ಅಗ್ರಿ ಟೂರಿಸಂ ರೂಪಿಸಲು ಚಿಂತನೆ- ಸಚಿವ ನಾರಾಯಣಗೌಡ

ತುಮಕೂರು 09-ಕೃಷಿಗೆ ಪ್ರವಾಸೋದ್ಯಮ ಸ್ಪರ್ಶ ನೀಡಲು ಅಗ್ರಿ ಟೂರಿಸಂ ಯೋಜನೆ ರೂಪಿಸಲು ಚಿಂತನೆ ನಡೆಸುತ್ತಿದೆ ಎಂದು ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳ ಸಚಿವರಾದ ಕೆ.ಸಿ ನಾರಾಯಣಗೌಡ ಅವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಅಗ್ರಿ ಟೂರಿಸಂ ಯೋಜನೆಯಿಂದ ನಗರ ಪ್ರದೇಶದಲ್ಲಿರುವ ಯುವ ಪೀಳಿಗೆಗೆ ಕೃಷಿ ಆಧಾರಿತ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ಮಾಹಿತಿ ತಿಳಿಸುವುದು ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಕುಣಿಗಲ್ ತಾಲೂಕು ಮತ್ತು ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯಲ್ಲಿರುವ ಮೈಸೂರು ಬಿತ್ತನೆ ಪ್ರದೇಶದಲ್ಲಿ 911.56 ಹೆಕ್ಟೇರ್ ಪ್ರದೇಶದಲ್ಲಿ ಶುದ್ಧ ಮೈಸೂರು ರೇಷ್ಮೆ ಬೆಳೆಯುತ್ತಿದ್ದಾರೆ. ಅಲ್ಲದೇ ತಿಪಟೂರು, ತುರುವೇಕೆರೆ ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕುಗಳು ದ್ವಿತಳಿ ಬಿತ್ತನೆ ಪ್ರದೇಶವಾಗಿವೆ. ವಿಶೇಷ ಕ್ಲಸ್ಟರ್ ಅಭಿವೃದ್ಧಿ ಯೋಜನೆಯಡಿ 19.347 ಲಕ್ಷ ದ್ವಿತಳಿ ಸಂಕರಣ ಮೊಟ್ಟೆ ಚಾಕಿ ಮಾಡಿ 1274 ಮೆಟ್ರಿಕ್ ಟನ್ ಗೂಡು ಉತ್ಪಾದನೆ ಮಾಡಲಾಗಿದೆ. ಒಟ್ಟು ಗೂಡು ಉತ್ಪಾದನೆಯಲ್ಲಿ ಶೇ.79 ದ್ವಿತಳಿ ಗೂಡು ಉತ್ಪಾದಿಸಿ ರಾಜ್ಯದಲ್ಲಿ 2ನೇ ವಿಶೇಷ ಸ್ಥಾನ ಪಡೆದಿದೆ ಎಂದು ರೇಷ್ಮೆ ಇಲಾಖೆ ಉಪನಿರ್ದೇಶಕರು ಸಚಿವರಿಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ರೇಷ್ಮೆ ಬೆಳೆಯುತ್ತಿದ್ದರೆ, ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುವಂತೆ ರೇಷ್ಮೆ ಮಾರಾಟ ಮತ್ತು ಕೊಳ್ಳುವವರಿಗೆ ಮಾರ್ಕೆಟಿಂಗ್ ವ್ಯವಸ್ಥೆ ಮಾಡಬಹುದು. ಅದಕ್ಕಾಗಿ ಜಿಲ್ಲೆಯಲ್ಲಿ ರೇಷ್ಮೆ ಇಲಾಖೆಗೊಳಪಡುವ ಜಾಗವನ್ನು ಸರ್ವೇ ಮಾಡಿಸಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಿರಿ, ನಂತರ ಪ್ರಗತಿ ಕಾಮಗಾರಿಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗೆ ಸಚಿವರು ನಿರ್ದೇಶನ ನೀಡಿದರು.

ಕೋವಿಡ್-19 ಸಾಂಕ್ರಾಮಿಕ ರೋಗದ ತುರ್ತು ಪರಿಸ್ಥಿತಿಯಲ್ಲಿ ಪ್ರತಿನಿತ್ಯ ಸುಮಾರು 12.50 ಟನ್‍ಗಳಷ್ಟು ತಾಜಾ ಹಣ್ಣು ಮತ್ತು ತರಕಾರಿಗಳನ್ನು ಹಾಪ್‍ಕಾಮ್ಸ್, ರೈತ ಉತ್ಪಾದಕ ಸಂಸ್ಥೆ ಮತ್ತು ಎನ್.ಜಿ.ಒಗಳ ಸಹಯೋಗದೊಂದಿಗೆ 25 ವಾಹನಗಳಲ್ಲಿ ನಗರದ 35 ವಾರ್ಡ್‍ಗಳಲ್ಲಿ ವಿತರಿಸಲಾಯಿತು. ತಾಲೂಕು ಮಟ್ಟದದಲ್ಲಿ ರೈತರಿಂದ ನೇರವಾಗಿ ಹಣ್ಣು-ತರಕಾರಿಗಳನ್ನು ಖರೀದಿ ಮಾಡಿ ಗ್ರಾಹಕರಿಗೆ ಮಾರಾಟ ಮಾಡಿದ್ದೇವೆ ಎಂದು ತೋಟಗಾರಿಕೆ ಉಪನಿರ್ದೇಶಕ ರಘು ಅವರು ಸಚಿವರ ಗಮನಕ್ಕೆ ತಂದಾಗ, ಕೋವಿಡ್-19 ಸಂದರ್ಭದಲ್ಲಿ ಹಣ್ಣು-ತರಕಾರಿಗಳನ್ನು ರೈತರಿಂದ ಖರೀದಿ ಮಾಡಿ ಮಾರಾಟ ಮಾಡಿರುವುದರಲ್ಲಿ ರಾಜ್ಯದಲ್ಲಿ ತುಮಕೂರು 2ನೇ ಸ್ಥಾನದಲ್ಲಿ ಎಂದು ಸಂತಸ ವ್ಯಕ್ತಪಡಿಸಿದರು.

ಪ್ರಸ್ತುತ ಡ್ರ್ಯಾಗನ್ ಫ್ರ್ಯೂಟ್ಸ್‍ಗೆ ಹೆಚ್ಚಿನ ಬೇಡಿಕೆಯಿದ್ದು, ಅದನ್ನು ಜಿಲ್ಲೆಯ ಶಿರಾ ಮತ್ತು ತುರವೇಕೆರೆ ತಾಲೂಕಿನಲ್ಲಿ ಡ್ರ್ಯಾಗನ್ ಫ್ರ್ಯೂಟ್ಸ್ ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ ಬೆಳೆಯಲು ಪ್ರಾಮುಖ್ಯತೆ ನೀಡಿ, ಈ ಹಣ್ಣನ್ನು ಬೆಳೆಯುವ ರೈತರಿಗೆ ಪ್ರೋತ್ಸಾಹಧನ ನೀಡಿ, ನಿಂಬೆ ಬೆಳೆಗಾರರಿಗೆ ಅನುಕೂಲವಾಗುವಂತೆ ಘಟಕ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಈ ವರ್ಷ ವಾಡಿಕೆಗಿಂತ ಹೆಚ್ಚಾಗಿ ಮಳೆಯಾಗಿದ್ದು, ಸಮುದಾಯ ಕೃಷಿಹೊಂಡಗಳು ತುಂಬಿದೆ ಎಂದು ಸಚಿವರ ಗಮನಕ್ಕೆ ತೋಟಗಾರಿಕೆ ಅಧಿಕಾರಿ ತಂದರು.

ಪೌರಾಡಳಿತಕ್ಕೆ ಸಂಬಂಧಪಟ್ಟಂತೆ ಎಸ್.ಎಫ್.ಸಿ(ಕುಡಿಯುವ ನೀರು)ಗಾಗಿ 150 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ ನಗರ ಸ್ಥಳೀಯ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ 100 ಲಕ್ಷ ರೂ. ಖರ್ಚು ಮಾಡಿದ್ದು, 58 ಲಕ್ಷ ಬಾಕಿಯಿದೆ. ನೀರಿನ ತೆರಿಗೆ ವಸೂಲಾತಿ 9 ಕೋಟಿ ರೂ. ನಿಗಧಿಯಾಗಿದ್ದು, ಈವರೆಗೆ 1 ಕೋಟಿ ರೂ. ತೆರಿಗೆಯನ್ನು ವಸೂಲಿ ಮಾಡಲಾಗಿದ್ದು, 8 ಕೋಟಿ ರೂ. ಬಾಕಿಯಿರುವುದಾಗಿ ಪೌರಾಡಳಿತ ಯೋಜನಾ ಅಧಿಕಾರಿ ಬಿ.ಶುಭಾ ಅವರು ಸಚಿವರಿಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ನೀರಿನ ವಸೂಲಾತಿ ಕಡಿಮೆಯಿದ್ದು, ಬಾಕಿಯಿರುವ ನೀರಿನ ತೆರಿಗೆ ಸಂಗ್ರಹವನ್ನು ಮಾಡುವಂತೆ ಸೂಚಿಸಿದರು.

ಶಾಸಕರಾದ ಜಿ.ಬಿ ಜ್ಯೋತಿಗಣೇಶ್ ಮಾತನಾಡಿ, ತುಮಕೂರು ನಗರದಲ್ಲಿರುವ ತೋಟಗಾರಿಕೆ ಇಲಾಖೆ ಆವರಣದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಹಣ್ಣು-ತರಕಾರಿ ಮಾರಾಟ ಕಟ್ಟಡವನ್ನು ನಿರ್ಮಿಸಲು ಇಲಾಖೆಯಿಂದ ಎನ್‍ಓಸಿ ಕೊಡಿಸುವಂತೆ ಸಚಿವರಿಗೆ ಮನವಿ ಮಾಡಿದರು.

ಸಭೆಯಲ್ಲಿ ಶಾಸಕರಾದ ಜಯರಾಂ, ವೀರಭದ್ರಯ್ಯ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್‍ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಸಭೆಗೂ ಮುನ್ನಾ ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳ ಅಭಿವೃದ್ಧಿ ಕಾರ್ಯಕ್ರಮಗಳ ಮಾಹಿತಿಯಿರುವ ಬಿತ್ತಿಪತ್ರವನ್ನು ಸಚಿವರು ಬಿಡುಗಡೆಗೊಳಿಸಿದರು.

ಅನಂತ್ ಕುಮಾರ್,ಶಾಮ್ ಪ್ರಸಾದ್ ಮುಖರ್ಜಿ ಕ್ರೀಡಾ ಸಂಕೀರ್ಣ ಹಾಗೂ ನಚಿಕೇತ ಉದ್ಯಾನವನಕ್ಕೆ ವಸತಿ ಸಚಿವ ವಿ. ಸೋಮಣ್ಣ ಚಾಲನೆ..

ಬೆಂಗಳೂರು-ಸೆಪ್ಟಂಬರ್ 9 2020 : ನಗರದ ಗೋವಿಂದರಾಜನಗರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಕೆ.ಜಿ.ಎಸ್. ವಾರ್ಡ್ ಸಂಖ್ಯೆ 125ರಲ್ಲಿ 6 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಮಾಜಿ ಕೇಂದ್ರ ಸಚಿವ ದಿ. ಅನಂತಕುಮಾರ್ ಕ್ರೀಡಾ ಸಂಕೀರ್ಣ ಕಟ್ಟಡ, 1.05 ಕೋಟಿ ವೆಚ್ಚದ ವಿವಿಧೋದ್ದೇಶ ಕಟ್ಟಡ ಸಂಕೀರ್ಣ, ಮಾರೇನಹಳ್ಳಿ ವಾರ್ಡ್‍ನಲ್ಲಿ 2.90ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಕ್ರೀಡಾ ಸಂಕೀರ್ಣ ಹಾಗೂ ನಚಿಕೇತ ಉದ್ಯಾನವನವನ್ನು ವಸತಿ ಸಚಿವ ವಿ ಸೋಮಣ್ಣ ಅವರು ಉದ್ಘಾಟಿಸಿದರು.

ದಿ, ಅನಂತ್ ಕುಮಾರ್ ಸ್ಮಾರಕವಾಗಿ ನಿರ್ಮಾಣಗೊಂಡಿರುವ ಕ್ರೀಡಾ ಸಂಕಿರ್ಣವನ್ನು ವಸತಿ ಸಚಿವ ವಿ. ಸೋಮಣ್ಣ ಅವರು ಶಟಲ್ ಬ್ಯಾಡ್ಮಿಂಟನ್ ಆಡುವ ಮೂಲಕ ಚಾಲನೆ ನೀಡಿದ್ರು.

ಬಿಬಿಎಂಪಿ ಹಾಗೂ ಮುಖ್ಯಮಂತ್ರಿಗಳ ನವನಗರೋತ್ಥಾನ ಯೋಜನೆಯಡಿಯಲ್ಲಿ ಈ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಅನಂತ್ ಕುಮಾರ್ ಕ್ರೀಡಾ ಸಂಕೀರ್ಣ ಸುಮಾರು 440.00 ಚದರ ಮೀಟರ್ ವಿಸ್ತೀರ್ಣ ಹೊಂದಿದೆ. ಇದರ ನೆಲ ಮಹಡಿಯಲ್ಲಿ ಕೆಜಿಎಸ್ ಗ್ರಂಥಾಲಯ, ಯೋಗ ಶಾಲೆ ಇದೆ. ಮೊದಲ ಮಹಡಿಯಲ್ಲಿ ಆತ್ಯಾಧುನಿಕ ಮಾದರಿಯ ವ್ಯಾಯಾಮ ಶಾಲೆ ಹಾಗೂ ಎರಡನೇ ಮಹಡಿಯಲ್ಲಿ ಶಟ್ಲ್ ಬ್ಯಾಡ್ಮಿಂಟನ್ ಕೋರ್ಟ್ ಇದೆ. ಹಾಗೇ
ಇನ್ನು ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಕ್ರೀಡಾ ಸಂಕೀರ್ಣದಲ್ಲಿ ಹೊರಾಂಗಣ ವ್ಯಾಯಮ ಸೌಲಭ್ಯಗಳು, ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನಿಸ್ ಸೇರಿದಂತೆ ಇನ್ನಿತರ ಒಳಾಂಗಣ ಕ್ರೀಡೆಗಳ ಸವಲತ್ತುಗಳಿವೆ. ಪಾಲಿಕೆ ಸದಸ್ಯೆ ಮಧುಕುಮಾರಿ ವಾಗೀಶ್, ಅರುಣ್ ಸೋಮಣ್ಣ, ವಾಗೀಶ್, ಮೋಹನ್, ಸೇರಿದಂತೆ ಬಿಬಿಎಂಪಿ ಅಧಿಕಾರಿಗಳು ಉಪಸ್ಥಿತಿರಿದ್ದರು.

ಇದಕ್ಕೂ ಮೊದಲು ಅಂದ್ರೆ ಬೆಳಗ್ಗೆ ಗೋವಿಂದರಾಜನಗರ ಕ್ಷೇತ್ರದ ಡಾ. ರಾಜ್ ಕುಮಾರ್ ವಾರ್ಡ್ ಸಂಖ್ಯೆ 106ರ ವ್ಯಾಪ್ತಿಯಲ್ಲಿಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆ ಕಟ್ಟಡ ಕಾಮಗಾರಿಗೆ ಸಚಿವರು ಭೂಮಿ ನೇರವೆರಿಸಿದ್ರು. ಈ ಶಾಲಾ ಕಟ್ಟಡ ಅಂದಾಜು ವೆಚ್ಚ 12 ಕೋಟಿ ಆಗಿದೆ.

ಭೂಮಿಪೂಜೆ ಕಾರ್ಯಕ್ರಮದಲ್ಲಿ ಎಂಎಲ್ಸಿ ಅ. ದೇವೇಗೌಡರು, ಬಿಬಿಎಂಪಿ ಸದಸ್ಯರಾದ ರೂಪ .ಆರ್.ಮೋಹನ್ ಕುಮಾರ್, ವಾಗೀಶ್, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಧಾನಸಭೆ ಕಲಾಪದ ಅವಧಿ ವಿಸ್ತರಣೆಗೆ ಸಿದ್ದರಾಮಯ್ಯ ಒತ್ತಾಯ

ಬೆಂಗಳೂರು : ಮಹತ್ವದ ಹಲವಾರು ವಿಚಾರಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಯುವ ಅಗತ್ಯವಿರುವುದರಿಂದ ಇದೇ ತಿಂಗಳ 21ರಿಂದ ನಡೆಸಲು ಉದ್ದೇಶಿಸಿರುವ ವಿಧಾನಸಭೆ ಕಲಾಪದ ಅವಧಿಯನ್ನು ಅಕ್ಟೋಬರ್ 15ರವರೆಗೆ ವಿಸ್ತರಿಸುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸ್ಪೀಕರ್ ಹಾಗೂ ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಪತ್ರದ ವಿವರ ಹೀಗಿದೆ :
ಅಧಿವೇಶನದ ಅವಧಿಯನ್ನು ಅಗತಸೆಪ್ಟೆಂಬರ್ 21 ರಿಂದ 30 ರವರೆಗೆ 15ನೇ ವಿಧಾನಸಭೆಯ 7ನೇ ಅಧಿವೇಶನದ ಕಾರ್ಯಕಲಾಪಗಳನ್ನು ನಡೆಸಲು ಪ್ರಕಟಣೆ ಹೊರಡಿಸಲಾಗಿದೆ. ಈ ಪ್ರಕಟಣೆಯಂತೆ 21, 22, 23, 24, 25, 28, 29 ಮತ್ತು 30 ರವರೆಗೆ ಅಧಿವೇಶನವನ್ನು ನಡೆಸಲು ಉದ್ದೇಶಿಸಲಾಗಿದೆ. ಸದರಿ ಅಧಿವೇಶನದಲ್ಲಿ ಸುಮಾರು 20 ಕ್ಕಿಂತ ಹೆಚ್ಚು ಸುಗ್ರಿವಾಜ್ಞೆಗಳನ್ನು ಒಳಗೊಂಡಂತೆ 35 ಕ್ಕಿಂತ ಹೆಚ್ಚು ಮಸೂದೆಗಳನ್ನು ಮಂಡಿಸಲಾಗುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಕರ್ನಾಟಕ ರಾಜ್ಯದ ಜನರು ಹಿಂದೆಂದೂ ಕಂಡರಿಯದ ರೀತಿಯಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪದೇ ಪದೇ ಪ್ರವಾಹಗಳು ಬಂದೆರಗುತ್ತಿದೆ. ಕಳೆದ ಮಾರ್ಚ್‍ನಿಂದ ಕೋವಿಡ್-19 ಸಾಂಕ್ರಾಮಿಕವು ಮಾರಣಾಂತಿಕವಾಗಿ ವ್ಯಾಪಿಸಿಕೊಂಡು ರಾಜ್ಯದ ಜನರ ಬದುಕನ್ನು ಹೈರಾಣಾಗಿಸಿದೆ ಮತ್ತು ಸುಮಾರು 6,500 ಕ್ಕಿಂತ ಹೆಚ್ಚು ಜನ ಈ ಸೋಂಕಿನಿಂದಾಗಿ ಮೃತಪಡುವಂತೆ ಮಾಡಿದೆ. ಪದೇ ಪದೇ ಕಾನೂನು ಸುವ್ಯವಸ್ಥೆಯ ಸಮಸ್ಯೆಗಳು ಉಂಟಾಗುತ್ತಿವೆ, ಜೊತೆಯಲ್ಲಿ ಡ್ರಗ್ಸ್‍ನಂತಹ ಅಪಾಯಕಾರಿ ಚಟುವಟಿಕೆಗಳು ರಾಜ್ಯವನ್ನು ಆವರಿಸಿಕೊಂಡಿವೆ.

ಇಂತಹ ಸನ್ನಿವೇಶದಲ್ಲಿ ಅಧಿವೇಶನವನ್ನು ನಡೆಸಲಾಗುತ್ತಿದೆ. ಆದರೆ ಅಧಿವೇಶನದ ಸಮಯ ಮಾತ್ರ ಯಾವುದಕ್ಕೂ ಸಾಕಾಗುವುದಿಲ್ಲ. ಜನರ ಮೇಲೆ ಕಾಳಜಿ ಇಲ್ಲದೆ ನೆಪ ಮಾತ್ರಕ್ಕೆ ಅಧಿವೇಶನ ನಡೆಸಲು ಉದ್ದೇಶಿಸುವಂತೆ ಕಾಣಿಸುತ್ತಿದೆ. ಹಲವು ಜನ ವಿರೋಧಿಯಾದ ಸುಗ್ರಿವಾಜ್ಞೆಗಳನ್ನು ಚರ್ಚೆಯನ್ನೇ ನಡೆಸದೆ ಅಂಗೀಕಾರ ಪಡೆಯಲು ಯತ್ನಿಸುತ್ತಿರುವುದು ಅತ್ಯಂತ ಜನ ದ್ರೋಹಿಯಾದ, ಬೇಜವಾಬ್ದಾರಿಯುತವಾದ ಮತ್ತು ದುಷ್ಟತನದ ಪರಮಾವಧಿಯಂತೆ ಕಾಣುತ್ತಿದೆ. ಸರ್ಕಾರ ಈ ವಿಚಾರದಲ್ಲಿ ಅತ್ಯಂತ ಅಸಂವಿಧಾನಿಕವಾಗಿ ನಡೆದುಕೊಳ್ಳುತ್ತಿದೆ.

‘ಕರ್ನಾಟಕ ರಾಜ್ಯ ವಿಧಾನಮಂಡಲದ ಸರ್ಕಾರಿ ಕಾರ್ಯಕಲಾಪಗಳ ನಿರ್ವಹಣೆ ಅಧಿನಿಯಮ 2005’ರ ಸೆಕ್ಷನ್ 3 ರಂತೆ ಕಡ್ಡಾಯವಾಗಿ 60 ದಿನಗಳಿಗೆ ಕಡಿಮೆ ಇಲ್ಲದಂತೆ ಪ್ರತಿ ವರ್ಷ ಅಧಿವೇಶನಗಳನ್ನು ನಡೆಸಬೇಕು ಎಂದಿದೆ. ಸೆಕ್ಷನ್ 4 ರ ಪ್ರಕಾರ ವರ್ಷದಲ್ಲಿ ಒಟ್ಟು 4 ಅಧಿವೇಶನವನ್ನು ನಡೆಸಬೇಕು. ಜನವರಿಯಲ್ಲಿ 15, ಮಾರ್ಚ್ ತಿಂಗಳಲ್ಲಿ 20, ಜುಲೈ ತಿಂಗಳಲ್ಲಿ 15 ಮತ್ತು ನವೆಂಬರ್ ತಿಂಗಳಿನಲ್ಲಿ ಕನಿಷ್ಠ 10 ದಿನಗಳಷ್ಟು ಸೇರಿ ಒಟ್ಟು ಕನಿಷ್ಠ 60 ದಿನಗಳಷ್ಟು ಅಧಿವೇಶನವನ್ನು ನಡೆಸಬೇಕಾಗುತ್ತದೆ. ಆದರೆ ಬಿ.ಜೆ.ಪಿ ಆಡಳಿತದ ಸರ್ಕಾರವು ಸಂಸದೀಯ ವ್ಯವಸ್ಥೆಯನ್ನು ನಿರಂತರವಾಗಿ ಹಾಳುಗೆಡವುತ್ತಿದೆ. ಅಧಿವೇಶನಗಳನ್ನು ಕರೆದು ಚರ್ಚೆ ನಡೆಸುವುದನ್ನು ನಾಮಕಾವಸ್ಥೆ ಕೆಲಸವೆಂದು ಭಾವಿಸಿ ವರ್ತಿಸುತ್ತಿದೆ.

ಕೇವಲ 8 ದಿನಗಳಲ್ಲಿ ಇಷ್ಟೊಂದು ಮಹತ್ವದ ವಿಚಾರಗಳನ್ನು ಚರ್ಚಿಸಲು ಸಾಧ್ಯವಿಲ್ಲ. ಹಾಗಾಗಿ ಈ ಅಧಿವೇಶನವನ್ನು ಕನಿಷ್ಠ 3 ವಾರಗಳ ಕಾಲ ಅಂದರೆ ಅಕ್ಟೋಬರ್ 15 ರವರೆಗೆ ವಿಸ್ತರಿಸಬೇಕೆಂದು ಆಗ್ರಹಿಸುತ್ತೇನೆ.

ಬೆಂಗಳೂರಿಗೆ ಈ ವರ್ಷ ಪ್ರತ್ಯೇಕ ಕಾನೂನು ಜಾರಿ ಎಂದ ಡಿಸಿಎಂ

ಬೆಂಗಳೂರು: ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಮತ್ತಿತರೆ ಮೂಲಭೂತ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಎದುರಿಸುವ ನಿಟ್ಟಿನಲ್ಲಿ ರಾಜಧಾನಿ ಬೆಂಗಳೂರು ನಗರಕ್ಕೆ ಪ್ರತ್ಯೇಕ ಕಾಯ್ದೆಯನ್ನು ಜಾರಿ ಮಾಡುವ ನಿಟ್ಟಿನಲ್ಲಿ ಸರಕಾರ ಹೆಜ್ಜೆಗಳನ್ನಿಡುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.

ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಎಲ್ಲರಿಗೂ ಗೊತ್ತಿರುವಂತೆ ಬೆಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ. ಇದು ಇತರೆ ನಗರಗಳಂತೆ ಅಲ್ಲ. ದಿನೇದಿನೆ ರಾಜ್ಯದ ಮೂಲೆಮೂಲೆಗಳಿಂದ, ಇತರೆ ರಾಜ್ಯಗಳಿಂದ ಇಲ್ಲಿಗೆ ವಲಸೆ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗಾಗಿ ಪ್ರತ್ಯೇಕ ಕಾಯ್ದೆ ಅಗತ್ಯವಾಗಿದೆ. ಈಗಾಗಲೇ ಅದಕ್ಕೆ ಸಂಬಂಧಿಸಿದ ಕೆಎಂಸಿ ಕಾಯ್ದೆ ವ್ಯಾಪ್ತಿಯಲ್ಲಿ ನಗರವನ್ನು ನಿರ್ವಹಿಸಲು ಸಾಧ್ಯವಿಲ್ಲ. ಈಗಾಗಲೇ ಮಸೂದೆಯನ್ನು ಮಂಡಿಸಲಾಗಿದ್ದು, ಅದು ಜಂಟಿ ಸದನ ಸಮಿತಿ ಪರಿಶೀಲನೆಯಲ್ಲಿದೆ. ಸದನದ ಒಪ್ಪಿಗೆ ಪಡೆದ ನಂತರ ಅದನ್ನು ಕಾಯ್ದೆಯಾಗಿ ಜಾರಿ ಮಾಡಲಾಗುವುದು ಎಂದರು.

ಬೆಂಗಳೂರಿಗೆ ಪಕ್ಕಾ ಪ್ಲ್ಯಾನ್‌ ಬೇಕು:

ಬೆಂಗಳೂರು ದೇಶದಲ್ಲಿಯೇ ಅತಿದೊಡ್ಡ ಉದ್ಯೋಗ ತಾಣವೂ ಆಗುತ್ತಿದೆ. ಹೀಗಾಗಿ ನಗರಕ್ಕೆ ಅತ್ಯುತ್ತಮ ಪ್ಲ್ಯಾನಿಂಗ್‌ ಬೇಕು, ಉತ್ತಮ ಸಹಕಾರ ಬೇಕು ಹಾಗೂ ಯೋಜನೆಗಳನ್ನು ಜಾರಿ ಮಾಡಲು ಅತ್ಯುತ್ತಮವಾದ ವ್ಯವಸ್ಥೆ ಬೇಕು. ಇವೆಲ್ಲ ಹಿನ್ನೆಲೆಯಲ್ಲಿ ನಗರಕ್ಕೆ ಪ್ರತ್ಯೇಕ ಕಾಯ್ದೆ ತರಲು ಸರಕಾರ ಮುಂದಾಗಿದೆ ಎಂದು ಉಪ ಮುಖ್ಯಮಂತ್ರಿ ಮಾಹಿತಿ ನೀಡಿದರು.

ಈಗಾಗಲೇ ಈ ಬಗ್ಗೆ ಬೆಂಗಳೂರು ಎಲ್ಲ ಜನ ಪ್ರತಿನಿಧಿಗಳ ಜತೆ ವ್ಯಾಪಕ ಸಮಾಲೋಚನೆ ನಡೆಸಲಾಗಿದೆ. ಹೊಸ ಕಾಯ್ದೆಗೆ ಎಲ್ಲರ ಬೆಂಬಲವೂ ಬೇಕಿದೆ ಎಂದು ಅವರು ಹೇಳಿದರು.ಉಳಿದಂತೆ ಬಿಬಿಎಂಪಿ ಚುನಾವಣೆ ಬಗ್ಗೆ ಸರಕಾರದ ಪಾತ್ರವೇನೂ ಇಲ್ಲ. ಚುನಾವಣೆ ಆಯೋಗ ತನ್ನ ಕೆಲಸವನ್ನು ತಾನು ಮಾಡಿಕೊಂಡು ಹೋಗುತ್ತಿದೆ. ಅದಕ್ಕೆ ಬೇಕಾದ ಸೌಕರ್ಯಗಳನ್ನಷ್ಟೇ ಸರಕಾರ ಮಾಡಿಕೊಡುತ್ತಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ರಾಗಿಣಿ ಬಿಜೆಪಿ ಸದಸ್ಯೆ ಅಲ್ಲ:

ಮಾದಕ ವಸ್ತು ಹಗರಣಕ್ಕೆ ಸಿಲುಕಿ ಬಂಧನಕ್ಕೆ ಒಳಗಾಗಿರುವ ನಟಿ ರಾಗಿಣಿ ಅವರು ಬಿಜೆಪಿ ಸದಸ್ಯೆ ಅಲ್ಲ. ಹೀಗಾಗಿ ಅವರನ್ನು ಪಕ್ಷದಿಂದ ಅಮಾನತು ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಇದು ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಡ್ರಗ್ಸ್‌ನ ಮೂಲ ಯಾವುದು? ಅದು ಎಲ್ಲಿಂದ ಬರುತ್ತಿದೆ? ಯಾರು ಯಾರು ಬಳಕೆ ಮಾಡುತ್ತಿದ್ದಾರೆ? ಎಂಬ ಅಂಶಗಳ ಬಗ್ಗೆ ಪೊಲೀಸರು ಆಳವಾದ ತನಿಖೆ ಮಾಡುತ್ತಿದ್ದಾರೆ. ಆದಷ್ಟು ಬೇಗ ತನಿಖೆಯನ್ನು ಪೂರ್ಣಗೊಳಿಸಿ ಈ ಪೀಡೆಗೆ ಇತಿಶ್ರೀ ಹಾಡಲಾಗುವುದು. ಇಲ್ಲದಿದ್ದರೆ ನಮ್ಮ ಪ್ರತಿಭಾವಂತ ಯುವಜನತೆ ಮಾದಕ ವಸ್ತುಗಳ ದಾಸ್ಯಕ್ಕೆ ಸಿಲಿಕಿ ತಮ್ಮ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆಂದು ಉಪ ಮುಖ್ಯಮಂತ್ರಿ ಹೇಳಿದರು.

ರಾಗಿಣಿ ಅವರು ಬಿಜೆಪಿ ಪರವಾಗಿ ಕೆ.ಆರ್.‌ ಪೇಟೆ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದು ಹೌದು. ಹಾಗಂತ ಅವರು ನಮ್ಮ ಪಕ್ಷದ ಸದಸ್ಯೆಯಂತೂ ಅಲ್ಲ. ಚುನಾವಣೆ ಬಂದಾಗ ನಟ ನಟಿಯರು ವಿವಿಧ ಪಕ್ಷಗಳ ಪರವಾಗಿ ಪ್ರಚಾರ ಮಾಡುವುದು ಸಾಮಾನ್ಯ. ರಾಗಿಣಿ ಪಕ್ಷದ ಪರ ಪ್ರಚಾರ ಮಾಡಿದ್ದಾರೆ ಅಂದ ಮಾತ್ರಕ್ಕೆ ಅವರು ಮಾಡಿದ್ದೆಲ್ಲವನ್ನೂ ಸರಿ ಎನ್ನಲಾಗುತ್ತದೆಯೇ? ಯಾರೇ ಮಾಡಿದರೂ ತಪ್ಪು ತಪ್ಪೇ ಎಂದು ಡಿಸಿಎಂ ಸ್ಪಷ್ಟವಾಗಿ ತಿಳಿಸಿದರು.

ಕಾಲೇಜುಗಳಲ್ಲಿ ಕಟ್ಟೆಚ್ಚರ:
ಉನ್ನತ ಶಿಕ್ಷಣ ಸಂಸ್ಥೆಗಳು ಅದರಲ್ಲೂ ಎಂಜಿನೀಯರಿಂಗ್‌ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಮಾದಕ ವಸ್ತು ವ್ಯಸನ ಇದೆ ಎಂದು ಕೆಲವರು ಹೇಳುತ್ತಿದ್ದಾರೆ. ಈಗಾಗಲೇ ಈ ಬಗ್ಗೆ ಸರಕಾರ ಕಠಿಣ ಮುನ್ನೆಚ್ಚರಿಕೆ ವಹಿಸಿದೆ. ಒಂದು ವೇಳೆ ಎಲ್ಲಾದರೂ ಅಂಥದ್ದು ಕಂಡು ಬಂದರೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.

ಕೋವಿಡ್ 19 ನಿಯಂತ್ರಕ ಉಪಕರಣಗಳ ಲೋಕಾರ್ಪಣೆ

ಬೆಂಗಳೂರು: ಕೋವಿಡ್ 19 ಪಿಡುಗು ನಿಯಂತ್ರಿಸಲು ನೆರವಾಗುವ ಹಾಗೂ ಸೋಂಕು ಸಂಕಷ್ಟದ ಸಂದರ್ಭದಲ್ಲಿ ಕರ್ನಾಟಕದ ಅನ್ವೇಷಣಾ ಸಾಮರ್ಥ್ಯ ಪ್ರತಿಬಿಂಬಿಸುವ 22 ಉತ್ಪನ್ನಗಳನ್ನು ಐಟಿ/ ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮಂತ್ರಿಯೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಬುಧವಾರ ಲೋಕಾರ್ಪಣೆಗೊಳಿಸಿದರು.

ಇಲಾಖೆಯ ಕರ್ನಾಟಕ ಅವಿಷ್ಕಾರ ಮತ್ತು ತಂತ್ರಜ್ಞಾನ ಸಂಸ್ಥೆಯ (KITS) ಆಶ್ರಯದಲ್ಲಿ ಬೆಂಗಳೂರು ಬಯೋ ಇನ್ನೊವೇಷನ್ ಸೆಂಟರ್ (ಬಿಬಿಸಿ- ಬೆಂಗಳೂರು ಜೈವಿಕ ಆವಿಷ್ಕಾರ ಕೇಂದ್ರ) ಮೇಲ್ವಿಚಾರಣೆಯಡಿ 6 ಉತ್ಪನ್ನಗಳು ಅಭಿವೃದ್ಧಿಗೊಂಡಿದ್ದರೆ, KITS ನ ಕರ್ನಾಟಕ ನವೋದ್ಯಮ ಕೋಶದ (ಕರ್ನಾಟಕ ಸ್ಟಾರ್ಟ್ ಅಪ್ ಸೆಲ್) ಮೇಲ್ವಿಚಾರಣೆಯಡಿ 16 ಉತ್ಪನ್ನಗಳು ಅಭಿವೃದ್ಧಿಗೊಂಡಿವೆ.

‘ಈ ಉತ್ಪನ್ನಗಳು ಬೆಂಗಳೂರಿನ ಮತ್ತು ಕರ್ನಾಟಕದ ಅನ್ವೇಷಣಾ ಸಾಮರ್ಥ್ಯವನ್ನು ಮತ್ತೊಮ್ಮೆ ಎತ್ತಿತೋರಿಸಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಡಿಸಿಎಂ ಅವರು, ಈ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದ ನವೋದ್ಯಮಗಳನ್ನು ಅಭಿನಂದಿಸಿದರು.

ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಬಿಬಿಸಿ ಛೇರ್ ಮ್ಯಾನ್ ಡಾ.ಇ.ವಿ.ರಮಣ ರೆಡ್ಡಿ, ಈ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದವರನ್ನು ಮುಂದಿನ ಹಂತದಲ್ಲಿ ಕರ್ನಾಟಕ ನವೋದ್ಯಮ ಕೋಶ ಹಾಗೂ ಬಿಬಿಸಿ ಮೂಲಕ ಸೂಕ್ತ ವ್ಯಾಪಾರ ಪಾಲುದಾರರೊಂದಿಗೆ ಸಂಪರ್ಕಿಸಲಾಗುವುದು ಎಂದರು.

ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಲಹೆಗಾರ್ತಿ ಮತ್ತು ರಾಷ್ಟ್ರೀಯ ವಿಜ್ಞಾನ ಹಾಗೂ ತಂತ್ರಜ್ಞಾನ ಉದ್ಯಮಶೀಲತಾ ಅಭಿವೃದ್ಧಿ ಆಯೋಗದ (NSTEDB) ಮುಖ್ಯಸ್ಥೆ ಡಾ.ಅನಿತಾ ಗುಪ್ತಾ, ಬಿಬಿಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಜಿತೇಂದ್ರ ಕುಮಾರ್, ರಾಜ್ಯದ ಎಲೆಕ್ಟ್ರಾನಿಕ್ಸ್, ಐಟಿ/ಬಿಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್ ಸಿ.ಎನ್. ಅವರು ಕಾರ್ಯಕ್ರಮದಲ್ಲಿ ಹಾಜರಿದ್ದು ಮಾತನಾಡಿದರು.

IIT-SINE ಜೊತೆ ಎಂಒಯು:
ಇದೇ ಸಂದರ್ಭದಲ್ಲಿ ಮುಂಬೈನ IIT-SINE ಮತ್ತು ಬಿಬಿಸಿ ನಡುವೆ ಪರಸ್ಪರ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. IIT-SINEನ ಪ್ರೊ.ಸಂತೋಷ್ ಘರ್ ಪುರೆ ಅವರು ಈ ಸಂದರ್ಭದಲ್ಲಿ ಮಾತನಾಡಿ, ಹಣಕಾಸು ಸಂಪನ್ಮೂಲ ಕ್ರೋಡೀಕರಣ, ತಾಂತ್ರಿಕ ನೆರವಿನ ಮೂಲಕ ಬಿಬಿಸಿ ಯ ನವೋದ್ಯಮಗಳಿಗೆ ಈ ಒಪ್ಪಂದವು ನೆರವಾಗಲಿದೆ ಎಂದರು.

ಉತ್ಪನ್ನ ಆಯ್ಕೆ ಹೇಗೆ?
ಕರ್ನಾಟಕ ನವೋದ್ಯಮ ಕೋಶವು ‘ಕೋವಿಡ್19 ಚಾಲೆಂಜ್’ ಶೀರ್ಷಿಕೆಯಡಿ ಅನ್ವೇಷಣಾಕಾರದಿಂದ ಅರ್ಜಿಗಳನ್ನು ಆಹ್ವಾನಿಸಿತ್ತು. ಇದಕ್ಕೆ 3 ಹಂತಗಳಲ್ಲಿ 356 ಅರ್ಜಿಗಳು ಬಂದಿದ್ದವು. ಉದ್ಯಮ ಸಂಘಟನೆಗಳು ನಿರ್ದೇಶನ ಮಾಡಿದ ಸ್ವತಂತ್ರ ಜ್ಯೂರಿಯು ಕ್ರಮಬದ್ಧ ಮೌಲ್ಯಮಾಪನ ನಡೆಸಿದೆ. ವಿನೂತನತೆ, ಸಂಶೋಧನೆಯ ಕಾಲಮಿತಿ, ತಯಾರಿಕಾ ಸಾಮರ್ಥ್ಯ, ತಂಡದ ಶಕ್ತಿ, ಪ್ರಮಾಣಪತ್ರ & ಅನುಪಾಲನೆಗಳು ಇತ್ಯಾದಿಗಳನ್ನು ಆಧರಿಸಿ ಈ 16 ಉತ್ಪನ್ನಗಳನ್ನು ಆಯ್ಕೆ ಮಾಡಲಾಗಿದೆ.

ಲೋಕಾರ್ಪಣೆಗೊಂಡ ಉತ್ಪನ್ನಗಳ ಕುರಿತು ಕಿರು ಮಾಹಿತಿ:

*ನ್ಯೂಕ್ಲಿಯೋಡಿಎಕ್ಸ್ ಆರ್ ಟಿ:* ಕೋವಿಡ್ 19 ಪತ್ತೆ ಹಚ್ಚಲು RT PCR ನಲ್ಲಿ ಬಳಸುವ ಆರ್ ಎನ್ ಎ ಐಸೋಲೇಷನ್ ವಿಧಾನ ಇದಾಗಿದೆ. ಇದು ಸರಳ ಹಾಗೂ ತಗುಲುವ ವೆಚ್ಚ ಕಡಿಮೆ.

*ಕೋವಿಡಿಎಕ್ಸ್ ಎಂಪ್ಲೆಕ್ಸ್ 3R ಮತ್ತು 4R:* ವಂಶವಾಹಿನಿಗಳನ್ನು ಬಳಸಿ ಕೋವಿಡ್ 19 ವೈರಸ್ ಪತ್ತೆಹಚ್ಚುವ ಇನ್-ವಿಟ್ರೋ RT PCR ಗುಣಾತ್ಮಕ ಪರೀಕ್ಷೆ ವಿಧಾನ ಇದಾಗಿದೆ. ಸಂಪೂರ್ಣವಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಇದರ ಉತ್ಪಾದನೆಗೆ ಐಸಿಎಂಆರ್ ಅನುಮೋದನೆ ನೀಡಿದೆ.

*ಡಾ.ತಾಪಮಾನ್:* ದೇಹದ ಉಷ್ಣತೆಯನ್ನು ಅಳೆದು ಕೋವಿಡ್-19 ದೃಢಪಡಿಸುವ ಉಪಕರಣ ಇದಾಗಿದೆ. ಪ್ರಮುಖ ವ್ಯತ್ಯಾಸವೇನೆಂದರೆ, ಇದು ಈಗಿರುವ ಇದೇ ರೀತಿಯ ಬೇರೆ ಉತ್ಪನ್ನಗಳಂತೆ ವಿಕಿರಣವನ್ನು ಹೊರಸೂಸುವುದಿಲ್ಲ; ಹೀಗಾಗಿ, ಬಳಕೆದಾರ ಸ್ನೇಹಿಯಾದ ಇದನ್ನು ಸಂಪೂರ್ಣ ದೇಶೀಯವಾಗಿ ರೂಪಿಸಿರುವುದು ಮತ್ತೊಂದು ಹೆಮ್ಮೆ ಎಂಬುದು ಇದನ್ನು ಅಭಿವೃದ್ಧಿಪಡಿಸಿದ ಡಾ.ಲತಾ ದಾಮ್ಲೆ ಅವರ ವಿವರಣೆ.

*ಎಸ್ಎಎಫ್ಎಇ ಬಯೋಸೆಕ್ಯುರಿಟಿ ಸಲ್ಯೂಷನ್ಸ್:* ಸ್ವಯಂಚಾಲಿತವಾಗಿ ದೇಹದ ಉಷ್ಣತೆ, ರಕ್ತದಲ್ಲಿನ ಆಮ್ಲಜನಕ ಮಟ್ಟಗಳನ್ನು ಅಳೆಯಬಲ್ಲದು. ಸ್ವಯಂಚಾಲಿತ ಹ್ಯಾಂಡ್ ವಾಷ್ ಸಾಧ್ಯವಾಗಿಸುತ್ತದೆ. ದೇಹವನ್ನು, ಬಟ್ಟೆಗಳನ್ನು ಮತ್ತು ಸಾಮಾನು ಸರಂಜಾಮುಗಳನ್ನು ಸಂಪೂರ್ಣ ಸೋಂಕು ಮುಕ್ತಗೊಳಿಸುತ್ತದೆ. ಜೊತೆಗೆ ಇದನ್ನು ಅಳವಡಿಸಿದ ಜಾಗದ ನಿರ್ದಿಷ್ಟ ವ್ಯಾಪ್ತಿಯಲ್ಲಿ ಸೋಂಕಿಗೆ ಒಳಗಾದವರನ್ನೂ ಪತ್ತೆ ಮಾಡುತ್ತದೆ. ಸಂಫೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ.

*ಯುವಿಇಇ ಬೀಮರ್*: ಡಿಎನ್ಎ ಗುಣಸ್ವಭಾವಗಳನ್ನು ಬದಲಾಯಿಸುವ ಮೂಲಕ ಸೂಕ್ಷ್ಮಾಣುಕ್ರಿಮಿಗಳನ್ನು 30 ಸೆಕೆಂಡುಗಳ ಒಳಗೆ ನಿವಾರಿಸುತ್ತದೆ.

*ಯುವಿಇಇ ಕನ್ವೇಯರ್:* ಇದು ದೊಡ್ಡ ವಾಣಿಜ್ಯ ಆವರಣಗಳಲ್ಲಿ ಹೆಚ್ಚು ಉಪಯುಕ್ತ. ವಿವಿಧ ಗಾತ್ರಗಳ ವಸ್ತುಗಳ ಮೇಲಿನ ಕ್ರಿಮಿಗಳನ್ನು ನಿವಾರಿಸುತ್ತದೆ. ಚಲಿಸುವ ಬೆಲ್ಟ್ ನೊಂದಿಗೆ UV- C ವ್ಯವಸ್ಥೆ ಆಧರಿಸಿ ಕೆಲಸ ಮಾಡುತ್ತದೆ.

ಕರ್ನಾಟಕ ನವೋದ್ಯಮ ಕೋಶದ ಉತ್ಪನ್ನಗಳು:
ಕ್ವೋಂಚ್ (Qonch): ಸ್ಮಾರ್ಟ್ ಐಡಿ ಕಾರ್ಡ್ ಹೋಲ್ಡರ್ ಹೊಂದಿದ ಐಒಟಿ ಪ್ಲ್ಯಾಟ್ ಫಾರ್ಮ್ ಇದಾಗಿದೆ. ವ್ಯಾಪಾರೋದ್ದಿಮೆಗಳು, ಶಾಲಾ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಹೆಚ್ಚಿನ ವಿಶ್ವಾಸದೊಂದಿಗೆ ಪುನಃ ಆರಂಭಿಸಲು ಇದು ಸಹಕಾರಿ. ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವುದಕ್ಕೂ ಸಹಕರಿಸುತ್ತದೆ. ಜೊತೆಗೆ ಹಾಜರಾತಿ, ಜಿಯೋ-ಫೆನ್ಸಿಂಗ್ ಇತ್ಯಾದಿಗೆ ಕೂಡ ಬಳಸಬಹುದು.

AMPWORK ಪ್ಲ್ಯಾಟ್ ಫಾರ್ಮ್: ಸರ್ಕಾರಕ್ಕೆ ಪ್ರಸ್ತುತ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು, ಮೇಲ್ವಿಚಾರಣೆ ಮಾಡಲು ಹಾಗೂ ಅವಲೋಕಿಸುವ ನಿಟ್ಟಿನಲ್ಲಿ ವ್ಯಾಪಾರೋದ್ದಿಮೆಗಳು, ಆಡಳಿತ ವರ್ಗ, ಜನರು ಮತ್ತು ಆರೋಗ್ಯ ಸೇವಾ ವಲಯದಲ್ಲಿರುವವರು ಒಟ್ಟಿಗೆ ಸೇರಿ ಕೆಲಸ ಮಾಡಲು ಅನುವು ಮಾಡಿಕೊಡುವ ವೇದಿಕೆ ಇದಾಗಿದೆ.
=

ರೆಸ್ಪಿರ್ ಏಯ್ಡ್ (RespirAID): ರೋಗಿಗಳ ಉಸಿರಾಟಕ್ಕೆ ನೆರವಾಗುವಂತಹ ಸ್ವಯಂಚಾಲಿತ ಉಪಕರಣ. ಇದು ಸುರಕ್ಷಿತ, ವಿಶ್ವಾಸಾರ್ಹ, ಒಂದೆಡೆಯಿಂದ ಇನ್ನೊಂದೆಡೆಗೆ ಕೊಂಡೊಯ್ಯಲು ಸುಲಭ ಹಾಗೂ ದರ ಕೂಡ ಕಡಿಮೆ. ತುರ್ತು ನಿಗಾ ವೇಳೆ, ರೋಗಿಗಳನ್ನು ಚಿಕಿತ್ಸೆಗಾಗಿ ವಾಹನದಲ್ಲಿ ಕರೆದುಕೊಂಡು ಹೋಗುವಾಗ ಹಾಗೂ ಶಸ್ತ್ರಚಿಕಿತ್ಸೆ ನಂತರದ ಅರಿವಳಿಕೆ ಸಂದರ್ಭಗಳಲ್ಲಿ ಬಳಸಬಹುದು.

ಇಎಂವಿಲಿಯೋ (Emvlio)- ಲಸಿಕೆಗಳು, ರಕ್ತ, ಸೆರಂ ಇತ್ಯಾದಿಯನ್ನು ಕರಾರುವಾಕ್ಕಾದ ಉಷ್ಣತೆಯಲ್ಲಿ ಸಾಗಿಸಲು ಅನುವು ಮಾಡಿಕೊಡುವ ವೈದ್ಯಕೀಯ ದರ್ಜೆಯ ರೆಫ್ರಿಜರೇಟರ್ ವ್ಯವಸ್ಥೆ ಇದಾಗಿದೆ. ದೋಷಪೂರಿತ ನೆಗೆಟಿವ್ ಫಲಿತಾಂಶ ತಡೆಗಟ್ಟುತ್ತದೆ. ಕರ್ನಾಟಕದ ಜಿಲ್ಲಾ ಆಸ್ಪತ್ರೆಗಳಲ್ಲಿ ಮತ್ತು ತಮಿಳುನಾಡಿನಲ್ಲಿ ಈಗಾಗಲೇ ಬಳಸಲಾಗುತ್ತಿದೆ.

ಪಿಕ್ಸುಯೇಟ್: ಸಾರ್ವಜನಿಕ ಸ್ಥಳಗಳಲ್ಲಿ ಜನರನ್ನು ತಪಾಸಣೆಗೆ ನಿಲ್ಲುವಂತೆ ಮಾಡುವ ಅನಿವಾರ್ಯತೆಯನ್ನು ನಿವಾರಿಸುತ್ತದೆ. ಯಾವುದೇ ವ್ಯಕ್ತಿಯು ಹಾದು ಹೋಗುತ್ತಿರುವಾಗ 3-5 ಮೀಟರ್ ಸುರಕ್ಷಿತ ಅಂತರದಿಂದಲೇ ದೇಹದ ಉಷ್ಣತೆಯನ್ನು ಕೃತಕ ಬುದ್ಧಿಮತ್ತೆ ಆಧರಿಸಿ ಅಳೆಯುತ್ತದೆ. ಪ್ರತಿಯೊಬ್ಬರ ತಾಪಮಾನವನ್ನು ದಾಖಲಿಸುತ್ತದೆ. ಜೊತೆಗೆ, ಹೆಚ್ಚು ಉಷ್ಣತೆ ಇರುವವರು ಒಳಬಂದಾಗ ಎಚ್ಚರಿಕೆ ಕೊಡುತ್ತದೆ.

AskDoc ಕೋವಿಡ್-19 ರೋಗ ಪ್ರಸರಣ ಹಾಗೂ ಸೋಂಕು ನಿಯಂತ್ರಣ ಕುರಿತ ಪ್ರಶ್ನೆಗಳಿಗೆ ಬಹು ಭಾಷೆಯಲ್ಲಿ ಧ್ವನಿ ಹಾಗೂ ಪಠ್ಯದ ಮೂಲಕ ಉತ್ತರಿಸುವ ಡಾಕ್ಟರ್ ವಿಡಿಯೊಬಾಟ್ ಇದಾಗಿದೆ.

ಥರ್ಮಾಕ್ಸಿ: ವ್ಯಕ್ತಿಯ ದೇಹದ ಉಷ್ಣತೆ, ಹೃದಯ ಬಡಿತ ದರ ಹಾಗೂ ಆಮ್ಲಜನಕ ಮಟ್ಟವನ್ನು ಅಳೆಯುತ್ತದೆ. ಜೊತೆಗೆ, ಆಯಾ ಕ್ಷಣದ ಅಂಕಿಅಂಶಗಳನ್ನು ವೈರ್ ಲೆಸ್ ಅಥವಾ ಲ್ಯಾನ್ ಮೂಲಕ ನೆಟ್ ವರ್ಕ್ ಗೆ ವರ್ಗಾಯಿಸುತ್ತದೆ.

ಹೈಲೋಬಿಜ್- ಇದು ವಿಶೇಷವಾಗಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಹೆಚ್ಚು ಉಪಯುಕ್ತ. ಇನ್ ವಾಯ್ಸ್ ಗಳನ್ನು ಕಳಿಸುವುದು, ಜ್ಞಾಪನ ಪತ್ರಗಳನ್ನು ಕಳಿಸುವುದು, ನಗದು ಪಾವತಿ, ವಿಮೆ ಮತ್ತಿತರ ಸೇವೆಗಳನ್ನು ಏಕಗವಾಕ್ಷಿ ಮೂಲಕ ಪಡೆಯಬಹುದು.

ಡಾಕ್ಸ್ ಪರ್: ನರ್ಸ್ ಗಳು ಹಾಗೂ ವೈದ್ಯರಿಗೆ ರೋಗಿಯ ಕುರಿತಾದ ಮಾಪನದ ಅಂಕಿ-ಅಂಶಗಳನ್ನು ತಕ್ಷಣವೇ ರವಾನಿಸಬಲ್ಲ ಕೃತಕ ಬುದ್ಧಿಮತ್ತೆ ಆಧಾರಿತ ಡಿಜಿಟಲ್ ಪೆನ್ ಹಾಗೂ ಎನ್ ಕೋಡೆಡ್ ಪೇಪರ್ ಪರಿಹಾರ ಇದಾಗಿದೆ.

ವ್ಯಾಪ್ ಕೇರ್: ವೆಂಟಿಲೇಟರ್ ನಲ್ಲಿರುವ ರೋಗಿಗಳ ಲಾಲಾರಸ ಮತ್ತಿತರ ಸ್ರವಣ ಮಾದರಿಗಳನ್ನು ಸಂಗ್ರಹಿಸಲು ನೆರವಾಗುವ ವಿಧಾನವನ್ನು ಇದು ಒಳಗೊಂಡಿದೆ. ನರ್ಸ್ ಗಳು ಕೂಡ ಈ ಸ್ರವಣಗಳ ಸಂಪರ್ಕಕ್ಕೆ ಬರುವುದನ್ನು ಇದು ತಡೆಗಟ್ಟುತ್ತದೆ.

ನ್ಯೂಬ್ ವೆಲ್ ನೆಟ್ ವರ್ಕ್ ಫಂಕ್ಷನ್ ಗೇಟ್ ವೇ: ವಿಡಿಯೊ ಸ್ಟ್ರೀಮಿಂಗ್ ಅಪ್ಪಿಕೇಷನ್, ವೆಬೆಕ್ಸ್, ಮೈಕ್ರೋಸಾಫ್ಟ್ ಟೀಮ್ಸ್, ಗೂಗಲ್ ವಿಡಿಯೊ, ಸಿಟ್ರಿಕ್ಸ್, ಸ್ಯಾಪ್, ಒರಾಕಲ್ ಇಆರ್ಪಿ ಹಾಗೂ ಆಫೀಸ್ 365, ಸ್ಯಾಪ್ ಕ್ಲೌಡ್, ಒರಾಕಲ್ ಕ್ಲೌಡ್, ಕಾರ್ಪೊರೇಟ್ ವಿಪಿಎನ್ ಇತ್ಯಾದಿ ಕ್ಲೌಡ್ ಅಪ್ಪಿಕೇಷನ್ ಗಳನ್ನು ಒಂದೆಡೆ ಅಡಕಗೊಳಿಸಿ ಸುಲಭ ಬಳಕೆಗೆ ಅನುವು ಮಾಡಲಾಗಿರುವ ತಾಂತ್ರಿಕ ವೇದಿಕೆ ಇದಾಗಿದೆ.

ಫೇಸ್ ಷೀಲ್ಡ್ಸ್, ಇನ್ ಟ್ಯುಬೇಷನ್ ಬಾಕ್ಸಸ್: ಮುಖ್ಯವಾಗಿ ಆರೋಗ್ಯಸೇವಾ ಸಿಬ್ಬಂದಿಯನ್ನು ವೈರಸ್ ಸೋಂಕಿನಿಂದ ದೂರವಿರಿಸಲು ಸಿದ್ಧಪಡಿಸಿರುವ ತಾಂತ್ರಿಕ ಉತ್ಪನ್ನ ಇದಾಗಿದೆ.

ಸೆನ್ಸ್ ಗಿಜ್: ಕೋವಿಡ್-19 ಅಪಾಯಗಳನ್ನು ತಗ್ಗಿಸಲು, ಉದ್ಯೋಗಿಗಳನ್ನು ಸುರಕ್ಷಿತವಾಗಿರಿಸಲು ಹಾಗೂ ಮುಂದಿನ ದಿನಗಳಲ್ಲಿ ವ್ಯಾಪಾರೋದ್ದಿಮೆಗಳನ್ನು ಮುಚ್ಚುವ ಅವಶ್ಯಕತೆ ಇಲ್ಲದಂತೆ ಮಾಡಲು ಇದನ್ನು ಅಭಿವೃದ್ಧಿಪಡಿಸಲಾಗಿದೆ. ನಿರ್ದಿಷ್ಟ ಪ್ರದೇಶದಲ್ಲಿ ಜಿಯೋ-ಫೆನ್ಸಿಂಗ್ ನಿರ್ಮಿಸಲು ಅನುವು ಮಾಡಿಕೊಡುವ ಮೂಲಕ ಜನದಟ್ಟಣೆಯನ್ನು ತಡೆಯುತ್ತದೆ. ಇದು ಧ್ವನಿಯ ಮೂಲಕ ಎಚ್ಚರಿಕೆಯನ್ನೂ ನೀಡಬಲ್ಲದು.

ಸ್ಟ್ಯಾಸಿಸ್: ದೂರದಿಂದಲೇ ರೋಗಿಯ ಆರೈಕೆ ಮೇಲೆ ನಿಗಾ ಇಡಲು ಇದು ಸಹಕಾರಿ. ಕ್ಲೌಡ್ ತಂತ್ರಜ್ಞಾನದ ನೆರವಿನಿಂದ ಯಾವುದೇ ಬೆಡ್ ಅನ್ನು ಪರಿಣಾಮಕಾರಿ ಆರೈಕೆಗೆ ಅನುವು ಮಾಡಿಕೊಡುವ ಬೆಡ್ ಆಗಿ ಪರಿವರ್ತಿಸಬಹುದು. ಜನರಲ್ ವಾರ್ಡ್, ಖಾಸಗಿ ಕೊಠಡಿಗಳು, ಐಸೋಲೇಷರ್ ರೂಮ್ ಗಳು, ಕಸಿ ಘಟಕಗಳು, ಐಸಿಯು ಸೇರಿದಂತೆ ಹಲವೆಡೆ ಬಳಸಲು ಸೂಕ್ತ. USFDA ಅನುಮೋದಿಸಿರುವ ಭಾರತದಲ್ಲಿ ತಯಾರಾದ ಏಕೈಕ ಉಪಕರಣ ಇದಾಗಿದೆ.

ಟಚ್ ಲೆಸ್ ಐಡಿ: HW ಸ್ಕ್ಯಾನರ್ ಗಳಿಗೆ ಬದಲಿಯಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಮೊಬೈಲ್ ಫೋನ್ ಕ್ಯಾಮೆರಾದಿಂದ ಬೆರಳಚ್ಚಿನ ಜೈವಿಕ ಚಹರೆ ಸೆರೆಹಿಡಿಯುವ ಮೂಲಕ ಇದು ಸ್ಕ್ಯಾನರ್ ಅನ್ನು ಕೈಯಿಂದ ಮುಟ್ಟಬೇಕಾದ ಅನಿವಾರ್ಯತೆಯನ್ನು ತಪ್ಪಿಸುತ್ತದೆ. ಈ ಮೂಲಕ ಕೈಯ ಸ್ಪರ್ಶದ ಮೂಲಕ ಸೂಕ್ಷ್ಮಾಣು ಜೀವಿಗಳು ವರ್ಗಾವಣೆಗೊಳ್ಳುವುದನ್ನು ತಡೆಗಟ್ಟುತ್ತದೆ.

ಡೋಜೀ: ಹಾಸಿಗೆಯ ತಳಭಾಗದಲ್ಲಿ ಇಡಬಹುದಾದ ತೆಳ್ಳನೆಯ ಸೆನ್ಸಾರ್ ಷೀಟ್ ಇದಾಗಿರುತ್ತದೆ. ರೋಗಿಯ ಹೃದಯ ಬಡಿತ, ಉಸಿರಾಟ, ಆಮ್ಲಜನಕ ಮಟ್ಟ ಮತ್ತಿತರ ಅಂಶಗಳ ಮಾಪನ ಮಾಡಿ ಸಂಬಂಧಿಸಿದ ವೈದ್ಯರಿಗೆ ತಕ್ಷಣವೇ ರವಾನಿಸುತ್ತದೆ. ವೈರ್ ಬಳಕೆ ಇಲ್ಲದೇ ರೋಗಿಗಳ ಮೇಲೆ ಸತತ ನಿಗಾ ಇಡಬಹುದು. ನರ್ಸ್ ಗಳು ಕೂಡ ರೋಗಿಯ ಬಳಿಗೇ ಬಂದು ಮಾಪನ ಮಾಡುವ ಅಗತ್ಯ ಇರುವುದಿಲ್ಲ. ಈಗಾಗಲೇ 20ಕ್ಕೂ ಹೆಚ್ಚು ಆಸ್ಪತ್ರೆಗಳು ಮತ್ತು ಕೋವಿಂಡ್ ಕೇಂದ್ರಗಳಲ್ಲಿ ಬಳಸಲಾಗುತ್ತಿದೆ. ಮನೆಯಲ್ಲೇ ಇರುವ ರೋಗಿಗಳ ಮೇಲ್ವಿಚಾರಣೆಗೂ ಅನುಕೂಲಕರ. ಈಗಾಗಲೇ 47 ಪ್ರಕರಣಗಳಲ್ಲಿ ಇದು ಜೀವರಕ್ಷಕ ಎಂಬುದು ದೃಢಪಟ್ಟಿದೆ.

ಮಾರುಕಟ್ಟೆ ದರದಲ್ಲಿ ವಾಣಿಜ್ಯ ಮಳಿಗೆ ಬಾಡಿಗೆ ಫಿಕ್ಸ್ ಮಾಡಿ, ಬರ್ನಿಂಗ್ ಸಿಸ್ಟಮ್ ತಂದು ಕಸ ಸಮಸ್ಯೆ ಪರಿಹರಿಸಿ- ಡಾ| ನಾರಾಯಣ ಗೌಡ.

ಬೆಂಗಳೂರು – 08: ಕಸದ ಸಮಸ್ಯೆ ಪರಿಹರಿಸಲು ಬರ್ನಿಂಗ್ ಸಿಸ್ಟಮ್ ಅಳವಡಿಸಬೇಕು. ಇದರಿಂದ ಗ್ಯಾಸ್ ಹಾಗೂ ಎಲೆಕ್ಟ್ರಿಕಲ್ ಉತ್ಪಾದನೆ ಕೂಡ ಸಾಧ್ಯವಿದೆ‌. ಪೌರಾಡಳಿತ ಇಲಾಖೆ ವ್ಯಾಪ್ತಿಯಲ್ಲಿ ಇದು ಶೀಘ್ರವೇ ಜಾರಿಗೆ ಬರಬೇಕು ಎಂದು ಪ್ರಗತಿ ಪರಿಶೀಲನಾ ಸಭೆಯಲ್ಲಿ ಪೌರಾಡಳಿತ ಇಲಾಖೆ ಸಚಿವ ಡಾ| ನಾರಾಯಣಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ‌.

ವಿಕಾಸ ಸೌಧದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಸದ ಸಮಸ್ಯೆ ಪರಿಹರಿಸುವ ಸಂಬಂಧ ತೆಗೆದುಕೊಂಡಿರುವ ಕ್ರಮದ ಬಗ್ಗೆ ಮಾಹಿತಿ ಪಡೆದ ಸಚಿವರು, ಹಸಿ ಕಸ ಗೊಬ್ಬರ ಮಾಡಬಹುದು. ಆದರೆ ಪ್ಲಾಸ್ಟಿಕ್ ಕಸ ಪರಿಸರಕ್ಕೆ ಮಾರಕವಾಗುತ್ತಿದೆ. ಇದನ್ನ ತಡೆಗಟ್ಟಲು ಬರ್ನಿಂಗ್ ಸಿಸ್ಟಮ್ ಉತ್ತಮ ಮಾರ್ಗ. ಜರ್ಮನ್ ಟೆಕ್ನಾಲಜಿಯ ಸಿಸ್ಟಮ್ ನಲ್ಲಿ ಬರ್ನಿಂಗ್ ಮಾಡಿದ್ರೆ ಕೆಟ್ಟವಾಸನೆ ಕೂಡ ಹರಡಲ್ಲ. ಜೊತೆಗೆ ವಿದ್ಯುತ್ ಹಾಗೂ ಗ್ಯಾಸ್ ಉತ್ಪಾದನೆ ಸಹ ಮಾಡಬಹುದು. ಇದನ್ನ ಯಾವ ರೀತಿಯಲ್ಲಿ ಕಾರ್ಯರೂಪಕ್ಕೆ ತರಬಹುದು ಎಂದು ಯೋಜನೆ ರೂಪಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ರು.

ಚಾಮರಾಜನಗರದಲ್ಲಿ ಕೇರಳದಿಂದ ಬಂದು ಕಸ ಚೆಲ್ಲಿ ಹೋಗುತ್ತಿದ್ದಾರೆ. ಇದಕ್ಕೆ ಅವಕಾಶ ಕೊಡಬಾರದು. ತಕ್ಷಣ ಇದನ್ನ ತಡೆಗಟ್ಟಬೇಕು. ಹಸಿಕಸ ಗೊಬ್ಬರ ಮಾಡುವ ಬಗ್ಗೆಯೂ ಒಂದು ಸ್ಥಳ ನಿಗದಿಮಾಡಬೇಕು. ರಾಜ್ಯದ ಎಲ್ಲ ಕಡೆಯಲ್ಲೂ ಈ ವ್ಯವಸ್ಥೆ ಜಾರಿಗೆ ಬರಲಿ. ಅದಕ್ಕಿಂತ ಮುಂಚಿತವಾಗಿ ಬರ್ನಿಂಗ್ ಸಿಸ್ಟಮ್ ಅಳವಡಿಸುವ ಬಗ್ಗೆ ನೀಲನಕ್ಷೆ ರೂಪಿಸಿ ಎಂದು ಸಚಿವ ನಾರಾಯಣಗೌಡ ಹೇಳಿದ್ದಾರೆ. ಇದೆ ವೇಳೆ ರಾಜ್ಯದಲ್ಲಿ ಪೌರಾಡಳಿತ ಇಲಾಖೆ ಅಡಿಯಲ್ಲಿರುವ ವಾಣಿಜ್ಯ ಮಳಿಗೆಗಳಿಗೆ ಅವೈಜ್ಞಾನಿಕ ಬಾಡಿಗೆ ಇದೆ. ಈಗಲೂ ನಾಲ್ಕಾರು ನೂರು ರೂಪಾಯಿ ಬಾಡಿಗೆ ತಿಂಗಳಿಗೆ ನಿಗದಿಯಾಗಿದೆ‌. ಆದರೆ ಬಹಿರಂಗ ಹರಾಜಿನಲ್ಲಿ ವಾಣಿಜ್ಯ ಮಳಿಗೆ ಪಡೆದವರು ಇದನ್ನ ದುಪ್ಪಟ್ಟು ಬಾಡಿಗೆಗೆ ಬೇರೆಯವರಿಗೆ ನೀಡಿದ್ದಾರೆ. ಇದರಿಂದ ಸರ್ಕಾರಕ್ಕೆ ಬರಬೇಕಾದ ಬಾಡಿಗೆ ಹಣ ಮದ್ಯವರ್ತಿಗಳ ಪಾಲಾಗುತ್ತಿದೆ. ಎಲ್ಲ ಕಡೆ ಸ್ಥಳಿಯ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಮಳಿಗೆಗೆ ಕನಿಷ್ಟ ಬಾಡಿಗೆ ಫಿಕ್ಸ್ ಮಾಡಬೇಕು‌. ಕೆಲವು ಕಡೆ ಮನಬಂದಂತೆ ಹರಾಜು ಕೂಗುತ್ತಾರೆ. ತಿಂಗಳ ಬಾಡಿಗೆ 40-50 ಸಾವಿರಕ್ಕೆ ಹರಾಜು ಕೂಗುತ್ತಾರೆ‌. ಯಾರೂ ಬಂದಿಲ್ಲ ಎಂಬ ನೆಪವೊಡ್ಡಿ ನಾಲ್ಕಾರು ಸಾವಿರಕ್ಕೆ ಬಾಡಿಗೆ ನಿಗದಿ ಮಾಡಿ ತಮ್ಮವರಿಗೇ ಮಳಿಗೆಯನ್ನ ಬಾಡಿಗೆಗೆ ನೀಡುವ ಪ್ರಮೇಯ ಸಹ ನಡೆದ ಉದಾಹರಣೆ ಇದೆ. ಇದಕ್ಕೆಲ್ಲ ಕಡಿವಾಣ ಹಾಕಬೇಕು ಎಂದು ಸಚಿವರು ಹೇಳಿದ್ದಾರೆ. ತೆರಿಗೆ ಸಂಗ್ರಹ ಕೂಡ ಸರಿಯಾದ ರೀತಿಯಲ್ಲಿ ಆಗಬೇಕು. ಪ್ರತಿ ವರ್ಷ ಸ್ಥಳೀಯ ಮಾರುಕಟ್ಟೆಗೆ ಅನುಗುಣವಾಗಿ ಪರಿಷ್ಕರಣೆ ಕೂಡ ಆಗಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಗಮನ ಹರಿಸಿ ಎಂದು ಪ್ರಗತಿ ಪರಿಶೀಲನ ಸಭೆಯಲ್ಲಿ ಸಚಿವ ನಾರಾಯಣಗೌಡ ಹೇಳಿದ್ದಾರೆ.

ಇಲಾಖೆ ಕಾರ್ಯದರ್ಶಿ ರವಿಶಂಕರ್, ನಿರ್ದೇಶಕಿ ಕಾವೇರಿ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.