ಹಕ್ಕಿಜ್ವರ (H5N8) ಎಲ್ಲಾ ಜಿಲ್ಲೆಗಳಲ್ಲಿಯೂ ಹೈ ಅಲರ್ಟ್ : ಸಚಿವ ಪ್ರಭು ಚವ್ಹಾಣ್

ಬೆಂಗಳೂರು ಜ ೦೬ : ಕೇರಳದ ಆಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಬಾತುಕೋಳಿಗಳಲ್ಲಿ ಕೋಳಿಶೀತ/ಹಕ್ಕಿಜ್ವರವು (H5N8) ಸೋಂಕು ದೃಢಪಟ್ಟಿದ್ದು, ರಾಜ್ಯದಲ್ಲಿಯೂ ರೋಗ ಕಾಣಿಸಿಕೊಳ್ಳುವ ಸಾಧ್ಯತೆಗಳಿರುವುದರಿಂದ ರೋಗೋದ್ರೇಕದ ನಿರ್ವಹಣೆಗೆ ಎಲ್ಲಾ ಜಿಲ್ಲೆಗಳಲ್ಲಿಯೂ “high alert” ನಿಂದ ಕೋಳಿಶೀತ ಜ್ವರದ ಸರ್ವೇಕ್ಷಣ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಸಿದ್ದತೆ ಮಾಡಿಕೊಳ್ಳಿ ಎಂದು ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಮತ್ತು ಪಶುವೈದ್ಯರಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಪ್ರಭು ಚವ್ಹಾಣ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ರಾಜ್ಯದ ಗಡಿಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಉಪನಿರ್ದೇಶಕರುಗಳು ಕೋಳಿ ಶೀತ ಜ್ವರದ ಸಂಭಾವ್ಯ ರೋಗೋದ್ರೇಕವನ್ನು ತಡೆಗಟ್ಟಲು ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲಾ ಮಟ್ಟದ ರೋಗ ನಿಯಂತ್ರಣ ಸಮಿತಿಯ ಸಭೆ ಜರುಗಿಸಿ ಸೂಕ್ತ ಮುಂಜಾಗ್ರತ ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ಸದ್ಯ ರಾಜ್ಯದಲ್ಲೊ ಯಾವುದೇ ಪ್ರಕರಣಗಳು ಕಂಡುಬಂದಿಲ್ಲ ಆದರೇ ಎಲ್ಲ ರೀತಿಯ ಎಚ್ಚರಿಗೆ ವಹಿಸಿ ರೋಗ ಲಕ್ಷಣ ಕಂಡುಬಂದಲ್ಲಿ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಲಾಗಿದೆ.

ಕೇರಳ ರಾಜ್ಯದ ಗಡಿ ಭಾಗದಲ್ಲಿ ಕೂಡಲೇ ಚೆಕ್ ಪೋಸ್ಟಗಳನ್ನು ಸ್ಥಾಪಿಸಿ ಕೇರಳ ರಾಜ್ಯದಿಂದ ಕೋಳಿ / ಕುಕ್ಕುಟ ಹಾಗೂ ಕುಕ್ಕುಟ ಉತ್ಪನ್ನಗಳ ಸಾಗಾಣಿಕೆಯನ್ನು ನಿರ್ಬಂಧಿಸುವುದು ಹಾಗೂ, ಕೇರಳ ರಾಜ್ಯದಿಂದ ಒಳ ಬರುವ ಕೋಳಿ ಸಾಗಾಣಿಕೆ ವಾಹನಗಳನ್ನು ನೈರ್ಮಲ್ಯೀಕರಿಸಿ (disinfection /Sanitization)ಒಳಬಿಡಲು ಸೂಚನೆ ನೀಡಲಾಗಿದೆ. ಅಲ್ಲದೇ ತೆಗೆದುಕೊಂಡ ಕ್ರಮಗಳ ದೈನಂದಿನ ವರದಿಯನ್ನು ಉಪನಿರ್ದೇಶಕರು, ಕೋಳಿ ರೋಗ ನಿರ್ಣಯ ಪ್ರಯೋಗಾಲಯದ ಕಚೇರಿಗೆ ಸಲ್ಲಿಸಲು ತಿಳಿಸಲಾಗಿದೆ.

ಗಡಿ ಜಿಲ್ಲೆಗಳಲ್ಲಿ ಇರುವ ಕುಕ್ಕುಟ ಕ್ಷೇತ್ರಗಳಿಂದ ಪ್ರತಿ ವಾರ ರ್ಯಾಂ ಡಮ್ ಆಗಿ ತಲಾ ೫ ಸೀರಂ ಮಾದರಿಗಳು, ೫ ಕ್ಲೋಯಕಲ್/ ಟ್ರೇಕಿಯಲ್ ಮಾದರಿಗಳು ಮತ್ತು ೫ ಪರಿಸರ ಮಾದರಿಗಳನ್ನು ಸಂಗ್ರಹಿಸಿ ಮುಂದಿನ ಆದೇಶದವರೆಗೆ ಬೆಂಗಳೂರಿನ ಪ್ರಾಣಿ ಆರೋಗ್ಯ & ಜೈವಿಕ ಸಂಸ್ಥೆ ಪ್ರಯೋಗಾಲಯಕ್ಕೆ ವಿಶ್ಲೇಷಣೆಗೆ ಸಲ್ಲಿಸಲು ತಿಳಿಸಲಾಗಿದೆ.

ಎಲ್ಲಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಕುಕ್ಕುಟ ಕ್ಷೇತ್ರಗಳಲ್ಲಿ ವಿಶೇಷವಾಗಿ, ಪಕ್ಷಿಧಾಮ ಹಾಗೂ ನೀರು ಸಂಗ್ರಹಣ ಸ್ಥಳಗಳ (Water Bodies) ಬಗ್ಗೆ ಹೆಚ್ಚಿನ ನಿಗಾ ವಹಿಸುವುದು. ಕೋಳಿಗಳು/ಹಿತ್ತಲ ಕೋಳಿಗಳು/ಹಕ್ಕಿಗಳು/ಕಾಡು ಹಕ್ಕಿಗಳು/ವಲಸೆ ಹಕ್ಕಿಗಳ ಯಾವುದೇ ಅಸ್ವಾಭಾವಿಕ ಮರಣ ಸಂಭವಿಸಿದಲ್ಲಿ ಅಥವಾ ರೋಗ ಲಕ್ಷಣಗಳು ಕಂಡುಬಂದಲ್ಲಿ, ಕೂಡಲೇ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ, ಕೋಳಿ ಶೀತ ಜ್ವರದ ಸಂಭವನೀಯತೆಯನ್ನು ಪರಿಗಣಿಸಿ, ಸಂಬಂಧಪಟ್ಟ ಪ್ರಯೋಗಾಲಯಕ್ಕೆ ವರದಿ ಮಾಡಿ, ರೋಗ ವಿಶ್ಲೇಷಣೆ ನೆಡಸುವ ಬಗ್ಗೆ ಕ್ರಮ ವಹಿಸುವುದು. ಹಾಗೂ ಜೈವಿಕ ಸುರಕ್ಷಾತಾ (Biosecurity) ಕ್ರಮಗಳನ್ನು ಕೈಗೊಳ್ಳಲು ತಿಳಿಸಲಾಗಿದೆ.

ಗ್ರಾಪಂ ಚುನಾವಣೆ; ಕನಕಪುರದಲ್ಲಿ ಗೆದ್ದ ಬಿಜೆಪಿ ಬೆಂಬಲಿತ ಸದಸ್ಯರಿಗೆ ಕರ್ತವ್ಯದ ಪಾಠ ಮಾಡಿದ ಡಿಸಿಎಂ

ಬೆಂಗಳೂರು: ಅದೊಂದು ಅಪರೂಪದ ಸನ್ನಿವೇಶ. ಗ್ರಾಮಗಳಲ್ಲಿ ವಿಜಯ ಪತಾಕೆಯನ್ನು ಹಾರಿಸಿ ಇಡೀ ರಾಜ್ಯದ ಗಮನ ಸೆಳೆದಿದ್ದ ಕನಕಪುರ ತಾಲ್ಲೂಕಿನ ಹಳ್ಳಿಹೈದರೆಲ್ಲರೂ ತಮ್ಮ ಗೆಲುವಿನ ರೂವಾರಿಯನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ ಸಂದರ್ಭವದು.

ಹೌದು, ರಾಮನಗರ ಜಿಲ್ಲೆಯಲ್ಲಿ ನಾಲ್ಕು ತಾಲ್ಲೂಕುಗಳ ಪೈಕಿ ಜಿದ್ದಾಜಿದ್ದಿನ ಕಣವಾಗಿದ್ದ ಕನಕಪುರದಲ್ಲಿ ಕೇಸರಿ ಬಾವುಟ ಹಾರಿಸಿದ ಬಿಜೆಪಿ ಬೆಂಬಲಿತ 52 ಗ್ರಾಪಂ ಸದಸ್ಯರು ಬುಧವಾರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರನ್ನು ಭೇಟಿ ಮಾಡಿ ಧನ್ಯವಾದ ಸಲ್ಲಿಸಿದರಲ್ಲದೆ, ಡಿಕೆ ಸಹೋದರರ ಪ್ರಬಲ ಪೈಪೋಟಿಯನ್ನು ಎದುರಿಸಿ ಗೆದ್ದಿದ್ದಕ್ಕೆ ಸಾರ್ಥಕ ಭಾವ ಮೂಡಿದೆ ಎಂದು ಹೇಳಿಕೊಂಡರು.

ಜಿಲ್ಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಅವರ ಸಹೋದರ ಡಿ.ಕೆ.ಸುರೇಶ್‌ ಹಾಗೂ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ ಪಕ್ಷಗಳನ್ನು ಬಲವಾಗಿ ಎದುರಿಸಿದ ಬಿಜೆಪಿ ಬೆಂಬಲಿಗರು ಕನಕಪುರ ತಾಲ್ಲೂಕು ಒಂದರಲ್ಲೇ ಎರಡಂಕಿಯನ್ನು ಮೀರಿ ಜಯ ಸಾಧಿಸಿರುವುದು ನನಗೆ ಅತೀವ ಸಂತೋಷ ಉಂಟು ಮಾಡಿದೆ ಎಂದು ಡಿಸಿಎಂ ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅಶ್ವತ್ಥನಾರಾಯಣ ಅವರು ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರನ್ನು ಗೌರವಿಸಿದರು. ಬಳಿಕ ಆ ಸದಸ್ಯರೆಲ್ಲರೂ ಡಿಸಿಎಂ ಅವರನ್ನು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು.

ಧೈರ್ಯ ತುಂಬಿದ ಡಿಸಿಎಂ

ಇದೇ ವೇಳೆ ಎಲ್ಲ ಸದಸ್ಯರಿಗೂ ಮುಂದಿನ ದಿನಗಳಲ್ಲಿ ಉತ್ತಮವಾಗಿ ಜನಸೇವೆ ಮಾಡುವಂತೆ ಕಿವಿಮಾತು ಹೇಳಿದರಲ್ಲದೆ, ಯಾವುದೇ ಕಾರಣಕ್ಕೂ ಗೆಲ್ಲಿಸಿದ ಮತದಾರರ ನಿರೀಕ್ಷೆಗಳನ್ನು ಹುಸಿ ಮಾಡಬೇಡಿ ಎಂದರು.

ಹೊಸದಾಗಿ ಚುನಾವಣೆಯಲ್ಲಿ ಗೆದ್ದ ಎಲ್ಲ ಸದಸ್ಯರು ಕೆಲಸ ಮಾಡುವುದನ್ನು ಕಲಿಯಬೇಕು. ಯಾವುದಕ್ಕೂ ದುಡುಕುವುದು ಬೇಡ. ನಾಲ್ಕು ಜನರ ಜತೆ ಸೇರಿ ಕೆಲಸ‌‌ ಮಾಡಿ. ನಾನು ಎನ್ನುವುದು ಬೇಡ. ಪಕ್ಷದ ವರಿಷ್ಠರು ಹೇಳಿದ ಹಾಗೆ ಕೆಲಸ ಮಾಡಬೇಕು. ಯಾರೂ ಸೂಪರ್ʼಮ್ಯಾನ್ ಅಲ್ಲ. ಎಲ್ಲರೂ ಒಗ್ಗಟ್ಟಿನಿಂದ ಜನ‌ ಮೆಚ್ಚುವ ಕೆಲಸ‌ ಮಾಡೋಣ. ಶಕ್ತಿಮೀರಿ ಕೆಲಸ ಮಾಡಿ. ಎಲ್ಲರನ್ನೂ ಸಚಿವರನ್ನೇ ಭೇಟಿ ಮಾಡಬೇಕಿಲ್ಲ. ನಿಮ್ಮ ಶಕ್ತಿ ಕೇಂದ್ರದವರನ್ನು ಭೇಟಿ ಮಾಡಿ ಮಾಹಿತಿ ಕೊಡಿ. ಒಳ್ಳೆಯ ಕೆಲಸ ಮಾಡಿ. ನ್ಯಾಯಬದ್ಧವಾಗಿ ಕೆಲಸ ಮಾಡಿ ಉತ್ತಮ ಹೆಸರು ಗಳಿಸಿ ಎಂದು ಡಾ.ಅಶ್ವತ್ಥನಾರಾಯಣ ಹುರಿದುಂಬಿಸಿದರು.

ನಿಮ್ಮ ಜತೆ ಸದಾ ನಾನು ಮತ್ತು ಪಕ್ಷ ಇರುತ್ತದೆ ಎಂಬುದನ್ನು ಮರೆಯಬೇಡಿ. ಯಾವುದೇ ಕಾರಣಕ್ಕೂ ಅಸಹಾಯಕತೆ ಬೇಡ. ಎಲ್ಲ ಸಹಕಾರ ಸಿಗುತ್ತದೆ. ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಬೇಡಿ. ಧೈರ್ಯವಾಗಿ ಕೆಲಸ ಮಾಡಿ. ಮೀಸಲಾತಿಯನ್ನು ನಿಮ್ಮ ಪಂಚಾಯತಿ ಮಟ್ಟದಲ್ಲಿ ಸಮಾಲೋಚನೆ‌‌ ಮಾಡಿ ಮಾಡಲಾಗುತ್ತದೆ ಎಂದು ಸದಸ್ಯರಿಗೆ ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ರಾಮನಗರ ಜಿಲ್ಲೆಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಕಾಂತರಾಜ, ರಾಮನಗರ ಜಿಲ್ಲಾ ಬಿಜೆಪಿ ಅದ್ಯಕ್ಷ ದೇವರಾಜ್ ಇದ್ದರು.

ಮೇ ಎರಡನೇ ವಾರದಲ್ಲಿ ದ್ವಿತೀಯ ಪಿಯು, ಜೂನ್ ಮೊದಲ ವಾರದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ

ಬೆಂಗಳೂರು: ಮೇ ಎರಡನೇ ವಾರದಲ್ಲಿ ದ್ವಿತೀಯ ಪಿಯು ಪರೀಕ್ಷೆಗಳು ನಡೆಯಲಿದ್ದು, ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಜೂನ್  ಮೊದಲ ವಾರದಿಂದ ಪ್ರಾರಂಭವಾಗಲಿವೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಶಿಕ್ಷಣ ಇಲಾಖೆಯು ಈ ತರಗತಿಗಳಿಗೆ ಸಂಬಂಧಿಸಿದಂತೆ ಪರೀಕ್ಷಾ ದೃಷ್ಟಿಯಿಂದ ಬೋಧನೆ, ಕಲಿಕೆಗಾಗಿ ಗುರ್ತಿಸಿರುವ ವಿಷಯಾಂಶಗಳನ್ನು ಅಂತಿಮಗೊಳಿಸಿದ್ದು, ಇದರ ವಿವರಗಳನ್ನು ಎಲ್ಲ ಶಾಲೆಗಳಿಗೆ ತಲುಪಿಸಲಾಗುತ್ತದೆ. ಯಾವುದೇ ವಿದ್ಯಾರ್ಥಿಗೂ ಹೊರೆಯಾಗದ ರೀತಿಯಲ್ಲಿ ಕನಿಷ್ಟ ಕಲಿಕೆಗೆ ಬೋಧಿಸಬೇಕಿರುವ ಪಠ್ಯಗಳನ್ನು ಪರಿಗಣಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಒಂದರಿಂದ ಒಂಬತ್ತಕ್ಕೆ ಪಠ್ಯ ಕಡಿತವಿಲ್ಲ: ಈ ಕುರಿತಂತೆ ಪರ್ಯಾಯ ಶೈಕ್ಷಣಿಕ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಈ ತರಗತಿಗಳಿಗೆ ಸಂಬಂಧಿಸಿದಂತೆ ಪಠ್ಯ‌ಕಡಿತವೆನ್ನುವ ಪ್ರಸ್ತಾಪ ಇಲಾಖೆಯ ಮುಂದಿಲ್ಲ. ಶಾಲಾ ಹಂತದಲ್ಲಿ ಮೌಲ್ಯ ಮೌಲ್ಯಮಾಪನವನ್ನ ನಡೆಸಲಾಗುವುದರಿಂದ ಮಕ್ಕಳ ಕಲಿಕಾ ಸಾಮರ್ಥ್ಯ ಆಧಾರದಲ್ಲಿ ಸರಳ ಮೌಲ್ಯಮಾಪನಾ ಪ್ರಕ್ರಿಯೆ ಜಾರಿಯಲ್ಲಿರಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಂಕುಸ್ಥಾಪನೆ

ಬೀದರ್, ಜನವರಿ 6 (ಕರ್ನಾಟಕ ವಾರ್ತೆ): ಸಾವಿರಾರು ಬಸವ ಅನುಯಾಯಿಗಳ ಸಮ್ಮುಖದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಳೆಯ ಅನುಭವ ಮಂಟಪದ ಹತ್ತಿರದ ಆವರಣದಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು, ಇದು ಪೂರ್ವಜನ್ಮದ ಪುಣ್ಯ ಕಾರ್ಯ ಎಂದು ತಿಳಿಸಿದರು. ಅನುಭವ ಮಂಟಪ ನಿರ್ಮಾಣಕ್ಕೆ ಈಗಾಗಲೇ 100 ಕೋಟಿ ರೂ ಬಿಡುಗಡೆ ಮಾಡಿದ್ದು, ಇನ್ನು 100 ಕೋಟಿ ರೂಗಳನ್ನು ವಾರದೊಳಗೆ ಬಿಡುಗಡೆ ಮಾಡಿ, ಟೆಂಡರ್ ಪ್ರಕ್ರಿಯೆ ಪೂರ್ಣವಾದ ಕೂಡಲೇ ಕಟ್ಟಡ ನಿರ್ಮಾಣ ಕಾರ್ಯವನ್ನು ಶೀಘ್ರ ಆರಂಭಿಸಲಾಗುವುದು ಎಂದು ತಿಳಿಸಿದರು.

ಕರ್ನಾಟಕ ಇತಿಹಾಸದಲ್ಲಿ ಇಂದು ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹ ದಿನವಾಗಿದೆ ಎಂದ ಅವರು, ಸಾಧನೆ ಮಾತನಾಡಬೇಕು. ಮಾತಾಡುವುದು ಸಾಧನೆಯಾಗಬಾರದು ಎನ್ನುವುದು ತಮ್ಮ ಮನೋಭಾವವಾಗಿದೆ. ಮಾತು ಕೊಟ್ಟಂತೆ ನಡೆದುಕೊಂಡಿದ್ದೇವೆ. ಅಂತೆಯೇ ಎರಡು ವರ್ಷದೊಳಗೆ ಅನುಭವ ಮಂಟಪ ನಿರ್ಮಿಸಿ,ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ಅಮೃತ ಹಸ್ತದಿಂದ ಲೋಕಾರ್ಪಣೆಗೊಳಿಸಲಾಗುವುದು ಎಂದು ತಿಳಿಸಿದರು.

ಅವರು ಇವರು ಎನ್ನದೇ ಎಲ್ಲ ಸಮುದಾಯದ ಜನರು ಸೇರಿ ಚರ್ಚಿಸಿ ಚಿಂತನ ಮಂಥನ ನಡೆಸುತ್ತಿದ್ದ ಅನುಭವ ಮಂಟಪವು ಆದರ್ಶ ಸಂಸತ್ತಿನ ಮಾದರಿಯಾಗಿದೆ ಎಂದರು.
ಸಾಮಾಜಿಕ ಬದಲಾವಣೆ ತರುವಲ್ಲಿ ಅನುಭವ ಮಂಟಪದ ಪಾತ್ರವು ಅತೀ ಮಹತ್ವದ್ದಾಗಿದೆ. ಮನುಕುಲದ ಏಳ್ಗೆಗೆ ಇಡೀ ವಚನ ಸಾಹಿತ್ಯ ಮಾರ್ಗದರ್ಶಿಯಾಗಿದೆ ಎಂದರು. ಅಣ್ಣ ಬಸವಣ್ಣನವರು ಈ ಕಲ್ಯಾಣ ನಾಡಿನಿಂದ ಹೊರಹೊಮ್ಮಿದ ಈ ದೇಶ ಕಂಡ ಬಹುದೊಡ್ಡ ವಿಶ್ವಗುರು ಅನ್ನುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.

ಗೋ.ರು.ಚ ಅವರಂತಹ ಇನ್ನೂ ಅನೇಕ ಹಿರಿಯ ಸಾಹಿತಿಗಳ ಸಲಹೆ ಪಡೆದು, ಈ ಭಾಗದ ಜನರ ಬೇಡಿಕೆಯಂತೆ
ವಚನ ವಿಶ್ವವಿದ್ಯಾಲಯ ಸ್ಥಾಪನೆಗೆ, ಪ್ರತಿ ವರ್ಷ ಬಸವ ಉತ್ಸವ ಆಚರಣೆಗೆ ಅವಕಾಶ ಕಲ್ಪಿಸಲಾಗುವುದು. ಇಂತಹ ಒಳ್ಳೆಯ ಕಾರ್ಯಕ್ಕೆ ಹಣಕಾಸಿನ ಕೊರತೆ ಇಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಮಾತನಾಡಿ, ಅನುಭವ ಮಂಟಪದ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ನನ್ನ ಬದುಕು ಪಾವನವಾಯ್ತು ಎಂದು ಹೇಳಲು ಹೆಮ್ಮೆ ಅನಿಸುತ್ತದೆ ಎಂದರು. ನಮ್ಮ ಜೀವನದಲ್ಲಿ ಇಂದು ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನವಾಗಿದೆ ಎಂದರು.

ಪ್ರಧಾನ ಮಂತ್ರಿಗಳು ಅಯೋಧ್ಯೆಯಲ್ಲಿ ಐತಿಹಾಸಿಕ
ರಾಮಮಂದಿರ ನಿರ್ಮಾಣಕ್ಕೆ ಚಾಲನೆ ನೀಡಿದಂತೆ, ಇಡೀ ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ ಅನುಭವ ಮಂಟಪ ನಿರ್ಮಾಣಕ್ಕೆ ಇಂದು ಮುಖ್ಯಮಂತ್ರಿಗಳು ಭೂಮಿ ಪೂಜೆ ನೆರವೇರಿಸಿದ್ದು ಕೂಡ ಒಂದು ಐತಿಹಾಸಿಕ ಪ್ರಯತ್ನ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪಶು ಸಂಗೋಪನೆ, ಹಜ್ ಮತ್ತು ವಕ್ಪ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ಮಾತನಾಡಿ, ಈ ಶರಣ ಕಾಯಕ ಭೂಮಿಯಲ್ಲಿ 12ನೇ ಶತಮಾನದ ವೈಭವವನ್ನು ಪುನರ್ ಸ್ಥಾಪಿಸುವ ಉದ್ದೇಶದಿಂದ ಅನುಭವ ಮಂಟಪ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಚಾಲನೆ ನೀಡಿದ್ದು, ಬೀದರ್ ಮತ್ತು ರಾಜ್ಯದ ಐತಿಹಾಸಿದ ಪುಟಗಳಲ್ಲಿ ದಾಖಲಾಗುವಂತದ್ದಾಗಿದೆ ಎಂದರು.

ಚನ್ನಬಸವ ಪಟ್ಟದ್ದೇವರ ಸಂಕಲ್ಪ ಇಂದು ಕೂಡಿ ಬಂದಿದೆ. ಬಸವಲಿಂಗ ಪಟ್ಟದ್ದೇವರು ಸೇರಿದಂತೆ ಈ ಭಾಗದ ಎಲ್ಲ ಶ್ರೀಗಳ ಮತ್ತು ಜನರ ಆಶಯದಂತೆ ಕಾಮಗಾರಿ ಬೇಗ ಪೂರ್ಣವಾಗಲು ಶ್ರಮಿಸಲಾಗುವುದು ಎಂದು ತಿಳಿಸಿದರು.
ಶಾಸಕರಾದ ಈಶ್ವರ ಖಂಡ್ರೆ ಅವರು ಮಾತನಾಡಿ, ಇಂದು ಬಸವ ಅನುಯಾಯಿಗಳಿಗೆ ಸಂತಷದ ದಿನ. ಈ ಕಟ್ಟಡ ಬೇಗ ನಿರ್ಮಾಣವಾಗಬೇಕು. ಈ ಮೂಲಕ ಬಸವಕಲ್ಯಾಣದ ಕೀರ್ತಿ ವಿಶ್ವದೆಲ್ಲೆಡೆ ಹರಡಲಿ ಎಂದು ತಿಳಿಸಿದರು.

ಇದಕ್ಕೂ ಮೊದಲು ಮಾತನಾಡಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು, ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ವಿಶೇಷ ಅಧಿಕಾರಿ ಡಾ.ಹೆಚ್.ಆರ್.ಮಹಾದೇವ್ ಅವರು ಮಾತನಾಡಿ, ದೇಶದ ಇತಿಹಾಸದಲ್ಲಿಯೇ ನಾವು ಇಂದು ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದೇವೆ ಎಂದು ತಿಳಿಸಿದರು.

ಸಮಾರಂಭದಲ್ಲಿ ನಾಡಿನ ಹಿರಿಯ ಚಿಂತಕರು ಹಾಗೂ
ಅನುಭವ ಮಂಟಪದ ನಿರ್ಮಾಣಕ್ಕೆ ಸಂಬಂಧಿಸಿದ ತಜ್ಞರ ಸಮಿತಿಯ ಅಧ್ಯಕ್ಷರಾದ ಗೋ.ರು.ಚನ್ನಬಸಪ್ಪ, ಬಸವರಾಜ ಪಾಟೀಲ ಸೇಡಂ ಮಾತನಾಡಿದರು.

ಸಮಾರಂಭದಲ್ಲಿ ಶ್ರೀಗಳು, ಸಚಿವರು, ಸಂಸದರು,‌ ಶಾಸಕರು, ಡಿಸಿ,‌ ಸಿಇಓ, ಎಸ್ಪಿ, ಬಿಕೆಡಿಬಿ ಕಮಿಷನರ್ ಇದ್ದರು.

ಡಿಜಿಟಲ್‌ ಇಂಡಿಯಾದತ್ತ ಮಹತ್ವದ ಹೆಜ್ಜೆ ಇಟ್ಟ ಡಿಸಿಎಂ; ರಾಜ್ಯದ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳ ಭದ್ರತೆಗೆ ಡಿಜಿ ಲಾಕರ್‌

ಬೆಂಗಳೂರು:ಎಸ್‌ಎಸ್‌ಎಲ್‌ಸಿಯಿಂದ ಮೊದಲುಗೊಂಡು ಉನ್ನತ ಶಿಕ್ಷಣದ ಕೊನೆ ಹಂತದವರೆಗೂ ವಿದ್ಯಾರ್ಥಿಗಳ ಎಲ್ಲ ಸಮಗ್ರ ಶೈಕ್ಷಣಿಕ ದಾಖಲೆಗಳನ್ನು ಡಿಜಿ ಲಾಕರ್‌ನಲ್ಲಿ ಭದ್ರವಾಗಿರಿಸುವ ಮಹತ್ವದ ಕಾರ್ಯಕ್ರಮ ಜಾರಿಗೆ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮುಂದಾಗಿದ್ದಾರೆ.

ಮುಂದಿನ ದಿನಗಳಲ್ಲಿ ಯಾರೂ ದಾಖಲೆಗಳು ಕಳೆದುಹೋಗುತ್ತವೆ ಎಂದು ಭಯಪಡಬೇಕಿಲ್ಲ ಹಾಗೂ ತಮ್ಮ ದಾಖಲೆಗಳು ನಕಲಿಯಾಗುತ್ತವೆ ಎಂಬ ಆತಂಕವೂ ಇರುವುದಿಲ್ಲ ಎಂದು ಡಿಸಿಎಂ ಪ್ರಕಟಿಸಿದರು.

ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ʼಶೈಕ್ಷಣಿಕ ಡಿಜಿ ಲಾಕರ್‌ʼ ವ್ಯವಸ್ಥೆ ರಾಜ್ಯದಲ್ಲಿ ಜಾರಿಗೆ ಬರುತ್ತದೆ. ಈ ವ್ಯವಸ್ಥೆಯಿಂದ ವಿದ್ಯಾರ್ಥಿಗಳ ದಾಖಲೆಗಳು ಸುರಕ್ಷಿತವಾಗಿರುತ್ತವೆ ಹಾಗೂ ಉದ್ಯೋಗದಾತರಿಗೂ ಇವು ಸಿಗಲಿವೆ. ಇನ್ನು ಮುಂದೆ ಕಾಗದ ರೂಪದ ಯಾವುದೇ ಶೈಕ್ಷಣಿಕ ದಾಖಲೆಗಳಿಗೆ ಅವಕಾಶ ಇರುವುದಿಲ್ಲ ಎಂದು ಉಪ ಮುಖ್ಯಮಂತ್ರಿಗಳು ತಿಳಿಸಿದರು.

ರಾಜ್ಯದ ಶೈಕ್ಷಣಿಕ ಕ್ಷೇತ್ರವನ್ನು ಡಿಜಿಟಲ್‌ನತ್ತ ಕೊಂಡೊಯ್ಯುವ ಇನ್ನೊಂದು ಮಹತ್ವದ ಹೆಜ್ಜೆ ಎಂದಿರುವ ಅವರು, ಈ ಸಂಬಂಧ ಬೆಂಗಳೂರಿನಲ್ಲಿ ಬುಧವಾರ ರಾಷ್ಟ್ರೀಯ ಶೈಕ್ಷಣಿಕ ದಾಖಲೆಗಳ ಸಂಗ್ರಹಗಾರ (National Academic Depository-NAD)ದ ಕೇಂದ್ರ ಮಟ್ಟದ ಅಧಿಕಾರಿಗಳು ಹಾಗೂ ರಾಜ್ಯದ ಶಿಕ್ಷಣ ಇಲಾಖೆಯ ವಿವಿಧ ಹಂತದ ಉನ್ನತ ಅಧಿಕಾರಿಗಳ ಜತೆ ಉನ್ನತ ಮಟ್ಟದ ಸಭೆ ನಡೆಸಿದ ನಂತರ ಈ ವಿಷಯ ತಿಳಿಸಿದರು.

ಈಗಾಗಲೇ ಕೇಂದ್ರ ಸರಕಾರದ ಮಟ್ಟದಲ್ಲಿ ಜಾರಿಯಾಗಿರುವ ಶೈಕ್ಷಣಿಕ ಡಿಜಿ ಲಾಕರ್‌ ವ್ಯವಸ್ಥೆಯನ್ನು ರಾಜ್ಯದಲ್ಲೂ ಕೂಡಲೇ ಜಾರಿಗೆ ತರಲು ನಿರ್ಧರಿಸಲಾಗಿದೆ. ಈ ಸಂಬಂಧ ನನ್ನ ನೇತೃತ್ವದಲ್ಲಿಯೇ ಉನ್ನತಾಧಿಕಾರ ಸಮಿತಿಯೊಂದನ್ನು ರಚನೆ ಮಾಡಲಾಗಿದ್ದು, ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಸೇರಿ ಕಾರ್ಯಕ್ರಮ ಅನುಷ್ಠಾನ ಪ್ರಗತಿಯನ್ನು ಪರಿಶೀಲನೆ ಮಾಡಲಾಗುವುದು. ಸರಕಾರಿ, ಖಾಸಗಿ ಸೇರಿದಂತೆ ಯಾವುದೇ ಪದವಿ ಪ್ರದಾನ ಮಾಡುವ ವಿಶ್ವವಿದ್ಯಾಲಯ, ಕಾಲೇಜು, ಡೀಮ್ಡ್‌ ಯುನಿವರ್ಸಿಟಿಗಳೂ ಸೇರಿದಂತೆ ಎಲ್ಲ ಶೈಕ್ಷಣಿಕ ಸಂಸ್ಥೆಗಳು ಈ ವ್ಯವಸ್ಥೆಗೆ ಕಡ್ಡಾಯವಾಗಿ ಸೇರಿಕೊಳ್ಳಬೇಕು ಎಂದು ಡಿಸಿಎಂ ಸೂಚಿಸಿದರು.

ಏನಿದು ಶೈಕ್ಷಣಿಕ ಡಿಜಿ ಲಾಕರ್‌?

ಇದು ವಿದ್ಯಾರ್ಥಿಗಳ ಎಲ್ಲ ಶೈಕ್ಷಣಿಕ ದಾಖಲೆಗಳನ್ನು ಸುರಕ್ಷಿತವಾಗಿ ಸಂಗ್ರಹ ಮಾಡುವ ವ್ಯವಸ್ಥೆ. ಇದಕ್ಕೆ ರಾಷ್ಟ್ರೀಯ ಶೈಕ್ಷಣಿಕ ದಾಖಲೆಗಳ ಸಂಗ್ರಹಗಾರ (National Academic Depository-NAD) ಎಂದು ಕರೆಯಲಾಗುತ್ತದೆ. ಕೇಂದ್ರ ಸರಕಾರದ ಉಸ್ತುವಾರಿಯಲ್ಲಿ ಇದು ಕೆಲಸ ಮಾಡುತ್ತದೆ. ಸಂಗ್ರಹಣಾ ಸ್ಥಳವನ್ನು ಈ ಸಂಸ್ಥೆಯೇ ಒದಗಿಸುತ್ತದೆ. ವಿದ್ಯಾರ್ಥಿಗಳ ಅಂಕಪಟ್ಟಿ, ಪದವಿ ಪ್ರಮಾಣ ಪತ್ರಗಳು, ವರ್ಗಾವಣೆ ಪತ್ರ ಸೇರಿದಂತೆ ಅವರ ಎಲ್ಲ ಶೈಕ್ಷಣಿಕ ದಾಖಲೆಗಳನ್ನು ಇಲ್ಲಿ ಭದ್ರವಾಗಿ ಸಂಗ್ರಹಿಸಿಡಲಾಗಿರುತ್ತದೆ. ಹತ್ತನೇ ತರಗತಿ, ಪಿಯುಸಿ, ಡಿಗ್ರಿ, ಡಿಪ್ಲೊಮೋ, ಎಂಜಿನೀಯರಿಂಗ್‌, ಪದವಿ, ಸ್ನಾತಕೋತ್ತರ, ಐಟಿಐ ಸೇರಿದಂತೆ ಇನ್ನೂ ಅನೇಕ ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ದಾಖಲೆಗಳು ಇಲ್ಲಿ ಸಂಗ್ರಹವಾಗುತ್ತವೆ. ತನ್ನ ದಾಖಲೆಗಳನ್ನು ಆಕ್ಸೆಸ್‌ ಮಾಡಲು ಪ್ರತಿ ವಿದ್ಯಾರ್ಥಿಗೂ ಅವಕಾಶ ಇರುತ್ತದೆ. ಯಾವಾಗ ಬೇಕಾದರೂ ಅವುಗಳನ್ನು ನೋಡಿಕೊಳ್ಳಬಹುದು. ಜತೆಗೆ, ಆ ವಿದ್ಯಾರ್ಥಿಯ ಉದ್ಯೋಗದಾತನೂ ಕೂಡ ಆ ಉದ್ಯೋಗ ನೀಡುವುದಕ್ಕೆ ಮುನ್ನ ಪರಿಶೀಲನೆ ಮಾಡಬಹುದು. ಇಲ್ಲಿ ಎಲ್ಲ ದಾಖಲೆಗಳು ಸುರಕ್ಷಿತವಾಗಿರುತ್ತವೆ ಹಾಗೂ ಕದಿಯುವ ಅಥವಾ ಕಳುವಾಗುವ ಅವಕಾಶ ಇರುವುದೇ ಇಲ್ಲ. ನಕಲು ಮಾಡುವ ಸಾಧ್ಯತೆಯೂ ಇರುವುದಿಲ್ಲ. ಮಳೆ, ಗಾಳಿಗೆ ಸಿಕ್ಕಿ ಹಾಳಾಗುತ್ತವೆ ಎನ್ನುವ ಭಯವೂ ಇರುವುದಿಲ್ಲ ಎಂದು ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

ರಾಜ್ಯದಲ್ಲಿ 2003ರಿಂದಲೇ ಎಸ್ಸೆಸ್ಸೆಲ್ಸಿ ಅಂಕಪಟ್ಟಿಯನ್ನು, 2008ರಿಂದ ದ್ವಿತೀಯ ಪಿಯುಸಿ ಅಂಕಪಟ್ಟಿಯನ್ನು ಡಿಜಿಟಲೀಕರಣ ಮಾಡಲಾಗಿದೆ. ಆಗಿನಿಂದ ಮುದ್ರಿತ ಅಂಕಪಟ್ಟಿಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದರೂ ಆ ದತ್ತಾಂಶ ನಮ್ಮಲ್ಲಿ ಇದೆ. ಆ ದತ್ತಾಂಶವನ್ನು ಈಗ ರಾಷ್ಟ್ರೀಯ ಶೈಕ್ಷಣಿಕ ದಾಖಲೆಗಳ ಸಂಗ್ರಹಗಾರ (National Academic Depository-NAD) ಪೋರ್ಟಲ್‌ಗೆ ಅಪ್‌ಲೋಡ್‌ ಮಾಡಲಾಗುವುದು ಎಂದರು ಅವರು.

ಶೈಕ್ಷಣಿಕ ಡಿಜಿ ಲಾಕರ್‌ ಆಕ್ಸಸ್‌ ಹೇಗೆ?

ಅಂದಹಾಗೆ ಈ ಲಾಕರ್‌ನ ಪ್ರವೇಶ ಸುಲಭ. ಪ್ರತಿ ವಿದ್ಯಾರ್ಥಿಯೂ ತನ್ನ ಆಧಾರ್‌ ಸಂಖ್ಯೆ ಮೂಲಕ National Academic Depository-NAD ಪೋರ್ಟಲ್‌ಗೆ ನೋಂದಣಿ ಮಾಡಿಕೊಳ್ಳಬಹುದು. ಅದರಲ್ಲಿ ತನ್ನ ಇ-ಕೆವೈಸಿಯನ್ನು ತುಂಬಿ ಅಪ್‌ಲೋಡ್‌ ಮಾಡಿದ ನಂತರ ತನ್ನೆಲ್ಲ ದಾಖಲೆಗಳನ್ನು ಯಾವುದೇ ವಿದ್ಯಾರ್ಥಿಯೂ ಆಕ್ಸೆಸ್‌ ಮಾಡಬಹುದು. ಇನ್ನು ಎಲ್ಲ ವಿವಿಗಳು, ಶೈಕ್ಷಣಿಕ ಸಂಸ್ಥೆಗಳು ತಮ್ಮಲ್ಲಿ ವ್ಯಾಸಂಗ ಮಾಡಿ ಪದವಿ ಅಥವಾ ಯಾವುದೇ ಸರ್ಟಿಫಿಕೇಟ್‌ ಪಡೆದ ವಿದ್ಯಾರ್ಥಿಯ ಎಲ್ಲ ದಾಖಲೆಗಳನ್ನು ಡಿಜಿಟಲ್‌ ಸಹಿಯೊಂದಿಗೆ ಈ ಪೋರ್ಟಲ್‌ಗೆ ಅಪ್‌ಲೋಡ್‌ ಮಾಡಬೇಕು ಎಂದರು ಡಿಸಿಎಂ.

ಹಣಕಾಸು ಹೊರೆ ಇಲ್ಲ

ನಮ್ಮ ವಿದ್ಯಾರ್ಥಿಗಳ ದಾಖಲೆಗಳಿಗೆ ಬೇಕಾದ ಸ್ಪೇಸ್‌ ಅನ್ನು NAD ನೀಡುತ್ತದೆ. ನಿರ್ವಹಣೆ ಮತ್ತು ಭದ್ರತೆಯ ಹೊಣೆಗಾರಿಕೆಯೂ ಆ ಸಂಸ್ಥೆಯದ್ದೇ. ಹೀಗಾಗಿ ರಾಜ್ಯಕ್ಕೆ ಹಣಕಾಸು ಹೊರೆ ಬೀಳುವುದಿಲ್ಲ. ನಮ್ಮ ಕಡೆಯಿಂದ ವಿದ್ಯಾರ್ಥಿಗಳ ದಾಖಲೆಗಳನ್ನು ಅಪ್‌ಲೋಡ್‌ ಮಾಡಿದರೆ ಸಾಕು ಎಂದರು ಅವರು.

ರಾಜ್ಯ ಹಿಂದೆ ಬಿದ್ದಿದೆ

ಡಿಜಟಲ್‌ ಇಂಡಿಯಾ ಡ್ರೈವ್‌ ಮೂಲಕ ಶೈಕ್ಷಣಿಕ ಡಿಜಿ ಲಾಕರ್‌ ವ್ಯವಸ್ಥೆಯನ್ನು ಕೇಂದ್ರ ಸರಕಾರ ಬಹಳ ಹಿಂದೆಯೇ ಅನುಷ್ಠಾನಕ್ಕೆ ತಂದಿದೆ. ಆದರೆ, ಇಂಥ ಕ್ರಾಂತಿಕಾರಕ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಹಿಂದಿನ ಸರಕಾರಗಳು ನಿರ್ಲಕ್ಷ್ಯ ತಾಳಿದ್ದವು. ಅಂಕಿ-ಅಂಶಗಳ ಪ್ರಕಾರ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವಲ್ಲಿ ಕರ್ನಾಟಕವು 22ನೇ ಸ್ಥಾನದಲ್ಲಿದೆ. ಐಟಿ, ತಂತ್ರಜ್ಞಾನ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿರುವ ನಮ್ಮ ರಾಜ್ಯ ಇಂಥ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಹಿಂದೆಮುಂದೆ ನೋಡಿರುವುದನ್ನು ಕಂಡು ನನಗೆ ನೋವಾಯಿತು. ಕೂಡಲೇ ಈ ವ್ಯವಸ್ಥೆಯನ್ನು ಜಾರಿ ಮಾಡಲು ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಡಾ.ಅಶ್ವತ್ಥನಾರಾಯಣ ವಿವರಿಸಿದರು.

ಇಡೀ ಜಗತ್ತು ಡಿಜಿಟಲ್‌ ಜಗತ್ತಿನ ಹಿಂದೆ ಶರವೇಗದಲ್ಲಿ ಪ್ರಯಾಣ ಮಾಡುತ್ತಿದೆ. ಈ ವಿಷಯದಲ್ಲಿ ಕರ್ನಾಟಕ ಯಾವ ಕಾರಣಕ್ಕೂ ಹಿಂದೆ ಬೀಳಬಾರದು. ಈ ಹಿನ್ನೆಲೆಯಲ್ಲಿ ಶೈಕ್ಷಣಿಕ ಡಿಜಿ ಲಾಕರ್‌ ಸಿಸ್ಟಮ್‌ ಜಾರಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ನನ್ನ ನೇತೃತ್ವದಲ್ಲಿ ಉನ್ನತಾಧಿಕಾರಿ ಸಮಿತಿ ರಚನೆ ಜತೆಗೆ, ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಚಾಲನಾ ಸಮಿತಿ, ಇ-ಗವರ್ನೆನ್ಸ್‌ ಯೋಜನಾ ನಿರ್ದೇಶಕರ ನೇತೃತ್ವದಲ್ಲಿ ಯೋಜನಾ ನಿರ್ವಹಣಾ ಸಮಿತಿಯನ್ನು ರಚಿಸಲಾಗಿದೆ ಎಂದು ಡಿಸಿಎಂ ತಿಳಿಸಿದರು.

ಇ- ಆಡಳಿತ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ, ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಪಿಯು ನಿರ್ದೇಶಕಿ ಸ್ನೇಹಲ್, ಪ್ರೌಢಶಿಕ್ಷಣ ಇಲಾಖೆಯ ನಿರ್ದೇಶಕಿ ಸುಮಂಗಲ ಹಾಜರಿದ್ದರು. ಎನ್ಎಡಿ ಪ್ರತಿನಿಧಿ ಅಮಿತ್ ಅವರು ದೆಹಲಿಯಿಂದಲೇ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.

ವೀಕೆಂಡ್ ಪಬ್ ಬಾರ್ ಸಂಸ್ಕೃತಿ ಬಿಟ್ಟು ವೀಕೆಂಡ್ ಅಗ್ರಿಕಲ್ಚರ್ ಸಂಸ್ಕೃತಿ ಬೆಳೆಯಲಿ:ಬಿ.ಸಿ.ಪಾಟೀಲ್ ಕರೆ

ಕೋಲಾರ,ಜ.6:ನಗರದವರಲ್ಲಿ ಕೃಷಿಯತ್ತ ಆಕರ್ಷಣೆ ಹೆಚ್ಚಾಗುತ್ತಿದೆ‌.ವೀಕೆಂಡ್ ಪಬ್ ಬಾರ್ ಬಿಟ್ಟು ವೀಕೆಂಡ್ ಅಗ್ರಿಕಲ್ಚರ್ ಹುಟ್ಟುವಂತಾಗಬೇಕು.ರೈತರೊಂದಿಗೆ ನಾವಿದ್ದೇವೆ ಸರ್ಕಾರವಿದೆ ಎಂಬ ಸಂದೇಶ ಆತ್ಮವಿಶ್ವಾಸ ಮೂಡಿಸುವುದೇ ನನ್ನ ಗುರಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಕರೆ ನೀಡಿದ್ದಾರೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಎನ್.ವಡ್ಡಹಳ್ಳಿಯಲ್ಲಿ ಆಯೋಜಿಸಿದ್ದ “ರೈತರೊಂದಿಗೊಂದು ದಿನ” ವೇದಿಕೆ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಬಿ.ಸಿ.ಪಾಟೀಲ್ ಉದ್ಘಾಟಿಸಿ ಮಾತನಾಡಿದರು.

ರೈತರ ಮಕ್ಕಳಿಗೆ ಕೃಷಿ ಕಾಲೇಜುಗಳಲ್ಲಿ ಈಗಿರುವ ಶೇ.40 ಮೀಸಲಾತಿಯನ್ನು ಶೇ.50ಕ್ಕೆ ಏರಿಸುವ ಚಿಂತನೆ ತಮ್ಮದಾಗಿದೆ.ಅಲ್ಲದೇ ಆಕಸ್ಮಿಕವಾಗಿ ಮೃತಪಟ್ಟ ರೈತರ ಪರಿಹಾರವನ್ನೂ ಸಹ ಹೆಚ್ಚಿಸುವ ಉದ್ದೇಶವಿದ್ದು ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಕೃಷಿ ಹಾಳಾದರೆ ದೇಶ ಉಳಿಯುವುದಿಲ್ಲ.ಕೃಷಿಯನ್ನು ನಂಬದಿದ್ದರೆ ಬದುಕೇ ಇಲ್ಲ.ಸರ್ಕಾರವನ್ನು ರೈತರು ಹುಡುಕಿಕೊಂಡು ಹೋಗುವುದಲ್ಲ.ಸರ್ಕಾರವೇ ರೈತನ ಹತ್ತಿರ ಬರುವಂತಹ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.ರೈತನನ್ನು ಆತ್ಮವಿಶ್ವಾಸಿಯನ್ನಾಗಿಸುವುದೇ ನನ್ನ ಉದ್ದೇಶ ಎಂದು ಬಿ.ಸಿ.ಪಾಟೀಲ್ ಹೇಳಿದರು.

ಕೃಷಿ ಸಚಿವನಾದ ಆರಂಭದಲ್ಲಿ ಕೃಷಿ ತಜ್ಞರ ಅಧಿಕಾರಿಗಳ ಸಭೆ ನಡೆಸಿ ರೈತರ ಆತ್ಮಹತ್ಯೆ ಬಗ್ಗೆ ಚರ್ಚಿಸಿ ಕಾರಣ ಕೇಳಿದಾಗ ಸಮಗ್ರ ಕೃಷಿ ಪದ್ಧತಿ ಇದಕ್ಕೆ ಪರಿಹಾರ ಎಂಬ ಅಭಿಪ್ರಾಯ ಕೇಳಿಬಂದಿತು.ಕೋವಿಡ್ ಲಾಕ್ಡೌನ್‌ನಲ್ಲಿ ಕೃಷಿ ಚಟುವಟಿಕೆ ನಿಲ್ಲಬಾರದು ರೈತರಿಗೆ ಟೋಲ್‌ಗಳೆಲ್ಲ ಮುಕ್ತವಾಗಿ ತೆರೆದು ಕೃಷಿ ಚಟುವಟಿಕೆ ಮಳೆ ಬೆಳೆಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಯಿತು.

ಜಗತ್ತಿಗೆ ಅನ್ನ ನೀಡುವ ಆತ್ಮಸ್ಥೈರ್ಯಿ.ಕೋಲಾರ ರೈತರ ಆತ್ಮಸ್ಥೈರ್ಯ ರಾಜ್ಯಕ್ಕೆ ಮಾದರಿಯಾಗಬೇಕೆಂಬ ಉದ್ದೇಶದಿಂದ ರೈತರೊಂದಿಗೊಂದು ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ರೈತರ ಕೃಷಿ ಲಾಭದಾಯಕವಾಗಬೇಕು. ನಾನು ರೈತನ ಮಗ.ಬರೀ ಬತ್ತ ಬೆಳೆದರೆ ಲಾಭಬರದು‌.ಕಬ್ಬು ವರ್ಷದ ಬೆಳೆ ಮಾತ್ರ ಎಂಬ ಅನುಭವವಿದೆ.ಸಮಗ್ರ ಕೃಷಿ ಮಾಡಿದ ರೈತ ಒಂದಲ್ಲ ಒಂದು ರೀತಿ ಲಾಭದಾಯಕವಾಗುತ್ತಾನೆ. ಮಂಡ್ಯದ ಲಕ್ಷ್ಮೀದೇವಮ್ಮ,ಕೋಲಾರದ ಅಶ್ವತ್ಥಮ್ಮ ಇವರುಗಳು ಭೂಮಿ ನಂಬಿ ಸಮಗ್ರಕೃಷಿಯನ್ನು ಅನುಸರಿಸಿ ಬದುಕನ್ನು ಬಂಗಾರವನ್ನಾಗಿಸಿಕೊಂಡಿದ್ದಾರೆ.ಕೃಷಿ ಇಲಾಖೆ ಸರ್ಕಾರ ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದೆ. ರೈತರಿಗೆ ಆತ್ಮಬಲ ತುಂಬಲು ಅವರ ಸಮಸ್ಯೆಗಳನ್ನು ಆಲಿಸಲು ಪರಿಹಾರ ಕಲ್ಪಿಸಲು ನಾನು ಕಾರ್ಯಕ್ರಮ ಆಯೋಜಿಸಿ ಜಿಲ್ಲೆಗೆ ಭೇಟಿ ನೀಡುತ್ತಿದ್ದೇನೆ‌.ಯುವಕರು ಕಾಣದ ದೂರದ ಊರಿನಲ್ಲಿ ಕಾರ್ಖಾನೆಗೆ ಎಂದು ಬಂದು ಅನ್ನಕಾಣದೇ ನರಳುವುದಕ್ಕಿಂತ ಊರಿನಲ್ಲಿರುವ ಜಮೀನಿನಲ್ಲಿ ಭೂಮಿತಾಯಿಯನ್ನು ನಂಬಿ ಬದುಕಬೇಕೆಂದು ಸ್ಫೂರ್ತಿಯ ಮಾತುಗಳನ್ನಾಡಿದರು.

ಜ.7 ರಂದು ವಿಧಾನಸೌಧದ ಮುಂಭಾಗ ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್ ಎಂಬ 40 ” ಕೃಷಿ ಸಂಜೀವಿನಿ” ವಾಹನಗಳನ್ನು ಮುಖ್ಯಮಂತ್ರಿಗಳು ಲೋಕಾರ್ಪಣೆಗೊಳಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ರೈತಸಂಪರ್ಕ ಕೇಂದ್ರಕ್ಕೆ ಕೃಷಿ ಸಂಜೀವಿನಿ ವಾಹನ ನೀಡುವ ಉದ್ದೇಶವಿದೆ. ಗ್ರಾ.ಪಂಚಾಯಿತಿಗಳಿಗೊಂದು ಮಣ್ಣುಪರೀಕ್ಷಾ ಕೇಂದ್ರ ಹೊಂದುವ ಉದ್ದೇಶ ಕರ್ನಾಟಕ ಸರ್ಕಾರದ್ದಾಗಿದ್ದು,ಕೇಂದ್ರಕ್ಕೆ‌ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ರೈತ ತನ್ನ ಬೆಳೆಯನ್ನು ಸಂಸ್ಕರಣೆ ಮಾಡಿ ತಾನೇ ಬೆಲೆ ನಿಗದಿಪಡಿಸಬೇಕು.ಜ.11 ರಿಂದ ಮೈಸೂರಿನಲ್ಲಿ ಪ್ರತಿ ಜಿಲ್ಲೆಯಿಂದ ಆಯ್ದ ರೈತರಿಗೆ ಒಟ್ಟು 500 ರೈತರಿಗೆ ಆಹಾರ ಸಂಸ್ಕರಣೆ ಮಾರ್ಕೇಟಿಂಗ್ ಮಾಡುವ ಒಂದು ವಾರಗಳ ಕಾಲ ತರಬೇತಿ ನೀಡಲಾಗುತ್ತಿದ್ದು,ರೈತರು ಇದರ ಲಾಭ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಸಂಸದ ಮುನಿಸ್ವಾಮಿ ಮಾತನಾಡಿ,
ಕೃಷಿ ಸಚಿವ ಬಿ.ಸಿ.ಪಾಟೀಲ್ ಒಬ್ಬ ಯಶಸ್ವಿ ಮಾದರಿ ಸಚಿವರಾಗಿದ್ದಾರೆ. ರೈತರೊಂದಿಗೊಂದು ದಿನ ಈ ಕಾರ್ಯಕ್ರಮ ಕೋಲಾರದ ಇತಿಹಾಸದಲ್ಲಿ ಉಳಿಯುವಂತಹ ಕಾರ್ಯಕ್ರಮವಾಗಿದೆ.ಜನಪ್ರತಿನಿಧಿಗಳಿಗೆ ಬಲವಾದ ಇಚ್ಛೆ ಬೇಕು.ಇದನ್ನು ರೈತರಿಗಾಗಿ ಹಲವು ಉಪಯೋಗಿ ಕಾರ್ಯಕ್ರಮ-ಯೋಜನೆಗಳನ್ನು ರೂಪಿಸುವ ಮೂಲಕ ಬಿ.ಸಿ.ಪಾಟೀಲರು ಯಶಸ್ವಿಗೊಳಿಸಿದ್ದಾರೆ.
ರಾಜ್ಯ ಪ್ರವಾಸ ಮಾಡಿ ರೈತರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಪಣತೊಟ್ಟು ಕೃಷಿ ಸಚಿವ ರೈತ ಸಚಿವನಾಗಿ ಶ್ರಮವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಕೋಲಾರ ಜಿಲ್ಲೆಯಲ್ಲಿ ರೈತರೊಂದಿಗೊಂದು ದಿನ ರೈತರಲ್ಲಿ ಹಬ್ಬದ ಉತ್ಸಾಹ ಮೂಡಿಸಿದೆ.ರೈತರಲ್ಲಿಯ ಈ ಹರ್ಷಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲರು ಕಾರಣರಾಗಿದ್ದಾರೆ‌. ಬಿ.ಸಿ.ಪಾಟೀಲರು ರಾಜ್ಯದಲ್ಲೆಡೆ ಕೋಲಾರ ಜಿಲ್ಲೆಯ ಮಾದರಿಯನ್ನು ಶ್ಲಾಘಿಸುತ್ತಿದ್ದಾರೆ.ಇಸ್ರೇಲ್‌ಗೆ ಕೃಷಿಯ ಬದಲಿಗೆ ನಮ್ಮದೇ ಕೋಲಾರದ ಮಾದರಿ ಸಮಗ್ರ ಕೃಷಿಯನ್ನೇ ಉದಾಹರಣೆ ನೀಡುತ್ತಾರೆ.ಕೋಲಾರದ ರೈತರು ಬಹಳ ಧೈರ್ಯಶಾಲಿಗಳು ಆತ್ಮಸ್ಥೈರಿಗಳು.ಸಮಗ್ರ ಕೃಷಿಯಲ್ಲಿ ಸಾಧನೆ ಮಾಡುತ್ತಿರುವ ಈ ಕೋಲಾರದ ಕೃಷಿ ಮಾರುಕಟ್ಟೆ ಏಷ್ಯಾ ಖಂಡದಲ್ಲಿಯೇ ಎರಡನೇ ದೊಡ್ಡ ಮಾರುಕಟ್ಟೆ ಎಂಬ ಹೆಸರು ಪಡೆದಿದೆ ಎಂದರು.

ಹಿಂದೆ ರೈತರಿಗೆ ಸೌಲಭ್ಯಗಳು ಸಿಗಬೇಕಾದರೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿತ್ತು.ಅದನ್ನು ತೊಡೆದುಹಾಕುವ ಕೆಲಸವನ್ನು ಕೇಂದ್ರ ಮತ್ತು ರಾಜ್ಯಬಿಜೆಪಿ ಸರ್ಕಾರಗಳು ಮಾಡಿಕೊಡುತ್ತಿವೆ. ಪ್ರಧಾನಿ ಮೋದಿ ಹಾಗೂ ಕೃಷಿ ಸಚಿವ ಬಿ‌.ಸಿ.ಪಾಟೀಲ್ ರಾಜ್ಯದ ರೈತರಿಗೆ ಪಿಎಂ ಸಿಎಂ ಕಿಸಾನ್ ಹಣ ಕಂತು ಯಶಸ್ವಿಪೂರ್ಣವಾಗಿ ಬಿಡುಗಡೆಯಾಗುವಂತೆ ಮಾಡಿದ್ದಾರೆ.ಕೃಷಿ ಮಸೂದೆ ತಿದ್ದುಪಡಿ ಮೂಲಕ ರೈತರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ.ರೈತ ಉತ್ಪಾದಕ ಸಂಘಗಳು ರೈತರಿಗೆ ನೆರವು ಮೂಡಿಸಿದ್ದು,ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಪುಟದ ಸದಸ್ಯರೆಲ್ಲ ರೈತರ ಬೆನ್ನಿಗೆ ನಿಂತಿದ್ದಾರೆ ಎಂದು ಶ್ಲಾಘಿಸಿದರು.

ಶಾಸಕ ನಂಜೇಗೌಡ ಮಾತನಾಡಿ,ಬಿ.ಸಿ.ಪಾಟೀಲ್ ಸಚಿವರಾಗಿ 11 ತಿಂಗಳುಗಳ ಈ ಅವಧಿಯಲ್ಲಿ ನಾಲ್ಕುಬಾರಿ ಕೋಲಾರಕ್ಕೆ ಭೇಟಿಕೊಟ್ಟು ಇಲ್ಲಿನ ಕೃಷಿ ರೈತರನ್ನು ಅವಲೋಕಿಸಿದ್ದಕ್ಕೆ ಧನ್ಯವಾದಗಳು.ರೈತ ಕುಟುಂಬದಿಂದ ಬಂದಿರುವ ಬಿ.ಸಿ.ಪಾಟೀಲರು ಕೃಷಿ ಮಂತ್ರಿಗಳಾದ ಮೇಲೆ ರೈತರಿಗಾಗಿ ರಾಜ್ಯಾದ್ಯಂತ ಓಡಾಡುತ್ತಿದ್ದಾರೆ.ಕೊರೋನಾ ಸಂದರ್ಭದಲ್ಲಿಯೂ ರೈತರಿಗಾಗಿ ದುಡಿದವರು ಎಂದು ಮೆಚ್ಚಿದರು.

ಕೋಲಾರ ಉಸ್ತುವಾರಿ ಸಚಿವ ಹೆಚ್.ನಾಗೇಶ್ ಮಾತನಾಡಿ,
ಕೃಷಿ ಇಲಾಖೆಯಿಂದ ಮಣ್ಣು ಜಮೀನು ನೀರು ಪರೀಕ್ಷೆಗೆ ಕೃಷಿ ಸಂಜೀವಿನಿ ವಾಹನ ಬಿಡುಗಡೆಗೊಳಿಸುತ್ತಿದ್ದು ರೈತರು ಇದರ ಲಾಭಪಡೆದುಕೊಳ್ಳಬೇಕು‌.ಕಡ್ಡಾಯವಾಗಿ ರೈತರು ಮಣ್ಣುಪರೀಕ್ಷೆ ಮಾಡಿಸಬೇಕು.ಅಂತರ್ಜಲ ಹೆಚ್ಚಳ ಮಾಡುವ ಉದ್ದೇಶವಿದೆ. ಕೋಲಾರ ಕೃಷಿಯನ್ನು ಬಿ.ಸಿ.ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು ಜಿಲ್ಲೆಯ ಕೃಷಿಗೆ ಇನ್ನಷ್ಟು ಅನುದಾನ ನೀಡಬೇಕು.ಜಿಲ್ಲೆಯ 111534 ರೈತರ ಖಾತೆಗೆ ನೇರವಾಗಿ ಪಿಎಂ ಕಿಸಾನ್ ಹಣ ವರ್ಗಾಯಿಸಲಾಗುತ್ತಿದೆ. ಟೊಮಾಟೋ ಸೇರಿದಂತೆ ಇತರೆ ತರಕಾರಿ ಬೆಳೆಗಳು ಹೊರರಾಜ್ಯ ಸೇರಿದಂತೆ ವಿದೇಶಕ್ಕೆ ರಫ್ತಾಗುತ್ತಿದೆ.ಕೋಲಾರ ಮಾದರಿ ಜಿಲ್ಲೆಯಾಗಿದೆ.ಜಿಲ್ಲೆಯಲ್ಲಿ ಟೊಮಾಟೋ ಸಂಸ್ಕರಣ ಘಟಕ ತೆರೆಯುವಂತೆ ಮನವಿ ಮಾಡಿದರು.

ತರಕಾರಿಗುಚ್ಛ ನೀಡಿ ವೇದಿಕೆಗೆ ಸಚಿವರನ್ನು ಬರಮಾಡಿಕೊಳ್ಳಲಾಯಿತು.ಸಮಗ್ರ ಕೃಷಿ, ಸಾವಯವ ಕೃಷಿ,ರೇಷ್ಮೆ,ಜೇನುಕೃಷಿ ಸೇರಿದಂತೆ ವಿವಿಧ ಕೃಷಿ ಪದ್ಧತಿಯಲ್ಲಿ ಸಾಧನೆಗೈದ ಪ್ರಗತಿಪರರೈತರನ್ನು ಸನ್ಮಾನಿಸಿ ಗೌರವಿಸಲಾಯಿತು.

ಜಿಲ್ಲಾಧಿಕಾರಿ ಸತ್ಯಭಾಮ ಸ್ವಾಗತಿಸಿ, ಕೃಷಿ ಇಲಾಖೆ ನಿರ್ದೇಶಕ ಶ್ರೀನಿವಾಸ್ ಪ್ರಾಸ್ತಾವಿಕ ಮಾತನಾಡಿದರು.ಮಾಲೂರು ಶಾಸಕ ನಂಜೇಗೌಡ, ಕೋಲಾರ ಜಿಲ್ಲಾ ಕೃಷಿ ಅಧಿಕಾರಿ ಉಪವಿಭಾಗಾಧಿಕಾರಿ ಸೋಮಶೇಖರ್, ಸಿಇಒ ನಾಗರಾಜ್, ಜಿ.ಪಂ,ತಾ.ಪಂ.ನಗರಸಭಾ ಪದಾಧಿಕಾರಿಗಳು ಉಪಸ್ಥಿತರಿದ್ದರು.