ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಹಣ ಕಡಿತ ಘೋರ ಅನ್ಯಾಯ: ಈಶ್ವರ ಖಂಡ್ರೆ

ಬೆಂಗಳೂರು, ಸೆ.16: ಕರ್ನಾಟಕದ ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿದ್ದು, ಈ ಭಾಗದ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಹಾಗೂ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಆರೋಪಿಸಿದ್ದು, ಬಜೆಟ್ ನಲ್ಲಿ ಹಂಚಿಕೆ ಮಾಡಿದ್ದ ಹಣವನ್ನೂ ಕಡಿತ ಮಾಡಿರುವುದು ಇದಕ್ಕೆ ಜ್ವಲಂತ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯ ಹೆಸರನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಎಂದು ಮರುನಾಮಕರಣ ಮಾಡಿದ ಮಾತ್ರಕ್ಕೆ ತೀವ್ರ ಹಿಂದುಳಿದಿರುವ ಪ್ರದೇಶ ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಸರ್ಕಾರ ಮನಗಾಣಬೇಕು, ಜನರನ್ನು ಮರುಳು ಮಾಡುವ ಪ್ರಯತ್ನ ಕೈಬಿಟ್ಟು ಪ್ರಾದೇಶಿಕ ಅಸಮತೋಲನದಿಂದ ಬಳಲುತ್ತಿರುವ ವಲಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದೂ ಆಗ್ರಹಿಸಿದ್ದಾರೆ.

ಮಂಜೂರಿ ಆಗಿರುವ ಯೋಜನೆಗಳು, ಟೆಂಡರ್ ಆಗಿರುವ ಕಾಮಗಾರಿಗಳೂ ಇನ್ನೂ ಆರಂಭವಾಗಿಲ್ಲ. ವಿಶೇಷ ಸ್ಥಾನಮಾನ ಪಡೆದಿರುವ ಭಾಗಕ್ಕೆ ವಿಶೇಷ ಅನುದಾನ ನೀಡುವುದಿರಲಿ, ಹಂಚಿಕೆ ಮಾಡಿದ ಹಣವನ್ನೂ ಸರ್ಕಾರ ಬಿಡುಗಡೆ ಮಾಡಿಲ್ಲ. ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರ ಬಂದ, ಕಳೆದ ಒಂದೂ ಕಾಲು ವರ್ಷದಿಂದ ಅಭಿವೃದ್ಧಿ ಚಟುವಟಿಕೆ ಸಂಪೂರ್ಣ ಸ್ಥಗಿತವಾಗಿದೆ. 2019-20 ರ ಸಾಲಿನ ಬಜೆಟ್ ನಲ್ಲಿ ಘೋಷಣೆಯಾಗಿದ್ದ 1500 ಕೋಟಿ ಅನುದಾನದಲ್ಲಿ ರೂ 1125 ಕೋಟಿ ಬಿಡುಗಡೆಯಾಗಿದ್ದು ಉಳಿದ ಹಣ 375 ಕೋಟಿ ರೂ. ಇನ್ನೂ ಬಿಡುಗಡೆ ಆಗಿಲ್ಲ. ಇನ್ನು 2020-21 ರ ಸಾಲಿನಲ್ಲಿ 2000 ಕೋಟಿ ರೂ. ನೀಡುವಂತೆ ಕೇಳಿದ್ದರೂ, 1500 ಕೋಟಿ ಮೀಸಲಿಟ್ಟರು, ಈಗ ಅದರಲ್ಲಿ 1136.86 ಕೋಟಿ ರೂ. ಕ್ರಿಯಾ ಯೋಜನೆ ಮಾಡಿದ್ದಾರೆ. ಇದರಲ್ಲೂ ಹಣ ಕಡಿತ ಆಗಿದೆ. 2020-21ರಲ್ಲಿ ಇಲ್ಲಿಯವರೆಗೆ ಆರು ತಿಂಗಳುಗಳಲ್ಲಿ ಒಂದೇ ಒಂದು ಕ್ರಿಯಾ ಯೋಜನೆಗೆ ಅನುಮೋದನೆ ನೀಡಿಲ್ಲ. ಇದು ಕಲ್ಯಾಣ ಕರ್ನಾಟಕಕ್ಕೆ ಮಾಡಿದ ಘನ ಘೋರ ಅನ್ಯಾಯ ಎಂದು ಹೇಳಿದ್ದಾರೆ.

ಉಪ ಚುನಾವಣೆ ನಡೆದ ಒಂದೊಂದು ಕ್ಷೇತ್ರಕ್ಕೂ ಮುಖ್ಯಮಂತ್ರಿಗಳು ಸಾವಿರಾರು ಕೋಟಿ ರೂಪಾಯಿ ಯೋಜನೆ, ಪ್ಯಾಕೇಜ್ ಪ್ರಕಟಿಸಿದರು. ಆದರೆ, ಹೈ.ಕದ ಜಿಲ್ಲೆಗಳಿಗೆ ಏಕೆ ಇಂಥ ಪ್ಯಾಕೇಜ್ ನೀಡುತ್ತಿಲ್ಲ. ಹೈ.ಕ. ಜನರು ಕರ್ನಾಟಕದವರಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಈ ಹಿಂದಿನ ಕಾಂಗ್ರೆಸ್ ಸರ್ಕಾರ ಕಲಂ 371 (ಜೆ) ಅನ್ವಯ ಹೈ ಕ ಭಾಗದಲ್ಲಿ ಖಾಲಿಯಿರುವ ಎಲ್ಲ ಸರ್ಕಾರಿ ಹುದ್ದೆಗಳನ್ನು ಅಂದರೆ 40,000 ಹುದ್ದೆಗಳನ್ನು ಭರ್ತಿ ಮಾಡುವ ನಿರ್ಣಯ ಕೈಗೊಂಡು ನೇಮಕಾತಿ ಪ್ರಕ್ರಿಯೆ ಆರಂಭ ಮಾಡಿತ್ತು. ಸಾವಿರಾರು ಅಭ್ಯರ್ಥಿಗಳಿಗೆ ಉದ್ಯೋಗ ಲಭಿಸಿತ್ತು. ಆದರೆ ಬಿಜೆಪಿ ಸರ್ಕಾರ ಖಾಲಿ ಹುದ್ದೆ ಭರ್ತಿ ಮಾಡುವ ಪ್ರಕ್ರಿಯೆ ಸ್ಥಗಿತ ಮಾಡಿದ್ದೂ, ಇನ್ನು 40 ಸಾವಿರ ಖಾಲಿ ಹುದ್ದೆ ಭರ್ತಿ ಮಾಡುವಲ್ಲಿ ವಿಫಲವಾಗಿದೆ. ಬ್ಯಾಕ್ ಲಾಗ್ ಹುದ್ದೆಗಳನ್ನೂ ತುಂಬಿಲ್ಲ. ಇದರಿಂದ ಕಲ್ಯಾಣ ಕರ್ನಾಟಕದಲ್ಲಿ ಆಡಳಿತ ಸಂಪೂರ್ಣ ಕುಸಿದಿದ್ದು, ಯಾವುದೇ ಅಭಿವೃದ್ಧಿ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಇನ್ನು ಖಾಸಗಿ ಅನುದಾನಿತ ಪದವಿ ಕಾಲೇಜಿನಲ್ಲಿ ಮಂಜೂರಾದ ಬೋಧಕ ಹುದ್ದೆಗಳನ್ನು ತುಂಬುವ ಪ್ರಕ್ರಿಯೆಯನ್ನೂ ಸ್ಥಗಿತಗೊಳಿಸಲಾಗಿದೆ. ಇದೆಲ್ಲವೂ ಹೈ.ಕ. ಭಾಗದ ಬಗ್ಗೆ ಸರ್ಕಾರದ ದಿವ್ಯ ನಿರ್ಲಕ್ಷ್ಯ ಧೋರಣೆಗೆ ಸಾಕ್ಷಿಯಾಗಿದೆ, ಈ ಮೂಲಕ ಯುವಜನರ ಭವಿಷ್ಯವನ್ನು ಸರ್ಕಾರ ಕಮರುವಂತೆ ಮಾಡುತ್ತಿದೆ ಎಂದು ದೂರಿದ್ದಾರೆ.
14 ತಿಂಗಳಲ್ಲಿ ಹೊಸ ರಸ್ತೆಯಾಗಲೀ, ನೀರಾವರಿ ಕಾಮಗಾರಿಯಾಗಲೀ, ಹೊಸ ಕಾಲೇಜುಗಳಾಗಲಿ, ವಿವಿಧ ಹುದ್ದೆಗಳ ಭರ್ತಿ ಆಗಲೀ, ಯಾವುದೂ ನಡೆಯುತ್ತಿಲ್ಲ. ಹಿಂದುಳಿದ ಕಲ್ಯಾಣ ಕರ್ನಾಟಕದ ಬಗ್ಗೆ ಸರ್ಕಾರಕ್ಕೆ ವಿಶೇಷ ಕಳಕಳಿ ಇರಲಿ ಕನಿಷ್ಠ ಕಾಳಜಿಯೂ ಇಲ್ಲ ಎಂದು ಆರೋಪಿಸಿದರು.

2013 ರಿಂದ 2019-20 ರವರೆಗೆ ಕಾಂಗ್ರೆಸ್ ಹಾಗೂ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಬಿಡುಗಡೆಯಾದ 4803.95 ಕೋಟಿ ಅನುದಾನ ಹೊರತುಪಡಿಸಿ ಬಿಜೆಪಿ ಸರಕಾರ ಬಂದ ಮೇಲೆ ಈವರೆಗೆ ಬಿಡುಗಡೆ ಮಾಡಿದ್ದು ಕೇವಲ 282.95 ಕೋಟಿ ಮಾತ್ರ. ಇದರ ಜೊತೆಗೆ ಗಾಯದ ಮೇಲೆ ಬರೆ ಎಳೆದಂತೆ ಹಂಚಿಕೆ ಮಾಡಿದ್ದ ಹಣಕ್ಕೂ ಸರ್ಕಾರ ಖೋತಾ ಮಾಡುತ್ತಿದೆ, ಈ ಹಿಂದೆಲ್ಲಾ ಈ ಭಾಗದ ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ ದೊರಕುತ್ತಿತ್ತು. ಹೈ.ಕ ಅಭಿವೃದ್ದಿ ಮಂಡಳಿಗೆ ಸಚಿವರೇ ಅಧ್ಯಕ್ಷರಾಗಿರುತ್ತಿದ್ದರು, ಇದರಿಂದ ಅವರು ಸಂಪುಟ ಸಭೆಯಲ್ಲಿ ಈ ಭಾಗದ ಅಭಿವೃದ್ಧಿಗಾಗಿ ಹೆಚ್ಚುವರಿ ಹಣ ನೀಡುವಂತೆ ಮತ್ತು ಈ ಭಾಗದ ಸಮಸ್ಯೆ ಪರಿಹರಿಸಲು ಒತ್ತಾಯಿಸಲು ಸಾಧ್ಯವಾಗುತ್ತಿತ್ತು. ಆದರೆ, ಈಗ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ 1 ವರ್ಷದವರೆಗೆ ಅಧ್ಯಕ್ಷರನ್ನೇ ನೇಮಕ ಮಾಡದೆ ಈ ಭಾಗಕ್ಕೆ ಘೋರ ಅನ್ಯಾಯ ಮಾಡಿತ್ತು. ಈಗ ತಿದ್ದುಪಡಿ ಮಾಡಿ ಸಚಿವರಲ್ಲದ ಶಾಸಕರನ್ನು ಮಾಡಿ, ಮಂಡಳಿಯನ್ನು ದುರ್ಬಲಗೊಳಿಸಲಾಗಿದೆ. ಸಂಪುಟದಲ್ಲಿ ಹೈ.ಕ. ಭಾಗದ ಧ್ವನಿಯೇ ಅಡಗಿ ಹೋಗಿದೆ ಎಂದು ಖಂಡ್ರೆ ಆರೋಪಿಸಿದ್ದಾರೆ.

ಹಿಂದೆ ಹೈ.ಕ.ದ ಐದಾರೂ ಸಚಿವರಿರುತ್ತಿದ್ದರು. ಆದರೆ ಈಗ ಕೇವಲ ಇಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡಿ ಕ್ಷೇತ್ರ ಕಡೆಗಣಿಸಲಾಗಿದೆ. ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ದಿಗೆ ಹಣ ಬಾರದಾಗಿದೆ.
ಕೊರೊನಾ ಮಹಾಮಾರಿಯ ಸಂದರ್ಭದಲ್ಲೂ ಈ ಭಾಗವನ್ನು ಸರ್ಕಾರ ಕಡೆಗಣಿಸಿದೆ. ಕಲ್ಯಾಣ ಕರ್ನಾಟಕದ ಸರಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ, ಆಕ್ಸಿಜನ್, ಐ.ಸಿ.ಯು. ಬೇಡ್ ಸೇರಿದಂತೆ ವೈದ್ಯಕೀಯ ಮೂಲಸೌಕರ್ಯದ ಕೊರತೆ ಇದೆ. ಇದನ್ನು ಮನಗಂಡು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಒಟ್ಟು 650 ಹಾಸಿಗೆಗಳನ್ನು ರಾಯಚೂರು, ಕಲಬುರಗಿ ಜಿಲ್ಲಾಡಳಿತಕ್ಕೆ ಕಳಿಸಿದ್ದರು, ಆದರೆ ಸರ್ಕಾರ ಬಡ ರೋಗಿಗಳ ನೆರವಿಗೆ ಇದನ್ನು ಬಳಸದೆ ಪ್ರತಿಷ್ಠೆ ತೋರುತ್ತಾ 450 ಹಾಸಿಗೆಗಳನ್ನು ಪಡೆದುಕೊಳ್ಳಲು ಕಲಬುರಗಿ ಜಿಲ್ಲಾಡಳಿತ ನಿರಾಕರಿಸುವಂತೆ ಮಾಡುವ ಮೂಲಕ ರೋಗಿಗಳಿಗೆ ಅನ್ಯಾಯ ಮಾಡಿದೆ. ಇದು ಸರ್ಕಾರದ ನಿರ್ಲಕ್ಷ್ಯ ಮತ್ತು ದ್ವೇಷದ ರಾಜಕಾರಣವಾಗಿದ್ದು, ಜನರನ್ನು ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ಸರ್ಕಾರ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘಕ್ಕೆ 500 ಕೋಟಿ ರೂ. ಆಯವ್ಯಯದಲ್ಲಿ ಹಂಚಿಕೆ ಮಾಡಿದ್ದು ಅದರ ಉದ್ಘಾಟನೆಯೂ ಆಗಿದೆ. ಆದರೆ ಕ್ರಿಯಾ ಯೋಜನೆಯಾಗಿಲ್ಲ, ಅ ಸಂಘಕ್ಕೆ ಯಾವುದೇ ರೂಪುರೇಷೆಯೂ ಇಲ್ಲ. ಹೀಗೆ ಕಾಗದದ ಮೇಲೆ ಯೋಜನೆ ರೂಪಿಸುವುದರಿಂದ ಏನು ಪ್ರಯೋಜನ ಎಂದು ಈಶ್ವರ ಖಂಡ್ರೆ ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿಗಳು ಕಲ್ಯಾಣ ಕರ್ನಾಟಕ ವಿಮೋಚನಾ ದಿನದ ಅಂಗವಾಗಿ ಈ ಭಾಗಕ್ಕೆ ಆಗಮಿಸುತ್ತಿದ್ದು, ಈ ಸಂದರ್ಭದಲ್ಲಿ ವಿಳಂಬವಾಗಿಯಾದರೂ ಸರ್ಕಾರ ಜಾಗೃತಗೊಂಡು ಅಸಮಾನತೆಯಿಂದ ನಲುಗಿರುವ ಕಲ್ಯಾಣ ಕರ್ನಾಟಕದಲ್ಲಿ ರಸ್ತೆ, ರೈಲು ಮಾರ್ಗ, ಬಸ್ ನಿಲ್ದಾಣ, ವಸತಿ ನಿಲಯ, ನೀರಾವರಿ ಯೋಜನೆ ಸೇರಿದಂತೆ ಮೂಲಭೂತ ಸೌಕರ್ಯ ಕಾಮಗಾರಿ ಆರಂಭಿಸಬೇಕು, 14 ತಿಂಗಳಲ್ಲಿ ಆಗಿರುವ ನಿರ್ಲಕ್ಷ್ಯ ಸರಿಪಡಿಸಿ, ತಕ್ಷಣವೇ ಅವಶ್ಯಕತೆ ಇರುವ 2000 ಕೋಟಿ ರೂ. ಹಾಗೂ ಹಿಂದಿನ ಸಾಲಿನ ಬಾಕಿ ಹಣವನ್ನೂ ಬಿಡುಗಡೆ ಮಾಡಿ ಉಳಿದ ಆರು ತಿಂಗಳಲ್ಲಿ ಅಭಿವೃದ್ಧಿಗೆ ಗಮನ ಹರಿಸಬೇಕು, ಖಾಲಿ ಹುದ್ದೆ ಭರ್ತಿಗೆ ಮತ್ತು ನೈಜವಾಗಿ ಈ ಭಾಗದ ಅಭಿವೃದ್ಧಿಗೆ ಒತ್ತು ಕೊಡಬೇಕು ಎಂದು ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ.

ವಿಧಾನ ಮಂಡಲದ ಅಧಿವೇಶನ: ಸರ್ಕಾರದ ವೈಫಲ್ಯ ಬಯಲು ಮಾಡಲು ಕಾಂಗ್ರೆಸ್ ಶಾಸಕಾಂಗ ಸಭೆ ತೀರ್ಮಾನ

ಬೆಂಗಳೂರು : ಸೋಮವಾರದಿಂದ ಆರಂಭವಾಗಲಿರುವ ವಿಧಾನ ಮಂಡಲದ ಅಧಿವೇಶನವನ್ನು ಸರ್ಕಾರದ ವೈಫಲ್ಯಗಳನ್ನು ಬಯಲು ಮಾಡುವ ವೇದಿಕೆಯನ್ನಾಗಿ ಮಾಡಿಕೊಳ್ಳಲು ಕಾಂಗ್ರೆಸ್ ಶಾಸಕಾಂಗ ಸಭೆ ತೀರ್ಮಾನಿಸಿದೆ.

ಕೊರೊನಾ ನಿರ್ವಹಣೆ, ಡಿ.ಜೆ. ಹಳ್ಳಿ ಗಲಭೆ, ಡ್ರಗ್ಸ್ ಹಗರಣ ಸೇರಿದಂತೆ ರಾಜ್ಯದ ಕಾನೂನು ಸುವ್ಯವಸ್ಥೆ, ಪ್ರವಾಹ, ಸುಗ್ರೀವಾಜ್ಞೆ ಮೂಲಕ ವಿವಿಧ ಕಾಯಿದೆಗಳಿಗೆ ತಂದಿರುವ ತಿದ್ದುಪಡಿ ಮತ್ತಿತರ ಪ್ರಮುಖ ವಿಚಾರಗಳನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಸರ್ಕಾರನವನ್ನು ಇಕ್ಕಟ್ಟಿಗೆ ಸಿಲುಕಿಸುವ ಮೂಲಕ ವೈಫಲ್ಯಗಳನ್ನು ಜನತೆಯ ಮುಂದೆ ಅನಾವರಣಗೊಳಿಸಲು ಸಭೆ ನಿರ್ಧರಿಸಿದೆ.

ಪ್ರತಿಪಕ್ಷ ನಾಯಕರೂ ಆಗಿರುವ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಕೇವಲ 8 ದಿನಗಳ ಅವಧಿಗೆ ಅಧಿವೇಶನ ಕರೆಯಲಾಗಿದೆ. ಆದ್ದರಿಂದ ಸಮಯ ವ್ಯರ್ಥ ಮಾಡದೆ ಕಲಾಪದ ಅವಧಿಯನ್ನು ಸರ್ಕಾರದ ವಿರುದ್ಧದ ಹೋರಾಟಕ್ಕೆ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕೆಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.

ಇಂದು ಇಡೀ ದಿನ ನಡೆದ ಶಾಸಕಾಂಗ ಸಭೆಯಲ್ಲಿ ಮಹತ್ವದ ವಿಚಾರಗಳ ಬಗ್ಗೆ ಸುಧೀರ್ಘವಾಗಿ ಸಮಾಲೋಚನೆ ನಡೆದು ಅಧಿವೇಶನ ಸಂದರ್ಭದಲ್ಲಿ ಅನುಸರಿಸಬೇಕಾದ ರಣತಂತ್ರದ ಬಗ್ಗೆ ಶಾಸಕರು ಚರ್ಚೆ ನಡೆಸಿದರು. ಮಧ್ಯಾಹ್ನ 12 ಗಂಟೆಗೆ ಆರಂಭವಾದ ಸಭೆ ಸಂಜೆ 6.30ರ ವೇಳೆಗೆ ಮುಕ್ತಾಯವಾಯಿತು.

ಆರಂಭದಲ್ಲಿ ಶಾಸಕಾಂಗ ಪಕ್ಷದ ಕಾರ್ಯದರ್ಶಿ ತುಕಾರಾಂ ಅವರು ಸ್ವಾಗತ ಕೋರಿದರು. ಬಳಿಕ ಎಐಸಿಸಿ ವತಿಯಿಂದ ವಿವಿಧ ರಾಜ್ಯಗಳಿಗೆ ಉಸ್ತುವಾರಿಗಳಾಗಿ ನೇಮಕವಾಗಿರುವ ಹಿರಿಯ ನಾಯಕರಾದ ಎಚ್.ಕೆ. ಪಾಟೀಲ್, ದಿನೇಶ್ ಗುಂಡೂರಾವ್ ಹಾಗೂ ಎಐಸಿಸಿ ಚುನಾವಣಾ ಪ್ರಾಧಿಕಾರದ ಸದಸ್ಯರಾಗಿ ನೇಮಕಗೊಂಡಿರುವ ಕೃಷ್ಣ ಬೈರೇಗೌಡ ಅವರನ್ನು ಅಭಿನಂದಿಸಲಾಯಿತು.

ಪ್ರಾಸ್ತಾವಿಕ ಭಾಷಣ ಮಾಡಿದ ಸಿದ್ದರಾಮಯ್ಯ ಅವರು, ಸದನದಲ್ಲಿ ಚರ್ಚೆಗೆ ಕೈಗೆತ್ತಿಕೊಳ್ಳಬೇಕಾದ ವಿಷಯಗಳು ಹಾಗೂ ಅನುಸರಿಸಬೇಕಾದ ನಿಲವುಗಳ ಬಗ್ಗೆ ಸದಸ್ಯರಿಗೆ ವಿವರಿಸಿದರು.

ಕೊರೊನಾ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭಾರಿ ಭ್ರಷ್ಟಾಚಾರವಾಗಿದೆ. ಈ ಬಗ್ಗೆ ಪಕ್ಷದ ವತಿಯಿಂದ ಈಗಾಗಲೇ ಹೋರಾಟ ಕೈಗೆತ್ತಿಕೊಳ್ಳಲಾಗಿದೆ. ಸದನದಲ್ಲಿಯೂ ಈ ಬಗ್ಗೆ ಪ್ರಸ್ತಾಪ ಮಾಡಬೇಕಿದೆ ಎಂದು ಹೇಳಿದರು.

ಡ್ರಗ್ಸ್ ಹಗರಣದ ಚರ್ಚೆಯನ್ನು ಸರ್ಕಾರ ಮುನ್ನೆಲೆಗೆ ತಂದು ಬೇರೆ ವಿಚಾರಗಳನ್ನು ಬದಿಗೆ ತರಿಸುವ ಪ್ರಯತ್ನ ಮಾಡಬಹುದು. ಇದಕ್ಕೆ ಅವಕಾಶ ಮಾಡಿಕೊಡಬಾರದು. ಎಂಟು ದಿನಗಳ ಕಾಲ ನಡೆಯುವ ಅಧಿವೇಶನದಲ್ಲಿ ಸರ್ಕಾರದ ವೈಫಲ್ಯಗಳು ಜನರಿಗೆ ಮನದಟ್ಟು ಆಗುವಂತೆ ಕಾರ್ಯತಂತ್ರ ರೂಪಿಸಬೇಕಿದೆ ಎಂದು ತಿಳಿಸಿದರು.

ಭೂ ಸುಧಾರಣೆ ಕಾಯಿದೆ, ಎಪಿಎಂಸಿ ಕಾಯಿದೆ, ಕಾರ್ಮಿಕ ಕಾಯಿದೆ ಸೇರಿದಂತೆ ಹಲವಾರು ಕಾಯಿದೆಗಳಿಗೆ ತಿದ್ದುಪಡಿ ತಂದು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತರುವ ಮುನ್ನ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಅಭಿಪ್ರಾಯವನ್ನೇ ಕೇಳಿಲ್ಲ. ರಾಜ್ಯ ಸರ್ಕಾರವನ್ನು ಕೇಂದ್ರ ಮುನ್ಸಿಪಾಲಿಟಿ ರೀತಿ ನಡೆಸಿಕೊಳ್ಳುತ್ತಿದೆ ಎಂದು ಹೇಳಿದರು.

ಕಳೆದ ವರ್ಷವೂ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿತ್ತು. ಆಗ ಸಂತ್ರಸ್ಥರಾದವರಿಗೇ ಇನ್ನೂ ಪರಿಹಾರ ಸಿಕಿಲ್ಲ. ಈ ವರ್ಷ ಪ್ರವಾಹದಿಂದ ಹಾನಗೊಳಗಾದವರಿಗೂ ಪರಿಹಾರ ಎಂಬುದು ಕನಸಿನ ಮಾತಾಗಿಯೇ ಉಳಿದಿದೆ.
ಇನ್ನು ರಾಜ್ಯದಲ್ಲಿ ಆರ್ಥಿಕ ವ್ಯವಸ್ಥೆ ಕುಸಿದಿದ್ದು ಸಕಾರ ದಿವಾಳಿಯಾಗಿದೆ. ಪಿಂಚಣಿ ನೀಡಲೂ ಪರದಾಡುವ ಸ್ಥಿತಿಗೆ ಸರ್ಕಾರ ತಲುಪಿದೆ.

53 ಸಾವಿರ ಕೋಟಿ ರೂ. ಸಾಲ ಪಡೆಯುವುದಾಗಿ ಬಜೆಟ್‍ನಲ್ಲಿ ಘೋಷಿಸಲಾಗಿತ್ತು. ಇದೀಗ ಮತ್ತೆ 33 ಸಾವಿರ ಕೋಟಿ ರೂ. ಸಾಲ ಪಡೆಯಲು ಸರ್ಕಾರ ಮುಂದಾಗಿದೆ. ಈ ಮಧ್ಯೆ ಲಾಕ್‍ಡೌನ್ ಸಂದರ್ಭದಲ್ಲಿ ವಿವಿಧ ಸಮುದಾಯಗಳಿಗೆ, ಆಟೋ, ಟ್ಯಾಕ್ಸಿ ಚಾಲಕರಿಗೆ ಘೋಷಣೆ ಮಾಡಿದ ಪರಿಹಾರವೂ ಸಿಕ್ಕಿಲ್ಲ. ಇದೆಲ್ಲವನ್ನೂ ಸದನದಲ್ಲಿ ಚರ್ಚಿಸಬೇಕಿದೆ.

ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಘಟನೆಗೆ ಸರ್ಕಾರ, ಪೊಲೀಸ್ ಇಲಾಖೆ, ಗುಪ್ತಚರ ಇಲಾಖೆಯ ವೈಫಲ್ಯ ಮುಖ್ಯ ಕಾರಣ. ಈ ಸಂಬಂಧ ಪಕ್ಷದ ವತಿಯಿಂದ ಈಗಾಗಲೇ ಸತ್ಯಶೋಧನಾ ಸಮಿತಿ ರಚನೆಯಾಗಿದ್ದು, ಸಮಿತಿ ನೀಡುವ ವರದಿ ಆಧರಿಸಿ ಸದನದಲ್ಲಿ ಚರ್ಚಿಸೋಣ ಎಂದು ಸಿದ್ದರಾಮಯ್ಯ ಅವರು ತಿಳಿಸಿದರು. ಸದನದಲ್ಲಿ ಮಂಡಿಸಬೇಕಾದ ನಿಲುವಳಿ ಸೂಚನೆ, ಗಮನ ಸೆಳೆಯುವ ಸೂಚನೆಗಳ ಬಗ್ಗೆಯೂ ಅವರು ಸಮಗ್ರವಾಗಿ ವಿವರಿಸಿದರು.

ಪ್ರಶ್ನೆಗಳ ಬ್ಯಾಂಕ್ :
ಇದೇ ಮೊದಲ ಬಾರಿಗೆ ಪಕ್ಷ ಪ್ರಶ್ನೆಗಳ ಬ್ಯಾಂಕ್ ಸಿದ್ಧಪಡಿಸಿದೆ. ಅದನ್ನು ಎಲ್ಲ ಶಾಸಕರು ಬಳಸಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಮನವಿ ಮಾಡಿದರು.

ಕೊರೊನಾ ಅವ್ಯವಹಾರ ನಮಗೆ ಸಿಕ್ಕಿರುವ ಬಹುದೊಡ್ಡ ಅಸ್ತ್ರ. ಅದನ್ನು ಸರ್ಕಾರದ ವಿರುದ್ಧ ಪರಿಣಾಮಕಾರಿಯಾಗಿ ಪ್ರಯೋಗಿಸಬೇಕು ಎಂದು ಹೇಳಿದರು.

ಸಾಮಾಜಿಕ ಜಾಲ ತಾಣವನ್ನು ಶಾಸಕರು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಹೇಳಿದ ಅವರು, ಮುಂಬರುವ ಶಿರಾ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ, ಬಿಬಿಎಂಪಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳ ಬಗ್ಗೆಯೂ ಮಾತನಾಡಿದರು. ಶಿರಾ ಕ್ಷೇತ್ರಕ್ಕೆ ನಡೆಯುವ ಚುನಾವಣೆಯಲ್ಲಿ ಒಗ್ಗಟ್ಟಿನ ಹೋರಾಟ ನಡೆಸುವ ಅಗತ್ಯವಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾದ ಎಸ್.ಆರ್. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹಮದ್, ಸತೀಶ್ ಜಾರಕಿಹೊಳಿ, ಹಿರಿಯ ನಾಯಕರಾದ ಡಾ. ಜಿ. ಪರಮೇಶ್ವರ, ಬಿ.ಕೆ. ಹರಿಪ್ರಸಾದ್, ನಸೀರ್ ಅಮದ್ ಮತ್ತಿತರರು ಭಾಗವಹಿಸಿದ್ದರು.

ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
ಸಕ್ರಿಯವಾಗಿ ಭಾಗವಹಿಸಿ
ಕಲಾಪದಲ್ಲಿ ಎಲ್ಲ ಶಾಸಕರು ಸಕ್ರಿಯವಾಗಿ ಭಾಗವಿಸುವುದರ ಜೊತೆಗೆ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಸಿದ್ದರಾಮಯ್ಯ ಅವರು ಶಾಸಕಾಂಗ ಸಭೆಯಲ್ಲಿ ಮನವಿ ಮಾಡಿದರು.

ಕೊರೊನಾ ಬಗ್ಗೆ ಮುಂಜಾಗ್ರತೆ ವಹಿಸಿ. ಈ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ಮಾಸ್ಕ್ ಕಡ್ಡಾಯವಾಗಿ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಅಧಿವೇಶನಕ್ಕೆ ಮುನ್ನ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಅವರು ಹೇಳಿದರು.

ಹಲವಾರು ಶಾಸಕರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಆದ್ದರಿಂದ ಉದಾಸೀನ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.

ಕೆ.ಸಿ ಜನರಲ್ ಆಸ್ಪತ್ರೆ ಆವರಣದಲ್ಲಿ 100 ಹಾಸಿಗೆಗಳ ಸುಸಜ್ಜಿತ ಮಾಡ್ಯೂಲರ್ ಐಸಿಯು

ಬೆಂಗಳೂರು: ಮಲ್ಲೇಶ್ವರದ ಕೆ.ಸಿ ಜನರಲ್ ಆಸ್ಪತ್ರೆ ಆವರಣದಲ್ಲಿ 100 ಹಾಸಿಗೆಗಳ ಕೋವಿಡ್ ಮಾಡ್ಯೂಲರ್ ಐಸಿಯು ಘಟಕವನ್ನು ಸ್ಥಾಪಿಸಲಾಗಿದ್ದು, ಅದು ಇನ್ನು ಹತ್ತು ದಿನಗಳಲ್ಲಿ ಕಾರ್ಯಾರಂಭ ಮಾಡಲಿವೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ಸರಕು ಸಾಗಣೆ ಕಂಟೇನರ್ ಗಳಲ್ಲಿ 50 ಹಾಸಿಗೆಗಳ ಐಸಿಯು ಮತ್ತು ಆಸ್ಪತ್ರೆ ಆವರಣದಲ್ಲೇ ಇದ್ದ ಐಪಿಪಿ ಕಟ್ಟಡದಲ್ಲಿ 50 ಹಾಸಿಗೆಗಳ ರಿಮೋಟ್ ಐಸಿಯು ಸಿದ್ಧಪಡಿಸಲಾಗಿದೆ. ಇವೆರಡೂ ಘಟಕಗಳನ್ನು ಖುದ್ದು ಬುಧವಾರ ಪರಿಶೀಲಿಸಿದ ಡಿಸಿಎಂ ಪ್ರಗತಿಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.

11 ಮಂದಿ ದಾನಿಗಳ ನೆರವಿನಿಂದ ಇಷ್ಟೆಲ್ಲ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಸಂಕಷ್ಟ ಕಾಲದಲ್ಲಿ ಜನರ ನೆರವಿಗೆ ಬಂದ ದಾನಿಗಳಿಗೆ ಸರಕಾರ ಋಣಿಯಾಗಿದೆ ಎಂದು ತಿಳಿಸಿದರು.

ಈ ಮೊದಲು ಈ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವುದು ಕಷ್ಟವಾಗುತ್ತಿತ್ತು. ಐಸಿಯುಗಳು ಸೇರಿ ಸಾಮಾನ್ಯ ಹಾಸಿಗೆಗಳ ಕೊರತೆ ಇತ್ತು. ಈ ಹಿನ್ನೆಲೆಯಲ್ಲಿ ಐಪಿಪಿ ಕಚೇರಿಯನ್ನು ಬೇರೆಡೆಗೆ ಸ್ಥಳಾಂತರಿಸಿ ಆ ಕಟ್ಟಡದಲ್ಲಿ 50 ಅತ್ಯಾಧುನಿಕ ವೆಂಟಿಲೇಟರುಗಳನ್ನು ಆಳವಡಿಸಿ ಅದನ್ನು ಆಧುನಿಕವಾದ ತೀವ್ರನಿಗಾ ಘಟಕವನ್ನಾಗಿ ರೂಪಿಸಲಾಗಿದೆ. ಎಲ್ಲ ವೆಂಟಿಲೇಟರುಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ದ್ರವರೂಪದ ಆಮ್ಲಜನಕ ಪೂರೈಸುವ ವ್ಯವಸ್ಥೆ ಮಾಡಲಾಗಿದೆ. ಇವುಗಳಿಗೆ ಆತ್ಯಾಧುನಿಕ ಮಾನಿಟರ್ ಗಳನ್ನು ಕೂಡ ಆಳವಡಿಸಲಾಗುತ್ತಿದ್ದು, ಅವುಗಳ ಖರೀದಿಗೆ ಈಗಾಗಲೇ ಸರಕಾರ ಅನುಮತಿ ನೀಡಿದೆ ಎಂದು ಉಪ ಮುಖ್ಯಮಂತ್ರಿ ಮಾಹಿತಿ ನೀಡಿದರು.

ಈ ಘಟಕಗಳಿಗೆ ಇನ್ನು ಅಗತ್ಯವಿರುವ ಇತರೆ ಅಗತ್ಯ ಉಪಕರಣಗಳನ್ನು ಶೀಘ್ರವೇ ಒದಗಿಲಾಗುವುದು. ಜತೆಗೆ ಸಿಬ್ಬಂದಿಯನ್ನೂ ನಿಯೋಜಿಸಲಾಗುವುದು. ಬೆಂಗಳೂರಿನ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾದ ಕೆಸಿ ಜನರಲ್ ಆಸ್ಪತ್ರೆಯೂ ಒಂದಾಗಿದ್ದು, ಇನ್ನು ಮುಂದೆ ಕೋವಿಡ್ ರೋಗಿಗಳಿಗೆ ಇಲ್ಲಿ ಉತ್ತಮ ಚಿಕಿತ್ಸೆ ಸಿಗಲಿದೆ ಎಂದು ಡಿಸಿಎಂ ಹೇಳಿದರು.

ಹೇಗಿರುತ್ತದೆ ಕೋವಿಡ್ ಮಾಡ್ಯೂಲರ್ ಐಸಿಯು?

ಈ ಐಸಿಯುಗಳ ಅನುಕೂಲವೆಂದರೆ, ಎಲ್ಲಿಗೆ ಬೇಕಾದರೂ ಇವುಗಳನ್ನು ಸುಲಭವಾಗಿ ಸಾಗಿಸಬಹುದು. ಸುಲಭವಾಗಿ ಇಡಬಹುದು. ನಿರ್ವಹಣೆಯೂ ಸುಲಭ. ಪ್ರಾಯೋಗಿಕವಾಗಿ ಇವುಗಳನ್ನು ಮೊದಲು ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಉಪ ಮುಖ್ಯಮಂತ್ರಿಗಳ ಪರಿಕಲ್ಪನೆಯಂತೆ ಬಳಸಲಾಗುತ್ತಿದೆ. ಅಲ್ಲಿ ಒಮ್ಮೆಲೆ ಇಂಥ 10 ಕಂಟೇನರ್ ಐಸಿಯುಗಳನ್ನು ಹಾಕಿದ್ದು, ಪ್ರತಿ ಐಸಿಯುನಲ್ಲಿ ಐದು ಸುಸಜ್ಜಿತ, ಅತ್ಯಾಧುನಿಕ ಹಾಸಿಗೆಗಳು ಇರುತ್ತವೆ.

ಈ ಐಸಿಯು ಒಂದರ ಗಾತ್ರ 12.135 X 3.3 X 2.62 ಮೀಟರ್. ಹಡಗುಗಳಲ್ಲಿ ಸರಕು ಸಾಗಾಣಿಕೆಗೆ ಬಳಸಲಾಗುವ ಬೃಹತ್ ಗಾತ್ರದ ಕಂಟೈನರುಗಳಲ್ಲಿ ಈ ಐಸಿಯುಗಳನ್ನು ಅಭಿವೃದ್ಧಿ ಮಾಡಲಾಗಿದೆ. ಇದನ್ನು ಸಾಗಿಸುವುದು ಸುಲಭ ಹಾಗೂ ಯಾವುದೇ ವಾತಾವರಣಕ್ಕೂ ಸರಿಹೊಂದುವ ತಾಂತ್ರಿಕ ಸೌಲಭ್ಯವನ್ನು ಇವು ಹೊಂದಿವೆ. ಆಮ್ಲಜನಕ ವ್ಯವಸ್ಥೆ ಜತೆಗೆ ಹವಾನಿಯಂತ್ರಿತ ವ್ಯವಸ್ಥೆ ಮಾಡಲಾಗಿದೆ. ಕಂಪ್ಲೀಟ್ ಏರ್ ಟೈಟ್ ಆಗಿರುತ್ತದೆ. ಕ್ಯಾಮೆರಾ ಕೂಡ ಇದ್ದು, ಆನ್ ಲೈನ್ ಚಿಕಿತ್ಸೆ ನೀಡಲು ಬೇಕಾದ ಎಲ್ಲ ಪರಿಕರಗಳನ್ನು ಅಳವಡಿಸಲಾಗಿದೆ. ಎಲ್ಲ ಕಂಟೈನರುಗಳಲ್ಲಿ ಶುದ್ಧ ಗಾಳಿಯನ್ನು ತುಂಬಿಸಲಾಗಿದ್ದು, ಪ್ರತ್ಯೇಕವಾದ ಸಿವಿಯೇಜ್ ಮತ್ತು ನೀರಿನ ಸಂಪರ್ಕವೂ ಇರುತ್ತದೆ. ಪ್ರತಿ ಕಂಟೈನರ್’ಗೆ 5 ಬೆಡ್ ಇದ್ದು, ಅದಕ್ಕೆ ಇನ್ನೊಂದು ಕಂಟೈನರ್ ಸೇರಿದರೆ 10 ಬೆಡ್’ಗಳಾಗುತ್ತವೆ. ಆಯಾ ಆಸ್ಪತ್ರೆಗಳ ವೈದ್ಯರೇ ಇವುಗಳಲ್ಲಿ ದಾಖಲಾಗಿರುವ ರೋಗಿಗಳಿಗೂ ಚಿಕಿತ್ಸೆ ನೀಡಬಹುದು.

ದೇಶದಲ್ಲೇ ಹೊಸ ಪ್ರಯೋಗ:

ಸರಕು ಸಾಗಣೆ ಮಾಡುವ ಕಂಟೈನರುಗಳಲ್ಲಿ ಐಸಿಯು ಮಾಡಬಹುದು ಎಂಬ ಆಲೋಚನೆಯೇ ವಿನೂತನ. ದೇಶದಲ್ಲೇ ಮೊತ್ತಮೊದಲ ಬಾರಿಗೆ ಇಂಥ ತುರ್ತು ಚಿಕಿತ್ಸಾ ಘಟಕಗಳನ್ನು ನಮ್ಮ ರಾಜ್ಯದಲ್ಲಿ ಸಿದ್ಧಪಡಿಸಲಾಗಿದೆ. ನಮ್ಮ ಸಂಶೋಧಕರು, ತಜ್ಞರ ಸೃಜನಶೀಲತೆಗೆ ಇದೊಂದು ಉತ್ತಮ ಉದಾಹರಣೆ. ಪ್ರಸಕ್ತ ಕಾಲದ ಅಗತ್ಯಕ್ಕೆ ತಕ್ಕಂತೆ ಇವುಗಳನ್ನು ಅತ್ಯಾಧುನಿಕವಾಗಿ ರೂಪಿಸಲಾಗಿದೆ. ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಹಾಗೂ ಬಳಸಲಾಗಿರುವ ಎಲ್ಲ ಉಪಕರಣಗಳು ಉತ್ತಮವಾಗಿವೆ ಎಂದು ಡಾ. ಸಿ.ಎನ್. ಅಶ್ವತ್ಥನಾರಾಯಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಾಯೋಗಿಕವಾಗಿ ಮೊದಲಿಗೆ ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆಗೆ ಹತ್ತು ಕಂಟೈನರು ಗಳನ್ನು ಒದಗಿಸಲಾಗುತ್ತಿದೆ. ಅಲ್ಲಿನ ವೈದ್ಯರೇ ಇವುಗಳಲ್ಲಿ ದಾಖಲಾಗುವ ರೋಗಿಗಳಿಗೆ ಚಿಕಿತ್ಸೆ ನೀಡುವರು. ತುರ್ತು ಸಂದರ್ಭಗಳು, ಅದರಲ್ಲೂ ನೈಸರ್ಗಿಕ ವಿಕೋಪದಂಥ ದುರಂತಗಳು ಎದುರಾದಾಗ ಇಂಥ ಐಸಿಯುಗಳು ಹೆಚ್ಚು ಪರಿಣಾಮಕಾರಿ.

ಶಸ್ತ್ರಚಿಕಿತ್ಸಾ ಘಟಕ ಹಾಗೂ ಕ್ಲೀನ್ ರೂಮುಗಳನ್ನು ಅಭಿವೃದ್ಧಿಪಡಿಸುವಲ್ಲಿ ಹೆಸರಾಗಿರುವ ಬೆಂಗಳೂರು ಮೂಲದ ’ರಿನ್ಯಾಕ್’ ಎಂಬ ಕಂಪನಿ ಇವುಗಳನ್ನು ಅಭಿವೃದ್ಧಿಪಡಿಸಿದೆ. ಇದನ್ನು ಸಾಗಿಸುವುದು ಅತ್ಯಂತ ಸುಲಭ. ಯಾವುದೇ ವಾತಾವರಣಕ್ಕೂ ಸರಿಹೊಂದುವ ತಾಂತ್ರಿಕ ಸೌಲಭ್ಯವನ್ನು ಹೊಂದಿರುತ್ತವೆ. ಇವುಗಳನ್ನು ಜಾಗತಿಕ ಗುಣಮಟ್ಟವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸಿದ್ಧಪಡಿಸಲಾಗಿದೆ.

ಹಾಸಿಗೆಗಳ ಕೊರತೆ ಇಲ್ಲ:

ಬೆಂಗಳೂರಿನಲ್ಲಿ ಕೋವಿಡ್ ಮತ್ತು ಕೋವಿಡ್ಯೇತರ ರೋಗಿಗಳಿಗೆ ಹಾಸಿಗೆಗಳ ಕೊರತೆ ಇಲ್ಲ. ಎಲ್ಲ ಆಸ್ಪತ್ರೆ ಗಳಲ್ಲೂ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಕೆಲ ಆಸ್ಪತ್ರೆಗಳಲ್ಲಿ ಅತ್ಯಂತ ಕಡಿಮೆ ಹಾಸಿಗೆಗಳಿದ್ದವು. ಈಗ ಅಂತಹ ಆಸ್ಪತ್ರೆಗಳಲ್ಲಿ ನೂರಾರು ಹಾಸಿಗೆಗಳು ಇವೆ. ಕೆಲವೆಡೆಯಂತೂ 400, 600 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಜಯನಗರ, ಸಿವಿ ರಾಮನ್ ನಗರ ಆಸ್ಪತ್ರೆಗಳಲ್ಲಿ ಹೆಚ್ಚಿನ ಹಾಸಿಗೆಗಳನ್ನು ಹಾಕಲಾಗಿದೆ. ಹೀಗಾಗಿ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಡಿಸಿಎಂ ಅವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ; ಪರಿಷತ್ ಸದಸ್ಯರ ಜತೆ ಚರ್ಚಿಸಿದ ಡಿಸಿಎಂ

ಬೆಂಗಳೂರು: ಸೋಮವಾರದಿಂದ ವಿಧಾನಮಂಡಲ ಕಲಾಪ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬುಧವಾರ ವಿಧಾನ ಪರಿಷತ್ ಪದವೀಧರ ಮತ್ತು ಶಿಕ್ಷಕ ಕ್ಷೇತ್ರದ ಎಲ್ಲ ಪಕ್ಷಗಳ ಸದಸ್ಯರ ಜತೆ ಮಹತ್ವದ ಮಾತುಕತೆ ನಡೆಸಿದ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಇಲಾಖೆಯಲ್ಲಿ ಕಳೆದ ಒಂದು ವರ್ಷದಿಂದ ಜಾರಿಗೆ ತಂದಿರುವ ವಿವಿಧ ಸುಧಾರಣೆಗಳ ಬಗ್ಗೆ ಮಾಹಿತಿ ನೀಡಿದರು.

ಕೋವಿಡ್ ಬರುವ ಮುನ್ನ ಹಾಗೂ ಕೋವಿಡ್ ನಂತರ ಇಲಾಖೆಯಲ್ಲಿ ಅನುಷ್ಟಾನಗೊಂಡಿರುವ ಆನ್ ಲೈನ್ ಅಫಿಲಿಯೇಷನ್, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಕ್ರಮ ಸೇರಿ ಎಲ್ಲ ಕಾರ್ಯಕ್ರಮಗಳ ಬಗ್ಗೆ ಪರಿಷತ್ ಸದಸ್ಯರಿಗೆ ವಿವರ ನೀಡಿದ ಡಿಸಿಎಂ, ಕೋವಿಡ್ ಹಿನ್ನೆಲೆಯಲ್ಲಿ ಡಿಜಿಟಲ್ ಲರ್ನಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ಅದು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ ಎಂದರು. ಈ ಬಗ್ಗೆ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ಸದಸ್ಯರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು.

ವರ್ಗಾವಣೆ ನೀತಿ ಬದಲು:

ರಾಜ್ಯದಲ್ಲಿ ಈಗಾಗಲೇ ಜಾರಿಯಲ್ಲಿರುವ ಉಪನ್ಯಾಸಕರ ವರ್ಗಾವಣೆಯ ನಿಯಮಗಳನ್ನು ಬದಲಿಸಲಾಗುವುದು. ಈಗಿರುವ 2016ರ ವರ್ಗಾವಣೆ ಕಾಯ್ದೆಯನ್ನು ವಾಪಸ್ ಪಡೆದು ಸೂಕ್ತವಾದ ತಿದ್ದುಪಡಿಗಳೊಂದಿಗೆ ಹೊಸ ನಿಯಮಗಳನ್ನು ತರಲಾಗುವುದು. ಕಳೆದ ಅಧಿವೇಶನದಲ್ಲಿಯೇ ಇದರಲ್ಲಿ ಕೆಲ ತಿದ್ದುಪಡಿಗಳನ್ನು ಮಾಡುವ ಉದ್ದೇಶವಿತ್ತು. ಆದರೆ, ಆ ಕಾಯ್ದೆಯಲ್ಲಿ ಹಲವಾರು ದೋಷಗಳಿದ್ದ ಕಾರಣ ಇಡೀ ಕಾಯ್ದೆಯನ್ನೇ ವಾಪಸ್ ಪಡೆದು ಹೊಸ ನಿಯಮ ರೂಪಿಸಲು ನಿರ್ಧರಿಸಲಾಗಿದೆ. ಹೀಗೆ ಮಾಡುವುದರಿಂದ ವರ್ಗಾವಣೆ ನಿಯಮಗಳು ಸರಳವಾಗಿರುತ್ತವೆ, ಗೊಂದಲಗಳು ಇರುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಈಗಾಗಲೇ ಈ ಕಾಯ್ದೆಯ ಬಗ್ಗೆ ನಿಮ್ಮಿಂದಲೂ ಸಲಹೆ ಪಡೆಯಲಾಗಿದೆ. ಅದೇ ರೀತಿ ಶಿಕ್ಷಕರ ಸಂಘದ ಪದಾಧಿಕಾರಿಗಳಿಂದಲೂ ಸಲಹೆಗಳನ್ನು ಪಡೆಯಲಾಗಿದೆ. ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿಯೇ ಮಂಡಿಸಲಾಗುವುದು. ಬಳಿಕ ಅದಕ್ಕೆ ಬರುವ ಆಕ್ಷೇಪ ಮತ್ತಿತರೆ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಾಯ್ದೆಯಾಗಿ ಜಾರಿಗೆ ತರಲಾಗುವುದು ಎಂದ ಡಿಸಿಎಂ, ಕಾಯ್ದೆಯು ಅತ್ಯಂತ ಪರಿಣಾಮಕಾರಿ ಹಾಗೂ ಪರಿಪೂರ್ಣವಾಗಿರುತ್ತದೆ ಎಂಬ ನಂಬಿಕೆ ನನ್ನದು ಎಂದರು. ಈ ಕಾಯ್ದೆ ಬಗ್ಗೆಯೂ ಕೂಡ ಪರಿಷತ್ ಸದಸ್ಯರೆಲ್ಲರೂ ಸಹಮತ ವ್ಯಕ್ತಪಡಿಸಿದರು.

ಅನುಭವಿ ಅಧಿಕಾರಿಗಳ ನೇಮಕ:

ವಿಶ್ವವಿದ್ಯಾಲಯಗಳಲ್ಲಿನ ಆಡಳಿತಕ್ಕೆ ಮತ್ತಷ್ಟು ಚುರುಕು ನೀಡುವ ಉದ್ದೇಶದಿಂದ ಎಲ್ಲ ವಿವಿಗಳ ರಿಜಿಸ್ಟ್ರಾರ್ ಹುದ್ದೆಗಳಿಗೆ ಐಎಎಸ್ ಅಥವಾ ಕೆಎಎಸ್ ಅಧಿಕಾರಿಗಳನ್ನು ನೇಮಕ ಮಾಡಲು ಸುಗ್ರೀವಾಜ್ಣೆ ತರಲಾಗಿದೆ. ಅದಕ್ಕೆ ಈ ಅಧಿವೇಶನದಲ್ಲಿಯೇ ಒಪ್ಪಿಗೆ ಪಡೆಯಲಾಗುವುದು ಎಂದರು ಡಿಸಿಎಂ.

ಇದಕ್ಕೆ ಪ್ರತಿಕ್ರಿಯಿಸಿದ ಪರಿಷತ್ ಸದಸ್ಯ ವೈ.ಎ.ನಾರಾಯಣ ಸ್ವಾಮಿ, ರಿಜಿಸ್ಟ್ರಾರ್ ಹುದ್ದೆಗೆ ಐಎಎಸ್ ಅಥವಾ ಕೆಎಎಸ್ ಅಧಿಕಾರಿಗಳನ್ನು ತರುವುದು ಉತ್ತಮ ಯೋಚನೆ. ಆದರೆ, ಐಪಿಎಸ್ ಮತ್ತು ಐಎಫ್ಎಸ್ ಅಧಿಕಾರಿಗಳನ್ನು ದಯವಿಟ್ಟು ನೇಮಕ ಮಾಡಬೇಡಿ. ಹಾಗೆಯೇ, ವಿವಿಗಳಲ್ಲಿ ಅಧ್ಯಾಪಕರಿಂದ ಮೊದಲಗೊಂಡು ಎಲ್ಲ ಹಂತಗಳ ನೇಮಕಾತಿಗಾಗಿ ಒಂದು ಕೇಂದ್ರೀಕೃತ ಸೆಲ್ ಮಾಡಿ. ಅದು ಬಿಟ್ಟು ವಿವಿ ಮಟ್ಟದಲ್ಲಿಯೇ ನೇಮಕಾತಿ ಮಾಡಿಕೊಳ್ಳಲು ಅವಕಾಶ ನೀಡಬೇಡಿ. ಹೀಗೆ ಮಾಡುವುದರಿಂದ ಎಲ್ಲ ವಿವಿಗಳಲ್ಲೂ ರಾಜಕಾರಣಿಗಳ ಹಸ್ತಕ್ಷೇಹ ಬಹುತೇಕ ನಿಲ್ಲುತ್ತದೆ. ಜತೆಗೆ ಬಡ್ತಿ ನೀಡುವಾಗ ಸೇವಾ ಹಿರಿತನಕ್ಕಿಂತ ಕಾರ್ಯನಿರ್ವಹಣೆಯ ದಕ್ಷತೆಯನ್ನು ಪರಿಗಣಿಸಿ ಕೊಡಬೇಕು ಹಾಗೂ ವಿವಿಗಳಲ್ಲಿ ಮೂಲಭೂತ ಸೌಕರ್ಯ, ಕಟ್ಟಡಗಳ ನಿರ್ಮಾಣದ ಕೆಲಸವನ್ನು ವಿವಿಗಳ ಆಡಳಿತದಿಂದ ಹೊರಗೆ ತರಬೇಕು ಎಂದೂ ಅವರು ಸಲಹೆ ನೀಡಿದರು. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಡಿಸಿಎಂ ಭರವಸೆ ನೀಡಿದರು.

ಇದೇ ವೇಳೆ, ವಿವಿಗಳಲ್ಲಿ ಅನಗತ್ಯ ಖರೀದಿಗಳಿಗೆ ಕಡಿವಾಣ ಹಾಕಬೇಕು. ಅಗತ್ಯವಿಲ್ಲದ ಸಾಫ್ಟ್ ವೇರ್ ಖರೀದಿ, ಕಂಪ್ಯೂಟರುಗಳ ಖರೀದಿ ಇತ್ಯಾದಿಗಳ ಮೇಲೆ ತೀವ್ರ ನಿಗಾ ನಿಡಬೇಕು. ಇದರಿಂದ ವಿವಿಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದ ಅಂಶವನ್ನು ಕೆಲಸ ಸದಸ್ಯರು ಉಪ ಮುಖ್ಯಮಂತ್ರಿಯ ಗಮನಕ್ಕೆ ತಂದರು.

ಹಾಗೆಯೇ ಉಪ ಕುಲಪತಿ ನೇಮಕದಲ್ಲಿ ಗುಣಮಟ್ಟವನ್ನು ಗಣನೆಗೆ ತೆಗೆದುಕೊಳ್ಳಲೇಬೇಕು. ಅದಕ್ಕೆ ಉತ್ತಮವಾದ ಮಾನದಂಡವನ್ನು ರೂಪಿಸಿ. ಅದಕ್ಕೆ ಅಗತ್ಯಬಿದ್ದರೆ ತಜ್ಞರ ಸಮಿತಿಯನ್ನು ರಚಿಸಿ ಎಂದೂ ಪರಿಷತ್ ಸದಸ್ಯರು ಸಲಹೆ ಮಾಡಿದರು.

ವಿಧಾನ ಪರಿಷತ್ ಸದಸ್ಯರಾದ ಬಸವರಾಜ್ ಹೊರಟ್ಟಿ, ಅರುಣ್ ಶಹಾಪುರ, ಅ. ದೇವೇಗೌಡ, ತಾರಾ ಅನುರಾಧ, ಹನುಮಂತ್ ನಿರಾಣಿ, ಮರಿತಿಬ್ಬೆ ಗೌಡ ಮುಂತಾದವರು ಈ ಸಭೆಯಲ್ಲಿ ಉಪಸ್ಥಿತರಿದ್ದರು.

ಹೊಂ ಕ್ವಾರಂಟೈನ್ ನಿಂದಾಗಿ ಇನ್ನೂ ಒಂದು ವಾರ ಯಾರನ್ನೂ ಭೇಟಿಯಾಗಲು ಸಾಧ್ಯವಿಲ್ಲ: ಡಿ.ಕೆ ಶಿವಕುಮಾರ್

ಬೆಂಗಳೂರು:ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಕೋವಿಡ್ ಸೋಂಕಿನಿಂದ ಗುಣಮುಖನಾಗಿದ್ದೇನೆ. ಇನ್ನೂ ಒಂದು ವಾರ ಹೊಂ ಕ್ವಾರಂಟೈನ್ ಇರಬೇಕಾಗಿರುವುದರಿಂದ ನಾನು ಯಾರನ್ನು ಭೇಟಿ ಮಾಡಲು ಸಾಧ್ಯವಿಲ್ಲ. ಎಲ್ಲರು ದಯವಿಟ್ಟು ಸಹಕರಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮನವಿ ಮಾಡಿದ್ದಾರೆ.

ಈ ವಿಚಾರವಾಗಿ ಜನತೆಗೆ ಮನವಿ ಮಾಡಿರುವ ಡಿ.ಕೆ ಶಿವಕುಮಾರ್, ‘ನಮ್ಮ ನಾಯಕರು, ಕಾರ್ಯಕರ್ತರು, ರಾಜ್ಯದ ಜನರ ಪ್ರಾರ್ಥನೆ, ಹಾರೈಕೆಯಿಂದಾಗಿ ನಾನು ಚೇತರಿಸಿಕೊಂಡು ನಿನ್ನೆಯಷ್ಟೇ ಮನೆಗೆ ಬಂದಿದ್ದೇನೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸಕ್ಕೆ ಧನ್ಯವಾದಗಳು.

ಒಂದು ವಾರಗಳ ಕಾಲ ಮನೆಯಲ್ಲೇ ಇದ್ದು ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿರುವ ಹಿನ್ನೆಲೆಯಲ್ಲಿ ಸದ್ಯ ನಾನು ಯಾರನ್ನೂ ಭೇಟಿ ಮಾಡಲು ಆಗುವುದಿಲ್ಲ. ನೀವುಗಳು ಬಂದಾಗ ನಮ್ಮ ಸಿಬ್ಬಂದಿ ಭೇಟಿ ಮಾಡಲು ಅವಕಾಶ ಸಿಗುವುದಿಲ್ಲ. ಹೀಗಾಗಿ ಮುಂದಿನ ಒಂದು ವಾರ ಯಾರೂ ಮನೆಯ ಬಳಿ ಬರಬೇಡಿ. ಈ ವಿಚಾರದಲ್ಲಿ ತಪ್ಪು ಭಾವಿಸದೆ ಸಹಕರಿಸಬೇಕಾಗಿ ವಿನಂತಿಸುತ್ತೇನೆ. ನಿಮ್ಮ ಪ್ರೀತಿ ವಿಶ್ವಾಸ ನನ್ನ ಶಕ್ತಿ. ಅದಕ್ಕಾಗಿ ಕೋಟಿ ನಮಸ್ಕಾರಗಳು. ಮುಂದಿನ ಒಂದು ವಾರ ನನಗೆ ಕಾಲಾವಕಾಶ ಮಾಡಿ ಕೊಡಿ ಎಂದು ಈ ಮೂಲಕ ಕೇಳಿಕೊಳ್ಳುತ್ತೇನೆ. ಧನ್ಯವಾದಗಳು’ ಎಂದು ತಿಳಿಸಿದ್ದಾರೆ.

ಕದ್ದು ಮುಚ್ಚಿ ಕೊಲಂಬೋ ಯಾತ್ರೆ ಮಾಡಿರಲಿಲ್ಲ: ಎಚ್ಡಿಕೆ

ಬೆಂಗಳೂರು:ಕದ್ದು ಮುಚ್ಚಿ ಶ್ರೀಲಂಕಾದ ಕೊಲಂಬೋ ಯಾತ್ರೆ ಮಾಡಿರಲಿಲ್ಲ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಗೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

ಜೆಡಿಎಸ್ ಪಕ್ಷದ ಗೌಪ್ಯ ಕಾರ್ಯಸೂಚಿ ಹಾಗೂ ಮುಂದಿನ ರಾಜಕೀಯ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು ಹಾಗೂ ಪ್ರಮುಖ ನಾಯಕರೊಂದಿಗೆ ಶ್ರೀಲಂಕಾದ ಕೊಲಂಬೋಗೆ ಒಮ್ಮೆ ಪ್ರವಾಸ ಹೋಗಿದ್ದು ನಿಜ. ಆದರೆ, ಕದ್ದು ಮುಚ್ಚಿ ‘ಕೊಲಂಬೋ ಯಾತ್ರೆ’ ಮಾಡಿರಲಿಲ್ಲ ಎಂದು ಕೊಲಂಬೋ ಟೂರ್ ಮಾಡಿದ್ದನ್ನು ಒಪ್ಪಿಕೊಂಡರು.

ಒಂದಾನೊಂದು ಕಾಲದಲ್ಲಿ ನಮ್ಮ ಪಕ್ಷದಲ್ಲಿದ್ದ ರಾಜಕಾರಣಿಯೊಬ್ಬರು ಜೆಡಿಎಸ್ ಶಾಸಕರು ಮತ್ತು ನಾನು ಕೊಲಂಬೋ ಪ್ರವಾಸ ಕೈಗೊಂಡಿದ್ದಾಗಿ ನೀಡಿರುವ ಹೇಳಿಕೆ ಎತ್ತಣ ಮಾಮರ ಎತ್ತಣ ಕೋಗಿಲೆ ಎಂಬಂತಿದೆ.2014 ರ ಜೂನ್ ತಿಂಗಳಲ್ಲಿ ಪಕ್ಷ ಸಂಘಟನೆಗೆ ಬಗ್ಗೆ ವಿಸ್ತೃತವಾಗಿ ಚರ್ಚಿಸಲು ಕೊಲಂಬೋಗೆ ಪ್ರವಾಸ ಹೋಗುವುದಾಗಿ ಬಹಿರಂಗವಾಗಿಯೇ ಮಾಧ್ಯಮಗಳಿಗೆ ಹೇಳಿ ಹೋಗಿದ್ದಲ್ಲದೇ, ಅಲ್ಲಿ ನಡೆದ ಶಾಸಕರ ಜೊತೆಗಿನ ಚರ್ಚೆಯ ದೃಶ್ಯಾವಳಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದೆವು. ಇದರಲ್ಲಿ ಯಾವುದೇ ಗುಟ್ಟು ಇರಲಿಲ್ಲ ಎಂದು ತಿಳಿಸಿದ್ದಾರೆ.

ನೆರೆಯ ರಾಜ್ಯ ಗೋವಾ ಇಲ್ಲವೇ ರಾಜ್ಯದ ರೆಸಾರ್ಟ್ನಲ್ಲಿ ಸಭೆ ನಡೆಸುವುದಕ್ಕಿಂತ ಯಾವುದೇ ಅಡಚಣೆ ಇಲ್ಲದೆ ಶಾಸಕರೊಂದಿಗೆ ಮುಕ್ತವಾಗಿ ಚರ್ಚಿಸಲು ಕೊಲಂಬೋ ಪ್ರವಾಸ ದುಬಾರಿಯಲ್ಲ ಎಂಬ ಕಾರಣಕ್ಕೆ ಇಂತಹ ಸಭೆ ನಡೆಸಿದ್ದು ನಿಜ. ವಿಮಾನ ಹತ್ತುವಾಗಲೂ ಮತ್ತು ವಾಪಸು ಬಂದಾಗ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದೇನೆ. ಕೊಲಂಬೋ ಪ್ರಯಾಣ ಅದೇ ಮೊದಲು ಮತ್ತು ಕೊನೆ. ಇದರಲ್ಲಿ ಬಚ್ಚಿಡುವುದು ಏನೇನೂ ಇಲ್ಲ. ಅವರು ನಮ್ಮೊಂದಿಗೆ ಬಂದಿದ್ದರೆ ಹೊರತು ನಾವು ಅವರೊಂದಿಗೆ ಹೋಗಿರಲಿಲ್ಲ ಎಂದು ಎಲ್ಲ ವಿವರ ನೀಡಿದರು.

ದಾಸರ ಪದ ಉವಾಚ:

ಆಚಾರವಿಲ್ಲದ ನಾಲಿಗೆ ನಿನ್ನ
ನೀಚ ಬುದ್ಧಿಯ ಬಿಡು ನಾಲಿಗೆ
ವಿಚಾರವಿಲ್ಲದೆ ಪರರ ದುಶಿಸುವುದಕ್ಕೆ
ಚಾಚಿ ಕೊಂಡಿರುವಂತ ನಾಲಿಗೆ
ಸತತವು ನುಡಿ ಕಂಡ್ಯ ನಾಲಿಗೆ
ಚಾಡಿ ಹೇಳಲು ಬೇಡ ನಾಲಿಗೆ
ಪುರಂದರ ದಾಸರು