ಸಿಎಂ ಬಿಎಸ್ವೈ ತಮಗೆ ತಾವೇ ಪ್ರಮಾಣ ಪತ್ರ ಕೊಟ್ಟುಕೊಳ್ಳುತ್ತಿರುವುದೇಕೆ?: ಡಿಕೆಶಿ ಪ್ರಶ್ನೆ

ಬೆಂಗಳೂರು: ಸಿಎಂ ಆದವರು ನಾನೇ ಇನ್ನು 2 ವರ್ಷ ಅಧಿಕಾರದಲ್ಲಿರುತ್ತೇನೆ ಎಂದು ಹೇಳುವ ಅಗತ್ಯವೇನಿದೆ. ಅವರ ಅಧಿಕಾರದ ಬಗ್ಗೆ ನಾವು ಪ್ರಶ್ನಿಸಿದ್ದೇವಾ? ಹಾಗಿದ್ದರೂ ಈ ಬಗ್ಗೆ ಸ್ಪಷ್ಟತೆ ನೀಡುವ ಅಗತ್ಯ ಏನಿದೆ?’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಬಿಜೆಪಿ ಶಾಸಕರೇ ಬೇರೆ ನಾಯಕತ್ವದ ಬಗ್ಗೆ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ತಮಗೆ ತಾವೇ ಪ್ರಮಾಣ ಪತ್ರ ಕೊಟ್ಟುಕೊಳ್ಳುವ ಸ್ಥಿತಿ ಎದುರಾಗಿದೆ ಎಂದರೆ, ಎಲ್ಲೋ ಏನೋ ಯಡವಟ್ಟಾಗಿದೆ, ಅಪಾಯ ಎದುರಾಗಿದೆ ಎಂಬ ಅನುಮಾನ ಮೂಡುತ್ತದೆ.

ಸರ್ಕಾರಕ್ಕೆ ಕನಿಷ್ಠ ಪರಿಜ್ಞಾನ ಇಲ್ಲ: ಇಂಗ್ಲೆಂಡ್ ನಿಂದ ಬಂದವರಿಗೆ ರಾಜ್ಯದಲ್ಲಿ ವಿಳಾಸವಿದೆ. ವಿಮಾನ ನಿಲ್ದಾಣದಲ್ಲೇ ಅವರ ಪರೀಕ್ಷೆ ನಡೆಸಲು ಇವರಿಗೆ ಇದ್ದ ಕಷ್ಟವಾದರೂ ಏನು? ಆಡಳಿತದ ವಿಚಾರದಲ್ಲಿ ಈ ಸರ್ಕಾರ ಎಷ್ಟು ವಿಫಲವಾಗಿದೆ ಎಂಬುದಕ್ಕೆ ಇದೇ ಸಾಕ್ಷಿ. ದೇಶದಲ್ಲಿ ಕೊರೋನಾ ಸೋಂಕು ಹರಡಿಸಿದ್ದೇ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು.

ಆರಂಭದಲ್ಲೇ ಇದನ್ನು ನಿಯಂತ್ರಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ನಮ್ಮ ರಾಜ್ಯದಿಂದ ಯಾರೂ ಕೂಡ ಹೊರಗಿನವರಿಗೆ ಸೋಂಕು ಹರಡಿಸಿಲ್ಲ. ಬೇರೆ ಭಾಗದಿಂದ ಬಂದವರಿಂದಲೇ ಸೋಂಕು ಹರಡಿದೆ. ಅವರನ್ನು ಮೊದಲೇ ಪರೀಕ್ಷಿಸಿ ನಿಯಂತ್ರಣ ಮಾಡಬೇಕಿತ್ತು.

ಗ್ರಾಮ ಪಂಚಾಯಿತಿ ಫಲಿತಾಂಶ ಸಮಾಧಾನ: ಗ್ರಾಮ ಪಂಚಾಯಿತಿ ಫಲಿತಾಂಶದಿಂದ ನಮಗೆ ಸಮಾಧಾನವಾಗಿದೆ. ಈ ಚುನಾವಣೆಯಲ್ಲಿ ಎಷ್ಟೇ ಹಣದ ದುರುಪಯೋಗವಾಗಿದ್ದರೂ, ಬೇರೆ ಒತ್ತಡವಿದ್ದರೂ ನಮ್ಮ ಪಕ್ಷದ ಕಾರ್ಯಕರ್ತರು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದು ಪಕ್ಷಾತೀತ ಚುನಾವಣೆಯಾದರೂ ಪಂಚಾಯ್ತಿಯಿಂದ ಸಂಸತ್ತಿನವರೆಗಿನ ಪಕ್ಷ ರಾಜಕಾರಣವನ್ನು ತಪ್ಪಿಸಲು ಯಾರಿಗೂ ಸಾಧ್ಯವಿಲ್ಲ. ಹೀಗಾಗಿ ಈ ಫಲಿತಾಂಶದಿಂದ ನಮಗೆ ಸಮಾಧಾನವಿದೆ. ಅಧಿಕಾರವಿದೆ ಎಂದು ಕೆಲವರು ನಮ್ಮವರನ್ನು ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ. ವಿರೋಧ ಪಕ್ಷದಲ್ಲಿದ್ದರೂ ನಮಗೆ ಉತ್ತಮ ಫಲಿತಾಂಶ ಸಿಕ್ಕಿದೆ. ಹಳ್ಳಿ ಜನ ಆಪರೇಷನ್ ರಾಜಕಾರಣದ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ.

ಈ ತಿಂಗಳ 5ರಿಂದ 18ರವರೆಗೂ ಪ್ರವಾಸದಲ್ಲಿರುತ್ತೇನೆ. ಬ್ಲಾಕ್ ಅಧ್ಯಕ್ಷರನ್ನು ಭೇಟಿ ಮಾಡಿ ಅವರ ಧ್ವನಿಯನ್ನು ಆಲಿಸಲು ನಿರ್ಧರಿಸಿದ್ದೇನೆ.

2021ರ ವರ್ಷ ನಮ್ಮ ಪಕ್ಷಕ್ಕೆ ಸಂಘಟನೆಯ ವರ್ಷ. ಸ್ಥಳೀಯವಾಗಿ ಏನೇನು ಸಮಸ್ಯೆ ಇದೆ ಎಂದು ಗಮನದಲ್ಲಿಟ್ಟುಕೊಂಡು ನಾವು ಹೋರಾಟ ಮಾಡುತ್ತೇವೆ.

ಶಾಲೆ ಆರಂಭವಾಗಬೇಕು: ಶಾಲೆ ಮುಚ್ಚಬೇಕು ಎಂದು ನಾನು ಹೇಳುವುದಿಲ್ಲ. ಶಾಲೆ ತೆರೆಯಬೇಕು. ಕೋವಿಡ್ ನಿಯಮ ಪಾಲಿಸಲಿ. ಮಕ್ಕಳಿಗೆ ವಿದ್ಯಾಭ್ಯಾಸ ಅಂತರವಿದ್ದರೆ ಕಲಿಕೆ ಗುಣಮಟ್ಟ ಕುಗ್ಗುತ್ತದೆ.

ಶಿಕ್ಷಣ ಮೂಲಭೂತ ಅಗತ್ಯ ಆಗಿರುವುದರಿಂದ ಸರ್ಕಾರ ಶಾಲೆ ಆರಂಭಿಸಿದರೆ ನಾವು ಅದನ್ನು ವಿರೋಧಿಸುವುದಿಲ್ಲ.

ಪಂಚಾಯತಿಯಲ್ಲಿ ಕಮಲಕ್ಕೆ ಮುನ್ನಡೆ: ಕೈ, ತೆನೆಗೂ ಸಂತಸ ತಂದ ಫಲಿತಾಂಶ

ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಡಳಿತ ಪಕ್ಷ ಬಿಜೆಪಿ ಶೇ.60ರಷ್ಟು ಸೀಟನ್ನ ತನ್ನದಾಗಿಸಿಕೊಂಡಿದೆ. 5762 ಪಂಚಾಯಿತಿಗಳ ಪೈಕಿ ಬಿಜೆಪಿ ಬೆಂಬಲಿಗರು 2741 ಆಯ್ಕೆಯಾಗಿದ್ದಾರೆ. 1949 ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಬೆಂಬಲಿಗರು, 577 ಪಂಚಾಯಿತಿಗಳಲ್ಲಿ ಜೆಡಿಎಸ್ ನಿಷ್ಠರು ಜಯಗಳಿಸಿದ್ದಾರೆ.

ಕೊರೊನಾ ಸಂಕಷ್ಟದ ನಡುವೆಯೂ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಮೂರು ಪಕ್ಷಗಳಿಗೂ ಸಂತಸ ತಂದಿದೆ. ಪಂಚಾಯಿತಿಯಲ್ಲಿ ಪಕ್ಷ ರಹಿತ ಚುನಾವಣೆ ನಡೆದಿದ್ದರೂ, ರಾಜಕೀಯ ಪಕ್ಷಗಳ ಬೆಂಬಲದ ಆಧಾರದ ಮೇಲೆ ಅಭ್ಯರ್ಥಿಗಳು ಚುನಾವಣಾ ಕಣಕ್ಕೆ ಧುಮುಕಿದ್ರು. ಹೀಗಾಗಿ ಮೂರು ಪಕ್ಷಗಳ ನಾಯಕರು ತಮ್ಮ ಬೆಂಬಲಿತ ಅಭ್ಯರ್ಥಿಗಳ ಗೆಲುವಿನ ಆಧಾರದಲ್ಲಿ ತಮ್ಮ ಗೆಲುವನ್ನ ಪ್ರತಿಪಾಧಿಸಿದ್ದಾರೆ.

ಗ್ರಾಮ ಪಂಚಾಯಿತಿಗಳ ಚುನಾವಣಾ ಫಲಿತಾಂಶ ಸಂಪೂರ್ಣವಾಗಿ ಹೊರ ಪ್ರಕಟವಾಗಿದೆ. ಇದೀಗ ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯಲು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಬೆಂಬಲಿಗರು ತೀವ್ರ ಪೈಪೋಟಿ ನಡೆಸಿದ್ದಾರೆ. ಇನ್ನೂ ಈ ಬಾರಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಯುವಕರದ್ದೇ ಮೇಲುಗೈ. ಕೊರೊನಾದಿಂದ ತವರಿಗೆ ಮರಳಿದ್ದ ಯುವಕರು ಚುನಾವಣೆಯಲ್ಲಿ ಸ್ಪರ್ಧಿಸಿ ದೊಡ್ಡ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ.

ಮಕ್ಕಳ ಸುರಕ್ಷತೆ ನಮ್ಮದು, ಶಾಲೆಗೆ ಧೈರ್ಯವಾಗಿ ಕಳಿಸಿ: ಸುರೇಶ್ ಕುಮಾರ್ ಮನವಿ

ಬೆಂಗಳೂರು: ಶಾಲೆಯಲ್ಲಿ ಮಕ್ಕಳ ಸುರಕ್ಷತೆಯ ಜವಾಬ್ದಾರಿ ನಮ್ಮದು, ಎಲ್ಲ ಪೋಷಕರು ಮಕ್ಕಳನ್ನು ಆಶೀರ್ವದಿಸಿ ಧೈರ್ಯವಾಗಿ ಶಾಲೆಗೆ ಕಳಿಸಿ, ಅವರ ಶೈಕ್ಷಣಿಕ ಭವಿಷ್ಯ ಉಜ್ವಲವಾಗಲಿ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ರಾಜ್ಯದ ಪೋಷಕರಲ್ಲಿ ಮನವಿ ಮಾಡಿದ್ದಾರೆ.

ಜ. 1ರ ಶುಕ್ರವಾರದಿಂದ ಪ್ರಸ್ತುತ ಶೈಕ್ಷಣಿಕ ವರ್ಷದ 10 ಮತ್ತು 12ನೇ ತರಗತಿಗಳು ಸುರಕ್ಷಿತ ವಾತಾವರಣದಲ್ಲಿ ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಮುನ್ನಾ ದಿನವಾದ ಗುರುವಾರ ರಾಜ್ಯದ ಮಕ್ಕಳ ಪೋಷಕರಿಗೆ ಮನವಿ ಮಾಡಿಕೊಂಡಿರುವ ಅವರು, ಶಾಲೆಗಳಲ್ಲಿ ನಿಮ್ಮ ಮಕ್ಕಳನ್ನು ನಮ್ಮ ಮಕ್ಕಳಂತೆಯೇ ನೋಡಿಕೊಳ್ಳುತ್ತೇವೆ. ಶಾಲೆ ಮಕ್ಕಳ ಇನ್ನೊಂದು ಮನೆಯಾಗಿರಲಿದ್ದು, ಶಾಲಾ ವಿದ್ಯಾಲಯ ಸುರಕ್ಷಿತಾಲಯವಾಗಿರಲಿದೆ ಎಂದು ಭರವಸೆ ನೀಡುವೆ ಎಂದು ಅಭಯ ನೀಡಿದ್ದಾರೆ.

‘ಕೊರೋನಾ ಓಡಿಸೋಣ.. ಮಕ್ಕಳನ್ನು ಸುರಕ್ಷಿತವಾಗಿ ಓದಿಸೋಣ…’ ಎಂಬ ಧ್ಯೇಯದೊಂದಿಗೆ ಆರಂಭವಾಗಲಿರುವ ಈ ಶೈಕ್ಷಣಿಕ ವರ್ಷ ಮಕ್ಕಳ ಬಾಳಿಗೆ ಒಂದು ಹೊಸ ಪರ್ವಕಾಲವಾಗಿ ಹೊರಹೊಮ್ಮಲಿದೆ. ಶಾಲೆಗಳಲ್ಲಿ ಮಕ್ಕಳ ಕಲರವವೇ ಇರಲಿಲ್ಲ. ಶಾಲೆಗಳು ಮುಚ್ಚಿಕೊಂಡಿದ್ದವು, ಮೈದಾನಗಳು ಬಿಕೋ ಎನ್ನುತ್ತಿದ್ದವು. ಅದೆಲ್ಲಕ್ಕೂ ಅಂತ್ಯವೆಂಬಂತೆ ಶಾಲೆಗಳು ಆರಂಭವಾಗುತ್ತಿರುವುದು ಮಕ್ಕಳು ಮತ್ತು ಪೋಷಕರಲ್ಲಿ ಒಂದು ಹೊಸ ಉತ್ಸಾಹಕ್ಕೆ ಕಾರಣವಾಗಿದ್ದು, ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ತಮ್ಮ ಒಪ್ಪಿಗೆ ಪತ್ರ ನೀಡಿ ಕಳಿಸಬೇಕು ಎಂದು ಸಚಿವರು ಹೇಳಿದ್ದಾರೆ. ಶಾಲೆಗಳು ಆರಂಭವಾಗುತ್ತಿರುವುದು ವಿಶೇಷವಾಗಿ ಗ್ರಾಮೀಣ ಪ್ರದೇಶದ ಪೋಷಕರು ಮತ್ತು ಮಕ್ಕಳಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಮಕ್ಕಳಂತೂ ಶಾಲೆಯಲ್ಲಿ ಬಹುದಿನಗಳ ನಂತರ ತಮ್ಮ ಗೆಳೆಯರನ್ನು ನೋಡಲು ಕಾತರರಾಗಿ ಶಾಲೆ ಆರಂಭವಾಗು ಕ್ಷಣಗಣನೆಯಲ್ಲಿದ್ದಂತೆ ತೋರುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಕ್ಕಳಿಗೆ ಶೀತ, ಜ್ವರ, ನೆಗಡಿಯಂತ ಲಕ್ಷಣಗಳಿದ್ದರೆ ಕಳಿಸುವುದು ಬೇಡ. ನಮಗೆ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕಿಂತ ಅವರ ಆರೋಗ್ಯವೂ ಸಹ ಮುಖ್ಯವಾಗಿದೆ. ಶಾಲೆಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಶಾಲೆಗಳನ್ನು ಸ್ಯಾನಿಟೈಜೇಶನ್ ಮಾಡಲಾಗಿದೆ. ಪ್ರತಿ ಸಂಜೆಯೂ ಸ್ಯಾನಿಟೈಸೇಷನ್ ಮಾಡಲಾಗುತ್ತದೆ. ಪ್ರತಿ ದಿನ ಮಕ್ಕಳ ಆರೋಗ್ಯದ ಕಡೆ ಓರ್ವ ಶಿಕ್ಷಕರು ಕಣ್ಗಾವಲು ಇಟ್ಟಿರುತ್ತಾರೆ. ರೋಗ ಲಕ್ಷಣವಿರುವುದು ಕಂಡು ಬಂದರೆ ಅಂತಹ ವಿದ್ಯಾರ್ಥಿಯನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಿ ಮುಂದಿನ ಆರೋಗ್ಯ ತಪಾಸಣೆಯಂತಹ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಮಕ್ಕಳ ಸುರಕ್ಷಿತ ಶಿಕ್ಷಣಕ್ಕಾಗಿ ಆರೋಗ್ಯ, ಸಾರಿಗೆÉ, ನಗರಾಭಿವೃದ್ಧಿ, ಪೌರಾಡಳಿತ, ಕಂದಾಯ, ಗ್ರಾಮೀಣಾಭಿವೃದ್ಧಿ ಇಲಾಖೆಗಳು ಇಲಾಖೆಗಳು ಶಿಕ್ಷಣ ಇಲಾಖೆಯೊಂದಿಗೆ ಕೈಜೋಡಿಸಿವೆ. ಇಡೀ ರಾಜ್ಯ ಸರ್ಕಾರವೇ ನಿಮ್ಮ ಮಕ್ಕಳ ಹಿತದೃಷ್ಟಿಗೆ ಟೊಂಕ ಕಟ್ಟಿ ನಿಂತಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

ಕೆಲವೇ ತಿಂಗಳಲ್ಲಿ ಮಂಡಳಿ ಪರೀಕ್ಷೆಗಳಿರುವ ಹಿನ್ನೆಲೆಯಲ್ಲಿ 10 ಮತ್ತು 12ನೇ ತರಗತಿಗಳ ಮಕ್ಕಳಿಗೆ ಶಾಲಾ ತರಗತಿಗಳು ಪುಟ್ಟ ಪುಟ್ಟ ತಂಡಗಳಲ್ಲಿ ಸಾಮಾಜಿಕ ಅಂತರದಲ್ಲಿ ಆರಂಭಗೊಂಡರೆ, 6ರಿಂದ 9ನೇ ತರಗತಿಗಳ ಪರಿಷ್ಕೃತ ವಿದ್ಯಾಗಮ ತರಗತಿಗಳು ಸುರಕ್ಷಿತ ಶಾಲಾವರಣದಲ್ಲಿ ನಡೆಯಲಿವೆ. ಶಾಲೆಗಳ ಆರಂಭದ ವಿಚಾರದಲ್ಲಿ ಶಾಲಾಭಿವೃದ್ಧಿ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರು ತೋರುತ್ತಿರುವ ಉತ್ಸುಕತೆ ನಮಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಪ್ರೇರಣೆಗೆ ಕಾರಣವಾಗಿವೆ. 2020 ಕೊರೋನ ವರ್ಷವಾದರೆ, 2021ನೇ ವರ್ಷ ಕೊರೋನಾ ಎದುರಿಸುವ ಶಕ್ತಿಯನ್ನು ಪಡೆಯುವ ವರ್ಷವಾಗಿದ್ದು, ಅದು ನಮ್ಮ ಮಕ್ಕಳೇ ನಮಗೆ ನಿದರ್ಶನವಾಗಲಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

ಶಾಲಾ ತರಗತಿ, ಶಾಲಾವರಣ ಸ್ವಚ್ಛವಾಗಿರಲಿದೆ. ಶೌಚಾಲಯಗಳು ಸ್ವಚ್ಚವಾಗಿರಲಿವೆ. ಮಕ್ಕಳು ಗುಂಪು ಗೂಡುವುದಿಲ್ಲ, ಪ್ರತಿಯೊಬ್ಬರ ಆರೋಗ್ಯ ತಪಾಸಣೆ ನಡೆಯಲಿದೆ, ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪೋಷಕರ ಸಹಕಾರ ನಿಜಕ್ಕೂ ದೊಡ್ಡದು, ಮಕ್ಕಳ ಭವಿಷ್ಯವೂ ಇದರಲ್ಲಿ ಪ್ರಮುಖವಾಗಿರುವುದರಿಂದ ನಮ್ಮ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಲು ಮುಂದಾಗಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ. ಮಕ್ಕಳಿಗೆ ಮನೆಯಿಂದಲೇ ಕುಡಿಯುವ ನೀರು ಕಳಿಸಿಕೊಡಿ, ಶಾಲಾ ತರಗತಿಗಳು ಕೆಲವೇ ಗಂಟೆಗಳ ಕಾಲ ನಡೆಯಲಿವೆ. ಆಯಾ ತರಗತಿಗಳಲ್ಲೇ ಬೆಳಗಿನ ಪ್ರಾರ್ಥನೆ ನಡೆಯಲಿವೆ. ಮಕ್ಕಳು ಗುಂಪುಗುಂಪಾಗಿ ಸೇರುವ ಪ್ರಮೇಯವೇ ಇರುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ. ತಮ್ಮತಮ್ಮ ಭಾಗದ ಜನಪ್ರತಿನಿಧಿಗಳು ಶಾಲೆಗಳ ಆರಂಭದ ವಿಷಯದಲ್ಲಿ ಎಲ್ಲ ರೀತಿಯ ಸಹಕಾರ ನೀಡಲಿದ್ದಾರೆ. ಮಕ್ಕಳು ಶಿಕ್ಷಕರು

10 ಮತ್ತು 12ನೇ ತರಗತಿಯಂತೆಯೇ ಉಳಿದ ತರಗತಿಗಳನ್ನು ಆರಂಭಿಸಬೇಕೆಂದು ಬಹು ಭಾಗದಿಂದ ಒತ್ತಾಯಗಳು ಕೇಳಿಬರುತ್ತಿವೆ. ಇನ್ನು ಕೆಲವೇ ದಿನಗಳಲ್ಲಿ ಇಂದಿನ ಶಾಲೆಗಳ ನಡೆಯನ್ನು ಅನುಸರಿಸಿ ಒಂದು ನಿರ್ಧಾರಕ್ಕೆ ಬರಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

ಚಂದನಾ ವಾಹಿನಿ ಮೂಲಕ ಪ್ರಸಾರವಾಗುವ ತರಗತಿಗಳು, ಯೂ-ಟ್ಯೂಬ್ ಪಾಠಗಳು ಎಂದಿನಂತೆ ನಡೆಯಲಿವೆ ಎಂದು ಸಚಿವರು ತಿಳಿಸಿದ್ದಾರೆ.

ಶಾಲಾಭೇಟಿ ಮುಂದುವರಿಕೆ: ಶಾಲಾರಂಭದ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವಾರು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಶಾಲಾರಂಭದ ಸಿದ್ಧತೆಗಳನ್ನು ಪರಿಶೀಲಿಸಿ ಕೈಗೊಂಡಿರುವ ಕ್ರಮಗಳನ್ನು ವೀಕ್ಷಿಸಿದರು. ಬೆಂಗಳೂರಿನ ಬಸವನಗುಡಿಯ ಬಿಎಂಎಸ್, ಜಯನಗರದ ಎನ್‍ಎಂಕೆಆರ್ ವಿ, ಬಿಇಎಸ್, ಆರ್.ವಿ., ನ್ಯಾಷನಲ್ ಕಾಲೇಜು, ವಿಜಯ ಕಾಲೇಜು ಸೇರಿದಂತೆ ಹಲವಾರು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿದರು.

ಹೊಸ ವರ್ಷದಲ್ಲಿ ಶಾಲಾವರಣದಲ್ಲಿ ಮಕ್ಕಳ ಕಲರವ: ಸುರೇಶ್ ಕುಮಾರ್ ಸಂತಸ

ಬೆಂಗಳೂರು: ರಾಜ್ಯ ಸರ್ಕಾರದ 2021ನೇ ಸಾಲಿನ ದಿನದರ್ಶಿಕೆ ಮತ್ತು ದಿನಚರಿಗಳನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಎಸ್. ಸುರೇಶ್ ಕುಮಾರ್ ಬುಧವಾರ ಬಿಡುಗಡೆ ಮಾಡಿದರು.

ವಿಧಾನಸೌಧದ ತಮ್ಮ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಡೈರಿ ಮತ್ತು ಕ್ಯಾಲೆಂಡರ್ಗಳನ್ನು ಬಿಡುಗಡೆ ಮಾಡಿದ ಅವರು, ಮೊದಲ ಬಾರಿಗೆ ದಿನದರ್ಶಿಕೆಯನ್ನು ವಿನೂತನವಾದ ವಿನ್ಯಾಸದಲ್ಲಿ ಪ್ರಕಟಿಸಲಾಗಿದ್ದು, ಶಾಲಾ ಮಕ್ಕಳು ಮತ್ತು ಪೋಷಕರಲ್ಲಿ ಹೊಸ ಚೈತನ್ಯ ಮೂಡಿಸುವಂತಹ ಚಿತ್ರಗಳನ್ನು ಮುದ್ರಿಸಲಾಗಿದೆ. ಇಂದಿನ ಸಂದರ್ಭದಲ್ಲಿ ಸಕಾರಾತ್ಮಕವಾದ ಭಾವನೆ ಮೂಡಿಸುವ ಶಾಲೆಗಳು ಮತ್ತು ಶಾಲಾ ಮಕ್ಕಳ ಚಿತ್ರಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.

ಈ ಬಾರಿ ಡೈರಿ ಮತ್ತು ಕ್ಯಾಲೆಂಡರ್ಗಳನ್ನು ಹೊಸ ವಿನ್ಯಾಸ ಮಾಡಿದ ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಯ ಅಧಿಕಾರಿಗಳನ್ನು ಅವರು ಅಭಿನಂದಿಸಿದರು.

ಶಾಲಾರಂಭ ಕುರಿತಂತೆ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ಸುರೇಶ್ ಕುಮಾರ್, ಶಾಲೆಗಳಿಗೆ ಬರಲು ಮಕ್ಕಳು ಉತ್ಸುಕರಾಗಿದ್ದು, ನಾಳೆಯಿಂದ ಶಾಲೆಯಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ಇದೇ ಮೊದಲಬಾರಿಗೆ ಶಾಲಾ ಪರಿಸರದಲ್ಲಿ ಮಕ್ಕಳ ಕಲರವ ಕೇಳಿಬರಲಿದೆ ಎಂದರು.

ಶಾಲೆ ಆರಂಭಕ್ಕೆ ನಮ್ಮ ಶಾಲಾ ಕಾಲೇಜುಗಳು ಹೇಗೆ ನಮ್ಮ ಎಸ್ ಒ ಪಿಯನ್ನು ಅನುಸರಿಸುತ್ತಿವೆ ಮತ್ತು ಶಾಲಾರಂಭಕ್ಕೆ ಹೇಗೆ ಸಿದ್ಧತೆ ಕೈಗೊಂಡಿವೆ ಎಂದು ಪರಿಶೀಲಿಸಲು ನಿನ್ನೆ ಮತ್ತು ಇಂದು ಬೆಂಗಳೂರು ನಗರದ ಹಲವಾರು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿದೆ. ಆಗ ಶಾಲೆಗಳ ಬಳಿ ಕಾರ್ಯನಿಮಿತ್ತ ಬಂದಿದ್ದ ಪ್ರಥಮ ಪಿಯು ವಿದ್ಯಾರ್ಥಿಗಳು ಪ್ರಥಮ ಪಿಯು ತರಗತಿಗಳನ್ನೂ ಆರಂಭಿಸಿ ಎಂದು ಒತ್ತಾಯ ಮಾಡಿದರು. ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮತ್ತು ಆರೋಗ್ಯ ಇಲಾಖೆಯ ಮಾರ್ಗಸೂಚಿಯನ್ವಯ ಮುಂದಿನ ದಿನಗಳಲ್ಲಿ ಉಳಿದ ತರಗತಿಗಳನ್ನು ಆರಂಭಿಸಲು ಚಿಂತನೆ ನಡೆಸಲಾಗುವುದು ಎಂದು ಆ ಮಕ್ಕಳಿಗೆ ಹೇಳಿದ್ದಾಗಿ ತಿಳಿಸಿದರು.

ಇಂದು ಶಾಲಾ ಕಾಲೇಜುಗಳ ಭೇಟಿಗೆ ಹೋಗಿದ್ದಾಗ ಕೋವಿಡ್ ವಿಷಮ ಕಾಲಘಟ್ಟದಲ್ಲಿ ಶಾಲೆಗಳನ್ನು ಪ್ರಾರಂಭಿಸುವುದು ತಮಗೆ ಅಗ್ನಿಪರೀಕ್ಷೆಯಲ್ಲವೇ ಎಂದು ಪತ್ರಕರ್ತ ಮಿತ್ರರೊಬ್ಬರು ನನ್ನನ್ನು ಪ್ರಶ್ನಿಸಿದರು. ನಮ್ಮ ನಾಡಿನ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಮುಂದುವರಿಕೆ ಅಂಗವಾಗಿ ಶಾಲಾ ತರಗತಿಗಳನ್ನು ನಡೆಸುವುದು ಶಿಕ್ಷಣ ಇಲಾಖೆಯಲ್ಲಿ ಒಂದು ಸಹಜ ಪ್ರಕ್ರಿಯೆ. ಈ ಹಿಂದಿನ ವರ್ಷಗಳ ಸಹಜ ಪರಿಸ್ಥಿತಿಯಲ್ಲಿ ಸುಗಮವಾಗಿ ತರಗತಿಗಳು ನಡೆದು ವಿದ್ಯಾರ್ಥಿಗಳ ಕಲಿಕೆ ಉತ್ತಮ ರೀತಿಯಲ್ಲಿ ಮುಂದುವರೆಯುತಿತ್ತು. ಆದರೆ ಕೋವಿಡ್-19 ರ ವಿಷಮ ಹಾಗೆಯೇ ಅಸಹಜ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಎಂದಿನಂತೆ ನಡೆಯುವ ಹಾಗೆ ಪ್ರಸ್ತುತ ಸಾರ್ವಜನಿಕ ಶಿಕ್ಷಣ ಇಲಾಖೆ ಕೈಗೊಂಡಿರುವ ಕ್ರಮಗಳನ್ನು ನಾವೆಲ್ಲಾ ಆಶಾಭಾವನೆಯಿಂದ ನೋಡೋಣ ಎಂದು ಸುರೇಶ್ ಕುಮಾರ್ ತಿಳಿಸಿದರು.

ಶಾಲಾ ತರಗತಿಗಳನ್ನು ಪ್ರಾರಂಭಿಸುವುದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಗೆ ಪ್ರತಿಷ್ಠೆಯ ವಿಷಯವಲ್ಲ. ತರಗತಿ ಪ್ರಾರಂಭಿಸುವುದು ಶಿಕ್ಷಣ ಇಲಾಖೆಯ ಬದ್ಧತೆ ಎಂಬುದನ್ನು ನಾವೆಲ್ಲಾ ಅರಿಯಬೇಕಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ರಾಜ್ಯದೆಲ್ಲೆಡೆ ನಾಳೆ ಅಂದರೆ ಹೊಸ ವರ್ಷದ ಮೊದಲ ದಿನ 01-01-2021ರ ಶುಕ್ರವಾರ 10 ಮತ್ತು 12ನೇ ತರಗತಿಗಳು ಆರಂಭವಾಗಲು ಕ್ಷಣಗಣನೆ ಆರಂಭವಾಗಿದೆ. ಶಾಲೆಗಳು ಯಾವುದೇ ಅಡಚಣೆಯಿಲ್ಲದೇ, ಅವಘಡವಿಲ್ಲದೇ ನಡೆಯುತ್ತವೆಂಬ ಆಶಾಭಾವನೆ ನನ್ನದಾಗಿದೆ. ತಮ್ಮ ಮಕ್ಕಳು ಶಾಲೆಗೆ ಹೋಗಿ ಸಮರ್ಪಕವಾದ ಶಿಕ್ಷಣ ಪಡೆಯಬೇಕೆಂಬ ಹಂಬಲ ರಾಜ್ಯದ ಅಸಂಖ್ಯಾತ ಪೋಷಕರದ್ದು. ತರಗತಿಗಳಿಗೆ ಬಂದು ತಮ್ಮ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂಬ ಹಂಬಲ ಹೊಂದಿರುವ ವಿದ್ಯಾಸಮೂಹ, ಈ ಕಾರ್ಯವನ್ನು ಯಶಸ್ವಿಗೊಳಿಸಲು ಟೊಂಕ ಕಟ್ಟಿ ನಿಂತಿರುವ ಎಸ್.ಡಿ.ಎಂ.ಸಿ ಮತ್ತು ಸ್ವಯಂ ಸೇವಾ ಸಂಸ್ಥೆಗಳು ದೃಢ ಸಂಕಲ್ಪ ಮಾಡಿವೆ ಎಂದು ಅವರು ವಿವರಿಸಿದರು.

ಈ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುವುದಕ್ಕೆ ಶಿಕ್ಷಣ ಇಲಾಖೆಯ ಈ ಮಹತ್ಕಾರ್ಯದಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಕೈಜೋಡಿಸುತ್ತಿವೆ. ಹಾಗೆಯೇ ಮಕ್ಕಳ ಸುಲಲಿತ ಶಿಕ್ಷಣ ಮುಂದುವರಿಕೆಗೆ ನನ್ನೆಲ್ಲಾ ಸಂಪುಟ ಸಹೋದ್ಯೋಗಿಗಳು, ರಾಜ್ಯದ ಎಲ್ಲ ಶಾಸಕ ಮಿತ್ರರು, ಚುನಾಯಿತ ಜನಪ್ರತಿನಿಧಿಗಳೆಲ್ಲರೂ ತಂತಮ್ಮ ವ್ಯಾಪ್ತಿಯಲ್ಲಿ ಸಹಾಯ-ಸಹಕಾರದ ಹಸ್ತ ಚಾಚಿದ್ದಾರೆ. ಎಲ್ಲರ ಸಹಾಯ-ಸಹಕಾರದಿಂದ ಶಾಲಾರಂಭದ ಪವಿತ್ರ ಕೈಂಕರ್ಯ ಯಶಸ್ವಿಯಾಗಿ ಮಕ್ಕಳ ಶೈಕ್ಷಣಿಕ ಭವಿಷ್ಯ ಉತ್ತಮವಾಗಲಿದೆ ಎಂದು ಅವರು ಹೇಳಿದರು.

ಶಾಲೆ ಆರಂಭಿಸುವುದು ನಮ್ಮ ಸರ್ಕಾರದ ಪ್ರತಿಷ್ಠೆ ಪ್ರಶ್ನೆಯಲ್ಲ, ಅದು ಮಕ್ಕಳ ಹಿತದೃಷ್ಟಿಯಿಂದ ಕೈಗೊಳ್ಳಬಹುದಾದ ಸರ್ಕಾರದ ಬದ್ಧತೆಯಾಗಿದೆ. ನಮ್ಮ ನಾಡಿನ ಮಕ್ಕಳ ಹಿತ ಮತ್ತು ಸುರಕ್ಷತೆ ನಮ್ಮ ಸರ್ಕಾರದ ಕರ್ತವ್ಯವಾಗಿದೆ ಎಂದು ಸುರೇಶ್ ಕುಮಾರ್ ಹೇಳಿದರು.
*ಶಾಲಾವರಣದಲ್ಲಿ ಪರಿಷ್ಕೃತ ವಿದ್ಯಾಗಮ:*
6ರಿಂದ 9ನೇ ತರಗತಿಗಳಿಗೆ ಪರಿಷ್ಕೃತ ರೂಪದಲ್ಲಿ ವಿದ್ಯಾಗಮವನ್ನು ಆರಂಭಿಸಲಾಗುತ್ತಿದ್ದು, ಪ್ರಸ್ತುತ ಚಳಿಗಾಲವಾಗಿರುವುದರಿಂದ ಮಕ್ಕಳ ಆರೋಗ್ಯದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮವಾಗಬಾರದೆಂಬ ಹಿನ್ನೆಲೆಯಲ್ಲಿ ಮಾರ್ಗದರ್ಶಿ ಶಿಕ್ಷಕರು ಕನಿಷ್ಠ ಸಂಖ್ಯೆಯ ಮಕ್ಕಳಿಗೆ ಶಾಲಾಪರಿಸರದಲ್ಲಿಯೇ ಬೋಧಿಸುವರು. ವಿದ್ಯಾಗಮವನ್ನು ಶಾಲಾರಂಭ ಭಾವನೆಯಿಂದ ನೋಡದೇ ಕೇವಲ ಮಕ್ಕಳು ಶಾಲೆಗೆ ಕಲಿಕೆ ಮುಂದುವರೆಸಲು ಸರ್ಕಾರದ ತಾತ್ಕಾಲಿಕ ವ್ಯವಸ್ಥೆಯಷ್ಟ ಎಂದು ಗಮನಿಸಬೇಕಿದೆ. ಉಚ್ಚ ನ್ಯಾಯಾಲಯದ ಆಶಯ ಹಾಗೂ ಶಿಕ್ಷಣ ಕಾಯ್ದೆಯನುಸಾರ ಯಾವುದಾದರೂ ಮಾದರಿಯಲ್ಲಿ ಮಕ್ಕಳಿಗೆ ಬೋಧಿಸಬೇಕಾದದ್ದು ಸರ್ಕಾರದ ಕರ್ತವ್ಯವಾಗಿದೆ ಎಂದು ಸುರೇಶ್ ಕುಮಾರ್ ಹೇಳಿದರು.

ವಿದ್ಯಾಗಮದಲ್ಲಿ ಕೆಲ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದ್ದು, ಶಿಕ್ಷಕರ ಸಂಖ್ಯೆ ಕಡಿಮೆ ಇದ್ದಲ್ಲಿ ಮಕ್ಕಳನ್ನು ವಿವಿಧ ತಂಡಗಳಲ್ಲಿ ವಿಂಗಡಿಸಿ ಪ್ರತ್ಯೇಕ ಕೊಠಡಿಗಳಲ್ಲಿ ದೈಹಿಕ ಅಂತರದಲ್ಲಿ ಆಸೀನರಾಗಿಸಿ ಮಾರ್ಗದರ್ಶಿ ಶಿಕ್ಷಕರು ಎಲ್ಲತಂಡಗಳಿಗೆ ಪ್ರತ್ಯೇಕವಾಗಿ ಮಾರ್ಗದರ್ಶನ ನೀಡುವರು ಎಂದು ಸಚಿವರು ಹೇಳಿದರು.

ವಿಧಾನಪರಿಷತ್ ಸದಸ್ಯ ಶಶೀಲ್ ನಮೋಶಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪ್ರಧಾನ ಕಾರ್ಯದರ್ಶಿ ಎಸ್. ಆರ್. ಉಮಾಶಂಕರ್, ಮುದ್ರಣ ಇಲಾಖೆ ನಿರ್ದೇಶಕ ಲಕ್ಷ್ಮೀನಾರಾಯಣ, ಜಂಟಿ ನಿರ್ದೇಶಕ ಬೋರಯ್ಯ, ಮತ್ತಿತರರು ಭಾಗವಹಿಸಿದ್ದರು.

ಗ್ರಾಮ ಪಂಚಾಯಿತಿ ಫಲಿತಾಂಶ ಸಮಾಧಾನ ತಂದಿದೆ; ಡಿ.ಕೆ. ಶಿವಕುಮಾರ್

ಬೆಂಗಳೂರು:‘ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಇನ್ನು ಪೂರ್ಣ ಪ್ರಮಾಣದಲ್ಲಿ ಬರಬೇಕಿದೆ. ಈವರೆಗಿನ ಫಲಿತಾಂಶದಲ್ಲಿ ಪಕ್ಷ ಬೆಂಬಲಿಸಿದ ಅಭ್ಯರ್ಥಿಗಳ ಸಾಧನೆ ಸಮಾಧಾನ ತಂದಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಗುರುವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು,’ಚುನಾವಣಾ ಆಯೋಗ ಈ ಫಲಿತಾಂಶವನ್ನು ಯಾವುದೇ ಪಕ್ಷ ತಮ್ಮ ಗೆಲುವು ಎಂದು ಬಿಂಬಿಸಿಕೊಳ್ಳುವಂತಿಲ್ಲ ಎಂದು ವ್ಯಾಖ್ಯಾನ ನೀಡಿದೆ. ಮುಂದೆ ಜಿಲ್ಲಾ ಕಾಂಗ್ರೆಸ್ ಕಡೆಯಿಂದ ವರದಿ ತರಿಸಿಕೊಳ್ಳುತ್ತೇನೆ.

ನನ್ನ ಕ್ಷೇತ್ರದಲ್ಲೇ ಬಿಜೆಪಿ ಗೆದ್ದಿದೆ ಎಂದು ಹೇಳುತ್ತಿದ್ದೀರಿ. ಅಲ್ಲೇ ಹೋಗಿ ಯಾವ ಪಕ್ಷ ಬಂದಿದೆ ಎಂದು ನೋಡೋಣ ಬನ್ನಿ. ನಾವು ಅವಿರೋಧವಾಗಿ ಆಯ್ಕೆ ಮಾಡುವ ಶಕ್ತಿ ಇದ್ದರೂ ಸ್ಪರ್ಧೆ ಇರಲಿ ಎಂದು ಸುಮ್ಮನೆ ಇದ್ದೇವೆ. ಬಿಜೆಪಿಯಲ್ಲಿ ಯಾವ ಆಂತರಿಕ ಸಮಸ್ಯೆ ಇದೆಯೋ ಗೊತ್ತಿಲ್ಲ ಹೀಗಾಗಿ ಅವರು ಈ ರೀತಿ ಗೆದ್ದಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಗ್ರಾಮ ಪಂಚಾಯಿತಿ ರಚನೆಯಾಗಲಿ ಯಾರು ಗೆದ್ದಿದ್ದಾರೆ ಎಂದು ಗೊತ್ತಾಗುತ್ತದೆ. ನಾವು ನಮ್ಮ ಸ್ಥಳೀಯ ನಾಯಕರಿಗೆ ಜವಾಬ್ದಾರಿ ವಹಿಸಿ ಚುನಾವಣೆ ಮಾಡಿದ್ದೇವೆ ಎಂದರು.

ರಾಜ್ಯದ ಜನತೆಗೆ ಹೊಸ ವರ್ಷದ ಶುಭಾಶಯಗಳು:

ರಾಜ್ಯದ ಜನತೆಗೆ ಹೊಸ ವರ್ಷದ ಶುಭಾಶಯಗಳು. 2020ರ ವರ್ಷ ಇಡೀ ಪ್ರಪಂಚದ ಜನ ನರಕವನ್ನು ಅನುಭವಿಸಿದೆ. ನಾವ್ಯಾರು ಈ ಪಿಡುಗನ್ನು ನಿರೀಕ್ಷೆ ಮಾಡಿರಲಿಲ್ಲ. ಆದರೂ ಜನ ಧೈರ್ಯವಾಗಿ ಈ ಮಹಾಮಾರಿ ವಿರುದ್ಧ ಹೋರಾಟ ಮಾಡಿದ್ದಾರೆ.

2021ರ ವರ್ಷ ಎಲ್ಲರಿಗೂ ನೆಮ್ಮದಿ, ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಈ ಕಷ್ಟ ಮುಂದಿನ ದಿನಗಳಲ್ಲಿ ಬಾರದಿರಲಿ ಎಂದು ನಾವು ಎಲ್ಲ ಧರ್ಮದವರು ತಮ್ಮ ದೇವರಲ್ಲಿ ಪ್ರಾರ್ಥಿಸಲಿ.

ಕಾಂಗ್ರೆಸ್ ಪಕ್ಷದ ಪರವಾಗಿ ಹಾಗೂ ವೈಯಕ್ತಿಕವಾಗಿ ಜನರಿಗೆ ತುಂಬು ಹೃದಯದಿಂದ ಶುಭ ಕೋರುತ್ತೇನೆ. ವಿಶೇಷವಾಗಿ ಮಕ್ಕಳು ವಿದ್ಯಾಭ್ಯಾಸ ವಿಚಾರದಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ. ಆನ್ ಲೈನ್ ಮೂಲಕ ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗಿಲ್ಲ. ಮಕ್ಕಳು ದೇಶದ ಭವಿಷ್ಯದ ಆಸ್ತಿ. ಮುಂದಿನ ದಿನಗಳಲ್ಲಿ ಅವರಿಗೆ ಉತ್ತಮ ಶಿಕ್ಷಣ ಸಿಗಲಿ. ಈ ನಿಟ್ಟಿನಲ್ಲಿ ಸರ್ಕಾರ ಕೂಡ ಸರಿಯಾದ ರೀತಿಯಲ್ಲಿ ಚಿಂತನೆ ಮಾಡಬೇಕು.

ಸರ್ಕಾರ ವರ್ತಕರು, ಉದ್ಯೋಗದಾತರು ಹಾಗೂ ಕೈಗಾರಿಕೆಗಳ ಹಿತಾಸಕ್ತಿ ಕಾಯುವ ಬಗ್ಗೆ ಚಿಂತನೆ ಮಾಡಿಲ್ಲ. ಸರ್ಕಾರ ಅದು ಮಾಡಿದೆ ಇದು ಮಾಡಿದೆ ಎಂದು ಹೇಳಿಕೊಳ್ಳುತ್ತಿದ್ದರೂ ಸರ್ಕಾರ ನಮಗೆ ಸಮಾಧಾನಕರವಾಗಿ ನೆರವಾಗಿದೆ ಎಂದು ಯಾರು ಕೂಡ ಹೇಳುತ್ತಿಲ್ಲ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಸರ್ಕಾರ ಮುಂದಿನ ದಿನಗಳಲ್ಲಿ ಸಮಗ್ರ ಚರ್ಚೆ ಮಾಡಬೇಕು. ಈ ಸರ್ಕಾರ ಎಲ್ಲ ರಂಗದಲ್ಲೂ ವಿಫಲವಾಗಿದೆ. ರೈತರಾಗಲಿ, ಕೈಗಾರಿಕೆಯಾಗಲಿ, ಕಾರ್ಮಿಕರಾಗಲಿ, ಅಸಂಘಟಿತ ಕಾರ್ಮಿಕರಿಗೆ ನ್ಯಾಯ ಒದಗಿಸಲು ನಾವೆಲ್ಲ ರಾಜಕಾರಣಿಗಳು ಕೆಲಸ ಮಾಡಬೇಕಿದೆ ಎಂದರು.

ಸರ್ಕಾರ ಇದ್ದಾಗ ಉಪ ಚುನಾವಣೆ ಗೆಲ್ಲುವುದು ಸಹಜ:

ನಮ್ಮ ಸರ್ಕಾರ ಇದ್ದಾಗ ಗೆದ್ದ ಉಪಚುನಾವಣೆಗಳಲ್ಲಿ ಗೆದ್ದ ಪಟ್ಟಿಯನ್ನು ನಾನು ನೀಡುತ್ತೇನೆ. ಆದರೆ ನಂತರ ಏನಾಯ್ತು? ಮುಂದಿನ ಬಾರಿಯೂ ಅದೇ ಆಗಲಿದೆ.

2021 ನಮ್ಮ ಕಾರ್ಯಕರ್ತರ ಪಾಲಿಗೆ ಹೋರಾಟದ ವರ್ಷ. ಪ್ರತಿ ಕ್ಷೇತ್ರದ ಸಮಸ್ಯೆ ಚರ್ಚಿಸಿ ಹೋರಾಟ ಮಾಡುತ್ತೇವೆ.

ಯತ್ನಾಳ್ ಅವರು ಹಿರಿಯ ನಾಯಕರು. ಅವರುಂಟು ಅವರ ಸಿಎಂ ಉಂಟು, ಅವರ ಬಗ್ಗೆ ನಾವು ಪ್ರತಿಕ್ರಿಯೆ ನೀಡಲ್ಲ ಎಂದರು.

ಮುಂದಿನ ಎರಡೂವರೆ ವರ್ಷ ನಾನೇ ಸಿಎಂ: ಬಿಎಸ್ವೈ ವಿಶ್ವಾಸ

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರ ಆಗಾಗ ಸದ್ದು ಮಾಡ್ತಲೇ ಇದೆ. ಅದ್ರಲ್ಲೂ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂದಪಟ್ಟಂತೆ ಪ್ರತಿಕ್ರಿಯೆ ನೀಡಿರೋ ಸಿಎಂ ಬಿ.ಎಸ್.ಯಡಿಯೂರಪ್ಪ ಮುಂದಿನ ಎರಡೂವರೆ ವರ್ಷ ನಾನೇ ಮುಖ್ಯಮಂತ್ರಿಯಾಗಿರ್ತೀನಿ ಅಂತಾ ಸ್ಪಷ್ಟಪಡಿಸಿದ್ದಾರೆ.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಬಿಎಸ್ವೈ, ಕಳೆದ ಒಂದೂವರೆ ವರ್ಷದ‌ ನನ್ನ ಆಡಳಿತದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ನಾನು ಯಾವುದೇ ತಲೆ ಕೆಡೆಸಿಕೊಂಡಿಲ್ಲ. ನಾನಾಯ್ತು, ನನ್ನ ಕೆಲಸ ಆಯ್ತು ಅಂತಾ ರಾಜ್ಯದ ಅಭಿವೃದ್ಧಿ ಬಗ್ಗೆ ಗಮನ ಕೊಟ್ಟಿದ್ದೇನೆ. ಈಗಾಗಲೇ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಈ ಬಗ್ಗೆ ಸ್ಪಷ್ಟ ಪಡಿಸಿದ್ದಾರೆ. ಹೀಗಾಗಿ ಮುಂದಿನ ಎರಡೂವರೆ ವರ್ಷ ನಾನೇ ಮುಖ್ಯಮಂತ್ರಿ ಎಂದರು.

ಎರಡೂವರೆ ವರ್ಷ ನಾನೇ ಸಿಎಂ ಆಗಿ ಮುಂದುವರೆಯುತ್ತೇನೆ. ಹೀಗಾಗಿ ಇದರಲ್ಲಿ ಯಾವುದೇ ಗೊಂದಲ ಇಲ್ಲ. ಶಾಸಕರು, ಸಚಿವರು ಅಥವಾ ಯಾರು ನಾಯಕತ್ವ ಬದಲಾವಣೆ ಬಗ್ಗೆ ಮಾತಾಡ್ತಿಲ್ಲ. ಈ ಬಗ್ಗೆ ಗೊಂದಲ ಇರೋದು ಕೇವಲ ಮಾಧ್ಯಮಗಳಿಗೆ ಮಾತ್ರ ಎಂದರು.