ಎಲ್ಲಾರೂ ಸಂತೋಷವಾಗಿದೀರಾ? – ವಿದ್ಯಾರ್ಥಿಗಳಿಗೆ ಮೇಷ್ಟ್ರಾಗಿ ವಿಶ್ವಾಸ‌ ತುಂಬಿದ‌‌‌ ಸುರೇಶ್‌ಕುಮಾರ್

ತುಮಕೂರು:ರಜಾ ಇದ್ದ ಆರು ತಿಂಗಳು ಏನು‌ ಮಾಡ್ತಿದ್ರಿ? ಸಂವೇದಾ ಟೀವಿ ಪಾಠಗಳು ಚೆನ್ನಾಗಿದ್ವಾ? ಆರೋಗ್ಯ ಕೆಡಿಸಿಕೊಳ್ಳಕ್ಕೆ ನಿಮಗೆ ಹಕ್ಕೇ ಇಲ್ಲಾ‌‌ ಗೊತ್ತಾ? ಎಕ್ಸಾಂ ಬೇಕೋ ಬೇಡ್ವೋ? ಕೂಲಿ ಕಾರ್ಮಿಕನ ಮಗ  ಮಹೇಶ್ ಎಸ್ ಎಸ್.ಎಲ್.ಸಿ ಪರೀಕ್ಷೆಯಲ್ಲಿ 616 ಅಂಕ ತೆಗೆದದ್ದು ಯಾಕೆ ಮತ್ತು ಹೇಗೆ ಗೊತ್ತಾ? ಸುಧಾ ಮೂರ್ತಿ ಯಾರು ಗೊತ್ತಾ? ಹೀಗೆ ಪ್ರಶ್ನೆಗಳ ಮೇಲೆ‌ ಪ್ರಶ್ನೆ ಕೇಳುತ್ತಾ ಶಿಕ್ಷಣ ಸಚಿವ ಸುರೇಶ್ ಕುಮಾರ್‌ ಇಂದು ಮಕ್ಕಳಿಗೆ ಮತ್ತೊಮ್ಮೆ ಆಪ್ತ ಮೇಷ್ಟ್ರಾದರು.‌

ಇಂದು‌ ತುಮಕೂರಿನ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಹಲವಾರು ಶಾಲೆಗಳಿಗೆ ಬೆಳ್ಳಂಬೆಳಗ್ಗೆಯೇ‌  ಭೇಟಿ ಕೊಟ್ಟ ಸುರೇಶ್‌ಕುಮಾರ್ ಚೆನ್ನಾಗಿ ಓದಿ ಅಂತ ಪ್ರಾಮಿಸ್ ಮಾಡ್ತೀರಾ ಅಂತ ಮಕ್ಕಳನ್ನು ಪ್ರಶ್ನೆ ಮಾಡಿ ಅವರ ಮನಸೂರೆಗೊಂಡರು. ಎಕ್ಸಾಂ ಬೇಕೇ ಬೇಕು ಅಂದ ಮಕ್ಕಳಿಗೆ ಯಾಕೆ ಬೇಕೆಂದು ಕೇಳಿದ ಸುರೇಶ್ ಕುಮಾರ್ ಭವಿಷ್ಯಕ್ಕೆ ಓದೇ ಮುಖ್ಯ ಅಂದ ಮಕ್ಕಳ ಬೆನ್ತಟ್ಟಿದರು.

ಬಾಗಲಕೋಟೆಯ ಜಮಖಂಡಿ ಬಳಿಯ ಸಾವಳಗಿ ಗ್ರಾಮದ ಸಂಜು, ಕೂಲಿ ಕಾರ್ಮಿಕರ ಮಗನಾದ ಮಹೇಶ ಅಂಥಹ ಅಸಂಖ್ಯ ವಿದ್ಯಾರ್ಥಿಗಳ ಸಾಧನೆ ನಮ್ಮೆಲ್ಲರಿಗೆ ಪ್ರೇರೇಪಣೆ ನೀಡಬೇಕೆಂದು ಉದಾಹರಿಸಿದಾಗ ವಿದ್ಯಾರ್ಥಿಗಳು ರೋಮಾಂಚನಗೊಂಡರು. ಜಪಾನ್ ದೇಶ ಕೊರೋನಾ ಹೇಗೆ ಗೆದ್ದಿತು ಗೊತ್ತಾ ಎಂದು ಕೇಳಿ ಸ್ವಚ್ಛತೆಯ ಬಗ್ಗೆ ಪಾಠ ಮಾಡಿದರು. ಸಂತೋಷವಾಗಿರೋದು ಓದಿಗೆ ಅತೀ ಮುಖ್ಯ ಹೇಗೆ ಎಂದು ವಿವರಿಸಿದರು.

ಕೊರಟಗೆರೆ, ಮಧುಗಿರಿ, ಪಾವಗಡ ತಾಲ್ಲೂಕುಗಳ ವಿವಿಧ ಶಾಲೆಗಳಿಗೆ ಬೆಳಗ್ಗೆಯಿಂದಲೇ ಭೇಟಿ ನೀಡಿದ ಸಚಿವ ಸುರೇಶ್ ಕುಮಾರ್, ಮಕ್ಕಳ ಹಿತವನ್ನು ಗಮನದಲ್ಲಿಟ್ಟುಕೊಂಡು ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ಅಧಿಕಾರಿಗಳಿಗೆ, ಶಿಕ್ಷಕರಿಗೆ ಸೂಚನೆಗಳನ್ನು ನೀಡಿದರು.‌ ಅವರೊಂದಿಗೆ ಜಿಲ್ಲೆಯ ಶಿಕ್ಷಣ ಇಲಾಖಾಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು‌ ಉಪಸ್ಥಿತರಿದ್ದರು.

ಕಲಿಯುತ್ತಾ ನಲಿಯೋಣ ಆಕಾಶವಾಣಿ‌ಯಲ್ಲಿ ವಿನೂತನ ಕಾರ್ಯಕ್ರಮ ಜನವರಿ 11 ರಿಂದ: ಸುರೇಶ್ ಕುಮಾರ್

ಸಂಗ್ರಹ ಚಿತ್ರ:

ಬೆಂಗಳೂರು: ಶಿಕ್ಷಣ ಇಲಾಖೆ, ಆಕಾಶವಾಣಿ ಮೂಲಕ ಜನವರಿ 11 ರಿಂದ ಕಲಿಯುತ್ತಾ ನಲಿಯೋಣ ಎಂಬ ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದೆ‌ ಎಂದು ಸಚಿವ ಸುರೇಶ್ ಕುಮಾರ್‌ ಹೇಳಿದ್ದಾರೆ.

ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೆ ಇರುವ  (ಆದರೆ ಶಾಲೆಗೆ ಹೋಗಲಾರದ)  ಮಕ್ಕಳಿಗಾಗಿ ಇರುವ #ನಲಿಕಲಿ ಮತ್ತು #ಕಲಿನಲಿ ಕಾರ್ಯಕ್ರಮಗಳನ್ನು ನಾಳೆಯಿಂದ ಅಂದರೆ ಜನವರಿ 11ರಿಂದ ಏಪ್ರಿಲ್ 5  ರ ವರೆಗೆ  ಆಕಾಶವಾಣಿ ಪ್ರಸಾರ ಮಾಡಲಿದೆ. (ಪ್ರತಿ ವಾರ ಸೋಮವಾರದಿಂದ ಶುಕ್ರವಾರದವರೆಗೂ) ಪ್ರತಿನಿತ್ಯ ಬೆಳಿಗ್ಗೆ 10 ಗಂಟೆಯಿಂದ 10.15 ರ ವರೆಗೆ ಒಂದು ಮತ್ತು ಎರಡನೇ ತರಗತಿಗಳಿಗಾಗಿ ಹಾಗೂ 10:15 ರಿಂದ 10.30 ಗಂಟೆಯವರೆಗೂ 3 ಮತ್ತು 4ನೇ ತರಗತಿ ಗಳಿಗಾಗಿ ಹಾಡು,  ಕಥೆ, ನಾಟಕ, ಸಂಭಾಷಣೆ, ಒಗಟು, ಮತ್ತು ವಿವಿಧ ಆಸಕ್ತಿಕರ ಕಾರ್ಯಕ್ರಮಗಳ ಮೂಲಕ ಆಯಾ ತರಗತಿಗಳ ಮಕ್ಕಳ ಕಲಿಕೆ ಮುಂದುವರಿಯುವಂತೆ ಮಾಡಲು ಶಿಕ್ಷಣ‌ ಇಲಾಖೆ ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಸಚಿವರು ವಿವರಿಸಿದ್ದಾರೆ.

ಈ ಕಾರ್ಯಕ್ರಮಗಳ ಮೂಲಕ ನಲಿ – ಕಲಿಯ ಆಶಯಗಳಾದ ಆಲಿಸುವಿಕೆ, ವಸ್ತು ಗುರುತಿಸುವಿಕೆ, ಸ್ವ ಕಲಿಕೆ, ಸಂತಸದಾಯಕ ಕಲಿಕೆ, ಶಬ್ದ ಪರಿಚಯ… ಹೀಗೆ ಶಬ್ದಗಳ ಏರಿಳಿತದ ಮೂಲಕ ವಿಷಯಗಳನ್ನು ವಿನೂತನ ಮಾದರಿಯಲ್ಲಿ ತಿಳಿಸಲಾಗುತ್ತದೆ. ಒಂದರಿಂದ ನಾಲ್ಕನೇ ತರಗತಿಯವರೆಗೆ ಓದುತ್ತಿರುವ ಮಕ್ಕಳ ಎಲ್ಲಾ ಪೋಷಕರಿಗೆ ಈ ಕಾರ್ಯಕ್ರಮವನ್ನು ಮಕ್ಕಳೊಂದಿಗೆ ಆಲಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಅಲ್ಲಿ ಪ್ರಸಾರಗೊಳ್ಳುವ  ಹಾಡು, ಕಥೆ ಇತ್ಯಾದಿಗಳನ್ನು ನಿಮ್ಮ ಮಕ್ಕಳಿಗೆ ಮತ್ತೊಮ್ಮೆ ಹೇಳುವುದರ ಮೂಲಕ ಹೇಳಿಸುವ ಮೂಲಕ ಮಕ್ಕಳಿಗೆ ನಲಿಯುವುದರ ಜೊತೆಗೆ ಕಲಿಯುವುದನ್ನು ಅಭ್ಯಾಸ ಮಾಡಿಸಿ ಎಂದು ಕರೆ ನೀಡಿದ್ದಾರೆ.

ಮಕ್ಕಳು ಹೇಳಿದ ಕತೆಗಳೂ ಪ್ರಸಾರ  : ತಮ್ಮ ಮಕ್ಕಳಿಂದ ಯಾವುದಾದರೂ ಕತೆ ಹಾಡು ಒಗಟು ಹೇಳಬಹುದಾದರೆ whatsapp  ನಂಬರ್  9449417612 ಗೆ ಕಳಿಸಿದರೆ ಅದನ್ನು ಪ್ರಸಾರ ಮಾಡಲಾಗುವುದು. ಈ ಕಾರ್ಯಕ್ರಮ ರಾಜ್ಯದ 13 ಆಕಾಶವಾಣಿ ಕೇಂದ್ರಗಳಿಂದ ಪ್ರಸಾರವಾಗುತ್ತದೆ. ಮತ್ತು ನಂತರ ಈ ಕಾರ್ಯಕ್ರಮಗಳು ಯೂಟ್ಯೂಬ್ ನಲ್ಲಿ ಸಹ ಲಭ್ಯವಿರುತ್ತವೆ. ಈ ಎಳೆ ಕಂದಗಳ ಮನಸ್ಸುಗಳನ್ನು ವಿಕಸನಗೊಳಿಸುವ ಉದ್ದೇಶದಿಂದ ಪ್ರಾರಂಭಿಸಲಾಗುತ್ತಿರುವ ಈ ಕಾರ್ಯಕ್ರಮಕ್ಕೆ ತಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ಸಚಿವರು ಪೋಷಕರಲ್ಲಿ ಮನವಿ ಮಾಡಿದ್ದಾರೆ.

ರಾಮನಗರ ಆಸ್ಪತ್ರೆಯಲ್ಲಿ ಸ್ವತಃ ಕೋವಿಡ್‌ ಲಸಿಕೆ ತಾಲೀಮಿಗೆ ಒಳಗಾದ ಡಿಸಿಎಂ

ರಾಮನಗರ: ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಶುಕ್ರವಾರ ಕೋವಿಡ್ ಲಸಿಕೆ ತಾಲೀಮಿಗೆ ಚಾಲನೆ ನೀಡಿದರಲ್ಲದೆ, ಸ್ವತಃ ತಾವೇ ಅಣಕು ತಾಲೀಮಿಗೆ ಒಳಗಾದರು.

ಬೆಳಗ್ಗೆಯೇ ಆಸ್ಪತ್ರೆಗೆ ಭೇಟಿ ನೀಡಿದ ಅವರು ಲಸಿಕೆ ತಾಲೀಮು ನಡೆಸುವ ಎಲ್ಲ ವ್ಯವಸ್ಥೆಗಳನ್ನು ಪರಿಶೀಲನೆ ಮಾಡಿದರಲ್ಲದೆ, ಅಣಕು ತಾಲೀಮಿಗೆ ಮೊದಲು ತಾವೇ ನೋಂದಾಯಿಸಿಕೊಂಡು ಟೆಂಪರೇಚರ್‌ ಪರೀಕ್ಷೆಗೆ ಒಳಗಾದರು. ಬಳಿಕ ಲಸಿಕೆ ಪಡೆಯುವ ಹಾಗೂ ಇಪ್ಪತ್ತು ನಿಮಿಷ ಪ್ರತ್ಯೇಕ ಕೊಠಡಿಯಲ್ಲಿ ವೈದ್ಯರ ನಿಗಾದಲ್ಲಿರುವ ಪ್ರಕ್ರಿಯೆಯನ್ನು ಪರಿಶೀಲಿಸಿದರು. ಇವೆಲ್ಲ ಪ್ರಕ್ರಿಯೆಗಳ ಬಗ್ಗೆ ಡಿಸಿಎಂ ತೃಪ್ತಿ ವ್ಯಕ್ತಪಡಿಸಿದರಲ್ಲದೆ, ಲಸಿಕೆ ನೀಡುವ ಕಾರ್ಯಕ್ರಮ ಜನಾಂದೋಲನದ ರೀತಿಯಲ್ಲಿ ಕೈಗೊಳ್ಳಲು ಸರಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಪ್ರತಿಯೊಬ್ಬರಿಗೂ ಲಸಿಕೆ ಸಿಗುತ್ತದೆ ಎಂದರು.

ಸ್ವತಃ ನಾನೇ ಲಸಿಕೆಯನ್ನು ಪಡೆಯುವ ಅಣಕು ಪ್ರಕ್ರಿಯೆಗೆ ಒಳಗಾಗಿದ್ದೇನೆ. ಅತ್ಯಂತ ವೈಜ್ಞಾನಿಕ ಮತ್ತು ಸುರಕ್ಷಿತವಾಗಿ ಇಡೀ ಪ್ರಕ್ರಿಯೆ ನಡೆಯುತ್ತದೆ ಎಂದು ತದನಂತರ ಡಿಸಿಎಂ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಈ ಲಸಿಕೆ ನೀಡುವುದು ಸವಾಲಿನ ಕೆಲಸ. ಅದಕ್ಕೆ ನಾಲ್ಕು ಹಂತಗಳ ಪೂರ್ವ ಸಿದ್ಧತೆ ಅಗತ್ಯವಿರುತ್ತದೆ. ಈ ಹಿನ್ನೆಲೆಯಲ್ಲಿ ಲಸಿಕೆ ತಾಲೀಮು ಕೆಲಸ ಕೈಗೊಳ್ಳಲಾಗಿದೆ. ಇಡೀ ರಾಜ್ಯಾಂದ್ಯಂತ ಇಂದು ತಾಲೀಮು ನಡೆಯುತ್ತಿದೆ. ರಾಮನಗರ ಜಿಲ್ಲೆ ಒಂದರಲ್ಲೇ 8,405 ಕೋವಿಡ್‌ ಯೋಧರಿಗೆ ಕೋವಿನ್‌ನಲ್ಲಿ ನೋಂದಣಿ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ತದ ನಂತರ ಪರಿಶೀಲನೆ, ಲಸಿಕೆ ಹಾಕುವುದು ಮತ್ತು ಲಸಿಕೆ ಪಡೆದವರನ್ನು ನಿಗಾದಲ್ಲಿ ಇರಿಸುವ ವ್ಯವಸ್ಥೆಯೂ ಆಗುತ್ತದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

ಮೊದಲ ಡೋಸ್‌ ಕೊಟ್ಟ ನಂತರ 28 ದಿನಗಳ ನಂತರ ಎರಡನೇ ಡೋಸ್‌ ನೀಡಲಾಗುವುದು. ಇದು ಪ್ರಥಮ ಹಂತವಾಗಿರುತ್ತದೆ. ಎರಡನೇ ಹಂತದಲ್ಲಿ ಶೇ.8ರಿಂದ 10ರಷ್ಟು ಸಾರ್ವಜನಿಕರಿಗೆ, 3ನೇ ಹಂತದಲ್ಲಿ ಶೇ.20ರಷ್ಟು ಸಾರ್ವಜನಿಕರಿಗೆ ಲಸಿಕೆ ನೀಡುವ ಕೆಲಸ ಆಗುತ್ತದೆ ಎಂದರು ಡಿಸಿಎಂ.

ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 87 ಕೇಂದ್ರಗಳಲ್ಲಿ 8,405 ಕೋವಿಡ್‌ ಯೋಧರಿಗೆ ಲಸಿಕೆ ನೀಡಲಾಗುವುದು. ಈ ಎಲ್ಲಡೆ ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಎರಡನೇ ಹಂತದ ಹೊತ್ತಿಗೆ ಈ ಕೇಂದ್ರಗಳ ಸಂಖ್ಯೆಯನ್ನು 395ಕ್ಕೆ ಹೆಚ್ಚಿಸಲಾಗುವುದು. ಜತೆಗೆ, ಲಸಿಕೆ ಸಾಗಾಣಿಕೆ, ಪೂರೈಕೆ ಜಾಲ, ಸಿಬ್ಬಂದಿ, ಕೋಲ್ಡ್‌ ಸ್ಟೊರೇಜ್‌ ಇತ್ಯಾದಿ ಸೇರಿ ಸರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನಮ್ಮಲ್ಲಿ ಅತ್ಯುತ್ತಮ ನಿರ್ವಹಣಾ ವ್ಯವಸ್ಥೆ ಇದೆ ಎಂದು ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಅರ್ಚನಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ, ಜಿಲ್ಲಾ ಎಸ್ಪಿ ಗಿರೀಶ್ ಮತ್ತಿತರರು ಹಾಜರಿದ್ದರು.

ವಾರ್ತಾ ಆಯುಕ್ತರಿಂದ ವಿಷ್ಣು ಸ್ಮಾರಕ ಸ್ಥಳ ಪರಿಶೀಲನೆ

ಮೈಸೂರು: ಮೈಸೂರಿನಿಂದ ಸುಮಾರು ಆರು ಕಿಲೋ ಮೀಟರುಗಳ ಅಂತರದಲ್ಲಿರುವ ಹಾಲಾಳು ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಖ್ಯಾತ ನಟ , ಸಾಹಸ ಸಿಂಹ ವಿಷ್ಣುವರ್ಧನ್ ಸ್ಮಾರಕ ಸ್ಥಳಕ್ಕೆ ವಾರ್ತಾ ಮತ್ತು ಪ್ರಚಾರ ಇಲಾಖೆ ಆಯುಕ್ತರಾದ ಡಾ ಪಿ. ಎಸ್ . ಹರ್ಷ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇಮೇಜ್ ಗ್ಯಾಲರಿ ಮತ್ತು ಸಭಾಂಗಣದ ಕಾಮಗಾರಿ ಆರಂಭಗೊಂಡಿದ್ದು, ವಿಶ್ವ ದರ್ಜೆಯ
ಸ್ಮಾರಕ ಸ್ಥಳ ಇದಾಗಬೇಕೆಂಬ ಆಶಯ ತಮ್ಮದಾಗಿದೆ ಎಂದ ಡಾ.ಹರ್ಷ , ರಾಜ್ಯ ಸರ್ಕಾರವೂ ಸಹ ಈ ನಿಟ್ಟಿನಲ್ಲಿ ಅತೀವ ಆಸಕ್ತಿ ವಹಿಸುತ್ತಿದೆ ಎಂದರು.

ಸುಮಾರು 11 ಕೋಟಿ ರೂಗಳ ಯೋಜನೆ ಇದಾಗಿದ್ದು , ಐದು ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಷ್ಣು ಸ್ಮಾರಕವನ್ನು ಅತ್ಯಂತ ಕ್ಷಿಪ್ರವಾಗಿ ಹಾಗೂ ಉತ್ಕೃಷ್ಟವಾಗಿ
ನಾಡಿಗೆ ನೀಡುವ ಸಂಕಲ್ಪಕ್ಕೆ ವಾರ್ತಾ ಇಲಾಖೆ ಕಟಿಬದ್ಧವಾಗಿದೆ ಎಂದೂ ಹರ್ಷ ಹೇಳಿದರುು.

ಪೊಲೀಸ್ ಗೃಹ ನಿರ್ಮಾಣ ಸಂಸ್ಥೆ ಕೈಗೆತ್ತಿಕೊಂಡಿರುವ ಕೈಗೆತ್ತಿಕೊಂಡಿರುವ ಈ ಕಾಮಗಾರಿಯ ನಿರ್ವಹಣೆಯನ್ನು ರೇವನಿ ಪ್ರಸಾದ್ ಕನ್ಸ್ಟ್ರಕ್ಷನ್ ಕಂಪನಿ ಮಾಡುತ್ತಿದ್ದು , ಹನ್ನೊಂದು ತಿಂಗಳ ಒಳಗಾಗಿ ಕನ್ನಡ ನಾಡಿಗೆ ಸಮರ್ಪಣೆ ಮಾಡಲಿದೆ.

ವಾರ್ತಾ ಆಯುಕ್ತರ ಈ ಪರಿಶೀಲನಾ ಭೇಟಿಯ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಹಾಯಕ ಇಂಜಿನಿಯರುಗಳಾದ ಮಂಜುನಾಥ್ ಮತ್ತು ಸಂರಕದ ಸ್ಮಾರಕದ ರೂಪು ರೂಪು- ರೇಷೆಗಳನ್ನು ನಕ್ಷೆಯೊಂದಿಗೆ ವಿವರಿಸಿದರು. ವಾರ್ತಾ ಅಧಿಕಾರಿ ವಿಜಯಾನಂದ್ ಹಾಗೂ ಅಶೋಕ್ ಕುಮಾರ್ ಕೂಡ ಹಾಜರಿದ್ದರು.

ಡಿಜಿಟಲ್ ತಂತ್ರಜ್ಞಾನದ ಮೂಲಕ ಸರ್ಕಾರದ ಸಾಧನೆ ಪ್ರಚುರಪಡಿಸಲು ನೂತನ ಸಂಕಲ್ಪ: ಡಾ. ಪಿ.ಎಸ್.ಹರ್ಷ

ಮೈಸೂರು, ಜನವರಿ 8: ಡಿಜಿಟಲ್ ಕ್ಷೇತ್ರವನ್ನು ವಿನೂತನವಾಗಿ ಬಳಸಿಕೊಂಡು ಸರ್ಕಾರದ ಸಾಧನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಮಾಡಲು ಜಿಲ್ಲಾ ವಾರ್ತಾ ಕಚೇರಿಗಳು ಸಜ್ಜಾಗಬೇಕು ಎಂದು ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಡಾ. ಪಿ.ಎಸ್.ಹರ್ಷ ಹೇಳಿದರು.

ಶುಕ್ರವಾರ ಮೈಸೂರಿನಲ್ಲಿ ಮೈಸೂರು ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

ವಾರ್ತ ಇಲಾಖೆಯಿಂದ ನಿರಂತರವಾಗಿ ಕ್ಷಣ ಕ್ಷಣದ ಸುದ್ದಿಗಳು ಪ್ರಕಟವಾಗುವಂತೆ ಜಿಲ್ಲಾ ಕಚೇರಿಗಳು ಬಲವರ್ಧನೆ ಆಗಬೇಕು. ಅದಕ್ಕೆ ಬೇಕಾದ ನೆರವನ್ನು ನೀಡಲಾಗುವುದು ಎಂದು ಅವರು ಹೇಳಿದರು.

ಕಡಿಮೆ ಸಂಖ್ಯೆಯ ನೌಕರರನ್ನು ಹೊಂದಿರುವ ಇಲಾಖೆಯಲ್ಲಿ ನೌಕರರ ನಡುವೆ ಮಾನವೀಯ ಸಂಬಂಧ ಸರಿಇರಬೇಕು. ಎಲ್ಲರಲ್ಲೂ ಒಂದು ತಂಡವಾಗಿ ಕೆಲಸ ಮಾಡುವ ಮನೋಭಾವ ಕಟ್ಟೋಣ ಎಂದು ಹೇಳಿದರು.

ಅಧಿಕಾರಿಗಳು ಮತ್ತು ನೌಕರರಲ್ಲಿ ವೃತ್ತಿಪರತೆ ಬೆಳಸಿಕೊಳ್ಳಬೇಕು. ಇದಕ್ಕಾಗಿ ತರಬೇತಿ ಮತ್ತು ಸಂಶೋಧನೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಹೇಳಿದರು.

ಪೊಲೀಸ್ ಡ್ಯೂಟಿ ಮೀಟ್ ಮಾದರಿಯಲ್ಲಿ ವಾರ್ತಾ ಇಲಾಖೆಯಲ್ಲಿ ಕುಟುಂಬದ ಸದಸ್ಯರೂ ಸೇರಿದಂತೆ ವರ್ಷದಲ್ಲಿ ಒಮ್ಮೆ ಎಲ್ಲರೂ ಸೇರಿ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಆಯೋಜಿಸುವ ಬಗ್ಗೆ ಆಲೋಚಿಸಲಾಗಿದೆ ಎಂದರು.

ಸಭೆಯಲ್ಲಿ ಉಪ ನಿರ್ದೇಶಕರಾದ ವಿನೋದ್ ಚಂದ್ರ, ಸಿ.ಆರ್. ನವೀನ್, ಸಹಾಯಕ ನಿರ್ದೇಶಕರಾದ ಆರ್. ರಾಜು, ಜೆ. ಮಂಜೇಗೌಡ, ಟಿ.ಕೆ. ಹರೀಶ್, ರಮೇಶ್, ಚಿನ್ನಸ್ವಾಮಿ, ಮಂಜುನಾಥ್, ವಿಷ್ಣುವರ್ಧನ್ ಪ್ರತಿಷ್ಠಾನದ ಕಾರ್ಯದರ್ಶಿ ವಿಜಯಾನಂದ ಮತ್ತಿತರರು ಉಪಸ್ಥಿತರಿದ್ದರು.

263 ಕಡೆ ಲಸಿಕೆ ತಾಲೀಮು: ಡಾ.ಕೆ.ಸುಧಾಕರ್

ಬೆಂಗಳೂರು: ರಾಜ್ಯದ 263 ಕಡೆಗಳಲ್ಲಿ ಲಸಿಕೆ ವಿತರಣೆಯ ತಾಲೀಮು (ಡ್ರೈ ರನ್) ನಡೆಯಲಿದೆ. ಲಸಿಕೆ ಬಂದ ಬಳಿಕ ವಿತರಣೆಯ ಕಾರ್ಯ ಜನಾಂದೋಲನದಂತೆ ನಡೆಯಬೇಕಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವಧನ್ ಅವರೊಂದಿಗಿನ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, ಕೊರೊನಾ ಲಸಿಕೆಯ ವಿತರಣೆಗೆ ಸಿದ್ಧತೆ, ಕೇಂದ್ರ ಸರ್ಕಾರದಿಂದ ಬೇಕಿರುವ ಸಹಾಯದ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ. ಜನವರಿ 8 ರಂದು ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಮೂರು ಕಡೆ ಲಸಿಕೆ ವಿತರಣೆಯ ತಾಲೀಮು ನಡೆಯಬೇಕಿತ್ತು. ಆದರೆ ನಮ್ಮ ರಾಜ್ಯದಲ್ಲಿ ಪ್ರತಿ ಜಿಲ್ಲೆಯಲ್ಲಿ ಏಳು ವ್ಯವಸ್ಥೆಯಲ್ಲಿ ತಯಾರಿ ಮಾಡಿಕೊಂಡು 263 ಪ್ರದೇಶಗಳಲ್ಲಿ ಲಸಿಕೆಯ ವಿತರಣೆ ನಡೆಯಲಿದೆ. 24 ಜಿಲ್ಲಾಸ್ಪತ್ರೆ, 20 ಮೆಡಿಕಲ್ ಕಾಲೇಜು, 43 ತಾಲೂಕು ಆಸ್ಪತ್ರೆ, 31 ಸಮುದಾಯ ಆರೋಗ್ಯ ಕೇಂದ್ರ, 87 ಪ್ರಾಥಮಿಕ ಆರೋಗ್ಯ ಕೇಂದ್ರ, 30 ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, 28 ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ ತಾಲೀಮು ನಡೆಯಲಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ 24 ಲಕ್ಷ ಸಿರಿಂಜುಗಳನ್ನು ಕಳುಹಿಸಿಕೊಟ್ಟಿದೆ. ಇವುಗಳನ್ನು ಎಲ್ಲ ಜಿಲ್ಲೆಗಳಿಗೆ ಕಳುಹಿಸಿಕೊಡಲಾಗಿದೆ. ರಾಜ್ಯದಲ್ಲಿ 10 ವಾಕ್ – ಇನ್ ಕೂಲರ್, 4 ವಾಕ್ -ಇನ್ ಫ್ರೀಜರ್, 3,201 ಐಎಲ್ ಆರ್, 3039 ಡೀಪ್ ಫ್ರೀಜರ್, 3,312 ಕೋಲ್ಡ್ ಬಾಕ್ಸ್, 46,591 ಲಸಿಕೆ ಕ್ಯಾರಿಯರ್, 2,25,749 ಐಸ್ ಪ್ಯಾಕ್ ಲಭ್ಯವಿದೆ. ಕೇಂದ್ರ ಸರ್ಕಾರವು 225 ಲೀಟರ್ ಸಾಮರ್ಥ್ಯ ದ 64 ಐಎಲ್ ಆರ್ ಗಳನ್ನು ಕಳುಹಿಸಿಕೊಟ್ಟಿದೆ. ಇನ್ನೂ 2 ವಾಕ್ – ಇನ್ ಕೂಲರ್, 1 ವಾಕ್ – ಇನ್ ಫ್ರೀಜರ್ ಕಳುಹಿಸಿಕೊಡುವುದಾಗಿ ಕೇಂದ್ರ ತಿಳಿಸಿದೆ ಎಂದು ಮಾಹಿತಿ ನೀಡಿದರು.

ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 6.30 ಲಕ್ಷ ಸಿಬ್ಬಂದಿ ಲಸಿಕೆ ವಿತರಣೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇನ್ನೂ ಕೂಡ ನೋಂದಣಿ ಮಾಡಿಸುವುದಾದರೆ ಬರಬಹುದು. 1 ಕೋಟಿ ಲಸಿಕೆಗಳನ್ನು ಕೇಂದ್ರ ಸರ್ಕಾರ ನಾನಾ ರಾಜ್ಯಗಳಿಗೆ ನೀಡಲಿದೆ. ಪೊಲೀಸರು, ಆರೋಗ್ಯ ಸಿಬ್ಬಂದಿ, ರಕ್ಷಣಾ ಸಿಬ್ಬಂದಿ, ಕೊರೊನಾ ನಿಯಂತ್ರಣದಲ್ಲಿ ಕಾರ್ಯಪ್ರವೃತ್ತರಾಗಿರುವವರಿಗೆ ಲಸಿಕೆ ಮೊದಲಿಗೆ ದೊರೆಯಲಿದೆ ಎಂದು ತಿಳಿಸಿದರು.

ಸಚಿವರು ಹೇಳಿದ ಇತರೆ ಅಂಶಗಳು: ಲಸಿಕೆಯಿಂದ ಯಾವುದೇ ಅಪಾಯವಿಲ್ಲ. ಇದರಿಂದಾಗಿ ಜನರಿಗೆ ಅನುಕೂಲವಾಗುತ್ತದೆ. ಎಲ್ಲರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

ಜನವರಿ 17 ರಂದು ಪೊಲಿಯೋ ಲಸಿಕೆ ವಿತರಣೆ ಕಾರ್ಯ ನಡೆಯಲಿದೆ. ಒಟ್ಟು 65 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಉದ್ದೇಶವಿದೆ.

ದಕ್ಷಿಣ ಕನ್ನಡದಲ್ಲಿ 6 ಕಾಗೆಗಳು ಸಾವನ್ನಪ್ಪಿದ್ದು, ಪರೀಕ್ಷೆಗೆ ಕಳುಹಿಸಲಾಗಿದೆ. ಹಕ್ಕಿಜ್ವರ ಬಾರದಂತೆ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಲಕ್ಷಾಂತರ ಮಕ್ಕಳು ಶಾಲೆಗೆ ಹೋಗುತ್ತಿರುವ ಸಮಯದಲ್ಲಿ ಕೊರೊನಾ ಬಗ್ಗೆ ವಿನಾಕಾರಣ ಭೀತಿ ಮೂಡಿಸಬಾರದು. ಸರ್ಕಾರ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದೆ.