Video-ಪುನೀತ್ ರಾಜ್ ಕುಮಾರ್ ಕನ್ನಡದ ಆಸ್ತಿ :ಸಿಎಂ

ಬೆಂಗಳೂರು:ಪುನೀತ್ ರಾಜ್ ಕುಮಾರ್ ಕನ್ನಡದ ಆಸ್ತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಅವರು ಇಂದು ಸಂಜೆ ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡು ಎಂಟು ದಿನಗಳಾದ ಹಿನ್ನೆಲೆಯಲ್ಲಿ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಲಾಗಿದೆ. ಪುನೀತ್ ಇಲ್ಲವಾಗಿರುವುದು ಕುಟುಂಬದ ಸದಸ್ಯರೊಬ್ಬರನ್ನು ಕಳೆದುಕೊಂಡಂತಾಗಿದೆ. ಇಡೀ ಕರ್ನಾಟಕದ ಜನತೆ ಕುಟುಂಬದೊಂದಿಗೆ ಇದೆ ಎಂದು ಧೈರ್ಯ ಹೇಳಲಾಗಿದೆ ಎಂದರು.

ಕೃತಜ್ಞತೆ : ಅಪ್ಪು ಅಂತ್ಯಕ್ರಿಯೆಯನ್ನು ಅತ್ಯಂತ ಪ್ರೀತಿ ಮತ್ತು ಗೌರವಗಳಿಂದ, ಆತ್ಮೀಯತೆಯಿಂದ ಹಾಗೂ ಭಾವನಾತ್ಮಕವಾಗಿ ನಡೆಸಿಕೊಟ್ಟಿರುವುದಕ್ಕಾಗಿ ಕುಟುಂಬದವರು ಸರ್ಕಾರಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು. ಹಾಗೆ ನಡೆದುಕೊಳ್ಳುವುದು ಸರ್ಕಾರದ ಕರ್ತವ್ಯವಾಗಿದ್ದು, ಈ ಕರ್ತವ್ಯವನ್ನು ಪ್ರೀತಿ, ವಿಶ್ವಾಸದಿಂದ ನಡೆಸಿಕೊಡಲಾಗಿದೆ ಎಂದು ಹೇಳಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಕುಟುಂಬದವರು ಮುಂದೆ ಜರುಗಬೇಕಾದ ಕಾರ್ಯಕ್ರಮಗಳ ಬಗ್ಗೆ ತೀರ್ಮಾನ ಮಾಡುತ್ತಿದ್ದಾರೆ. ಅಪ್ಪು ಅವರಿಗಿದ್ದ ಜನಮನ್ನಣೆ, ಗೌರವಗಳಿಗೆ ತಕ್ಕ ಹಾಗೆ ಮುಂದಿನ ಕಾರ್ಯಗಳನ್ನು ನೆರವೇರಿಸಲಾಗುವುದು ಎಂದ ಮುಖ್ಯಮಂತ್ರಿಗಳು, ಅಪಾರ ಜನಸ್ತೋಮ ಪುನೀತ್ ಸಮಾಧಿ ಬಳಿ ದರ್ಶನವನ್ನು ಕಂಠೀರವ ಸ್ಟುಡಿಯೋದಲ್ಲಿ ಇಂದಿಗೂ ಪಡೆಯುತ್ತಿದ್ದಾರೆ.
ಕುಟುಂಬದ ಸದಸ್ಯರಿಗೆ ಅಗತ್ಯವಿರುವ ಎಲ್ಲಾ ಸಹಕಾರವನ್ನು ನೀಡಲಾಗುವುದು ಎಂದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನವೆಂಬರ್ 16 ರಂದು ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಅಗತ್ಯವಿರುವ ಭದ್ರತೆ ನೀಡಲಾಗುವುದು ಎಂದರು.

ಪದ್ಮಶ್ರೀ: ದಿ. ನಟ ಪುನೀತ್ ಅವರ ಹೆಸರನ್ನು ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸ್ಸು ಮಾಡಬೇಕೆಂಬ ಅಭಿಮಾನಿಗಳ ಅಭಿಲಾಷೆಯಂತೆ ಕ್ರಮ ವಹಿಸಲಾಗುವುದು ಎಂದ ಮುಖ್ಯಮಂತ್ರಿಗಳು, ಸದ್ಯ ಪುನೀತ್ ಅವರ ಕುಟುಂಬ ದುಃಖದಲ್ಲಿದ್ದು, ನವೆಂಬರ್ 16 ರ ಕಾರ್ಯಕ್ರಮ ಮುಗಿದ ನಂತರ ಈ ಬಗ್ಗೆ ಚರ್ಚಿಸಲಾಗುವುದು. ಅಪ್ಪು ಅವರಿಗೆ ಪದ್ಮಶ್ರೀ ನೀಡುವ ವಿಚಾರ ಸರ್ವಸಮ್ಮತವಾಗಿದೆ ಎಂದು ಸ್ಪಷ್ಟಪಡಿಸಿದರು.

Video-ಸಕಲ ಸರ್ಕಾರಿ ಗೌರವಗಳೊಂದಿಗೆ ಮಣ್ಣಲ್ಲಿ ಮಣ್ಣಾದ ಪುನೀತ್ ರಾಜಕುಮಾರ್

ಬೆಂಗಳೂರು, ಅಕ್ಟೋಬರ್ 31 :ಮೇರು ನಟ ಡಾ ರಾಜ್ ಕುಮಾರ್ ಅವರ ಕಿರಿಯ ಪುತ್ರ ಸುಪ್ರಸಿದ್ಧ ನಟ ಪುನೀತ್ ರಾಜಕುಮಾರ್ ಅವರ ಪಾರ್ಥಿವ ಶರೀರಕ್ಕೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಗರದ ಶ್ರೀ ಕಂಠೀರವ ಸ್ಟುಡಿಯೋಸ್ ಆವರಣದಲ್ಲಿರುವ ಡಾ ರಾಜ್ ಕುಮಾರ್ ಅವರ ಸಮಾಧಿಯ ಸಮೀಪವೇ ಇಂದು ಬೆಳಿಗ್ಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಭದ್ರತಾ ಕಾರಣಗಳು ಹಿನ್ನೆಲೆಯಲ್ಲಿ ಕುಟುಂಬಸ್ಥರ ಸಹಮತಿ ಪಡೆದು ಪ್ರಕಟಿಸಿದ ಸಮಯಕ್ಕೆ ಮೊದಲೇ ಶುಕ್ರವಾರ ಹಠಾತ್ ನಿಧನರಾದ ಈ ಯುವ ನಟನ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಮೊದಲು ಗಣ್ಯಾತಿ ಗಣ್ಯರು ಪುನೀತ್ ರಾಜಕುಮಾರ್ ಅವರ ಪಾರ್ಥಿವ ಶರೀರದ ಮೇಲೆ ಪುಷ್ಪ ಗುಚ್ಛ ಅರ್ಪಿಸಿದ ನಂತರ ಪೊಲೀಸ್ ವಾದ್ಯಗೋಷ್ಠಿಯಿಂದ ರಾಷ್ಟ್ರ ಗೀತೆ ಮೊಳಗಿತು.

ಅಲ್ಲದೆ, ಅದೇ ಸಂದರ್ಭದಲ್ಲಿ ಪೊಲೀಸರು ಮೂರು ಬಾರಿ ಕುಶಾಲ ತೋಪು ಸಿಡಿಸಿದರು.

ತದ ನಂತರ, ಎರಡು ನಿಮಿಷಗಳ ಮೌನ ಆಚರಿಸಲಾಯಿತು.

ಇದಾದ ಕೂಡಲೇ, ಪುನೀತ್ ರಾಜಕುಮಾರ್ ಅವರ ದೇಹದ ಮೇಲೆ ಹೊದಿಸಿದ್ದ ರಾಷ್ಟ್ರ ಧ್ವಜವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಅವರಿಗೆ ಹಸ್ತಾಂತರಿಸಿದರು.

ಪೊಲೀಸರು ಮೊಳಗಿಸಿದ ಶೋಕ ಗೀತೆ ಹಾಗೂ ರಾಷ್ಟ್ರ ಗೀತೆಯ ನಂತರ ಅಗಲಿದ ನಟನಿಗೆ ಸರ್ಕಾರದ ಗೌರವ ಸಮರ್ಪಣಾ ಕಾರ್ಯಕ್ರಮ ಪೂರ್ಣ ಗೊಂಡಿತು.

ನಂತರದಲ್ಲಿ ನಡೆದ ಕೌಟುಂಬಿಕ ಕಾರ್ಯಕ್ರಮದಲ್ಲಿ ಪುಷ್ಪಾಲಂಕೃತ ಹಂಸತೋಲಿಕಾ ಪಲ್ಲಕ್ಕಿಯಲ್ಲಿ ಪುನೀತ್ ರಾಜಕುಮಾರ್ ಅವರ ಪಾರ್ಥಿವ ಶರೀರವನ್ನು ಇರಿಸಿ ಮೂರು ಬಾರಿ ಪ್ರದಕ್ಷಿಣೆ ಮಾಡಿಸಿ, ಗುಂಡಿಯೊಳಗೆ ಶವವನ್ನು ಇಳಿಸಲಾಯಿತು.

ರಾಘವೇಂದ್ರ ರಾಜಕುಮಾರ್ ಅವರ ಪುತ್ರ ಕುಟುಂಬಸ್ಥರ ಜೊತೆಯಲ್ಲಿ ಗಣ್ಯರೂ ಕೂಡಾ ಪುನೀತ್ ರಾಜಕುಮಾರ್ ಅವರ ದೇಹದ ಮೇಲೆ ಉಪ್ಪು ಮತ್ತು ಮಣ್ಣು ಸಮರ್ಪಿಸುವುದರೊಂದಿಗೆ ಪುನೀತ್ ರಾಜಕುಮಾರ್ ಎಂಬ ಕಲಾಲೋಕದ ತಾರೆ ಮಣ್ಣಲ್ಲಿ ಮಣ್ಣಾಗಿ ಬೆರೆತಾಗ, ಎಲ್ಲರ ಕಣ್ಣಾಲಿಗಳು ತುಂಬಿದ್ದವು ಹಾಗೂ ಹೃದಯ ಭಾರವಾಗಿದ್ದವು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅವರ ಸಹೋದ್ಯೋಗಿಗಳಾದ ಕೆ ಗೋಪಾಲಯ್ಯ, ಆರ್ ಅಶೋಕ್, ಮುನಿರತ್ನ, ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ, ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ, ಪುತ್ರಿಯರಾದ ಧೃತಿ ಮತ್ತು ವಂದಿತಾ, ಸೋದರರಾದ ಶಿವ ರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್, ಕುಟುಂಬಸ್ಥರಲ್ಲಿ ಪ್ರಮುಖರಾದ ಕುಮಾರ್ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ, ಚಿತ್ರ ರಂಗದ ಹೆಸರಾಂತ ಕಲಾವಿದರಾದ ವಿ. ರವಿಚಂದ್ರನ್, ಶಶಿಕುಮಾರ್, ಉಪೇಂದ್ರ, ಜಗ್ಗೇಶ್, ಸುದೀಪ್, ದುನಿಯಾ ವಿಜಿ, ಗಣೇಶ್, ವಿಜಯ ರಾಘವೇಂದ್ರ, ಶ್ರೀ ಮುರಳಿ, ಸಾಧು ಕೋಕಿಲ, ಉಮಾಶ್ರೀ, ತಾರಾ ಅನುರಾಧಾ, ಶೃತಿ, ರಶ್ಮಿಕಾ ಮಂದಣ್ಣ, ರಚಿತಾ ರಾಮ್, ಚಿತ್ರೋದ್ಯಮದ ಗಣ್ಯರಾದ ಸಾ ರಾ ಗೋವಿಂದು, ರಾಕ್ ಲೈನ್ ವೆಂಕಟೇಶ್, ಅಭಿಮಾನಿಗಳ ಸಾಗರವೇ ಪುನೀತ್ ರಾಜಕುಮಾರ್ ಅವರ ಅಂತ್ಯ ಸಂಸ್ಕಾರದ ಅಂತಿಮ ಕ್ಷಣಗಳನ್ನು ಕಣ್ತುಂಬಿಕೊಂಡರು.

ಲೋಹಿತ್ ಎಂಬ ಹೆಸರಿನಲ್ಲಿ ಬಾಲ ನಟನಾಗಿ ಚಿತ್ರರಂಗ ಪ್ರವೇಶಿಸಿದ ಪುನೀತ್ ರಾಜಕುಮಾರ್ ಎಂಬ ತಾರೆ ಮಿಂಚಿ ಮರೆಯಾದರೂ, ಕನ್ನಡಿಗರ ಹೃದಯದಲ್ಲಿ ಮಾತ್ರ ಚಿರಸ್ಥಾಯಿಯಾಗಿ ನೆಲೆಸುತ್ತಾರೆ ಎಂಬುದಂತೂ ನಿಶ್ಚಿತ.

ಪುನೀತ್ ರಾಜ್‌ಕುಮಾರ್ ಅಂತ್ಯಕ್ರಿಯೆ ನಾಳೆ ನಡೆಸಲು ತೀರ್ಮಾನ: ಸಿಎಂ

ಬೆಂಗಳೂರು: ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆಯನ್ನು ನಾಳೆ ನಡೆಸಲು ತೀಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಪ್ರಕಟಿಸಿದರು.

ಇಂದು ಮಧ್ಯಾಹ್ನ ಕಂಠೀರವ ಕ್ರೀಡಾಂಗಣದಲ್ಲಿ ಪುನೀತ್ ಅವರ ಸಹೋದರರಾದ ಶಿವರಾಜ್ ಕುಮಾರ್ ಮತ್ತ ರಾಘವೇಂದ್ರ ರಾಜ್ ಕುಮಾರ್ ಅವರೊಂದಿಗೆ ಈ ಬಗ್ಗೆ ಇಂದು ಸಮಾಲೋಚನೆ ನಡೆಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದರು.
ಪುನೀತ್ ಅವರ ಪುತ್ರಿ ಈಗಾಗಲೇ ಬೆಂಗಳೂರಿನ ವಿಮಾನವನ್ನು ಹತ್ತಿದ್ದು, ಇಂದು ಸಂಜೆ 6.00 ರ ವೇಳೆಗೆ ಆಗಮಿಸಲಿದ್ದಾರೆ. ಸಂಜೆಯ ನಂತರ ಅಂತ ಸಂಸ್ಕಾರ ಮಾಡುವುದು ಸವಾಲಿನ ಸಂಗತಿಯಾಗಿರುವುದರಿಂದ ಹಾಗೂ ಅಪ್ಪು ಅವರ ಅಂತಿಮ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಅವಕಾಶ ಮಾಡಿಕೊಡಲು ನಾಳೆ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಅಪ್ಪು ಅವರ ಅಂತಿಮ ದರ್ಶನಕ್ಕೆ ಹೆಚ್ಚಿನ ಜನರು ಆಗಮಿಸುತ್ತಿದ್ದಾರೆ. ನಾಳೆವರೆಗೂ ದರ್ಶನಕ್ಕೆ ಅವಕಾಶವಿರುವುದರಿಂದ ಜನರು ಸಮಾಧಾನದಿಂದ ಬರಬಹುದಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಜನರು ಸಹಕರಿಸುವಂತೆ ಮನವಿ ಮಾಡಿದರು.

 

Video-ಕಂಠೀರವ ಕ್ರೀಡಾಂಗಣದಲ್ಲಿ ಪುನೀತ್ ಪಾರ್ಥಿವ ಶರೀರ ಸಾರ್ವಜನಿಕ ದರ್ಶನಕ್ಕೆ ಅವಕಾಶ..

ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ನಟ ಪುನೀತ್ ರಾಜ್‍ಕುಮಾರ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು ರಾತ್ರಿಯಿಡೀ ಅಭಿಮಾನಿಗಳಿಗೆ ಅವಕಾಶ ನೀಡಲಾಗಿದೆ.ಭಾನುವಾರ ಬೆಳಗ್ಗೆ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ.

ಸದಾಶಿವನಗರದ ಪುನೀತ್ ನಿವಾಸದಿಂದ ಪಾರ್ಥಿವ ಶರೀರವನ್ನು ಕಂಠೀರವ ಕ್ರೀಡಾಂಗಣಕ್ಕೆ ತರಲಾಗಿದ್ದು, ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವರು, ಚಿತ್ರರಂಗದ ಗಣ್ಯರು ಪುನೀತ್ ರಾಜಕುಮಾರ್ ಅವರ ಪಾರ್ಥಿವ ಶರೀರಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ನಮನ ಸಲ್ಲಿಸಿದರು.

ರಾಜ್ಯದ ಮೂಲೆ ಮೂಲೆಯಿಂದ ಪುನೀತ್ ಅಭಿಮಾನಿಗಳು ಕಂಠೀರವ ಕ್ರೀಡಾಂಗಣದತ್ತ ಆಗಮಿಸುತ್ತಿದ್ದಾರೆ. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ನೂಕುನುಗ್ಗಲಾಗುತ್ತಿದ್ದು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಣ ಮಾಡುತ್ತಿದ್ದಾರೆ.

ಇಂದು ರಾತ್ರಿ, ನಾಳೆ ಇಡೀ ದಿನ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ವಿದೇಶದಲ್ಲಿರುವ ಪುತ್ರ ದೃತಿ ನಾಳೆ ಸಂಜೆ ಆಗಮಿಸಲಿದ್ದು, ನಂತರ ಕಂಠೀರವ ಸ್ಟುಡಿಯೋದಲ್ಲಿ ರಾಜ್ ದಂಪತಿ ಸಮಾಧಿ ಪಕ್ಕದಲ್ಲೇ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ.

Video-ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಇನ್ನಿಲ್ಲ: ಹೃದಯಾಘಾತದಿಂದ ದೊಡ್ಮನೆ ಹುಡುಗ ನಿಧನ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(46) ಇನ್ನಿಲ್ಲ. ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅಪ್ಪು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.ನಾಳೆ ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಿದ್ದು, ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನಡೆಸಲಾಗುತ್ತದೆ.

ಹೃದಯಾಘಾತದಿಂದ ಹೈಗ್ರೌಂಡ್ಸ್ ವ್ಯಾಪ್ತಿಯ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದ್ದ ಪುನೀತ್ ರಾಜ್ ಕುಮಾರ್ ನಿಧನರಾಗಿದ್ದಾರೆ.ಮುಖ್ಯಮಂತ್ರಿ ಸೇರಿದಂತೆ ಸಚಿವರು ಆಸ್ಪತ್ರೆ ವೈದ್ಯರು, ಕುಟುಂಬದ ಜೊತೆ ಸಮಾಲೋಚನೆ ನಡೆಸಿ ನಂತರ ಅಪ್ಪು ನಿಧನದ ಸುದ್ದಿಯನ್ನು ಪ್ರಕಟಿಸಿದರು. ಇದರಿಂದಾಗಿ ಕನ್ನಡ ಚಿತ್ರರಂಗ ಪ್ರತಿಭಾನ್ವಿತ ನಟನನ್ನು ಕಳೆದುಕೊಂಡು ಬಡವಾದಂತಾಗಿದೆ.

ತಾಳ್ಮೆ ಕಳೆದುಕೊಳ್ಳದಂತೆ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಮನವಿ ಮಾಡಿರುವ ಸಿಎಂ ನಾಳೆ ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ, ಕುಟುಂಬದ ಅಪೇಕ್ಷೆಯಂತೆ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ, ಸರ್ಕಾರಿ ಗೌರವದಿಂದಿಗೆ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಪವರ್ ಸ್ಟಾರ್ ಗೆ ಲಘು ಹೃದಯಾಘಾತ:ಪುನೀತ್ ಆರೋಗ್ಯ ಸ್ಥಿತಿ ಗಂಭೀರ..

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೃದಯ ತೊಂದರೆಯಿಂದ ಹೈಗ್ರೌಂಡ್ಸ್ ವ್ಯಾಪ್ತಿಯ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ರಾಜ್ ಕುಮಾರ್ ಕುಟುಂಬ ಸದಸ್ಯರು ಆಸ್ಪತ್ರೆಗೆ ಆಗಮಿಸಿದ್ದು ಅಭಿಮಾನಿಗಳು ದೌಡಾಯಿಸುತ್ತಿದ್ದಾರೆ.

ಬೆಳಗ್ಗೆ ಜಿಮ್ ಮಾಡುವಾಗ ಹೃದಯ ತೊಂದರೆ ಕಾಣಿಸಿಕೊಂಡಿದ್ದು, ಸಮೀಪದ ಕ್ಲಿನಿಕ್ ನಲ್ಲಿ ತಪಾಸಣೆ ಮಾಡಿಸಲಾಗಿದೆ, ಇಸಿಜಿ ಮಾಡಲಾಗಿದೆ ಅಷ್ಟರಲ್ಲಿ ಹೃದಯ ತೊಂದರೆ ಗಂಭೀರವಾಗಿದ್ದು ಕೂಡಲೇ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯಕೀಯ ತಂಡ ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದು, ಸಧ್ಯಕ್ಕೆ ಏನೂ ಹೇಳಲು ಸಾಧ್ಯವಿಲ್ಲ, ಚಿಕಿತ್ಸೆ ಮುಂದುವರೆಸಲಾಗಿದೆ, ಸ್ವಲ್ಪ ಸಮಯದ ನಂತರ ಹೆಚ್ಚಿನ ಮಾಹಿತಿ ನೀಡಿತ್ತೇವೆ ಎಂದಿದ್ದಾರೆ.

ಆಸ್ಪತ್ರೆಗೆ ಸಿಎಂ ಬಸವರಾಜ ಬೊಮ್ಮಾಯಿ, ದರ್ಶನ್, ಯಶ್ ಸೇರಿ ಸಿನಿ ದಿಗ್ಗಜರು ದೌಡಾಯಿಸಿದ್ದು, ರಾಜ್ ಕುಟುಂಬ ಸದಸ್ಯರ ಜೊತೆ ಮಾತುಕತೆ ನಡೆಸುತ್ತಿದೆ. ಅಭಿಮಾನಿಗಳು ಆಸ್ಪತ್ರೆ ಸಮೀಪಕ್ಕೆ ಆಗಮಿಸಿತ್ತಿದ್ದು ನೆಚ್ಚಿನ ನಟನ ಅನಾರೋಗ್ಯಕ್ಕೆ ಕಣ್ಣೀರಿಡುತ್ತಿದ್ದಾರೆ.

ಸದಾಶಿವನಗರ ನಿವಾಸಕ್ಕೆ ಪೊಲೀಸ್ ಭದ್ರತೆ ಕಲ್ಪಿಸಲಾಗಿದ್ದು, ಆಸ್ಪತ್ರೆ ಸುತ್ತಮುತ್ತ ಸಂಚಾರ ನಿಯಂತ್ರಿಸಿ ಅಭಿಮಾನಿಗಳನ್ನು ತಡೆಯಲಾಗುತ್ತಿದೆ.