ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ- ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರದಾನ

ಬೆಂಗಳೂರು: ನಮ್ಮ ಸಂವಿಧಾನದ ಶ್ರೇಷ್ಠ ಮೌಲ್ಯಗಳಾದ ಸಮಾನತೆ, ಸಹೋದರತ್ವ, ಸಹಬಾಳ್ವೆ, ಸಾಮಾಜಿಕ ನ್ಯಾಯಗಳನ್ನು ಶಿಕ್ಷಕರು ಅಳವಡಿಸಿಕೊಂಡು ವಿದ್ಯಾಗಳಲ್ಲಿಯೂ ಇಂತಹ ಕ್ರಿಯಾಶಕ್ತಿ ಹಾಗೂ ಮೌಲ್ಯಗಳನ್ನು ಬೆಳೆಸಲು ಶ್ರಮಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಿಕ್ಷಕರಿಗೆ ಕರೆ ನೀಡಿದ್ದಾರೆ.

ಶುಕ್ರವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ-2020 ಮತ್ತು ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದ ಶಿಕ್ಷಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಅಭಿವೃದ್ಧಿ ಶಿಕ್ಷಣದ ಜೊತೆಗೆ ಬೆಸೆದುಕೊಂಡಿದೆ. ನಮ್ಮ ಸಮಾಜದಲ್ಲಿ ತಂದೆ ಹಾಗೂ ತಾಯಿಯ ನಂತರದ ಸ್ಥಾನ ಗುರುವಿಗೇ ಮೀಸಲು. ಒಬ್ಬ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರ ಪಾತ್ರ ಮುಖ್ಯವಾಗಿದ್ದು, ಅವರು ಮೌಲ್ಯಗಳನ್ನು ಅಳವಡಿಸಿಕೊಂಡು ಮಕ್ಕಳಲ್ಲಿ ಮೂಡಿಸಬೇಕು ಎಂದರು.

ಯಾವುದೇ ಒಂದು ರಾಷ್ಟ್ರದ ಭವ್ಯ ಭವಿಷ್ಯ ನಿರ್ಧಾರವಾಗುವುದು ಶಾಲಾ ಕೊಠಡಿಗಳಲ್ಲಿ ಎಂಬ ಕೊಠಾರಿ ಆಯೋಗದ ವರದಿಯ ವಾಖ್ಯವು ಸಾರ್ವಕಾಲಿಕವಾದದ್ದು. ಒಂದು ರಾಷ್ಟ್ರಕ್ಕೆ ಪ್ರಾಕೃತಿಕ ಸಂಪನ್ಮೂಲದೊಂದಿಗೆ ಮಾನವ ಸಂಪನ್ಮೂಲವು ಮುಖ್ಯವಾಗಿರುತ್ತದೆ. ಇಂತಹ ಸಂಪನ್ಮೂಲವನ್ನು ಅಭಿವೃದ್ದಿಪಡಿಸುವುದು ಶಿಕ್ಷಣ ಇಲಾಖೆ. ಇಂತಹ ಶಿಕ್ಷಣವನ್ನು ನೀಡುವ ಗುರುವಿಗೆ ಸಮಾಜದ ಎಲ್ಲಾ ವರ್ಗಗಳು ಗೌರವ ನೀಡುತ್ತವೆ. ಎಸ್. ರಾಧಾಕೃಷ್ಣನ್ ಒಬ್ಬ ಶ್ರೇಷ್ಠ ದಾರ್ಶನಿಕರಾಗಿ, ಆದರ್ಶನೀಯ ಶಿಕ್ಷಕರಾಗಿ ಸೇವೆ ಸಲ್ಲಿಸುವ ಹಂತದಲ್ಲೇ ರಾಷ್ಟ್ರದ ಎರಡನೆಯ ರಾಷ್ಟ್ರಪತಿಗಳಾಗಿ, ಮೊದಲ ಉಪರಾಷ್ಟ್ರಪತಿಗಳಾಗಿ ಅತ್ಯುನ್ನತ ಹುದ್ದೆಗೇರಿದವರು. ಮತ್ತು ಆ ಮೂಲಕ ಶಿಕ್ಷಕ ಹುದ್ದೆಯ ಸಾಧ್ಯತೆಗಳನ್ನು ಜಗತ್ತಿಗೆ ತೆರೆದಿಟ್ಟವರು. ಅಂದರೆ ‘ಶಿಕ್ಷಕ’ ಸ್ಥಾನಕ್ಕೆ ಇರುವ ಶ್ರೇಷ್ಠತೆಗಿಂತ ಬೇರೊಂದು ಸ್ಥಾನವಿಲ್ಲ ಎಂದು ಅವರು ಹೇಳಿದರು.

ಶಿಕ್ಷಣ ಸಚಿವರ ಶ್ರಮದ ಶ್ಲಾಘನೆ: ಇಂದು ವಿಶ್ವದಾದ್ಯಂತ ತೀವ್ರವಾಗಿ ಹರಡುತ್ತಿರುವ ಕೊರೊನಾ ಸೋಂಕು ಮಾನವಕುಲಕ್ಕೆ ಒಂದು ದೊಡ್ಡ ಸವಾಲನ್ನೇ ಒಡ್ಡಿದೆ. ಕೊರೊನಾ ವಿರುದ್ಧ ನಮ್ಮ ಹೋರಾಟ ಜೀವ (Life) ಹಾಗೂ ಜೀವನಗಳ (Livelihood) ನಡುವಿನ ಸಂರ್ಷಕ್ಕೆ ಕಾರಣವಾಗಿದೆ. ಇದರಿಂದ ಇಡೀ ದೇಶದ ಶಿಕ್ಷಣ ವ್ಯವಸ್ಥೆಯೇ ಸ್ತಬ್ಧವಾಗಿದೆ. ಇದರ ನಡುವೆ 2019-20ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ದೇಶವೇ ಮೆಚ್ಚುವ ಹಾಗೆ ಯಶಸ್ವಿಯಾಗಿ ನಿರ್ವಹಿಸಿದ್ದು ಒಂದು ಅದ್ಭುತ ಸಾಧನೆ ಆಗಿದೆ. ನಮ್ಮ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಕೋವಿಡ್ ವಿಷಮ ಕಾಲಘಟ್ಟದಲ್ಲಿ ಈ ಪರೀಕ್ಷೆಯ ಯಶಸ್ಸಿಗಾಗಿ ಇಡೀ ರಾಜ್ಯವನ್ನು ಸುತ್ತಿ ಅಧಿಕಾರಿಗಳನ್ನು ಹುರಿದುಂಬಿಸಿದರು. ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಭರವಸೆ ಮೂಡಿಸಿದರು. ಇದರ ಯಶಸ್ಸು ಖಂಡಿತ ಇಡೀ ಶಿಕ್ಷಣ ಇಲಾಖೆಗೆ ಸಲ್ಲುತ್ತದೆ ಎಂದ ಯಡಿಯೂರಪ್ಪ, ಈ ಕಾರ್ಯಕ್ಕಾಗಿ ಸಚಿವ ಸುರೇಶ್ ಕುಮಾರ್ ಮತ್ತು ಸಂಪೂರ್ಣ ಶಿಕ್ಷಣ ಇಲಾಖೆಯನ್ನು ಹೃದಯಪೂರ್ವಕವಾಗಿ ಅಭಿನಂದಿಸಿದರು.

ಸರ್ಕಾರಿ ಶಾಲೆಗಳತ್ತ ಮಕ್ಕಳು: ಶಿಕ್ಷಣ ಇಲಾಖೆಯ ಸುಧಾರಣೆ ಹಿನ್ನೆಲೆಯಲ್ಲಿ ಇತ್ತೀಚಿಗೆ ಮಕ್ಕಳು ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳತ್ತ ಮುಖ ಮಾಡಿರುವುದು ಸಾರ್ವಜನಿಕ ಶಿಕ್ಷಣ ಇಲಾಖೆಯ ಸುಧಾರಣೆಯ ಧ್ಯೋತಕವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಈ ಕೊರೋನಾ ಸಂದರ್ಭದಲ್ಲಿ ಮಕ್ಕಳು ಶಾಲೆಯಿಂದ ಅನಿವಾರ್ಯವಾಗಿ ದೂರ ಉಳಿದಿದ್ದರಿಂದ ಮಕ್ಕಳ ಕಲಿಕಾ ಪ್ರಕ್ರಿಯೆಯನ್ನು ಮುಂದುವರೆಸಲು ಶಿಕ್ಷಣ ಇಲಾಖೆಯು ವಿದ್ಯಾಗಮ ಎಂಬ ವಿನೂತನ ಕಲಿಕಾ ಕಾರ್ಯಕ್ರಮವನ್ನು ರೂಪಿಸಿ ಅದರಲ್ಲಿ ಮಕ್ಕಳು ಮತ್ತು ಶಿಕ್ಷಕರು ತೊಡಗಿಸಿಕೊಳ್ಳುವಂತೆ ಮಾಡಿರುವುದು ಒಂದು ಉತ್ತಮ ಪ್ರಯತ್ನವಾಗಿದೆ. ಈ ಉಪಕ್ರಮವನ್ನು ಕೇಂದ್ರದ ಮಾನವ ಸಂಪನ್ಮೂಲ ಇಲಾಖೆ ಶ್ಲಾಘಿಸಿದೆ ಎಂದು ಅವರು ಹೇಳಿದರು.

ತಮ್ಮ ಕೆಲಸಗಳಿಗಾಗಿ ಶಾಲೆಗಳಿಗೆ ರಜೆ ಹಾಕಿ ಇಲಾಖೆಯ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ ಶಿಕ್ಷಕರುಗಳಿಗೆ ಅನುಕೂಲವಾಗುವಂತೆ ಆಯವ್ಯಯದಲ್ಲಿ ಘೋಷಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ತಂತ್ರಜ್ಞಾನಾಧಾರಿತ ಶಿಕ್ಷಕ ಮಿತ್ರ-ಆಪ್ ತಯಾರಿಸಿದೆ. ಶಿಕ್ಷಕರು ಮೊಬೈಲ್ ನಲ್ಲಿ ಈ ಆಪ್ ನ್ನು ಡೌನ್ಲೋಡ್ ಮಾಡಿಕೊಂಡು ತಾವು ಕುಳಿತಲ್ಲೇ ತಮ್ಮ ಸೇವಾ ವಿಷಯಗಳನ್ನು, ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. ಇದರಿಂದಾಗಿ ಶಿಕ್ಷಕರು ತಮ್ಮ ಹೆಚ್ಚಿನ ಸಮಯವನ್ನು ಕಲಿಕಾ ಪ್ರಕಿಯೆಯಲ್ಲಿ ತೊಡಗಿಸಿಕೊಳ್ಳಬಹುದಾಗಿದೆ. ಸಾರ್ವಜನಿಕರು ಶಿಕ್ಷಣಕ್ಕೆ ಸಂಬಂಧಿಸಿದ ಕುಂದುಕೊರತೆಗಳ ಪರಿಹಾರಕ್ಕಾಗಿ ಶಿಕ್ಷಣವಾಣಿ ಎಂಬ ಸಹಾಯವಾಣಿಯನ್ನು ಪ್ರಾರಂಭಿಸಿರುವುದು ಇಲಾಖೆಯ ಉತ್ತಮ ನಡೆಯಾಗಿದೆ. ಈ ಎಲ್ಲಾ ಕಾರ್ಯಗಳಿಂದಾಗಿ ಶಿಕ್ಷಣ ಇಲಾಖೆಯು ಶಿಕ್ಷಕ ಸ್ನೇಹಿ, ವಿದ್ಯಾಸ್ನೇಹಿ ಮತ್ತು ಸಮುದಾಯ ಸ್ನೇಹಿ ಆಗುವತ್ತ ಮುನ್ನಡೆದಿರುವುದು ಶಿಕ್ಷಣ ಇಲಾಖೆಯ ಹೊಸ ಮನ್ವಂತರದ ಸೂಚಕವಾಗಿದೆ.

ಸರ್ಕಾರವು ಮಕ್ಕಳಿಗೆ ಪ್ರೋತ್ಸಾಹಕ ಯೋಜನೆಗಳಾದ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ ಹಾಲು, 8ನೇ ತರಗತಿ ವಿದ್ಯಾರ್ಥಿಗಳಿಗೆ ಬೈಸಿಕಲ್ ಮುಂತಾದವುಗಳನ್ನು ಪೂರೈಸುತ್ತಿದ್ದರೂ ಶಾಲೆಯಲ್ಲಿ ಮಕ್ಕಳು ಉಳಿದು, ಯಶಸ್ವಿಯಾಗಿ ಕಲಿತು ಮುಂದೆ ಸಾಗಲು ಶಿಕ್ಷಕರ ಸತತ ಪ್ರಯತ್ನ ಅವಶ್ಯಕ. ಶಿಕ್ಷಕರ ವಿರುದ್ಧ ಬರುವ ಕಳಂಕದ ಪ್ರಕರಣಗಳನ್ನು ಸವಾಲಾಗಿ ತೆಗೆದುಕೊಂಡು, ಶಾಲಾ ಪರಿಸರವನ್ನು ಮಕ್ಕಳ ಸ್ನೇಹಿಯಾಗಿ ಮಾರ್ಪಡಿಸುವ ಅಗತ್ಯ ಶಿಕ್ಷಕರ ಮುಂದಿದೆ ಎಂದು ಯಡಿಯೂರಪ್ಪ ಹೇಳಿದರು.

ಖಾಸಗಿ ಶಿಕ್ಷಕರಿಗೆ ಸಹಾಯಕ್ಕಾಗಿ ಸರ್ಕಾರದ ಚಿಂತನೆ- ಸುರೇಶ್ ಕುಮಾರ್: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿ, ಕಳೆದ ವರ್ಷ ಶಿಕ್ಷಕರ ದಿನಾಚರಣೆಯಲ್ಲಿ ಭರವಸೆ ನೀಡಿದಂತೆ ಶಿಕ್ಷಕ-ವಿದ್ಯಾರ್ಥಿಸ್ನೇಹಿ ಶಿಕ್ಷಕರ ವರ್ಗಾವಣಾ ನೀತಿಯನ್ನು ಜಾರಿಗೆ ತಂದಿದ್ದು, ವರ್ಗಾವಣಾ ಪ್ರಕ್ರಿಯೆ ಜಾರಿಯಲ್ಲಿದೆ ಎಂದರು.

ಕೊರೋನಾ ಹಿನ್ನೆಲೆಯಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳ ಶಿಕ್ಷಕರಿಗೆ ಯಾವುದಾದರೂ ರೀತಿಯಲ್ಲಿ ಸಹಾಯ ಮಾಡಬೇಕೆಂಬುದು ಸರ್ಕಾರದ ಚಿಂತನೆಯಾಗಿದ್ದು, ಮೊದಲ ಹಂತದಲ್ಲಿ ಈ ಶಿಕ್ಷಕರಿಗೆ ವೇತನ ದೊರೆಯುವಂತಾಗಲು ಖಾಸಗಿ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆಗೆ ಚಾಲನೆ ನೀಡಲು ಆದೇಶ ನೀಡಲಾಗಿದೆ ಎಂದರು. ದಾಖಲಾತಿ ಮೂಲಕ ಸಂಗ್ರಹವಾದ ಹಣವನ್ನು ಶಿಕ್ಷಕರ ವೇತನಕ್ಕೆ ಬಳಸಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ಎರಡನೇ ಹಂತದಲ್ಲಿ ಶಿಕ್ಷಕರಿಗೆ ಸರ್ಕಾರದಿಂದ ಯಾವ ರೀತಿಯ ಸಹಾಯ ನೀಡಬೇಕೆಂದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಚಿವರು ಹೇಳಿದರು.

ಎನ್ಇಪಿ ಅನುಷ್ಠಾನ: 34 ವರ್ಷಗಳ ನಂತರ ರೂಪಿಸಲಾದ ರಾಷ್ಟ್ರೀಯ ಶಿಕ್ಷಣ ನೀತಿ ರಾಷ್ಟ್ರದ ಶಿಕ್ಷಣ ನೀತಿಯಾಗಿದ್ದು, ಅದನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದ್ದು, ಶಿಕ್ಷಕರು ಮತ್ತು ಅಧಿಕಾರಿ ವರ್ಗ ಅದರ ಯಶಸ್ಸಿಗೆ ಸಮರ್ಪಣಾ ಮನೋಭಾವದಿಂದ ತೊಡಗಿಸಿಕೊಳ್ಳಬೇಕಿದೆ ಎಂದು ಸುರೇಶ್ ಕುಮಾರ್ ಹೇಳಿದರು.

ಅಂಕಪಟ್ಟಿ ಸುರಕ್ಷತೆ ತಂತ್ರಜ್ಞಾನ: ಬ್ಲಾಕ್ ಚೈನ್ ಟೆಕ್ನಾಲಜಿ ಮೂಲಕ ಎಸ್. ಎಸ್. ಎಲ್. ಸಿ. ಅಂಕಪಟ್ಟಿಗಳ ಮಾಹಿತಿ ಪಡೆಯುವ ಸರ್ಟಿಫಿಕೇಟ್ ಚೈನ್ ತಂತ್ರಾಂಶವನ್ನು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಲೋಕಾರ್ಪಣೆಗೊಳಿಸಿದರು. ಕೊರೋನಾ ಸಂದರ್ಭದಲ್ಲಿ ಬೋಧನೆಗಾಗಿ ರೂಪಿಸಲಾದ ಕಕಲಿಕಾ ಸಂವರ್ಧನಾ ಮಾರ್ಗಸೂಚಿ ಪುಸ್ತಿಕೆಗಳನ್ನು ಸಿಎಂ ಬಿಡುಗಡೆ ಮಾಡಿದರು.
20 ಪ್ರಾಥಮಿಕ ಶಾಲಾ ಶಿಕ್ಷಕರು, 10 ಪ್ರೌಢಶಾಲಾ ಶಿಕ್ಷಕರು, ಓರ್ವ ವಿಶೇಷ ಶಿಕ್ಷಕರು, 10 ಮಂದಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರು, ಪ್ರಾಂಶುಪಾಲರು, ರಾಷ್ಟ್ರಪ್ರಶಸ್ತಿ ಪಡೆದ ರಾಜ್ಯದ ಮೂವರು ಶಿಕ್ಷಕರನ್ನು ಮುಖ್ಯಮಂತ್ರಿಯವರು ಸನ್ಮಾನಿಸಿ ಗೌರವಿಸಿದರು.

ರಾಜ್ಯ ಸರ್ಕಾರದ ಶೈಕ್ಷಣಿಕ ಸುಧಾರಣೆಗಳ ಸಲಹೆಗಾರರಾದ ಪ್ರೊ. ಎಂ.ಆರ್. ದೊರೆಸ್ವಾಮಿ, ಶಾಸಕರಾದ ವೈ.ಎಸ್. ನಾರಾಯಣಸ್ವಾಮಿ, ಅರುಣಶಹಾಪುರ, ಅ. ದೇವೇಗೌಡ, ಹನುಮಂತ ನಿರಾಣಿ ಮತ್ತಿತರರು ಭಾಗವಹಿಸಿದ್ದರು.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಸ್ವಾಗತಿಸಿದರು. ಸಾ.ಶಿ.ಇ ಆಯುಕ್ತ ಡಾ. ಕೆ.ಜೆ. ಜಗದೀಶ್ ವಂದಿಸಿದರು. ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಡಿಸಿ,ಎಸ್ಪಿಗಳ ಜೊತೆ ಸಿಎಂ ವಿಡಿಯೋ ಸಂವಾದ: ಕೋವಿಡ್ 19 ಪರೀಕ್ಷಾ ಪ್ರಮಾಣ ಹೆಚ್ಚಳಕ್ಕೆ ಸೂಚನೆ

ಬೆಂಗಳೂರು, ಸೆಪ್ಟೆಂಬರ್ 10: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಕೋವಿಡ್ 19 ನಿಯಂತ್ರಣ ಹಾಗೂ ಪ್ರವಾಹಕ್ಕೆ ಸಂಬಂಧಿಸಿದಂತೆ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು.

ಸಭೆಯ ಪ್ರಮುಖ ಅಂಶಗಳು:
ಕೋವಿಡ್ 19 ಕ್ಕೆ ಸಂಬಂಧಿಸಿದಂತೆ:

ಜಿಲ್ಲಾಧಿಕಾರಿಗಳು ಕೋವಿಡ್ 19 ಪರೀಕ್ಷೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ವಹಿಸಿಬೇಕು.

ಪರೀಕ್ಷೆಗೆ ಅಗತ್ಯವಿರುವ ಕಿಟ್ ಗಳನ್ನು ಒದಗಿಸುವ ವ್ಯವಸ್ಥೆ ಮಾಡಲಾಗುವುದು.

ಅಗತ್ಯವಿರುವ ವೈದ್ಯರನ್ನು ನೇಮಕ ಮಾಡಲಾಗುವುದು.

ಪ್ರಯೋಗಾಲಯಗಳು ಕಡಿಮೆ ಇದ್ದಲ್ಲಿ ಪಕ್ಕದ ಜಿಲ್ಲೆಯಲ್ಲಿ ಮಾಡಿಸಲು ಕ್ರಮ ವಹಿಸಬೇಕು.

ಬೂತ್ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಮಿತಿಗಳು ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಬೇಕು.

ಆಕ್ಸಿಜನ್ ಸಮಸ್ಯೆ ಇದ್ದರೆ ಹೆಚ್ಚು ಆಕ್ಸಿಜನ್ ಲಭ್ಯವಿರುವ ಜಿಲ್ಲೆಗಳಿಂದ ಪಡೆದುಕೊಳ್ಳುವುದು.
ಮನೆ ಮನೆ ಸರ್ವೇ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರಾಥಮಿಕ ಸಂಪರ್ಕವನ್ನು ಪತ್ತೆ ಹಚ್ಚಲು ಕ್ರಮ ವಹಿಸಬೇಕು.

ಈಗಾಗಲೇ ಪಿ.ಜಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳ ಕೌನ್ಸೆಲಿಂಗ್ ಮುಗಿದಿದ್ದು, ಇನ್ನೆರಡು ದಿನದಲ್ಲಿ 900 ಕ್ಕೂ ಹೆಚ್ಚು ತಜ್ಞ ವೈದ್ಯರನ್ನು ಜಿಲ್ಲೆಗಳಿಗೆ ನಿಯೋಜಿಸಲಾಗುವುದು.

ರಾಜ್ಯದಲ್ಲಿ ಮರಣ ಪ್ರಮಾಣವನ್ನು ತಗ್ಗಿಸುವುದು ಆದ್ಯತೆಯಾಗಬೇಕು.

ದಸರಾ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಗೆ ಹೆಚ್ಚಿನ ಪ್ರವಾಸಿಗರು ಆಗಮಿಸುವ ಸಾಧ್ಯತೆ ಇರುವುದರಿಂದ ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಬೇಕಿದೆ.

ಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಯುವಂತೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಆದ್ಯತೆ ನೀಡಬೇಕು.

ಕೋವಿಡ್ ಸಂಖ್ಯೆ ಹೆಚ್ಚಾಗುತ್ತಿದ್ದು, ಆಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆಯ ಬಗ್ಗೆ ಗಮನ ಹರಿಸಬೇಕು.

ಐ.ಸಿ.ಯುಗಳಲ್ಲಿ ವೆಂಟಿಲೇಟರ್ ಗಳ ಲಭ್ಯತೆಯ ಬಗ್ಗೆಯೂ ನಿಗಾ ವಹಿಸಬೇಕು.
ಗೃಹ ನಿರ್ಬಂಧದಲ್ಲಿರುವವರ ಬಗ್ಗೆ ಮೇಲ್ವಿಚಾರಣೆ ಮಾಡುವುದನ್ನು ಸಹ ಪ್ರಮುಖವಾಗಿ ಮಾಡಬೇಕು.

*ಪ್ರವಾಹ*
ರಾಜ್ಯದಲ್ಲಿ ಈ ಬಾರಿಯ ಪ್ರವಾಹದಿಂದ ಒಟ್ಟು 8071 ಕೋಟಿ ರೂ.ಗಳ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಕೇಂದ್ರ ತಂಡಕ್ಕೆ ಜಿಲ್ಲಾಧಿಕಾರಿಗಳು ಹಾನಿಯ ಪ್ರಮಾಣವನ್ನು ಮನವರಿಕೆ ಮಾಡಿಕೊಟ್ಟಿದ್ದು, ಕೇಂದ್ರದಿಂದ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ವರದಿಯನ್ನು ಸಲ್ಲಿಸಿಸಲಾಗಿದೆ.

ರಾಜ್ಯ
ದಲ್ಲಿ ಮತ್ತೆ ಮಳೆ ಪ್ರಾರಂಭವಾಗಿದ್ದು, ಇದರಿಂದಾಗಿರುವ ಹಾನಿಯನ್ನು ಸಹ ಅಂದಾಜು ಮಾಡಿ ಒಟ್ಟಾರೆ ಪರಿಹಾರದ ಮೊತ್ತವನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು.

ಈಗಾಗಲೇ ಕೇಂದ್ರ ಅಧ್ಯಯನ ತಂಡವು ಪ್ರವಾಹದಿಂದ ಹಾನಿಗೊಳಗಾದ ಜಿಲ್ಲೆಗಳಿಗೆ ಭೇಟಿ ನೀಡಿದೆ.

ಮಳೆಯಿಂದ ಹಾನಿಗೊಳಗಾದ ಮನೆಗಳ ಪುನರ್ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಬೇಕು. ಕಳೆದ ಸಾಲಿನ ಪ್ರವಾಹದಲ್ಲಿನ ಹಾನಿಗೊಳಗಾದ ಮನೆಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.

ಪರಿಹಾರ ವಿತರಣೆಯಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಕ್ರಮ ಜರುಗಿಸಬೇಕು.

ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಚುರುಕು ಗೊಂಡ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಗೊಬ್ಬರದ ಕೊರತೆಯಾಗದಂತೆ ಎಚ್ಚರ ವಹಿಸಬೇಕು.

ಜಿಲ್ಲಾಧಿಕಾರಿಗಳು ಹೆಚ್ಚಿನ ಆಸಕ್ತಿ ತೋರಿ ಶಕ್ತಿ ಮೀರಿ ಪರಿಸ್ಥಿತಿ ನಿಭಾಯಿಸಲು ಶ್ರಮಿಸಿದ್ದಾರೆ
ವೆಂಟಿಲೇಟರ್ ಕೊರತೆ ಇಲ್ಲ ಎನ್ನುವುದು ಸಮಾಧಾನಕರ ವಿಷಯ.

ಜಿಲ್ಲಾಧಿಕಾರಿಗಳ ಪಿ.ಡಿ.ಖಾತೆಯಲ್ಲಿ ತುರ್ತು ಪರಿಹಾರವನ್ನು ಕೈಗೊಳ್ಳಲು ಹಣದ ಲಭ್ಯತೆ ಇದೆ.

ಮಳೆಯಿಂದ ಹಾನಿಗೊಳಗಾದ ರಸ್ತೆಗಳನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಿಸಿ ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಡಬೇಕು
ತುರ್ತಾಗಿ ಕೈಗೊಳ್ಳಬೇಕಿರುವ ಕೆಲಸಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿ
ರೈತರಿಗೆ ಬೆಳೆ ಹಾನಿಗೆ ಪರಿಹಾರ ನೀಡಲು ಆದ್ಯತೆ ಮೇರೆಗೆ ಕೆಲಸ ಮಾಡಬೇಕು
ವಿಶೇಷವಾದ ಸಂದರ್ಭದಲ್ಲಿವಾದ್ದರಿಂದ ರೈತರು ಹಾಗೂ ಸಾರ್ವಜನಿಕರ ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು .

ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ:ಕೆ.ಸುಧಾಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ, ಗೃಹ ಸಚಿವ ಬಸವರಾಜ ಬೊಮ್ಮಾಯಿ,ಮೀನುಗಾರಿಕೆ ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮುಖ್ಯ ಕಾರ್ಯದರ್ಶಿ ಟಿ. ಎಂ.ವಿಜಯಭಾಸ್ಕರ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ. ವಿ.ರಮಣರೆಡ್ಡಿ ಉಪಸ್ಥಿತರಿದ್ದರು.

ಹಂತ ಹಂತವಾಗಿ ಸಮಸ್ಯೆಗಳ ಪರಿಹಾರದ ಭರವಸೆ; ಚಿತ್ರರಂಗದ ಗಣ್ಯರ ಜತೆ ಮತ್ತೊಮ್ಮೆ ಚರ್ಚಿಸಿದ ಡಿಸಿಎಂ ಚರ್ಚೆ

ಬೆಂಗಳೂರು: ಕೋವಿಡ್ ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಕನ್ನಡ ಚಿತ್ರರಂಗದ ನೆರವಿಗೆ ಧಾವಿಸಿರುವ ರಾಜ್ಯ ಸರಕಾರವು, ಎಲ್ಲ ಸಮಸ್ಯೆಗಳನ್ನು ಹಂತಹಂತವಾಗಿ ಪರಿಹರಿಸಲು ನಿರ್ಧರಿಸಿದೆ.

ಚಿತ್ರರಂಗದ ಪ್ರಮುಖರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆ ಬುಧವಾರ ಚರ್ಚೆ ನಡೆಸಿದ್ದರು. ಆ ವೇಳೆ ಎಲ್ಲ ಸಮಸ್ಯೆಗಳ ಮಾಹಿತಿ ಪಡೆದಿದ್ದ ಅವರು ಈ ಸಮಸ್ಯೆಗಳ ಪರಿಹಾರದ ನಿಟ್ಟಿನಲ್ಲಿ ರಚನಾತ್ಮಕ ಮಾತುಕತೆ ನಡೆಸುವಂತೆ ಉಪ ಮುಖ್ಯಮಂತ್ರಿ ಡಾ. ಸಿ,ಎನ್.‌ಅಶ್ವತ್ಥನಾರಾಯಣ ಅವರಿಗೆ ಸೂಚಿಸಿದ್ದರು. ಅದರಂತೆ ಚಿತ್ರರಂಗದ ಪ್ರಮುಖರ ಜತೆ ಗುರುವಾರ ಚರ್ಚೆ ನಡೆಸಿದರಲ್ಲದೆ, ಪ್ರತಿಯೊಂದು ಬೇಡಿಕೆ ಈಡೇರಿಕೆಯ ಸಾಧಕಬಾಧಕವನ್ನು ಮುಕ್ತವಾಗಿ ಪರಿಶೀಲಿಸಿದರು.

ಈ ಬೇಡಿಕೆಗಳಲ್ಲಿ ಕೆಲವು ಕಾರ್ಮಿಕ ಇಲಾಖೆ ಮತ್ತು ಪಶುಸಂಗೋಪನಾ ಇಲಾಖೆ ವ್ಯಾಪ್ತಿಗೆ ಬರುತ್ತವೆ. ಇವುಗಳ ಬಗ್ಗೆ ಆದಷ್ಟು ಇವೆರಡೂ ಇಲಾಖೆಗಳ ಸಚಿವರೂ ಮತ್ತು ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗುವುದು ಎಂದು ಅವರು ಭರವಸೆ ನೀಡಿದರು.

ಚಿತ್ರನಗರಿ ನಿರ್ಮಾಣ, ಕಾರ್ಮಿಕರ ಸಮಸ್ಯೆಗಳು, ಚಿತ್ರೀಕರಣದಲ್ಲಿ ಪ್ರಾಣಿಗಳನ್ನು ಬಳಕೆ ಬಿಕ್ಕಟ್ಟು, ಡಿಐ-ವಿಎಫ್‌ಕ್ಸ್‌ ಉದ್ಯಮಕ್ಕೆ ವಿದ್ಯುತ್‌ ಶುಲ್ಕ ವಿನಾಯಿತಿ, ಸಿನಿಮಾ ತೆರಿಗೆ, ಸಕಾಲ ವ್ಯವಸ್ಥೆ, ನಿರ್ಮಾಪಕರಿಗೆ ಜಿಎಸ್‌ಟಿ ವಾಪಸ್‌ ನೀಡಿವುದು, ಫೈರಸಿ ನಿಗ್ರಹ, ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಚಿತ್ರರಂಗದ ಅಧಿಕೃತ ಸಂಸ್ಥೆಯನ್ನಾಗಿ ಘೋಷಿಸುವುದು, ನೂತನ ಚಲನಚಿತ್ರ ನೀತಿ ರೂಪಿಸುವುದು, ಲಾಕ್‌ಡೌನ್‌ ವೇಳೆಯಲ್ಲಿ ಥಿಯೇಟರುಗಳಿಗೆ ಆಸ್ತಿ ತೆರಿಗೆಯಿಂದ ವಿನಾಯಿತಿ, ವಿದ್ಯುತ್‌ ಶುಲ್ಕ ಮನ್ನಾ, ಸಕಾಲಕ್ಕೆ ಸಬ್ಸಿಡಿ ನೀಡಿಕೆ ಸೇರಿದಂತೆ ಚಿತ್ರರಂಗದ ಗಣುರು ಮುಂದಿಟ್ಟ ಬೇಡಿಕೆಗಳ ಬಗ್ಗೆ ಉಪ ಮುಖ್ಯಮಂತ್ರಿ ಅವರು ಕೂಲಂಕಶವಾಗಿ ಚರ್ಚೆ ನಡೆಸಿ ಮಾತನಾಡಿದರು.

ಕನ್ನಡ ಚಿತ್ರರಂಗಕ್ಕೆ ಬಾಲಿವುಡ್‌ ಹಾಗೂ ನಮ್ಮ ನೆರೆಹೊರೆಯ ಭಾಷೆಗಳ ಚಿತ್ರರಂಗಗಳಂತೆ ಬೆಳೆಯುವ ಎಲ್ಲ ರೀತಿಯ ಶಕ್ತಿಯೂ ಇದೆ. ಅದಕ್ಕೆ ಬೇಕಾದ ಎಲ್ಲ ಪೂರಕ ಸೌಲಭ್ಯಗಳನ್ನು ಸರಕಾರ ಒದಗಿಸಲಿದೆ. ಈ ಬಗ್ಗೆ ಮುಖ್ಯಮಂತ್ರಿಯವರು ಅತೀವ ಆಸಕ್ತಿ ಹೊಂದಿದ್ದಾರೆಂದು ಡಿಸಿಎಂ ಹೇಳಿದರು.

ಸೈಬರ್‌ ಸೆಕ್ಯೂರಿಟಿ:

ಚಿತ್ರರಂಗ ಸಿನಿಮಾಗಳ ಪೈರಸಿ ಬಗ್ಗೆ ತೀವ್ರ ಆತಂಕವನ್ನು ಹೊಂದಿದೆ. ಆ ಹಿನ್ನೆಲೆಯಲ್ಲಿ ಸರಕಾರ ಇಡೀ ಚಿತ್ರರಂಗಕ್ಕೆ ಸೈಬರ್‌ ಸೆಕ್ಯೂರಿಟಿ ಖಾತ್ರಿ ಕೊಡಲು ಸಿದ್ಧವಾಗಿದೆ. ಅತ್ಯುತ್ತಮ ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ಬರುತ್ತಿದ್ದು, ಅವುಗಳನ್ನು ಅಗಂತುಕರು ಪೈರಸಿ ಮಾಡಿ ಆನ್‌ಲೈನ್‌ನಲ್ಲಿ ಬಿಡುತ್ತಿರುವುದರಿಂದ ನಿರ್ಮಾಪಕರಿಗೆ ದೊಡ್ಡ ಹೊಡೆತ ಬೀಳುತ್ತಿದೆ. ಇದಕ್ಕೆ ಚರಮಗೀತೆ ಹಾಡುವ ನಿಟ್ಟಿನಲ್ಲಿ ನಮ್ಮ ಸೈಬರ್‌ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಸಚಿವರು ಮತ್ತು ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಲಾಗುವುದು ಎಂದು ಡಿಸಿಎಂ ಚಿತ್ರರಂಗದ ನಿಯೋಗಕ್ಕೆ ಭರವಸೆ ನೀಡಿದರು.

ಮಾಜಿ ಶಾಸಕಿ ಹಾಗೂ ಹಿರಿಯ ನಟಿ ತಾರಾ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌, ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು, ನಿರ್ಮಾಪಕರಾದ ಎನ್.ಎಂ. ಸುರೇಶ್‌ ಮುಂತಾದವರು ನಿಯೋಗದಲ್ಲಿದ್ದರು.

ನೂತನ ಶಿಕ್ಷಣ ನೀತಿ ಅನುಷ್ಠಾನ, ಸಿಸ್ಲೆಪ್ ಸಂಸ್ಥೆಗೆ ಮಹತ್ವದ ಜವಾಬ್ದಾರಿ: ಸಚಿವ ಎಸ್. ಸುರೇಶಕುಮಾರ್

ಧಾರವಾಡ ಸೆ.10:ಪ್ರಸಕ್ತ ಸಾಲಿನಿಂದ ದೇಶದಾದ್ಯಂತ ಜಾರಿಯಾಗಲಿರುವ ನೂತನ ಶಿಕ್ಷಣ ನೀತಿಯು ಹೊಸ ವಿಶ್ಲೇಷಣೆ ಸಾಮರ್ಥ್ಯ, ಚಿಂತನೆಗಳನ್ನು ಬೆಳೆಸುವ ಗುರಿ ಹೊಂದಿದೆ.ರಾಜ್ಯದಲ್ಲಿ ಈ ನೀತಿಯನ್ನು ಅನುಷ್ಠಾನಕ್ಕೆ ತರುವ ಕಾರ್ಯದಲ್ಲಿ ಧಾರವಾಡದಲ್ಲಿರುವ ರಾಜ್ಯ ಶಾಲಾ ನಾಯಕತ್ವ,ಶೈಕ್ಷಣಿಕ ಯೋಜನೆ ಮತ್ತು ನಿರ್ವಹಣಾ ಸಂಸ್ಥೆ ( ಸಿಸ್ಲೆಪ್) ಗೆ ಪ್ರಮುಖ ಜವಾಬ್ದಾರಿ ನೀಡಲಾಗುವುದು ಎಂದು ಪ್ರಾಥಮಿಕ, ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಎಸ್.ಸುರೇಶಕುಮಾರ್ ಹೇಳಿದರು.

ನಗರದ ಡಯಟ್ ಆವರಣದಲ್ಲಿ ಇರುವ ಸಿಸ್ಲೆಪ್ ಸಭಾಂಗಣಕ್ಕೆ ಇಂದು ಭೇಟಿ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿದರು.

2020 ರ ನೂತನ ಶಿಕ್ಷಣ ನೀತಿ ಬಗ್ಗೆ ದೇಶದೆಲ್ಲೆಡೆ ಚರ್ಚೆಗಳು ನಡೆಯುತ್ತಿವೆ.ಡಾ.ಕಸ್ತೂರಿ ರಂಗನ್ ನೇತೃತ್ವದ ಸಮಿತಿಯು ಸುದೀರ್ಘ ಐದು ವರ್ಷಗಳ ಕಾಲ ಆಳವಾದ ಅಧ್ಯಯನ ನಡೆಸಿ ಈ ನೀತಿ ರೂಪಿಸಿವೆ. ಹೊಸ ಚಿಂತನೆಗಳು ಮತ್ತು ಆವಿಷ್ಕಾರ ಮನೋಭಾವ ಬೆಳೆಸುವ ಆಶಯಗಳನ್ನು ಈ ನೀತಿ ಹೊಂದಿದೆ.ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೊಳಿಸುವಲ್ಲಿ ಸಿಸ್ಲೆಪ್ ಸಂಸ್ಥೆಯ ಕಾರ್ಯ ಮಹತ್ವದ್ದಾಗಿದೆ.ಸರಳ,ನೈತಿಕ , ಜವಾಬ್ದಾರಿಯುತ ,ಪ್ರತಿಕ್ರಿಯಾತ್ಮಕ ಹಾಗೂ ಪಾರದರ್ಶಕ ಗುಣವುಳ್ಳ ಶಾಲಾ ನಾಯಕತ್ವ ಮತ್ತು ಶೈಕ್ಷಣಿಕ ಯೋಜನೆ ರೂಪಿಸುವ ಕಾರ್ಯವನ್ನು ಸಿಸ್ಲೆಪ್ ಮಾಡಲಿದೆ.ಬರುವ ದಿನಗಳಲ್ಲಿ ಶಿಕ್ಷಕರಿಗೆ ತರಬೇತಿ ನೀಡುತ್ತಿರುವ ಸಮಯದಲ್ಲಿ ಇನ್ನೊಮ್ಮೆ ಇಲ್ಲಿಗೆ ಭೇಟಿ ನೀಡಲಾಗುವುದು ಎಂದರು.

ಶಿಕ್ಷಣ ಸಚಿವನಾಗಿ ಅಧಿಕಾರ ಸ್ವೀಕರಿಸಿದ ಕಳೆದ ಒಂದು ವರ್ಷದ ಅವಧಿಯಲ್ಲಿ ಸಾಕಷ್ಟು ಅನುಭವ ಶ್ರೀಮಂತಿಕೆ ದೊರೆತಿದೆ.
ಅಜೀಂ ಪ್ರೇಮ್ ಜಿ ಫೌಂಡೇಶನ್ನಿನ ಗಿರಿಧರ ರಚಿಸಿರುವ Ordinary People Extraordinary Teacher ಕೃತಿಯನ್ನು ಕನ್ನಡಕ್ಕೆ ಅನುವಾದಿಸಿ, ಶಿಕ್ಷಕರಿಗೆ ತರಬೇತಿ ಅವಧಿಯಲ್ಲಿ ಒದಗಿಸುವ ಕಾರ್ಯ ಕೈಗೊಳ್ಳಲು ಸಚಿವರು ಸಿಸ್ಲೆಪ್ ನಿರ್ದೇಶಕರಿಗೆ ಸೂಚಿಸಿದರು.

ಸಿಸ್ಲೆಪ್ ನಿರ್ದೇಶಕ ಬಿ.ಎಸ್.ರಘುವೀರ ಅವರು , ಪ್ರಾತ್ಯಕ್ಷಿಕೆ ಮೂಲಕ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಉಪನಿರ್ದೇಶಕರಾದ ಮೋಹನಕುಮಾರ್ ಹಂಚಾಟೆ, ಅಬ್ದುಲ್ ವಾಜೀದ್ ಖಾಜಿ, ಎಂ.ಎಂ.ಸಿಂಧೂರ, ಹಿರಿಯ ಸಹಾಯಕ ನಿರ್ದೇಶಕ ಆರ್.ಆರ್.ಬಾರಟಕ್ಕೆ, ಸಹಾಯಕ ನಿರ್ದೇಶಕ ಮಹಾವೀರ ಹಂಚಿನಾಳ, ಉಪನ್ಯಾಸಕರಾದ ಸುಜಾತಾ ತಿಮ್ಮಾಪುರ, ಲಕ್ಷ್ಮೀ ಭಗವತಿ, ಸ್ವರೂಪಶೀಲಾ ಮತ್ತಿತರರು ಹಾಜರಿದ್ದರು.

ಕೃಷಿ ಅಧಿಕಾರಿಗಳು ರೈತಸ್ನೇಹಿಗಳಾಗಬೇಕೇ ಹೊರತು ವ್ಯಾಪಾರಿ ಸ್ನೇಹಿಯಲ್ಲ:ಬಿ.ಸಿ.ಪಾಟೀಲ್

ಬೆಂಗಳೂರು,ಸೆ.10: ಕೃಷಿ ಅಧಿಕಾರಿಗಳು ರೈತಸ್ನೇಹಿಗಳಾಗಬೇಕೇ ಹೊರತು ವ್ಯಾಪಾರಿಸ್ನೇಹಿಗಳಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಬೆಂಗಳೂರಿನ ಜಿಕೆವಿಕೆಯ ಕುವೆಂಪು ಸಭಾಂಗಣದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಕೃಷಿ ಅಧಿಕಾರಿಗಳ ಜೊತೆ ಪ್ರಗತಿಪರಿಶೀಲನಾ ಸಭೆ ನಡೆಸಿ ಮಾತನಾಡಿದರು.
ಅಧಿಕಾರಿಗಳು ರೈತಸ್ನೇಹಿಗಳಾಗಬೇಕು.ರೈತರಿಗೆ ಅಧಿಕಾರಿಗಳು ಸ್ಥಳೀಯವಾಗಿ ಸಿಗುವಂತಾಗಬೇಕು‌.ರೈತರೇ ಉತ್ತಮ ಅಧಿಕಾರಿ ಎಂದು ಮೆಚ್ಚುಗೆ ವ್ಯಕ್ತಪಡಿಸುವಂತಾಗಬೇಕು‌.ಕೃಷಿ ಇಲಾಖೆಯ ಅಭಿವೃದ್ಧಿಗೆ ರೈತರಿಗೆ ಅನುಕೂಲಕಲ್ಪಿಸಲು ಅಧಿಕಾರಿಗಳು ಯೋಜನೆಗಳನ್ನು ರೂಪಿಸಬೇಕು.ಅಧಿಕಾರಿಗಳು ರೈತರ ಅಭಿವೃದ್ಧಿಗಾಗಿ ನೀಡುವ ಸಲಹೆಗಳನ್ನು ಸ್ವೀಕರಿಸಲಾಗುವುದು.ಈ ಬಾರಿ 101% ಬಿತ್ತನೆಯಾಗಿರುವುದು ಇಲಾಖೆಯ ಸಾಧನೆಯಾಗಿದೆ ಎಂದರು.

ರೈತರೇ ಮುಂದಿನ ವರ್ಷದಿಂದ ತಮ್ಮ ಬೆಳೆಯ ಸಮೀಕ್ಷೆಯನ್ನು ತಾವೇ ಮಾಡಬೇಕಾಗುತ್ತದೆ.ಈ ನಿಟ್ಟಿನಲ್ಲಿ ಈವರ್ಷದಲ್ಲಿ ಬೆಳೆ ಸಮೀಕ್ಷೆಗೆ ಪ್ರಾಯೋಗಿಕ ಕೆಲಸ ಮಾಡಲಾಗಿದೆ. ಕೆಲವೆಡೆ ತಂತ್ರಜ್ಞಾನದಿಂದ ಮಳೆಯಿಂದ ಸಮೀಕ್ಷೆ ತೊಂದರೆಯಾಗಿರಬಹುದಷ್ಟೇ. ಆದರೆ ಪ್ರಾಯೋಗಿಕತೆ ಯಶಸ್ವಿಯಾಗುತ್ತಿದೆ.ಬೆಳೆ ಸಮೀಕ್ಷೆಗೆ ಅಧಿಕಾರಿಗಳು ಹೆಚ್ಚಿನ ಒತ್ತು ನೀಡಲೇಬೇಕು.ಸರ್ಕಾರದ ಸೌಲಭ್ಯಗಳಿಗೆ ರೈತರು ತಪ್ಪದೇ ಆ್ಯಪ್ ಬೆಳೆಸಮೀಕ್ಷೆ ತಪ್ಪದೇ ಮಾಡಬೇಕು.ಅಧಿಕಾರಿಗಳು ಇನ್ನಷ್ಟು ಹೆಚ್ಚು ಶ್ರಮ ಮತ್ತು ಆಸಕ್ತಿವಹಿಸಿ ಬೆಳೆ ಸಮೀಕ್ಷೆ ಮಾಡಿಸಬೇಕು ಎಂದು ಸಚಿವರು ಕರೆ ನೀಡಿದರು.

ಕೃಷಿ ಇಲಾಖೆಗೆ ಎಲ್ಲರೂ ಪ್ರೋತ್ಸಾಹ ನೀಡುತ್ತಿದ್ದಾರೆ.ಪ್ರಧಾನಿಗಳು ಸಹ ಆಹಾರ ಉತ್ಪಾದನೆ ಕೃಷಿಗೆ ಹೆಚ್ಚು ಒತ್ತು ನೀಡಿ ಅನುದಾನ ನೀಡುತ್ತಿದ್ದಾರೆ ಎಂದರು.
ನಮ್ಮ‌ಇಲಾಖೆಯ ಕೆಲಸ ನಾವೇ ಮಾಡಬೇಕು.ಅಧಿಕಾರಿಗಳು ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.ಇಲಾಖೆಯ ಅಭಿವೃದ್ಧಿಗಳನ್ನು ಮಾಹಿತಿಗಳನ್ನು‌ ನೀಡಬೇಕು ಎಂದರು.

ಕೃಷಿ ಇಲಾಖೆ ಆಯುಕ್ತ ಬ್ರಿಜೇಶ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ನಿಜಕ್ಕೂ ಯೂರಿಯಾಕ್ಕಾಗಲೀ ರಸಗೊಬ್ಬರಕ್ಕಾಗಲೀ ಕೊರತೆಯಿಲ್ಲ.ಸರಬರಾಜು ಹಂಚಿಕೆಯಲ್ಲಿ ಎಲ್ಲೋ‌ಒಂದೆರಡು ಕಡೆ ವಿಳಂಬವಾಗಿರಬಹುದಷ್ಟೇ.ಆದರೆ ವಾಸ್ತವವಾಗಿ ಕೊರತೆಯಿಲ್ಲ.ಕಾಳಸಂತೆ ಮಾರಾಟ ಸುಳ್ಳು ತಪ್ಪು ಮಾಹಿತಿ ನೀಡುವವರ ವಿರುದ್ಧ ಎಚ್ಚರಿಕೆ ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಸರ್ಕಾರದ ಕಾರ್ಯದರ್ಶಿ ರಾಜಕುಮಾರ್ ಖತ್ರಿ, ಕೃಷಿ ಇಲಾಖೆ ನಿರ್ದೇಶಕ ಶ್ರೀನಿವಾಸ್ ಉಪಸ್ಥಿತರಿದ್ದರು.

ಪ್ರಶಸ್ತಿ ಪುರಸ್ಕೃತರ ಆಯ್ಕೆ ಬಗ್ಗೆ ಅಪಸ್ವರ ಬೇಡ; 32 ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಿದ ಡಿಸಿಎಂ

ಬೆಂಗಳೂರು: ಈ ವರ್ಷ ಕೋವಿಡ್‌ ಹಿನ್ನೆಲೆಯಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗಿದ್ದು, 32 ಮಂದಿ ಕೊರೋನ ವಾರಿಯರುಗಳಿಗೆ ಕೆಂಪೇಗೌಡ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಪ್ರಶಸ್ತಿ ಪುರಸ್ಕೃತರ ಆಯ್ಕೆ ಬಗ್ಗೆ ಅಪಸ್ವರ ಸರಿಯಲ್ಲ. ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್.‌ ಅಶ್ವತ್ಥನಾರಾಯಣ ಹೇಳಿದರು.

ಬಿಬಿಎಂಪಿ ವತಿಯಿಂದ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಮೊದಲೇ ಈ ವರ್ಷ ಹೆಚ್ಚಿ ಸಂಖ್ಯೆಯಲ್ಲಿ ಕೊರೋನ ವಾರಿಯರುಗಳಿಗೇ ಕೇಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹೇಳಲಾಗಿತ್ತು. ಆದರಂತೆ ಸಾಧಕರನ್ನು ಗುರುತಿಸಿ ಗೌರವಿಸಲಾಗಿದೆ. ಅವರನ್ನು ಗುರುತಿಸಿ ಗೌರವಿಸಬೇಕಾದ್ದು ಎಲ್ಲರ ಕರ್ತವ್ಯ ಎಂದರು.

ಕೇವಲ ಕೊರೋನಾ ವಾರಿಯರ್ಸ್‌ ಜತೆಗೆ ಬೇರೆಯವರಿಗೂ ಪ್ರಶಸಿ ನೀಡಲಾಗಿದೆಯಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರ ನೀಡಿದ ಡಿಸಿಎಂ, ಈ ಬಾರಿ ಆಯ್ಕೆ ಸಮಿತಿಯು ಉತ್ತಮ ಸಾಧಕರನ್ನೇ ಆಯ್ಕೆ ಮಾಡಿದೆ. ಈ ಪೈಕಿ ಹೆಚ್ಚು ಸಂಖ್ಯೆಯಲ್ಲಿ ಕೋವಿಡ್‌ ವಿರುದ್ಧ ಹೋರಾಟ ನಡೆಸಿದವರನ್ನೇ ಆಯ್ಕೆ ಮಾಡಲಾಗಿದೆ. ಮುಂದಿನ ವರ್ಷ ಎಂದಿನಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸಲಾಗುವುದು ಎಂದು ಅವರು ಹೇಳಿದರು.

ಈ ವರ್ಷ ಕೋವಿಡ್‌ ದುಡಿದವರನ್ನು ಗೌರವಿಸಲಾಗಿದೆ. ಮೊತ್ತ ಮೊದಲು ಕೋವಿಡ್‌ ಆಸ್ಪತ್ರೆ ಆರಂಭಿಸಿ ಉಳಿದವರಿಗೂ ಮೇಲ್ಪಂಕ್ತಿ ಹಾಕಿಕೊಟ್ಟ ಡಾ. ಆಸೀಮಾ ಭಾನು, ಹೋಮ್‌ ಕ್ವಾರಂಟೈನ್‌ ಹಾಗೂ ಮನೆಯಲ್ಲೇ ಚಿಕಿತ್ಸೆ ನೀಡುವ ಬಗ್ಗೆ ಉತ್ತೇಜನ ನೀಡಿದ ಡಾ. ಮೀನಾ ಗಣೇಶ್‌, ಡಾ, ನವೀನ್‌ ಬೆನಕಪ್ಪ, ಡಾ. ವೆಂಕಟೇಶ ಮೂರ್ತಿ, ಜೈವಿಕ ತಂತ್ರಜ್ಞಾನದಲ್ಲಿ ಕೆಲಸ ಮಾಡಿರುವ ತಸ್ಲೀಮ್‌ ಆರೀಫ್‌ ಸೈಯ್ಯದ್‌, ಯುವಕರಿಗೆ ಸ್ಫೂರ್ತಿ ಆಗಿರುವ ನಿತಿನ್‌ ಕಾಮತ್‌ ಮುಂತಾದವರನ್ನು ಗುರುತಿಸಲಾಗಿದೆ ಎಂದ ಅವರು, ಪ್ರಶಸ್ತಿಗಳ ಬಗ್ಗೆ ಅಪಸ್ವರ ಸರಿಯಲ್ಲ ಎಂದರು.

ಬಿಬಿಎಂಪಿಗೆ ಆಡಳಿತಾಧಿಕಾರಿ:
ಪಾಲಿಕೆ ಚುನಾಯಿತ ಆಡಳಿತ ಅಂತ್ಯವಾಗಿರುವ ಹಿನ್ನೆಲೆಯಲ್ಲಿ ಬಿಬಿಎಂಪಿಗೆ ಆಡಳಿತಾಧಿಕಾರಿಯನ್ನು ಶೀಘ್ರವೇ ನೇಮಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಪಾಲಿಕೆಗೆ ಸಂಬಂಧಿಸಿದಂತೆ ಶುಕ್ರವಾರದಿಂದ ಜನಪ್ರತಿನಿಧಿಗಳು ಇರುವುದಿಲ್ಲ. ಈಗಾಗಲೇ ನಗರದಲ್ಲಿ ಮಳೆ ಅಬ್ಬರ ಹೆಚ್ಚಿದೆ. ಸಮಸ್ಯೆಗಳ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಲು ಕೂಡಲೇ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗುವುದು. ಆ ಬಗ್ಗೆ ಮುಖ್ಯಮಂತ್ರಿಗಳು ಇಂದು ಅಥವಾ ನಾಳೆಯೊಳಗೆ ನಿರ್ಧಾರ ಕೈಗೊಳ್ಳುವರು ಎಂದು ಹೇಳೀದರು.

ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ ಅವರನ್ನೇ ಆಡಳಿತಾಧಿಕಾರಿ ಯನ್ನಾಗಿ ನೇಮಿಸಲಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿ ಅವರು, ಮಂಜುನಾಥ್‌ ಪ್ರಸಾದ್‌ ಅವರನ್ನೇ ನೇಮಿಸಬೇಕಾ ಅಥವಾ ಬೇರೆಯವರನ್ನು ಆ ಹುದ್ದೆಗೆ ತರಬೇಕಾ ಎಂಬ ಬಗ್ಗೆ ಮುಖ್ಯಮಂತ್ರಿಗಳೇ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಡಿಸಿಎಂ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಮೇಯರ್‌ ಗೌತಮ್‌ ಕುಮಾರ್‌, ಆಯುಕ್ತ ಮಂಜುನಾಥ್‌ ಪ್ರಸಾದ್‌, ಪಾಲಿಕೆ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

ಕೇಂಪೇಗೌಡರಿಗೆ ನಮನ:

ಇದೇ ವೇಳೆ ಉಪ ಮುಖ್ಯಮಂತ್ರಿಗಳು, ನಾಡಪ್ರಭು ಕೆಂಪೇಗೌಡರ ದಿನಾಚರಣೆ ಪ್ರಯುಕ್ತ ಮೇಖ್ರಿ ಸರ್ಕಲ್ʼನಲ್ಲಿರುವ ಕೆಂಪೇಗೌಡ ಗಡಿಗೋಪುರದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ನಾಡಪ್ರಭು ಕೆಂಪೇಗೌಡರ ಗಡಿಗೋಪುರಗಳಲ್ಲಿ ಒಂದಾದ ಇದು ನಮ್ಮ ಕ್ಷೇತ್ರದ ಪ್ರಮುಖ ಆಕರ್ಷಣೆ. ಈ ಜಾಗವನ್ನು ಮತ್ತಷ್ಟು ಅಭಿವೃದ್ಧಿಪಡಿಲಾಗುವುದು. ತಮ್ಮ ಪ್ರಖರ ದೂರದೃಷ್ಟಿತ್ವ, ಮಾದರಿ ಆಡಳಿತದ ಮೂಲಕ ನೀರಾವರಿ ಯೋಜನೆ, ಪರಿಸರ ಸಂರಕ್ಷಣೆ, ನಗರೀಕರಣ, ಧಾರ್ಮಿಕತೆ, ಆಡಳಿತ ಸುಧಾರಣೆ ಮುಂತಾದ ಅಭಿವೃದ್ಧಿ ಯೋಜನೆಗಳೊಂದಿಗೆ ಕೆಂಪೇಗೌಡರು ನಮ್ಮ ಬೆಂಗಳೂರು ಜಾಗತಿಕ ಭೂಪಟದಲ್ಲಿ ಗುರುತಿಸುವಂತೆ ಮಾಡಿದವರು. ಅವರ ಹಾದಿಯಲ್ಲಿ ನಡೆದು ಬೆಂಗಳೂರಿನ ಸಮಗ್ರ ಅಭಿವೃದ್ಧಿಯತ್ತ ಸರಕಾರ ಸಾಗುತ್ತದೆ ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.

ಈ ಕಾರ್ಯಕ್ರಮದಲ್ಲಿ ಚಿತ್ರನಟ ಪುನೀತ್‌ ರಾಜಕುಮಾರ್‌, ಮಲ್ಲೇಶ್ವರ ವಿಭಾಗದ ಪಾಲಿಕೆ ಸದಸ್ಯರು, ಅಧಿಕಾರಿಗಳು ಮುಂತಾದವರು ಭಾಗಿಯಾಗಿದ್ದರು.