ಕೋವಿಡ್‌-19 ಸಂಕಷ್ಟದಿಂದ ಆರ್ಥಿಕವಾಗಿ ಚೇತರಿಸಿಕೊಂಡ ಏಕೈಕ ರಾಜ್ಯ ಕರ್ನಾಟಕ: ಡಿಸಿಎಂ

ಬೆಂಗಳೂರು: ಕೋವಿಡ್‌-19 ಸಂಕಷ್ಟದಿಂದ ಚೇತರಿಸಿಕೊಂಡು ಆರ್ಥಿಕವಾಗಿ ಮತ್ತೆ ಸಹಜಸ್ಥಿತಿಗೆ ಮರಳಿರುವ ದೇಶದ ಏಕೈಕ, ಮುಂಚೂಣಿಯ ರಾಜ್ಯ ಕರ್ನಾಟಕವಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್.‌ ಅಶ್ವತ್ಥನಾರಾಯಣ ಹೇಳಿದರು.

ಶನಿವಾರ ಅಮೆರಿಕದ ಕನ್ನಡ ಒಕ್ಕೂಟಗಳ ಸಂಘಟನೆ ʼಅಕ್ಕʼ ಏರ್ಪಡಿಸಿದ್ದ ಅಕ್ಕ ವರ್ಚುಯಲ್‌ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಇಡೀ ಜಗತ್ತನ್ನು ತೀವ್ರವಾಗಿ ಕಾಡುತ್ತಿರುವ ಕೋವಿಡ್‌ನಿಂದ ಕರ್ನಾಟಕ ಧೃತಿಗೆಟ್ಟಿಲ್ಲ. ವಾಣಿಜ್ಯ, ಕೈಗಾರಿಕೆ, ಶಿಕ್ಷಣ, ಸಾರಿಗೆ ಸೇರಿದಂತೆ ಎಲ್ಲ ಕ್ಷೇತ್ರಗಳು ಸಹಜಸ್ಥಿತಿಗೆ ಮರಳಿವೆ. ಕೋವಿಡ್‌ ಕಾಲದಲ್ಲೂ ತೆರಿಗೆ ಸಂಗ್ರಹದಲ್ಲೂ ರಾಜ್ಯ ಉತ್ತಮ ಸಾಧನೆ ಮಾಡಿದೆ ಎಂದರು.

ಒಂದೆಡೆ ಕೋವಿಡ್ ಜತೆ ಹೋರಾಟ ನಡೆಸುತ್ತಲೇ ಇನ್ನೊಂದೆಡೆ ಅಭಿವೃದ್ಧಿಯತ್ತ ಕೂಡ ರಾಜ್ಯ ಸರಕಾರ ಕೆಲಸ ಮಾಡಿತು. ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಸೇರಿ ಕೆಲ ಮಹತ್ವದ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಯಿತಲ್ಲದೆ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯಚಟುವಟಿಕೆಗಳನ್ನು ಮಾಮೂಲಿ ಸ್ಥಿತಿಗೆ ತರಲು ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಂಡಿತು ಎಂದು ಡಿಸಿಎಂ ಹೇಳಿದರು.

ರಾಷ್ಟ್ರೀಯ ಆವಿಷ್ಕಾರ ಮಿಷನ್:‌

ಈಗಾಗಲೇ ರಾಜ್ಯದಲ್ಲಿ ಆವಿಷ್ಕಾರ ಪ್ರಾಧಿಕಾರವನ್ನು ಸ್ಥಾಪನೆ ಮಾಡಿ ಐಟಿ-ಬಿಟಿ ಕ್ಷೇತ್ರಕ್ಕೆ ಶಕ್ತಿ ತುಂಬಲಾಗಿದೆ. ಅದೇ ರೀತಿ ಇಡೀ ದೇಶವನ್ನು ಬೆಂಗಳೂರು ಮೂಲಕ ನೋಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ರಾಷ್ಟ್ರೀಯ ಆವಿಷ್ಕಾರ ಮಿಷನ್ ಅನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಎಲ್ಲ ಪ್ರಯತ್ನಗಳನ್ನು ನಡೆಸಲಾಗುವುದು. ಅದಕ್ಕೆ ಬೇಕಿರುವ ಎಲ್ಲ ನೆರವನ್ನೂ ಕೇಂದ್ರ ಸರಕಾರದಿಂದ ಪಡೆಯಲಾಗುವುದು ಎಂದು ಇದೇ ವೇಳೆ ಅನಿವಾಸಿ ಕನ್ನಡಿಗರಿಗೆ ಉಪ ಮುಖ್ಯಮಂತ್ರಿ ಮಾಹಿತಿ ನೀಡಿದರು.

ಕರ್ನಾಟಕ, ಅಮೆರಿಕ ಮತ್ತು ಹೂಡಿಕೆ:

ಎಲ್ಲರಿಗೂ ಗೊತ್ತಿರುವಂತೆ ಭಾರತ ಮತ್ತು ಅಮೆರಿಕದ ನಡುವೆ‌ ರಾಜತಾಂತ್ರಿಕವಾಗಿ ಮಾತ್ರವಲ್ಲದೆ ಎಲ್ಲ ಕ್ಷೇತ್ರಗಳಲ್ಲೂ ಉತ್ತಮ ಬಾಂಧವ್ಯವಿದೆ. ಮುಖ್ಯವಾಗಿ ಎಲೆಕ್ಟ್ರಾನಿಕ್‌ ಸಿಸ್ಟಮ್‌ಗಳ ವಿನ್ಯಾಸ ಮತ್ತು ಅಭಿವೃದ್ಧಿ, ಬಾಹ್ಯಾಕಾಶ, ರಕ್ಷಣೆ, ಐಟಿ-ಬಿಟಿ ಸೇರಿ ಇನ್ನೂ ಅನೇಕ ವಿಭಾಗಗಳಲ್ಲಿ ಅಮೆರಿಕ ಮತ್ತು ಕರ್ನಾಟಕದ ನಡುವೆ ಗಾಢವಾದ ವ್ಯವಹಾರವಿದೆ. ಇದರಿಂದ ಎರಡೂ ಕಡೆಗೂ ಅಪಾರವಾದ ಲಾಭವಾಗುತ್ತಿದೆ. ಅಮೆರಿಕದ ನೂರಾರು ಕಂಪನಿಗಳು ಕರ್ನಾಟಕದಿಂದಲೇ ಕಾರ್ಯಾಚರಿಸುತ್ತಿವೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಕರ್ನಾಟಕದಲ್ಲಿ ಹೂಡಿಕೆ ಮಾಡಲು ಅತ್ಯಂತ ಉತ್ತಮ ವಾತಾವರಣವಿದೆ. ಇಂಥ ಅನುಕೂಲಕರ ಪರಿಸ್ಥಿತಿ ದೇಶದ ಬೇರೆ ಯಾವುದೇ ರಾಜ್ಯದಲ್ಲೂ ಇಲ್ಲ. ಕೇವಲ ಒಂದು ಅರ್ಜಿಯನ್ನು ಸಲ್ಲಿಸಿ ಕೈಗಾರಿಕೆ ಆರಂಭಿಸಬಹುದು. ನಂತರ ಅಗತ್ಯ ಒಪ್ಪಿಗೆಗಳನ್ನು ಏಕಗವಾಕ್ಷಿ ವ್ಯವಸ್ಥೆಯಲ್ಲೇ ಪಡೆಯಬಹುದು. ಯಾವುದೇ ಕ್ಷೇತ್ರದಲ್ಲಿ ಬೇಕಾದರೂ ಹಿಂಜರಿಕೆ ಇಲ್ಲದೆ ಹೂಡಿಕೆ ಮಾಡಬಹುದು. ಅನಿವಾಸಿ ಕನ್ನಡಿಗರು ಈ ಅವಕಾಶವನ್ನು ಬಳಸಿಕೊಳ್ಳಬೇಕು. ಉದ್ಯಮದಲ್ಲಿ ಹೂಡಿಕೆಯ ವಿಷಯ ಬಂದರೆ ಕರ್ನಾಟಕ, ಅಮರಿಕದ ನಡುವೆ ಅತ್ಯುತ್ತಮ ಅವಗಾಹನೆ ಇದೆ ಎಂದು ಡಿಸಿಎಂ ವಿವರಿಸಿದರು.

ಉಳಿದಂತೆ, ರಾಜ್ಯದಲ್ಲಿ ಡಿಜಿಟಲ್‌ ಎಕಾನಮಿ ಮಿಷನ್‌, ಬಯೋ ಇನೋವೇಷನ್‌ ಸೆಂಟರ್‌ ಸೇರಿ ಹಲವಾರು ಹೆಜ್ಜೆಗಳನ್ನು ಇಡಲಾಗಿದೆ. ಇದರ ಜತೆಜತೆಯಲ್ಲೇ ಉದ್ಯೋಗ ಸೃಷ್ಟಿಗೆ ಹೆಚ್ಚು ಒತ್ತು ನೀಡಲಾಗಿದೆ. ಜಾಬ್‌ ಮಾರುಕಟ್ಟೆಯ ಟ್ರೆಂಡ್‌ಗೆ ತಕ್ಕಂತೆ ಕೆಲಸಗಳನ್ನು ಒದಗಿಸಲಾಗುತ್ತಿದೆ ಹಾಗೂ ಕೌಶಲ್ಯಭರಿತ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಮಹತ್ತ್ವದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಡಾ. ಅಶ್ವತ್ಥನಾರಾಯಣ ನುಡಿದರು.

ಮುಖ್ಯಮಂತ್ರಿ ಯಡಿಯೂರಪ್ಪ, ಬೃಹತ್‌ ಕೈಗಾರಿಕೆ ಸಚಿವ ಜಗದೀಶ್‌ ಶೆಟ್ಟರ್‌, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸಿ.ಟಿ. ರವಿ ಮುಂತಾದವರು ಪಾಲ್ಗೊಂಡು ಮಾತನಾಡಿದರು. ಅಕ್ಕ ಒಕ್ಕೂಟದ ಅಧ್ಯಕ್ಷ ತುಮಕೂರು ದಯಾನಂದ್‌, ಅಕ್ಕ ಚೇರ್‌ಮನ್‌ ಅಧ್ಯಕ್ಷ ಅಮರನಾಥ ಗೌಡ ಅವರು ಅಮೆರಿಕದಲ್ಲೇ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಕಬ್ಬಿಣದ ಕೈಗಳ ಜಾಲವನ್ನು ಸರ್ಕಾರ ತುಂಡರಿಸಲಿದೆ: ಕೃಷಿ ಸಚಿವ ಬಿ.ಸಿ.ಪಾಟೀಲ್

ಕೋಲಾರ, ಸೆ.5: ಮಾದಕ ಸೇವನೆ ಯಾರೇ ಮಾಡಿದರೂ ತಪ್ಪೇ. ಚಿತ್ರರಂಗವಿರಲೀ, ಅಥವಾ ಇನ್ನಲ್ಲೇ ಇರಲೀ ಜಾಲದಲ್ಲಿರುವ ಕಬ್ಬಿಣದ ಕೈಗಳನ್ನು ಸರ್ಕಾರ ತುಂಡರಿಸುವ ಕೆಲಸ ಮಾಡಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಇಲ್ಲಿನ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಚಿತ್ರನಟಿ ರಾಗಿಣಿಯಾಗಲೀ ಯಾರೇ ಆಗಲೀ ಉಪ್ಪು ತಿಂದವರು ನೀರು ಕುಡಿಯಲೇಬೇಕು. ಯಾರೂ ಕೂಡ ಮಾದಕ ದ್ರವ್ಯಗಳಿಗೆ ವ್ಯಸನಿಗಳಾಗಬಾರದು. ನಮ್ಮ ಕಾಲಕ್ಕೂ ನಮ್ಮ ಮಕ್ಕಳ ಕಾಲಕ್ಕೂ ಜನರೇಷನ್ ಬದಲಾಗುತ್ತಿದೆ. ಚಿತ್ರರಂಗವೂ ಬದಲಾಗಿದೆ ಅಂದಮಾತ್ರಕ್ಕೆ ದುಶ್ಚಟಕ್ಕೆ ಬಲಿಯಾಗುವುದಾಗಲೀ ವ್ಯಸನಿಗಳಾಗುವುದಾಗಲೀ ಮಾಡಬಾರದು. ತಪ್ಪು ಯಾರೂ ಮಾಡಿದ್ದಾರೆ ಎನ್ನುವುದು ಜನರಿಗೆ ತನಿಖೆಯಿಂದ ಗೊತ್ತಾಗಲಿದೆ. ತನಿಖೆಗೂ ಮುನ್ನ ಸುಕಾಸುಮ್ಮನೆ ಹೇಳಿಕೆ ನೀಡುವುದು ಸರಿಯಲ್ಲ ಎಂದರು.

ರಾಜ್ಯ ಆಹಾರ ನಿಗಮದ ಅಧ್ಯಕ್ಷರಾಗಿರುವ ತಾವು ಫುಡ್ ಪಾರ್ಕ್ಗಳನ್ನು ಪರಿಶೀಲಿಸುತ್ತಿದ್ದು, ಈ ನಿಟ್ಟಿನಲ್ಲಿ ಮಾಲೂರಿನ ಆಹಾರ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು ಬಂದಿರುವುದಾಗಿ ಸಚಿವರು ಹೇಳಿದರು. ರಾಜ್ಯದಲ್ಲಿ ಫುಡ್ ಪಾರ್ಕ್ಗಳ ಸಂಖ್ಯೆಗಳನ್ನು ಹೆಚ್ಚಿಸಬೇಕಿದೆ. ಕೋವಿಡ್ ಬಳಿಕ ಸ್ಥಿರವಾಗಿ ಉಳಿದಿರುವ ಕ್ಷೇತ್ರವೆಂದರೆ ಅದು ಕೃಷಿ ಕ್ಷೇತ್ರ ಮಾತ್ರ. 10 ಸಾವಿರ ಕೋಟಿ ರೂ.ಗಳನ್ನು ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಆಹಾರ ಉತ್ಪಾದನೆಗಳಿಗೆ ಮೀಸಲಿಟ್ಟಿದ್ದಾರೆ. ಕೋವಿಡ್ ಬಳಿಕ ಕೃಷಿ ಕ್ಷೇತ್ರಕ್ಕೆ ಹಾಗೂ ಆಹಾರ ಸಂಸ್ಕರಣಾ ಘಟಕಗಳಿಗೆ ಹೆಚ್ಚು ಒತ್ತು ನೀಡಲಾಗಿದ್ದು, ಜನರು ಸಹ ಇವುಗಳತ್ತ ಹೆಚ್ಚು ಒಲವು ತೋರಿದ್ದಾರೆ ಎಂದರು.

ಸರ್ಕಾರದ ಬದ್ಧತೆಯ ಬಗ್ಗೆ ವಿರೋಧ ಪಕ್ಷದ ಕಾಳಜಿ ಅನಗತ್ಯ –ಎಸ್.ಸುರೇಶ್‌ ಕುಮಾರ್‌

ಬೆಂಗಳೂರು:ವಿರೋಧ ಪಕ್ಷಗಳ‌ ಆರೋಪಕ್ಕೆ‌ ಸಚಿವ‌ ಸುರೇಶ್ ಕುಮಾರ್ ಲೇಖನ ಸ್ವರೂಪದ ಪ್ರತಿಕ್ರಿಯೆ ನೀಡಿದ್ದಾರೆ.

ಕೋವಿಡ್‌ ಲಾಕ್‌ ಡೌನ್‌ ಅವಧಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿನ ಸುಧಾರಣೆಗೆ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಲು ರಾಜ್ಯ ಸರ್ಕಾರ ವಿಫಲಗೊಂಡಿದೆ, ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಸಮಸ್ಯೆಗಳ ಸುಳಿಗೆ ತಳ್ಳಿದೆ ಎಂದು ವಿರೋಧ ಪಕ್ಷದ ನನ್ನ ಕೆಲವು ಮಿತ್ರರು ಆರೋಪ ಮಾಡಿದ್ದಾರೆ. ರಾಜಕಾರಣದ ಉದ್ದೇಶವೇನೇ ಇರಲಿ, ನಮ್ಮ ಮಕ್ಕಳ ಹಿತದೃಷ್ಟಿಯ ಕಾರಣ, ನಮ್ಮ ಪೋಷಕರ ಹಿತದೃಷ್ಟಿಯ ಕಾರಣ ಹಾಗೂ ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುವ ನಮ್ಮ ಅಸಹಾಯಕ ಶಿಕ್ಷಕರ ಒಳಿತಿನ ನಿಟ್ಟಿನಲ್ಲಿ ಕೆಲವು ಸ್ಪಷ್ಟೀಕರಣಗಳನ್ನು ನಾನು ನೀಡಲು ಬಯಸಿದ್ದೇನೆ.

1. ಮಾರ್ಚ್‌ 11,2020 ರಂದು ಕೊರೋನಾ ವೈರಸ್‌ನ್ನು ವಿಶ್ವ ಆರೋಗ್ಯ ಸಂಸ್ಥೆ ಸಾಂಕ್ರಾಮಿಕ ಪಿಡುಗೆಂದು ಘೋಷಿಸಿದಾಗಲೇ, ಶಿಕ್ಷಣ ಇಲಾಖೆಯ ಮೇಲೆ ಅದು ಒಡ್ಡಬಹುದಾದ ದೂರಗಾಮಿಯಾದ ಪರಿಣಾಮಗಳನ್ನು ಅಂದಾಜಿಸಿದ್ದೆವು. ಬೇರೆಲ್ಲ ಕ್ಷೇತ್ರಗಳಿಗಿಂತಾ ಹೆಚ್ಚಿನ ಪರೋಕ್ಷ ಸಂಕಟಗಳನ್ನು ಈ ಇಲಾಖೆ ಅನುಭವಿಸಬೇಕಾದ್ದು, ಬಹುಮುಖಿಯಾದ ಸವಾಲುಗಳನ್ನು ಎದುರಿಸಬೇಕಾದ್ದು ಅನಿವಾರ್ಯತೆಯಾಗಿತ್ತು.
2. ಮೊದಲಿಗೆ ಲಾಕ್‌ ಡೌನ್‌ ಘೋಷಣೆಯಾದ ಕೂಡಲೇ ದಿನಾಂಕ 14.03.2020 ರಿಂದ ಅನ್ವಯಿಸುವಂತೆ ಒಂದರಿಂದ ಒಂಬತ್ತನೇ ತರಗತಿಯವರೆಗೆ ಪರೀಕ್ಷೆ ರದ್ದುಗೊಳಿಸಿ, ಹಿಂದಿನ ಮೌಲ್ಯಾಂಕನದ ಆಧಾರದಲ್ಲಿ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗಳಿಗೆ ತೇರ್ಗಡೆ ಮಾಡಿದೆವು.
3. ಮುಂದಿನ ಎರಡು ತಿಂಗಳ ಅವಧಿಯಲ್ಲಿ ಆರ್ಥಿಕ ಚಟುವಟಿಕೆಗಳು, ಕೈಗಾರಿಕೆಗಳು, ಇತರೆ ವಾಣಿಜ್ಯ ವ್ಯವಹಾರಗಳು ಸಂಪೂರ್ಣವಾಗಿ ಸ್ತಬ್ಧವಾದ ಹಿನ್ನೆಲೆಯಲ್ಲಿ ಇಂತಹ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕ ಪೋಷಕರಿಗೆ ವೇತನಕ್ಕೂ ಸಮಸ್ಯೆಯಾಯಿತು.
4. ಇದೇ ಸಂದರ್ಭದಲ್ಲಿ ಹಲವಾರು ಖಾಸಗಿ ಅನುದಾನರಹಿತ ಶಾಲೆಗಳು, ವಿಶೇಷವಾಗಿ ನಗರಕೇಂದ್ರಿತ ಶಾಲೆಗಳು ವಿದ್ಯಾರ್ಥಿಗಳಿಗೆ ಆನ್‌ ಲೈನ್‌ ದೂರ ಶಿಕ್ಷಣ ನೀಡುತ್ತೇವೆನ್ನುವ ನೆಪವೊಡ್ಡಿ ಎಲ್.ಕೆ.ಜಿ.ಯು.ಕೆ.ಜಿ ಮಕ್ಕಳೂ ಸಮವಸ್ತ್ರ ಧರಿಸಿ ಕಂಪ್ಯೂಟರ್‌ ಗಳ ಮುಂದೆ ಕುಳಿತು ಕಲಿಯುವ ಹಾಗೆ ಮಾಡಿದವು. ಪೋಷಕರಿಂದ ಅವೈಜ್ಞಾನಿಕವಾದ ಶುಲ್ಕ ವಸೂಲಾತಿಗೆ ಮುಂದಾದವು.
5. ಪೋಷಕರ ಮೇಲಿನ ಖಾಸಗಿ ಶಾಲೆಗಳ ನಿರಂತರ ಶೋಷಣೆಯನ್ನು ಗಮನಿಸಿದ ಮೇಲೆ ದಿನಾಂಕ 30.03.2020 ರಲ್ಲಿ ಮುಂದಿನ ಆದೇಶದವರೆಗೆ ಪೋಷಕರಿಂದ ಯಾವುದೇ ಶುಲ್ಕ ಪಡೆದುಕೊಳ್ಳದಿರಲು ಎಲ್ಲ ಖಾಸಗಿ ಶಾಲೆಗಳಿಗೆ ನಾವು ಸೂಚಿಸಿದೆವು.
6. ಅದೇ ಸಂದರ್ಭದಲ್ಲಿ ನಾವು ಶಾಲೆಗಳ ಅವೈಜ್ಞಾನಿಕ ಆನ್ಲೈನ್‌ ಬೋಧನೆಯ ಮೇಲೆ ಸಹ ನಿಯಂತ್ರಣವನ್ನು ಹೇರಿದೆವು. ಐದನೇ ತರಗತಿಯವರೆಗೆ ಆನ್ ಲೈನ್‌ ಬೋಧನೆ ಸ್ಥಗಿತಗೊಳಿಸಿದ ನಮ್ಮ ನಿರ್ಧಾರಕ್ಕೆ ಉಚ್ಛ ನ್ಯಾಯಾಲಯವು ತಡೆಯಾಜ್ಞೆ ನೀಡಿ, ಆನ್‌ ಲೈನ್‌ ಶಿಕ್ಷಣ ಪಡೆಯುವುದು ವಿದ್ಯಾರ್ಥಿಗಳ ಹಕ್ಕೆಂದು ಪ್ರತಿಪಾದಿಸಿತು. ಆದರೆ ಯಾವುದೇ ಕಾರಣಕ್ಕೂ ಶಾಲೆಗಳು ಆನ್‌ ಲೈನ್‌ ಶಿಕ್ಷಣಕ್ಕೆ ಪ್ರತ್ಯೇಕ ಶುಲ್ಕ ವಸೂಲಾತಿಗೆ ಮುಂದಾಗಬಾರದೆಂದು ಹೇಳಿತು.
7. ಈ ಸಂದರ್ಭದಲ್ಲೇ ನಾವು ಇಡೀ ರಾಷ್ಟ್ರದಲ್ಲಿ ಮೊದಲ ಪ್ರಯತ್ನವಾಗಿ ಒಂದು ಕೆಲಸಕ್ಕೆ ಮುಂದಾದೆವು. ಕೋವಿಡ್‌ ಪಿಡುಗು ಜಗತ್ತನ್ನೆಲ್ಲ ಆವರಿಸಿಕೊಂಡಂತೆ ಇತರೆ ರಾಜ್ಯಗಳು ಏನು ಮಾಡುತ್ತಿವೆ? ಅಂತಾರಾಷ್ಟ್ರೀಯ ವಸ್ತುಸ್ಥಿತಿ ಏನಿದೆ? ಮಕ್ಕಳಿಗಾಗಿ ಶಿಕ್ಷಣವನ್ನು ಮುಂದುವರೆಸುವುದರ ಬಗ್ಗೆ ಬೇರೆ ಸರ್ಕಾರಗಳ ನಿಲುವೇನು? ಇದೆಲ್ಲವನ್ನು ಅವಲೋಕಿಸಲು ನಾವು ಕೋವಿಡ್‌ ಸಂದರ್ಭದಲ್ಲಿ ಶಿಕ್ಷಣವನ್ನು ಮುಂದುವರೆಸುವ ಬಗ್ಗೆ ಸಲಹೆ ನೀಡಲು ತಜ್ಞರ ಸಮಿತಿಯನ್ನು ರಚಿಸಿ ಕೋವಿಡ್-19ರ ಸಾಂಕ್ರಾಮಿಕ ರೋಗದಿಂದಾಗಿ ರಾಜ್ಯದಲ್ಲಿ ಶಾಲೆಗಳನ್ನು ಮುಚ್ಚಬೇಕಾದಂತಹ ಪರಿಸ್ಥಿತಿಯನ್ನು ಎದುರಿಸಲು ಸಲಹೆಗಳನ್ನು ನೀಡುವಂತೆ ಕೋರಿದೆವು.
8. ಈ ನಡುವೆ, ಎಸ್ಎಸ್ಎಲ್‌ಸಿ, ಪಿಯುಸಿ ಪರೀಕ್ಷೆಗಳನ್ನು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಜೂನ್‌ 25 ರಿಂದ ನಡೆಸಬೇಕೆಂಬ ನಿರ್ಣಯ ತೆಗೆದುಕೊಂಡೆವು. ಬೇರಾವ ರಾಜ್ಯಗಳೂ ಮುಂದಾಗದ ಪ್ರಯತ್ನವನ್ನು ನಾವು ಮಾಡಿದೆವು. ಪರೀಕ್ಷಾ ಅವಧಿಯ ಸಮಸ್ಯೆಗಳು, ಆನ್ಲೈನ್‌ ಶಿಕ್ಷಣದ ಆಗುಹೋಗುಗಳು, ಸರ್ಕಾರಿ ಶಾಲೆಗಳಲ್ಲಿನ ನಮ್ಮ ಮಕ್ಕಳಿಗೆ ಕಲಿಕೆಯನ್ನು ಮುಂದುವರೆಸಬೇಕಾದ ಅಗತ್ಯತೆಗಳು, ಸರ್ಕಾರದ ಎಲ್ಲ ವರ್ಗದ ಮಕ್ಕಳಿಗೆ ಒದಗಿಸಬೇಕಾದ ಸಮಾನ ಶಿಕ್ಷಣ ವ್ಯವಸ್ಥೆಯನ್ನು ಅತ್ಯಂತ ಜಾಗರೂಕವಾಗಿ ನಿರ್ವಹಿಸಬೇಕಿದ್ದ ಜವಾಬ್ದಾರಿ ನಮ್ಮ ಹೆಗಲೇರಿತ್ತು.
9. ಸಮಿತಿಯು ವಿವಿಧ ಅಂತರರಾಪ್ಷ್ರೀಯ ಹಾಗೂ ರಾಪ್ಷ್ರೀಯ ಸಂಸ್ಥೆಗಳು ಪ್ರಸ್ತಾಪಿಸಿರುವ ವಿಧಾನಗಳನ್ನು ಪರಿಶೀಲಿಸಿ, ಸಮಾಜದ ಎಲ್ಲ ವರ್ಗಗಳ ವಿದ್ಯಾರ್ಥಿಗಳೊಂದಿಗೆ ಲಭ್ಯವಿರುವ ಉಪಕರಗಳನ್ನು ಗಣನೆಗೆ ತೆಗೆದುಕೊಂಡು ಕರ್ನಾಟಕದಲ್ಲಿನ ಶಾಲೆಗಳು ಅಳವಡಿಸಿಕೊಳ್ಳಬಹುದಾದ ಮಾರ್ಗಸೂಚಿಗಳನ್ನು ದಿನಾಂಕ 07ನೇ ಜುಲೈ 2020ರಂದು ಸರ್ಕಾರಕ್ಕೆ ಸಲ್ಲಿಸಿತು
10. ಈ ವರದಿಯನ್ನು ಆಧರಿಸಿ ಬೌತಿಕವಾಗಿ ಶಾಲೆಗಳು ಪ್ರಾರಂಭವಾಗುವವರೆಗೂ ಪ್ರತೀ ಮಗುವಿನ ಭವಿಷ್ಯದ ಕನಸಿಗೆ ಯಾವುದೇ ಅಡಚಣೆಗಳು ಅಡ್ಡಿಯಾಗದಂತೆ ಹಾಗೂ ರಾಜ್ಯದ ಎಲ್ಲಾ ಮಕ್ಕಳನ್ನು ಕಲಿಕೆಯೊಂದಿಗೆ ನಿರಂತರ ಸಂಪರ್ಕದಲ್ಲಿಡುವುದಕ್ಕಾಗಿ “ವಿದ್ಯಾಗಮ”ವನ್ನು ಪ್ರಾರಂಭಿಸಲಾಯಿತು. ಶಾಲೆ ಮುಚ್ಚಿರುವ ಸಮಯದಲ್ಲಿಯೂ ಮಕ್ಕಳ ನಿರಂತರ ಕಲಿಕೆ, ಸಮಾಜದ ಯಾವುದೇ ಆರ್ಥಿಕ ಸ್ತರಕ್ಕೂ ಸೇರಿದ ಪ್ರತಿ ಮಗುವೂ ಕಲಿಕಾ ವ್ಯಾಪ್ತಿಯಲ್ಲಿ ಬರುವಂತೆ ಯೋಜನೆ, ಶಿಕ್ಷಕರು-ಮಕ್ಕಳ ನಿರಂತರ ಸಂಪರ್ಕ, ಮಕ್ಕಳಲ್ಲಿ ಮಾರ್ಗದರ್ಶಿತ ಸ್ವಯಂ ಕಲಿಕೆ, ಶಿಕ್ಷಕರ ಮೂಲಕ ಮಕ್ಕಳ ಮನೋಸ್ಥೈರ್ಯದ ವೃದ್ಧಿ, ಶಿಕ್ಷಕರು, ಶಾಲಾ ಮೇಲುಸ್ತುವಾರಿ ಸಮಿತಿಯ ಸದಸ್ಯರು, ಆಡಳಿತ ಮಂಡಳಿಯವರು, ಸ್ವಯಂ ಸೇವಕರು, ಪೋಷಕರು ಹಾಗೂ ಸಮುದಾಯದ ಎಲ್ಲಾ ಭಾಗೀದಾರ ಸಕ್ರಿಯ ತೊಡಗಿಸುವಿಕೆಯಂತಹ ಉದಾತ್ತವಾದ ಉದ್ದೇಶಗಳನ್ನು ವಿದ್ಯಾಗಮ ಹೊಂದಿದೆ.
11. ನಾನು ವಿದ್ಯಾಗಮ ಪ್ರಾರಂಭವಾದಾಗಿನಿಂದ ಹಲವಾರು ಜಿಲ್ಲೆಗಳ ಗ್ರಾಮಾಂತರ ಪ್ರದೇಶಗಳಿಗೂ ಭೇಟಿ ನೀಡಿದ್ದೇನೆ. ಕೋವಿಡ್‌ ಸಂದರ್ಭದಲ್ಲೂ ಯಾವುದೇ ವಿದ್ಯಾರ್ಥಿಯಾಗಲೀ, ಪೋಷಕರಾಗಲೀ ಯೋಜನೆಯ ಬಗ್ಗೆ ದೂರಿದ್ದು ನಾನು ಕಾಣಲಿಲ್ಲ. ಮಕ್ಕಳೆಲ್ಲ ಯಾವುದೋ ಬಯಲಿನ ನೆರಳಲ್ಲಿ ಕುಳಿತು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಕಲಿಕೆಯನ್ನು ಮುಂದುವರೆಸಿರುವುದು, ನಮ್ಮ ಶಿಕ್ಷಕರು ಆಸಕ್ತಿಯಿಂದ ಮಕ್ಕಳ ಬಳಿ ತೆರಳಿ ಇಷ್ಟ ಪಟ್ಟು ಕಲಿಸುತ್ತಿರುವುದು ನಿಜಕ್ಕೂ ಖುಷಿ ತರುವ ವಿಷಯ. ಖಾಸಗಿ ಶಾಲೆಗಳೂ ಸಹ ಸರ್ಕಾರದ ಈ ಉತ್ತಮ ಉಪಕ್ರಮವನ್ನು ಅಳವಡಿಸಿಕೊಳ್ಳಲು ಸ್ವತಂತ್ರರಿದ್ದಾರೆ. *ಅದಕ್ಕೆಂದೇ ಈ ಯೋಜನೆಯ ಉಪಯುಕ್ತತೆಯ ಬಗ್ಗೆ ಬಾಹ್ಯಮೂಲದ ಸಂಸ್ಥೆಯಿಂದ ಮೌಲ್ಯಮಾಪನಕ್ಕೂ ನಾವು ಮುಂದಾಗುತ್ತಿದ್ದೇವೆ. ಕೇಂದ್ರ ಸರ್ಕಾರಕ್ಕೂ ಮಾಹಿತಿ ಸಲ್ಲಿಸಿ ಇಂತಹ ಮಾದರಿಯಾದ TRUSTED, TESTED ಉಪಕ್ರಮವನ್ನು ಎಲ್ಲೆಡೆ ಅಳವಡಿಸಿಕೊಳ್ಳಬಹುದೆಂದು ಹೇಳಿದ್ದೇವೆ.

12. ನಾವು ಹಿಂದೆ ಕೈಗೊಂಡ ಸಮೀಕ್ಷೆಯ ಫಲಿತಾಂಶದಂತೆ ಸುಮಾರು ಶೇ.90ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳ ಮನೆಗಳಲ್ಲಿ ಟಿ.ವಿ ಲಭ್ಯವಿರುವುದರಿಂದ, ‘ಸಂವೇದ’-ಟಿ.ವಿ ಆಧಾರಿತ ಕಲಿಕಾ ಕಾರ್ಯಕ್ರಮವನ್ನು ಸಹ ‘ವಿದ್ಯಾಗಮ’ ಕಾರ್ಯಕ್ರಮದ ಅಂಗವಾಗಿ ರೂಪಿಸಲಾಗಿದೆ. 1 ರಿಂದ 10ನೇ ತರಗತಿಯವರೆಗೆ ಆಂಗ್ಲ ಮತ್ತು ಕನ್ನಡ ಮಾಧ್ಯಮದಲ್ಲಿ ಪಾಠಗಳನ್ನು ಪರಿಣಿತ ಶಿಕ್ಷಕರ ಬೋಧನೆಯ ವಿಡಿಯೋ ತಯಾರಿಸಿ ಇಲಾಖೆಯ ಯುಟ್ಯೂಬ್‌ ಚಾನೆಲ್ಗಳಲ್ಲಿಯೂ ಸಹ ಲಭ್ಯವಿರಲು ಕ್ರಮ ವಹಿಸಲಾಗುತ್ತಿದೆ.
13. ಹಲವು ಜಿಲ್ಲೆಗಳಲ್ಲಿ ಇಂದು ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಾಗಿದೆ. ಮಕ್ಕಳು ಕ್ರಿಯಾಶೀಲರಾಗಿ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದಕ್ಕೆ ದಾಖಲೆ ನಾನೇ ನನ್ನ ವಿರೋಧಪಕ್ಷದ ಸ್ನೇಹಿತರಿಗೆ ಒದಗಿಸಬಲ್ಲೆ.
14. ಬಹಳ ಮುಖ್ಯವಾಗಿ ಇಂದು ಖಾಸಗಿ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಪ್ರಾರಂಭಿಸಲು ಅನುಮತಿ ನೀಡಲಾಗಿದೆ. ಜೊತೆಯಲ್ಲಿಯೇ ಇಂದು (05.09.2020ರಂದು) ಪೋಷಕರಿಂದ ಪ್ರಸಕ್ತ ಸಾಲಿನ ಮೊದಲ ಕಂತಿನ ಅಧಿಕೃತ ಶುಲ್ಕವನ್ನು ವಸೂಲಿ ಮಾಡಲು ಅನುಮತಿಯನ್ನು ಸಹ ನೀಡಿದ್ದೇನೆ. ಮುಂದಿನ ದಿನಗಳ ಪರಿಸ್ಥಿತಿಗೆ ಅನುಗುಣವಾಗಿ ಶುಲ್ಕ ಪಾವತಿ ಪ್ರಕ್ರಿಯೆ ಮುಂದುವರೆಯಲಿದ್ದು, ಶಾಲೆಗಳು ಈ ರೀತಿಯಾಗಿ ವಸೂಲಾಗುವ ಶುಲ್ಕವನ್ನು ಶಿಕ್ಷಕರ ವೇತನಕ್ಕೆ ಬಳಸಲು ಮೊದಲ ಪ್ರಾಧಾನ್ಯತೆಯನ್ನು ಕೊಡಬೇಕೆಂದು ಹೇಳಿದ್ದೇನೆ. ಹಾಗೂ ನಮ್ಮ ಪೋಷಕರಿಗೆ ಅನ್ಯಾಯವಾಗದ ರೀತಿಯಲ್ಲಿ ಕಳೆದ ಸಾಲಿಗಿಂತ ಯಾವುದೇ ಕಾರಣಕ್ಕೂ ಶುಲ್ಕ ಹೆಚ್ಚಳವಾಗಬಾರದೆಂದು ಆದೇಶ ಮಾಡಿದ್ದೇನೆ. ಇದರಿಂದ ನಮ್ಮ ಖಾಸಗಿ ಶಾಲಾ ಶಿಕ್ಷಕರ ಬವಣೆ ಖಂಡಿತವಾಗಿಯೂ ಬಗೆಹರಿಯಲಿವೆ.

15. ನಾವು ವೈಜ್ಞಾನಿಕವಾಗಿ, ಅತ್ಯಂತ ಪ್ರಜಾಸತ್ತಾತ್ಮಕವಾಗಿ ನಮ್ಮೆಲ್ಲ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಯಾವುದೇ ಪ್ರಧಾನ ನಿರ್ಣಯವೂ ಭಾಗೀದಾರರೊಂದಿಗಿನ ಚರ್ಚೆಯ ನಂತರವೇ ಹೊರಹೊಮ್ಮಿದೆ. ಹಲವು ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡಾಗ ನನಗೆ ನನ್ನ ಹುದ್ದೆ ಮುಖ್ಯವಾಗಿರಲಿಲ್ಲ. ಹಿಂದಿನ ಶಿಕ್ಷಣ ಸಚಿವರು, ಶಿಕ್ಷಣ ತಜ್ಞರು, ಶಿಕ್ಷಕರ-ಪದವೀಧರ ಕೇತ್ರದ ಪ್ರತಿನಿಧಿಗಳು, ಪತ್ರಿಕಾ ಮುಖ್ಯ ಸಂಪಾದಕರು, ಶಾಲಾಭಿವೃದ್ಧಿ ಸಮಿತಿಗಳ ಸದಸ್ಯರುಗಳು, ಶಿಕ್ಷಕರ ಸಂಘಟನೆಗಳು, ಶಾಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಸಂಘಟನೆಗಳು- ಹೀಗೆ ಸಮಾಜದ ಬಹುಸ್ತರದ ಗಣ್ಯ ವ್ಯಕ್ತಿಗಳನ್ನು ನಾನೇ ಖುದ್ದಾಗಿ ಸಂಪರ್ಕಿಸಿ ಅವರಿಂದ ಬಂದ ಸಲಹೆ, ಸೂಚನೆಗಳನ್ನು ಅಳವಡಿಸಿಕೊಳ್ಳಲು ಕ್ರಮ ವಹಿಸಿದ್ದೇನೆ.

16. ವಿರೋಧ ಪಕ್ಷದ ನಾಯಕರು ವೃಥಾ ಆರೋಪ ಮಾಡುವುದು ಬೇಡ. ನಾವೆಲ್ಲರೂ ನಮ್ಮ ಮಕ್ಕಳ ಹಿತ ಕಾಯಬೇಕಾಗಿದೆ. ದುಸ್ಥಿತಿಯಲ್ಲಿರುವ ಪೋಷಕರು, ಖಾಸಗಿ ಶಾಲಾ ಶಿಕ್ಷಕರನ್ನು ರಕ್ಷಿಸಬೇಕಿದೆ. ಅವರೊಂದಿಗೆ ನಾನು ಮುಕ್ತವಾಗಿ ಚರ್ಚಿಸಲು ಎಂದಿಗೂ ಸಿದ್ಧನಿದ್ದೇನೆ. ರಾಜಕಾರಣ ಇಂತಹ ಸಂದರ್ಭದಲ್ಲಿ ಅಪೇಕ್ಷಣೀಯವಲ್ಲ. ಜನರಿಗೆ ಬೇಕಿರುವುದು ರಾಜಕಾರಣಿಗಳು ನೀಡಬೇಕಿರುವ ವಿಶ್ವಾಸ. ಸರ್ಕಾರದ ಬದ್ಧತೆಯ ಬಗ್ಗೆ ಕಾಳಜಿ ಬೇಡವೆಂದೇ ನಾನು ಅವರೆಲ್ಲರಲ್ಲಿ ಮನವಿ ಮಾಡುತ್ತೇನೆ.

(ಲೇಖಕರು – ಕರ್ನಾಟಕ ಸರ್ಕಾರದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು)

ಸಮಾಜಕ್ಕೆ ಕಸುವು ತುಂಬುವಂತೆ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಠಾನ: ಸುರೇಶ್ ಕುಮಾರ್ ಇಂಗಿತ

ಬೆಂಗಳೂರು: ಶಿಕ್ಷಣ ಕ್ಷೇತ್ರವನ್ನು ಇನ್ನೂ ಪರಿಣಾಮಕಾರಿಯಾಗಿ ಸುಧಾರಣೆ ಮಾಡುವ ನಿಟ್ಟಿನಲ್ಲಿ ಹಾಗೂ ಸಮಾಜಕ್ಕೆ ಕಸುವು ತುಂಬುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಠಾನಕ್ಕೆ ಎಲ್ಲರೂ ಶ್ರಮಿಸಬೇಕಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

ಶನಿವಾರ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಠಾನ ಕುರಿತು ಅಭಿಪ್ರಾಯ ಸಂಗ್ರಹ ಸಂವಾದ ಸರಣಿಯಲ್ಲಿ ರಾಜ್ಯದ ಡಯಟ್ ಪ್ರಾಚಾರ್ಯರು, ಉಪನ್ಯಾಸಕರು, ಡಿಡಿಪಿಐ ಹಾಗೂ ಶಿಕ್ಷಣಾಧಿಕಾರಿಗಳೊಂದಿಗೆ ವೆಬಿನಾರ್ ಸಂವಾದ ನಡೆಸಿ ಸಲಹೆಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ-2020ರಿಂದ ಶಿಕ್ಷಣ ಕ್ಷೇತ್ರದ ಎಲ್ಲ ಪ್ರಶ್ನೆಗಳಿಗೆ ಉತ್ತರ ಲಭಿಸಿದಂತಾಗಿದ್ದು, ಅದರ ಪರಿಣಾಮಕಾರಿ ಅನುಷ್ಠಾನ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ನೀತಿಯ ಅನುಷ್ಠಾನ ಮತ್ತು ಯಶಸ್ಸು ಎಲ್ಲರ ಮುಕ್ತಮನಸ್ಸಿನ ಪಾಲ್ಗೊಳ್ಳುವಿಕೆಯಿಂದ ಸಾಧ್ಯವಾಗಲಿದೆ. ನೂತನ ನೀತಿಯನ್ನು ಏಕಾಏಕಿ ತರಲಾಗಿಲ್ಲ. ಹಲವಾರು ಸುತ್ತಿನ ಸಂವಾದ, ಚರ್ಚೆ, ಆಕ್ಷೇಪಣೆಗಳ ಸ್ವೀಕಾರದಂತಹ ಹಲವಾರು ಪ್ರಕ್ರಿಯೆಗಳ ನಂತರ ಬಹು ಸಂಸ್ಕೃತಿಯ ನಮ್ಮ ದೇಶಕ್ಕೆ ಅನುಕೂಲವಾದ ನೀತಿಯನ್ನು ಸರ್ವ ಆಯಾಮಗಳನ್ನೊಳಗೊಂಡಂತೆ ಕಸ್ತೂರಿ ರಂಗನ್ ಅವರ ನೇತೃತ್ವದ ತಂಡ ವರದಿ ರೂಪಿಸಿದೆ ಎಂದರು.

ಈ ನೀತಿಗೆ ಆಕ್ಷೇಪಣೆಗಳನ್ನು ಆಹ್ವಾನಿಸಿದಾಗ 2.50 ಲಕ್ಷದಷ್ಟು ಆಕ್ಷೇಪಣೆಗಳು ವ್ಯಕ್ತವಾಗಿದ್ದವು. ಅನುಷ್ಠಾನಯೋಗ್ಯ ಆಕ್ಷೇಪಣೆಗಳನ್ನು ಸಮರ್ಪಕವಾಗಿ ಅಳವಡಿಸಿಕೊಂಡು ನಂತರ ಅಳೆದು ತೂಗಿ ಎಲ್ಲ ದೃಷ್ಟಿಯಿಂದಲೂ ಯೋಗ್ಯವಾದ ವರದಿಯನ್ನು ಸಮಿತಿ ರೂಪಿಸಿದೆ. ವರದಿಯಲ್ಲಿ ಕರ್ನಾಟದಲ್ಲಿ ಈಗಾಗಲೇ ಇರುವ ಚಿಂತನೆಗಳು ವ್ಯಕ್ತವಾಗಿವೆ. ಸಮಿತಿಯಲ್ಲಿ ಕರ್ನಾಟಕದ ಮೂವರು ಸದಸ್ಯರು ಇದ್ದರು. ಎನ್ ಇ ಪಿ ಕರಡು ಸಮಿತಿ ಅಧ್ಯಕ್ಷರಾಗಿದ್ದ ಕಸ್ತೂರಿ ರಂಗನ್ ಅವರು ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರೂ ಆಗಿ ಸೇವೆಸಲ್ಲಿಸಿದ್ದರು. ಈ ವರದಿಯಲ್ಲಿ ನಮ್ಮ ರಾಜ್ಯದ ಪ್ರಭಾವವೇ ಹೆಚ್ಚಾಗಿದ್ದು, ನಾವು ಅದನ್ನು ಅಳವಡಿಸಿಕೊಳ್ಳಲು ಅನುಕೂಲವಾಗಿದೆ ಎಂದು ಸಚಿವರು ಹೇಳಿದರು.

ವರದಿಯ ಪರಿಣಾಮಕಾರಿ ಅನುಷ್ಠಾನಕ್ಕೆ ನಮ್ಮ ಅಧಿಕಾರಿಗಳು ಸಮರ್ಪಣಾ ಹಾಗೂ ಸಕಾರಾತ್ಮಕ ಮನೋಭಾವದಿಂದ ಕೆಲಸ ಮಾಡಬೇಕು. ನಮ್ಮ ರಾಜ್ಯದ ನಿಲುವಿಗೆ ಅನುಗುಣವಾಗಿ ಹೊಸ ನೀತಿಯ ಅನುಷ್ಠಾನಕ್ಕೆ ಅಧಿಕಾರಿಗಳು ಯೋಗ್ಯ ಸಲಹೆಗಳಿದ್ದರೆ ಮುಕ್ತವಾಗಿ ವ್ಯಕ್ತಪಡಿಸಬೇಕು ಎಂದು ಸುರೇಶ್ ಕುಮಾರ್ ಹೇಳಿದರು.
ಮೊದಲಿದ್ದ 10+ 2 ಸಿಸ್ಟಮ್ ಗೆ ಬದಲಾಗಿ ಹೊಸ ನೀತಿಯಂತೆ 5+3+3+4 ನೀತಿಗೆ ನಾವೀಗ ಬದಲಾಗಬೇಕಿದೆ. ಚಿಕ್ಕ ವಯಸ್ಸಿನಲ್ಲಿಯೇ ನಾವು ನಮ್ಮ ಮಕ್ಕಳನ್ನು ಕೌಶಲ್ಯಯುಕ್ತರನ್ನಾಗಿ ಮಾಡಬೇಕಿದೆ. ಆ ನಿಟ್ಟಿನಲ್ಲಿ ನಾವು ನಮ್ಮ ಮಕ್ಕಳನ್ನು ಪರಿಣಾಮಕಾರಿಯಾಗಿ ಸಿದ್ಧಗೊಳಿಸಬೇಕಿದೆ ಎಂದು ಸುರೇಶ್ ಕುಮಾರ್ ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿಯ ಶಾಲಾ ಶಿಕ್ಷಣದ 8 ಅಧ್ಯಾಯಗಳನ್ನು ವಿಭಾಗೀಯವಾರು ಅಧಿಕಾರಿಗಳು ವಿಶ್ಲೇಷಿಸಿ ಸಲಹೆ ಸೂಚನೆಗಳನ್ನು ನೀಡಿದರು. 100ಕ್ಕೂ ಹೆಚ್ಚಿನ ಸಂಖ್ಯೆಯ ಅಧಿಕಾರಿಗಳು ವೆಬಿನಾರ್ ನಲ್ಲಿ ಭಾಗವಹಿಸಿದ್ದರು. ಟೀಚಿಂಗ ಪ್ರಾಕ್ಟೀಸ್, ವೃತ್ತಿ ಕೌಶಲ ನೀಡಿಕೆ, ಶಿಕ್ಷಕರ ನೇಮಕ, ಶಿಕ್ಷಕರಾದ ನಂತರ ವೃತ್ತಿಪರತೆ ಪರೀಕ್ಷೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಅಧಿಕಾರಿಗಳು ವಿಷಯ ಮಂಡಿಸಿದರು.

ಸರ್ವ ಶಿಕ್ಷಣ ಅಭಿಯಾನ ರಾಜ್ಯ ಯೋಜನಾ ನಿರ್ದೇಶಕಿ ದೀಪಾ ಚೋಳನ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಸಮಾಜಕ್ಕೆ ಶಿಕ್ಷಕರೇ ಮೇಲ್ಪಂಕ್ತಿಯಾಗಬೇಕು: ಸುರೇಶ್ ಕುಮಾರ್

ಬೆಂಗಳೂರು: ಸಮಾಜಕ್ಕೆ ಮೇಲ್ಪಂಕ್ತಿಯಾಗಬೇಕಾದಂತಹ ಜನರು ಇಂದು ಕಡಿಮೆಯಾಗುತ್ತಿದ್ದಾರೆಂದು ವಿಷಾದ ವ್ಯಕ್ತಪಡಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಶಿಕ್ಷಕ ಸ್ಥಾನ ಅತ್ಯಂತ ಪವಿತ್ರವಾದ ಸ್ಥಾನವಾಗಿದ್ದು, ಶಿಕ್ಷಕರೇ ಮೇಲ್ಪಂಕ್ತಿಯಾಗಬೇಕು ಎಂದು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಶಿಕ್ಷಕರ ಸದನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ಮೇಲ್ಪಂಕ್ತಿಯಾಗಬೇಕಲ್ಲದೇ ಸಮಾಜಕ್ಕೆ ಮೇಲ್ಪಂಕ್ತಿಯಾಗುವಂತಹ ಸಾಧಕರನ್ನು ಬೆಳೆಸಬೇಕು ಎಂದರು.

ಮೊದಲಿಗೆ ಹೋಲಿಸಿದರೆ ಇಂದು ಮಾದರಿ ಶಿಕ್ಷಕರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಶಿಕ್ಷಕರು ಮಾದರಿಯಾಗುವುದರೊಂದಿಗೆ ಸಮಾಜಕ್ಕೆ ಮಾದರಿಯಾಗುವಂತಹ ವ್ಯಕ್ತಿಗಳನ್ನು ಬೆಳೆಸಬೇಕು ಎಂದು ಅವರು ಹೇಳಿದರು. ನಾವಿಂದು ಸಮಾಜದಲ್ಲಿ ಯಾರನ್ನು ಸಾಧಕರೆಂದು ಕರೆಯುತ್ತೇವೆಯೋ ಅವರೆಲ್ಲರ ಹಿಂದೆ ಪ್ರೇರಣೆ ಮತ್ತು ಪ್ರೇರಕ ಶಕ್ತಿಯಿದೆ. ಈ ರೀತಿಯ ಪ್ರೇರಕ ಶಕ್ತಿಯನ್ನೇ ಅವರು ಮೇಲ್ಪಂಕ್ತಿ ಎಂದು ತಿಳಿದುಕೊಂಡು ತಾವೂ ಅವರಂತಾಗಬೇಕು ಎಂದು ಕೆಲಸ ಮಾಡುತ್ತಾ ಸಾಧಕರಾಗಿದ್ದಾರೆ. ನಾವು ಮಕ್ಕಳ ಮುಂದೆ ಮೇಲ್ಪಂಕ್ತಿಯಲ್ಲಿರುವ ಹೆಚ್ಚೆಚ್ಚು ಉದಾಹರಣೆಗಳನ್ನು ಇಡಬೇಕು ಎಂದು ಸುರೇಶ್ ಕುಮಾರ್ ಹೇಳಿದರು.

ನಾಡಿನ ಶ್ರೇಷ್ಠ ಸಾಹಿತಿ ಡಾ. ಹಾ.ಮಾ.ನಾಯಕರ ಅಂಕಣ ಬರಹವೊಂದನ್ನು ಪ್ರಸ್ತಾಪಿಸಿದ ಸುರೇಶ್ ಕುಮಾರ್, “ಒಬ್ಬ ವೃದ್ಧೆ ಬಂದು, ನಾವೆಲ್ಲ ಚಿಕ್ಕಮಕ್ಕಳಿದ್ದಾಗ ನಮ್ಮ ಕಣ್ಣಮುಂದೆ ದೊಡ್ಡ ದೊಡ್ಡ ವ್ಯಕ್ತಿಗಳು ಓಡಾಡುತ್ತಿದ್ದರು. ಅವರನ್ನು ನೋಡಿದಾಗ ನಾವು ಇವರಂತಾಗಬೇಕು ಎಂದೆನಿಸುತ್ತಿತ್ತು. ಈಗ ನನ್ನ ಮೊಮ್ಮಗನಿಗೆ ಇವರ ರೀತಿ ಆಗು ಎಂದು ಯಾರನ್ನು ತೋರಿಸಲಿ” ಎಂದು ಕೇಳಿದಳಂತೆ. “ಆ ವೃದ್ಧೆಯ ಅಳಲು ಸಮಾಜದ ಅಳಲು, ಸಮಾಜದ ಎಲ್ಲ ಕ್ಷೇತ್ರಗಳ ಅಳಲಾಗಿದೆ” ಎಂದು ಹಾಮಾ ನಾಯಕರು ತಮ್ಮ ಅಂಕಣದಲ್ಲಿ ಬರೆದಿದ್ದರು ಎಂದು ಹೇಳಿದರು.

ಶಿಕ್ಷಕರ ಪಾತ್ರ ಸಮಾಜದಲ್ಲಿ ಎಲ್ಲರಿಗಿಂತ ಹಿರಿದಾದುದು. ನಿಜವಾಗಿಯೂ ಸಮಾಜ ಹಾಗೂ ರಾಷ್ಟ್ರ ನಿರ್ಮಾಪಕರು ಶಿಕ್ಷಕರೇ. ಶಿಕ್ಷಕರು ವಿದ್ಯಾರ್ಥಿಗಳ ಮಾರ್ಗ ಪಥಿಕರು. ಶಿಕ್ಷಕರೇ ಎಲ್ಲರಿಗೂ ಮಾರ್ಗದರ್ಶಕರು. ಹಾಗಾಗಿಯೇ ಶಿಕ್ಷಕರು ಮಾದರಿಯಾಗುವಂತೆ ಕರ್ತವ್ಯ ನಿರ್ವಹಿಸಿ, ಸಮಾಜಕ್ಕೆ ಮಾದರಿಯಾಗುವಂತಹ ಸಾಧಕರನ್ನು ನೀಡಬೇಕಾದ ಮಹತ್ತರ ಜವಾಬ್ದಾರಿ ನಿರ್ವಿಸಬೇಕಿದೆ ಎಂದು ಸಚಿವರು ಹೇಳಿದರು.

ಕೋವಿಡ್ ನಂತಹ ವಿಷಮ ಸಂದರ್ಭದಲ್ಲಿ ನಮ್ಮ ಶಿಕ್ಷಕ ಸಮುದಾಯ ತಮ್ಮಆರೋಗ್ಯವನ್ನೂ ಲೆಕ್ಕಿಸದೇ ಸಮರ್ಪಣಾ ಮನೋಭಾದಿಂದ ಕೆಲಸ ಮಾಡಿದ್ದಾರೆ. ಶಿಕ್ಷಕರ ಈ ಕೊರೋನಾ ವಾರಿಯರ್ಸ್ ಸೇವೆಯು ಸಮಾಜ ಎಂದೂ ಮರೆಯದಂತಹುದಾಗಿದೆ ಎಂದು ಶ್ಲಾಘಿಸಿದರು.
ಶಿಕ್ಷಕ ದಿನಾಚರಣೆ ಸಂದರ್ಭದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಮೂವರು ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದ ಸಚಿವರು, ರಾಜ್ಯದ ಶಿಕ್ಷಕ ಸಮುದಾಯಕ್ಕೆ ಶುಭಾಶಯಗಳನ್ನು ಕೋರಿದರು.

ಸಮಾರಂಭದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್. ಆರ್. ಉಮಾಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಕೆ.ಜೆ. ಜಗದೀಶ್, ಸರ್ವ ಶಿಕ್ಷಣ ಅಭಿಯಾನ ರಾಜ್ಯ ಯೋಜನಾ ನಿರ್ದೇಶಕಿ ದೀಪಾ ಚೋಳನ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

ವಿವಿಗಳ ಘಟಕ ಕಾಲೇಜುಗಳಾಗಿ 3 ಕಾಲೇಜು ಅಭಿವೃದ್ಧಿ:ಉಪ ಮುಖ್ಯಮಂತ್ರಿ ಡಾ. ಸಿ.ಎನ್.‌ ಅಶ್ವತ್ಥನಾರಾಯಣ

ಬೆಂಗಳೂರು: ವಿದ್ಯಾರ್ಥಿಗಳ ಹಾಜರಾತಿಯ ಕೊರತೆ ಎದುರಿಸುತ್ತಿರುವ ಮೂರು ಪ್ರಥಮ ದರ್ಜೆ ಕಾಲೇಜುಗಳ ಕಟ್ಟಡಗಳನ್ನು ಹತ್ತಿರದ ವಿಶ್ವವಿದ್ಯಾಲಯಗಳಿಗೆ ಹಸ್ತಾಂತರಿಸಿದ್ದು, ಅಲ್ಲಿ ವಿಶ್ವವಿದ್ಯಾಲಯಗಳೇ ಕಾಲೇಜುಗಳನ್ನು ತೆರೆಯಲಿವೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್.‌ ಅಶ್ವತ್ಥನಾರಾಯಣ ತಿಳಿಸಿದರು.

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಮತ್ತು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಮೈಸೂರು ವಿಶ್ವವಿದ್ಯಾಲಯಕ್ಕೆ ಹಾಗೂ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಸರಕಾರಿ ಪ್ರಥಮ ದರ್ಜೆ ಕಾಲೇಜನ್ನು ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಸೇರಿಸಿ ಅವುಗಳನ್ನು ಘಟಕ ಕಾಲೇಜುಗಳನ್ನಾಗಿ ಮರು ರೂಪಿಸಲಾಗುವುದು. ಸ್ಥಳೀಯವಾಗಿ ಬೇಡಿಕೆ ಇರುವ ಕೋರ್ಸ್‌ಗಳನ್ನು ಸಂಬಂಧಪಟ್ಟ ವಿಶ್ವವಿದ್ಯಾಲಯಗಳೇ ಆರಂಭಿಸಲಿವೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಭೂ ವಿಲೇವಾರಿ ಅಧಿಕಾರ ಇಲ್ಲ:

ಈ ಕಾಲೇಜುಗಳ ಪೀಠೋಪಕರಣ, ಜಮೀನು, ಕಟ್ಟಡಗಳನ್ನು ಆಯಾಯ ವಿವಿಗೆ ವರ್ಗಾಯಿಸಲಾಗುತ್ತಿದ್ದು, ಆದರೆ ಕಟ್ಟಡ ಅಥವಾ ಭೂಮಿಯನ್ನು ಮಾರಾಟ ಮಾಡುವ, ಗುತ್ತಿಗೆ ನೀಡುವ ಅಥವಾ ವಿನಿಮಯ ಮಾಡುವ ಯಾವ ಅಧಿಕಾರವೂ ಮೈಸೂರು ಮತ್ತು ದಾವಣಗೆರೆ ವಿವಿಗಳಿಗೆ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಆದರೆ, ಸ್ಥಳಾಂತರಗೊಳ್ಳುವ ಈ ಮೂರು ಕಾಲೇಜುಗಳ ಸಿಬ್ಬಂದಿಯನ್ನು ಹತ್ತಿರದ ಬೇರೆ ಕಾಲೇಜುಗಳಿಗೆ ನಿಯೋಜನೆ ಮಾಡಲಾಗುವುದು ಎಂದರು.

ಈ ಹಿಂದೆ ತೀರ್ಮಾನ ಮಾಡಿದಂತೆ ತೆರಕಣಾಂಬಿ ಕಾಲೇಜನ್ನು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಹಾರೂಗೇರಿಗೆ; ಹೆತ್ತೂರು ಕಾಲೇಜುನ್ನು ಬೆಂಗಳೂರು ನಗರದ ಹೆಬ್ಬಾಳಕ್ಕೆ ಹಾಗೂ ತುರುವನೂರು ಕಾಲೇಜನ್ನು ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಸ್ಥಳಾಂತರ ಮಾಡಲಾಗುತ್ತದೆ ಎಂದರು.