ಐಎಎಸ್ ಅಧಿಕಾರಿ ಡಿಕೆ ರವಿ ಪತ್ನಿ ಕುಸುಮಾ ಕಾಂಗ್ರೆಸ್ ಮೂಲಕ ರಾಜಕೀಯಕ್ಕೆ ಎಂಟ್ರಿ

ಬೆಂಗಳೂರು: ಐಎಎಸ್ ಅಧಿಕಾರಿ ದಿ.ಡಿ.ಕೆ ರವಿ ಪತ್ನಿ ಕುಸುಮಾ ಎಚ್ ಕಾಂಗ್ರೆಸ್ ಸದಸ್ಯತ್ವ ಪಡೆಯುವ ಮೂಲಕ ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡಿದ್ದಾರೆ.

ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಕುಸುಮಾ ಕಾಂಗ್ರೆಸ್ ಪಕ್ಷದ ಸದಸ್ಯತ್ವವನ್ನು ಪಡೆದರು.

ಡಿ.ಕೆ. ಶಿವಕುಮಾರ್ ಅವರು ಕುಸುಮಾ ಅವರಿಗೆ ಕಾಂಗ್ರೆಸ್ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು. ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ, ಕಾರ್ಯಾಧ್ಯಕ್ಷ ಸಲೀಂ ಅಹಮದ್, ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸದಸ್ಯ ಡಿ.ಕೆ. ಸುರೇಶ್, ಬೆಂಗಳೂರು ಉತ್ತರ ಜಿಲ್ಲೆ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ್, ಕುಸುಮಾ ಅವರ ತಂದೆ ಹನುಮಂತರಾಯಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ವಿಶ್ವ ವಿಖ್ಯಾತ ದಸರಾಗೆ ಭರ್ಜರಿ ತಯಾರಿ

ಮೈಸೂರು: ವಿಶ್ವ ವಿಖ್ಯಾತ ದಸರಾ ಮಹೋತ್ಸವಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಒಂದ್ಕಡೆ ಜಂಬೂ ಸವಾರಿ ಮೆರವಣಿಗೆಯ ವೇಳೆ ಕುಶಾಲ ತೋಪು ಸಿಡಿಸುವ ಪಿರಂಗಿಗಳನ್ನು ಸನ್ನಧ್ಧಗೊಳಿಸುವ ಕಾರ್ಯ ಆರಂಭಿಸಲಾಗಿದೆ. ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಹಾಕುವ ಗಾದಿ ಸೇರಿದಂತೆ ಹಲವು ವಸ್ತುಗಳನ್ನು ಸಿದ್ಧಗೊಳಿಸಲಾಗಿದೆ. ಮತ್ತೊಂದ್ಕಡೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಆಗಮನಕ್ಕೆ ಸಾಂಸ್ಕ್ರತಿಕ ನಗರಿ ಮೈಸೂರಿನಲ್ಲಿ ಭರದ ಸಿದ್ಧತೆ ನಡೆಯುತ್ತಿದೆ.

ಮೈಸೂರು ಅರಮನೆಯಲ್ಲಿ ಏಳು ಪಿರಂಗಿ ಗಾಡಿಗಳನ್ನು ಸ್ವಚ್ಚಗೊಳಿಸುವ ಮೂಲಕ ಕುಶಾಲ ತೋಪು ಸಿಡಿಸುವ ಕಾರ್ಯಕ್ಕೆ ಸಿದ್ಧಗೊಳಿಸಲಾಯಿತು. ದಸರಾ ಗಜಪಡೆ ಮತ್ತು ಅಶ್ವಾರೋಹಿ ಪಡೆಗಳಿಗೆ ಕುಶಾಲತೋಪು ಸಿಡಿಸುವ ಶಬ್ಧ ಮನವರಿಕೆ ಮಾಡಿಸಿ ಅವುಗಳು ಹೆದರದಂತೆ ಸನ್ನದ್ಧಗೊಳಿಸಲಾಗುತ್ತದೆ.

ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಹಾಕುವ ಗಾದಿ ಸೇರಿದಂತೆ ಹಲವು ವಸ್ತುಗಳನ್ನು ಸಿದ್ಧಗೊಳಿಸಲಾಗಿದೆ. ಗಾದಿ, ಜೂಲ, ಆನೆ ದಂತಕ್ಕೆ ಹಾಕುವ ಸಿಂಗೋಟಿ, ಆನೆಗಳ ಹಣೆ ಮೇಲೆ ನೇತು ಹಾಕುವ ಹಣೆಪಟ್ಟಿ, ಮಾವುತರು ಮತ್ತು ಕಾವಾಡಿಗಳಿಗೆ ಸಮವಸ್ತುಗಳನ್ನು ಸಿದ್ಧಗೊಳಿಸಲಾಗಿದೆ.

ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಆಗಮನಕ್ಕೆ ಸಾಂಸ್ಕ್ರತಿಕ ನಗರಿ ಮೈಸೂರಿನಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ನಾಳೆ ಮೈಸೂರಿನ ಅರಣ್ಯ ಭವನಕ್ಕೆ ಬರುವ ಆನೆಗಳನ್ನು ಶುಕ್ರವಾರ ಮೈಸೂರು ಅರಮನೆಯ ಜಯ ಮಾರ್ತಾಂಡ ದ್ವಾರದಲ್ಲಿ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಗುವುದು. ವಿಕ್ರಮ, ಗೋಪಿ, ವಿಜಯ ಮತ್ತು ಕಾವೇರಿ ಆನೆಗಳು ಕೂಡ ನಾಳೆ ಮೈಸೂರಿಗೆ ಆಗಮಿಸಲಿವೆ.

ಬಾಬ್ರಿಯಲ್ಲಿ ಗೆದ್ದ ಬಿಜೆಪಿ ಭೀಷ್ಮಾ!

ಲಖನೌ: 1992ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ 32 ಜನ ಆರೋಪಿಗಳಿಗೆ ಸಿಬಿಐ ವಿಶೇಷ ನ್ಯಾಯಾಲಯ ಕ್ಲೀನ್ ಚೀಟ್ ಕೊಟ್ಟಿದೆ. ಈ ಮೂಲಕ 28 ವರ್ಷಗಳ ಸುದೀರ್ಘ ಕಾಲದ ಕಾನೂನು ಹೋರಾಟಕ್ಕೆ ಇಂದು ತಾರ್ಕಿಕ ಅಂತ್ಯ ಸಿಕ್ಕಿದೆ.

1992ರ ಡಿಸೆಂಬರ್ 6 ರಂದು ನಡೆದ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ನೋದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಲ್ ಕೆ ಯಾದವ್ ಅವರು ಮಹತ್ವದ ತೀರ್ಪು ನೀಡಿದ್ದಾರೆ. ಬಾಬ್ರೀ ಮಸೀದಿ ಧ್ವಂಸ ಪ್ರಕರಣದಲ್ಲಿ ಸಿಲುಕಿದ್ದ, ಮಾಜಿ ಉಪ ಪ್ರಧಾನಿ ಎಲ್. ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಕಲ್ಯಾಣ್ ಸಿಂಗ್ ಉಮಾಭಾರತಿ ಸೇರಿದಂತೆ 32 ಜನ ಆರೋಪಿಗಳು ನಿರ್ದೋಷಿ ಎಂದು ಸಿಬಿಐ ಕೋರ್ಟ್ ಕ್ಲೀನ್ ಚೀಟ್ ಕೊಟ್ಟಿದೆ.

ವಿಶ್ವ ಹಿಂದು ಪರೀಷತ್ ನೇತೃತ್ವದಲ್ಲಿ ಎಲ್.ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಕಲ್ಯಾಣ್ ಸಿಂಗ್ ಉಮಾಭಾರತಿ ಸೇರಿದಂತೆ 48 ಜನ ಸಂಚು ರೂಪಿಸಿ ಬಾಬ್ರಿ ಮಸೀದಿ ವಿಚಾರಣೆ ಹಂತದಲ್ಲಿ ಇರುವಾಗ್ಲೇ ಧ್ವಂಸಗಗೊಳಿಸಿದ್ರು ಎಂದು ದೂರು ದಾಖಲಾಗಿತ್ತು. ಅದರಂತೆ ಸುಮಾರು 28 ವರ್ಷಗಳ ಕಾಲ ನ್ಯಾಯಾಲದಲ್ಲಿದ್ದ ಕೇಸ್ ಇಂದು ಅಂತ್ಯ ಕಂಡಿದೆ.

ಖುಲಾಸೆಗೆ ಪ್ರಮುಖ ಕಾರಣಗಳು
1. 32 ಆರೋಪಿಗಳ ವಿರುದ್ಧ ಬಲವಾದ ಸಾಕ್ಷ್ಯಗಳಿಲ್ಲ
2. ಬಾಬ್ರಿ ಮಸೀದಿ ಧ್ವಂಸ ಆಕಸ್ಮಿಕ ಘಟನೆ
3 .ಬಾಬ್ರಿ ಮಸೀದಿ ಧ್ವಂಸ ಪೂರ್ವ ನಿಯೋಜಿತ ಘಟನೆ ಅಲ್ಲ
4 .ಬಾಬ್ರಿ ಮಸೀದಿ ಧ್ವಂಸಕ್ಕೆ ಯಾರು ಪ್ರಚೋದನೆ ಕೊಟ್ಟಿಲ್ಲ
5 .ಬಾಬ್ರಿ ಮಸೀದಿ ಧ್ವಂಸ ಆ ಕ್ಷಣದ ದಿಢೀರ್ ಘಟನೆ
6. ಆರೋಪಿಗಳು ಗುಂಪನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದರು
7. ಫೋಟೋ ಆಧಾರಿಸಿ ಆರೋಪಿಗಳೆಂದು ಹೇಳಲು ಅಸಾಧ್ಯ
8. ಆಕಸ್ಮಿಕವಾಗಿ ಸಮಾಜಘಾತುಕ ಶಕ್ತಿಗಳು ಮಸೀದಿ ಕೆಡವಿದ್ರು
9. ವಿಡಿಯೋ ಸಾಕ್ಷ್ಯ ತಿರುಚಲಾಗಿದೆ
10. ವಿಡಿಯೋದ ನೆಗೆಟೀವ್ ದಾಖಲೆಯನ್ನ ಸಿಬಿಐ ಸಲ್ಲಿಸಿಲ್ಲ

ಬಾಬ್ರಿ ಮಸೀದಿ ಧ್ವಂಸ ಪ್ರಕರಣ ತೀರ್ಪು ಬಿಜೆಪಿ ವಯದಲ್ಲಿ ಖುಷಿ ಕೊಟ್ಟಿದೆ. ಅದ್ರಲ್ಲೂ ಬಿಜಿಪಿ ಹಿರಿಯ ರಾಜಕಾರಣಿ ಬಿಜಿಪಿ ಭಿಷ್ಮ ಅಂತಲೇ ಕರೆಸಿಕೊಳ್ಳೋ ಲಾಲ್ ಕೃಷ್ಣ ಅಡ್ವಾನಿಯವರ ಪಾಲಿಗೆ ಈ ತೀರ್ಪು ಅಂತ್ಯಂತ ಪ್ರಮುಖವಾಗಿದ್ದು. ಇದೀಗ ತೀರ್ಪು ಅವ್ರ ಪರವಾಗಿ ಬಂದಿರೊದಿಕ್ಕೆ ಬಿಜಿಪಿ ಇದನ್ನ ಐತಿಹಾಸಿಕ ಜಯ ಎಂದು ಬಣ್ಣಿಸಿದೆ.

ಸಿಎಂ ಯಡಿಯೂರಪ್ಪ ಕುಟುಂಬದಿಂದ ಭ್ರಷ್ಟಾಚಾರ ನಡೆದ ಆರೋಪ, ಸಿಎಂ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ

ಬೆಂಗಳೂರು, ಸೆಪ್ಟೆಂಬರ್ 23: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಪಾರ್ಟ್ಮೆಂಟ್ ಕಾಮಗಾರಿಯಲ್ಲಿ ಬಿಡಿಎ ಆಯುಕ್ತರ ಮೂಲಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಕುಟುಂಬ ಸದಸ್ಯರು ಲಂಚ ಪಡೆದಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಹಾಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರು ಅಥವಾ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ನೇತೃತ್ವದ ಸಮಿತಿ ತನಿಖೆ ನಡೆಸಬೇಕು. ತನಿಖೆ ನಡೆಯುವವರೆಗೂ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಯಡಿಯೂರಪ್ಪನವರು ಈ ಹಿಂದೆ ಚೆಕ್ ಮೂಲಕ ಲಂಚ ಪಡೆದಿದ್ದರು. ಈ ಬಾರಿ ಆರ್ ಟಿಜಿಎಸ್ ಮೂಲಕ ಪಡೆದಿದ್ದಾರೆ. ಇವರಿಗೆ ಭ್ರಷ್ಟಾಚಾರ ಮಾಡಲು ಎಷ್ಟು ಆತುರವಿದೆ ಎಂದರೆ ಬ್ಯಾಂಕ್ ವ್ಯವಹಾರದ ಮೂಲಕವೇ ಲಂಚ ಪಡೆಯುತ್ತಿದ್ದಾರೆ. ವಿಜಯೇಂದ್ರ ಅವರು ತಮಗೆ ಬಿಡಿಎ ಆಯುಕ್ತ ಹಣ ನೀಡಿಲ್ಲ ಎಂದು ವರ್ಗಾವಣೆ ಮಾಡಲು ಶಿಫಾರಸ್ಸು ಮಾಡಿರುವುದು ಆಡಿಯೋದಲ್ಲಿ ಸ್ಪಷ್ಟವಾಗಿದೆ. ಇಷ್ಟೆಲ್ಲಾ ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ಇದ್ದರೂ ಅವರ ವಿರುದ್ಧ ಕ್ರಮ ಏಕೆ ಕೈಗೊಂಡಿಲ್ಲ.

ಪ್ರಧಾನಿ ನರೇಂದ್ರ ಮೋದಿ ಅವರು ಹೋದ ಕಡೆಯಲ್ಲೆಲ್ಲಾ ‘ನಾನು ಲಂಚ ತಿನ್ನುವುದಿಲ್ಲ, ಬೇರೆಯವರು ತಿನ್ನಲು ಬಿಡುವುದಿಲ್ಲ’ ಎಂದು ಹೇಳುತ್ತಾರೆ. ಈ ಲಂಚದ ಆರೋಪದಲ್ಲಿ ಪ್ರಮುಖ ಆರೋಪಿಯಾಗಿರುವ ವಿಜಯೇಂದ್ರ ಅವರನ್ನೇ ಮೋದಿ ಅವರು ರಾಜ್ಯ ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ಪಕ್ಷದ ಉಪಾಧ್ಯಕ್ಷರೇ ಭ್ರಷ್ಟಾಚಾರದಲ್ಲಿ ತೊಡಗಿರುವಾಗ, ಮುಖ್ಯಮಂತ್ರಿ ಸ್ಥಾನದಲ್ಲಿದ್ದು ಯಡಿಯೂರಪ್ಪನವರು ಭ್ರಷ್ಟಾಚಾರ ಮಾಡಿದವರಿಗೆ ರಕ್ಷಣೆ ನೀಡಿರುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಮೌನವಾಗಿದ್ದಾರೆ.

ಈ ಪ್ರಕರಣ ತನಿಖೆಯಾಗುವವರೆಗೂ ಯಡಿಯೂರಪ್ಪನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೆಕು. ಇಲ್ಲವೇ ಪ್ರಧಾನಿ ನರೇಂದ್ರ ಮೋದಿ ಅವರೇ ಅವರನ್ನು ಈ ಸ್ಥಾನದಿಂದ ಕಿತ್ತುಹಾಕಬೇಕು. ಇದನ್ನು ಮಾಡದಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳುವುದೇ ಒಂದು ಮಾಡುವುದೇ ಒಂದು ಎಂಬುದು ಸಾಬೀತಾಗುತ್ತದೆ ಎಂದು ಟೀಕೆ ಮಾಡಿದರು.

ಪತ್ರಿಕಾ ಹೇಳಿಕೆ ಹೀಗಿದೆ

ಮಹಾತ್ಮ ಗಾಂಧೀಜಿ ಅವರ ಪ್ರಕಾರ ‘ದುರಾಡಳಿತ ಹಾಗೂ ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.

ಭ್ರಷ್ಟಾಚಾರ ಆರೋಪ ವಿಚಾರದಲ್ಲಿ ಬಿ.ಎಸ್ ಯಡಿಯೂರಪ್ಪ ಅವರ ಸರ್ಕಾರ ಜಾಣ ಕಿವುಡುತನ ತೋರುತ್ತಿದೆ.

ಈ ಹಿಂದೊಮ್ಮೆ ಬಿಜೆಪಿಯ ಸುದ್ದಿಗೋಷ್ಠಿಯಲ್ಲಿ ಎಲ್.ಕೆ ಆಡ್ವಾಣಿ ಅವರು ಬಿ.ಎಸ್ ಯಡಿಯೂರಪ್ಪ ಅವರ ಮೇಲೆ ಮಾಡಿದ ಆರೋಪ ಎಲ್ಲರಿಗೂ ಮತ್ತೆ ನೆನಪಿಗೆ ಬರುತ್ತಿದೆ. ಆಗ ಆಡ್ವಾಣಿ ಅವರು, ‘ಬಿಜೆಪಿ ಬಿ.ಎಸ್ ಯಡಿಯೂರಪ್ಪ ಅವರನ್ನು ಪಕ್ಷದಿಂದ ಹೊರಹಾಕಿಲ್ಲ. ಅವರೇ ಪಕ್ಷ ಬಿಟ್ಟು ಹೋಗಿ, ಸ್ವಂತ ಕೆಜೆಪಿ ಪಕ್ಷ ಸ್ಥಾಪಿಸಿದ್ದಾರೆ. ಒಂದುವೇಳೆ ಬಿ.ಎಸ್ ಯಡಿಯೂರಪ್ಪ ಅವರ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಪಕ್ಷ ಕಠಿಣ ಕ್ರಮ ಕೈಗೊಂಡಿದ್ದಾರೆ ಪರಿಸ್ಥಿತಿ ಬೇರೆ ರೀತಿಯಲ್ಲಿರುತ್ತಿತ್ತು’ ಎಂದು ಹೇಳಿದ್ದರು.

ಬಿ.ಎಸ್ ಯಡಿಯೂರಪ್ಪ, ಅವರ ಪುತ್ರ, ಅವರ ಮೊಮ್ಮಗನ, ಅವರ ಅಳಿಯನ ವಿರುದ್ಧ ಕೇಳಿಬರುತ್ತಿರುವ ಭ್ರಷ್ಟಾಚಾರದ ಆರೋಪ ಇಡೀ ರಾಜ್ಯ ಹಾಗೂ ದೇಶಕ್ಕೆ ಆಘಾತ ತಂದಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ 666.22 ಕೋಟಿ ರೂಪಾಯಿ ಮೊತ್ತದ ಅಪಾರ್ಟ್ಮೆಂಟ್ ನಿರ್ಮಾಣದ ಕಾಮಗಾರಿಯಲ್ಲಿ ಮುಖ್ಯಮಂತ್ರಿಗಳ ಕುಟುಂಬ ಸದಸ್ಯರು ಲಂಚ ಪಡೆಜಿರುವ ಆರೋಪ ಎಲ್ಲರನ್ನು ದಿಗ್ಭ್ರಮೆಗೊಳಿಸಿದೆ. ಈ ಆರೋಪದಲ್ಲಿ…

ಈ ಕಾಮಗಾರಿ ಗುತ್ತಿಗೆದಾರ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುಟುಂಬದ ಸದಸ್ಯರಿಗೆ ಲಂಚ ನೀಡಿರುವ ಆರೋಪ ಇದೆ. ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ಅವರ ದೂರವಾಣಿ ಕರೆ ಆಡಿಯೋ ತುಣುಕು, ಕೋಟ್ಯಂತರ ರೂಪಾಯಿಗಳನ್ನು RTGS ಮೂಲಕ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಗುತ್ತಿಗೆದಾರ ಹಾಗೂ ಯಡಿಯೂರಪ್ಪ ಅವರ ಮೊಮ್ಮಗ ಶಶಿಧರ್ ಮರಡಿ ಅವರ ವಾಟ್ಸಾಪ್ ಸಂದೇಶಗಳು, ಇವರ ಸಂದೇಶದಲ್ಲಿ ‘V’ ಎಂದು ವಿಜಯೇಂದ್ರ ಅವರ ಹೆಸರು ಉಲ್ಲೇಖ, ಈ ಹಣವನ್ನು ಕೋಲ್ಕತಾ ಮೂಲದ ಏಳು ಶೆಲ್ ಕಂಪನಿಗಳು ಹಾಗೂ ಶಶಿಧರ್ ಅವರ ಬೆಂಗಳೂರಿನ ಕಂಪನಿಗೆ ಅಕ್ರಮವಾಗಿ ಹಣ ರವಾನೆ ಮಾಡಿರುವ ವಿವರವಿದ್ದು, ಇದರಲ್ಲಿ ಮುಖ್ಯಮಂತ್ರಿಗಳ ಕಚೇರಿ ಹಾಗೂ ಗೃಹ ಕಚೇರಿ ಸಿಬ್ಬಂದಿ ಕೂಡ ಒಳಗೊಂಡಿರುವ ಮಾಹಿತಿ ಇದೆ.

ಈ ಎಲ್ಲ ಅಂಶಗಳು ಭ್ರಷ್ಟಾಚಾರದ ಆರೋಪ ನಿಜ ಎಂದು ಸಾರುತ್ತಿದ್ದು, ಸಿಎಂ ಯಡಿಯೂರಪ್ಪ ಅವರ ಗಮನಕ್ಕೆ ತರದೆ ಈ ಭ್ರಷ್ಟಾಚಾರದ ವ್ಯವಹಾರ ನಡೆಸಲು ಸಾಧ್ಯವಿಲ್ಲ ಎಂಬುದನ್ನು ಸಾಬೀತುಪಡಿಸುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ‘ನಾನು ಲಂಚ ತಿನ್ನುವುದಿಲ್ಲ, ಬೇರೆಯವರು ತಿನ್ನಲು ಬಿಡುವುದಿಲ್ಲ’ ಎಂದು ಹೇಳುತ್ತಲೇ ಇರುತ್ತಾರೆ. *ಈ ಹಿನ್ನೆಲೆಯಲ್ಲಿ ಬಿ.ಎಸ್ ಯಡಿಯೂರಪ್ಪ ಅವರ ಸರ್ಕಾರಕ್ಕೆ ಈ ಕೆಳಗಿನ ಪ್ರಶ್ನೆಗಳನ್ನು ಕೇಳಲು ಬಯಸುತ್ತೇವೆ…*

1.1 ಬಿಡಿಎ ಆಯುಕ್ತರು ಬಿ.ಎಸ್ ಯಡಿಯೂರಪ್ಪ ಅವರು ಹಾಗೂ ಅವರ ಪುತ್ರನ ಹೆಸರಲ್ಲಿ 12 ಕೋಟಿ ಲಂಚ ಪಡೆದಿದ್ದಾರೆ ಎಂಬ ಆರೋಪದ ಬಗ್ಗೆ ವಿಜಯೇಂದ್ರ ಅವರಿಗೆ ತಿಳಿದಿತ್ತು ಎಂಬುದು ನಿಜವಲ್ಲವೇ?

1.2 ಅಧಿಕಾರ ದುರ್ಬಳಕೆ ಮಾಡಿ ಲಂಚ ಪಡೆದ ಆರೋಪ ಎದುರಿಸುತ್ತಿರುವ ಗುತ್ತಿಗೆದಾರ ಹಾಗೂ ಬಿಡಿಎ ಆಯುಕ್ತರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಲ್ಲ ಏಕೆ?

1.3 ಮುಖ್ಯಮಂತ್ರಿ ಪುತ್ರ ವಿಜಯೇಂದ್ರ ಅವರು ಬಿಡಿಎ ಆಯುಕ್ತರ ವಿರುದ್ಧ ಎಫ್ ಐಆರ್ ದಾಖಲಿಸಿ ಎಂದು ಆಗ್ರಹಿಸದೇ, ಕೇವಲ ವರ್ಗಾವಣೆ ಮಾಡಿ ಎಂದು ಕೇಳುತ್ತಿರುವುದೇಕೆ?

1.4 ಗುತ್ತಿಗೆದಾರರು ಹಾಗೂ ಆಯುಕ್ತರ ವಿರುದ್ಧ ಎಫ್ ಐಆರ್ ದಾಖಲಿಸದೆ, ವಿಜಯೇಂದ್ರ ಅವರು ಕೇವಲ ಆಯುಕ್ತರಿಂದ ಗುತ್ತಿಗೆದಾರ ಹಣ ವಾಪಸ್ ಪಡೆಯುವಂತೆ ಸೂಚಿಸುತ್ತಿರುವುದೇಕೆ?

1.5 ಈ ಪ್ರಕರಣದಲ್ಲಿ ಭ್ರಷ್ಟಾಚಾರ ನಡೆದಿರುವುದು ಸ್ಪಷ್ಟವಾಗಿದ್ದರೂ ಯಡಿಯೂರಪ್ಪನವರು ಗುತ್ತಿಗೆ ರದ್ದು ಮಾಡದೇ, ಎಫ್ ಐಆರ್ ದಾಖಲಿಸಲು ಯಾಕೆ ಆದೇಶ ನೀಡುತ್ತಿಲ್ಲ?

2.1 ಬಿಡುಗಡೆಯಾಗಿರುವ ವಾಟ್ಸಾಪ್ ಸಂದೇಶದ ಪ್ರಕಾರ ಗುತ್ತಿಗೆದಾರ ಯಡಿಯೂರಪ್ಪ ಅವರ ಮೊಮ್ಮಗ ಶಶಿಧರ್ ಮರಡಿ ಅವರಿಗೆ ಹಣ ನೀಡಿರುವುದೇಕೆ?

2.2 ಹಣದ ವರ್ಗಾವಣೆ ವಿಚಾರವಾಗಿ 14-10-2019, 19-10-2019,21-10-2019, 25-10-2019, 1-11-2019, 4-11-2019, 20-11-2019, 29-11-2019, , 28-01-2020, 29-01-2020, 05-05-2020, 06-05-2020, 11-06-2020 ಹಾಗೂ 21-07-2020 ರಂದು ಗುತ್ತಿಗೆದಾರ ಹಾಗೂ ಶಶಿಧರ್(ಮುಖ್ಯಮಂತ್ರಿಗಳ ಮೊಮ್ಮಗ) ನಡುವಣ ವಾಟ್ಸಾಪ್ ಸಂದೇಶವನ್ನು ಭ್ರಷ್ಟಾಚಾರದ ಪ್ರಕರಣವಾಗಿ ಪರಿಗಣಿಸಿಲ್ಲ ಯಾಕೆ?

2.3 25-06-2020 ಮತ್ತು 16-07-2020 ದಿನಾಂಕದಂದು ಗುತ್ತಿಗೆದಾರ ಮತ್ತು ಶಶಿಧರ್ (ಮುಖ್ಯಮಂತ್ರಿಗಳ ಮೊಮ್ಮಗ) ನಡುವಣ ವಾಟ್ಸಾಪ್ ಸಂದೇಶದಲ್ಲಿ ಪ್ರಸ್ತಾಪ ಮಾಡಲಾಗಿರುವ ಪ್ರಕಾರ ಶಶಿಧರ್ ಖಾತೆಗೆ ರವಾನಿಸಿರುವ 7.40 ಕೋಟಿ ರೂಪಾಯಿ ಹಣವನ್ನು ಲಂಚ ಎಂದು ಘೋಷಿಸಿಲ್ಲ ಏಕೆ?

2.4 ಲಂಚ ವರ್ಗಾವಣೆಯಲ್ಲಿ ಮಂಜು, ಉಮೇಶ್, ಸಂಜಯ್ ಎಂಬುವವರ ಹೆಸರು ಕೇಳಿಬಂದಿದ್ದು, ಇವರು
ಯಡಿಯೂರಪ್ಪನವರ ನಿವಾಸ ಹಾಗೂ ಗೃಹ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿರುವುದು ನಿಜವೇ?

2.5 ಈ ಲಂಚ ಪ್ರಕರಣದಲ್ಲಿ ಯಡಿಯೂರಪ್ಪ ಅವರ ಅಳಿಯ ವಿರೂಪಾಕ್ಷ ಮರಡಿ ಅವರ ಪಾತ್ರ ಇದೆಯೇ? 05-05-2020ರಂದು ನಡೆದಿರುವ ವಾಟ್ಸಪ್ ಸಂದೇಶದಲ್ಲಿ ಹಣ ತಂದು ಕೊಡಲು ನೀಡಲಾಗಿದ್ದ ವಿಳಾಸ ವಿರೂಪಾಕ್ಷ ಅವರದ್ದಾಗಿದ್ದು, ಆ ಹಣವನ್ನು ವಿರೂಪಾಕ್ಷ ಅವರಿಗೆ ನೀಡಲಾಗಿದೆಯೇ ಅಥವಾ ಬೇರೆಯವರಿಗೆ ನೀಡಿದ್ದಾರೆಯೇ ಎಂಬುದರ ಬಗ್ಗೆ ತನಿಖೆಯಾಗಬೇಕು? ಲಂಚದ ಹಣವನ್ನು ವಿರೂಪಾಕ್ಷ ಅರಿಗಾಗಲಿ ಅಥವ ಅವರ ಪರವಾಗಿ ಅವರ ಮನೆಯವರಿಗೆ ನೀಡಿರುವುದೇಕೆ?

3.1 ವಾಟ್ಸಾಪ್ ಸಂದೇಶವು ಶಶಿಧರ್ ಹಾಗೂ ವಿಜಯೇಂದ್ರ ಅವರು ಈ ಎಲ್ಲ ಬೆಳವಣಗೆಗಳ ಬಗ್ಗೆ ಅರಿವು ಹೊಂದಿದ್ದರೇ? ಇದು ನಿಜವಾಗಿದ್ದರೆ, ಗುತ್ತಿಗೆದಾರರಿಂದ ಹಣ ಪಡೆಯುತ್ತಿರುವ ಮಾಹಿತಿ ಇವರಿಬ್ಬರಿಗೆ ಇರಲಿಲ್ಲವೇ?

3.2 29-01-2020, 05-03-2020, 03-06-2020, 06-08-2020, 07-08-2020 ಹಾಗೂ 14-08-2020 ರಂದು ನಡೆದಿರುವ ವಾಟ್ಸಾಪ್ ಸಂದೇಶ ಮಾತುಕತೆಯಲ್ಲಿ ಗುತ್ತಿಗೆದಾರ ಮತ್ತು ಶಶಿಧರ್ ನಡುವೆ ಬಾಕಿ ಹಣ ನೀಡುವ ಬಗ್ಗೆ ಚರ್ಚೆ ಆಗಿಲ್ಲವೇ?

3.3 06-08-2020 ಹಾಗೂ 07-08-2020 ರಂದು ಶಶಿಧರ್ ಹಾಗೂ ಗುತ್ತಿಗೆದಾರನ ನಡುವಣ ಸಂದೇಶದಲ್ಲಿ ವಿಜಯೇಂದ್ರ ಅವರನ್ನು ‘V’ ಎಂದು ನಮೂದಿಸಿ ವಿಜಯೇಂದ್ರ ಅವರು ಗುತ್ತಿಗೆದಾರನ ಪರವಾಗಿದ್ದಾರೆ ಎಂದು ಹೇಳಿರುವುದು ನಿಜವಲ್ಲವೇ?

4.1 ಶೆಲ್ ಕಂಪನಿಗಳ (REMAC Distributors Pvt Ltd., Shakambari Merchants Pvt. Ltd, Strategic Vincom Pvt. Ltd., Jagdamba Cosmosales Pvt. Ltd., Gannayak Commodities Trade Pvt. Ltd., Navteek Creation Pvt. Ltd.& Rajgharana Sales Pvt. Ltd.) ಮೂಲಕ ಶಶಿಧರ್ ಮರಡಿ ಅವರು ನಿರ್ದೇಶಕರಾಗಿರುವ Belgravia Enterprises Limited ಗೆ 5 ಕೋಟಿ ಹಣ ವರ್ಗಾವಣೆಯಾಗಿರುವುದು ನಿಜವಲ್ಲವೇ?

4.2 ಕೋಲ್ಕತಾ ಮೂಲಕ ಶೆಲ್ ಕಂಪನಿಗಳಿಂದ ಹಾಗೂ ಶಶಿಧರ ಅವರ ಕಂಪನಿಗೆ 13-03-2020ಯಿಂದ 22-07-2020 ಕಾಲಾವಧಿಯಲ್ಲಿ (ಕೋವಿಡ್ ಲಾಕ್ ಡೌನ್ ಸಮಯದಲ್ಲಿ ದೇಶದ ಎಲ್ಲ ಆರ್ಥಿಕತೆ ಬಂದ್ ಆಗಿದ್ದಾಗ) 5 ಕೋಟಿ ಹಣ ವರ್ಗಾವಣೆ ನಡೆದಿಲ್ಲವೇ?

4.3 ಶೆಲ್ ಕಂಪನಿಯಿಂದ ಪೆಡೆದ 5 ಕೋಟಿ ರೂಪಾಯಿಯನ್ನು Belgravia Enterprises Limited ನಿಂದ VSS Estates Pvt. Ltdಗೆ ವರ್ಗಾವಣೆ ಮಾಡಿರುವುದು ನಿಜವಲ್ಲವೇ?

4.4 ನಂತರ ಈ 5 ಕೋಟಿ ಹಣ VSS works LLP ಗೆ ನೀಡಿರುವುದು ನಿಜವಲ್ಲವೇ?

4.5 ಈ ಎಲ್ಲವೂ Money laundering ಕಾಯ್ದೆ ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಅಪಾರಾಧವಲ್ಲವೇ?

5. ಈ ಪ್ರಕರಣದ ಪ್ರಮುಖ ಆರೋಪಿಯನ್ನು ಸಿಎಂ ಯಡಿಯೂರಪ್ಪ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ರಕ್ಷಿಸುತ್ತಿಲ್ಲವೇ? ಇದು ಯಡಿಯೂರಪ್ಪ ಅವರು ಸಿಎಂ ಸ್ಥಾನದಲ್ಲಿ ಒಂದೇ ಒಂದು ನಿಮಿಷ ಮುಂದುವರಿಯಲು ಅನರ್ಹರಲ್ಲವೇ?

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಅವರ ಕುಟುಂಬ ಸದಸ್ಯರ ಮೇಲೆ ಬಂದಿರುವ ಲಂಚದ ಆರೋಪದ ಬಗ್ಗೆ ಸಮಗ್ರ, ಸ್ವತಂತ್ರವಾದ ಹಾಗೂ ಉನ್ನತ ಮಟ್ಟದ ತನಿಖೆ ಅಗತ್ಯವಿದೆ. ಹೀಗಾಗಿ ಈ ಪ್ರಕರಣವನ್ನು ವಿಶೇಷ ತನಿಖಾ ತಂಡದ ಸಹಾಯದೊಂದಿಗೆ ಹಾಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರು ಅಥವಾ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ನೇತೃತ್ವದ ಸಮಿತಿ ತನಿಖೆ ನಡೆಸಬೇಕು.

ಈ ಪ್ರಕರಣದ ತನಿಖೆ ಮುಗಿಯುವವರೆಗೂ ಬಿ.ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.

ಖಾಸಗಿ ಶಾಲೆಗಳ ಆರ್.ಆರ್. ನವೀಕರಣ: ಶೀಘ್ರ ಸಭೆ- ಸುರೇಶ್‌ ಕುಮಾರ್‌

ಬೆಂಗಳೂರು: ಖಾಸಗಿ ಶಾಲೆಗಳ ನೋಂದಣಿ ನವೀಕರಣಕ್ಕೆ ಸಂಬಂಧಿಸಿದಂತೆ ಕೊರೋನಾ ಸಂದಭದಲ್ಲಿ ಉದ್ಭವಿಸಿರುವ ಸಮಸ್ಯೆಗಳನ್ನು ಪರಿಹರಿಸಲು ಅಗ್ನಿ ಶಾಮಕ ದಳವೂ ಸೇರಿದಂತೆ ಅಧಿಕಾರಿಗಳ ಸಭೆಯನ್ನು ಇಷ್ಟರಲ್ಲಿಯೇ ನಡೆಸಿ ಅಗತ್ಯ ವಿನಾಯಿತಿ ನೀಡಲು ಸೂಚಿಸಲಾಗುವುದು ಎಂದು ಸಚಿವ ಎಸ್. ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

ಸೋಮವಾರದಿಂದ ವಿಧಾನಮಂಡಲದ ಅಧಿವೇಶನದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಪ್ರಮುಖವಾಗಿ ಚರ್ಚಿಸಬೇಕಾದ ವಿಷಯಗಳ ಕುರಿತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ ಕುಮಾರ್‌ ಬುಧವಾರ ಸಮಗ್ರಶಿಕ್ಷಣ ಕರ್ನಾಟಕ ಸಭಾಂಗಣದಲ್ಲಿ ವಿಧಾನಪರಿಷತ್ತಿನ ಪದವೀಧರ ಮತ್ತು ಶಿಕ್ಷಕ ಕ್ಷೇತ್ರದ ಸದಸ್ಯರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಕೊರೋನಾ ಸೃಷ್ಟಿಸಿರುವ ಸಂಕಷ್ಟದ ಸಂದರ್ಭದಲ್ಲಿ ಖಾಸಗಿ ಶಾಲೆಗಳ ಸಮಸ್ಯೆಗಳ ಕುರಿತು ತಮಗೆ ಸಂಪೂರ್ಣ ಅರಿವಿದ್ದು, ಈ ಶೈಕ್ಷಣಿಕ ಸಾಲಿಗೆ ಸಂಬಂಧಿಸಿದ ಅನುಮತಿಗಳನ್ನು ನೀಡುವಾಗ ನಿಯಮಾವಳಿಗಳನ್ನು ಸರಳೀಕರಣಗೊಳಿಸುವ ಅನಿವಾರ್ಯತೆ ಇದೆ ಎಂದರು.

ಶಿಕ್ಷಣ ತಜ್ಞರ ವರದಿಯನ್ವಯ ಕರೋನಾ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳ ನಿರಂತರ ಕಲಿಕೆಗೆ ಅನುಷ್ಠಾನಗೊಳಿಸಿರುವ ವಿದ್ಯಾಗಮ ಯೋಜನೆ ಇಡೀ ರಾಷ್ಟ್ರದ ಗಮನ ಸೆಳೆದಿದ್ದು, ಹಲವು ರಾಜ್ಯಗಳು ಯೋಜನೆಯ ಉಪಯುಕ್ತತೆ ಕುರಿತು ಪ್ರಶಂಸೆ ವ್ಯಕ್ತಪಡಿಸಿವೆ ಎಂದು ಅವರು ತಿಳಿಸಿದರು.

ಸಂವೇದಾ ಕಾರ್ಯಕ್ರಮದ ಮೂಲಕ ದೂರದರ್ಶನದ ಚಂದನವಾಹಿನಿಯಲ್ಲಿ 8-10ನೇ ತರಗತಿಯ ಮಕ್ಕಳಿಗೆ ಪಾಠ ಪ್ರವಚನಗಳನ್ನು ನಡೆಸಲಾಗುತ್ತದೆ. 1-8ನೇ ತರಗತಿಯ ಮಕ್ಕಳಿಗೆ ಸ್ಥಳೀಯ ಕೇಬಲ್ ಚಾನೆಲ್‌ ಗಳ ಮೂಲಕ ತರಗತಿಗಳನ್ನು ನಡೆಸಲು ಕ್ರಮ ವಹಿಸಲಾಗುತ್ತಿದ್ದು, ಇಷ್ಟರಲ್ಲಿಯೇ ಪ್ರಾರಂಭವಾಗಲಿದೆ. ಸಂವೇದಾ ತರಗತಿಗಳು ವಿದ್ಯಾಗಮದೊಂದಿಗೆ ಸಂಯೋಜನೆಗೊಂಡಿದ್ದು, ನಮ್ಮ ಇಲಾಖೆಯ ಯೂ-ಟೂಬ್‌ ಚಾನೆಲ್‌ ನಲ್ಲಿ ಸಹಾ ಲಭ್ಯವಿದ ಎಂದು ಅವರು ವಿವರಿಸಿದರು

ಶುಲ್ಕ ಸಂಗ್ರಹಕ್ಕೆ ಅನುಮತಿ:
ಕೋವಿಡ್‌ ಹಿನ್ನೆಲೆಯಲ್ಲಿ ಸಮಾಜದ ಎಲ್ಲ ವರ್ಗಗಳ ಸಮಾನ ಸಮಸ್ಯಗಳಿಗೆ ಒಳಗಾದ ಕಾರಣ ಪಾಲಕರಿಂದ ಶುಲ್ಕ ಸಂಗ್ರಹಕ್ಕೆ ಒತ್ತಾಯ ಮಾಡಬಾರದೆಂದು ನಾವು ಆದೇಶಿಸಿದ್ದೆವು. ಬಜೆಟ್‌ ಶಾಲೆಗಳು ತೊಂದರೆಗೀಡಾದ್ದನ್ನು ಗಮನದಲ್ಲಿಟ್ಟುಕೊಂಡು ಹಾಗೂ ಖಾಸಗಿ ಶಾಲೆಗಳ ಶಿಕ್ಷಕರ ವೇತನಕ್ಕೆ ಸಮಸ್ಯೆಯಾಗಿರುವ ಅಂಶ ಪರಿಗಣಿಸಿ ಕಳೆದ ಹದಿನೈದು ದಿನಗಳ ಹಿಂದೆ ಶುಲ್ಕ ವಸೂಲಾತಿಗೆ ಅನುಮತಿ ನೀಡಲಾಗಿದೆ ಎಂದರು.

ಶಾಲಾ ಕಾಲೇಜುಗಳು ದಿಢೀರನೇ ಮುಚ್ಚಬೇಕಾದ ಸಂದರ್ಭ ಒದಗಿಬಂದ ಕಾರಣ ಶುಲ್ಕ ವಸೂಲಾತಿಯನ್ನು ನೆಪವಾಗಿಟ್ಟುಕೊಂಡು ಖಾಸಗಿ ಶಾಲೆಗಳು ಆನ್ ಲೈನ್ ಮೂಲಕ ಅವೈಜ್ಞಾನಿಕ ಬೋಧನೆಯನ್ನು ಪ್ರಾರಂಭಿಸಿದವು. ಹೆಚ್ಚುವರಿ ಶುಲ್ಕವನ್ನು ಪೋಷಕರಿಂದ ವಸೂಲಿ ಮಾಡಲು ಪ್ರಾರಂಭಿಸಿದ ಕಾರಣ ನಿಮ್ಹಾನ್ಸ್ ಸಂಸ್ಥೆಯ ಮಕ್ಕಳ ಮಾನಸಿಕ ತಜ್ಞರನ್ನು ಸಂಪರ್ಕಿಸಿ ಎಲ್ ಕೆ ಜಿ ಯಿಂದ ಐದನೇ ತರಗತಿವರೆಗೆ ಆನ್ ಲೈನ್ ಬೋಧನೆ ಮಾಡುವುದನ್ನು ನಿಷೇಧಿಸಿದೆವು. ನಮ್ಮ ಸರ್ಕಾರದ ನಿರ್ಣಯಕ್ಕೆ ರಾಜ್ಯ ಘನ ಉಚ್ಛ ನ್ಯಾಯಾಲಯವು ತಡೆಯಾಜ್ಞೆ ನೀಡಿತು. ಅದೇ ಸಂದರ್ಭದಲ್ಲಿ ಇಡೀ ರಾಷ್ಟ್ರದಲ್ಲಿ ಮೊದಲ ಪ್ರಯತ್ನವಾಗಿ ಕೋವಿಡ್ ಸಂದರ್ಭದಲ್ಲಿ ಶಿಕ್ಷಣವನ್ನು ಮುಂದುವರೆಸಲು ಮಾರ್ಗಸೂಚಿಗಳ ಬಗ್ಗೆ ಹಿರಿಯ ಶಿಕ್ಷಣ ತಜ್ಞರನ್ನೊಳಗೊಂಡ ಸಮಿತಿ ರಚಿಸಿ ವರದಿಯನ್ನು ಪಡೆಯಲಾಯಿತು ಎಂದು ಅವರು ವಿವರಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳುವ ಸಂಬಂಧ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಗಟ್ಟಿಯಾದ ಕ್ರಿಯಾ ಯೋಜನೆಯನ್ನು ರೂಪಿಸುತ್ತಿದ್ದು, ಉನ್ನತ ಶಿಕ್ಷಣ ಇಲಾಖೆಯೊಂದಿಗೆ ಜೊತೆಗೂಡಿ ಇಷ್ಟರಲ್ಲಿಯೇ ವರದಿಯನ್ನು ಲೋಕಾರ್ಪಣೆಗೊಳಿಸಲಿದೆ. ಈ ನೀತಿಯನ್ನು ಅನುಷ್ಠಾನಗೊಳಿಸಲಿರುವ ಮೊದಲ ರಾಜ್ಯಗಳಲ್ಲಿ ಕರ್ನಾಟಕ ಒಂದಾಗಿದೆ. ಮಧ್ಯಾಹ್ನದ ಬಿಸಿಯೂಟ ನೌಕರರದ್ದೂ ಸಹ ಸಮಸ್ಯೆಗಳಿವೆ. 15 ದಿನಗಳ ಹಿಂದೆ, ಕಳೆದ 3-4 ತಿಂಗಳ (ಜೂನ್-ಆಗಸ್ಟ್) ರೂ.93.46 ಕೋಟಿ ಸಂಭಾವನೆಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಉಳಿದ ಸಮಸ್ಯೆಗಳಾದ ಕನಿಷ್ಠ ವೇತನ, ಸೇರಿದಂತೆ ಹಲವನ್ನು ಬಗೆ ಹರಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಸುರೇಶ್‌ ಕುಮಾರ್‌ ತಿಳಿಸಿದರು.

ಅರ್ಥಿಕ ಮಿತವ್ಯಯದ ಹಿನ್ನೆಲೆಯಲ್ಲಿ ಅನುದಾನಿತ ಶಾಲಾ ಕಾಲೇಜುಗಳಲ್ಲಿ ನಿವೃತ್ತಿ, ನಿಧನ ಕಾರಣ ಖಾಲಿ ಯಾದ ಹುದ್ದೆಗಳನ್ನು ತುಂಬಲು ಆರ್ಥಿಕ ಇಲಾಖೆ ನಿರ್ಬಂಧ ಹೇರಿದೆ. ಇಷ್ಟರಲ್ಲಿಯೇ ಈ ಮಿತವ್ಯಯವನ್ನು ಸಡಿಲಿಸಲು ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ನೇಮಕಾತಿಯನ್ನು ಮುಂದುವರೆಸಲು ಕ್ರಮ ವಹಿಸಲಾಗುವುದು ಎಂದು ಸಚಿವರು ವಿವರಿಸಿದರು. ಶಿಕ್ಷಕರ ಮತ್ತು ಉಪನ್ಯಾಸಕರ ವೇತನ ಬಡ್ತಿ ವಿಚಾರವಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ವಿವರಿಸಿದರು.

ಕೋವಿಡ್ ಸಂಕ್ರಮಣ ಕಾಲವು ಶಿಕ್ಷಣ ಇಲಾಖೆಗೆ ಬಹಳ ದೊಡ್ಡ ಸವಾಲುಗಳನ್ನು ತಂದೊಡ್ಡಿದೆ. ಕಳೆದ ಸಾಲಿನಲ್ಲಿ ಶಾಲಾಕಾಲೇಜುಗಳನ್ನು ಅವಧಿ ಪೂರ್ವದಲ್ಲಿ ಮುಚ್ಚಿ ಒಂದರಿಂದ ಒಂಭತ್ತನೇ ತರಗತಿಯ ಪರೀಕ್ಷೆಗಳನ್ನು ರದ್ದುಪಡಿಸುವ ನಿರ್ಣಯವನ್ನು ತೆಗೆದುಕೊಳ್ಳಬೇಕಾಯಿತು. ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ನಾವು ಎಸ್. ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ನಡೆಸಲಾಯಿತು ಎಂದು ಸಚಿವ ಸುರೇಶ್‌ ಕುಮಾರ್‌ ಕೊರೋನಾ ಕಾಲಘಟ್ಟದಲ್ಲಿ ಕೈಗೊಂಡ ಕ್ರಮಗಳನ್ನು ವಿವರಿಸಿದರು.

ಕೋವಿಡ್‌ ಸಂದರ್ಭದಲ್ಲಿ ಕೈಗೊಂಡ ಇಲಾಖೆಯ ಕ್ರಮಗಳನ್ನು ಸಭೆಯಲ್ಲಿ ಹಾಜರಿದ್ದ ವಿಧಾನಪರಿಷತ್ತಿನ ಪದವೀಧರ ಮತ್ತು ಶಿಕ್ಷಕ ಕ್ಷೇತ್ರದ ಸದಸ್ಯರು ಮುಕ್ತಕಂಠದೊಂದಿಗೆ ಪ್ರಶಂಸಿಸಿ, ಇಲಾಖೆ ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು ಶಿಕ್ಷಣ ಸಚಿವರಿಗೆ ತಮ್ಮ ಸಹಕಾರ ಇದ್ದೇ ಇರುತ್ತದೆ ಎಂದು ಹೇಳಿದ ವಿಧಾನಪರಿಷತ್‌ ಸದಸ್ಯರು ಭರವಸೆ ನೀಡಿದರು.

ವಿಧಾನಪರಿಷತ್‌ ಸದಸ್ಯರಾದ ಮರಿತಿಬ್ಬೇಗೌಡ, ಕೆ.ಟಿ. ಶ್ರೀಕಂಠೇಗೌಡ, ಡಾ. ವೈ.ಎ. ನಾರಾಯಣ ಸ್ವಾಮಿ, ಅ.ದೇವೇಗೌಡ, ಹಣಮಂತ ಎಚ್. ನಿರಾಣಿ, ಎಸ್. ಎಲ್. ಭೋಜೇಗೌಡ ಮತ್ತಿತರರು ಹಾಜರಿದ್ದರು. ಕೆಲವರು ವೆಬಿನಾರ್‌ ಮೂಲಕ ಚರ್ಚೆಯಲ್ಲಿ ಭಾಗವಹಿಸಿದ್ದರು.

ಸಚಿವ ಸುರೇಶ್ ಕುಮಾರ್ ಆಶಯದಂತೆ ಚೌಕಾಬಾರ ಬಿಟ್ಟು ಪತ್ರಿಕೆ ಓದುತ್ತಿರುವ ವಾಹನ ಚಾಲಕರು

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳು, ನಿರ್ದೇಶನಾಲಯಗಳು, ಅಕಾಡೆಮಿಗಳಿರುವ ನಗರದ ಅಂಬೇಡ್ಕರ್ ವೀಧಿಯ ವಿಶ್ವೇಶ್ವರಯ್ಯ ಟವರ್ಸ್ ಆವರಣದಲ್ಲಿ ಮುಖ್ಯದ್ವಾರದ ಸನಿಹದಲ್ಲಿ ನಿತ್ಯವೂ ವಿರಾಮದ ಸಮಯದಲ್ಲಿ ಚೌಕಾಬಾರ ಆಡುತ್ತಾ ಕುಳಿತಿರುತ್ತಿದ್ದ ವಿವಿಧ ಅಧಿಕಾರಿಗಳ ಕಾರು ಚಾಲಕರಿಗೆ ಅನುಕೂಲವಾಗುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸೂಚನೆ ಮೇರೆಗೆ ಗ್ರಂಥಾಲಯ ಇಲಾಖೆಯಿಂದ ಪತ್ರಿಕೆಗಳನ್ನು ಒದಗಿಸಲಾಗಿದೆ.

ಇತ್ತೀಚಿಗೆ ವಿಶ್ವೇಶ್ವರಯ್ಯ ಟವರ್ಸ್ ನ 4ನೇ ಮಹಡಿಯಲ್ಲಿರುವ ಗ್ರಂಥಾಲಯ ಇಲಾಖೆ ಕಚೇರಿಯಲ್ಲಿನ ಸಭೆಗೆ ಆಗಮಿಸಿದ್ದ ಪ್ರಾಥಮಿಕ ಸುರೇಶ್ ಕುಮಾರ್ ಭೇಟಿ ನೀಡಿ ಸಭೆ ಮುಗಿಸಿ ಹೊರಬಂದು ಕಾರಿನಲ್ಲಿ ತೆರಳುತ್ತಿದ್ದರು. ಆಗ ಎಡಗಡೆ ಕಣ್ಣು ಹಾಯಿಸಿದಾಗ ಹತ್ತಾರು ಮಂದಿ ಗುಂಪೂಗೂಡಿದ್ದನ್ನು ನೋಡಿ ಕಾರಿನಿಂದ ಇಳಿದು ಸ್ಥಳಕ್ಕೆ ಭೇಟಿ ನೀಡಿದರು. ಆಗ ಕಾರು ಚಾಲಕರೆಲ್ಲ ಚೌಕಾಬಾರ ಆಡುವುದರಲ್ಲಿ ತೊಡಗಿದ್ದರು. ಕಾರು ಚಾಲಕರು ಚೌಕಾಬಾರ ಆಡುವುದನ್ನು ಗಮನಿಸಿ ಅವರನ್ನು ಮಾತನಾಡಿಸಿದ ಸಚಿವರು ಗ್ರಂಥಾಲಯ ಇಲಾಖೆ ನಿರ್ದೇಶಕರನ್ನು ಕರೆದು, ಚಾಲಕರಿಗೆ ವಿರಾಮ ದೊರೆತಾಗ ಓದಲು ಅನುಕೂಲವಾಗುವಂತೆ ಈ ಸ್ಥಳಕ್ಕೆ ಪತ್ರಿಕೆಗಳನ್ನು ಪೂರೈಸಲು ಸೂಚಿಸಿದರು.

ಸಚಿವರ ನಿರ್ದೇಶನದಂತೆ ಗ್ರಂಥಾಲಯ ಇಲಾಖೆ ನಿರ್ದೇಶಕರು ಚಾಲಕರು ಚೌಕಾಬಾರ ಆಡುತ್ತಿದ್ದ ಸ್ಥಳಕ್ಕೆ ಪತ್ರಿಕೆಗಳನ್ನು ಪೂರೈಸಿದ್ದು, ಚಾಲಕರೆಲ್ಲ ಚೌಕಾಬಾರ ಆಟದ ಬದಲಿಗೆ ಪತ್ರಿಕೆ ಓದುವುದರಲ್ಲಿ ಮಗ್ನರಾಗಿದ್ದಾರೆ. ತಮಗೆಲ್ಲ ಪತ್ರಿಕೆ ಒದಗಿಸಲು ಸೂಚಿಸಿರುವುದಕ್ಕೆ ಚಾಲಕರು ಸುರೇಶ್ ಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈಗ ಚೌಕಾಬಾರ ಆಡುವ ಸ್ಥಳ ವಾಚಾನಾಲಯವಾಗಿ ಮಾರ್ಪಟ್ಟಿದೆ ಎಂದು ಚಾಲಕರು ಖುಷಿ ವ್ಯಕ್ತಪಡಿಸಿದ್ದಾರೆ.