ಸಿಎಂ ಯಡಿಯೂರಪ್ಪ ಅವರಿಗೆ ಸಿದ್ದರಾಮಯ್ಯ ಪತ್ರ: ಯೂರಿಯಾ ಕೊರತೆ ನೀಗಿಸಿ ರೈತರ ಕಷ್ಟ ನಿವಾರಿಸಿ

ಬೆಂಗಳೂರು:ಮುಂಗಾರು ಬಿತ್ತನೆಗೆ ಮುಂದಾಗಿರುವ ರೈತರು ಯೂರಿಯಾ ರಸಗೊಬ್ಬರ ಸಿಗದೆ ಪರದಾಡುತ್ತಿದ್ದಾರೆ. ಬೇಡಿಕೆಗೆ ಅನುಗುಣವಾಗಿ ಯೂರಿಯಾವನ್ನು ತರಿಸಿಕೊಂಡು ರೈತರ ಸಂಕಷ್ಟವನ್ನು ಪರಿಹರಿಸಬೇಕೆಂದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದ ವಿವರ ಹೀಗಿದೆ.

ಕಳೆದ ಕೆಲವು ದಿನಗಳಿಂದ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ‘ಯೂರಿಯಾ’ ಸಮಸ್ಯೆ ಉದ್ಭವಿಸಿ ರೈತರು ಪ್ರತಿಭಟನೆಗಳನ್ನು ನಡೆಸುತ್ತಿರುವ ಬಗ್ಗೆ ವರದಿಯಾಗುತ್ತಿವೆ. ಜನರು ಸಹ ಮಳೆಯಾಗಿದೆ ಬೆಳೆಗೆ ಯೂರಿಯಾ ಬೇಕು. ಆದರೆ ಅಂಗಡಿಗಳಲ್ಲಿ ಯೂರಿಯಾ ಲಭ್ಯವಿಲ್ಲವೆಂದು ಅಂಗಡಿಗಳಲ್ಲಿ ಹೇಳುತ್ತಿದ್ದಾರೆಂದು ನನ್ನ ಗಮನಕ್ಕೆ ತರುತ್ತಿದ್ದಾರೆ.

ಸಾಧಾರಣವಾಗಿ ಈ ಋತುವಿಗೆ 8,50,000 ಮೆಟ್ರಿಕ್ ಟನ್‍ಗಳಷ್ಟು ಯೂರಿಯಾದ ಅವಶ್ಯಕತೆ ಇತ್ತು. ಆದರೆ ನಿಮ್ಮ ವೈಬ್‍ಸೈಟ್‍ನ ಮಾಹಿತಿ ಪ್ರಕಾರ 8,95,221 ಮೆಟ್ರಿಕ್ ಟನ್‍ಗಳಷ್ಟು ಯೂರಿಯಾವನ್ನು ವಿತರಿಸಲಾಗಿದೆ (01-04-2020 ರಿಂದ 06-09-2020 ರವರೆಗೆ) ಹಾಗೂ 1,88,996 (06-09-2020 ರಂದು) ಮೆಟ್ರಿಕ್ ಟನ್‍ಗಳಷ್ಟು ಲಭ್ಯವಿದೆ ಎಂದು ಹೇಳಲಾಗುತ್ತಿದೆ. ಆದರೆ ಜನರು ಮಾತ್ರ ತಮಗೆ ಯೂರಿಯಾ ಸಿಗುತ್ತಿಲ್ಲವೆಂದು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಹಾಗಾದರೆ ಸಮಸ್ಯೆಯ ಮೂಲವಿರುವುದು ಎಲ್ಲಿ? ಕಾಳಸಂತೆಕೋರರು ಅಕ್ರಮವಾಗಿ ದಾಸ್ತಾನು ಮಾಡಿರಬೇಕು, ನಿಮ್ಮ ವೆಬ್‍ಸೈಟ್‍ನ ಅಂಕಿಅಂಶಗಳೇ ತಪ್ಪು ಇರಬೇಕು. ಅಥವಾ ಜನರ ಬೇಡಿಕೆ ಹೆಚ್ಚಾಗಿರಬೇಕು.

ಪರಿಶೀಲಿಸಿ ನೋಡಿದರೆ ಈ 3 ಅಂಶಗಳೂ ನಿಜ ಇರುವಂತೆ ಕಾಣುತ್ತಿವೆ. ಕೊರೋನಾ ಕಾರಣದಿಂದ ಲಾಕ್‍ಡೌನ್ ಹೇರಿದ್ದರಿಂದ ನಗರಗಳಿಂದ ವ್ಯಾಪಕವಾಗಿ ಗ್ರಾಮಾಂತರ ಪ್ರದೇಶಕ್ಕೆ ವಲಸೆ ಹೋದರು. ಹಾಗಾಗಿ ಸಹಜವಾಗಿಯೇ ಕೃಷಿ ಕ್ಷೇತ್ರದ ಮೇಲೆ ಒತ್ತು ಬೀಳಲಾರಂಭಿಸಿತು. ಈ ವಿಚಾರವನ್ನು ಮನಗಂಡು ನಾವು ಈ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಸರ್ಕಾರಕ್ಕೆ ಮಾಡಿದ ಮನವಿ ಪತ್ರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೀಜ ಮತ್ತು ಗೊಬ್ಬರವನ್ನು ದಾಸ್ತಾನು ಮಾಡಿಕೊಳ್ಳಬೇಕೆಂದು ಹಾಗೂ ಒದಗಿಸಬೇಕೆಂದು ಆಗ್ರಹಿಸಿದ್ದೆವು.

ಸರ್ಕಾರದ ಅಂಕಿಅಂಶಗಳ ಪ್ರಕಾರವೇ ಶೇ.20 ರಷ್ಟು ಹೆಚ್ಚುವರಿ ಭೂ ಪ್ರದೇಶದಲ್ಲಿ ಭಿತ್ತನೆ ಮಾಡಲಾಗಿದೆ. ಸರ್ಕಾರ ಇದೇ ರೀತಿಯ ನಿರ್ಲಕ್ಷ್ಯ ರೀತಿಯ ಗೊಬ್ಬರಗಳಿಗೂ ರೈತರು ಪರದಾಡಬೇಕಾಗುತ್ತದೆ.

ಜೆ.ಪಿ.ಯು ಈ ಹಿಂದೆ ಅಧಿಕಾರದಲ್ಲಿದ್ದಾಗಲೂ ಔಷಧಿ ಗೊಬ್ಬರಗಳನ್ನು ಸಮರ್ಪಕವಾಗಿ ವಿತರಿಸಲಾಗದೆ ಸಂಘರ್ಷ ಉಂಟಾದ್ದರಿಂದ ಹಾವೇರಿಯಲ್ಲಿ ಗೋಲಿಬಾರ್ ನಡೆಸಿ ಇಬ್ಬರು ರೈತರನ್ನು ಕೊಲೆ ಮಾಡಲಾಯಿತು. ಅಂತಹ ಕೆಟ್ಟ ನೆನಪುಗಳು ಬೆನ್ನಿಗಿದ್ದರೂ ಸಹ ಗೊಬ್ಬರದಂತಹ ಮಹತ್ವವಾದ ವಿಷಯವನ್ನು ನಿಭಾಯಿಸಲಾಗದೇ ಸರ್ಕಾರ ಮತ್ತೊಮ್ಮೆ ಸಂಪೂರ್ಣ ವಿಫಲವಾಗಿದೆ.

ರೈತರ ಕಾಳಜಿಯಿಂದಾಗಿ ಬೆಳೆಗಳು ಚೆನ್ನಾಗಿರುವುದರಿಂದ ಬೆಲೆ ಕುಸಿತದ ಸಮಸ್ಯೆಯು ಮುಂದಿನ ದಿನಗಳಲ್ಲಿ ಖಂಡಿತವಾಗಿ ಉದ್ಭವಿಸುತ್ತದೆ. ಈಗಿನಿಂದಲೇ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ ಎಂದು ಸಿದ್ದರಾಮಯ್ಯ ಅವರು ಪತ್ರದಲ್ಲಿ ವಿವರಿಸಿದ್ದಾರೆ.

ಹೆಸರುಕಾಳು ಖರೀದಿ ಕೇಂದ್ರ ಆರಂಭಿಸಲು ಸಿದ್ದರಾಮಯ್ಯ ಒತ್ತಾಯ

ಬೆಂಗಳೂರು : ಕೇಂದ್ರ ಸರ್ಕಾರ ಪ್ರತಿ ಕ್ವಿಂಟಾಲ್ ಹೆಸರು ಕಾಳಿಗೆ ರೂ.7,196/- ಗಳನ್ನು ಕನಿಷ್ಠ ಬೆಂಬಲ ಬೆಲೆಯಾಗಿ ನಿಗಧಿಪಡಿಸಿರುವುದರಿಂದ ಇಂದಿನಿಂದಲೇ ಖರೀದಿ ಕೇಂದ್ರಗಳನ್ನು ಆರಂಭಿಸುವಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರನ್ನು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ರಾಜ್ಯದಲ್ಲಿ ಮುಂಗಾರಿನ ಮಳೆಗಳು ಚೆನ್ನಾಗಿದ್ದರಿಂದ ಹೆಸರು, ಉದ್ದು ಮುಂತಾದ ದ್ವಿದಳ ಧಾನ್ಯಗಳ ಬೆಳೆ ಉತ್ತಮವಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ಕೊಯಿಲು ನಡೆಯುತ್ತಿದೆ. ರೈತರ ಶ್ರಮಕ್ಕೆ ಈ ಬೆಲೆ ಕಡಿಮೆಯೆ. ಆದರೆ ಅಷ್ಟಾದರೂ ಸಿಗಲಿ ಎಂದು ರೈತರು ನಿರೀಕ್ಷಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಹೆಸರು ಮತ್ತು ಉದ್ದು ಬೆಳೆಯನ್ನು ತುಮಕೂರು ಸೇರಿದಂತೆ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ. ಪ್ರಸ್ತುತ ವಿವಿಧ ಎ.ಪಿ.ಎಂ.ಸಿ.ಗಳಲ್ಲಿ ಹೆಸರು ಕಾಳು ಕ್ವಿಂಟಾಲ್‍ಗೆ ರೂ.2,105/- ಗಳಿಗೂ ಮಾರಾಟವಾಗುತ್ತಿದೆ. ಎಲ್ಲಾ ಮಾರುಕಟ್ಟೆಗಳ ಇಂದಿನ ಸರಾಸರಿ ಬೆಲೆ ರೂ.5,000/- ಗಳ ಆಸುಪಾಸಿನಲ್ಲಿದೆ. ಹೆಸರನ್ನು ಕೊಯಿಲು ಮಾಡಿ ಬಹಳ ದಿನಗಳ ಕಾಲ ರೈತರು ಮನೆಗಳಲ್ಲಿ ದಾಸ್ತಾನು ಮಾಡಲಾಗುವುದಿಲ್ಲ. ಹುಳದ ಕಾಟ ಮುಂತಾದ ಸಮಸ್ಯೆಗಳು ಶುರುವಾಗುತ್ತವೆ. ಹಾಗಾಗಿ ರೈತರು ಅಡ್ಡಾದಿಡ್ಡಿ ಬೆಲೆಗಳಿಗೆ ಮಾರಿಕೊಳ್ಳುತ್ತಿದ್ದಾರೆ.

ಸರ್ಕಾರ ಈವರೆಗೂ ಸಹ ಖರೀದಿ ಕೇಂದ್ರಗಳನ್ನು ತೆರೆಯದೇ ನಿರ್ಲಕ್ಷ್ಯ ಮಾಡುತ್ತಿರುವುದು ರೈತ ವಿರೋಧಿ ನಿಲುವಾಗಿದೆ. ಇಂತಹ ಸಂದರ್ಭದಲ್ಲಿ ಎ.ಪಿ.ಎಂ.ಸಿ. ಕಾಯ್ದೆಯನ್ನು ತಿದ್ದುಪಡಿ ಮಾಡಿ ಎ.ಪಿ.ಎಂ.ಸಿ.ಗಳನ್ನೇ ಬರ್ಖಾಸ್ತು ಮಾಡಲು ಹೊರಟಿದೆ. ಕಳೆದ ಬಾರಿ ಸಹ ತೊಗರಿ ಖರೀದಿಯಲ್ಲೂ ಸರ್ಕಾರ ರೈತರಿಗೆ ಮೋಸ ಮಾಡಿತು.

ಕೇಂದ್ರ ರಾಜ್ಯ ಎರಡೂ ಕಡೆ ಒಂದೇ ಪಕ್ಷದ ಆಡಳಿತವಿದೆ. ರಾಜ್ಯದ ಜನರು 25 ಜನ ಬಿ.ಜೆ.ಪಿ. ಪಕ್ಷದ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಆದರೆ ಒಬ್ಬರೂ ಸಹ ರೈತರ ಸಂಕಷ್ಟಕ್ಕೆ ಸ್ಪಂದಿಸದೇ ಸಂಪೂರ್ಣ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ. ಈ ನಿರ್ಲಕ್ಷ್ಯ ಧೋರಣೆಯನ್ನು ಬಿಟ್ಟು ಸರ್ಕಾರ ಇಂದಿನಿಂದಲೇ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿ ಹೆಸರು ಕಾಳನ್ನು ನಿಗಧಿಪಡಿಸಿದ ಕನಿಷ್ಠ ಬೆಂಬಲ ಬೆಲೆಯನ್ನು ನೀಡಿ ಖರೀದಿಸಬೇಕೆಂದು ಆಗ್ರಹಿಸುತ್ತೇನೆ ಎಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ದಸರಾ ಮಹೋತ್ಸವ 2020:ಕೋವಿಡ್ ಹಿನ್ನೆಲೆಯಲ್ಲಿ ಸರಳ ಆಚರಣೆಗೆ ತೀರ್ಮಾನ

ಬೆಂಗಳೂರು, ಸೆಪ್ಟೆಂಬರ್ 08: ಕೋವಿಡ್ 19 ಹಿನ್ನೆಲೆಯಲ್ಲಿ ಈ ಬಾರಿ ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಇಂದು ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ಕರೊನಾ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಆಚರಣೆಯನ್ನು ಕೈ ಬಿಡದೆ, ವೈಭವಕ್ಕೆ ಕಡಿವಾಣ ಹಾಕುವುದು ಸೂಕ್ತ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿರುವುದರಿಂದ ಹೆಚ್ಚಿನ ಜನಸಂದಣಿ ಸೇರದಂತೆ ಸಾಂಕೇತಿಕ ಆಚರಣೆಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ದಸರಾ ಆಚರಣೆಗೆ 10 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಲಾಗುವುದು. ಆಹಾರ ಮೇಳ, ಕ್ರೀಡೆ, ಯುವದಸರಾ ಮುಂತಾದ ಕಾರ್ಯಕ್ರಮಗಳನ್ನು ಈ ಬಾರಿ ಕೈಬಿಡಲಾಗುವುದು. ಗಜಪಡೆಯನ್ನು ಸಹ ಕನಿಷ್ಟ 5 ಕ್ಕೆ ಸೀಮಿತಗೊಳಿಸಲು ತೀರ್ಮಾನಿಸಲಾಯಿತು.
ನಾಡದೇವತೆ ಚಾಮುಂಡೇಶ್ವರಿಯ ಅಗ್ರಪೂಜೆ ಮತ್ತು ದಸರಾ ಉದ್ಘಾಟನೆಯನ್ನು ಕೋವಿಡ್ ಗಾಗಿ ಶ್ರಮಿಸಿರುವ ಕರೊನಾ ಯೋಧರಾದ ವೈದ್ಯರು, ನರ್ಸ್, ಆಶಾ ಕಾರ್ಯಕರ್ತರು, ಪೌರ ಕಾರ್ಮಿಕರು ಹಾಗೂ ಪೊಲೀಸ್ ಅವರಿಂದ ನೆರವೇರಿಸುವುದು ಎಂದು ತೀರ್ಮಾನಿಸಲಾಯಿತು.

ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿದ್ಯುಕ್ತವಾಗಿ ಪೂಜೆ ನೆರವೇರಿಸಿ, 5-6 ಆನೆಗಳನ್ನು ಮಾತ್ರ ಬಳಸಿ, ಜಂಬೂ ಸವಾರಿಯನ್ನು ಅರಮನೆ ಆವರಣದಲ್ಲಿ ಮಾತ್ರ ನಡೆಸುವುದು.ಮೈಸೂರು ನಗರದಲ್ಲಿ ವಿದ್ಯುತ್ ದೀಪಾಲಂಕಾರ ಮಾಡುವುದು ಎಂದು ತೀರ್ಮಾನಿಸಲಾಯಿತು.

ಪ್ರಧಾನಮಂತ್ರಿಗಳ ಆತ್ಮನಿರ್ಭರ್ ಭಾರತ ಪರಿಕಲ್ಪನೆಯಂತೆ ಚೀನಿ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಬಾರದು. ದೇಶೀ ಉತ್ಪನ್ನಗಳಿಗೆ ಆದ್ಯತೆ ನೀಡಬೇಕೆಂದು ಮುಖ್ಯ ಮಂತ್ರಿಗಳು ಸೂಚಿಸಿದರು.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಡಾ: ಸಿ.ಎಸ್.ಅಶ್ವತ್ಥ್ ನಾರಾಯಣ್, ಲಕ್ಷ್ಮಣ ಸವದಿ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ. ರವಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಸಂಸದರಾದ ಸುಮಲತಾ ಅಂಬರೀಶ್ ಮತ್ತು ಪ್ರತಾಪ್ ಸಿಂಹ, ಶಾಸಕರು, ಕೆ.ಎಸ್.ಟಿ. ಡಿ.ಸಿ ಅಧ್ಯಕ್ಷೆ ಶ್ರುತಿ, ಮುಖ್ಯ ಕಾರ್ಯದರ್ಶಿ ಟಿ. ಎಂ.ವಿಜಯಭಾಸ್ಕರ್, ಮೈಸೂರು ಜಿಲ್ಲಾಧಿಕಾರಿಗಳು ಉಪಸ್ಥಿತರಿದ್ದರು.

ನೂತನ ಶಿಕ್ಷಣ ನೀತಿ ಜಾರಿಯಿಂದ ಜ್ಞಾನ ಆರ್ಥಿಕತೆಯಲ್ಲಿ ಭಾರತಕ್ಕೆ ಅಗ್ರಸ್ಥಾನ: ಪ್ರಧಾನಿ ಮೋದಿ ನಿರೀಕ್ಷೆ

ಬೆಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಯಿಂದ 21ನೇ ಶತಮಾನದಲ್ಲಿ ಭಾರತವು ʼಜ್ಞಾನ ಆರ್ಥಿಕತೆʼಯಲ್ಲಿ ಜಗತ್ತಿನಲ್ಲಿಯೇ ಮುಂಚೂಣಿ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಹಿನ್ನೆಲೆಯಲ್ಲಿ ಸೋಮವಾರ ನವದೆಹಲಿಯಿಂದಲೇ ದೇಶದ ಎಲ್ಲ ರಾಜ್ಯಪಾಲರು ಮತ್ತು ಶಿಕ್ಷಣ ಸಚಿವರ ಎರಡು ದಿನಗಳ ಆನ್ಲೈನ್ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರೊಂದಿಗೆ ಸಂವಾದ ನಡೆಸಿದ ಮೋದಿ, ಶಿಕ್ಷಣ ಕ್ಷೇತ್ರದಲ್ಲಿ ಭಾರತಕ್ಕೆ ಉಜ್ವಲ ಭವಿಷ್ಯವಿದೆ. ಆ ನಿಟ್ಟಿನಲ್ಲಿ ಶಿಕ್ಷಣ ನೀತಿ ಹೆಚ್ಚು ಸಹಕಾರಿಯಾಗಲಿದೆ ಎಂದರು.

ಈ ಮಹತ್ತ್ವದ ಸಮ್ಮೇಳನದಲ್ಲಿ ರಾಜ್ಯದ ವತಿಯಿಯಿಂದ ರಾಜ್ಯಪಾಲ ವಜೂಭಾಯಿ ವಾಲ, ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಬೆಂಗಳೂರು ವಿವಿ ಉಪ ಕುಲಪತಿ ಕೆ. ವೇಣುಗೋಪಾಲ್ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರಲ್ಲದೆ, ರಾಷ್ಟ್ರಪತಿಗಳು ಹಾಗೂ ಪ್ರಧಾನಮಂತ್ರಿಗಳ ಮಾತುಗಳನ್ನು ಆಲಿಸಿದರು.

ದೇಶದ ಶಿಕ್ಷಣ ನೀತಿ :

ಶಿಕ್ಷಣ ನೀತಿಯಲ್ಲಿ ಸರಕಾರದ ಪ್ರಭಾವ ಕಡಿಮೆ ಇರಬೇಕು, ಏಕೆಂದರೆ ಇದು ಸರಕಾರದ ಶಿಕ್ಷಣ ನೀತಿಯಲ್ಲ, ದೇಶದ ಶಿಕ್ಷಣ ನೀತಿ. ವಿದೇಶ, ರಕ್ಷಣಾ ನೀತಿ ಹೇಗೆ ದೇಶದ್ದು ಆಗುತ್ತದೆಯೋ ಹಾಗೆಯೇ ಶಿಕ್ಷಣ ನೀತಿ ದೇಶದ್ದು ಎಂದು ಇದೇ ವೇಳೆ ಪ್ರಧಾನಿ ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಯುವಕರಿಗೆ ಅಗತ್ಯ ಕೌಶಲ್ಯಗಳು ಬೇಕು. ಅದಕ್ಕೆ ಪ್ರಾಯೋಗಿಕ ಕಲಿಕೆಯ ಅಗತ್ಯವಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ಇದಕ್ಕೆ ಅವಕಾಶ ಕಲ್ಪಿಸಲಿದೆ ಎಂದ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯು ಭಾರತವನ್ನು ಸಮಾನ, ಸ್ಪರ್ಧಾತ್ಮಕ ಮತ್ತು ಕ್ರಿಯಾಶೀಲ ಜ್ಞಾನದ ಸಮಾಜವನ್ನಾಗಿ ರೂಪಿಸಲಿದೆ ಎಂವ ವಿಶ್ವಾಸವನ್ನು ಮೋದಿ ವ್ಯಕ್ತಪಡಿಸಿದರು.

ಶಿಕ್ಷಣ ನೀತಿ ಓದು, ಬರೆಯುವುದರ ಮೇಲೆ ನಿಂತಿಲ್ಲ. ಇದು ದೇಶದ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಯ ಮೇಲೆ ಪ್ರಭಾವ ಬೀರಲಿದೆ. ವಿದ್ಯಾರ್ಥಿಗಳ ಕಲಿಕೆ ಪುಸ್ತಕಕ್ಕೆ ಮಾತ್ರ ಸೀಮಿತವಾರಬಾರದು ಎಂಬುದು ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯವಾಗಿದೆ ಎಂದು ಪ್ರಧಾನಿ ನುಡಿದರು.

ಉದ್ಯೋಗ ಮಾರುಕಟ್ಟೆಯ ಅಗತ್ಯಗಳಿಗೆ ತಕ್ಕಂತೆ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಬದಲಿಸಿಕೊಳ್ಳಬೇಕಾದ ಅಗತ್ಯವಿದೆ. ಅದಕ್ಕೆ ಪೂರಕವಾದ ಎಲ್ಲ ಅಂಶಗಳೂ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇವೆ ಹಾಗೂ ದೇಶದ ನಿರೀಕ್ಷೆಗಳನ್ನು ಈಡೇರಿಸುವ ಶಕ್ತಿಯನ್ನು ನೀತಿ ಹೊಂದಿದೆ ಎಂದೂ ಪ್ರಧಾನಮಂತ್ರಿ ಪ್ರತಿಪಾದಿಸಿದರು.

ಹೊಸ ದಿಕ್ಸೂಚಿ:

ಶಿಕ್ಷಣ ನೀತಿಯೂ ಇಡೀ ದೇಶಕ್ಕೆ ಹೊಸ ದಿಕ್ಸೂಚಿ ನೀಡುವ ಶಕ್ತಿ ಹೊಂದಿದೆ ಎಂದ ಪ್ರಧಾನಿ, ವಿವಿಧ ಕ್ಷೇತ್ರಗಳೂ ಸೇರಿ ಜಾಗತಿಕವಾಗಿ ಆಗುತ್ತಿರುವ ಬದಲಾವಣೆಗಳ ಹಿನ್ನೆಲೆಯಲ್ಲಿ ಉದ್ಯೋಗ ಮಾರುಕಟ್ಟೆಯಲ್ಲಿ ಎದುರಾಗುತ್ತಿರುವ ಸವಾಲುಗಳಿಗೆ ದೇಶದ ಯುವಜನತೆಯನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಶಿಕ್ಷಣ ನೀತಿ ದಾರಿ ತೋರಿಸುತ್ತದೆ ಎಂದು ಮೋದಿ ಒತ್ತಿ ಹೇಳಿದರು.

ದೇಶಾದ್ಯಂತ ಶಿಕ್ಷಣ ನೀತಿಗೆ ಉತ್ತಮ ಪ್ರತಿಕ್ರಿಯೆ ಹಾಗೂ ಸ್ವಾಗತ ವ್ಯಕ್ತವಾಗಿದೆ ಎಂಬುದನ್ನು ನಾನು ಬಲ್ಲೆ. ಹೀಗಾಗಿ ದೇಶದ ಎಲ್ಲ ನಿರೀಕ್ಷೆಗಳಿಗೆ ಶಿಕ್ಷಣ ನೀತಿಯಲ್ಲಿ ಉತ್ತರವಿದೆ. ಆದ್ದರಿಂದ ಈ ನೀತಿಯನ್ನು ಅತ್ಯಂತ ಪರಿಣಾಮಕಾರಿ ಹಾಗೂ ರಚನಾತ್ಮಕವಾಗಿ ಕಟಿಬದ್ಧವಾಗಿ ಎಲ್ಲ ರಾಜ್ಯಗಳು ಜಾರಿ ಮಾಡಬೇಕು ಎಂದು ಪ್ರಧಾನಮಂತ್ರಿ ಹೇಳಿದರು.

ಶಿಕ್ಷಣ ನೀತಿಯೂ ವಿದ್ಯಾರ್ಥಿಗಳಲ್ಲಿ ಕಲಿಕೆಯ ಬಗ್ಗೆ ಹೊಸ ಜೋಶ್ ಸೃಷ್ಟಿಸಲಿದೆ. ಪ್ರಾಯೋಗಿಕವಾಗಿ ಮಕ್ಕಳು ಮುಂದಿನ ಹೆಜ್ಜೆ ಇಡಲು ಸಹಕಾರಿಯಾಗುತ್ತದೆ. ಜತೆಗೆ, ತಮ್ಮ ಪ್ರತಿಭೆಯನ್ನು ತೋರಿಸಲು ಅತ್ಯಂತ ಪರಿಣಾಮಕಾರಿಯಾಗಿ ನೆರವಿಗೆ ಬರುತ್ತದೆ. ಮುಂದಿನ ದಿನಗಳಲ್ಲಿ ಭಾರತದ ಶೈಕ್ಷಣಿಕ ಗುಣಮಟ್ಟ ಮತ್ತಷ್ಟು ಉನ್ನತಮಟ್ಟವನ್ನು ಮುಟ್ಟಲಿದೆ ಎಂದು ಮೋದಿ ಅವರು ಪ್ರತಿಪಾದಿಸಿದರು.

ರಾಷ್ಟ್ರಪತಿ ನಿರೀಕ್ಷೆ:

ವರ್ಚುಯಲ್ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯು ಇವತ್ತಿನ ಮಹತ್ತ್ವದ ಅಗತ್ಯವಾಗಿದ್ದು, ದೇಶಾದ್ಯಂತ ನೀತಿಯು ಆದ್ಯತೆಯ ಮೇರೆಗೆ ಜಾರಿಯಾಗಬೇಕಿದೆ ಎಂದು ಕರೆ ನೀಡಿದರು.

ಒಮ್ಮೆ ನೀತಿ ಎಲ್ಲ ಹಂತಗಳಲ್ಲೂ ಅನುಷ್ಟಾನಗೊಂಡರೆ ಪ್ರಸಕ್ತ ಶಿಕ್ಷಣ ನೀತಿಯ ಸ್ವರೂಪವೇ ಬದಲಾಗಲಿದೆ. ಬೋಧನೆಯಲ್ಲಿ ಗುಣಮಟ್ಟ ಹಾಗೂ ಸಂಶೋಧನೆಯಲ್ಲಿ ಉತ್ತಮ ಸಾಧನೆಗೆ ಅದು ಸಹಕಾರಿಯಾಗಲಿದೆ. ಬಹುವಿಷಯಗಳ ಬೋಧನೆಯ ಜತೆಗೆ, ತಮಗೆ ಅಗತ್ಯವಾದ ವಿಷಯಗಳ ಕಲಿಯಲು ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ ಇರುತ್ತದೆ. ಹೀಗಾಗಿ ಭಾರತದ ಮುಂದಿನ ಬೆಳವಣಿಗೆಗೆ ನೂತನ ಶಿಕ್ಷಣ ನೀತಿಯು ಮಹತ್ತ್ವದ ಕಾಣಿಕೆ ನೀಡಲಿದೆ ಎಂಬುದು ತಮ್ಮ ಅಚಲ ನಂಬಕೆ ಎಂದು ರಾಷ್ಟ್ರಪತಿ ಅವರು ಹೇಳಿದರು.

ಕೇಂದ್ರದ ಮಾನವ ಸಂಪನ್ಮೂಲ ಖಾತೆ ಸಚಿವ ರಮೇಶ್ ಪೋಖ್ರಿಯಾಲ್ ಸೇರಿದಂತೆ ಎಲ್ಲ ರಾಜ್ಯಗಳು ರಾಲ್ಯಪಾಲರು ಹಾಗೂ ಶಿಕ್ಷಣ ಸಚಿವರು ಸಮ್ಮೇಳನದಲ್ಲಿ ಭಾಗಿಯಾಗಿದ್ದರು. ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಮುಖ್ಯಸ್ಥ ಕಸ್ತೂರಿ ರಂಗನ್ , ಸಮಿತಿ ಸದಸ್ಯ ಪ್ರೊ. ಎಂ.ಕೆ. ಶ್ರೀಧರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಸೆ.16 ರಂದು ಶಾಸಕಾಂಗ ಸಭೆ,ಸದನದಲ್ಲಿ ಕೈಗೆತ್ತಿಕೊಳ್ಳಬೇಕಾದ ವಿಷಯಗಳ ಚರ್ಚೆ: ಸಿದ್ದರಾಮಯ್ಯ

0

ಬೆಂಗಳೂರು: ವಿಧಾನ ಮಂಡಲ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಇದೇ ತಿಂಗಳ 16ರಂದು ಕಾಂಗ್ರೆಸ್ ಶಾಸಕಾಗ ಪಕ್ಷದ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಸದನದಲ್ಲಿ ಕೈಗೆತ್ತಿಕೊಳ್ಳಬೇಕಾದ ವಿಷಯಗಳ ಬಗ್ಗೆ ಉಭಯ ಸದನದ ಪಕ್ಷದ ಸದಸ್ಯರ ಜೊತೆ ಸಮಗ್ರವಾಗಿ ಚರ್ಚಿಸಲಾಗುವುದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಪಕ್ಷದ ಶಾಸಕರೊಂದಿಗೆ ಝೂಮ್ ಆಪ್ ಮೂಲಕ ಚರ್ಚೆ ನಡೆಸಿದ ಬಳಿಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಾ ಕೋವಿಡ್ ಉಪಕರಣಗಳ ಖರೀದಿಯಲ್ಲಿ ನಡೆದಿರುವ ಅವ್ಯವಹಾರ, ಸರ್ಕಾರದಲ್ಲಿ ನಡೆದಿರುವ ಭ್ರಷ್ಟಾಚಾರ, ಡ್ರಗ್ ಮಾಫಿಯಾ, ಡಿ.ಜೆ. ಹಳ್ಳಿ ಘಟನೆ, ಜಿಎಸ್‍ಟಿ ಹಾಗೂ ವಿವಿಧ ವಿಧೇಯಕಗಳ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಮಾಲೋಚನೆ ನಡೆಸುತ್ತೇವೆ ಎಂದರು.

ಡ್ರಗ್ ಮಾಫಿಯಾ:
ಡ್ರಗ್ ಮಾಫಿಯಾ ಎಲ್ಲ ಕಾಲದಲ್ಲಿಯೂ ಇತ್ತು. ಇಲ್ಲ ಎಂದರೆ ಸುಳ್ಳು ಹೇಳಿದಂತೆ ಆಗುತ್ತದೆ. ನಮ್ಮ ಸರ್ಕಾರದ ಅವಧಿಯಲ್ಲಿ ಈ ಮಾಫಿಯಾಕ್ಕೆ ಕಡಿವಾಣ ಹಾಕುವ ಪ್ರಯತ್ನ ನಡೆದಿತ್ತು. ಎನ್‍ಸಿಬಿಯವರು ಈಗ ತನಿಖೆ ಕೈಗೆತ್ತಿಕೊಂಡಿದ್ದಾರೆ. ಸಿಸಿಬಿಯೂ ತನಿಖೆಯಲ್ಲಿ ಕೈ ಜೋಡಿಸಿದೆ.
ವಿದ್ಯಾರ್ಥಿಗಳು, ಸಿನಿಮಾ ನಟರು, ರಾಜಕಾರಣಿಗಳು, ಅವರ ಮಕ್ಕಳು ಸೇರಿದಂತೆ ಈ ಮಾಫಿಯಾದಲ್ಲಿ ಯಾರೇ ಭಾಗಿಯಾಗಿದ್ದರೂ ಶಿಕ್ಷೆಯಾಗಲಿ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಲಿ. ಅದಕ್ಕೆ ನಮ್ಮ ಸಂಪೂರ್ಣ ಸಹಕಾರವಿದೆ ಎಂದರು.

ಪೊಲೀಸರ ಬಳಿ ಸಾಕ್ಷ್ಯಾಧಾರ ಇದ್ದರೆ ಯಾರ ವಿರುದ್ಧವಾದರೂ ಕ್ರಮ ಕೈಗೊಳ್ಳಲಿ. ನಟಿ ರಾಗಿಣಿಯವರಿಗೂ ನಮಗೂ ಸಂಬಂಧ ಇಲ್ಲ ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ, ಅವರು ಚುನಾವಣಾ ಪ್ರಚಾರದಲ್ಲಿ ಬಿಜೆಪಿ ನಾಯಕರ ಜೊತೆ ಭಾಗಿಯಾಗಿರುವ ಫೋಟೋ ಮತ್ತು ವೀಡಿಯೋ ಇದೆ. ತನಿಖೆ ನಡೆಯಲಿ. ಇದಕ್ಕೆ ನಮ್ಮ ತಕರಾರು ಏನೂ ಇಲ್ಲ.
ಡ್ರಗ್ ಮಾಫಿಯಾದಲ್ಲಿ ಭಾಗಿಯಾದವರನ್ನು ತನಿಖೆಯಿಂದ ಪಾರು ಮಾಡಲು ಪ್ರಭಾವಿಗಳು ಒತ್ತಡ ಹೇರುತ್ತಿದ್ದಾರೆ ಎಂದು ಮಾತಿಗೆ ಹೇಳಬಾರದು. ನನಗಂತೂ ಆ ಕುರಿತು ಮಾಹಿತಿ ಇಲ್ಲ. ಆ ಕುರಿತಾಗಿ ನಾವೂ ಈ ಬಗ್ಗೆ ಅಧಿವೇಶನದಲ್ಲಿಯೂ ಚರ್ಚೆ ಮಾಡಲು ನಿರ್ಧರಿಸಿದ್ದೇವೆ ಎಂದರು.

ಡ್ರಗ್ ಮಾಫಿಯಾದಲ್ಲಿ ಶಾಸಕ ಜಮೀರ್ ಅಹಮದ್ ಅವರು ಭಾಗಿಯಾಗಿದ್ದಾರೆ ಎಂಬುದಕ್ಕೆ ಪುರಾವೆ ಇದೆಯೇ ? ಸಾಕ್ಷ್ಯ ಇದ್ದರೆ ಪೊಲೀಸರಿಗೆ ತೋರಿಸಲಿ. ರಾಜಕಾರಣಕ್ಕಾಗಿ ಸುಖಾಸುಮ್ಮನೆ ಒಬ್ಬರ ವಿರುದ್ಧ ಆರೋಪ ಮಾಡುವುದು ಸರಿಯಲ್ಲ. ಯಾರೇ ಕಾನೂನು ಉಲ್ಲಂಘನೆ ಮಾಡಿದ್ದರೂ ಕ್ರಮ ಕೈಗೊಳ್ಳಲಿ. ತನಿಖೆ ಮಾಡುತ್ತಿರುವುದು ನಾನು ಅಥವಾ ಮಾಧ್ಯಮದವರಲ್ಲ. ಪೊಲೀಸರು ಆ ಕೆಲಸ ಮಾಡುತ್ತಿದ್ದಾರೆ. ಯಾರೇ ಆರೋಪ ಮಾಡಿದ್ದರೂ ತನಿಖೆ ನಡೆಯಲಿ ಎಂದರು.

ಸಾಕ್ಷ್ಯಾಧಾರ ಸಿಕ್ಕರೆ ಪೊಲೀಸರು ಕ್ರಮ ಕೈಗೊಳ್ಳಲಿ. ಅದಕ್ಕೆ ನಾವು ಅಡ್ಡಿಪಡಿಸುವ ಪ್ರಶ್ನೆಯೇ ಇಲ್ಲ. ಡ್ರಗ್ ಮಾಫಿಯಾ ನಿಯಂತ್ರಣಕ್ಕೆ ಸರ್ಕಾರ ಕಠಿಣವಾದ ಕಾನೂನು ಜಾರಿಗೆ ತರಲಿ. ಅದಕ್ಕೆ ನಮ್ಮ ಪಕ್ಷ ಸಂಪೂರ್ಣ ಸಹಕಾರ ನೀಡಲಿದೆ.
ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ತೆರೆದಿದ್ದ ಕೋವಿಡ್ ಆರೈಕೆ ಕೇಂದ್ರ ಮುಚ್ಚುವ ಹಂತಕ್ಕೆ ಬಂದಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಸೋಂಕಿತರು ಹೋಂ ಕ್ವಾರಂಟೈನ್ ಗೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಯಾವ ಕಾರಣಕ್ಕೆ ಈ ಕೇಂದ್ರ ಮುಚ್ಚಲಾಗುತ್ತಿದೆ ಎಂಬುದರ ಕುರಿತು ಮಾಹಿತಿ ಪಡೆದುಕೊಳ್ಳುತ್ತೇನೆ ಎಂದರು.

ಕೈಗಾರಿಕೆ ವಲಯದ ಕುಸಿತ :
ಉದ್ಯಮ ಸ್ನೇಹಿ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 8ರಿಂದ 17ನೇ ಸ್ಥಾನಕ್ಕೆ ಕುಸಿದಿದೆ. 2017-18ರಲ್ಲಿ ಕನಾಟಕ 8ನೇ ಸ್ಥಾನದಲ್ಲಿತ್ತು. ಅದಕ್ಕೂ ಮೊದಲು 2012-13ನೇ ಸಾಲಿನಲ್ಲಿ 13ನೇ ಸ್ಥಾನದಲ್ಲಿತ್ತು. ಈಗ 17ನೇ ಸ್ಥಾನಕ್ಕೆ ಹೋಗಿದೆ. ಅದಕ್ಕೆ ಈ ಹಿಂದೆ ಆಡಳಿತ ನಡೆಸಿದವರು ಕಾರಣ ಎಂದು ವಿಜಯೇಂದ್ರ ಅವರು ಹೇಳುತ್ತಾರೆ. ಬಿಜೆಪಿ ಕಳೆದ ಒಂದು ವರ್ಷದಿಂದ ಅಧಿಕಾರದಲ್ಲಿ ಇಲ್ಲವೇ. ಸರ್ಕಾರ ನಡೆಸುತ್ತಿರುವವರು ಏನನ್ನು ಕಡಿದು ಕಟ್ಟೆ ಹಾಕಿದ್ದಾರೆ. 17ನೇ ಸ್ಥಾನಕ್ಕೆ ಹೋಗಲು 8ನೇ ಸ್ಥಾನದಲ್ಲಿದ್ದಾಗ ಸರ್ಕಾರ ನಡೆಸಿದವರು ಕಾರಣವೇ ಅಥವಾ 17ನೇ ಸ್ಥಾನದಲ್ಲಿರುವಾಗ ಇರುವ ಸರ್ಕಾರ ಕಾರಣವೇ ? ಜನರಿಗೆ ತಪ್ಪು ಮಾಹಿತಿ ಕೊಡಬಾರದು ಎಂದರು.

ಸ್ವರ್ಗವೋ ನರಕವೋ ?:
ಖಜಾನೆಯಲ್ಲಿ ಹಣ ಇಲ್ಲ ಎಂಬುದಕ್ಕೆ ಕೊರೊನಾ ಕಾರಣ ಎಂದು ಹೇಳುತ್ತಾರೆ. ಜಾಗತಿಕ ಬ್ಯಾಂಕ್‍ಗಳ ಮೂಲಕ ಸಾಲ ತಂದು ಕೇಂದ್ರ ಸರ್ಕಾರ ಜನರಿಗೆ ಸಹಾಯ ಮಾಡಬೇಕು. ಸಬ್ಸಿಡಿ ಇಲ್ಲ, ಸಂಬಳ ಕೊಡಲಾಗದು, ಜಿ.ಎಸ್.ಟಿ. ಪರಿಹಾರ ಕೊಡುವುದಕ್ಕೆ ಆಗುವುದಿಲ್ಲ ಎಂದು ಹೇಳುವುದಾದರೆ ಅಧಿಕಾರದಲ್ಲಿ ಏಕಿರಬೇಕು. ಇದನ್ನು ಹೇಳಲು ಜನರು ಬಿಜೆಪಿಯವರನ್ನು ಕೇಂದ್ರದಲ್ಲಿ ಅಧಿಕಾರದಲ್ಲಿ ಕೂರಿಸಿದ್ದಾರೆಯೇ ಎಂದು ಪ್ರಶ್ನಿಸಿದರು.

ಈ ರೀತಿ ಎಲ್ಲವನ್ನೂ ನಿರಾಕರಿಸುವುದು ಒಕ್ಕೂಟ ವ್ಯವಸ್ಥೆ, ಸಂವಿಧಾನಕ್ಕೆ ವಿರುದ್ಧವಾದ ನಡೆ. ಜನರಿಗೆ ಮಾಡುವ ದ್ರೋಹ. ಜವಾಬ್ದಾರಿಯಿಂದ ನುಣುಚಿಕೊಳ್ಳಲು ಎಲ್ಲವೂ ದೇವರ ಆಟ ಎಂದು ಹೇಳುವುದಾದರೆ ಸರ್ಕಾರದ ಜವಾಬ್ದಾರಿ ಏನು ? ಇದಕ್ಕೆಲ್ಲ ನರೇಂದ್ರಮೋದಿಯವರ ಸರ್ಕಾರವೇ ಕಾರಣ. ಜಿಡಿಪಿ ಕಡಿಮೆಯಾದರೆ ಉದ್ಯೋಗ ಸೃಷ್ಟಿ ಆಗುವುದಿಲ್ಲ. ದೇಶದಲ್ಲಿ ಈಗ 12ರಿಂದ 15 ಕೋಟಿ ಉದ್ಯೋಗ ಹೋಗಿದೆ ಎಂದು ವರದಿಗಳು ಹೇಳುತ್ತವೆ. ದೆಹಲಿಯಲ್ಲಿ ಮತ್ತು ಕರ್ನಾಟದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದರೆ ಸ್ವರ್ಗ ಮಾಡುತ್ತೇವೆ ಎಂದರು. ಇದು ಸ್ವರ್ಗವೋ ನರಕವೋ ಎಂದು ಪ್ರಶ್ನಿಸಿದರು.

ಪ್ರವಾಹದಿಂದ ರಾಜ್ಯಕ್ಕೆ 8071 ಕೋಟಿ ರೂ.ಗಳ ನಷ್ಟ: ಕೇಂದ್ರ ಅಧ್ಯಯನ ತಂಡಕ್ಕೆ ಮುಖ್ಯಮಂತ್ರಿಗಳ ಮಾಹಿತಿ

ಬೆಂಗಳೂರು, ಸೆಪ್ಟೆಂಬರ್ 07 : ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಪ್ರವಾಹದಿಂದ ಉಂಟಾಗಿರುವ ಹಾನಿಯ ಸಮೀಕ್ಷೆಗೆಂದು ಕೇಂದ್ರ ಗೃಹ ಮಂತ್ರಾಲಯದ ಕೆ.ವಿ.ಪ್ರತಾಪ್ ಅವರ ನೇತೃತ್ವದಲ್ಲಿ ಆಗಮಿಸಿರುವ ತಂಡವು ಇಂದು ಮುಖ್ಯಮಂತ್ರಿಗಳನ್ನು ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿತು.

ರಾಜ್ಯದಲ್ಲಿ ಈ ಬಾರಿಯ ಪ್ರವಾಹದಿಂದ ಒಟ್ಟಾರೆ 8071 ಕೋಟಿ ರೂ.ಗಳ ನಷ್ಟ ಉಂಟಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಕೇಂದ್ರ ಅಧ್ಯಯನ ತಂಡಕ್ಕೆ ವಿವರಿಸಿದರು. 2018 ಮತ್ತು 2019 ರಲ್ಲಿಯೂ ರಾಜ್ಯದಲ್ಲಿ ಭಾರಿ ಪ್ರವಾಹ ಮತ್ತು ಭೂ ಕುಸಿತ ಉಂಟಾಗಿ 22 ಜಿಲ್ಲೆಗಳು ಸಂಕಷ್ಟಕ್ಕೆ ಸಿಲುಕಿದ್ದವು. ಈ ಬಾರಿಯ ಪ್ರವಾಹದಲ್ಲಿ ಸುಮಾರು 4.03 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳು ಹಾನಿಗೊಳಗಾಗಿವೆ. ರಸ್ತೆ, ಸೇತುವೆ, ವಿದ್ಯುತ್ ಪರಿವರ್ತಕಗಳು, ಶಾಲೆ, ಅಂಗನವಾಡಿ ಮತ್ತು ಸರ್ಕಾರಿ ಕಟ್ಟಡಗಳಿಗೆ ಹಾನಿ ಉಂಟಾಗಿದೆ ಎಂದರು.
‘ಉತ್ತಮವಾಗಿ ಮರುನಿರ್ಮಿಸು’ ತತ್ವವನ್ನು ಆಧರಿಸಿ ವಿಕೋಪವನ್ನು ತಡೆಯಬಲ್ಲ ಮನೆಗಳನ್ನು ನಿರ್ಮಿಸುವ ಬಹು ದೊಡ್ಡ ಪುನರ್ ನಿರ್ಮಾಣ ಯೋಜನೆಗಳಿಗೆ ರಾಜ್ಯ ಸರ್ಕಾರವು ಆರ್ಥಿಕ ನೆರವು ನೀಡುತ್ತಿದೆ ಎಂದ ಮುಖ್ಯಮಂತ್ರಿಗಳು , ಸಂಪೂರ್ಣ ಹಾಳಾದ ಮನೆಗಳಿಗೆ ರೂ. 5 ಲಕ್ಷ, ತೀವ್ರ ಹಾನಿಗೊಳಗಾದ ಮನೆಗಳಿಗೆ ರೂ.3 ಲಕ್ಷ , ಭಾಗಶ: ಹಾನಿಗೊಳಗಾದ ಮನೆಗಳಿಗೆ ರೂ. 50,000 ಗಳಂತೆ ಧನ ಸಹಾಯ ನೀಡುತ್ತಿದೆ . ಕಳೆದ ವರ್ಷ 1500 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ. ಈ ವರ್ಷವೂ ಸಹ ಕೋವಿಡ್ ಸಂಕಷ್ಟದ ನಡುವೆಯೂ 200 ಕೋಟಿ ರೂ.ಗಳನ್ನು ಸರ್ಕಾರ ಭರಿಸಲಿದೆ ಎಂದರು.

ರಾಜ್ಯ ವಿಕೋಪ ಅಪಾಯ ನಿರ್ವಹಣಾ ನಿಧಿಯಡಿ, ನಾಲ್ಕು ಪ್ರತ್ಯೇಕ ನಿಧಿ ಗವಾಕ್ಷಿಗಳನ್ನು ಕೇಂದ್ರ ಸರ್ಕಾರ ಸೃಜಿಸಿದೆ. ಆದರೆ ಕೋವಿಡ್ ನಿಂದಾಗಿ ನಮ್ಮ ಪ್ರಯತ್ನಗಳಿಗೆ ತಡೆಯುಂಟಾಗಿದೆ.
ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ಪ್ರಾಧಿಕಾರವು ರಾಜ್ಯ ವಿಕೋಪ ನಿರ್ವಹಣಾ ಯೋಜನೆ 2020 ನ್ನು ಅನುಮೋದಿಸಿದ್ದು, ಯೋಜನೆಯು ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಪುನರ್ ನಿರ್ಮಾಣದ ಯೋಜನೆಗಳನ್ನು ಹೊಂದಿದೆ.

ಕೋವಿಡ್ 19 ನಿಯಂತ್ರಣಕ್ಕೆ ಹಾಗೂ ಪ್ರವಾಹಕ್ಕಾಗಿ ರಾಜ್ಯ ವಿಕೋಪ ಪರಿಹಾರ ನಿಧಿಯಡಿ 460 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ರಾಜ್ಯದಲ್ಲಿ ಕೋವಿಡ್ 19 ಪ್ರಕರಣಗಳ ಹೆಚ್ಚಳ ಹಾಗೂ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಹೆಚ್ಚಿನ ಮೊತ್ತದ ಅಗತ್ಯವಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ರಾಜ್ಯ ವಿಕೋಪ ಪರಿಹಾರ ನಿಧಿ/ ರಾಷ್ಟ್ರೀಯ ವಿಕೋಪ ಪರಿಹಾರ ನಿಧಿಯಡಿ ನೆರವು ಒದಗಿಸುವ ಮಾರ್ಗಸೂಚಿಗಳು ಈ ವರ್ಷವೇ ಪರಿಷ್ಕರಣೆಯಾಗಬೇಕಿದ್ದು, ಕೂಡಲೇ ಇದನ್ನು ಪರಿಷ್ಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ, ಸಂಕಷ್ಟದಲ್ಲಿರುವ ಜನರ ಸಹಾಯಕ್ಕೆ ಹೆಚ್ಚಿನ ಮೊತ್ತವನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳು ಕೇಂದ್ರ ತಂಡಕ್ಕೆ ಮನವಿ ಮಾಡಿದರು.

ಕೇಂದ್ರ ಆರ್ಥಿಕ ಇಲಾಖೆಯ ನಿರ್ದೇಶಕ ಡಾ||ಭರತೇಂದು ಕುಮಾರ್ ಸಿಂಗ್, ಕೃಷಿ ಮತ್ತು ರೈತರ ಸಹಕಾರ ಸಚಿವಾಲಯದ ನಿರ್ದೇಶಕ ಡಾ||ಮನೋಹರನ್, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧೀಕ್ಷಕ ಅಭಿಯಂತರ ಸದಾನಂದ ಬಾಬು, ಕೇಂದ್ರ ಜಲಶಕ್ತಿ ಸಚಿವಾಲಯದ ಅಧೀಕ್ಷಕ ಅಭಿಯಂತರ ಗುರುಪ್ರಸಾದ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧೀನ ಕಾರ್ಯದರ್ಶಿ ವಿ.ಪಿ.ರಾಜ್ ವೇದಿ,
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕಂದಾಯ ಸಚಿವ ಆರ್.ಅಶೋಕ್, ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ. ಕೃಷಿ ಸಚಿವರಾದ ಬಿ.ಸಿ ಪಾಟೀಲ್. ವಸತಿ ಸಚಿವರಾದ ವಿ. ಸೋಮಣ್ಣ . ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಗೋಪಲಯ್ಯ . ಮಾನ್ಯ ಕಾನೂನು ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಸಚಿವರಾದ ಮಾಧುಸ್ವಾಮಿ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಸೇರಿಂದತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.