬುಧವಾರ ಬೆಂಗಳೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯ ಆಯ್ದ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ರಥಮ ಪಿಯು ತರಗತಿಗಳನ್ನು ತಕ್ಷಣವೇ ಆರಂಭಿಸಬೇಕೆಂದು ಆಗ್ರಹಿಸಿದರು.

ಪ್ರಾಚಾರ್ಯರ ಎಲ್ಲ ಅಭಿಪ್ರಾಯಗಳನ್ನು ಆಲಿಸಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಪ್ರಥಮ ಪಿಯು ತರಗತಿ ಆರಂಭಿಸುವ ಕುರಿತು ತಮ್ಮ ಇಲಾಖೆ ರಾಜ್ಯ ಕೋವಿಡ್ ತಾಂತ್ರಿಕ ಸಮಿತಿಯ ಅಭಿಪ್ರಾಯ ಪಡೆದು ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದೆ ಎಂದರು.

ಈಗಾಗಲೇ ಪದವಿ ತರಗತಿಗಳು ಪೂರ್ಣವಾಗಿ ಆರಂಭವಾಗಿವೆ. ಶಾಲಾರಂಭದ ನಂತರ ತಾವು ಈತನಕ ವಿವಿಧ ಜಿಲ್ಲೆಗಳ 150ಕ್ಕೂ ಹೆಚ್ಚು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿದಾಗ ಶಾಲಾರಂಭ ಕುರಿತು ಮಕ್ಕಳು ಮತ್ತು ಪೋಷಕರು ಉತ್ಸುಕರಾಗಿದ್ದು, ಶಾಲೆಗಳ ವಾತಾವರಣ ಮತ್ತು ಸುರಕ್ಷತೆ ಕುರಿತು ಭರವಸೆ ಮೂಡಿರುವುದರಿಂದ ಪ್ರಥಮ ಪಿಯು ಮತ್ತು 8 ಹಾಗೂ 9ನೇ ತರಗತಿಗಳನ್ನು ಆರಂಭಿಸಬೇಕೆಂಬ ಒತ್ತಾಯಿಸುತ್ತಿದ್ದಾರೆ ಎಂದು ಸಚಿವರು ಹೇಳಿದರು.

ಶಾಲಾ ತರಗತಿಗಳನ್ನು ಆರಂಭಿಸಲು ಮತ್ತು ಪರೀಕ್ಷೆಯ ಮೂಲಕವೇ ಉತ್ತೀರ್ಣರಾಗಬೇಕೆಂಬುದು ಎಲ್ಲ ಮಕ್ಕಳ ಬಯಕೆಯಾಗಿದೆ. ಪರೀಕ್ಷೆಗಳಿಲ್ಲದೇ ಪಾಸಾಗುವುದನ್ನು ಬಹುತೇಕ ವಿದ್ಯಾರ್ಥಿಗಳು ಬಯಸುವುದಿಲ್ಲ. ಪರೀಕ್ಷೆ ಮೂಲಕವೇ ತಮ್ಮ ಸಾಮರ್ಥ್ಯ ಪ್ರಕಟಿಸಬೇಕೆಂಬುದೇ ಪ್ರತಿಯೊಬ್ಬರ ಇಚ್ಛೆಯಾಗಿರುವುದರಿಂದ ಶಾಲೆಗೆ ಭೌತಿಕವಾಗಿ ಹಾಜರಾಗಲು ನಾಡಿನ ಮಕ್ಕಳು ಇಚ್ಛಿಸುತ್ತಿದ್ದಾರೆ. ಇದು ನಾನು ಶಾಲೆಗಳಿಗೆ ಭೇಟಿ ನೀಡಿ ಮಕ್ಕಳನ್ನು ಮಾತನಾಡಿಸಿದಾದ ಕಂಡುಕೊಂಡ ಸತ್ಯವಾಗಿದೆ ಎಂದು ಸುರೇಶ್ ಕುಮಾರ್ ತಮ್ಮ ಅನುಭವಗಳನ್ನು ಮೆಲುಕು ಹಾಕಿದರು.

ಇದು ಸಂಕಷ್ಟ ಮತ್ತು ಸವಾಲಿನ ಸಮಯವಾಗಿದ್ದು, ಸಮಾಜದ ಪ್ರತಿಯೊಬ್ಬರೂ ಸಾಮಾಜಿಕ ಜವಾಬ್ದಾರಿಯ ಹಿನ್ನೆಲೆಯಲ್ಲಿ ಕೆಲಸ ಮಾಡಬೇಕಾದ ಸಂದರ್ಭ ಇದಾಗಿದೆ. ಮಕ್ಕಳಿಗೆ ಪರೀಕ್ಷಾ ಸಮಯ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಉಪನ್ಯಾಸಕರು, ಪ್ರಾಚಾರ್ಯರು ನಿಗದಿತ ಪಠ್ಯಾಂಶ ಪೂರ್ಣಗೊಳಿಸಲು ಹೆಚ್ಚಿನ ಸಮಯ ನೀಡುವುದರೊಂದಿಗೆ ಮಕ್ಕಳ ಹಿತಕ್ಕೆ ಪೂರಕವಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದರು. ಕೋವಿಡ್‍ನಂತಹ ಆರ್ಥಿಕ ಸಂಕಷ್ಟದ ಸಮಯದಲ್ಲೂ ಸರ್ಕಾರ ಯಾರೊಬ್ಬರಿಗೂ ವೇತನವನ್ನು ಕಡಿಮೆ ಮಾಡಿಲ್ಲ, ಸವಲತ್ತುಗಳನ್ನು ವ್ಯತ್ಯಯ ಮಾಡಿಲ್ಲ, ಹಾಗಾಗಿ ನಾವೆಲ್ಲರೂ ಇಂತಹ ಸವಾಲಿನ ಸಮಯದಲ್ಲಿ ಸಾಮಾಜಿಕ ಹೊಣೆಗಾರಿಕೆಯನ್ನು ಅರ್ಥೈಸಿಕೊಂಡು ಮುನ್ನಡೆಯಬೇಕಿದೆ ಎಂದು ಸಚಿವರು ಹೇಳಿದರು.

ಈಗಾಗಲೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳು ಆರಂಭವಾಗಿವೆ. ಈ ಕುರಿತು ಪ್ರಾಚಾರ್ಯರು ಮಕ್ಕಳಿಗೆ ತಿಳಿ ಹೇಳಬೇಕೆಂದರಲ್ಲದೇ ಪ್ರತಿಯೊಬ್ಬ ಪ್ರಾಚಾರ್ಯರಿಂದ ತಮ್ಮ ಕಾಲೇಜಿನ ಪರಿಸ್ಥಿತಿ, ಮಕ್ಕಳ ಹಾಜರಾತಿ, ಕಾಲೇಜು ಆರಂಭದ ಕುರಿತು ಅಭಿಪ್ರಾಯಗಳನ್ನು ಆಲಿಸಿದರು.

ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ವಿವಿಧ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರು, ಬಹುತೇಕ ವಿದ್ಯಾರ್ಥಿಗಳು, ಪೋಷಕರು ಪ್ರಥಮ ಪಿಯು ತರಗತಿಗಳನ್ನು ಜ.1ರಿಂದಲೇ ಆರಂಭಿಸಬೇಕಿತ್ತು. ಈಗಾಲಾದರೂ ಪ್ರಥಮ ಪಿಯು ತರಗತಿಗಳನ್ನಕು ಆರಂಭಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಪ್ರತಿದಿನವೂ ನಮಗೆ ಹಾಗೂ ಉಪನ್ಯಾಸಕರಿಗೆ ಪ್ರಥಮ ಪಿಯು ಆರಂಭಿಸಬೇಕೆಂದು ಒತ್ತಾಯಿಸಿ ದೂರವಾಣಿ ಕರೆ ಮಾಡುತ್ತಿದ್ದಾರೆ. ಕಾಲೇಜು ಆರಂಭವಾಗಿರುವುದರಿಂದ ಕಾಲೇಜಿಗೂ ಬಂದು ಒತ್ತಾಯಿಸುತ್ತಿದ್ದಾರೆ. ಪದವಿ ಪೂರ್ವ ಶಿಕ್ಷಣದಲ್ಲಿ ಪುನರ್ಮನನ ತರಗತಿಗಳನ್ನು ನಡೆಸಬೇಕು ಎನ್ನುತ್ತಿದ್ದಾರೆ. ನಾಳೆಯಿಂದಲೇ ಪ್ರಥಮ ಪಿಯು ತರಗತಿಗಳನ್ನು ಆರಂಭಿಸಬೇಕೆಂದು ಒತ್ತಾಯಿಸಿದರು. ಹಾಗೆಯೇ ಒಂದು ಬೆಂಚಿಗೆ ಇಬ್ಬರು ವಿದ್ಯಾರ್ಥಿಗಳಂತೆ ಕೂರಿಸಲು ಅನುವಾಗುವಂತೆ ಕೋವಿಡ್ ನಿಯಮಗಳಲ್ಲಿ ಸ್ವಲ್ಪ ಸಡಿಲಿಕೆ ಮಾಡಿ, ಮಕ್ಕಳು ಮನೆಯಿಂದ ಊಟ-ಉಪಹಾರ ತರಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು.

ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ಎದುರಿಸುವ ಮಕ್ಕಳು ಪ್ರಥಮ ಮತ್ತು ದ್ವಿತೀಯ ಪಿಯು ತರಗತಿಗಳ ಒಟ್ಟಾರೆ ಪಠ್ಯಗಳ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಬೇಕಿರುವುದರಿಂದ ಪಿಯು ತರಗತಿಗಳು ಮುಖ್ಯವಾಗಿದೆ. ಹಾಗೆಯೇ ಎಲ್ಲ ಪ್ರಾಚಾರ್ಯರು ಪ್ರಥಮ ಪಿಯು ತರಗತಿಗಳನ್ನು ಆರಂಭಿಸಬೇಕೆಂಬ ಪೋಷಕರ ಮತ್ತು ಮಕ್ಕಳ ಒಟ್ಟಾರೆ ಅಭಿಪ್ರಾಯಗಳು ಮತ್ತು ಈ ಸಭೆಯಲ್ಲಿ ವ್ಯಕ್ತವಾದ ಅಂಶಗಳನ್ನು ತಾವು ರಾಜ್ಯ ಕೋವಿಡ್ ತಾಂತ್ರಿಕ ಸಮಿತಿ ಗಮನಕ್ಕೆ ತಂದು ಶೀಘ್ರದಲ್ಲೇ ಪ್ರಥಮ ಪಿಯು ತರಗತಿಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

ಉಪನ್ಯಾಸಕರ ಕೊರತೆ:
ಪರೀಕ್ಷಾವಧಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಈಗಾಗಲೇ ಆರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಸಂಬಂಧಪಟ್ಟವರೊಂದಿಗೆ ಚರ್ಚಿಸಲಾಗುವುದೆಂದು ಹೇಳಿದ ಸುರೇಶ್ ಕುಮಾರ್, ಇಂತಹ ವಿಷಮ ಸಂದರ್ಭದಲ್ಲಿ ವಿದ್ಯಾರ್ಥಿ ಕಾಳಜಿಯುಳ್ಳ ಸೇವೆಯಿಂದ ನಿವೃತ್ತಿಯಾಗಿರುವ ಉಪನ್ಯಾಸಕರುಗಳು ಉಚಿತವಾಗಿ ಪಾಠ ಮಾಡಲು ಇಚ್ಛಿಸಿದಲ್ಲಿ ಅವರ ಸನಿಹದ ಕಾಲೇಜುಗಳಲ್ಲಿ ಅವಕಾಶ ನೀಡಲಾಗುತ್ತದೆ. ಈ ಬಗ್ಗೆ ಇಷ್ಟರಲ್ಲಿಯೇ ಎಲ್ಲರಿಗೂ ಪತ್ರ ಬರೆದು ಮನವಿ ಮಾಡಲಾಗುವುದು ಎಂದು ಹೇಳಿದರು.

ಪರೀಕ್ಷಾವಧಿ ಹತ್ತಿರವಾಗುತ್ತಿರುವುದರಿಂದ ಪಠ್ಯಭಾಗವನ್ನು ಪೂರ್ಣಗೊಳಿಸಬೇಕಾದ ಅಗತ್ಯದ ಹಿನ್ನೆಲೆಯಲ್ಲಿ ಈ ಸಂಕಷ್ಟದ ವರ್ಷದ ಮಿತಿಯಲ್ಲಿ ಕಾರ್ಯಭಾರ ಕಡಿಮೆಯಿರುವ ಕಾಲೇಜುಗಳಲ್ಲಿ ಕೆಲಸ ನಿರ್ವಹಿಸುವ ಉಪನ್ಯಾಸಕರು ವಾರದ ಮೂರು ದಿನ ಇನ್ನೊಂದು ಕಾಲೇಜಿನಲ್ಲಿ ಬೋಧನೆ ಮಾಡಬೇಕೆಂಬ ಪದವಿ ಪೂರ್ವ ಶಿಕ್ಷಣ ಇಲಾಖೆಯ ಡೆಪ್ಯುಟೇಷನ್ ಸುತ್ತೋಲೆಯನ್ನು ಹಿಂಪಡೆಯಬೇಕೆಂಬ ಉಪನ್ಯಾಸಕರ ಅಗ್ರಹವನ್ನು ಸಹಾನುಭೂತಿಯಿಂದ ಪರಿಶೀಲಿಸಲಾಗುವುದು. ಆದರೆ ಉಪನ್ಯಾಸಕರೂ ಸಹ ಮಕ್ಕಳ ಹಿತದೃಷ್ಟಿಯಿಂದ ಹೆಚ್ಚಿನ ಶ್ರಮ ವಹಿಸಲು ಮುಂದಾಗಬೇಕೆಂದು ಸಚಿವರು ಮನವಿ ಮಾಡಿದರು.

ಸಂಚಿತ ನಿಧಿ ಬಳಸಿ:
ಶಾಲಾ ಕಾಲೇಜುಗಳ ಸ್ಯಾನಿಟೈಸೇಷನ್ ಮತ್ತು ಶೌಚಾಲಯ ಸ್ವಚ್ಛತೆಯನ್ನು ಸರ್ಕಾರ ಪ್ರಸ್ತುತ ಸಂದರ್ಭದಲ್ಲಿ ಆಯಾ ಮಟ್ಟದ ಸ್ಥಳೀಯ ಸಂಸ್ಥೆಗಳಿಗೆ ವಹಿಸಿದೆ. ಅಗತ್ಯ ಬಿದ್ದರೆ ಶೌಚಾಲಯ ಸ್ವಚ್ಛತೆ ಹಾಗೂ ಗ್ರೂಪ್-ಡಿ ನೌಕರರ ನೇಮಕಕ್ಕೆ ಕಾಲೇಜು ಖಾತೆಯಲ್ಲಿರುವ ಸಂಚಿತ ನಿಧಿ ಹಣವನ್ನು ಬಳಸಿಕೊಳ್ಳಬಹುದಾಗಿದೆ ಎಂದೂ ಅವರು ಸೂಚಿಸಿದರು.

ವಿಧಾನಪರಿಷತ್ ಸದಸ್ಯ ಹಾಗೂ ರಾಜ್ಯ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಕೆ.ಟಿ. ಶ್ರೀಕಂಠೇಗೌಡ ಪ್ರಥಮ ಪಿಯು ತರಗತಿಗಳೂ ಪ್ರಮುಖವಾಗಿರುವುದರಿಂದ ಪ್ರಥಮ ಪಿಯು ತರಗತಿಗಳನ್ನು ತಡಮಾಡದೇ ಆರಂಭಿಸಬೇಕೆಂದು ಒತ್ತಾಯಿಸಿದರು.

ಸಭೆಯಲ್ಲಿ ರಾಜ್ಯ ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ನಿಂಗೇಗೌಡ, ಮಾಧ್ಯಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಗಂಗಾಧರ ಸೇರಿದಂತೆ 100ಕ್ಕೂ ಹೆಚ್ಚು ಪ್ರಾಚಾರ್ಯರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್. ಆರ್. ಉಮಾಶಂಕರ್, ಪಿಯು ಇಲಾಖೆ ನಿರ್ದೇಶಕರಿ ಆರ್. ಸ್ನೇಹಲ್ ಸೇರಿದಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಯಲಚೇನಹಳ್ಳಿಯಿಂದ ರೇಷ್ಮ ಸಂಸ್ಥೆವರೆಗಿನ ಮೆಟ್ರೋ ಹಸಿರು ಮಾರ್ಗ ಉದ್ಘಾಟನೆ

ಬೆಂಗಳೂರು: ಮೆಟ್ರೋ ರೈಲು ನಿಗಮ ನಿಯಮಿತ ವತಿಯಿಂದ ನೂತನವಾಗಿ ನಿರ್ಮಿಸಿರುವ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದಿಂದ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣದ ವರೆಗಿನ 6.00 ಕಿಮೀ. ಮೆಟ್ರೋ ಹಸಿರು ಮಾರ್ಗದ ಉದ್ಘಾಟನೆಯನ್ನು ಇಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಹರ್ ದೀಪ್ ಸಿಂಗ್ ಪುರಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಸಿರು ನಿಶಾನೆ ತೋರಿಸುವುದರ ಮೂಲಕ ನೆರವೇರಿಸಿದರು.

ನಗರದ ಕೋಣನಕುಂಟೆ ಕ್ರಾಸ್ ಮೆಟ್ರೋ ನಿಲ್ದಾಣದ ಆವರಣದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸದಾನಂದ ಗೌಡ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹಾಗೂ ಸಚಿವರುಗಳಾದ ಎಸ್.ಸುರೇಶ್ ಕುಮಾರ್, ಆರ್.ಅಶೋಕ್, ಬಿ.ಎ. ಬಸವರಾಜು, ಎಸ್.ಟಿ.ಸೋಮಶೇಖರ್ ಮತ್ತು ಸಂಸದ ಪಿ.ಸಿ.ಮೋಹನ್ ಅವರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು