ಅಭ್ಯರ್ಥಿಯ ಗತಿ ಇಲ್ಲದೆ ಜೆಡಿಎಸ್ ನವರನ್ನು ಸೆಳೆದ ನಿಮ್ಮದು ರಾಜಕೀಯ ಪಕ್ಷವೇ: ಸಿದ್ದರಾಮಯ್ಯ ವಿರುದ್ಧ ಎಚ್ಡಿಕೆ ವಾಗ್ದಾಳ

ಬೆಂಗಳೂರು, ಅಕ್ಟೋಬರ್ 05:ಜೆಡಿಎಸ್ ನಿಂದ ಪ್ರವರ್ದಮಾನಕ್ಕೆ ಬಂದಿದ್ದ, ಜೆಡಿಎಸ್ ನಿಂದಲೇ ಡಿಸಿಎಂ ಆದ ನಾಯಕರೊಬ್ಬರು, ಸಭೆಯೊಂದರಲ್ಲಿ ಜೆಡಿಎಸ್ ಮುಖಂಡರನ್ನು ತಮ್ಮ ಈಗಿನ ಪಕ್ಷಕ್ಕೆ ಸೇರಿಸಿಕೊಳ್ಳುತ್ತಾ ಅದೇ ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಜೆಡಿಎಸ್ ರಾಜಕೀಯ ಪಕ್ಷವಲ್ಲ ಎಂದು ಹೇಳಿದ್ದಾರೆ. ಉಪಚುನಾವಣೆಗೆ ಅಭ್ಯರ್ಥಿಯ ಗತಿ ಇಲ್ಲದೆ ಜೆಡಿಎಸ್ ನವರನ್ನು ಸೆಳೆದ ನಿಮ್ಮದು ರಾಜಕೀಯ ಪಕ್ಷವೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಭಾರತದ ಅತಿ ಹಳೆಯ ರಾಜಕೀಯ ಪಕ್ಷವಾಗಿರುವ ಕಾಂಗ್ರೆಸ್‌ ಇಂದು ಯಾವ ಪರಿಸ್ಥಿತಿಯಲ್ಲಿದೆ, ಯಾವ ರಾಜ್ಯಗಳಲ್ಲಿ ಸ್ವಂತ ಬಲದ ಮೇಲೆ ಸರ್ಕಾರ ರಚನೆ ಮಾಡಿದೆ? ಎಲ್ಲೆಲ್ಲಿ ಯಾರು ಯಾರ ಹೆಗಲ ಮೇಲೆ ಕುಳಿತು ರಾಜಕೀಯ ಮಾಡುತ್ತಿದೆ? ಎಲ್ಲಿಲ್ಲಿ ಯಾರು ಯಾರಿಗೆ ಹೆಗಲಾಗಿದೆ? ಜೆಡಿಎಸ್‌ ಉಪ್ಪು ತಿಂದ ಆ ಮಹಾನ್‌ ನಾಯಕರು ಈ ಪ್ರಶ್ನೆಗಳಿಗೆ ಉತ್ತರ ನೀಡುವರೇ ಎಂದು ಪ್ರಶ್ನಿಸಿದ್ದಾರೆ.

ಮಿತ್ರಪಕ್ಷಗಳನ್ನೇ ಆಪೋಷನ ಪಡೆದು ಜೀವಿಸುತ್ತಿರುವ, ಜನರಿಂದ ತಿರಸ್ಕಾರವಾಗಿರುವ, ಇತರ ಪಕ್ಷಗಳೊಂದಿಗೆ ಚೌಕಾಸಿಯಲ್ಲಿ ತೊಡಗಿರುವ ಕಾಂಗ್ರೆಸ್‌ ಭಾರತದಲ್ಲಿ ರಾಜಕೀಯ ಪಕ್ಷವಾಗಿ ಉಳಿದಿದೆಯೇ? ಕಾಂಗ್ರೆಸ್‌ ತನ್ನ ಅಹಂಕಾರದ ಪ್ರವೃತ್ತಿ ಮುಂದುವರಿಸಿಕೊಂಡು ಹೋದರೆ ಕರ್ನಾಟಕದಲ್ಲೂ ನೆಲೆ ಕಳೆದುಕೊಳ್ಳುವುದರಲ್ಲಿ ಅನುಮಾನಗಳಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

2018ರ ಚುನಾವಣೆಯಲ್ಲಿ ‘ಮಹಾನ್‌ ನಾಯಕರ’ ‘ಅಪ್ಪನಾಣೆ’ ‘ತಿಪ್ಪರಲಾಗ’ದ ಸವಾಲುಗಳನ್ನು ಜನ ಸೋಲಿಸಿದ್ದಾರೆ. ಆ ಪಕ್ಷ ಅಧಿಕಾರಕ್ಕೆ ಬಾರದು, ಈ ಪಕ್ಷ ಅಧಿಕಾರಕ್ಕೆ ಬಾರದು ಎಂದು ‘ಅಪ್ಪನಾಣೆ’ಗಳನ್ನು ಇಟ್ಟವರಿಗೆ ಜನ, ಆಣೆ ಪ್ರಮಾಣದ ಮಹತ್ವ ತಿಳಿಸಿಕೊಟ್ಟಿದ್ದಾರೆ. ಈ ಉಪ ಚುನಾವವಣೆಯಲ್ಲೂ ಅವರಿಗೆ ತಕ್ಕ ಉತ್ತರ ಸಿಗಲಿದೆ. ಅದಕ್ಕಾಗಿ ಕಾಯಲಿ ಎಂದು ಟ್ವೀಟ್ ಮಾಡಿದ್ದಾರೆ.

ಡಿಕೆಶಿ ಮೇಲಿನ ದಾಳಿ ರಾಜಕೀಯ ಪ್ರೇರಿತವಲ್ಲ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

ಮೈಸೂರು, ಅಕ್ಟೋಬರ್ 5, ಸೋಮವಾರ: ಕೆಪಿಸಿಸಿ ಅಧ್ಯಕ್ಷ ಹಾಗೂ ಶಾಸಕ ಡಿ.ಕೆ.ಶಿವಕುಮಾರ್ ಅವರ ಮೇಲಿನ ಸಿಬಿಐ ದಾಳಿ ರಾಜಕೀಯ ಪ್ರೇರಿತವಲ್ಲ. ಅವರು ನಿಜಕ್ಕೂ ಪ್ರಾಮಾಣಿಕರಾಗಿದ್ದರೆ ನಿರ್ದೋಷಿಯಾಗಿ ಹೊರಬರುತ್ತಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಿಬಿಐ, ಇಡಿ, ಐಟಿ ಸಂಸ್ಥೆಗಳು ಸ್ವಾಯತ್ತ ಸಂಸ್ಥೆಗಳಾಗಿದ್ದು, ಪ್ರಾಮಾಣಿಕವಾಗಿ ಕೆಲಸ ಮಾಡಲು ಅವಕಾಶ ಕೊಡಬೇಕೆ ವಿನಾ, ರಾಜಕೀಯ ಪ್ರೇರಿತವೆಂದು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು. ಇದು ರಾಜಕೀಯ ಪ್ರೇರಿತ ಎಂಬ ಕಾಂಗ್ರೆಸ್ ಆರೋಪ ಸತ್ಯಕ್ಕೆ ದೂರವಾಗಿದೆ. ಡಿ.ಕೆ.ಶಿವಕುಮಾರ್ ಅವರ ಮೇಲೆ ಹಿಂದೆಯೂ ದಾಳಿಯಾಗಿತ್ತು. ಇದು ಮುಂದುವರಿದ ಶೋಧವಾಗಿದೆ,” ಎಂದು ಸ್ಪಷ್ಟಪಡಿಸಿದರು.

“ಇದು ರಾಜಕೀಯ ಪ್ರೇರಿತವೇ ಆಗಿದ್ದಿದ್ದರೆ, ಕಾಂಗ್ರೆಸ್ ಪಕ್ಷದಲ್ಲಿ ಬೇರೆ ನಾಯಕರೇ ಇಲ್ಲವೇ? ಶಿವಕುಮಾರ್ ಅವರಿಗಿಂತ ಐದು ವರ್ಷ ಸರ್ಕಾರ ನಡೆಸಿದ ಪ್ರಭಾವಿ ನಾಯಕ ಸಿದ್ದರಾಮಯ್ಯ ಅವರ ಮೇಲೆ ಏಕೆ ದಾಳಿಯಾಗಿಲ್ಲ? ಕಾಂಗ್ರೆಸ್‍ನವರು ಈ ವಿಚಾರದಲ್ಲಿ ರಾಜಕೀಯ ಬೆರೆಸಲು ಪ್ರಯತ್ನಿಸುತ್ತಿದ್ದಾರೆ. ಶಿವಕುಮಾರ್ ತಾವು ಭ್ರಷ್ಟಾಚಾರ ಮಾಡಿಲ್ಲವೆಂದು ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ. ಹಾಗಿದ್ದಲ್ಲಿ, ಈ ತನಿಖೆಗೆ ಹೆದರುವ ಅವಶ್ಯಕತೆ ಇಲ್ಲ. ನಿಷ್ಪಕ್ಷಪಾತವಾಗಿ ತನಿಖೆ ನಡೆದು, ಸತ್ಯ ಹೊರ ಬರಲು ಎಲ್ಲರೂ ಸಹಕಾರ ನೀಡಬೇಕು,” ಎಂದರು.

“ಉಪ ಚುನಾವಣೆಗೂ ದಾಳಿಗೂ ಯಾವುದೇ ಸಂಬಂಧವಿಲ್ಲ. ಅಷ್ಟಕ್ಕೂ ಬಿಜೆಪಿ ಸರ್ಕಾರ 117 ಸ್ಥಾನದೊಂದಿಗೆ ಸ್ವಂತ ಬಲದಿಂದ ಸರ್ಕಾರ ರಚಿಸಿದೆ. ಈ ಉಪ ಚುನಾವಣೆ ಸರ್ಕಾರದ ಅಳಿವು ಉಳಿವಿನ ಮೇಲೆ ಪರಿಣಾಮ ಬೀರುವುದಿಲ್ಲ. ಹೀಗಿರುವಾಗ ಚುನಾವಣೆಗೂ ದಾಳಿಗೂ ಸಂಬಂಧ ಕಲ್ಪಿಸುವುದು ಸರಿಯಲ್ಲ,” ಎಂದು ಸ್ಪಷ್ಟಪಡಿಸಿದರು.

“ಡಿ.ಕೆ. ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡಿದ್ದೇವೆ ಎನ್ನುವುದಾದರೆ, ಯುಪಿಎ ಸರ್ಕಾರದ ಅವಧಿಯಲ್ಲಿ, ಅಮಿತ್ ಶಾ ಅವರನ್ನು ಎರಡು ವರ್ಷ ಗುಜರಾತ್‍ನಿಂದ ಬಹಿಷ್ಕಾರ ಮಾಡಿದ್ದು, ಈಗಿನ ಆಂಧ್ರಪ್ರದೇಶದ ಸಿಎಂ ಸೇರಿ ಕಾಂಗ್ರೆಸ್ಸೇತರ ಪಕ್ಷದ ಮೇಲೆ ಸಿಬಿಐ ದಾಳಿ ನಡೆಸಿದ್ದು ರಾಜಕೀಯ ಪ್ರೇರಣೆಯೇ?” ಎಂದು ಪ್ರಶ್ನಿಸಿದರು.

ದಿವ್ಯಾ, ಶ್ರೀದೇವಿಗೆ ಮಿಸೆಸ್ ಸೌತ್ ಇಂಡಿಯಾ ಕಿರೀಟ

ಬೆಂಗಳೂರು: ದಿವ್ಯಾ ನವೀನ್ ಅವರು ಮಿಸೆಸ್ ಸೌತ್ ಇಂಡಿಯಾ ಆಮ್ ಪವರ್‍ಫುಲ್ ಕಿರೀಟ ಧರಿಸಿದರು. ಶ್ರೀದೇವಿ ಅಪ್ಪಾಚ ಅವರು ಮಿಸೆಸ್ ಕರ್ನಾಟಕ ಕರ್ವಿ ಸ್ಪರ್ಧೆಯಲ್ಲಿ ವಿಜೇತರಾದರು.

ಭಾರತೀಯ ಸಂಪ್ರದಾಯವನ್ನು ಎತ್ತಿಹಿಡಿಯುವ “ಎಥ್‍ನಿಕ್’ ಸುತ್ತಿನಲ್ಲಿ ರೂಪದರ್ಶಿಯರು ರ್ಯಾಂಪ್ ಮೇಲೆ ಹೆಜ್ಜೆಹಾಕಿದರು. ವಿಭಿನ್ನ ರೀತಿಯಲ್ಲಿ ಸೀರೆಯನ್ನು ಉಟ್ಟು ವಿನೂತನ ಫ್ಯಾಷನ್ ಮಂತ್ರ ಜಪಿಸಿದರು.

ಹೋಟೆಲ್ ಲಲಿತ್ ಅಶೋಕ್‍ನಲ್ಲಿ ನಡೆದ ಮೂರನೇ ಆವೃತ್ತಿಯ ಮಿಸೆಸ್ ಸೌತ್ ಇಂಡಿಯಾ ಆಮ್ ಪವರ್‍ಫುಲ್‍ನಲ್ಲಿ ಒಟ್ಟು 21 ಸ್ಪರ್ಧಿಗಳು ಭಾಗಿಯಾಗಿದ್ದರು.

“ಕಲರ್ಸ್’ ತಂಡದ ನೃತ್ಯ ಕಾರ್ಯಕ್ರಮಕ್ಕೆ ರಂಗು ಹೆಚ್ಚಿಸಿತು. ಈ ನಡುವೆ ಗೌನ್ ಸುತ್ತಿಗೆ ಸಿದ್ಧತೆ ನಡೆಸಿದ ಸ್ಪರ್ಧಿಗಳು ಮತ್ತೊಮ್ಮೆ ರ್ಯಾಂಪ್ ವಾಕ್ ನಡೆಸಿದರು.

ಮಿಸೆಸ್ ಸೌತ್ ಇಂಡಿಯಾ ಆಮ್ ಪವರ್ ಫುಲ್ ಕಾರ್ಯಕ್ರಮ ಕೇವಲ ಸೌಂದರ್ಯದ ಆಧಾರದ ಮೇಲೆ ಸ್ಪರ್ಧಿಗಳನ್ನು ಆಯ್ಕೆ ಮಾಡುವುದಿಲ್ಲ. ಸ್ಪರ್ಧಿಗಳು ಪ್ರಶ್ನೋತ್ತರ ಸುತ್ತಿನಲ್ಲೂ ಉತ್ಸಾಹದಿಂದ ಪಾಲ್ಗೊಂಡರು.

ತೆಳ್ಳಗೆ ಬೆಳ್ಳಗೆ ಇದ್ದರಷ್ಟೇ ಅದು ಸೌಂದರ್ಯ ಎನ್ನುವ ಮಾತು ಇವತ್ತಿಗೆ ಅನ್ವಯಿಸುವುದಿಲ್ಲ. ಮಿಸೆಸ್ ಕರ್ವಿ ಕರ್ನಾಟಕ ಸುತ್ತಿನಲ್ಲಿ ರೂಪದರ್ಶಿಯರು ಈ ಎಲ್ಲಾ ಸಿದ್ಧಮಾದರಿಯನ್ನು ಮೀರಿದಂತೆ ತಮ್ಮ ರ್ಯಾಂಪ್ ವಾಕ್‍ನಲ್ಲಿ ಭಾಗಿಯಾದರು.

ಮಿಸೆಸ್ ಕರ್ನಾಟಕ, ಮಿಸೆಸ್ ತಮಿಳುನಾಡು, ಮಿಸೆಸ್ ಆಂಧ್ರಪ್ರದೇಶ ಸುತ್ತಿನಲ್ಲಿ ಬೆಡಗಿಯರು ತಮ್ಮ ತಮ್ಮ ರಾಜ್ಯವನ್ನು ಪ್ರತಿನಿಧಿಸಿದರು.

ಕಾರ್ಯಕ್ರಮವನ್ನು ಚೆಂದಗಾಣಿಸಲು ಓಡಾಡಿದ ಆಯೋಜಕಿ ನಂದಿನಿ ನಾಗರಾಜ್ ಸ್ಪರ್ಧೆಯ ಕುರಿತು ಮಾತನಾಡಿದರು. “ಇಲ್ಲಿ ಗೆದ್ದವರು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗುತ್ತಾರೆ. ಗೋವಾದಲ್ಲಿ ನಡೆಯುವ ಮಿಸೆಸ್ ಇಂಡಿಯಾ ಆಮ್ ಪವರ್‍ಫುಲ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಾರೆ. ಅಲ್ಲಿ ಆಯ್ಕೆಯಾದ ಸ್ಪರ್ಧಿಗಳು ಸಿಂಗಪುರದಲ್ಲಿ ನಡೆಯುವ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ಜಯರಾಮ್ ಕಾರ್ತಿಕ್(ಜೆಕೆ), “ಸೌಂದರ್ಯವನ್ನು ಅಳೆಯುವುದಕ್ಕೆ ಯಾವುದೇ ಸಾಧನ ಇಲ್ಲ. ಆದರೆ ಮಿಸೆಸ್ ಸೌತ್ ಇಂಡಿಯಾದಂತಹ ಸ್ಪರ್ಧೆಗಳು ಬದುಕಿಗೆ ಭರವಸೆ ಮೂಡಿಸುತ್ತವೆ. ಉತ್ಸಾಹ ತುಂಬುತ್ತವೆ. ಇಲ್ಲಿ ಭಾಗವಹಿಸಿ ನನಗೆ ಖುಷಿಯಾಯಿತು’ ಎಂದು ಹೇಳಿದರು.

ವಿಜೇತರಾದವರಿಗೆ ನಂದಿನಿ ನಾಗರಾಜ್ ಅವರು ಕ್ರೌನ್ ತೊಡಿಸಿದರು. ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಸಪ್ನಾ ಸಾವಂತ್, ಶ್ವೇತಾ ನಿರಂಜನ್, ಸವಿತಾ ದೇವರಾಜ್ ರೆಡ್ಡಿ, ಗಾಯತ್ರಿ ಮೊಹಂತಿ ಭಾಗವಹಿಸಿದ್ದರು.

ನೋಬಲ್ ಎಜುಕೇಶನ್‍ಗೆ ರಾಷ್ಟ್ರ ಪ್ರಶಸ್ತಿಯ ಗರಿ

ಬೆಂಗಳೂರು: ಖ್ಯಾತ ಮನೋಶಾಸ್ತ್ರಜ್ಞೆ, ಡಾ. ರೂಪಾ ಲಕ್ಷ್ಮೀಪತಿ ರಾವ್ ಅವರ ನೋಬಲ್ ಇನ್ಟಿಟ್ಯೂಟ್ ಆಫ್ ಎಜುಕೇಶನ್ ಸೊಸೈಟಿಗೆ ರಾಷ್ಟ್ರ ಪ್ರಶಸ್ತಿಯ ಗೌರವ ಲಭಿಸಿದೆ.
ಎಂಎಸ್‍ಎಂಇ ಹಾಗೂ ನವೋದ್ಯಮ ಶೃಂಗ ಸಭೆಯ ಎರಡನೇ ಆವೃತ್ತಿಯಲ್ಲಿ, ದೇಶದ ಅತ್ಯಂತ ನಂಬಿಕಸ್ಥ ಶಿಕ್ಷಣ ಬ್ರಾಂಡ್ ಎಂಬ ಪ್ರಶಸ್ತಿಗೆ ಸಂಸ್ಥೆ ಪಾತ್ರವಾಗಿದೆ. ಟೈಮ್‍ಟುಲೀಪ್ ಸಮಾರಂಭದಲ್ಲಿ ಈ ಪ್ರಶಸ್ತಿ ಘೋಷಿಸಲಾಯಿತು. ಈ ಪ್ರಶಸ್ತಿಗೆ ಭಾಜನರಾಗಿರುವ ರಾಜ್ಯದ ಮೊದಲ ಸಂಸ್ಥೆ ಇದಾಗಿದೆ.

ಡಾ. ರೂಪಾ ಅವರ ಅನೂಹ್ಯ ಬೇಸಿಗೆ ಶಿಬಿರ ಈ ಹಿಂದೆ ವಿಶ್ವ ದಾಖಲೆಗಳ ಪಟ್ಟಿಯಲ್ಲಿ ಸೇರಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

2003ರಲ್ಲಿ ಆರಂಭವಾದ ನೋಬಲ್ ಎಜುಕೇಶನ್ ಸಂಸ್ಥೆ, ನಮ್ಮ ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದು. ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ವಿಶ್ವ ವಿದ್ಯಾನಿಲಯಗಳೊಂದಿಗೆ, ದೂರ ಶಿಕ್ಷಣ, ನಾನಾ ಸರ್ಟಿಫಿಕೇಟ್ ಕೋರ್ಸ್ ನೀಡುವ ಸಂಬಂಧ ಸಂಸ್ಥೆ ಒಪ್ಪಂದ ಮಾಡಿಕೊಂಡಿದ್ದು, ಸಾವಿರಾರು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡಿದ್ದಾರೆ.

ರೂಪಾ ಅವರು ಮಕ್ಕಳ ತಜ್ಞೆಯಾಗಿ, ಕೌಶಲ ತರಬೇತು ಸಂಪನ್ಮೂಲ ವ್ಯಕ್ತಿಯಾಗಿ, ರಾಜ್ಯ-ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾರೆ.

ಡಿಕೆ ಶಿವಕುಮಾರ್ ಗೆ ಸಿಬಿಐ ಶಾಕ್; ಏಕಕಾಲಕ್ಕೆ 14 ಕಡೆ ದಾಳಿ

ಬೆಂಗಳೂರು: ಉಪ ಚುನಾವಣೆ ಘೋಷಣೆ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಸಿಬಿಐ ಶಾಕ್ ನೀಡಿದ್ದು ಡಿಕೆ ಶಿವಕುಮಾರ್ ಸಹೋದರಿ ಸೇರಿದ 14 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದೆ.

ಸದಾಶಿವನಗರದಲ್ಲಿರುವ ಡಿಕೆ ಶಿವಕುಮಾರ್ ಮತ್ತು ಅವರ ಸಹೋದರ ಬೆಂಗಳೂರು ಗ್ರಾಮಾಂತರ ಸಂಸತ್ ಸದಸ್ಯ ಡಿ.ಡಿ ಸುರೇಶ್ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ ಮಾಡಿಕೊಂಡು ಸೋಲಾರ್ ಪ್ರಾಜೆಕ್ಟ್ ನಲ್ಲಿ ಕಿಕ್ ಬ್ಯಾಕ್ ಪಡೆದುಕೊಂಡ ಆರೋಪದ ಮೇಲೆ ಈ ದಾಳಿ ನಡೆಸಲಾಗಿದೆ ಎನ್ನಲಾಗುತ್ತಿದೆ.

ಈ ಹಿಂದೆ ಸಿಬಿಐ ತನಖೆ ಪ್ರಶ್ನಿಸಿದ್ದ ಡಿಕೆ ಶಿವಕುಮಾರ್ ಅರ್ಜಿಯನ್ನು ವಜಾಗೊಳಿಸಿದ್ದ ಹೈಕೋರ್ಟ್ ತನಿಖೆಗೆ ಅನುಮತಿ ನೀಡಿತ್ತು.

ಉಪ ಚುನಾವಣಾ ಸಮಯದಲ್ಲೇ ದಾಳಿ ನಡೆಸಿರುವುದಕ್ಕೆ ವಿಪಕ್ಷ ಕಾಂಗ್ರೆಸ್ ಕಿಡಿಕಾರಿದೆ, ಅಧಿಕಾರ ದುರ್ಬಳಕೆ ಮಾಡಿಕೊಂಡು ಸಿಬಿಐ ದಾಳಿ ನಡೆಸಲಾಗಿದೆ ಎಂದು ಬಿಜೆಪಿ ವಿರುದ್ಧ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ.

ಹೈಕಮಾಂಡ್ ನಿಂದ ಅಭ್ಯರ್ಥಿಗಳ ತೀರ್ಮಾನ: ಡಿ.ಕೆ ಶಿವಕುಮಾರ್

ಬೆಂಗಳೂರು: ಮುಂಬರುವ ಶಿರಾ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಾಗೂ ವಿಧಾನ ಪರಿಷತ್ ಚುನಾವಣೆಗಳಿಗೆ ಅಭ್ಯರ್ಥಿಗಳ ಶಿಫಾರಸ್ಸು ಪಟ್ಟಿಯನ್ನು ಹೈಕಮಾಂಡ್ ಗೆ ನಾವು ಕಳುಹಿಸಿಕೊಡುತ್ತೇವೆ. ಅಂತಿಮ ತೀರ್ಮಾನವನ್ನು ರಾಷ್ಟ್ರೀಯ ನಾಯಕರು ತೆಗೆದುಕೊಳ್ಳುತ್ತಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಜೆಡಿಎಸ್ ಮುಖಂಡ ಹನುಮಂತರಾಯಪ್ಪ ಅವರ ಪುತ್ರಿ ಕುಸುಮಾ ಎಚ್ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ನೂರಕ್ಕೂ ಹೆಚ್ಚು ಸ್ಥಳೀಯ ನಾಯಕರನ್ನು ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಪಕ್ಷಕ್ಕೆ ಸೇರಿಸಿಕೊಂಡ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ಹೇಳಿದ್ದಿಷ್ಟು:

‘ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾರಾಗಬೇಕು ಎಂದು ಶಿಫಾರಸ್ಸು ಮಾಡಲು ಈಗಾಗಲೇ ಅನೇಕ ಚರ್ಚೆ ಮಾಡಿದ್ದೇವೆ. ಇಂದು ದೆಹಲಿಗೆ ಅಭ್ಯರ್ಥಿಗಳ ಹೆಸರನ್ನು ಶಿಫಾರಸ್ಸು ಮಾಡಲಾಗುವುದು.

ಶಿರಾ ಕ್ಷೇತ್ರದಲ್ಲಿ ನಮ್ಮ ಹಿರಿಯ ನಾಯಕ ಜಯಚಂದ್ರ ಅವರು ಕಳೆದ ಚುನಾವಣೆಯಲ್ಲಿ 10 ಸಾವಿರ ಮತಗಳ ಅಂತರದಲ್ಲಿ ಸೊತ್ತಿದ್ದರು. ಈ ಬಾರಿ ಇಡೀ ಜಿಲ್ಲೆ ಒಟ್ಟಾಗಿ ಪಕ್ಷದ ಗೆಲುವಿಗೆ ಶ್ರಮಿಸಲಿದೆ. ಶಿರಾ ಕ್ಷೇತ್ರದ ಪ್ರಮುಖ ನಾಯಕರು ನಮ್ಮ ಸಿದ್ಧಾಂತ ಹಾಗೂ ನಾಯಕತ್ವ ನಂಬಿ ಪಕ್ಷಕ್ಕೆ ಆಗಮಿಸಿದ್ದಾರೆ. ಈ ರಾಜ್ಯದಲ್ಲಿನ ಆಡಳಿತ, ತಮ್ಮ ಕ್ಷೇತ್ರದಲ್ಲಿನ ಅಹಿತಕರ ಘಟನೆಗಳನ್ನು ಕಂಡು ಮುಂದಿನ ದಿನದಲ್ಲಿ ರಾಜ್ಯಕ್ಕೆ ಕಾಂಗ್ರೆಸ್ ಅನಿವಾರ್ಯ ಎಂದು ಅರಿತು 100ಕ್ಕೂ ಹೆಚ್ಚು ಶಿರಾದ ವಕೀಲರು ಹಾಗೂ ನಾಯಕರು ಪಕ್ಷಕ್ಕೆ ಸೇರಿದ್ದಾರೆ.

ಇವರ ಸಾವಿರಾರು ಮಂದಿ ಹಿಂಬಾಲಕರು ಪಕ್ಷಕ್ಕೆ ಸೇರಲು ಮುಂದಾಗಿದ್ದಾರೆ. ಎಲ್ಲರನ್ನೂ ಕಾಂಗ್ರೆಸ್ ಕಚೇರಿಗೆ ಕರೆತರಲು ಆಗದ ಕಾರಣ 100 ಮಂದಿ ಮಾತ್ರ ಇಲ್ಲಿಗೆ ಬಂದು ಪಕ್ಷಕ್ಕೆ ಸೇರಿದ್ದಾರೆ.

ಕಾಂಗ್ರೆಸ್ ಸೇರಲು ಯುವಕರ ಒಲವು:

ಕಾಂಗ್ರೆಸ್ ಸೇರಲು ಬಹಳ ಸಂಖ್ಯೆಯಲ್ಲಿ ಯುವಕರು ಉತ್ಸಾಹ ತೋರುತ್ತಿದ್ದಾರೆ. ನಾನು ಶ್ರೀಮತಿ ಸೋನಿಯಾ ಗಾಂಧಿ ಅವರ ಪರವಾಗಿ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರ ಪರವಾಗಿ ಶಿರಾ ಮುಖಂಡರಿಗೆ ಸ್ವಾಗತ ಕೋರುತ್ತೇನೆ. ಇವರ ಆಗಮನ ಪಕ್ಷಕ್ಕೆ ಜಯ ತಂದುಕೊಡಲಿದೆ ಎಂಬ ವಿಶ್ವಾಸ ಇದೆ. ಇವರು ಪ್ರತಿ ಹಳ್ಳಿ, ಬೂತ್ ಮಟ್ಟದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ನಡೆಸುವ ನಂಬಿಕೆ ಇದೆ.

ಇಲ್ಲಿ ಹೊಸಬರು ಹಳಬರು ಎಂದು ನೋಡದೇ ಒಂದು ಕುಟುಂಬವಾಗಿ ಕೆಲಸ ಮಾಡಬೇಕಿದೆ. ಇಡೀ ರಾಜ್ಯ ಶಿರಾ ಕ್ಷೇತ್ರದ ಮತದಾರ ಯಾವ ತೀರ್ಪು ನೀಡಲಿದ್ದಾರೆ ಎಂದು ಕಾದುಕುಳಿತಿದೆ. ನಮ್ಮ ಸಿದ್ಧಾಂತ ನಂಬಿ ಷರತ್ತು ಇಲ್ಲದೆ ಬರುವವರನ್ನು ಸೇರಿಸಿಕೊಳ್ಳುವ ಬಗ್ಗೆ ಸಮಿತಿಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು.

ಯಾರು ಎಷ್ಟೇ ಕುತಂತ್ರ ಮಾಡಿದರೂ ಗೆಲುವು ನಮ್ಮದೇ:

ಸರ್ಕಾರ ಇದೆ ಹೀಗಾಗಿ ಉಪಚುನಾವಣೆ ಗೆಲ್ಲುತ್ತೇವೆ ಎಂದು ಹೇಳುತ್ತಿರುವ ಸಮಯದಲ್ಲಿ ನೂರಾರು ಸ್ಥಳೀಯ ನಾಯಕರು ತಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತಿವೆ ಎಂದರೆ ಇದು ಪ್ರಮುಖ ಬೆಳವಣಿಗೆಯಾಗಿದೆ.

ಈ ಕ್ಷೇತ್ರದಲ್ಲಿ ಯಾವುದೇ ಪಕ್ಷ ಯಾವುದೇ ಕುತಂತ್ರ ಮಾಡಿದರೂ ಇಲ್ಲಿ ಜಯ ನಮ್ಮದು. ಈ ಚುನಾವಣೆ ಟಿ.ಬಿ ಜಯಚಂದ್ರ, ಡಾ.ಜಿ ಪರಮೇಶ್ವರ್, ರಾಜಣ್ಣ ಹಾಗೂ ಚಂದ್ರಪ್ಪ ಅವರ ನೇತೃತ್ವದಲ್ಲಿ ನಡೆಯಲಿದೆ. ನಾನು, ಸಿದ್ದರಾಮಯ್ಯನವರು ಹಾಗೂ ಪಕ್ಷದ ಇತರ ಹಿರಿಯ ನಾಯಕರು ಇವರ ಜತೆ ಜವಾಬ್ದಾರಿ ಹೊರುತ್ತೇವೆ.