ಒಂದು ದೇಶ, ಒಂದು ಗ್ಯಾಸ್ ಗ್ರಿಡ್ ಯೋಜನೆಗೆ ಸರ್ಕಾರ ಬದ್ಧ: ಪ್ರಧಾನಿ ಮೋದಿ

ಬೆಂಗಳೂರು: ಒಂದು ದೇಶ, ಒಂದು ಗ್ಯಾಸ್ ಗ್ರಿಡ್ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಮೂಲಕ ದೇಶದಲ್ಲಿ ನೈಸರ್ಗಿಕ ಅನಿಲದ ಬಳಕೆಯ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲು ಭಾರತ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನುಡಿದರು.

ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ್ ಪೈಪ್ ಲೈನ್ ಅನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಮೋದಿ, ಭಾರತ ಸರ್ಕಾರವು ಇಂಧನ ಪೂರೈಕೆಗೆ ಒಂದು ಸಮಗ್ರ ಯೋಜನೆಯನ್ನು ರೂಪಿಸಿದ್ದು, ಪರಿಸರ ಸ್ನೇಹಿ ಇಂಧನ ಬಳಕೆಗೆ ಆದ್ಯತೆ ನೀಡುತ್ತಿದೆ. ಆ ಮೂಲಕ ಜನ ಸ್ನೇಹಿ ಹಾಗೂ ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸಲು ಶ್ರಮಿಸುತ್ತಿದೆ ಎಂದು ಪ್ರತಿಪಾದಿಸಿದರು.

1987 ರಿಂದ 2014 ರ ಅವಧಿಯಲ್ಲಿ ದೇಶದಲ್ಲಿ 15 ಸಾವಿರ ಕಿ.ಮೀ. ನೈಸರ್ಗಿಕ ಅನಿಲ ಪೈಪ್ ಲೈನ್ ಅಳವಡಿಸಲಾಗಿತ್ತು. ಆದರೆ ಕಳೆದ ಆರು ವರ್ಷಗಳ ಅವಧಿಯಲ್ಲಿ 16 ಸಾವಿರ ಕಿ.ಮೀ. ನಷ್ಟು ನೈಸರ್ಗಿಕ ಅನಿಲ ಪೈಪ್ ಲೈನ್ ಅಳವಡಿಸುವ ಹೊಸ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಮುಂದಿನ ನಾಲ್ಕಾರು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಪ್ರಧಾನ ಮಂತ್ರಿಯವರು ತಿಳಿಸಿದರು.

ಸಾರಿಗೆ ಸಂಪರ್ಕ ಹಾಗೂ ಪರಿಸರ ಸ್ನೇಹಿ ಇಂಧನ ವಲಯದಲ್ಲಿ ಪ್ರಗತಿ ಸಾಧಿಸಿದ ದೇಶಗಳು ಅಭಿವೃದ್ಧಿ ನಕ್ಷೆಯಲ್ಲಿ ಮುಂಚೂಣಿಯಲ್ಲಿರುತ್ತವೆ. ಭಾರತವೂ ಅಭಿವೃದ್ಧಿಯ ಮುಂಚೂಣಿಯಲ್ಲಿರಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.

ಒಂದು ದೇಶ ಒಂದು ಗ್ಯಾಸ್ ಗ್ರಿಡ್ ಪರಿಕಲ್ಪನೆಯು ಪೂರ್ಣಪ್ರಮಾಣದಲ್ಲಿ ಸಾಕಾರಗೊಂಡಾಗ ರಸಗೊಬ್ಬರ, ರಾಸಾಯನಿಕ, ಪೆಟ್ರೋಲಿಯಂ ಮತ್ತು ಇಂಧನ ವಲಯಗಳಿಗೆ ಹೆಚ್ಚಿನ ಲಾಭವಾಗಲಿದೆ. ಬಡ, ಮಧ್ಯಮ ವರ್ಗದ ಜನರು ಮತ್ತು ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗಲಿದೆ. ಅಲ್ಲದೆ ಸಾವಿರಾರು ಕೋಟಿ ವಿದೇಶಿ ವಿನಿಮಯ ಮೊತ್ತ ಉಳಿತಾಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ದೇಶದಲ್ಲಿ ನೈಸರ್ಗಿಕ ಅನಿಲ ಬಳಕೆ ಶೇ 6.3 ರಷ್ಟಿದ್ದು, 2030ರ ವೇಳೆಗೆ ಇದನ್ನು ಶೇ. 15ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಕೊಚ್ಚಿ-ಮಂಗಳೂರು ಪೈಪ್ ಲೈನ್ ನಿಂದ ಈ ಭಾಗದ ಕೈಗಾರಿಕೋದ್ಯಮಗಳಿಗೆ ಅನುಕೂಲವಾಗಲಿದೆ. ಜೊತೆಗೆ ವಾಹನಗಳಲ್ಲಿ ಸಿ ಎನ್ ಜಿ ಬಳಕೆಗೂ ಉತ್ತೇಜನ ದೊರೆಯಲಿದೆ. ಈ ವ್ಯಾಪ್ತಿಯಲ್ಲಿ ಸುಮಾರು 700 ಸಿಎನ್ ಜಿ ಸ್ಟೇಷನ್ ಗಳನ್ನು ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಪೈಪ್ ಲೈನ್ ಯೋಜನೆಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಭಾಗದಲ್ಲಿ 4 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಪೈಪ್ ಮೂಲಕ ನೈಸರ್ಗಿಕ ಅನಿಲ ಪೂರೈಸಲಾಗುವುದು, ಅಲ್ಲದೆ, ವಾಣಿಜ್ಯ ಚಟುವಟಿಕೆಗಳಿಗೆ, ಉದ್ದಿಮೆಗಳಿಗೆ, ವಿಶೇಷವಾಗಿ ಎಂ.ಸಿ.ಎಫ್ ಹಾಗೂ ಎಂ.ಆರ್. ಪಿ.ಎಲ್ ಗಳಿಗೆ ಅನುಕೂಲವಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಧಾಬೋಲ್-ಬೆಂಗಳೂರು ಅನಿಲ್ ಪೈಪ್ ಲೈನ್ ಯೋಜನೆ ಈಗಾಗಲೇ ಕಾರ್ಯಗತವಾಗಿದ್ದು, ಬೆಂಗಳೂರು ನಗರವೊಂದರಲ್ಲೇ 25 ಸಾವಿರ ಮನೆಗಳಿಗೆ ಪೈಪ್ ಮೂಲಕ ನೈಸರ್ಗಿಕ ಅನಿಲ ಪೂರೈಸಲಾಗುತ್ತಿದೆ. ಸುಮಾರು 2.8 ಲಕ್ಷಕ್ಕೂ ಹೆಚ್ಚು ಜನರು ನೈಸರ್ಗಿಕ ಅನಿಲ ಸಂಪರ್ಕ ಕೋರಿ ನೋಂದಾಯಿಸಿಕೊಂಡಿದ್ದು, 1.68 ಲಕ್ಷ ಮನೆಗಳಲ್ಲಿ ಅಗತ್ಯ ಸೌಕರ್ಯ ಕಲ್ಪಿಸಲಾಗಿದೆ.

ಮುಂದಿನ ದಿನಗಳಲ್ಲಿ ರಾಜ್ಯದ ಪ್ರಮುಖ ನಗರಗಳಲ್ಲಿ ನೈಸರ್ಗಿಕ ಅನಿಲ ಬಳಕೆ ಪ್ರಮಾಣ ಹೆಚ್ಚಲಿದೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದರು. ಹಲವು ಸವಾಲುಗಳ ನಡುವೆಯೂ ಯೋಜನೆಯನ್ನು ಪೂರ್ಣಗೊಳಿಸಿದ ಪ್ರಧಾನ ಮಂತ್ರಿಯವರ ದೃಢಸಂಕಲ್ಪವನ್ನು ಮುಖ್ಯಮಂತ್ರಿಗಳು ಶ್ಲಾಘಿಸಿದರು.

ಸಮಾರಂಭದಲ್ಲಿ ಮಾತನಾಡಿದ ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರು ಹಲವು ಅಡೆತಡೆಗಳ ನಡುವೆಯೂ ಪೂರ್ಣಗೊಂಡ ಈ ಯೋಜನೆಯಿಂದ ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೇಂದ್ರ ಪೆಟ್ರೋಲಿಯಂ ಮತ್ತು ಉಕ್ಕು ಸಚಿವ ಧರ್ಮೇಂದ್ರ ಪ್ರಧಾನ್ ಅವರು ಮಾತನಾಡಿ, ಭಾರತ ಸರ್ಕಾರವು ದೇಶದಲ್ಲಿ ನೈಸರ್ಗಿಕ ಅನಿಲ ಪೈಪ್ ಲೈನ್ ವ್ಯಾಪ್ತಿಯನ್ನು ದ್ವಿಗುಣ ಗೊಳಿಸುವ ಮೂಲಕ, ನೈಸರ್ಗಿಕ ಅನಿಲ ಬಳಕೆಯನ್ನು ಶೇ. 6.3 ರಿಂದ ಶೇ. 15ಕ್ಕೆ ಹೆಚ್ಚಿಸಲು ಉದ್ದೇಶಿಸಿದೆ ಎಂದು ನುಡಿದರು.

ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್, ಕರ್ನಾಟಕ ರಾಜ್ಯಪಾಲ ವಜುಭಾಯಿ ವಾಲಾ, ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ, ಕೇಂದ್ರ ವಿದೇಶಾಂಗ ವ್ಯವಹಾರ ಖಾತೆ ರಾಜ್ಯ ಸಚಿವ ವಿ. ಮುರಳೀಧರನ್ ಮತ್ತು ಇತರ ಗಣ್ಯರು ಈ ವರ್ಚುವಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ದೇಸಿ ಕೊರೊನಾ ಲಸಿಕೆ ಕುರಿತು ವಿನಾಕಾರಣ ಟೀಕೆ ಬೇಡ: ಸುಧಾಕರ್

ಬೆಂಗಳೂರು: ನಮ್ಮ ದೇಶದ್ದೇ ಆದ ಭಾರತ್ ಬಯೋಟೆಕ್ ಕಂಪನಿ ಕೊರೊನಾ ಲಸಿಕೆ ಅಭಿವೃದ್ಧಿಪಡಿಸಿದೆ. ಆದರೆ ಈ ಕುರಿತು ವಿನಾಕಾರಣ ಟೀಕೆ ಮಾಡುವ ಮೂಲಕ ವಿಜ್ಞಾನಿಗಳಿಗೆ ಅಗೌರವ ತೋರಬಾರದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ.

ಈ ಕುರಿತು ಸಚಿವರು ಸರಣಿ ಟ್ವೀಟ್ ಮಾಡಿದ್ದಾರೆ. ಕೋವಿಡ್ ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಭಾರತದ ಕಂಪನಿ ಕೊವ್ಯಾಕ್ಸಿನ್ ಅಭಿವೃದ್ಧಿಪಡಿಸಿದೆ. ಭಾರತ್ ಬಯೋಟೆಕ್ ಬಹಳ ಹೆಸರುವಾಸಿ ಹಾಗೂ ನಂಬಿಕೆಗೆ ಅರ್ಹವಾದ ಕಂಪನಿಯಾಗಿದ್ದು, ಎಚ್ 1 ಎನ್ 1, ರೋಟಾವೈರಸ್, ರೇಬಿಸ್, ಚಿಕೂನ್ ಗುನ್ಯಾ, ಝೀಕಾ ಸೇರಿದಂತೆ 16 ರೋಗಗಳಿಗೆ ಲಸಿಕೆ ಆವಿಷ್ಕರಿಸಿದೆ. ಕಂಪನಿಯ ಸಂಸ್ಥಾಪಕ ಡಾ.ಕೃಷ್ಣ ಎಲ್ಲಾ ಅವರು ಸಾಧಾರಣ ಕುಟುಂಬದಿಂದ ಬಂದವರಾಗಿದ್ದು, ಯುನಿಸೆಫ್ ಸಹಯೋಗದಲ್ಲಿ 150 ಕ್ಕೂ ಹೆಚ್ಚು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ 400 ಕೋಟಿ ಡೋಸ್ ಲಸಿಕೆಗಳನ್ನು ವಿತರಣೆ ಮಾಡಿದ್ದಾರೆ. ಕೋವ್ಯಾಕ್ಸಿನ್ ನ 3 ನೇ ಹಂತದ ಕ್ಲಿನಿಕಲ್ ಟ್ರಯಲ್ ನಲ್ಲಿ 24,000 ಮಂದಿ ಭಾಗವಹಿಸಿದ್ದು, ಈ ಬಗ್ಗೆ ಶೀಘ್ರವೇ ದತ್ತಾಂಶ ಲಭ್ಯವಾಗಲಿದೆ ಎಂದು ಸಚಿವರು ಹೇಳಿದ್ದಾರೆ.

ಕೊರೊನಾ ಲಸಿಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕು. ನಂತರ ಮಾತ್ರ ಅದನ್ನು ಅಧಿಕೃತ ಎನ್ನಲಾಗುತ್ತದೆ. ಈ ಲಸಿಕೆಯ ಅಡ್ಡ ಪರಿಣಾಮ 15% ಗಿಂತಲೂ ಕಡಿಮೆ ಇದೆ. ಇದು ಬಹಳ ಸುರಕ್ಷಿತ ಲಸಿಕೆ. ಒಬ್ಬ ಆರೋಗ್ಯ ಸಚಿವನಾಗಲ್ಲದೆ, ಸ್ವತಃ ಒಬ್ಬ ವೈದ್ಯಕೀಯ ವೃತ್ತಿಪರನಾಗಿ ನಮ್ಮ ಮನವಿ ಏನೆಂದರೆ, ಯಾರೂ ಕೂಡ ಲಸಿಕೆಯ ಬಗ್ಗೆ ವಿನಾಕಾರಣ ಟೀಕಿಸಬಾರದು. ಈ ಮೂಲಕ ವಿಜ್ಞಾನಿಗಳ ಪರಿಶ್ರಮಕ್ಕೆ ಧಕ್ಕೆ ತರಬಾರದು ಎಂದು ಸಚಿವರು ಕೋರಿದ್ದಾರೆ.

ಕೊರೊನಾ ಲಸಿಕೆಗೆ ಭಾರತ ಕೈಗೊಂಡಿರುವ ವೈಜ್ಞಾನಿಕ ಸಂಶೋಧನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಬಿಲ್ ಗೇಟ್ಸ್ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರ ಹೇಳಿಕೆ ಕುರಿತಂತೆ ಟ್ವೀಟ್ ಮಾಡಿರುವ ಸಚಿವರು ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಕೋವಿಡ್ ಲಸಿಕೆ ಸಂಶೋಧನೆಯಲ್ಲಿ ಭಾರತ ಮುಂಚೂಣಿಯಲ್ಲಿದ್ದು, ‘ಸರ್ವೆಜನಾ ಸುಖಿನೋಭವಂತು’, ವಸುದೈವ ಕುಟುಂಬಕಮ್’ ಆದರ್ಶದಂತೆ ಇಡೀ ಮನುಕುಲಕ್ಕೆ ಲಸಿಕೆ ಒದಗಿಸುವಲ್ಲಿ ಭಾರತ ಮಹತ್ವದ ಪಾತ್ರ ವಹಿಸಲಿದೆ ಎಂದು ತಿಳಿಸಿದ್ದಾರೆ.

11 ಮಂದಿಗೆ ಮಾತ್ರ ಹೊಸ ಸೋಂಕು: ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಯು.ಕೆ.ಯಿಂದ ಬಂದಿರುವ 75 ಮಂದಿ ಹಾಗೂ ಸಂಪರ್ಕಿತರ ಪೈಕಿ 37 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಪೈಕಿ 11 ಮಂದಿಗೆ ಮಾತ್ರ ರೂಪಾಂತರಗೊಂಡ ಕೊರೊನಾ ಬಂದಿದೆ. 17 ಮಂದಿ ಪ್ರಾಥಮಿಕ ಸಂಪರ್ಕಿತರಾಗಿದ್ದಾರೆ. ರೂಪಾಂತರಗೊಂಡ ಸೋಂಕು ಬಂದವರ ಸಂಖ್ಯೆ ಏರಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಗೃಹ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಯು.ಕೆ.ಯಿಂದ ಬಂದ ಉಳಿದವರ ಸಂಪರ್ಕ ಪತ್ತೆ ಮಾಡಲು ಸೂಚಿಸಲಾಗಿದೆ. ಅದೇ ರೀತಿ ಬಿಬಿಎಂಪಿ ಆಯುಕ್ತರೊಂದಿಗೂ ಚರ್ಚಿಸಲಾಗಿದೆ. ಆದಷ್ಟು ಶೀಘ್ರದಲ್ಲಿ ಉಳಿದವರ ಸಂಪರ್ಕ ಪತ್ತೆಯಾಗಲಿದೆ ಎಂದರು.

ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು, ಶಿಕ್ಷಕರಿಗೆ ಕೊರೊನಾ ಬಂದಿರುವ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ನಿಖರವಾಗಿ ಮಾಹಿತಿ ಪಡೆಯಲಾಗುವುದು. ಆದರೆ ಗಾಬರಿಯಾಗುವಂತಹ ವರದಿಯೇನೂ ಬಂದಿಲ್ಲ. ಇದನ್ನು ದೊಡ್ಡದು ಮಾಡಿ ಗಾಬರಿಪಡಿಸುವುದು ಬೇಡ ಎಂದು ಮನವಿ ಮಾಡಿದರು.

ಕೋವಿಡ್‌-19 ಲಸಿಕೆ ಪಾಲಿಟಿಕ್ಸ್‌; ಇದು ಕೆಲವರಿಗೆ ಅಂಟಿರುವ ಜಾಡ್ಯ ಎಂದ ಡಿಸಿಎಂ

File photo

ಬೆಂಗಳೂರು: ಕೋವಿಡ್-19‌ ಲಸಿಕೆ ನೀಡುವ ವಿಚಾರದಲ್ಲಿ ಯಾರು ರಾಜಕಾರಣ ಮಾಡಬಾರದು ಎಂದು ಮನವಿ ಮಾಡಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಈ ವಿಷಯದಲ್ಲಿ ಪ್ರತಿಪಕ್ಷಗಳು ಸರಕಾರಕ್ಕೆ ರಚನಾತ್ಮಕ- ಮೌಲಿಯುತ ಸಲಹೆಗಳನ್ನು ನೀಡಬೇಕು ಎಂದು ಕೋರಿದರು.

ಬೆಂಗಳೂರಿನಲ್ಲಿ ಭಾನುವಾರ ಚಿತ್ರಸಂತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರತಿಯೊಂದರಲ್ಲಿಯೂ ರಾಜಕೀಯ ಹುಡುಕುವುದು ಕೆಲವರಿಗೆ ಅಂಟಿರುವ ಜಾಡ್ಯ. ಅದಕ್ಕೇನು ಮಾಡಲು ಸಾಧ್ಯ? ಸಹಕಾರ ಕೊಡಿ ಎಂದಷ್ಟೇ ಸರಕಾರ ಮನವಿ ಮಾಡಲು ಸಾಧ್ಯವಷ್ಟೇ ಎಂದರು.

ದೇಶದಲ್ಲಿ ಕೋವಿಡ್‌ ಲಸಿಕೆ ನೀಡಲು ಭಾರತ್‌ ಬಯೋಟೆಕ್‌ಗೆ ಕೇಂದ್ರ ಸರಕಾರ ಅನುಮತಿ ನೀಡಿರುವುದು ಸ್ವಾಗತಾರ್ಹ. ಮೊದಲ ಹಂತದಲ್ಲಿ ಕೋವಿಡ್‌ ವಾರಿಯರ್ಸ್‌ಗೆ ಹಾಗೂ ಈ ಮಾರಿಯ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸುತ್ತಿರುವವರಿಗೆ ಲಸಿಕೆ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಭಾರತ ಅತಿ ಹೆಚ್ಚು ಜನಸಂಖ್ಯೆಯುಳ್ಳ ದೇಶವಾಗಿದ್ದು, ವ್ಯಾಕ್ಸಿನ್‌ ನೀಡಲು ಎಷ್ಟು ಕಂಪನಿಗಳು ಮುಂದೆ ಬಂದರೂ ಸಾಕಾಗುವುದಿಲ್ಲ. ಹೀಗಾಗಿ ಭಾರತ್‌ ಬಯೋಟೆಕ್‌ಗೆ ಅನುಮತಿ ನೀಡಿರುವ ಕ್ರಮ ಉತ್ತಮ ಹೆಜ್ಜೆ ಎಂದರು ಡಿಸಿಎಂ.

ತ್ವರಿತವಾಗಿ ಎಲ್ಲರಿಗೂ ಲಸಿಕೆ ಸಿಗಬೇಕು. ಈ ನಿಟ್ಟಿನಲ್ಲಿ ಸರಕಾರ ಎಲ್ಲ ಕ್ರಮಗಳನ್ನು ಕೈಗೊಂಡು ಭರದಿಂದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಆದ್ಯತೆಯ ಅನುಸಾರವಾಗಿ ಪ್ರತಿಯೊಬ್ಬರಿಗೂ ಲಸಿಕೆ ನೀಡುವ ಕೆಲಸ ಆಗುತ್ತದೆ ಎಂದರು

ಗೌರಿಬಿದನೂರು-ಚಿಕ್ಕಬಳ್ಳಾಪುರ ಹೆದ್ದಾರಿ ಕಾಮಗಾರಿ ಮೇ ಒಳಗೆ ಪೂರ್ಣಗೊಳಿಸಿ: ಸುಧಾಕರ್ ಸೂಚನೆ

ಚಿಕ್ಕಬಳ್ಳಾಪುರ, ಜನವರಿ 3, ಭಾನುವಾರ:ರಾಷ್ಟ್ರೀಯ ಹೆದ್ದಾರಿ 234 ರ ಗೌರಿಬಿದನೂರಿನಿಂದ ಚಿಕ್ಕಬಳ್ಳಾಪುರವರೆಗಿನ 50.66 ಕಿ.ಮೀ. ಉದ್ದದ ರಸ್ತೆ ಕಾಮಗಾರಿಯನ್ನು 2021 ರ ಮೇ ತಿಂಗಳೊಳಗಾಗಿ ಪೂರ್ಣಗೊಳಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಶನಿವಾರ ಸಂಜೆ ರಸ್ತೆ ಕಾಮಗಾರಿ ಪರಿಶೀಲಿಸಿದ ಸಚಿವ ಡಾ.ಕೆ.ಸುಧಾಕರ್, ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳಿಗೆ ಕಾಮಗಾರಿಗೆ ಚುರುಕು ನೀಡುವಂತೆ ಸೂಚಿಸಿದರು.

106.50 ಕೋಟಿ ರೂ. ಮೊತ್ತದ ರಸ್ತೆ ನಿರ್ಮಾಣ ಕಾಮಗಾರಿಯನ್ನು ಸೆಲ್ ಅಸೈನಿಯ ಎಂಬ ಕಂಪನಿಗೆ ಗುತ್ತಿಗೆ ನೀಡಿದ್ದು, 2015 ರ ಜುಲೈ ನಲ್ಲಿ ಕಾಮಗಾರಿ ಆರಂಭವಾಗಿ 2017 ರ ಜುಲೈ ನಲ್ಲಿ ಪೂರ್ಣಗೊಳ್ಳಬೇಕಿತ್ತು. ಈ ಕಂಪನಿಯು ಕಾಮಗಾರಿಯನ್ನು ಅಸಮರ್ಪಕವಾಗಿ ಮಾಡಿ 2018 ರ ಜುಲೈನಲ್ಲಿ ಕೈ ಬಿಟ್ಟಿತ್ತು. 2018 ರ ಜುಲೈ ನಿಂದ 2019 ರವರೆಗೆ ರಸ್ತೆ ಕಾಮಗಾರಿ ನಡೆದಿರಲಿಲ್ಲ. ಇದರಿಂದಾಗಿ ಸುತ್ತಮುತ್ತಲಿನ ಹಳ್ಳಿಗಳ ಜನರು ಸಂಚರಿಸಲು ಸಾಧ್ಯವಾಗದೆ ಪರದಾಡುತ್ತಿದ್ದರು. ಈ ಭಾಗದ ರೈತರು, ಕಾರ್ಮಿಕರು ನಿತ್ಯದ ಚಟುವಟಿಕೆಗಳಿಗೆ ಸಂಚಾರ ಮಾಡಬೇಕಿದ್ದು, ಅಪೂರ್ಣ ಕಾಮಗಾರಿಯಿಂದಾಗಿ ಸಂಚಾರ ಕಷ್ಟವಾಗಿತ್ತು.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, 2020 ರ ಫೆಬ್ರವರಿಯಲ್ಲಿ ಉಪ ಗುತ್ತಿಗೆದಾರರನ್ನು ನಿಯೋಜಿಸುವಂತೆ ಕ್ರಮ ಕೈಗೊಂಡಿದ್ದರು. ನಂತರ 2020 ರ ಜೂನ್ ನಲ್ಲಿ ಕಾಮಗಾರಿ ಪುನರಾರಂಭಗೊಂಡು ಮಂದಗತಿಯಲ್ಲಿ ನಡೆಯುತ್ತಿದೆ.

ಶನಿವಾರ ಪರಿಶೀಲನೆ ನಡೆಸಿದ ಸಚಿವ ಡಾ.ಕೆ.ಸುಧಾಕರ್, ಕಾಮಗಾರಿಗೆ ಚುರುಕು ನೀಡಿ ವೇಗವಾಗಿ ಮುಗಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಪರಿಶೀಲನೆ ವೇಳೆ ಚಿಕ್ಕಬಳ್ಳಾಪುರ ರಾಷ್ಟ್ರೀಯ ಹೆದ್ದಾರಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲಿಕಾರ್ಜುನ ಕಾಮಗಾರಿ ಪ್ರಗತಿ ಕುರಿತು ಸಚಿವರಿಗೆ ಮಾಹಿತಿ ನೀಡಿದರು.

ಇದಲ್ಲದೆ, ಚಿಕ್ಕಬಳ್ಳಾಪುರ ನಗರದ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿ ಕಚೇರಿವರೆಗಿನ ರಸ್ತೆಯನ್ನು ನಾಲ್ಕು ಪಥದ ರಸ್ತೆಯಾಗಿ ನಿರ್ಮಿಸಬೇಕು. ಹಾಗೆಯೇ ಎರಡೂ ಬದಿ ಚರಂಡಿ ನಿರ್ಮಿಸಬೇಕು. ಬಾಕಿ ಉಳಿದ ಯಾವುದೇ ಕಾಮಗಾರಿಗಳನ್ನು ಗುಣಮಟ್ಟದಿಂದ ಮಾಡಬೇಕು ಎಂದು ಸಚಿವ ಡಾ.ಕೆ.ಸುಧಾಕರ್ ಕಟ್ಟುನಿಟ್ಟಿನ ಸೂಚನೆ ನೀಡಿದರು.

ರಾಷ್ಟ್ರೀಯ ಹೆದ್ದಾರಿ ಮುಖ್ಯ ಎಂಜಿನಿಯರ್ ಗೋವಿಂದರಾಜು, ಕೇಂದ್ರ ಭೂ ಸಾರಿಗೆಯ ಮುಖ್ಯ ಎಂಜಿನಿಯರ್ ವಿಜಯಕುಮಾರ್, ಅಧೀಕ್ಷಕ ಎಂಜಿನಿಯರ್ ಸದಾನಂದ ಬಾಬು, ರಾಷ್ಟ್ರೀಯ ಹೆದ್ದಾರಿಯ ಅಧೀಕ್ಷಕ ಎಂಜಿನಿಯರ್ ಸತೀಶ್, ಕಾರ್ಯನಿರ್ವಾಹಕ ಎಂಜಿನಿಯರ್ ಹೇಮಲತ ಪರಿಶೀಲನೆ ವೇಳೆ ಹಾಜರಿದ್ದರು.

ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 140 ಶಾಸಕರ ಗುರಿ: ಯಡಿಯೂರಪ್ಪ

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 140ರಿಂದ 150 ಶಾಸಕರನ್ನು ಗೆಲ್ಲಿಸುವ ಗುರಿ ಇಟ್ಟುಕೊಳ್ಳಲಾಗುವುದು. ಇದಕ್ಕಾಗಿ ಪಕ್ಷ ಸಂಘಟಿಸಲು ಶೀಘ್ರವೇ ರಾಜ್ಯದಾದ್ಯಂತ ಪ್ರವಾಸ ಮಾಡಲಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.

ಶಿವಮೊಗ್ಗದ ಪೆಸಿಟ್ ಕಾಲೇಜಿನ ಆವರಣದ ಪ್ರೇರಣಾ ಸಭಾಂಗಣದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿಯ ವಿಶೇಷ ಸಭೆಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವಿಗೆ ಗರಿಷ್ಠ ಶ್ರಮ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಕೃಷಿಕರಿಗೆ ತೊಂದರೆಯಾಗುವ ಕಸ್ತೂರಿರಂಗನ್ ವರದಿ ಜಾರಿ ಬರಲು ಬಿಡುವುದಿಲ್ಲ. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ ಅವರು, ಕಾನೂನು ಪ್ರಕಾರವೇ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಯ್ಕೆ ನಡೆಯಲಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶ್ವದ ಅಗ್ರಗಣ್ಯ ನಾಯಕ ಎಂದು ಜಗತ್ತು ಒಪ್ಪಿಕೊಂಡಿದೆ. ದೇಶವನ್ನು ಮಾದರಿ ರಾಷ್ಟ್ರವನ್ನಾಗಿ ಮಾಡಲು ಶ್ರಮ ವಹಿಸಿರುವ ಅಗ್ರಗಣ್ಯ ನಾಯಕ ಮೋದಿ ಅವರು ಮತ್ತೊಂದು ಬಾರಿ ಪ್ರಧಾನಿಯಾಗಿ ದೇಶವನ್ನು ಅಗ್ರಗಣ್ಯ ರಾಷ್ಟ್ರವನ್ನಾಗಿ ಮಾಡಲಿ ಎಂದು ಆಶಿಸಿದರು. 370ನೇ ವಿಧಿ ರದ್ದು, ಕೃಷಿ ಸುಧಾರಣಾ ಮಸೂದೆ ಜಾರಿ, ನಾಗರಿಕ ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನದಂಥ ಮಹತ್ವದ ಯೋಜನೆಗಳನ್ನು ಕೇಂದ್ರ ಸರಕಾರ ಜಾರಿಗೊಳಿಸಿದೆ ಎಂದು ವಿವರಿಸಿದರು.

ಇಬ್ಬರೇ ಶಾಸಕರಿದ್ದ ನಮ್ಮ ಪಕ್ಷ ಇವತ್ತು ಅಧಿಕಾರದಲ್ಲಿರಲು ಸಾವಿರಾರು ಜನ ಕಾರ್ಯಕರ್ತರ ತ್ಯಾಗ, ಬಲಿದಾನವೇ ಕಾರಣ. ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆ ಯಶಸ್ಸಿಗೆ ಸಾಮೂಹಿಕ ನೇತೃತ್ವ ಹಾಗೂ ಪರಿಶ್ರಮವೇ ಕಾರಣವಾಗಿದೆ. ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಯಶಸ್ಸಿನ ಮೇಲೆ ಮುಂದಿನ ವಿಧಾನಸಭಾ ಚುನಾವಣೆಯ ಫಲಿತಾಂಶ ನಿಂತಿದೆ. ಆದ್ದರಿಂದ ಅಲ್ಲಿ ನಾವು ಹೆಚ್ಚಿನ ಶ್ರಮ ವಹಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕರ್ತರು ಮತ್ತು ಮುಖಂಡರು ಪಕ್ಷದ ಸಂಘಟನೆಗೆ ಕೆಲವು ವರ್ಷಗಳನ್ನಾದರೂ ನೀಡಬೇಕು. ಎರಡರಿಂದ ಮೂರು ಡಿಗ್ರಿ ಪಡೆದ ಆರೆಸ್ಸೆಸ್ ಪೂರ್ಣಾವಧಿ ಕಾರ್ಯಕರ್ತರ ಪ್ರೇರಣಾದಾಯಕ ಕಾರ್ಯವನ್ನು ನಾವು ಅನುಸರಿಸಬೇಕು ಎಂದು ಅವರು ಆಶಿಸಿದರು.

ಪಕ್ಷದ ಸಂಘಟನೆಯ ದೃಷ್ಟಿಯಿಂದ ಶಿವಮೊಗ್ಗ- ಬೆಂಗಳೂರಿಗೆ ನಡೆಸಿದ ಪಾದಯಾತ್ರೆಗಳು ಹಾಗೂ ಬಗರ್ ಹುಕುಂ ಹೋರಾಟ ಮುಂತಾದ ಜನಪರ ಕಾರ್ಯಕ್ರಮಗಳನ್ನು ಜನಸಂಘದ ಕಾಲದಿಂದಲೇ ನಿರಂತರವಾಗಿ ನಡೆಸಿಕೊಂಡು ಬಂದಿರುವುದನ್ನು ಅವರು ನೆನಪಿಸಿದರು.

ಅಂಡಮಾನ್ ಸೆಲ್ಯುಲರ್ ಜೈಲಿನಲ್ಲಿರುವ ವೀರ ದಾಮೋದರ್ ಸಾವರ್ಕರ್ ಅವರ ಜೀವನದರ್ಶನ, ಅವರ ತ್ಯಾಗ, ಅವರು ಅನುಭವಿಸಿದ ಅತ್ಯಂತ ಕಷ್ಟದ ಕರಿನೀರಿನ ಶಿಕ್ಷೆ ನಮ್ಮೆಲ್ಲರಿಗೂ ರಾಷ್ಟ್ರ ನಿರ್ಮಾಣದ ಈ ಪುಣ್ಯ ಕಾರ್ಯಕ್ಕೆ ನಿರಂತ ಪ್ರೇರಣೆ ಎಂದರು. ನಾವೆಲ್ಲರೂ ಒಂದು ಬಾರಿಯಾದರೂ ಈ ದೃಷ್ಟಿಯಿಂದ ಅಂಡಮಾನ್ ಸೆಲ್ಯುಲರ್ ಜೈಲಿಗೆ ಭೇಟಿ ನೀಡಬೇಕು ಎಂದು ಆಗ್ರಹಿಸಿದರು.

ನಾಲ್ಕು ತಿಂಗಳುಗಳ ಬಳಿಕ ತಾಲ್ಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ಪಕ್ಷದ ಚಿಹ್ನೆಯಡಿ ನಡೆಯಲಿದ್ದು, ಬಿಜೆಪಿ ಶೇ 80ರಷ್ಟು ಸ್ಥಾನಗಳನ್ನು ಗೆಲ್ಲಬೇಕಿದೆ. ಜನಸೇವಕ್ ಸಮಾವೇಶಗಳನ್ನು ಜನವರಿ 11, 12, 13ರಂದು ನಡೆಸಲಾಗುವುದು, ಮೈಸೂರಿನಲ್ಲಿ ಮುಖ್ಯಮಂತ್ರಿಗಳಿಂದ ಸಮಾವೇಶದ ಉದ್ಘಾಟನೆ ನೆರವೇರಿಸಲಾಗುವುದು ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕುಮಾರ್ ಕಟೀಲ್ ಅವರು ತಿಳಿಸಿದರು.

ಗ್ರಾಮ ಸ್ವರಾಜ್ಯ ಸಮಾವೇಶಗಳು, ಕುಟುಂಬ ಸಮ್ಮಿಲನದಂಥ ಕಾರ್ಯಕ್ರಮಗಳಿಂದ ಪಕ್ಷದ 44 ಸಾವಿರ ಕಾರ್ಯಕರ್ತರು ಇದೀಗ ಪಂಚಾಯತ್ ಸದಸ್ಯರಾಗಿದ್ದಾರೆ. 3,500 ಜನರು ಅಧ್ಯಕ್ಷರಾಗುವ ಕನಸು ನನಸಾಗಲಿದೆ. ಶೇ 60 ಪಂಚಾಯತ್‌ಗಳಲ್ಲಿ ಬಿಜೆಪಿ ಕಾರ್ಯಕರ್ತರು ಗೆಲುವು ಸಾಧಿಸಿದ್ದಾರೆ. ಪ್ರಧಾನಿಗಳಾದ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಕ್ರಮಗಳು ಜನರನ್ನು ನೇರವಾಗಿ ತಲುಪಿವೆ. ಕೋವಿಡ್ ಮತ್ತು ನೆರೆಯ ಸವಾಲಿನ ಮಧ್ಯೆ ಸಮರ್ಥ ಆಡಳಿತ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾರ್ಯವೂ ನಮ್ಮ ಗೆಲುವಿಗೆ ಪೂರಕವಾಗಿದೆ ಎಂದು ವಿವರಿಸಿದರು. ಶಿವಮೊಗ್ಗವು ಸಂಘಟನೆಗೆ ಪ್ರೇರಣೆ ಕೊಟ್ಟ ಜಿಲ್ಲೆ. ಹಿಂದೂ ವಿಚಾರಧಾರೆಗೆ ಬೆಲೆ ಕೊಟ್ಟ ಜಿಲ್ಲೆ ಇದು ಎಂದು ಅವರು ಮೆಚ್ಚುಗೆ ಸೂಚಿಸಿದರು.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯದ ಉಸ್ತುವಾರಿಗಳೂ ಆದ ಅರುಣ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕೇಂದ್ರ ಗಣಿ ಮತ್ತು ಸಂಸದೀಯ ವ್ಯವಹಾರ ಸಚಿವ ಪಲ್ಲಾದ ಜೋಷಿ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ರಾಜ್ಯದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹಾಗೂ ಲಕ್ಷ್ಮಣ ಸವದಿ, ರಾಜ್ಯ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಕಂದಾಯ ಸಚಿವ ಆರ್.ಅಶೋಕ್, ರಾಜ್ಯ ಉಪಾಧ್ಯಕ್ಷರು ಮತ್ತು ಶಾಸಕರೂ ಆದ ಅರವಿಂದ ಲಿಂಬಾವಳಿ, ಪಕ್ಷದ ಹಿರಿಯ ಮುಖಂಡರಾದ ಡಿ.ಎಚ್.ಶಂಕರಮೂರ್ತಿ, ಮುಖಂಡರು, ಆಹ್ವಾನಿತರು ಭಾಗವಹಿಸಿದ್ದರು.

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿದ್ದಕ್ಕಾಗಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಭೂತಪೂರ್ವ ಜಯದ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಸನ್ಮಾನಿಸಲಾಯಿತು.

ಸಂಸದ ಬಿ.ವೈ.ರಾಘವೇಂದ್ರ ಅವರು ಸ್ವಾಗತಿಸಿದರು. ರಾಜ್ಯ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ನರಸಿಂಹ ನಾಯಕ್ ಅವರು ಕಾರ್ಯಕ್ರಮ ನಿರ್ವಹಿಸಿದರು. ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಅವರು ಧನ್ಯವಾದ ಸಮರ್ಪಿಸಿದರು.

ದಿನದ 24 ಗಂಟೆ ಅಂಗಡಿ ತೆರೆಯಲು ಅವಕಾಶ: ರಾಜ್ಯ ಸರ್ಕಾರದ ಆದೇಶ

ಬೆಂಗಳೂರು: 10 ಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ವಾಣಿಜ್ಯ ಮಳಿಗೆಗಳು ವಾರದ ಏಳೂ ದಿನ, ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಕುರಿತು ಕಾರ್ಮಿಕ ಇಲಾಖೆ ಮೂಲಕ ಅಧಿಸೂಚನೆ ಹೊರಡಿಸಲಾಗಿದ್ದು, ಮುಂದಿನ ಮೂರು ವರ್ಷ ಈ ಅಧಿಸೂಚನೆ ಅನ್ವಯವಾಗಲಿದ್ದು, ಅಂಗಡಿ ಮತ್ತು ವಾಣಿಜ್ಯ ಮಳಿಗೆಗಳು ತಮ್ಮ ನೌಕರರಿಗೆ ಕಡ್ಡಾಾಯವಾಗಿ ವಾರದಲ್ಲಿ ಒಂದು ದಿನ ರಜೆ ನೀಡಬೇಕು. ಅದನ್ನು ಅಂಗಡಿಯಲ್ಲಿ ಎಲ್ಲರಿಗೂ ಕಾಣುವಂತೆ ಪ್ರದರ್ಶಿಸಬೇಕು.
ರಜೆ ಹಾಗು ವಾರದ ರಜೆಯಲ್ಲಿರುವ ಉದ್ಯೋಗಿಯ ಮಾಹಿತಿಯನ್ನು ಎಲ್ಲರಿಗೂ ಕಾಣಿಸುವಂತೆ ಪ್ರದರ್ಶನ ಮಾಡಬೇಕು. ಕಾರ್ಮಿಕರ ಸಂಬಳ ಮತ್ತು ಹೆಚ್ಚುವರಿ ಅವಧಿಯ ಭತ್ಯೆಯನ್ನು 1963ರ ಸಂಬಳ ಮತ್ತು ಭತ್ಯೆ ಕಾಯ್ದೆ ಅನ್ವಯ ನೀಡಬೇಕು.

ಪ್ರತಿಯೊಬ್ಬ ಕಾರ್ಮಿಕರಿಗೆ 8 ಗಂಟೆ ಅವಧಿಗೆ ಮೀರಿ ಕೆಲಸ ಮಾಡಿಸಿಕೊಳ್ಳುವಂತಿಲ್ಲ. ಹೆಚ್ಚುವರಿ ಅವಧಿಯನ್ನೂ ಗರಿಷ್ಠ 2 ಗಂಟೆ ಮೀರುವಂತಿಲ್ಲ. ಮೂರು ತಿಂಗಳಲ್ಲಿ 50 ಗಂಟೆ ಹೆಚ್ಚುವರಿ ಅವಧಿ ಮೀರುವಂತಿಲ್ಲ. ಕಾರ್ಮಿಕರನ್ನು ರಜೆಯ ದಿನ ಅಥವಾ ಕೆಲಸದ ಅವಧಿ ಮುಗಿದ ಮೇಲೆ ನಿರ್ಧಿಷ್ಠ ಸೂಚನೆ ಲ್ಲದೇ ಹೆಚ್ಚುವರಿ ಅವಧಿ ಕೆಲಸ ಮಾಡಿಸುವುದು ಕಂಡು ಬಂದರೆ ಅಂತಹ ಅಂಗಡಿ ಮಳಿಗೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

ಸಾಮಾನ್ಯ ಸಂದರ್ಭದಲ್ಲಿ ರಾತ್ರಿ 8 ಗಂಟೆ ನಂತರ ಮಹಿಳಾ ಕಾರ್ಮಿಕರನ್ನು ಕೆಲಸ ಮಾಡಿಸಿಕೊಳ್ಳುವಂತಿಲ್ಲ. ಒಂದು ವೇಳೆ ಮಹಿಳಾ ಕಾರ್ಮಿಕರು ಲಿಖಿತ ಒಪ್ಪಿಗೆ ನೀಡಿದರೆ ರಾತ್ರಿ 8 ರಿಂದ ಬೆಳಗಿನ 6 ಗಂಟೆಯ ತನ ಅವರ ಗೌರವಕ್ಕೆ ಧಕ್ಕೆ ಬಾರದಂತೆ, ರಕ್ಷಣೆ ನೀಡಿ, ಕೆಲಸ ಒದಗಿಸಬಹುದು.

ಎಲ್ಲ ಮಹಿಳಾ ಸಿಬ್ಬಂದಿಗೆ ಶಿಪ್‌ಟ್‌ ಆಧಾರದಲ್ಲಿಯೇ ಸಾರಿಗೆ ವ್ಯವಸ್ಥೆೆ ಕಲ್ಪಿಿಸಬೇಕು. ಈ ಬಗ್ಗೆ ಅಂಗಡಿಯ ಬೋರ್ಡ್‌ನಲ್ಲಿ ಮಾಹಿತಿ ಪ್ರದರ್ಶನ ಮಾಡಬೇಕು.ಅಂಗಡಿ ಮಳಿಗೆಗಳಲ್ಲಿ ಕಾರ್ಮಿಕರಿಗೆ ಅಗತ್ಯ ಶೌಚಾಲಯ, ವಿಶ್ರಾಂತಿ ಕೊಠಡಿ, ಸೇಫ್ಟಿ ಲಾಕರ್ ಒದಗಿಸಬೇಕು. ಮಹಿಳಾ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಅಂಗಡಿ ಮಳಿಗೆಗಳು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವವರ ವಿರುದ್ದ ದೂರು ಸಲ್ಲಿಸಲು ಆಂತರಿಕ ಸಮಿತಿ ರಚನೆ ಮಾಡಬೇಕು. ಆ ಸಮಿತಿ ಸಕ್ರೀಯವಾಗಿರುವಂತೆ ನೋಡಿಕೊಳ್ಳಬೇಕು.

ಈ ನಿಯಮಗಳ ಉಲ್ಲಂಘನೆ ಮಾಡುವ ಅಂಗಡಿ ಮತ್ತು ವಾಣಿಜ್ಯ ಮಳಿಗೆಗಳ ವಿರುದ್ದ 1961 ವಾಣಿಜ್ಯ ಅಂಗಡಿಗಳು ಮತ್ತು ಮಳಿಗೆಗಳ ಕಾಯ್ದೆಗೆ ಪ್ರಕಾರ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.