ಮೈಸೂರು ದಸರಾ ಉದ್ಘಾಟಿಸಲಿರೋ ಜಯದೇವ ಆಸ್ಪತ್ರೆ ಮುಖ್ಯಸ್ಥ ಡಾ.ಮಂಜುನಾಥ್

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಈ ಬಾರಿ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಉದ್ಘಾಟಿಸಲಿದ್ದಾರೆ. ಜೂತೆಗೆ ಐವರು ಕೊರೊನಾ ವಾರಿಯರ್ಸ್ ಗಳನ್ನು ದಸರಾ ಉದ್ಘಾಟನೆ ವೇಳೆ ಸನ್ಮಾನಿಸಲಾಗುವುದು ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಮೈಸೂರಿನಲ್ಲಿಂದು ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ದಸರಾ ಉದ್ಘಾಟನೆ ಮತ್ತು ಜಂಬೂ ಸವಾರಿ ವೇಳೆ ಎಷ್ಟು ಜನರು ಪಾಲ್ಗೂಳ್ಳಬೇಕು ಹಾಗೂ  ಕೊರೊನಾ ಹರಡದಂತೆ ಯಾವ ಮುಂಜಾಗ್ರತಾ ಕ್ರಮ ಕೈಗೂಳ್ಳಬೇಕು ಎಂಬ ಬಗ್ಗೆ ಸರ್ಕಾರ ಮಾರ್ಗಸೂಚಿ ಮಾಡಲಾಗಿದೆ ಎಂದರು.

ಮೈಸೂರು ದಸರಾ ಉದ್ಘಾಟನೆಗೆ 200 ಜನರು ಮತ್ತು ಜಂಬೂ ಸವಾರಿ ಮೆರವಣೆಗೆ ವೇಳೆ 300 ಜನರಿಗೆ ಮಾತ್ರ ಸೀಮಿತವಾಗುವುದು. ಮೈಸೂರು ನಗರದ ದೀಪಾಲಂಕಾರ ನೋಡಲು ಜನ ಸಂದಣಿ ಆಗದಂತೆ ನೋಡಿಕೊಳ್ಳಲು ನಗರದ ಯಾವ ಸ್ಥಳದಲ್ಲೂ ಪಾರ್ಕಿಂಗ್ ವ್ಯವಸ್ಥೆ ಮಾಡಿರುವುದಿಲ್ಲ. ಒಟ್ಟಾರೆ ಓಣಂನಂತೆ ದಸರಾದಲ್ಲಿ ಕೊರೊನಾ ಅಟ್ಟಹಾಸ ಮೆರೆಯದಂತೆ ಹಲವು ಮುಂಜಾಗ್ರತಾ ಕ್ರಮ ಕೈಗೂಳ್ಳಲಾಗುವುದು ಎಂದು ಹೇಳಿದರು.

ಬಾಲಿವುಡ್ ನಟಿ ಕಂಗನಾಗೆ ಬಿಗ್ ಶಾಕ್: ಎಫ್‌ಐಆರ್ ದಾಖಲಿಸುವಂತೆ ಕೋರ್ಟ್ ಆದೇಶ

ತುಮಕೂರು: ಬಾಲಿವುಡ್ ನಟಿ ಕಂಗನಾ ರಾಣವತ್ ವಿರುದ್ಧ ಎಫ್ ಐ ಆರ್ ದಾಖಲಿಸುವಂತೆ ಕೋರ್ಟ್ ನಿರ್ದೇಶನ ನೀಡಿದೆ.

ತುಮಕೂರಿನ ಕ್ಯಾತ್ಸಂದ್ರ ಪೊಲೀಸರಿಗೆ ಎಫ್ ಐ ಆರ್ ದಾಖಲಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ. ಕಳೆದ ಸೆಪ್ಟೆಂಬರ್ 25 ರಂದು ಹೈಕೋರ್ಟ್ ವಕೀಲ, ತುಮಕೂರು ನಿವಾಸಿ ರಮೇಶ್ ನಾಯಕ್ ಕಂಗನಾ ರಾಣವತ್ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು.

ಕಂಗನಾ ರಾಣವತ್ ರೈತರನ್ನ ಟೆರರಿಸ್ಟ್ ಎಂದು ಕರೆದಿದ್ದಾರೆ. ರೈತರನ್ನ ನಿಂಧಿಸಿದ್ದಾರೆಂದು ಆರೋಪಿಸಿ ಕೋರ್ಟ್ ಗೆ ದೂರು ನೀಡಿದ್ದರು. ಇದೀಗ ದೂರಿನ ವಿಚಾರಣೆ ನಡೆಸಿರೋ ತುಮಕೂರು ಜೆಎಂಎಫ್‌ಸಿ ನ್ಯಾಯಾಲಯ ನಟಿ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ.

ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಕನ್ನಡದಲ್ಲಿ ವಿಶೇಷ ಕೋರ್ಸ್: ಎಫ್ ಕೆಸಿಸಿಐ ಅಧ್ಯಕ್ಷರಿಂದ ಲೋಕಾರ್ಪಣೆ

ಬೆಂಗಳೂರು: ಬಿಸಿನೆಸ್ ಕಟ್ಟಬೇಕು , ಉದ್ಯಮಿಗಳಾಗಬೇಕು ಎಂದು ಬಯಸುವವರಿಗೆ ಅನುಕೂಲವಾಗುವಂತೆ ಕನ್ನಡ ಭಾಷೆಯಲ್ಲಿ ಇಂಡಿಯನ್ ಮನಿ ಡಾಟ್ ಕಾಂ ನ ಫೈನಾನ್ಸಿಯಲ್ ಫ್ರೀಡಂ ಆಪ್ ನಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ಕೋರ್ಸ್ ಗಳನ್ನು ಎಫ್ ಕೆಸಿಸಿಐ ಅಧ್ಯಕ್ಷ ಪೆರಿಕಲ್ ಎಂ ಸುಂದರ್ ಲೋಕಾರ್ಪಣೆಗೊಳಿಸಿದರು. ಬೆಂಗಳೂರಿನ ಶಾಂತಿನಗರದ ಇಂಡಿಯನ್ ಮನಿ ಡಾಟ್ ಕಾಂ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉದ್ಯಮಿಗಳಾಗಬೇಕು ಎನ್ನುವವರಿಗೆ ಸರಿಯಾದ ಮಾರ್ಗದರ್ಶನದ ಅಗತ್ಯವಿರುತ್ತದೆ. ಈ ನಿಟ್ಟಿನಲ್ಲಿ ಫೈನಾನ್ಸಿಯಲ್ ಫ್ರೀಡಂ ಆಪ್ ನಲ್ಲಿರುವ ‘ಬಿಸಿನೆಸ್ ಕಟ್ಟುವುದು ಹೇಗೆ?’ ಎನ್ನುವ ಕೋರ್ಸ್ ಉಪಯುಕ್ತವಾಗಿದೆ. ಅದರಲ್ಲೂ ಕನ್ನಡದಲ್ಲೇ ಈ ಕೋರ್ಸ್ ಆರಂಭಿಸಿರುವುದು ಮೆಚ್ಚುಗೆಪಡುವಂತಹ ವಿಚಾರ ಎಂದರು.

ಬೆಂಗಳೂರು ಸ್ಟಾರ್ಟ್ ಅಪ್ ಉದ್ದಿಮೆಗಳ ರಾಜಧಾನಿಯಾಗಿದೆ. ನವೋದ್ಯಮಗಳಿಗೆ ಬೇಕಿರುವ ಕೌಶಲಗಳಿಗೆ ತರಬೇತಿ ನೀಡುವ ಸಲುವಾಗಿ ಸರ್ಕಾರದ ಸಹಯೋಗದೊಂದಿಗೆ ಎಫ್ ಕೆಸಿಸಿಐ ಒಂದು ವಿಶೇಷ ತರಬೇತಿ ಕೇಂದ್ರ ಆರಂಭಿಸಲಿದೆ. ಈ ಹೊಸ ಕೇಂದ್ರದ ನಿರ್ಮಾಣದಿಂದ ಹೆಚ್ಚು ವೃತ್ತಿಪರರನ್ನು ಸೃಷ್ಟಿಸಿ ಉದ್ದಿಮೆಗಳನ್ನು ಬೆಳಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇಂಡಿಯನ್ ಮನಿ ಡಾಟ್ ಕಾಂ ನ ಸಿಇಒ ಸಿ ಎಸ್ ಸುಧೀರ್, ಫೈನಾನ್ಸಿಯಲ್ ಫ್ರೀಡಂ ಆಪ್ ನಲ್ಲಿರುವ ಬಿಸಿನೆಸ್ ಕಟ್ಟುವುದು ಹೇಗೆ? ಎನ್ನುವ ಕೋರ್ಸ್ ಸ್ವಂತ ಉದ್ದಿಮೆ ಆರಂಭಿಸಬೇಕು, ಕಟ್ಟಿರುವ ಉದ್ದಿಮೆಯನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಬೇಕು, ಬೆಳೆಸಿರುವ ಉದ್ಯಮವನ್ನು ವಿಸ್ತರಿಸಬೇಕು ಎಂದುಕೊಂಡಿರುವವರಿಗೆ ಅನುಕೂಲವಾಗಲಿದೆ. ಹೆಚ್ಚು ಜನರಿಗೆ ಈ ವಿಚಾರ ತಲುಪಬೇಕು ಎನ್ನುವ ಉದ್ದೇಶದಿಂದ ಕನ್ನಡದಲ್ಲೇ ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಉದ್ದಿಮೆದಾರರನ್ನು ಪ್ರೋತ್ಸಾಹಿಸಲು ಮತ್ತಷ್ಟು ಕೋರ್ಸ್ ಗಳನ್ನು ರೂಪಿಸಲಾಗುತ್ತದೆ ಎಂದು ವಿವರಿಸಿದರು.

ಶನಿ ಮಹರಾಜರು ತುಳಿದರೆ ಪಾತಾಳಕ್ಕೆ ಇಳಿಯುತ್ತೇವೆ, ಕೈ ಹಿಡಿದು ಎತ್ತಿದರೆ ಆಕಾಶಕ್ಕೆ ಏರುತ್ತೇವೆ: ಡಿಕೆಶಿ

ಬೆಂಗಳೂರು: ‘ಶನಿ ಮಹರಾಜರು ತುಳಿದರೆ ಪಾತಾಳಕ್ಕೆ ಹೋಗ್ತೇವೆ, ಕೈ ಹಿಡಿದರೆ ಆಕಾಶದೆತ್ತರಕ್ಕೆ ಏರುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮಾರ್ಮಿಕವಾಗಿ ಹೇಳಿದ್ದಾರೆ.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂಬಂಧ ಬೆಂಗಳೂರಿನ ಮತ್ತೀಕೆರೆಯಲ್ಲಿ ಪೂರ್ವಭಾವಿ ಪ್ರಚಾರ ಸಭೆ ನಡೆಸಿ ಮಾತನಾಡಿದ ಅವರು ಹೇಳಿದ್ದಿಷ್ಟು:

”ಇಂದು ಆರ್.ಆರ್.ನಗರದ ನೊಂದು, ಬೆಂದ ಜನ ಇಲ್ಲಿ ಸೇರಿದ್ದೀರಿ. ನನ್ನದು, ನನ್ನ ಸೋದರಿ ಕುಸುಮಾ ಇಬ್ಬರದ್ದೂ ಮೊದಲನೆ ಸಭೆ. ವಿಘ್ನ ನಿವಾರಕ ವಿನಾಯಕ ನಮಗಿಬ್ಬರಿಗೂ ವಿಜಯ ಕೊಡಲಿ ಅಂತ ಪ್ರಾರ್ಥಿಸುತ್ತೇನೆ.”

“ಪಕ್ಷದ ಕಾರ್ಯಕರ್ತರಿಗೆ ಆರ್.ಆರ್. ನಗರದಲ್ಲಿ ಸಾಕಷ್ಟು ತೊಂದರೆ ಆಗ್ತಿದೆ. ಇಂದಿಗೆ ಅವೆಲ್ಲವೂ ಮುಕ್ತಾಯವಾಗಲಿದೆ. ಇನ್ನು ಮುಂದೆ ಇಲ್ಲಿನ ಸಮಸ್ಯೆಗಳನ್ನು ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ.”

“ನಮ್ಮ ಕಾರ್ಯಕರ್ತರ ಮೇಲೆ ಎಫ್.ಐ.ಆರ್. ಆಗಿರುವ ಮಾಹಿತಿ ಕೊಡಿ. ನಾಳೆ ಸಂಜೆಯೊಳಗೆ ಎಫ್.ಐ.ಆರ್ ಮಾಡಿರುವ ಆಫಿಸರ್ ನ ಸಸ್ಪೆಂಡ್ ಮಾಡಿಸ್ತೇನೆ. ನನಗೆ ಕನಕಪುರ ಕ್ಷೇತ್ರ ಎಷ್ಟು ಮುಖ್ಯವೋ, ಆರ್..ಆರ್. ನಗರವೂ ಅಷ್ಟೇ ಮುಖ್ಯ. ಅಧಿಕಾರಿಗಳೇ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿ. ಇಲ್ಲದೆ ಹೋದರೆ ಮುಂದೆ ನಿಮ್ಮ ಭವಿಷ್ಯಕ್ಕೆ ಮುಳುವಾಗತ್ತೆ. ನಿಮ್ಮನ್ನು ಇಲ್ಲಿಂದ ಎತ್ತಂಗಡಿ ಮಾಡಿಸ್ತೇನೆ.”

“ಇದು ರೆಕಾರ್ಡ್ ಆಗಲಿ ಅಂತ ಈ ಮಾತು ಹೇಳ್ತಿದ್ದೇನೆ. ಕಾರ್ಯಕರ್ತರ ವಿರುದ್ಧ ಹಾಕಿರುವ ಕೇಸ್ ಗಳಲ್ಲಿ ವಾದ ಮಾಡಲು ಲಾಯರ್ ನೇಮಿಸ್ತೇನೆ. ಇನ್ನು ಹತ್ತು ದಿನ ಇಲ್ಲೇ ಕೂತಿರ್ತೇನೆ. ನಂಗೆ ಬೇರೆ ಏನೂ ಕೆಲಸ ಇಲ್ಲ. ಕುಸುಮಾ ಅವರು ಸಮಾಜ ಸೇವೆಗೆ ಅಂತ ನಿಂತಿದ್ದಾರೆ. ಅವರನ್ನು ಗೆಲ್ಲಿಸಿಕೊಡಬೇಕು.”

“ಈ ಎಲೆಕ್ಷನ್ ನಿಂದ ಸಿಎಂ ಯಡಿಯೂರಪ್ಪ ಅವರು ಅಧಿಕಾರದಿಂದ ಕೆಳಗೆ ಇಳಿಯೋದಿಲ್ಲ. ಈ ಚುನಾವಣೆಯಿಂದ ಮೋದಿ ಅವರಿಗೇನೂ ಸಮಸ್ಯೆಯೂ ಇಲ್ಲ. ಆದರೆ ಈ ಚುನಾವಣೆ ಇಲ್ಲಿನ ಜನರು ಹಾಗೂ ಕಾರ್ಯಕರ್ತರು ಅನುಭವಿಸುತ್ತಿರುವ ಕಿರುಕುಳಕ್ಕೆ ಪರಿಹಾರ ನೀಡಬೇಕಿದೆ.”

“ಈ ಹಿಂದೆ ಇಲ್ಲಿ ಮುನಿರತ್ನ ಅವರು ತಾನು ಗೆದ್ದಿದ್ದೇ ಡಿ.ಕೆ. ಶಿವಕುಮಾರ್ ಅವರಿಂದ, ಸುರೇಶಣ್ಣನಿಂದ ಅಂತಿದ್ದರು. ರಾಜೀನಾಮೆ ಕೊಟ್ಟ ಮೇಲೆ ಏನೇನೂ ಹೇಳಿಕೊಂಡು ಬರುತ್ತಿದ್ದಾರೆ? ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರ ಮೇಲಿನ ಅವರ ದೌರ್ಜನ್ಯಕ್ಕೆ ಅಂತ್ಯ ಹಾಡಬೇಕಿದೆ.”

ಸೇವೆಗೆ ಜನರ ಆಶೀರ್ವಾದ ಬೇಕು: ಕುಸುಮಾ

ಕುಸುಮಾ ಅವರು ಈ ಸಭೆಯಲ್ಲಿ ತಮ್ಮನ್ನು ಕುಸುಮಾ ಹನುಮಂತರಾಯಪ್ಪ ಅಂತಲೇ ಪರಿಚಯಿಸಿಕೊಂಡಿದ್ದು, ”ತಾನು ನೊಂದ ಮಹಿಳೆ. ಪ್ರೊಫೆಸರ್ ಆಗಿ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದೆ. ಮಕ್ಕಳು, ಮಹಿಳೆಯರು, ವೃದ್ಧರ ಸಹಾಯ ಮಾಡುತ್ತಿದ್ದೆ. ಇನ್ಮುಂದೆ ಮಹತ್ತರ ಘಟ್ಟ ಶುರುವಾಗ್ತಿದೆ. ಇನ್ನೊಂದು ಹೆಜ್ಜೆ ಮುಂದಿಟ್ಟಿದ್ದೇನೆ. ಆರ್.ಆರ್. ನಗರ ಕ್ಷೇತ್ರದ ಜನರ ಸಂಕಷ್ಟ ನನಗೆ ಗೊತ್ತಿದೆ. ಅವರ ಪರವಾಗಿ ಕೆಲಸ ಮಾಡಲು, ಅವರ ಸೇವೆ ಸಲ್ಲಿಸಲು ನಿಮ್ಮೆಲ್ಲರ ಆಶೀರ್ವಾದ ನನಗೆ ಬೇಕು. ನೀವು ಖಂಡಿತಾ ಆಶೀರ್ವಾದ ಮಾಡುತ್ತೀರಿ ಎಂಬ ನಂಬಿಕೆ, ವಿಶ್ವಾಸ ನನಗಿದೆ” ಎಂದರು.

ಅ. 12ರಿಂದ ಸಂವೇದ ಪಾಠ ಸರಣಿ ಆರಂಭ-ಸುರೇಶ್ ಕುಮಾರ್

ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಸಂವೇದ ಇ-ಕ್ಲಾಸ್ ಪಾಠ ಸರಣಿಯ ಎರಡನೆ ಅವಧಿ ಅ.12ರಿಂದ ಪ್ರಾರಂಭವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಈ ಅವಧಿಯಲ್ಲಿ 5,6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಥಮ ಭಾಷೆ ಕನ್ನಡ, ದ್ವಿತೀಯ ಭಾಷೆ ಇಂಗ್ಲಿಷ್, ತೃತೀಯ ಭಾಷೆ ಹಿಂದಿ, ಕನ್ನಡ ಮಾಧ್ಯಮದಲ್ಲಿ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ ವೀಡಿಯೋ ಪಾಠಗಳು DSERT Jnanadeepa ಮತ್ತು Makkalavani ಯುಟ್ಯೂಬ್ ಚಾನೆಲ್‍ಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಇಷ್ಟರಲ್ಲಿಯೇ ಈ ತರಗತಿಗಳು ದೂರದರ್ಶನದ ಚಂದನ ವಾಹಿನಿಯಲ್ಲಿಯೂ ಮರುಪ್ರಸಾರಗೊಳ್ಳಲಿವೆ.

2020-21ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಚಟುವಟಿಕೆಗಳನ್ನು ಆರಂಭಿಸಬೇಕಾಗಿದೆಯಾದರೂ ಕೋವಿಡ್-19ರ ಪ್ರಸರಣದಿಂದಾಗಿ ಸದ್ಯದ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ದೂರದರ್ಶನ ಚಂದನವಾಹಿನಿಯಿಂದ ಪ್ರತಿ ದಿನ 4 ಘಂಟೆ ಅವಧಿಯಲ್ಲಿ ಪ್ರಥಮ ಹಂತದಲ್ಲಿ ಪ್ರೌಢಶಾಲೆಯ 8 ರಿಂದ 10ನೆಯ ತರಗತಿಯ ಮಕ್ಕಳಿಗೆ ವಿಡಿಯೋ ಪಾಠ ತಯಾರಿಸಿ ಪ್ರಸಾರ ಮಾಡಲಾಗುತ್ತಿದ್ದು, ಸಮಯ ಲಭ್ಯತೆ ಆಧಾರದಲ್ಲಿ ಉಳಿದ ತರಗತಿಗಳ ಪಾಠ ಪ್ರಸಾರವು ಆಗಲಿದೆ ಎಂದು ಅವರು ಹೇಳಿದ್ದಾರೆ.

ಇಲಾಖೆಯ ಎಲ್ಲಾ ಹಂತದ ಶಿಕ್ಷಕರು, ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಯೂಟ್ಯೂಬ್‍ಗಳಲ್ಲಿ ಮಕ್ಕಳು ಪಾಠವೀಕ್ಷಿಸುವಂತೆ ಗಮನ ಹರಿಸಿ ಮೇಲ್ವಿಚಾರಣೆ ಮಾಡಲು ಸೂಚಿಸಿದೆ. ಪೋಷಕರು ಮಕ್ಕಳು ಪಾಠ ವೀಕ್ಷಿಸಲು ಪ್ರೋತ್ಸಾಹಿಸಿ ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಸುರೇಶ್ ಕುಮಾರ್ ಕೋರಿದ್ದಾರೆ.

ಪುತ್ರನ ಸ್ನೇಹಿತನನ್ನು ದಾಳವಾಗಿ ಬಳಸಿಕೊಂಡು ಮತ್ತೊಂದು ಪಕ್ಷಕ್ಕೆ ಕಳುಹಿಸುವ ಜಾಯಮಾನ ನನ್ನದಲ್ಲ: ಎಚ್ಡಿಕೆ

ಬೆಂಗಳೂರು: ವೈಯಕ್ತಿಕ ನೆಲೆಯಲ್ಲಿ ಸ್ನೇಹ ವಿಶ್ವಾಸವೇ ಬೇರೆ, ಆದರೆ, ಉಪ ಚುನಾವಣೆ ಘೋಷಣೆಯಾದ ನಂತರ ಪುತ್ರನ ಸ್ನೇಹಿತನನ್ನು ದಾಳವಾಗಿ ಬಳಸಿಕೊಂಡು ಮತ್ತೊಂದು ಪಕ್ಷಕ್ಕೆ ಕಳುಹಿಸುವ ಜಾಯಮಾನ ನನ್ನದಲ್ಲ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಉಪ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಮತ್ತು ಜೆಡಿ(ಎಸ್) ಒಳಒಪ್ಪಂದ ಮಾಡಿಕೊಂಡಿವೆ ಎಂದು ಆರೋಪಿಸುವ ಸಿದ್ದರಾಮಯ್ಯ ಅವರ ಬಳಿ ಇದಕ್ಕೆ ಯಾವ ಸಾಕ್ಷಿ ಇದೆ ? “ದೋಸ್ತಿ ದಾಳ” ವನ್ನು ರಾಜಕೀಯವಾಗಿ ಬಳಸಿಕೊಂಡು ತಾವು ಬೆಳೆದ ಪಕ್ಷಗಳಿಗೆ ಕುತ್ತು ತರುವ ಚಾಳಿ ಅವರಿಗೆ ಹೊಸತೇನಲ್ಲ.

ನನಗೂ ಪಕ್ಷಾತೀತವಾಗಿ ಹಿರಿಯ, ಕಿರಿಯ ಸ್ನೇಹಿತರಿದ್ದಾರೆ. ಪವಿತ್ರ ಸ್ನೇಹವನ್ನು ನಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿಲ್ಲ. ಆದರೆ, ಸಿದ್ದರಾಮಯ್ಯರವರಿಗೆ ಇದೊಂದು ಅಂಟುಜಾಡ್ಯ ಎಂಬುದನ್ನು ಸಾಬೀತು ಪಡಿಸುತ್ತಲೆ ಬಂದಿದ್ದಾರೆ. ಉಪ ಚುನಾವಣೆ ಘೋಷಣೆಯಾದ ನಂತರ ಪುತ್ರನ ಗೆಳೆಯನನ್ನು ಬಿಜೆಪಿಗೆ ಕಳುಹಿಸಿರುವ ಮರ್ಮವನ್ನು ಕಾಂಗ್ರೆಸ್ಸಿಗರೂ ಬಲ್ಲರು!

ಎನ್ನ ಮನವೆಂಬ ಮರ್ಕಟನು
ತನುವಿಕಾರವೆಂಬ ಅಲ್ಪಸುಖದಾಸೆಗಾಡಿ,
ವೃಥಾ ಭ್ರಮೆಗೊಂಡು, ನಾನಾ ದೆಸೆಗೆ ಲಂಘಿಸಿ
ಅಳಲಿಸಿ ಬಳಲಿಸುತ್ತಿದೆ ನೋಡಾ:
ಕೂಡಲಸಂಗಮೇವರೆಂಬ ಕಲ್ಪವೃಕ್ಷಕ್ಕೆ ಲಂಘಿಸಿ,
ಅಪರಿಮಿತದ ಸುಖವನೈದದು, ನೋಡಾ….ಎಂದು ಎಚ್ಡಿಕೆ ಟ್ವೀಟ್ ಮಾಡಿದ್ದಾರೆ.