ತಂತ್ರಜ್ಞಾನ ಆಧಾರಿತ ಕೃಷಿ; ರೈತರಿಗೆ ಡಿಸಿಎಂ ಸಲಹೆ

ದಾವಣಗೆರೆ: ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ವ್ಯವಸಾಯ ಮಾಡಿದರೆ ಅತ್ಯುತ್ತಮ ಲಾಭ ಗಳಿಸಬಹುದು. ಈ ನಿಟ್ಟಿನಲ್ಲಿ ರೈತರು ಯೋಚನೆ ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

ಹೊನ್ನಾಳಿ ವಿಧಾನಸಭೆ ಕ್ಷೇತ್ರದಲ್ಲಿ ಮುಖ್ಯಮುಂತ್ರಿ ಗೋವಿಂದ ಕಾರಜೋಳ ಅವರ ಜತೆಗೂಡಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ ಅಶ್ವತ್ಥನಾರಾಯಣ, ಎಲ್ಲರಿಗೂ ಗೊತ್ತಿರುವಂತೆ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ತಂತ್ರಜ್ಞಾನ ಆಭಿವೃದ್ಧಿಯಾಗುತ್ತಿದೆ. ಈ ತಂತ್ರಜ್ಞಾನವನ್ನು ಕೃಷಿ ಉತ್ಪಾದನೆಗೆ ಅನ್ವಯ ಮಾಡಿಕೊಂಡರೆ ಉತ್ತಮ ಲಾಭ ಗಳಿಸಲು ಸಾಧ್ಯವಿದೆ ಎಂದರು.

ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದ ಮೇಲೆ ಅಭಿವೃದ್ಧಿಯ ವೇಗ ಹೆಚ್ಚಾಗಿದ್ದು, ಹೊನ್ನಾಲಿ ಕ್ಷೇತ್ರದಲ್ಲಿಯೇ ಅದನ್ನು ಗಮನಿಸಬಹುದು ಎಂದು ಉಪ ಮುಖ್ಯಮಂತ್ರಿ, ಇನ್ನು ಮುಂದೆ ಯಾವುದೇ ಯೋಜನೆ ತೆವಳುತ್ತಾ ಸಾಗುವುದಿಲ್ಲ. ಕಾಲಮಿತಿಯೊಳಗೆ ಎಲ್ಲವೂ ಕಾರ್ಯಗತವಾಗುತ್ತವೆ ಎಂದರು.

ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ. ಆ ದಿಕ್ಕಿನಲ್ಲಿ ಎಲ್ಲ ಸಚಿವರು, ಶಾಸಕರು, ಅಧಿಕಾರಿಗಳು ಮುಖ್ಯಮಂತ್ರಿಗಳ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ದಿಕ್ಕಿನಲ್ಲಿಯೇ ಹೊನ್ನಾಳಿ ವಿಧಾನಸಭೆ ಕ್ಷೇತ್ರದಲ್ಲಿಯೂ ಕೆಲಸಗಳು ನಡೆಯುತ್ತಿವೆ ಎಂದು ಡಿಸಿಎಂ ಹೇಳಿದರು.

ಶಾಸಕ ರೇಣುಕಾಚಾರ್ಯ ಪ್ರತಿನಿಧಿಸುವ ಹೊನ್ನಾಳಿ ಕ್ಷೇತ್ರದ ಹೊನ್ನಾಳಿ – ನ್ಯಾಮತಿ ಅವಳಿ ತಾಲ್ಲೂಕುಗಳ ವಿವಿಧ ಸರಕಾರಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಮಾಡಲಾಗಿದೆ. ಈ ಕ್ಷೇತ್ರದಲ್ಲಿ ಆಗುತ್ತಿರುವ ಅಭಿವೃದ್ಧಿ ಕಂಡು ಸಂತೋಷವಾಗಿದೆ ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.

ಉದ್ಘಾಟನಾ ಸಮಾರಂಭ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಭೈರತಿ ಬಸವರಾಜು, ಸಂಸದ ಸಿದ್ದೇಶ್ವರ್‌, ದೀಪಾ ಜಗದೀಶ್‌ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕ್ಷೇತ್ರದ ಶಾಸಕ ರೇಣುಕಾಚಾರ್ಯ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ವಸತಿ ಶಿಕ್ಷಣ ಪದ್ದತಿ ದೇಶದ ಗಮನ ಸೆಳೆದಿದೆ : ಗೋವಿಂದ ಕಾರಜೋಳ

ದಾವಣಗೆರೆ. ಸೆ.13: ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣದೊಂದಿಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯ ವಸತಿ ಶಾಲೆಗಳ ಶೈಕ್ಷಣಿಕ ಪದ್ದತಿ ಖ್ಯಾತಿಗಳಿಸಿದ್ದು, ದೇಶದ ಗಮನಸೆಳೆದಿದೆ ಎಂದು ಡಿಸಿಎಂ ಗೋವಿಂದ ಎಂ ಕಾರಜೋಳ ಅವರು ತಿಳಿಸಿದರು.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಯಲ್ಲಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಶಿಕ್ಷಣ, ಪರಿಶಿಷ್ಟರ ಕಲ್ಯಾಣ, ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ರಾಜ್ಯದಲ್ಲಿ 824 ವಸತಿ ಶಾಲೆಗಳಲ್ಲೂ ಅತ್ಯುತ್ತಮವಾದ ಶಿಕ್ಷಣ ನೀಡಿ, ಕಳೆದ ಎಸ್ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ವಾದ ಫಲಿತಾಂಶ ಪಡೆದಿವೆ. ಈ‌ ವಸತಿ ಶಿಕ್ಷಣ ‌ಪದ್ದತಿಯು ದೇಶದ ಗಮನಸೆಳೆದು ನೂತನ ಶಿಕ್ಷಣ ನೀತಿಯಲ್ಲೂ ಉಲ್ಲೇಖಿಸಿ, ಇದೇ ಮಾದರಿಯಲ್ಲಿ ಇತರ ರಾಜ್ಯಗಳಲ್ಲಿ ಪ್ರಾರಂಭಿಸಲು ಕ್ರಮಕೈಗೊಳ್ಳುವಂತೆ ಪ್ರಸ್ತಾಪಿಸಲಾಗಿದೆ. ಕಳೆದ ಒಂದು ವರ್ಷದಲ್ಲಿ 59 ವಸತಿ ಶಾಲೆಗಳನ್ನು ನಿರ್ಮಿಸಲಾಗಿದೆ.ಪ್ರಸಕ್ತ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆಯ ಎಸ್ ಸಿಪಿ ಮತ್ತು ಟಿಎಸ್ ಪಿ ಯೋಜನೆಯ ಅನುದಾನದಲ್ಲಿ 500 ಕೋಟಿ ರೂ. ವೆಚ್ಚದಲ್ಲಿ 25ವಸತಿ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ, ಸಚಿವ ಬಿ.ಎ.ಬಸವರಾಜ್, ಸಂಸದ ಸಿದ್ದೇಶ್ವರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಮತ್ತಿತರರು ಉಪಸ್ಥಿತರಿದ್ದರು.

ಫಾರಿನ್‌ ಇನ್‌ವೆಸ್ಟರ್ಸ್‌ ಕೌನ್ಸಿಲ್‌ ಕರ್ನಾಟಕ ಚಾಪ್ಟರ್‌ ನ ಉದ್ಘಾಟನೆ

ಬೆಂಗಳೂರು ಸೆಪ್ಟೆಂಬರ್‌ 12: ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುವಂತಹ ಏಕಗವಾಕ್ಷಿ ವೆಬ್‌ಸೈಟನ್ನು ಸದ್ಯದಲ್ಲೇ ಪ್ರಾರಂಭಿಸಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.

ನಗರದ ಖಾಸಗಿ ಹೋಟೇಲ್‌ ನಲ್ಲಿ ಎಫ್‌ಸಿಐ ವತಿಯಿಂದ ಆಯೋಜಿಸಲಾಗಿದ್ದ ಫಾರಿನ್‌ ಇನ್‌ವೆಸ್ಟರ್ಸ್‌ ಕೌನ್ಸಿಲ್‌ ಕರ್ನಾಟಕ ಚಾಪ್ಟರ್‌ ನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಜ್ಯ ಸರಕಾರ ರಾಜ್ಯದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಹಾಗೂ ಕೈಗಾರಿಕೆಗಳ ಸ್ಥಾಪನೆ ಆಗಬೇಕು ಎನ್ನುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಿದೆ. ಅಲ್ಲದೆ ಉದ್ಯಮ ಸ್ನೇಹಿ ಉಪಕ್ರಮಗಳನ್ನು ಅನುಷ್ಠಾನಗೊಳಿಸುವತ್ತ ಹೆಚ್ಚಿನ ಗಮನ ಹರಿಸುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಹೊಸ ಕೈಗಾರಿಕಾ ನೀತಿ ಯನ್ನು ಜಾರಿಗೊಳಿಸಿದ್ದು ಹಾಗೂ ಕೈಗಾರಿಕಾ ಸೌಲಭ್ಯ ಅಧಿನಿಯಮದಲ್ಲಿ ಅಮೂಲಾಗ್ರ ಬದಲಾವಣೆಯನ್ನು ಮಾಡಿರುವ ದೇಶದ ಮೊದಲ ರಾಜ್ಯ ಎನ್ನುವ ಹೆಗ್ಗಳಿಕೆ ನಮ್ಮದಾಗಿದೆ ಎಂದರು.

ಏಕಗವಾಕ್ಷಿ ಯೋಜನೆಯ ಮೂಲಕ ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಅನೇಕ ನೀತಿಗಳನ್ನು ರೂಪಿಸಲಾಗುತ್ತಿದೆ. ಅಲ್ಲದೆ, ಈಸ್‌ ಆಫ್‌ ಡೂಯಿಂಗ್‌ ಬ್ಯೂಸಿನೆಸ್‌ ನ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಬಂಡವಾಳ ಹೂಡಿಕೆಗೆ ಸಮಸ್ಯೆಗಳಿಗೂ ಪರಿಹಾರ ನೀಡುವಂತಹ ವೆಬ್‌ಸೈಟ ನ್ನು ರಚಿಸಲಾಗುತ್ತಿದೆ. ಈ ವೆಬ್‌ ಸೈಟ್‌ ನಲ್ಲಿ ಎಲ್ಲಾ ಪ್ರಶ್ನೆಗಳಿಗೆ ಉತ್ತರ ದೊರೆಯಲಿದೆ. ಹಾಗೆಯೇ ಸಮಸ್ಯೆಗಳ ಪರಿಹಾರಕ್ಕೆ ವಿಳಂಬ ತೋರುವ ಅಧಿಕಾರಿಗಳಿಗೆ ರಿಮೈಂಡರ್‌ ನೀಡುವ ವ್ಯವಸ್ಥೆಯೂ ಇರಲಿದೆ ಎಂದು ಹೇಳಿದರು.

ಒಟ್ಟಾರೆಯಾಗಿ ರಾಜ್ಯವನ್ನು ಕೈಗಾರಿಕಾ ಸ್ನೇಹೀ ರಾಜ್ಯವನ್ನಾಗಿಸುವುದು ಹಾಗೂ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸುವುದು ನಮ್ಮ ಮೂಲ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಕೈಗಾರಿಕಾ ಇಲಾಖೆಯ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದಲ್ಲಿ ಹೂಡಿಕೆಗೆ ಪ್ರಶಸ್ತವಾದ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲೂ ಕೈಗಾರಿಕಾ ಸಂಘ ಸಂಸ್ಥೆಗಳು ಹಾಗೂ ಬಂಡವಾಳ ಹೂಡಿಕೆಗೆ ಒಲವು ತೋರಿಸುವ ಕೈಗಾರಿಕೋದ್ಯಮಿಗಳ ಸಲಹೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಫಾರಿನ್‌ ಇನ್‌ವೆಸ್ಟರ್‌ ಫೋರಂನ ಕೃಷ್ಣ ಕುಮಾರ್‌, ಇಂಡಿಪೆಂಡೆಂಟ್‌ ಅಡ್ವೈಸರಿ ಸರ್ವೀಸಸ್‌ ಫಾರಿನ್‌ ಇನ್‌ವೆಸ್ಟರ್ಸ್‌ ಕೌನ್ಸಿಲ್‌, ಡೆಪ್ಯೂಟಿ ಕೌನ್ಸಲ್‌ ಜೆನೆರಲ್‌ ಆಫ್‌ ಜಪಾನ್‌ ಇನ್‌ ಕರ್ನಾಟಕ ಹಿ ಮೌರೊ ಕತ್ಸುಮಾಸಾ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡಿದ್ದರು.

ನನ್ನ ರಾಷ್ಟ್ರೀಯ ಶಿಕ್ಷಣ ನೀತಿ ಅಭಿಯಾನಕ್ಕೆ ಡಿಸಿಎಂ ಚಾಲನೆ

ಬೆಂಗಳೂರು:ವಿದ್ಯಾಭಾರತಿ ರಾಷ್ಟ್ರೀಯ ಸಂಘಟನೆ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮತ್ತಷ್ಟು ಜನಪ್ರಿಯಗೊಳಿಸುವ ಸಲುವಾಗಿ ʼಮೈಎನ್‌ಇಪಿʼ (ನನ್ನ ರಾಷ್ಟ್ರೀಯ ಶಿಕ್ಷಣ ನೀತಿ) ರಾಷ್ಟ್ರೀಯ ಸ್ಪರ್ಧೆಯನ್ನು ಆಯೋಜಿಸಿದ್ದು, ಸದರಿ ಅಭಿಯಾನಕ್ಕೆ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಶುಕ್ರವಾರ ಇಲ್ಲಿ ಚಾಲನೆ ನೀಡಿದರು.

ವಿದ್ಯಾಭಾರತಿ ಆಯೋಜಿಸಿದ್ದ ಸಮಾರಂಭದಲ್ಲಿ ಮೈಎನ್‌ಇಪಿ ವೆಬ್‌ಸೈಟ್‌ಗೂ ಚಾಲನೆ ನೀಡಿದ ಅವರು ಎನ್‌ಇಪಿ ಕುರಿತ ರಾಷ್ಟ್ರೀಯ ಸ್ಪರ್ಧೆಯಲ್ಲಿ ಹೆಚ್ಚುಹೆಚ್ಚು ಜನ ಭಾಗವಹಿಸುವುದರ ಮೂಲಕ ಅದು ಹೆಚ್ಚು ಜನರಿಗೆ ತಲುಪುವ ಹಾಗೆ ಆಗಬೇಕು. ಈ ಕೆಲಸವನ್ನು ವಿದ್ಯಾಭಾರತಿ ಸಂಸ್ಥೆ ಕೈಗೆತ್ತಿಕೊಂಡಿರುವುದು ಸಂತೋಷದ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಗತ್ತಿಗೆ ವಿಶ್ವ ಗುರು ಭಾರತವಾಗಬೇಕಾದರೆ ಶಿಕ್ಷಣ ನೀತಿ ಚೆನ್ನಾಗಿರಬೇಕು. ಅಂತಹ ನೀತಿಯನ್ನು ಮೂವತ್ತು ನಾಲ್ಕು ವರ್ಷಗಳ ನಂತರ ಕೇಂದ್ರ ಸರ್ಕಾರ ನಾಡಿಗೆ ಕೊಟ್ಟಿರುವುದು ನಮ್ಮೆಲ್ಲರ ಪುಣ್ಯ. ಹೀಗಾಗಿ ಅದರಲ್ಲಿನ ಅಂಶಗಳು ಎಲ್ಲರಿಗೂ ತಲುಪುವಂತಾಗಬೇಕು. ಈ ಸ್ಪರ್ಧೆ ಮೂಲಕ ಅದು ಹೆಚ್ಚು ಚರ್ಚೆಯಾಗಬೇಕು. ನೀತಿ ಜಾರಿ ಸಂಬಂಧ ಇನ್ನೊಂದು ವರ್ಷ ಕಾಲ ನಿರಂತರವಾಗಿ ಸಭೆಗಳನ್ನು ನಡೆಸಲಾಗುವುದು ಎಂದು ಹೇಳಿದರು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶಕುಮಾರ ಮಾತನಾಡಿ, ʼಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿ ಮಾಡಲು ಎಲ್ಲ ರೀತಿಯ ತಯಾರಿ ನಡೆದಿದೆ. ಈ ನಿಟ್ಟಿನಲ್ಲಿ ಉಪ ಮುಖ್ಯಮಂತ್ರಿಯೂ ಹಲವು ಸಭೆಗಳನ್ನು ಮಾಡಿದ್ದಾರೆʼ ಎಂದು ಹೇಳಿದರು.

ಮೈಎನ್‌ಇಪಿ ಸ್ಪರ್ಧೆಯಲ್ಲಿ ಹೆಚ್ಚು ಹೆಚ್ಚು ಜನರು ಭಾಗವಹಿಸುವುದರ ಮೂಲಕ ಅದು ಜನಪ್ರಿಯ ಎನ್‌ಇಪಿ ಆಗಬೇಕು. ಆಗ ಮಾತ್ರ ಅದು ಯಶಸ್ವಿ ಕೂಡ ಆಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ವಿಧಾನ ಪರಿಷತ್ ಸದಸ್ಯ ಅರುಣ್ ಶಹಪೂರ ಮಾತನಾಡಿ, ಎನ್ಇಪಿ ಜಾರಿಗೆ ಸರ್ಕಾರ ಹಾಕಿಕೊಂಡಿರುವ ಕಾರ್ಯಕ್ರಮಗಳು ಮೆಚ್ಚುವಂತಹದ್ದು. ಜಾರಿ ವಿಷಯದಲ್ಲಿ ಇಡೀ ದೇಶಕ್ಕೆ ಮಾದರಿಯಾಗಿರಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿರುವುದು ಸಂತೋಷದ ವಿಷಯ ಎಂದು ಹೇಳಿದರು.

ಎನ್ಇಪಿ ಕರಡು ಸಮಿತಿ ಅಧ್ಯಕ್ಷ ಪ್ರೊ ಕಸ್ತೂರಿರಂಗನ್ ಅವರು ವರ್ಚುಯಲ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಯೊಕಾನ್ನ ಕಿರಣ ಮಂಜುಂದಾರ್ ಷಾ, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ ವೇಣುಗೋಪಾಲ, ವಿದ್ಯಾಭಾರತಿ ಕರ್ನಾಟಕ ಶಾಖೆಯ ಉಪಾಧ್ಯಕ್ಷ ರಾಜಶೇಖರರೆಡ್ಡಿ ಮಾತನಾಡಿದರು.

ವಿದ್ಯಾಭಾರತಿಯ ನಾಗರಾಜ ರೆಡ್ಡಿ ಮಾತನಾಡಿ, ಹದಿಮೂರು ಭಾಷೆ ಮತ್ತು ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ೯ರಿಂದ ೧೨ನೇ ತರಗತಿ ಮಕ್ಕಳಿಗಾಗಿ ಎರಡು ನಿಮಿಷದ ಭಾಷಣ ಸ್ಪರ್ಧೆ, ಕೈಬರಹದ ಭಿತ್ತಪತ್ರ ಸ್ಪರ್ಧೆ, ಪ್ರಧಾನಿಗೆ ಪತ್ರ ಬರೆಯುವ ಸ್ಪರ್ಧೆ, ೩೦೦ ಪದಗಳ ಪ್ರಬಂಧ ಸ್ಪರ್ಧೆ ಇರುತ್ತದೆ. ಪದವಿ ಹಂತದವರಿಗಾಘಿ ಹಾಗೂ ಸಾರ್ವಜನಿಕರಿಗಾಗಿ ಎರಡು ಪ್ರತ್ಯೇಕ ಸ್ಪರ್ಧೆಗಳು ಇರುತ್ತವೆ. ಕಿರುಚಿತ್ರ (೨.೨೦ ನಿಮಿಷ), ಡಿಜಿಟಲ್‌ ಪೋಸ್ಟರ್‌, ಪ್ರಿಂಟಿಂಗ್‌ ಮತ್ತು ಹ್ಯಾಂಡ್‌ಮೇಡ್‌ ಪೋಸ್ಟರ್‌, ೮ ಟ್ವೀಟ್‌ಗಳ ಥ್ರೇಡ್‌ ಇತ್ಯಾಧಿ ಇರುತ್ತದೆ ಎಂದು ಅವರು ಮಾಹಿತಿ ನೀಡಿದರು.

ಕೇಂದ್ರ ಸರ್ಕಾರದ ರಾಂಕಿಂಗ್ ಪ್ರಕಟ ಕರ್ನಾಟಕ “ನವೋದ್ಯಮ ರಾಂಕಿಂಗ್”ನಲ್ಲಿ ‘ಅಗ್ರಗಣ್ಯ ಸಾಧಕ’

ಬೆಂಗಳೂರು: ರಾಜ್ಯಗಳ “ನವೋದ್ಯಮ ರಾಂಕಿಂಗ್ 2019” ರಲ್ಲಿ ಕರ್ನಾಟಕದ ಎಲೆಕ್ಟ್ರಾನಿಕ್ಟ್, ಐಟಿ/ ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಕೈಗಾರಿಕಾ ಹಾಗೂ ದೇಶೀಯ ವಹಿವಾಟು ಉತ್ತೇಜನಾ ಇಲಾಖೆ (DPIIT)ಯಿಂದ “ಅಗ್ರಗಣ್ಯ ಸಾಧಕ” ಗೌರವಕ್ಕೆ ಪಾತ್ರವಾಗಿದೆ. ಈ ಮೂಲಕ ಇಲಾಖೆಯು ಸತತ ಎರಡನೇ ಸಲ ಈ ಗೌರವಕ್ಕೆ ಪಾತ್ರವಾಗಿದೆ.

ಈ ರಾಂಕಿಂಗ್ ಅನ್ನು 7 ಮೂಲಭೂತ ಅಂಶಗಳು ಹಾಗೂ 30 ಕ್ರಿಯಾ ಅಂಶಗಳ ರೂಪುರೇಷೆ ಆಧಾರದ ಮೇಲೆ ನಿರ್ಧರಿಸಲಾಗಿದೆ. ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ನೀಡುವ ಸಾಂಸ್ಥಿಕ ಬೆಂಬಲ, ನಿಬಂಧನೆಗಳ ಸರಳೀಕರಣ, ಪ್ರೋತ್ಸಾಯಕ ಕ್ರಮಗಳು, ಪರಿಪೋಷಕ ಬೆಂಬಲ, ಬೀಜ ಧನ ನೆರವು, ಶೋಧನಾ ನಿಧಿ ನೆರವು, ಜಾಗೃತಿ ಮತ್ತು ಜನಸಂಪರ್ಕ ಕಾರ್ಯಕ್ರಮಗಳು ಮೂಲಭೂತ ಅಂಶಗಳಲ್ಲಿ ಸೇರಿವೆ. 2018ರ ಮೇ 1ರಿಂದ 2019ರ ಸೆಪ್ಟೆಂಬರ್ 30ರ ಅವಧಿಯ ನಡುವೆ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಕೈಗೊಂಡ ಕ್ರಮಗಳನ್ನು ಪರಿಗಣನೆಗೆ ತೆಗೆದುಕೊಂಡು ರಾಂಕಿಂಗ್ ಪ್ರಕಟಿಸಲಾಗಿದೆ.

ಇದೊಂದು ಹೆಮ್ಮೆಯ ವಿಷಯ ಎಂದು ತಿಳಿಸಿದ ಉಪ ಮುಖ್ಯಮಂತ್ರಿ ಹಾಗೂ ಐಟಿ/ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು, ನವೋದ್ಯಮಗಳ ಪರ್ಯಾವರಣವನ್ನು ಬಲಗೊಳಿಸುವ ದಿಸೆಯಲ್ಲಿ ರಚನಾತ್ಮಕ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಪ್ರೋತ್ಸಾಹಿಸುವುದು ಈ ರಾಂಕಿಂಗ್ ನ ಉದ್ದೇಶವಾಗಿದೆ ಎಂದರು.

ಕರ್ನಾಟಕ ರಾಜ್ಯವು ಸಾಂಸ್ಥಿಕ ನಾಯಕತ್ವ, ಪ್ರೋತ್ಸಾಹಕ ಕ್ರಮಗಳು, ನಿಯಂತ್ರಕ ಕ್ರಮಗಳ ಬದಲಾವಣೆ ಹಾಗೂ ಪರಿಪೋಷಕ ವಲಯ (ಇನ್ ಕ್ಯುಬೇಷನ್ ಹಬ್) ನಿರ್ಮಾಣದಲ್ಲಿ ಮುಂಚೂಣಿಯಲ್ಲಿದೆ ಎಂಬುದನ್ನು ಸೂಚಿಸುತ್ತದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

ನವೋದ್ಯಮಗಳಿಗೆ ಒತ್ತಾಸೆ ನೀಡಲು ರಾಜ್ಯ ಸರ್ಕಾರವು ರಚನಾತ್ಮಕ ಕ್ರಮಗಳನ್ನು ಕೈಗೊಂಡಿದೆ. ಹೊಸ ಹಾಗೂ ಪ್ರಭಾವಿ ತಾಂತ್ರಿಕತೆಳಿಗೆ ನೆರವು ನೀಡಲು ಅನ್ವೇಷಣಾ ಪೂರಕ ನೀತಿಗಳನ್ನು ಜಾರಿಗೊಳಿಸಲಾಗಿದೆ. ಹೊಸ ತಲೆಮಾರಿನ ತಾಂತ್ರಿಕತೆಗಳಿಗೆ ಸಂಬಂಧಪಟ್ಟಂತೆ ನವೋದ್ಯಮಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಪರಿಶೀಲಿಸಲು ನಿಯಂತ್ರಕ ಸಮಿತಿ ರಚಿಸಲಾಗಿದೆ ನವೋದ್ಯಮಗಳಿಗಾಗಿ ಸಮಗ್ರ ಉದ್ಯಮಶೀಲತಾ ವೇದಿಕೆ ಕಲ್ಪಿಸುವ ಸಲುವಾಗಿ “ಎಲಿವೇಟ್” ಎಂಬ ವಿಶಿಷ್ಟ ಪರಿಕಲ್ಪನೆಯನ್ನು ರೂಪಿಸಲಾಗಿದೆ ಎಂದು ಅವರು ವಿವರಿಸಿದರು.

ರಾಜ್ಯದಲ್ಲಿ ನವೋದ್ಯಮಗಳ ಬೆಳವಣಿಗೆಯನ್ನು ಪೋಷಿಸಲು ಹಾಗೂ ಅದಕ್ಕೆ ವೇಗ ನೀಡಲು ಸರ್ಕಾರವು ಪ್ರಯತ್ನಗಳನ್ನು ಮುಂದುವರಿಸಲಿದೆ. ಡಿಪಿಐಐಟಿ ಯ ರಾಂಕಿಂಗ್ ರೂಪುರೇಷೆಯು ನವೋದ್ಯಮಿಗಳಿಗೆ ಸಮರ್ಥ ಕ್ಷೇತ್ರಗಳನ್ನು ಶೋಧಿಸಲು ಹಾಗೂ ತಳಮಟ್ಟದಲ್ಲಿ ಜನರಿಗೆ ತಲುಪುವಂತಹ ಅನ್ವೇಷಣೆಗಳನ್ನು ತೊಡಗಲು ಪ್ರೇರಕವಾಗಿದೆ ಎಂದರು.

ಎಲ್ಲಾ ಮನೆಗಳಿಗೆ ಶುದ್ಧ ಕುಡಿವ ನೀರು : ಅಶ್ವತ್ಥ ನಾರಾಯಣ

ರಾಮನಗರ: ಲಭ್ಯವಿರುವ ಜಲ ಮೂಲಗಳಿಂದ ಶಾಶ್ವತ ಶುದ್ಧ ಕುಡಿಯುವ ನೀರನ್ನು ಜಿಲ್ಲೆಯಲ್ಲಿರುವ ಗ್ರಾಮೀಣ ಭಾಗದ ಎಲ್ಲಾ ಮನೆಗಳಿಗೂ ಪೂರೈಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ತಿಳಿಸಿದರು.

ರಾಮನಗರ ಜಿಲ್ಲೆಗೆ ಶಾಶ್ವತ ಕುಡಿಯುವ ನೀರನ್ನು ಪೂರೈಸುವಂಥ ಯೋಜನೆಗಳಿಗೆ ಸಂಬಂಧಿಸಿದಂತೆ ಅಶ್ವತ್ಥ ನಾರಾಯಣ ಅವರು ಇಂದು ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಲ್ಲಿರುವ ಜಲಮೂಲಗಳು ಮತ್ತು ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಉಪಮುಖ್ಯಮಂತ್ರಿಗಳು ಮಂಡ್ಯ ಜಿಲ್ಲೆಯ ಮಳ್ಳವಳ್ಳಿ ತಾಲ್ಲೂಕಿನ ಸತ್ತೇಗಾಲ ಗ್ರಾಮದಲ್ಲಿರುವ ಸುರಂಗ ಮಾರ್ಗಕ್ಕೆ ಶುಕ್ರವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲಿಸಿದರು. ನೆಟ್ಕಲ್ ಗ್ರಾಮದ ಪೈಪ್ ಯಾರ್ಡ್ ಪ್ರದೇಶಕ್ಕೂ ತೆರಳಿ ಕಾಮಗಾರಿಗಳನ್ನು ವೀಕ್ಷಿಸಿದರು. ನಂತರ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಇಗ್ಲೂರು ಗ್ರಾಮದಲ್ಲಿರುವ ಕಣ್ವ ಜಲಾಶಯವನ್ನು ವೀಕ್ಷಿಸಿದರು.

ಕಣ್ವ ಜಲಾಶಯದ ಸಮೀಪ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಮತ್ತು ಅತಿವೃಷ್ಠಿಯ ನಡುವೆಯೂ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಟಿತಗೊಂಡಿಲ್ಲ. ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ಸಾಗುತ್ತಿವೆ. ಇದಕ್ಕೆ ನಿದರ್ಶನ ಎನ್ನುವಂತೆ ಜಿಲ್ಲೆಯ ಗ್ರಾಮೀಣ ಭಾಗದಲ್ಲಿರುವ ಎಲ್ಲಾ ಮನೆಗಳಿಗೂ ಶುದ್ಧ ನೀರನ್ನು ಪೂರೈಸುವ 250 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಕಾಮಗಾರಿಗಳು ಪೂರ್ಣಪ್ರಮಾಣದಲ್ಲಿ ನಡೆಯುತ್ತಿರುವುದೇ ಸಾಕ್ಷಿಯಾಗಿವೆ ಎಂದರು.

ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಗ್ರಾಮೀಣ ಕುಡಿಯುವ ನೀರಿನ ಕಾಮಗಾರಿಗೆ ಆದ್ಯತೆ ನೀಡಿ ವಿವಿದ ಕಾಮಗಾರಿಗಳನ್ನು ಚುರುಕುಗೊಳಿಸಲಾಗಿದೆ. ಅದರಲ್ಲೂ, ಪ್ರಮುಖವಾಗಿ 210 ಕೋಟಿ ರೂ.ಗಳ ವೆಚ್ಚದಲ್ಲಿ ಕೋಡಿಹಳ್ಳಿ ಹಾಗೂ ಇತರೆ 299 ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಸರಬರಾಜು ಯೋಜನೆ, 4 ಕೋಟಿ ರೂ.ಗಳ ವೆಚ್ಚದಲ್ಲಿ ಸಾತನೂರು ಹಾಗೂ ಇತರೆ 29 ಹಳ್ಳಿಗಳಿಗೆ ಕುಡಿಯುವ ನೀರಿನ ಸರಬರಾಜು ಯೋಜನೆ ಹಾಗೂ 2 ಕೋಟಿ ರೂ.ಗಳ ವೆಚ್ಚದಲ್ಲಿ ಹಾರೋಹಳ್ಳಿ ಗ್ರಾಮಕ್ಕೆ ಕುಡಿಯುವ ನೀರಿನ ಸರಬರಾಜು ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.

ಕನಕಪುರ ತಾಲೂಕಿನ ಕೋಡಿಹಳ್ಳಿ ಹಾಗೂ 298 ಜನವಸತಿಗಳಿಗೆ ಕಾವೇರಿ ನದಿಯಿಂದ ಶುದ್ಧ ನೀರನ್ನು ಪೂರೈಸಲು 210 ಕೋಟಿ ರೂ.ಗಳ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಯೋಜನೆಯ ಪ್ರಗತಿಯು ವಿವಿಧ ಹಂತದಲ್ಲಿದೆ. ಯೋಜನೆಯ ಮುಂದಿನ ವರ್ಷ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ನುಡಿದರು.

ಶ್ರೀರಂಗ ಏತ ನೀರಾವರಿ: ಮಾಗಡಿ ತಾಲ್ಲೂಕಿನ 211 ಹಳ್ಳಿಗಳಿಗಳಿಗೆ ಕುಡಿಯುವ ನೀರು ಒದಗಿಸುವ ಪರಿಷ್ಕೃತ ಶ್ರೀರಂಗ ಏತ ನೀರಾವರಿ ಯೋಜನೆಗಾಗಿ ಒಟ್ಟು 450 ಕೋಟಿ ರೂ.ಗಳಿಗೆ ಸಚಿವ ಸಂಪುಟದಲ್ಲಿ ಅನುಮತಿ ಪಡೆದುಕೊಳ್ಳಲಾಗಿದೆ. ಈಗಾಗಲೇ ಈ ಯೋಜನೆಗಾಗಿ 277 ಕೋಟಿ ರೂ.ಗಳು ಬಿಡುಗಡೆಯಾಗಿತ್ತು. ಈಗ 173 ಕೋಟಿ ರೂ.ಗಳ ಹೆಚ್ಚುವರಿ ಅನುದಾನವು ಸಹ ಬಿಡುಗಡೆ ಆಗಲಿದೆ. ಹಾಕಿಕೊಂಡಿರುವ ಗುರಿಯಂತೆ ಒಂದು ವರ್ಷದಲ್ಲಿ ಈ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಅಶ್ವತ್ಥ ನಾರಾಯಣ ಅವರು ನುಡಿದರು.

ತಾಲ್ಲೂಕಿಗೂ ನೀರು: ಒಟ್ಟು 540 ಕೋಟಿ ರೂ.ಗಳ ವೆಚ್ಚದ ಸತ್ತೇಗಾಲ ಕುಡಿಯುವ ನೀರು ಯೋಜನೆಯ ಕಾಮಗಾರಿ ಪೂರ್ಣಪ್ರಮಾಣದಲ್ಲಿ ನಡೆಯುತ್ತಿದೆ. ಇದರಿಂದ ಮೊಗೇನಹಳ್ಳಿ ಕೆರೆ ಮತ್ತು ಕಣ್ವ ಜಲಾಶಯಕ್ಕೆ ನೀರನ್ನು ತುಂಬಿಸಲಾಗುವುದು. ಪುನಃ ಅಲ್ಲಿಂದ ಮಂಚನಬೆಲೆ ಜಲಾಶಯ ಮತ್ತು ವೈ.ಜಿ.ಗುಡ್ಡ ಕೆರೆಗೆ ತಂದು ಅದನ್ನು ಜಿಲ್ಲೆಯ ನಾಲ್ಕು ತಾಲ್ಲೂಕುಗಳಿಗೂ ಕುಡಿಯುವ ನೀರನ್ನು ಒದಗಿಸಲಾಗುವುದು ಎಂದು ಉಪಮುಖ್ಯಮಂತ್ರಿಗಳು ವಿವರಿಸಿದರು.

ಕೆರೆ ಕಾಮಗಾರಿ: ಅರ್ಕಾವತಿ ಜಲಾಶಯದ ಹಿನ್ನೀರಿನಿಂದ ಕನಕಪುರ ತಾಲ್ಲೂಕಿನ ಗರಳಾಪುರ ಹಾಗೂ ಇನ್ನಿತರ 12 ಕೆರೆಗಳಿಗೆ ಎರಡು ಹಂತಗಳಲ್ಲಿ 70 ಕೋಟಿ ರೂ.ಗಳ ವೆಚ್ಚದಲ್ಲಿ ನೀರು ತುಂಬಿಸಲಾಗುವುದು. ಭೂಸ್ವಾಧೀನದ ಸಮಸ್ಯೆ ಪರಿಹರಿಸಿಕೊಂಡು ಕಾಮಗಾರಿಯನ್ನು ಚುರುಕುಗೊಳಿಸಲಾಗುವುದು. ಅರ್ಕಾವತಿಯಲ್ಲಿ ಹೂಳು ತೆಗೆಯುವುದರಿಂದ 1.5 ಟಿಎಂಸಿ ನೀರನ್ನು ಸಂಗ್ರಹಿಸುವಂತೆ ಆಗಿದೆ ಎಂದು ಅವರು ತಿಳಿಸಿದರು.

ಕೆರೆ ಪುನಶ್ಚೇತನ : 110 ಕೋಟಿ ರೂ.ಗಳ ವೆಚ್ಚದಲ್ಲಿ ಬೈರಮಂಗಲ ಕೆರೆಯ ಪುನಶ್ಚೇತನ ಕಾಮಗಾರಿ. 70 ಕೋಟಿ ರೂ.ಗಳ ವೆಚ್ಚದಲ್ಲಿ ದೊಡ್ಡಾಲಹಳ್ಳಿ ಮೈಕ್ರೋ ಇರಿಗೇ?ನ್ ಕಾಮಗಾರಿ ಹಾಗೂ 252 ಕೋಟಿ ರೂ.ಗಳ ವೆಚ್ಚದಲ್ಲಿ ನಾರಾಯಣಪುರ, ಗರಳಪುರ ಮತ್ತು ಸಾತನೂರು ಏತ ನೀರವಾರಿ ಯೋಜನೆಗಳಿಂದ ಕೆರೆ ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.

ಕೇಂದ್ರಕ್ಕೆ ಪ್ರಸ್ತಾವನೆ: 1800 ಕೋಟಿ ರೂ.ಗಳ ವೆಚ್ಚದಲ್ಲಿ ಕಾವೇರಿ ನದಿ ನೀರನ್ನು ಜಿಲ್ಲೆಯ ಕಣ್ವ, ಮಂಚನಬೆಲೆ, ಇಗ್ಗಲೂರು ಹಾಗೂ ವೈ.ಜಿ ಗುಡ್ಡ ಜಲಾಶಯಗಳಿಗೆ ತುಂಬಿಸಿ, ಇಲ್ಲಿಂದ ಈ ಜಿಲ್ಲೆಯ ವಸತಿ ಪ್ರದೇಶಗಳಿಗೆ ನೀರು ಒದಗಿಸುವ ಪ್ರಸ್ತಾವನೆಗೆ ಕೇಂದ್ರದಿಂದ ಅನುಮೋದನೆ ದೊರೆತ ತಕ್ಷಣ ಚಾಲನೆ ನೀಡಲಾಗುವುದು ಎಂದರು.

ಮಕ್ಕಳ ಪ್ರಪಂಚ : ಕಣ್ವ ಜಲಾಶಯದ ಬಳಿ ಮಕ್ಕಳ ಪ್ರಪಂಚ (ಚಿಲ್ಡ್ರನ್ ವರ್ಲ್ಡ್) ನಿರ್ಮಾಣಕ್ಕಾಗಿ 5 ಎಕರೆ 10 ಗುಂಟೆ ಭೂಮಿ ಮತ್ತು 2 ಕೋಟಿ ರೂ.ಗಳನ್ನು ನೀಡಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿರುವ ಈ ಯೋಜನೆಗೆ ಶೀಘ್ರವೇ ಚಾಲನೆ ನೀಡಲಾಗುವುದು. ಪಿಪಿಪಿ ಮಾದರಿಯಲ್ಲಿ ಇದನ್ನು ನಿರ್ಮಿಸಲು ಒತ್ತು ನೀಡಲಾಗುವುದು ಎಂದರು.

ಕಲಾಗ್ರಾಮ: ರಾಮನಗರ ಜಿಲ್ಲೆಯ ವಿಶಿಷ್ಟ ಕಲೆಯಾದ ಚನ್ನಪ್ಟಣದ ಗೊಂಬೆ ಮತ್ತು ರೇಷ್ಮೆಗೆ ಮಾರುಕಟ್ಟೆ ದೊರಕಿಸಿಕೊಡುವ ಉದ್ದೇಶದಿಂದ ಬೆಂಗಳೂರು – ಮೈಸೂರು ಹೆದ್ದಾರಿ ನಡುವೆ 50 ಎಕರೆ ಪ್ರದೇಶದಲ್ಲಿ ಕಲಾಗ್ರಾಮವನ್ನು ರೂಪಿಸುವ ಉದ್ದೇಶವಿದೆ. ಹೆದ್ದಾರಿಯಲ್ಲಿ ಇಷ್ಟು ವಿಶಾಲ ಪ್ರದೇಶ ಲಭ್ಯವಾಗದಿದ್ದರೂ ಕಲಾಗ್ರಾಮವನ್ನು ರೂಪಿಸುವ ಉದ್ದೇಶದಿಂದ ಹಿಂದೆ ಸರಿಯುವುದಿಲ್ಲ. ಜಾಗಕ್ಕಿಂತ ಮುಖ್ಯವಾಗಿ ಇಲ್ಲಿನ ಜನರಿಗೆ ಒಳ್ಳೆಯ ಮಾರುಕಟ್ಟೆ ಒದಗಿಸಿಕೊಡಬೇಕು. ಅವರ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗಬೇಕು. ಅವರ ಕಲೆಗೆ ಮನ್ನಣೆದೊರಕಬೇಕು. ಜನರಿಗೆ ಇಂತಹ ಉತ್ಪನ್ನಗಳನ್ನು ಹೇಗೆ ತಯಾರಿಸುತ್ತಾರೆ ಎನ್ನುವುದನ್ನು ನೋಡಲು ಅವಕಾಶ ಕಲ್ಪಿಸುವುದೇ ಈ ಯೋಜನೆ ಉದ್ದೇಶವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ರಾಮನಗರ ಜಿಲ್ಲಾ ಪಂಚಯಿತಿ ಸಿಇಒ ಇಕ್ರಂ ಸೇರಿದಂತೆ ಇನ್ನಿತರ ಅಧಿಕಾರಿಗಳು ಭಾಗವಹಿಸಿದ್ದರು.