Video-ರಸ್ತೆ ಗುಂಡಿಗೆ ಹೈಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ: ರಾಮಲಿಂಗಾರೆಡ್ಡಿ

ಬೆಂಗಳೂರು: ರಾಜಧಾನಿಯ ರಸ್ತೆ ಸ್ಥಿತಿ ಕಂಡು ಹೈಕೋರ್ಟ್ ಚಿಮಾರಿ ಹಾಕುವಂತಾಗಿದೆ. ನಮ್ಮ ಸರ್ಕಾರ ಇದ್ದಾಗ ರಸ್ತೆಗುಂಡಿಗಳು ಇದ್ದವು ಆದರೆ ಈ ರೀತಿ ಹೈಕೋರ್ಟ್ ನಿಂದ ಛಿಮಾರಿ ಹಾಕಿಸಿಕೊಳ್ಳುವ ಸ್ಥಿತಿಗೆ ಹೋಗಿರಲಿಲ್ಲ. ಆಗಿಂದ್ದಾಗೆ ನಾವು ಗುಡಿ ಮುಚ್ಚಿಸುತ್ತಿದ್ದೆವು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡುತ್ತಾ ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳು ಲೆಕ್ಕಕ್ಕೆ ಸಿಗದ ದುಸ್ಥಿತಿಗೆ ತಲುಪಿವೆ. 2008ರಿಂದ 2013ರವರೆಗೆ ಅಧಿಕಾರ ಮಾಡಿದ್ದ ಬಿಜೆಪಿ ನಗರದ ಪ್ರಮುಖ ರಸ್ತೆಗಳಲ್ಲಿ ಗುಂಡಿ ಬೀಳಿಸಿತ್ತು. 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ನಾನು ಬೆಂಗಳೂರು ಉಸ್ತುವಾರಿಯಾದ ನಂತರ ನಾವು ಎಲ್ಲ ರಸ್ತೆ ಗುಂಡಿಗಳನ್ನು ಮುಚ್ಚಿಸಿದ್ದೆವು. ಈಗ ಅವರು ಮತ್ತೆ ಅಧಿಕಾರಕ್ಕೆ ಬಂದ ನಂತರ ರಸ್ತೆಗಳು ಮತ್ತೇ ದುಸ್ಥಿತಿ ತಲುಪಿವೆ. ಅವರಿಗೆ ಆಡಳಿತ ಮಾಡಲು ಬರುವುದಿಲ್ಲ ಎಂದ್ರು.

ಈಗ ರಸ್ತೆಗುಂಡಿಯಿಂದ ಅಪಘಾತ ಹೆಚ್ಚಾಗಿದ್ದು, ಜನ ಸಾಯುತ್ತಿದ್ದಾರೆ, ಗಾಯಗೊಳ್ಳುತ್ತಿದ್ದಾರೆ. ಜನ ರಸ್ತೆಯಲ್ಲಿ ಓಡಾಡಲು ಹೆದರುವಂತಾಗಿದೆ. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ಪಾಲಿಕೆ ಆಯುಕ್ತರು, ಸಚಿವ ಆರ್.ಅಶೋಕ್ ಸೇರಿದಂತೆ ಹಲವರು ಗುಂಡಿ ಮುಚ್ಚಲು ಗಡುವು ಕೊಟ್ಟರೂ ಇದುವರೆಗೂ ಗುಂಡಿಗಳು ಮುಚ್ಚಿಲ್ಲ.

ಬಿಜೆಪಿ ಅಧಿಕಾರಕ್ಕೆ ಬಂದು 2 ವರ್ಷ 5 ತಿಂಗಳಾಗಿವೆ ಈ ಅವಧಿಯಲ್ಲಿ ಬೆಂಗಳೂರಿನ ಅಭಿವೃದ್ಧಿ ಕಡೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ನಮ್ಮ ಸರ್ಕಾರ ಇದ್ದಾಗ ಬೆಂಗಳೂರಿನ ರಸ್ತೆಗಳಿಗೆ ವಿಶೇಷ ಒತ್ತು ನೀಡಿದ್ದೆವು. ಉತ್ತಮ ಗುಣಮಟ್ಟದ ರಸ್ತೆ ನೀಡಬೇಕು ಎಂಬ ಉದ್ದೇಶದಿಂದ ನಾವು ಕಾಂಕ್ರೀಟ್ ರಸ್ತೆ ಮಾಡಲು ಮುಂದಾಗಿದ್ದೆವು. ಆದರೆ ಬಿಜೆಪಿಯವರು ಅದರಲ್ಲಿ ಅಕ್ರಮ ನಡೆದಿದೆ ಎಂದು ಬೊಬ್ಬೆ ಹಾಕಿದರು. ನಂತರ ತನಿಖಾ ಸಮಿತಿ ಯಾವುದೇ ಅಕ್ರಮ ಇಲ್ಲ ಎಂದು ವರದಿ ಕೊಟ್ಟಿದೆ. ಬಿಜೆಪಿ ಕೇವಲ ದೂರುವುದಷ್ಟೇ ಗೊತ್ತು. ಅವರಿಗೆ ಅಭಿವೃದ್ಧಿ ಕೆಲಸ ಮಾಡುವುದು ಗೊತ್ತಿಲ್ಲ.

ಬೆಂಗಳೂರಿನಲ್ಲಿ 7 ಸಚಿವರಿದ್ದಾರೆ, ಅವರ ಕೈಯಲ್ಲಿ ಈ ನಗರದ ನಿರ್ವಹಣೆ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಮುಖ್ಯಮಂತ್ರಿಗಳೇ ಬೆಂಗಳೂರು ಉಸ್ತುವಾರಿಯನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಈ ಜವಾಬ್ದಾರಿ ತಾವೇ ಇಟ್ಟುಕೊಂಡ ಮೇಲೆ ಅವರು ಸಿಟಿ ರೌಂಡ್ ಹಾಕಬೇಕು. ಎಲ್ಲಿ ಏನೇನು ಸಮಸ್ಯೆ ಇದೆ ಎಂದು ಪರಿಶೀಲನೆ ನಡೆಸಬೇಕು. ನಾನು ಬೆಂಗಳೂರು ಉಸ್ತುವಾರಿ ಸಚಿವನಾಗಿದ್ದ ಸಂದರ್ಭದಲ್ಲಿ ವಾರಕ್ಕೆ 3 ದಿನ ಸಿಟಿ ರೌಂಡ್ ಹಾಕುತ್ತಿದ್ದೆ. ಎಲ್ಲೆ ಸಮಸ್ಯೆ ಇದ್ದರೂ ಒಂದು ವಾರದ ಒಳಗಾಗಿ ಸರಿ ಪಡೆಸುವಂತೆ ನೋಡಿಕೊಳ್ಳುತ್ತಿದ್ದೆ.

ಈಗ ಬೆಂಗಳೂರಿನಲ್ಲಿ ಹೇಳುವವರು ಕೇಳುವವರು ಇಲ್ಲದಂತಾಗಿದೆ. ಇತ್ತೀಚೆಗೆ ಅತಿಯಾದ ಮಳೆ ಸುರಿದಾಗ ಸಚಿವರು ತಮ್ಮ ಕ್ಷೇತ್ರ ಬಿಟ್ಟು ಹೊರಬರಲೇ ಇಲ್ಲ. ಅವರು ತಮ್ಮ ಕ್ಷೇತ್ರಕ್ಕೆ ಮಾತ್ರ ಸಚಿವರಾಗಿದ್ದಾರೆ ಎಂದು ಭಾವಿಸಿದಂತೆ ಕಾಣುತ್ತಿದೆ. ಮುಖ್ಯಮಂತ್ರಿಗಳು ಮಳೆ ಹಾನಿ ವೀಕ್ಷಣೆಗೆ ಎಂದು ಹೋಗಿ 2 ರಸ್ತೆ ನೋಡಿ, ಮಡಿವಾಳ ಕೆರೆ ನೋಡಿ ಎರಡೂವರೆ ಗಂಟೆಗಳಲ್ಲಿ ತಮ್ಮ ಪರಿಶೀಲನೆ ಮುಗಿಸಿ ಮನೆಗೆ ಹೋಗುತ್ತಾರೆ. ಈ ರೀತಿ ಬೇಜವಾಬ್ದಾರಿಯಾಗಿದ್ದರೆ ಬೆಂಗಳೂರಿನ ರಸ್ತೆಗಳು ಗುಂಡಿ ಬೀಳದೇ ಇರುತ್ತದಾ? ಜಿಲ್ಲಾ ಉಸ್ತುವಾರಿಗಳು ಆದೇಶ ನೀಡಿದರೆ 48 ಗಂಟೆಗಳಲ್ಲಿ ರಸ್ತೆ ಮುಚ್ಚಿಸಬಹುದು. ಇವರು ಬೆಂಗಳೂರು ನಗರ ನಿರ್ವಹಣೆ ಮಾಡಲು ಆಗದಿದ್ದರೆ ಅಧಿಕಾರ ಬಿಟ್ಟು ಹೋಗಲಿ. ನಮಗೆ ಅಧಿಕಾರ ನೀಡಲಿ. ಮುಖ್ಯಮಂತ್ರಿಗಳು ಉಸ್ತುವಾರಿ ಹೊತ್ತಿದ್ದರೂ 1 ವಾರದಲ್ಲಿ ರಸ್ತೆ ಗುಂಡಿ ಮುಚ್ಚಲಿಲ್ಲ ಎಂದರೆ ಇವರು ಯಾವ ಪುರುಷಾರ್ಥಕ್ಕೆ ಸರ್ಕಾರ ನಡೆಸುತ್ತಿದ್ದಾರೆ?

ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಬೆಂಗಳೂರು ಅಭಿವೃದ್ಧಿಗೆ 6 ಸಾವಿರ ಹಾಗೂ ಕುಮಾರಸ್ವಾಮಿ ಅವರು 1 ಸಾವಿರ ಕೋಟಿ ಕೊಟ್ಟಿದ್ದರು.ಒಟ್ಟು 7 ಸಾವಿರ ಕೋಟಿ ನೀಡಲಾಗಿತ್ತು. ಇದು ಹೊರತಾಗಿ ಕಳೆದ ಎರಡೂವರೆ ವರ್ಷದಲ್ಲಿ ಬಿಜೆಪಿ ಸರ್ಕಾರದಿಂದ ಯಾವುದೇ ಹಣ ಬಿಡುಗಡೆಯಾಗಿಲ್ಲ. 2019-20 ಸಾಲಿನಲ್ಲಿ ಬಿಬಿಎಂಪಿಯ 198 ವಾರ್ಡ ಗಳಿಗೆ ಒಂದು ರೂಪಾಯಿ ಅನುದಾನ ಕೊಟ್ಟಿಲ್ಲ. 2020-21ರಲ್ಲಿ ಬಿಬಿಎಂಪಿಯಿಂದ ಪ್ರತಿ ವಾರ್ಡಿಗೆ 60 ಲಕ್ಷ ಘೋಷಿಸಿದ್ದು, ಇದುವರೆಗೂ ಹಣ ಬಿಡುಗಡೆ ಮಾಡಿಲ್ಲ. ಅನುದಾನ ನೀಡದೇ ರಸ್ತೆ ಗುಂಡಿ ಮುಚ್ಚಿ ಎಂದರೆ ಹೇಗೆ ಮುಚ್ಚಲು ಸಾಧ್ಯ?

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬೆಂಗಳೂರು ನಗರ ಅಭಿವೃದ್ಧಿಗೆ ಎಷ್ಟು ಅನುದಾನ ನೀಡಿದ್ದಾರೆ ಎಂದು ಮಾಹಿತಿ ನೀಡಲಿ. ಬೆಂಗಳೂರು ನಗರ ರಸ್ತೆಗುಂಡಿ ಮುಕ್ತ ನಗರವಾಗಬೇಕು ಎಂಬುದು ನಮ್ಮ ಆಗ್ರಹ. ಬೆಂಗಳೂರು ರಸ್ತೆ ಗುಂಡಿ ಮುಚ್ಚಿ ತಾತಾ ಎಂದು ಪುಟ್ಟ ಬಾಲಕಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಆದರೂ ಈ ಬಗ್ಗೆ ಸರ್ಕಾರ ಗಮನ ಹರಿಸಿಲ್ಲ.

ಗುತ್ತಿಗೆದಾರರ ವೈಫಲ್ಯದಿಂದ ಈ ಪರಿಸ್ಥಿತಿ ಬಂದಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನಮ್ಮ ಸರ್ಕಾರ ಇದ್ದಾಗ ಇದ್ದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಈಗಲೂ ಇದ್ದಾರೆ. ಆಡಳಿತ ನಡೆಸುವರರು ಕೆಲಸ ಹೇಗೆ ಮಾಡಿಸಿಕೊಳ್ಳುತ್ತಾರೆ ಎಂಬುದು ಮುಖ್ಯ. ಬಿಬಿಎಂಪಿ ಗ್ರ್ಯಾಂಟ್ಸ್ ನಲ್ಲಿ ಗುತ್ತಿಗೆದಾರರು ಕೆಲಸ ಮಾಡಿದರೆ ಮೂರು ವರ್ಷಗಳ ನಂತರ ಬಿಲ್ ಪಾಸ್ ಮಾಡುತ್ತಿದ್ದಾರೆ. ನಮ್ಮ ಸರ್ಕಾರದಲ್ಲಿ ಸೀನಿಯಾರಿಟಿ ಮೇಲೆ ಬೇಗನೆ ಬಿಲ್ ಕ್ಲಿಯರ್ ಆಗುತ್ತಿತ್ತು. ದೇಶದ ಎಲ್ಲ ರಾಜ್ಯಗಳಿಂದ ಐಎಎಸ್ ಅಧಿಕಾರಿಗಳು ಇರುತ್ತಾರೆ. ಅವರಿಂದ ಕೆಲಸ ಮಾಡಬೇಕಾಗಿರುವುದು ಸರ್ಕಾರದ್ದಾಗಿದೆ. ಬೆಂಗಳೂರಿನ 7 ಜನ ಮಂತ್ರಿಗಳಾಗಿದ್ದು ಅವರು ಏನು ಮಾಡುತ್ತಿದ್ದಾರೆ?’ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಬಿಬಿಎಂಪಿ ಮೂಲಕ ಮಂಗಳಮುಖಿಯರಿಗೆ ಪ್ರತಿ ವರ್ಷ 2 ಕೋಟಿ ಅನುದಾನ ಮೀಸಲಿಡಲಾಗಿತ್ತು. ಲಾಕ್ ಡೌನ್ ಸಮಯದಲ್ಲಿ ಅವರಿಗೆ ಯಾವುದೇ ರೀತಿಯ ಪರಿಹಾರ ನೀಡಲಾಗಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಿಬಿಎಂಪಿಯಲ್ಲಿ ಮಂಗಳಮುಖಿಯಾರಿಗೆ ನೀಡಲಾಗುತ್ತಿದ್ದ ಅನುದಾನ ನಿಂತಿದೆ. ಜತೆಗೆ ಸಮಾಜ ಕಲ್ಯಾಣ ಇಲಾಖೆ ಮೂಲಕ ನೀಡಲಾಗುತ್ತಿದ್ದ ಟೈಲರಿಂಗ್ ಯಂತ್ರ ನೀಡುವುದು, ಸೈಕಲ್ ನೀಡುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಸರ್ಕಾರ ಸಂಪೂರ್ಣವಾಗಿ ನಿಲ್ಲಿಸಿದೆ’ ಎಂದರು.

ಬೆಂಗಳೂರಿನಲ್ಲಿ ಅತಿಯಾದ ಮಳೆಯಿಂದ 36 ಮನೆಗಳಿಗೆ ನೀರು ನುಗ್ಗಿದಾಗ ತಕ್ಷಣವೇ 10 ಸಾವಿರದಂತೆ ಪರಿಹಾರ ನೀಡಿ ಎಂದು ಭರವಸೆ ನೀಡಿದ್ದರು. ಆದರೂ ಇದುವರೆಗೂ ನಯಾಪೈಸೆ ಬಿಡುಗಡೆಯಾಗಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಸರ್ಕಾರ ಕೇವಲ ಪರಿಹಾರ ಘೋಷಣೆ ಮಾಡುತ್ತದೆಯೇ ಹೊರತು, ಅದನ್ನು ನೀಡುವುದಿಲ್ಲ. ಅವರ ಘೋಷಣೆ ಕನ್ನಡಿಯೊಳಗಿನ ಗಂಟಾಗಿದೆ. ಅದು ಕೇವಲ ಕಾಣಿಸುತ್ತದೆ ನಮ್ಮ ಕೈಗೆ ಸಿಗುವುದಿಲ್ಲ ಅಷ್ಟೇ. ಕೋವಿಡ್ ಸಮಯದಲ್ಲಿ ಅಸಂಘಟಿತ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಚಾಲಕರಿಗೆ ಪರಿಹಾರ ನೀಡಲಾಗುವುದು ಎಂದರು. ಹೆಚ್ಚೆಂದರೆ ಕೇವಲ 10ಪಷ್ಟು ಜನರಿಗೆ ಮಾತ್ರ ಹಣ ಸಿಕ್ಕಿದೆ. ಉಳಿದ ಶೇ.90ರಷ್ಟು ಮಂದಿಗೆ ಸಿಕ್ಕಿಲ್ಲ. ಬಿಜೆಪಿಯವರು ಘೋಷಣೆ ಮಾಡುವುದರಲ್ಲಿ ನಿಪುಣರು. ಆದರೆ ಯಾವುದೂ ಕಾರ್ಯರೂಪಕ್ಕೆ ಬರುವುದಿಲ್ಲ’ ಎಂದರು.

ಬಿಟ್ ಕಾಯಿನ್ ಅಕ್ರಮದ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಟ್ವಿಟ್ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಿಟ್ ಕಾಯಿನ್ ದಂಧೆ ಬಗ್ಗೆ ಮಾಧ್ಯಮಗಳಲ್ಲಿ ವರದಿ ನೋಡಿದ್ದೇನೆ. ರಾಜ್ಯದ ಇಬ್ಬರು ಪ್ರಭಾವಿ ನಾಯಕರ ಭಾಗಿ ಬಗ್ಗೆ ವರದಿ ನೋಡಿದ್ದೆ. ಸುಮಾರು 10 ಸಾವಿರ ಕೋಟಿ ವಹಿವಾಟಿನ ಅನುಮಾನ ಇದೆ. ಇದು ಪ್ರಧಾನಿ ಕಾರ್ಯಾಲಯಕ್ಕೆ ಹೋಗಿದ್ದು, ಅಲ್ಲಿಂದ ವರದಿ ಕೇಳಲಾಗಿದೆ. ಈ ಬಿಟ್ ಕಾಯಿನ್ ಪ್ರಕರಣ ಸರ್ಕಾರಕ್ಕೆ ಕಂಟಕವಾಗಬಹುದು ಎಂದು ಭಾವಿಸುತ್ತೇನೆ. ಸಿದ್ದರಾಮಯ್ಯ ಅವರು ಈ ಬಗ್ಗೆ ಟ್ವಿಟ್ ಮಾಡಿದ್ದಾರೆ. ಈ ಪ್ರಕರಣದ ತನಿಖೆ ಸತ್ಯಾಂಶ ಹೊರಬಂದರೆ, ಅನೇಕ ನಾಯಕರ ಕುರ್ಚಿ ಅಲುಗಾಡುತ್ತದೆ. ಶೀಕ್ರಿ ಅವರನ್ನು ಬಂಧಿಸಲು ಸರ್ಕಾರ ಹಿಂದುಮುಂದೆ ನೋಡಿದ್ದು ಯಾಕೆ? ಈ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸಲಾಗುತ್ತಿದೆ. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡೆಸಬೇಕು. ಉಳಿದ ಯಾವುದೇ ತನಿಖಾ ಸಂಸ್ಥೆ ಮೇಲೆ ನಂಬಿಕೆ ಇಲ್ಲವಾಗಿದೆ’ ಎಂದರು.

ರಾಜ್ಯ ಸರ್ಕಾರ ಕನ್ನಡಕ್ಕಾಗಿ ನಾವು ಎಂದು ಕಾರ್ಯಕ್ರಮ ನಡೆಸುತ್ತಿದೆ. ಆದರೆ ಪ್ರವಾಸೋದ್ಯಮ ಸಚಿವಾಲಯ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆಯಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ‘ಈ ಕಾರ್ಯಕ್ರಮ ಒಳ್ಳೆಯದೇ. ಆದರೆ ಕರ್ನಾಟಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು. ಎಲ್ಲರೂ ಬರೆಯಲು, ಓದಬೇಕು’ ಎಂದರು.

ಬೊಮ್ಮಾಯಿ ಅವರು ಸಿಎಂ ಆಗಿ 100 ದಿನ ಪೂರೈಸುತ್ತಿದ್ದು, ಸಂಭ್ರಮಾಚರಣೆಗೆ ಮುಂದಾಗಿದ್ದಾರೆ ಎಂಬ ಬಗ್ಗೆ ಕೇಳಿದಾಗ, ‘ಬೊಮ್ಮಾಯಿ ಅವರು ಏನು ಮಾಡಿದ್ದಾರೆ ಅಂತಾ 100 ದಿನದ ಸಂಭ್ರಮ ಮಾಡುತ್ತಿದ್ದಾರೆ. ಅವರ ಸಾಧನೆ ಏನು ಎಂದು ಮಾಧ್ಯಮಗಳು ದಿನನಿತ್ಯ ತೋರಿಸುತ್ತಿವೆ’ ಎಂದರು.

ಉಪಚುನಾವಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಾಂಗ್ರೆಸ್ ಎರಡೂ ಕ್ಷೇತ್ರದಲ್ಲಿ ಉತ್ತಮ ಅಭ್ಯರ್ಥಿ ಕಣಕ್ಕಿಳಿಸಿದ್ದು, ಪಕ್ಷ ಗೆಲ್ಲುವ ವಿಶ್ವಾಸವಿದೆ. ಚುನಾವಣೆಯಲ್ಲಿ ಬೆಲೆ ಏರಿಕೆ ಬಹುತೇಕ ಚರ್ಚೆಯಾಗಿದ್ದು, ಜನ ಸರ್ಕಾರದ ವಿರುದ್ಧ ಬೆಲೆ ಏರಿಕೆ ವಿಚಾರವಾಗಿ ಬೇಸತ್ತಿದ್ದಾರೆ. ಬೆಲೆ ಏರಿಕೆ ವಿರುದ್ಧ ಜನ ಆಕ್ರೋಶ ಹೊರಹಾಕುತ್ತಿದ್ದರು’ ಎಂದರು.

Video-ಬಿಟ್ ಕಾಯಿನ್ ಹಗರಣ:ಡಿ.ಕೆ. ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು:ಬಿಟ್ ಕಾಯಿನ್ ಹಗರಣ ದೊಡ್ಡ ಮಟ್ಟದಲ್ಲಿ ನಡೆದಿದ್ದು, ದೊಡ್ಡ ದೊಡ್ಡ ಹೆಸರುಗಳು ಕೇಳಿ ಬರುತ್ತಿವೆ. ಯಾರ್ಯಾರದ್ದೋ ಖಾತೆಗೆ ಹಣ ಬಂದಿದೆ ಎಂದು ಕೇಳಿಬರುತ್ತಿದ್ದು, ನಾನು ಮಾಹಿತಿ ಕಲೆಹಾಕಲು ಪ್ರಯತ್ನಿಸುತ್ತಿದ್ದೇನೆ. ಪೊಲೀಸ್ ಅಧಿಕಾರಿಗಳು, ರಾಜಕೀಯ ನಾಯಕರು, ಉದ್ಯಮಿಗಳ ಹೆಸರು ಕೇಳಿ ಬರುತ್ತಿರುವುದು ಆಘಾತ ತಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿಂದು ಮಾತನಾಡುತ್ತಾ, ಈ ಪ್ರಕರಣವನ್ನು ಖಂಡಿತ ಮುಚ್ಚಿಹಾಕುತ್ತಾರೆ. ಅದೇ ಅವರ ಕೆಲಸ. ಬೇರೆ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು, ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ ಎಂದ್ರು.

ನನ್ನ ಮನೆಗೆ ಐಟಿಯವರು ಬಂದಿಲ್ಲ:

ಚುನಾವಣೆ ಬೆನ್ನಲ್ಲೇ ನಿಮ್ಮ ಮನೆ ಮೇಲೂ ಐಟಿ ದಾಳಿ ನಡೆದಿದೆ ಎಂಬ ಗಾಳಿಸುದ್ದಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನನ್ನ ಮನೆಗೆ ಯಾವ ಐಟಿ ಅಧಿಕಾರಿಗಳು ಬಂದಿಲ್ಲ. ನನ್ನ ಸ್ನೇಹಿತರ ಧಾರವಾಡದ ಮನೆಗೆ ಹೋಗಿದ್ದಾರೆ. ಅವರು ನನ್ನ ಆಪ್ತರು ಎಂಬ ಬಗ್ಗೆ ಯಾವುದೇ ಅನುಮಾನ ಬೇಡ. ಮೊನ್ನೆ ಬೆಂಗಳೂರಿನಲ್ಲಿ ಕೆಲವರ ಮನೆಗೆ ಹೋಗಿದ್ದಾರೆ. ಯಾರ ಮನೆಯಲ್ಲಿ ಎಷ್ಟು ಕೋಟಿ ರುಪಾಯಿ ಸಿಕ್ಕಿದೆ ಎಂದು ಅಧಿಕಾರಿಗಳು ಇನ್ನೂ ಮಾಹಿತಿ ನೀಡಿಲ್ಲ. ಇವತ್ತು ನನ್ನ ಸ್ನೇಹಿತರ ಮನೆಗೆ ಹೋಗಿದ್ದಾರೆ. ಏನು ಸಿಕ್ಕಿತು ಎಂದು ನನ್ನ ಸ್ನೇಹಿತರೇ ತಿಳಿಸುತ್ತಾರೆ.

ಚುನಾವಣೆ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಅವರ ಸ್ನೇಹಿತರ ಮನೆ ಮೇಲೆ ಐಟಿ ದಾಳಿ ಯಾಕೆ ಎಂಬ ಪ್ರಶ್ನೆಗೆ, ‘ದಾಳಿ ಮಾಡಲಿ, ತೊಂದರೆ ಇಲ್ಲ. ಕಾನೂನು ಪ್ರಕಾರ ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಲಿ. ಆದರೆ ಕಾನೂನು ಎಲ್ಲರಿಗೂ ಒಂದೇ ಆಗಿರಲಿ’ ಎಂದು ಉತ್ತರಿಸಿದರು.

ದಶದಿಕ್ಕುಗಳಲ್ಲೂ ಮಾರ್ದನಿಸಿದ ಕನ್ನಡ ಗೀತ ಗಾಯನದ ಉದ್ಘೋಷ

ಬೆಂಗಳೂರು:ಇಂದು ಕರ್ನಾಟಕದ ರಾಜಧಾನಿ ಬೆಂಗಳೂರಿನ ಆಡಳಿತ ಶಕ್ತಿಕೇಂದ್ರ ವಿಧಾನಸೌಧದ ಮುಂಭಾಗ ಹಿಂದೆಂದೂ ಕಂಡು ಕೇಳರಿಯದ ಇತಿಹಾಸಕ್ಕೆ ಸಾಕ್ಷಿಯಾಯಿತು.

ವಿಧಾನಸೌಧದ ಎಲ್ಲ ಮೆಟ್ಟಿಲುಗಳ ಮೇಲೆ ಬಣ್ಣಬಣ್ಣದ ಉಡುಗೆ-ತೊಡುಗೆ ತೊಟ್ಟ ಪುರುಷರು ಮಹಿಳೆಯರು ಅಧಿಕಾರಿಗಳು ಸಿಬ್ಬಂದಿ ವರ್ಗದವರು, ಆರಕ್ಷಕ ಅಧಿಕಾರಿಗಳು ಆರಕ್ಷಕ ಸಿಬ್ಬಂದಿ ಹೀಗೆ ಯಾವ ಭೇದ ಭಾವಗಳಿಲ್ಲದೆ, ಶಿಷ್ಟಾಚಾರಗಳ ಹಂಗಿಲ್ಲದೆ ಒಟ್ಟಿಗೆ ನಿಂತು ಕನ್ನಡದ ಗೀತೆಗಳನ್ನು ಹಾಡುವ ಮೂಲಕ *ಕನ್ನಡಕ್ಕಾಗಿ ನಾವು* ಅಭಿಯಾನ ಒಂದು ಚರಿತ್ರಾರ್ಹ ಘಟನೆಯಾಗಿ ದಾಖಲಾಯಿತು.

ಬೆಳಿಗ್ಗೆ ಸರಿಯಾಗಿ ಹನ್ನೊಂದು ಗಂಟೆಗೆ ವಿಧಾನ ಸಭೆಯ ಸಭಾಧ್ಯಕ್ಷ  ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶ್ರೀ ವಿ ಸುನಿಲ್ ಕುಮಾರ್ ಅವರು ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಿರ್ಮಿಸಲಾಗಿತ್ತು ಬೃಹತ್ ಪರದೆಯ ಮುಂದೆ ನಿಂತು ಕನ್ನಡ ಗೀತ ಗಾಯನದ ಮಹತ್ತರ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅವರ ಜೊತೆಯಲ್ಲಿ ಇದೇ ಮೊದಲ ಬಾರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಗಳನ್ನು ಒಳಗೊಂಡಂತೆ ಎಲ್ಲಾ ಹಿರಿಯ ಭಾರತೀಯ ಆಡಳಿತ ಸೇವೆಯ ಹಾಗೂ ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಗಳು. ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿ ವರ್ಗದವರು ಗೀತಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಪೂರ್ವ ಕಾರ್ಯಕ್ರಮವನ್ನಾಗಿ ಮಾಡಲು ಸಹಕರಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು
ಹುಬ್ಬಳ್ಳಿ ಆದರ್ಶ ನಗರದ ಡಾ. ಡಿ.ಎಸ್.ಕರ್ಕಿ ಕನ್ನಡ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ,ಜಿಲ್ಲಾಡಳಿತ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ ವತಿಯಿಂದ ಆಯೋಜಿಸಲಾಗಿದ್ದ ಮಾತಾಡ್ ಮಾತಾಡ್ ಕನ್ನಡ, ಲಕ್ಷ ಕಂಠಗಳಿಂದ ಕನ್ನಡದ ಶ್ರೇಷ್ಠತೆ ಸಾರುವ ಗೀತ ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಈ ಅಭಿಯಾನಕ್ಕೆ ಮೆರಗು ನೀಡಿದರು.

ಇದೇ ರೀತಿ ಇಡೀ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರ ತಾಲೂಕು ಕೇಂದ್ರಗಳಲ್ಲಿ ಹಾಗೂ ಎಲ್ಲ ಸರ್ಕಾರಿ ಕಚೇರಿಗಳ ಆವರಣಗಳಲ್ಲಿ ಕನ್ನಡ ಗೀತಗಾಯನ ಕಾರ್ಯಕ್ರಮ ಭಾರಿ ಉತ್ಸಾಹ ,ಸಡಗರ ಸಂಭ್ರಮದಿಂದ ನಡೆಯಿತು.

ಒಂದು ಅಂದಾಜಿನ ಪ್ರಕಾರ ಈ ಗೀತಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಸಂಖ್ಯೆ ಸುಮಾರು ೧೮ ಲಕ್ಷ ಎಂದು ವರದಿಗಳು ತಿಳಿಸಿವೆ.

ಬೆಂಗಳೂರಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆವರಣದಲ್ಲಿ ಹಾಗೆಯೇ ರವೀಂದ್ರ ಕಲಾಕ್ಷೇತ್ರದ ಮುಂಭಾಗದಲ್ಲಿ ಈ ಗೀತಗಾಯನ ಅಭೂತಪೂರ್ವ ಜನಸ್ಪಂದನ ಯೊಂದಿಗೆ ಆಯೋಜನೆಗೊಂಡಿತ್ತು.

ನೂರಾರು ಗಾಯಕರು ಕಲಾವಿದರು ಸಾಹಿತಿಗಳು ಜನಸಾಮಾನ್ಯರು ಇದರಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ವಿಶ್ವವಿಖ್ಯಾತ ಗೋಲ್ ಗುಂಬಜ್ ಮುಂಭಾಗದಲ್ಲಿ 50 ಕಲಾತಂಡಗಳು 250 ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗಿಯಾದರು.

ಮಂಡ್ಯದ ಸರ್ ಎಂ ವಿ ಕ್ರೀಡಾಂಗಣದಲ್ಲಿ ಮೂರು ಸಾವಿರಕ್ಕೂ ಅಧಿಕ ಮಂದಿ ಈ ಗೀತಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಉಡುಪಿಯ ಶ್ರೀಕೃಷ್ಣ ದೇಗುಲದ ಮುಂಭಾಗ ಮತ್ತು ಹಂಪಿಯ ಐತಿಹಾಸಿಕ ಸ್ಮಾರಕಗಳ ಮುಂದೆ ಅಭೂತಪೂರ್ವ ಕನ್ನಡ ಗೀತೆಗಳ ಮಾರ್ದನಿಸಿದವು.

ಬೆಂಗಳೂರು ವಿಭಾಗದ ೧೨೫ ಸ್ಥಳಗಳಲ್ಲಿ ೧೬೧೨೩೨ ಮಂದಿ ಕನ್ನಡ ಗೀತೆಗಳಿಗೆ ತಮ್ಮ ದನಿಗೂಡಿಸಿದರು.

ಮೈಸೂರು ವಿಭಾಗದಲ್ಲಿ
೯೬ ಸ್ಥಳಗಳಲ್ಲಿ ೫೪೧೩೬೫ ಜನ ಈ ಗೀತ ಗಾಯನದಲ್ಲಿ ಪಾಲ್ಗೊಂಡರು.

ಬೆಳಗಾವಿ ವಿಭಾಗದ ೧೦೫ ಸ್ಥಳಗಳಲ್ಲಿ ೧೦೭೪೪೧೮ ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಲಬುರ್ಗಿ ವಿಭಾಗದ ೬೦ ಸ್ಥಳಗಳಲ್ಲಿ ೭೭೧೨೫ ಜನ ಈ ಗೀತ ಗಾಯನ ದ ಮಾಧುರ್ಯಕ್ಕೆ ಜೊತೆಯಾದರು.

ದೆಹಲಿ ಮುಂಬಯಿ ಕಾಸರಗೋಡು ಮತ್ತು ಪುಣೆ ಹೀಗೆ ಹೊರರಾಜ್ಯಗಳಿಂದ ೩೧ ಸ್ಥಳಗಳಲ್ಲಿ ೩೫೦ ಮಂದಿ ಈ ಗೀತ ಗಾಯನದ ಸಂಭ್ರಮಕ್ಕೆ ಜೊತೆಯಾದರು.

ಒಟ್ಟಾರೆ ಇದು ದಾಖಲೆಯ ಮೇಲೆ ದಾಖಲೆ ಬರೆದ ಕಾರ್ಯಕ್ರಮವಾಗಿ ಕನ್ನಡ ಸಂಸ್ಕೃತಿಯ ಅಧ್ಯಾಯದಲ್ಲಿ ಅಚ್ಚಳಿಯದೆ ಉಳಿಯಿತು.

Video-ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ರಮೇಶ ಬೂಸನೂರು ಗೆಲ್ಲಬೇಕೆನ್ನುವುದು ಜನರ ಅಪೇಕ್ಷೆ; ಶಶಿಕಲಾ ಜೊಲ್ಲೆ

ವಿಜಯಪುರ : ರೈತರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಿಸಾನ್ ಸಮ್ಮಾನ್, ಫಸಲ್ ಬಿಮಾ ಯೋಜನೆ ಹಾಗೂ ರೈತರ ಮಕ್ಕಳಿಗೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ವಿದ್ಯಾನಿಧಿ ಯೋಜನೆಗಳು ಸಿಂಧಗಿ ವಿಧಾನಸಭಾ ಕ್ಷೇತ್ರದಲ್ಲಿ ಶೇ 100 ರಷ್ಟು ಫಲಾನುಭವಿಗಳಿಗೆ ತಲುಪಿವೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆಯವರು ಹೇಳಿದ್ದಾರೆ.

ಮಂಗಳವಾರ ಬೆಳಿಗ್ಗೆ ವಿಜಯಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದರಿಂದ ಬಿಜೆಪಿ ಅಭ್ಯರ್ಥಿ ರಮೇಶ ಬೂಸನೂರು ಅವರು ಗೆಲ್ಲಬೇಕೆನ್ನುವುದು ಸಿಂಧಗಿ ಕ್ಷೇತ್ರದ ಜನರ ಅಪೇಕ್ಷೆಯಾಗಿದೆ ಎಂದು ಹೇಳಿದರು.

ರಮೇಶ ಬೂಸನೂರು ಅವರು ಶಾಸಕರಾಗಿದ್ದಾಗ ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ ಸಮುದಾಯ ಭವನ, ಶಾದಿಮಹಲ್, ಅಂಬೇಡ್ಕರ್ ಭವನ, ದೇವಸ್ಥಾನಗಳಿಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಅವರು ಅಧಿಕಾರದಲ್ಲಿ ಇಲ್ಲದಿದ್ದರೂ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ನೆರವು ನೀಡುವ ಕೆಲಸ ಮಾಡಿದ್ದಾರೆ. ಈಗ ಅವರು ಮತ್ತೆ ಚುನಾವಣೆಯಲ್ಲಿ ಗೆದ್ದುಬಂದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಇನ್ನಷ್ಟು ಯೋಜನೆಗಳನ್ನು ತಂದು ಕ್ಷೇತ್ರದ ಅಭಿವೃದ್ಧಿ ಮಾಡಲು ಅನುಕೂಲವಾಗುತ್ತದೆ. ಈ ಚುನಾವಣೆಯಲ್ಲಿ ರಮೇಶ ಬೂಸನೂರು ಅವರು ಕನಿಷ್ಟ 25000 ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.

ಬೃಹತ್ ಮಹಿಳಾ ಸಮಾವೇಶ:
ಸಿಂಧಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕನ್ನೊಳ್ಳಿಯಲ್ಲಿ ಇಂದು ಸಂಜೆ ಬೃಹತ್ ಮಹಿಳಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಭಾಗದಲ್ಲಿ ಮಹಿಳೆಯರು ಹೊರಗೆ ಬರಲು ಹಿಂಜರಿಯುತ್ತಾರೆ. ಈಗ ನಾವು ಬಿಜೆಪಿ.ಮಹಿಳಾ ಮೋರ್ಚಾ ವತಿಯಿಂದ ಮಹಿಳಾ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರಿಂದ ಅನೇಕ ಮಹಿಳೆಯರು ಹೊರಗೆ ಬಂದು ತಮ್ಮ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಇದುವರೆಗೂ ಮಹಿಳೆಯರು ಮನೆಯವರು ಹೇಳಿದ ಪಕ್ಷಕ್ಕೆ ಮತ ಹಾಕಿ ಸುಮ್ಮನಾಗುತ್ತಿದ್ದರು. ಅವರ ಸಮಸ್ಯೆ ಏನು ಎಂದು ಹೇಳಿಕೊಳ್ಳುತ್ತಿರಲಿಲ್ಲ. ಈಗ ಮಹಿಳೆಯರು ತಮ್ಮ ಸ್ವಂತ ಕಚ್ಚೆಯಿಂದ ಮತದಾನ ಮಾಡಿ, ತಮ್ಮ ಸಮಸ್ಯೆ ಹೇಳಿಕೊಳ್ಳುವಂತೆ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.

ಸಿಂಧಗಿ.ಕ್ಷೇತ್ರದಲ್ಲಿ ಸಚಿವರಾದ ಸೋಮಣ್ಣ, ಗೋವಿಂದ ಕಾರಜೋಳ, ಬೈರತಿ ಬಸವರಾಜ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ನಾನು ಎಲ್ಲರೂ ಒಗ್ಗಟ್ಟಿನಿಂದ ಪ್ರಚಾರ ಮಾಡುತ್ತಿದ್ದು, ರಮೇಶ ಬೂಸನೂರು ಅವರ ಗೆಲುವು ಖಚಿತ ಎಂದು ಅವರು ಹೇಳಿದರು.

ಇದೇ ವೇಳೆ ಸಿಂಧಗಿ.ಕ್ಷೇತ್ರದಲ್ಲಿ ಜಲ ಜೀವನ್ ಮಷಿನ್ ಯೋಜನೆ ಅಡಿಯಲ್ಲಿ ಜಾರಿಯಾಗುತ್ತಿರುವ ಕಾಮಗಾರಿ ತೀವ್ರಗೊಳಿಸುವುದು, ಹಾಗೂ ಮುದ್ದರಬಿಹಾಳದಲ್ಲಿ ಈ ಯೋಜನೆಯ ಕಾಮಗಾರಿ ನಡೆಯುವ ಸದರ್ಭದಲ್ಲಿ ಮೃತರಾದವರ ಕುಟುಂಬದ ಜೊತೆ ಮಾತನಾಡುವಂತೆ ಅಲ್ಲಿನ ಎಸಿ ಜೊತೆಗೆ ಮಾತನಾಡಿರುವುದಾಗಿ ಸಚಿವರು ತಿಳಿಸಿದರು.

ಇನ್ನು ಕೊರೊನಾದಿಂದ ಮೃತರಾದವರ ಕುಟುಂಬದವರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ನೀಡುವ ಪರಿಹಾರ ತಲುಪದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉಪ ಚುನಾವಣೆ ಮುಗಿದ ತಕ್ಷಣ ಅಧಿಕಾರಿಗಳ ಜೊತೆ ಸಭೆ ನಡೆಸಿ ಎಲ್ಲ ಕುಟುಂಬಗಳಿಗೂ ಪರಿಹಾರ ಒದಗಿಸಲಾಗುವುದು ಎಂದು ಹೇಳಿದರು.

ದಶಕಗಳ ಬೇಡಿಕೆ ಈಡೇರಿಸಿ, ಜನರಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ : ಶಶಿಕಲಾ ಜೊಲ್ಲೆ

ಸಿಂಧಗಿ: ಸಿಂಧಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾರಾಪುರ, ಬ್ಯಾಡಗಿಹಾಳ, ತಾವರಖೆಡ ಗ್ರಾಮಗಳ ಜನರ ದಶಕಗಳ ಬೇಡಿಕೆಯಾಗಿದ್ದ ಪುನರ್ವಸತಿ ಮತ್ತು ಹಕ್ಕು ಪತ್ರ ನೀಡಿ ನಾನು ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ ಎಂದು ಮುಜರಾಯಿ, ವಕ್ಫ್.ಮತ್ತು ಹಜ್ ಸಚಿವರು ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆಯವರು ಹೇಳಿದ್ದಾರೆ.

ಪಕ್ಷದ ಅಭ್ಯರ್ಥಿ ರಮೇಶ ಬೂಸನೂರು ಪರವಾಗಿ ಮತಯಾಚನೆ ಮಾಡಿದ ಅವರು, ಭೀಮಾ ಏತನೀರಾವರಿಯಿಂದ ತಾರಾಪುರ, ಬ್ಯಾಡಗಿಹಾಳ ಹಾಗೂ ತಾವರಖೇಡ ಗ್ರಾಮಗಳು ಮುಳುಗಡೆಯಾಗಿ ಪುನರ್ವಸತಿಗಾಗಿ ಕಳೆದ ಹತ್ತು ವರ್ಷಗಳಿಂದ ಹೋರಾಟ ನಡೆಸುತ್ತ ಬಂದಿದ್ದರು. ನಾನು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ಬಂದ ನಂತರ ಮೂರು ಗ್ರಾಮಗಳಿಗೆ ಭೇಟಿ ನೀಡಿದಾಗ ಜನರು ತಮ್ಮ ದಶಕಗಳ ಸಮಸ್ಯೆ ಹೇಳಿಕೊಂಡಿದ್ದರು. ಆ ಸಸಮಯದಲ್ಲಿ ಎಲ್ಲರಿಗೂ ಪುನರ್ವಸತಿ ಕಲ್ಪಿಸಿ ಹಕ್ಕುಪತ್ರ ನೀಡುವುದಾಗಿ ಭರವಸೆ ನೀಡಿದ್ದೆ. ಅದರಂತೆ ಒಂದು ವರ್ಷದಲ್ಲಿ 358 ಕುಟುಂಬಗಳನ್ನು ಸ್ಥಳಾಂತರಿಸಿ ಹಕ್ಕುಪತ್ರ ವಿತರಣೆ ಮಾಡಿ, ನುಡಿದಂತೆ ನಡೆದಿದ್ದೇನೆ. ಅಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ಎಲ್ಲರಿಗೂ ವಾಸಿಸಲುನೆ ಹಾಗೂ ರಸ್ತೆ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ಕೆಲಸ ಮಾಡಿಕೊಡುತ್ತೇನೆ ಎಂದು ಸಚಿವರು ಭರವಸೆ ನೀಡಿದರು.

ಈ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಬೂಸನೂರು ಅವರಿಗೆ ಮತ ಹಾಕಿ ಗೆಲ್ಲಿಸಿ ಕಳುಹಿಸುವ ಭರವಸೆ ನೀಡುವಂತೆ ಜನರಲ್ಲಿ ಮನವಿ ಮಾಡಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು ಎರಡೂ ಸರ್ಕಾರಗಳು ರೈತರಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿವೆ. ಪ್ರಧಾನಿ ನರೇಂದ್ರ ಮೋದಿಯವರು ರೈತರಿಗಾಗಿ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೊಳಿಸುವುದಕ್ಕಾಗಿ ಪ್ರತಿಯೊಬ್ಬ ರೈತರ ಖಾತೆಗೆ ನೇರವಾಗಿ ಮೂರು ಕಂತಿನಲ್ಲಿ 6000 ರೂ. ಜಮೆ ಮಾಡಲಾಗುತ್ತಿದೆ. ಅದಕ್ಕೆ ಪೂರಕವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ 4000 ರೂ. ಗಳನ್ನು ನೇರವಾಗಿ ರೈತರ ಖಾತೆಗಳಿಗೆ ಜಮೆ ಮಾಡಿ, ರೈತರು ಬಿತ್ತನೆ ಬೀಜಕ್ಕಾಗಿ ಬೇರೆಯವರ ಹತ್ತಿರ ಕೈಚಾಚುವಂತಾಗಬಾರದು ಎಂದು ಈ ಯೋಜನೆ ಜಾರಿಗೆ ತಂದಿದ್ದಾರೆ ಎಂದು ಹೇಳಿದರು.

ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿಗೊಳಿಸುವ ಮೂಲಕ ರೈತರ ಮಕ್ಕಳೂ ಉನ್ನತ ಶಿಕ್ಷಣ ಕಲಿಯಲಿ ಎಂದು ಪ್ರೋತ್ಸಾಹ ನೀಡಿದ್ದಾರೆ.
ಇದಲ್ಲದೇ ಕೇಂದ್ರ ಸರ್ಕಾರ ರೈತರು ತಾವು ಬೆಳೆದ ಬೆಲೆಯನ್ನು ತಾವೇ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಮಾರಾಟ ಮಾಡಲು ರೈತ ಉತ್ಪಾದಕರ ಸಂಘ ( ಎಫ್ ಪಿ ಒ) ಗಳನ್ನು ಸ್ಥಾಪಿಸಲಾಗುತ್ತಿದೆ. ಇದರಿಂದ ರೈತರು ತಮ್ಮ ಬೆಳೆಗೆ ತಾವೇ ದರ ನಿಗದಿ ಮಾಡಿ ರಫ್ತು ಕೂಡ ಮಾಡಬಹುದು ಎಂದು ಹೇಳಿದರು.

ಅಲ್ಲದೆ ಯುವಕರು ಉಪ ಉತ್ಪನ್ನಗಳನ್ನು ತಯಾರಿಸಲು ಸ್ಥಳೊಇಯವಾಗಿ ಸಣ್ಣ ಕೈಗಾರಿಕೆಗಳನ್ನು ಹಾಕಿಕೊಳ್ಳಲು ಕೇಂದ್ರ ಸರ್ಕಾರದಿಂದ 30 ಲಕ್ಷದವರೆಗೂ ಸಾಲ ನೀಡಲಾಗುತ್ತಿದೆ ಎಂದು ಸಚಿವರು ಹೇಳಿದರು.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸಚಿವರಾದ ಶಶಿಕಲಾ ಜೊಲ್ಲೆ ಅವರ ಸಮ್ಮುಖದಲ್ಲಿ ವಿವಿಧ ಪಕ್ಷಗಳ ನೂರಾರು ಕಾರ್ಯಕರ್ತರು ಬಿಜೆಪಿಗೆ ಸೇರಿಕೊಂಡರು.
ಈ ಸಂದರ್ಭದಲ್ಲಿ ಸಚಿವರೊಂದಿಗೆ ಬಿಜೆಪಿ ಅಭ್ಯರ್ಥಿ ರಮೇಶ ಬೂಸನೂರು, ತೇಜಸ್ವಿಗೌಡ, ಅಶೋಕ ಬಗಲಿ, ಯಶವಂತರಾಯಗೌಡ, ಅಂಬರೀಶ್ ಸಾಲಕ್ಕಿ, ಜಿರಾಳೆ ವಕೀಲರು, ವಿವೇಕಾನಂದ ಡಬ್ಬಿ ಹಾಗೂ ಶ್ರೀಮಂತ ನಾಗುರೆ ಪಾಲ್ಗೊಂಡಿದ್ದರು.

Video-ಯಡಿಯೂರಪ್ಪ ಮೊದಲು ಅಡ್ರೆಸ್ ಹುಡುಕಿಕೊಳ್ಳಲಿ: ಡಿಕೆಶಿ

ವಿಜಯಪುರ:ಕಾಂಗ್ರೆಸ್ ಅಡ್ರೆಸ್ ಪಕ್ಕಕ್ಕಿರಲಿ, ಮೊದಲು ಯಡಿಯೂರಪ್ಪನವರು ಅವರ ಅಡ್ರೆಸ್ ಹುಡುಕಿಕೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಡಿ.ಕೆ. ಶಿವಕುಮಾರ್ ಸಿಂದಗಿಯಲ್ಲಿ ನೀಡಿದ ಮಾಧ್ಯಮ ಪ್ರತಿಕ್ರಿಯೆ ವೇಳೆ ನಾವು ಜಾತಿ ಮೇಲೆ ಹೋರಾಟ ಮಾಡುತ್ತಿಲ್ಲ, ನೀತಿ ಮೇಲೆ ಹೋರಾಟ ಮಾಡುತ್ತಿದ್ದೇವೆ. ಇಲ್ಲಿರುವವರೆಲ್ಲಾ ರೈತರು. ಈ ಚುನಾವಣೆ ಎರಡು ವಿಚಾರಗಳ ಮೇಲೆ ನಡೆಯುತ್ತಿದೆ. ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಬಂದು 2 ವರ್ಷವಾಯಿತು. ಅವರು ಹೇಳಿದಂತೆ ರೈತರ ಆದಾಯ ಡಬಲ್ ಮಾಡಿದ್ದಾರಾ? ಹಾಗೂ ಕೋವಿಡ್ ಸಮಯದಲ್ಲಿ ಘೋಷಿಸಿದ ಪರಿಹಾರ ಪ್ಯಾಕೇಜ್ ಜನರಿಗೆ ತಲುಪಿದೆಯಾ? ಎಂಬುದಷ್ಟೇ ಇಲ್ಲಿ ಮುಖ್ಯ. ಜನ ಇದನ್ನು ನೋಡಿ ನಂತರ ಮತ ಹಾಕುತ್ತಾರೆ. ಇದನ್ನು ಹೊರತು ಪಡಿಸಿ ಯಾವ ಪಕ್ಷ ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ ಎಂಬುದು ಮುಖ್ಯವಲ್ಲ ಎಂದ್ರು.

ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ 140 ಸೀಟು ಗೆಲ್ಲಿಸಿ ಮತ್ತೆ ಅಧಿಕಾರಕ್ಕೆ ತರುತ್ತೇನೆ ಎಂದು ಮಾಜಿ ಸಿಎಂ ಯಡಿಯೂರಪ್ಪನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಬಹಳ ಸಂತೋಷ, ಇನ್ನುಳಿದ ಕ್ಷೇತ್ರಗಳನ್ನು ಅವರು ಯಾಕೆ ಬಿಟ್ಟಿದ್ದಾರೆ? ಯಡಿಯೂರಪ್ಪನವರ. ಗುರಿ 140 ಸೀಟುಗಳಾದರೆ, ನನ್ನ ಗುರಿ 224 ಸೀಟು ಎಂದ್ರು.

ಯಡಿಯೂರಪ್ಪನವರಿಗೆ ಅವರ ನೋವು ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಣ್ಣೀರು ಯಾಕೆ ಬರುತ್ತದೆ ಹೇಳಿ. ಯಾರಿಗೆ ನೋವಾಗಿರುತ್ತದೆಯೋ ಅವರಿಗೆ ಕಣ್ಣೀರು ಬರುತ್ತದೆ. ಯಡಿಯೂರಪ್ಪನವರು ರಾಜ್ಯಪಾಲರಿಗೆ ರಾಜೀನಾಮೆ ನೀಡುವಾಗ ಹಾಕಿದ ಕಣ್ಣೀರಲ್ಲೇ ಈ ಬಿಜೆಪಿ ಪಕ್ಷ ಹಾಗೂ ಅದರ ಸರ್ಕಾರ ಕೊಚ್ಚಿಹೋಗಲಿದೆ’ ಎಂದ್ರು.

ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಜನರೇ ಅದನ್ನು ವಿಸರ್ಜನೆ ಮಾಡಲಿದ್ದು, ವಿಳಾಸ ಹುಡುಕುವಂತಾಗಿದೆ ಎಂಬ ಯಡಿಯೂರಪ್ಪನವರ ಹೇಳಿಕೆಗೆ ತಿರುಗೇಟು ಕೊಟ್ಟ ಅವರು, ‘ಕಾಂಗ್ರೆಸ್ ಅಡ್ರೆಸ್ ಪಕ್ಕಕ್ಕಿರಲಿ, ಈಗ ಬಿಜೆಪಿಯವರು ಯಡಿಯೂರಪ್ಪನವರಿಗೆ ಏನಾದರೂ ವಿಳಾಸ ಕೊಟ್ಟಿದ್ದಾರಾ? ಅವರ ವಿಳಾಸ ಏನು ಎಂದು ಮೊದಲು ಹುಡುಕಿಕೊಳ್ಳಲಿ, ಅದನ್ನು ಅವರು ಅರ್ಥ ಮಾಡಿಕೊಳ್ಳಲಿ’ ಎಂದು ಛೇಡಿಸಿದರು.

ರಾಜಾಹುಲಿ ಯಡಿಯೂರಪ್ಪನವರ ಜತೆ ಮತ್ತೊಂದು ಹುಲಿ ಬೊಮ್ಮಾಯಿ ಸೇರಿದ್ದಾರೆ, ಈಗ ಕಾಂಗ್ರೆಸ್ ನವರು ಇಲಿಗಳಾಗಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಮಾರ್ಮಿಕವಾಗಿ ಉತ್ತರಿಸಿದ ಅವರು, ‘ಇಲಿಯೇ ಅಲ್ಲವೇ ಗಣಪತಿಯನ್ನು ಹೊತ್ತು ತಿರುಗುವುದು’ ಎಂದು ಟಾಂಗ್ ಕೊಟ್ಟರು.