ಸಚಿವ ಸುರೇಶ್ ಕುಮಾರ್ ಭರವಸೆ: ಧರಣಿ ಕೈಬಿಟ್ಟ ಪರಿಷತ್ ಸದಸ್ಯರು

ಬೆಂಗಳೂರು: ಮೈಸೂರು ವಿಭಾಗದಲ್ಲಿ ಪ್ರೌಢ ಶಾಲಾ ಗ್ರೇಡ್-2 ಸಹ ಶಿಕ್ಷಕರಿಂದ ಮುಖ್ಯೋಪಾಧ್ಯಾಯ ಹುದ್ದೆಗೆ ಬಡ್ತಿ ನೀಡುವುದು ಸೇರಿದಂತೆ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಹಲವಾರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಿಕ್ಷಣ ಸಚಿವರ ಕಚೇರಿ ಎದರು ನಡೆಸಲುದ್ದೇಶಿಸಿದ್ದ ಧರಣಿಯನ್ನು ವಿಧಾನಪರಿಷತ್ ಸದಸ್ಯರು ವಾಪಸು ಪಡೆದಿದ್ದಾರೆ.

ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಹಲವಾರು ಬೇಡಿಕೆಗಳ ಕುರಿತಂತೆ ಬುಧವಾರ ವಿಧಾನಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಎಸ್. ಎಲ್. ಭೋಜೆಗೌಡ ಮತ್ತು ರಮೇಶ್ ಗೌಡ ಅವರೊಂದಿಗೆ ಸಭೆ ನಡೆಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಕಾಲಮಿತಿಯಲ್ಲಿ ಅನುಷ್ಠಾನಯೋಗ್ಯ ಬೇಡಿಕೆಗಳನ್ನು ಈಡೇರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು.
ಮೈಸೂರು ವಿಭಾಗದಲ್ಲಿ ಪ್ರೌಢ ಶಾಲಾ ಗ್ರೇಡ್-2 ಸಹ ಶಿಕ್ಷಕರಿಂದ ಮುಖ್ಯೋಪಾಧ್ಯಾಯ ಹುದ್ದೆಗೆ ಬಡ್ತಿ ನೀಡುವ ಸಂಬಂಧದಲ್ಲಿ ಸೆ. 9 ರೊಳಗೆ ಡಿಪಿಸಿ ನಡೆಸಿ ಸೆ.15 ರೊಳಗೆ ಕೌನ್ಸೆಲಿಂಗ್ ನಡೆಸಿ ಬಡ್ತಿ ಪ್ರಕ್ರಿಯೆ ಪೂರ್ಣಗೊಳಿಸಲು ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

ಬಡ್ತಿಯಲ್ಲಿನ ಲೋಪಗಳನ್ನು ಸರಿಪಡಿಸಲು ಪ್ರತಿ ವರ್ಷ ಸಹ ಶಿಕ್ಷಕ ವೃಂದದಿಂದ ಮುಖ್ಯೋಪಾಧ್ಯಾಯ ಹುದ್ದೆಗೆ ಬಡ್ತಿ ಪ್ರಕ್ರಿಯೆಯನ್ನು ಅಗತ್ಯವಾಗಿ ಕೈಗೆತ್ತಿಕೊಳ್ಳಲು ಸಚಿವರು ಸೂಚನೆ ನೀಡಿದರು.

ಆರ್.ಟಿ.ಇ. ಶುಲ್ಕ ಮರುಪಾವತಿಸಲು 2020-21ನೇ ಸಾಲಿನ ಆಯವ್ಯಯದಲ್ಲಿ ನಿಗದಿಪಡಿಸಿದ ಅನುದಾನದಲ್ಲಿ ಪ್ರಥಮ ಕಂತಿನಲ್ಲಿ ಬಿಡುಗಡೆಯಾಗಿದ್ದ 275 ಕೋಟಿ ರೂ. ಅನುದಾನವನ್ನು ಈಗಾಗಲೇ ಶಾಲೆಗಳಿಗೆ ನೀಡಲಾಗಿದೆ. ಬಾಕಿಯಿರುವ 275 ಕೋಟಿ ರೂ. ಬಿಡುಗಡೆಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಹಣ ಬಿಡುಗಡೆಯಾದ ತಕ್ಷಣವೇ ಶಾಲೆಗಳಿಗೆ ಆರ್.ಟಿ.ಇ. ಶುಲ್ಕ ಬಾಕಿಯನ್ನು ನೀಡಲಾಗುವುದೆಂದು ಅವರು ತಿಳಿಸಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳು ದಾಖಲಾತಿ ಪ್ರಕ್ರಿಯೆಗೆ ಅನುಗುಣವಾಗಿ ಹಂತಹಂತವಾಗಿ ಪಠ್ಯಪುಸ್ತಕಗಳನ್ನು ಖರೀದಿಸಲು ಅವಕಾಶ ಕಲ್ಪಿಸುವುದು, 2019-20ನೇ ಸಾಲಿನ ಆರ್.ಟಿ.ಇ ಬಾಕಿ ಮೊತ್ತ ಕೂಡಲೇ ಪಾವತಿಸಲು ಕ್ರಮ ವಹಿಸುವುದು, ಹಳೆಯ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದಂತೆ ಹೊಸ ಶಾಲೆಗಳಿಗೆ ವಿಧಿಸುತ್ತಿರುವ 2 ಲಕ್ಷ ರೂ. ಠೇವಣಿ ನೀಡಬೇಕೆಂಬ ನಿಯಮವನ್ನು ಕೈಬಿಡುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕೆಂದು ಸದಸ್ಯರು ಒತ್ತಾಯಿಸಿದರು.

ಎಲ್ಲ ಬೇಡಿಕೆಗಳನ್ನು ಸಾವಕಾಶವಾಗಿ ಕೇಳಿಸಿಕೊಂಡ ಸಚಿವರು, ಹಾಜರಿದ್ದ ಇಲಾಖೆಯ ಅಧಿಕಾರಿಗಳೊಂದಿಗೆ ಬೇಡಿಕೆಗಳ ಸಾಧಕ-ಬಾಧಕಗಳು ಕುರಿತಂತೆ ಚರ್ಚೆ ನಡೆಸಿದರು. ಅನುಷ್ಠಾನಯೋಗ್ಯ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಈಡೇರಿಸಲು ಕ್ರಮ ವಹಿಸಲಾಗುವುದೆಂದು ಸುರೇಶ್ ಕುಮಾರ್ ಭರವಸೆ ನೀಡಿದರು. ಸಚಿವರ ಭರವಸೆಯ ನಂತರ ಸದಸ್ಯರು ಧರಣಿ ಪ್ರಸ್ತಾಪ ಕೈಬಿಟ್ಟಿದ್ದಾರೆ.

ಈ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಶಿಕ್ಷಣ ಸಚಿವರ ಕಚೇರಿ ಎದರು ಧರಣಿ ನಡೆಸುವ ವಿಚಾರವನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಸಭೆಯಲ್ಲಿ ಪ್ರಕಟಿಸಿದರು.

 

ಉಪ ಕುಲಪತಿಗಳು ಕಂಫರ್ಟ್‌ ಝೋನ್‌ ಬಿಟ್ಟು ಕೆಲಸ ಮಾಡಬೇಕೆಂದ ಡಿಸಿಎಂ

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಉಪ ಕುಲಪತಿಗಳು ಜಡತ್ವ ಬಿಟ್ಟು ಕೆಲಸ ಮಾಡಬೇಕು ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿರುವ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್.‌ ಅಶ್ವತ್ಥನಾರಾಯಣ, ಮೊದಲು ಉಪ ಕುಲಪತಿಗಳು ಕಂಫರ್ಟ್‌ ಝೋನ್‌ನಿಂದ ಹೊರಬರಬೇಕು ಎಂದು ಕಿವಿಮಾತು ಹೇಳಿದರು.

ಶಿಕ್ಷಣ ನೀತಿಯನ್ನು ಜಾರಿ ಮಾಡುವ ನಿಟ್ಟಿನಲ್ಲಿ ಎಲ್ಲ ವಿವಿಗಳ ಉಪ ಕುಲಪತಿಗಳ ಜತೆ ರಾಜ್ಯಪಾಲ ವಜೂಭಾಯಿ ವಾಲ ಅವರು ರಾಜಭವನದಲ್ಲಿ ಬುಧವಾರ ನಡೆಸಿದ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಉಪ ಮುಖ್ಯಮಂತ್ರಿಗಳು, ಈ ನೀತಿ ಜಾರಿ ಮಾಡುವ ನಿಟ್ಟಿನಲ್ಲಿ ಸರಕಾರ ರಾಜಿ ಇಲ್ಲದ ಬದ್ಧತೆಯನ್ನು ಹೊಂದಿದೆ. ಅದನ್ನು ಅನುಷ್ಟಾನಕ್ಕೆ ತರುವುದಕ್ಕೆ ಅಗತ್ಯವಾದ ಕಾನೂನು ಮತ್ತು ಆಡಳಿತಾತ್ಮಕ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಜಾರಿಗೆ ನೀಲನಕ್ಷೆ ಸಿದ್ಧಪಡಿಸುತ್ತಿರುವ ಕಾರ್ಯಪಡೆ ವರದಿ ನೀಡಿದ ಕೂಡಲೇ ಅನುಷ್ಟಾನ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದು ಹೇಳಿದರು.

ರಾಜ್ಯ ಮಾತ್ರವಲ್ಲ, ಇಡೀ ದೇಶದ ದಿಕ್ಸೂಚಿಯನ್ನೇ ಬದಲಾವಣೆ ಮಾಡಬಲ್ಲ ಶಕ್ತಿ ಹೊಂದಿರುವ ಶಿಕ್ಷಣ ನೀತಿ ಜಾರಿಯಲ್ಲಿ ನಿಮ್ಮ ಪಾತ್ರ ಅತ್ಯಂತ ಮಹತ್ವದ್ದು. ಉನ್ನತ ಶಿಕ್ಷಣ ಕ್ಷೇತ್ರದ ಸ್ವರೂಪವನ್ನೇ ಬದಲು ಮಾಡಬಲ್ಲ ನೀತಿಯನ್ನು ಜಾರಿ ಮಾಡಲು ನೀವು ಬಹಳಷ್ಟು ಸಿದ್ಧತೆ ಮಾಡಿಕೊಂಡು ಯೋಜನಾಬದ್ಧವಾಗಿ ಮುಂದುವರಿಯಬೇಕಾಗುತ್ತದೆ. ಸಿಬ್ಬಂದಿ ನೇಮಕಾತಿ ಸೇರಿದಂತೆ ವಿವಿಗಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲು ಸರಕಾರ ತಯಾರಿದೆ ಎಂದು ಉಪ ಕುಲಪತಿಗಳಿಗೆ ಡಿಸಿಎಂ ವಿವರಿಸಿದರು.

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ನೀತಿಯನ್ನು ಯಾವ ರೀತಿ ಜಾರಿ ಮಾಡಬೇಕು ಎಂಬುದಕ್ಕೆ ಸರಕಾರವೇ ಒಂದು ರೋಡ್‌ಮ್ಯಾಪ್‌ ನೀಡಲಿದೆ. ಆದರ ಆಧಾರದ ಮೇಲೆ ಉಪ ಕುಲಪತಿಗಳು ಕೆಲಸ ಮಾಡಬೇಕು. ಸರಕಾರದಿಂದ ಎಲ್ಲ ರೀತಿಯ ಸಹಕಾರವೂ ಇರುತ್ತದೆ ಎಂದ ಡಿಸಿಎಂ, ಸಂಶೋಧನೆ ಮತ್ತು ಬೋಧನೆಗೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ವಿವಿಗಳನ್ನು ಮೇಲ್ದರ್ಜೆಗೇರಿಸಲಾಗುವುದು ಹಾಗೂ ಬಹ ವಿಷಯಾಧಾರಿತ ಬೋಧನೆ ಮಾಡುವ ನಿಟ್ಟಿನಲ್ಲಿ ಶಕ್ತಿ ತುಂಬಲಾಗುವುದು ಎಂದರು.

ಬೆಂಗಳೂರು ಶಿಕ್ಷಣದ ಹಬ್‌ ಎಂದ ರಾಜ್ಯಪಾಲರು:

ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯವು ವೇಗವಾಗಿ ದಾಪುಗಾಲು ಇಡುತ್ತಿದೆ. ಅದರಲ್ಲೂ ರಾಜಧಾನಿ ಬೆಂಗಳೂರು ದೇಶದಲ್ಲಿಯೇ ಅತ್ಯಂತ ಪ್ರಮುಖ ಶಿಕ್ಷಣದ ಹಬ್‌ ಆಗಿ ಹೊರಹೊಮ್ಮುತ್ತಿದೆ. ವೈದ್ಯಕೀಯ, ತಾಂತ್ರಿಕ, ಎಂಜಿನೀಯರಿಂಗ್‌ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ನಂ. 1 ಆಗಿದೆ. ಶಿಕ್ಷಣ ನೀತಿ ಜಾರಿ ಮಾಡುವುದರಿಂದ ವಿಶ್ವವಿದ್ಯಾಲಯಗಳು ಅತ್ಯುತ್ತಮ ಸಾಧನೆ ಮಾಡಲಿವೆ. ಅದಕ್ಕೆ ಬೇಕಾದ ಸಿಬ್ಬಂದಿಯನ್ನೂ ಸರಕಾರ ಒದಗಿಸುವ ಭರವಸೆ ಇದೆ ಎಂದು ರಾಜ್ಯಪಾಲ ವಜೂಭಾಯಿ ವಾಲ ಇದೇ ವೇಳೆ ಹೇಳಿದರು.

ಕರ್ನಾಟಕವು ಜಾಗತಿಕವಾಗಿ ಶೈಕ್ಷಣಿಕವಾಗಿ ಪೈಪೋಟಿ ನಡೆಸುವ ಎಲ್ಲ ಸಾಮರ್ಥ್ಯವನ್ನು ಹೊಂದಿದೆ. ಆ ನಿಟ್ಟಿನಲ್ಲಿ ಶಿಕ್ಷಣ ನೀತಿ ಜಾರಿಯನ್ನೇ ಒಂದು ಸವಾಲಾಗಿ ಸ್ವೀಕರಿಸಿ ಉಪ ಕುಲಪತಿಗಳೆಲ್ಲರೂ ಕೆಲಸ ಮಾಡಬೇಕು ಎಂದ ರಾಜ್ಯಪಾಲರು, ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಗುರುತರ ಬದಲಾವಣೆಗಳು ಗೋಚರವಾಗಲಿವೆ ಎಂದರು.

ಸ್ವಾಯತ್ತತೆ ಬೇಕೆಂದ ಉಪ ಕುಲಪತಿಗಳು:

ವಿಶ್ವವಿದ್ಯಾಲಯಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಹಾಗೂ ಶಿಕ್ಷಣ ನೀತಿಯನ್ನು ಉತ್ತಮವಾಗಿ ಜಾರಿ ಮಾಡಲು ನೆರವಾಗುವ ನಿಟ್ಟಿನಲ್ಲಿ ವಿವಿಗಳಿಗೆ ಆಡಳಿತಾತ್ಮಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ವಾಯತ್ತತೆ ನೀಡಬೇಕೆಂದು ಸಭೆಯಲ್ಲಿ ಪಾಲ್ಗೊಂಡಿದ್ದ ಕೆಲ ಉಪ ಕುಲಪತಿಗಳು ತಮ್ಮ ಅಭಿಪ್ರಾಯ ವ್ಕಕ್ತಪಡಿಸಿದರು.

ಜತೆಗೆ, ವಿವಿಗಳನ್ನು ತಾಂತ್ರಿಕವಾಗಿ ಮೇಲ್ದರ್ಜೆಗೇರಿಸಬೇಕು. ಗುಣಮಟ್ಟದ ಬೋಧನೆಗೆ ಅಗತ್ಯವಾದ ಎಲ್ಲ ಸಹಕಾರವನ್ನು ಸರಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.

ಶಿಕ್ಷಣ ನೀತಿ ನಿರೂಪಣಾ ಸಮಿತಿ ಸದಸ್ಯರು ಆಗಿದ್ದ ಅಜೀಂ ಪ್ರೇಮ್‌ಜೀ ವಿವಿ ಉಪ ಕುಲಪತಿ ಅನುರಾಗ್‌ ಬೇಹರ್‌ ಅವರು ನೀತಿಯ ಕುರಿತು ಎಲ್ಲ ಕಲಪತಿಗಳಿಗೆ ಮಾಹಿತಿ ವಿನಿಮಯ ಮಾಡಿಕೊಂಡರು. ಸಭೆಯಲ್ಲಿ ವಿಟಿಯು ಉಪ ಕುಲಪತಿ ಪ್ರೊ. ಕರಿಸಿದ್ಧಪ್ಪ ಸೇರಿ ವಿವಿಧ ವಿವಿಗಳ 27 ಉಪ ಕುಲಪತಿಗಳು ಹಾಜರಿದ್ದರು.

ಪ್ರಣಬ್ ಮುಖರ್ಜಿ ನಿಧನಕ್ಕೆ ಸಿಎಂ ಬಿಎಸ್ವೈ ಸಂತಾಪ

ಬೆಂಗಳೂರು: ಧೀಮಂತ ರಾಜಕಾರಣಿ, ಭಾರತದ ಮಾಜಿ ರಾಷ್ಟ್ರಪತಿ, ಭಾರತರತ್ನ ಪ್ರಣಬ್ ಮುಖರ್ಜಿ ವಿಧಿವಶರಾದ ಸುದ್ದಿ ತೀವ್ರ ಆಘಾತವನ್ನುಂಟು ಮಾಡಿದೆ. ಶ್ರೇಷ್ಠ ನೇತಾರರನ್ನು ಕಳೆದುಕೊಂಡ ಅನಾಥಪ್ರಜ್ಞೆ ಇಡೀ ದೇಶಕ್ಕೆ ಆವರಿಸಿದೆ. ಅವರೊಂದಿಗೆ ನನ್ನ ಒಡನಾಟದ ಕ್ಷಣಗಳನ್ನು ನೆನೆಯುತ್ತಾ, ಅವರಿಗೆ ಅಶ್ರುಪೂರ್ಣ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತೇನೆ ಎಂದು ಸಿಎಂ ಬಿ.ಎಸ್‌ ಯಡಿಯೂರಪ್ಪ ತಿಳಿಸಿದ್ದಾರೆ.

ಪ್ರಣಬ್ ರವರ ಸೇವೆ, ಸಾಧನೆಗಳು ಅನನ್ಯ. ದಶಕಗಳ ಕಾಲ ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಪ್ರಧಾನ ಪಾತ್ರ ವಹಿಸಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ವಾಣಿಜ್ಯ, ವಿದೇಶಾಂಗ, ಹಣಕಾಸು, ರಕ್ಷಣಾ ಸಚಿವರಾಗಿ ಅವರು ಅವಿಸ್ಮರಣೀಯ ಸೇವೆ ಸಲ್ಲಿಸಿದ್ದರು. ರಾಷ್ಟ್ರಪತಿಗಳಾಗಿ ಅವರು ದೇಶದ ಗರಿಮೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದರು ಎಂದು ಸಿಎಂ ಸ್ಮರಿಸಿದ್ದಾರೆ.

ಪ್ರಣಬ್ ರಷ್ಟು ಸುದೀರ್ಘ ಕಾಲ ಆಡಳಿತದ ಕೇಂದ್ರ ಸ್ಥಾನದಲ್ಲಿದ್ದು, ಪ್ರಾಮಾಣಿಕವಾಗಿ, ಕಳಂಕರಹಿತರಾಗಿ ಸೇವೆ ಸಲ್ಲಿಸಿದ ಮತ್ತೋರ್ವ ಸರ್ವಾದರಣೀಯ ನಾಯಕ ಇರಲಾರರು. ದೇವರು ಅವರ ಆತ್ಮಕ್ಕೆ ಸದ್ಗತಿಯನ್ನು ದಯಪಾಲಿಸಲಿ, ಕುಟುಂಬದವರಿಗೆ, ಅಭಿಮಾನಿಗಳಿಗೆ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ! ಎಂದು ಸಂತಾಪ ಸೂಚಿಸಿದ್ದಾರೆ.

ನನ್ನ ಸರ್ಕಾರ ಉರುಳಿಸಿದ್ದೇ ಡ್ರಗ್ಸ್ ದಂಧೆಕೋರರು: ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೊಸಾ ಬಾಂಬ್​​​

ತುಮಕೂರು: ನನ್ನ ಸರ್ಕಾರ ಉರುಳಿಸಿದ್ದೇ ಡ್ರಗ್ಸ್ ದಂಧೆಕೋರರು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೊಸಾ ಬಾಂಬ್​​​ ಸಿಡಿಸಿದ್ದು,ರಾಜ್ಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.

ಸ್ಯಾಂಡಲ್​​ವುಡ್​​ ನಲ್ಲಿ ಡ್ರಗ್ಸ್​​ ರೇವ್​​ ಪಾರ್ಟಿ ನಡೆಯುತ್ತದೆ. ಅನೇಕ ಸಿನಿ ತಾರೆಯರು. ರಾಜಕೀಯ ವ್ಯಕ್ತಿಗಳು. ದೊಡ್ಡ ದೊಡ್ಡ ನಿರ್ದೇಶಕರ ಮಕ್ಕಳು. ಹಿರಿಯ ನಟರ ಮಕ್ಕಳು ಈ ದಂಧೆಯಲ್ಲಿದ್ದಾರೆ ಎಂಬ ಹೇಳಿಕೆ ಚಂದನವನದಲ್ಲಿ ಮಹಾ ಸ್ಫೋಟವನ್ನೇ ಎಬ್ಬಿಸಿದೆ. ಇದರ ಬೆನ್ನಲ್ಲೇ ಡ್ರಗ್ ಸ್ಕ್ಯಾಂಡಲ್ ಕುರಿತು ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನನ್ನ ಸರ್ಕಾರ ಉರುಳಿಸಿದ್ದೇ ಡ್ರಗ್ಸ್ ದಂಧೆಕೋರರು ಎಂದು ಗಂಭೀರ ಆರೋಪ ಮಾಡಿದರು.

ನಶೆ ಮಾಫಿಯಾ ಬಗ್ಗೆ ತುರುವೇಕೆರೆಯಲ್ಲಿ ಮಾತನಾಡಿದ ಎಚ್​ಡಿಕೆ ನಾನು ಸಿಎಂ ಆಗಿದ್ದಾಗ ಡ್ರಗ್ಸ್​ ದಂಧೆಗೆ ಬ್ರೇಕ್​​​​​​ ಹಾಕಲು ಯತ್ನಿಸಿದ್ದೆ. ಈ ವೇಳೆ ಕೆಲವರು ಶ್ರೀಲಂಕಾಗೆ ಓಡಿ ಹೋದರು. ನನ್ನ ಸರ್ಕಾರ ಬೀಳಿಸೋಕೆ ಡ್ರಗ್ಸ್​, ಬೆಟ್ಟಿಂಗ್​ ಹಣ ಬಳಕೆ ಆಯ್ತು ಎಂದು ಮೈತ್ರಿ ಸರ್ಕಾರ ಪತನಕ್ಕೆ ಡ್ರಗ್ ಮಾಫಿಯಾ ಕಾರಣ ಎಂಬ ಸ್ಫೋಟಕ ಮಾಹಿತಿ ಹೊರ ಹಾಕಿದ್ದಾರೆ.

ನನ್ನ ಸರ್ಕಾರ ಬೀಳಿಸೋಕೆ ಡ್ಯಾನ್ಸ್ ಬಾರ್​ಗಳ ಹಣವನ್ನ ಬಳಕೆ ಮಾಡಿಕೊಂಡಿದ್ದಾರೆ. ಕ್ರಿಕೆಟ್​ ಬೆಟ್ಟಿಂಗ್​​, ಪಬ್​​​ ಹಣ ಬಳಸಿ ಮೈತ್ರಿ ಸರ್ಕಾರ ಕೆಡವಿದ್ರು ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಇಂತಹ ಕೆಟ್ಟ ಮಾಫಿಯಾಗಳಿಗೆ ಚಿಕ್ಕ, ಚಿಕ್ಕ ಮಕ್ಕಳು ಬಲಿಯಾಗಬಾರದು. ಆದ್ದರಿಂದ ಇದರಲ್ಲಿ ಯಾವುದೇ ಮುಲಾಜಿಗೆ ಒಳಗಾಗದೆ, ಈ ಹಗರಣದ ಹಿಂದೆ ಯಾರೇ ಪ್ರಭಾವಿ ವ್ಯಕ್ತಿಗಳಿದ್ದರು ಅವರ ವಿರುದ್ಧ ಕಠಿಣ ಕ್ರಮ ಜರುಗಬೇಕು ಎಂದು ಹೆಚ್​ಡಿಕೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನಕ್ಕೆ ಡಿ.ಕೆ ಶಿವಕುಮಾರ್ ಸಂತಾಪ

ಬೆಂಗಳೂರು:ಮಾಜಿ ರಾಷ್ಟ್ರಪತಿ, ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.

‘ಪ್ರಣಬ್ ಮುಖರ್ಜಿ ಅವರು ಭಾರತ ಕಂಡ ಶ್ರೇಷ್ಠ ರಾಜಕಾರಣಿಗಳಲ್ಲಿ ಒಬ್ಬರು. ಅತ್ಯುತ್ತಮ ವ್ಯಕ್ತಿತ್ವ ಹೊಂದಿದ್ದ ಅವರು ಸುಮಾರು 5 ದಶಕಗಳ ಕಾಲ ರಾಜಕೀಯದಲ್ಲಿ ಸಕ್ರಿಯವಾಗಿ ಭಾಗಿಯಾಗಿ ಸೇವೆ ಸಲ್ಲಿಸಿದ ಮಹಾನ್ ನಾಯಕ.

ಯುಪಿಎ ಸರ್ಕಾರದಲ್ಲಿ ಪ್ರಮುಖ ಸಚಿವಾಲಯದ ಹುದ್ದೆ ಅಲಂಕರಿಸಿ, ನಂತರ ದೇಶದ 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು. ಅವರ ಚಿಂತನೆ, ಕೆಲಸ ಹಾಗೂ ಸೇವೆಯಿಂದ ದೇಶದ ಸರ್ವಶ್ರೇಷ್ಠ ಭಾರತ ರತ್ನ ಪುರಸ್ಕಾರಕ್ಕೆ ಭಾಜನರಾದವರು.

ಗಾಂಧಿ ಅವರ ಚಿಂತನೆಯನ್ನು ಅಳವಡಿಸಿಕೊಂಡಿದ್ದ ಪ್ರಣಬ್ ಮುಖರ್ಜಿ ಅವರನ್ನು ‘Man for All Seasons’ ಎಂದೇ ಬಣ್ಣಿಸಲಾಗುತ್ತಿತ್ತು. ದೇಶದ ಇತಿಹಾಸ, ಸಂವಿಧಾನ ಹಾಗೂ ಕಾನೂನಿನ ಬಗ್ಗೆ ಅಪಾರವಾದ ಜ್ಞಾನ ಹೊಂದಿದ್ದ ಮಹಾನ್ ನಾಯಕನನ್ನು ನಾವಿಂದು ಕಳೆದುಕೊಂಡಿದ್ದೇವೆ.

ಅವರ ಅಗಲಿಕೆಯ ನೋವನ್ನು ಅವರ ಕುಟುಂಬ ಸದಸ್ಯರು ಸೇರಿದಂತೆ ಅವರ ಅಪಾರ ಅಭಿಮಾನಿ ಬಳಗಕ್ಕೆ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಹಾಗೂ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಡಿ.ಕೆ ಶಿವಕುಮಾರ್ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇನ್ನಿಲ್ಲ

ನವದೆಹಲಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಮೆದುಳು ಶಸ್ತ್ರಚಿಕಿತ್ಸೆಗೆ ಒಳಗಾದ ನಂತದ ಮೆದುಳು ನಿಷ್ಕ್ರಿಯಗೊಂಡು ಮೃತರಾದರು.

ಇವರ ಸಂಸತ್ತಿನ ವೃತ್ತಿಜೀವನ ಐದು ದಶಕದ್ದು, ಇವರು ಕಾಂಗ್ರೆಸ್ ಪಕ್ಷದಿಂದ ೧೯೬೯ ರಲ್ಲಿ ರಾಜ್ಯ ಸಭಾ ಸದಸ್ಯರಾಗಿ ಆಯ್ಕೆಗೊಂಡರು; ನಂತರ ೧೯೭೫, ೧೯೮೧, ೧೯೯೩ ಹಾಗು ೧೯೯೯ ಪುನರಾಯ್ಕೆಗೊಂಡರು. ೧೯೮೨ ರಿಂದ ೧೯೮೪ ರವರಗೆ .ಭಾರತದ ವಿತ್ತಮಂತ್ರಿಯಗಿದ್ದರು.

ಇವರು ಹಲವಾರು ಮಂತ್ರಿ ಪದವಿಯನ್ನು ನಿಭಾಯಿಸಿದ್ದಾರೆ. ರಕ್ಷಣ, ವಿತ್ತ, ಬಾಹ್ಯ ಇಲಾಖೆ, ಆದಾಯ, ನೌಕಾ, ಸಾರಿಗೆ, ಸಂಪರ್ಕ ವ್ಯವಸ್ಥೆ, ಆರ್ಥಿಕ ಇಲಾಖೆ, ವಾಣಿಜ್ಯ ಹಾಗು ಉದ್ದಿಮೆ ಜವಾಬ್ದಾರಿ ವಹಿಸಿದ್ದರು.

ಅಕ್ಟೋಬರ್ ೧೦, ೨೦೦೮ ರಂದು ಮುಖೆರ್ಜೀ ಹಾಗು ಕಾಂಡೊಲಿನಾ ರೈಸ್ ಸೆಕ್ರೆಟರಿ ಆಫ್ ಸ್ಟೇಟ್(ಯುನೈಟೆಡ್ ಸ್ಟೇಟ್ಸ್ ನ ವಿದೇಶಾಂಗ ಮಂತ್ರಿ / ವಿದೇಶಾಂಗ ಖಾತೆಯ ಕಾರ್ಯದರ್ಶಿ) ವಿಭಾಗ ೧೨೩ ಒಪ್ಪಂದಕೆ ಸಹಿಹಾಕಿದ್ದರು.

ಪ್ರಣಬ್ ಮುಖರ್ಜಿಯವರು, ಶುಭಾ ಮುಖರ್ಜಿಯವರನ್ನು ಜುಲೈ ೧೩, ೧೯೫೭ ರಂದು ಮದುವೆಯಾಗಿದ್ದರು,ಇವರಿಗೆ ಇಬ್ಬರು ಗಂಡು ಮಕಳು, ಅಭಿಜಿತ್ ಹಾಗು ಸುರೋಜಿತ್ ಹಾಗು ಒಬ್ಬಳು ಪುತ್ರಿ ಇದ್ದಾರೆ.