ಸ್ಮಾರ್ಟ್ ಫೋನ್ ಮೂಲಕ ಪ್ರತಿದಿನದ ಚಟುವಟಿಕೆಗಳನ್ನು ದಾಖಲಿಸಿ: ಸಚಿವೆ ಶಶಿಕಲಾ ಜೊಲ್ಲೆ

ಬೆಳಗಾವಿ : ರಾಷ್ಟ್ರೀಯ ಪೋಷಣ್ ಅಭಿಯಾನದ ಅಡಿಯಲ್ಲಿ ರಾಜ್ಯದಲ್ಲಿ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಇಲಾಖೆ ವತಿಯಿಂದ ವಿತರಿಸಲಾಗಿರುವ ಮೊಬೈಲ್ ಗಳ ಮೂಲಕ ಪ್ರತಿದಿನದ ಚಟುವಟಿಕೆಗಳನ್ನು ಅಪ್ ಲೋಡ್ ಮಾಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಆದೇಶಿಸಿದ್ದಾರೆ.

ಇಲಾಖೆಯ ಅಧಿಕಾರಿಗಳ ಜೊತೆ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಲಾಖೆಯಡಿಯಲ್ಲಿ ಬರುವ ಎಲ್ಲಾ ಕಾರ್ಯಕ್ರಮಗಳು ಹಾಗೂ ಅಭಿವೃದ್ಧಿ ಕಾರ್ಯ ಚಟುವಟಿಕೆಗಳನ್ನು ಸ್ಮಾರ್ಟ್ ಫೋನ್ ಗಳ ಮುಖಾಂತರ ದಾಖಲು ಮಾಡುವಂತೆ ಎಲ್ಲಾ ಜಿಲ್ಲೆಯ ಉಪನಿರ್ದೇಶಕರಿಗೆ ಆದೇಶಿಸಿದ್ದಾರೆ.

ರಾಷ್ಟ್ರೀಯ ಪೋಷಣ್ ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲಾ ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡುವಂತೆ ಕರೆ ನೀಡಿದ್ದಾರೆ.

ಇನ್ನು ಈ ವಿಡಿಯೋ ಸಂವಾದದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಯುಕ್ತರಾದ ಪೆದಪ್ಪಯ್ಯಾ, ಐಸಿಡಿಎಸ್ ಜಂಟಿ ನಿರ್ದೇಶಕರಾದ ಶ್ರೀಮತಿ ಸುರೇಖಾ ವಿಜಯಪ್ರಕಾಶ್ ಹಾಗೂ ಎಲ್ಲಾ ಜಿಲ್ಲೆಯ ಉಪನಿರ್ದೇಶಕರು ಪಾಲ್ಗೊಂಡಿದ್ದರು.

ಮಂಡ್ಯದಲ್ಲಿ ಅ.10 ರಂದು ರೈತರ ಸಮ್ಮೇಳನ; ಡಿ.ಕೆ ಶಿವಕುಮಾರ

ಬೆಂಗಳೂರು: ರಾಜ್ಯ ಮಟ್ಟದ ರೈತರ ಸಮ್ಮೇಳನವನ್ನು ಅಕ್ಟೋಬರ್ 10 ರಂದು ಮಂಡ್ಯದಲ್ಲಿ ಮಾಡಲು ನಿರ್ಧರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಶಿವಕುಮಾರ್ ಅವರು ಹೇಳಿದ್ದಿಷ್ಟು:

ಎಐಸಿಸಿ ಆದೇಶದಂತೆ ರಾಜ್ಯ ಮಟ್ಟದ ರೈತರ ಸಮ್ಮೇಳನವನ್ನು ದಾವಣಗೆರೆಯಲ್ಲಿ ಮಾಡಲು ನಿರ್ಧರಿಸಿದ್ದೆವು. ಆದರೆ ಚುನಾವಣಾ ಆಯೋಗದ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಆಕ್ಟೊಬರ್ 10ರ ಬೆಳಗ್ಗೆ 11 ಗಂಟೆಗೆ ನಡೆಸಲಾಗುವುದು.

ಎಪಿಎಂಸಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮೂಲಕ ರೈತರನ್ನು ಬಂಡವಾಳಶಾಹಿಗಳ ನಿಯಂತ್ರಣಕ್ಕೆ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ 25 ರಂದು ಪ್ರತಿಭಟನೆ ಮಾಡಿದ್ದೆವು. ಆಕ್ಟೊಬರ್ 2ರಂದು ಕಿಸಾನ್ ಮಜ್ದೂರ್ ದಿನ ಆಚರಿಸಿ ತಾಲೂಕು ಮಟ್ಟದಲ್ಲೂ ಹೋರಾಟ ಮಾಡಿದ್ದೆವು.

ರೈತರ ಸಮ್ಮೇಳನ ಪಕ್ಷಾತೀತ ಕಾರ್ಯಕ್ರಮ. ಆರು ಜನ ರೈತ ಮುಖಂಡರು ಈ ಸಭೆಯಲ್ಲಿ ಮಾತನಾಡಲಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೇವಾಲ ಭಾಗವಹಿಸಲಿದ್ದಾರೆ.

ಸಹಿ ಸಂಗ್ರಹ ಅಭಿಯಾನ:

ರೈತ ವಿರೋಧಿ ಕಾಯ್ದೆಗಳ ವಿರುದ್ಧ ದೇಶಾದ್ಯಂತ ಸಹಿ ಸಂಗ್ರಹ ಅಭಿಯಾನ ಆರಂಭಿಸುತ್ತಿದ್ದೇವೆ. ನಮ್ಮ ಅಧ್ಯಕ್ಷೆ ಸೋನಿಯಾ ಗಾಂಧಿ ನಿರ್ದೇಶನದಂತೆ 2 ಕೋಟಿ ಸಹಿ ಸಂಗ್ರಹಿಸಲಾಗುವುದು. ಈ ಸಹಿಗಳುಳ್ಳ ಪತ್ರವನ್ನು ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ಕಳುಹಿಸುತ್ತೇವೆ. ಅವರು ರಾಷ್ಟ್ರಪತಿ ಅವರಿಗೆ ಸಲ್ಲಿಸಲಿದ್ದಾರೆ. ಈ ರೈತ ವಿರೋಧಿ ಕಾಯ್ದೆಗಳ ರದ್ದತಿಗೆ ಮನವಿ ಮಾಡುತ್ತಾರೆ.

ಈ ಅಭಿಯಾನದಲ್ಲಿ ಎಲ್ಲ ರೈತರು ಹಾಗೂ ಎಲ್ಲ ವರ್ಗದ ಜನ ಭಾಗವಹಿಸಬೇಕು ಎಂದು ಮನವಿ ಮಾಡುತ್ತೇನೆ.

ಕೇಂದ್ರ ಸಚಿವರಿಂದಲೇ ರಾಜೀನಾಮೆ:

ಕೇಂದ್ರದ ರೈತ ವಿರೋಧಿ ಕಾಯ್ದೆಗಳ ವಿರುದ್ಧ ಬೇಸತ್ತು ಅಕಾಲಿ ದಳದ ಸಂಸದೆ ಹರ್ಸಿಮ್ರತ್ ಕೌರ್ ಅವರು ಸಚಿವೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೇಂದ್ರ ಸರ್ಕಾರ ಹೇಗೆ ರೈತರ ವಿರುದ್ಧ ನಿಂತಿದೆ ಎಂಬುದಕ್ಕೆ ಇದೇ ಸಾಕ್ಷಿ. ಅಕಾಲಿದಳ ಎನ್ಡಿಎ ಮೈತಿಕೂಟದಿಂದ ಹೊರಬಂದಿದೆ. ರೈತರ ಪರವಾಗಿ ಅವರು ಕೈಗೊಂಡಿರುವ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಕೇಂದ್ರದ ಸಚಿವರೊಬ್ಬರು ಪ್ರತಿಭಟನೆ ಮಾಡುವವರು ರೈತರೇ ಅಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಮುಂದಿನ ದಿನಗಳಲ್ಲಿ ರೈತರೇ ಉತ್ತರ ನೀಡಲಿದ್ದಾರೆ.

ಏನನ್ನೂ ಗೌಪ್ಯವಾಗಿ ಇಡಲು ಸಾಧ್ಯವಿಲ್ಲ:

ರಾಜಕಾರಣದಲ್ಲಿ ನಾವು ಯಾವುದನ್ನೂ ಗೌಪ್ಯವಾಗಿ ಇಡಲು ಸಾಧ್ಯವಿಲ್ಲ. ಡಿ.ಕೆ. ಸುರೇಶ್ ಅವರ ದೆಹಲಿ ನಿವಾಸದಲ್ಲಿ 1.50 ಲಕ್ಷ, ನಮ್ಮ ಮನೆಯಲ್ಲಿ 1.77 ಲಕ್ಷ, ನನ್ನ ಕಚೇರಿಯಲ್ಲಿ 3.50 ಲಕ್ಷ ರೂಪಾಯಿ ಸಿಕ್ಕಿದೆ. ಊರಿನಲ್ಲಿ ನನ್ನ ತಾಯಿಯವರಿಗೆ ಕೇಳಿದಾಗ, ಅವರು ಏನೂ ತೆಗೆದುಕೊಂಡು ಹೋಗಿಲ್ಲ ಅಂದ್ರು. ಬಾಂಬೆಯ ಮನೆಗೆ ನಾನು ಹೋಗಿ 6 ವರ್ಷ ಆಯ್ತು. ದೆಹಲಿಯ ಮನೆಯಲ್ಲಿ ಏನೂ ಇಲ್ಲ. ಕೆಲವು ಕಾಗದ ಪತ್ರ ತೆಗೆದುಕೊಂಡು ಹೋಗಿದ್ದಾರೆ.

ನಮ್ಮ ಸ್ನೇಹಿತರಾದ ಸಚಿನ್ ನಾರಾಯಣ ಅವರ ಮನೆಯಲ್ಲಿ ಅವರ ವ್ಯವಹಾರಕ್ಕೆ ಸಂಬಂಧಿಸಿದ 50 ಲಕ್ಷ ರುಪಾಯಿ ಸಿಕ್ಕಿದೆಯಂತೆ. ಸಚಿನ್ ಅವರ ಜತೆ ಮಾತನಾಡಲು ಅವರು ಇನ್ನು ನನ್ನ ಸಂಪರ್ಕಕ್ಕೆ ಸಿಕ್ಕಿಲ್ಲ. ಧವನಂ ಬಿಲ್ಡರ್ಸ್ ಹತ್ರ ದಾಖಲೆ ಪತ್ರ ತೆಗೆದುಕೊಂಡು ಹೋಗಿದ್ದಾರೆ. ನಿಮಗೆ ಬೇಕು ಎಂದರೆ ಪಂಚನಾಮ ಬಿಡುಗಡೆ ಮಾಡುತ್ತೇವೆ.

ಪ್ರಹ್ಲಾದ್ ಜೋಷಿ ಅವರು ತಮ್ಮ ಪಕ್ಷದವರ ಆಸ್ತಿ ಬಹಿರಂಗ ಪಡಿಸಲಿ:

ಪ್ರಹ್ಲಾದ ಜೋಷಿ ಅವರು ದೊಡ್ಡವರು. ತಮ್ಮ ಮನೆಯನ್ನು ಮೊದಲು ಶುದ್ಧ ಮಾಡಿಕೊಳ್ಳಲಿ. ಅವರು ನಮ್ಮ ಆಸ್ತಿ ಮುಂಚೆ ಎಷ್ಟಿತ್ತು, ಈಗ ಎಷ್ಟಿದೆ ಎಂದು ಕೇಳುವ ಮುನ್ನ ತಮ್ಮ ಪಕ್ಷದ ನಾಯಕರ ಆಸ್ತಿ ವಿವರಗಳನ್ನು ಬಹಿರಂಗ ಪಡಿಸಲಿ.

ಈ ದಾಳಿಗಳು ರಾಜಕೀಯ ಪ್ರೇರಿತ ಎಂಬುದನ್ನು ತಿಳಿಯಬೇಕಾದರೆ, ಎಫ್ ಐಆರ್ ಪ್ರತಿ ನೋಡಿ. ಪ್ರಾಥಮಿಕ ತನಿಖೆ ನಡೆದಿದ್ದು ಯಾವಾಗ? ನಾನು ಪಕ್ಷದ ಅಧ್ಯಕ್ಷ ಆಗಿದ್ದು ಯಾವಾಗ? ಎಫ್ ಐಆರ್ ದಾಖಲಿಸಿದ್ದು ಯಾವಾಗ? ಎಂಬುದನ್ನು ನೋಡಿ. ಆಗ ಸ್ಪಷ್ಟವಾಗಿ ತಿಳಿಯುತ್ತದೆ.

ಕಿಡಿಗೇಡಿಗಳ ವದಂತಿಗಳಿಗೆ ರೈತರು ಕಿವಿಗೊಡಬಾರದು:ಬಿ‌.ಸಿ.ಪಾಟೀಲ್ ಮನವಿ

ಹಾವೇರಿ,ಅ.6:ಕೆಲವು ಕಿಡಿಗೇಡಿಗಳು ರೈತರನ್ನು ಯೋಜನೆಯ ಹೆಸರಿನಲ್ಲಿ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದು,ಇಲ್ಲಸಲ್ಲದ ವದಂತಿ ಸುಳ್ಳುಸುದ್ದಿಗಳಿಗೆ ಕಿವಿಗೊಡಬಾರದು ಎಂದು ಕೃಷಿ ಸಚಿವರೂ ಆಗಿರುವ ಹಿರೆಕೆರೂರು ಮತಕ್ಷೇತ್ರದ ಶಾಸಕ ಬಿ.ಸಿ.ಪಾಟೀಲ್ ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಸಿ.ಪಾಟೀಲ್,ಕ್ಷೇತ್ರದಲ್ಲಿ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು,ರೈತರ ಹೆಸರಿನಲ್ಲಿ ಕೆಲವರು ಅನಾವಶ್ಯಕ ಧರಣಿ ನಡೆಸುತ್ತಿರುವುದು ವಿಷಾದನೀಯ.ನೈಸರ್ಗಿಕವಾದ ನೆಲ ಜಲದ ಮೇಲೆ ಯಾರಿಗೂ ಹಕ್ಕಿರುವುದಿಲ್ಲ.ಹಿರೆಕೆರೂರಿನಿಂದ ಶಿಕಾರಿಪುರಕ್ಕೆ ಹೋಗುವ ಉಡುಗಣಿ-ತಾಳಗುಂದ-ಹೊಸೂರು ಏತ ನೀರಿನ ಯೋಜನೆಯಲ್ಲಿ ಹಿರೆಕೆರೂರಿನ ವರಹ ನಿಟ್ನೇಗಿಲು,ಬನ್ನಟ್ಟಿ,ಬಳ್ಳೂರು,ಚಿಕ್ಕೇರೂರು,ಯಲ್ಲಾಪುರ ಸೇರಿದಂತೆ ತಾಲೂಕಿನ ಏಳು ಕೆರೆಗಳು ಯೋಜನೆಯಿಂದ ತುಂಬುತ್ತವೆ.ಪೈಪ್ಲೈನ್ ಮೂಲಕ ನೀರು ಹಾಯಿಸಲಾಗುತ್ತಿದ್ದು, ಕೆಲವು ಕಿಡಿಗೇಡಿಗಳು ರೈತರ ಹೆಸರಿನಲ್ಲಿ ದುರುದ್ದೇಶಪೂರಕವಾಗಿ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ.ಯಾವುದಾದರೊಂದು ನೀರಾವರಿ ಯೋಜನೆ ಕಾರ್ಯಗತವಾಗಬೇಕಾದರೆ ಹಲವಾರು ಸ್ಥಳಗಳಿಂದ ಹಾದು ಹೋಗಬೇಕಾಗುತ್ತದೆ.ಜನರು ವಾಸ್ತವಾಂಶವನ್ನು ಅರಿಯಬೇಕು.ಅಲ್ಲದೇ ಉಡುಗಣಿ-ತಾಳಗುಂದ-ಹೊಸೂರು ಏತ ನೀರಿನ ಯೋಜನೆಯಿಂದ ರೈತರಿಗಾಗಲೀ ಜನರಿಗಾಗಲೀ ಯಾವುದೇ ತೊಂದರೆಯಾಗದು.ಯೋಜನೆಯಿಂದ ಹಿರೆಕೆರೂರು ತಾಲೂಕಿನ ಕೆರೆಗಳು ತುಂಬಿ ಅನುಕೂಲವೇ ಆಗಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಹಿರೆಕೆರೂರು ತಾಲೂಕಿನ ಮಡ್ಲೂರು ಏತನೀರಾವರಿ ಯೋಜನೆ ಹಾನಗಲ್ ತಾಲೂಕಿನ ಹೊಂಕಣದಿಂದ ಬರುತ್ತಿದೆ.ಸರ್ವಜ್ಞ ಏತನೀರಾವರಿ ಯೋಜನೆ ಉಕ್ಕಡಗತ್ರಿ ರಾಣೆಬೆನ್ನೂರು ಗಡಿಯಿಂದ ಬರುತ್ತಿದೆ.ಹಿರೆಕೆರೂರು ಪಟ್ಟಣಕ್ಕೆ ಕುಡಿಯುವ ನೀರನ್ನು ತುಮ್ಮಿನಕಟ್ಟಿಯಿಂದ ಬರುತ್ತಿದೆ.ಹೀವೆ ಬೇರೆ ತಾಲೂಕಿನಿಂದ ಹಿರೆಕೆರೂರಿಗೆ ಮೂರು ಯೋಜನೆಗಳು ಬರುತ್ತಿವೆ.ವಿನಾಕಾರಣ ರೈತರನ್ನು ದಾರಿತಪ್ಪಿಸುವುದರಿಂದ ಯಾರಿಗೇನು ಲಾಭವಾಗುತ್ತಿದೆಯೋ ಗೊತ್ತಿಲ್ಲ.ನೀರಾವರಿ ಯೋಜನೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ.ಇಂತಹವರ ಮಾತಿಗೆ ಅಪಪ್ರಚಾರಕ್ಕೆ ರೈತಬಾಂಧವರು ಯಾವುದೇ ಕಾರಣಕ್ಕೆ ಬೆಲೆಕೊಡಬಾರದು.ರೈತರಿಗೆ ಸರ್ಕಾರ ಯಾವುದೇ ರೀತಿ ಅನ್ಯಾಯ ಮಾಡುವುದಿಲ್ಲ‌.ವದಂತಿಗಳಿಗೆ ಕಿವಿಗೊಡಬಾರದೆಂದು ಬಿ.ಸಿ.ಪಾಟೀಲ್ ಮನವಿ ಮಾಡಿದರು.

ಲೋಕೋಪಯೋಗಿ ಇಲಾಖೆಗೆ ಧನ್ಯವಾದ ಸಲ್ಲಿಸಿದ ಬಿ.ಸಿ.ಪಾಟೀಲ್:

ಕೃಷಿ ಇಲಾಖೆಯಲ್ಲಿನ ಅಭಿವೃದ್ಧಿ,ರೈತಪರ ಯೋಜನೆಗಳ ಜೊತೆಜೊತೆಗೆ ಮತಕ್ಷೇತ್ರ ಹಿರೇಕೆರೂರಿನ ಸರ್ವಾಂಗೀಣ ಅಭಿವೃದ್ಧಿಗೂ ಸಹ ಒತ್ತು ಕೊಟ್ಟು ದುಡಿಯುತ್ತಿರುವ ಸಚಿವ ಬಿ.ಸಿ.ಪಾಟೀಲರ ಶ್ರಮದ ಫಲವಾಗಿ ಸರ್ಕಾರ ಹಿರೇಕೂರು ಪಟ್ಟಣದಲ್ಲಿ ಪ್ರವಾಸಿಮಂದಿರ ನಿರ್ಮಾಣ ಕಾಮಗಾರಿಗೆ 300 ಲಕ್ಷ ಹಾಗೂ ರಟ್ಟಿಹಳ್ಳಿ ಪ್ರವಾಸಿಮಂದಿರ ನಿರ್ಮಾಣ ಕಾಮಗಾರಿಗೆ 200 ಲಕ್ಷ ರೂ.ಗಳಿಗೆ ಸರ್ಕಾರ ಅನುಮೋದನೆ ನೀಡಿದ್ದು, ಇದಕ್ಕಾಗಿ ಲೋಕೋಪಯೋಗಿ ಇಲಾಖೆ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಸಚಿವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಪ್ರವಾಸಿಗರಿಂದ ಸೋಂಕು ಹರಡದಂತೆ ನೋಡಿಕೊಳ್ಳಲು ಮಾರ್ಗಸೂಚಿ ರಚನೆ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

0

ಮಡಿಕೇರಿ, ಅಕ್ಟೋಬರ್ 6, ಮಂಗಳವಾರ:

ಕೊಡಗು ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಂದ ಕೊರೋನಾ ಸೋಂಕು ಹರಡುವುದನ್ನು ನಿಯಂತ್ರಿಸಲು ನೂತನ ಮಾರ್ಗಸೂಚಿ ಸಿದ್ಧಪಡಿಸಲು ಸೂಚಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಮಡಿಕೇರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಬಳಿಕ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು.

“ದಸರಾ ಹಿನ್ನೆಲೆಯಲ್ಲಿ ಜಿಲ್ಲೆಗೆ ಪ್ರವಾಸಿಗರು ಬರುತ್ತಾರೆ‌. ಎಲ್ಲ ಪ್ರವಾಸಿಗರಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಬೇಕು. ಪ್ರವಾಸಿ ತಾಣಗಳಲ್ಲಿ ಪೊಲೀಸ್, ಕಂದಾಯ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ನಿಯೋಜಿಸಿ ಆರೋಗ್ಯ ತಪಾಸಣೆ ಸಹಿತ ಇತರೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಇದಕ್ಕಾಗಿ ಮಾರ್ಗಸೂಚಿ ಸಿದ್ಧಪಡಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ” ಎಂದು ಸಚಿವರು ತಿಳಿಸಿದರು.

“ಜಿಲ್ಲೆಯ ಆರೋಗ್ಯ ಸೇವೆಯಲ್ಲಿ ಕೆಲ ನ್ಯೂನತೆಗಳಿವೆ. ಬೆಂಗಳೂರಿಗೆ ಹಿಂತಿರುಗಿದ ತಕ್ಷಣ ಹಿರಿಯ ಅಧಿಕಾರಿಗಳ ಜತೆ ಮಾತನಾಡಿ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ವೈದ್ಯರ ಕೊರತೆ ನೀಗಿಸಲು ಕೂಡ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.

“ಮೊದಲು ಕೊಡಗು ಜಿಲ್ಲೆ ಹಸಿರು ವಲಯದಲ್ಲಿತ್ತು. ಅನ್ ಲಾಕ್ ಬಳಿಕ ಸೋಂಕಿನ ಪ್ರಮಾಣ ಮತ್ತು ಸಾವಿನ ಪ್ರಮಾಣ ಹೆಚ್ಚಿದೆ. ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಕೆಲ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ. ಮುಂದಿನ ವಾರ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಬಂದು ಮತ್ತೊಮ್ಮೆ ಪರಿಶೀಲನೆ ನಡೆಸಲಾಗುವುದು. ಕಟ್ಟುನಿಟ್ಟಾಗಿ ಮಾರ್ಗಸೂಚಿ ಜಾರಿಗೊಳಿಸಲು ಸ್ಥಳಿಯ ಶಾಸಕರು ಸಲಹೆ ನೀಡಿದ್ದಾರೆ. ಇದು ಸ್ವಾಗತಾರ್ಹ” ಎಂದರು.

ಶಾಲೆ ಪುನರಾರಂಭ ಇಲ್ಲ:
“ಅ.15 ರಿಂದ ಶಾಲೆಗಳ ಪುನರಾರಂಭಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಆದರೆ ನಮ್ಮ ರಾಜ್ಯದಲ್ಲಿ ಸೋಂಕು ಏರುಗತಿಯ ಮಧ್ಯದಲ್ಲಿದೆ. ಇಂತಹ ಸಂದರ್ಭದಲ್ಲಿ ಶಾಲೆ ಆರಂಭಿಸುವುದು ಸಮಂಜಸವಲ್ಲ ಎಂದು ತಜ್ಞರು ಸಲಹೆ ನೀಡಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುತ್ತಿಲ್ಲ,” ಎಂದು ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ದಸರಾ ಮನರಂಜನಾ ಕಾರ್ಯಕ್ರಮ ಇಲ್ಲ:
ಕೇರಳದಲ್ಲಿ ಓಣಂ ಸಂದರ್ಭದಲ್ಲಿ ಆದ ಲೋಪ ದಸರಾ ಸಂದರ್ಭದಲ್ಲಿ ಮರುಕಳಿಸಬಾರದು. ಉತ್ಸವ ಸಂದರ್ಭದಲ್ಲಿ 50 ಜನರಿಗಿಂತ ಹೆಚ್ಚು ಮಂದಿ ಸೇರಬಾರದು, ಕಾವೇರಿ ತೀರ್ಥೋದ್ಭವ ಸಂದರ್ಭದಲ್ಲಿ ಸ್ನಾನ ಮಾಡುವುದು ಮತ್ತು ದಸರಾ ಮನರಂಜನಾ ಕಾರ್ಯಕ್ರಮಗಳನ್ನು ಈ ವರ್ಷ ನಿರ್ಬಂಧಿಸಲಾಗುವುದು.

ಸಭೆಯಲ್ಲಿ ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹರೀಶ್ ಉಪಸ್ಥಿತರಿದ್ದರು.

ಸಭೆಯಲ್ಲಿ ಸಚಿವರು ನೀಡಿದ ಸೂಚನೆಗಳು:

* ಜಿಲ್ಲೆಯಲ್ಲಿ 100 ಮಂದಿಗೆ ಪರೀಕ್ಷೆ ಮಾಡಿದಾಗ 20 ಮಂದಿಗೆ ಸೋಂಕು ತಗುಲಿರುವುದು ಆತಂಕದ ಸಂಗತಿ. 70% ಮಂದಿ ಹೋಮ್ ಐಸೋಲೇಶನ್ ನಲ್ಲಿ ಇದ್ದಾರೆ. ಈ ಪೈಕಿ 30% ಮಂದಿಯನ್ನು ಮಾತ್ರ ಸಿಬ್ಬಂದಿ ಭೇಟಿ ಮಾಡಿ ವಿಚಾರಿಸಿದ್ದಾರೆ. ಉಳಿದವರನ್ನು ವಿಚಾರಿಸದಿರುವುದು ದುರದೃಷ್ಟಕರ. ಪ್ರತಿದಿನ ಅವರ ಸ್ಥಿತಿಗತಿ ವಿಚಾರಿಸಬೇಕು.

* ಸೋಂಕಿತರ ಸಂಪರ್ಕಿತರನ್ನು ಪತ್ತೆ ಹಚ್ಚುವ ಕೆಲಸ ಆಗಲೇಬೇಕು. ಕನಿಷ್ಠ 9 ರಿಂದ 10 ಮಂದಿ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರನ್ನು ಹುಡುಕಿ ಪರೀಕ್ಷೆಗೊಳಪಡಿಸಬೇಕು.

* ಪ್ರತಿದಿನ ಸಾವಿನ ಆಡಿಟ್ ಮಾಡಿ, ಚಿಕಿತ್ಸೆಯಲ್ಲಿನ ನ್ಯೂನತೆ ಮತ್ತು ಸಾವಿನ ನಿಖರ ಕಾರಣ ತಿಳಿದುಕೊಳ್ಳಬೇಕು.

*ಜಿಲ್ಲೆಯಲ್ಲಿ 22% ರಷ್ಟು ಹಿರಿಯ ನಾಗರಿಕರು ಬೇರೆ ಬೇರೆ ರೋಗಗಳಿಂದ ಬಳಲುತ್ತಿದ್ದು, ಅವರಿಗೆ ಕೊರೊನಾ ಪರೀಕ್ಣೆ ಮಾಡಿ, ರಿವರ್ಸ್ ಕ್ವಾರಂಟೈನ್ ಗೆ ಒಳಪಡಿಸಬೇಕು.

*ಬೂತ್ ಮಟ್ಟದ ಸಮಿತಿಗಳಿಗೆ ಸ್ಥಳೀಯ ಜನರನ್ನು ಸೇರಿಸಿಕೊಳ್ಳಬೇಕು. ಎಲ್ಲಾ ಪಿಎಚ್ ಸಿ, ಸಿಎಚ್ ಸಿ ಮತ್ತು ಆಸ್ಪತ್ರೆಯಲ್ಲಿ ಮಾದರಿ ಸಂಗ್ರಹಿಸಬೇಕು.

*ದಿನಕ್ಕೆ 500 ಅಥವಾ 600 ಮಾದರಿ ಪರೀಕ್ಷಿಸಬೇಕು. ಹೊಸ ಯಂತ್ರ ಅಳವಡಿಸಿದ ಬಳಿಕ ಆ ಪ್ರಮಾಣ 1,000 ಕ್ಕೆ ಹೆಚ್ಚಿಸಬೇಕು. ಸಿಬ್ಬಂದಿ ಕೊರತೆ ಇದ್ದಲ್ಲಿ ಗುತ್ತಿಗೆ ಆಧಾರದಲ್ಲಿ ತಕ್ಷಣ ನೇಮಕ ಮಾಡಿಕೊಳ್ಳಬೇಕು.

*ಚೆಸ್ಕಾಂನಿಂದ ಮೆಡಿಕಲ್ ಕಾಲೇಜಿನಲ್ಲಿ ಆಗಬೇಕಾದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. 17 ಮಂದಿ ಹೆಚ್ಚುವರಿಯಾಗಿ ಬಂದಿರುವ ರೆಸಿಡೆಂಟ್ ಡಾಕ್ಟರ್ ಗಳನ್ನು ಕೊರತೆ ಇರುವ ತಾಲೂಕು ಆಸ್ಪತ್ರೆಗೆ ನಿಯೋಜಿಸಬೇಕು.

*ಗೋಣಿಕೊಪ್ಪ, ನಾಪೋಕ್ಲು, ಸುಂಟಿಕೊಪ್ಪ, ಕುಶಾಲನಗರ ಮುಂತಾದ ಕಡೆ ಸೋಂಕಿನ ಪ್ರಮಾಣ ಹೆಚ್ಚಲು ಕಾರಣ ಏನು ಎಂಬುದನ್ನು ಪತ್ತೆಹಚ್ಚಿ ಹೆಚ್ಚು ಪರೀಕ್ಷೆ ಮಾಡಬೇಕು. ಪ್ರತಿವಾರ ಅದನ್ನು ಮೌಲ್ಯಮಾಪನ ಮಾಡಬೇಕು.

*ಹೆಚ್ಚು ಜನ ಸೇರುವ ಪ್ರದೇಶದಲ್ಲಿ ನಿರ್ಬಂಧ ವಿಧಿಸಿ ಸಂತೆಗಳನ್ನು ವಿಶಾಲವಾದ ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಲು ಶಾಸಕರ ಸಲಹೆ ಮೇರೆಗೆ ಕ್ರಮ ಕೈಗೊಳ್ಳಬೇಕು. ವ್ಯಾಪಾರ ವಹಿವಾಟುಗಳಲ್ಲಿ ನಿರತರಾದವರನ್ನು ನಿಯಮಿತವಾಗಿ ಟೆಸ್ಟ್ ಗೆ ಒಳಪಡಿಸಬೇಕು. ಹೋಮ್ ಸ್ಟೇಗಳಿಗೆ ಭೇಟಿ ನೀಡುವವರ ಮೇಲೆ ನಿಗಾ ಇರಿಸಬೇಕು.

*ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಪ್ರದೇಶಗಳಲ್ಲಿ ಪೊಲೀಸ್ ನಿಗಾ ವಹಿಸಬೇಕು. ಕೊಡಗಿಗೆ ಆಗಮಿಸುವ ಪ್ರವಾಸಿಗರಿಗೆ ಕೋವಿಡ್ ಪರೀಕ್ಷೆ ವರದಿ ಕಡ್ಡಾಯ ಮಾಡುವ ಬಗ್ಗೆ ಜಿಲ್ಲಾಡಳಿತ ಪರಿಶೀಲನೆ ನಡೆಸಬೇಕು.

*ಜನರಲ್ಲಿ ರೋಗ ನಿಯಂತ್ರಣದ ಬಗ್ಗೆ, ಸೋಂಕು ಹರಡುವಿಕೆ ಕಡಿತಗೊಳಿಸಲು ನಾನಾ ಮಾಧ್ಯಮಗಳ ಮೂಲಕ ಅರಿವು ಮೂಡಿಸುವ ಕೆಲಸ ಆಗಬೇಕು. ಸಂತೆ ದಿನಗಳಂದು ಆಟೊಗಳ ಮೂಲಕ ಪ್ರಚಾರ ಮಾಡಬೇಕು. ದಂಡದ ಬಗ್ಗೆಯೂ ತಿಳಿ ಹೇಳಬೇಕು. ಸರ್ಕಾರಕ್ಕೆ ಜನರಿಂದ ದಂಡ ವಸೂಲಿ ಮಾಡುವ ಉದ್ದೇಶ ಇಲ್ಲ. ಎಂಟು ತಿಂಗಳಾದರೂ ಜನ ನಿರ್ಲಕ್ಷ್ಯ ತೋರಿಸಿದರೆ ಏನೂ ಮಾಡಲು ಆಗುವುದಿಲ್ಲ.

*ಮೃತದೇಹಗಳ ಅಂತ್ಯಸಂಸ್ಕಾರ ಸಂದರ್ಭದಲ್ಲಿ ಕುಟುಂಬ ಸದಸ್ಯರು ಪಿಪಿಇ ಕಿಟ್ ಧರಿಸಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಈ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿ ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು.

ಪ್ರಶಾಂತ್ ಸಂಬರಗಿಗೆ ತಿರುಗೇಟು ನೀಡಿದ ಡಿಕೆ ರವಿ ಪತ್ನಿ ಕುಸುಮಾ

0

ಬೆಂಗಳೂರು:ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೇ bad Luck transfer dk ravi to dk Shivakumar ಎಂದು ಕಮೆಂಟ್ ಮಾಡಿದ್ದ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿಗೆ ಇನ್ನೊಬ್ಬರ ಚಾರಿತ್ರ್ಯವಧೆಗೆ ಇಳಿಯುವುದು ನಿಮ್ಮ ಘನತೆಗೆ ಶೋಭೆ ತರುವಂತದಲ್ಲ ಎಂದು ಡಿಕೆ ರವಿ ಪತ್ನಿ ಕುಸುುಮಾ ತಿರುಗೇಟು ನೀಡಿದ್ದಾರೆ.

ಸಹೋದರ ಪ್ರಶಾಂತ್ ಸಂಬರಗಿಯವರಿಗೆ, ವೈಯುಕ್ತಿಕವಾಗಿ ನಿಮ್ಮ ಪರಿಚಯ ನನಗಿಲ್ಲ, ಕೆಲ ತಿಂಗಳುಗಳಿಂದ ನೀವು ಡ್ರಗ್ಸ್ ಹಾಗೂ ಇನ್ನಿತರ ಸಾಮಾಜಿಕ ಪಿಡುಗುಗಳ ವಿರುದ್ದ ನಡೆಸುತ್ತಿರುವ ಹೋರಾಟ ಪ್ರಶಂಸನೀಯ. ಯುವಸಮೂಹಕ್ಕೆ ಡ್ರಗ್ಸ್ ವಿರುದ್ದವಾಗಿ ಜಾಗ್ರತೆ ಮೂಡಿಸುತ್ತಿರುವ ನಿಮಗೆ ಅಭಿನಂದನೆಗಳು.

ಯಾರನ್ನೋ ಮೆಚ್ಚಿಸುವ ಭರದಲ್ಲಿ ನನ್ನ ಅದೃಷ್ಟ(Luck) ವಿಷಯವನ್ನು ಪ್ರಸ್ತಾಪಿಸಿದ್ದೀರಿ. ಎಲ್ಲರ ಬದುಕಿನಲ್ಲಿ ಇಣುಕುವ ನೀವು ಹಿಂದೆ-ಮುಂದೆ ತಿಳಿಯದೇ ಇನ್ನೊಬ್ಬರ ಚಾರಿತ್ರ್ಯವಧೆಗೆ ಇಳಿಯುವುದು ನಿಮ್ಮ ಘನತೆಗೆ ಶೋಭೆ ತರುವಂತದಲ್ಲ ಎಂಬುದು ನನ್ನ ಅನಿಸಿಕೆ.

ಪ್ರತಿಯೊಬ್ಬರ ಬದುಕಿನಲ್ಲೂ ಏಳು-ಬೀಳುಗಳಿರುತ್ತವೆ, ಇದೇ ರೀತಿ ನಿಮ್ಮ ಮನೆಯಲ್ಲೇ ಅಕ್ಕ-ತಂಗಿ ನನ್ನ ಸ್ಥಾನದಲ್ಲಿದ್ದಿದ್ದರೆ ಹೀಗೆಯೇ ವಿಡಂಬನೆ ಮಾಡುತ್ತಿದ್ದಿರಾ?
ಹೆಣ್ಣು‌ ಎಂಬ ಮಾತ್ರಕ್ಕೆ ಇಂತಹ ವಿಡಂಬನೆ ಮತ್ತು ಅಪಪ್ರಚಾರಗಳಿಗೆ ಒಳಗಾಗಬೇಕೆ?

ಬೇರೆಯವರ ಮನೆಯ ಹೆಣ್ಣುಮಗಳ luck ಯಾವುದು ಎಂದು ಹುಡುಕುವ ಶಕ್ತಿ ಇರುವ ನಿಮಗೆ ಹತ್ರಾಸ್ ನ ಮನೀಷಾ ಅತ್ಯಾಚಾರ-ಕೊಲೆ ಪ್ರಕರಣ ಕಣ್ಣಿಗೆ ಕಾಣುತ್ತಿಲ್ಲವೇಕೆ?

ಸಹೋದರ ಪ್ರಶಾಂತ್ ಸಂಬರಗಿ ಅವರೇ, ಇದರಿಂದ ಹೆಣ್ಣುಮಕ್ಕಳ ಕುರಿತ ನಿಮ್ಮ ಬುದ್ದಿಮಟ್ಟ ತಿಳಿಯುತ್ತದೆ. ಈ ಆಲೋಚನೆಗಳನ್ನು ಮುಂದುವರಿಸಿ.
ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಫೇಸದ ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.

ನಾನು ತಪ್ಪು ಮಾಡಿದ್ದರೆ ನೇಣಿಗೆ ಹಾಕಲಿ: ಡಿಕೆ ಶಿವಕುಮಾರ್

ಬೆಂಗಳೂರು: ನಾನು ಉದ್ಯಮಿ, ಶಿಕ್ಷಣದಾರ, ರಾಜಕಾರಣಿ. ನಾನು ತಪ್ಪು ಮಾಡಿದ್ದರೆ ನನ್ನನ್ನು ನೇಣಿಗೆ ಹಾಕಲಿ. ಅವರು ಯಾವಾಗ ವಿಚಾರಣೆಗೆ ಕರೆಯುತ್ತಾರೋ ಆಗ ಹೋಗುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಸಿಬಿಐ ದಾಳಿ ನಂತರ ಸಂಜೆ ಸದಾಶಿವನಗರದ ಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಡಿಕೆ ಶಿವಕುಮಾರ್, 2017ರಲ್ಲಿ ಐಟಿ ದಾಳಿ ಆದಾಗ ಅವತ್ತೇ ಬಂಧನ ಆಗುತ್ತೆ ಅಂತಾ ಹೇಳಿದ್ದರು. 2018ರಲ್ಲಿ ಆರ್ಥಿಕ ಅಪರಾಧ ಪ್ರಕರಣ, 2019ರಲ್ಲಿ ಇಡಿ ಪ್ರಕರಣ ನ್ಯಾಯಾಲಯ ನನಗೆ ಜಾಮೀನು ನೀಡಿತು. ಆಗಲೂ ದೇಶದ್ದುದ್ದಗಲಕ್ಕೆ ಸೋನಿಯಾ ಗಾಂಧಿ ಅವರಿಂದ ಎಲ್ಲ ಪಕ್ಷದ ಮುಖಂಡರು, ಅನೇಕ ಸಂಘಟನೆಗಳು ಪ್ರತಿಭಟನೆ ಮಾಡಿ ಬೆಂಬಲ ನೀಡಿದರು. ನನಗೆ ಅನ್ಯಾಯ ಆಗಿದೆ ಎಂದು ಜನ ಅಭಿಮಾನದಿಂದ ಬಂದು ಪ್ರತಿಭಟನೆ ಮಾಡಿದರು ಎಂದರು.

ಪೊಲೀಸರು ಬೆದರಿಕೆ ಹಾಕಿದ್ದರೂ ಶಾಂತಿಯುತ ಪ್ರತಿಭಟನೆ ನಂತರ ಆಯುಕ್ತರು ಹಾಗೂ ಗೃಹಮಂತ್ರಿಗಳು ಶ್ಲಾಘಿಸಿದರು. ಎಲ್ಲ ಧರ್ಮದ ಹಿರಿಯರು ನನಗೆ ನನ್ನ ಕುಟುಂಬಕ್ಕೆ ಶಕ್ತಿ ನೀಡಿದ್ದಾರೆ. ನಾನು ಮರಳಿ ಬಂದಾಗ ಪಕ್ಷ, ಜಾತಿ ಎಲ್ಲ ಮರೆತು ಸ್ವಾಗತ ಕೊಟ್ಟರು. ಜೈಲಿನಿಂದ ಬಂದವನಿಗೆ ಈ ಮೆರವಣಿಗೆ ಬೇಕಾ ಅಂತಾ ಕೇಳಿದ್ದರು. ಅವರು ಒಮ್ಮೆ ಯೋಚಿಸಬೇಕು ಪರಪ್ಪನ ಅಗ್ರಹಾರ ಜೈಲಿನಿಂದ ಬಂದವರು ಹೇಗೆ ಬಂದರು? ನಾನು ಅವರಂತೆ ವಿಕ್ಟರಿ ತೋರಿಸಿ ಬರಲಿಲ್ಲ ಕೈಮುಗಿದು ಬಂದೆ ಎಂದು ವಿವರಣೆ ನೀಡಿದರು

ನಮ್ಮ ರಾಷ್ಟ್ರೀಯ ನಾಯಕರು ನನ್ನ ಮೇಲೆ ನಂಬಿಕೆ ಇಟ್ಟು ಅಧ್ಯಕ್ಷ ಜವಾಬ್ದಾರಿ ಕೊಟ್ಟಿದ್ದಾರೆ. ಕಳೆದ ಏಳು ತಿಂಗಳಲ್ಲಿ ಕೊರೋನಾ ಸಮಸ್ಯೆಯಲ್ಲಿ ಜನ ಸಂಕಷ್ಟಕ್ಕೆ ಸಿಲುಕಿದಾಗ ನಾವು ಅವರಿಗೆ ನೆರವಾಗಿದ್ದೇವೆ. ಬಡವರು, ಕಾರ್ಮಿಕರು, ರೈತರು, ಜನ ಸಾಮಾನ್ಯರ ಜತೆ ಸರ್ಕಾರ ನಿಲ್ಲಲಿಲ್ಲ. ವಿರೋಧ ಪಕ್ಷವಾಗಿ ನಾವು ಅವರ ಪರ ನಿಂತೆವು. ಅವರ ಪರವಾಗಿ ನಾವು ಧ್ವನಿ ಎತ್ತಿದೆ.ನಾನು ಒಂದು ಪಕ್ಷದ ಅಧ್ಯಕ್ಷನಾಗಿ ನನ್ನ ಕರ್ತವ್ಯ ಮಾಡಿದೆ.ರೈತರ ಸಮಸ್ಯೆಗೆ ಸ್ಪಂದಿಸಿ ರೈತರ ಬೆಳೆಯನ್ನು ಅವರ ಹೊಲಕ್ಕೆ ಹೋಗಿ ಖರೀದಿಸಿದೆವು.ಕೊರೋನಾ ವಿಚಾರದಲ್ಲಿ 300, 400 ಪಟ್ಟು ಭ್ರಷ್ಟಾಚಾರ ಮಾಡಲಾಗಿದೆ. ಈ ಬಗ್ಗೆ ಹೋರಾಟ ಮಾಡಿದೆವು. ವಿಧಾನಸೌಧದಲ್ಲಿ ನಮಗೆ ಮಾತನಾಡಲು ಅವಕಾಶ ನೀಡಲಿಲ್ಲ. ನಾವು ಜನರ ನೋವಿಗೆ ಸ್ಪಂದಿಸದಿದ್ದರೆ, ಅವರ ಭಾವನೆಗೆ ಬೆಲೆ ಕೊಡದಿದ್ದರೆ ನಮ್ಮ ಕರ್ತವ್ಯ ನಿರ್ವಹಿಸಲು ವಿಫಲವಾದಂತೆ ಆಗುತ್ತದೆ ಎಂದರು.

ಇಂದು ದೇಶದಲ್ಲಿ ಅನೇಕ ಬೆಳವಣಿಗೆ ಆಗುತ್ತಿದೆ. ಹತ್ರಾಸ್ ನಲ್ಲಿ ದಲಿತ ಹೆಣ್ಣು ಮಗಳ ಮೇಲೆ ಅತ್ಯಾಚಾರ ನಡೆಯಿತು. ಆಕೆಗೆ ಸರ್ಕಾರ ನ್ಯಾಯ ಒಡಗಿಸಿಕೊಡಲು ಮುಂದಾಗಿದೆಯೇ?
ಚುನಾವಣೆ ಘೋಷಣೆಯಾದ ಮೇಲೆ, ನಾವು ಅನೇಕ ವಿಚಾರವಾಗಿ ಪ್ರತಿಭಟನೆಗೆ ಕರೆ ಕೊಟ್ಟ ಸಮಯದಲ್ಲಿ ನನ್ನ ಮನೆ ಮೇಲೆ ದಾಳಿ ಮಾಡಲಾಗಿದೆ. ಇಷ್ಟು ಆತುರ ಯಾಕೆ?
ಈ ಎಫ್ಐಆರ್, ಪ್ರಕರಣಗಳಿಗೆ ನಾವು ಹೆದರುವುದಿಲ್ಲ.
ಮುಖ್ಯಮಂತ್ರಿಗಳೇ 35 ವರ್ಷಗಳಲ್ಲಿ ನನ್ನ ಮೇಲೆ ಯಾವುದಾದರೂ ತನಿಖೆ ಆಗಿದೆಯಾ? ಕ್ರಿಮಿನಲ್ ಕೇಸ್? ಎಫ್ ಐಆರ್ ಆಗಿದೆಯಾ?ನಾನು ಮಂತ್ರಿಯಾದ ಎಲ್ಲ ಇಲಾಖೆಗಳ ಫೈಲ್ ಜಾಲಾಡಿದ್ದೀರಾ. ಏನಾದರೂ ತಪ್ಪು ಕಾಣಿಸಿದೆಯಾ? ಬೇರೆಯವರ ಬಂಡವಾಳವೂ ನನ್ನ ಬಳಿ ಇದೆ. ಆರ್ ಟಿಐ ಮೂಲಕ ಎಲ್ಲವನ್ನು ಸಂಗ್ರಹಿಸಿದ್ದೇನೆ. ಯಾವಾಗ ಅದನ್ನು ಬಹಿರಂಗ ಮಾಡಬೇಕೋ ಆಗ ಮಾಡುತ್ತೇನೆ ಎಂದರು.

ಬರೀ ಡಿ.ಕೆ ಶಿವಕುಮಾರ್ ಮಾತ್ರನಾ ನಿಮ್ಮ ಕಣ್ಣಿಗೆ ಕಾಣುತ್ತಿರುವುದು? ನಾನು ನಂಬಿರುವ ಶಕ್ತಿ ದೇವರು ಅಜ್ಜಯ್ಯನವರು, ಜನ ನನ್ನ ಜತೆ ಇದ್ದಾರೆ.ನನ್ನ ಮನೆಯಲ್ಲಿ 1.87 ಲಕ್ಷ ಸಿಕ್ಕಿದೆ ಅಂತಾ ಪಂಚನಾಮ ಇದೆ. ಪಕ್ಕದ ಕಚೇರಿಯಲ್ಲಿ 2-3 ಲಕ್ಷ, ದೆಹಲಿಯಲ್ಲಿ 2-3 ಲಕ್ಷ ಸಿಕ್ಕಿದೆ. ಮಾಧ್ಯಮಗಳಲ್ಲಿ ಬಂದಂತೆ ಕೋಟಿಗಟ್ಟಲೆ ಹಣ ಸಿಕ್ಕಿಲ್ಲ. ನಮ್ಮ ಮನೆಯಲ್ಲಿ ಏನು ಸಿಕ್ಕಿದೆಯೋ ಅದನ್ನು ಹೇಳಿದ್ದೇನೆ. ಬೇರೆಯವರ ಮನೆಯಲ್ಲಿ ಏನು ಸಿಕ್ಕಿದೆ ಗೊತ್ತಿಲ್ಲ ಎಂದರು.