ಬಿಜೆಪಿ ಅಂದ್ರೆ ಬ್ಲಾಕ್ ಮೇಲರ್ಸ್ ಜನತಾ ಪಕ್ಷ; ಡಿ.ಕೆ. ಶಿವಕುಮಾರ್ ವ್ಯಂಗ್ಯ

ಬೆಂಗಳೂರು:’ಬಿಜೆಪಿ ಎಂದರೆ ಬ್ಲಾಕ್ ಮೇಲರ್ಸ್ ಜನತಾ ಪಕ್ಷ. ಹಾಗೆಂದು ಆ ಪಕ್ಷದ ನಾಯಕರೇ ಹೇಳಿಕೊಂಡಿದ್ದಾರೆ. ಸಂಪುಟ ವಿಸ್ತರಣೆ ವಿಚಾರದಲ್ಲಿ ಬ್ಲಾಕ್ ಮೇಲ್, ಲಂಚದ ಆರೋಪ ಕೇಳಿ ಬಂದಿದ್ದು ಮುಖ್ಯಮಂತ್ರಿ ಯಡಿಯೂರಪ್ಪನವರು ನೈತಿಕ ಹೊಣೆ ಹೊರಬೇಕಿದೆ. ಈ ಬಗ್ಗೆ ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಯಾಗಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದ್ದಿಷ್ಟು;

‘ಮುಖ್ಯಮಂತ್ರಿ ಯಡಿಯೂರಪ್ಪನವರೇ ನಿನ್ನೆ ಸಂಪುಟ ವಿಸ್ತರಣೆ ಮಾಡಿದ್ದೀರ. ನೀವು ಯಾರನ್ನ ಬೇಕಾದರೂ ಮಾಡಿಕೊಳ್ಳಿ. ನಮ್ಮದು ಯಾವ ಅಭ್ಯಂತರವೂ ಇಲ್ಲ.

ನಿಮ್ಮವರೇ ಬ್ಲಾಕ್ ಮೇಲರ್ಸ್ ಸಂಪುಟ ಎಂದಿದ್ದಾರೆ. ನಿಮ್ಮ ಸಿಡಿಯ ಬಗ್ಗೆಯೂ ಮಾತನಾಡಿದ್ದಾರೆ.

ಬ್ಲಾಕ್ ಮೇಲರ್ ಗಳು, ಲಂಚ ನೀಡಿರುವವರು ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ ಎಂದು ನಿಮ್ಮದೇ ಪಕ್ಷದ ಕೇಂದ್ರ ಹಾಗೂ ರಾಜ್ಯದ ಮಾಜಿ ಸಚಿವರು, ಶಾಸಕರು ಹೇಳಿಕೆ ಕೊಟ್ಟಿದ್ದಾರೆ.

ನೀವು ಲಂಚ ಪಡೆದಿದ್ದೀರಿ ಎಂಬ ಮಾತುಗಳು ಕೇಳಿ ಬಂದಿವೆ. ಇದ್ಯಾವುದೂ ನನ್ನ ಹೇಳಿಕೆಯಲ್ಲ. ಇದೆಲ್ಲವೂ ಬಿಜೆಪಿ ಧ್ವನಿ.

ಸಿಡಿಯಲ್ಲಿ ಏನಿದೆ ಎಂಬುದು ಅದನ್ನು ನೋಡಿ, ಚರ್ಚೆ ಮಾಡಿರುವ ಬಿಜೆಪಿಯವರಿಗೆ ಗೊತ್ತಿದೆ.

ನಾನು ಕಾರವಾರದಲ್ಲೇ ಸಿಡಿ ಬಗ್ಗೆ ಹೇಳಿಕೆ ಕೊಟ್ಟಿದ್ದೆ. ಅದನ್ನ ತೆಗೆದಿಡಿ ಅಂತ ಹೋಂ ಮಿನಿಸ್ಟರ್ ಹೇಳಿದ್ದರು. ಈಗ ನಿಮ್ಮವರೇ ತೆಗೆದಿಡುತ್ತಿದ್ದಾರೆ ನೋಡಿ.

ಬಿಜೆಪಿಯವರೇ ಸಿಡಿ ಮತ್ತು ಲಂಚದ ಬಗ್ಗೆ ಹೇಳಿಕೆ ನೀಡ್ತಿದ್ದಾರೆ. ಇದು ಐಪಿಸಿ ಅಪರಾಧ ಆಗುತ್ತದೆ.

ಸಿಡಿ ಒಳಗೆ ಏನಿದೆ ಎಂಬುದು ನಿಮ್ಮವರಿಗೇ ಗೊತ್ತಿದೆ. ಇದರ ಜತೆ ಲಂಚದ ಬಗ್ಗೆಯೂ ಮಾತನಾಡಿದ್ದಾರೆ.

ಎಷ್ಟು ಲಂಚ ಕೊಟ್ಟಿದ್ದಾರೆ? ಮತ್ತೊಬ್ಬ ಸಚಿವರು ಅದೆಷ್ಟೋ ಖರ್ಚು ಮಾಡಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಇದೆಲ್ಲದಕ್ಕೂ ಉತ್ತರ ಸಿಗಬೇಕಲ್ಲವೇ?

ಇಷ್ಟೆಲ್ಲಾ ಆಗುತ್ತಿದ್ದರೂ ಇಡಿ, ಐಟಿ, ಎಸಿಬಿ ಏನು ಮಾಡ್ತಿವರ? ಈ ಸಂಸ್ಥೆಗಳು ಯಾಕೆ ಸುಮ್ಮನಿವೆ? ಇವರೆಲ್ಲರೂ ಸುಮೋಟೋ ಕೇಸ್ ಯಾಕೆ ದಾಖಲಿಸುತ್ತಿಲ್ಲ?

ಬ್ಲಾಕ್ ಮೇಲ್, ಲಂಚ ಆರೋಪದ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು. ಹೈಕೋರ್ಟ್ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಈ ತನಿಖೆ ನಡೆಯಬೇಕು.

ಐಟಿ,ಇಡಿಯವರು ಸುಮೋಟೋ ಕೇಸ್ ಹಾಕಬೇಕು ಎಂದು ಕಾಂಗ್ರೆಸ್ ಪಕ್ಷ ಒತ್ತಾಯಿಸುತ್ತದೆ.

ಮುಖ್ಯಮಂತ್ರಿ ಯಡಿಯೂರಪ್ಪನವರೇ ನಿಮ್ಮ ನಾಯಕರೇ ಇಷ್ಟೆಲ್ಲಾ ಆರೋಪ ಮಾಡಿರುವಾಗ ನೀವು ನೈತಿಕ ಹೊಣೆ ಹೊರಬೇಕಿದೆ.’

ರೈತರ ಪರ ಇದೇ 20 ರಂದು ರಾಜಭವನ ಚಲೋ; ಡಿ.ಕೆ. ಶಿವಕುಮಾರ್

ಬೆಂಗಳೂರು:’ರೈತರಿಗೆ ಮಾರಕವಾಗಿರುವ ಕೃಷಿ ಕರಾಳ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ, ವಿದ್ಯುತ್, ಆಸ್ತಿ ತೆರಿಗೆ, ಇಂಧನ ಬೆಲೆ ಏರಿಕೆಯಂತಹ ಸರ್ಕಾರದ ಜನ ವಿರೋಧಿ ನಿರ್ಧಾರ ಖಂಡಿಸಿ ಇದೇ 20 ರಂದು ರಾಜಭವನ ಚಲೋ ಹಮ್ಮಿಕೊಳ್ಳಲಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಗುರುವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶಿವಕುಮಾರ್ ಅವರು ಹೇಳಿದ್ದಿಷ್ಟು;

‘ನಾಡಿನ ಜನರಿಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಕಳೆದ ವರ್ಷ ಬಂದ ಸಂಕಟ ಈ ವರ್ಷ ಯಾರಿಗೂ ಬಾರದಿರಲಿ. ಈ ವರ್ಷ ರೈತರಿಗೆ ಒಳ್ಳೆಯ ಮಳೆ, ಬೆಳೆ, ಬೆಳೆಗೆ ಉತ್ತಮ ಬೆಲೆ ಸಿಗಲಿ. ರಾಜ್ಯ ಹಾಗೂ ರಾಷ್ಟ್ರ ಸುಭೀಕ್ಷವಾಗಿರಲಿ ಎಂದು ಆಶಿಸುತ್ತೇನೆ.

ಬಿಜೆಪಿ ಸರ್ಕಾರದ ಕೃಷಿ ಕರಾಳ ಕಾಯ್ದೆ ವಿರುದ್ಧ ಇಡೀ ದೇಶದ ರೈತರು ವಿಶ್ವವೇ ಗಮನಿಸುವಂತಹ ದೊಡ್ಡ ಮಟ್ಟದ ಹೋರಾಟ ನಡೆಸುತ್ತಿದ್ದಾರೆ.

ಸುಪ್ರೀಂ ಕೋರ್ಟ್ ಕೂಡ ರೈತರ ನೋವು ಅರಿತು ಈ ಕಾಯ್ದೆಗೆ ತಾತ್ಕಾಲಿಕ ತಡೆ ನೀಡಿದೆ.

ಸುಪ್ರೀಂಕೋರ್ಟ್ ರಚಿಸಿರುವ ಸಮಿತಿ ಬಗ್ಗೆ ನಮ್ಮ ಪಕ್ಷ ಈಗಾಗಲೇ ತನ್ನ ಅಭಿಪ್ರಾಯ ತಿಳಿಸಿದೆ.

ತಡೆಯಾಜ್ಞೆ ರೈತರಿಗೆ ಸಮಾಧಾನ ತಂದಿಲ್ಲ. ಹೀಗಾಗಿ ಮುಂದೆಯೂ ಕೂಡ ರೈತರ ಪರವಾಗಿ ಕಾಂಗ್ರೆಸ್ ನಿಲ್ಲಲಿದೆ.

ನಾಳೆ 15 ರಂದು ರಾಷ್ಟ್ರಾದ್ಯಂತ ರೈತರಿಗೆ ಬೆಂಬಲವಾಗಿ ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಆಂದೋಲನ ಮಾಡುತ್ತಿದೆ.

ಎಲ್ಲಾ ರಾಜ್ಯಗಳಲ್ಲಿ ರಾಜಭವನ ಮುತ್ತಿಗೆ ನಡೆಯಲಿದೆ. ಆ ಮೂಲಕ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ಈ ಕರಾಳ ಕಾಯ್ದೆ ಹಿಂಪಡೆಯಲು ಆಗ್ರಹಿಸಲಾಗುವುದು.

ರಾಜ್ಯದಲ್ಲಿ ದೆಹಲಿ ನಾಯಕರೊಂದಿಗೆ ಚರ್ಚಿಸಿ ರೈತರಿಗೆ ಶಕ್ತಿ ತುಂಬಲು ಇದೇ 20 ರಂದು ಬೃಹತ್ ಚಳುವಳಿ ಹಮ್ಮಿಕೊಂಡಿದ್ದು, ಫ್ರೀಡಂಪಾರ್ಕ್ ನಿಂದ ರಾಜಭವನದವರೆಗೆ ಮೆರವಣಿಗೆ ನಡೆಯಲಿದೆ. ಜತೆಗೆ ರಾಜಭವನ ಮುತ್ತಿಗೆ ಹಾಕುತ್ತೇವೆ. ರಾಜ್ಯದ ಎಲ್ಲಾ ರೈತರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದರ ಜತೆಗೆ ಪೆಟ್ರೋಲ್,ಡಿಸೇಲ್ ಬೆಲೆ ಏರಿಕೆ ವಿರುದ್ಧವೂ ಹೋರಾಟ ಮಾಡುತ್ತಿದ್ದೇವೆ.

ಕೊರೋನಾದಿಂದಾಗಿ ರಾಜ್ಯದಲ್ಲಿ ವ್ಯಾಪಾರ ವಹಿವಾಟು ನಿಂತು ಹೋಗಿದ್ದು ಜನ ನರಳಾಡಿದ್ದಾರೆ. ಸರ್ಕಾರ ಯಾರ ಪರವಾಗಿಯೂ ನಿಂತಿಲ್ಲ.

ಈಗ ಚೇತರಿಸಿಕೊಳ್ಳುವ ಹಂತದಲ್ಲಿ ಮೂರು ಭಾರಿ ವಿದ್ಯುತ್ ಬೆಲೆ ಏರಿಕೆ ಮಾಡ್ತಿದ್ದಾರೆ.

ಗ್ಯಾಸ್ ಬೆಲೆಯೂ ಏರಿಕೆಯಾಗಿದೆ. ಪೆಟ್ರೋಲ್,ಡಿಸೇಲ್ ಬೆಲೆ ಹೆಚ್ಚುತ್ತಲೇ ಇದೆ.

ಇದೆಲ್ಲದರ ಬಗ್ಗೆಯೂ 20 ರಂದು ಪ್ರತಿಭಟನೆ ನಡೆಸಲಿದ್ದೇವೆ.

ಪ್ರಾಪರ್ಟಿ ಟ್ಯಾಕ್ಸ್ ಮನ್ನಾಗೆ ನಾವು ಆಗ್ರಹಿಸುತ್ತಿರುವಾಗ, ವಿಶೇಷ ತೆರಿಗೆಯನ್ನು ಸರ್ಕಾರ ವಿಧಿಸಿದೆ. ಖಾಲಿ ಜಾಗ ಇಟ್ಟುಕೊಂಡಿದ್ರೂ ಟ್ಯಾಕ್ಸ್ ಬೀಳಲಿದೆ. ಈ ಮೂಲಕ ಹಣ ವಸೂಲಿಗೆ ಸರ್ಕಾರ ಮುಂದಾಗಿದೆ. ಈ ಎಲ್ಲ ವಿಚಾರವಾಗಿ ನಮ್ಮ ಹೋರಾಟ ನಡೆಯಲಿದೆ.’

ಏಳು ಜನ್ಮ ಎತ್ತಿ ಬಂದರೂ ಕಾಂಗ್ರೆಸ್ ನಿರ್ಮೂಲನೆ ಅಸಾಧ್ಯ:

‘ನಿನ್ನೆ ಮುಖ್ಯಮಂತ್ರಿಗಳು ಕಾಂಗ್ರೆಸ್ ದೇಶಕ್ಕೆ ಮಾರಕ. ದೇಶವನ್ನು ಕಾಂಗ್ರೆಸ್ ಮುಕ್ತ ಮಾಡ್ತೇವೆ ಅಂದಿದ್ದಾರೆ.

ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ.

ನಿಮ್ಮ ಪಾರ್ಟಿಯಲ್ಲಿರುವವರೆಲ್ಲ ಕಾಂಗ್ರೆಸ್ಸಿಗರೇ. ಅವರ ಇತಿಹಾಸ ಕಾಂಗ್ರೆಸ್.

ಏಳು ಜನ್ಮ ಹುಟ್ಟಿಬಂದ್ರೂ ಕಾಂಗ್ರೆಸ್ ಮುಕ್ತಮಾಡಲು ಸಾಧ್ಯವಿಲ್ಲ.

ನೀವು ಅಧಿಕಾರಕ್ಕೆ ಬಂದು ನಿಮಗೆ ಮಾತನಾಡುವ ಶಕ್ತಿ ಬಂದಿದ್ದೇ ಕಾಂಗ್ರೆಸ್ಸಿನಿಂದ. ನಾವು ತಯಾರು ಮಾಡಿದ ನಾಯಕರಿಂದ ಎಂಬುದನ್ನು ನೀವು ಮರೆಯಬೇಡಿ.

ಈ ದೇಶಕ್ಕೆ ಸಂವಿಧಾನ ತಂದಿದ್ದು ಕಾಂಗ್ರೆಸ್ ಪಕ್ಷ. ಈ ದೇಶದ ಬುನಾದಿಯೇ ಕಾಂಗ್ರೆಸ್ ಬುನಾದಿ.

ಕಾಂಗ್ರೆಸ್ ಪಕ್ಷ ನಿರ್ಮೂಲನೆ ಮಾಡುವ ಬಗ್ಗೆ ನಿಮ್ಮ ತಲೆಯಲ್ಲಿರುವ ಭ್ರಮೆಯನ್ನ ತೆಗೆದು ಹಾಕಿ.’

ರಾಜ್ಯ ಸಚಿವ ಸಂಪುಟ ವಿಸ್ತರಣೆ: ಸಪ್ತ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು, ಜನವರಿ 13: ರಾಜ್ಯ ಸಚಿವ ಸಂಪುಟಕ್ಕೆ ಇಂದು ನೂತನವಾಗಿ ಸಂಪುಟ ದರ್ಜೆಯ ಏಳು ಮಂತ್ರಿಗಳು ಸೇರ್ಪಡೆಗೊಂಡರು. ರಾಜಭವನ ಗಾಜಿನ ಮನೆಯಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಜೂಬಾಯಿ ವಾಲಾ ಅವರು ನೂತನ ಸಚಿವರುಗಳಿಗೆ ಅಧಿಕಾರಪದ ಹಾಗೂ ಗೋಪ್ಯತೆ ಪ್ರಮಾಣವಚನ ಬೋಧಿಸಿದರು.

ವಿಧಾನ ಪರಿಷತ್ತಿನ ಸದಸ್ಯರಾದ ಎಂ.ಟಿ.ಬಿ. ನಾಗರಾಜ್, ಸಿ. ಪಿ.ಯೋಗೇಶ್ವರ್ ಹಾಗೂ ಆರ್. ಶಂಕರ್ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸುಳ್ಯ ವಿಧಾನಸಭಾ ಕ್ಷೇತ್ರದ ಎಸ್. ಅಂಗಾರ ಅವರು ಮೊದಲ ಬಾರಿಗೆ ಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಬೆಂಗಳೂರಿನ ಮಹದೇವಪುರ ಕ್ಷೇತ್ರ ಶಾಸಕ ಅರವಿಂದ ಲಿಂಬಾವಳಿ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಬಾಗಲಕೋಟೆ ಜಿಲ್ಲೆಯ ಬೀಳಗಿ ವಿಧಾನ ಸಭಾಕ್ಷೇತ್ರದ ಶಾಸಕ ಮುರುಗೇಶ್ ನಿರಾಣಿ ಹಾಗೂ ಹುಕ್ಕೇರಿ ವಿಧಾನ ಕ್ಷೇತ್ರದ ಶಾಸಕ ಉಮೇಶ್ ಕತ್ತಿ ಅವರು ದೇವರು ಹಾಗೂ ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಪ ಮುಖ್ಯಮಂತ್ರಿಗಳಾದ ಡಾ: ಅಶ್ವಥ್‍ನಾರಾಯಣ್ ಹಾಗೂ ಲಕ್ಷ್ಮಣ ಸಂಗಪ್ಪ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವಸತಿ ಸಚಿವ ವಿ. ಸೋಮಣ್ಣ, ಕಂದಾಯ ಸಚಿವ ಆರ್. ಅಶೋಕ್ ಸೇರಿದಂತೆ ಅನೇಕ ಸಚಿವರುಗಳು ಹಾಗೂ ರಾಜ್ಯದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರು ಸೇರಿದಂತೆ ಹಿರಿಯ ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.

ಜನವರಿ 15ರಿಂದ ಪದವಿ, ಸ್ನಾತಕೋತ್ತರ, ಎಂಜಿನಿಯರಿಂಗ್‌, ಡಿಪ್ಲೊಮೋ ಆಫ್‌ಲೈನ್‌ ತರಗತಿ ಆರಂಭ

ಬೆಂಗಳೂರು: ಪದವಿ, ಸ್ನಾತಕೋತ್ತರ, ಎಂಜಿನಿಯರಿಂಗ್‌ ಮತ್ತು ಡಿಪ್ಲೊಮೋ ತರಗತಿಗಳ ಎಲ್ಲ ವರ್ಷಗಳ ವಿದ್ಯಾರ್ಥಿಗಳಿಗೆ ಆಫ್‌ಲೈನ್‌ ತರಗತಿಗಳನ್ನು ಇದೇ 15ರಿಂದ ಆರಂಭಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರಕಟಿಸಿದರು.

ಈ ಸಂಬಂಧ ಬೆಂಗಳೂರಿನಲ್ಲಿ ಸೋಮವಾರ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಡಿಸಿಎಂ ಅವರು, ಅಂತಿಮ ವರ್ಷದ ಆಫ್‌ಲೈನ್‌ ತರಗತಿಗಳು ಈಗಾಗಲೇ ಆರಂಭವಾಗಿ ಯಶಸ್ವಿಯಾಗಿ ನಡೆಯುತ್ತಿವೆ. ಉಳಿದಂತೆ ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳು ಕೂಡ ತಮಗೂ ನೇರ ತರಗತಿಗಳನ್ನು ಆರಂಭಿಸುವಂತೆ ಒತ್ತಾಯ ಮಾಡುತ್ತಿದ್ದರು. ಅದರಂತೆ, ಈ ತಿಂಗಳಿನಿಂದಲೇ ತರಗತಿಗಳನ್ನು ಆರಂಭ ಮಾಡುತ್ತಿದ್ದೇವೆ ಎಂದರು.

ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಪ್ರಥಮ, ದ್ವಿತೀಯ ಹಾಗೂ ಮೂರನೇ ವರ್ಷದ ಆಫ್‌ಲೈನ್‌ ತರಗತಿಗಳು ಕೂಡ ಇದೇ ದಿನ ಶುರುವಾಗುತ್ತಿವೆ ಎಂದು ಡಿಸಿಎಂ ಮಾಹಿತಿ ನೀಡಿದರು.

ಇದರ ಜತೆಗೆ, ತರಗತಿಗಳು ಆರಂಭವಾಗುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳನ್ನು ತೆರೆಯಲಾಗುತ್ತಿದೆ. ಕಾಲೇಜುಗಳ ಬಸ್‌ ವ್ಯವಸ್ಥೆಯೂ ಪುನಾರಂಭವಾಗುತ್ತಿದೆ ಎಂದ ಅವರು, ಕೋವಿಡ್‌ ಮಾರ್ಗಸೂಚಿಯಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಕಾಲೇಜುಗಳಲ್ಲಿ ಕೋವಿಡ್‌ ತಪಾಸಣೆ, ಸ್ಯಾನಿಟೈಸ್ ವ್ಯವಸ್ಥೆ, ದೈಹಿಕ ಅಂತರ ಪಾಲನೆ ಸೇರಿದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳೂ ಇರುತ್ತವೆ ಎಂದರು.

ಬಸ್‌ ಪಾಸ್‌ ಬಗ್ಗೆಯೂ ಕ್ರಮ: ಈಗಾಗಲೇ ವಿದ್ಯಾರ್ಥಿಗಳ ಸಂಚಾರಕ್ಕೆ ಅನುಕೂಲವಾಗುವಂತೆ ಬಸ್‌ ಪಾಸ್‌ಗಳನ್ನು ತ್ವರಿತವಾಗಿ ವಿತರಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಸಾರಿಗೆ ಇಲಾಖೆಯು ಒಪ್ಪಿದ್ದು, ಆಯಾ ಕಾಲೇಜುಗಳು ತಮ್ಮ ವ್ಯಾಪ್ತಿಯಲ್ಲಿರುವ ಸಾರಿಗೆ ವಿಭಾಗೀಯ ಕಚೇರಿಗಳ ಅಧಿಕಾರಿಗಳ ಜತೆ ಸಂಪರ್ಕ ಸಾಧಿಸಿ ಆದಷ್ಟು ಬೇಗ ಬಸ್‌ಪಾಸ್‌ಗಳ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

ಎನ್ ಸಿ ಸಿ ಮತ್ತು ‌ಎನ್ ಎಸ್ ಎಸ್ ತರಬೇತಿಗೂ ಅವಕಾಶ ನೀಡಲಾಗಿದೆ. ಎನ್ ಸಿ ಸಿ ಕೂಡ ಪರೀಕ್ಷೆ ಗಳನ್ನು ಆಯೋಜಿಸಬೇಕಾಗಿದ್ದು ಇದಕ್ಕಾಗಿ ಅಲ್ಪಾವಧಿಯ ಶಿಬಿರಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಬಿ- ಸರ್ಟಿಫಿಕೇಟ್ ಪರೀಕ್ಷೆ ಗೆ ಮೂರು ದಿನಗಳ ಹಾಗೂ ಸಿ- ಸರ್ಟಿಫಿಕೇಟ್ ಪರೀಕ್ಷೆ ಗೆ ಐದು ದಿನಗಳ ಶಿಬಿರ ‌ನಡೆಸುವುದಕ್ಕೂ ಅವಕಾಶ ನೀಡಲಾಗಿದೆ ಎಂದು ಡಿಸಿಎಂ ಹೇಳಿದರು.

ಪ್ರತ್ಯೇಕ ಎಸ್‌ಒಪಿ: ಪೂರ್ಣ ಪ್ರಮಾಣದಲ್ಲಿ ಹಾಸ್ಟೆಲ್‌ಗಳನ್ನು ತೆರೆಯಲು ನಿರ್ಧರಿಸಲಾಗಿದ್ದು, ಅದಕ್ಕಾಗಿ ಪ್ರತ್ಯೇಕ ಮಾರ್ಗಸೂಚಿ (ಎಸ್‌ಒಪಿ) ಸಿದ್ಧಪಡಿಸುವಂತೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಗಳನ್ನು ಕೋರಲಾಗಿದೆ. ಕಾಲೇಜುಗಳಲ್ಲಿ ಗ್ರಂಥಾಲಯ, ಕ್ಯಾಂಟೀನ್‌, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆ, ಕ್ರೀಡಾಕೂಟ ಆಯೋಜನೆಗೂ ಎಸ್‌ಒಪಿಯನ್ನು ಸಿದ್ಧಪಡಿಸಲಾಗಿದೆ ಎಂದು ಡಿಸಿಎಂ ತಿಳಿಸಿದರು.

ಪರೀಕ್ಷೆ ವೇಳಾಪಟ್ಟಿ ಶೀಘ್ರ: ಅಂತಿಮವಾಗಿ, ಏಕಕಾಲಕ್ಕೆ ಎಲ್ಲೆಡೆ ಆಫ್‌ಲೈನ್‌ನಲ್ಲಿಯೇ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಈಗಾಗಲೇ ರಾಜ್ಯದ ಎಲ್ಲ ಸರಕಾರಿ-ಖಾಸಗಿ ವಲಯದ ವಿವಿಗಳ ಕುಲಪತಿಗಳ ಜತೆ ಸಮಾಲೋಚನೆ ನಡೆಸಲಾಗಿದೆ. ಆದಷ್ಟು ಬೇಗ ಪರೀಕ್ಷೆ ದಿನದ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು ಉಪ ಮುಖ್ಯಮಂತ್ರಿ.

ಪದವಿ ಮತ್ತು ಸ್ನಾತಕೋತ್ತರ ತರಗತಿಗಳನ್ನು ಆರಂಭಿಸುವ ಕುರಿತ ಡಿಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್, ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೆದ್ ಅಖ್ತರ್, ಹಿಂದುಳಿದ ವರ್ಗಗಳ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರವಿಕುಮಾರ ಸುರಪುರ್, ಹಿಂದುಳಿದ ವರ್ಗಗಳ ಇಲಾಖೆ ಆಯುಕ್ತ ವಸಂತ ಕುಮಾರ್ ಮುಂತಾದ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು

ಜನರ ಸಮಸ್ಯೆಗಳಿಗೆ ಅನುಗುಣವಾಗಿ ಕಾರ್ಯಕ್ರಮ: ಡಿಕೆಶಿ

ಹುಬ್ಬಳ್ಳಿ: ಪ್ರತಿ ಕ್ಷೇತ್ರದಲ್ಲಿ ಜನರ ಸಮಸ್ಯೆಗಳು, ಅವರ ಅಭಿಪ್ರಾಯ ಏನು ಎಂಬುದು ತಿಳಿದು, ನಂತರ ಅದಕ್ಕನುಗುಣವಾಗಿ ಹೋರಾಟ ಹಾಗೂ ಪಕ್ಷ ಸಂಘಟನೆ ಕೆಲಸ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿರುವ ಸಮಸ್ಯೆಗಳೇನು? ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಏನೇನು ಸಮಸ್ಯೆಗಳಿವೆ? ಜನರ ಧ್ವನಿ ಹಾಗೂ ಅಭಿಪ್ರಾಯ ಏನು ಎಂಬುದನ್ನು ತಿಳಿಯಲು ಬ್ಲಾಕ್, ಜಿಲ್ಲಾ ಮಟ್ಟದ ಅಧ್ಯಕ್ಷರು ಹಾಗೂ ವಿವಿಧ ಘಟಕಗಳ ಅಧ್ಯಕ್ಷರುಗಳನ್ನು ಕರೆದು ಚರ್ಚೆ ಮಾಡುತ್ತಿದ್ದೇವೆ. ಅವರ ಅಭಿಪ್ರಾಯಗಳನ್ನು ಆಲಿಸಿದ ನಂತರ, ಪ್ರತಿ ಕ್ಷೇತ್ರದಲ್ಲೂ ಪ್ರತ್ಯೇಕ ಹೋರಾಟ ನಡೆಸುತ್ತೇವೆ. ಈ ವರ್ಷವನ್ನು ಹೋರಾಟದ ವರ್ಷ, ಸಂಘಟನೆ ವರ್ಷ ಎಂದು ಘೋಷಿಸಿದ್ದೇವೆ.

ಪ್ರತಿ ಕ್ಷೇತ್ರದಲ್ಲಿಯೂ ಅನೇಕ ಸಮಸ್ಯೆಗಳಿವೆ. ಜತೆಗೆ ಕೊರೋನಾ ಸಂದರ್ಭದಲ್ಲಿ ಆಡಳಿತ ವೈಫಲ್ಯದಿಂದ ಜನ ಸಾಕಷ್ಟು ನೊಂದಿದ್ದಾರೆ. ರೈತರು, ಕಾರ್ಮಿಕರಿಗೆ ಬಹಳ ತೊಂದರೆಯಾಗಿದೆ. ಇದೆಲ್ಲದರ ಬಗ್ಗೆ ನಮ್ಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಜನರ ರಾಯಭಾರಿಗಳಾಗಿ ನಮಗೆ ಮಾಹಿತಿ ನೀಡಲಿದ್ದಾರೆ.

ಚುನಾವಣೆ ಇರಲಿ, ಇಲ್ಲದಿರಲಿ ನಮ್ಮ ಕಾರ್ಯಕರ್ತರು ನಿರಂತರ ಹೋರಾಟ ಮುಂದುವರೆಸಲಿದ್ದಾರೆ. ಕಾಂಗ್ರೆಸ್ ಪಕ್ಷ ತನ್ನ ಕಾಲ ಮೇಲೆ ನಿಂತು ಹೋರಾಟ ಮಾಡಿ  ಚುನಾವಣೆ ಗೆಲ್ಲಲು ಬೇಕಾದ ಕಾರ್ಯಕ್ರಮಗಳನ್ನಷ್ಟೇ ರೂಪಿಸುತ್ತಿದ್ದೇವೆ.

ಟಿಕೆಟ್ ನೀಡುವುದು ಹೈಕಮಾಂಡ್ ನಿರ್ಧಾರ; ಡಿ.ಕೆ. ಶಿವಕುಮಾರ್

ಬೆಂಗಳೂರು:’ಬೆಳಗಾವಿ ಲೋಕಸಭಾ ಕ್ಷೇತ್ರ, ಬಸವಕಲ್ಯಾಣ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ರಾಜ್ಯದಿಂದ ನಾವು ಹೆಸರುಗಳನ್ನು ಶಿಫಾರಸು ಮಾಡಲಿದ್ದು, ಅಂತಿಮ ತೀರ್ಮಾನ ಹೈಕಮಾಂಡ್ ತೆಗೆದುಕೊಳ್ಳಲಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಈ ಭಾಗದ ಮುಖಂಡರ ಜತೆ ಶನಿವಾರ ಸಮಾಲೋಚನೆ ನಡೆಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಿಷ್ಟು;

‘ಬೆಳಗಾವಿ, ಬಸವ ಕಲ್ಯಾಣ ಉಪ ಚುನಾವಣೆಗೆ ಸಂಬಂಧಿಸಿದಂತೆ ಈ ಭಾಗದ ಮುಖಂಡರ ಸಭೆ ಕರೆದು, ಅವರ ಅಭಿಪ್ರಾಯ ಪಡೆದಿದ್ದೇವೆ. ಅನೇಕ ಸಲಹೆಗಳು ಬಂದಿದ್ದು, ನಾನು ಹುಬ್ಬಳ್ಳಿ ಹೋಗಿ ಬಂದ ಮೇಲೆ ಮಸ್ಕಿ ಸೇರಿದಂತೆ ಮೂರು ಕ್ಷೇತ್ರದ ಅಭ್ಯರ್ಥಿಗಳ ಶಿಫಾರಸ್ಸನ್ನು ದೆಹಲಿಗೆ ಕಳುಹಿಸಿಕೊಡುತ್ತೇವೆ. ಯಾರಿಗೆ ಟಿಕೆಟ್ ನೀಡಬೇಕು ಎಂದು ವರಿಷ್ಠರು ತೀರ್ಮಾನ ಮಾಡುತ್ತಾರೆ. ಅಂತಿಮ ಪಟ್ಟಿಯನ್ನು ನಾನು ಮಾಡುವುದಿಲ್ಲ. ನಾನು ಹೆಸರುಗಳನ್ನು ಶಿಫಾರಸು ಮಾತ್ರ ಮಾಡುತ್ತೇನೆ.

ವಂಚಕ ಯುವರಾಜ್ ಜತೆ ಸಚಿವರ ಸಂಪರ್ಕದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ನಂತರ ಪ್ರತಿಕ್ರಿಯೆ ನೀಡುತ್ತೇನೆ.’